“ನಮ್ಮ ಅಸ್ತಿತ್ವ ಇರುವುದು ನಮ್ಮಿಂದ ಮಾತ್ರ ಅಲ್ಲ. ಸುತ್ತಲಿರುವವರ ಅಸ್ತಿತ್ವದಲ್ಲಿಯೂ ನಮ್ಮ ಅಸ್ತಿತ್ವ ಇದೆ. ಈಗ ನೋಡು, ನಾವು ಬದುಕಬೇಕಾದರೆ ಆಹಾರ ಸೇವಿಸಬೇಕು. ಆಹಾರ ಬೆಳೆಯುವ ರೈತನೇ ಇಲ್ಲದಿದ್ದರೆ ನಮಗೆ ಅಸ್ತಿತ್ವವೇ ಇಲ್ಲ. ನಾವೀಗ ತಿನ್ನುತ್ತಿರುವುದನ್ನು ಬೆಳೆದದ್ದು ಯಾರು ಎನ್ನುವುದು ನಮಗೆ ಗೊತ್ತಿಲ್ಲದಿರಬಹುದು. ಆದರೆ ಆ ಗೊತ್ತಿರದ ವ್ಯಕ್ತಿಯೇ ನಮ್ಮ ಅಸ್ತಿತ್ವಕ್ಕೆ ಕಾರಣವಾಗಿರುತ್ತಾನೆ. ಆ ರೈತನಿಗೂ ಕೂಡಾ ನಮ್ಮ ಅವಶ್ಯಕತೆ ಇರುತ್ತದೆ. ಅವನು ಬೆಳೆದ ಆಹಾರವನ್ನು ಅನುಭೋಗಿಸುವವರು ಇರದಿದ್ದರೆ ಅವನಿಗೆ ಅಸ್ತಿತ್ವ ಇರುವುದಿಲ್ಲ.”
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಎರಡು ಹೃದಯ ಒಂದು ಜೀವ” ನಿಮ್ಮ ಓದಿಗೆ
ಅಲ್ಲಿ ಒಂದು ಕಡೆ ತುಂಬು ಹೊಟ್ಟೆಯ ಪತ್ನಿಯನ್ನು ಅವಳ ಪತಿ ಜೋಪಾನವಾಗಿ ವಾರ್ಡ್‌ನೊಳಕ್ಕೆ ಕರೆದೊಯ್ಯುತ್ತಿದ್ದ. ಇನ್ನೊಂದೆಡೆ ತಮ್ಮವರನ್ನು ಕಳೆದುಕೊಂಡವರ ಅಳು ಪಕ್ಕದ ಕೋಣೆಯಿಂದ ಬಂದು ಕಿವಿಗಪ್ಪಳಿಸುತ್ತಿತ್ತು.
ತಾಯಿಯನ್ನು ತಿಂಗಳ ತಪಾಸಣೆಗೆಂದು ಕರೆದುಕೊಂಡ ಬಂದ ಮಗಳೊಬ್ಬಳು “ಸ್ವಲ್ಪ ಬೇಗ ಒಳಗೆ ಹೋಗುವುದಕ್ಕೆ ಬಿಟ್ಟರೆ ಒಳ್ಳೆಯದಿತ್ತು. ಅವರಿಗೆ ಹೆಚ್ಚು ಹೊತ್ತು ಕುಳಿತುಕೊಳ್ಳುವುದಕ್ಕೆ ಆಗುವುದಿಲ್ಲ. ಸುಸ್ತಾಗುತ್ತದೆ” ಎಂದು ಅಲ್ಪಾವಧಿಗೆ ಮುಖವನ್ನು ಜೋರು ಮಾಡಿಕೊಂಡಿದ್ದ ರಿಸೆಪ್ಶನಿಸ್ಟ್ ಬಳಿ ಅಂಗಲಾಚುತ್ತಿದ್ದಳು. “ನಿಮಗೊಬ್ಬರಿಗೇ ಅರ್ಜೆಂಟ್ ಇರುವುದಲ್ಲ ಮೇಡಂ. ನೋಡಿ ಅಲ್ಲಿ ಕುಳಿತಿದ್ದಾರಲ್ಲಾ, ಅವರಿಗೆಲ್ಲರಿಗೂ ನಿಮ್ಮಷ್ಟೇ ಗಡಿಬಿಡಿ ಇದೆ. ಹಾಗೆಲ್ಲಾ ಬೇಗ ಬಿಡುವುದಕ್ಕೆ ಸಾಧ್ಯ ಇಲ್ಲ. ಹಾಗೇನಾದರೂ ನಿಮ್ಮ ಅಮ್ಮನಿಗೆ ವಿಪರೀತ ಸುಸ್ತಾದರೆ ನಾನು ಇಲ್ಲಿಯೇ ಇದ್ದೇನೆ. ನನಗೆ ಗೊತ್ತಾಗುತ್ತದೆ. ನಾನೇ ಒಳಬಿಡುತ್ತೇನೆ” ಎಂದ ರಿಸೆಪ್ಶನಿಸ್ಟ್ ಹೋಗಿ ಕುಳಿತುಕೊಳ್ಳಿ ಎಂಬಂತೆ ಕೈಲಿದ್ದ ಪೆನ್ನಿನಲ್ಲಿ ಸೂಚನೆ ಕೊಟ್ಟಳು.
