Advertisement
ದಾರಿ ಯಾವುದಯ್ಯಾ….?: ಸುಧಾ ಆಡುಕಳ ಅಂಕಣ

ದಾರಿ ಯಾವುದಯ್ಯಾ….?: ಸುಧಾ ಆಡುಕಳ ಅಂಕಣ

“ನಿಮ್ಮ ದೇವರ ಜಮೀನು ಕೇಳ್ತೇನೆ ಅಂತ ತಪ್ಪು ತಿಳಿಯಬೇಡಿ. ಒಂದು ಮನೆಗಾಗುವಷ್ಟು, ಜತೆಗೆ ರಸ್ತೆಗೊಂದು ದಾರಿಯಾಗುವಷ್ಟು ಜಾಗ ಬಿಟ್ಟುಕೊಟ್ಟರೆ ನಾವು ಮುಂದಿನ ಮಳೆಗಾಲದಲ್ಲಿ ಬದುಕ್ತೀವಿ. ಇಲ್ಲಾಂದ್ರೆ ಎಲ್ಲೋ ದೂರದಲ್ಲಿ ಮನೆಕಟ್ಟಿ ಈ ಜಮೀನಿಗೆ ಓಡಿಯಾಡೋದೆಲ್ಲ ಆಗಿಹೋಗುವ ಮಾತಲ್ಲ. ನೋಡಿ, ಒಂದು ಮನಸು ಮಾಡಿ. ಮತ್ತೆ ನಂಗೆ ನೀವು ಧರ್ಮಕ್ಕೆ ಕೊಡೂದೇನೂ ಬ್ಯಾಡ. ಮುಂದಿನ ಬೆಳೆ ಅಡವಿಟ್ಟಾದರೂ ನಿಮ್ಮ ಮಸೀದಿಗೆ ಆ ಹಣವನ್ನು ಕಾಣಿಕೆ ಹಾಕ್ತೇನೆ.” ಎಂದು ಬೇಡಿಕೊಂಡರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನೈದನೆಯ ಕಂತು ನಿಮ್ಮ ಓದಿಗೆ

ಜೀರ್ ಎಂದು ಸುರಿಯುವ ಮಳೆಗಾಲದ ದಿನವದು. ಮನೆಯ ಸಂಧಿಗಳಲ್ಲಿರುವ ಇರುವೆ ಗೂಡೊಳಗೆ ಕೊಂಚ ನೀರು ನುಗ್ಗಿರಬೇಕು. ದೊಡ್ಡ, ಚಿಕ್ಕ ಇರುವೆಗಳ ದಂಡು ಇದ್ದಕ್ಕಿದ್ದಂತೆ ಮೇಲೆದ್ದು ಬಂದು ನೆಲದ ಮೇಲೆ ಕಾಲಿಡದಂತೆ ವ್ಯಾಪಿಸಿಬಿಟ್ಟಿದ್ದವು. ಕೊಂಚ ಮಳೆಯ ನೀರು ಎರಚುವ ಹೊರಚಾವಡಿಗೆ ಇರುವೆಗಳು ಕಾಲಿಟ್ಟಿರಲಿಲ್ಲ. ಊಟಮಾಡಲು ಬಿಡದಂತೆ ಆವರಿಸಿದ ಇರುವೆಗಳನ್ನು ನೋಡಿ ಕೋಪಗೊಂಡ ನೀಲಿಯ ಅಪ್ಪ ಮಡಲಿನ ಸೂಡಿ ಹೊತ್ತಿಸಿ ಅವುಗಳನ್ನೆಲ್ಲ ಸುಟ್ಟುಬಿಡಲು ಯೋಜಿಸಿದರು. ಆದರೆ ನೀಲಿಯ ಅಮ್ಮ ಮಾತ್ರ ಸುತಾರಾಂ ಇರುವೆಗಳ ಕಗ್ಗೊಲೆಗೆ ಒಪ್ಪಲೇ ಇಲ್ಲ. “ಮಳೆಯಲ್ಲಿ ನಮ್ಮನೆ ತೊಳೆದು ಹೋಯ್ತು ಅಂದ್ರೆ ಏನು ಮಾಡ್ತೇವೆ? ಹತ್ತಿರದವರ ಮನೆಯ ಬಾಗಿಲು ತಟ್ಟುದೆಯಾ. ಅವುಗಳಿಗೂ ಇದು ಅಂಥದ್ದೇ ಕಷ್ಟಕಾಲ. ಇಲ್ಲದಿದ್ರೆ ಹೀಗೆ ಎದ್ದು ನಮಗೆ ಉಪದ್ರ ಮಾಡ್ತಿದ್ವಾ? ಸುಡೂದು ಗಿಡೂದು ಏನೂ ಬ್ಯಾಡ. ಸುಮ್ನೆ ಹೊರಗೆ ಚಾವಡಿಯಲ್ಲಿ ಕೂತ್ಕೊಳ್ಳಿ. ಅಲ್ಲಿಗೇ ತಂದು ಬಡಿಸ್ತೇನೆ” ಎಂದು ಟೊಂಕ ಕಟ್ಟಿದರು. ಎಲ್ಲರೂ ಮನೆಯ ಚಾವಡಿಯಲ್ಲಿಯೇ ಕುಳಿತು ಊಟ ಮಾಡುವುದು ಒಂಥರಾ ಮಜವೆಂದು ನೀಲಿಗೆ ಅನಿಸಿತು. ಆದರೆ ಊಟದ ನಡುವೆಯೇ ಕಪ್ಪು ಚಾರಟೆ ಹುಳವೊಂದು ಹರೆದು ಬಂದು ಮಜಾವನ್ನು ಕಸಿದುಬಿಟ್ಟಿತು. ಅಮ್ಮ ಹಿಡಿಸೂಡಿ ತಾಗಿಸಿದ ಕೂಡಲೇ ಚಕ್ಕುಲಿಯಂತೆ ಮುರುಟಿಕೊಂಡು ನಿಶ್ಚಲವಾಯಿತು. ಮತ್ತೆ ಊಟ ಶುರುಮಾಡುವುದರೊಳಗೆ ಮರಿಕಪ್ಪೆಯೊಂದು ಹಾರುತ್ತಾ ಬಂದು ಇನ್ನೆಲ್ಲಿ ಊಟದ ತಟ್ಟೆಗೆ ಹಾರಿಬಿಡುವುದೋ ಎಂದು ಗಾಬರಿಯಾಯಿತು. ಅದನ್ನಿನ್ನು ಓಡಿಸಿದರೆ ಯಾರಾದರೊಬ್ಬರ ಮೈಮೇಲೆ ಜಿಗಿದು ಅಧ್ವಾನವಾದೀತೆಂದು ಅಮ್ಮ ಅದರ ಮೇಲೊಂದು ಲೋಟವನ್ನು ಬೋರಲು ಹಾಕಿದರು. ಅರೆ! ಎಂಥ ಉಪಾಯವಿದು ಎನಿಸಿತು ನೀಲಿಗೆ.

