ಮನೆ ಖಾಲಿ ಮಾಡಬೇಕಿದೆ…
ಮನೆ ಖಾಲಿ ಮಾಡಬೇಕಿದೆ
ಕಡು ಕಷ್ಟ ಬಿಸಾಡುವುದು
ನಿನ್ನ ವಸ್ತುಗಳವೆಷ್ಟೋ..
ಬೆವರ ವಾಸನೆ ಬೀರುತ್ತ ಬಿದ್ದ
ನಿನ್ನ ಕಡು ಕೆಂಪು ಅಂಗಿ
ಬರಸೆಳೆದು ನೀ ಕೊಟ್ಟ ಮುತ್ತುಗಳು
ಹಚ್ಚಿದ ಮೈಯ ಗೋರಂಗಿ..
ತೊಳೆದು ತಿಕ್ಕಿ ಉಜ್ಜಿದರು
ಮರುಕಳಿಸುವ ಕಲೆಗಳನು
ಕಡುಕಷ್ಟ ತೊಳೆದುಕೊಳ್ಳುವುದು
ಜೀವಂತ ಬದುಕಿರುವಾಗಲೇ
ಒಂಟಿ ಮನದಲ್ಲಿ ಮೊಳೆಸಿದ
ಆ ಮೊದಲ ಪ್ರೀತಿಯ ಜಾಡು
ಜನ್ಮಪತ್ರ ಮರಣ ಪತ್ರಗಳು
ಕುಂಚ ಕುಲಾವಿಯ ಜೊತೆಗೆ ಕಾದಿಟ್ಟ
ಹೊಕ್ಕಳ ಬಳ್ಳಿಯ ಅದುರು…
ಕಡುಕಷ್ಟ ಉರುಳಿಸುವುದು
ಕೈ ಹಿಡಿದು ನಡೆದ ನಮ್ಮ ತೇರು
ಒಡೆದ ಮನಸಿನ ಜೊಂಪಿಗೆ
ಜೋಪಾನ ಮಡಚಿಟ್ಟ ನೆನಪು
ಎಲುವು ಕೀಲುಗಳಲಿ ಹರಡಿದ
ಅಗಲಿಕೆಯ ನೋವು
ಕಳೆದುಹೋದ ಘಳಿಗೆಗಳನು ಪೋಣಿಸಿ
ಕಡುಕಷ್ಟ ಮತ್ತೆ ಹುಡುಕುವುದು
ಕಳೆದುಹೋಗಿರುವ ಪದ ’ನಾನು’
ಮೈ ಮನಗಳ ಮಡಿಕೆಗಳಲಿ ಹುಗಿದ
ನೆನಪುಗಳ ಕೊಡವಿ
ಆಳದಲಿ ಊರಿರುವ ಪ್ರೀತಿ
ಬೇರನು ಸೆಳೆದು
ಕವಲೊಡೆದ ಕನಸುಗಳ
ಟೊಂಗೆಗಳ ಮುರಿದು
ಕಡು ಕಷ್ಟ ಎಸೆಯುವುದು
ಪ್ರೀತಿ ಹಸಿರಾಗಿರುವಾಗಲೇ
ಕಡುರಾತ್ರಿಯಂತದೇ ಕರಾಳ ಕಪ್ಪು
ತಳವಿಲ್ಲದ ಹಾಳು ಬಾವಿ
ವರ್ಷಗಳ ಕಾಲ ಕಾಪಿಟ್ಟ ನೋವಿಗೆ
ನಿರ್ದಯಿ ಕಾಲ ಬರೆ ಹಾಕಿದೆ
ಖಾಲಿಯಾದ ಕೋಣೆಯಲಿ
ಧೂಳು ಪ್ರತಿ ಮೂಲೆ ಹಿಡಿದಿದೆ…
ಕಡು ಕಷ್ಟ ಮತ್ತೆ ಹೊಸತಾಗಿಸುವುದು
ಅಚ್ಚ ಪ್ರೀತಿಗೆ ವಿರಹ ಜೊತೆ ನೀಡುವ ಮದಿರೆ
ಹೋಗೆಂದರೂ ಪೂರ್ತಿ ಬಿಡದ ವಾಸನೆ
ಮಾರಲಾಗದ ಸಾಮಗ್ರಿಗಳ ರಾಶಿ
ಹಿಡಿಶಾಪ ಹಾಕಿ ಅಟ್ಟಿದರೂ ನಗುವ
ಮರುಳು ನಂಬಿಕೆಯ ನಾಯಿ
ಹುಚ್ಚು ಪ್ರೀತಿಗೆ ಮತ್ತೆ ನಿನ್ನ ಮೆಚ್ಚಿಸುವ ಆಸೆ
ಕಡುಕಷ್ಟ ಮನ ಖಾಲಿಮಾಡುವುದು
ನೀ ಬದುಕಿರುವಾಗಲೇ….
ಡಾ. ಪ್ರೇಮಲತಾ ಲೇಖಕಿ ಮೂಲತಃ ತುಮಕೂರಿನವರು, ಕಳೆದ ೨೧ ವರ್ಷಗಳಿಂದ ಇಂಗ್ಲೆಂಡಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ದಂತವೈದ್ಯೆ. ಹವ್ಯಾಸಿ ಬರಹಗಾರ್ತಿ. ‘ಐದು ಬೆರಳುಗಳುʼ, ‘ತಿರುವುಗಳುʼ, ‘ನಂಬಿಕೆಯೆಂಬ ಗಾಳಿಕೊಡೆʼ ಇವರ ಪ್ರಕಟಿತ ಕಥಾಸಂಕಲನಗಳು. ‘ಕೋವಿಡ್ ಡೈರಿʼ ಎಂಬ ಅಂಕಣ ಬರಹಗಳ ಪುಸ್ತಕ ಮತ್ತು ‘ಬಾಯೆಂಬ ಬ್ರಮ್ಹಾಂಡʼ ಇವರ ಇತರೆ ಪುಸ್ತಕಗಳು. ‘ಐದು ಬೆರಳುಗಳುʼ ಕಥಾ ಸಂಕಲನಕ್ಕೆ ಡಾ.ಹೆಚ್. ಗಿರಿಜಮ್ಮ ಪ್ರಶಸ್ತಿ ದೊರಕಿದೆ.