ಮನೆಯವರ ಹಂಗಿಗೆ ಸಿಲುಕದೆ ಒಬ್ಬಂಟಿಯಾಗಿ ಬಂದಿದ್ದ ವೃದ್ಧರೊಬ್ಬರು ಕಾದೂ ಕಾದೂ ಸೋತು, ತನ್ನ ಸರದಿ ಇನ್ನೂ ಬಾರದಿರುವುದನ್ನು ನೆಪಮಾಡಿಕೊಂಡು ಕುಳಿತಲ್ಲಿಯೇ ತೂಕಡಿಸಲಾರಂಭಿಸಿದ್ದರು. ಅವರ ಹತ್ತಿರದಲ್ಲಿದ್ದ ವಾಚಾಳಿ ಹೆಂಗಸೊಬ್ಬಳು ತನ್ನ ಇನ್ನೊಂದು ಬದಿಯಲ್ಲಿ ಕುಳಿತ ಮಹಾಮೌನಿ ಯುವಕನೊಬ್ಬನನ್ನು ತಾನೇ ಪರಿಚಯ ಮಾಡಿಕೊಂಡು, ಅತೀವ ಆಸಕ್ತಿಯಿಂದ ಮಾತನಾಡುತ್ತಾ, ಅವನ ಮೂಲವ್ಯಕ್ತಿತ್ವವನ್ನೇ ಮಾರ್ಪಡಿಸಿಬಿಡುವ ಸನ್ನಾಹದಲ್ಲಿದ್ದಳು. ಇದ್ದ ಸಣ್ಣ ಹೊಟ್ಟೆನೋವಿಗೆ ಎಕ್ಸ್‌ರೇ, ಸ್ಕ್ಯಾನಿಂಗ್ ಅದೂ ಇದೂ ಎಲ್ಲವನ್ನೂ ಮಾಡಿಸಿ, ಬರೆದುಕೊಟ್ಟಿದ್ದ ಮಾತ್ರೆಗಳೆಲ್ಲವನ್ನೂ ತೆಗೆದುಕೊಂಡು, ತಿಂಗಳ ಸಂಬಳದಲ್ಲಿ ಕಾಲು ಭಾಗವನ್ನು ಖರ್ಚು ಮಾಡಿಕೊಂಡಿದ್ದವನು ಚಿಂತೆಯ ಮುಖ ಹೊತ್ತು ಹೊರನಡೆಯುತ್ತಿದ್ದ.
“ಈ ಮಾತು ಹೇಳುವುದಕ್ಕೆ ನನಗೆ ನಿಜವಾಗಿಯೂ ಕಷ್ಟವಾಗುತ್ತಿದೆ. ಆದರೆ ಹೇಳದೆ ವಿಧಿ ಇಲ್ಲ. ಐಯಾಮ್ ಸಾರಿ ಟು ಸೇ ದಿಸ್, ನಿಮ್ಮ ಯಜಮಾನರು ಇನ್ನು ಹೆಚ್ಚು ಸಮಯ ಬದುಕುವುದಕ್ಕೆ ಸಾಧ್ಯ ಇಲ್ಲ. ಇರುವಷ್ಟು ಸಮಯ ಅವರನ್ನು ಚೆನ್ನಾಗಿ ನೋಡಿಕೊಳ್ಳಿ” ಎಂಬ ಮಾತನ್ನು ಕೇಳಿಸಿಕೊಂಡು ಬಂದಿದ್ದವಳು ಹೊರಗೆ ಕುಳಿತಿದ್ದ ಪತಿಯನ್ನು ಕಂಡ ಕೂಡಲೇ ಮುಖ ಚಿಕ್ಕದು ಮಾಡಿಕೊಂಡಿದ್ದಳು. ನಾಲ್ಕು ವರ್ಷದ ಹೆಣ್ಣುಮಗುವೊಂದು ವರಾಂಡದ ತುಂಬೆಲ್ಲಾ ಓಡಾಡುತ್ತಾ, ಅಮ್ಮನಿಗೆ ಉಚಿತ ವ್ಯಾಯಾಮ ಮಾಡಿಸುತ್ತಿತ್ತು.
ಅಷ್ಟರಲ್ಲಿ ಅಳಿದುಳಿಯುವ ಆಟವಿನ್ನೂ ಚಾಲ್ತಿಯಲ್ಲಿದೆ ಎಂಬಂತೆ ಆಸ್ಪತ್ರೆಯ ಆ್ಯಂಬುಲೆನ್ಸ್ ಸದ್ದೆಬ್ಬಿಸುತ್ತಾ ಬಂದುನಿಂತಿತು. ಅದರ ಹಿಂದೆಯೇ, ಮೈಯ್ಯೆಲ್ಲಾ ನೆತ್ತರಾಗಿದ್ದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಯ ಸಿಬ್ಬಂದಿ ಎಮರ್ಜೆನ್ಸಿ ವಾರ್ಡ್ ಒಳಕ್ಕೆ ಸಾಗಿಸಿದರು. ನಾಲ್ಕೈದು ಜನ ನರ್ಸುಗಳು ಆತಂಕದ ದೃಷ್ಟಿ ಹೊತ್ತು ಆ ದಿಕ್ಕಿಗೇ ಧಾವಿಸಿದರು. ಇದ್ಯಾವುದರ ಉಸಾಬರಿಯೂ ಇಲ್ಲದೆ ಕಿವಿಗೆ ಇಯರ್‌ಫೋನ್ ಸಿಕ್ಕಿಸಿಕೊಂಡು ತನ್ನಿಷ್ಟದ ಗಾಯಕನ ಹಾಡು ಕೇಳುವುದರಲ್ಲಿ ತಲ್ಲೀನನಾಗಿದ್ದ ಇಪ್ಪತ್ತರ ತರುಣನೊಬ್ಬ ಲೌಕಿಕ ಜಂಜಾಟಗಳಿಂದ ಅತೀತನಾದವನಂತೆ ತೋರುತ್ತಿದ್ದ.
ಈ ಮಧ್ಯೆ ಕ್ಲಾರಾಳ ಕಣ್ಣುಗಳು ಅನಿಯಂತ್ರಿತ ಲಯದಲ್ಲಿ ನಾಟ್ಯವಾಡುತ್ತಿದ್ದ ರೀತಿಯನ್ನು ಸೆರೆನಾ ಸ್ಪಷ್ಟವಾಗಿ ಗುರುತಿಸಿದಳು. ಹಾಗೆಯೇ ಕ್ಲಾರಾಳ ಮುಖ ನೋಡಿದಳು. ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು. ಯಾವಾಗಲೂ ಮುಗ್ಧವಾಗಿ ನಗುನಗುತ್ತಿದ್ದ ಅವಳ ಮುಖ ಇಂದು ಸಪ್ಪಗಾಗಿತ್ತು. ಇದು ಅರಿವಿಗೆ ಬರುವುದಕ್ಕೆ ಸೆರೆನಾಳಿಗೆ ಅರೆಕ್ಷಣವೂ ಬೇಕಾಗಲಿಲ್ಲ. ಅವಳಿಗೆ ಗೊತ್ತಾಗಿಹೋಗಿತ್ತು, ಕ್ಲಾರಾ ವಿಪರೀತ ದುಃಖದಲ್ಲಿದ್ದಾಳೆ.