ಊಟ ಮುಗಿದ ಕೂಡಲೇ ಬೀಡಿ ಹೊತ್ತಿಸಲೆಂದು ಒಳಗೆ ಹೋದ ಅಪ್ಪ ಕಾಲನ್ನು ಕೆರೆದುಕೊಳ್ಳುತ್ತಾ, “ದರಿದ್ರ ಇರುವೆಗಳು. ರಾತ್ರಿಯೇ ಬಂದು ತ್ರಾಸು ಕೊಡ್ತವೆ. ಆಚೆಗೆ ಸುಟ್ಟು ಬಿಸಾಕುವ ಅಂದ್ರೆ ಇವಳದ್ದೊಂದು ವರಾತ.” ಎಂದು ಅಮ್ಮನಿಗೆ ರೇಗಿದರು. ಅಮ್ಮ ಒಂದಿನಿತೂ ಬೇಸರಿಸಿಕೊಳ್ಳದೇ ತನ್ನನ್ನು, ಅಪ್ಪನನ್ನು ದಿಟ್ಟಿಸುತ್ತಿದ್ದ ನೀಲಿಯನ್ನು ನೋಡುತ್ತಾ ಹೇಳತೊಡಗಿದಳು, “ನಾವು ಇಲ್ಲಿ ಬಂದು ಮನೆ ಕಟ್ಕೊಂಡು ಇದು ನಮ್ದು ಅಂತ ಅಹಂಕಾರ ಪಡ್ತೇವೆ. ನಾವು ಮನೆ ಕಟ್ಟೋದಕ್ಕೆ ಮುಂಚೇನೆ ಅವೆಲ್ಲ ಇಲ್ಲಿದ್ವು ಅನ್ನೋದನ್ನ ಮರೆತುಬಿಡ್ತೇವೆ. ಗೂಡಿಗೇನೋ ನೀರು ಹೋಗಿರಬೇಕು, ಗಾಬರಿಯಿಂದ ಹೊರಗೆ ಬಂದಿವೆ. ಇಲ್ಲಾಂದ್ರೆ ಇರುವೆಗಳು ಸಾಲು ಬಿಟ್ಟು ಹೀಗೆ ಬರೋದುಂಟೆ? ನಾಳೆ ಬೆಳಗಾದ್ರೆ ಇನ್ನೆಲ್ಲೋ ದಾರಿ ಹುಡುಕಿ ಹೋಗ್ತವೆ.” ನೀಲಿಗೆ ಇದೊಂದು ಭಯಂಕರ ವಿಪರ್ಯಾಸವೆನಿಸಿ ಅಮ್ಮನನ್ನು ಕೇಳಿದಳು, “ಇರುವೆ ಬಂದರೆ ಸರಿ, ಹಾವು ಬಂದ್ರೂ ಮನೆಯೊಳಗೆ ಇಟ್ಕೊಳ್ತೀಯೋ ಹೇಗೆ?” ಅಮ್ಮ ನೀಲಿಯ ಕಿವಿಹಿಡಿದು ಹೇಳಿದಳು, “ಹೌದು, ಹಾವು ಬಂದ್ರೆ ನಿನ್ನ ಜಡೆಗೆ ಸೇರಿಸಿ ಹೆಣೆದು ಇಡ್ತೇನೆ ನೋಡು. ಆಗ ನಿನ್ನ ಮೋಟು ಜಡೆ ಉದ್ದ ಆಗ್ತದೆ.” ಅಮ್ಮನ ಮಾತಿಗೆ ನೀಲಿ, “ಇಶ್ಶೀ…” ಎಂದು ಮೋಟು ಜಡೆಯನ್ನು ಅಲ್ಲಾಡಿಸಿದಳು.

