ಸತೀಶ ದುರ್ದಾನ ತೆಗೆದುಕೊಂಡವನಂತೆ ರೂಮಿಗೆ ಹೋಗಿ ಬಾಗಿಲನ್ನು ಪಟಾರನೆ ಹಾಕಿಕೊಂಡ. ಹಾಲ್‌ನಲ್ಲೇ ಉಳಿದಿದ್ದ ಮೂರ್ತಿ-ಅನಿತಾ ಕೂಡ ಕಾಲೆಳೆದುಕೊಂಡು ರೂಮಿಗೆ ಹೋದರು. ಇಬ್ಬರೂ ಮಂಚದ ಮೇಲೆ ನೀಟಾಗಿ ಹಾಸಿದ್ದ ಹಾಸಿಗೆಯ ಮೇಲೆ ಕುಳಿತುಕೊಂಡು ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದರು. ಮಾತೇ ಹೊರಡಲಿಲ್ಲ. ಅನಿತಾ ಹತ್ತು ಸಲ ಬಚ್ಚಲು ಮನೆಗೆ ಹೋಗಿ ಬಂದರು. ಮೂರ್ತಿ ಒಂದಿಪ್ಪತ್ತು ಸಲ ಕೂದಲನ್ನು ಕಿತ್ತು ಹಾಕಿದರು. ಬಲಗೈ ಮಧ್ಯ ಬೆರಳಿನ ಉಗುರನ್ನು ಕಡಿಯುತ್ತಲೇ ಇದ್ದರು. ದೀಪ ಆರಿಸಿ ಮಲಗಲು ಇಬ್ಬರಿಗೂ ಭಯವಾಯಿತು. ಬಲ್ಬ್ ಪ್ರತಿದಿವಸವೂ ಹೊರಡಿಸುವುದಕ್ಕಿಂತ ಹೆಚ್ಚಿನ ಕಾಂತಿಯನ್ನು ಹೊರಡಿಸುತ್ತಿದೆ ಅನಿಸಿತು.
ಕೆ. ಸತ್ಯನಾರಾಯಣ ಹೊಸ ಕಾದಂಬರಿ “ನಮಗೊಂದು ಸೊಸೆ ಬೇಕು” ಕೃತಿಯ ಆಯ್ದ ಭಾಗ
ನ್ಯಾಯಾಲಯದ ನಿರ್ದೇಶನಕ್ಕಿಂತ ಮುಂಚೆಯೇ ತೊರೆಯುವಿಕೆಯನ್ನು ಮಾಲಿನಿಯೇ ಘೋಷಿಸಿಬಿಟ್ಟಳಲ್ಲ! ಕಾರಣವಾದರೂ ಏನು? ಕಾರಣವಾದರೂ ಎಷ್ಟು?
ವೈವಾಹಿಕ ಜೀವನ ಇಷ್ಟು ಸಾಕು. ಇನ್ನು ಮುಂದೆ ಕೂಡ ಕುಟುಂಬದೊಳಗೆ, ವೈವಾಹಿಕ ಬಂಧನದೊಳಗೇ ಇದ್ದರೆ ಸರಿಹೋಗೋಲ್ಲ. ಒಂದು ಹಂತದ ನಂತರ ಮದುವೆಯ ಚೌಕಟ್ಟಿನೊಳಗೇ ಇದ್ದರೆ ಹೊಸದಾಗಿ ಏನೂ ಫಲಿಸೋಲ್ಲ. ಎಲ್ಲವೂ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿರುತ್ತದೆ. ಹಾಗಾಗಿ ಎಲ್ಲವೂ ಚೆನ್ನಾಗಿರುವಾಗ, ಎಲ್ಲರೂ ಸಂತೋಷವಾಗಿರುವಾಗ, ಗಂಡ-ಹೆಂಡತಿ ಇಬ್ಬರೂ ಇನ್ನೂ ಅನ್ಯೋನ್ಯವಾಗಿರುವಾಗ, ಸುಖವಾಗಿರುವಾಗ ಬೇರೆಯಾಗುವುದೇ ಒಳ್ಳೆಯದು ಎಂದು ಘೋಷಿಸಿಬಿಟ್ಟಳು. ಹಾಗೆಂದು ಇಬ್ಬರೂ ಒಂದು ಒಪ್ಪಂದಕ್ಕೆ ಬಂದು, ಪ್ರಮಾಣಪತ್ರ ಮಾಡಿಸಿ, ನೋಂದಣಿ ಮಾಡಿಸಿಬಿಡೋಣ, ನ್ಯಾಯಾಲಕ್ಕೆ ಹೋಗೋದೇ ಬೇಡ.