“ಏನೇ, ಗಂಡು ಹೀರೋಯಿನ್? ಯಾಕೆ ಅಳುತ್ತಿದ್ದೀಯಾ?” ಎಂದು ನಗುತ್ತಾ ಕೇಳಿ, ಅವಳ ದುಃಖವನ್ನು ಕಡಿಮೆಗೊಳಿಸುವ ಪ್ರಯತ್ನ ಮಾಡಿದಳು. ನೋಡುವುದಕ್ಕೆ ಚಂದ ಇದ್ದು, ಏನೆಂದರೂ ಭಯಪಡದ ದಿಟ್ಟತನ ರೂಢಿಸಿಕೊಂಡಿದ್ದ ಕ್ಲಾರಾಳಿಗೆ ಸೆರೆನಾ ಇಟ್ಟಿದ್ದ ತಮಾಷೆಯ ಹೆಸರದು, ಗಂಡು ಹೀರೋಯಿನ್.
“ನನಗೆ ನಿನ್ನನ್ನು ಬಿಟ್ಟು ಬದುಕುವುದಕ್ಕೆ ಸಾಧ್ಯವಿಲ್ಲವೇನೋ ಎನಿಸುತ್ತಿದೆ ಸೆರೆನಾ. ನಿನಗೇನಾದರೂ ಅಪಾಯವಾದರೆ ಎನಿಸುತ್ತಿದೆ” ಎಂದವಳು ಈಗ ಸಂಪೂರ್ಣ ಕಣ್ಣೀರಾಗಿದ್ದಳು. ದೊಡ್ಡದಾಗಿಯೇ ಅಳುತ್ತಿದ್ದಳು.
“ಯಾರು ಹೇಳಿದ್ದು ನನಗೆ ಅಪಾಯವಾಗುತ್ತದೆ ಎಂದು? ನನಗೇನೂ ಆಗುವುದಿಲ್ಲ. ಈಗ ಒಂದೆರಡು ಗಂಟೆ ಅಷ್ಟೇ. ಸಂಜೆಯೇ ಹೋಟೆಲ್‌ಗೆ ಹೋಗೋಣ. ಹೊಟ್ಟೆತುಂಬಾ ತಿನ್ನೋಣ” ಎಂದು ಹೇಳಿ, ಜೋರಾಗಿ ಬಾಯಿದೆರೆದು ನಕ್ಕಳು. ಅವಳ ಖುಷಿಗೆ ಎಂಬಂತೆ ಕ್ಲಾರಾ ನಗಾಡಿದರೂ ಸಹ ಅವಳ ಮನಸ್ಸಿನ ಮೂಲೆಯಲ್ಲಿ ಆತಂಕದ ಮಗು ಬೆಳೆಯುತ್ತಲೇ ಇತ್ತು.
ಮೂಲೆಯಲ್ಲಿಟ್ಟಿದ್ದ ಟಿ.ವಿ.ಯಲ್ಲಿ ಸಾಕ್ಷ್ಯಚಿತ್ರವೊಂದು ಪ್ರಸಾರ ಆಗುತ್ತಿತ್ತು. ದಟ್ಟ ಕಾಡೊಂದರ ಕುರಿತಾದ ಡಾಕ್ಯುಮೆಂಟರಿ ಅದು. ಆ ಕಾಡಿನಲ್ಲಿ ಬದುಕುತ್ತಿರುವ ಜೀವಿಗಳ ಬದುಕಿನ ರೀತಿಯನ್ನು ಅಧ್ಯಯನಶೀಲತೆಯ ಆಧಾರದಲ್ಲಿ ತೋರಿಸಲಾಗುತ್ತಿತ್ತು. ಒಂದು ಕಡೆಯಲ್ಲಿ ಐದಾರು ಸಿಂಹಗಳು ಕಾಡುಕೋಣವೊಂದರ ಪ್ರಾಣವನ್ನು ಹಂತಹಂತವಾಗಿ ಕಿತ್ತುಕೊಳ್ಳುತ್ತಿದ್ದವು. ಇನ್ನೊಂದು ಬದಿಯಲ್ಲಿದ್ದ ಹತ್ತಿಪ್ಪತ್ತು ಕಾಡುಕೋಣಗಳು ಓಡಿ ಬಂದ ದಾರಿಯ ಕಡೆಗೆ ಮತ್ತೆ ಹೊರಳಿ ನೋಡತೊಡಗಿದ್ದವು. ತಮ್ಮವನನ್ನು ಉಳಿಸಿಕೊಳ್ಳಲಾಗದ ಅಸಹಾಯಕತೆ ಅವುಗಳದ್ದು. ಕಾದಾಟಕ್ಕೆ ಸಿದ್ಧವಾದಂತೆ ಕಾಲು ಕೆರೆಯುತ್ತಿದ್ದ ಕಾಡುಕೋಣವೊಂದರ ಮುಖದಲ್ಲಿ ಮಣ್ಣು ಮೆತ್ತಿಕೊಂಡಿತ್ತು. ಅದರ ಹತ್ತಿರದಲ್ಲಿಯೇ ಇದ್ದ ಕಾಡುಕೋಣದ ಕೊಂಬಿನ ಮೇಲೆ, ಬೆನ್ನಮೇಲೆ ಕುಳಿತಿದ್ದ ಐದಾರು ಪಕ್ಷಿಗಳು ಕೊಕ್ಕಿನಿಂದ ಅಲ್ಲಲ್ಲಿ ಕುಕ್ಕುತ್ತಾ ಹೊಟ್ಟೆ ತುಂಬಿಸಿಕೊಳ್ಳುವುದರಲ್ಲಿ ತಲ್ಲೀನವಾಗಿದ್ದವು. ದೃಶ್ಯಗಳು ಬದಲಾಗುತ್ತಲೇ ಇದ್ದವು. ಆನೆಗಳ ಗುಂಪೊಂದು ಜಲಕ್ರೀಡೆಯಾಡಿ, ನೀರಿನಿಂದ ಮೇಲೆ ಬಂದು ಮಣ್ಣನ್ನು ಮೈಮೇಲೆಲ್ಲಾ ಎರಚಿಕೊಳ್ಳುತ್ತಾ ಸಾಗುತ್ತಿದ್ದವು. ಆ ಗುಂಪಿನಲ್ಲಿದ್ದ ಮರಿಯಾನೆಯೊಂದು ತಾಯಿಯ ಕಾಲಡಿಯಲ್ಲಿ ಸಾಗುತ್ತಿದ್ದುದು, ತುಂಟತನದ ಅಮಲು ಹೆಚ್ಚಿಸಿಕೊಂಡು ಗುಂಪಿನಿಂದಾಚೆಗೆ ಓಡಿತು. ತಾಯಿ ಆನೆ ಬಲವಾಗಿ ಘೀಳಿಟ್ಟದ್ದೇ ತಡ, ಏನೋ ಮಹಾಪರಾಧ ಮಾಡಿದವರಂತೆ ಸುಮ್ಮನೆ ಬಂದು ಮತ್ತೆ ಮೊದಲಿನಂತೆ ತಾಯಿಯ ಕಾಲಡಿಯಲ್ಲಿ ನಿಂತಿತು. ತಾಯಿಯಾನೆಗೆ ಕೋಪ ಬಂದಿತ್ತೋ, ಇಲ್ಲಾ ಆತಂಕವಾಗಿತ್ತೋ, ಮರಿಯ ತಲೆಮೆಲೆ ಸೊಂಡಿಲಿನಿಂದ ಬಡಿಯಿತು. ಆನೆಗಳಿದ್ದ ಗುಂಪು ಹಾಗೆಯೇ ಸಾಗಿಹೋಯಿತು. ಸಾಕಷ್ಟು ಸಮಯದಿಂದ ಸಮುದ್ರದ ಮೇಲೆಯೇ ಹಾರಾಡುತ್ತಿದ್ದ ಹಕ್ಕಿಯೊಂದು ತಕ್ಷಣವೇ ಸಮುದ್ರದ ಮೇಲ್ಮೈಗೆ ಅಪ್ಪಳಿಸಿ, ತನ್ನ ಆ ಹೊತ್ತಿನ ಆಹಾರವಾಗಿದ್ದ ಮೀನೊಂದನ್ನು ಕೊಕ್ಕಿನಲ್ಲಿ ಕಚ್ಚಿಕೊಂಡು ಮೇಲಕ್ಕೆ ಹಾರಿತು. ಅಲ್ಲಿಗೆ ದೃಶ್ಯ ಬದಲಾಯಿತು.
ಮುಂದೆ ಬರುವ ಅಪಾಯವನ್ನು ಅಂದಾಜಿಸಿದ್ದ ಆ ಎರಡು ಜಿಂಕೆಮರಿಗಳು ತಮ್ಮ ಹಿಂದಿದ್ದ ಹುಲ್ಲಿನ ಪೊದೆಯೆಡೆಗೆ ನೋಡುತ್ತಿದ್ದವು. ಹುಲ್ಲಿನ ನಡುವೆ ಇದ್ದದ್ದು ಎರಡು ಕಣ್ಣುಗಳು. ರಣಕ್ರೂರವಾದ ಕಣ್ಣುಗಳವು. ಕಣ್ಣಿನ ಆಚೆಈಚೆಯೆಲ್ಲಾ ಕಪ್ಪು ಕಪ್ಪು ಚುಕ್ಕೆ. ಹಳದಿ ಬಣ್ಣದ ಮೈ. ಒಮ್ಮಿಂದೊಮ್ಮೆಗೇ ಮೇಲೆದ್ದ ಆ ಹಳದಿ ಬಣ್ಣ ಆ ಎರಡು ಜಿಂಕೆ ಮರಿಗಳಲ್ಲಿ ಒಂದರ ಹಿಂದೆ ಓಡತೊಡಗಿತ್ತು. ಓಡುವ ವೇಗಕ್ಕೆ ಏಳುತ್ತಲೇ ಇರುವ ಧೂಳಿನ ಕಣಗಳು ಓಟವನ್ನು ಕಂಡು ಮೆಚ್ಚಿ ಚಪ್ಪಾಳೆ ತಟ್ಟುತ್ತಿದ್ದವು. ಮರಿ ಜಿಂಕೆ ವಕ್ರವಕ್ರವಾಗಿ ತಿರುಗುತ್ತಾ ಪ್ರಾಣ ಉಳಿಸಿಕೊಳ್ಳಲೇಬೇಕಾದ ಒತ್ತಡದಲ್ಲಿ ಓಡುತ್ತಿತ್ತು. ಹಿಂದೆಯಿದ್ದ ಚಿರತೆಯದ್ದು ಅದನ್ನೂ ಮೀರುವ ಗತಿ. ಓಟ ಕೊನೆಯಾಗುವ ಕ್ಷಣ ಬಂತು. ಜಿಂಕೆಯ ಬೆನ್ನ ಮೇಲೆ ಹಾರಿದ ಚಿರತೆ ಕುತ್ತಿಗೆಗೆ ಬಾಯಿ ಹಾಕಿ ಬಲವಾಗಿ ಕಚ್ಚಿ ಹಿಡಿಯಿತು. ಒಂದಷ್ಟು ಹೊತ್ತಿನ ಒದ್ದಾಟ ಮಾತ್ರ. ಬಡಪಾಯಿ ಜಿಂಕೆಗೆ ಜೀವವನ್ನು ಉಳಿಸಿಕೊಳ್ಳಬೇಕೆಂಬ ಪ್ರಜ್ಞೆಯೇ ಮರೆತುಹೋಯಿತು.
