ಹೌದಲ್ಲವೇ? ಎಲ್ಲಾ ಸರಿಯಾಗಿರುವ ಹೊತ್ತಿನಲ್ಲೂ ಯಾವುದೋ ಒಂದು ಕೊರಗು ನಮ್ಮನ್ನು ಕಾಡುತ್ತಲೇ ಇರುತ್ತದೆ. ಮಧ್ಯಾಹ್ನದ ನೆರಳಿನಲ್ಲಿ ಯಾರದೋ ಹುಡುಕಾಟ… ಸಂಜೆಯ ತಂಪಲ್ಲಿ ಯಾವುದೋ ನೆನಪು.. ರಾತ್ರೆಯ ಕನವರಿಕೆಯಲ್ಲಂತೂ ಎಂಥದ್ದೋ ದುಃಖ… ಇವೆಲ್ಲಾ ಏಕೆ? ಕಳೆದ ನೆನ್ನೆಗಳೇ ಅದೇಕೋ ಚಂದ ಎನಿಸುತ್ತವೆ. ಇಂದು ಎನ್ನುವುದು ಯಾವಾಗಲೂ ಕಹಿ ಕಹಿ. ಈ ಕ್ಷಣಕ್ಕೆ ಮೈ ಚಾಚಿ ಮಲಗಿರುವ ಹಂಸತೂಲಿಕಾ ತಲ್ಪದಲ್ಲೂ ಹಿಂದೆಂದೋ ಅರೆನಿದಿರೆ ಹೊತ್ತು ತಂದಿದ್ದ ಗುಡಿಸಲಿನ ಒರಟು ನೆಲದ್ದೇ ಕನವರಿಕೆ. ಮನಸ್ಸು… ಅದು ಹೀಗೇಕೆ? ಕಳೆದ ಕ್ಷಣಗಳೆಲ್ಲಾ ಎದೆಯೊಳಗೆ ಉಳಿದು ಹೋಗುವುದೇಕೆ?
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ
ಮಲೆನಾಡಿನವರಿಗೆ ಸ್ಟ್ರೋಕುಗಳು ಜಾಸ್ತಿ ಆಗುತ್ತವೆ. ಹಾಗೆನ್ನುವ ಮೂರ್ಖ ಚರ್ಚೆ ನಮ್ಮ ನಡುವೆ ನಡೆಯಿತು. ಮೊದಲಿಗೆ ಅದು ಸರಿಯೆಂದೇ ಭಾವಿಸಿದೆವು. ಮಲೆನಾಡಿನಲ್ಲಿ ಚಳಿ ಜಾಸ್ತಿ. ಇದರಿಂದ ವಯಸ್ಸಾದವರಿಗೆ ರಕ್ತ ಹೆಪ್ಪುಗಟ್ಟಿ ಸ್ಟ್ರೋಕ್ ಆಗುತ್ತದೆ. ಹಾಗೇ ಇಲ್ಲಿನ ಮಂದಿ ಸಂಪೂರ್ಣ ಅಡಿಕೆ ಕೃಷಿಯ ಮೇಲೆ ಅವಲಂಬಿತರಾಗಿದ್ದಾರೆ. ಜಮೀನಿರುವವರು ನೇರವಾಗಿ ಕೃಷಿ ಮಾಡಿದರೆ ಕೂಲಿಕಾರರು ಅವರ ತೋಟಗಳಲ್ಲಿನ ಕೆಲಸಗಳಲ್ಲಿ ಪಾಲ್ಗೊಳ್ಳುವ ಮೂಲಕ ಔಷಧಿ, ರಾಸಾಯನಿಕಗಳ ಸಂಪರ್ಕಕ್ಕೆ ಬರುತ್ತಾರೆ. ಹೀಗೆ ಕೊಂಚಕೊಂಚವಾಗಿ ಅವರ ದೇಹ ಸೇರುವ ರಾಸಾಯನಿಕಗಳು ಮುಂದೆ ಸ್ಟ್ರೋಕಿಗೆ ಕಾರಣವಾಗುತ್ತವೆ ಎಂದೆಲ್ಲಾ ನಾವು ಪರಿಣಿತರಂತೆ ಭಾಷಣ ಬಿಗಿದೆವು. ಕೇಳಿದವರು ಅಹುದಹುದೆಂದು ತಲೆಯಾಡಿಸಿದರು.