ಅಂತೂ ಇರುವೆಯ ಕಾರಣದಿಂದಾಗಿ ಎಲ್ಲರೂ ಅಂಗಳದ ನೀರು ತುಸುವೇ ಸಿಡಿಯುತ್ತಿದ್ದ ಚಾವಡಿಯಲ್ಲಿಯೇ ಉದ್ದಕ್ಕೆ ಹಸೆ ಹಾಸಿ ಮಲಗಿಯಾಯಿತು. ನಿದ್ದೆ ಪೂರ್ತಿ ಆವರಿಸಿದ ಹೊತ್ತು ಗೋಡೆಯಂಚಿಗೆ ಮಲಗಿದ್ದ ನೀಲಿಯ ಮೈ ತಣ್ಣಗಾಗುತ್ತ ಬಂದಂತಾಯಿತು. ತಿರುಗಿ ಮಲಗಿದ ಅವಳಿಗೆ ಅರೆನಿದ್ದೆಯಲ್ಲಿ ಕನಸು. ಹರಿವ ನೀರಿನಲ್ಲಿ ತೇಲಿ ಹೋಗುತ್ತಿದ್ದ ಹಾಗೆ, ತನ್ನೊಂದಿಗೆ ಹೊಳೆಯ ಮೀನುಗಳು ಈಜುತ್ತಿದ್ದ ಹಾಗೆ, ಅವುಗಳನ್ನು ಎರಡೂ ಕೈಯ್ಯಲ್ಲಿ ಬಾಚಿ ಹಿಡಿದು ಪುಳಕ್ಕನೆ ಬಿಟ್ಟ ಹಾಗೆ……….. ಹಾಗೆ ಹಿಡಿದಾಗೊಮ್ಮೆ ಉದ್ದದ ಮೀನು ಕೈಗೆಟುಕಿ, ಅದನ್ನು ಹೀಗೆ ಹಿಡಿದು ಮೇಲೆತ್ತಿದಾಗ ಹಾವೆಂದು ತಿಳಿದು ಬೆಚ್ಚಿಬಿದ್ದಳು. ಅವಳು ಕಿರುಚಿದ ಸದ್ದಿಗೆ ಅಮ್ಮ ಎಚ್ಚೆತ್ತು ಅಲ್ಲಿಯೇ ಇದ್ದ ಬ್ಯಾಟರಿಯಿಂದ ಬೆಳಕು ಬಿಟ್ಟಳು. ಅರೆ! ನೀಲಿಯ ಹಸೆ ನೀರಿನಲ್ಲಿ ತೇಲುವಷ್ಟು ಒದ್ದೆಯಾಗಿತ್ತು. ತಕ್ಷಣ ಗಡಬಡಿಸಿ ಎಲ್ಲರನ್ನೂ ಎಬ್ಬಿಸಿದವಳೇ ಹೊರಬಂದು ನೋಡಿದರೆ ಮನೆಯ ಅಂಚಿನಲ್ಲಿರುವ ಧರೆ ಮನೆಯ ಮೇಲೆಯೇ ಕುಸಿದಿತ್ತು. ಮನೆಯ ಹಿಂದಿನ ಅರ್ಧಭಾಗವನ್ನು ಆಕ್ರಮಿಸಿ ಚಾವಡಿಯವರೆಗೂ ಮಣ್ಣಿನ ರಾಶಿ ಚಾಚಿಕೊಂಡಿತ್ತು. ಇನ್ನೇನು ಮನೆ ಕುಸಿದೇ ಬೀಳುವುದೆಂಬ ಸ್ಥಿತಿಯಲ್ಲಿ ಎಲ್ಲರೂ ಗಡಬಡಿಸಿ ಹೊರಬಂದರು. ನೀಲಿಯ ಅಪ್ಪ ಬ್ಯಾಟರಿ ಹಿಡಿದು ಅಕ್ಕಪಕ್ಕದವರ ಮನೆಯವರನ್ನು ಕರೆತಂದರು. ನಡುರಾತ್ರಿಯಲ್ಲಿ ಏನು ಮಾಡಲೂ ತೋಚದೇ, ದುಡ್ಡು, ಕಾಸು, ಪಾತ್ರೆ, ಪಗಡೆಗಳನ್ನು ಕಟ್ಟಿಕೊಳ್ಳಲು ಒಳಹೋಗಲೂ ಭಯವಾಗಿ ಉಟ್ಟ ಬಟ್ಟೆಯಲ್ಲಿಯೇ ಪಕ್ಕದ ಮನೆಗೆ ಹೋಗಿ ಮಲಗಿದರು. ಬೆಳಗಾಗೆದ್ದ ಅಪ್ಪ ಎಲ್ಲರಲ್ಲಿಯೂ “ನಮ್ಮೂರ ಮಾರಮ್ಮನೇ ನಿನ್ನೆ ಇರುವೆಗಳ ರೂಪದಲ್ಲಿ ಬಂದಿರಬೇಕು. ಇಲ್ಲವಾದಲ್ಲಿ ಈ ಮಕ್ಕಳು ಹೆಂಗಸರೆಲ್ಲ ಮನೆಯೊಳಗೆ, ನಾನೊಬ್ಬನೇ ಹೊರಗೆ ಮಂಚದಲ್ಲಿ ಮಲಗುತ್ತಿದ್ದೆ. ದರೆ ಕುಸಿದು ಇಡಿಯ ಮನೆ ಮೈಮೇಲೆ ಬಿದ್ದರೂ ಎಚ್ಚರವಾಗುತ್ತಿರುಲಿಲ್ಲ.” ಎಂದು ಢಂಗೂರ ಸಾರಿದರು. ನೀಲಿಯ ಅಮ್ಮ ಮಾತ್ರ, “ನಾವು ಒಬ್ರನ್ನು ಕಾಯ್ದರೆ ನಮ್ಮನ್ನು ಕಾಯುವವನು ಇನ್ನೊಬ್ಬನಿರುತ್ತಾನೆ.” ಎಂದು ಆಧ್ಯಾತ್ಮ ನುಡಿದರು.

