ಯಾವ ಆಸೆಯಿಂದ ಅವರು ನನ್ ಆಗಿದ್ದರೋ ಅದು ಈಡೇರುವ ಯಾವ ಸೂಚನೆಯೂ ಅವರಿಗೆ ಕಾಣುವುದಿಲ್ಲ. ಒಂದು ಸಾರಿ ಕೀಳು ಜಾತಿಯಲ್ಲಿ ಹುಟ್ಟಿದ್ರೆ ಅವರು ಸಾಯೋವರೆಗೂ ಅಲ್ಲೇ ಇರಬೇಕು. ಅದರ ನೋವು ಅವಮಾನ ಅನುಭವಿಸಲೇಬೇಕು. ನಮ್ಮವರು ನಿದ್ದೆಯಿಂದ ಎದ್ದು ಬರಬೇಕಾಗಿದೆ. ಈ ಗುಲಾಮಗಿರಿಯನ್ನು ಸಹಿಸಿಕೊಳ್ಳಬಾರದು, ಬದಲಾವಣೆಗಾಗಿ ನಾವೇ ಎದ್ದು ನಿಲ್ಲಬೇಕಾಗಿದೆ, ಜಾತಿ ಹೆಸರಿನಿಂದ ತಲೆಮಾರಿನಿಂದ ನಮ್ಮನ್ನು ತುಳಿಯುತ್ತಲೇ ಬಂದವರ ವಿರುದ್ಧ ಧ್ವನಿ ಎತ್ತುವ ಕೆಲಸ ಭಾಮಾ ಅವರು ಮಾಡುತ್ತಾರೆ.
ಡಾ. ಎಚ್.ಎಸ್. ಅನುಪಮಾ ಅನುವಾದಿಸಿದ ತಮಿಳಿನ ಬಾಮಾ ಅವರ ಆತ್ಮಕತೆ “ಬಾಮಾ ತಾಳೆಗರಿ”ಯ ಕುರಿತು ವಿಜಯಲಕ್ಷ್ಮಿ ದತ್ತಾತ್ರೇಯ ದೊಡ್ಡಮನಿ ಬರಹ
ತಾಳೆಗರಿ ಇದು ತಮಿಳು ಕಥನ ಕರುಕ್ಕುವಿನ ಕನ್ನಡ ಅನುವಾದ. ಭಾಮಾ ಅವರು ತಮಿಳಿನಲ್ಲಿ ಬರೆದ ಜೀವನ ಗಾಥೆ. ಇದು ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್‌ನವರು ಪ್ರಕಟಿಸಿರುವ ಕರುಕ್ಕುವಿನ ಇಂಗ್ಲೀಷ್ ಅನುವಾದದ ಮೂಲಕ ಕನ್ನಡಕ್ಕೆ ಬಂದಿದೆ. ಇಂಗ್ಲಿಷಿಗೆ ಅನುವಾದಿಸಿದವರು ಹೆಸರಾಂತ ತಮಿಳು ಬರಹಗಾರ್ತಿ ಲಕ್ಷ್ಮಿ ಹೋಲ್ ಸ್ಟ್ರಾಮ್. ಕನ್ನಡಕ್ಕೆ ಡಾಕ್ಟರ್ ಎಚ್.ಎಸ್. ಅನುಪಮಾ ಅವರು ಅನುವಾದಿಸಿದ್ದಾರೆ. ಡಾ. ಅನುಪಮಾ ಅವರು ತಮ್ಮ ಕಥನ ಭಾಷೆಯನ್ನು ಬಿಟ್ಟು ಈ ಕೃತಿಗಾಗಿಯೇ ಬೇರೆಯ ನಿರೂಪಣಾ ಭಾಷೆಯನ್ನು ಕಟ್ಟಿಕೊಟ್ಟಿದ್ದನ್ನು ಇದರಲ್ಲಿ ನೋಡುತ್ತೇವೆ.
ಭಾಮಾರ ಪೂರ್ಣ ಹೆಸರು ಫಾಸ್ಟಿನಾ ಸೊಸೈರಾಜ್ ಅಥವಾ ಫಾಸ್ಟಿನಾ ಮೇರಿ ಫಾತಿಮಾ ರಾಣಿ. ತಮಿಳಿನಲ್ಲಿ ಫಾತಿಮಾ ಪದ ಭಾತಿಮ ಎಂದು ಉಚ್ಚರಿಸಲ್ಪಡುತ್ತದೆ. 1958 ರಲ್ಲಿ ತಮಿಳುನಾಡಿನಲ್ಲಿ ವಿರುದು ನಗರ ಜಿಲ್ಲೆಯ ಪುತುಪಾಟ್ಟಿ ಎಂಬ ಹಳ್ಳಿಯ ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಹುಟ್ಟಿದ ಭಾಮಾ, ಪದವಿ ಪಡೆದು, ಗಣಿತ ಶಿಕ್ಷಕಿಯಾದವರು. ದಲಿತ ಪರಯಾ ಸಮುದಾಯಕ್ಕೆ ಸೇರಿದ ಇವರು ತಮ್ಮ ಅಜ್ಜಿ ಅಜ್ಜನ ತಲೆಮಾರಿನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಗಣಿತ ಶಿಕ್ಷಕಿಯಾಗಿ ವೃತ್ತಿಯನ್ನು ಪ್ರಾರಂಭಿಸಿದ ಇವರು ಮುಂದೆ ಸಮುದಾಯದ ಸೇವೆಯತ್ತ ಸೆಳೆಯಲ್ಪಟ್ಟು ಕ್ರೈಸ್ತ ಸನ್ಯಾಸಿನಿಯಾದರು. ಏಳು ವರ್ಷ ಬೇರೆ ಬೇರೆ ಶಾಲೆಯಲ್ಲಿ ಬೋಧಿಸಿ, ಅಲ್ಲಿಯ ವಾತಾವರಣಕ್ಕೆ ವ್ಯವಸ್ಥೆಗೆ ಬೆಸತ್ತು, ಆ ಪಂಥದಿಂದ ಹಾಗೂ ಸನ್ಯಾಸದಿಂದ ಹೊರಬಂದರು. ದಲಿತ ಮಕ್ಕಳಿಗೆ ಶಾಲೆಯನ್ನು ತೆರೆದು, ತಮ್ಮ ಬಾಲ್ಯ ಮತ್ತು ನನ್ನ್ ಆಗಿದ್ದಾಗಿನ ಅನುಭವವನ್ನು ಆತ್ಮಕಥೆಯಾಗಿ ‘ಕರುಕ್ಕು’ ಎಂಬ ಹೆಸರಿನಲ್ಲಿ ಬರೆದಿದ್ದಾರೆ.
ಈ ಕೃತಿಯನ್ನು ಒಟ್ಟು ಒಂಬತ್ತು ಭಾಗದಲ್ಲಿ ಬರೆಯಲಾಗಿದೆ. ದಲಿತ ಹಾಗೂ ದಲಿತತ್ವದ ಕೃಷಿಯನ್ನು, ಮಹಿಳೆಯಾಗಿ ಅನುಭವಿಸಿದ ಸಂಘರ್ಷದ ಬದುಕಿನ ಅನಾವರಣದ ಕಥೆ ಇದು. ಒಂದನೇ ಭಾಗದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಊರು ಅಂದರೆ ಏನೊ ವಿಶೇಷ ಸೆಳೆತ. ಆ ಊರಲ್ಲಿ ಬೇರೆಯವರಿಗೆ ಏನೂ ವಿಶೇಷ ಇಲ್ಲ ಅಂತ ಅನಿಸಿದರೂ ಕೂಡ ತಮಗೆ ಮಾತ್ರ ಅದರ ಪ್ರತಿಯೊಂದು ಓಣಿ, ಗಲ್ಲಿ, ಹಾದಿ, ನೀರು, ಗಿಡ-ಮರ-ಬಳ್ಳಿ ಬೆಟ್ಟ, ಗುಡ್ಡ ಎಲ್ಲದರಲ್ಲೂ ಒಂದೊಂದು ವಿಶೇಷತೆ ಕಾಣಿಸುತ್ತಿರುತ್ತದೆ. ಅದೇ ರೀತಿಯಾಗಿ ಇಲ್ಲಿ ಭಾಮಾ ಅವರಿಗೂ ತಮ್ಮ ಹಳ್ಳಿಯ ಪ್ರತಿಯೊಂದರಲ್ಲಿಯೂ ವಿಶೇಷ ಸೆಳೆತ ಇದೆ.
ಮೊದಲ ಭಾಗದಲ್ಲಿಯೇ ಅವರು ಪ್ರತಿಯೊಂದು ಓಣಿಯ ಹೆಸರು, ಅಲ್ಲಿ ವಾಸವಿರುವ ಜಾತಿಯ ಹೆಸರಿನ ಜನ ಮತ್ತು ಅವರ ಕಸುಬಿನ ಬಗ್ಗೆ ಪರಿಚಯಿಸುತ್ತಾರೆ. “ಬಲಕ್ಕೆ ಕೊರವರ ಮನೆ. ಅವರು ಬೀದಿ ಕಸ ತೆಗೆಯುವರು. ಆಮೇಲೆ ಚರ್ಮದ ಕೆಲಸ ಮಾಡೋ ಚಕ್ಕಿಲಿಯಾರರ ಮನೆ, ಸ್ವಲ್ಪ ದೂರದಲ್ಲಿ ಕೂಸವರ ಮನೆ. ಅವರು ಮಣ್ಣಿನ ಮಡಕೆ ಮಾಡೋರು, ಅದರ ಪಕ್ಕದಲ್ಲಿ ಇರೋದು ನಾವಿರೋ ಜಾಗ ಪರಯ್ಯಾಕೇರಿ. ಊರಿನ ಪೂರ್ವ ದಿಕ್ಕಿಗೆ ಸ್ಮಶಾನದ ಜಾಗ. ನಾವು ಅದ್ರ ಪಕ್ಕನೇ ಇರೋರು”
ಹೀಗೆ ತಮ್ಮ ಊರಿನ ಪ್ರತಿಯೊಂದು ಬೀದಿ, ಅಲ್ಲಿನ ಜನರ ಜಾತಿ, ವೃತ್ತಿಗಳ ಬಗ್ಗೆ ಹೇಳಿದ್ದಾರೆ. ಏನಾದರೂ ಕೆಲಸ ಇದ್ದರೆ ಮಾತ್ರವೇ ಇವರು ಮೇಲು ಜಾತಿಯವರ ಕೇರಿಯ ಕಡೆಗೆ ಹೋಗುತ್ತಿದ್ದರು. ಆದರೆ ಅಪ್ಪಿ ತಪ್ಪಿಯು ಮೇಲ್ಜಾತಿಯ ಜನ ಇವರ ಕೇರಿಗೆ ಬರುತ್ತಿರಲಿಲ್ಲ, ಎನ್ನುವುದನ್ನು ಹೇಳುತ್ತಲೇ ಅದಕ್ಕೆ ಕಾರಣ ಹೇಳುತ್ತಾರೆ. ಪಂಚಾಯಿತಿ ಬೋರ್ಡ್, ಹಾಲಿನ ಡೈರಿ, ಅಂಗಡಿ, ಚರ್ಚ್, ಸ್ಕೂಲು, ಪೋಸ್ಟಾಫಿಸು ಎಲ್ಲಾನೂ ಮೇಲ್ ಜಾತಿಯವರ ಬೀದಿಲೆ ಇದ್ದದ್ದು. ಈ ತರಹದ ವ್ಯವಸ್ಥೆ ಈಗಲೂ ಸಹ ಪ್ರತಿಯೊಂದು ಹಳ್ಳಿಯಲ್ಲಿ ನಾವು ನೋಡುತ್ತೇವೆ. ವ್ಯವಹಾರಕ್ಕೆ ಸಂಬಂಧಿಸಿದ, ಸರಕಾರಿ ಆಫೀಸುಗಳು ಬಹುತೇಕ ಗ್ರಾಮದಲ್ಲಿ ಇದೇ ರೀತಿಯಾಗಿರುವುದನ್ನು ಕಾಣಬಹುದು.
ಮೇಲ್ಜಾತಿ ಅವರು ಕೆಳಗೇರಿ ಕಡೆಗೆ ಬರಲು ಯಾವುದೇ ಕಾರಣಗಳು ಇಲ್ಲದ ಹಾಗೆ ಅವರು ವ್ಯವಸ್ಥೆಯನ್ನು ಮಾಡಿಕೊಂಡಿರುವುದನ್ನು ಕಾಣುತ್ತೇವೆ. “ನೀವು ಚಪ್ಪಲಿ ಹೊಲಿಯಕ್ಕೆ ಲಾಯಕ್ ನನ್ಮಕ್ಳಾ” ಎಂದು ಯಾರೇ ಏನೇ ತಪ್ಪು ಮಾಡಿದರೂ ಅವರ ಕಸುಬು ಜಾತಿ ಹಿಡಿದೆ ಅವರನ್ನ ಬೈಯೋದು. ಇತಹ ಪ್ರಸಂಗಗಳು ಈಗಲೂ ಹಳ್ಳಿಗಳಲ್ಲಿ ಪ್ರಸ್ತುತವಾಗಿರುವುದನ್ನು ಕಾಣುತ್ತೇವೆ. ಒಂದನೇ ಭಾಗದಲ್ಲಿ ಭಾಮಾ ಅವರು ವ್ಯಕ್ತಿಯ ಹೆಸರಿನ ಪರ್ಯಾಯ ಅಥವಾ ಅಡ್ಡ ಹೆಸರಿನ ಬಗ್ಗೆಯೂ ಉಲ್ಲೇಖಿಸುತ್ತಾರೆ, ಉದಾಹರಣೆಗೆ ಅಂತ ಹೆಸರಿದ್ರೆ ಮುಂಗೋಪಿ ಅಂತ, ಮತ್ತೆ ಮಿಂಡೇ ಮಸಾಲ, ಮುರುಗನಹಳ್ಳಿ ಹೀಗೆ ಅನೇಕ ಹೆಸರುಗಳಿಗೆ ಅಡ್ಡ ಹೆಸರಿನಿಂದ ಕರೆಯುತ್ತಿರುವುದನ್ನು ಉಲ್ಲೇಖಿಸಿದ್ದಾರೆ.
