Advertisement
‘ಡಿಸೆಂಬರ್ ಬಂದಿತು, ಚಳಿಯಾಕೆ ಬಂದಳು’: ಮಹಾಲಕ್ಷ್ಮೀ ಕೆ.ಎನ್.‌ ಬರಹ

‘ಡಿಸೆಂಬರ್ ಬಂದಿತು, ಚಳಿಯಾಕೆ ಬಂದಳು’: ಮಹಾಲಕ್ಷ್ಮೀ ಕೆ.ಎನ್.‌ ಬರಹ

ಈ ಬೆಟ್ಟಕ್ಕೆ, ಆ ಮರಕ್ಕೆ, ಹೆಂಚಿನ ಪುಟ್ಟ ಮನೆಗೆ ಹಿಮದ ಹೊದಿಕೆ ಬಂದುಬಿಡುತ್ತೆ. ನಮ್ಮನ್ನೂ ಆ ಹೊದಿಕೆ ಆವರಿಸಿಬಿಡುತ್ತದೆ. ವಿಸ್ಮೃತ ದೃಶ್ಯವನ್ನು ತಂದಿಟ್ಟುಬಿಡುತ್ತದೆ. ಹೆಜ್ಜೆ ಇಟ್ಟಲ್ಲೆಲ್ಲಾ ಹಿಮಮಣಿ ಕಾಲಿಗೆ ಮುತ್ತಿಡುತ್ತದೆ. ಎಳೆಕೂಸಿನ ಕೈ ಕಾಲುಗಳ ಮೆತ್ತಗೆ ಹಿಡಿದು ತೊಳೆಯುವಂತೆ ನಮ್ಮನ್ನು ತಣ್ಣಗೆ ಸೋಕಿ ತೊಳೆಯುತ್ತದೆ ಮಂಜು. ಹಿಮವು ನೆಲದ ಮೇಲೆ ಆವರಿಸಿದಾಗ ಧ್ವನಿ ಹೀರಿಕೊಳ್ಳುವ ಸಾಧನವಾಗಿ ಕಾರ್ಯನಿರ್ವಹಿಸುವುದರಿಂದ ಇಷ್ಟು ದಿನದ ಸದ್ದು ಸಪ್ಪಳ ಸುಮ್ಮನಾಗುತ್ತದೆ. 
ಡಿಸೆಂಬರ್‌ ಚಳಿಯ ಕುರಿತು ಮಹಾಲಕ್ಷ್ಮೀ ಕೆ.ಎನ್.‌ ಬರಹ

ಡಿಸೆಂಬರ್ ಬಂದಿತು ,
ಅಂತೂ ಚಳಿಯಾಕೆ ಬಂದೇ ಬಿಟ್ಟಳು….

ತೊಟ್ಟಿಲ ಮಗು ಬೆಚ್ಚಗೆ ಮಲಗಿದೆ.
ಮಂಜು ತಣ್ಣಗೆ ಕುಳಿತಿದೆ.

ಕೆನ್ನೆತ್ ಪ್ಯಾಚೆನ್ ಅವರ ”ಸ್ನೋ ಈಸ್ ಡೀಪ್ ಆನ್ ದಿ ಗ್ರೌಂಡ್” ಪದ್ಯದ ಸಾಲುಗಳು ನೆನಪಾಗುತ್ತದೆ ..

~”ಹಿಮವು ನೆಲದ ಮೇಲೆ ಆಳವಾಗಿದೆ.
ಯಾವಾಗಲೂ ಬೆಳಕು
ನನ್ನ ಪ್ರೀತಿಯ ಕೂದಲಿನ ಮೇಲೆ ಮೃದುವಾಗಿ ಬೀಳುತ್ತದೆ.”