ಇಡಿಯ ಮನೆಯೇನು ಉರುಳದಿದ್ದರೂ ಮರುದಿನವಿಡೀ ಮನೆಯೊಳಗೆ ಹೋಗಲಾರದಷ್ಟು ಅಧ್ವಾನಗಳು ಆಗಿಹೋಗಿದ್ದವು. ಹೊಳೆಸಾಲಿನ ಎಲ್ಲರೂ ಸಾಲಲ್ಲಿ ಬಂದು ಮೊದಲು ಮನೆಯ ಮಾಡಿನವರೆಗೂ ಕುಸಿದ ಮಣ್ಣಿನ ರಾಶಿಯನ್ನು ಖುಲ್ಲ ಮಾಡಿದರು. ಮತ್ತೆ ಮನೆಯ ಗೋಡೆಯಿರುವಲ್ಲಿಗೆ ಮರದ ಒಂದಿಷ್ಟು ಎಳೆಗಳನ್ನು ಆಧಾರವಾಗಿ ಸಿಕ್ಕಿಸಿ ಮಾಡು ಬೀಳದಂತೆ ಎತ್ತಿ ನಿಲ್ಲಿಸಿದರು. ನೀರು ಮನೆಯೊಳಗೆ ನುಗ್ಗದಂತೆ ಬಸಿಗಾಲುವೆಗಳನ್ನು ದರೆಯಂಚಿಗೆ ತೋಡಿದರು. ಎಷ್ಟಾದರೂ ಇನ್ನು ಮನೆಯೊಳಗಿರುವುದು ಅಪಾಯವೆ ಎಂಬ ಮಾತು ಎಲ್ಲರಿಂದಲೂ ಕೇಳಿಬಂತು ಸುರಿವ ಮಳೆಗಾಲದಲ್ಲಿ ಹೋಗುವುದಾದರೂ ಎಲ್ಲಿಗೆಂದು ತಿಳಿಯದೇ ನೀಲಿಯ ಅಪ್ಪ, ಅಮ್ಮ ಗಾಬರಿಗೊಂಡರು. ಅಂತೂ ಮಳೆಯೊಂದು ಕಡಿಮೆಯಾಗುವವರೆಗೆ ಹಗಲಿಡೀ ಆ ಮನೆಯಲ್ಲಿದ್ದು ರಾತ್ರಿ ಮಲಗಲು ಸುಭದ್ರಮ್ಮನ ಮನೆಗೆ ಹೋಗುವುದೆಂದು ಮಾತುಕತೆಯಾಯಿತು. ನೀಲಿಯ ಅಮ್ಮ ತನ್ನ ಟ್ರಂಕಿನಲ್ಲಿರುವ ಪುಡಿಗಾಸು ಮತ್ತು ತೊಲ ತೂಕದ ಚಿನ್ನವನ್ನೆಲ್ಲ ಸುಭದ್ರಮ್ಮನ ಕಪಾಟಿಗೆ ವರ್ಗಾಯಿಸಿದಳು.

ಆದರೆ ಈ ದರೆಯ ಕುಸಿತ ತೀರ ಅನಿರೀಕ್ಷಿತವೇನೂ ಆಗಿರಲಿಲ್ಲ. ಹೆಂಚಿನ ಮಣ್ಣಿನ ಸಾಗಾಟಕ್ಕೆಂದು ಮಾಡಿದ್ದ ಮಣ್ಣಿನ ರಸ್ತೆಗೆ ಡಾಂಬರು ಬೇಕೆಂದು ಹೊಳೆಸಾಲು ಯುವಕ ಸಂಘ ಮೇಲಿನವರಿಗೆ ಅರ್ಜಿ ಸಲ್ಲಿಸಿತ್ತು. ಯುವಪಡೆಯ ಮಾತಿಗೆ ಮನ್ನಣೆ ದೊರೆತು ರಸ್ತೆ ಮಾಡುವ ಯೋಜನೆಯೂ ಜಾರಿಗೆ ಬಂತು. ಆದರೆ ಇದ್ದ ರಸ್ತೆಗೆ ಜೆಲ್ಲಿ ಹಾಸಿ ಡಾಂಬರು ತುಂಬಿಸಿ ಹೋಗುತ್ತಾರೆಂಬ ಹಳ್ಳಿಯವರ ನಿರೀಕ್ಷೆ ಮಾತ್ರ ಸುಳ್ಳಾಯಿತು. ಟೇಪು ಹಿಡಿದು ಅಳೆಯುತ್ತ ಬಂದ ತಂಡ ಅದೇನೋ ನಕಾಶೆ ನೋಡುತ್ತ, ಅದಕ್ಕೆ ಸರಿಯಾಗಿ ಬಾಂದು ಕಲ್ಲುಗಳನ್ನು ನೆಡುತ್ತ, ಎಲ್ಲಿಂದೆಲ್ಲಿಗೋ ಗೆರೆ ಎಳೆಯುತ್ತ ನಡೆಯಿತು. ಹಾಗೆ ಎಳೆದ ಗೆರೆ ನೀಲಿಯ ಮನೆಯ ಮೇಲಿರುವ ದರೆಯ ಮೇಲೆಯೇ ಹಾದುಹೋಗುತ್ತಿತ್ತು. ಅಲ್ಲಿ ದರೆಯ ತುದಿಯನ್ನು ಅಗೆದು ಮಣ್ಣನ್ನು ಮನೆಯಿರುವ ತಗ್ಗಿಗೆ ಎರಚುತ್ತ ಬಂದಾಗಲೇ ನೀಲಿಯ ಅಪ್ಪ ಹೋಗಿ ತಕರಾರು ಮಾಡಿದ್ದರು. ಅಲ್ಲಿಂದ ಕೆಳಗೆ ಈಗಾಗಲೇ ಇರುವಲ್ಲಿಯೇ ರಸ್ತೆ ಮಾಡಿರೆಂದು ವಿನಂತಿಸಿದ್ದರು. ಆದರೆ ರಸ್ತೆ ಕಂತ್ರಾಟುದಾರ ಮಾತ್ರ ಹಾಗೆಲ್ಲ ಸರಕಾರಿ ರಸ್ತೆಯನ್ನು ಎಲ್ಲೆಂದರಲ್ಲಿ ಮಾಡಲಾಗದೆಂದೂ, ಅದು ಸರಕಾರಿ ಜಮೀನಿನಲ್ಲಿ ಮಾತ್ರವೇ ಹಾದುಹೋಗಬೇಕೆಂದು ಕಾನೂನು ಹೇಳಿದ್ದ. ಕೆಳಗಿದ್ದ ಜಾಗವೂ ಸರಕಾರದ್ದೇ ಅಲ್ಲವೆ? ಎಂಬ ನೀಲಿಯ ಅಪ್ಪನ ಪ್ರಶ್ನೆಗೆ ಅಲ್ಲವೆಂದು ತಲೆಯಲ್ಲಾಡಿಸಿದ್ದ. ಅನೂಚಾನವಾಗಿ ತಮ್ಮ ಜಮೀನಿನ ಮೇಲಿದ್ದ ಜಾಗವೆಲ್ಲವೂ ಸರಕಾರದ್ದೇ ಎಂದು ನಂಬಿದ್ದ ಊರಿನವರು ರಸ್ತೆ ಮಾಡಿಸುವವರಿಗೆ ತಲೆಸರಿಯಿಲ್ಲವೆಂಬ ತೀರ್ಮಾನಕ್ಕೆ ಬಂದಿದ್ದರು. ಹಾಗಾದರೂ ಸುರಿವ ಮಳೆಯಲ್ಲಿ ಮಣ್ಣು ಕುಸಿಯಬಹುದೆಂದು ಎಲ್ಲರಿಗೂ ಅರಿವಿತ್ತು. ರಾತ್ರಿ ಕುಸಿದರೂ ಯಾರಿಗೂ ಏನೂ ಆಗದಿರುವುದೇ ಮಾರಮ್ಮನ ದಯೆಯೆಂದು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದರು.

