ಅಪ್ಪ ಮೌನವಾಗಿ ಒಂದು ಓರೆಗೆ ಕೂತಿದ್ದರು. ಅರವಿಂದ ಅದೆಲ್ಲಿ ಅಲೆಯೋಕ್ಕೆ ಹೋಗಿದ್ದನೋ ಏನೋ… ಅವನೊಬ್ಬ ಶುದ್ಧ ಪೋಕರಿ ತಮ್ಮ. ಏನಾಯಿತೆಂದು ವಿಚಾರಿಸಿದರೆ, ಅಮ್ಮ, ‘ಚಿಕ್ಕಮ್ಮನಿಗೆ ಸ್ವಲ್ಪ ಹೊಟ್ಟೆನೋವು ಕಾಣಿಸಿಕೊಂಡಿತ್ತು ಅಷ್ಟೆ. ಈಗ ಹುಷಾರಾಗಿದ್ದಾಳೆ’ ಎಂದರು. ಹುಂ… ಮಕ್ಕಳಿಗೆ ಇದೆಲ್ಲಾ ಗೊತ್ತಾಗಬಾರದು ಅಂತ ದೊಡ್ಡವರು ಹೀಗೆ ಸುಳ್ಳು ಹೇಳೋದು ಸಹಜವಲ್ಲವೇ..? ಚಿಕ್ಕಮ್ಮನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದ ಕೆಲದಿನಗಳಲ್ಲಿ, ಮನೆಯಲ್ಲಿ ನಡೀತಾ ಇದ್ದ ಮಾತುಕತೆಗಳಿಂದಲೇ ತಿಳಿಯಿತು ಚಿಕ್ಕಮ್ಮ ಆತ್ಮಹತ್ಯೆಗೆ ಯತ್ನಿಸಿದ್ದರು ಅಂತ! ಯಾರೋ ಬಸ್ ಕಂಡೆಕ್ಟರ್ ಅಂತೆ.. ಗಾಢವಾಗಿ ಪ್ರೀತಿಸಿದ್ರಂತೆ..
ಆಶಾ ರಘು ಹೊಸ ಕಾದಂಬರಿ “ಚಿತ್ತರಂಗ”ದ ಕೆಲವು ಪುಟಗಳು ನಿಮ್ಮ ಓದಿಗೆ

ಇನ್ನೊಂದು ತಿಂಗಳು ಹುಬ್ಬಳ್ಳೀಲಿ ವಾಸ್ತವ್ಯ… ಹೋದ ಸಲ ಅಲ್ಲಿ ಮಾಡಿದ್ದ ಹೋಟೆಲಿನ ರೂಮು ಸರಿ ಇರಲಿಲ್ಲ… ಹಾಗಂತ ಹೇಳಿದ್ದಕ್ಕೆ ಈ ಸಲ ಯಾರದೋ ಮನೆ ಮೇಲ್ಗಡೆ ರೂಮಿನ ವ್ಯವಸ್ಥೆ ಮಾಡಿದೀನಿ ಅಂದ ನರಸು… ಕ್ಲೀನಾಗಿ ಇದ್ದರಾಯ್ತು… ಅಂದ ಚಂದ ನಾನು ಮಾಡ್ಕೋತೀನಿ. ಮನುಷ್ಯನಿಗೆ ರಸಿಕತೆ ಇರ್ಬೇಕು… ಅಭಿರುಚಿ ಇರ್ಬೇಕು… ತಾನಿರೋ ಪರಿಸರದ ಸುತ್ತಮುತ್ತಲು ಮನಸಿಗೆ ಮುದ ಕೊಡೋ ಹಾಗೆ ಇರೋತರ ಚಂದವಾಗಿಟ್ಟಿರಬೇಕು… ಹ್ಯಾಗಿಟ್ಟಿದೀನಿ ನನ್ನ ‘ಆನಂದ ನಿಲಯ’ ಬಂಗಲೇನ..? ಪ್ರತೀ ರೂಮಿಗೂ ಬೇರೆಬೇರೆ ಬಣ್ಣದ ಕರ್ಟನ್ಸು.. ಮತ್ತೆ ಆ ರೂಮಿನಲ್ಲಿ ಆ ಕರ್ಟನ್ನಿನ ಬಣ್ಣದ್ದೇ ಕಾರ್ಪೆಟ್ಟು… ಅದಕ್ಕೆ ಹೊಂದೋ ಹಾಗೆ ಬೆಡ್ ಸ್ಪ್ರೆಡ್ಡು., ಬ್ಲಾಂಕೇಟುಗಳು… ಮನೆ ಸುತ್ತ ಹೂವಿನ ಗಿಡಗಳು… ಯಾವುದೇ ರೂಮಿನ ಕಿಟಕಿ ತೆರೆದ್ರೂ ಹೊರಗಡೆ ಸೀಲಿಂಗ್‌ನಿಂದ ಕೆಳಗೆ ತೂಗ್ತಾ ಇರೋ ಹ್ಯಾಂಗಿಂಗ್ ಪಾಟ್ಸ್ ಕಾಣಿಸಬೇಕು..! ಚಿಕ್ಕಮ್ಮನ ರೂಮಿನ ಒಳಗಡೆಯಿಂದ ಸ್ಟೋರ್ ರೂಮಿಗೆ ಹೋಗೋಕ್ಕೆ ಒಂದು ಬಾಗಿಲಿದೆ… ಅದೂ ಸ್ವರ್ಗದ ಬಾಗಿಲ ಥರ ‘ಆಂ’ ಅಂತ ಇಷ್ಟಗಲಕ್ಕೆ ಬಾಯಿ ತೆರ್ಕೊಂಡು..! ಅದು ಒಂದು ಚೂರೂ ಚೆನ್ನಾಗಿಲ್ಲ… ಮುಚ್ಚಿಸಿಬಿಡಬೇಕು. ಕಾರ್ಪೆಂಟರಿಗೆ ಕೇಳಿದೀನಿ… ‘ಗೋಡೆ ಕಟ್ಟೋದೇನೂ ಅವಶ್ಯಕತೆ ಇಲ್ಲ. ಪ್ಲೇವುಡ್ಡಲ್ಲಿ ನಾನು ಮಾಡಿಕೊಡ್ತೀನಿ… ಅದಕ್ಕೇ ಗೋಡೇ ಪೇಂಟ್ ಹಾಕಿ, ಫಿನಿಷಿಂಗ್ ಮಾಡಿದ್ರೆ ಗೋಡೆ ಥರಾನೇ ಕಾಣುತ್ತೆ’ ಅಂತ ಹೇಳಿದಾನೆ. ಮಾಡಿಸ್ಬೇಕು… ಊಂ… ಖರ್ಚು..! ಏನ್ಮಾಡೋದು..? ನಮಗೆ ಬೇಕಾದ ಹಾಗೆ ಮನೇನ ಮಾರ್ಪಾಡು ಮಾಡ್ಕೋಬೇಕು ಅಂದ್ರೆ ಖರ್ಚು ಮಾಡ್ಲೇಬೇಕು..! ಈಗಾಗಲೇ ದುಡ್ಡು ನೀರಿನ ಹಾಗೆ ಸುರಿದಿದೀನಿ… ಇನ್ನೂ..! ಈ ಡ್ರೈವರ್ ಯಾಕಿಷ್ಟು ಸ್ಪೀಡಾಗಿ ಗಾಡಿ ಓಡಿಸ್ತಾ ಇದಾನೆ..!? ಮುಂದೆ ಏನಾದ್ರೂ ಟ್ರೋಫಿ ಇಟ್ಟಿದಾರಾ ಇವನ್ಗೆ..?

(ಆಶಾ ರಘು)

ತುಸು ಮುಂದೆ ಬಾಗಿ ‘ಏನಪ್ಪಾ… ಹಲೋ., ಟ್ಯಾಕ್ಸಿ ಸ್ವಲ್ಪ ನಿಧಾನವಾಗಿ ಡ್ರೈವ್ ಮಾಡಿ… ಏನೂ ಆತುರವಿಲ್ಲ’ ಎಂದಳು ಕಸ್ತೂರಿ. ಅವನು, ‘ಸಾರಿ ಮೇಡಂ… ಆಯ್ತು ಮೇಡಂ’ ಅಂತಂದು ಟ್ಯಾಕ್ಸಿಯ ವೇಗವನ್ನು ಸ್ವಲ್ಪ ಕಡಿಮೆ ಮಾಡಿಕೊಂಡು ಓಡಿಸತೊಡಗಿದ ಮೇಲೆ ಇವಳು ಪುನಃ ಹಿಂದಕ್ಕೆ ಒರಗಿ, ಆಂತುಕೊಂಡು ಕುಳಿತಳು.

…ತಿಂಗಳಿಗೊಂದು ಸಲ ಈ ಥರ ಟ್ಯಾಕ್ಸೀಲಿ ದೂರದ ಪ್ರಯಾಣ ಮಾಡೋದು ಈಗ ರೂಢಿನೇ ಆಗೋಯ್ತು. ಹಿಂದೇನೂ ಈ ಥರ ಪ್ರಯಾಣ ಮಾಡೋದು ಇರ್ತಿತ್ತು. ನಟಿ ಅಂದ ಮೇಲೆ ಇಲ್ಲದೆ ಇರುತ್ತಾ..? ಅದರಲ್ಲೂ ಈ ಕಸ್ತೂರಿಯಂಥಾ ಬ್ಯುಸಿ ನಟಿಗೆ..!? ಹ್ಹ… ಹೆಸರು.. ಖ್ಯಾತಿ.. ಹಣದ ಓಡಾಟದಲ್ಲಿ ಆ ಪ್ರಯಾಣಗಳ ಆಯಾಸ ಗೊತ್ತಾಗ್ತಾ ಇರಲಿಲ್ಲ! ಈಗ..!? ಹೂಂ…  ನಾಟಕ ಅಂದ್ರೆ ಅದರ ದರ್ಜೆ ಕಡಿಮೇದು ಅಂತ ನನ್ನ ಅಭಿಪ್ರಾಯವಲ್ಲ. ಇವತ್ತಿನ ನನ್ನ ಸ್ಥಿತೀಲಿ ಕೈ ಹಿಡಿದು ಅನ್ನ ಹಾಕ್ತಾ ಇರೋದೇ ರಂಗಭೂಮಿ! ಇಲ್ಲದೇ ಇದ್ದಿದ್ರೆ ಇರೋ ಕಮಿಟ್ಮೆಂಟಿಗೆ ನೇಣು ಹಾಕ್ಕೊಂಚಿತ್ರರಂಗ ನನ್ನನ್ನ ಮರೆತೇ ಹೋಯ್ತು ಅಂತ ಕಾಣುತ್ತೆ! ಈಗೊಂದು ಮೂರು ವರ್ಷಗಳಿಂದ ಒಂದು ಸಿನಿಮಾನೂ ಇಲ್ಲ..! ಅದಕ್ಕೆ ಹಿಂದಿನ ವರ್ಷ ಎರಡೇ ಸಿನಿಮಾ..! ಅದರಲ್ಲೂ ಕನ್ನಡದ್ದು ಒಂದಾದರೆ, ಮಲಯಾಳಂದು ಒಂದು! ಬರೀ ಕನ್ನಡದ್ದು ಅಂತ ಮಾತ್ರ ಲೆಕ್ಕ ಹಾಕಿದ್ರೆ ಒಂದೇ ಸಿನಿಮಾ! ಚಿತ್ರರಂಗ ನನ್ನನ್ನ ಮರೀದೇ ಹೋಗಿದ್ರೆ ಈ ಥರ ಊರಿಂದೂರಿಗೆ ಅಲ್ಕೊಂಡು ಕನಿಷ್ಟ ಸಂಭಾವನೆಗೆ ಒಪ್ಕೊಂಡು ನಾಟಕಗಳಲ್ಲಿ ಬಣ್ಣ ಹಚ್ಚೋ ಪರಿಸ್ಥಿತಿ ಬರ್ತಾ ಇರಲಿಲ್ಲ!ಡು ಸಾಯಬೇಕಾಗಿತ್ತು! ಏ ಛೀ..! ಅಮ್ಮನ ಎದುರಿಗೆ ಆಡಿದ್ರೆ, ‘ಬಿಡ್ತು ಅನ್ನೇ., ಯಾವುದೇ ಸಂದರ್ಭಕ್ಕೂ ಸಾಯೋ ಮಾತು ಬೇಗ ಬರುತ್ತೆ ನಿನ್ನ ಬಾಯಲ್ಲಿ’ ಅಂತ ಬೈತಿದ್ರು! ಆದ್ರೂ ನಾಟಕದಲ್ಲಿ ಅಭಿನಯಿಸೋದು ಅಂದ್ರೆ ಎಷ್ಟು ಸಮಯ..!? ಶ್ರಮ..!? ನಾನೆಷ್ಟೇ ಹೆಸರು ಮಾಡಿರೋ ನಟಿ ಅಂದ್ರೂನೂ ಎಲ್ಲರ ಹಾಗೆ ರಿಹರ್ಸಲ್ ಮಾಡಲೇ ಬೇಕು. ತಿಂಗಳು ಅಲ್ಲದಿದ್ರೂ ಐದು ದಿನಗಳ ಕಾಲನಾದ್ರೂ! ಇಲ್ಲದೆ ಇದ್ರೆ ಸಹಕಲಾವಿದರ ಜೊತೆಗೆ ಕೋ-ಆರ್ಡಿನೇಷನ್ ಕಷ್ಟ ಆಗೋಗುತ್ತೆ. ಇನ್ನು, ನಿತ್ಯ ಮೇಕಪ್ ಮಾಡ್ಕೊಂಡು ಅದದೇ ಸಂಭಾಷಣೆ ಹೇಳ್ಕೊಂಡು.. ಅದದೇ ಮೂವ್ಮೆಂಟ್ಸ್ ಮಾಡ್ಕೊಂಡು ನಾಟಕದ ಪ್ರದರ್ಶನ ಕೊಡೋದು.. ಆ ಊರಿನಲ್ಲಿ ಎಷ್ಟು ದಿನಗಳ ಕಾಲ ಶೋ ಅಂತ ನರಸು ನಿರ್ಧರಿಸಿರ್ತಾನೋ ಅಷ್ಟು ದಿನಗಳ ಕಾಲ..! ಮತ್ತೆ ಚಿತ್ರರಂಗದಲ್ಲಿ ಇನ್ನೊಂದು ಸಲ ಒಂದೊಳ್ಳೆ ಪಾತ್ರ ಸಿಕ್ಕಿಬಿಟ್ರೆ ಸಾಕು… ಆ ಚಂಗು ಹಿಡಿದು ಇನ್ನಷ್ಟು ಕಾಲ ಮಿಂಚಿಬಿಡ್ತೀನಿ. ಆದರೆ ಯಾರು ಅವಕಾಶ ಕೊಡುವವರು..?

ನನ್ನ ಸಿನಿಮಾ ಬದುಕಿನದೇ ಒಂದು ಆಸಕ್ತಿಕರ ಗ್ರಾಫ್..! ಕೆಳಗಿನ ಹಂತದಿಂದ ಸ್ವಲ್ಪ ಮೇಲೇರಿ, ಹಿಂದೆಯೇ ಕೆಳಗಿಳಿದು, ಅದೇ ಕೆಳಗಿನ ಹಂತದಲ್ಲೇ ಸ್ವಲ್ಪ ದೂರ ಕ್ರಮಿಸಿ, ನಿಧಾನವಾಗಿ ಮೇಲೇರಿ, ಬಹಳ ಕಾಲ ಆ ಏರಿದ ಮಟ್ಟದಲ್ಲೇ ಮುಂದುವರಿದು, ನಂತರ ಇದ್ದಕ್ಕಿದ್ದಂತೆ ಕೆಳಗೆ ಕುಸಿದು, ಪುನಃ ಸ್ವಲ್ಪ ಚೇತರಿಸಿಕೊಂಡು