ಸಂಗಾತಿ ಜಿಂಕೆಯ ಸಾವನ್ನು ಅಸಹಾಯಕವಾಗಿ ಕಾಣುತ್ತಿದ್ದ ಜಿಂಕೆಯ ನೋಟ ಕ್ಲಾರಾಳ ಕಣ್ಣಿನಲ್ಲಿ ನೆಲೆಗೊಂಡಿತ್ತು. ಸಾಕ್ಷ್ಯಚಿತ್ರದಲ್ಲಿದ್ದ ಅಷ್ಟೂ ದೃಶ್ಯಗಳಲ್ಲಿ ಅವಳ ಮನಸ್ಸನ್ನು ಮುಟ್ಟಿದ್ದು ಈ ದೃಶ್ಯ ಮಾತ್ರ. ‘ಅದೆಷ್ಟು ದುಃಖ ಆಗಿರಬಹುದಲ್ಲಾ ಈ ಜಿಂಕೆಗೆ? ಆ ಜಿಂಕೆಯೇನೋ ಪ್ರಾಣ ಕಳೆದುಕೊಂಡಿದೆ. ಆದರೆ ಇದಿನ್ನೂ ಬದುಕಿದೆ. ಸಂಗಾತಿಯ ಸಂಗಾತವಿಲ್ಲದೆ ಬದುಕು ನಡೆಸುವ ಅನಿವಾರ್ಯತೆ ಇದರದ್ದು. ಅಬ್ಬಾ ಇದೆಂತಹ ಯಾತನೆಯ ಬದುಕು!’ ಎಂಬ ಯೋಚನೆ ಕ್ಲಾರಾಳ ಮನಸ್ಸಿನಲ್ಲಿ ಸುಳಿಯಲಾರಂಭಿಸಿತ್ತು.
ಅಷ್ಟೂ ಹೊತ್ತಿನ ಮೌನವನ್ನು ಭೇದಿಸುವಂತೆ ಸೆರೆನಾ ಹೇಳತೊಡಗಿದಳು- “ಅಸ್ತಿತ್ವವನ್ನು ಉಳಿಸಿಕೊಳ್ಳುವುದೇ ಎಷ್ಟೋ ಸಂದರ್ಭಗಳಲ್ಲಿ ಕಷ್ಟವಾಗಿಬಿಡುತ್ತದೆ. ಅನಿರೀಕ್ಷಿತವಾಗಿ ಅಸ್ತಿತ್ವ ಕಳೆದುಹೋಗುವುದೆಂದರೆ ಅದೆಂತಹ ಆತಂಕದ ವಿಷಯ. ಅಲ್ಲವೇ ಕ್ಲಾರಾ?”
“ಹೌದು, ನಮ್ಮ ಅಸ್ತಿತ್ವ ಇರುವುದು ನಮ್ಮಿಂದ ಮಾತ್ರ ಅಲ್ಲ. ಸುತ್ತಲಿರುವವರ ಅಸ್ತಿತ್ವದಲ್ಲಿಯೂ ನಮ್ಮ ಅಸ್ತಿತ್ವ ಇದೆ. ಈಗ ನೋಡು, ನಾವು ಬದುಕಬೇಕಾದರೆ ಆಹಾರ ಸೇವಿಸಬೇಕು. ಆಹಾರ ಬೆಳೆಯುವ ರೈತನೇ ಇಲ್ಲದಿದ್ದರೆ ನಮಗೆ ಅಸ್ತಿತ್ವವೇ ಇಲ್ಲ. ನಾವೀಗ ತಿನ್ನುತ್ತಿರುವುದನ್ನು ಬೆಳೆದದ್ದು ಯಾರು ಎನ್ನುವುದು ನಮಗೆ ಗೊತ್ತಿಲ್ಲದಿರಬಹುದು. ಆದರೆ ಆ ಗೊತ್ತಿರದ ವ್ಯಕ್ತಿಯೇ ನಮ್ಮ ಅಸ್ತಿತ್ವಕ್ಕೆ ಕಾರಣವಾಗಿರುತ್ತಾನೆ. ಆ ರೈತನಿಗೂ ಕೂಡಾ ನಮ್ಮ ಅವಶ್ಯಕತೆ ಇರುತ್ತದೆ. ಅವನು ಬೆಳೆದ ಆಹಾರವನ್ನು ಅನುಭೋಗಿಸುವವರು ಇರದಿದ್ದರೆ ಅವನಿಗೆ ಅಸ್ತಿತ್ವ ಇರುವುದಿಲ್ಲ. ಇಡೀ ಜಗತ್ತು ಈ ಬಗೆಯ ಕೊಡುಕೊಳ್ಳುವಿಕೆಯ ಮೂಲಕವೇ ಅಸ್ತಿತ್ವವನ್ನು ಉಳಿಸಿಕೊಂಡಿದೆ” ಎಂದು ನಿಧಾನವಾಗಿ ಹೇಳಿದಳು ಕ್ಲಾರಾ. ಸೆರೆನಾಳ ಮಾತನ್ನು ಒಪ್ಪಿಕೊಂಡು ಅವಳು ಅಭಿಪ್ರಾಯ ಹೇಳಿದ್ದು ಇದೇ ಮೊದಲು. ಯಾವಾಗಲೂ ಸೆರೆನಾಳ ಅಭಿಪ್ರಾಯಕ್ಕೆ ತದ್ವಿರುದ್ಧವಾಗಿ ಮಾತನಾಡುತ್ತಿದ್ದ ಅವಳಿಗೆ ಈ ಸಂದರ್ಭದಲ್ಲಿ ಹಾಗೆ ಮಾತನಾಡುವುದು ಸರಿ ಎನಿಸಿರಲಿಲ್ಲ. ಜೊತೆಗೆ ಸೆರೆನಾ ಹೇಳಿದ್ದು ಸರಿ ಇದೆ ಎಂದು ಅವಳಿಗೆ ಅನಿಸಿತ್ತು.
“ಹೌದು, ಪರಸ್ಪರ ಅವಲಂಬನೆಯಲ್ಲಿಯೇ ನಮ್ಮ ಅಸ್ತಿತ್ವ ಇರುವುದು. ಲೋಕದ ಈ ನಿಯಮ ನಮ್ಮಿಬ್ಬರ ಇದುವರೆಗಿನ ಬದುಕಿಗೆ ಇನ್ನಷ್ಟು ಚೆನ್ನಾಗಿ ಅನ್ವಯಿಸುತ್ತದೆ ಎಂದು ನನಗನ್ನಿಸುತ್ತದೆ” ಎಂದ ಸೆರೆನಾ ಮುಗುಳ್ನಗುತ್ತಾ ಕ್ಲಾರಾಳ ಮುಖವನ್ನು ನೋಡಿದಳು. ಅವಳ ಮುಖದಲ್ಲಿಯೂ ಸಹಮತದ ನಗುವಿತ್ತು.