ನೀಲಿಯ ಅಮ್ಮ ಮಾತ್ರ ಸುತಾರಾಂ ಇರುವೆಗಳ ಕಗ್ಗೊಲೆಗೆ ಒಪ್ಪಲೇ ಇಲ್ಲ. “ಮಳೆಯಲ್ಲಿ ನಮ್ಮನೆ ತೊಳೆದು ಹೋಯ್ತು ಅಂದ್ರೆ ಏನು ಮಾಡ್ತೇವೆ? ಹತ್ತಿರದವರ ಮನೆಯ ಬಾಗಿಲು ತಟ್ಟುದೆಯಾ. ಅವುಗಳಿಗೂ ಇದು ಅಂಥದ್ದೇ ಕಷ್ಟಕಾಲ. ಇಲ್ಲದಿದ್ರೆ ಹೀಗೆ ಎದ್ದು ನಮಗೆ ಉಪದ್ರ ಮಾಡ್ತಿದ್ವಾ? ಸುಡೂದು ಗಿಡೂದು ಏನೂ ಬ್ಯಾಡ. ಸುಮ್ನೆ ಹೊರಗೆ ಚಾವಡಿಯಲ್ಲಿ ಕೂತ್ಕೊಳ್ಳಿ. ಅಲ್ಲಿಗೇ ತಂದು ಬಡಿಸ್ತೇನೆ” ಎಂದು ಟೊಂಕ ಕಟ್ಟಿದರು.

ಇನ್ನಿದು ಆಗುವ ಪಂಚಾಯಿತಿಯಲ್ಲವೆಂದು ನೀಲಿಯ ಅಪ್ಪ ತಮ್ಮ ಜಮೀನಿನ ನಕಾಶೆಯನ್ನು ಹಿಡಿದುಕೊಂಡು ಸರಕಾರಿ ಆಫೀಸಿನ ಬಾಗಿಲು ತಟ್ಟಿದರು. ದರೆಗೆ ಅಂಟಿಕೊಂಡಿದ್ದ ಅವರ ಜಮೀನಿನಲ್ಲಿ ಎಲ್ಲಿ ಮನೆ ಕಟ್ಟಿದರೂ ಅಪಾಯವೆ. ತೋಟದ ಕೆಳಗೆ ಕಟ್ಟೋಣವೆಂದರೆ ಹೊಳೆಯ ಅಬ್ಬರಕ್ಕೆ ಮನೆಯೇ ತೊಳೆದುಹೋದೀತೆಂಬ ಭಯ. ಇನ್ನುಳಿದದ್ದು ಜಮೀನಿಗೆ ತಾಗಿಕೊಂಡಿರುವ, ರಸ್ತೆಯಿಂದ ತುಸುವೇ ಕೆಳಗಿರುವ ಖುಷ್ಕಿ ಜಾಗ. ಅದು ಸರಕಾರದ್ದಲ್ಲವೆಂದರೆ ಯಾರದಿದ್ದೀತು ಎಂದು ನೋಡೇಬಿಡುವ ಅಂತ ಅವರು ಕಛೇರಿಯ ಒಳಗೆ ಬಂದಿದ್ದರು. ಇನ್ಯಾರದ್ದಾದರೂ ಆದರೆ ತುಸು ಜಾಗವನ್ನು ಕ್ರಯಕ್ಕಾದರೂ ಕೊಂಡು ಒಂದು ಸಣ್ಣ ಮನೆಯನ್ನು ಮುಂದಿನ ಮಳೆಗಾಲದ ಒಳಗೆ ಕಟ್ಟಿಬಿಡಬೇಕೆಂದು ನಿರ್ಧರಿಸಿಯೇ ಅಲ್ಲಿಗೆ ಹೋದರು. ಇವರ ವಿವರಣೆಯೆಲ್ಲವನ್ನೂ ಕೇಳಿದ ಗುಮಾಸ್ತ ನಕ್ಷೆಯನ್ನು ಪರಿಶೀಲಿಸಿ ಹೊಳೆಸಾಲಿನ ಎಲ್ಲ ಮನೆಯವರ ತೋಟದ ಮೇಲೆ ಸರಕಾರಿ ಜಮೀನಿಗಿಂತ ಕೆಳಗೆ ಹರಡಿರುವ ಎಲ್ಲ ನೆಲವೂ ಮಸೀದಿಗೆ ಸೇರಿದ್ದೆಂದು ತಿಳಿಸಿದ. ನೀಲಿಯ ಅಪ್ಪನಿಗೆ ಒಮ್ಮೆಲೆ ತಲೆತಿರುಗಿದಂತಾಯಿತು. ಇಡಿಯ ಹೊಳೆಸಾಲಿನಲ್ಲಿ ಹುಡುಕಿದರೂ ಒಂದೂ ಮುಸಲರ ಮನೆಯಿರಲಿಲ್ಲ. ಹೀಗಿರುವಾಗ ಎಲ್ಲರ ಜಮೀನಿಗೆ ಅಂಟಿಕೊಂಡಂತೆ ಚಾಚಿರುವ ಖುಷ್ಕಿ ಜಮೀನೆಲ್ಲವೂ ಮಸೀದಿಯದ್ದಾಗಿರಲು ಹೇಗೆ ಸಾಧ್ಯ? ಎಂದು ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ. ಗಡಬಡಿಸಿ ಊರಿಗೆ ಬಂದವನೇ ಊರಿನಲ್ಲಿರುವ ಹಿರಿಯರನ್ನೆಲ್ಲ ಇದರ ಬಗ್ಗೆ ವಿಚಾರಿಸಿದ. ಅವರಿಗೂ ಯಾವ ಮಾಹಿತಿಯೂ ಇರಲಿಲ್ಲ. ಮುಂದೇನು ಮಾಡುವುದೆಂದು ಹೊಳೆಯದೇ ಕಛೇರಿಯ ಗುಮಾಸ್ತ ನೀಡಿದ ಮಸೀದಿಯ ವಿಳಾಸವನ್ನು ಹುಡುಕಿ ಹೊರಟ.