ಸ್ವಲ್ಪಸ್ವಲ್ಪವೇ ತೆವಳಿದ್ರೂನೂ ಕೆಳಗೇ ಉಳಿದು.. ಈಗ ಏನೂ ಇಲ್ಲವಾಗಿ..! ಶಿವಮೊಗ್ಗದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಚೂಟಿಯಾಗಿ ಓದ್ಕೊಂಡು, ಎಲ್ಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲೂ ಭಾಗವಹಿಸ್ತಾ, ಬಹುಮಾನಗಳನ್ನ ಗೆಲ್ತಾ, ಸ್ಕೂಲಿನಿಂದ ಇಳಿಜಾರಿನ ಮಣ್ಣು ರಸ್ತೇಲಿ ಸೀಬೇಹಣ್ಣು ತಿನ್ತಾ ಕುಣ್ಕೊಂಡು ಮನೆ ಕಡೆ ಹೆಜ್ಜೆ ಹಾಕ್ತಾ ಇದ್ದ ಆ ಶಶಿಕಲಾ ಅನ್ನೋ ಹುಡುಗಿ ಎಲ್ಲಿ? ಜಗತ್ತಿನ ಭಾರನೇ ತಲೆ ಮೇಲೆ ಹೊತ್ಕೊಂಡ ಹಾಗೆ, ಕಣ್ಣು ಮುಚ್ಚಿ ಸುಧಾರಿಸಿಕೊಳ್ಳೋಕ್ಕೂ ಬಿಡದೇ ಇರೋ ಚಿಂತೇಲಿ ಬೇಯ್ತಾ ದುಡಿಮೆಯ ಬೆನ್ನು ಹತ್ತಿ ದೂರದ ಊರಿಗೆ ಪ್ರಯಾಣ ಮಾಡ್ತಾ ಇರೋ ಈ ಕಸ್ತೂರಿ ಅನ್ನೋ ನಡುಪ್ರಾಯದ ಹೆಂಗಸೆಲ್ಲಿ..? ಶಿವಮೊಗ್ಗದ ಒಂದು ಪುಟ್ಟ ಊರು ಕಪ್ಪಳ.. ಆ ಕಪ್ಪಳದ ಸರ್ಕಾರಿ ಆಸ್ಪತ್ರೆಯ ಪಕ್ಕದ ಬೀದೀಲಿ ನಮ್ಮದೊಂದು ಪುಟ್ಟಮನೆ. ನಾನು., ಅಪ್ಪ, ಅಮ್ಮ, ಚಿಕ್ಕಮ್ಮ, ತಮ್ಮ, ಅಜ್ಜಿ.. ಆರು ಜನವೂ ಎಷ್ಟು ಅಡಕವಾಗಿ ಬದುಕ್ತಾ ಇದ್ದೆವು ಆ ಪುಟ್ಟ ಬಾಡಿಗೆ ಗೂಡಿನಲ್ಲಿ!? ನನಗೆ ಆಗಿನಿಂದಲೂ ಮನೆಯ ಆವರಣವನ್ನು ಅಂದವಾಗಿ ಇಡುವುದರಲ್ಲಿ ವಿಶೇಷ ಆಸಕ್ತಿ. ಎಲ್ಲೆಲ್ಲಿಂದಲೋ ಬೇಡಿ ತಂದು ಮನೆಯ ಮುಂಭಾಗ ಚಿಕ್ಕಮ್ಮನ ಜೊತೆ ಸೇರಿಕೊಂಡು ಕೈದೋಟ ಮಾಡಿದ್ದೆನಲ್ಲ..! ಆಗಾಗ ಯಾವುದಾದರೂ ಕುರಿಯೋ, ಮೇಕೆಯೋ, ದನವೋ ಗಿಡಗಳನ್ನು ತಿಂದುಕೊಂಡು ಹೋಗಿಬಿಡುತ್ತಿದ್ದುವು… ಆಗೆಲ್ಲಾ ನನ್ನ ಗೋಳಾಟವನ್ನು ಶಮನ ಮಾಡಲು ಮನೆಮಂದಿಯೆಲ್ಲಾ ಹರಸಾಹಸ ಪಡಬೇಕಾಗುತ್ತಿತ್ತು! ‘ಬೇಲಿ ಹಾಕಿದರೂ ದನಗಳು ತುಳಿದು ಮಲಗಿಸಿಬಿಡುತ್ತವೆ. ಇದೇನು ಸ್ವಂತ ಮನೆಯೇ? ಕಾಂಪೌಂಡು ಕಟ್ಟಿಸೋಣ ಅನ್ನೋಕ್ಕೆ..? ಇನ್ನು ಮೇಲೆ ಗಿಡಗಳನ್ನ ಬೆಳೆಸೋದೇ ಬೇಡ’ ಅಂತಿದ್ದರು ಅಜ್ಜಿ. ಆದರೂ ಒಂದು ವಾರದಲ್ಲಿ ಮತ್ತೆ ಅಲ್ಲಿ ಹೊಸ ಸಸಿಗಳು ನಲಿಯುತ್ತಿದ್ದವು..!

ಅಪ್ಪನ ಹತ್ತಿರ ಒಂದು ಹಳೇ ಸ್ಕೂಟರ್ ಇತ್ತು. ಆಗಾಗ ಅಪ್ಪನ ಹಿಂದೆ ಕೂತು ಶಿವಮೊಗ್ಗ, ಸಾಗರಗಳ ಸುತ್ತು ಹಾಕುತ್ತಿದ್ದೆ. ಮುಂದೆ ಓಡಿಸುತ್ತಾ ಕುಳಿತ ಅಪ್ಪನ ಬೆನ್ನಿಗೆ, ಬೆನ್ನು ತಾಕಿಸಿಕೊಂಡು, ಹಿಮ್ಮುಖವಾಗಿ ಕೂತು ದೂರವಾಗುತ್ತಾ ಸಾಗುವ ಸುತ್ತಲಿನ ಪರಿಸರಾನ, ಬೆಳೆಯುತ್ತಾ ಸಾಗುವ ಕಪ್ಪು ರಸ್ತೇನ ನೋಡುವುದರಲ್ಲಿ ನನಗೆ ಎಲ್ಲಿಲ್ಲದ ಖುಷಿ. ಐವತ್ತು ಪೈಸೆಗೆ ಒಂದು ಪೊಟ್ಟಣದ ಭರ್ತಿ ಪೆಪ್ಪರಿಮೆಂಟು ಸಿಗೋದು..! ಅವನ್ನು ಜೋಬಿನಲ್ಲಿ ತುಂಬಿಕೊಂಡು, ಆಗಾಗ ಒಂದೊಂದು ತೆಗೆದು ಬಾಯಿಗೆ ಹಾಕಿಕೊಂಡು ಚೀಪುತ್ತಿದ್ದೆನಲ್ಲ… ಈಗ ಅಂತಹ ಪೆಪ್ಪರಿಮೆಂಟು ಸಿಕ್ಕೋದೇ ಇಲ್ಲ. ಸಿಟಿಗಳಲ್ಲಿ ಸಿಗೋಲ್ಲ ಅಂತ, ಹಳ್ಳಿಗಳ ಕಡೆ ಶೂಟಿಂಗ್ ಇದ್ದಾಗಲೆಲ್ಲಾ ನಾನೇ ಸಣ್ಣಪುಟ್ಟ ಅಂಗಡಿಮನೆಗಳಿಗೆ ಹೋಗಿ ಚಿಕ್ಕ ಮಕ್ಕಳ ಥರ ಕೇಳಿದೀನಿ..! ತಮ್ಮ ನೆಚ್ಚಿನ ನಟಿ ಹೀಗೆ ಏನನ್ನೋ ಕೇಳುತ್ತಾ ತಮ್ಮಲ್ಲಿಗೆ ಬಂದಳಲ್ಲ ಅನ್ನೋ ಅಭಿಮಾನದಲ್ಲಿ ಅವರುಗಳು ಅಂಗಡಿಯಲ್ಲಿ ಇದ್ದಬದ್ದ ಎಲ್ಲ ಥರದ ಮಿಠಾಯಿಗಳನ್ನೂ ತಂದು ನನ್ನ ಮುಂದೆ ತೋರಿದ್ದಾರೆ..! ಆದರೆ ನನ್ನ ಬಾಲ್ಯದ ದಿನಗಳ ಇಷ್ಟದ ಪೆಪ್ಪರಿಮೆಂಟನ್ನ ಎಲ್ಲೂ ಕಾಣದೆ ಬೇಸರಪಟ್ಟುಕೊಂಡಿದ್ದೀನಿ. ನನಗೆ ಬೇಕಾದುದನ್ನು ಒದಗಿಸಲು ಆಗದುದ್ದಕ್ಕೆ ಅಂಗಡಿ ವ್ಯಾಪಾರಿಗಳೂ ಬೇಸರಪಟ್ಟುಕೊಂಡಿದಾರೆ. ಆಗೆಲ್ಲಾ ಹಳ್ಳಿಯ ಸೊಸೈಟಿಯಲ್ಲಿ ಸಿಗ್ತಾ ಇದ್ದ ಚೀಟಿ ಬಟ್ಟೇಲಿ ಅಮ್ಮ ನನಗೆ ತಾವೇ ಲಂಗ, ಜಾಕೀಟು ಹೊಲಿದು ಹಾಕೋರು. ಒಂದೊಂದು ಬಟ್ಟೆ ತೆಳ್ಳಗೆ ಹತ್ತಿಯ ಹಾಗೆ ಮೈಗಂಟಿಕೊಂಡರೆ, ಒಂದೊಂದು ಬಟ್ಟೆ ಕಲ್ಲಿನ ಹಾಗೆ ಘನವಾಗಿ ಇರೋದು..! ಎಲ್ಲಕ್ಕೂ ಬಣ್ಣಬಣ್ಣದ ಪ್ರಿಂಟೆಂಡ್ ಹೂವುಗಳ ಚಿತ್ತಾರ! ನವಿಲು, ಚಿಟ್ಟೆ, ಗಿಳಿಗಳ ಚಿತ್ರ..! ಅವುಗಳನ್ನ ನೋಡ್ಕೊಂಡು ಹಾಗೇ ಬಿಳೀ ಹಾಳೆ ಮೇಲೆ ಬಿಡಿಸಿ, ಕಲರ್ ಪೆನ್ಸಿಲ್‌ನಿಂದ ಬಣ್ಣ ತುಂಬ್ತಾ ಇದ್ದೆ.

ಚಿತ್ರರಂಗ ನನ್ನನ್ನ ಮರೆತೇ ಹೋಯ್ತು ಅಂತ ಕಾಣುತ್ತೆ! ಈಗೊಂದು ಮೂರು ವರ್ಷಗಳಿಂದ ಒಂದು ಸಿನಿಮಾನೂ ಇಲ್ಲ..! ಅದಕ್ಕೆ ಹಿಂದಿನ ವರ್ಷ ಎರಡೇ ಸಿನಿಮಾ..! ಅದರಲ್ಲೂ ಕನ್ನಡದ್ದು ಒಂದಾದರೆ, ಮಲಯಾಳಂದು ಒಂದು! ಬರೀ ಕನ್ನಡದ್ದು ಅಂತ ಮಾತ್ರ ಲೆಕ್ಕ ಹಾಕಿದ್ರೆ ಒಂದೇ ಸಿನಿಮಾ! ಚಿತ್ರರಂಗ ನನ್ನನ್ನ ಮರೀದೇ ಹೋಗಿದ್ರೆ ಈ ಥರ ಊರಿಂದೂರಿಗೆ ಅಲ್ಕೊಂಡು ಕನಿಷ್ಟ ಸಂಭಾವನೆಗೆ ಒಪ್ಕೊಂಡು ನಾಟಕಗಳಲ್ಲಿ ಬಣ್ಣ ಹಚ್ಚೋ ಪರಿಸ್ಥಿತಿ ಬರ್ತಾ ಇರಲಿಲ್ಲ!