ಊರಿಗೊಂದು ಕಥೆ ಇದ್ದಮೇಲೆ ಆ ಊರಿನ ದೇವರಿಗೊಂದು ಕಥೆಯು ಇರುವ ಹಾಗೆ ತಮ್ಮ ಗ್ರಾಮದೇವರ ಕಥೆಯನ್ನ ಈ ಮೊದಲ ಭಾಗದಲ್ಲಿ ಹೇಳಿದ್ದಾರೆ. ಇದರಲ್ಲಿ ಅವರು ವ್ಯವಸ್ಥೆಯ ಕುರಿತು ರೂಪಕವನ್ನು ಕೊಟ್ಟು ಹೇಳಿರುವುದನ್ನು ಕಾಣುತ್ತೇವೆ. ಜೊತೆಗೆ ಅಲ್ಲಿ ನರಿಗಳು ಗದ್ದೆ ತುಂಬಾ ಓಡಾಡುತ್ತಾ ಬೆಳೆಯನೆಲ್ಲ ಹೇಗೆ ನಾಶಪಡಿಸುತ್ತಿದ್ದವು ಎಂಬುದನ್ನು ವಿವರಿಸುತ್ತಾರೆ. ಈ ನರಿಗಳು ಹಳ್ಳಿಯ ಜಾತಿ ವ್ಯವಸ್ಥೆ ಮತ್ತು ಅದರಿಂದಾಗುವ ತೊಡಕುಗಳ ಕುರಿತು ವಿವರಿಸಿರುವುದನ್ನು ಕಾಣುತ್ತೇವೆ. ಒಂದು ಸುಂದರ ಪ್ರಕೃತಿಯ ಗ್ರಾಮ, ಅದರಲ್ಲಿ ಇರುವ ಮಡಿ, ಮೈಲಿಗೆ ಪುಟ್ಟ ಮನಸ್ಸಿನ ಆಳದಲ್ಲಿ ಹೇಗೆ ಉಳಿದಿದೆ ಎನ್ನುವುದನ್ನು ಇಲ್ಲಿ ಚಿತ್ರಿಸಿದ್ದಾರೆ.
ಭಾಗ ಎರಡರಲ್ಲಿ ಅವರಿಗೆ ಎದುರಾದ ಜಾತಿಯ ಕ್ರೂರ ಮುಖ ದರ್ಶನ. ಅದರ ಬಗ್ಗೆ ತಿಳಿದಾಗ ಮೊದಲ ಬಾರಿಗೆ ಮನಸ್ಸಿನಲ್ಲಿ ಪ್ರತಿರೋಧವನ್ನು ವ್ಯಕ್ತಪಡಿಸುತ್ತಾರೆ. ನಾಯ್ಕಾರ್ಗಳು ಎಂದರೆ ಮೇಲ್ಜಾತಿಯವರು. ಪರಿಹಾರಗಳು ಎಂದರೆ ಕೆಳಜಾತಿಯ ಒಬ್ಬ ಹಿರಿಯ ವ್ಯಕ್ತಿಯ ಕೈಯಿಂದ ತನಗೆ ತಿನ್ನಲು ವಡೆಯನ್ನು ತರಿಸಿದ. ಆ ಹಿರಿಯ ವಡೆ ಕಟ್ಟಿದ ಪೊಟ್ಟಣಕ್ಕೆ ಕಟ್ಟಿದ ದಾರ ಹಿಡಿದುಕೊಂಡು ಬರುತ್ತಿರುವುದನ್ನು, ಭಾಮಾ ಅವರು ಚಿಕ್ಕವರಿದ್ದಾಗ ನೋಡಿ ನಕ್ಕಿದ್ದರು. ಅದನ್ನು ಮನೆಯಲ್ಲಿ ಇದ್ದ ಅಣ್ಣನಿಗೆ ತಿಳಿಸುತ್ತಾರೆ. ಆಗ ಅವರ ಅಣ್ಣ ಆ ಹಿರಿಯ ವ್ಯಕ್ತಿ ಹಾಗೆ ಮಾಡಲು ಕಾರಣ ತಿಳಿಸಿದ ಮೇಲೆ ಅವರಿಗೆ ಪ್ರತಿಯೊಂದು ವಡೆಯನ್ನು ತನ್ನ ಕೈಯಿಂದ ಮುಟ್ಟಿ ಮುಟ್ಟಿ ಬರಬೇಕು ಅಂತ ಅನಿಸಿತ್ತು. ಕೆಳಜಾತಿಯ ಹಿರಿಯರನ್ನ ಗೌರವ ಕೊಡದೆ ಅವರ ಹೆಸರಿನಿಂದ ಕರೆಯುವುದು, ಇವರು ಅವರನ್ನು ಸ್ವಾಮಿ, ಒಡೆಯ ಎಂದು ಸಂಭೊದಿಸುವುದನ್ನು ಕೇಳಿದ ಭಾಮಾ ಅವರಿಗೆ ಚಿಕ್ಕಂದಿನಲ್ಲಿಯೇ ಅದರ ಕುರಿತು ಅಸಮಾಧಾನವಾಗುತ್ತಿದ್ದ ಕುರಿತು ಮುಕ್ತವಾಗಿ ಹೇಳಿದ್ದಾರೆ.
ತಮ್ಮ ಅಣ್ಣ ಎಂ.ಎ. ಓದಿದ್ದು, ನಾಯಕರ ಒಂದು ದಿನ ಇವರ ಅಣ್ಣ ಕೆರೆಯ ದಂಡೆಯ ಮೇಲೆ ನಡೆದುಕೊಂಡು ಹೋಗುವಾಗ ಇವರ ಅಣ್ಣನಿಗೆ ನಾಯ್ಕರ್ ಕೇರಿಯವನು ‘ನೀನು ಯಾವ ಕೇರಿಯವನು?’ ಎಂದು ನಾಯಕರ ವಿಚಾರಿಸಿದ. ಇವರು ತಾನು “ನಾನ್ ಪರಯ್ಯಾಕೇರಿಯ್ಞಾಂವ, ಏನೀಗ” ಎಂದು ಹೇಳಿ ಅಲ್ಲಿಂದ ಬೇಗ ಬೇಗ ನಡೆದು ಆ ನಾಯ್ಕರ ವ್ಯಕ್ತಿಯನ್ನು ಹಿಂದೆ ಹಾಕಿದ್ದ. ಈ ವಿಷಯವಾಗಿ ಮಾರನೇ ದಿನ ಅವರ ಅಜ್ಜಿಗೆ ಆ ನಾಯ್ಕರ ವ್ಯಕ್ತಿ ಬೈದಿದ್ದು, ಇವರ ಅಜ್ಜಿ ಅವರಿಗೆ ಸಮಾಧಾನ ಮಾಡಿದ್ದನ್ನು ಹೇಳುತ್ತಾರೆ. ಬೀದಿಯಲ್ಲಿ ಅವರಿಗಿಂತಲೂ ಮೊದಲು ನಡೆಯುವ ಸ್ವತಂತ್ರ ದಲಿತರಿಗೆ ಇಲ್ಲಿಯವರೆಗೂ ಇಲ್ಲದೆ ಇರುವುದನ್ನು ಸಹ ಅನೇಕ ಘಟನೆಗಳ ಮೂಲಕ ನಾವು ಪ್ರಸ್ತುತವಾಗಿ ಕಾಣುತ್ತೇವೆ.
ಇನ್ನೊಂದು ಘಟನೆ; ಭಾಮಾ ಅವರು 8ನೇ ತರಗತಿಯವರೆಗೆ ತಮ್ಮ ಹಳ್ಳಿಯಲ್ಲಿಯೇ ಕಲಿತರು. ನಂತರದ ಶಿಕ್ಷಣಕ್ಕಾಗಿ ಪಕ್ಕದ ಊರಿಗೆ ಹೋಗಿದ್ದರು. ಅಲ್ಲಿಯೆ ಹಾಸ್ಟೆಲಿನಲ್ಲಿ ಇದ್ದು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ಅಲ್ಲಿಯೂ ಅವರು ಅನೇಕ ರೀತಿಯ ಜಾತಿ ನಿಂದನೆಗೆ ಒಳಗಾಗುತ್ತಾರೆ. ಒಂದು ಬಾರಿ ಭಾಮಾ ತಮ್ಮ ಊರಿಗೆ ಹೋಗುವಾಗ ಬಸ್ಸಿನಲ್ಲಿ ಕುಳಿತಿದ್ದರು, ಆಗ ನಾಯಕರ ಹೆಂಗಸು ಇವರ ಪಕ್ಕದಲ್ಲಿ ಕುಳಿತು, ಇವರ ಬಗ್ಗೆ ವಿಚಾರಿಸುತ್ತಾರೆ. ಇವರ ಜಾತಿಯ ಬಗ್ಗೆ ತಿಳಿದ ತಕ್ಷಣವೇ ಅಲ್ಲಿಂದ ಸೀಟು ಬದಲಾಯಿಸುತ್ತಿದ್ದರು. ಇಲ್ಲವೇ ಇವರನ್ನೇ ಬದಲಾಯಿಸಲು ಹೇಳುತ್ತಿದ್ದರು. ಇವರು ಒಪ್ಪದೇ ಇದ್ದಾಗ ಬೇರೆ ಎಲ್ಲೂ ಕೂಡಲು ಸ್ಥಳವಿಲ್ಲದೆ ಇದ್ದರೆ ತಮ್ಮ ಊರು ಬರುವವರೆಗೆ ನಿಂತೆ ಬರುತ್ತಿದ್ದರಾದರೂ ಇವರ ಪಕ್ಕದಲ್ಲಿ ಕೂಡುತ್ತಿರಲಿಲ್ಲ. ಭಾಮಾ ಅವರಿಗೆ ಸೀಟು ಬಿಡದೆ ಇರೋದನ್ನು ಮನೆಯಲ್ಲಿ ಬಂದು ಅಮ್ಮನ ಹತ್ತಿರ ಹೇಳಿದಾಗ, ಅವರು “ಅವು ಕೇಂಡ್ರೆ ನೀನು ಬೇರೆ ಇನ್ಯಾವ್ದೋ ಜಾತಿಯೋಳ್ ಅಂತ ಹೇಳ್, ನಂ ಜಾತಿ ಹೆಸರ್ಯಾಕೆ ಹೇಳುದು?” ಎಂದು ಅವರ ತಾಯಿ ಹೇಳಿದಾಗ ಭಾಮಾ ಇದನ್ನ ವಿರೋಧಿಸುತ್ತಾರೆ. ತಮ್ಮ ಅಸ್ಮಿತೆಯನ್ನ ಅವರು ಬಿಟ್ಟು ಕೊಡುವುದಿಲ್ಲ. ತಮ್ಮ ಜಾತಿ ಬಗ್ಗೆ ಅವರಿಗೆ ಸುಳ್ಳು ಯಾಕೆ ಹೇಳಬೇಕು. ತಾನು ಹಾಗೆ ಮಾಡುವುದಿಲ್ಲ ಎಂದು ಯೋಚಿಸುತ್ತಾರೆ. ಅವರಿಗೆ ಆಗ ಆದ ಅವಮಾನ ಸಣ್ಣದಲ್ಲ ಎನ್ನುವುದು ಅವರ ಅರಿವಿಗೆ ಬಂದಿದ್ದನ್ನು ಕಾಣುತ್ತೇವೆ.