ಹೀಗೆ ಬದುಕಿನ ಕುರಿತಾದ, ಅದರಲ್ಲೂ ಖಾಯಿಲೆಗಳ ಕುರಿತಾದ ಚರ್ಚೆಗಳು ಶತಶತಮಾನಗಳಿಂದಲೂ ನಡೆಯುತ್ತಲೇ ಇವೆ. ಪ್ರತಿಯೊಂದು ಭಾಗದವರೂ ತಮ್ತಮ್ಮ ಪ್ರದೇಶದಲ್ಲುಂಟಾಗುವ ರೋಗಗಳಿಗೆ ತಮ್ಮದೇ ಆದ ಕಾರಣ ಕೊಡುತ್ತಾರೆ. ಮನುಷ್ಯನೇಕೆ ಮಾರಣಾಂತಿಕ ರೋಗಗಳಿಗೆ ಗುರಿ ಆಗುತ್ತಾನೆ? ಈ ಒಂದು ಪ್ರಶ್ನೆಯನ್ನಿಟ್ಟುಕೊಂಡು ವಿಜ್ಞಾನ, ಆಧ್ಯಾತ್ಮ, ಧರ್ಮ ಇವೆಲ್ಲವೂ ಕಚ್ಚಾಡುತ್ತಲೇ ಇವೆ. ಯಾರೊಬ್ಬರಿಗೂ ಉತ್ತರ ಸಿಗದೇ ಕೊನೆಗೆ ಹಿಂದಿನ ಜನ್ಮ, ಕರ್ಮ ಫಲ, ವಿಧಿ, ರಾಸಾಯನಿಕಗಳು, ಬಿಪಿ ಎಂದು ಯಾವುದೋ ಒಂದನ್ನು ಕಟಕಟೆಯಲ್ಲಿ ನಿಲ್ಲಿಸಿ ತೀರ್ಪು ಘೋಷಿಸಿ ವಿಜ್ಞಾನ, ಧರ್ಮಗಳು ಪಾರಾಗುತ್ತಿವೆ. ಆದರೆ ಈ ಎಲ್ಲ ಕಾರಣಗಳೂ ಸಾವಿನ ನಂತರ ಮಾಡಿದ ಪೋಸ್ಟ್ ಮಾರ್ಟಂ ರಿಪೋರ್ಟ್‌ನಂತಿವೆಯೇ ಹೊರತು ಮೊದಲೇ ಹೇಳಬಹುದಾದ ಎಚ್ಚರಿಕೆಯಂತಲ್ಲ.
ಈ ಖಾಯಿಲೆಗಳು, ದುರಂತಗಳು ಏಕೆ ಘಟಿಸುತ್ತವೆ?
ಮನುಷ್ಯ ಪ್ರಶ್ನಿಸಿದ.
“ನಿನ್ನ ಒತ್ತಡಮಯ ಜೀವನ ಕ್ರಮ, ಕೊಳಕು ಆಹಾರ ಪದ್ಧತಿಯೇ ಇದಕ್ಕೆ ಕಾರಣ”
ವಿಜ್ಞಾನ ಘೋಷಿಸಿತು.
“ನೀನು ಅಧರ್ಮದ ದಾರಿಯಲ್ಲಿ ನಡೆಯುತ್ತಿರುವುದೇ ಇದಕ್ಕೆ ಕಾರಣ”
ಧರ್ಮ ತೀರ್ಪು ನೀಡಿತು.
ಆದರೂ ಸಮಸ್ಯೆ ಬಗೆಹರಿಯಲಿಲ್ಲ. ತೀರಾ ಮುಗ್ಧವಾದ ಸ್ವಚ್ಛ ಬದುಕು ಬದುಕಿದವನೂ ಏಕಾಏಕಿ ಹೃದಯ ಸ್ತಂಭನಕ್ಕೊಳಗಾದ. ಅವನ ಮೆದುಳೊಳಗಿನ ನರ ಸ್ಫೋಟಿಸಿತು. ದುರಂತ ಘಟಿಸಿತು. ಆಗ ಧರ್ಮ ‘ಪೂರ್ವ ಜನ್ಮ’ದತ್ತ ಬೆರಳು ತೋರಿಸಿತು. ವಿಜ್ಞಾನ ‘ರೀಸನ್ ಅನ್ ನೋನ್’ ಎಂದು ಬರೆದುಬಿಟ್ಟಿತು.