ಶಿಶಿರ ಬಂದಾಗ ಹೆಪ್ಪುಗಟ್ಟಿದ ಗಾಳಿ ಮೈ ನವಿರೇಳಿಸುತ್ತದೆ. ಸುದೀರ್ಘ ರಾತ್ರಿಗಳೊಡನೆ ಮಾತು ಶುರುವಾಗುತ್ತದೆ. ಕೋಟಿ ತಾರೆಗಳ ದಿಟ್ಟಿಸುತ್ತದೆ ಅದರಂತೆಯೇ ಮಿನುಗುತ್ತವೆ ಕಣ್ಣು. ಹೃದಯ ಹಗುರಾಗುತ್ತದೆ.  ಹಕ್ಕಿ ಹಾಡಿಗೆ ಜೋಂಪೇರುತ್ತದೆ.

ಡಿಸೆಂಬರ್ ಎಂದರೆ ಖುಷಿ ಮಂಜುಮುಸುಕಿದ ಸುತ್ತಲೆಲ್ಲಾ ಒಡ್ಡಿಕೊಂಡಾಗ ಹೊಸದಾಗಿ ಹಾಡುವ ಚೈತನ್ಯ ತರುವ ಚಳಿಯಾಕೆಯ ಬೆಚ್ಚಗೆ ಅಪ್ಪುವ ಕಾಲವಿದು.  ಶಾಂತಿಯನು ಹೊತ್ತು ಬಂದ ಋತು.

ಈ ಬೆಟ್ಟಕ್ಕೆ, ಆ ಮರಕ್ಕೆ, ಹೆಂಚಿನ ಪುಟ್ಟ ಮನೆಗೆ ಹಿಮದ ಹೊದಿಕೆ ಬಂದುಬಿಡುತ್ತೆ. ನಮ್ಮನ್ನೂ ಆ ಹೊದಿಕೆ ಆವರಿಸಿಬಿಡುತ್ತದೆ. ವಿಸ್ಮೃತ ದೃಶ್ಯವನ್ನು ತಂದಿಟ್ಟುಬಿಡುತ್ತದೆ. ಹೆಜ್ಜೆ ಇಟ್ಟಲ್ಲೆಲ್ಲಾ ಹಿಮಮಣಿ ಕಾಲಿಗೆ ಮುತ್ತಿಡುತ್ತದೆ. ಎಳೆಕೂಸಿನ ಕೈ ಕಾಲುಗಳ ಮೆತ್ತಗೆ ಹಿಡಿದು ತೊಳೆಯುವಂತೆ ನಮ್ಮನ್ನು ತಣ್ಣಗೆ ಸೋಕಿ ತೊಳೆಯುತ್ತದೆ ಮಂಜು. ಹಿಮವು ನೆಲದ ಮೇಲೆ ಆವರಿಸಿದಾಗ ಧ್ವನಿ ಹೀರಿಕೊಳ್ಳುವ ಸಾಧನವಾಗಿ ಕಾರ್ಯನಿರ್ವಹಿಸುವುದರಿಂದ ಇಷ್ಟು ದಿನದ ಸದ್ದು ಸಪ್ಪಳ ಸುಮ್ಮನಾಗುತ್ತದೆ.

ಈಗ ಚೂರು ಬಿಸಿಗೆ ಹಾತೊರೆಯುವಾಗ ನನ್ನಜ್ಜಿ ನೆನಪಾಗುತ್ತಾಳೆ.

