ಒಂದು ಹಿಡಿ ಸಂಕಟ..
ಏಸು ಋತುಗಳಲಿ
ಅರಳಿ ಬಂದಿದೆ ಒಂದು ಹಿಡಿ
ಸಂಕಟ..
ಎದೆಯ ಕಿಟಕಿಯ ಹಾದು..
ಇರುಳ ನಿದ್ದೆಯ ಕದ್ದು..
ಚಿಂತೆ ಹಾಸಿಗೆ ಹೊದ್ದು…
ಮರಳಿ ಹೊರಳಿ ಬಂದಿದೆ ಸಂಕಟ…
ಎದೆಯ ಗೂಡಿಗೆ..
ಹೃದಯದ ಹಾಡಿಗೆ..
ಕರುಳ ನಾದವ ನುಡಿಸಿ..
ಗುಟುಕು ಉಸಿರನು ಸುರಿಸಿ..
ನಿಟ್ಟುಸಿರುಗಳ ಹಡೆದು ಬಂದಿದೆ ಸಂಕಟ….
ಮನದ ಬಾಗಿಲಿಗೆ ಮರಳಿ ಬಂದಿದೆ ಸಂಕಟ…
ಚರಾ ಚರ ಮುಟ್ಟಿ
ಸುರಾಸುರರ ತಟ್ಟಿ
ಕಟ್ಟಿ ಹಾಡಿದೆ ಸಂಕಟ..
ಸುಲಬಕೆ ಬಿಚ್ಚಿ ಕೊಳ್ಳದೆ ಕಗ್ಗಂಟ…
ಏಸು ಬಣ್ಣಗಳ ಕಳಚಿ
ಏಸು ಕನಸುಗಳ ನುಂಗಿ
ಬೆಳಕ ಹಾದಿಯ ತುಂಬಾ ಕತ್ತಲೆ ಹಾಸಿಗೆ ಹಾಸಿ..
ತನ್ನ ಹಸುವೆ ತಾನೇ ನೀಗಿ ಕೊಳ್ಳಲು..
ಮನದ ಬಾಗಿಲಿಗೆ ಮರಳಿ ಬಂದಿದೆ ಸಂಕಟ…

ದೇವರಾಜ್ ಹುಣಸಿಕಟ್ಟಿ ರಾಣೇಬೆನ್ನೂರಿನವರು. ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. “ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು” ಇವರ ಪ್ರಕಟಿತ ಕೃತಿ ಕವಿತೆಯ ಓದು, ಬರೆಯುವುದು ಇವರ ಹವ್ಯಾಸ.
						