ನಂತರದ ದಿನಗಳಲ್ಲಿ ಇವರು ಪರೀಕ್ಷೆಯಲ್ಲಿ ದಲಿತ ಹುಡುಗರಲ್ಲಿಯೆ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಆಗ ಊರಲ್ಲಿ ಅವರಿಗೆ ಸನ್ಮಾನಿಸಿ, ಅಭಿನಂದಿಸಿದಾಗ ತಾವು ದಲಿತ ಎಂದು ಕರೆಸಿಕೊಳ್ಳಲು ಹೆಮ್ಮೆಪಟ್ಟಿಕೊಂಡಿದ್ದರು ಭಾಮಾ. ಓದಿ ಮುಂದೆ ಬಂದರೆ ಈ ಜಾತಿ ಅನ್ನೋದು ನಮ್ಮ ಹಿಂದೆ ಬರುವುದಿಲ್ಲ ಅಂತ ಆ ಕ್ಷಣ ಅವರಿಗೆ ಅನ್ನಿಸಿತ್ತು. ಶಿಕ್ಷಣವೇ ನಮ್ಮ ಬಿಡುಗಡೆಗೆ ಮಾರ್ಗ ಎಂದು ಮುಂದೆ ಕಾಲೇಜು ಶಿಕ್ಷಣ ಮುಂದುವರಿಸಿಕೊಂಡರು. ಇನ್ನು ಮುಂದೆ ಈ ಜಾತಿ ಅನ್ನೋದು ಅವರಿಗೆ ಕಾಡುವುದಿಲ್ಲ ಎನ್ನುವ ಅವರ ಕಲ್ಪನೆ ಹುಸಿಯಾಯಿತು. ಒಂದು ದಿನ ಕ್ಲಾಸಿನಲ್ಲಿ ಒಬ್ಬ ಶಿಕ್ಷಕರು ಬಂದು ಹರಿಜನ ವಿದ್ಯಾರ್ಥಿಗಳು ಯಾರ್ಯಾರು ಎದ್ದು ನಿಲ್ಲಿ ಎಂದು ಹೇಳಿದಾಗ ಭಾಮಾ ಮತ್ತೆ ಇನ್ನೊಬ್ಬರು ಮಾತ್ರ ನಿಂತಿದ್ದರು. ಅವರಿಗೆ ವಿಶೇಷ ಕೋಚಿಂಗ್ ಕೊಡುವುದಾಗಿ ಸರ್ಕಾರ ತಮಗೆ ಹೇಳಿದ್ದಾಗಿ ಶಿಕ್ಷಕರು ಹೇಳಿದ್ದರು. ಭಾಮಾ ಆಗ ತಮಗೆ ಅದರ ಅಗತ್ಯವಿಲ್ಲ ಅಂತ ಅಲ್ಲೇ ಪ್ರತಿರೋಧಿಸಿದ್ದನ್ನು ಕೃತಿಯಲ್ಲಿ ಹೇಳುತ್ತಾರೆ.
ಅವರು ವಿರೋಧಿಸಿದ್ದಕ್ಕೆ ಕಾರಣ ಅಲ್ಲಿದ್ದ ಇತರ ವಿದ್ಯಾರ್ಥಿಗಳ ಮಧ್ಯೆ ಗೊಣಗೊಣ ಮಾತುಕತೆ ಶುರುವಾಗಿದ್ದು. ಈ ಜಾತಿ ಅನ್ನೋದು ಎಲ್ಲಿ ಹೋದರೂ ತಮ್ಮನ್ನು ಬಿಡುವುದಿಲ್ಲ ಅಂತ ಅವರಿಗೆ ಆ ಕ್ಷಣ ಅನ್ನಿಸಿತ್ತು. ಮತ್ತೊಮ್ಮೆ ಊರಿಗೆ ಹೋಗಬೇಕಾಗಿ ಬಂದಾಗ “ನನ್ನ ತಮ್ಮ ಮತ್ತು ತಂಗಿಯ ಮೊದಲನೇ ಶಾಸ್ತ್ರ, ಫಸ್ಟ್ ಕಮೀನಿಯನ್” ಇತ್ತು ಅದು ರಜೆ ದಿನವಾದ ಶನಿವಾರ ಮತ್ತು ಭಾನುವಾರ ಇದ್ದದ್ದು. ಆದರೆ ವಾರ್ಡನ್ ಮತ್ತು ಪ್ರಿನ್ಸಿಪಾಲರು ಇದಕ್ಕೆ ಒಪ್ಪಿಗೆ ಕೊಡಲು ನಿರಾಕರಿಸಿದರು. ಅವರು ನಿರಾಕರಿಸಲು ಕಾರಣ ಇದೇನು, ಅಷ್ಟು ದೊಡ್ಡ ಹಬ್ಬ ಅಲ್ಲ. ನಿಮ್ಮ ಜಾತಿಯಲ್ಲಿ ಏನು ಅಷ್ಟು ವಿಜೃಂಭಣೆ ಇರುವುದಿಲ್ಲ ಅಂತ ನಿರಾಕರಿಸಿದ್ದರು. ಆದರೆ ಇತರ ಮೇಲ್ಜಾತಿಯ ಹುಡುಗರಿಗೆ ರಜೆಯನ್ನು ಕೊಟ್ಟಿದ್ದರು. ಇದನ್ನು ಕಂಡು ಭಾಮಾ ಪ್ರಶ್ನೆಗಳನ್ನ ಕೇಳುವುದರ ಮುಖಾಂತರ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದರು. ಇದನ್ನು ದಲಿತತ್ವದ ನೆಲೆಯಾಗಿ ನಾವು ನೋಡುತ್ತೇವೆ. ಎಲ್ಲರೂ ಸಮಾನರು ಎಲ್ಲರಿಗೂ ಒಂದೇ ನಿಯಮ ಇರುತ್ತದೆ. ಅವರಿಗೊಂದು ನಿಯಮ ನಮಗೊಂದು ನಿಯಮ ಅಂತ ಇರುವುದಿಲ್ಲ. ಎಂದು ಹೇಳಿ ವಾದ ಮಾಡಿ ಕೊನೆಗೆ ರಜೆ ತೆಗೆದುಕೊಂಡು ಮನೆಗೆ ಹೋಗುತ್ತಾರೆ.
ಆಗ ಅವರ ಅಣ್ಣ ಆ ಹಿರಿಯ ವ್ಯಕ್ತಿ ಹಾಗೆ ಮಾಡಲು ಕಾರಣ ತಿಳಿಸಿದ ಮೇಲೆ ಅವರಿಗೆ ಪ್ರತಿಯೊಂದು ವಡೆಯನ್ನು ತನ್ನ ಕೈಯಿಂದ ಮುಟ್ಟಿ ಮುಟ್ಟಿ ಬರಬೇಕು ಅಂತ ಅನಿಸಿತ್ತು. ಕೆಳಜಾತಿಯ ಹಿರಿಯರನ್ನ ಗೌರವ ಕೊಡದೆ ಅವರ ಹೆಸರಿನಿಂದ ಕರೆಯುವುದು, ಇವರು ಅವರನ್ನು ಸ್ವಾಮಿ, ಒಡೆಯ ಎಂದು ಸಂಭೊದಿಸುವುದನ್ನು ಕೇಳಿದ ಭಾಮಾ ಅವರಿಗೆ ಚಿಕ್ಕಂದಿನಲ್ಲಿಯೇ ಅದರ ಕುರಿತು ಅಸಮಾಧಾನವಾಗುತ್ತಿದ್ದ ಕುರಿತು ಮುಕ್ತವಾಗಿ ಹೇಳಿದ್ದಾರೆ.
