ಕಾಯ್ಕಿಣಿಯವರ ಕಾವ್ಯಗಳಲ್ಲಿ ದಂತಗೋಪುರದ ವಾಸಿ, ವಿಲಾಸಿ, ಪ್ರವಾಸಿಗರು ಕಾಣಸಿಗಲಾರರು; ಏಕೆಂದರೆ, ನಮ್ಮ-ನಿಮ್ಮ ನಡುವೆ, ಆಚೆ-ಈಚೆ, ಕಣ್ಣಿಗೆ ಬಿದ್ದರೂ ಬೀಳದಂತಿರುವ, ಅಥವಾ ನಾವು ನೋಡಿದರೂ ನೋಡದಂತೆ ಮುಂದೆ ಸಾಗುವುದಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ- ಕಷ್ಟವೋ-ಕಾರ್ಪಣ್ಯವೋ ಎಲ್ಲಕ್ಕೂ ಎದೆಗೊಡುತ್ತ ಕಾಲ್ಪನಿಕ ರೇಖೆಗಳನ್ನು ಧಿಕ್ಕರಿಸುತ್ತ, ಅಲ್ಲಗಳೆಯುತ್ತ, ತಮ್ಮದೇ ಜೀವನಚಿತ್ರವ ಮೂಡಿಸುವ ಜೀವಭಂಡಾರಿಗಳು- ಕಾಯ್ಕಿಣಿಯವರ ಕಾವ್ಯಪ್ರಪಂಚವನ್ನು ನಿರಾಯಾಸ, ನಿರಪೇಕ್ಷ್ಯವಾಗಿ ಧರಿಸುತ್ತಾರೆ; ಭರಿಸುತ್ತಾರೆ. ಅಥವಾ ಕೆಲವೊಮ್ಮೆ, ಜೀವಸಂಕುಲದೆಡೆಗಿನ ನಮ್ಮದೇ ಕಕ್ಕುಲಾತಿ, ಒಳಗುದಿಯಲ್ಲೇ- ನಿಚ್ಚಳವಾಗಿ ವ್ಯಕ್ತಗೊಳಿಲಾಗದಂಥ ಮಾನವಿಕ ಭಾವದಲೆಗಳು, ಅದ್ಯಾವುದೋ ಒಂದು ರೂಪಕದಲ್ಲಿ ರೂಹುತಳೆದಂತೆ ಅನಿಸಿದರೂ ಅಚ್ಚರಿಯಲ್ಲ.
ಜಯಂತ ಕಾಯ್ಕಿಣಿಯವರ “ವಿಚಿತ್ರಸೇನನ ವೈಖರಿ” ಕವನ ಸಂಕಲನದ ಕುರಿತು ಗೀತಾ ಹೆಗಡೆ ಬರಹ
“ಸುಶ್ರಾವ್ಯವಾದ ನಿಃಶ್ಶಬ್ದವಿತ್ತು
ಹೆಜ್ಜೆ ಇಡದ ಜಾಗದಲ್ಲಿ
ಹಿಡಿಯಹೋದರೆ ಹೊರಟುಬಿಡುತ್ತಿತ್ತು” (‘ಹಿಡಿಯಹೋದರೆ’)