ವಿಷಯವನ್ನು ಕೇಳಿದ ಮಸೀದಿಯ ಕಮೀಟಿಯವರು ತಮಗೂ ಇದರ ಬಗ್ಗೆ ಏನೂ ತಿಳಿದಿಲ್ಲವೆಂದು ಒಪ್ಪಿಕೊಂಡರು. ಹೊಳೆಸಾಲಿಗೆ ಸದಾ ಬರುವ ಮುಮ್ಮದೆ ಬ್ಯಾರಿಗಳು ಅಲ್ಲಿಯ ಜನರೆಲ್ಲರೂ ಎಷ್ಟೊಂದು ಒಳ್ಳೆಯವರೆಂದು ತಮ್ಮ ಕಮೀಟಿಯವರಿಗೆ ಮನವರಿಕೆ ಮಾಡಿಕೊಡಲು ಶ್ರಮಿಸುತ್ತಲೇ ಇದ್ದರು. ಅಂತೂ ಕೊನೆಯಲ್ಲಿ ಕಮೀಟಿಯ ಒಂದಿಷ್ಟು ಸದಸ್ಯರು ಜಾಗವೀಕ್ಷಣೆಗೆಂದು ಅಲ್ಲಿಗೆ ಬರಲು ಒಪ್ಪಿದರು. ಜತೆಯಲ್ಲಿ ಏನೇ ತೀರ್ಮಾನ ತೆಗೆದುಕೊಳ್ಳುವುದಿದ್ದರೂ ಕಮೀಟಿಯ ಎಲ್ಲರ ಒಪ್ಪಿಗೆ ಮುಖ್ಯವೆಂದು ನೀಲಿಯ ಅಪ್ಪನಿಗೆ ಒತ್ತಿ ಹೇಳಿದರು.

