Advertisement
ದುಃಖಾಂತ ಪಾತ್ರಗಳ ಬಿಕ್ಕುಗಳ ಸಂಕಲನ: ಶುಭಶ್ರೀ ಕಥಾಸಂಕಲನಕ್ಕೆ ವಿಕಾಸ ನೇಗಿಲೋಣಿ ಮುನ್ನುಡಿ

ದುಃಖಾಂತ ಪಾತ್ರಗಳ ಬಿಕ್ಕುಗಳ ಸಂಕಲನ: ಶುಭಶ್ರೀ ಕಥಾಸಂಕಲನಕ್ಕೆ ವಿಕಾಸ ನೇಗಿಲೋಣಿ ಮುನ್ನುಡಿ

ಶುಭಶ್ರೀ ಬಳಸುವ ಭಾಷೆ ಬಹುತೇಕ ಉತ್ತರ ಕನ್ನಡದ ಕೆಳ ಸಮುದಾಯದ್ದು. ಜೊತೆಗೆ ಮಕ್ಕಳಾಗದವರ ಬಿಕ್ಕು, ಗಂಡನ ದೌರ್ಬಲ್ಯದ ನೆರಳಲ್ಲಿ ನರಳುವ ಹೆಣ್ಮಕ್ಕಳ ಬಿಕ್ಕು, ಮನೆ ತೊರೆದು ಹೋದವರ ನರಳುಗಳನ್ನೆಲ್ಲಾ ಗದ್ಗದಿತ ಕೊರಳಿನಿಂದ ಹೇಳುತ್ತಾ ಹೋಗುತ್ತಾರೆ. ಸಂಕಲನದ ಅತ್ಯಂತ ಗಾಢ ಕತೆಯೆಂದರೆ ‘ಹಗಲು ವೇಷ’. ಮನೆ ತೊರೆದು, ಅನ್ಯ ಕೋಮಿನ ಹುಡುಗನನ್ನು ಮದುವೆಯಾಗಿ, ನರಳುವ ಹೆಣ್ಮಗಳೊಬ್ಬಳ ಚಿತ್ರಣ ಇರುವ ಆ ಕತೆಯಲ್ಲಿ ಧರ್ಮ ಅಥವಾ ದ್ವೇಷದ ಸೋಂಕು ಇಲ್ಲದೇ, ಜಡ್ಜ್ ಮೆಂಟಲ್ ಕೂಡ ಆಗದಂತೆ ಹೆಣ್ಣೊಬ್ಬಳ ಅಂತಃಕರಣದಿಂದ ಆಯೇಷಾ ಅನ್ನುವ ಪಾತ್ರವನ್ನು ಕತೆಗಾರ್ತಿ ನಿರ್ವಹಿಸಿದ ಮೆಚ್ಚುವಂತಿದೆ.
ಶುಭಶ್ರೀ ಭಟ್ಟ ಹೊಸ ಕಥಾಸಂಕಲನ “ಬಿದಿಗೆ ಚಂದ್ರಮನ ಬಿಕ್ಕು” ಕೃತಿಗೆ ವಿಕಾಸ್‌ ನೇಗಿಲೋಣಿ ಬರೆದ ಮುನ್ನುಡಿ

ಮನುಷ್ಯ ಸೂಕ್ಷ್ಮವಾಗುತ್ತಾ ಆಗುತ್ತಾ ಅಸೂಕ್ಷ್ಮವನ್ನು ಗ್ರಹಿಸಬಲ್ಲವನಾಗುತ್ತಾನೆ. ಬೇಕಿದ್ದರೆ ಸುಮ್ಮನೇ ಯೋಚನೆ ಮಾಡಿ, ಒಬ್ಬ ಸೂಕ್ಷ್ಮ ವ್ಯಕ್ತಿಗೆ ಎಲ್ಲವೂ ಕಾಣಿಸತೊಡಗುತ್ತದೆ. ತೀರಾ ನಾಟಕೀಯತೆಯನ್ನೂ, ಕ್ರೌರ್ಯ ಮರೆಸಿ ತೋರುವ ಕಪಟ ಮಾನವತೆಯನ್ನೂ ಗ್ರಹಿಸಬಲ್ಲ. ಸೂಕ್ಷ್ಮ ವ್ಯಕ್ತಿ ಒಂದು ಮನೆ ಹೊಕ್ಕೊಡನೆ ಅಲ್ಲಿ ಮರೆಮಾಚಿಟ್ಟಿರುವ ಎಲ್ಲವನ್ನೂ ಗ್ರಹಿಸಬಲ್ಲ, ಮರೆಮಾಚಿಟ್ಟು ನಗುಮುಖದಲ್ಲಿ ವ್ಯವಹರಿಸುವ ಮನುಷ್ಯರನ್ನೂ ಗ್ರಹಿಸಬಲ್ಲ.