ಬಹುಶಃ ಇದೊಂದು ವ್ಯಾಖ್ಯಾನದಂತೆ ಸಲ್ಲಬಹುದು; ಎಲ್ಲ- ಕವಿಗಳ, ಕವಿತೆಗಳ ಸಂಭಾವ್ಯ, ಅಸಂಭಾವ್ಯ ಅಂತರಂಗ-ಬಹಿರಂಗಗಳ ನಿಷ್ಪನ್ನ ತೊಳಲಾಟಗಳ, ನಿಗೂಢದ ಅನ್ವೇಷಣೆಗಳ ಕಷ್ಟ-ಸುಖದ ಬಗ್ಗೆ! ಅದೆಷ್ಟೋ ಚುಕ್ಕಿಗಳು ಚೆಲ್ಲಾಡಿರುತ್ತವೆ- ಒಂದು ವಿಶಾಲವಾದ ಅವ್ಯಕ್ತದಲ್ಲಿ; ಮತ್ತದರಲ್ಲಿ ಯಾವ್ಯಾವುದೋ ಚುಕ್ಕಿಗಳನ್ನು, ಯಾವ್ಯಾವುದೋ ಆಕಾರದಲ್ಲಿ, ವಿನ್ಯಾಸದಲ್ಲಿ, ಕಲ್ಪನಾವಿಲಾಸದಲ್ಲಿ, ಜೋಡಿಸಿ, ಜೋಡಿಸಲೇಬೇಕೆಂದೇನೂ ಇಲ್ಲ; ಜೋಡಿಸಿದಂತೆ ಭಾಸವಾದರೂ ಸಾಕು; ಅಲ್ಲಿ ಪ್ರತ್ಯಕ್ಷವಾಗುವ ರೂಪವೇ ಆಗುವುದೊಂದು ಕಾವ್ಯಸೃಷ್ಟಿ! ಅದೊಂದು, ಮುಟ್ಟದೇ, ಮೆಟ್ಟದೇ ಅನುಭವಿಸಬಹುದಾದ ಆನಂದ. “ಹಿಡಿಯಹೋದರೆ ಹೊರಟೇಬಿಡುವ” ಚಕ್ಕಂದ!
ಒಂದು ಉಕ್ಕಂದದಲ್ಲಿ, ಉತ್ಕಟವಾಗಿ ಹೊಮ್ಮುವ ಜಯಂತ್ ಕವಿತೆಗಳು, ‘ವಿಚಿತ್ರಸೇನನ ವೈಖರಿ’ ಯಲ್ಲಿ ಮಾತ್ರ ಅಂತಲ್ಲ; ‘ಆಡುಮಾತಿ’ನಂತೆ ‘ಆಡುದಿನ’ದ- ಎನ್ನಬಹುದಾದ ಸೂಕ್ಷ್ಮಾತಿಸೂಕ್ಷ್ಮ ವಿದ್ಯಮಾನಗಳ ಪ್ರತಿಮಾತ್ಮಕ ರೂಪಣೆಯಲ್ಲಿ ಅವರ ಸಾಹಿತ್ಯಸೃಷ್ಟಿಯಲ್ಲಿ ಇನ್ನೊಂದೇ ಅವ್ಯಕ್ತವನ್ನು ಸಾಂಕೇತಿಸುತ್ತವೆ. ಆ ಕವಿತೆಗಳ ಸಮುದ್ರ, ಅಲೆಗಳ ಉಪ್ಪಿನ ರುಚಿ ನೋಡುತ್ತ ಕಡಲ ಉಪ್ಪಿನ ಸಾಂದ್ರತೆಯ ಬಗೆಗೆ ಯೋಚಿಸಹೊರಡುವ, ಕವಿತೆಯ ಹೀರುಗೊಳವೆಯಂಥ ಓದುಗನೆದೆಯೊಳಗೆ ಅಲೆ-ದಾಟ ಶುರು ಹಚ್ಚಿಕೊಳ್ಳುತ್ತದೆ! ಎಷ್ಟೋ ಸಲ ಹೈರಾಣಾಗಿಸಲೂಬಹುದು! ಸಾಲುಗಳೆಲ್ಲ ಪ್ರತಿಮೆಗಳಾಗಿ, ಸಂಗತಿಗಳೆಲ್ಲ ರೂಪಕಗಳಾದರೆ, ದೈನಿಕದಲ್ಲೇ ದೈವಿಕತೆ ಕಾಣುವ ಜಯಂತರ ಕಾವ್ಯಗಳಲ್ಲಿ ಯಾವುದೇ ಸೈದ್ಧಾಂತಿಕ ಘೋಷಣೆಗಳನ್ನು ನೀವು ಕಾಣಲಾಗದು. ಸೀದಾ-ಸಾದಾ ಆಗಿ, ಜೀವಗಳನ್ನು ದಡ ದಾಟಿಸಲೆಂಬಂಥ ಜವಾಬ್ದಾರಿ ಹೊತ್ತ ಬಸ್ಸು, ಲಾರಿ, ಟ್ರಕ್, ಟ್ರಾಕ್ಟರ್, ಟಪಾಲು ಗಾಡಿಗಳು, ಅವುಗಳ ನಿರುಮ್ಮಳ ಸಂಚಾರಕ್ಕೆ ಹಾಸಿಕೊಂಡಂಥ- ಹೆದ್ದಾರಿಗಳು, ಆ ಲಯಕ್ಕೆ ದನಿಗೂಡಿಸುವ, ಹಲಬಗೆಯ ಪಥಿಕರ. ದಾರಿಹೋಕರ- ಹಸಿವು, ಬಡತನ, ಬೆವರು-ಬವಣೆಗಳು; ಮತ್ತದರಲ್ಲೇ ಕುಡಿಯೊಡೆದು, ದಾಂಗುಡಿಯಿಟ್ಟ, ಪಲ್ಲವಿಸಿ- ಫುಲ್ಲವಿಸುವ ಬದುಕೆಂಬ ತಾಯ ಮೆಲ್ದನಿಯ, ಇನಿದನಿಯ ಜೋಗುಳಗಳು! ಕಾವ್ಯ-ಕಥಾನಕದ ಹಿನ್ನೆಲೆಯಲ್ಲಿ ರೂಪ-ರೂಪಕವಾಗಿ ಮೊರೆವ ಸಮುದ್ರಗಳು, ಮೆರೆಯುವ ಸಂತೆಗಳು!.. ಹಾಗೆ ನೋಡಿದರೆ, ಬರವಣಿಗೆ- ಎಂದರೆ ಕವಿಗೆ, ಅಮ್ಮ ರುಚಿ ಹದಗೊಳಿಸಿ, ‘ಕಂದನ ಬಾಯಲ್ಲಿ ಅದು ವಿಲೀನಗೊಳ್ಳುವ/ ಪರೋಕ್ಷ ಸುಖದ ಬಗೆ’(ರಹಸ್ಯ). ‘ಸದ್ದಿಲ್ಲದೆ ಆಗುವ ಆ ಅಗೋಚರ ತುತ್ತಿನ/ ಜೀವನ ಸತ್ವವೇ ಬೇರೆ..’/‘ಎಲ್ಲಾ ಒಂದನ್ನೊಂದು ಸೇರಿಯೇ/ ಒಂದನ್ನೊಂದು ಮೀರುವ ಈ ಭಂಗುರ ಚಣದಲ್ಲೇ ಇದೆ/ ಅಗೋಚರ ಮಮತಾ ರಹಸ್ಯ..’ ಈ ಸಮೂಹ-ಪ್ರಜ್ಞೆ ಕವಿಯ ಇತರ ಕೃತಿಗಳಲ್ಲೂ ಸಾಕಷ್ಟು ಸಲ ವ್ಯಕ್ತಗೊಳ್ಳುತ್ತದೆ- ಉದಾಹರಣೆಗೆ ಅವರ ‘ಟೂರಿಂಗ್ ಟಾಕೀಸ್’ ಕೃತಿಯಲ್ಲಿ ಪ್ರತಿಪಾದಿಸಲ್ಪಡುವ, ಯಾವುದೇ ಸಿನೆಮಾವೊಂದರ ಸಾಮೂಹಿಕ ದೇಖಾವೆಗೂ- ಬಿಡಿ-ಖಾಸಗೀ ವೀಕ್ಷಣೆಗೂ ತೋರಿಬರುವ ವ್ಯತ್ಯಾಸ!..
