ಕನ್ನಡ ಸಾಹಿತ್ಯ ಲೋಕದಲ್ಲಿ ತಮ್ಮ ಕಾವ್ಯ ಪ್ರತಿಭೆಯ ಮೂಲಕ ಕಂಡೆಂಗೋಡ್ಲು ಶಂಕರ ಭಟ್ಟರು ಪ್ರಧಾನವಾಗಿ ಗುರುತಿಸಿಕೊಂಡಿದ್ದರೂ, ಅವರ ಜೀವನ ಪಥ ಬಹುಮುಖಿಯಾಗಿತ್ತು. ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಎಷ್ಟೊಂದು ಸಕ್ರಿಯರಾಗಿದ್ದರು ಎಂಬುದಕ್ಕೆ ಅವರು 1921ರಲ್ಲಿ ಬರೆದ ‘ವಸ್ತ್ರಾಪಹರಣ’ ಖಂಡಕಾವ್ಯವೇ ಸಾಕ್ಷಿ. ಪತ್ರಕರ್ತರಾಗಿ ಹಾಗೂ ಪತ್ರಿಕೋದ್ಯಮಿಯಾಗಿ ದುಡಿದವರು ಕೂಡ. ಖಾದಿ ಮಾರಾಟ, ಮದ್ಯ ಮಾರಾಟ ವಿರೋಧ, ಜನ ಶಿಕ್ಷಣ, ಸ್ತ್ರೀಪರ ಧ್ವನಿ, ಶೋಷಿತರ ಪರ ನಿಲುವುಗಳೊಂದಿಗೆ ತಮ್ಮ ಸಾಹಿತ್ಯ ಪ್ರಯಾಣವನ್ನು ಶ್ರೀಮಂತವಾಗಿಸಿಕೊಂಡಿದ್ದರು. ಕರಾವಳಿ ಕವಿರಾಜಮಾರ್ಗ ಸರಣಿಯಲ್ಲಿ ಡಾ.ಬಿ. ಜನಾರ್ದನ ಭಟ್ ಅವರು, ಅಡಿಗರಿಗಿಂತ ಹಿಂದಿನ ಯುಗದ ಶ್ರೇಷ್ಠ ಕವಿ ಅಂದರೆ ಕಡೆಂಗೋಡ್ಲು ಶಂಕರ ಭಟ್ಟರ ಕುರಿತು ಬರೆದಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಅಡಿಗರಿಗಿಂತ ಹಿಂದಿನ ಯುಗದ ಶ್ರೇಷ್ಠ ಕವಿ ಅಂದರೆ ಕಡೆಂಗೋಡ್ಲು ಶಂಕರ ಭಟ್ಟರು (1904-1968). ಅವರನ್ನು ಕನ್ನಡ ನಾಡು ಮಹತ್ವದ ಕವಿಯೆಂದು ಗುರುತಿಸಿ, 1964 ರಲ್ಲಿ ಕಾರವಾರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿಸಿ ಗೌರವಿಸಿದೆ. ಮುಳಿಯ ತಿಮ್ಮಪ್ಪಯ್ಯನವರ ಮಾರ್ಗಾನ್ವೇಷಣೆಯ ಮುಂದಿನ ಹೆಜ್ಜೆಯನ್ನು ಕಡೆಂಗೋಡ್ಲು ಶಂಕರ ಭಟ್ಟರು ಇರಿಸಿ, ಖಂಡಕಾವ್ಯಗಳಿಗೆ ಸತ್ವದಲ್ಲಿ ಆಧುನಿಕತೆಯ ಸ್ಪರ್ಶವನ್ನು ನೀಡಿದರು. ಮುಳಿಯ ತಿಮ್ಮಪ್ಪಯ್ಯನವರು ಉದಾರ ಮಾನವತಾವಾದದ ಆಶಯಗಳನ್ನು ತಮ್ಮ ‘ಬಡಹುಡುಗಿ’ಯಂತಹ ಕಥನ ಕವನಗಳಲ್ಲಿ ತಂದಿದ್ದರೆ ಕಡೆಂಗೋಡ್ಲು ಅವರು ಭಾರತೀಯ ಸಂಪ್ರದಾಯದಂತೆ ಪುರಾಣಗಳಿಂದಲಾಗಲಿ, ಜನಪದದಿಂದಾಗಲಿ ಅಥವಾ ಪಾಶ್ಚಾತ್ಯ ಸಾಹಿತ್ಯದಿಂದಾಗಲಿ ಕಥಾಂಶಗಳನ್ನು ಸ್ವೀಕರಿಸಿ ತಮ್ಮ ಕಾಲದ ಸಂವೇದನೆಯಿಂದ ತಮ್ಮ ಕಾಲಕ್ಕೆ ಮಾರ್ಗದರ್ಶಕವಾಗಬಲ್ಲ ಆಶಯಗಳನ್ನು ಹೊಸ ಬಗೆಯ ಕಾವ್ಯಭಾಷೆಯಲ್ಲಿ ಬರೆದರು.
ಕಡೆಂಗೋಡ್ಲು ಶಂಕರ ಭಟ್ಟರು ಹುಟ್ಟಿದ್ದು ದಕ್ಷಿಣ ಕನ್ನಡದ ವಿಟ್ಲದ ಸಮೀಪದ ಪೆರುವಾಯಿ ಊರಿನ ಕಡೆಂಗೋಡ್ಲು ಎಂಬಲ್ಲಿ, 1904 ರಲ್ಲಿ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಲ್ಲಿ ಮಾಡಿದ ಕಡೆಂಗೋಡ್ಲು ಮುಂದಿನ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ಬಂದರು. ಸಂಬಂಧದಲ್ಲಿ ತಮಗೆ ಮಾವನಾಗಿದ್ದ ಖ್ಯಾತ ಪಂಡಿತ-ಕವಿ-ವಿಮರ್ಶಕ-ಪ್ರಾಧ್ಯಾಪಕ ಮುಳಿಯ ತಿಮ್ಮಪ್ಪಯ್ಯನವರ ಆಶ್ರಯದಲ್ಲಿದ್ದುಕೊಂಡು ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಪಡೆದರು.
ಸ್ವಾತಂತ್ರ್ಯ ಹೋರಾಟದಲ್ಲಿ ಕಡೆಂಗೋಡ್ಲು
ಕಡೆಂಗೋಡ್ಲು ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗ, 1920 ರಲ್ಲಿ (ಆಗ ಕಡೆಂಗೋಡ್ಲು ಅವರಿಗೆ 16 ವರ್ಷ ವಯಸ್ಸು) ಗಾಂಧೀಜಿಯವರು ಮಂಗಳೂರಿಗೆ ಬಂದಿದ್ದರು. ಶಂಕರ ಭಟ್ಟರು ಅವರ ಕರೆಗೆ ಸ್ಪಂದಿಸಿ ವಿದ್ಯಾಭ್ಯಾಸವನ್ನು ನಿಲ್ಲಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದರು.
ಹದಿಹರೆಯದ ಕಡೆಂಗೋಡ್ಲು ಶಂಕರ ಭಟ್ಟರು ‘ವಸ್ತ್ರಾಪಹರಣ’ (1921) ಮತ್ತು ‘ಗಾಂಧಿ ಸಂದೇಶ’ (1921) ಎಂಬ ಎರಡು ಖಂಡಕಾವ್ಯಗಳನ್ನು ಸ್ವಾತಂತ್ರ್ಯ ಹೋರಾಟದ ಆಶಯವನ್ನಿಟ್ಟುಕೊಂಡು ಬರೆದರು. ‘ವಸ್ತ್ರಾಪಹರಣ’ ಕೃತಿಯನ್ನು ಬ್ರಿಟಿಷ್ ಸರಕಾರ ನಿಷೇಧಿಸಿ ಅದರ ಪ್ರತಿಗಳನ್ನು ಮುಟ್ಟುಕೋಲು ಹಾಕಿಕೊಂಡಿತು. ಕವಿ ‘ಮೈನರ್’ ಆಗಿದ್ದುದರಿಂದ (ಹದಿನೇಳು ವರ್ಷ) ಅವರಿಗೆ ಸೆರೆಮನೆವಾಸ ವಿಧಿಸಲಿಲ್ಲ. (ಬೇಂದ್ರೆಯವರು ‘ನರಬಲಿ’ ಕವನವನ್ನು ಬರೆದುದಕ್ಕೆ ಸೆರೆಮನೆಯನ್ನು ಸೇರಿದ್ದನ್ನು ನೆನಪಿಸಿಕೊಂಡರೆ ಈ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.)
ಅವರು ಕಾರ್ನಾಡ್ ಸದಾಶಿವರಾಯರ ‘ಸಾಧಕಾಶ್ರಮ’ದ ಸದಸ್ಯರಾಗಿ, ಖಾದಿ ಮಾರಾಟ, ಮದ್ಯ ಮಾರಾಟ ವಿರೋಧ, ಜನ ಶಿಕ್ಷಣ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಜತೆಗೆ ಕಾರ್ನಾಡ್ ಸದಾಶಿವರಾಯರು ಮಂಗಳೂರಿನಲ್ಲಿ ಸ್ಥಾಪಿಸಿದ್ದ ತಿಲಕ ವಿದ್ಯಾಲಯ ರಾಷ್ಟ್ರೀಯ ಶಾಲೆಯಲ್ಲಿ ಅಧ್ಯಾಪಕರಾದರು. ಅಲ್ಲಿ ದ. ಕೃ. ಭಾರದ್ವಾಜ ಮತ್ತು ಎಸ್. ಆರ್. ಶರ್ಮಾ ಅವರು ಭಟ್ಟರ ಸಹೋದ್ಯೋಗಿಗಳಾಗಿದ್ದರು. ಅಲ್ಲಿ ಅಧ್ಯಾಪಕರಿಗೆ ವೇತನ ಅಂತ ಸಿಗುತ್ತಿರಲಿಲ್ಲ, ಅವರು ವಿದ್ಯಾರ್ಥಿಗಳೊಂದಿಗೆ ಮನೆಮನೆಗೆ ತಿರುಗಿ ‘ಮುಷ್ಟಿಫಂಡ್’ ಅಂತ ಸಂಗ್ರಹಿಸಬೇಕಾಗಿತ್ತು. ಈ ಬದುಕಿನ ಚಿತ್ರಣವನ್ನು ಶಿವರಾಮ ಕಾರಂತರು ತಮ್ಮ ‘ಔದಾರ್ಯದ ಉರುಳಲ್ಲಿ’ ಕಾದಂಬರಿಯಲ್ಲಿ ಮಾಡಿದ್ದಾರೆ.
1923 ರ ನೆರೆ ಹಾವಳಿ ಸಂತ್ರಸ್ತರ ಸಹಾಯಕ್ಕಾಗಿ ಕಡೆಂಗೋಡ್ಲು ಮುಂಚೂಣಿಯಲ್ಲಿದ್ದು ದುಡಿದಿದ್ದರು. ಕಡೆಂಗೋಡ್ಲು ಶಂಕರ ಭಟ್ಟರಿಗೆ ಶಾಲೆಯ ನಾಲ್ಕು ಗೋಡೆಗಳೊಳಗೆ ಕಲಿಯುವುದಕ್ಕಿಂತ ಹೆಚ್ಚಿನ ಅನುಭವವನ್ನು ಈ ಹೋರಾಟದ ಬದುಕು ಒದಗಿಸಿಕೊಟ್ಟಿತು. ಅವರು ಆರ್ಯಸಮಾಜಕ್ಕೆ ಸೇರಿದುದರಿಂದ ಅಲ್ಲಿ ಪರಿಚಯವಾದ ಧರ್ಮದೇವ ವಾಚಸ್ಪತಿ, ಪ್ರೊ. ಎಸ್.ಆರ್. ಶರ್ಮ (ಶ್ರೀಪಾದರಾಯ ಶರ್ಮ – ಇವರು ತಿಲಕ ವಿದ್ಯಾಲಯದಲ್ಲಿಯೂ ಇದ್ದರು) ಮತ್ತು ಠಾಕುರ್ ವರ್ಮಾ ಎಂಬವರಿಂದ ಕ್ರಮವಾಗಿ ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಮತ್ತು ಆಯಾಯ ಭಾಷೆಗಳ ಸಾಹಿತ್ಯವನ್ನು ಕಲಿತರು. ಅವರು ಕೆನರಾ ಹೈಸ್ಕೂಲಿನ ಗ್ರಂಥಾಲಯದಲ್ಲಿದ್ದ ಇಂಗ್ಲಿಷ್ ಕವಿಗಳ ಗ್ರಂಥಗಳನ್ನೆಲ್ಲ ಓದುತ್ತಿದ್ದರು. ಕೆನರಾ ಹೈಸ್ಕೂಲಿನ ಇಂಗ್ಲಿಷ್ ಅಧ್ಯಾಪಕ ಅಚ್ಯುತ ಬಾಳಿಗರ ಪ್ರಭಾವವೂ ಅವರ ಮೇಲಿತ್ತು. ಹೀಗಾಗಿ ಇಂಗ್ಲಿಷ್ ಸಾಹಿತ್ಯವನ್ನು ಸ್ವತಂತ್ರವಾಗಿ ಅಧ್ಯಯನ ಮಾಡಿದರು.
ಕನ್ನಡದ ಓಜ (ಗುರು) ಮುಳಿಯ ತಿಮ್ಮಪ್ಪಯ್ಯನವರ ಮನೆಯಲ್ಲಿಯೇ ಇವರಿದ್ದದ್ದು! ಜತೆಗೆ ಇಂಗ್ಲಿಷ್ ಸಾಹಿತ್ಯದ ಮತ್ತು ಆಧುನಿಕ ಕವಿತ್ವದ ಮಾರ್ಗದರ್ಶನಕ್ಕಾಗಿ ಪಂಜೆ ಮಂಗೇಶರಾಯರ ಬಳಿಗೆ ಹೋಗುತ್ತಿದ್ದರು. ಕಡೆಂಗೋಡ್ಲು ಪ್ರತಿದಿನವೂ ಅಭ್ಯಾಸ ಮಾಡುತ್ತಿದ್ದರೆಂದು ಪಂಜೆ ಮಂಗೇಶರಾಯರು ದಾಖಲಿಸಿದ್ದಾರೆ.
ಪತ್ರಕರ್ತ
ತಿಲಕ ವಿದ್ಯಾಲಯ 1925 ರಲ್ಲಿ ಮುಚ್ಚಿತು. ಆಗ ಅತ್ತಾವರ ಬಾಲಕೃಷ್ಣ ಶೆಟ್ಟಿಯವರು 1926 ರಲ್ಲಿ ಪ್ರಾರಂಭಿಸಿದ್ದ ‘ನವಯುಗ’ ದಿನ ಪತ್ರಿಕೆಯ ಸಂಪಾದಕ ಬಳಗಕ್ಕೆ ಕಡೆಂಗೋಡ್ಲು ಸೇರಿದರು. ಮಂಗಳೂರಿಗೆ ರಾಷ್ಟ್ರೀಯ ನಾಯಕರು ಬಂದಾಗ ಅವರ ಇಂಗ್ಲಿಷ್ ಭಾಷಣಗಳನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದ ಭಟ್ಟರ ಇಂಗ್ಲಿಷ್ – ಕನ್ನಡ ಅನುವಾದ ಸಾಮರ್ಥ್ಯ ಎ.ಬಿ.ಶೆಟ್ಟರನ್ನು ಸೆಳೆದಿತ್ತು. ಕಡೆಂಗೋಡ್ಲು ಅವರು ‘ನವಯುಗ’ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಅನುವಾದ ಕಾರ್ಯವನ್ನು ಮಾಡುತ್ತಿದ್ದರು. ಪತ್ರಿಕೋದ್ಯಮಕ್ಕೆ ಅವರು ಪ್ರವೇಶ ಪಡೆದದ್ದು ಹೀಗೆ.
1928 ರಲ್ಲಿ ಮದ್ರಾಸಿನ ಡಾ. ಯು. ರಾಮರಾಯರು ಮಂಗಳೂರಿನಲ್ಲಿ ಒಂದು ವಾರಪತ್ರಿಕೆಯನ್ನು ಪ್ರಾರಂಭಿಸಲು ಉದ್ದೇಶಿಸಿ ಕಡೆಂಗೋಡ್ಲು ಅವರನ್ನು ಸಂಪಾದಕರಾಗಿರಲು ಕೇಳಿಕೊಂಡರು. ಪತ್ರಿಕೆಯ ಪ್ರಾರಂಭದ ಸಂಚಿಕೆಯಿಂದ 1953 ರಲ್ಲಿ ಬೆಳ್ಳಿಹಬ್ಬದ ಸಂಚಿಕೆಯವರೆಗೆ ಕಡೆಂಗೋಡ್ಲು ಅದನ್ನೊಂದು ಧೀಮಂತ ಪತ್ರಿಕೆಯಾಗಿ ಬೆಳೆಸಿದರು. ರಾಮರಾಯರ ಉತ್ತರಾಧಿಕಾರಿಯ ಜತೆಗೆ ಅವರ ಸಂಬಂಧ ಹದಗೆಟ್ಟದ್ದರಿಂದ ಅದರಿಂದ ಹೊರಬಂದ ಕಡೆಂಗೋಡ್ಲು, ಮರು ವಾರವೇ, ‘ರಾಷ್ಟ್ರಮತ’ ವಾರಪತ್ರಿಕೆಯನ್ನು ಪ್ರಾರಂಭಿಸಿದರು. 1968 ರಲ್ಲಿ ಊರಿನಿಂದ ಮಂಗಳೂರಿಗೆ ಬರುವ ಬಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾಗುವಾಗ ಅವರ ಕಿಸೆಯಲ್ಲಿ ಆ ಪತ್ರಿಕೆಯ ಕೊನೆಯ ಸಂಪಾದಕೀಯವಿತ್ತು! (ನಿವೃತ್ತಿಯ ನಂತರ ಅವರು ತಮ್ಮ ಹುಟ್ಟೂರಿಗೆ ಮರಳಿ ಕೃಷಿಕರಾಗಿ ಬದುಕಲಾರಂಭಿಸಿದ್ದರು).
ಉದ್ಯೋಗ – ಸಂಸಾರ
ಅವರು 1927ರಲ್ಲಿ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿದ್ವಾನ್ ಪರೀಕ್ಷೆ ಬರೆದು ಮೊದಲನೆಯ ವರ್ಗದಲ್ಲಿ ಉತ್ತೀರ್ಣರಾದರು. ಆಮೇಲೆ 1929ರಿಂದ 1964ರ ವರೆಗೆ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಕಾಲೇಜಿನವರು ಪಂಜೆಯವರನ್ನು ಈ ಹುದ್ದೆಗೆ ಆಹ್ವಾನಿಸಿದ್ದರು. ಪಂಜೆಯವರು ವಯಸ್ಸಿನ ಕಾರಣ ನೀಡಿ, ತನ್ನ ಬದಲಿಗೆ ಶಂಕರ ಭಟ್ಟರನ್ನು ನೇಮಿಸಿಕೊಳ್ಳಬೇಕೆಂದು ಶಿಫಾರಸು ಮಾಡಿದ್ದರು.
1929 ರಲ್ಲಿ ಅವರು ಕಮಲಮ್ಮನವರನ್ನು ಮದುವೆಯಾದರು. ಈ ದಂಪತಿಗಳ ಮೊದಲ ಹೆಣ್ಣುಮಗು ಒಂದು ತಿಂಗಳ ಅಲ್ಪಾಯುಷಿಯಾಯಿತು. ನಂತರ ಈಶ್ವರ (1934), ಸೀತಾರಾಮ (1936), ಮಾಲತಿ (1940), ನಳಿನಿ (1942), ಬಾಲಕೃಷ್ಣ (?) – ಎಂಬ ಮಕ್ಕಳು ಹುಟ್ಟಿದರು.
ಸಹೋದರ ಸಹೋದರಿಯರ ಬದುಕಿನ ಕಷ್ಟಗಳನ್ನು ಕಡೆಂಗೋಡ್ಲು ಸ್ವತಃ ಅನುಭವಿಸಿ, ಪರಿಹಾರಕ್ಕೆ ಮುಂದಾಗುತ್ತಿದ್ದರು. ಈ ಸಾಂಸಾರಿಕ ಕ್ಲೇಶಗಳು ಅವರು ಪದ್ಯದಿಂದ ಗದ್ಯಕ್ಕೆ ಹೊರಳಿಕೊಂಡ ಕಾಲಕ್ಕೆ ಸರಿಹೊಂದುತ್ತವೆ, 1930 ರ ದಶಕದ ಉತ್ತರಾರ್ಧದಿಂದ ಅವರು ಗದ್ಯಕ್ಕೂ, ಪತ್ರಿಕಾ ವ್ಯವಸಾಯಕ್ಕೂ, ಸಾಹಿತ್ಯ ಬೋಧನೆಗೂ ಹೆಚ್ಚು ಗಮನ ಕೊಟ್ಟರು. ಸುಮಾರು ಮೂವತ್ತು ವರ್ಷಗಳ ಕಾಲ ಅವರ ಕವನ ಸಂಕಲನಗಳು ಪ್ರಕಟವಾಗಲೇ ಇಲ್ಲ! ಆದರೆ ಈ ಅವಧಿಯಲ್ಲಿ ಸಣ್ಣ, ಕತೆ ಮತ್ತು ಕಾದಂಬರಿಗಳನ್ನು ಬರೆಯುತ್ತಿದ್ದರು. ನಾಟಕ ರಚನೆಯಲ್ಲಿಯೂ ಅವರಿಗೆ ಆಸಕ್ತಿಯಿತ್ತು. ಅವುಗಳು ಅಷ್ಟೇನೂ ಗಮನ ಸೆಳೆಯುವುದಿಲ್ಲ. (ನಡುನಡುವೆ ಆಗೊಂದು ಈಗೊಂದು ಬಿಡಿ ಕವಿತೆಗಳನ್ನು ಅವರು ಬರೆದಿರಲಾರರೆಂದಲ್ಲ. ಅವುಗಳ ಸಂಖ್ಯೆ ಬಹಳಷ್ಟಿಲ್ಲ. ಅವೆಲ್ಲ ಅವರ ಮರಣದ ನಂತರ ಹಸ್ತಪ್ರತಿಯ ರೂಪದಲ್ಲಿ ಲಭ್ಯವಾಗಿ ಪ್ರಕಟಿತವಾಗಿವೆ). ಸಾಹಿತ್ಯ ಬೋಧನೆ ಎಂದರೆ ಸಾಹಿತ್ಯ ವಿಮರ್ಶೆಯ ಮೌಖಿಕ ರೂಪವೇ ಆಗಿರುವುದರಿಂದ ಸಾಹಿತ್ಯದ ಅಧ್ಯಾಪಕರು ವಿಮರ್ಶಕರಾಗಿರುವುದು ಸಹಜ. ಕಡೆಂಗೋಡ್ಲು ಅವರು ವಿಮರ್ಶೆಯ ಪ್ರಬಂಧಗಳನ್ನೂ ಬರೆದಿದ್ದು, ಅವು ‘ವಾಙ್ಮಯ ತಪಸ್ಸು’ ಎನ್ನುವ ಸಂಕಲನದಲ್ಲಿ ಸೇರಿವೆ.
ಕಡೆಂಗೋಡ್ಲು ಅವರು ಅಧ್ಯಾಪಕರಾಗಿದ್ದುಕೊಂಡೇ ‘ರಾಷ್ಟ್ರಬಂಧು’ ವಾರಪತ್ರಿಕೆಯ ಸಂಪಾದಕರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು. ಅವರು ನಿವೃತ್ತರಾದಾಗ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಇಂಗ್ಲಿಷಿನಲ್ಲಿಯೇ ಮಾತನಾಡಿದುದನ್ನು ಕೇಳಿದ ಮದರ್ ಸುಪೀರಿಯರ್ ಹೇಳಿದರಂತೆ : “Mr. Shankar Bhat, we did not know that you could speak such beautiful English. You would have been a better English lecturer than any one of us.”
ಕವಿಯಾಗಿ ಕಡೆಂಗೋಡ್ಲು
ಕಡೆಂಗೋಡ್ಲು ಶಂಕರ ಭಟ್ಟರ ಮೂಲಕ ನವೋದಯದ ಪಂಜೆ – ಮುಳಿಯ ಧಾರೆಗಳ ಸಂಗಮವಾಯಿತೆನ್ನಬಹುದು. ಎರಡೂ ಧಾರೆಯ ಗುರುಗಳಾದ ಮುಳಿಯ ತಿಮ್ಮಪ್ಪಯ್ಯ ಮತ್ತು ಪಂಜೆ ಮಂಗೇಶರಾಯರು, ಕಡೆಂಗೋಡ್ಲು ಅವರ ಕಾವ್ಯರಚನೆಗೆ ಮಾರ್ಗದರ್ಶಕರಾಗಿದ್ದರು. ತಮ್ಮ 15 – 16 ನೆಯ ವಯಸ್ಸಿನಲ್ಲಿಯೇ ಕಾವ್ಯ ರಚನೆಯನ್ನು ಪ್ರಾರಂಭಿಸಿದ ಕಡೆಂಗೋಡ್ಲು ಶಂಕರ ಭಟ್ಟರ ಕಾವ್ಯವನ್ನು ಮೂರು ವಿಭಾಗಗಳಾಗಿ ಮಾಡಬಹುದು:
1. ಸ್ವಾತಂತ್ರ್ಯ ಹೋರಾಟದ ಕಾವ್ಯ: ‘ಗಾಂಧಿ ಸಂದೇಶ’ (1920) ಮತ್ತು ‘ವಸ್ತ್ರಾಪಹರಣ’ (1921).