ಪ್ರಶ್ನೆ ಮಾತ್ರ ಹಾಗೇ ಉಳಿಯಿತು.
ಇದೆಲ್ಲಾ ಮಾತಾಡಿ ಕೆಲ ದಿನಕ್ಕೇ ಅಪ್ಪನನ್ನು ಮಣಿಪಾಲದ ಆಸ್ಪತ್ರೆಗೆ ಸೇರಿಸಬೇಕಾಯಿತು. ಅಲ್ಲಿ ನೋಡಿದರೆ ಕರ್ನಾಟಕದ ಎಲ್ಲಾ ರಾಜ್ಯದಿಂದಲೂ ಬಂದ ಮಂದಿ ಮಂಚಗಳ ಮೇಲೆ ನಿಶ್ಚಲವಾಗಿ ಮಲಗಿದ್ದರು. ಪಕ್ಕದಲ್ಲಿ ಕುಳಿತ ಅವರ ಆಪ್ತರು “ನೆನ್ನೆಯಷ್ಟೇ ಚೆನ್ನಾಗಿದ್ದ. ಇವತ್ತು ಇದ್ದಕ್ಕಿದ್ದಂತೆ ಹೀಗಾಯ್ತು” ಎಂದು ರೋಧಿಸುತ್ತಿದ್ದರು. ‘ಮಲೆನಾಡಿನಲ್ಲಿ ಮಾತ್ರ ಹೀಗಾಗುತ್ತೆ’ ಎಂಬ ನಮ್ಮ ನಂಬಿಕೆ ಬುಡಮೇಲಾಯಿತು.
ಒಂದೊಂದು ಮಂಚದ ಮೇಲೂ ಒಂದೊಂದು ಕಥೆ. ಒಳ್ಳೆಯವರು, ಕೆಟ್ಟವರು, ಹುಡುಗರು, ಮುದುಕರು, ಗಂಡು, ಹೆಣ್ಣು, ಅಪಾಪೋಲಿ, ಸಂಭಾವಿತ… ಹೀಗೆ ಮನುಷ್ಯ ಲೋಕದಲ್ಲಿನ ಸಕಲ ಪ್ರಬೇಧಗಳ ಬೇಲಿಯೆಲ್ಲವ ದಾಟಿ ಖಾಯಿಲೆಗಳು ಎಲ್ಲರಿಗೂ ಬರುವುದ ನೋಡಿದಾಗ ಎಲ್ಲ ವಾದಗಳೂ ಹುರುಳಿಲ್ಲದ ಹೇಳಿಕೆಗಳಂತೆ ಭಾಸವಾದವು.
ಮನುಷ್ಯನ ಯಾತನೆಯ ಮೂಲ ಯಾವುದು? ದೇಹವಾ? ಮನಸ್ಸಾ? ಸಾವೆನ್ನುವ ಅನಿವಾರ್ಯ ಅತಿಥಿ ಒಬ್ಬೊಬ್ಬರ ಮನೆಗೆ ಒಂದೊಂದು ನೆಪದಲ್ಲಿ ಬರುವುದೇಕೆ? ಕೆಲವರು ವರ್ಷಗಟ್ಟಲೆ ನರಳಿದರೆ ಇನ್ನು ಕೆಲವರು ಕಣ್ಮುಚ್ಚಿ ಬಿಡುವುದರೊಳಗೆ ಇಲ್ಲವಾಗುತ್ತಾರಲ್ಲಾ, ಈ ತಾರತಮ್ಯವೇಕೆ? ಯಾರ ಬದುಕಿನ ಬಟ್ಟಲಿನಲ್ಲಿ ಎಷ್ಟು ಖುಷಿ, ಎಷ್ಟು ನೋವು ಎಂಬುದನ್ನು ದೇವರು ಹೇಗೆ ನಿರ್ಧರಿಸುತ್ತಾನೆ? ಅವನು ನಿರ್ಧರಿಸುತ್ತಾನಾ ಅಥವಾ ನಮಗೆ ಗೊತ್ತಾಗದಂತೆ ನಾವೇ ನಿರ್ಧರಿಸಿಕೊಳ್ಳುತ್ತೇವಾ?