ಇನ್ನೊಂದೆಡೆ, ಬದುಕು ಮತ್ತು ಬರಹ ಹೇಗೆ ಸಮೀಕರಿಸಿಬಿಡುತ್ತವೆ!- ಇಲ್ಲಿ ನೋಡಿ; ‘ಸಂಸಾರವೇ ತಿದ್ದಿಕೊಳುವ ಆಂತರಿಕ ಒಕ್ಕಣೆ’ ಬದುಕಿನ ಪ್ರೂಫು ಆಗಾಗ ತಿದ್ದುಪಡಿಗಾಗಿ ಕೈಗೆ/ ಬರುತ್ತಲೇ ಇರುತ್ತದೆ/ ಆಯಾ ಕ್ಷಣದಲ್ಲೆ ಮಾಡಿಕೊಂಡರೆ ಒಳಿತು/ ಆ ಅಲ್ಲಿಂದಲೇ ಎಲ್ಲ ಹಗುರಾದೀತು….ʼ ಮರುಛಾವಣಿಗೆಂದು ಹುಲ್ಲಿನ ಮಾಡು ತೆಗೆಸಿಕೊಂಡ ಮನೆಯೊಂದು, ನುಗ್ಗಿ ಆವರಿಸಿದ ಬೆಳಕಿನಲ್ಲಿ ಬೆತ್ತಲಾಗಿಬಿಟ್ಟಂತೆ, ‘ಅಡಗಿ ಕೂತವನ ಮುಖಕೆ ಬ್ಯಾಟರಿ ಬಿಟ್ಟಂತೆ’ ತೋರುತ್ತದೆ: ಅಲ್ಲದೆ, ‘ಬೆಳಕು ಬದಲಾದಾಗ ಕಥೆಯೆ ಬದಲಾದೀತೆ/ ಎಲ್ಲ ಅವಾಕ್ಕಾಗಿ ನಿಂತು ಮುಂದಿನ ಇಶಾರೆಗೆ/ ಕಾಯುತಿವೆ…/ (‘ತಿದ್ದುಪಡಿ’).
ಕವಿಗೆ ಅಕ್ಷರಗಳು ಮತ್ತು ಬದುಕು ಬೇರೆ-ಬೇರೆಯಲ್ಲ: ಸ್ಥಾವರ-ಜಂಗಮ… ಅಣು-ರೇಣು-ತೃಣ-ಕಾಷ್ಠಗಳಲ್ಲೂ ತಮ್ಮ ಅವಿನಾಭಾವ ಸಂಬಂಧವನ್ನವು ಸೂಚಿಸುತ್ತಲೇ ಇರುತ್ತವೆ!- ಚಲಿಸುವ ಕವಿತೆಗೆ ಕಾದ ನಿಶ್ಚಲ ಪದಗಳಂತೆ…’ (ಇಶಾರೆ). ಇಸ್ತ್ರಿ ಅಂಗಡಿಯವನ ಕಪಾಟಿನ ನಿಶ್ಚಲ ಬಟ್ಟೆಗಳು, “ಶಬ್ದಕೋಶದಲ್ಲಿ ಕಾದು ಕೂತ ಪದಗಳಂತೆ”, “ತೊರೆದ ಕ್ರಿಯಾಪದದಂತೆ ಅವನ ಬಳಕೆಯ ಉಡುಪು ನನ್ನ ಕೈಲಿ’ (ಗಾಳಿಯ ಕೈಗೆ ಸಿಕ್ಕ ದನಿ) ಇಲ್ಲೆಲ್ಲ ವಸ್ತುಗಳು ಪದಗಳಾಗಿ ಮೂಡಿದರೆ, ಪದಗಳೇ ಸಜೀವಾಗಿ ಮರ್ತಗೊಳ್ಳುವ ಘಳಿಗೆಗೆ “ಶ್ರುತಿ ಮಿಡಿವ ನೀಳ ಬೆರಳುಗಳು ಆಗಾಗ ಹಾಡುಗಳ ನಡುವೆ/ ಈ ಪುಸ್ತಕಎತ್ತಿ ಪುಟಗಳನ್ನು ತಿರುವುವಾಗ/ ಅದರೊಳಗಿನ ಎಲ್ಲ ಪದಗಳಿಗೂ ರೋಮಾಂಚನವಾಗುತ್ತದೆ/ ಶಿಶುವಿಹಾರದ ಮಕ್ಕಳು ಅಮ್ಮನನ್ನು