ಈ ಮಧ್ಯೆ ಕ್ಲಾರಾಳ ಕಣ್ಣುಗಳು ಅನಿಯಂತ್ರಿತ ಲಯದಲ್ಲಿ ನಾಟ್ಯವಾಡುತ್ತಿದ್ದ ರೀತಿಯನ್ನು ಸೆರೆನಾ ಸ್ಪಷ್ಟವಾಗಿ ಗುರುತಿಸಿದಳು. ಹಾಗೆಯೇ ಕ್ಲಾರಾಳ ಮುಖ ನೋಡಿದಳು. ಕಣ್ಣಿನಲ್ಲಿ ನೀರು ತುಂಬಿಕೊಂಡಿತ್ತು. ಯಾವಾಗಲೂ ಮುಗ್ಧವಾಗಿ ನಗುನಗುತ್ತಿದ್ದ ಅವಳ ಮುಖ ಇಂದು ಸಪ್ಪಗಾಗಿತ್ತು. ಇದು ಅರಿವಿಗೆ ಬರುವುದಕ್ಕೆ ಸೆರೆನಾಳಿಗೆ ಅರೆಕ್ಷಣವೂ ಬೇಕಾಗಲಿಲ್ಲ.
ಸಯಾಮಿ ಅವಳಿಗಳಾಗಿ ಜನಿಸಿದವರು ಕ್ಲಾರಾ ಮತ್ತು ಸೆರೆನಾ. ಸಯಾಮಿ ಅವಳಿಗಳೆಂಬ ಪರಿಕಲ್ಪನೆಯೇ ಇರದಿದ್ದ, ಹಾಗೆಂದರೇನೆಂದೇ ಗೊತ್ತಿರದ ಇವರ ತಂದೆತಾಯಿಯರಂತೂ ಶಿಶುಗಳನ್ನು ಮೊದಲ ಬಾರಿ ಕಂಡಾಗ ಅವಾಕ್ಕಾಗಿದ್ದರು. ಗರ್ಭಿಣಿಯಾಗಿದ್ದಾಗ ಪ್ರತೀ ತಿಂಗಳು ತಪ್ಪದೇ ವೈದ್ಯರ ಬಳಿ ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಳು ಇವರ ತಾಯಿ. ಅವಳಿ ಮಕ್ಕಳಿರುವ ಸಾಧ್ಯತೆ ಇದೆ ಎಂದಷ್ಟೇ ಹೇಳಿದ್ದರು ವೈದ್ಯರು. ಆದರೆ ಈಗ ಹುಟ್ಟಿರುವ ಶಿಶುಗಳನ್ನು ನೋಡಿದರೆ, ಮೈಗಳು ಅಂಟಿಕೊಂಡಿವೆ. ಎರಡು ತಲೆ, ನಾಲ್ಕು ಕೈಗಳು, ನಾಲ್ಕು ಕಾಲುಗಳಿವೆ.
ಇದ್ಯಾವ ಬಗೆಯ ಅಚ್ಚರಿ ಎಂದುಕೊಂಡ ಹೆತ್ತವರು ವೈದ್ಯರ ಮುಖ ನೋಡಿದರೆ ಅವರು ಹೇಳತೊಡಗಿದರು- “ಹುಟ್ಟುವ ಎರಡು ಲಕ್ಷ ಮಕ್ಕಳಲ್ಲಿ ಇಂತಹ ಸಯಾಮಿ ಅವಳಿಗಳಾಗುವವರು ಒಬ್ಬರೋ, ಇಬ್ಬರೋ ಮಾತ್ರ. ಮಕ್ಕಳು ಹೀಗೆ ಹುಟ್ಟಿದಾಗ ಆಘಾತ ಆಗುವುದು ಸಹಜ. ಹಾಗೆಂದು ನೀವು ಇದನ್ನು ಧನಾತ್ಮಕವಾಗಿ ತೆಗೆದುಕೊಳ್ಳುವುದಕ್ಕೂ ಅವಕಾಶ ಇದೆ. ನೀವು ಇದನ್ನೊಂದು ದೋಷ ಎಂದು ಭಾವಿಸುವುದಕ್ಕಿಂತ ನಿಮ್ಮ ಮಕ್ಕಳು ಉಳಿದವರಿಗಿಂತ ಸ್ಪೆಶಲ್ ಎಂದು ಅಂದುಕೊಳ್ಳುವುದೇ ಒಳ್ಳೆಯದು. ಅಫ್‌ಕೋರ್ಸ್, ನೀವು ಹಾಗೆ ಅಂದುಕೊಳ್ಳದೆ ಬೇರೆ ಆಯ್ಕೆಯೇ ಇಲ್ಲ ನಿಮಗೆ. ವಾಸ್ತವವನ್ನು ಒಪ್ಪಿಕೊಂಡು ಬದುಕುವುದೇ ಬುದ್ಧಿವಂತಿಕೆ” ವೈದ್ಯರು ಹೀಗಂದಾಗ ಮಕ್ಕಳ ದೇಹ ಅಂಟಿಕೊಂಡಿರುವುದನ್ನು ಬೇರ್ಪಡಿಸಲು ಸಾಧ್ಯವಿದೆಯಾ? ಎಂದು ದಂಪತಿ ಪ್ರಶ್ನಿಸಿದರು.