ಪ್ರಾಣಿ ಲೋಕದಲ್ಲಿ ಈ ಖಾಯಿಲೆ, ಅಗಲಿಕೆಯ ನೋವು ಇದೆಲ್ಲಾ ಇಲ್ಲವೇನು? ನಮ್ಮ ಮನೆಯ ತಾಯಿ ಬೆಕ್ಕು ಮರಿಯ ಜೊತೆಗೆ ಎರೆಡು ವರ್ಷದಿಂದ ವಾಸವಾಗಿತ್ತು. ಮುದ್ದು, ಆಟ, ಮಮತೆ… ಮರಿ ತಾಯಿಯ ಮಡಿಲಲ್ಲಿ ನೆಮ್ಮದಿಯಾಗಿತ್ತು. ಅದೊಂದು ದಿನ ಹೋದ ತಾಯಿ ಮತ್ತೆ ಮರಳಿ ಬರಲೇ ಇಲ್ಲ. ಮರಿಯೀಗ ನಮ್ಮ ಮಡಿಲಿನಲ್ಲಿದೆ. ನಮ್ಮ ಜೊತೆಗೇ ಆಡುತ್ತದೆ. ಮಲಗುತ್ತದೆ. ಮುದ್ದು ಮಾಡಿದಾಗ ಕೊಂಗಾಟ ಮಾಡಿದಷ್ಟೇ ಮುದ್ದಾಗಿ ಹೊಡೆದಾಗ ಓಡುತ್ತದೆ. ಅದಕ್ಕೆ ಅಮ್ಮನ ನೆನಪೇ ಕಾಡುವುದಿಲ್ಲವೇ? ನಮ್ಮಂತೆ?
ನಾವು ಚಿಕ್ಕವರಿದ್ದಾಗ ನೂರಾರು ಮರಗಳಿದ್ದ ಗುಡ್ಡಗಳೆಲ್ಲಾ ಈಗ ಬರಡು ಬರಡಾಗಿವೆ. ನೆನ್ನೆಯಷ್ಟೇ ರಸ್ತೆಯ ಪಕ್ಕ ಹೂಬಿಟ್ಟು ನಿಂತಿದ್ದ ಮರ ಬೆಳಗಾಗುವಷ್ಟರಲ್ಲಿ ಇಲ್ಲ. ಚೆನ್ನಾಗಿರುವ ಮರಕ್ಕೂ ಬುಡಕ್ಕೆ ರಾಸಾಯನಿಕ ಹೊಯ್ದು, ಅದು ಸಾಯುವಂತೆ ಮಾಡಿ, ‘ಮರ ಸತ್ತಿದೆ’ ಎನ್ನುವ ನೆಪದಲ್ಲಿ ಕಡಿಯುವವರಿದ್ದಾರೆ. ಮರಕ್ಕೂ ಹೃದಯ ಇರುತ್ತದಾ? ಮರ ಅಳುತ್ತದಾ? ಮರ ಕಡಿದ ಜಾಗದಲ್ಲಿ ಬೋಳಾಗಿ ನಿಂತ ಬರಿ ನೆಲ… ಅದು ರೋಧಿಸುತ್ತದಾ? ಮನುಷ್ಯನನ್ನು ಶಪಿಸುತ್ತದಾ?
ನಮ್ಮ ಚರ್ಚೆ ಎಲ್ಲಿಂದ ಎಲ್ಲಿಗೋ ಬಂತು ಅಲ್ಲವೇ?
ಒಂದು ನಿಮಿಷ… ಮರ ಕಡಿಯುತ್ತಿದ್ದವನೊಬ್ಬ ಕೆಳಗೆ ಬಿದ್ದನಂತೆ. ಸ್ಪೈನಲ್ ಕಾರ್ಡಿಗೆ ಪೆಟ್ಟಾಗಿ ಅವನಿನ್ನು ಏಳಲಾರನಂತೆ…
ಚರ್ಚೆಯೀಗ ಮತ್ತೆ ಮೊದಲಿನ ವಿಷಯಕ್ಕೇ ಸೇರಿಕೊಳ್ಳುತ್ತಿದೆ.