(ಶುಭಶ್ರೀ ಭಟ್ಟ)

ಆದರೆ ಇದು ವರವೋ ಶಾಪವೋ, ಸೂಕ್ಷ್ಮ ವ್ಯಕ್ತಿತ್ವದವರು ತಮ್ಮ ಸೂಕ್ಷ್ಮತೆಯಿಂದ ಅನುಭವಿಸುವವರ ಜೀವನದ ಮೇಲೆ ಅವಲಂಬಿಸಿದೆ. ‘What women want’ ಅನ್ನುವ ಸಿನಿಮಾದಲ್ಲಿ ಒಬ್ಬ ವ್ಯಕ್ತಿಗೆ ಎಲ್ಲ ಹೆಣ್ಮಕ್ಕಳ ಮನಸ್ಸಿನ ಮಾತು ಕೇಳುವ ವರ ಲಭಿಸಿದ ಮೇಲೆ ಅವನ ಜೀವನ ಸಂಕಟಮಯವಾಗುತ್ತದಲ್ಲಾ, ಅದೇ ಸೂಕ್ಷ್ಮ ಮನಸ್ಥಿತಿಯವರ ಸಂಕಟ ಕೂಡ. ಅಂಥ ಸೂಕ್ಷ್ಮ ಗ್ರಹಿಕೆ ಒಬ್ಬ ಕತೆಗಾರನಿಗೋ, ಕವಿಗೋ ವರ. ಮಾಸ್ತಿ ವೆಂಕಟೇಶ ಅಯ್ಯಂಗಾರರು ಬರೆದಂತೆ ‘ಕಪಿ ಹಾರಿತು ಹೆಗ್ಗಡಲನೇ ಎಂಬೆ, ಕಡಲನೇ ಕಡೆದರು ಬೆಟ್ಟದೊಳೆಂಬೆ, ನಿನ್ನೂಹೆಯ ಹೇರಾಳವ ತುಂಬೇ, ಸೃಷ್ಟಿಕರ್ತನಿಗೂ ಅರಿದೆಂಬೆ’ ಸಾಹಿತ್ಯ ಸೂಕ್ಷ್ಮದಲ್ಲಿದೆ, ಕಲ್ಪನೆಯಲ್ಲಿದೆ, ರೇಷ್ಮೆನೂಲಿನ ನವಿರಲ್ಲಿದೆ.

ಇಲ್ಲಿ ಕತೆಗಾರ್ತಿ ಶುಭಶ್ರೀ ಭಟ್ಟ ಗೆಲ್ಲುತ್ತಾರೆ. ಈಗಾಗಲೇ ಸಾಹಿತ್ಯ ಲೋಕದಲ್ಲಿ ಸೂಕ್ಷ್ಮ ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಶುಭಶ್ರೀ ಅವರು ಎಲ್ಲದರ ಕಡೆಗೂ ಸೂಕ್ಷ್ಮ ನೋಟ ಹರಿಸುವವರು, ಎಲ್ಲ ಭಾವುಕ ಜಗತ್ತಿಗೂ ತಮ್ಮ ಬರವಣಿಗೆಯ ಶಕ್ತಿಯಿಂದ ಸಂಚರಿಸಬಲ್ಲವರು, ಮಿಕ್ಕವರ ದುಃಖಕ್ಕೆ ತಾವೇ ಬಿಕ್ಕಿ, ಭುಜದ ಆಸರೆಯನಿಟ್ಟು ಸಾಂತ್ವನದಲ್ಲಿ ತಾಯಿಯೇ ಆಗುವಂಥವರು. ‘ಬಿದಿಗೆ ಚಂದ್ರಮನ ಬಿಕ್ಕು’ ಎಂಬ ಈ ಸಂಕಲನದ ಶೀರ್ಷಿಕೆಯಂತೆ ಇಲ್ಲಿನ ಅಷ್ಟೂ ಕತೆಗಳು; ನಾನಾ ಪಾತ್ರಗಳ ಬಿಕ್ಕುಗಳು ಅಥವಾ ಬಿಕ್ಕಿಗೆ ನಾನಾ ಕಾರಣಗಳು. ಮತ್ತು ಲಿಯೋ ಟಾಲ್ ಸ್ಟಾಯ್ ‘ಅನ್ನ ಕರೆನ್ನಿನಾ’ ಕಾದಂಬರಿಯಲ್ಲಿ ಹೇಳುವ ಪ್ರಸಿದ್ಧ ಮಾತಿನಂತೆ, ‘All happy families are alike; each unhappy family is unhappy in its own way’. ಶುಭಶ್ರೀ ಕತೆಗಳೂ ವಿವಿಧ ಕುಟುಂಬಗಳ ದುಃಖ, ಬಿಕ್ಕಿನ ವಿವಿಧ ಮಜಲುಗಳನ್ನು ಹೇಳುತ್ತವೆ.