ಈ ಚಳಿಗಾಲದಲ್ಲಿ ಅಜ್ಜಿಯ ತೋಳಿನಲಿ ಬೆಚ್ಚಗೆ ಮಲಗಿದ್ದ, ಯಾವುದೇ ಚಿಂತೆಯಿಲ್ಲದೇ ಆಟವಾಡುತ್ತಿದ್ದ, ಬಿಸಿಬಿಸಿ ಊಟ ಹೊಟ್ಟೆ ತುಂಬಾ ಕಂಠಪೂರ್ತಿ ತಿಂದು, ಅಜ್ಜಿ ಹಿಂದೆಯೇ ಸುತ್ತುತ್ತಿದ್ದ, ಅಡುಗೆ ಮಾಡುವಾಗ ಒಲೆ ಉರಿಸುತ್ತಾ ಬಿಸಿ ಕಾಯಿಸಿಕೊಂಡು ಅಜ್ಜಿಯ ಪಕ್ಕದಲ್ಲಿ ಪುಟ್ಟ ಹಕ್ಕಿಯಂತೆ ಕೂರುತ್ತಿದ್ದ, ರಾಗಿ ಬೀಸುವಾಗ ಪುಟ್ಟ ಬೊಗಸೆಯಲ್ಲಿ ಬೀಸುವ ಕಲ್ಲಿಗೆ ರಾಗಿ ಹಾಕುತ್ತಾ ಕುಳಿತ ದಿನಗಳು, ಸುಡು ಸುಡು ನೀರಲ್ಲಿ ಸ್ನಾನಮಾಡಿಸಿ ಹೆರಳ ಸಿಕ್ಕ ಬಿಡಿಸಿ ನುಣುಪಾಗಿ ಬಾಚಿ, ನನಗೆಂದೇ ಹೂಕಟ್ಟಿ ಚಂದನೆಯ ಜಡೆ ಹಾಕಿ, ಅಷ್ಟೂ ಮುಡಿಸಿ ಘಮಘಮಿಸುತ್ತಿದ್ದ ದಿನಗಳ ನೆನಪು ತರುವುದು. ಏನಿಲ್ಲದಿದ್ದರೂ ಕೇಳಿದ್ದೆಲ್ಲವ ಮಾಡಿ ಸಾಕೆಂದರೂ ತಿನ್ನೆಂದು ತಿನ್ನಿಸುತ್ತಿದ್ದವಳು, ಬೆನ್ನ ತೀಡುತ್ತಿದ್ದವಳು, ಅಮ್ಮನಿಗಿಂತ ಮಿಗಿಲಾಗಿ ಕಂಡಾಕೆ. ಯವುದೋ ಕನಸಿಗೆ ಬೆಚ್ಚಿದಾಗ, ಮುಖ ಬಾಡಿದಾಗ ಸಪ್ಪಗಾದಾಗ ಅಷ್ಟೂ ದೃಷ್ಟಿ ತೆಗೆದವಳು. ರಾತ್ರಿ ಮನೆಯಲ್ಲಿ ಹರಳೆಣ್ಣೆ ದೀಪ ತಣ್ಣಗೆ ಉರಿಯುತ್ತದೆ.

ಎಲೆಗಳಿಲ್ಲದ ಮರಗಳ ಕಂಡಾಗ, ಈ ಯಾಂತ್ರಿಕ ಬದುಕು ಸಾಕಾಗಿ, ಇಲ್ಲಿ ಊಟ ಗಂಟಲಲ್ಲಿ ಇಳಿಯದೆ ಗಂಟಲೊತ್ತಿ ಬರುವುದು, ನಿಶ್ಚಿಂತೆಯ ದಿನಗಳ ಬೇಡುವುದು. ಕಿಟಕಿಯಲ್ಲಿ ಯಾವುದೋ ಹಕ್ಕಿ ಕೂಗು, ಹೊರಗಿನ ನೀರವ ಮೌನ, ನಡುವೆ ಸುಳಿಗಾಳಿ ತಾಗುವುದ ನೋಡುತ್ತಲೇ ಮುಗಿಯುತ್ತದೆ. ರಜೆ ಬಂದರೆ ಸಾಕು ಅವಳಲ್ಲಿಗೆ ಓಡಿಬಿಡುವ ತುಡಿತ.

ಎಲೆ ಉದುರಿದ ಖಾಲಿ ಮರ ಹೇಳುತ್ತದೆ ಈ ಕ್ಷಣದ ಸಾಂತ್ವನ.

“ಚಳಿಗಾಲದ ಏಕಾಂತ – ಒಂದು ಬಣ್ಣದ ಜಗತ್ತಿನಲ್ಲಿ ಗಾಳಿಯ ಶಬ್ದದಂತೆ.” ಎಂದು ಯಾವುದೋ ಕವಿ ಹೇಳುತ್ತಾನೆ.