ಯಾರು ಎಸೆದ ಮುಳ್ಳಿನ ಮೇಲೆ ಕಾಲಿಟ್ಟು ಯಾರ ಪಾದ ಸೀಳುತ್ತದೋ, ಇದರ ಹಿಂದಿನ ವಿಧಿಯ ಹುನ್ನಾರವೇನೋ ದೇವರೇ ಬಲ್ಲ. ಕಷ್ಟಗಳು ಮನುಷ್ಯನನ್ನು ಗಟ್ಟಿ ಮಾಡುತ್ತವೆ. ಇದನ್ನು ಎಚ್ಚೆಸ್ವಿಯವರು ಬಹಳ ಸೊಗಸಾಗಿ ಹೇಳಿದ್ದಾರೆ:
ದೃಢವಾಗು ನೋವಿಂದ ನನ್ನ ಬಾಳೆ
ಮಡಕೆ ದೃಢವಾದಂತೆ ಬೆಂದ ಮೇಲೆ
ಸುಟ್ಟು ಸುಟ್ಟೇ ಶುದ್ಧ ಆಗುವುದು ಚಿನ್ನ
ಪೆಟ್ಟು ತಿಂದೇ ಶಿಲ್ಪ ಆಗುವುದು ಚೆನ್ನ
ಕಡಿದಾಗಲೇ ಮರವು ಚಿಗುರುವುದು ಇನ್ನ
ಬಾಳೇ ಬಿಡದಿರು ಎಂದೂ ನೀ ಸಹನೆಯನ್ನ..
ಕವಿತೆಯ ಸಾಲುಗಳಲ್ಲಿ, ಆಸ್ಪತ್ರೆಯ ಅಸಹಾಯ ಕಾರಿಡಾರುಗಳಲ್ಲಿ, ತನ್ನವರ ಗೋರಿಯ ಎದುರಲ್ಲಿ.. ಮನುಷ್ಯ ತನ್ನ ಪ್ರೆಶ್ನಗಳಿಗೆ ಉತ್ತರ ಹುಡುಕುತ್ತಲೇ ಇದ್ದಾನೆ. ಕಣ್ಣೆದುರೇ ತನ್ನವರು ಅನುಭವಿಸಿಹೋದ ನರಕಯಾತನೆಗೆ ವಿವರಣೆಯ ಕೇಳುತ್ತಲೇ ಇದ್ದಾನೆ. ಮೊನ್ನೆಯಷ್ಟೇ ಸುದ್ದಿ ಬಂತು. ನಾವು ಕೆಲಸ ಮಾಡುತ್ತಿದ್ದ ಹಳೇ ಕಂಪನಿಯ ಟೀಮ್ ಲೀರ್‌ರ ಇಬ್ಬರೂ ಮಕ್ಕಳು ಹೋಗಿಬಿಟ್ರಂತೆ.. ಅದೂ ಒಂದೇ ದಿನ. ಅವರಿಗೆ ಮದುವೆಯಾಗಿದ್ದೇ ತಡವಾಗಿ. ಮಕ್ಕಳಾಗಿದ್ದು ಇನ್ನೂ ತಡವಾಗಿ. ದಪ್ಪ ಇದ್ದವರು ಏನೇನೋ ಡಯಟ್ ಮಾಡಿ, ಹಠಾತ್ತನೆ ತೆಳ್ಳಗಾಗಿ, ಬಿಪಿ ಕುಸಿದು, ಥೈರಾಯ್ಡ್ ತೊಂದರೆಗೆ ಸಿಲುಕಿ ಕೊನೆಗೆ ಹುಟ್ಟಿದ್ದ ಮಕ್ಕಳು.. ಒಬ್ಬರ ಹಿಂದೆ ಒಬ್ಬರು ಹೋಗೇ ಬಿಟ್ಟರು. ಬೆಳಗ್ಗೆ ಚಿಕ್ಕವನು. ಮಧ್ಯಾಹ್ನ ದೊಡ್ಡವನು.
ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೀರಿ? ಬದುಕು ಬರೀ ದುಃಖದ ಸಂತೆ ಅಂತ ನಿರೂಪಿಸಲಿಕ್ಕಾ ಅಂತ ಕೇಳಿದೆ.
“ಅಲ್ಲ. ಚಿಕ್ಕ ಚಿಕ್ಕ ವಿಷಯಕ್ಕೇ ಮಾನಸಿಕವಾಗಿ ಕೊರಗುವ, ನಮ್ಮದೇ ಕಷ್ಟ ಎಂದೆಲ್ಲಾ ನರಳುವವರಿಗೆ ಈ ಕ್ಷಣಕ್ಕೆ ಕೈಯಲ್ಲಿರುವ ಬದುಕು ಎಷ್ಟೊಂದು ಸುಂದರವಾಗಿದೆ ಎನ್ನುವುದನ್ನು ಅರ್ಥ ಮಾಡಿಸಲಿಕ್ಕೆ” ಎಂದರು.