ನಾಲ್ಕಾಣೆ ಕೊಟ್ಟರೆ ಒಂದು ಮಾರು ಹೂ ಸಿಗ್ತಿತ್ತು. ಚಿಕ್ಕಮ್ಮನಿಗೂ ಆ ದಿನಗಳಲ್ಲಿ ಹೂವು ಅಂದರೆ ಇಷ್ಟ. ಕೊಂಡುಕೊಳ್ಳೋರು. ನನಗೂ ಮುಡಿಸಿ, ಅಮ್ಮನಿಗೂ ಕೊಟ್ಟು, ತಾವೂ ಮುಡ್ಕೊಳೋವ್ರು. ನನಗಂತೂ ಜಡೆಗಿಂತಲೂ ಉದ್ದಕ್ಕೆ ಹೂವಿರಬೇಕಿತ್ತು! ‘ಬೇಡ ಕಣೆ ಶಶಿ., ಹಾಗೆ ಮುಡ್ಕೊಂಡ್ರೆ ಎಲ್ಲರೂ ನಗ್ತಾರೆ’ ಅಂತ ಅವರುಗಳು ಎಷ್ಟು ಹೇಳಿದ್ರೂ ಕೇಳ್ತಿರಲಿಲ್ಲ. ಜಡೆಗಿಂತಲೂ ಉದ್ದಕ್ಕೆ ಹೂ ಮುಡಿದುಕೊಂಡೇ ಸ್ಕೂಲಿಗೆ ಹೋಗ್ತಿದ್ದೆ! ನನ್ನ ನೋಡಿ ಯಾರು ನಗಬೇಕು..? ಅವರುಗಳೂ ಹಾಗೇ ನೆತ್ತಿಯ ಮೇಲೆ ಹೂದಂಡೆ ಸಿಕ್ಕಿಸಿಕೊಂಡು ಬರೋ ಅಂಥವರು! ಹಹ್ಹಹ್ಹ… ಸ್ಕೂಲಿನಲ್ಲಿ., ಅಪೂರ್ವಕ್ಕೆ ನಮ್ಮ ಮನೆಯ ಮುಂದೆಯೂ ಗುಲಾಬಿ ಹೂ ಬಿಡ್ತಿತ್ತು. ಕೆಂಪು, ಹಳದಿ, ಬಿಳಿ ಎಲ್ಲ ಬಣ್ಣದ್ದೂ ಇರ್ತಿತ್ತು! ಅದನ್ನ ನಾನು ತೆಲುಗು ನಟಿ ಚಾರುಮತಿಯವರ ಹಾಗೆ ಕಿವಿಯ ಪಕ್ಕಕ್ಕೇ ಮುಡಿದುಕೊಂಡು ಪಿನ್ನು ಚುಚ್ಚಿಕೋತಿದ್ದೆ. ಆಗೆಲ್ಲಾ ನನಗೆ, ನಾನೂ ಚಾರುಮತಿಯವರ ಹಾಗೇ ದೊಡ್ಡ ನಟಿ ಆಗ್ಬೇಕು ಅನ್ನೋ ಆಸೆ ಇತ್ತು! ಸ್ಕೂಲಿನ ನಾಟಕಗಳಲ್ಲಿ ಅಭಿನಯಿಸ್ತಾ ಇದ್ದೆನಲ್ಲ..? ಪ್ರತೀ ವರ್ಷವೂ ಮುಖ್ಯಪಾತ್ರ ನನ್ನನ್ನೇ ಹುಡುಕ್ಕೊಂಡು ಬರೋರು..! ಆ ದಿನಗಳಲ್ಲೆ ಅಲ್ಲವ ನಾನು ಅವರಿಗೆ ಕಾಗದ ಬರೆದಿದ್ದು..? ‘ಪ್ರೀತಿಯ ಚಾರುಮತಿ ಆಂಟಿ…’ ಅಂತೇನೋ ಆರಂಭಿಸಿದ್ದೆ ಅಂತ ನೆನಪು… ‘ನಾನೂ ನಿಮ್ಮ ಹಾಗೇ ನಟಿ ಆಗ್ಲಾ?’ ಅಂತ ಆಪ್ತ ಸಮಾಲೋಚನೆ ನಡೆಸಿದ್ದೆ. ಹತ್ತು ದಿನಗಳಲ್ಲೇ ಅವರಿಂದ ಉತ್ತರ ಬಂತು! ‘ನಟಿಯಾಗಬೇಕು ಅನ್ನೋದು ನಿನ್ನ ಅದೃಷ್ಟದಲ್ಲಿದ್ದರೆ ಅದನ್ನ ಯಾರಿಂದಲೂ ತಪ್ಪಿಸೋಕ್ಕೆ ಆಗಲ್ಲ’ ಅಂತ! ಆ ಪತ್ರ ಎದೆಗೊತ್ತಿಕೊಂಡು ಎಷ್ಟು ಕುಣಿದಾಡಿದ್ದೆ ನಾನು..? ಸ್ಕೂಲಿಗೆಲ್ಲಾ ತೆಗೊಂಡು ಹೋಗಿ ಟೀಚರುಗಳಿಗೂ ತೋರಿಸಿಕೊಂಡು ಬಂದಿದ್ದೆ! ಆಗಲಿಂದ ಸ್ಕೂಲಿನಲ್ಲಿ ನನ್ನನ್ನ ‘ಜೂನಿಯರ್ ಚಾರುಮತಿ’ ಅಂತ ಕರೆಯೋಕ್ಕೆ ಶುರುಮಾಡಿದ್ರಲ್ಲ..? ನಾನೂ ನಾಟಕ, ನೃತ್ಯಗಳನ್ನ ಮನಸ್ಸಿಟ್ಟು ಮಾಡತೊಗಿದೆನಲ್ಲ..?