(ಕೆ. ಸತ್ಯನಾರಾಯಣ)
ಸತೀಶ ಹೌಹಾರಿ ಹೋದ. ಇಷ್ಟನ್ನು ಮೊದಲು ಘೋಷಿಸಿದ ಶುಕ್ರವಾರದ ರಾತ್ತಿ ಎಲ್ಲರಿಗೂ ಚೆನ್ನಾಗಿ ನೆನಪಿದೆ. ಮಾಲಿನ ಆವತ್ತು ಒಳ್ಳೆ ಅಪ್ಸರೆ ತರ ಕಾಣಿಸುತ್ತಿದ್ದಳು. ಸಂತೋಷವಾಗಿರುವ ದಿನಗಳಲ್ಲೆಲ್ಲ ಅವಳು ಕ್ರೀಂ ಬಣ್ಣದ ಪಂಜಾಬಿ ಡ್ರೆಸ್ ಹಾಕಿಕೊಳ್ಳುತ್ತಿದ್ದಳು. ಕ್ರೀಂ ಬಣ್ಣದ ವೇಶಭೂಷಣದಲ್ಲಿ ಮಾಲಿನಿ ಸಿಂಡ್ರೆಲಾ ತರ ಕಾಣುತ್ತಾಳೆಂದು, ಅನುರಾಗ ಸೂಸುವ ದೃಷ್ಟಿ ಬೀರುತ್ತಾ ಸತೀಶ ಬಾಯಿ ಚಪ್ಪರಿಸುತ್ತಿದ್ದ. ಆವತ್ತು ಹಳೆಯ ಸಿನೆಮಾಕ್ಕೆ ಹೋಗಿ ಬರುವ ಕಾರ್ಯಕ್ರಮ ಮೊದಲೇ ನಿಗದಿಯಾಗಿದ್ದರಿಂದ ಬೆಳಿಗ್ಗೆ ಬೆಳಿಗ್ಗೆಯೇ ಸಲೂನಿಗೆ ಹೋಗಿ ಬಂದಿದ್ದಳು. ಮುಖವೆಲ್ಲ ಹೊಳೆಯುತ್ತಾ ನನ್ನನ್ನು ಮುಟ್ಟಿ, ಮುಟ್ಟಿ, ನ್ನನ್ನನ್ನೇ ನೋಡಿ ಎಂದು ಆಹ್ವಾನಿಸುವಂತಿತ್ತು. ಸೊಂಪಾದ ಕೂದಲನ್ನು ಆವತ್ತು ಹದವಾಗಿ ಕತ್ತರಿಸಿಕೊಂಡು ಬಂದಿದ್ದರಿಂದ ಮಾಲಿನಿಯ ಸಣ್ಣ ಹಣೆ ವಿಶಾಲವಾಗಿಯೇ ಕಾಣುತ್ತಿತ್ತು. ಸಿನೆಮಾಕ್ಕೆ ಹೊರಡುವ ಮುನ್ನ ಗಮನವಿಟ್ಟು ಮಾಡಿಕೊಂಡ ಅಲಂಕಾರದಿಂದ ಅವಳಿಗೆ ಸಂತೋಷವಾಗಿತ್ತು. ಅತ್ತೆ ಅನಿತಾ ಮೂರ್ತಿ ಕೂಡ ಹೆಮ್ಮೆಯಿಂದ ನೋಡಿ ಕಣ್ಣು ತುಂಬಿಕೊಂಡಿದ್ದರು.
ಬೆಂಗಳೂರಿನಲ್ಲಿ ನಗರ ಸೀಮೆ ಮುಗಿದು ದಂಡು ಪ್ರದೇಶ ಶುರುವಾಗುವ ಜಾಗದಲ್ಲಿ ಒಂದು ಹಳೆಯ ಕಾಲದ ಸಿನೆಮಾ ಮಂದಿರವಿತ್ತು. ಚರ್ಚ್ ತರ ಕಾಣುವ ಸಿನೆಮಾ ಮಂದಿರದ ಕಟ್ಟಡವನ್ನು ಮಾಲೀಕರು ಹಾಗೇ ಉಳಿಸಿಕೊಂಡಿದ್ದರು. ಮಾಲೀಕ ವಾಸುದೇವಶೆಟ್ಟಿ ಕೂಡ ಹಳೆಕಾಲದ ಸಿನೆಮಾಗಳ, ಹಳೆ ಚಿತ್ರಗೀತೆಗಳ, ಕಪ್ಪು ಬಿಳುಪು ಚಿತ್ರಗಳ ಅಭಿಮಾನಿ. ಈ ಹಳೆ ಕಾಲದ ಕಟ್ಟಡವನ್ನು ಒಡೆಸಿ, ಒಳ್ಳೆ ಮಾಲ್ ಕಟ್ಟಿಸಿ, ಕೋಟ್ಯಾಂತರ ರೂಪಾಯಿಗಳನ್ನು ಒಂದೇ ವರ್ಷದಲ್ಲಿ ದುಡಿಯಬಹುದು ಎಂಬ ಹಿತೈಷಿಗಳ ಸಲಹೆಯನ್ನು ಸಾರಾಸಗಟಾಗಿ ತಿರಸ್ಕರಿಸುವಷ್ಟು ಒಡವೆ ವಸ್ತುಗಳ ವ್ಯಾಪಾರವಿತ್ತು ಅವರಿಗೆ. ಶುಕ್ರವಾರ ಸಂಜೆಯ ಪ್ರದರ್ಶನವನ್ನು ತರುಣ ದಂಪತಿಗಳಿಗೆ ಮಾತ್ರ ಮೀಸಲಿಟ್ಟಿದ್ದರು. ಜೀವನ ಸಂತೋಷ ತುಂಬಿದ ಅಥವಾ ಪ್ರಣಯಾಧಾರಿತ ಕಪ್ಪು ಬಿಳುಪು ಚಿತ್ರಗಳನ್ನೇ ತೋರಿಸುತ್ತಿದ್ದರು. ಮಾಲಿನಿ-ಸತೀಶ ಆ ಶುಕ್ರವಾರ ನೋಡಿದ್ದು “ಹಣ್ಣೆಲೆ ಚಿಗುರಿದಾಗ” ಸಿನೆಮಾ.