ತಣ್ಣನೆಯ ಭೂಮಿಗೆ ಮಂಜು ಹೊದಿಕೆ.
ಚಳಿಯ ಮುಂಜಾನೆ ಕೈಬೀಸಿ ಕರೆದು ತಂಪೆರೆಯುತ್ತದೆ.

ಆಡಲು ಪರವಾನಗಿ ಕೊಡುತ್ತದೆ. ದಣಿವು ತಣಿದು ಮಲಗುವ ಕಂಬಳಿಯೊಡನೆ ಪ್ರೀತಿ ಹೆಚ್ಚಾಗುತ್ತದೆ. ಏಕಾಂತವಾಗಿ ಅಲೆವ ತಿಳಿಗಾಳಿ ನಮ್ಮ ಬಳಿ ಸುಳಿಯುತ್ತಿರಲೆಂದೇ ಹೃದಯ ಆಶಿಸುತ್ತದೆ. ತಿಳಿಗಾಳಿ ಶಾಂತಿ ಗೀತೆಯ ಹಾಡುತ್ತದೆ. ಚಳಿಯಾಕೆಯ ಒಂದು ಸ್ಪರ್ಶ ಉಸಿರಾಡುತ್ತಿರುವಿಕೆಗೆ, ಯಾವುದೇ ನಿರೀಕ್ಷೆಯಿಲ್ಲದ ನೆಮ್ಮದಿ ಬದುಕಿಗೆ ಕಾರಣವಾಗುತ್ತದೆ, ಕೊಂದ ಭೂತವ ನೆನಪಿಸಿ ಕಣ್ಣೀರಲ್ಲಿ ಕರಗಿಸಿ ಹೊಸ ವರ್ತಮಾನಕ್ಕೆ ಕನಸ ಕೊಡುತ್ತದೆ. ಕನಸಿನ ಹುಡುಗಿಯ ಮುಖವ ಮಬ್ಬುಮಬ್ಬಾಗಿ ಕಂಡೂ ಕಾಣದಂತೆ ತೋರಿಸಿ ಬಿಡುತ್ತದೆ. ಅವಳಿಗೆ ಪೂರ್ವಾಪರವಿಲ್ಲದ ಅವನ ಇರುವಿಕೆಯ ಭಾವ ಕೊಡುತ್ತದೆ. ಅವರೊಟ್ಟಿಗೆ ಕಳೆವ ಕವಸು ಇನ್ನೂ ಹೆಚ್ಚಾಗುತ್ತದೆ. ಚಳಿಗಾಳಿ ಪ್ರೇಮ ಗಂಧವ ಬೀರಿ ಪ್ರೇಮದ ತೆಕ್ಕೆಗೆ ಕರೆದು ನಮ್ಮನ್ನ ಇನ್ನೂ ಜೀವಂತವಾಗಿಸುತ್ತದೆ. ತನ್ನಷ್ಟಕ್ಕೆ ಕುಣಿವಂತೆ ಮಾಡುತ್ತದೆ.

ಚಳಿ ಹುಡುಗನಾಗಿದ್ದರೆ ಅದರ ಮೇಲೆ ಒಲವಾಗುತ್ತಿತ್ತೇನೋ. ಅಷ್ಟೂ ಧೈರ್ಯ ಮಾಡಿ ಹಿಮ ತಾನಾಗಿಯೇ ನಮ್ಮ ತಬ್ಬಿದಾಗ ತಪ್ಪಿಸಿಕೊಳ್ಳುವುದಾದರೂ ಹೇಗೆ? ಕಾಡುವ ಹುಡುಗನಾಗಿಬಿಟ್ಟಿದೆ ಚಳಿ.

About The Author

ಮಹಾಲಕ್ಷ್ಮೀ ಕೆ. ಎನ್.

ಮಹಾಲಕ್ಷ್ಮೀ. ಕೆ. ಎನ್.  ತೃತೀಯ ಬಿ. ಎಸ್ಸಿ. ವಿದ್ಯಾರ್ಥಿನಿ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