ಕಂಡಿದ್ದೇ/ ಎತ್ತಿಕೋ ಎತ್ತಿಕೋ ಎಂದು ಕೈ ಚಾಚುವಂತೆ ಅವು ವಿಚಲಿತಗೊಳ್ಳುತ್ತವೆ”, ಸಾಕ್ಷಿಯಾಗುತ್ತವೆ(ಹಾಡುಗರ್ತಿಯ ಹಾಡಿನ ಪಟ್ಟಿ)! ‘ಪುಟಗಳ ಮರೆಯಲ್ಲೊಂದು ಪರ್ಯಾಯ ಜೀವನ ಕದ್ದು ನಡೆಸಿದ ಮಾಯಾಸಮಯ’, ಮತ್ತದರ ದಾತಾರರಾದ, ‘ಆತ್ಮಿಕ ನೆಂಟಸ್ತನ ಕುದುರಿಸುವ ತವರುಮನೆಗಳಂಥʼ, ‘ಅಭಯದಾಯೀ’- ‘ಹಳೆಪುಸ್ತಕ’- ಕವಿತೆ, ತುದಿಯಲ್ಲಿ ಒಂದು ರಮ್ಯವ್ಯಾಖ್ಯೆಯನ್ನು ಹೇಳಲು ಹಿಂಜರಿಯುವುದಿಲ್ಲ; ಅದೆಂದರೆ, ‘ಹಳೆಯ ಮಾಗಿದ ಪುಸ್ತಕ/ ಕಾಯುತ್ತ ಇರುತ್ತದೆ ಹೀಗೆ/ ತಕ್ಕ ಸಮಯಕ್ಕೆ ಬರಲು ಕೈಗೆ/ ನಮ್ಮ ಶಾಪವಿಮೋಚನೆಗೆ’! ‘ಖೋಡಿ ಬೈರಾಗಿ’ ಕವಿತೆಯಲ್ಲೊಂದು ವಿಷಾದದ ಗೆರೆ ಬಣ್ಣಿಸಲೆಳಸುವದು- ದಶಕಗಳ ಹಿಂದಿನ ಧಾರವಾಡದ ನಚ್ಚುಗೆಯ ಚಿತ್ರಣವನ್ನು. ‘ಡಿಲೀಟ್ ಮಾಡಿದಂತೆ ಮಾಯವಾದ’– ದಶಕಗಳ ಹಿಂದಿನ ಧಾರವಾಡದ ಹತ್ತು ಹಲವು ಸ್ಮೃತಿಚಿತ್ರಗಳಲ್ಲಿ, ‘ಬಟ್ಟೆ-ಬುಟ್ಟಿಯ ಹೊತ್ತ ಇಳಕಲ್ ಸೀರಿ ಉಟ್ಟವರು’, ಹೊಟ್ಟೆಪಾಡಿಗಾಗಿ ಪಟ್ಟಣಕ್ಕೆ ಗುಳೆಹೋದವರು, ಹಸಿ-ಹಸಿರು ಹೊಲದಿಂದ ಉಚ್ಚಾಟಿತಗೊಂಡಂಥ ಟ್ರಾಕ್ಟರ್, ‘ಶಾಪವಿಮೋಚನೆಗೆ ಕಾದ ವಿಗ್ರಹಗಳಂತೆ ವಿಹ್ವಲಗೊಂಡ ಕೂಲಿಕುಟುಂಬ.. ಏನೆಲ್ಲ!.. ಆದರೆ.. ಬದುಕಿನ ಪುಸ್ತಕದಲ್ಲಿ ಅಚ್ಚೊತ್ತಿ, ಮನಕೆ ಹತ್ತಿರವಾಗಿ, ಮಾಯವಾದವರು.. ಪುಟವಿಕ್ಕಿ ಪ್ರತ್ಯಕ್ಷರಾಗುವ ಕವಿತೆಗಳಾಗಿ, ಮತ್ತೆ ಸಾಲಾಗಿ ಹೊಳೆವರು..’ ಒಂದು ಸಣ್ಣ ನೀರವ’, ‘ಗಾಳಿಯ ಕೈಗೆ ಸಿಕ್ಕ ದನಿ’, ‘ಮಂಜುನಾಥನ ಕವಿತೆ’, ‘ಎಂ.ವ್ಯಾಸ, ‘ಚಿಹ್ನೆ’..‘ನೆಲಗುಣ’..ದಂಥ ಕವಿತೆಗಳಲ್ಲಿ.