ಸಿನೆಮಾ ನೋಡಿ, ನೈವೇದ್ಯಂ ಹೋಟೆಲಿನಲ್ಲಿ ಊಟ ಮಾಡಿ, ಎರಡು ಸಲ ಪಾನ್ ಹಾಕಿಕೊಂಡು ಬಂದದ್ದರಿಂದ ಮಾಲಿನಿಯ ತುಟಿ ಮಾತ್ರವಲ್ಲ, ಸತೀಶನ ತುಟಿ ಕೂಡ ರಂಗುರಂಗಾಗಿತ್ತು. ಮನೆಗೆ ಬಂದವಳೇ, ರೂಮಿಗೆ ಹೋಗುವ ಮುನ್ನ ಎರಡು-ಮೂರು ಸಲ ತೇಗಿದಳು. ತೇಗು ಮತ್ತೆ ಮತ್ತೆ ಬರುತ್ತಿರುವುದಕ್ಕೆ ಸಂಕೋಚಪಟ್ಟಳೇ ಎಂಬುದು ಯಾರ ನೆನಪಿನಲ್ಲೂ ಇಲ್ಲ. ಅರಿಷಿನ ಬಣ್ಣದ ನೈಟಿಯನ್ನು ಧರಿಸಿ ಹೊರ ಬಂದಳು. ಹಾಲ್‌ನಲ್ಲಿ ಸೋಫಾದ ಮಧ್ಯ ಭಾಗದಲ್ಲಿ ಕುಳಿತಳು. ಸತೀಶನನ್ನು ಕೂಗಿದಳು. ಧ್ವನಿಯಲ್ಲಿ ಆತುರವಿತ್ತು. ಮೂರ್ತಿ-ಅನಿತಾರನ್ನು ಕೂಡ ಬಲವಂತ ಮಾಡಿ ಎದುರಿಗೆ ಕೂರಿಸಿಕೊಂಡಳು. ಹಿಂದೆ ಕೂಡ ಬನ್ನಿ ಎಂದು ಕರೆಯುತ್ತಿದ್ದಳೇ ಹೊರತು, ಕೂತುಕೊಳ್ಳಲೇಬೇಕು ಎಂದು ಒತ್ತಾಯವನ್ನೇನೂ ಮಾಡುತ್ತಿರಲಿಲ್ಲ. ಆ ಕ್ಷಣದ ಒತ್ತಾಯ ಕೂಡ ಸಹಜವಾಗಿಯೇ ಇತ್ತು. ಹೀಗೆ ನಾಲ್ವರೂ ಒಟ್ಟಿಗೇ ಹಾಗೆ ಕೂರುವ ಪರಿಪಾಠವಿತ್ತು. ಅಪರೂಪಕ್ಕೆಂಬಂತೆ ಹಾಗೆ ಕುಳಿತಾಗಲೆಲ್ಲ ಮಾಲಿನಿಯೇ ಎರಡು-ಮೂರು ಸೇಬಿನ ಹಣ್ಣನ್ನು ಮುಂದುಗಡೆ ಇಟ್ಟುಕೊಂಡು ಹೆಚ್ಚಿ, ಹೋಳು ಮಾಡಿ ಎಲ್ಲರಿಗೂ ಕೊಡುತ್ತಿದ್ದಳು. ಶುಕ್ರವಾರ ಕೂಡ ಹಾಗೇ ಮಾಡಿದಳು. ತಿನ್ನಲು ಇನ್ನೂ ಎಲ್ಲರಿಗೂ ಎರಡೂ-ಮೂರೋ ಹೋಳುಗಳು ಉಳಿದಿದ್ದವು. ಇನ್ನೂ ಹೋಳು ಉಳಿದಿದೆಯಲ್ಲ ಅನ್ನುವ ಭಾವನೆ ಎಲ್ಲರ ಮನಸ್ಸಿನಲ್ಲಿ ಮೂಡುವ ಮುನ್ನವೇ ತನ್ನ ನಿರ್ಧಾರವನ್ನು ಘೋಷಿಸಿಯೇ ಬಿಟ್ಟಳು. ಹಾಗೆ ಘೋಷಿಸುವಾಗ ಅವಳ ಹಣೆಯ ಎಡಭಾಗದಲ್ಲಿ ಸಣ್ಣ ಗಂಟೊಂದು ಮೂಡಿತು. ಅವಳಿಗೂ ಗೊತ್ತಾಗದಂತೆ ಧ್ವನಿಯಲ್ಲಿ ಸಣ್ಣ ಕಂಪನ. ಸತೀಷನಿಗೆ ಮಾಲಿನಿ ತಮಾಷೆ ಮಾಡುತ್ತಿದ್ದಾಳೆ ಅನಿಸಿತು. ಸರಸದ ಸಮಯದಲ್ಲೂ ಹೀಗೇ ಏನಾದರೂ ವಿರಸದ ಮಾತನ್ನು ಆಡಿ ಸತೀಶನನ್ನು ಪೆಚ್ಚಾಗಿಸಿ ನಂತರ ನಗಿಸುತ್ತಿದ್ದಳು. ಈಗಲೂ ಹಾಗೆಂದೇ ಭಾವಿಸಿ ಅವಳನ್ನು ನಗಿಸಲು ಪ್ರಯತ್ನಿಸಿದ. ಕ್ಷಣ ಮಾತ್ರದಲ್ಲಿ, ಜಗತ್ತಿನಲ್ಲಿರುವ ಎಲ್ಲ ಕಾಠಿಣ್ಯವೂ ಮಾಲಿನಿಯ ಮುಖದೊಳಗೆ ಓಡಿ ಬಂದು ಕುಳಿತು ಮುಖವೆಲ್ಲಾ ಗಂಟಾಯಿತು. ಹಾಲುಗಲ್ಲ ಕಬ್ಬಿಣದ ತುಂಡಾಯಿತು. ಕಣ್ಣೊಳಗಿನ ಕಾಂತಿ ಒಳಗೆ ಹೋಗಿ ಒಳಗಡೆಯಿಂದ ಸಿಡುಕುತನ ನುಗ್ಗಿತು.