2. ಸಣ್ಣ ಕವಿತೆಗಳು: ಕಾಣಿಕೆ (1927) – 18 ಕವಿತೆಗಳು, ಹಣ್ಣು ಕಾಯಿ (1933) – 21 ಕವಿತೆಗಳು; ಪತ್ರ ಪುಷ್ಪ (1965 – ಬರೆದದ್ದು 1930 ಮತ್ತು 40 ರ ದಶಕಗಳಲ್ಲಿ) – 23 ಕವಿತೆಗಳು; ಪಡಿನುಡಿ (ಮರಣೋತ್ತರ, 1987) – 36 ಕವಿತೆಗಳು.
3. ಖಂಡ ಕಾವ್ಯಗಳು: 1. ಘೋಷ ಯಾತ್ರೆ (1920), 2. ನಲ್ಮೆ (1930) ‘ಹೊನ್ನಿಯ ಮದುವೆ’, ‘ಮಾದ್ರಿಯ ಚಿತೆ’ ಮತ್ತು ‘ -ಮೂರು ಖಂಡ ಕಾವ್ಯಗಳು. 3. ಹೆಣ್ಣು (ನಡೆದುಬಂದ ದಾರಿ. ಸಂ. ಜಿ. ಬಿ. ಜೋಶಿ. ವರ್ಷ. 1945 ರ ಬಳಿಕ ರಚನೆ.) 4. ಭೂತಾಳ ಪಾಂಡ್ಯ (ಬರೆದುದು ?. ಪ್ರಕಟಣೆ -ಮರಣೋತ್ತರ, 1987).
1933 ರ ನಂತರ 32 ವರ್ಷಗಳಲ್ಲಿ ಅವರ ಕವಿತೆಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಲಿಲ್ಲ. ಈ ನಡುವಿನ ಅವಧಿ ಅವರ ಗದ್ಯ ಬರವಣಿಗೆಗೆ ಮೀಸಲಾಗಿತ್ತು.
ಬಹಳ ಬೇಗನೆ ಕಾವ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡು, 30 ರ ಹರೆಯದ ಒಳಗೆ ಮುಖ್ಯ ಕೊಡುಗೆಯನ್ನೆಲ್ಲ ನೀಡಿ, ಬೇಂದ್ರೆ – ಕುವೆಂಪು ಅವರೊಡನೆ ಮೂರನೆಯವರಾಗಿ ಹೊಸಗನ್ನಡ ರತ್ನತ್ರಯರಲ್ಲಿ ಒಬ್ಬರೆಂದು ಗುರುತಿಸಿಕೊಂಡ ಕಡೆಂಗೋಡ್ಲು ನಂತರ ಮಹತ್ವದ ಕಾವ್ಯವನ್ನು ಬರೆಯಲಿಲ್ಲ. ಅವರೇ ಒಂದು ಕಡೆ ಇದಕ್ಕೆ ಉತ್ತರವನ್ನು ಹೇಳಿದ್ದಾರೆ : “ಯಾವ ಕವಿಯೇ ಆಗಲಿ ಆತನಿಗೆ ಯಾವುದನ್ನೋ ಹೇಳಬೇಕೆಂಬ ಹಂಬಲವಿರುತ್ತದೆ. ಒಂದು ಹಂತದಲ್ಲಿ ಹೇಳಬೇಕಾದದ್ದು ಇನ್ನು ಏನೂ ಇಲ್ಲ ಎಂದಾಗುತ್ತದೆ. ಆಮೇಲೆ ಅವನು ಕಾವ್ಯ ರಚನೆ ಮಾಡಿದರೆ ಅದು ಕೇವಲ ಶುಷ್ಕವಾಗುತ್ತದೆ. ನಾನು ಹೇಳಲೇಬೇಕಾದ್ದನ್ನು ನನ್ನ ಕವಿತೆಗಳಲ್ಲಿ ಹೇಳಿದ್ದೇನೆ.”
ಪ್ರಾರಂಭದ ಘಟ್ಟ: ಸ್ವಾತಂತ್ರ್ಯ ಹೋರಾಟ ಮತ್ತು ಕಾವ್ಯ
ಕಡೆಂಗೋಡ್ಲು ಶಂಕರ ಭಟ್ಟರು 1920 ರಿಂದ 1929 ರವರೆಗೆ ಸ್ವಾತಂತ್ರ್ಯ ಹೋರಾಟಕ್ಕೆ ಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡು, ಹೋರಾಟಗಾರರಾಗಿದ್ದರು. ನಂತರ ಕಾಲೇಜು ಉಪನ್ಯಾಸಕರಾದ ಮೇಲೆ ‘ರಾಷ್ಟ್ರಬಂಧು’ (1928 ರಿಂದ 1953) ಪತ್ರಿಕೆಯ ಸಂಪಾದಕರಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಬೌದ್ಧಿಕ ಬೆಂಬಲ ನೀಡುತ್ತಿದ್ದರು; ನಂತರ 1953 ರಿಂದ 1968 ರವರೆಗೆ (ದೇಹಾಂತ್ಯದವರೆಗೂ) ತಮ್ಮದೇ ಆದ ‘ರಾಷ್ಟ್ರಮತ’ ಪತ್ರಿಕೆಯ ಮೂಲಕ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದ್ದರು.
ಹೋರಾಟದ ದಿನಗಳಲ್ಲಿ ಅವರು ಖಾದಿ ಮಾರಾಟ, ಮದ್ಯ ಮಾರಾಟ ವಿರೋಧ, ಜನ ಶಿಕ್ಷಣ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಆ ಕಾಲದಲ್ಲೇ ಅವರ ಪ್ರಾರಂಭಿಕ ನೀಳ್ಗವನಗಳು ಪ್ರಕಟವಾದವು. `ಘೋಷಯಾತ್ರೆ’ (1920), `ವಸ್ತ್ರಾಪಹರಣ’ (1921), ಮತ್ತು `ಗಾಂಧಿಸಂದೇಶ’ (1921) – ಇವೇ ಆ ಕೃತಿಗಳು. ಶಂಕರ ಭಟ್ಟರ ಪ್ರಾರಂಭದ ರಚನೆಗಳಲ್ಲಿ ಸ್ವಾತಂತ್ರ್ಯ ಪ್ರೇಮ, ದೇಶಭಕ್ತಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾಣಸಿಕೊಳ್ಳುತ್ತಿತ್ತು.
`ವಸ್ತ್ರಾಪಹರಣ’ ಶ್ಲೇಷೆಯ ಮೂಲಕ ಸ್ವಾತಂತ್ರ್ಯದ ಹಂಬಲವನ್ನು ಹೇಳುವ ಖಂಡಕಾವ್ಯ. ಇದರಲ್ಲಿ 54 ಭಾಮಿನಿ ಷಟ್ಪದಿ ಪದ್ಯಗಳಿವೆ. ಇದರ ಹೆಚ್ಚಿನ ಪದ್ಯಗಳಿಗೆ ಶ್ಲೇಷಾರ್ಥವಿದೆ. ಈ ಕೃತಿ ಬ್ರಿಟಿಷರಿಂದ ಬಹಿಷ್ಕೃತವಾಯಿತು. ದ್ರೌಪದಿಯ ಮಾನಭಂಗವನ್ನು ಬ್ರಿಟಿಷರ ದೌರ್ಜನ್ಯಕ್ಕೆ, ಕೃಷ್ಣನನ್ನು ಗಾಂಧೀಜಿಯವರಿಗೆ, ಚಕ್ರವನ್ನು ಚರಕಕ್ಕೆ ಹೋಲಿಸಿದ ಈ ಕವನ ನೇರವಾಗಿ ದೇಶರಕ್ಷಣೆಗೆ ಕರೆಕೊಡುವಂತಿತ್ತು. ಮಾಸ್ತಿಯವರು ‘ಪರಿಷತ್ಪತ್ರಿಕೆ’ಯಲ್ಲಿ ಇದರ ಸಮೀಕ್ಷೆಯಲ್ಲಿ, “ಈಗಿನ ರಾಜಕೀಯ ಚಳವಳಿಗೆ ಸಂಬಂಧಪಟ್ಟ ನೀತಿಯನ್ನು ಅನ್ಯಾಪದೇಶವಾಗಿ ಸೂಚಿಸುವುದೇ ಈ ಕಾವ್ಯದ ಆಶಯವೆಂದು ತೋರುವುದು. ಈ ಕಾರ್ಯವನ್ನು ಗ್ರಂಥಕರ್ತರು ಚಾತುರ್ಯದಿಂದ ನೆರವೇರಿಸಿರುವರು,” ಎಂದು ಗುರುತಿಸಿದ್ದಾರೆ.
ಈ ಕೃತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡಿತು. ಹಾಗಾಗಿ ತನಗೆ ಅದರ ಒಂದು ಪ್ರತಿಯೂ ನೋಡಲು ಸಿಗಲಿಲ್ಲ ಎಂದು ಕಡೆಂಗೋಡ್ಲು ಅವರ ಮಿತ್ರ ಸೇಡಿಯಾಪು ಕೃಷ್ಣ ಭಟ್ಟರು ಹೇಳಿದ್ದರು. (ಡಾ. ಸುನೀತಿ ಉದ್ಯಾವರ. 2003)
ಈ ಕಾವ್ಯದ ಕೆಲವು ಪದ್ಯಗಳು ಹೀಗಿವೆ:
ವಸ್ತ್ರಾಪಹರಣ
ಧರಣಿಯಲಿ ಸ್ವಾತಂತ್ರ್ಯವೆಂಬುದು
ನರನ ಹಕ್ಕದರಿಂದ ತನ್ನಯ
ಧರೆಯ ಕೊಡಿರೆಂದೆನಲು ದೋಷವು ಲೇಶದನಿತಿಲ್ಲ |
ಪರಮ ದೇಶೋದ್ಧಾರ ಕಾರ್ಯದಿ
ಬೆರಸಿದರೆ ವೈರವನು, ಜಗದಲಿ
ನಿರತ ನಿಷ್ಫಲವಕ್ಕು ನಮ್ಮಯ ಧರ್ಮಕರ್ಮಗಳು || 43 ||
ಶಾಂತಿಯೆಂಬುದು ಭರತಮಾತೆಯ
ಅಂತರಾತ್ಮವದಾಗಿರಲು ನಾ-
ವಾಂತು ರೋಷದ ಹಿಂಸೆಯಲಿ ಕಾಲಿಟ್ಟರೇನರ್ಥ ? |
ಚಿಂತೆಯಿಲ್ಲದೆ ಪೊರೆದ ಮಾತೆ ನಿ-
ರಂತರವು ಕಷ್ಟವನು ಪಡೆವುದು
ಸಂತಸವೆ ಪುತ್ರರಿಗೆ ಮಾತೆಯ ಹಾಲನುಂಡರಿಗೆ ? || 44 ||
ಕೊಡಲಿ ಸಂಕಷ್ಟಗಳ ತನ್ನನು
ಕಡಿಕಡಿದು ಪೀಡಿಸಲಿ ಧರ್ಮವ
ಬಿಡೆನೆನುತ್ತಲಿ ಹಿಂಸೆಯೆಸಗದ ಮನುಜನುತ್ತಮನು |
ಹಿಡಿದು ಮನೆಯನು ಬೆಂಕಿ ತಾನವ-
ಗಡವನೆಸಗಲು ನೀರಿನಿಂದದ
ನಡುಗಿಸದೆ ಕಿಚ್ಚಿಂದಲಾರಿಸಲೆಳಸುವರೆ ಜಗದಿ ? || 45 ||
ಮನವೆನುವ ವೇದಿಕೆಯ ನಲವಿಂ-
ದನುಗೊಳಿಸುತಾ ಸ್ವಾರ್ಥಬುದ್ಧಿಯ
ನನುನಯದೊಳಾಹುತಿಯನೀಯಲು ದೇವನೊಲಿಯವನು |
ಘನತರದ ಕಾರ್ಯಗಳನೆಸಗಲು
ವಿನುತ ಧೃತಿಮತಿಗಳನು ಕೊಡುವನು
ಅನುದಿನವು ಹೃದಯಾಲಯದಲೇ ವಾಸವಾಗಿಹನು || 46 ||
ಇಂತು ನುಡಿದಾ ಬುದ್ಧಿವಾದವ-
ನಂತು ಭಾರತವೀರರತಿ ಮುದ-
ವಾಂತು, ಕೋಪಾನಲವ ಜ್ಞಾನೋದಕದಿ ತಣಿಸುತ್ತ |
ಚಿಂತಿಸಿದರೀ ಭರತಮಾತೆಯ
ಚಿಂತೆಗಳನಾರಿಸುವುಪಾಯವ-
ನಿಂತು ನುತಿಸಿದರಾಗ ಮನದನುರಾಗ ರಭಸದಲಿ || 47 ||
ಎಂದು ನಿನ್ನಯ ಕರತಲದಿ ನಲ-
ವಿಂದ ನಲಿನಲಿದಾಡಿದೆವೊ ನಾ-
ವಂದೆ ನಿನ್ನಯ ಪ್ರೇಮಪಾಶದಿ ಬದ್ಧರಾಗಿರಲು |
ಬಂದು ದುರ್ಜನರೆಮ್ಮ ದಾಸ್ಯದ
ಬಂಧನದೊಳಿಟ್ಟಿಹರು ಕಷ್ಟದಿ
ನೊಂದು ಬಡವಾಯ್ತೆಮ್ಮ ದೇಹವು ಭರತಕುಲಮಾತೆ || 48 ||
ಧಾರಿಣಿಯ ಸಂಹಾರ ಪಾರಾ-
ವಾರದಲಿ ತೇಲಾಡಿ ಮನುಜರೊ-
ಳಾರು ದಡದಲಿ ಸೇರುವರೊ, ಬಳಿಕಾರು ಮುಳುಗುವರೊ |
ಭಾರತಕೆ ತಂದೊಡ್ಡುತೆಮ್ಮನ
ಪಾರಕರುಣಾವಾರ್ಧಿ ನಿನ್ನಲಿ
ಸೇರಿಸಿದ ವಿಧಿಗಡಿಗಡಿಗೆ ವಂದಿಪೆವು ಮುದದಿಂದ || 49 ||
ಆ ವಸಂತದ ಬರವು ಕಾಣಲು
ಆವ ಸಂತಸವಹುದು ನಿನ್ನಲಿ
ಆವ ಸಂತರು ನಿನ್ನೊಳಿದ್ದರೆನುತ್ತ ಮಾನಸದಿ |
ಭಾವಿಸಲು ತವಪದತಲವ ಸಂ
ಭಾವಿಸಲು ಕಣ್ಣೀರು ಸುರಿದುದು
ಭಾವಿಸುತ ನಾವನ್ಯಸೇವಕರೆಂದು ಮನಬೆಂದು || 50 ||
ಆವ ಸಂತಸವೇಕೆ ನಿನ್ನ ಸ
ದಾವಸಂತದ ಭಾಗ್ಯ ಭಾನುವ
ನಾವರಿಸಿರುವ ಜಡಧರಾವಳಿ ತೊಲಗಲನಿತರೊಳು |
ಭೂವಲಯದಲಿ ಧರ್ಮಮಾರ್ಗವ
ತೀವಿ ಹಿಮಸಂತಾನವದು ತಾ-
ನೋವನೀವುದೆ ಕರಕರಗಿ ನೀರಾದ ಬಳಿಕಿನೊಳು ? || 51 ||
ಆದಕಾರಣ ದೇವಿ ನಿನ್ನಯ
ಪಾದಕಮಲವ ಕಂಬನಿಯೊಳ-
ತ್ಯಾದರದಿ ತೊಳೆದತುಳ ಭಯಭಕ್ತಿಯಲಿ ಪೂಜಿಪೆವು |
ಮೋದದಿಂದಲಿ ಹರಸುತಾ ಹಿತ
ವಾದದಿಂ ತಿದ್ದುವುದೆನುತ್ತಲ-
ಗಾಧ ಮತಿಗಳು ನುತಿಸಿದರು ಜನಿನಿಯನು ವಿಧವಿಧದಿ || 52 ||
ಏನನೆಂಬೆನು ಮಾತೃಭಕ್ತ ಮ-
ಹಾನುಭಾವರ ಮಹಿಮೆಯನು ಸುರ-
ಗಾನವಾದುದು ದೇವಗಂಗಾಧರಪಿತಾಮಹರು |
ಬಾನಿನೊಳು ಗೋಪಾಲಕೃಷ್ಣನು
ತಾನೆನಿಪ ಮಾರಮಣನೊಡನೆ ವಿ-
ಮಾನದಿಂ ಬಹುಮಾನದಿಂ ಹೂಮಳೆಯ ಸುರಿಸಿದರು || 53 ||
ಭರತ ಸೌಭಾಗ್ಯಾಂಗನಾಮಣಿ
ದುರುಳರಪಹತಿಯಿಂದ ನೊಂದಿರೆ
ಭರದಿ ತನ್ನಯ ಚಕ್ರದಿಂದಲಿ ವಸ್ತ್ರರಾಶಿಯನು |
ವಿರಚಿಸುತ ದೇಶವನು ಪೊರೆದಾ
ಪರಮಸುಮನೋಗಂಧಿ ಕೃಷ್ಣನು
ಧರೆಯ ಸಂರಕ್ಷಿಸಲಿ ಅಚಂದ್ರಾರ್ಕ ಪರಿಯಂತ || 54 ||
ಶಂಕರ ಭಟ್ಟರು ಸತ್ಯಾಗ್ರಹಗಳಲ್ಲಿ ಭಾಗವಹಿಸುವುದು, ಖಾದಿ ಬಟ್ಟೆ ಹೊತ್ತುಕೊಂಡು ಮನೆ ಮನೆಗೆ ಹೋಗಿ ಮಾರುವುದು, ಹೆಂಡದಂಗಡಿಗಳಿಗೆ ಪಹರೆ ಹಾಕುವುದು ಮಾಡುತ್ತಿದ್ದರು. ಅವರು ನಡೆಸಿದ ಸ್ವಾತಂತ್ರ್ಯ ಹೋರಾಟ, ಸಮಾಜ ಸುಧಾರಣೆಯ ಕಾರ್ಯಗಳಿಂದಾಗಿ ಅವರಲ್ಲಿ ಪ್ರಗತಿಪರ ಮನೋಭಾವ, ಶೋಷಿತಪರ ನಿಲುವುಗಳು ರೂಪುಗೊಂಡಿದ್ದವು.
‘ಗಾಂಧಿ ಸಂದೇಶ’ ಕಾವ್ಯವು ನೇರವಾಗಿ ಸಮಕಾಲೀನ ರಾಜಕೀಯವನ್ನು ವ್ಯಕ್ತಿಗಳ ಹೆಸರಿನ ಉಲ್ಲೇಖದೊಂದಿಗೆ ದಾಖಲಿಸಿದೆ. ಚರಿತ್ರ ಕಾವ್ಯ ಎಂಬ ವಿಭಾಗಕ್ಕೆ ಇದನ್ನು ಸೇರಿಸಬಹುದು. ವಾರ್ಧಕ ಷಟ್ಪದಿಯ 48 ಪದ್ಯಗಳು ಇದರಲ್ಲಿವೆ.
2. ಸಣ್ಣ ಕವಿತೆಗಳು
ಶಂಕರ ಭಟ್ಟರು 1920 ರಿಂದಲೂ ಬಿಡಿಕವಿತೆಗಳ ರಚನೆಯಲ್ಲಿ ತೊಡಗಿದ್ದರು. ಅವು ಕಾಣಿಕೆ (1927 – 18 ಕವಿತೆಗಳು), ಹಣ್ಣು ಕಾಯಿ (1933 – 21 ಕವಿತೆಗಳು); ಪತ್ರ ಪುಷ್ಪ (1965 ರಲ್ಲಿ ಪ್ರಕಟಣೆ – ಬರೆದದ್ದು 1930 ಮತ್ತು 40 ರ ದಶಕಗಳಲ್ಲಿ – 23 ಕವಿತೆಗಳು); ಪಡಿನುಡಿ (1987 ರಲ್ಲಿ ಮರಣೋತ್ತರ ಪ್ರಕಟಣೆ – ಬೇರೆ ಸಂಕಲನಗಳಲ್ಲಿ ಸೇರದೆ ಉಳಿದಿದ್ದ; ಕೆಲವಕ್ಕೆ ಶೀರ್ಷಿಕೆಯನ್ನೂ ಕೊಡದ, 36 ಕವಿತೆಗಳು) ಸಂಕಲನಗಳಲ್ಲಿ ಸೇರಿವೆ.
ಮೇಲೆ ಹೇಳಿದಂತೆ, ವಿವಿಧ ಭಾಷೆಗಳ ಕಾವ್ಯಾಭ್ಯಾಸ, ನವೋದಯದ ಆದರ್ಶಗಳ ಆಕರ್ಷಣೆ, ರಾಷ್ಟ್ರೀಯತೆಯ ತುಡಿತ, ಸ್ತ್ರೀಪರವಾದ ನಿಲುವು, ಬದುಕಿನ ಚಿರಂತನ ತತ್ವಗಳ ಅನ್ವೇಷಣೆ ಇತ್ಯಾದಿಗಳು ಅವರ ಕವಿತೆಗಳಿಗೆ ವಸ್ತುಗಳನ್ನು ಒದಗಿಸಿವೆ. ಪ್ರಾರಂಭದಲ್ಲಿ ದ್ವಿತೀಯಾಕ್ಷರ ಪ್ರಾಸವನ್ನು ಅವರು ಬಳಸಿದ್ದರೂ, ನಂತರ ಹೊಸಹೊಸ ಮಟ್ಟುಗಳ ಹುಡುಕಾಟಕ್ಕೆ ತೊಡಗಿ ಅದನ್ನು ಬಿಟ್ಟರು. ರಗಳೆಯ ಪ್ರಭೇದಗಳು ಅವರನ್ನು ಮತ್ತು ಖಂಡಕಾವ್ಯಗಳನ್ನು ರಚಿಸಿದ ದಕ್ಷಿಣ ಕನ್ನಡದ ಹೆಚ್ಚಿನ ಕವಿಗಳನ್ನು ಆಕರ್ಷಿಸಿದೆ.
ಕರುಣರಸವು ಕಡೆಂಗೋಡ್ಲು ಶಂಕರ ಭಟ್ಟರಿಗೆ ಪ್ರಿಯವಾದ ರಸವಾಗಿದೆ. ಅವರ ಭಾಷೆಯ ವೈಶಿಷ್ಟ್ಯವೆಂದರೆ ಖಚಿತವಾದ ಅರ್ಥ ಹಾಗೂ ಧ್ವನಿಗಳನ್ನು ಹೊರಡಿಸುವ ಹೊಸ ನುಡಿಗಟ್ಟುಗಳ ರಚನೆ. ಉದಾಹರಣೆಗೆ, ‘ಜೀವನಸಾರದ ಬಿರಿ ಮುಗುಳು’, ‘ಕನ್ನಡಿಮೊಗ’, ‘ಮುಗುದೆಯ ತೆರದಾ ಕಳವೆ ತೆನೆ’, ‘ಮೀಸಲು ಸೊಬಗು’, ‘ಸವಿಗನಸಿನ ಹಗೆ’ – ಇತ್ಯಾದಿ ಕೂಡುನುಡಿಗಳನ್ನು ನೋಡಿ. ಇದು ಗೋಪಾಲಕೃಷ್ಣ ಅಡಿಗರಲ್ಲಿ ಪರಿಪೂರ್ಣತೆಯನ್ನು ಪಡೆಯಿತು.
ಕಡೆಂಗೋಡ್ಲು ಅವರ ನವೋದಯದ ಗೀತೆಗಳಲ್ಲಿ ವಿವಿಧ ಭಾವಗಳ ಉತ್ತಮ ಗೀತೆಗಳಿವೆ. ಈ ಬರಹದ ಮಿತಿಯಲ್ಲಿ ಅವರ ಪ್ರಸಿದ್ಧವಾದ ಕೆಲವು ಕವಿತೆಗಳನ್ನಷ್ಟೆ ಚರ್ಚಿಸಲಾಗಿದೆ. ಅದರ ಅರ್ಥ ಇವೇ ಅವರ ಪ್ರಾತಿನಿಧಿಕ ಬಿಡಿ ಕವಿತೆಗಳೆಂದಲ್ಲ. ಇವು ಹೆಚ್ಚು ಚರ್ಚೆಗೆ ಒಳಗಾದ ಕವಿತೆಗಳೆನ್ನುವ ಕಾರಣಕ್ಕೆ ಎರಡು ಕವಿತೆಗಳನ್ನು ಇಲ್ಲಿ ಕೊಡಲಾಗಿದೆ.
1927 ರಲ್ಲಿ ಅವರು ಬರೆದ ‘ಮಸಣ’ ಕವಿತೆ ಕರ್ಕಿಯ ಪತ್ರಿಕೆಯೊಂದರಲ್ಲಿ ಪ್ರಕಟವಾಗಿತ್ತು. ಇದು ಇಂಗ್ಲಿಷ್ ಕವಿ ಥಾಮಸ್ ಗ್ರೇಯ ‘ಎಲಿಜಿ ರಿಟನ್ ಇನ್ ಅ ಕಂಟ್ರೀ ಚರ್ಚ್‍ಯಾರ್ಡ್’ (Elegy written in a country church yard)ಕವಿತೆಯ ಪ್ರೇರಣೆಯಿಂದ ಬರೆದ ಸ್ವತಂತ್ರ ಕವಿತೆಯಾಗಿದೆ. (ಪಂಜೆಯವರ ‘ತೆಂಕಣಗಾಳಿಯಾಟ’ದ ಮಾದರಿಯ ಪ್ರೇರಣೆ – ಪ್ರಭಾವ ಎಂಬ ಶಬ್ದವನ್ನೂ ಪ್ರಯೋಗಿಸಬಹುದು). ಈ ಪ್ರೇರಣೆ ಮೂಲ ಕವಿತೆಯ ಜತೆಗೆ, ಹಟ್ಟಿಯಂಗಡಿ ನಾರಾಯಣ ರಾಯರ ಅನುವಾದವನ್ನೂ ಓದಿರುವುದರಿಂದ ಬಂದಿರಬಹುದು. ಜತೆಗೆ ಜೇಮ್ಸ್ ಶಿರ್ಲೀಯ ‘ಡೆಥ್ ದ ಲೆವೆಲರ್’ ಕವಿತೆಯ ಪ್ರೇರಣೆ ಇದೆಯೆಂದು ಪ್ರೊ. ಕೇಶವ ಭಟ್ಟರು ಹೇಳಿದ್ದಾರೆ.