ಆಗ ನಾನು ಹತ್ತನೇ ಕ್ಲಾಸಿನಲ್ಲಿ ಓದ್ತಿದ್ದೆ. ಶಾಲೆಯ ವಾರ್ಷಿಕೋತ್ಸವದಲ್ಲಿ ಒಂದು ನಾಟಕವಿತ್ತು. ಅದರಲ್ಲಿ ನಂದು ವಿಶ್ವಾಮಿತ್ರನ ತಪೋಭಂಗ ಮಾಡೋ ಮೇನಕೆಯ ಪಾತ್ರ! ಚೆನ್ನಾಗಿ ರಿಹರ್ಸಲ್ ಮಾಡಿದ್ದೆ. ಮನೆಯವರೆಲ್ಲಾ ಕಾರ್ಯಕ್ರಮದ ಹೊತ್ತಿಗೆ ಬರ್ತೀವಿ ಅಂತ ಹೇಳಿದ್ರು. ಸಂಜೆ ಆಯ್ತು… ಕಾರ್ಯಕ್ರಮ ವೇಳೆ ಸಮೀಪಿಸ್ತಾ ಇದೆ… ಸಾಧಾರಣವಾಗಿ ಮನೆಯವರೆಲ್ಲಾ ಕಾರ್ಯಕ್ರಮಕ್ಕೆ ಬಂದರೆ, ಚಿಕ್ಕಮ್ಮನೋ, ಅಮ್ಮನೋ ಗ್ರೀನ್ ರೂಮಿಗೆ ಬಂದು ಮಾತಾಡಿಸಿಕೊಂಡು ಹೋಗೋದು ವಾಡಿಕೆ. ಆ ದಿನ ಎಷ್ಟು ಹೊತ್ತಾದ್ರೂ ಯಾರೂ ಬರಲಿಲ್ಲ. ನಮ್ಮ ನಾಟಕ ಶುರುವಾಗೇ ಹೋಯ್ತು. ನಾನು, ಜನಜಂಗಳಿ ಜಾಸ್ತಿ ಇದ್ದದ್ದರಿಂದ ಇವರು ಒಳಗೆ ಬರೋಕ್ಕೆ ಆಗಿಲ್ಲದೇ ಇರಬಹುದು, ಪ್ರೇಕ್ಷಕರ ನಡುವೆ ಕೂತ್ಕೊಂಡು ನೋಡ್ತಾ ಇರಬಹುದು ಅಂದ್ಕೊಂಡು, ಪಾತ್ರದಲ್ಲಿ ಎಷ್ಟೇ ಇನ್ವಾಲ್ವ್ ಆಗಿದ್ರೂನೂ ನನ್ನ ಕಣ್ಣುಗಳು ಮಾತ್ರ ಆಗಾಗ ಅಮ್ಮ, ಚಿಕ್ಕಮ್ಮಂದಿರಿಗಾಗಿ ಹುಡುಕ್ತಾ ಇದ್ದುವು. ಕಾರ್ಯಕ್ರಮ ಮುಗೀತು. ಎಲ್ಲಾ ಹೋಗತೊಡಗಿದರು… ಮನೆಯವರು ಯಾರೂ ಬಂದಿಲ್ಲ ಅಂತ ಖಚಿತವಾಯ್ತು. ಆಗೆಷ್ಟು..? ಸುಮಾರು ಒಂಭತ್ತೂವರೆ, ಹತ್ತು ಗಂಟೆ ಇರಬಹುದು. ಮೇಕಪ್ ತೆಗೆದು, ಬಟ್ಟೆ ಬದಲಿಸಿಕೊಂಡು ಮನೆಗೆ ಹೋದೆ. ಬೀಗ..! ಪಕ್ಕದ ಮನೆಯವರಲ್ಲಿ ವಿಚಾರಿಸಿದೆ. ಚಿಕ್ಕಮ್ಮನನ್ನು ತೆರೇಸಾ ನರ್ಸಿಂಗ್ ಹೋಮ್‌ನಲ್ಲಿ ಅಡ್ಮಿಟ್ ಮಾಡಿದಾರೆ ಅಂತ ಗೊತ್ತಾಯಿತು. ಯಾಕೆ… ಏನು… ಅಂತ ಅವರು ಹೇಳಲಿಲ್ಲ. ಪಕ್ಕದ ಬೀದಿಯಲ್ಲೇ ಸರ್ಕಾರಿ ಆಸ್ಪತ್ರೆ ಇದ್ದರೂ, ಸೌಲಭ್ಯ ಕಡಿಮೆಯೆಂದು, ತುರ್ತು ಸಂದರ್ಭಗಳಲ್ಲಿ ಎಲ್ಲರೂ ಊರೊಳಗೆ ಇದ್ದ ತೆರೇಸಾ ನರ್ಸಿಂಗ್ ಹೋಂಗೆ ಹೋಗುತ್ತಿದ್ದರು. ಅಂದರೆ.. ಚಿಕ್ಕಮ್ಮನಿಗೆ ಅಂತಹ ತುರ್ತಾದ ಆರೋಗ್ಯ ಸಮಸ್ಯೆ ಏನಾಗಿರಬಹುದು ಅಂತ ನನಗೆ ಗಾಭರಿಯಾಯ್ತು! ಹೋದರೆ, ಚಿಕ್ಕಮ್ಮ ಚೇತರಿಕೊಂಡಿದ್ದರಾದರೂ, ಉಕ್ಕುತ್ತಿದ್ದ ಕಣ್ಣೀರನ್ನ ಒರೆಸಿಕೊಳ್ಳುತ್ತಾ ಇದ್ದರು. ಅಮ್ಮ, ಅಜ್ಜಿಯರು ಅವರಿಗೆ ಸಮಾಧಾನ ಹೇಳುತ್ತಿದ್ದರು.