ಮತ್ತೆ ಮತ್ತೆ ಹೇಳಿದ್ದನ್ನೇ ಹೇಳುತ್ತಾ ಹೋದಳು. ಪ್ರತಿ ಸಲ ಹೇಳುವಾಗಲೂ ಹಿಂದಿನ ಸಲ ಹೇಳಿದ್ದಕ್ಕಿಂತ ಹೆಚ್ಚು ಸ್ಪಷ್ಟವಾಗಿ, ದಿಟ್ಟವಾಗಿ ಹೇಳುತ್ತಿದ್ದಳು. ಹಾವ ಭಾವ ಹೆಚ್ಚಾಯಿತು. ಕೂತಿದ್ದವಳು ಎದ್ದು ನಿಂತು ಮತ್ತೆ ನಾಲ್ಕು ಸಲ ಇನ್ನೂ ಗಡಸಾಗಿ ಹೇಳಿದ್ದನ್ನು ಮತ್ತೆ ಹೇಳಿ ರೂಮಿಗೆ ಹೋಗಿ ದಿಂಬು ತಂದು ಸೋಫಾದ ಒಂದು ತುದಿಗಿಟ್ಟು, ಈವತ್ತು ಇಲ್ಲೇ ಮಲಗುತ್ತೇನೆ ಎಂದಳು. ಮುಖವೆಲ್ಲ ಈಗ ಒಳಗೆ ಹೋಯಿತು. ಯಾರೊಬ್ಬರ ಕಡೆಗೂ ದೃಷ್ಟಿ ಬೀರದೆ ಸೋಫಾದ ಕಡೆ ದೃಷ್ಟಿಸಿದಳು.
ತಟ್ಟೆಯಲ್ಲಿ ಇನ್ನೂ ಒಂದಿಷ್ಟು ಸೇಬಿನ ಹಣ್ಣಿನ ಚೂರುಗಳು ಉಳಿದಿದ್ದವು. ಆ ಚೂರುಗಳೇ ಎಲ್ಲರನ್ನೂ ಎಲ್ಲವನ್ನೂ ನೋಡುತ್ತಿದ್ದವು. ನೋಡುತ್ತಾ ನೋಡುತ್ತಿದ್ದಂತೆ ಆ ರಾತ್ರಿಯ ತಂಪಿನಲ್ಲೂ ಒಣಗಿದವು. ಇಲ್ಲ ಇಲ್ಲ ಇಂತಹ ವಾತಾರವಣದಲ್ಲಿ ನಾವಿಲ್ಲಿ ಇರಬಾರದು, ಹಣ್ಣಾಗಿ ಅದು ನಮ್ಮ ಕರ್ತವ್ಯವಲ್ಲ ಎಂದು ವಿಲಿವಿಲಿ ಒದ್ದಾಡಿದವು.
ಸತೀಶ ದುರ್ದಾನ ತೆಗೆದುಕೊಂಡವನಂತೆ ರೂಮಿಗೆ ಹೋಗಿ ಬಾಗಿಲನ್ನು ಪಟಾರನೆ ಹಾಕಿಕೊಂಡ. ಹಾಲ್‌ನಲ್ಲೇ ಉಳಿದಿದ್ದ ಮೂರ್ತಿ-ಅನಿತಾ ಕೂಡ ಕಾಲೆಳೆದುಕೊಂಡು ರೂಮಿಗೆ ಹೋದರು. ಇಬ್ಬರೂ ಮಂಚದ ಮೇಲೆ ನೀಟಾಗಿ ಹಾಸಿದ್ದ ಹಾಸಿಗೆಯ ಮೇಲೆ ಕುಳಿತುಕೊಂಡು ಒಬ್ಬರನ್ನೊಬ್ಬರು ನೋಡುತ್ತಲೇ ಇದ್ದರು. ಮಾತೇ ಹೊರಡಲಿಲ್ಲ. ಅನಿತಾ ಹತ್ತು ಸಲ ಬಚ್ಚಲು ಮನೆಗೆ ಹೋಗಿ ಬಂದರು. ಮೂರ್ತಿ ಒಂದಿಪ್ಪತ್ತು ಸಲ ಕೂದಲನ್ನು ಕಿತ್ತು ಹಾಕಿದರು. ಬಲಗೈ ಮಧ್ಯ ಬೆರಳಿನ ಉಗುರನ್ನು ಕಡಿಯುತ್ತಲೇ ಇದ್ದರು. ದೀಪ ಆರಿಸಿ ಮಲಗಲು ಇಬ್ಬರಿಗೂ ಭಯವಾಯಿತು. ಬಲ್ಬ್ ಪ್ರತಿದಿವಸವೂ ಹೊರಡಿಸುವುದಕ್ಕಿಂತ ಹೆಚ್ಚಿನ ಕಾಂತಿಯನ್ನು ಹೊರಡಿಸುತ್ತಿದೆ ಅನಿಸಿತು. ಏಕೆ ಇಷ್ಟೊಂದು ತೀಕ್ಷ್ಣವಾಗಿದೆ ಎಂದು ಬಲ್ಬನ್ನೇ ದಿಟ್ಟಿಸಿ ನೋಡಿದರು. ಹಾಗೆ ನೋಡಿದ್ದು ಬಲ್ಬ್‌ಗೆ ಇಷ್ಟವಾಗಲಿಲ್ಲ. ಅದು ಕೂಡ ಮೂತಿ ತಿರುಚಿ ತನ್ನ ಕಾಂತಿಯನ್ನು ಮತ್ತಷ್ಟು ಹೆಚ್ಚಿಸಿದಾಗ ಇವರು ಪೆಚ್ಚಾಗಿ ತಲೆ ತಗ್ಗಿಸಬೇಕಾಯಿತು. ಸರಿ ರಾತ್ರಿ ಕಳೆದು ಬ್ರಾಹ್ಮಿ ಮುಹೂರ್ತ ತಲುಪಿದರೂ, ಕೋಳಿ ಕೂಗಿಯಾದ ಮೇಲೂ ಇಬ್ಬರೂ ಇನ್ನೂ ಎಚ್ಚರವಾಗಿದ್ದರು. ಮಾತಾಡುವಂಥದ್ದು ಇಬ್ಬರಿಗೂ ಏನೂ ಇರಲಿಲ್ಲ. ಇಲ್ಲ, ಇಲ್ಲ, ಮಾತು ಬೇಡವೆನ್ನುಸುತ್ತಿತ್ತು. ಇಲ್ಲ, ಇಲ್ಲ, ಮಾತುಗಳು ರೂಪುಗೊಳ್ಳುತ್ತಿರಲಿಲ್ಲ, ಬಾಯಿಂದ ಹೊರ ಬರುತ್ತಿರಲಿಲ್ಲ.