ಗ್ರೇಯ ಮೂಲ ಕವಿತೆ:
Beneath those rugged elms, that yew-tree’s shade,
Where heaves the turf in many a mould’ring heap,
Each in his narrow cell for ever laid,
The rude forefathers of the hamlet sleep.
ಕಡೆಂಗೋಡ್ಲು ಅವರ ‘ಮಸಣ’ ನೀಳ್ಗವಿತೆ ಪ್ರಾರಂಭವಾಗುವುದು ಹೀಗೆ:
ಇಲ್ಲಿ ಮಲಗಿದ ಜನರ ಹೆಸರೆತ್ತಿ ಕರೆಯದಿರು
ಸೊಲ್ಲನಾಲಿಸಲವರು, ಬರಿದೆ ಹಂಬಲಿಸದಿರು.
ಜೀವನದ ಸಮರದಲಿ ಬಳಲಿ ಬೆಂಡಾದವರು
ತಾವಳಲನಾರಿಸಲು ದೀರ್ಘ ನಿದ್ರೆಯೊಳಿಹರು ||1||
ಹ.ನಾ.ರಾ. ಅವರ ಅನುವಾದ:
ಆ ಮುರಿದೊಡಲಿನ ತಪನೀಮರದಾ ಕರಿಬೇವಿನ ಕೆಳಗೆ
ಭೂಮಿಯ ಕವಿದಿಹ ಕುಸಿಗುಪ್ಪೆಗಳಲಿ ಹಸುರು ಹೊದಿಕೆಯೊಳಗೆ
ಕಿರಿನೆಲ ಮನೆಗಳಲವರವರನಂತ ಕಾಲಕೆ ಮಲಗಿರುತ
ಬರಿಗಾವಿಲರೆನಿಸಿದ ಬಹು ಪೂರ್ವಜರಿರುವರು ನಿದ್ರಿಸುತ ||4||
ಹಟ್ಟಿಯಂಗಡಿಯವರಿ ಇಂಗ್ಲಿಷಿನ ಐದು ಗಣಗಳ ಅಯಾಂಬಿಕ್ ಪೆಂಟಾಮೀಟರನ್ನು (Be-neath | those –ru | gged -elms | that – yew | tree’ – s shade) ಅನುಸರಿಸಲು ರಗಳೆಯ ನಾಲ್ಕು ಗಣಗಳನ್ನು ವಿಸ್ತರಿಸಿ ಐದು ಗಣಗಳನ್ನಾಗಿ ಮಾಡಿಕೊಂಡಿದ್ದಾರೆ: “ಆ ಮುರಿದೊ/ಡಲಿನ ತಪ/ನೀಮರ ದ+ / ಅ ಕರಿಬೇ/ವಿನ ಕೆಳಗೆ”. ಕಡೆಂಗೋಡ್ಲು ಅವರು ಲಲಿತ ರಗಳೆಯ ನಾಲ್ಕು ಗಣಗಳಲ್ಲಿಯೇ ಈ ಕವಿತೆಯನ್ನು ಕಟ್ಟಿದ್ದಾರೆ – “ಇಲ್ಲಿ ಮಲ| ಗಿದ ಜನರ | ಹೆಸರೆತ್ತಿ | ಕರೆಯದಿರು”.
ಈ ಕವಿತೆಯ ಮೇಲೆ ಗ್ರೇಯ ಪ್ರಭಾವ ಇಲ್ಲವೆನ್ನಲು ಆಗದು. (ಹಾಗೆ ಸಾಧಿಸಿ ಕಡೆಂಗೋಡ್ಲು ಅವರು ಯಾವ ಪ್ರಭಾವಕ್ಕೂ ಒಳಗಾದವರಲ್ಲ ಎಂದು ಸಾಧಿಸಿಯೂ ಆಗಬೇಕಾದುದೇನಿಲ್ಲ). ಶಿರ್ಲಿ ಮತ್ತು ಗ್ರೇಯ ಪ್ರಭಾವವನ್ನು ಈ ಪ್ರಭಾವವನ್ನು ವಿಮರ್ಶಕರು ತೋರಿಸಿದ್ದಾರೆ. ಕಡೆಂಗೋಡ್ಲು ಅವರ ಮೂರು ಖಂಡಕಾವ್ಯಗಳ ಸಂಕಲನ ‘ನಲ್ಮೆ’ಯಲ್ಲಿರುವ ಎರಡು ಖಂಡಕಾವ್ಯಗಳಿಗೆ ಕೂಡ (‘ಹೊನ್ನಿಯ ಮದುವೆ’ ಮತ್ತು ‘ಮುರಲೀನಾದ’) ಇಂಗ್ಲಿಷ್ ಕವಿತೆಗಳ ಪ್ರೇರಣೆಯಿದೆ. ‘ಮಸಣ’ ಕವಿತೆ ಹೀಗಿದೆ:
ಮಸಣ
ಇಲ್ಲಿ ಮಲಗಿದ ಜನರ ಹೆಸರೆತ್ತಿ ಕರೆಯದಿರು
ಸೊಲ್ಲನಾಲಿಸರವರು, ಬರಿದೆ ಹಂಬಲಿಸದಿರು.
ಜೀವನದ ಸಮರದಲಿ ಬಳಲಿ ಬೆಂಡಾದವರು
ತಾವಳಲನಾರಿಸಲು ದೀರ್ಘನಿದ್ರೆಯೊಳಿಹರು. || 1 ||
ಇರುಳಿಡೀ ರೋದಿಸಿದ ಕಿರುಗೂಸು ಮುಂಜಾವ-
ಕೆರಡು ಗಳಿಗೆಗಳಿರಲು ಸವಿದು ತಾಯ್ಮೊಲೆ ಹಾಲ
ಮರೆದವಳ ಮೆಯ್ಮೇಲೆ ಕಣ್ಮುಚ್ಚುವಂದದಲಿ
ಒರಗಿರುವರೀ ಜನರು ಮೃತ್ಯುವಿನ ತಳ್ಕೆಯಲಿ. || 2 ||
ಸಿರಿಯ ಸುಗ್ಗಿಯ ಕಂಡು ಹಬ್ಬದೂಟವನುಂಡು,
ಹರಯದೇಣಿಯ ತುತ್ತತುದಿಯ ಮೆಟ್ಟಿಲನೇರಿ,
ಕರೆದು ಮಕ್ಕಳ ತನ್ನ ಬಳಿಗೆ, ಹೋಗುವೆನೆಂದು
ಹೊರಟ ನರೆದಲೆಯಜ್ಜ ಬಂದು ಮಲಗಿಹನಿಲ್ಲಿ. || 3 ||
ಇಂದು ನಿರಶನ, ನಾಳೆಯುಣಿಸಿಲ್ಲ, ಮನೆಯವಳು
ಬಂದು ಗಜರುವಳು, ಮಗುವಳುತಿಹುದು, ಬಲವೆಲ್ಲಿ
ಕುಂದಿ ಹೋಯಿತೆನುತ್ತ ಹಲವು ಮಕ್ಕಳ ತಂದೆ
ನೊಂದು ಕಂಬನಿಗರೆದು ಮಲಗಿರುವ ತಾಣವಿದು. || 4 ||
ಬಲವುಂಟು, ಗೆಲವುಂಟು, ಸಿರಿಯುಂಟು ತನಗೆನುತೆ
ನೆಲವನೆಲ್ಲವ ಹುಲ್ಲಹಿಡಿಗೆ ಬಗೆದಾ ಮೇಲೆ
ಕನಸಿನಂತಿರೆ ವಿಭವ ಮರೆಯಾಗೆ, ನರಿನಾಯ್ಗೆ
ಉಣಿಸಾದ ಬಲಶಾಲಿ ನಡೆತಂದನೀಯೆಡೆಗೆ. || 5 ||
ಮನ್ನಿಸದು ಲೋಕ, ಕಣ್ಣೆತ್ತಿನೋಡದು ನೇಹ,
ಬನ್ನಗಳು ಬೆಂಬಿಡವು, ಬೆನ್ನೊಳಿರೆ ಬಡತನವು
ತನ್ನ ನೆಳಲೇ ತನಗೆ ವೈರಿಯಾಗಲು ಸುರಿವ
ಕಣ್ಣೀರಿನೊಡನಾಡಿಯೆಡೆಗೊಂಡ ಭೂಮಿಯಿದು. || 6 ||
“ನೀರನೇತಕೆ ಬಾರನಕಟ? ಸಂಜೆಯ ಕಂಡು
ಗಾರಾಗುತಿದೆ ಮನವು, ಮನೆಯೊಳೊಬ್ಬಳೆ” ಎಂದು
ಸೇರಿ ಮನೆಬಾಗಿಲನು ಬಿಸುಸುಯ್ವ ಕೋಮಲೆಯ
ದಾರಿಯನು ಕತ್ತಲೆಯೊಳಡಗಿಸಿದ ಮಸಣವಿದು. || 7 ||
ಕಡೆಗಣ್ಣ ಕುಡಿನೋಟವೆಳೆಯಳನು ನಾಚಿಸಲು
ಹಿಡಿದು ಮಾಲೆಯ, ಮಧುರ ಮಂದಹಾಸವ ಬೀರಿ
ಮದುವಣಿಗನೊಪ್ಪುತಿರಲವನ ಕೈಗಳ ಬಿಗಿದು
ಪದೆದು ಕೊಂಡೊಯ್ದೊರಗಿಸಿದ ರುದ್ರಭೂಮಿಯಿದು || 8 ||
ಹೊಸ ಹರಯವೇರುತಿರೆ, ಹೊನಪು ಹೊನಲೇರುತಿರೆ
ದೆಸೆಯೊಳರಮನೆಗಟ್ಟುತಿರುವ ತರುಣನ ಮೇಲೆ
ಬಿಸಜದೆದೆ ಹೀರಿ ಮಲಗಿಸುವ ದುರುದುಂಬಿವೊಲು
ಮಸಗಿ ಮೇಲ್ವಾಯ್ದ ಮೃತ್ಯುವ ಹುಟ್ಟು ನಾಡಿದುವೆ. || 9 ||
ನಲಿನಲಿಯುತಿದ್ದ ಬಾಲನು ಬಂದು ತಾಯೊಡನೆ
ತಲೆ ಬೇನೆ ತನಗೆಂದು ಹಾಸಿಗೆಯ ಹಿಡಿದಿರಲು,
ಗುಣವಾಯಿತೆಂದು ತೋರಿಸುತವನ ದೇಹಕ್ಕೆ
ಹೆಣವೆಂಬ ಹೆಸರಿತ್ತ ಸಾವಿಂಗೆ ಬೀಡಿದುವೆ. || 10 ||
ಮಾತು ಬಾರದ ಹಸುಳೆ ಬಾಯಾರೆ ಬಾಯೊಡೆದು
ಮಾತೆಯನು ನೋಡುತಿರಲಾ ಮುಗುದೆ ಮೊಲೆಯೂಡಿ
ಪ್ರೀತಿಯಿಂ ಜೋಗುಳವ ಹಾಡಿ ಮಲಗಿಸೆ ಮಗುವ
ನಾ ತಾಣದಿಂದೊಯ್ದ ಮೃತ್ಯುವಿನ ಠಾವಿದುವೆ. || 11 ||
ಆರಾರು ಮಲಗಿಹರೊ? ಎಲ್ಲೆಲ್ಲಿ ಅಡಗಿಹರೊ
ಸಾರುವಾ ಜನರುಂಟೆ ಈ ಮಸಣದೆಡೆಯಲ್ಲಿ?
ಕಾರಿರುಳು ಕೊಂಡೊಯ್ದ ತಾರೆಗಳ ಲೆಕ್ಕವನು
ತೋರಿಸುವನಾರುಂಟು ದೇವನೊಬ್ಬನ ಹೊರತು? || 12 ||
ದೊರೆಯ ಬಳಿಯಲಿ ಬಂದು ಆಳು ಮಲಗಿಹನಂತೆ,
ಸಿರಿಯರಸನೆಡದಲ್ಲಿ ಭಿಕ್ಷು ಬಿದ್ದಿಹನಂತೆ,
ಕವಿಯ ಪಕ್ಕದೊಳೆ ವಂಚಕನು ನಿದ್ರಿಪನಂತೆ.
ಭುವನದಲಿ ಭೇದ, ಮಸಣದಿ ಭೇದವಿಲ್ಲಂತೆ. || 13 ||
ಮಲಗಿದರು ಮಲಗಿರಲಿ! ಹೆಸರೆತ್ತಿ ಕರೆಯದಿರು
ಕಳೆದು ಹೋದವರೊಡನೆ, ಕಳೆದು ಹೋಯಿತು ಹೆಸರು.
ಬಳಲಿ ಬೆಂಡಾಗಿಹರು ಬದುಕುಹೋರಾಟದಲಿ,
ಕೊಳಲಿ ಚಿರಶಾಂತಿಯನನಂತ ನಿದ್ರೆಯೊಳಿರಲಿ. || 14 ||
ಗುಣಗಳಿರಬಹುದು, ಅವಗುಣಗಳೇ ಇರಬಹುದು
ಗುಣದೋಷಗಳು ಸುಟ್ಟು ಹೋದುವೈ ಚಿತೆಯೊಳಗೆ.
ಹೆಣವಾದ ಮೇಲೆ ತನು ತುಲನೆ ಮಾಡುವೆಯೇಕೆ
ಹೆಣಕೆ ಹೆಸರೊಂದೆ, ವಿವಿಧತೆಯಿಹುದು ಜೀವನಕೆ. || 15 ||
ಇಂದು ಹಬ್ಬವು, ಬಂಧುಬಾಂಧವರು ನೆರೆದಿಹರು,
ಬಾಂದಳವ ಕೀಲೈಸುತಿಹುದು ವಾದ್ಯದ ದನಿಯು,
ಅಂದು ನಿಮ್ಮನು ಬಿಟ್ಟು ತನ್ನ ದಾರಿಯ ಹಿಡಿದ
ಕಂದನೆಲ್ಲಿಹನು? ಬರುವನೆ ಮನೆಗೆ ಹೇಳಯ್ಯ. || 16 ||
ಮಗಳ ಮದುವೆಯು ನಾಳೆ, ಧಾರೆಯೆರೆವಧಿಕಾರ
ಜಗದೊಳೆನಗೊಬ್ಬಗೇ ಹೆರರಿಗಿಲ್ಲಾ ಎನುತೆ
ಸಡಗರಿಸಿ ಸೊಬಗಿನ ವಿವಾಹಮಂಡಪದೊಳಗೆ
ಅಡಿಯಿಡುವನೇ ಮಡಿದ ಜನಕನಿದನೆಣಿಸಯ್ಯ || 17 ||
ಮದುವೆಯಾದಿನಿಯಳನು ಮಾತನಾಡಿಸಲಿಲ್ಲ,
ಮುದದೊಳವಳನು ಕೂಡುತಾನಂದ ಪಡಲಿಲ್ಲ,
ಚದುರೆಯಳ ಮೆಲ್ಲೆದೆಯ ರಸಿಕತೆಯ ಸವಿ ನೋಡೆ
ಮದುವಣಿಗನೈತಹನೆ ಉಸಿರು ನಿಂತಾಮೇಲೆ? || 18 ||
ಮಸಣಕೈದಿದ ಜನರು ಮಾತನಾಡುವರಲ್ಲ,
ಹೆಸರೆತ್ತಿ ದೂಷಿಸಲು ಕಿನಿಸುಗೊಂಬವರಲ್ಲ,
ಬಳಲಿಹರು ಬಳಲಿಹರು ಜೀವನದ ಸಮರದಲಿ,
ಮಲಗಿಹರು ಮಲಗಿಹರು ಕೊನೆಯಿರದ ನಿದ್ದೆಯಲಿ. || 19 ||
ನೆಲವ ಕತ್ತಲೆ ಮುಸುಕೆ, ನೆಳಲು ಭೂತಗಳಂತೆ
ಬಳೆಯುತಿರೆ, ತರಣಿ ಪಡುಗಡಲೊಳಗೆ ಮುಳುಗುತಿರೆ
ಕರೆದು ಗೂಡಿಗೆ ಹಾರಿ ಬರುವ ಹಕ್ಕಿಗಳೊಡನೆ
ಬರುವನೇ ಮಸಣವನು ಮರೆಗೊಂಡ ಮಾನವನು? || 20 ||
ಬಾರನೈ ಬಾರನೈ ಮಸಣವನು ಮರೆಹೊಕ್ಕು
ಧಾರಿಣಿಯ ಬವಣೆಯನು ಕಣ್ಣೆತ್ತಿ ನೋಡುವನೆ?
ತಾವರೆಯನೊರಗಿಸಿದ ತಂಗಾಳಿಯಾತಂಗೆ
ನೋವನಾಗಿಸಿತವನ ದೇಹವನು ಕೊರಗಿಸಿತು. || 21 ||
ಆಗಸದಿ ಚಂದಿರನು ಮೂಡಿ ಬಾರೆಂದವನ
ಕೂಗಿ ಕರೆದರೆ ಬಾರನಯ್ಯ, ನಿನ್ನಯ ಶಿರಕೆ
ತಾರಕಿಗಳಿಂದ ಸಿರಿಮುಡಿಯ ಮಾಡಿಪೆನೆನಲು,
ತೋರನಾತನು ಮೊಗವ ಶಾಂತಿರಾಜ್ಯವ ತೊರೆದು. || 22 ||
ಮಾಮರದ ಚಿಗುರೆಡೆಯ ಪೀಠವನಲಂಕರಿಸಿ
ಸಾಮದಿಂ ಹಾಡುತಿಹ ಕೋಗಿಲೆಯ ಕಲರವವು
ಊರನೆಚ್ಚರಿಸಿದರು, ನಿದ್ದೆಯನು ಬಿಟ್ಟೆದ್ದು
ಬಾರನಾತನು, ದನಿಯ ಮೇರೆಯನು ಮೀರಿಹನು. || 23 ||
ಸಾಲಾಗಿ ಹಾರುತಿಹ ಮಲ್ಲಳಿಯ ಝೇಂಕಾರ
ಕೇಳುವುದೆ ಆತನಿಗೆ? ಬಿರಿವ ಮುಗುಳಿನ ಸಾರ
ಸೂರೆಗೊಳ್ಳುವುದೆ ಆತನ ಬಗೆಯನಿನ್ನಾವ
ಕಾರಣದೆ ಕಣ್ಮುಚ್ಚಿದವನು ಕಣ್ದೆರೆಯುವನು? || 24 ||
ಆ ವಸಂತನು ಬಂದು ಚಿಗುರೆಂಬ ಕಪ್ಪವನು
ಸಾವಂತನಂತೆ ತಂದೊಪ್ಪಿಸಲು ಫಲವೇನು?
ಆರು ನೀನೆಂದವನ ಮೋರೆನೋಡಿದರುಂಟೆ?
ಬಾರನೈ ಮಡಿದವನು ಶಾಂತಿವಡೆದಾ ಮೇಲೆ. || 25 ||
ಇಂತು ಮರೆದೊರಗಿದರ ಹೆಸರೆತ್ತಿ ದೂಷಿಸುತ
ಪಂತವನು ಮೆರೆಯಿಪೆಯ? ಹೇಳು ಕಣ್ಣೀರಾಣೆ
ಕರುಣೆಯನು ಕೊಡಲಿಲ್ಲವೇ ನಿನಗೆ ಜಗದೊಡೆಯ?
ಹರಹರಾ, ತಾನೆ ಕರುಣಿಸಿದನೇ ಕಲ್ಲೆದೆಯ? || 26 ||
ಸಾಕಯ್ಯ ನಿಂದೆ ಮಡಿದವರನೇಳಿಸಿದುದಕೆ
ಬೇಕಯ್ಯ ಮನದ ಮರುಕದ ಕಂಬನಿಗಳೆರಡು
ಯಶವ ಪಡೆದಿರಲಿ ಅಪಯಶವ ತಾ ಗಳಿಸಿರಲಿ
ಮಸಣವನು ಹೊಂದಿ ಪರಿಪೂತರಾಗಿಹರವರು || 27 ||
ಮುಕುಟ ಕೆಡುವುದು, ಕೈಯ ದಂಡ ಧರೆಗುರುಳುವುದು,
ಸಕಲ ವೈಭವ ಸೂರೆಯಹದು, ಮೃತ್ಯುವ ಕಂಡು
ಕವಿ ಕರವ ಮುಗಿಯುವನು; ವೀಣೆಯನು ಗಾಯಕನು
ಜವದಿ ಬದಿಗಿಟ್ಟು ಮೃತ್ಯುವ ಬೆನ್ನನೈದುವನು. || 28 ||
ವಿಧಿಗೈದ ಬಗೆಬಗೆಯ ವೇಷಗಳ ಚಂದವನು
ಹುದುಗಿಸುವ ಕೆಲಸವೊಂದೇ ನೋಡೆ ಮಸಣಕ್ಕೆ
ಜಗದೊಳುದಿಸಿದರೆಲ್ಲ ಬದುಕಿದರೆ ಧಾರಿಣಿಯ
ಅಗಲ ಸಾಕಾಗುವುದೆ ಜೀವನಗಳಾಟಕ್ಕೆ? || 29 ||
ಕೆಲಸ ತೀರಿದ ಜನರು ಬಂದು ಮಲಗುವರಿಲ್ಲಿ
ನೆಲಸಲನ್ಯರಿಗೆ ಧಾರಿಣಿಯೊಳೆಡೆ ಮಾಡುವರು.
ಜರೆಯಡಸೆ ಜೀವನವು ಮರೆಗೊಂಬ ತಾಣವಿದು
ಜನನಮರಣವ ಹಿಡಿದು ಮುರಿದುಂಬ ಮಸಣವಿದು. || 30 ||
‘ಮಸಣ’ ಕವಿತೆಯಲ್ಲಿ ಮೂಲ ಕವಿತೆಯಲ್ಲಿ ನಾಲ್ಕು ಸಾಲುಗಳ 30 ಚರಣಗಳಿದ್ದರೆ, ಮೂಲ ಕವಿತೆಯಲ್ಲಿ ನಾಲ್ಕು ಸಾಲುಗಳ 30 ಚರಣಗಳಿವೆ, ಮತ್ತು ಎರಡು ಚರಣಗಳ ‘ಚರಮಸಂದೇಶ’(THE EPITAPH) ಇದೆ. ಅಂದರೆ ಗಾತ್ರದಲ್ಲಿ ಮೂಲದಷ್ಟೇ ಇದೆ. ಆದರೆ ಕಡೆಂಗೋಡ್ಲು ಕವನ ಭಾರತೀಯ ಸಂದರ್ಭವನ್ನು ಕುರಿತಿದೆ; ಆಶಯವೂ ಭಿನ್ನವಾಗಿದೆ. ಕಯ್ಯಾರ ಕಿಞ್ಞಣ್ಣ ರೈಗಳು ಮತ್ತು ಡಾ. ಸುನೀತಿ ಉದ್ಯಾವರ ಅವರು ಇದನ್ನು ಸ್ವತಂತ್ರ ಕವಿತೆಯೆಂದೇ ಪರಿಗಣಿಸಬೇಕೆಂದಿದ್ದಾರೆ. ಪಂಜೆಯವರ ತೆಂಕಣ ಗಾಳಿಯಾಟವನ್ನು ಪರಿಗಣಿಸಿದಂತೆ ಇದನ್ನೂ ಸ್ವತಂತ್ರ ಕವಿತೆ ಎಂದು ಪರಿಗಣಿಸಲು ಅಡ್ಡಿಯಿಲ್ಲ. ಆದರೆ ಇಂಗ್ಲಿಷಿನ ಪ್ರೇರಣೆ ಎನ್ನುವುದು ಇದನ್ನು ಓದುವವರ ಮನಸ್ಸಿನಲ್ಲಿ ಇದ್ದೇ ಇರುತ್ತದೆ. ಅಲ್ಲದೆ, ಸ್ಮಶಾನದಲ್ಲಿ ಸತ್ತವರು ‘ನಿದ್ರಿಸಿರುವುದು’ – ತುಳುನಾಡಿನಲ್ಲಿ ಸಾಮಾನ್ಯವಾಗಿ ಕ್ರೈಸ್ತ ಮತ್ತು ಇಸ್ಲಾಮ್ ಮತೀಯರಲ್ಲಲ್ಲದೆ ಹಿಂದುಗಳ ನಂಬಿಕೆಯಲ್ಲ. ಬಿಡಿ ವಿವರಗಳಲ್ಲಿ ಬೆಳೆಯುವ ಕವಿತೆಯ ಮಾದರಿಯೂ ಗ್ರೇಯ ಎಲಿಜಿಯನ್ನು ಹೋಲುತ್ತದೆ.