“ಇಲ್ಲ, ಖಂಡಿತ ಸಾಧ್ಯವಿಲ್ಲ. ಇಂತಹ ಕೆಲವೇ ಕೆಲವು ಪ್ರಕರಣಗಳಲ್ಲಿ ದೇಹವನ್ನು ಬೇರ್ಪಡಿಸಿ ಎರಡೂ ಶಿಶುಗಳನ್ನು ಉಳಿಸಿದ್ದಾರೆ ವೈದ್ಯರು. ಆದರೆ ನಿಮ್ಮ ಮಕ್ಕಳ ವಿಷಯದಲ್ಲಿ ಅದು ಸಾಧ್ಯವಿಲ್ಲ. ದೇಹರಚನೆ ಅಂತಹ ಶಸ್ತ್ರಚಿಕಿತ್ಸೆಗೆ ಹೊಂದಿಕೊಳ್ಳುವಂತೆ ಇಲ್ಲ. ಒಂದು ವೇಳೆ ದೇಹ ಬೇರೆ ಮಾಡಲು ಪ್ರಯತ್ನಿಸಿದರೆ ಇಬ್ಬರ ಪ್ರಾಣವೂ ಹೋಗಬಹುದು. ಇಪ್ಪತ್ತೆರಡು ವರ್ಷ ಅನುಭವವಿರುವ ನಾನು ಅಂತಹ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ಅದಕ್ಕಿಂತ ಅವರಿರುವ ರೀತಿಯನ್ನೇ ಒಪ್ಪಿಕೊಂಡರೆ ಜೊತೆಜೊತೆಯಾಗಿ ಬದುಕುವುದಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ” ಎಂದು ಹೇಳಿದ ವೈದ್ಯರು ದಂಪತಿಗೆ ಮತ್ತಷ್ಟು ಧೈರ್ಯದ ಮಾತುಗಳನ್ನು ಹೇಳಿ, ಮುಂದಕ್ಕೆ ಏನಾದರೂ ಆರೋಗ್ಯ ಸಮಸ್ಯೆ ಬಂದರೆ ತಕ್ಷಣ ಸ್ಪಂದಿಸುವ ಭರವಸೆ ನೀಡಿ ಕಳುಹಿಸಿಕೊಟ್ಟರು.
ದೇಹವಂಟಿಕೊಂಡಿದ್ದ ಮಕ್ಕಳನ್ನು ಬೆಳೆಸುವುದು ನಿಜಕ್ಕೂ ಸವಾಲಿನ ವಿಷಯವಾಗಿತ್ತು. ಅವರಿಬ್ಬರ ದೇಹವೂ ತುಂಬುವಂತಹ ಡ್ರೆಸ್ ಆಗಬೇಕಿತ್ತು. ಅದಕ್ಕಾಗಿಯೇ ಹೊಸ ರೀತಿಯ ಡ್ರೆಸ್ಸನ್ನು ಮಾಡಿಸಿದ್ದರು. ನಡೆಯುವುದನ್ನು ಕಲಿಸುವುದು, ಮಲಗಿಸುವುದು ಎಲ್ಲವೂ ಕಷ್ಟವಿತ್ತು. ಆದರೆ ಕ್ಲಾರಾ ಮತ್ತು ಸೆರೆನಾಳ ತಂದೆ ತಾಯಿ ಮಕ್ಕಳಿಗಾಗಿ ಈ ಎಲ್ಲವನ್ನೂ ಪ್ರೀತಿಯಿಂದಲೇ ಮಾಡುತ್ತಿದ್ದರು.
ಅವರಿಬ್ಬರ ದೇಹ ಅಂಟಿಕೊಂಡಿತ್ತೇ ವಿನಃ ಅವರ ಮನಸ್ಸು, ಆಲೋಚನೆ, ವ್ಯಕ್ತಿತ್ವ ಎಲ್ಲದರಲ್ಲಿಯೂ ಅಗಾಧವಾದ ಅಂತರ ಇತ್ತು. ಅವರಿಗೆ ವಯಸ್ಸಾಗುತ್ತಾ ಆಗುತ್ತಾ ಇದು ಅರಿವಿಗೆ ಬರತೊಡಗಿತ್ತು. ಕ್ಲಾರಾಳಲ್ಲಿ ತುಂಟತನ ಜಾಸ್ತಿ ಇದ್ದರೆ ಸೆರೆನಾ ಅದಕ್ಕೆ ತದ್ವಿರುದ್ಧ. ಮಾತನಾಡಲು ಇಷ್ಟಪಡುತ್ತಿದ್ದವಳು, ಅನಿಸಿದ್ದನ್ನು ನೇರವಾಗಿ ಹೇಳಲು ಮುಂದಾಗುತ್ತಿದ್ದವಳು ಕ್ಲಾರಾ. ಆದರೆ ಸೆರೆನಾ ಹಾಗಲ್ಲ. ಅವಳು ಅಂತರ್ಮುಖಿ. ತನ್ನ ಆಲೋಚನೆಯನ್ನು ಅವಳು ಹೆಚ್ಚಾಗಿ ಅಭಿವ್ಯಕ್ತಿಸುತ್ತಿದ್ದದ್ದು ಬರವಣಿಗೆಯ ರೂಪದಲ್ಲಿ. ಎಲ್ಲರಿಂದಲೂ ಹೊಗಳಿಸಿಕೊಳ್ಳುವಂತೆ ಕಥೆ ಬರೆಯುವುದನ್ನು ಇಪ್ಪತ್ತು ವರ್ಷ ತುಂಬುವಷ್ಟರಲ್ಲಿಯೇ ರೂಢಿಸಿಕೊಂಡಿದ್ದವಳು ಸೆರೆನಾ. ಅವಳ ಬರವಣೆಗೆ ಏನೇ ಇರಲಿ, ಅದನ್ನು ಮೊದಲು ಓದುತ್ತಿದ್ದವಳು, ಒಳ್ಳೆಯದಿದೆ ಎನಿಸಿದರೆ ಹೊಗಳುತ್ತಿದ್ದವಳು, ಇಲ್ಲವಾದರೆ ಟೀಕಿಸುತ್ತಿದ್ದವಳು ಕ್ಲಾರಾ.