ಬ್ರಾಹ್ಮೀ ಮುಹೂರ್ತ ಸ್ವಲ್ಪ ಸ್ವಲ್ಪವಾಗಿ ಸರಿದು ಇನ್ನೇನು ಬೆಳಗಾಗಬಹುದು ಅನ್ನುವಾಗ ಅನಿತಾ ಬಚ್ಚಲು ಮನೆಗೆ ಇನ್ನೂ ಒಂದು ಸಲ ಹೋದರು. ಹೋಗಿ ಬಂದು ನೋಡುತ್ತಾರೆ, ಮೂರ್ತಿ ಇವಳ ದಿಂಬನ್ನು ಕೂಡ ತಮ್ಮ ದಿಂಬಿನ ಜೊತೆ ಸೇರಿಸಕೊಂಡು, ಎತ್ತರ ಮಾಡಿಕೊಂಡು ಅದರ ಮೇಲೆ ಮಲಗಿ ಪಿಳಿಪಿಳಿ ಕಣ್ಣು ಬಿಡುತ್ತಿದ್ದರು. ಅನಿತಾ ಎದುರಿಗೆ ನಿಂತದ್ದು ಗೊತ್ತಾಗಲೇ ಇಲ್ಲ. ಪಿಚ್ಚೆನಿಸಿ ಅಡುಗೆ ಮನೆಗೆ ಹೋಗಿ ಹಾಲಿನ ಪಾತ್ರೆಯನ್ನು ಸ್ಟವ್ ಮೇಲೆ ಇಟ್ಟರು. ನೋಡುತ್ತಾರೆ, ಸ್ಟವ್ ಉರಿಯುತ್ತಿದೆ. ಆದರೆ ಹಾಲು ಬಿಸಿಯಾಗುತ್ತಲೇ ಇಲ್ಲ. ಸಿಟ್ಟು ಬಂತು. ಉರಿಯನ್ನು ದೊಡ್ಡದು ಮಾಡಿದರು. ಮಾಲಿನಿ ಹೇಳಿದ ಮಾತುಗಳನ್ನು ಮತ್ತೆ ನೆನಸಿಕೊಂಡರು. ಮಾಲಿನಿ ಸಣ್ಣದಾಗಿ ಗೊರಕೆ ಹೊಡೆಯುತ್ತಿರುವುದು ಕೇಳಿಸಿತು. ನಿಂತಲ್ಲಿಂದಲೇ ಸೋಫಾ ಕಡೆ ದೃಷ್ಟಿ ಬೀರಿದರು. ಸೋಫಾದಲ್ಲಿ ಇಡೀ ದೇಹವನ್ನು ಹರಡಲಾರದೆ, ಮಾಲಿನಿ ನಿದ್ದೆಯಲ್ಲೇ ಹೊರಳಾಡುತ್ತಿದ್ದಳು. ಹತ್ತಿರ ಹೋಗಿ ನಿಂತು ಮುಖ ನೋಡಬೇಕೆನಿಸಿತು. ನಿದ್ದೆಯಲ್ಲೇ ಬಲಗೈನಿಂದ ಎಡಗೈನ ಮುಂಭಾಗವನ್ನು ಸವರಿದಳು. ಮುಖದಲ್ಲೇನೂ ವಿಕಾರ ಕಂಡಂತಾಗಲಿಲ್ಲ. ಹಿಂದಿನ ರಾತ್ರಿ ಘೋಷಿಸಿದ ನಿರ್ಧಾರವನ್ನು ಬದಲಿಸುವಂತೆ ಕಾಣಲಿಲ್ಲ. ಅನಿತಾಗೆ ರೋಷ ಬಂದು ಅಡುಗೆ ಮನೆಗೆ ಬಂದರೆ, ಹಾಲು ಉಕ್ಕಿ ಹರಿದು ಸ್ಟವ್ ಸುತ್ತ ಹಾಲಿನ ನೊರೆ ತುಂಬಿಕೊಂಡಿತ್ತು. ಹಾಲು ಕಟ್ಟೆಯಿಂದ ಕೆಳಕ್ಕೆ ತೊಟ್ಟಿಕ್ಕುತ್ತಿತ್ತು. ಅದರೂ ಸ್ಟವ್ ಉರಿ ಕಡಿಮೆ ಮಾಡುವುದು ಬೇಡವೆನಿಸಿತು. ಮನಸ್ಸಿಗೆ ನಿಸೂರು ಬಂತು. ತಟಕ್ಕನೆ ಸ್ಟವ್ ಆರಿಸಿದಳು. ಮಲಗಿದ್ದ ಮಾಲಿನಿಯ ಎದುರಿಗೇ ಕುರ್ಚಿ ಎಳೆದುಕೊಂಡು ಕುಳಿತರು. ಮಾಲಿನಿಯ ಗೊರಕೆಯ ಸದ್ದಿನ ಜೊತೆಗೆ ರೂಮಿನಿಂದ ಹೊರಬರುತ್ತಿದ್ದ ಮೂರ್ತಿಯ ಗೊರಕೆಯ ಶಬ್ದ ಕೂಡ ಸೇರಿಕೊಂಡಿತು.
ಎದುರು ಮನೆಯವರು ಪ್ರತಿ ದಿನ ಬೆಳಿಗ್ಗೆ ಹಾಕುವ ಶ್ರೀರಂಗಪುರ ವಿಹಾರದ ಅಲೆ ಸಣ್ಣದಾಗಿ ವಾತಾವರಣದಲ್ಲಿ ಸೇರಿಕೊಳ್ಳುತ್ತಿತ್ತು.