ಅವರ ಸಣ್ಣ ಕವಿತೆಗಳಲ್ಲಿ ‘ಕಾವ್ಯ ಸಮಾಧಿ’ ಮತ್ತು ‘ಪಂಡಿತನ ಪಯಣ’ ಪ್ರಸಿದ್ಧವಾಗಿವೆ. ಅವು ‘ಹಣ್ಣುಕಾಯಿ’ ಸಂಕಲನದಲ್ಲಿವೆ. ಎರಡೂ ಹಳೆಯ ಕಾಲದ ಪಾಂಡಿತ್ಯವನ್ನು ಮತ್ತು ಸಂಪ್ರದಾಯಶಾಠ್ಯವನ್ನು ಅಣಕಿಸುತ್ತವೆ.
ಕಾವ್ಯವು ಸಾಮಾನ್ಯ ಜನರಿಗಲ್ಲ, ಅದಕ್ಕೆ ಸಮಾಜದ ತತ್ಕಾಲೀನ ಸಮಸ್ಯೆಗಳ ಗೊಡವೆ ಅಗತ್ಯವಿಲ್ಲ, ವೇದೋಪನಿಷತ್ತುಗಳಂತೆ ಚಿರಂತನ ವಿಶ್ವತತ್ವಗಳ ಅನ್ವೇಷಣೆ ಸಾಕು ಎಂಬಿತ್ಯಾದಿ ಅಭಿಪ್ರಾಯಗಳು (ಅಂತಹ ಅಭಿಪ್ರಾಯಗಳು ಇದ್ದರೆ ಅವುಗಳನ್ನು) ಪೂರ್ವಪಕ್ಷವೆಂಬಂತೆ ಪರಿಭಾವಿಸಿಕೊಂಡು, ಅವುಗಳನ್ನು ಅಣಕಿಸಿ ಬರೆದಂತೆ ‘ಕಾವ್ಯ ಸಮಾಧಿ’ ಕವಿತೆ ಇದೆ. ಇದರ ಕೆಲವು ಸಾಲುಗಳು ಹೀಗಿವೆ:
ಕವಿಯೇ! ಕಾವ್ಯಸಮಾಧಿಯೊಳೆರಗೈ!
ಅಮೃತಾನಂದದ ಪೀಠದೆ ಮೆರೆಯೈ!
….
ವೇದದಿ ಬೋಧದಿ ಹುತ್ತವ ಕಟ್ಟಿ,
ವಾದವು ಸರ್ಪದವೊಲು ಬುಸುಗುಟ್ಟಿ
ಬೆದರಿಸುತಿರುವುದು; ಮಾನವಕೋಟಿ
ಚೆದರುತಲಿರುವುದು ಚಿಲಿಪಿಲಿಗುಟ್ಟಿ;
ನಿನ್ನಯ ಕಾವ್ಯಶರೀರದ ಸುತ್ತಲು
ಯುಗಧರ್ಮಗಳೇ ಹೆಣೆದಿವೆ ಎತ್ತಲು!
….
ತತ್ತ್ವದ ಶಾಸ್ತ್ರದ ಬಲೆಗಳ ಹೆಣೆಯುತ,
ಜಾಡರ ತೆರೆದಿಂದಲ್ಲಿಯೆ ಸುಳಿಯುತ
ಅಣುವಿಂದಣು ಗುರುವಿಂ ಗುರು ಎನ್ನುತ,
ಅದನೇ ಸೆರೆಯಲಿ ಹಿಡಿಯಲು ಮಸಗುತ,
ಶಕ್ತರ ಭಕ್ತರ ಪಡೆಗಳು ಬಂದರು,
ಕವಿಯೇ! ನೀ ಮೌನದೊಳೇ ನಿಂದಿರು!
ಗೊಡ್ಡು ಪಾಂಡಿತ್ಯವನ್ನು ವಿಡಂಬಿಸಿದ ‘ಪಂಡಿತನ ಪಯಣ’ ತಮ್ಮನ್ನು ಟೀಕಿಸಿದೆ ಎಂದು ಭಾವಿಸಿದ ಹಲವು ಪಂಡಿತರು ಸಿಟ್ಟುಗೊಂಡಿದ್ದರು. ‘ಪಂಡಿತನ ಪಯಣ’ ಕವಿತೆ ಹೀಗಿದೆ:
ಪಂಡಿತನ ಪಯಣ
ಈ ಪರಿಯೋಡುವುದೆಲ್ಲಿಗೆ ಪಂಡಿತ ?
ನಿನ್ನಯ ಗುರಿಯಾವುದು? ನುಡಿ, ಖಂಡಿತ !
ದೇಹವು ನೋಯದೆ ? ಜೀವವು ಬೇಯದೆ ?
ಆಸೆಯದಿನ್ನೂ ನಂದದೆ ಕುಂದದೆ ?
ಹೇರಿದ ಹೊರೆಯಲಿ ಕೊರಳದೊ ಕುಸಿದಿದೆ ;
ಮೀರಿದ ದಾಹದಿ ಬೆವರಿದೊ ಬಸಿದಿದೆ ;
ಆರದ ಬಯಕೆಗಳೆಲ್ಲವನೊಟ್ಟುವೆ,
ಕಾಲವ ನಂಬುತ ಮೂಟೆಯ ಕಟ್ಟುವೆ.
ತಲೆಯೇರಿದ ಕಟ್ಟುಗಳೊಳಗೇನಿದೆ ?
ಹೆಗಲಲಿ ತೂಗುವ ಬುಟ್ಟಿಯೊಳೇನಿದೆ ?
ಆರಿಗು ಹೇಳದೆ ಆರಿಗು ತಿಳಿಸದೆ
ಏತಕೆ ಇಂತು ಪಲಾಯನ ಗೈಯುವೆ ?
ತತ್ತ್ವವೊ ಶಾಸ್ತ್ರವೊ ಏನಿದೆ ತಲೆಯಲಿ ?
ಧರ್ಮವೊ ಕರ್ಮವೊ ಏನಿದೆ ಭುಜದಲಿ ?
ಸಂಧಿ ಸಮಾಸದ ಭಾರವ ಹೊತ್ತು
ಬಂದುದೆ ನಿನಗೀ ತರದ ವಿಪತ್ತು ?
ಸಾಯುವ ಹುಟ್ಟುವ, ಹುಟ್ಟುತ ಸಾಯುವ
ಬಡಮಂದಿಗೆ ತಿಳಿವಿನ ತುತ್ತೀಯುವ
ಕರುಣೆಯು ಬೇಡವೆ ? ಎಲ್ಲವು ಗೂಢವೆ ?
ನೀನೆಮಗೀವುದು ಮಡಗೂಳಲ್ಲವೆ ?
ಆಗಲಿ ಪಂಡಿತ ! ನಮ್ಮಯ ಪಂಥವು
ಬೇರಾಗಲಿ, ನಿನ್ನಯ ಆ ಶಪಥವು
ಹಳೆಗಾಲದ ಕನಸುಗಳನೇ ಮೇಯಲಿ !
ಹೊಸಗಾಲದ ನೆನಸುಗಳನು ಹಾಯಲಿ !
ಕಾಲವು ಬೆಂಬತ್ತುತಲೇ ಬರುವುದು,
ದಿನವಲ್ಲಲ್ಲಿಯೆ ತಲೆ ಮರಸುವುದು ;
ನರೆಯೂ ಜರೆಯೂ ಬರಲಿದೆ ವೇಳೆ ;
ಜರೆಯುವ ಕೆಲಸವ ಮುಗಿಸೈ ಮೊದಲೆ !
ನಿನ್ನಂದದಿ ಪುಣ್ಯವ ಕಟ್ಟಿದೆನೆ ?
ನಿನ್ನಂದದಿ ವಿಧಿಯನು ಕುಟ್ಟಿದೆನೆ ?
ಕರ್ಮದ ಕೆಸರಲಿ ಬಿದ್ದವ ನಾನು
ಧರ್ಮದ ಮಡಿಯನು ಹೊದ್ದವ ನೀನು.
ಜನಗಳು ಬೆಂಬತ್ತಲಿ ಹಿಂಜರಿಯಲಿ,
ನಿನಗೊಬ್ಬನಿಗಾವುದು ಭಯ ಪಥದಲಿ ?
ಮುಗಿಯದ ಸಾಧನೆಯಡಸಿದೆ ನಿನ್ನನು ;
ಆರೈ ಬರುವರು ಬೆದರಿಸೆ ನಿನ್ನನು ?
ಇಂಗ್ರಜಿಗಿಂಗ್ರಜಿ ಸಕ್ಕದಗಿಕ್ಕದ
ಎಲ್ಲವ ಮೂಟೆಯ ಮಾಡಲು ಹೆಕ್ಕದ !
ಓಡೈ ! ಹಾರೈ ! ಹೇರೈ ! ತಲೆಯಲಿ
ಅಡಗಿಸು ಸೇರಿಸು ನಿನ್ನಯ ನೆಲೆಯಲಿ.
ತರ್ಕದ ಸುರಗಿಯು ಕೈಯೊಳಗಿಲ್ಲವೆ ?
ವೇದಾಂತದ ಕೈದೀಪವದಿಲ್ಲವೆ ?
ನಂಬಿಕೆಯಂಬಲಿ ದಾಹವ ಕಳೆಯದೆ ?
ಶ್ರದ್ಧೆಯ ಕಂಬಳಿ ಚಳಿಯನು ನೀಗದೆ ?
ಕಳ್ಳರೊ ಕಾಕರೊ ಆರೈ ಬರುವರು ?
ಕದ್ದರೆ ಆರೀ ಹೊರೆಯನು ಹೊರುವರು ?
ಶಾಪದ ಕೋಲನು ಜಳಪಿಸಲಾಗದೆ ?
ಆರೈ ಬದುಕುವರದರಾ ಹೊಡೆತದೆ ?
ಉಣ್ಣುತ ಕುಡಿಯುತ ದೈವವ ಸಾಕುತ
ಏಳುತ ಮಲಗುತ ಎಂತೋ ನೂಕುತ
ಕಾಲವ, ಕಳೆಯಲು ಬಾರದೆ ಜಾಣಗೆ ?
ಕರ್ಮದ ಬಂಧಗಳೇಕೈ ನಿನಗೆ ?
ದುಡಿವರ ಗೆಯ್ಮೆಯ ಹಳಿಯಲು ಬಹುದು ;
ಓದುವರೋದನು ತುಳಿಯಲು ಬಹುದು ;
ಕಲಿಯುಗವೆನ್ನುತ ನಿಂದಿಸಬಹುದು,
ಕೃತಯುಗಕೇ ಕೈಮುಗಿಯಲು ಬಹುದು.
ಇಂದಿನ ಜನಗಳ ಶಪಿಸಲು ಬಹುದು,
ಹಿಂದಿನ ದಿನಗಳ ಜಪಿಸಲು ಬಹುದು ;
ಎಲ್ಲರ ಜರೆಯುತದೃಷ್ಟವ ಕರೆಯುತ
ಹೋಗಲು ಬಹುದೊಬ್ಬನೆ ಮುಂದೊತ್ತುತ.
ಪಂಡಿತರಾದರು ಪಾಮರರಾದರು
ಒಂದೇ ಹೆಸರಿಗೆ ಸೋಲ್ವರು ಸಾವರು ;
ಸತ್ತರು ನಮ್ಮೀ ನೆನಪಿರಲೆಂಬರು,
ಜೀವವ ಬಿಡುವರು ಜಸವನು ಕೊಂಬರು.
ಓಡೈ ಪಂಡಿತ ! ಓದಿಗೆ ಲೋಕದ
ಹಾದಿಯು ದೊರೆವುದೊ ? ಪರಿಕಿಸಿ ನೋಡದ
ದೂರದೆ ಕಾಂಬುದು ಕೀರ್ತಿಯ ಬೆಟ್ಟ,
ಅದನೇರ್ವುದು ಪಂಡಿತರಿಗು ಕಷ್ಟ.
ಅಡರಲು ಎದೆಯೊಂದೇ ಇರಬೇಕು ;
ನೋವಿನೊಡನೆ ಜಗಳಾಡಲು ಬೇಕು ;
ಅಡಿತಪ್ಪಲು-ಆ ಬೆಟ್ಟದ ತಪ್ಪಲು
ಕೆಡಹುವುದೆಲ್ಲಿಗೊ ? ಬಾರದು ಹೇಳಲು.
ಬುತ್ತಿಯೊ ಹೊರೆಯೋ ಕತ್ತಿಯೊ ಎಲ್ಲವು
ಏರುವ ಸಮಯದಿ ಹಿಂದೆಯೆ ಸೆಳೆವುವು ;
ಕೈಗೋಲ್ ಮುರಿವುದು, ಸೊಡರಾರುವುದು ;
ಪಂಡಿತರೋದನವಾರಿಗು ಕೇಳದು.
ಎಲ್ಲರ ನುಂಗುವ ಮರವೆಯ ಕಣಿವೆ
ಬಳಿಯೊಳೆ ಬೆದರಿಸುತಿರುವುದು ಕಾಣುವೆ.
ಪಂಡಿತರೆಲ್ಲರು ಪಾಮರರೆಲ್ಲರು
ಕಣ್ಮರೆಯಿಸಿ ಅಲ್ಲಿಯೆ ಅಡಗುವರು.
ಪೂರ್ವದೆ ಸಂಚಯಗೈದಾ ಕರ್ಮವು
ಕೈಬಿಡುವುದು ಮುಂದಣಕಿಸೆ ಸಾವು,
ಓದುಗಳಾವುವು ತತ್ತ್ವಗಳಾವುವು
ಕೈಹಿಡಿದೆತ್ತಲು ಬಾರವು ಬಾರವು.
ಮುಗಿಲನು ಮುಟ್ಟುವ ಗಳೆಗಳ ತುದಿಯಲಿ
ಹಾರುವ ಡೊಂಬನ ತೆರದಲಿ-ನೆಲದಲಿ
ನಿಲುಕದ ತತ್ತ್ವದ ತುದಿಯಲಿ ಸಾಯುವ
ನಿನಗಾವನು ಬಾಯಿಗೆ ನೀರೆರೆಯುವ ?
ಆರೋ ಕಾಡಿನ ನಾಡಿನ ಜನರು
ಎಂತೋ ಕಷ್ಟದಿ ಹಿಡಿದೆತ್ತುವರು.
ಉಸಿರಾಡದ ತನು ಕಂಡಳುಕುವರು
ಮಿತಿಯಿಂ ಕಂಬನಿಗಳ ತುಳುಕುವರು.
ಹೊರೆಗಳ ಸೆರೆಗಳ ಬಿಚ್ಚುವರಾಗಳೆ
ಹೊರತೆಗೆದೆಲ್ಲವ ಪರಿಕಿಪರಾಗಳೆ !
ಏನದ್ಭುತವೆಂದಚ್ಚರಿಗೊಂಬರು ;
ಹುಚ್ಚೇ ಅಡಸಿದುದೀತನಿಗೆಂಬರು.
ಪುಸ್ತಕ ರಾಶಿಯ ಹೊರ ಚೆಲ್ಲುವರು ;
ಅದರಿಂದಲೆ ಕಾಷ್ಠವ ರಚಿಸುವರು ;
ದಾರಿಯ ತಪ್ಪಿದ ಪಂಡಿತನೆಂಬರು
ಹೆಸರೇನೋ ತಿಳಿಯೆವು ನಾವೆಂಬರು.
ಸತ್ತವನೀತನ ಸೊತ್ತನು ಮುಟ್ಟೆವು,
ಕೊನೆಯಾ ಸೇವೆಯ ಮಾಡದೆ ಕದಲೆವು,
ಎಂದೊರೆದೇ ಬೆಂಕಿಯನೊಟ್ಟುವರು
ಕಾಷ್ಠದ ಹೆಣವನು ಬೂದಿಯ ಗೈವರು.
ಮಿತವಾಗಿಯೆ ಕಂಬನಿಯನು ಸುರಿವರು ;
ಸಂಕ್ಷೇಪದ ಸಂಸ್ಕಾರವಗೈವರು ;
ಪುಣ್ಯವ ಗಳಿಸಿದೆವೆನ್ನುತ ಹಿಗ್ಗುತ
ನಡೆವರು ತಮ್ಮಯ ದಾರಿಯ ಹಿಡಿಯುತ.
*****
ಬದುಕಿನೊಳಿದುವೇ ಗತಿಯೆಲೆ ಪಂಡಿತ !
ಒದೆದೋಡುವರೈ ತಿಳಿವನು ಖಂಡಿತ.
ಪಂಡಿತರಾದರು ಪಾಮರರಾದರು
ಸಾವಿನೊಳೊಂದಾಗಿಯೆ ಸೇರುವರು.
ಈ ಕವಿತೆ ಪ್ರಕಟವಾದಾಗ ಇದು ಒಬ್ಬ ನಿರ್ದಿಷ್ಟ ಪಂಡಿತರನ್ನು ಕುರಿತ ಟೀಕೆ ಎಂದು ಹೆಚ್ಚಿನವರಿಗೆ ಅನಿಸಿತ್ತು. ಮುಂದೆ ಇದನ್ನು ಸಂಕಲನದಲ್ಲಿ ಸೇರಿಸುವಾಗ ಕಡೆಂಗೋಡ್ಲು ಇದು ಯಾರೊಬ್ಬನ ಕುರಿತೂ ಬರೆದುದಲ್ಲ, ಗೊಡ್ಡುಪಾಂಡಿತ್ಯವನ್ನು ವಿಡಂಬಿಸಲು ಬರೆದುದು ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ ಆ ರೀತಿ ನೋಡಿದಾಗ ಇದರಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಯಾರಾದರೊಬ್ಬ ನಿರ್ದಿಷ್ಟ ವ್ಯಕ್ತಿಯನ್ನೇ ಕುರಿತದ್ದು ಎಂದು ಪರಿಗಣಿಸಿದಾಗ ಆಸಕ್ತಿ ಹೆಚ್ಚಾಗುತ್ತದೆ. ಹಾಗೆ ನೋಡಿದರೆ ಈ ಕವಿತೆಯೂ ಇಂಗ್ಲಿಷ್ ಕವಿತೆಯೊಂದರ (ಬ್ರೌನಿಂಗ್ ಕವಿಯ ‘ದ ಗ್ರಮೇರಿಯನ್ಸ್ ಫ್ಯೂನರಲ್’ – ವೈಯಾಕರಣಿಯ ಅಂತ್ಯಸಂಸ್ಕಾರ) ಪ್ರೇರಣೆಯಿಂದ ಹುಟ್ಟಿರಬಹುದೆಂದು ಕೆಲವರು ಸೂಚಿಸಿದ್ದಾರೆ. ಕಡೆಂಗೋಡ್ಲು ಅವನ್ನೆಲ್ಲ ಓದಿರಬಹುದು. ಆದರೆ ಈ ಕವಿತೆಯನ್ನು ಬರೆಯಲು ಪ್ರೇರಣೆ ಮಾತ್ರ ಅವರ ಸುತ್ತಲಿನ ಸನ್ನಿವೇಶದಿಂದಲೇ ಸಿಕ್ಕಿದ್ದು ಎನ್ನುವುದು ಸ್ಪಷ್ಟವಾಗಿದೆ.
ಕಡೆಂಗೋಡ್ಲು ಅವರ ಇಳಿವಯಸ್ಸಿನ ಕವಿತಾರಚನೆಗೆ ಮಾದರಿಯಾಗಿ `ಇಂದಿನ ದೇವರು’ (1960), `ಬಲಿ’ (1953), `ಬ್ರಹ್ಮಾಸ್ಮಿ’ (1963) ಎಂಬ ಕವನಗಳನ್ನು ಗಮನಿಸಬೇಕು. ಇವುಗಳಲ್ಲಿ ಅವರು ಧರ್ಮವಿಮುಖವಾಗುತ್ತಿರುವ ಆಧುನಿಕ ಜಗತ್ತಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. `ಅಕ್ಷಯದ ಪಾತ್ರೆಯೀ ಧಾತ್ರಿಯಲಿ ಸುಖಭೋಗ ಉಕ್ಕಿ ಹರಿಯುತಿದೆ’ (ಬ್ರಹ್ಮಾಸ್ಮಿ), `ಒಡೆದುದಣು – ವಿಷರೇಣು ಹೊಡೆದಿದೆ ಬ್ರಹ್ಮಸೃಷ್ಟಿಯ ಬೇರಿಗೆ’ (ಇಂದಿನ ದೇವರು) ಎಂಬಂತಹ ಕಳವಳಗಳು ಅವರನ್ನು ಕಾಡಿವೆ. `ಇಂದಿನ ದೇವರು’ ಕವನದಲ್ಲಿ ಸರ್ವ ಸಮಾನತೆಯ ಕಲ್ಪನೆಯ ದೋಷವನ್ನೂ ಅವರು ಕಂಡಿದ್ದಾರೆ. ಅಂದರೆ ಶಂಕರ ಭಟ್ಟರು ಹೆಚ್ಚು ಧಾರ್ಮಿಕರೂ, ಆಧ್ಯಾತ್ಮಿಕ ಒಲವಿನವರೂ ಆಗಿ ಬದಲಾಗಿರುವುದರ ಸೂಚನೆ ಈ ಕವನಗಳಲ್ಲಿ ಕಾಣುತ್ತದೆ. ತನ್ನ ಮುಖ್ಯ ಕೊಡುಗೆಗಳನ್ನು 30 ಹರೆಯದೊಳಗೆ ನೀಡಿದ ಕವಿ ಮುಂದೆ ತನ್ನ ಚಿಂತನೆ, ಅಭಿಪ್ರಾಯಗಳನ್ನು ಹೇಳಲು ಕವನಗಳನ್ನು ಬರೆದಂತಿದೆ.
ಕಡೆಂಗೋಡ್ಲು 1933ರಲ್ಲಿ `ಹಣ್ಣುಕಾಯಿ’ ಪ್ರಕಟಿಸಿದ ನಂತರ ಮತ್ತೊಂದು ಸಂಕಲನ ಪ್ರಕಟಿಸಲು 32 ವರ್ಷಗಳಷ್ಟು ಅಂತರ ತೆಗೆದುಕೊಂಡರು. 1964ರಲ್ಲಿ ಕಾರವಾರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ ಅವರಿಗೆ ಸಿಕ್ಕಿದ ಸಂದರ್ಭದಲ್ಲಿ ಅಮ್ಮೆಂಬಳ ಶಂಕರನಾರಾಯಣ ನಾವಡರ ಆಗ್ರಹದಿಂದ `ಪತ್ರಪುಷ್ಟ’ ಸಂಕಲನ ಹೊರಬಂತು. ಈ ಕಾಲಾವಧಿಯಲ್ಲಿ ಅವರು ಪತ್ರಿಕೋದ್ಯಮದಲ್ಲಿ ತೊಡಗಿಕೊಂಡುದರಿಂದ ಅವರ ಕಾವ್ಯೋದ್ಯೋಗಕ್ಕೆ ಧಕ್ಕೆಯಾಯಿತೆಂದು ಹಲವರ ಅನಿಸಿಕೆ. (ಮುಳಿಯ ತಿಮ್ಮಪ್ಪಯ್ಯ, ಪಂಜೆಯವರು, ಗೋವಿಂದ ಪೈಗಳು, ಹುರುಳಿ ಭೀಮರಾಯರು ಮುಂತಾದವರು ಮೊದಲೇ ಪತ್ರಿಕೋದ್ಯೋಗ ಬೇಡವೆಂದು ಅವರಿಗೆ ಸೂಚಿಸಿದ್ದರು). ಅವರು ತಮ್ಮ 22ನೆಯ ವಯಸ್ಸಿನಿಂದ ತಮ್ಮ ದೇಹಾಂತ್ಯದವರೆಗೂ ಪತ್ರಿಕಾ ಸಂಪಾದಕರಾಗಿದ್ದರು.
ಮತ್ತೊಂದು ಆಯಾಮವನ್ನು ಗಮನಿಸಬೇಕು. 1936 ರಿಂದ ಕಡೆಂಗೋಡ್ಲು ಕತೆ ಮತ್ತು ಕಾದಂಬರಿ ಕ್ಷೇತ್ರಗಳಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಹಾಗಾಗಿ ಆಗ ಅವರು ಪದ್ಯ ಮಾಧ್ಯಮವನ್ನು ಬಿಟ್ಟು ಗದ್ಯದ ಸಾಧ್ಯತೆಗಳನ್ನು ಅನ್ವೇಷಿಸಿದರು ಎನ್ನುವುದು ಹೆಚ್ಚು ಸೂಕ್ತವಾಗುತ್ತದೆ. ಅವರ ‘ಒಂದು ಚೂರಿಯ ಕಥೆ’, ‘ಅದ್ದಿಟ್ಟು’, ‘ದುಡಿಯುವ ಮಕ್ಕಳು’ ಮುಂತಾದ ಕತೆಗಳು ಕನ್ನಡದ ಮುಖ್ಯ ಕತೆಗಳಾಗಿವೆ. ಈ ಬರಹ ಅವರ ಕಾವ್ಯದ ಕುರಿತಾಗಿರುವುದರಿಂದ ಇಲ್ಲಿ ಹೆಚ್ಚಿನ ಚರ್ಚೆಗೆ ಆಸ್ಪದವಿಲ್ಲ. ಆದರೆ ಅವರ ಗದ್ಯ ಬರಹ ಮತ್ತು ಪತ್ರಿಕೋದ್ಯಮವನ್ನು ಕುರಿತು ಹೆಚ್ಚಿನ ಚಿಂತನೆ ಅಗತ್ಯವಿದೆ.