ಹೀಗೆ ಭಾಮಾ ಅವರು ತಮ್ಮ ಶಿಕ್ಷಣದ ಬಲದಿಂದ ಜಾತಿ ತಾರತಮ್ಯವನ್ನು ಮುರಿದು, ಅದರ ಬಗ್ಗೆ ಮಾತನಾಡುವ ಜನರ ಮಧ್ಯೆ ತಾವು ಹೊಸ ಬದುಕನ್ನು ಕಟ್ಟಿಕೊಂಡರು. ಅವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಮುಂದೆ ಸನ್ಯಾಸಿನಿ ಆಗಬೇಕು ಅದರಿಂದ ತಮ್ಮ ಜನರಿಗೆ ಹೆಚ್ಚು ಸೇವೆ ಮಾಡಲು ಅವಕಾಶ ದೊರೆಯುತ್ತದೆ ಎಂದು ತಿಳಿದು ಮನೆಯವರ ವಿರೋಧದ ಮಧ್ಯೆ ನನ್ ತರಬೇತಿ ಮುಗಿಸುತ್ತಾರೆ. ಆದರೆ ತಮ್ಮ ಜಾತಿಯ ಕಪ್ಪು ನೆರಳು ಅವರ ಬೆನ್ನು ಬಿಡದೆ ಅಲ್ಲಿಯೂ ಈ ಪಂತದಲ್ಲಿ ಹರಿಜನ ನನ್ ಗಳಿಗೆ ಅಂತ ಒಳ್ಳೆ ಭವಿಷ್ಯ ಇಲ್ಲ ಅಂತೋರಿಗಂತಾನೆ ಬೇರೆ ಒಂದು ಪಂಥ ಇದೆ… ಎಂದು ಹೇಳಿದ್ದನ್ನು ಕೇಳಿದವರಿಗೆ ನಿರಾಸೆ ಆಗುತ್ತದೆ.
ಯಾವ ಆಸೆಯಿಂದ ಅವರು ನನ್ ಆಗಿದ್ದರೋ ಅದು ಈಡೇರುವ ಯಾವ ಸೂಚನೆಯೂ ಅವರಿಗೆ ಕಾಣುವುದಿಲ್ಲ. ಒಂದು ಸಾರಿ ದಲಿತರಾಗಿ ಹುಟ್ಟಿದ್ರೆ ಅವರು ಸಾಯೋವರೆಗೂ ಅಲ್ಲೇ ಇರಬೇಕು. ಅದರ ನೋವು ಅವಮಾನ ಅನುಭವಿಸಲೇಬೇಕು. ನಮ್ಮವರು ನಿದ್ದೆಯಿಂದ ಎದ್ದು ಬರಬೇಕಾಗಿದೆ. ಈ ಗುಲಾಮಗಿರಿಯನ್ನು ಸಹಿಸಿಕೊಳ್ಳಬಾರದು, ಬದಲಾವಣೆಗಾಗಿ ನಾವೇ ಎದ್ದು ನಿಲ್ಲಬೇಕಾಗಿದೆ, ಜಾತಿ ಹೆಸರಿನಿಂದ ತಲೆಮಾರಿನಿಂದ ನಮ್ಮನ್ನು ತುಳಿಯುತ್ತಲೇ ಬಂದವರ ವಿರುದ್ಧ ಧ್ವನಿ ಎತ್ತುವ ಕೆಲಸ ಭಾಮಾ ಅವರು ಮಾಡುತ್ತಾರೆ. ತಮ್ಮಒಳಗೆ ನಡೆಯುವ ಜಾತಿ ನಿಂದನೆಗಳ ಕುರಿತು ತಮ್ಮ ಆತ್ಮಕಥೆಯಲ್ಲಿ ಒಂದೊಂದಾಗಿ ಬಿಚ್ಚಿಡುತ್ತಾರೆ. ಇವರ ಆತ್ಮಕಥೆಯು ಒಂದೇ ಕ್ರಮದಲ್ಲಿ ಸಾಗುವುದಿಲ್ಲ. ಮೊದಲ ಭಾಗದಲ್ಲಿ ಹಳ್ಳಿಯ ಚಿತ್ರಣವನ್ನು, ಜಾತಿಯ ಕ್ರೌರ್ಯದ ಬಗ್ಗೆ ಹೇಳುತ್ತಾರೆ. ಅದರ ಮುಂದುವರಿದು ಎರಡನೇ ಭಾಗದಲ್ಲಿ ಅವರ ಬಾಲ್ಯ, ಶಿಕ್ಷಣ ಕುರಿತು ಮಾತನಾಡುತ್ತಾರೆ. ನಂತರ ಸಂಪೂರ್ಣ ಶಿಕ್ಷಣದ ಬಗ್ಗೆ ಹೇಳಿ ಅವರ ಶಿಕ್ಷಕಿ ವೃತ್ತಿಯ ಬಗ್ಗೆ ಮಾತನಾಡುತ್ತಾರೆ. ಆಗ ಅವರ ಮನಸ್ಸಿನಲ್ಲಿ ಆದ ತಲ್ಲಣದ ಕುರಿತು ಹೇಳುತ್ತಾ ಮುಂದೆ ನನ್ ಆಗಿ ಬದಲಾದ ಅವರ ಜೀವನದ ಕುರಿತು ಹೇಳುತ್ತಾರೆ.
ಜಾತಿ ತಾರತಮದಲ್ಲಿ ಯಾವ ಬದಲಾವಣೆಯು ಕಾಣದೆ ಜಾತಿ ಪದ್ಧತಿಯ ವಿರುದ್ಧ ಮಾತನಾಡುತ್ತಾರೆ. ಸಮ ಸಮಾಜ ಕಟ್ಟುವ ಹೊಸ ಕನಸನ್ನು ಕಾಣುತ್ತಾರೆ. ಆದರೆ ಮೂರನೇ ಭಾಗದಲ್ಲಿ ಮತ್ತೆ ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳ ಕುರಿತು ಮಾತನಾಡುತ್ತಾರೆ. ನಾಲ್ಕನೇ ಭಾಗದಲ್ಲಿ ಅವರ ಬಾಲ್ಯದಲ್ಲಿ ನಡೆದ ಶೇಂಗಾ ಒಡೆಯುವ ಪ್ರಸಂಗದ ಕುರಿತು ಹೇಳುತ್ತಾರೆ. ಇದೇ ತರಹದ ಪ್ರಸಂಗವು ಸಮತಾ ದೇಶಮಾನೆ ಅವರ ಆತ್ಮಕಥೆ ‘ಮಾತಂಗಿ ದಿವಟಿಗೆ’ ಯಲ್ಲಿಯೂ ದಾಖಲಾಗಿದೆ. ಇದು ಕನ್ನಡದಲ್ಲಿ ಬಂದ ಪ್ರಥಮ ಮಹಿಳಾ ದಲಿತ ಆತ್ಮಕಥೆ. ಈ ಎರಡೂ ಕೃತಿಗಳಲ್ಲಿ ದಲಿತರ ಬದುಕು, ಪ್ರದೇಶ, ದೇಶ ಎಲ್ಲದರಲ್ಲಿಯೂ ಅವರ ಶೋಷಣೆ ಅಥವಾ ಬದುಕು ಹೆಚ್ಚು ಕಡಿಮೆ ಒಂದೇ ರೀತಿಯಾಗಿರುವುದನ್ನು ಕಾಣುತ್ತೇವೆ.