ಹೌದಲ್ಲವೇ? ಎಲ್ಲಾ ಸರಿಯಾಗಿರುವ ಹೊತ್ತಿನಲ್ಲೂ ಯಾವುದೋ ಒಂದು ಕೊರಗು ನಮ್ಮನ್ನು ಕಾಡುತ್ತಲೇ ಇರುತ್ತದೆ. ಮಧ್ಯಾಹ್ನದ ನೆರಳಿನಲ್ಲಿ ಯಾರದೋ ಹುಡುಕಾಟ… ಸಂಜೆಯ ತಂಪಲ್ಲಿ ಯಾವುದೋ ನೆನಪು.. ರಾತ್ರೆಯ ಕನವರಿಕೆಯಲ್ಲಂತೂ ಎಂಥದ್ದೋ ದುಃಖ… ಇವೆಲ್ಲಾ ಏಕೆ? ಕಳೆದ ನೆನ್ನೆಗಳೇ ಅದೇಕೋ ಚಂದ ಎನಿಸುತ್ತವೆ. ಇಂದು ಎನ್ನುವುದು ಯಾವಾಗಲೂ ಕಹಿ ಕಹಿ. ಈ ಕ್ಷಣಕ್ಕೆ ಮೈ ಚಾಚಿ ಮಲಗಿರುವ ಹಂಸತೂಲಿಕಾ ತಲ್ಪದಲ್ಲೂ ಹಿಂದೆಂದೋ ಅರೆನಿದಿರೆ ಹೊತ್ತು ತಂದಿದ್ದ ಗುಡಿಸಲಿನ ಒರಟು ನೆಲದ್ದೇ ಕನವರಿಕೆ. ಮನಸ್ಸು… ಅದು ಹೀಗೇಕೆ? ಕಳೆದ ಕ್ಷಣಗಳೆಲ್ಲಾ ಎದೆಯೊಳಗೆ ಉಳಿದು ಹೋಗುವುದೇಕೆ?
ಕನ್ನಡದ ಬ್ಲಾಗೊಂದರಲ್ಲಿ ಓದಿದ್ದೆ. ರಜಾ ದಿನದಂದು ವೈದ್ಯರೊಬ್ಬರು ಸಂಜೆ ತಮ್ಮನೆಯ ಬಾಲ್ಕನಿಯಲ್ಲಿ ನಿಂತಿರುತ್ತಾರೆ. ಹೊರಗಡೆ ಮಕ್ಕಳು ರಸ್ತೆಯ ಪಕ್ಕ ಸುರಿದ ಮರಳಲ್ಲಿ ಆಡುತ್ತಿರುತ್ತಾರೆ. ಗುಹೆ, ಮನೆ, ಅರಮನೆ, ಗೂಡು.. ಹೀಗೆ ಏನೇನನ್ನೋ ಕಟ್ಟುತ್ತಿರುತ್ತಾರೆ. ಸಂಜೆ ಕಳೆದು ರಾತ್ರೆಯ ಆಗಮನವಾಗುತ್ತದೆ. ಬೆಳಕು ಕಂತುತ್ತದೆ. ಮನೆಯವರು ಮಕ್ಕಳನ್ನು ಕರೆಯುತ್ತಾರೆ. ಹೊರಡಲನುವಾದ ಮಕ್ಕಳು ವೈದ್ಯರು ನೋಡ ನೋಡುತ್ತಿರುವಂತೆಯೇ ತಾವು ಕಟ್ಟಿದ ಮರಳ ಗೂಡನ್ನು ತಾವೇ ಕೈಯಾರೆ ಕಿತ್ತು, ಖುಷಿಯಲ್ಲೇ ಬೀಳಿಸಿ ನಗುನಗುತ್ತಲೇ ಮನೆಯತ್ತ ಓಡುತ್ತಾರೆ.