ಕಾಲೇಜು ಕೆಲಸದ ಜತೆಗೆ ಅವರು ಮಂಗಳೂರಿನ ‘ರಾಷ್ಟ್ರಬಂಧು’ ಪತ್ರಿಕೆಯ ಸಂಪಾದಕರಾಗಿ ಸಮಾಜ ಶಿಕ್ಷಣಕ್ಕಾಗಿ ಈ ಪತ್ರಿಕೆಯನ್ನು ಬಳಸಿಕೊಂಡರು. ಜತೆಗೆ ಪತ್ರಿಕೆಯ ಮೂಲಕ ಹಲವು ತರುಣ ಕವಿ, ಸಾಹಿತಿಗಳನ್ನು ಪ್ರೋತ್ಸಾಹಿಸಿದ್ದರು. (ಅಂತಹವರಲ್ಲಿ ಒಬ್ಬರು ಉಡುಪಿಯ ಎಸ್. ವೆಂಕಟರಾಜರು. ಇವರು ಪ್ರಗತಿಶೀಲ ಕತೆಗಾರ ಮತ್ತು ಕವಿ). ಕಡೆಂಗೋಡ್ಲು ಅವರಿಗೆ ‘ರಾಷ್ಟ್ರಬಂಧು’ ಪತ್ರಿಕೆಯ ಮಾಲಕರ ಜತೆಗೆ ಮನಸ್ತಾಪ ಉಂಟಾಗಿ ಮರುವಾರವೇ ‘ರಾಷ್ಟ್ರಮತ’ ಪತ್ರಿಕೆಯನ್ನು ಪ್ರಾರಂಭಿಸಿ ತಮ್ಮ ದೇಹಾಂತದವರೆಗೂ ಅದನ್ನು ನಡೆಸುತ್ತಿದ್ದರು.
ಕಡೆಂಗೋಡ್ಲು ಖಂಡಕಾವ್ಯಗಳು
ಕಡೆಂಗೋಡ್ಲು ಅವರು ಮುಳಿಯ ತಿಮ್ಮಪ್ಪಯ್ಯನವರಂತೆ ಸಣ್ಣ ಕಾವ್ಯಗಳೇ ತಮ್ಮ ಮುಖ್ಯ ಕಾವ್ಯಾಭಿವ್ಯಕ್ತಿಯ ಮಾಧ್ಯಮ ಎಂದು ತೀರ್ಮಾನಿಸಿದ್ದರೆಂದು ಕಾಣುತ್ತದೆ. ಪ್ರಾರಂಭದಿಂದಲೂ ಅವರು ನೂರಕ್ಕಿಂತ ಹೆಚ್ಚು ಸಾಲುಗಳುಳ್ಳ ನೀಳ್ಗವಿತೆಗಳನ್ನು, ಕಿರು ಕಾವ್ಯಗಳನ್ನು, ಖಂಡಕಾವ್ಯಗಳನ್ನು ಬರೆಯುತ್ತಲೇ ಬಂದರು. ಎಡ್ಗರ್ ಅಲನ್ ಪೋ ಕಾವ್ಯಕೃತಿಗಳು ಖಚಿತವಾದ ಭಾವಪರಿಣಾಮ ಬೀರಬೇಕಿದ್ದರೆ ಕನಿಷ್ಠ ನೂರು ಸಾಲುಗಳಷ್ಟಾದರೂ ಇರಬೇಕು ಎಂದು ಹೇಳಿದ್ದುಂಟು. ಕಡೆಂಗೋಡ್ಲು ಅವರ ಕಾವ್ಯ ಕೃತಿಗಳಲ್ಲಿ ಪೋ ಹೇಳಿದ ಮಾತಿಗೆ ಸಮರ್ಥನೆ ದೊರೆಯುತ್ತದೆ.
‘ಘೋಷಯಾತ್ರೆ’ (ಬರವಣಿಗೆ 1919, ಪ್ರಕಟಣೆ 1920) ಯನ್ನು ಬರೆದಾಗ ಕವಿಯ ವಯಸ್ಸು 15 – 16. ಆದರೆ ಇದರಲ್ಲಿರುವ ಪ್ರಬುದ್ಧತೆ ಆಶ್ಚರ್ಯಕರವಾಗಿದೆ. ಕಾವ್ಯದ ವಸ್ತು ಮಹಾಭಾರತದಲ್ಲಿ ದುರ್ಯೋಧನ ವನವಾಸದಲ್ಲಿರುವ ಪಾಂಡವರನ್ನು ಹಂಗಿಸಲು ‘ಘೋಷಯಾತ್ರೆ’ಯ ನೆವನದಲ್ಲಿ ತನ್ನ ವೈಭವವನ್ನು ಮತ್ತು ಸಂತೋಷವನ್ನು ಅವರಿಗೆ ಪ್ರದರ್ಶಿಸಲು ಹೋಗಿ, ಚಿತ್ರಾಂಗದನ ಬಂಧನಕ್ಕೆ ಒಳಗಾಗುವುದು. ಒಂದನೆಯ ಸಂಧಿಯಲ್ಲಿ 40 ಚೌಪದಿಗಳು, ಎರಡನೆಯ ಸಂಧಿಯಲ್ಲಿ ಕುಸುಮ ಷಟ್ಪದಿಯಲ್ಲಿ 61 ಪದ್ಯಗಳು ಮತ್ತು ಮೂರನೆಯ ಸಂಧಿಯಲ್ಲಿ ಮಂದಾನಿಲ ರಗಳೆ ಮಟ್ಟಿನ 34 ಚೌಪದಿಗಳು ಇದರಲ್ಲಿವೆ. ಕೆಲವು ಭಾಗಗಳು ಭಾವಗೀತೆಯಂತೆ (ಉದಾಹರಣೆಗೆ – ಭಾನುಮತಿಯ ಅಳಲು) ಭಾವಪರಿಪುಷ್ಟವಾಗಿವೆ. ಅಲ್ಲಲ್ಲಿ ಕಥೆಯನ್ನು ಬದಲಾಯಿಸಿಕೊಂಡಿದ್ದಾರೆ.
ಈ ಕೃತಿಯಲ್ಲಿಯೂ ಶ್ಲೇಷಾಲಂಕಾರದ ಮೂಲಕ ಬ್ರಿಟಿಷ್ ಸರಕಾರವನ್ನು ಟೀಕಿಸಲಾಗಿದೆಯೆ ಎಂದು ಸರಕಾರ ಪರಿಶೀಲನೆ ನಡೆಸಿತ್ತಂತೆ. ಇದನ್ನು ಮುಟ್ಟುಗೋಲು ಹಾಕಿದ್ದರ ಬಗ್ಗೆ ದಾಖಲೆಯಿಲ್ಲ.
ಈ ಕಾವ್ಯವನ್ನು ಅವರ ಖಂಡಕಾವ್ಯಗಳ ಗುಂಪಿಗೂ ಸೇರಿಸಬಹುದು. ‘ಮಿತ್ರೋದಯ’, ‘ಆಶೆ’ ಮತ್ತು ‘ಪಂಜರ ಸ್ವಾತಂತ್ರ್ಯ’ ಎಂಬ ಅಷ್ಟು ಮುಖ್ಯವಲ್ಲದ ಸಣ್ಣಕಾವ್ಯ ಕೃತಿಗಳೂ ಇವೆ.
ನಲ್ಮೆ
ಕಡೆಂಗೋಡ್ಲು ಅವರ ಪ್ರಸಿದ್ಧ ಕಥನ ಕವನಗಳ ಸಂಗ್ರಹ `ನಲ್ಮೆ’ 1932ರಲ್ಲಿ ಪ್ರಕಟವಾಯಿತು. ಕಡೆಂಗೋಡ್ಲು ಅವರ ಬಿಡಿಕವಿತೆಗಳಲ್ಲಿ ನವೋದಯದ ಒಳ್ಳೆಯ ಅಂಶಗಳುಳ್ಳ, ಭಾವವೈವಿಧ್ಯವುಳ್ಳ, ಚಿಂತನಪರ ಕವಿತೆಗಳೆಲ್ಲ ಇದ್ದರೂ ಅವರು ಕನ್ನಡದಲ್ಲಿ ಶಾಶ್ವತ ಕೀರ್ತಿಯನ್ನು ಪಡೆದದ್ದು ಅವರ ಖಂಡಕಾವ್ಯಗಳಿಂದಾಗಿ, ‘ನಲ್ಮೆ’ಯಲ್ಲಿ `ಮುರಲೀನಾದ’, `ಹೊನ್ನಿಯ ಮದುವೆ’ ಮತ್ತು `ಮಾದ್ರಿಯ ಚಿತೆ’ ಎಂಬ ಮೂರು ಖಂಡಕಾವ್ಯಗಳಿವೆ (ಸಣ್ಣಕಾವ್ಯಗಳು). ಮೂರರಲ್ಲಿಯೂ ‘ನಲ್ಮೆ’ಯು ಪ್ರಧಾನ ವಸ್ತು. ನಲ್ಮೆಯ ವಿವಿಧ ಆಯಾಮಗಳನ್ನು ಮತ್ತು ಆ ಮೂಲಕ ಬದುಕಿನ ಅರ್ಥವನ್ನು ಈ ಕಾವ್ಯಗಳು ಪರಿಶೀಲಿಸುತ್ತವೆ. ಮೂರೂ ಕವನಗಳಲ್ಲಿ ಹೆಣ್ಣೇ ಪ್ರಧಾನಪಾತ್ರ. “ಮೂರರಲ್ಲಿಯೂ ಮುಂದೆ ಹೆಜ್ಜೆಯಿಟ್ಟು ಕಥೆಯ ಗತಿಯನ್ನು ನಡೆಸುವವರು ಹೆಂಗಸರು. ಕಥೆಯ ಕಾರ್ಯವೆಲ್ಲ ಅವರಿಂದ” (ವಿ.ಸೀ.)
ಮುರಲೀನಾದ
‘ಮುರಲೀನಾದ’ ಗೋಲ್ಡ್‌ಸ್ಮಿತ್‌ನ `ಹರ್ಮಿಟ್’ (ಇದರ ಇನ್ನೊಂದು ಹೆಸರು: ‘ಎಡ್ವಿನ್ ಅಂಡ್ ಏಂಜೆಲೀನಾ’) ಕವನದಿಂದ ಪ್ರೇರಿತವಾದರೂ ನಮ್ಮ ಸಮಾಜದ ಕತೆಯಾಗಿ ಮರುಹುಟ್ಟು ಪಡೆದಿದೆ. ಕೊಳಲು ನುಡಿಸುವವನಿಗೆ ಮನಸೋತು, ಪುರುಷ ವೇಷಧರಿಸಿ ಅವನನ್ನು ಸಂಧಿಸಿ ಪ್ರೇಮ ನಿವೇದನೆ ಮಾಡಿಕೊಳ್ಳುವ ಹೆಣ್ಣು ಅವನನ್ನು ಸೇರುವ ಸುಖಾಂತ ಕತೆ ಇದರದು. ಇದು ‘ಪ್ರಬುದ್ಧ ಕರ್ನಾಟಕ’ದಲ್ಲಿ ಮೊದಲು ಪ್ರಕಟವಾಗಿತ್ತು.
‘ಮುರಲೀನಾದ’ದಲ್ಲಿ ಕವಿಯ ಸ್ವಂತಿಕೆಯೇ ಬಲವಾಗಿದ್ದರೂ ಇದರ ಹಿಂದಿದ್ದ ಪ್ರೇರಣೆಯನ್ನೂ ಗಮನಿಸೋಣ. ಯಾಕೆಂದರೆ ಮೂಲ ಕಾವ್ಯವೇ ‘ಮುರಲೀನಾದ’ಕ್ಕಿಂತ ಚೆನ್ನಾಗಿದೆ. ಅದರ ನಾಯಕಿ ಏಂಜೆಲೀನಾ ಶ್ರೀಮಂತೆ, ಸುಂದರಿ. ಅವಳು ಎಡ್ವಿನ್‌ನನ್ನು ಅಸಡ್ಡೆ ಮಾಡಿದಾಗ ಅವನು ಊರನ್ನು ತ್ಯಜಿಸಿ, ಕಾಡಿನಲ್ಲಿ ಪರ್ಣಕುಟೀರವನ್ನು ಕಟ್ಟಿಕೊಂಡು ಋಷಿಯಂತೆ (ಹರ್ಮಿಟ್) ಬಾಳುತ್ತಾನೆ. ಏಂಜೆಲೀನಾ ಅವನ ದಾರಿಯಲ್ಲೇ ಸಾಗಲು ನಿರ್ಧರಿಸಿ ಪುರುಷ ವೇಷದಿಂದ ಅಲೆಯುತ್ತಾ ಅದೇ ಎಲೆಮನೆಗೆ ಬಂದು ಒಂದು ರಾತ್ರಿ ಆಶ್ರಯ ಪಡೆಯುತ್ತಾಳೆ. ಅವನಿಂದ ತಾತ್ವಿಕ ವಿಚಾರಗಳ ಬೋಧನೆಯನ್ನು ಕೇಳಿ, ತನ್ನ ಸ್ತ್ರೀತ್ವವನ್ನು ಪ್ರಕಟಿಸಿದಾಗ ಅವನು ಅವಳ ಇತಿವೃತ್ತವನ್ನು ಕೇಳಿ ಅವಳೇ ಏಂಜೆಲೀನಾ ಎಂದು ಗುರುತುಹಿಡಿಯುತ್ತಾನೆ. ಕೊನೆಗೆ ತನ್ನನ್ನೂ ಪ್ರಕಟಪಡಿಸಿಕೊಳ್ಳುತ್ತಾನೆ. ಪ್ರೇಮಿಗಳ ಸಮ್ಮಿಲನವಾಗುತ್ತದೆ.
ಅವರು ಕೆನರಾ ಹೈಸ್ಕೂಲಿನ ಗ್ರಂಥಾಲಯದಲ್ಲಿದ್ದ ಇಂಗ್ಲಿಷ್ ಕವಿಗಳ ಗ್ರಂಥಗಳನ್ನೆಲ್ಲ ಓದುತ್ತಿದ್ದರು. ಕೆನರಾ ಹೈಸ್ಕೂಲಿನ ಇಂಗ್ಲಿಷ್ ಅಧ್ಯಾಪಕ ಅಚ್ಯುತ ಬಾಳಿಗರ ಪ್ರಭಾವವೂ ಅವರ ಮೇಲಿತ್ತು. ಹೀಗಾಗಿ ಇಂಗ್ಲಿಷ್ ಸಾಹಿತ್ಯವನ್ನು ಸ್ವತಂತ್ರವಾಗಿ ಅಧ್ಯಯನ ಮಾಡಿದರು.
ಸುಮಾರಾಗಿ ಇಂತಹದೇ ಸನ್ನಿವೇಶಗಳಿದ್ದ ಕಥೆಯೊಂದನ್ನು ಮುಳಿಯ ತಿಮ್ಮಪ್ಪಯ್ಯನವರು ಕೆಲವು ಬದಲಾವಣೆಗಳೊಂದಿಗೆ ತಮ್ಮ ‘ಪ್ರೇಮಪಾಶ’ ಸಣ್ಣಕಾವ್ಯದಲ್ಲಿ ಬಳಸಿಕೊಂಡಿದ್ದರು. ಕಾಡಿನಲ್ಲಿ ಪ್ರೇಮಿ ಮತ್ತು ಪುರುಷವೇಷದ ಪ್ರಿಯತಮೆಯ ಸಮಾಗಮ ಅದರಲ್ಲಿಯೂ ಇತ್ತು. ಇವೆಲ್ಲ ಇಂಗ್ಲಿಷ್ ರೋಮ್ಯಾಂಟಿಕ್ ಮನೋಧರ್ಮದ ಮೈನರ್ ಕವಿತೆಗಳಲ್ಲಿ ಕಾಣಿಸಿಕೊಂಡ ಯುರೋಪಿನ ಪ್ಯಾಸ್ಟೋರಲ್ ಸಂಪ್ರದಾಯದ ರೋಮ್ಯಾನ್ಸ್‌ಗಳ ಪಳೆಯುಳಿಕೆಗಳು.
‘ಮುರಲೀನಾದ’ದಲ್ಲಿ ಕಡೆಂಗೋಡ್ಲು ಭಾರತೀಯ ಸಂಪ್ರದಾಯದ ಗೋಪ – ಗೋಪಿಕೆಯವರನ್ನು ನೆನಪಿಸಲೆಂಬಂತೆ ನಾಯಕನ ಕೈಯಲ್ಲಿ ಕೊಳಲನ್ನು ಕೊಟ್ಟಿದ್ದಾರೆ. ಇಲ್ಲಿ ನಾಯಕಿ ಮುಗ್ಧೆ, ಮುರಲೀಗಾನಲೋಲನಾದ ಯುವಕನೊಬ್ಬನನ್ನು ಪ್ರೇಮಿಸಿ ಅವನಲ್ಲಿ ಪ್ರೇಮನಿವೇದನೆ ಮಾಡಿಕೊಂಡರೂ ಅವನು ಸ್ಪಂದಿಸದೆ ಕಾಡು ಸೇರುತ್ತಾನೆ. ಯುವತಿಯೂ ಪುರುಷ ವೇಷ ಧರಿಸಿ ಕಾಡಿನಲ್ಲಿ ಅಲೆಯತೊಡಗುತ್ತಾಳೆ. ಕಾಡಿನಲ್ಲಿದ್ದ ಯುವಕನಿಗೆ ತಕ್ಷಣಕ್ಕೆ ತಾನು ನಿರಾಕರಿಸಿದ್ದರೂ, ನಂತರ ಯುವತಿಯ ನೆನಪಿನಲ್ಲಿ ಅವಳ ಬಗ್ಗೆ ಆಕರ್ಷಣೆ ಹೆಚ್ಚುತ್ತಾ ಹೋಗಿ ಪ್ರೇಮದ ಆವೇಗ ಉಲ್ಬಣಿಸುತ್ತದೆ. ಕೊನೆಗೆ ಯುವತಿ ಅವನನ್ನು ಸಂಧಿಸುತ್ತಾಳೆ.
‘ಹರ್ಮಿಟ್’ ಕವಿತೆಯಷ್ಟು ಭಾವಪರಿಪುಷ್ಟವಾದ ಕವಿತೆ ‘ಮುರಲೀನಾದ’ವಲ್ಲ. ಅದರಿಂದ ಬೇಕೆಂದೇ ಬದಲಾವಣೆಗಳನ್ನು ಮಾಡಿಕೊಳ್ಳುವ ಪ್ರಯತ್ನವನ್ನು ಕಡೆಂಗೋಡ್ಲು ಅವರು ಮಾಡಿರಬಹುದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ಸಣ್ಣಕಾವ್ಯದಲ್ಲಿ ಬಿಡಿಸಾಲುಗಳಲ್ಲಿ ಕವಿಯ ಕಾವ್ಯಸಾಮರ್ಥ್ಯ ಎದ್ದುಕಾಣುತ್ತದೆ. 71 ಚೌಪದಿಗಳಲ್ಲಿ ಈ ಸಣ್ಣ ಕಾವ್ಯವಿದೆ. ಪ್ರತಿ ದ್ವಿಪದಿ ಜೋಡಿಗಳಲ್ಲಿ ಆದಿಪ್ರಾಸ ಮತ್ತು ಅಂತ್ಯಪ್ರಾಸ ಎರಡನ್ನೂ ಅಳವಡಿಸಿರುವುದು ಕವಿಯ ಪ್ರಯೋಗಶೀಲತೆಗೆ ಸಾಕ್ಷಿಯಾಗಿದೆ.
ಹೊನ್ನಿಯ ಮದುವೆ
`ಹೊನ್ನಿಯ ಮದುವೆ’ ಮತ್ತು `ಮಾದ್ರಿಯ ಚಿತೆ’ ದುಃಖಾಂತ ಕತೆಗಳು. ‘ಮಾದ್ರಿಯ ಚಿತೆ’ಗೆ ಮಹಾಭಾರತವೇ ಆಧಾರ ಎನ್ನುವುದು ಶೀರ್ಷಿಕೆಯಲ್ಲಿಯೇ ತಿಳಿಯುತ್ತದೆ. `ಹೊನ್ನಿಯ ಮದುವೆ’ಗೆ ಪ್ರೇರಣೆ ಕ್ಯಾಂಪ್‌ಬೆಲ್ ಕವಿಯ ‘ಲಾರ್ಡ್ ಉಲಿನ್ಸ್ ಡಾಟರ್’. ಇದನ್ನು ಬಿ.ಎಂ.ಶ್ರೀ.ಯವರು ‘ಕಾರಿಹೆಗ್ಗಡೆಯ ಮಗಳು’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. (‘ಮಸಣ’ ಮತ್ತು ಈ ಕವಿತೆಗಳ ಬಗ್ಗೆ ಕಡೆಂಗೋಡ್ಲು ಅವರ ಗಮನ ಸೆಳೆದುದು ಹಟ್ಟಿಯಂಗಡಿ ಮತ್ತು ಶ್ರೀಯವರ ಕನ್ನಡ ಅನುವಾದಗಳಿರಬಹುದೆ ಎನ್ನುವುದು ಕುತೂಹಲ ಹುಟ್ಟಿಸುವ ಊಹೆ).
‘ಕಾರಿಹೆಗ್ಗಡೆ’ ಅಥವಾ ಲಾರ್ಡ್ ಉಲಿನ್ ಒಬ್ಬ ಗ್ರಾಮಗೌಡ. ಅವನ ಮಗಳು ಅವನು ನಿಶ್ಚಯಿಸಿದ ವರನನ್ನು ಮದುವೆಯಾಗಲೊಪ್ಪದೆ ತನ್ನ ಪ್ರಿಯತಮ ಪಡುವದಿಬ್ಬದ ಗೌಡನೊಂದಿಗೆ ಓಡಿಹೋಗುತ್ತಾಳೆ. ಪಡುವದಿಬ್ಬವನ್ನು ಸೇರಿಕೊಳ್ಳಲು ದೋಣಿಯಲ್ಲಿ ಕಡಲುದಾಟುವ ಯತ್ನದಲ್ಲಿ ನೀರಿನಲ್ಲಿ ಮುಳುಗಿ ಜಲಸಮಾಧಿಯಾಗುತ್ತಾಳೆ. ಅವಳನ್ನು ಹಿಡಿಯಲು ಅಟ್ಟಿಸಿಕೊಂಡು ಬಂದ ಕಾರಿಹೆಗ್ಗಡೆಗೆ ಮಗಳ ಹೆಣವಷ್ಟೇ ಸಿಗುತ್ತದೆ.
ಕಡೆಂಗೋಡ್ಲು ಅವರ ‘ಹೊನ್ನಿಯ ಮದುವೆ’ ಶರಷಟ್ಪದಿಯ 131 ಪದ್ಯಗಳಲ್ಲಿ ನಾಲ್ಕು ಭಾಗಗಳಲ್ಲಿರುವ ಖಂಡಕಾವ್ಯ. ಈ ಕಥನಕಾವ್ಯದ ಕಥೆ ತುಳುನಾಡಿನಲ್ಲಿ ನಡೆಯುತ್ತದೆ. ಇಂತಹ ಕಥೆಯೊಂದು ನಿಜವಾಗಿ ನಡೆದಿತ್ತೆಂದು ಅಮ್ಮೆಂಬಳ ಶಂಕರನಾರಾಯಣ ನಾವಡ ಮತ್ತು ಅಮೃತ ಸೋಮೇಶ್ವರ ಅವರು ಅಭಿಪ್ರಾಯಪಟ್ಟಿದ್ದಾರೆ (ಡಾ. ಸುನೀತಿ ಉದ್ಯಾವರ. 2003).
ಊರಿನ ಬೀಡಿನ ಗುರಿಕಾರನ ಮಗಳು ಹೊನ್ನಿ. ಗುರಿಕಾರನ ಪತ್ನಿ ಅಕಾಲ ಮರಣಕ್ಕೊಳಗಾಗಿ ಹೊನ್ನಿಯನ್ನು ತಂದೆಯೇ ಸಾಕಿರುತ್ತಾನೆ. ಅವನೀಗ ಕಣ್ಣುಕಾಣಿಸದ ಮುದುಕ. ಇಲ್ಲಿ ಕುರುಡುತನ ಎನ್ನುವುದು ಸಾಂಕೇತಿಕವಾಗಿದೆ. ಹೊನ್ನಿ ತನ್ನ ಮದುವೆ ಬೇರೊಬ್ಬನೊಡನೆ ನಿಶ್ಚಯವಾದಾಗ ತಾನು ಪ್ರೀತಿಸಿದ ಬಡಹುಡುಗ ಚಿನ್ನನೊಡನೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅವಳ ಮದುವೆ ಕಡಲ ತಳದಲ್ಲಿ ನೀರ ಮಸಣದಲ್ಲಿ ನಡೆಯುವುದು.
ಈ ಕವಿತೆಯು ಕೆಲವೆಡೆ ಸಾಂಕೇತಿಕವಾಗಿದೆ. ‘ಬಸಿರೊಳಗೇ ಕೂಳ್ಕುದಿವಳಲು’ ಎನ್ನುವುದು ಹೊನ್ನಿ ಮದುವೆಗಿಂತ ಮುಂಚೆ ಗರ್ಭಧರಿಸಿದ್ದಳೆನ್ನುವುದರ ಸೂಚನೆ ಎಂದು ಡಾ. ಸುನೀತಿ ಉದ್ಯಾವರ ಅರ್ಥೈಸಿದ್ದಾರೆ. ಈ ಕಥನ ಕವನದ ಭಾಷೆ ವರ್ಣನೆಯ ಸೊಗಸಿಗೆ, ಅರ್ಥಖಚಿತ ಪದಪ್ರಯೋಗಗಳಿಗೆ, ಶಬ್ದಾರ್ಥ ಸಾಂಗತ್ಯಕ್ಕೆ ಕಾವ್ಯ ರಸಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಉದಾಹರಣೆಗೆ, ತಾನು ಮತ್ತು ತನ್ನ ಪ್ರಿಯಕರ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವೆವೆಂಬುದನ್ನು ಹೊನ್ನೆ ಸೂಚ್ಯವಾಗಿ ತನ್ನ ಗೆಳತಿಯರಿಗೆ ಹೇಳುವುದು ಹೀಗೆ: “ಪಡುಗಡಲಿನ ತಡಗುಂಡಿಯೊಳೊಂದೆಡೆ ಹಸೆಯನು ಹಾಸಿಹರೆನಗಾಗಿ / ಮಣಿಗಳ ಬೆಳ್ಮುತ್ತುಗಳನು ಸುರಿವುವು ಮರಿಮೀಂಗಳು ಸಿಂಗರಕಾಗಿ.”