ಅನಿತಾ ಮಗನ ರೂಮಿಗೆ ಹೋಗಿ ನೋಡಿದರು. ಸೊಳ್ಳೆ ಪರದೆ ಒಂದು ಕಡೆ ಕಟ್ಟಿಕೊಂಡೇ ಇರಲಿಲ್ಲ. ಸುಗಂಧದ ವಾಸನೆ ಮೂಗಿಗೆ ಬಡಿಯಿತು. ಸಿನೆಮಾಕ್ಕೆ ಹೋಗುವ ಮುನ್ನು ಸಿಂಪಡಿಸಿಕೊಂಡು ಹೋಗಿರಬೇಕು ಎಂದು ಅವಳ ಮನಸ್ಸಿನಲ್ಲಿ ಹಾದು ಹೋದಾಗ, ಮುಖದಲ್ಲಿ ಮೂಡಿದ್ದ ಅಸಹಾಯಕತೆಯ ವೇದನೆ ಅವಳ ಅರಿವಿಗೇ ಬರಲಿಲ್ಲ. ಸತೀಶ ಹೊರಳಾಡಿದ. ಎರಡು ಕಾಲುಗಳನ್ನೂ ಒಂದಕ್ಕೊಂದು ಗಂಟುಹಾಕಿಕೊಂಡು ಮಲಗಿದ್ದ. ಹೊರಳಿದಾಗ ಕಾಲುಗಳು ಬೇರ್ಪಟ್ಟವು.
ಮಾಲಿನಿಯೇ ಸತೀಶನಿಗಿಂತ ಬೇಗನೆ ಎದ್ದಳು. ಎಲ್ಲರನ್ನೂ ನಗಿಸಲು ಪ್ರಯತ್ನಿಸಿದಳು. ಯಾರೂ ನಗದೇ ಹೋದರೂ ಅವಳ ಮುಖದಲ್ಲಿ ಮಾತ್ರ ನಗೆಯ ಒಂದು ಎಳೆ ಯಾತಕ್ಕಾದರೂ ಆಗಲಿ ಎಂದು ಉಳಿದೇ ಇತ್ತು. ನಮಸ್ಕಾರ ಅಂದಳು. ಯಾರೂ ಸ್ಪಂದಿಸಲಿಲ್ಲ. ಹಿತ್ತಲಿಗೆ ಹೋಗಿ ನಿಂತಳು. ಚಪ್ಪರದ ತುಂಬಾ ಬೆಳೆದಿದ್ದ ಅವರೆಕಾಯಿ ಗೊಂಚಲು ಕಾಣಿಸಿತು. ಈಗ ತಾನೇಕೆ ಅದನ್ನು ನೋಡುತ್ತಿದ್ದೇನೆ, ನೋಡಬೇಕು ಅನಿಸಿ ಪೆಚ್ಚಾಯಿತು. ದಿಢೀರನೆ ಒಳಗೆ ಬಂದು ಸ್ನಾನದ ಬಟ್ಟೆ, ಟವೆಲ್ ಜೋಡಿಸಿಕೊಂಡು ಸ್ನಾನದ ಕೋಣೆಗೆ ಹೋದಳು. ಎಷ್ಟು ಹೊತ್ತಾದರೂ ಈಚೆಗೆ ಬರಲೇ ಇಲ್ಲ. Shower ನ ವೇಗ ಆಗಾಗ ಹೆಚ್ಚು ಮಾಡಿಕೊಳ್ಳುತ್ತಿದ್ದಳು. ಈಗ ಮೂರ್ತಿಯವರಿಗೆ ಎಚ್ಚರವಾಗಿತ್ತು. ಶವರ್ ವೇಗ ತುಂಬಾ ಜಾಸ್ತಿಯಾದಾಗ ಹೊರಗಡೆ ಒಬ್ಬರ ಮುಖ ಒಬ್ಬರು ನೋಡಿಕೊಂಡರು.
ಸತೀಶ ಕೂಡ ಎದ್ದವನೇ ರೂಮಿನಿಂದ ಹೊರಗೆ ಬಂದು, ಯಾರನ್ನೂ ನೋಡದೆ, ಸೋಫಾದ ಒಂದು ತುದಿಯಲ್ಲಿ ಕೂತ. ಅನಿತಾ ಕಾಫಿ ತಂದಿಟ್ಟರು. ಕುಡಿ ಎಂದೇನೂ ಹೇಳಲಿಲ್ಲ. ಅವನೇ ಗಟಗಟ ಕುಡಿದ. ಕುಡಿದ ಮೇಲೆ ಕಪ್ ಎಷ್ಟೋ ಹೊತ್ತು ಸೋಫಾದ ಮೇಲೆ ಇರುವುದು ವಾಡಿಕೆ. ಆದರೆ ಈವತ್ತು ಶನಿವಾರ ಬೆಳಿಗ್ಗೆ ಮಾತ್ರ, ಕಪ್ ತೆಗೆದುಕೊಂಡು ಹೋಗಿ ಸಿಂಕ್‌ಗೆ ಹಾಕಿ ನಲ್ಲಿ ತಿರುಗಿಸಿದ. ನಲ್ಲಿ ನಿಲ್ಲಿಸಿದ. ಸುಮ್ಮನೆ ಹಾಗೇ ನಿಂತಿದ್ದ. ಹೊರಗಡೆ ಬರಬೇಕು, ಹಾಲಿನಲ್ಲಿ ಕೂರಬೇಕು ಎಂದೇನು ಅನಿಸಲಿಲ್ಲ. ಯಾಂತ್ರಿಕವಾಗಿ ಬಂದು ಸೋಫಾದ ಮೇಲೆ ಕುಳಿತುಕೊಂಡ. ನಿದ್ದೆಯಿಂದ ಹೊರ ಬಂದಾಗ ಸೋಫಾದ ತುದಿಯ ಮೇಲೆ ಕೂತಿದ್ದವನು ಈಗ ಸೋಫಾದ ಮಧ್ಯ ಭಾಗದಲ್ಲಿ ಒರಗಿಯೇ ಕುಳಿತುಕೊಂಡ.