ಸಾಹೇಬರ ತಂಡ ಮನೆಗೆ ಬರುವ ದಿನ ನೀಲಿಯ ಅಮ್ಮ ಅವರಿಗೆಂದು ವಿಶೇಷವಾದ ಖಾದ್ಯಗಳನ್ನು ಮಾಡಿದಳು. ನೀರು, ಮಣ್ಣು ತುಂಬಿರುವ ಚಾವಡಿಯನ್ನು ಕೊಂಚ ಸಾರಿಸಿ, ಅದರ ಮೇಲೆ ಬೆಚ್ಚಗೆ ಕಂಬಳಿಯನ್ನು ಹರಡಿ ಹತ್ತು ಸಮಸ್ತರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದರು. ಈಗ ಬಂದಾರ, ಇನ್ನೊಂದು ಕ್ಷಣದಲ್ಲಿ ಬಂದಾರು ಎಂದು ಕುತ್ತಿಗೆ ಚಾಚಿ ಕಾಯುತ್ತಿದ್ದರು. ಒಳಗೆ ಒಲೆಯಲ್ಲಿ ಚಹಾಕ್ಕೆಂದು ಇಟ್ಟಿದ್ದ ನೀರು ಕಾದು ಮರಳುವಂತೆ ಮನೆಯವರೆಲ್ಲರ ಮನದೊಳಗಿನ ಒಳಗುದಿಯೂ ಕುದಿಯುತ್ತಿತ್ತು. ಟಾಟಾ ಸುಮೋ ಗಾಡಿಯಲ್ಲಿ ಬಂದಿಳಿದ ಕಮೀಟಿಯವರು ಜಾಗವನ್ನೆಲ್ಲ ನೋಡಿದರು. ಹಾಗೆಯೇ ಹೊರಟವರನ್ನು ನೀಲಿಯ ಅಪ್ಪ ಒತ್ತಾಯ ಮಾಡಿ ಮನೆಯವರೆಗೂ ಕರೆತಂದರು. ಹಾಗೆ ಬಂದವರಲ್ಲಿ ಒಬ್ಬರು ತನಗೆ ತೀರ ಪರಿಚಿತರೆಂದು ನೀಲಿಗೆ ಅನಿಸಿತಾದರೂ ಯಾರೆಂದು ತಕ್ಷಣ ಹೊಳೆಯಲಿಲ್ಲ. ಹತ್ತಿರ ಬಂದಾಗ ಫಕ್ಕನೆ ಹೊಳೆಯಿತು. ತಮ್ಮ ಶಾಲೆಯ ಗೌಡಾ ಮಾಸ್ರ‍್ರು ರಜೆಯ ಮೇಲೆ ಹೋದಾಗ ಡೆಪ್ಯೂಟೇಶನ್ ಬರುತ್ತಿದ್ದ ಮುಲ್ಲಾ ಮಾಸ್ರ‍್ರೇ ಇವರು ಎಂದು. ಅಂಗಳಕ್ಕೆ ಕಾಲಿಟ್ಟೊಡನೆಯೆ ಅವರಿಗೆ ಎರಡೂ ಕೈಜೋಡಿಸಿ, “ನಮಸ್ತೇ ಸರ್” ಎಂದಳು. ಮುಲ್ಲಾ ಮಾಸ್ರ‍್ರಿಗೆ ತಕ್ಷಣ ನೀಲಿಯ ಗುರುತು ಹತ್ತಿ, “ಅರೆ! ತೇರಿ ನಾಕೆ ಸಿತೆ. ಇದು ನಿಮ್ಮ ಮನೆ? ಇವರು ನಿಮ್ಮ ಅಪ್ಪ ಅಂತ ನಂಗೆ ಹೊಳೀಲೆ ಇಲ್ಲ ನೋಡು ಬೇಟಿ. ಅರೆ! ಅಲ್ಲಾ, ರಾತ್ರಿ ಮಲಗಿದಾಗ ಹೀಗೆ ಮನೆಯ ಮೇಲೆ ಗುಡ್ಡ ಬಿದ್ರೆ ಕಿಸ್ಮತ್ ಏನು? ಏನೋ ನಸೀಬು ಚಲೋ ಇತ್ತು, ಆ ದೇವಾ ನಿಂಗೆ ಎಚ್ಚರ ಮಾಡಿದ. ಹಾಗೆ ಮಲಗಿದಾಗಲೇ ಮನೆಬಿದ್ರೆ ಕ್ಯಾ ಕರೂ ಬೇಟಿ?” ಎನ್ನುತ್ತಾ ನೀಲಿಯನ್ನು ತಬ್ಬಿಕೊಂಡರು. ಅಮ್ಮ ನೀಡಿದ ತಿಂಡಿಯನ್ನು ತಿಂದು ಚಹಾ ಕುಡಿಯುತ್ತಾ ನೀಲಿ ತಾವು ಶಾಲೆಗೆ ಬಂದಾಗಲೆಲ್ಲ ಹೇಳುತ್ತಿದ್ದ ಹಾಡುಗಳನ್ನು, ಕತೆಗಳನ್ನು, ಊರಿನ ಸುದ್ದಿಗಳನ್ನೆಲ್ಲ ತಮ್ಮೊಂದಿಗೆ ಬಂದವರಿಗೆ ಹೇಳಿದರು. ಎಲ್ಲ ಮುಗಿದು ಹೊರಡುವಾಗ ನೀಲಿಯ ಅಪ್ಪ ಅವರೆಲ್ಲರಿಗೆ ಕೈಮುಗಿದು, “ನಿಮ್ಮ ದೇವರ ಜಮೀನು ಕೇಳ್ತೇನೆ ಅಂತ ತಪ್ಪು ತಿಳಿಯಬೇಡಿ. ಒಂದು ಮನೆಗಾಗುವಷ್ಟು, ಜತೆಗೆ ರಸ್ತೆಗೊಂದು ದಾರಿಯಾಗುವಷ್ಟು ಜಾಗ ಬಿಟ್ಟುಕೊಟ್ಟರೆ ನಾವು ಮುಂದಿನ ಮಳೆಗಾಲದಲ್ಲಿ ಬದುಕ್ತೀವಿ. ಇಲ್ಲಾಂದ್ರೆ ಎಲ್ಲೋ ದೂರದಲ್ಲಿ ಮನೆಕಟ್ಟಿ ಈ ಜಮೀನಿಗೆ ಓಡಿಯಾಡೋದೆಲ್ಲ ಆಗಿಹೋಗುವ ಮಾತಲ್ಲ. ನೋಡಿ, ಒಂದು ಮನಸು ಮಾಡಿ. ಮತ್ತೆ ನಂಗೆ ನೀವು ಧರ್ಮಕ್ಕೆ ಕೊಡೂದೇನೂ ಬ್ಯಾಡ. ಮುಂದಿನ ಬೆಳೆ ಅಡವಿಟ್ಟಾದರೂ ನಿಮ್ಮ ಮಸೀದಿಗೆ ಆ ಹಣವನ್ನು ಕಾಣಿಕೆ ಹಾಕ್ತೇನೆ.” ಎಂದು ಬೇಡಿಕೊಂಡರು.