ದಲಿತರು ಬೇರೆ ಧರ್ಮಕ್ಕೆ ಮತಾಂತರ ಹೊಂದಿದರು ಕೂಡ ಅವರಿಗೆ ಅಲ್ಲಿಯೂ ಜಾತಿಯ ಹೆಸರಿನಲ್ಲಿ ಅನ್ಯಾಯ ಆಗುತ್ತದೆ, ಎನ್ನುವುದನ್ನು ಭಾಮಾ ಅವರು ಹೇಳಿದ್ದಾರೆ. ಕ್ರಿಶ್ಚಿಯನರಲ್ಲಿಯೂ ಮೇಲು-ಕೀಳು ಇದೆ. ಮತಾಂತರ ಹೊಂದಿದವರ ಪರಿಸ್ಥಿತಿ ಏನು ಎಂಬುದನ್ನು ತಮ್ಮ ಆತ್ಮಕಥೆಯಲ್ಲಿ ಎಳೆ ಎಳೆಯಾಗಿ ಒಂದೊಂದೇ ಪ್ರಸಂಗವನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಮೇಲ್ಜಾತಿಯ ಕ್ರಿಶ್ಚಿಯನ್ನರಷ್ಟೇ ಚರ್ಚಿನ ಎಲ್ಲಾ ಸವಲತ್ತು, ಸೌಭಾಗ್ಯ ಪಡೆದುಕೊಳ್ಳುತ್ತಿರುವುದರ ಕುರಿತು ಹೇಳುತ್ತಾರೆ. ಪಾದ್ರಿ ನನ್‌ಗಳ ವಿಷಯದಲ್ಲಿ ಮೇಲ ಜಾತಿಯವರೇ ಆಯಕಟ್ಟಿನ ಸ್ಥಾನದಲ್ಲಿ ಕೊಡುತ್ತಿದ್ದರು. ದಲಿತರು ಪಾದ್ರಿ ಅಥವಾ ನನ್ ಆಗಿದ್ದರೆ ಅವರನ್ನು ಬೇರೆಯವರು ಮೂಲೆಗುಂಪು ಮಾಡಿ ಬಿಡುತ್ತಿದ್ದರು.
ಪ್ರತಿಯೊಬ್ಬರೂ ಚಿಕ್ಕವರಿದ್ದಾಗ ಕುತೂಹಲಕ್ಕೆ ದೇವರನ್ನ ಪರೀಕ್ಷೆ ಮಾಡಿ ಇರುತ್ತೇವೆ. ಹಾಗೆಯೇ ಭಾಮಾರು ಚರ್ಚಿನಲ್ಲಿ ಕೊಡುವ ಪ್ರಸಾದವನ್ನು ಕೈಯಿಂದ ಮುಟ್ಟಬಾರದು ಎಂದು ನನ್‌ಗಳು ಹೇಳಿದ್ದನ್ನು ಮೀರಿ ಅದನ್ನು ಮುಟ್ಟಿದ್ದು, ನಂತರ ಅವರು ಹೇಳಿದ ಹಾಗೆ ತನಗೆ ಏನೂ ಹಾನಿ ಆಗದೆ ಇರುವುದನ್ನು ಕಂಡು ನನ್‌ಗಳು ಹೇಳಿದು ಸುಳ್ಳು ಎಂದು ಅರಿತಿರುವುದನ್ನು ಇಲ್ಲಿ ಹೇಳಿದ್ದಾರೆ. ತಾವು ನನ್ ಆದಾಗ ಅಲ್ಲಿರುವ ಎರಡು ದೇವರನ್ನ ಅವರು ಕಂಡುಕೊಳ್ಳುತ್ತಾರೆ. ಒಂದು ಶ್ರೀಮಂತರ ದೇವರು. ಮತ್ತೊಂದು ಬಡವರ ದೇವರು. ಶ್ರಿಮಂತರು ತಮ್ಮ ದೇವರನ್ನು ಶ್ರೀಮಂತವಾಗಿ ಮಾಡಿಕೊಂಡಿದ್ದಾರೆ. ಅವರಿಗೆ ಬಡವರ ಬಗ್ಗೆ ಕಾಳಜಿಯಾಗಲಿ ಪ್ರೀತಿ ಆಗಲಿ ಇಲ್ಲ ಎನ್ನುವುದನ್ನು ಅರಿತ ಭಾಮಾರಿಗೆ ಚಿಕ್ಕ ವಯಸ್ಸಿನಲ್ಲಿ ಇದ್ದ ಭಕ್ತಿ ಕ್ರಮೇಣ ಕಡಿಮೆಯಾಗಿ ಎಲ್ಲವನ್ನ ಪ್ರಶ್ನಿಸುತ್ತಾ ಬರುತ್ತಾರೆ.