ಅಪ್ಪ ಮೌನವಾಗಿ ಒಂದು ಓರೆಗೆ ಕೂತಿದ್ದರು. ಅರವಿಂದ ಅದೆಲ್ಲಿ ಅಲೆಯೋಕ್ಕೆ ಹೋಗಿದ್ದನೋ ಏನೋ… ಅವನೊಬ್ಬ ಶುದ್ಧ ಪೋಕರಿ ತಮ್ಮ. ಏನಾಯಿತೆಂದು ವಿಚಾರಿಸಿದರೆ, ಅಮ್ಮ, ‘ಚಿಕ್ಕಮ್ಮನಿಗೆ ಸ್ವಲ್ಪ ಹೊಟ್ಟೆನೋವು ಕಾಣಿಸಿಕೊಂಡಿತ್ತು ಅಷ್ಟೆ. ಈಗ ಹುಷಾರಾಗಿದ್ದಾಳೆ’ ಎಂದರು. ಹುಂ… ಮಕ್ಕಳಿಗೆ ಇದೆಲ್ಲಾ ಗೊತ್ತಾಗಬಾರದು ಅಂತ ದೊಡ್ಡವರು ಹೀಗೆ ಸುಳ್ಳು ಹೇಳೋದು ಸಹಜವಲ್ಲವೇ..? ಚಿಕ್ಕಮ್ಮನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದ ಕೆಲದಿನಗಳಲ್ಲಿ, ಮನೆಯಲ್ಲಿ ನಡೀತಾ ಇದ್ದ ಮಾತುಕತೆಗಳಿಂದಲೇ ತಿಳಿಯಿತು ಚಿಕ್ಕಮ್ಮ ಆತ್ಮಹತ್ಯೆಗೆ ಯತ್ನಿಸಿದ್ದರು ಅಂತ! ಯಾರೋ ಬಸ್ ಕಂಡೆಕ್ಟರ್ ಅಂತೆ.. ಗಾಢವಾಗಿ ಪ್ರೀತಿಸಿದ್ರಂತೆ.. ಅವನು ಊರಿಗೆ ಹೋಗಿದ್ದವನು, ಹಿಂದಿರುಗಿ ಬರ್ತಾ ಮದುವೆಯಾಗಿ ಹೆಂಡತಿಯನ್ನೂ ಜೊತೆಗೆ ಕರೆದುಕೊಂಡು ಬಂದು, ಕಪ್ಪಳ ಊರೊಳಗಿದ್ದ ತನ್ನಣ್ಣನ ಮನೆಯಲ್ಲಿ ಸಂಸಾರ ಹೂಡಿದನಂತೆ. ಚಿಕ್ಕಮ್ಮನಿಗೆ ಕೆಲಕಾಲದಿಂದ ಇವನು ಸಂಧಿಸಿರದ ಕಾರಣ ವಿಚಾರಿಸೋಣವೆಂದು ಅವನ ಅಣ್ಣನ ಮನೆಗೆ ಹೋಗಿದ್ದರಂತೆ. ಅಲ್ಲಿ ನೋಡುವುದೇನನ್ನು..? ನವದಂಪತಿಗಳು ಜೊತೆಗೆ ಕೂತು ಸತ್ಯನಾರಾಯಣ ವ್ರತ ಮಾಡಿ, ಊಟಕ್ಕೆ ಕೂತಿದ್ದರಂತೆ! ಚಿಕ್ಕಮ್ಮನಿಗೂ ಅವನಿಗೂ ಎಲ್ಲರೆದುರಿಗೇ ಮಾತುಕತೆಗಳಾದುವಂತೆ.


ಅವನು ಕೋಪದಿಂದ ಎದ್ದು ಬಂದವನೇ, ಎಂಜಿಲ ಕೈಯಲ್ಲಿ ಚಿಕ್ಕಮ್ಮನ ಕಪಾಳಕ್ಕೆ ನಾಲ್ಕೈದು ಏಟು ಹಾಕಿದನಂತೆ! ನೊಂದು ಅಲ್ಲಿಂದ ಮನೆಗೆ ಬಂದ ಚಿಕ್ಕಮ್ಮ, ಫ್ಯಾನಿಗೆ ಸೀರೆ ಕಟ್ಟಿ..! ಪಾಪ… ಆದರೂ ಚಿಕ್ಕಮ್ಮನಿಗೆ ಅವನನ್ನ ಮರೆಯೋಕ್ಕೆ ಆಗಲೇ ಇಲ್ಲ ನೋಡು..? ಮದುವೆಯನ್ನೇ ಮಾಡಿಕೊಳ್ಳದೆ ಹಾಗೇ ಉಳಿದುಬಿಟ್ಟರು! ಎಷ್ಟಿರಬಹುದು ಅವರಿಗೆ ವಯಸ್ಸೀಗ..? ಐವತ್ತು..? ಊಂ.. ಅಮ್ಮನಿಗೆ ಐವತ್ತೆರಡು ಅಂದರೆ, ಅವರು ಅಮ್ಮನಿಗಿಂತ ಎರಡು ವರ್ಷ ಚಿಕ್ಕವರಿರಬಹುದು ಅಂದುಕೊಂಡರೆ, ಐವತ್ತು ಅಲ್ಲವ!? ಈಗಲೂ ಅವರು ಮನಸ್ಸು ಮಾಡಿದರೆ… ಹುಂ… ಎಲ್ಲಿ..? ಇಬ್ಬರು ಒಂಟಿ ಹೆಂಗಸರು ಒಬ್ಬರಿಗೊಬ್ಬರು ಜೊತೆಯಾಗಿ ಇದ್ದುಬಿಟ್ಟರು!

(ಕೃತಿ: ಚಿತ್ತರಂಗ (ಕಾದಂಬರಿ), ಲೇಖಕರು: ಆಶಾ ರಘು, ಪ್ರಕಾಶಕರು: ಸಾಹಿತ್ಯ ಲೋಕ ಪಬ್ಲಿಕೇಷನ್ಸ್‌, ಬೆಲೆ: 370/-)