ಆದರೆ ಬಂದವರು ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತಾ, ಏನೊಂದೂ ತೀರ್ಮಾನಕ್ಕೆ ಬರಲಾಗದೇ ಹೊರಟರು. ಇಲ್ಲೂ ಸೋಲೇ ಆಯ್ತೆಂದು ನಿರಾಸೆಯಲ್ಲಿದ್ದ ನೀಲಿಗೆ ಮೇಲೆ ರಸ್ತೆಯಿಂದ ಯಾರೋ ಬೇಟೀ ಎಂದು ಕರೆದಂತಾಗಿ ಮನೆಯಂಗಳಕ್ಕೆ ಬಂದಳು. ಅಷ್ಟು ಎತ್ತರದಲ್ಲಿ ನಿಂತಿದ್ದ ಮುಲ್ಲಾ ಮಾಸ್ರ‍್ರು, “ಬೇಟಿ, ನಿಮ್ಮಪ್ಪನ್ನ ಜರಾ ಮೇಲೆ ಬರಲು ಹೇಳು.” ಎಂದರು. ನೀಲಿಯ ಅಪ್ಪ ಮೇಲೆ ಹೋದವರು ಬರುವಾಗ ನಗುನಗುತ್ತ ಬಂದರು. ನೀಲಿ ಅಚ್ಚರಿಯಿಂದ ಅಪ್ಪನ ಮುಖವನ್ನು ದಿಟ್ಟಿಸಿದಳು. ಅವಳನ್ನು ಎರಡು ಕೈಗಳಿಂದ ಬಾಚಿ ಎತ್ತಿಕೊಂಡ ಅಪ್ಪ, “ನಿನ್ನ ಮಾಸ್ರ‍್ರು ಮಜಾ ಇದ್ರೆ ಮಾರಾಯ್ತಿ. ನಿಮ್ಮ ಮಗಳ ಮುಖ ನೋಡಿ ಈ ಮಾತನ್ನು ಹೇಳ್ತಿದ್ದೀವಿ. ನೀವು ಕೂಡಲೇ ಒಂದು ಮನೆಯನ್ನು ನಮ್ಮ ಜಾಗದಲ್ಲಿ ಕಟ್ಟಿಕೊಳ್ಳಿ. ನೀವು ಸಾಲ ಮಾಡಿ ಹಣ ಕೊಡೋದೇನೂ ಬೇಡ. ಅಂತ ಹಣವನ್ನು ನಮ್ಮ ಖುದಾ ಬಯಸೋದೂ ಇಲ್ಲ. ಆದ್ರೆ ಊರಿನವರಿಗೆಲ್ಲ ಈ ಸುದ್ದಿಯನ್ನು ಹೇಳ್ತಿರಬೇಡಿ. ಎಲ್ಲರೂ ಬಂದು ಜಮೀನು ಕೊಡಿ ಅಂತ ಕೂತರೆ ಕೊಡೋಕೆ ನಮಗೆ ಅಧಿಕಾರ ಇಲ್ಲ ಅಂದ್ರು. ಅದಕ್ಕೆ ನಾನು ಅದೆಂಗಾಗ್ತದೆ ಮಾಸ್ತ್ರೆ, ಪುಕ್ಕಟೆ ತಗೊಂಡು ಮನೆ ಕಟ್ಟಿದ್ರೆ ನಮ್ಮ ದೇವ್ರು ಮನೆಯೊಳಗೆ ಬಂದಾನಾ? ಅಂದೆ. ಅದಕ್ಕವರು ನಗುತ್ತಾ ನಿಮಗೆ ಅಷ್ಟೆಲ್ಲ ಕೊಡಬೇಕು ಅನಿಸಿದ್ರೆ ಅದನ್ನು ನಿಮ್ಮ ಮಗಳ ಓದಿಗೆ ಉಪಯೋಗಿಸಿ. ಹೆಣ್ಣು ಮಕ್ಕಳ ಓದಿಗೆ ಇದನ್ನು ಬಳಸಿದರೆ ನಮ್ಮ ದೇವರಿಗೂ ಸಂತೋಷವಾಗ್ತದೆ ಅಂದ್ರು. ಅಂತೂ ನಿನ್ನ ನೆವದಿಂದ ಒಂದು ನೆಮ್ಮದಿಯ ಮನೆಯಾಗ್ತದೆ ಮಾರಾಯ್ತಿ” ಎಂದರು.

ಇದನ್ನೆಲ್ಲ ಒಳಗಿನಿಂದಲೇ ಕೇಳಿಸಿಕೊಂಡ ನೀಲಿಯ ಅಮ್ಮ ನೆಮ್ಮದಿಯಿಂದ ಪಾತ್ರೆಯ ರಾಶಿಗಳನ್ನು ತೊಳೆಯುತ್ತಾ ದಾರಿ ಯಾವುದಯ್ಯಾ? ವೈಕುಂಠಕ್ಕೆ ದಾರಿ ತೋರಿಸಯ್ಯಾ…. ಎಂದು ದೇವರ ನಾಮವನ್ನು ದೊಡ್ಡ ದನಿಯಲ್ಲಿ ಹಾಡತೊಡಗಿದಳು.

About The Author

ಸುಧಾ ಆಡುಕಳ

ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

4 Comments

  1. jayasrinivasa rao

    What a beautiful, wonderful story, Sudha Madam … and so well narrated. These kinds of real-life incidents are the lifeblood of our communities. I hope more people read this. 👌😀🌼🌸

    Reply
    • ಸುಧಾ ಆಡುಕಳ

      Thank you sir

      Reply
  2. ಆನಂದ ಕುಲಾಲ

    ಹೀಗೆ ಜಾಗ ಇಲ್ಲದವರಿಗೆ ಮನೆ ಕಟ್ಟಲು ಜಾಗ ನೀಡುವ ಮನಸ್ಸುಗಳು ಸಾವಿರವಾಗಲಿ. ಅಭಿವೃದ್ಧಿಯ ವಿರಾಟ ರೂಪವನ್ನು ಈ ಸಲದ ಮಳೆ ಚೆನ್ನಾಗಿಯೇ ಎಲ್ಲರಿಗೂ ಪಾಠ ಕಲಿಸಿದೆ. ಆದರೆ ನಮ್ಮ ಪಾಠ ಮಾತ್ರ ಕಲಿಯುದಿಲ್ಲ.

    Reply
    • ಸುಧಾ ಆಡುಕಳ

      ಪ್ರತಿಕ್ರಿಯೆಗಾಗಿ ಧನ್ಯವಾದಗಳು

      Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