ಪ್ರೇಮಿಗಳು ಕಡಲು ಸೇರಿದಾಗ ಅದನ್ನು ಕಂಡ ಅಂಬಿಗನ ಮಾತು: “ಗರ್ಜಿಸಿ ಗರ್ಜಿಸಿ ಕರಿ ಹುಲ್ಲೆಯ ಮೇಲೆ ಹಾಯ್ದು ಬರುವ ಹೆಬ್ಬುಲಿಯಂತೆ ಭೋರ್ಭೋರೆನ್ನುತ ತೆರೆಗಳು ಹೊಡೆದುವು ಗಾವುದ ದೂರಕೆ ಸಿಡಿವಂತೆ.”
ಈ ಕಾವ್ಯದ ಒಂದು ಭಾಗವಾಗಿರುವ `ಕಾರ್ಗಾಲದ ವೈಭವ’ (ಈ ಶೀರ್ಷಿಕೆಯನ್ನು ಪಠ್ಯ ಪುಸ್ತಕಗಳ ಸಂಪಾದಕರು ಕೊಟ್ಟಿರಬಹುದು; ಮೂರನೆಯ ಭಾಗದಲ್ಲಿ ಇದು ಸೇರಿದೆ) ಎಂಬುದು ಕನ್ನಡದ ಹೆಚ್ಚಿನ ಪ್ರಾತಿನಿಧಿಕ ಸಂಕಲನಗಳಲ್ಲಿ ಸೇರುವ ಭಾವಗೀತೆಯಾಗಿದೆ.
ಕಾರ್ಗಾಲದ ವೈಭವ
ಪಡುವಣ ತೀರದ
ಕನ್ನಡ ನಾಡಿನ
ಕಾರ್ಗಾಲದ ವೈಭವವೇನು ?
ಚೆಲ್ಲಿದರನಿತೂ
ತೀರದ ನೀರಿನ
ಜಡದೇಹದ ಕರ್ಮುಗಿಲೇನು ?
ಕೆರೆಗಳನುಕ್ಕಿಸಿ
ತೊರೆಗಳ ಸೊಕ್ಕಿಸಿ
ಗುಡ್ಡವ ಬೆಟ್ಟವ ಕೊರೆಕೊರೆದು.
ಕಡಲಿನ ತೆರೆಗಳ
ರಿಂಗಣಗುಣಿಯಿಸಿ
ಮೊರೆಮೊರೆವುದದೋ ಸರಿಸುರಿದು.
ಕುದುರೆಮೊಗದ ಕಡಿ
ವಾಣದ ತೆರದಲಿ
ಮಿಂಚುಗಳವು ಥಳಥಳಿಸುವುವು.
ಗೊರಸಿನ ಘಟ್ಟನೆ
ಯಂತಿರೆ ಥಟ್ಟನೆ
ಗುಡುಗುಗಳವು ಗುಡುಗಾಡಿಪುವು.
ಆವೇಶದ ವೇ-
ಷದ ಬಿರುಸುಟ್ಟುರೆ
ಊರೂರಲಿ ಹಾರೋಡುವುದು.
ಮರಗಳ ಕೀಳುತ
ಬಂಡೆಯ ಹೋಳುತ
ಜಗಜಟ್ಟಿಯ ತೆರನಾಡುವುದು.
ಹಗಲಿರುಳೆನ್ನದೆ
ಹೊಡೆಯುವ ಜಡಿಮಳೆ
ಬಡಿಕೋಲ್ಮಿಂಚಿನ ಲಾಗುಗಳು.
ಮನೆಗಳ ಮನಗಳ
ಒಳಗೂ ಹೊರಗೂ
ಜಿನುಗುತಿರುವ ಹನಿ ಸೋನೆಗಳು.
ಮುಗಿಲಿನ ಹುಬ್ಬಿನ
ಗಂಟಿಕ್ಕುತ ಬಿರು-
ದನಿಯಲಿ ಬೆದರಿಸುತಿಹನಲ್ಲ.
ನಲ್ಲನೆನುತೆ ಆ-
ಗಸವೆಣ್ಕೂಗುತೆ
ಸುರಿಸಿದ ಕಣ್ಣೀರ್ವೊನಲೆಲ್ಲ.
ಅತ್ತತ್ತೂ ಆ-
ಯಸದಲಿ ಸತ್ತೂ
ಸಾಯದೆ ನೋವನು ಹಿಂಗಿಸುತ,
ಎಂತಾದರು ಬಾ-
ಳಲೆಬೇಕೆನ್ನುತ
ದೆಸೆಯಿರ್ದುದು ಬಗೆ ತಿಳಿಯಿಸುತ.
ಮಳೆ ಕುಂದಿತು, ನೆರೆ
ಯಿಳಿದುದು, ವಾಹಿನಿ
ಎದೆ ಕೆಸರೆತ್ತಲೊ ಹೋಗಿರಲು
ತಿಳಿವಿನ ತೆಳುವಿನ
ಅಲೆಗಳ ವಲಿಗಳ
ಬಲೆಯಲಿ ನೇಸರ ಹಿಡಿದಿರಲು.
ಹೊಸ ಹಸುರಿನ ತೊಡ
ವುಟ್ಟಳು ಮೇದಿನಿ,
ಚಿಗುರ ಮೊಗಕೆ ಮುಗುಳಿನ ನತ್ತ,
ಕರ್ಮೋಡದ ಕು
ಪ್ಪಸವನು ಬಿಟ್ಟಳು,
ಬೆಳ್ಮುಗಿಲಲಿ ಗೆಯ್ದಳು ಹೊಸತ.
“ಹೆಣ್ಬಲಿಯಲ್ಲವೆ? ಮನದೊಲವಿಲ್ಲದೆ ಅವಳನು ಗಂಡೊಬ್ಬನ ಮನೆಗೆ ನೂಕಲು ಮದುವೆಯೆ?” ಎನ್ನುವ ಪ್ರಶ್ನೆಯನ್ನು ಕವಿತೆ ಕೇಳುತ್ತದೆ. ಕಡೆಂಗೋಡ್ಲು ಶಂಕರ ಭಟ್ಟರ ಕಾವ್ಯದಲ್ಲಿ ಸ್ತ್ರೀಯರ ಶಕ್ತಿಯನ್ನು ಗುರುತಿಸುವುದಲ್ಲದೆ ಅವರ ಮೇಲಿನ ದೌರ್ಜನ್ಯವನ್ನು ದಾಖಲಿಸಿ ಪ್ರತಿಭಟಿಸುವ ಸ್ತ್ರೀಪರ ಆಶಯ ಪ್ರಧಾನವಾಗಿ ಕಾಣಿಸುತ್ತದೆ. ಅವರ ‘ಅದ್ದಿಟ್ಟು’ ಸಣ್ಣಕತೆ ಗದ್ಯದಲ್ಲಿಯೂ ಆ ಆಶಯಗಳಿರುವುದಕ್ಕೆ ಸಾಕ್ಷಿಯಾಗಿದೆ.
ಮಾದ್ರಿಯ ಚಿತೆ
`ಮಾದ್ರಿಯ ಚಿತೆ’ ಖಂಡಕಾವ್ಯವು ಪ್ರಸಿದ್ಧವಾದ ಪಾಂಡು-ಮಾದ್ರಿಯವರ ಕತೆಯನ್ನೇ ಶಂಕರ ಭಟ್ಟರು ತಮ್ಮ ಪ್ರತಿಭಾವಿಶೇಷದಿಂದ ಭಾವಪೂರ್ಣ ಜೀವನ ವಿಮರ್ಶೆಯಾಗಿ ಪರಿವರ್ತಿಸಿದುದಾಗಿದೆ. ಇದು ಶಂಕರ ಭಟ್ಟರ ಅತ್ಯಂತ ಸಫಲ ಕಾವ್ಯಕೃತಿ. ಇದರಲ್ಲಿ ಮಹಾಕಾವ್ಯದ ಗಾಂಭೀರ್ಯ, ಭಾವಸುಭಗತೆ ಮತ್ತು ಭಾವೋನ್ನತಿ ಇದ್ದು ವಿಮರ್ಶಕರಿಂದ ಏಕಪ್ರಕಾರದ ಮನ್ನಣೆ ಪಡೆದ ಕೃತಿ ಇದಾಗಿದೆ. “ಇಲ್ಲಿಯ ಶಬ್ದ ಸೌಷ್ಠವ, ಭಾವೋನ್ನತಿ, ಶ್ರುತಿ ಸುಭಗತ್ವ ಮೊದಲಾದ ಗುಣವಿಶೇಷಗಳು ಆಧುನಿಕ ಕನ್ನಡ ಸಾಹಿತ್ಯಕ್ಕೇ ಕೀರ್ತಿ ತರುವಂತಿದೆ. ಗಾಂಭೀರ್ಯದಲ್ಲಿಯೂ ಲಾಲಿತ್ಯದಲ್ಲಿಯೂ ಅರ್ಥಗೌರವದಲ್ಲಿಯೂ ಇದನ್ನು ಮೀರಿಸುವಂತಹ ಕಾವ್ಯವು ಆಧುನಿಕ ಕಾವ್ಯ ಸಾಹಿತ್ಯದಲ್ಲಿ ಬೇರೊಂದಿಲ್ಲವೆಂದು ಧಾರಾಳವಾಗಿ ಹೇಳಬಹುದು” ಎಂದು ಗೋಪಾಲಕೃಷ್ಣ ಅಡಿಗರು ಬರೆದಿದ್ದಾರೆ.
`ಮಾದ್ರಿಯ ಚಿತೆ’ಯ ನಾಲ್ಕು ಭಾಗಗಳಲ್ಲಿ ಛಂದಸ್ಸಿನಲ್ಲಿ ಬದಲಾವಣೆ ಮಾಡಿಕೊಂಡು ರಗಳೆ, ಸಾಂಗತ್ಯ, ಷಟ್ಪದಿಗಳ ಪ್ರಭೇದಗಳನ್ನು ಬಳಸಿಕೊಂಡಿದ್ದಾರೆ. ಒಟ್ಟು 104 ಪದ್ಯಗಳು ಇದರಲ್ಲಿವೆ.
ಈ ಕಾವ್ಯದ ಕೆಲವು ಆಯ್ದ ಪದ್ಯಗಳು ಹೀಗಿವೆ:
ಮಾದ್ರಿಯ ಚಿತೆ
(1 ನೆಯ ಭಾಗದ ಕೆಲವು ಪದ್ಯಗಳು)
ಆರಾದರೇನವರ ಒಳಬಾಳು ಬೇರಿಹುದು-
ಒರೆ ಬೇರೆ, ಒಳಬಾಳು ಬೇರೆ;
ಜೋಡಾಗಿ ಸೇರಿದರೆ ಒಂದಾಗಿ ತೋರುವುದು,
ಅದರಂತೆ ಬಾಳುವೆಯ ಮೋರೆ.
ತನು- ಲೋಕವಿಜಯಕ್ಕೆ ! ಮನ – ಮೂಕಸಂಕಟಕೆ !
ಅಹಹ ! ಎಂತಹ ಬೆಸುಗೆಯಿವಕೆ !
ಚಿತ್ತಸಮರದಿ ಗೆದ್ದ-ನಿಮಿಷ ಶಾಂತಿಯ ಮೆದ್ದ
ಗಟ್ಟಿಗನೆ ಅವನರಸು ಜಗಕೆ.
*****
ಸಾಮ್ರಾಜ್ಯ ಚಿಹ್ನೆಗಳ ಸೀಗುರಿಯ ಬೆಳ್ಗೊಡೆಯ
ಬೀಳ್ಕೊಂಡು ಏಕಾಂತದೊಳಗೆ
ಪಾಂಡು ಮಾದ್ರಿಯರ ದಾಂಪತ್ಯ, ವಿರಹಕೆ ಸಂದು
ಕೊಂದು ಕೂಗಿತು ಕಾಡನಡುವೆ.
ತಮ್ಮ ಹೆಸರಿಗೆ ಹೇಸಿ ಒಡೆತನಕೆ ಕೊಕ್ಕರಿಸಿ
ತಮ್ಮಾತ್ಮವೇ ಶತ್ರುವೆನಲು
ಮುಡಿಪುಗಟ್ಟಿದರು ಮುನಿಶಾಪಕ್ಕೆ ತಮ್ಮಸುವ;
ನವೆದಿರ್ದರಲ್ಲಿ ಕಾಡಿನೊಳು.
ಅನುಭವವು ಸವಿಯಲ್ಲ-ಅದರ ನೆನಪೇ ಸವಿಯು,
ಅದ ಕದ್ದು ಮೇಯದೇ ಮನವು ?
ಆಗ ಮೂಸೆಯ ಚಿನ್ನದಂತೆ ನೀರಪ್ಪುದೆದೆ
ಕರಗುತಲ್ಲಲ್ಲಿ ಚೆಲ್ಲುವುದು.
ಕತ್ತಲೆಯ ಆಳದಲಿ ಗುಯ್ಯೆಂಬ ಗುಳುಗುಳಿಪ
ಬಿಂಜದಲಿ ಪಾಂಡುನೃಪನೊಮ್ಮೆ
ಹಲುಬಿದಾ ನುಡಿಯದನು ಕೇಳಿ ಕೊಟ್ಟಿತು ಭಾಷೆ
ಕನ್ನಡಕೆ ಮೀಸಲೆಂದೆನಿಸಿ.
(2 ನೆಯ ಭಾಗದ ಕೆಲವು ಪದ್ಯಗಳು)
ಮುನಿಸು ಹೊಗೆ ಸೂಸುವುದೆ ಕಾನನದ ಮೌನದಲಿ ?
ಮನವ ದಹಿಸುವ ಮೋಡಿ ದಳ್ಳುರಿವುದೇ ?
ಹುಸಿ ಬೆಸುಗೆಯಿಕ್ಕಿಹುದೆ ಎಳಲತೆಯ ಹಾಸದಲಿ ?
ಕಟ್ಟು ಬಣ್ಣದ ಬೆಡಗು ಮಿರುಗುತಿಹುದೆ ?
ಜೀವನವನುಕ್ಕಿಸುವ ಕೀರ್ತಿ ಮದಿರಾನಂದ
ಕೋಗಿಲೆಯ ಕಲರವದಿ ಹೊಮ್ಮುತಿಹುದೆ ?
ಸೃಷ್ಟಿಯಾ ಸೋಗಿಲಿದು ; ಶಾಂತಿಯಾ ಬಾಗಿಲಿದು ;
ಕವಡಿರದ ಬಾಳುವೆಯ ಹಂದರಿದುವೆ.
ಆರಾರ ದೂರು, ಮತ್ತಾರಾರ ನಿಟ್ಟುಸಿರು,
ಆರಾರ ನೀಳ್ದನಿಯ ರೋದನಗಳು;
ಈ ದಡದಿ ವಿಷಮವೀಚಿಗಳ ತುಳಿದೆಬ್ಬಿಸವು
ಎದೆಯ ಕೊರೆಯದು ಕೊಚ್ಚಿ ಹರಿಯುವಳಲು.
ತನ್ನ ದೇಹವೆ ದೋಣಿ, ತನ್ನ ಶಕ್ತಿಯೆ ಹುಟ್ಟು,
ತನಗೆ ತಾನೇ ಕರ್ಣಧಾರನೆನಿಸಿ
ತೇಲುತೇಲುತೆ ನಡೆದು ಎಂತೆಂತೊ ಸೇರುವೆವು
ಸಚ್ಚಿದಾನಂದ ಶಾಂತಿಯ ತೀರದಿ.
ಮಕುಟಧಾರಣವೊಂದೆ ಬಾಳುವೆಯ ತೋರಣವೆ ?
ರಾಜದಂಡವನಲೆವುದೊಂದೆ ಬಲವೆ ?
ಸೀಗುರಿಯ ತಂಗಾಳಿಯೊಂದೆ ಜೀವನದುಸಿರೆ ?
ಬೆಳ್ಗೊಡೆಯ ನೆಳಲೊಂದೆ ಸೊಗದ ತಂಪೆ ?
ಬಿನ್ನಣವ ಮಾರಿ ಬೆಲೆಗೊಂಬ ಹರದರ ಗಾನ
ಆತ್ಮಕ್ಕೆ ಜತಿಗೊಡುವ ತಾನವೇನೈ ?
`ಜಯ !’ ಎಂಬ `ಜೀ’ ಎಂಬ ಬೆಲೆಯಾಳ ಕಲಿತ ನುಡಿ
ಸಗ್ಗದಿಂ ಸಿಡಿವ ಸೊದೆತುಂತುರೇನೈ ?
ಅರಸುಗೆಯ್ಮೆಯ ಭರದಿ ಆತ್ಮತತ್ತ್ವವ ತಿಳಿವ
ಪರಿಯ ಮರೆವೆವು, ಮೊರೆದು ಗರ್ಜಸುವೆವು.
ರಾಜ್ಯಗಳನೊತ್ತೊತ್ತಿ ಗೆಲ್ಲವರೆ ಮೊಳಗಿಪೆವು,
ಬಗೆಗರಸನಿಹನೆಂಬುದನೆ ಮರೆವೆವು.
ಇಂತು ಗಳಿಸುವ ಬಾಳ ಆಳ್ಕೆಯೆಂಬರೆ ? ಹೇಳ !
ಪಚ್ಚೆ ಹಸುರಿನ ಹೊಲದಿ ಮೇವ ಮಂದೆ
ಒಂದು ಗಳಿಗೆಯ ಮೇವ ತಿಂದು ಮರೆಯದೆ ಸಾವ ?
ಅದರಂತೆ ನಮ್ಮ ಬಾಳ್ ಮರವೆ-ಮಾಯೆ !
ತಾನೆ ಕುಡಿಬಿಟ್ಟು ಚಿಗುರಿಟ್ಟು ಅರಲಾಗಿ ಮಿಡಿ-
ಯಾಗಿ ಬಿಸಿಲುಂಡು ಕೆಂಪಾಗಿ ಬೀಗಿ,
ತೂಗಿ ತೆಂಬೆಲರಿಂದ ನಸುಜಗುಳಿ ತೊಟ್ಟಿಂದ
ಜಾರಿ ಬೀಳುವ ಹಣ್ಣಿನಂತೆ ಮಾಗಿ,
ಜೀವವಿದು ತನ್ನೊಳಗೆ ತನ್ನ ಮೌನವನುಂಡು
ತೀವಿ ರಸದಲಿ ಬಣ್ಣವೇರಿ ಮೀರಿ,
ತನ್ನ ನೆಲೆಯನು ಕಂಡು ಸೇರಲದುವೇ ಬದುಕು;
ಹಲವು ದೋಹಳದಿಂದಲಾವ ಸೊಗಸು ?
ಬೆದರುವೆನು ಹುಸಿನಗೆಗೆ-ನಾಚುವೆನು ಘೋಷಣೆಗೆ,
ಕೂಳ್ಕುದಿವೆ ರಾಜತೆಯ ಬಲಕೆ ಚಲಕೆ
ಆಳೆಂಬ ಅರಸೆಂಬ ಭೇದದಿಂ ಗರ್ಜಿಸುವ
ಜಂತುಜೀವನ ಬೇಡ ಜಗದ ಸೊಗಕೆ.
ಇಲ್ಲಿ ಹುಸಿಬೆಡಗಿಲ್ಲ-ವಂದಿಗಳ ಮೊರೆಯಿಲ್ಲ-
ಘನಮಾರ್ಗದಿಂ ಬಿದ್ದ ತುಂತುರಂತೆ
ಸೃಷ್ಟಿದೇವಿಯ ಮಡಿಲೊಳಿಷ್ಟಸುಖಗಳ ಪಡೆದು
ಬಿದ್ದೆಡೆಯೊಳಾರಿ ಕಣ್ಮರೆಯಪ್ಪೆವು.
ಈ ಕಾಡು ನಾಡಿನಿಂ ಹಲವುಪಡಿ ಮಿಗಿಲೆನಗೆ;
ಗುಳುಗುಳಿಪ ನಿರ್ಝರವೆ ನನ್ನ ವಂದಿ.
ಜೀವಭೇದವ ಹುಡುಕದೊಂದೆ ನೆಳಲಿನೊಳಿಡುವ
ಎನ್ನ ಬೆಳ್ಗೊಡೆಯೆ ಆಗಸದ ಪರಿಧಿ.
ಮಾಮರದ ಜನ್ಮದಲಿ ಕೆಂಪೇರುತಿಹ ಕೊನರೆ
ಜಸವನುಗ್ಗಡಿಸುತಿಹ ವಿಜಯಕೇತು.
ಆನಂದ ಸಾಮ್ರಾಜ್ಯ; ನಾನೋರ್ವನೇ ರಾಜ;
ಮೃಗಗಳೇ ಪಕ್ಷಿಗಳೆ ಎನ್ನ ಜನರು.
ಒಮ್ಮೊಮ್ಮೆ ಬಳ್ಳಿಮಾಡದೊಳೆ ಒಡ್ಡೋಲಗವು;
ಅಳಿಗಳಾ ಕೋಗಿಲೆಯ ಗೀತವೊಮ್ಮೆ.
ಮುಗುಳುಗಳ ಕುಸುಮಗಳ ಕಪ್ಪಕಾಣಿಕೆಯೊಮ್ಮೆ;
ಚಿಗುರುಗಳ ಕವಲುಗಳ ಕೇಲಿಯೊಮ್ಮೆ.
ಒಮ್ಮೊಮ್ಮೆ ಮಧುರ ಮಾಸಗಳ ಮೃದುಲಾಸ್ಯಗಳು;
ಮಳೆಯ ಗಾಳಿಯ ತಾಂಡವಂಗಳೊಮ್ಮೆ
ಆವುದಿದೆ ತಪ್ಪು ? ಇನ್ನಾವ ಸಾವಿನ ಮುಪ್ಪು ?
ಈ ಕಾಡೆ ಸ್ವರ್ಗನಂದನವಲ್ಲವೆ ?
*****
ಒಂದೆಣಿಕೆ ಗಡಿಯಿಂದಲತ್ತ ವೈರಾಗ್ಯವದು
ಧರಿಣಿಯಲಿ ಬೇರೂರಿ ಮಡಲಿಟ್ಟಿದೆ;
ಪರಲೋಕದತ್ತ; ಬೇರೊಂದೆಡೆಯೊಳದೊ ಇಹದ
ಭವದ ಭಾವದ ಬಯಕೆ ಕವಲಿಟ್ಟಿದೆ.
ಬಗೆ ಬಗೆಯ ಮುಗುಳು ಗೊಂಚಲಿನ ಹೂಜಲ್ಲಿಗಳ
ಕಣಿಗೊಟ್ಟು ಮನವ ಮೋಹರಿಸುತ್ತಿದೆ;
ವಿರಹಿಗಳ ಮರುಳು ಮಾಡುವ ಕೊಂದು ಕೂಗುವಾ
ಸಮರ ಸನ್ನಾಹವಲ್ಲವೆ ಸೃಷ್ಟಿಗೆ ?
(3 ನೆಯ ಭಾಗದ ಕೆಲವು ಪದ್ಯಗಳು)
ಪಾಂಡುರಾಜನೊ ! ಪುರುಷಜನ್ಮಿಯಲ್ಲವೆ ? ಎಂತೊ
ಇಂದ್ರಿಯವ ಬಿಗಿದು, ಧಾರಿಣಿಗೆ ತನಗಿಹ ಬಂಧ
ಎಂದೋ ಹರಿದುದೆಂದು. ನಲ್ಲೆಯರ ನೋಟದಲಿ
ಬಂದೇ ಬರುವುದೆಂದು ಸುಖದ ಸಂಸ್ಮರಣೆ, ಮುನಿ
ಯೆಂದ ನುಡಿಯೇ ಪ್ರಲಯಭೈರವನ ದನಿಯೆಂದು
ಕೊಂದೇ ಕೊಲುವುದೆಂದು, ಬೆದಬೆದರಿ ಮುದುಮುದುರಿ
ಜೀವವನೆ ಜಗ್ಗಿಸುತ, ಭಾವವನೆ ಕುಗ್ಗಿಸುತ,
ಸವೆಯುತಿರ್ದನು ತನುವ ನಿಸ್ಸಂಗನಾಗಿರುತ.
ಬೇರೆ ಬಗೆ ಮಾದ್ರಿಯದು-ಕಷ್ಟರಾಶಿಯ ಹೊತ್ತು
ಬಾಳಲೆಂದೇ ಪಳಗಿ ಬಂದ ಹೆಣ್ಣಲ್ಲವೇ ?
ಕಾರಿರುಳೊಳಗು ಕಣ್ಣುಬಿಟ್ಟು ನಡೆವರ ದಿಟ್ಟಿ
ಮೇಲೆ ಬರಬರುತ ನಸುಬೆಳಕ ಕಾಣುವ ತೆರದಿ,
ಅಡವಿ ಬಾಳ್ವೆಯ ದುಗುಡದೊಳಗು ನಸುಸಂತಸವ
ಒಡಗೂಡಿಕೊಂಡಿರಲು, ಶಾಂತಿಯನು ಬಯಸುತ್ತ
ರವಿಕಿರಣಹೊಗದಿರುವ ಗುಯ್ಯೆಂಬ ಕಾನನದಿ
ಸುರಿದು ಹೃದಯದ ರಸವ ತಾನೆ ಸವಿಯುವಳಲ್ಲಿ:-
ಸಂತೋಷ ಲಹರಿಯಲಿ ತೇಲಿಬಹ ಯೌವನವೆ !