ತಂದೆ- ತಾಯಿ ಮಧ್ಯಪ್ರವೇಶಿಸುವಷ್ಟರಮಟ್ಟಿಗೆ ಅವರಿಬ್ಬರ ಮಧ್ಯೆ ಜೋರು ಮಾತು ನಡೆಯುತ್ತಿದ್ದುದು ರಾತ್ರೆ ಮಲಗುವ ಸಮಯದಲ್ಲಿ. ಕ್ಲಾರಾಳಿಗೆ ಊಟ ಮಾಡಿ ಅರ್ಧ ಗಂಟೆಯೊಳಗೆ ಮಲಗಿಬಿಡುವ ಅಭ್ಯಾಸ. ಆದರೆ ಸೆರೆನಾಳಿಗೆ ಮಲಗುವ ಮೊದಲು ಕಡಿಮೆ ಎಂದರೂ ಒಂದು ಗಂಟೆ ಪುಸ್ತಕ ಓದುವ ಹವ್ಯಾಸ. ಇವೆರಡೂ ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ಪುಸ್ತಕ ಓದಬೇಕಾದರೆ ಲೈಟ್ ಆನ್ ಆಗಿರಬೇಕು. ಬೆಳಕು ಸ್ವಲ್ಪ ಇದ್ದರೂ ನಿದ್ದೆ ಬರುತ್ತಿರಲಿಲ್ಲ ಕ್ಲಾರಾಳಿಗೆ. ಇದಕ್ಕಾಗಿಯೇ ಅದೊಂದು ಸಲ ಜಗಳ ಶುರುವಾಗಿತ್ತು. ಆದರೆ ತಮ್ಮಿಬ್ಬರ ನಡುವಿನ ಬಂಧ ಏನೆಂದರೂ ಬೇರ್ಪಡಿಸಲಾಗದ್ದೆಂದು ಅವರಿಬ್ಬರಿಗೂ ಅರಿವಾದದ್ದು ಇಂತಹ ಜಗಳದ ಸಂದರ್ಭದಲ್ಲಿಯೇ. “ಪುಸ್ತಕ ಓದಬೇಕಾದರೆ ಹೊರಗೆ ಹೋಗು” ಎಂದು ಕ್ಲಾರಾ ಬೊಬ್ಬೆ ಹೊಡೆದಿದ್ದಳು. “ನೀನೇ ಇನ್ನೊಂದು ಕೋಣೆಗೆ ಹೋಗಿ ಮಲಗು” ಎಂದು ಸೆರೆನಾ ವಾದಿಸಿದ್ದಳು. ಮರುಕ್ಷಣವೇ ಹಾಗೆ ಪ್ರತ್ಯೇಕವಾಗಿ ಹೋಗುವುದಕ್ಕೆ ಸಾಧ್ಯವಿಲ್ಲ ಎಂದು ಇಬ್ಬರಿಗೂ ಮನವರಿಕೆಯಾಗಿ ಮನದುಂಬಿ ನಗಾಡಿದ್ದರು.
ಹೀಗಿದ್ದ ಕ್ಲಾರಾ ಮತ್ತು ಸೆರೆನಾಳಿಗೆ ಆಘಾತ ನೀಡುವ ಸಂದರ್ಭ ಈಗ ಸೃಷ್ಟಿಯಾಗಿದೆ. ಪದೇ ಪದೇ ಎದೆನೋವು ಎಂದು ಹೇಳುತ್ತಿದ್ದಳು ಸೆರೆನಾ. ವೈದ್ಯರಲ್ಲಿ ಹೋಗಿ ತೋರಿಸಿದಾಗ ಅವರು ಹೇಳಿದ್ದು- ಹೃದಯದ ಸಮಸ್ಯೆ ಇದೆ. ಸಮಸ್ಯೆ ತೀರಾ ಗಂಭೀರವಾಗಿದೆ. ತಕ್ಷಣಕ್ಕೆ ಆಪರೇಷನ್ ಆಗಲೇಬೇಕು. ಆಪರೇಷನ್ ಆದರೂ ಕೂಡಾ ಬದುಕುವ ಸಾಧ್ಯತೆ ನಲುವತ್ತು ಶೇಕಡಾ ಮಾತ್ರ. ಒಂದುವೇಳೆ ಆಪರೇಷನ್‌ನಲ್ಲಿ ಸೆರೆನಾಳ ಪ್ರಾಣಕ್ಕೇನಾದರೂ ಆದರೆ ಅವಳ ದೇಹವನ್ನು ಬೇರ್ಪಡಿಸಿದರೆ ಕ್ಲಾರಾ ಬದುಕುಳಿಯುತ್ತಾಳೆ.
ಕ್ಲಾರಾ ಮತ್ತು ಸೆರೆನಾಳ ಜನನವನ್ನು ಒಪ್ಪಿಕೊಂಡಂತೆಯೇ ಆಪರೇಶನ್‌ಗೂ ಒಪ್ಪಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ ಆ ತಂದೆ- ತಾಯಿಗೆ. ಒಪ್ಪಿಕೊಂಡಿದ್ದರು.
ಬಿಲ್ ಕಟ್ಟಿದ ತಂದೆ ತಾಯಿ ಕ್ಲಾರಾ ಮತ್ತು ಸೆರೆನಾ ಮಲಗಿದ್ದ ಸ್ಟ್ರೆಚರ್ ಬಳಿ ಬಂದಾಗ ಅವರ ಜೊತೆ ಇಬ್ಬರು ನರ್ಸ್‌ಗಳೂ ಇದ್ದರು. ಆಪರೇಶನ್‌ಗೆ ಎಲ್ಲಾ ಸಿದ್ಧತೆಯೂ ಆಗಿರುವುದನ್ನು ಅವರು ತಿಳಿಸಿ, ಆಪರೇಷನ್ ವಾರ್ಡ್‌ನ ಬಾಗಿಲು ತೆಗೆದು, ಅದರ ಮುಂದೆ ಸ್ಟ್ರೆಚರ್ ನಿಲ್ಲಿಸಿದಾಗ ತಾಯಿ ಅಳುತ್ತಿರುವುದು ಕ್ಲಾರಾ ಮತ್ತು ಸೆರೆನಾಳಿಗೆ ಕಾಣಿಸಿತು. ತಂದೆಗೂ ದುಃಖವಾಗಿತ್ತು. ಆದರೆ ತಡೆದುಕೊಂಡಿದ್ದರು. ತುಸು ತಣ್ಣಗಾಗಿದ್ದ ಕ್ಲಾರಾಳ ಕೈ ಸೆರೆನಾಳ ತಂಪು ಕೈಯ್ಯನ್ನು ಕೂಡಿಕೊಂಡು ಬೆಚ್ಚನೆಯ ಭಾವವೊಂದನ್ನು ಮೂಡಿಸುವಷ್ಟರಲ್ಲಿ ಅವರಿದ್ದ ಸ್ಟ್ರೆಚರ್ ನಿಧಾನವಾಗಿ ಆಪರೇಷನ್ ವಾರ್ಡ್‌ನ ಒಳಹೋಯಿತು…

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.