ಅವರು ಪಂಥದಿಂದ ಹೊರಬಂದ ಮೇಲೆ ಇತರ ನನ್‌ಗಳ ನಡೆ-ನುಡಿ ನಡವಳಿಕೆಯನ್ನು ಕಂಡು ಭಾಮಾರಿಗೆ ಸಿಟ್ಟು ಬರುತ್ತದೆ. ಶ್ರೀಮಂತ ನನ್‌ಗಳ ಭಕ್ತಿಯಲ್ಲಿ ಮಾನವೀಯತೆ ಅನ್ನೋದು ಇಲ್ಲ. ಅವರ ಮಾತುಗಳು ಕೇವಲ ಕಪಟತನದಿಂದ ಕೂಡಿದವು ಎನ್ನುವುದು ಅವರ ಅರಿವಿಗೆ ಬರುತ್ತದೆ. ಬಡವರ ಬಗ್ಗೆ ಅವರ ಕಷ್ಟದ ಬಗ್ಗೆ ಅವರು ಯಾವತ್ತೂ ಯೋಚಿಸದೆ ಇರುವ ಶ್ರೀಮಂತ ನನ್‌ಗಳ ಬಗ್ಗೆ ಭಾಮಾ ತಮ್ಮ ಸಿಟ್ಟನ್ನು ವ್ಯಕ್ತಪಡಿಸುತ್ತಾರೆ. ಕಾನ್ವೆಂಟ್‌ಗಳ ಏಳಿಗೆಗೆ ಬಡವರ ಮಕ್ಕಳೆ ಮೆಟ್ಟಿಲಾಗಿದ್ದನ್ನು, ಹೇಳುತ್ತಾ ತಮ್ಮ ಅಸಹಾಯಕತೆಯ ಕುರಿತು ನಿರಾಶರಾಗಿ ಅಲ್ಲಿಂದ ಹೊರ ಬರುತ್ತಾರೆ. ಪ್ರೀತಿ, ಶಾಂತಿ, ಕರುಣೆ ಸೌಮ್ಯತೆಯ ಮುಖವಾಡದ ಹಿಂದೆ ಇರುವ ಕ್ರೂರವಾದ ಮುಖವಾಡವನ್ನು ಭಾಮಾ ಅವರು ಇಲ್ಲಿ ತೆಗೆದು ತೋರಿಸಿದ್ದಾರೆ.
ಜನರಲ್ಲಿ ತಾವು ಮುಗ್ಧರು, ಪ್ರೀತಿಯ ಸಾಗರ ಅವರಲ್ಲಿದೆ. ಅನ್ಯಾಯಕ್ಕೆ ಒಳಗಾದ ಜನರಿಗೆ ತಮ್ಮಲ್ಲಿ ನ್ಯಾಯ ಮತ್ತು ಸಮಾನವಾದ ಬದುಕು ಕೊಡುತ್ತೇವೆ ಎಂದು ಸುಳ್ಳು ಭರವಸೆಯನ್ನು ಕೊಟ್ಟು. ಸಮಾಜ ಸೇವೆಯ ಹೆಸರಿನಲ್ಲಿ ಆಡಂಬರದ ಬದುಕು ತಮ್ಮದಾಗಿಸಿಕೊಳ್ಳುವ ನನ್‍ಗಳ ಮುಖವಾಡ ಬಿಚ್ಚಿಡುತಾರೆ. ಮುಗ್ಧ ಜನರನ್ನು ಆಮಿಷಕ್ಕೆ ಬಲಿ ಮಾಡಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಬದುಕಲು, ಮುಗ್ಧ ಮಹಿಳೆಯರಿಗೆ ಪ್ರೇರೇಪಿಸುತ್ತಿದ್ದುದನ್ನು ಈ ಆತ್ಮ ಕಥೆಯಲ್ಲಿ ಬಿಚ್ಚಿಡುತ್ತಾ ಹೋಗುತ್ತಾರೆ.
ಆ ಕಾಲದಲ್ಲಿ ದಲಿತ ಮಹಿಳೆ ನನ್ ಆಗಿ ಮತ್ತೆ ಅದರಿಂದ ಹೊರ ಬಂದು ಹೊಸ ಬದುಕನ್ನು ಕಟ್ಟಿಕೊಳ್ಳುವುದು ನಿಜಕ್ಕೂ ದೊಡ್ಡ ಸಾಧನೆ ಸರಿ. ಒಂದು ವ್ಯವಸ್ಥೆಯ ಒಳಗಿನ ಎಲ್ಲಾ ನ್ಯೂನ್ಯತೆ, ಅನ್ಯಾಯ, ಅವರ ಕ್ರೌರ್ಯವನ್ನು ಬಿಚ್ಚಿಡುವುದು ನಿಜಕ್ಕೂ ಸಣ್ಣ ಮಾತಲ್ಲ. ಅಂತಹ ಸಾಹಸದ ಕೆಲಸವನ್ನು ಮಾಡಿದ ಭಾಮಾ ಅವರು ಪ್ರತಿಯೊಬ್ಬ ದಲಿತ ಮಹಿಳೆಯರಿಗೆ ಸ್ಪೂರ್ತಿ ಈ ಆತ್ಮಕಥೆ. ಆತ್ಮಕಥೆಯು ಮೊದಲ ಒಂದೆರಡು ಭಾಗಗಳು ಓದುವಾಗ ಬರಿ ದಿನಚರಿಯ ಹಾಗೆ ಓದುಗರು ಆಸಕ್ತಿಯನ್ನು ಕಳೆದುಕೊಂಡರು, ಸಹ ಅದನ್ನು ಓದುತ್ತಾ ಹೋದ ಹಾಗೆ ಕುತೂಹಲ ಕೆರಳಿಸುತ್ತದೆ.
ಓದುವ ಪ್ರಾರಂಭದಲ್ಲಿದ್ದ ಅಭಿಪ್ರಾಯ ಓದಿದ ಮೇಲೆ ಸಂಪೂರ್ಣವಾಗಿ ಬದಲಾಗುತ್ತದೆ. ಈ ಆತ್ಮಕಥೆಯು ಪ್ರಾರಂಭವಾಗುವುದು ಅಸ್ಪೃಶ್ಯತೆಯಿಂದ. ಮಧ್ಯದಲ್ಲಿ ವರ್ಗವೇ ಮುಖ್ಯ ಅಂತ ಅನಿಸಿದರೂ ಕೊನೆಗೆ ಬಂದು ನಿಲ್ಲೋದು ದಲಿತತ್ವದಲ್ಲಿ. ಇಡೀ ಆತ್ಮಕಥೆಯ ಪ್ರಾರಂಭದಿಂದ ಕೊನೆಯವರೆಗೂ ದಲಿತತ್ವದ ನೆಲೆಗಳು ಕಾಣಿಸಿಕೊಳ್ಳುತ್ತವೆ. ನಿಜಕ್ಕೂ ದಲಿತರ ಬದುಕು ತಾಳೆಗರಿಗಳ ಹಾಗೆ ಎರಡು ಕಡೆಯಿಂದ ಗರಗಸದ ಹಾಗೆ ಕೊಯ್ಯುತ್ತಲೇ ಇರುತ್ತದೆ. ಹಾಗಾಗಿ ಭಾಮಾ ಅವರು ಈ ಕೃತಿಗೆ “ತಾಳೆಗರಿ” ಅಂತ ಹೆಸರು ಕೊಟ್ಟಿದ್ದು ತುಂಬಾ ಸಂಮಜಸವಾಗಿದೆ.
ವಿಜಯಲಕ್ಷ್ಮಿ ದತ್ತಾತ್ರೇಯ ದೊಡ್ಡಮನಿ ಕಲ್ಬುರ್ಗಿಯವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲ್ಬುರ್ಗಿಯಲ್ಲಿ ಕನ್ನಡ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ.