ಅವಳು ಮತ್ತು ಅವನು

ರಾತ್ರಿಯ ನಿರನಿರ ನೀರವತೆಯಲ್ಲಿ
ಅವಳು ಅವನನ್ನು ಕಾಣುತ್ತಾಳೆ
ಕಾಣುವಿಕೆ ಪರಿಶೀಲನೆಯಾಗಿ
ಪರಿಶೀಲನೆಯೇ ದರ್ಶನವಾಗಿ ಮಾರ್ಪಡುತ್ತದೆ

ಹೊಳಪಿದ್ದರೂ ಶಾಂತವಾಗಿರುವ
ಅವನ ಸಂಪರ್ಕದಲ್ಲಿ
ಅವಳೂ ಶಾಂತಳಾಗುತ್ತಾಳೆ
ಇಬ್ಬರ ದೃಷ್ಟಿಮಿಲನ ನಿಲ್ಲುವುದೇ ಇಲ್ಲ

ಅವನ ಲೌಕಿಕತೆಗಿಂತಲೂ
ಅಲೌಕಿಕತೆಯೆ ಅವಳ ಸೊತ್ತಾಗಿ, ಸೊಗಸಾಗಿ
ಅವಳ ನಿಟ್ಟುಸಿರಿನ ಮುಕ್ತತೆಗೆ
ರಹದಾರಿಯನ್ನು ಒದಗಿಸಿಕೊಡುತ್ತದೆ

ಸೌಂದರ್ಯ ಎಲ್ಲಿದೆ
ಎಂದವಳು ಪ್ರಶ್ನಿಸಿಕೊಳ್ಳುತ್ತಾಳೆ
ಅವನ ನಿಗೂಢತೆಯಲ್ಲೋ?
ತನ್ನ ವಿಶಾಲತೆಯಲ್ಲೋ?
ಕಾಲಾತೀತವಾದ ಸಮ್ಮಿಲನದಲ್ಲೋ?
ಉತ್ತರವಂತೂ ಅವಳಿಗೆ ಹೊಳೆಯುವುದೇ ಇಲ್ಲ

ಹಿನ್ನೆಲೆಯ ಕತ್ತಲೆಯೇ ರಂಗಪರದೆಯಾಗಿ
ಅವನ ವೈಭವವನ್ನು ಇಮ್ಮಡಿಯಾಗಿಸುತ್ತದೆ
ರಾತ್ರಿಯ ವಿಸ್ತಾರದಲ್ಲಿ ಕಂಡ
ಭರವಸೆಯ ಬೆಳಕು
ಸಾಂತ್ವನದ ಅಪ್ಪುಗೆಯಂತೆ
ಗೋಚರವಾಗುತ್ತದೆ ಅವಳಿಗೆ
ಜೀವನದ ಜಟಿಲತೆಯನ್ನು ಮೀರುವ
ಪರಮರಹಸ್ಯವನ್ನು ಕಂಡುಕೊಳ್ಳುತ್ತಾಳವಳು
ಮೈ ಮನಸ್ಸು ತಂಪಗಾದ ಆ ರಾತ್ರಿಯಲ್ಲಿ

ಕಳೆಯುತ್ತಲೇ ಇದೆ ಕತ್ತಲು
ಅವನಿಗೆ ಎಳೆತನವನ್ನು ದಯಪಾಲಿಸುತ್ತಾ
ಅವಳ ಆತ್ಮದೊಳಗಿನ ಅಂಧಕಾರವ ಇನ್ನಿಲ್ಲವಾಗಿಸುತ್ತಾ
ಮುಕ್ತತೆ- ಜೀವಂತಿಕೆಗಳನ್ನು ಒದಗಿಸಿಕೊಡುತ್ತಾ
ಕಳೆದುಹೋಗುತ್ತಲೇ ಇದೆ ಕತ್ತಲು…

ತನ್ನವನಿಗೆ ಸಾವಿಲ್ಲ ಎಂಬ
ಅವಳ ಗಾಢ ನಂಬಿಕೆ
ಹೊತ್ತು ಕಳೆದಂತೆಲ್ಲಾ ಸುಳ್ಳಾಗಿ
ಹೊತ್ತು ಏರಿದಂತೆ ಮತ್ತೆ ನಿಜವಾಗಿ
ಹುಟ್ಟುತ್ತದೆ…ಸಾಯುತ್ತದೆ…
ಆ ನಂಬಿಕೆಯ ಹುಟ್ಟು ಸಾವು
ಕೊನೆಗಾಣುವುದೇ ಇಲ್ಲ

ಭೂಮಿಯೊಂದಿಗಿನ ಚಂದ್ರನ ಮಿಲನ
ಅಂತ್ಯ ಕಾಣುವುದೇ ಇಲ್ಲ