ಮಾಲಿನಿ ಸ್ನಾನ ಮುಗಿಸಿಕೊಂಡು ಬಂದವಳೇ ರೂಮಿಗೆ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬಂದಳು. ಒದ್ದೆಯಾದ ಕೂದಲನ್ನು ಹಾಗೇ ಹರಡಿ ಒಣಗಲು ಬಿಟ್ಟಿದ್ದಳು. ಎಲ್ಲರನ್ನೂ ಒಂದು ಸಲ ನೋಡಿದಳು. ದೃಷ್ಟಿಯಲ್ಲಿ ಯಾಚನೆ ಇರಲಿಲ್ಲ, ನಿರ್ಧಾರವೂ ಇರಲಿಲ್ಲ. ಸಪ್ಪೆಯಾಗಿತ್ತು. ಕಣ್ಣುಗಳಲ್ಲಿ ಕಾಂತಿಯಿರಲಿಲ್ಲ.

ಬೂಟುಗಳನ್ನು ಹಾಕಿಕೊಳ್ಳಲು ಕುರ್ಚಿಯ ಮೇಲೆ ಕುಳಿತಳು. ಕಾಲುಚೀಲವನ್ನು ಸರಿ ಮಾಡಿಕೊಂಡು ಪಾದಗಳನ್ನು ಹಿತವಾಗುವಂತೆ ಬೂಟಿನೊಳಗೆ ಸೇರಿಸಿದಳು. ಎದ್ದು ನಿಂತು ಎಲ್ಲರನ್ನೂ ಉದ್ದೇಶಿಸಿ ಹೇಳಿದಳು:
ನನಗೆ ನಿಮ್ಮ ಯಾರ ಬಗ್ಗೆಯೂ ಬೇಸರವೂ ಇಲ್ಲ, ಸಿಟ್ಟೂ ಇಲ್ಲ. ಮದುವೆ ಜೀವನ ಸಾಕು ಅನಿಸಿತು, ಸುಸ್ತಾಯಿತು. ಇದು ಇನ್ನಷ್ಟು ದಿನ ಮುಂದುವರೆದರೂ ಇದೇ ರೀತಿಯ ಸುಖ, ಇದೇ ರೀತಿಯ ಜೀವನ ಅನಿಸಿತು. ಹಾಗೆನಿಸಿದ ಮೇಲೂ ಈಗಿರುವ ರೀತಿಯಲ್ಲೇ ಇರಬೇಕೆ, ನೀವೇ ಹೇಳಿ? ಎಲ್ಲರಿಗೂ ನನ್ನ ಹಾಗೆಯೇ ಅನಿಸಿರಬಹುದು. ಅದರೆ ಅನಿಸಿದ್ದನ್ನು ಹೇಳಿಕೊಳ್ಳಲಾಗದಂತೆ ಕುಟುಂಬ, ಮಕ್ಕಳು, ವೃತ್ತಿ, ವ್ಯಾಪಾರ ಎಲ್ಲವೂ ಪ್ರತಿಯೊಬ್ಬರನ್ನೂ ಹೀರಿಕೊಂಡುಬಿಟ್ಟಿರಬಹುದು. ಇದನ್ನೆಲ್ಲ ರಕ್ಷಿಸಲು, ಇದರಲ್ಲೆಲ್ಲ ಭಾಗವಹಿಸಲು ಮದುವೆ, ಅದರ ಸುಖ ಒಂದು ಸುಳ್ಳು ನೆಪವಾಗಿರಬಹುದು. ನನಗೇನೂ ತಿಳಿಯುತ್ತಿಲ್ಲ, ಅರ್ಥವೂ ಅಗುತ್ತಿಲ್ಲ. ಹೀಗೇ ಇನ್ನು ಮುಂದೆ ಇರಲಾರೆ, ಇರಬಾರದು ಅನಿಸುತ್ತದೆ. ಯಾರಿಗೂ ಹೇಳಲ್ಲ. ಯಾವಾಗಲೂ ವಾಕರಿಕೆ, ನಾಲಿಗೆಯೆಲ್ಲ ಒಣಗಿರುತ್ತದೆ. ಕೈ ಬೆರಳುಗಳು ಜಡವಾಗುತ್ತವೆ. ಊಟ ಮಾಡಿದ ತಕ್ಷಣವೇ ವಾಂತಿ ಮಾಡಬೇಕೆನಿಸುತ್ತದೆ.
ಇಷ್ಟು ಹೇಳಿದವಳೇ ಸತೀಶನ ಕಡೆ ನೋಡಿದಳು. ಸತೀಶನ ಕಡೆ ನೋಡುತ್ತಿದ್ದರೇನು ದೃಷ್ಟಿಯ ಸ್ವರೂಪ, ದಿಕ್ಕು ಬೇರೆಯಾಗಲಿಲ್ಲ.