ಹೌದಲ್ಲವೇ? ನಮ್ಮ ನೆನ್ನೆಗಳು, ತೊರೆದು ಹೋದವರ ನೆನಪುಗಳು, ಕಳೆದುಕೊಂಡವರ ಕುರುಹುಗಳು.. ಇವೆಲ್ಲವನ್ನೂ ಬಿಟ್ಟಬಿಡಲಾಗದೆ, ಆ ಮಕ್ಕಳಂತೆ ಬೀಳಿಸಲಾಗದೆ ನಾವು ಒದ್ದಾಡುತ್ತಿರುತ್ತೇವೆ. ಕೈಯಾರೆ ಕಟ್ಟಿದ ಮರಳ ಗೂಡು ನಿಜದಲ್ಲಿ ಎಂದೋ ಉರುಳಿ ಹೋಗಿದ್ದರೂ ಮನದಲ್ಲಿನ್ನೂ ಅದನ್ನು ಜೀವಂತವಾಗಿಟ್ಟುಕೊಂಡು ನರಳುತ್ತೇವೆ. ಕೊರಗುತ್ತೇವೆ.
ನೆನ್ನೆಯಾ ಕೆದಕುತ
ನಾಳೆಯ ಹುಡುಕುತ
ಈ ಕ್ಷಣ ಜಾರಿದೆ
ಏನನೂ ಪಡೆಯದೇ..
ಆದರೂ, ಎಲ್ಲ ಸಮಾಧಾನದಾಚೆಗೂ ಹಲವಾರು ಪಶ್ಚಾತ್ತಾಪಗಳು ಒಳಗೇ ಉಳಿದು ಹೋಗಿದ್ದವು. ಅಪ್ಪನ ಅನಾರೋಗ್ಯಕ್ಕೆ ನಾನೇ ಕಾರಣ. ನಾನು ಸರಿಯಾದ ಡಾಕ್ಟರ ಹತ್ತಿರ ತೋರಿಸಬೇಕಿತ್ತು. ಆ ಆಸ್ಪತ್ರೆಗೆ ಹೋಗಬಾರದಿತ್ತು. ನಾನು ಮಾತ್ರೆ ಕೊಟ್ಟಿದ್ದರಲ್ಲೇ ಏನೋ ವ್ಯತ್ಯಾಸವಾಗಿದೆ. ಇಲ್ಲದಿದ್ದರೆ ಹೀಗಾಗುತ್ತಿರಲಿಲ್ಲ. ನಾನೇ ತಪ್ಪು ಮಾಡಿಬಿಟ್ಟೆ.. ಮನಸ್ಸು ಕೊರಗುತ್ತಿತ್ತು.
ಅಷ್ಟರಲ್ಲಿ ಗೆಳೆಯರೊಬ್ಬರು ಕರೆ ಮಾಡಿದರು. ಅವರ ಹತ್ತಿರ ಇದನ್ನೆಲ್ಲಾ ಹೇಳಿಕೊಂಡೆ. ಅವರು ಮೆಲ್ಲನೆ ನಕ್ಕು ನುಡಿದರು:
“ದೇವ್ರು ಭಾಳಾ ಶಾಣ್ಯಾ ಅದಾನ್ರೀ. ಪ್ರಶ್ನೆ ಉತ್ರ ಎರ್ಡನ್ನೂ ಇಲ್ಲೇ ಇಟ್ಟು ಹುಡುಕಾಡಿಸ್ತಾನೆ”
ಭಾರವಾಗಿ ನಿಟ್ಟುಸಿರಿಟ್ಟು ಮುಂದುವರೆಸಿದರು.

“ಅವ್ನು ಯಾವ ತಪ್ಪನ್ನೂ ತನ್ಮೇಲೆ ಹಾಕ್ಕೊಳಲ್ಲ. ನಾನು ಹಂಗೆ ಮಾಡಿದ್ದು ತಪ್ಪಾಯ್ತು, ಹಿಂಗೆ ಮಾಡಿದ್ದು ತಪ್ಪಾಯ್ತು ಅಂತ ಮುಗಿಯದ ಪಶ್ಚಾತ್ತಾಪಾನ ನಮ್ಮೊಳ್ಗೆ ಉಳ್ಸಿ ತಾನು ಮಾತ್ರ ನಿರಾಳವಾಗಿರ್ತಾನೆ.
ದೇವ್ರು ತುಂಬಾ ಬುದ್ಧಿವಂತ ಅದಾನ.

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.