ಸಂತಾಪವೀಚಿಗಳ ಸೀಳಿಬಹ ಜೀವನವೆ !
ಸ್ವಚ್ಛಂದ ಸಾಹಸವ ಹೇರಿಬರುತಿಹ ನಾವೆ !
ಸ್ವಾತಂತ್ರ್ಯ ಸಂಭ್ರಮದಿ ಹಾರುತೇರುತ ಬರುವೆ !
ಸಡಗರಿಸಿ ಬಾರಿತ್ತ ! ಸೆಡವಿನಲಿ ಬಾರಿತ್ತ !
ಕಲ್ಲಬಂಡೆಯ ದಡವ ಹೊಡೆದೊಡೆದು ಸೇರಿತ್ತ !
ನಿನ್ನ ಭಾಂಡವ ಮುರಿದು, ಬಗೆ ಬಗೆಯ ಬಣ್ಣಗಳ
ನುಣ್ಣಿಸಿದ ಬಣ್ಣಿಸಿದ ಕನಸುಗಳ ಚೆಲ್ಲಿತ್ತ !
ನಿನ್ನೊಡವೆಯೆನಲಿದೇ ಕಾಮವಾಸನೆಯೆಂಬ
ಕೂರಸಿಯ ಧಾರೆ ? ಒರೆಯಿಕ್ಕಿಕೊಳ್ಳುವೆನಿದನು.
ಪ್ರಾಣಿಕೋಟಿಗಳ ಜೀವನ ರಸವ ಕುಡಿ ಕುಡಿದು
ಆರದಾಸರಿನಿಂದ ಝಂಕರಿಸುತಿಹುದಿಂದು.
ಪ್ರಲಯದುಲ್ಕೆಯ ರಭಸದಿಂ ಬಿದ್ದು ಎನ್ನೆದೆಗೆ
ಮಲಗಿರಲಿ ಬಿರಿದ ಮುಗುಳಂತೆ ಬಾಡುತಲಿಲ್ಲೆ.
ಲೋಕವಿಜಯದ, ಜೀವಗೊಲೆಯ, ಘನಪಾತಕದ
ಪಾಪಿ ! ಮೀಯಲಿ ಎನ್ನ ಕಣ್ಣೀರ ಗಂಗೆಯೊಳೆ.
ಮೆಯ್ಸಿರಿಯ ಮದದಿಂದ ಮೆಯ್ಯೇರಿ ಮೆರೆ ಸುಗ್ಗಿ !
ಒಪ್ಪುವುದು ನಿನಗಿಂತು ತಿಳಿವ ಮಸುಕಿಪ ಮೋಡ !
ಜೀವಿಗಳ ಬಾಳ್ಕೆಯಲಿ ಯೌವನವೆ ಸುಗ್ಗಿಯಲ ?
ಸುಗ್ಗಿಯೇ ವಿಶ್ವಜೀವನದ ಯೌವನವಲಾ ?
ಒಂದೆ ತೊಟ್ಟಿನ ಒಂದೆ ಗುಟ್ಟಿನೊಂದೇ ಬೆಡಗಿ
ನೊಂದೆ ಕಂಪಿನ ತಂಪಿನೆರಡು ಮೊಗ್ಗೆಗಳಂತೆ,
ಸುಗ್ಗಿಯೇ ! ಯೌವನವೆ ! ಬಾಳಿ ಬದುಕಿರಿ, ಬೆದಕಿ
ಆವ ಬದುಕಿನೊಳಾವ ಸತ್ತ್ವವಿದೆಯೋ ಹುಡುಕಿ.
(4 ನೆಯ ಭಾಗದ ಕೆಲವು ಪದ್ಯಗಳು)
ನಿಂತು ನಿಂತು ಜಾನಿಸುತ್ತ,
ನಿಲ್ಲದಲೆದು ಸುಳಿಯುತತ್ತ,
ಮಲ್ಲಳಿಗಳ ಮಸಣ ಹಾಡ ಮೇಳಗೊಂಡು ನಡೆಯುತ;
ಮಾಯೆ ಕಟ್ಟಿ ಕುಣಿಸುತಿರುವ
ಮಣ್ಣಬೊಂಬೆ-ಅರಸಿ ಮಾದ್ರಿ
ಅರಸನೆಡೆಯ ಪಡೆಯಲೆಂದು ಹಿಂದೆಮುಂದೆ ನಡೆದಳು.
*****
ಬಿಗಿದ ಹುಬ್ಬು, ಬಿಟ್ಟ ಕಣ್ಣು,
ತುಟಿಯ ಮಾಸುನಗೆಯ ಚೆನ್ನು,
ಬೊಮ್ಮ ಬರೆದ ರೂಪ ಮೃತ್ಯು ತಿದ್ದಿ ಬರೆದನಾಗಳೆ.
ಅವಳ ತೋಳ ಸೋಂಕಿನಿಂದ
ಅರಸಗಿಂತು ಬಂತು ಚಂದ !
ಆಹ ! ಹೆಣ್ಣ ತೋಳು ಯಮನ ಕಯ್ಯ ಕುಂಚವಾದುದೆ ?
ಇನಿಯ ತುಟಿಯ ತೋಟಿಯಂತು
ಜೀವನವನೆ ಹೀರಿ ಬಂತು !
ಅಯ್ಯೊ ಕದಪಿನೊಂದು ಗಾಯ ಚಾಡಿಯೊರೆವುದೀಗಳು.
ತೋಳಬಂದಿಯೊಳಗೆ ನಲ್ಮೆ-
ಯಾಳ ಹಿಡಿದು ಕೊಂದ ಬಲ್ಮೆ-
ಗಾವ ಶಿಕ್ಷೆಯೆನ್ನುತವಳ ಮೊಗದ ಮೌನ ಕೇಳ್ವುದು.
ಶಾಂತಿ ರಸದಿ ಮುಳುಗಿ ಮುಳುಗಿ,
ಆವ ದಡಕೊ ತೇಲಿ ತೇಲಿ,
ಅವನ ದಿಟ್ಟೆಯವಳ ಮನವ ಹೇರಿ ಹಾರಿ ನಡೆದುದು.
ಮೌನದೊಳಗೆ ಮುಳುಗಿ ಹುಡುಕೆ
ಕಳಚಿ ಬಿದ್ದ ಜೀವರತ್ನ
ನಿನ್ನ ಕೈಗೆ ಸಿಲುಕದೆಂದು ತುಟಿಯ ಮಿಡುಕವೊರೆದುದು.
ಅಡಿಗರು ಕಡೆಂಗೋಡ್ಲು ಅವರ ‘ಮಾದ್ರಿಯ ಚಿತೆ’ ಕಾವ್ಯ ಖಂಡದ ಬಗ್ಗೆ ಬರೆಯುತ್ತಾ ಹೀಗೆ ಹೇಳಿದ್ದಾರೆ : “ ‘ಮಾದ್ರಿಯ ಚಿತೆ” ಒಂದು ಚಿರಂತನವೆನಿಸಬಲ್ಲ ರಸತರಂಗಿಣಿ. ಅದರ ರಚನೆಯಿಂದ ಶ್ರೀಮಾನ್ ಕಡೆಂಗೋಡ್ಲು ಶಂಕರ ಭಟ್ಟರ ಹೆಸರು ಕನ್ನಡ ಸಾಹಿತ್ಯ ರಾಜ್ಯದಲ್ಲಿ ಚಿರಸ್ಥಾಯಿಯೆನಿಸಿದೆ… ಇವರ ಮಾತು ನಮ್ಮ ಸಂಸ್ಕೃತಿಗೊಪ್ಪುವ ಮಾತು; ಶೈಲಿ ಕನ್ನಡ ಶೈಲಿ; ಭಾವ – ಶುದ್ಧ, ಸ್ವತಂತ್ರ – ಸುಂದರ. ಹೀಗಾಗಿ ಇವರ ಕಾವ್ಯ ಮಾರ್ಗವು ಆಧುನಿಕ ಕವಿಗಳಿಗೆ ಮಾರ್ಗದರ್ಶಕವಾಗುವಂತಿದೆ.” (ಸುಬೋಧ, ಆಗಸ್ಟ್ 1938).
ಅಡಿಗರ ಮೇಲೆ ಪ್ರಭಾವ ಬೀರಿದ ಕವಿ
ಗೋಪಾಲಕೃಷ್ಣ ಅಡಿಗರೂ ಶಂಕರ ಭಟ್ಟರ ಕಾವ್ಯದ ಲಯಗಾರಿಕೆ, ಶ್ರುತಿ ಸುಭಗತೆಗೆ ಮನಸೋತಿರುವುದಕ್ಕೆ ಒಂದು ಉದಾಹರಣೆಯನ್ನು ಅವರ ‘ಅಜ್ಜ ನೆಟ್ಟಾಲ’ ಕವನದ ಸಾಲುಗಳನ್ನೂ, ಕಡೆಂಗೋಡ್ಲು ಅವರ ‘ಮಾದ್ರಿಯ ಚಿತೆ’ಯ ಕೆಲವು ಸಾಲುಗಳನ್ನೂ ಜತೆಗಿಟ್ಟು ನೋಡಿದಾಗ ತಿಳಿಯುವುದು. ಇಲ್ಲಿ ಪ್ರಾರಂಭದಲ್ಲಿ ಕೊಟ್ಟಿರುವ ದಪ್ಪಕ್ಷರದ ಸಾಲುಗಳು ಅಡಿಗರವು; ನಂತರದ ಸಾದಾ ಅಕ್ಷರಗಳ ಸಾಲುಗಳು ಕಡೆಂಗೋಡ್ಲು ಅವರವು.
ಅಜ್ಜ ನೆಟ್ಟಾಲ ಮನೆಮುಂದೆ ತೇರಿನ ಹಾಗೆ:
ಮಿಣಿ ಬಿಳಲು ಸೊಂಡಿಲುಗಳಾಡಿ ಮಣಿದವು ತೂಗಿ
ತಣಿದು ತಣ್ಣೆಳಲಲ್ಲಿ. ಹಸಿರುಡೆಯ ಪಟಪಟದ
ಹಾಯಿ. ಬಡಿದು ಬಾರಿಸಿ ಹಿಂದೆ
ಸರಿವ ಅಲೆಅಲೆ ಮಧ್ಯೆ ಸದ್ದಿಲ್ಲದುದ್ದುದ್ದ ಚಿಗಿವ ಕಾಂಡ.
ತಾನೆ ಕುಡಿಬಿಟ್ಟು ಚಿಗುರಿಟ್ಟು ಅರಲಾಗಿ ಮಿಡಿ
ಯಾಗಿ ಬಿಸಿಲುಂಡು ಕೆಂಪಾಗಿ ಬೀಗಿ
ತೂಗಿ ತಂಬೆಲರಿಂದ ನಸುಜಗುಳಿ ತೊಟ್ಟಿಂದ
ಜಾರಿ ಬೀಳುವ ಹಣ್ಣಿನಂತೆ ಮಾಗಿ
ಜೀವವಿದು ತನ್ನೊಳಗೆ ತನ್ನ ಮೌನವನುಂಡು
ತೀವಿ ರಸದಲಿ ಬಣ್ಣವೇರಿ ಮೀರಿ.
ಕಡೆಂಗೋಡ್ಲು ಮತ್ತು ದಕ್ಷಿಣ ಕನ್ನಡ ಕಾವ್ಯದ ಅಸ್ಮಿತೆ
ಕಡೆಂಗೋಡ್ಲು ಮತ್ತು ನಂತರದ ಕವಿಗಳಲ್ಲಿ ಕಂಡುಬರುವ ದಕ್ಷಿಣ ಕನ್ನಡ ಕಾವ್ಯದ ಮೂರು ವೈಶಿಷ್ಟ್ಯಗಳ ಮೂಲವನ್ನು ಕಡೆಂಗೋಡ್ಲು ಅವರಲ್ಲಿ ಗುರುತಿಸಬಹುದು.
1. ಆಧುನಿಕ ಮನುಷ್ಯನ ಅಂತರಂಗದ ತಾಕಲಾಟಗಳನ್ನು ಚಿತ್ರಿಸಲು ಸ್ವಗತದ ಬಳಕೆ: ದಕ್ಷಿಣ ಕನ್ನಡದ ಯಕ್ಷಗಾನ ತಾಳಮದ್ದಳೆ ಕಲಾಪ್ರಕಾರದಲ್ಲಿ ಪಾತ್ರಗಳು ಪ್ರಾರಂಭದಲ್ಲಿ ಸ್ವಗತದ ಶೈಲಿಯಲ್ಲಿ, ಪೀಠಿಕೆಯ ರೂಪದಲ್ಲಿ, ತಮ್ಮ (ಅಂದರೆ ಪಾತ್ರಗಳ) ಅಂತರಂಗದ ಮಾತುಗಳನ್ನು, ಅಂತರಂಗದ ತಾಕಲಾಟಗಳನ್ನು ಹೇಳಿಕೊಳ್ಳುತ್ತವೆ. ಸುಮಾರು ಐದು ಹತ್ತರಿಂದ ಅರ್ಧಗಂಟೆಯವರೆಗೂ ಹೀಗೆ ಸ್ವಗತಗಳಾದ ನಂತರ ಎದುರಿನ ಪಾತ್ರವನ್ನು ಉದ್ದೇಶಿಸಿ ಸಂಭಾಷಣೆ ನಡೆಸುವುದು ಕ್ರಮ. ಕಡೆಂಗೋಡ್ಲು ಅವರು ‘ಮಾದ್ರಿಯ ಚಿತೆ’ಯಲ್ಲಿ ಈ ಕ್ರಮವನ್ನು ಅನುಸರಿಸಿದ್ದಾರೆ. ಪಾಂಡುವಿನ ಕೆಲವು ಮಾತುಗಳನ್ನು ನೋಡಿದರೆ ಅದು ಸ್ಪಷ್ಟವಾಗುವುದು:
ಈ ಕಾಡು ನಾಡಿನಿಂ ಹಲವುಪಡಿ ಮಿಗಿಲೆನಗೆ
ಗುಳುಗುಳಿಪ ನಿರ್ಝರವೆ ನನ್ನ ವಂದಿ
…. ಆನಂದ ಸಾಮ್ರಾಜ್ಯ; ನಾನೋರ್ವನೇ ರಾಜ;
ಮೃಗಗಳೇ ಪಕ್ಷಿಗಳೆ ನನ್ನ ಜನರು.
ಅಕಟಕಟ! ಎನ್ನ ವಿಧಿ ಕೊಡಲೆನಗೆ ಕೆಡುಗಣ್ಣ –
ನಿಜವ ಮರಸುವ ಕುರುಡುಗಣ್ಣನಂದು
ಕಾಳಕೂಟದ ಕೊಡವನೊಡೆದು ಮೆಯ್ಸುಡಿಪಂತೆ
ಎಸೆದು ಕೂರಲಗ ಶಾಪವ ಕೊಂಡೆನು.
2. ವಿಧಿ ಮತ್ತು ಮನುಷ್ಯ ಪ್ರಯತ್ನ: ಕಡೆಂಗೋಡ್ಲು ಶಂಕರ ಭಟ್ಟರು ಮಹಾಭಾರತದ ಪಾಂಡು ಮಾದ್ರಿಯರ ಕಥೆಯನ್ನೇ ಆರಿಸಿಕೊಂಡರೂ ಅವರ ದೃಷ್ಟಿ ಆಧುನಿಕವಾಗಿದೆ. ಅವರು ವಿಧಿ ಮತ್ತು ಮನುಷ್ಯ ಪ್ರಯತ್ನಗಳ ನಡುವಿನ ದ್ವಂದ್ವವನ್ನು ಬಹಳ ಶಕ್ತಿಯುತವಾಗಿ ಚರ್ಚಿಸಿದ್ದಾರೆ. ‘ದೈವಬಲವಾರ್ಧಿಯಲಿ ಮನುಜಬಲ ತೆರೆಯೆಂದು / ಅದರೊಳಗೆ ಸುಳಿವುದೇ ಕೊರೆವುದೇ ಗರ್ಜಿಪುದೆ / ನಮ್ಮ ಪಾಡೆಂದು’ ‘ಮಾದ್ರಿಯ ಚಿತೆ’ಯಲ್ಲಿ ಕಡೆಂಗೋಡ್ಲು ಹೇಳುತ್ತಾರೆ. ಅವರು ವಿಧಿಯ ನಿಯಮವನ್ನು ಒಪ್ಪಿದರೂ ಮನುಷ್ಯ ತನ್ನ ಆಯ್ಕೆಯ ಮೂಲಕ ಘನತೆಯನ್ನು ಪಡೆಯುವುದನ್ನು ಸೂಚಿಸುತ್ತಾರೆ.
ಮುನಿಶಾಪವು ಪಾಂಡುವನ್ನು ಕಾಡಿನ ಪ್ರಶಾಂತ ವಾತಾವರಣದಲ್ಲಿ ಆತ್ಮಸಾಕ್ಷಾತ್ಕಾರಕ್ಕೆ ಕಳುಹಿಸುತ್ತದೆ. ಇಲ್ಲಿ ಪ್ರಭುತ್ವದ ‘ಘೋಷಣೆ’ಗಳ ವ್ಯರ್ಥ ಆಟಾಟೋಪದಿಂದ ಮುಕ್ತನಾದ ಪರಿಶುದ್ಧನಾದ ಪಾಂಡುವಿದ್ದಾನೆ. ಕೆಲವು ಸಾಹಿತ್ಯ ಕೃತಿಗಳಲ್ಲಿ ಮನುಷ್ಯನ ಮೂಲ ಪ್ರವೃತ್ತಿ, ಶಕ್ತಿ ಸಾಮರ್ಥ್ಯಗಳ ಅನ್ವೇಷಣೆಗೆ ಇಂತಹ ಅಜ್ಞಾತ ದ್ವೀಪಗಳ ವಾಸವೂ ಒಂದು ಚೌಕಟ್ಟಾಗಿ ಒದಗಿ ಬರುತ್ತದೆ. ಜೆ. ಎಂ. ಬ್ಯಾರಿಯ ‘ಅಡ್ಮಿರಬಲ್ ಕ್ರೈಟಾನ್’ ನಾಟಕ ಮತ್ತು ವಿಲಿಯಂ ಗೋಲ್ಡಿಂಗ್‍ನ ‘ಲಾರ್ಡ್ ಅಫ್ ದ ಫ್ಲೈಸ್’ ಕಾದಂಬರಿಯಲ್ಲಿ ಇಂತಹ ತಂತ್ರಗಳಿವೆ. ಇಲ್ಲಿ ಕಡೆಂಗೋಡ್ಲು ಪಾಂಡು ಚಕ್ರವರ್ತಿಗೆ ಒದಗಿದ ಅಂತಹ ಸ್ಥಿತಿಯನ್ನೂ ಕಾಣಿಸಿದ್ದಾರೆ.
ಆಯ್ಕೆಯ ದ್ವಂದ್ವವನ್ನು ಕಡೆಂಗೋಡ್ಲು ಅವರು ಚಿತ್ರಿಸಿರುವುದು ಹೀಗೆ: ಪಾಂಡುವಿಗೆ ಬ್ರಹ್ಮಚರ್ಯವನ್ನು ಪಾಲಿಸಿ ಪರವನ್ನು ಸಾಧಿಸುವ ಒಂದು ಆಯ್ಕೆಯೂ, ಪತ್ನಿಯರೊಂದಿಗೆ ರಮಿಸಿ ಇಹದ ಸುಖವನ್ನು ಸೂರೆಗೊಂಡು ಪ್ರಾಣತ್ಯಾಗ ಮಾಡುವ ಇನ್ನೊಂದು ಆಯ್ಕೆಯೂ ಇವೆ.
ಒಂದೆಣಿಕೆ ಗಡಿಯಿಂದಲತ್ತ ವೈರಾಗ್ಯವದು
ಧರಿಣಿಯಲಿ ಬೇರೂರಿ ಮಡಲಿಟ್ಟಿದೆ
ಪರಲೋಕದತ್ತ; ಬೇರೊಂದೆಡೆಯಳದೊ ಇಹದ
ಭವದ ಭಾವದ ಬಯಕೆ ಕವಲಿಟ್ಟಿದೆ. (ಮಾದ್ರಿಯ ಚಿತೆ).
ಪಾಂಡು ಮಾದ್ರಿಯರಿಗೆ ಅವರ ವಿಧಿ ಏನು ಎನ್ನುವುದು ಅವರಿಗೆ ತಿಳಿದಿರುವುದರಿಂದ ಅವರು ಈಗ ವಿಧಿಯಿಂದ ನಿರ್ದೇಶಿತರಲ್ಲ. ಆಲ್ಬರ್ಟ್ ಕಾಮುವಿನ ‘ಸಿಸಿಫಸ್’ನ ಹಾಗೆ ಅವರ ವಿಧಿಯೇನೆಂದು ಗೊತ್ತಿದ್ದೇ ಬದುಕುತ್ತಿರುವವರು ಅವರು. ಆಯ್ಕೆ ಅವರದೇ. ಅವರು ಮೈಮರೆತು ಒಂದಾದಾಗ ಮುನಿಶಾಪ ಮತ್ತು ವಿಧಿಯ ನಿಯಮದಂತೆ ಪಾಂಡು ಮಡಿದಾಗ ಮಾದ್ರಿಯೂ ಅವನ ಜತೆಗೆ ಚಿತೆಯೇರುವ ನಿರ್ಧಾರ ಮಾಡುವುದು ಕೂಡ ವಿಧಿಯೆದುರು ಮನುಷ್ಯ ಬಲಕ್ಕೂ ಒಂದು ಸ್ಥಾನವುಂಟೆಂದು ತೋರಿಸುವಂತಿದೆ. “ಮಾದ್ರಿ ಮಡಿದಳೇನು? ಅವಳ ಹಿಡಿದ ಮೃತ್ಯು ಮಡಿದುದು… ಜವನ ಕೈಯ ಸೊಡರ ಬೆಳಗಲವಳ ಚಿತೆಯ ಕೆಂಡವು” ಎನ್ನುವುದು ಈ ಕಾವ್ಯದ ಕೊನೆಯ ಮಾತು.
3. ಬಾಹ್ಯ ಪ್ರಭುತ್ವದ ಬಗ್ಗೆ ನಿರಾಸಕ್ತಿ, ಸರ್ವಾಧಿಕಾರದ ತಿರಸ್ಕಾರ: ಕಡೆಂಗೋಡ್ಲು ಶಂಕರ ಭಟ್ಟರ ‘ಮಾದ್ರಿಯ ಚಿತೆ’ಯಲ್ಲಿ ಇದರ ಸ್ಪಷ್ಟವಾದ ಉಲ್ಲೇಖಗಳಿವೆ.
ಮಕುಟಧಾರಣವೊಂದೆ ಬಾಳುವೆಯ ತೋರಣವೆ?
ರಾಜದಂಡವನಲೆವುದೊಂದೆ ಬಲವೆ?
…. ‘ಜಯ!’ ಎಂಬ ‘ಜೀ’ ಎಂಬ ಬೆಲೆಯಾಳ ಕಲಿತ ನುಡಿ
ಸಗ್ಗದಿಂ ಸಿಡಿವ ಸೊದೆಯ ತುಂತುರೇನೈ?
– ಎಂಬ ಪ್ರಶ್ನೆಯ ಗಹನತೆ, ಏರುಧ್ವನಿ ಬಹಳ ಶಕ್ತಿಯುತವಾಗಿದೆ. ಮುಂದೆ ಗೋಪಾಲಕೃಷ್ಣ ಅಡಿಗರ ಕಾವ್ಯದಲ್ಲಿ ಸರ್ವಾಧಿಕಾರದ ತಿರಸ್ಕಾರ ಒಂದು ಪ್ರಧಾನವಾದ ನೆಲೆಯಾಗಿದೆ.
ಬೆದರುವೆನು ಹುಸಿನಗೆಗೆ – ನಾಚುವೆನು ಘೋಷಣೆಗೆ
ಕೂಳ್ಕುದಿವೆ ರಾಜತೆಯ ಬಲಕೆ ಚಲಕೆ
…. ಇಲ್ಲಿ ಹುಸಿ ಬೆಡಗಿಲ್ಲ – ವಂದಿಗಳ ಮೊರೆಯಿಲ್ಲ
ಇದು ಪಾಂಡುವಿನ ಮನಸ್ಸಿನೊಳಗಿನ ಮಾತು. ‘ಘೋಷಣೆಗೆ ನಾಚುವೆನು’ ಎನ್ನುವಲ್ಲಿ ಯಾವುದೇ ಅಧಿಕಾರ ಕೇಂದ್ರ ಹುಟ್ಟಿಸಬಲ್ಲ ಅನುಯಾಯಿಗಳ ಸ್ವಾರ್ಥಪ್ರೇರಿತ ಓಲೈಕೆಗಳಿಂದ ದೂರವಾಗಿ ಬೇರೆಯೇ ಸಾಧನೆಗೆ ಹೊರಡುವ ಸಂಕಲ್ಪವಿದೆ. ಅಡಿಗರ ‘ಕೆಂದಾವರೆ’ ಭಾವಗೀತೆಯಲ್ಲಿ “ದುಂಬಿಗಳು ಒಲವನೇ ಗುಂಜಿಸಿರಲು / ನಾಚಿ ತಲೆ ಬಾಗಿಸಿತು ಕಮಲ; ದೂರದ ಬಾನ / ದಾರಿಯಲಿ ಸಪ್ತಾಶ್ವವೇರಿ ಬಹನು” ಎಂಬ ಸಾಲಿನಲ್ಲಿ ಕೆಂದಾವರೆಯು ನಾಚುವುದು ಕೂಡ ಈ ಕ್ಷುಲ್ಲಕತನಕ್ಕೆ; ಅದು ಹಂಬಲಿಸುವುದು ಮಹತ್ತಾದುದಕ್ಕೆ.