ನೀನಾದರೂ ಅರ್ಥ ಮಾಡಿಕೊ ಸತೀಶ. ನಾವು ಇಷ್ಟು ದಿನ ತುಂಬಾ ಸುಖವಾಗಿದ್ದೆವು, ಅದೆಷ್ಟು ಸಂತೋಷಪಟ್ಟೆವು, ಸಂತೋಷ ಕೊಟ್ಟೆವು. ಜಗತ್ತೆಲ್ಲ ನಮ್ಮ ಜೋಡಿಯನ್ನು ನೋಡಿ ಸಂಭ್ರಮ ಪಟ್ಟು ತಟ್ಟಿದ ಚಪ್ಪಾಳೆ ನಿರಂತರವಾಗಿತ್ತು. ಅದರೆ ಸುಖ, ಆನಂದ, ಅನುಭವಿಸುತ್ತಿರುವ ಹಾಗೇ ತೀರಿಹೋಗುತ್ತಿದೆ, ಒಣಗಿಹೋಗುತ್ತಿದೆ ಎಂಬ ಭಾವನೆ, ಸುಖದ ಅನುಭವ ಮುಗಿಯುವ ಮುನ್ನವೇ ದೇಹವನ್ನು ಮೊಂಡಾಗಿಸುತ್ತಿತ್ತು. ಮನಸ್ಸಿನಲ್ಲಿ ಶೂನ್ಯ ಭಾವ. ಇದೆಲ್ಲ ಹೀಗೇ ಮುಂದುವರಿಯೋಕಾಗಲ್ಲ, ಮುಂದುವರಿಯಲೂಬಾರದು ಎಂದು ನಿನಗೂ ಕೂಡ ಗೊತ್ತು. ಹಳಿಗೆ ಬೀಳುವ ಮುನ್ನವೇ ರೈಲಿಂದ ಇಳಿಯುವುದು ಮಾತ್ರವಲ್ಲ, ರೈಲನ್ನೇ ಬರಕಾಸ್ತು ಮಾಡಿಬಿಡಬೇಕು. ಕೋರ್ಟ್-ಕಛೇರಿಯ ಗೊಡವೆಯೇ ಬೇಡ. ಇಬ್ಬರೂ ಸೇರಿ ಒಂದು ಜಂಟಿ ಒಪ್ಪಂದವನ್ನು ಬರೆಯೋಣ. ಅದನ್ನೇ ನೋಂದಣಿ ಮಾಡಿಸೋಣ. ಈಗ ಒಂದು ನಾಲ್ಕು ದಿನ ಪ್ರವಾಸ ಹೋಗಿ ಬರುವೆ. ಎಲ್ಲಿಗೆಂದು ಗೊತ್ತಿಲ್ಲ. ಮನಸ್ಸು ಎಳೆದ ಕಡೆ ಹೋಗುವೆ. ಬಂದ ಮೇಲೆ ಒಪ್ಪಂದ ತಯಾರಿಸೋಣ. ಕಳೆದ ತಿಂಗಳ Debit Card Payment ವಿವರ ಕಳಿಸಿಕೊಡು. ಹೋದ ತಿಂಗಳಿನ ಖರ್ಚಿನ ಬಹು ಭಾಗವನ್ನು ನೀನೇ ಮಾಡಿರುವೆ. ನನ್ನ ಪಾಲನ್ನು ಬಂದ ತಕ್ಷಣ ಕೊಡುವೆ.
ಇಷ್ಟು ಹೇಳಿದವಳೇ, ನಿಧಾನವಾಗಿ ಹೊಸ್ತಿಲು ದಾಟಿದಳು. ದಾಟುವಾಗ ಬಾಗಿಲನ್ನು ಮುಟ್ಟಿದರೂ ಬಾಗಿಲು ಹಾಕಿಕೊಳ್ಳಲಿಲ್ಲ, ಬಾಗಿಲನ್ನು ಸುಮ್ಮನೇ ಸವರಿದಳು ಅಷ್ಟೇ.
ಸತೀಶನಾಗಲಿ, ಬೇರೆ ಯಾರಾದರೂ ಆಗಲಿ, ಏನೂ ಮಾತನಾಡದೆ ತುಂಬಾ ಹೊತ್ತು ಹಾಗೇ ಕುಳಿತಿದ್ದರು. ಅನಿತಾ ಸೊಸೆಗೂ ಕೂಡ ಕಾಫಿ ಮಾಡಿದ್ದರೂ ಕೊಟ್ಟಿರಲಿಲ್ಲ ಅಷ್ಟೇ.

ಹಳೆಯ ಥಿಯೇಟರ್‌ಗೆ ಸಿನೆಮಾಕ್ಕೆ ಹೋಗುವಾಗ ಮಾಲಿನಿ ಚಿನ್ನದ ಬಳೆ, ಸರ, ಝುಮುಕಿ ಹುಡುಕಿ ಹಾಕಿಕೊಳ್ಳುತ್ತಿದ್ದಳು. ಅದನ್ನೆಲ್ಲ ಬಿಚ್ಚಿ ಸೋಫಾದ ಒಂದು ಮೂಲೆಯಲ್ಲಿ ಜೋಡಿಸಿ ಇಟ್ಟಿದ್ದಳು. ಎಷ್ಟೋ ಹೊತ್ತಾದ ಮೇಲೆ ಸತೀಶ ರೂಮಿಗೆ ಹೋಗಿ ಗಮನಿಸಿದ್ದು, ಮದುವೆಯಲ್ಲಿ ಕೊಟ್ಟಿದ್ದ ಎಲ್ಲ ಚಿನ್ನದ ಒಡವೆಗಳನ್ನು ಕೂಡ ಮಾಲಿನಿ ಒಂದು ಪುಟ್ಟ ಪೆಟ್ಟಿಗೆಯಲ್ಲಿ ನೀಟಾಗಿ ಜೋಡಿಸಿ, ಪೆಟ್ಟಿಗೆಯನ್ನು ತೆರೆದೇ ಅಲ್‌ಮೇರಾದಲ್ಲಿ ಇಟ್ಟು ಹೋಗಿದ್ದಳು.
(ಕೃತಿ: ನಮಗೊಂದು ಸೊಸೆ ಬೇಕು (ಕಾದಂಬರಿ), ಲೇಖಕರು: ಕೆ. ಸತ್ಯನಾರಾಯಣ, ಪ್ರಕಾಶಕರು: ಅಮೂಲ್ಯ ಪುಸ್ತಕ, ಬೆಲೆ: 200/-)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