ಹತ್ತು ಕತೆಗಳುಳ್ಳ ಈ ಸಂಕಲನದಲ್ಲಿ ಬಹುತೇಕ ಪಾತ್ರಗಳು ಉತ್ತರ ಕನ್ನಡದ ಬೇರಿನಲ್ಲಿ ಅರಳಿದ ಪಾಪದ ಹೂಗಳು. ಅವರ ಕತೆ ಹೇಳಲು ಶುಭಶ್ರೀ ಬಳಸುವ ಭಾಷೆ ಬಹುತೇಕ ಉತ್ತರ ಕನ್ನಡದ ಕೆಳ ಸಮುದಾಯದ್ದು. ಜೊತೆಗೆ ಮಕ್ಕಳಾಗದವರ ಬಿಕ್ಕು, ಗಂಡನ ದೌರ್ಬಲ್ಯದ ನೆರಳಲ್ಲಿ ನರಳುವ ಹೆಣ್ಮಕ್ಕಳ ಬಿಕ್ಕು, ಮನೆ ತೊರೆದು ಹೋದವರ ನರಳುಗಳನ್ನೆಲ್ಲಾ ಗದ್ಗದಿತ ಕೊರಳಿನಿಂದ ಹೇಳುತ್ತಾ ಹೋಗುತ್ತಾರೆ. ಸಂಕಲನದ ಅತ್ಯಂತ ಗಾಢ ಕತೆಯೆಂದರೆ ‘ಹಗಲು ವೇಷ’. ಮನೆ ತೊರೆದು, ಅನ್ಯ ಕೋಮಿನ ಹುಡುಗನನ್ನು ಮದುವೆಯಾಗಿ, ನರಳುವ ಹೆಣ್ಮಗಳೊಬ್ಬಳ ಚಿತ್ರಣ ಇರುವ ಆ ಕತೆಯಲ್ಲಿ ಧರ್ಮ ಅಥವಾ ದ್ವೇಷದ ಸೋಂಕು ಇಲ್ಲದೇ, ಜಡ್ಜ್ ಮೆಂಟಲ್ ಕೂಡ ಆಗದಂತೆ ಹೆಣ್ಣೊಬ್ಬಳ ಅಂತಃಕರಣದಿಂದ ಆಯೇಷಾ ಅನ್ನುವ ಪಾತ್ರವನ್ನು ಕತೆಗಾರ್ತಿ ನಿರ್ವಹಿಸಿದ ಮೆಚ್ಚುವಂತಿದೆ. ಅದರಲ್ಲೂ ಕತೆಯ ಅಂತ್ಯ ಬಹಳ ಗಾಢವೂ, ಆಘಾತಕಾರಿಯೂ, ಎದೆಗಿರುವಷ್ಟು ಚೂಪಾಗಿಯೂ ಇದೆ. ಆಸಕ್ತಿಕರ ವಿಷಯವೆಂದರೆ ದೇಹದಾನದಂಥ ವಸ್ತುವನ್ನು ಗಂಡಸಿನ ದೃಷ್ಟಿಕೋನದಲ್ಲಿ ಹೇಳುವ ಕತೆಯೊಂದು ಈ ಸಂಕಲನದಲ್ಲಿದೆ, ಅದು ಇಡೀ ಸಂಕಲನದ ಸ್ತ್ರೀ ದೃಷ್ಟಿಕೋನವನ್ನು ಮುರಿಯುವ ಕತೆಯಾಗಿದೆ.
 

ಇಂಗ್ಲಿಷ್‌ನಲ್ಲಿ Sappy ಅನ್ನುವ ಒಂದು ಪದವಿದೆ, ಅಂದರೆ ಅತಿ ಭಾವುಕತೆ, insincerely emotional ಅಂತ. ಕಣ್ತುಂಬಿಕೊಳ್ಳುವಂಥ ಗೋಳಿನ ಕತೆಗಳನ್ನು, ಅಳಿಸಲೆಂದೇ ಬರೆದ ಕತೆಗಳನ್ನು ಈ ರೀತಿ ಕರೆಯಲಾಗುತ್ತದೆ. ಆದರೆ ಭಾವು-ಕತೆ ಎಲ್ಲಾ ಕಲಾ ಪ್ರಕಾರಗಳ ಮೂಲಸ್ರೋತ. ಗೋಳು ಬೇರೆ, ಪೇನ್ ಬೇರೆ. ನೋವನ್ನು ಗೋಳಾಗಿಸದೇ, ಅದನ್ನೊಂದು ಇನ್‌ಸೈಟ್‌ಗೆ ಪರಿವರ್ತಿಸುವುದು ಆಯಾ ಲೇಖಕರ ಕೈಲಿರುತ್ತದೆ. ಶುಭಶ್ರೀ ಅವರ ಕತೆಗಳಲ್ಲಿ ಪಾತ್ರಗಳು ಕಣ್ಣೀರು ಹಾಕುವುದಕ್ಕಿಂತ ಗಂಟಲು ಕಟ್ಟುವ ನೋವು, ನಿರಾಶೆ, ಹತಾಶೆಗಳ ಸನ್ನಿವೇಶಗಳು ಎದುರಾಗುತ್ತವೆ. ಆ ಸಂಯಮ ಶುಭಶ್ರೀ ಅವರ ಕತೆಗಳಲ್ಲಿವೆ ಎನ್ನುವುದನ್ನು ಗಮನಿಸಬೇಕು.

(ವಿಕಾಸ್‌ ನೇಗಿಲೋಣಿ)

ಬಿಕ್ಕು ಎನ್ನುವುದು ದುಃಖದ ಅನುರಣನ, ಅದು ಕೊಳಕ್ಕೆ ಎಸೆದ ಕಲ್ಲಿನಂತೆ ಅಲೆ ಅಲೆಗಳಾಗಿ ದುಃಖವನ್ನು ಜ್ಞಾಪಿಸುತ್ತದೆ. ಶಾಕುಂತಲೆಯ ದುಃಖಕ್ಕೆ ಅಭಿಜ್ಞಾ ಹೇಗೆ ಜ್ಞಾಪಕಕ್ಕೆ ರೂಪಕವೋ ಶುಭಶ್ರೀ ಕತೆಗಳ ಪಾತ್ರಗಳ ಬಿಕ್ಕೂ ಅವರ ನೋವಿನ ಜ್ಞಾಪಕ. ಅಂಥ ಹಲವು ಜ್ಞಾಪಕಗಳ ಕಟ್ಟು ಈ ಸಂಕಲನವಾಗಿದೆ.

ಮುಂದಿನ ಕತೆಗಳ ಕಟ್ಟು ಬರುವ ಹೊತ್ತಿಗೆ ಲೇಖಕಿಯಾಗಿ ಶುಭಶ್ರೀ ಅವರು ಇನ್ನೂ ಬೆಳೆಯಬೇಕು, ಮಾಗಬೇಕು. ದುಃಖದಿಂದ ಬಿಡಿಸಿಕೊಂಡು ಮತ್ತೊಂದು ವಿಸ್ತರಣೆಗೆ ಸಾಗಬೇಕು. ಓದುಗರ ಇಂಥ ನಿರೀಕ್ಷೆಗೆ ಪರೀಕ್ಷೆಗೊಡ್ಡುವ ಸಂಕಲನ ಇದು.

(ಕೃತಿ: ಬಿದಿಗೆ ಚಂದ್ರಮನ ಬಿಕ್ಕು (ಕಥಾಸಂಕಲನ), ಲೇಖಕರು: ಶುಭಶ್ರೀ ಭಟ್ಟ, ಪ್ರಕಾಶಕರು: ಹರಿವು ಬುಕ್ಸ್‌)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