ಓದುವಿಕೆ, ಒಂದು ‘ಸದೇಹ ಸ್ವರ್ಗಾರೋಹಣ’ದಂತೆ(‘ಅದು’) ಆದರೆ, ‘ಅಂಗಿ’ ಒಂದು ಕೇವಲ ಅಂಗಸೌಷ್ಟವ ಕಾಪಾಡುವ ವಸ್ತುವಾಗಿರದೇ, ಬದುಕಿನ ಹತ್ತು-ಹಲವು ಮಜಲುಗಳಲ್ಲಿ ಆತ್ಮೀಯ ಅತಿಶಯಗಳಲ್ಲಿ ಜೀವಕ್ಕೆ ಆತುಕೊಂಡು, ‘ರೆಪ್ಪೆ ಸವರಿ ಕೆನ್ನೆಯೊರೆಸಿ ಪ್ರತೀಕವಾಗುವುದು-(‘ಅಂಗಿ’), ಸದೇಹ ಸ್ವಪ್ನಾರೋಹಣಕ್ಕೆʼ! ‘ಮರ’ ದಲ್ಲಿ, ವಿಹಂಗಮ ಬಣ್ಣನೆಯ ‘ಹೂ-ಸ್ಪರ್ಷ’ವನ್ನೂ, ‘ಆದರೂ ಇರಲಿ’ ತನ್ನ ತೆಳು ಹಾಸ್ಯ, ಮೃದು ವಿಡಂಬನೆಯ ಜೊತೆಜೊತೆಗೇ, ದೈನಿಕದಲ್ಲೇ ಹುಟ್ಟಿಕೊಳ್ಳುವ ತತ್ವದೊಂದು ಅವ್ಯಕ್ತ ಒಕ್ಕಣೆಯೊಂದರ ‘ಭೂಸ್ಪರ್ಶ’ ವನ್ನೂ ಓದುಗನನ್ನು ಸೋಕಬಲ್ಲದು. ವಿಚಿತ್ರಸೇನ ಒಳಹೊಕ್ಕ ಚಾ-ದುಕಾನಿನ ಗೋಡೆಯ ಮೇಲಿನ ಬಾಬಣ್ಣನ ಚಿತ್ರ(ಣ)ದೊಂದಿಗೇ ತೆರೆದುಕೊಳ್ಳುವ ಕವನ, ತನ್ನ ನಾಟಕೀಯತೆಯ ಚೌಕಟ್ಟುಗಳಾಚೆಗೆ ಅನಾವರಣಗೊಳಿಸುವ ಪ್ರಪಂಚ- ಬೇರೆಯದೇ ಇದೆ’- ‘ಜಗತ್ತು ಹಗಲಲ್ಲಿ ಗುರುತು ಬಹಳ ಮುಂದೆ ಹೋಗುತಿತ್ತು..’ ಎಂದ ಹಾಗೆ’! (‘ಕಾಳಗ’).
ಕಾಯ್ಕಿಣಿಯವರ ಕಾವ್ಯಗಳಲ್ಲಿ ದಂತಗೋಪುರದ ವಾಸಿ, ವಿಲಾಸಿ, ಪ್ರವಾಸಿಗರು ಕಾಣಸಿಗಲಾರರು; ಏಕೆಂದರೆ, ನಮ್ಮ-ನಿಮ್ಮ ನಡುವೆ, ಆಚೆ-ಈಚೆ, ಕಣ್ಣಿಗೆ ಬಿದ್ದರೂ ಬೀಳದಂತಿರುವ, ಅಥವಾ ನಾವು ನೋಡಿದರೂ ನೋಡದಂತೆ ಮುಂದೆ ಸಾಗುವುದಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ- ಕಷ್ಟವೋ-ಕಾರ್ಪಣ್ಯವೋ ಎಲ್ಲಕ್ಕೂ ಎದೆಗೊಡುತ್ತ ಕಾಲ್ಪನಿಕ ರೇಖೆಗಳನ್ನು ಧಿಕ್ಕರಿಸುತ್ತ, ಅಲ್ಲಗಳೆಯುತ್ತ, ತಮ್ಮದೇ ಜೀವನಚಿತ್ರವ ಮೂಡಿಸುವ ಜೀವಭಂಡಾರಿಗಳು- ಕಾಯ್ಕಿಣಿಯವರ ಕಾವ್ಯಪ್ರಪಂಚವನ್ನು ನಿರಾಯಾಸ, ನಿರಪೇಕ್ಷ್ಯವಾಗಿ ಧರಿಸುತ್ತಾರೆ; ಭರಿಸುತ್ತಾರೆ. ಅಥವಾ ಕೆಲವೊಮ್ಮೆ, ಜೀವಸಂಕುಲದೆಡೆಗಿನ ನಮ್ಮದೇ ಕಕ್ಕುಲಾತಿ, ಒಳಗುದಿಯಲ್ಲೇ- ನಿಚ್ಚಳವಾಗಿ ವ್ಯಕ್ತಗೊಳಿಲಾಗದಂಥ ಮಾನವಿಕ ಭಾವದಲೆಗಳು, ಅದ್ಯಾವುದೋ ಒಂದು ರೂಪಕದಲ್ಲಿ ರೂಹುತಳೆದಂತೆ ಅನಿಸಿದರೂ ಅಚ್ಚರಿಯಲ್ಲ. ಒಬ್ಬಾತನಿಗೆ, ಎದುರಿವನ ಕೈಗಡಿಯಾರದಲ್ಲಿ ಓಡುತ್ತಿರುವ ಸಮಯ- ತನ್ನದೇ ಅಥವಾ ಆತನದೇ? ಎಂಬ ಗೊಂದಲ; ಇನ್ನೊಬ್ಬನಿಗೆ, ತನ್ನ ಟಿಕೆಟ್ ತೆಗೆದುಕೊಳ್ಳುವಾಗಲೂ ಪರಿವೆಯಿದೆ- ತನ್ನ ಉಳಿದರ್ಧ ಇನ್ನೆಲ್ಲೋ ಇದೆ; ಅಥವಾ ಎಲ್ಲರಲ್ಲೂ ಹಂಚಿಹೋಗಿರಲೂಬಹುದು.. ಇಂಥ, ಅಮರ್ತ ಪ್ರತೀಕಗಳು ಶಬ್ದದಾಚೆಗೂ ಇನ್ನೇನನ್ನೋ ಹೇಳುತ್ತವೆ.. ಒಟ್ಟಾರೆ, ಜಯಂತ ಕಾಯ್ಕಿಣಿವರ ಸಾಹಿತ್ಯಕೃಷಿಯ ಬಾಹುಳ್ಯದೃಷ್ಟಿಯಿಂದ ನೋಡಿದಾಗ, ಅವುಗಳ ವಸ್ತು, ವಿನ್ಯಾಸ, ವೈವಿಧ್ಯತೆಗಳು ಅಷ್ಟೇ ಹರಹು ಹೊಂದಿವೆ; ಮತ್ತು ಓದುಗವಲಯದ ಇನ್ನಷ್ಟು ಒಳನೋಟಗಳ ಕಾಯುತ್ತಿವೆ- ಎಂದು ಹೇಳಬಹುದು. ಪ್ರತೀ ಕವಿತೆಯೂ ತನ್ನ ಓದಿಗಷ್ಟಷ್ಟು, ಅಷ್ಟಷ್ಟೇ ಅಥವಾ, ಅಷ್ಟನ್ನೂ!- ಓದಿದಾಗಷ್ಟೇ ವಿನಿಮಯ ಮಾಡಿಕೊಳ್ಳುವುದು. ‘ಆದರೆ’, ಈ ಸಾಲುಗಳನ್ನು ‘ ಓದಿ’….
‘ಬಸ್ಸೊಂದು ಪಾಸಾಗಿ ಎಬ್ಬಿಸಿದ ಧೂಳಿನ ಹೆಮ್ಮೋಡದಲ್ಲಿ
ಬಸ್ಸಿನೊಡಗೂಡಿ ಎಲ್ಲವೂ ಮಾಯ..
ಒಂದು ಸಣ್ಣ ನೀರವದ ನಂತರ ಮತ್ತೆ
ಚಿತ್ರಕ್ಕೆ ಜೀವ ಬಂದು ಎಲ್ಲ ಮುಂದೆ ಚಲಿಸುತ್ತದೆ’
‘….ಹೊರಗಡೆಯಿಂದ ಕೆತ್ತುತ್ತಾರಲ್ಲ ಶಿಲ್ಪಿ
ಹಾಗೆ ಹಾಗೆ ಒಳಗಡೆಯಿಂದಲೇ ಕೆತ್ತುತ್ತ ಕೆತ್ತುತ್ತ
ನಮ್ಮನ್ನು ಬಿಡುಗಡೆ ಮಾಡುತ್ತದೆ ಬೆಳಕು
ಸದ್ದಿಲ್ಲದೆ..’ (‘ಒಂದು ಸಣ್ಣ ನೀರವ’)
ಆಧ್ಯಾತ್ಮಿಕ ಪರಿಪ್ರೇಕ್ಷ್ಯದಲ್ಲಿ ಬಣ್ಣಿಸುವುದಾದರೆ, ಜೀವಯಾತ್ರೆಯ ಯಾತ್ರಿಕ ಜೀವಗಳ ಅಲೆಮಾರಿತನ, ಪರಮಗಮ್ಯವ ಅನ್ವೇಷಿಸುವಲ್ಲಿ, ಅಥವಾ ಅನ್ವೇಷಿಸದೇ ಹೋಗುವ/ಇರುವ ಜಂಜಾಟಗಳಲ್ಲಿ, ಸಿಕ್ಕುಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಅನುಪಾಧಿಕ ಅಸಂಗತ ಲೌಕಿಕ ವ್ಯಾಪಾರಗಳು, ಒಂದು ವರ್ತಮಾನ; ಆದರೂ- ಅದರಲ್ಲೇ ಮಿಡಿಯುವ, ದೈನಿಕವೆ ದೈವಿಕವಾಗಿ ತೋರ್ಪಡಬಲ್ಲಂತ ಒಂದು ಜೀವನಾಡಿ-ಅಂಥದೊಂದು ವಿದ್ಯಮಾನ: ಇದು ಯಾವುದೇ ಒಂದು ದೇಶ-ಕಾಲ-ಜನಾಂಗದ ಸಹೃದಯ ಸಾಹಿತ್ಯದಲ್ಲಿ, ವಿಚಾರಶೀಲತೆಯ ಸೊಬಗಿನಿಂದಲೂ, ಅಂತಃಕರಣದಿಂದಲೂ ಪ್ರತಿಫಲನವಾಗುತ್ತದೆ; ಆಗಬೇಕು.
ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.