ಹೆಣ್ಣು
ಕಡೆಂಗೋಡ್ಲು ಶಂಕರ ಭಟ್ಟರು ತಮ್ಮ ಕತೆಗಳಲ್ಲಿ ಮತ್ತು ಸಣ್ಣ ಕಾವ್ಯಗಳಲ್ಲಿ ಹೆಣ್ಣಿನ ಮಹತ್ವವನ್ನು ಮತ್ತು ಅವಳ ಅಂತರಂಗವನ್ನು ಅರಿತುಕೊಂಡು, ಹೆಣ್ಣಿನ ಮೇಲಾಗುವ ದೌರ್ಜನ್ಯಗಳನ್ನು, ಅವಳ ಶೋಷಣೆಯನ್ನು ತೋರಿಸುವ ಮೂಲಕ ಬಹಳ ವಿಶಿಷ್ಟ ಆಧುನಿಕ ಕವಿಯಾಗಿ ಗುರುತಿಸಿಕೊಳ್ಳುತ್ತಾರೆ. ಅವರ `ಹೆಣ್ಣು’ ಎಂಬ ಸಣ್ಣಕಾವ್ಯ ಮನೋಹರ ಗ್ರಂಥಮಾಲೆಯ `ನಡೆದು ಬಂದ ದಾರಿ’ ಕಾವ್ಯ ನಾಟಕ ಸಂಪುಟದಲ್ಲಿ ಪ್ರಕಟವಾಯಿತು. ಇದರಲ್ಲಿ ಯುದ್ಧಕ್ಕೆ ಹೋಗಿ ಹಿಂದಿರುಗಿದ ಮಾರನ ಹೆಂಡತಿ (ಅವಳಿಗೆ ಹೆಸರು ಕೊಟ್ಟಿಲ್ಲ) ತಿಮ್ಮ ಗೌಡನ ಪ್ರೇಯಸಿಯಾಗಲು ಒಪ್ಪದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಅವರ ‘ಹೆಣ್ಣು’ ಮತ್ತಿತರ ಸಣ್ಣಕಾವ್ಯಗಳು ಕಥೆ ಹೇಳುವುದರಲ್ಲಿ ತೃಪ್ತರಾಗದೆ, ಸ್ತ್ರೀ ಸಂವೇದನೆ, ಸ್ತ್ರೀಶೋಷಣೆಗೆ ಪ್ರತಿರೋಧ, ಆಧುನಿಕ ಮನುಷ್ಯನ ಮಾನಸಿಕ ತೊಳಲಾಟ, ಆಯ್ಕೆಯ ದ್ವಂದ್ವ (ಇಹವೋ – ಪರವೋ ಇತ್ಯಾದಿ) ಇತ್ಯಾದಿಗಳನ್ನು ಚಿತ್ರಿಸುವ ಮೂಲಕ ಆಧುನಿಕ ಸಂವೇದನೆಯನ್ನು ಧಾರಣೆಮಾಡಿವೆ.
ಏಳು ಭಾಗಗಳಲ್ಲಿ 193 ಅಷ್ಟಪದಿಗಳಲ್ಲಿ ಈ ಕಾವ್ಯ ವಿಸ್ತರಿಸಿಕೊಂಡಿದೆ. ಒಂದು ಮಾದರಿ ಪದ್ಯ ಹೀಗಿದೆ:
ಸೀತೆಯೆಂದು ತಾರೆಯೆಂದು,
ಗುಡಿಯೊಳಿಟ್ಟು ಕರೆದರಿಲ್ಲ.
ಶಿಲ್ಪ ಕಲೆಯ ಚಿತ್ರಕಲೆಯ
ಮೆಯ್ಯ ಕೈಯ ಬರೆದರಿಲ್ಲ.
ಅವಳ ಮೂಳೆ ಬಿದ್ದ ನೆಲದಿ
ಮಣ್ಣದೂಪೆಯೇಳಲಿಲ್ಲ.
ಕಲ್ಲೊ ಮುಳ್ಳೊ ಆವುದಿರಲಿ –
ಅವಳ ಹೆಸರ ಹೇಳಲಿಲ್ಲ ||27||
ಸುಬ್ರಾಯ ಚೊಕ್ಕಾಡಿಯವರು ಹೇಳುವಂತೆ: “ಬದುಕಿನ ವ್ಯಾಪಾರದಲ್ಲಿ ಮೂಡಿ ಬರುವ ಸ್ತ್ರೀ ಚಿತ್ರ ಶಂಕರ ಭಟ್ಟರ ಕಾವ್ಯ ಪ್ರಜ್ಞೆಯನ್ನು ಕೆಣಕಿದ, ಯೋಚನೆಗೆ ಹಚ್ಚಿದ ಮುಖ್ಯ ವಸ್ತುವಾಗಿರುವಂತಿದೆ. ಬದುಕಿನ ಇತಿಮಿತಿಗಳು, ವಹಿಸಬಹುದಾದ ಸ್ವಾತಂತ್ರ್ಯ, ಪ್ರಕೃತಿ ಸಹಜವಾದ ಅದಮ್ಯವೆನಿಸುವ ಬಯಕೆಗಳು, ಪ್ರೇಮ, ನೋವು, ನಲಿವುಗಳು, ಒದಗಿಬರುವ ದುರಂತ, ವ್ಯಕ್ತಿಗತವಾದ ಹಾಗೂ ಸಮೂಹ ಧರ್ಮದ ಚೌಕಟ್ಟಿನಲ್ಲಿ ಗಳಿಸಿಕೊಳ್ಳಬಹುದಾದ ಜೀವನ ಸಾಫಲ್ಯ ವಂಶ ಗೌರವ ಚಿಂತನೆ ಇವೆಲ್ಲವುಗಳ ನಡುವೆ ಮೂಡಿಬರುವ ಸಂಕೀರ್ಣ ಹೆಣಿಗೆಯುಳ್ಳ ಸ್ತ್ರೀಚಿತ್ರವನ್ನು ಹಿಡಿದಿಡಲು ಶಂಕರ ಭಟ್ಟರು ತಮ್ಮ ಕಥನಕವನಗಳಲ್ಲಿ ಪ್ರಯತ್ನಿಸಿದ್ದಾರೆ.”(ಕೃತಿ ಶೋಧ)
`ಭೂತಾಳ ಪಾಂಡ್ಯ’
1987ರಲ್ಲಿ ಪ್ರಕಟವಾದ `ಕಡೆಂಗೋಡ್ಲು ಸಾಹಿತ್ಯ’ದಲ್ಲಿ ಮುದ್ರಣಗೊಂಡ (ಅದುವರೆಗೆ ಅಪ್ರಕಟಿತವಾಗಿದ್ದ) `ಭೂತಾಳ ಪಾಂಡ್ಯ’ ಎಂಬ ಕಥನ ಕವನದಲ್ಲಿ 1987 ಸಾಲುಗಳಿದ್ದು ಏಳು ಭಾಗಗಳಿವೆ.
ತುಳುನಾಡಿನಲ್ಲಿ ಬಾರಕೂರಿನ ಅರಸ ಭೂತಾಳ ಪಾಂಡ್ಯನ ಕಥೆ ಪ್ರಸಿದ್ಧವಾಗಿದೆ. ಅವನು ವಿದೇಶ ವ್ಯಾಪಾರ ಮಾಡುತ್ತಿದ್ದ ವರ್ತಕ – ಮತ್ತು ನಾಡಿನ ಅರಸ. ಇತಿಹಾಸದ ಪ್ರಕಾರ ಮೊದಲನೆಯ ಶತಮಾನದ ಸುಮಾರಿಗೆ ತಮಿಳುನಾಡಿನ ಮಧುರೆಯಿಂದ ವಲಸೆ ಬಂದ ಪಾಂಡ್ಯ ವಂಶದವನು. ಅವನು ಕಟ್ಟಿಸಿದ ಹಡಗು ನೀರಿಗೆ ಇಳಿಯಲು ಕುಂಡೋದರ ಎಂಬ ಭೂತವು ಅಡ್ಡಿಯಾಗಿ ನರಬಲಿ ಕೇಳುತ್ತದೆ. ಅವನು ತನ್ನ ಮಕ್ಕಳಲ್ಲೊಬ್ಬನನ್ನು ಬಲಿಕೊಡಲು ನಿಶ್ಚಯಿಸಿದಾಗ ಪತ್ನಿ ಒಪ್ಪುವುದಿಲ್ಲ. ಕೊನೆಗೆ ಅವನ ಸಹೋದರಿಯ ಮಗ ಬಲಿಯಾಗಲು ಒಪ್ಪುತ್ತಾನೆ. ಆಗ ಭೂತವು ನರಬಲಿಯ ವಾಗ್ದಾನದಿಂದಲೇ ತೃಪ್ತವಾಗಿ ಹಡಗು ಚಲಿಸಲು ಅನುವು ಮಾಡಿಕೊಡುತ್ತದೆ. ಇದರ ನಂತರ ಭೂತಾಳ ಪಾಂಡ್ಯನು ತುಳುನಾಡಿನಲ್ಲಿ ಮಕ್ಕಳ ಕಟ್ಟನ್ನು (ಉತ್ತರಾಧಿಕಾರದ ಹಕ್ಕನ್ನು) ತೆಗೆದುಹಾಕಿ ‘ಅಳಿಯ ಕಟ್ಟ’ನ್ನು (ಸಹೋದರಿಯ ಮಗನಿಗೆ – ಸೋದರಳಿಯನಿಗೆ – ಹಕ್ಕು) ಜಾರಿಗೆ ತರುತ್ತಾನೆ. ಈ ಕಥೆಯನ್ನು ಕಡೆಂಗೋಡ್ಲು ಕಥನಕವನವನ್ನಾಗಿಸಿದ್ದಾರೆ.
ಇದರ ಕೆಲವು ಪದ್ಯಗಳು ಹೀಗಿವೆ:
ಭೂತಾಳಪಾಂಡ್ಯ
ಮಳೆಗಾಲದೊಂದು ದಿನ ; ಆಗಸದ ತಿಳಿಹಾಲ್ಗೆ
ಹೆಪ್ಪುಗಟ್ಟಿದ ತೆರದಿ ಮೋಡಗಳು ಮೋಹರಿಸೆ
ಸಂಕಲೆಯ ಬಿಟ್ಟಿದ್ದ ಕೂರನಾಯಿಗಳಂತೆ
ಧೀಂಕಿಟ್ಟು ಹಾರುತಿರೆ ಸುಟ್ಟುರೆಯ ಗಾಳಿಗಳು
ಪಾಂಡ್ಯ ನಿಜಮಂದಿರದಿ, ಪಡುಗಡಲ ತೀರದಲಿ
ನಿಂತು ನೋಡುವನು ದೂರದ ತೆರೆಯ ಬೆನ್ನೇರಿ
ನೌಕೆ ಬರುವುದೊ ಎಂದು ; ತನ್ನ ತೀರವ ಬಿಟ್ಟು
ನಡೆದ ನಾವಿಕರ ಸುದ್ದಿಯ ಕೇಳದಿಹನವನು || 9 ||
ಬಿರುಗಾಳಿ ಹೊಕ್ಕ ಮನೆಯಂತಿರುವುದವನ ಮನ
ಮತಿಯ ಬಾಗಿಲು ಬಿಚ್ಚಿ ಆಸೆ ಕಿಟಿಕಿಯು ಹೊಡೆದು
ಕೆಡೆದು ಹೋಗಿದೆ ವಿಹ್ವಲಾವೇಗ ಪೀಡನೆಗೆ
ಸಿಡಿಮಿಡಿ ಗೊಂಡು ತನು ಹಾರುತಿದೆ ಚೀರುತಿದೆ
ಕಡಲ ತೆರೆಯುಕ್ಕುತಿರೆ, ದೆಸೆ ಕೆರಳಿ ಸೊಕ್ಕುತಿರೆ
ತನ್ನ ನಾವಿಕರೆಲ್ಲಿ ಎಂತಿರುವರೋ ಎಂದು
ಏಕೆ ಬಾರರೊ ಎಂದು ನೌಕೆ ನಿರಪಾಯದಲಿ
ದಡಸೇರೆ ಸಾಕೆಂದು ಉಬ್ಬೆಗವ ಪಡುತಿಹನು || 10 ||
ಭೀಕರತರಂಗದೋರ್ದಂಡಂಗಳನು ಸುತ್ತು
ಬೀಸುತ್ತೆ ಹಾಸುತ್ತೆ ತಾಂಡವವನೆಸಗುತಿಹ
ವಿಕಟಸಾಗರ ನಿಶಾಚರನು ಬರಿಮಾನಸರ
ಹೊಸೆದು ಮುಕ್ಕದೆ ಬಿಡುವನೇ ? ನಮ್ಮ ನಾವೆಯನು
ಎಂತೊ ತಪ್ಪಿಸಿ ನಮ್ಮ ನಾಡತೀರಕೆ ತಂದು
ಎಂತೊ ಒಪ್ಪಿಸಿ ಜೀವವುಳಿಸಿ ಬಂದರೆ ಸಾಕು
ನಾವಿಕರು; ಬೇಹಾರವಿಂದಿವರ ಜೀವನವ
ಸಾಗರದನಂತ ಜೀವನಕೊಪ್ಪಿಪಂತಹದೆ ? || 11 ||
ಅರಿಯನೇ ಇವರಳಲು ಮನದ ಕಣ್ಣಿಗೆ ಬಣ್ಣ
ಬರೆದಂತೆ ಕಾಣುವುದು; ದೂರದೂರದ ನಾಡು
ಕಣ್ಣೆತ್ತದಿಹ ನಾಡು; ಭಾವಿಸುವೆನೆಂದರೂ
ಭಾವನೆಗೆ ಬಾರದಿಹ ಬಗೆಬಗೆಯ ವೇಷಗಳ
ಬಗೆಬಗೆಯ ನಡೆವಳಿಯ ಮಾತುಗಳ ರೀತಿಗಳ
ಹೆತ್ತ ತಾಯ್ನಾಡುಗಳನರಸಿ ನಡೆದರು ಬಡವ-
ರೆಷ್ಟು ನೊಂದರೊ! ಎಷ್ಟು ಕಷ್ಟಗಳ ಪಡೆದರೋ
ಹೃದಯಗಳ ಬಿಚ್ಚಲಿಹ ಮಾತುಗಳು ಬಾರದೇ || 12 ||
ತನ್ನ ತಾಯ್ಮೊಲೆ ಬಿಟ್ಟು ಬೇರೆಮೊಲೆಯುಣಬಯಸಿ
ಹಾರುತಿಹ ಕಿರಿಯ ಕರುಗಳ ತೆರದೆ ತಮ್ಮೂರ
ಬಿಟ್ಟು ಪರದೇಶಗಳಿಗೈದಿದವರನು ನೋಡಿ
ಒದೆದುವೋ ಹಾಯ್ದುವೋ ಪರರ ಸಾಮ್ರಾಜ್ಯಗಳು !
ಎಂದು ಹಲುಬುತ್ತಿರಲು ಮನವು ಕತ್ತಲಿಸಿದು
ದುಃಖಶತಧಾರೆ ಹೃದ್ಭಿತ್ತಿಯನು ಹೊಡೆಹೊಡೆದು
ಕೆಡೆಯಿಸಿತು; ಹಾಳ್ಬಿದ್ದ ಮನೆಯಾದುದವನ ಮನ
ನಿರ್ಜೀವ ಪುತ್ರಿಕೆಯ ತೆರನಿರ್ದುದವನ ತನು || 13 ||
ತಾವಾಗಿ ಬರಲಿಲ್ಲ ತಮ್ಮ ನೆಳಲುಗಳಾಗಿ
ಬಂದರಾ ನಾವಿಕರು ಪೊಳ್ಳಾದ ಬಯಕೆಗಳ
ಕತ್ತಲೆಯ ಕವಿಯಿಸಲು ಪಾಂಡ್ಯಸನ್ನಿಧಿಗಾಗಿ
ಬಿರುಗಾಳಿ ಸಾಗರತರಂಗಗಳ ಕಲಕಾಡೆ
ಕಡಲ ತೆರೆಗಳ ರಭಸಕಿಮ್ಮಡಿಯ ಸಂವೇಗ
ದಿಂದಲೆದೆ ಡವಡವನೆ ಹೊಡೆದಪ್ಪಳಿಸಸುತಿರ
ಬಾಯಿಯಿಂದೊಂದು ಮಾತಿಲ್ಲ ಬರಿ ಮೌನವೇ
ನಮ್ಮ ಸಾವನು ನಾವೆ ಸಾರಲೇಂ ಪೋಗುವೆವು ?
ಎಂಬ ಚಿಂತೆಯ ಮುಸುಕ ಹೊದೆದ ನಾವಿಕರವನ
ಪಾದತಲಕೈದಿದರು ಮೌನದಲಿ ಕೈಮುಗಿದು
ವಾಚಾಲಮೌನದಲಿ ಹೃದ್ಗತವ ತಿಳಿಸುತಿರೆ
ಕುಶಲವನು ಕೇಳ್ದ ಪಾಂಡ್ಯನಲಿ ಬಿನ್ನೈಸಿದರು:- || 14 ||
“ನಿಮ್ಮ ನುಡಿ ಸಂತಸದ ಕಂಬನಿಗಳಿಂದೊದ್ದೆ
ಎಮ್ಮ ಬಗೆ ದುಗುಡಗಳ ಕಹಿಯ ಬೋನದ ಮುದ್ದೆ
ಒಡೆಯ ನಿನ್ನಯ ಕರುಣೆ ಅದರೆಮ್ಮ ನೆನಪುಗಳು
ಪರದೇಶವಾಸದಲಿ ನಮ್ಮ ದಾರಿಗೆ ಬೆಳಕ
ಬೀರಿದುವು; ಬೇಸರೊಳು ಶಕ್ತಿಯೊಣಗಿರಲದಕೆ
ಚೈತನ್ಯಬಿಂದುಗಳ ಸಿಂಪಿಸಿದುವವೆ ನಮ್ಮ
ಬಯಕೆಯಂಕುರದಂತೆ ಮೂಡಿಬಹವಲ್ಲವೇ ?
ಬಾಳ ನನೆಕೊನೆಯಂತೆ ಅರಳುತಿಹವಲ್ಲವೇ ? || 15 ||
ಎಮ್ಮ ಜೀವದ ಬೇರೆ ನಿನ್ನ ಪಾದವ ಸುತ್ತಿ
ಸಿಕ್ಕಾಗಿರಲು ಸಾವು ಬರಿಯೊಡಲನೇ ಕಂಡು
ಎಮ್ಮ ಬದುಕಿಸಿತು; ಬದುಕಿನೊಳು ಪುರುಷಾರ್ಥವೇ-
ನೆಂಬ ನುಡಿಯಾಯ್ತಿಂದು; ಅಜ್ಞಾತರಾಜ್ಯದಲಿ
ಮರುಭೂಮಿಗಳ ಮೇಲೊ ಹಿಮದ ಹಲಗೆಯ ಮೇಲೊ
ಜ್ವಾಲೆಯನು ಕಾರುತಿಹ ಬೆಟ್ಟಗಳ ಶಿಖರದೊಳೊ
ಕಡಲ ತೆರೆ ಬಾಯ್ಸುಳಿಗಳಲ್ಲೊ ಎಲ್ಲಾದರೂ
ಮೃತ್ಯುವೆಮ್ಮನು ಕೂಡಲಾರ ದುದು ಜೀಯ !” || 16 ||
ಬಗೆಯ ಬಿತ್ತರಿಸದೇ ವಾಗ್ಜಾಲದಲಿ ಮರಸಿ
ಕಣ್ಣೀರ ಸುರಿಸುವರ ಉಬ್ಬೆಗವ ಕಂಡವನ
ಮನವನಿಕ್ಕುಳಿಗೊಂಡ ಸಂದೇಹಗಳು ಮಾಯ್ದು
ಘೋರಗಂಡಾಂತರದಿ ಪುಡಿಯಾದರಿವರೆಂಬ
ನಿಶ್ಚಯವೆ ಮೇಲಾಯ್ತು; “ನಾವಿಕರೆ ! ಸೇವಕರೆ !
ಎನ್ನ ಹಲಜೀವಗಳೆ ! ಎನ್ನುಸುರೆ ನಿಮ್ಮುಸಿರು
ಮಾಜದುಸಿರಿರಿ ! ಎನ್ನ ಸೇವೆಯುರುಳಲಿ ಸಿಲುಕಿ
ನನ್ನಿಯನು ಮುಚ್ಚದಿರಿ !” ಎನಲೊರೆದರವರಿಂತು:- || 17 ||
“ನಮ್ಮ ಜೀವನವರಸನೆರೆದು ಬೆಳೆಸಿದ ಕರ್ಮ
ವಲ್ಲಿ ಕುಡಿಮುರುಟಿ ವಿಫಲತೆ ಹೊಂದುವುದ ಕಾಂಬ
ಬಾಳೆ ಸಾವಲ್ಲವೇ ? ನಡೆಹೆಣಗಳಂದದಲಿ
ಬಂದಿಹೆವು ನಿಮ್ಮಡೆಗೆ ಅಕೃತಾರ್ಥರಾಗುತ್ತೆ
ಊರೂರ ಹೊನ್ನರಾಸಿಗಳ ತುಂಬುತೆ ಬೀಗಿ
ಬಂತು ನಮ್ಮಯ ದೋಣಿ ನಾಗಾಲೊಳೋಡುತ್ತೆ
ಸೊಕ್ಕ ಹೋರಿಯ ತೆರದೆ; ದಡವೊಂದಲಿರೆ ನಿಮಿಷ
ದೊಪ್ಪನಲ್ಲಿಯೆ ನಿಂತು ಹಿಂದು ಮುಂದೋಡದಿದೆ ! || 18 ||
ಯಂತ್ರವನು ತಿರುಗಿಸಲು ಅಂಕುಶಾಘಾತಕ್ಕೆ
ಮಣಿಯದಿಹ ಮದ್ದಾನೆ ಮುಗ್ಗರಿಸಿ ಬೀಳ್ವಂತೆ
ನಾವೆ ನಿಂತುದು; ದೊಡ್ಡ ಹೊರಜಿಗಳ ಕಟ್ಟಿತ್ತೆ
ದಡಕೆಳೆಯಲೆಂದು ಬಹುಯತ್ನಗಳ ಮಾಡಿದೆವು
ಮೂದಲಿಕೆ ಬರಲಿಲ್ಲವದಕೆ; ದೆವ್ವಕೆ ಹರಕೆ
ಹೇಳಿದೆವು ಕದಲಲಿಲ್ಲದು; ಕಣ್ಣನೀರ್‍ಧಾರೆ
ಸುರಿಸಿ ಕಡಲಿನ ನೆರೆಯನುಕ್ಕಿಸುತೆ ನಾವೆಯನು
ಎತ್ತಲೊದ್ದಾಡಿದೆವು; ಫಲವಿಲ್ಲವನಿತರಲಿ || 19 ||
“ಕಡೆಂಗೋಡ್ಲು ಅವರು ಈ ಕಥನಕವನದಲ್ಲಿ ಕುಂಡೋದರ ಭೂತ ಕೇಳುವ ನರಬಲಿಗೆ ಮತ್ತು ನರಬಲಿಯ ಕಲ್ಪನೆಯಲ್ಲಿ ಅನುಭವಕ್ಕೆ ಹುಟ್ಟುವ ಮೃತ್ಯುವಿನ ಭೀಕರತೆಯ ಬಗೆಗೆ ಹೆಚ್ಚು ಒತ್ತುಕೊಟ್ಟಿದ್ದಾರೆ” ಎಂದು ಪ್ರೊ. ಬಿ. ಎ. ವಿವೇಕ ರೈ ಗುರುತಿಸಿದ್ದಾರೆ. (ಕಡೆಂಗೋಡ್ಲು ಸಾಹಿತ್ಯ. 1987)
“ತಂದೆ ಮಕ್ಕಳಿಗಾಗಿ, ಹೆಣ್ಣು ಪುರುಷನಿಗಾಗಿ
ಬಂಧು ಬಂಧುವಿಗಾಗಿ ದೇಹವನು ಸವೆಯಿಸರೇ”
ಎಂಬ ಅವರ ಚಿಂತನೆಯೇ ಭೂತಾಳ ಪಾಂಡ್ಯದಲ್ಲಿ ಬಗೆಬಗೆಯಾಗಿ ಅಭಿವ್ಯಕ್ತವಾಗಿದೆ ಎಂದು ರೈಗಳು ಸರಿಯಾಗಿ ಗುರುತಿಸಿದ್ದಾರೆ.
ಕಡೆಂಗೋಡ್ಲು ಶಂಕರ ಭಟ್ಟರು ಈ ಕಥನಕವನದಲ್ಲಿಯೂ ಇತರ ಕೃತಿಗಳಲ್ಲಿಯೂ ರಸಭಾವಗಳ ಪುಷ್ಟಿಗೆ ಗಮನ ನೀಡಿದ್ದಾರೆ; ಕಾವ್ಯ ಕರ್ಮದಲ್ಲಿ ಭಾರತೀಯ ಕಾವ್ಯ ಪರಂಪರೆಯ `ಮಾರ್ಗ’ವನ್ನು ದುಡಿಸಿಕೊಂಡು ಆಧುನಿಕ ಯುಗದ ಸಂವೇದನೆಯನ್ನು ಕೊಟ್ಟಿದ್ದಾರೆ.
ಕತೆಗಳನ್ನು ಬದಲಾಯಿಸದೆ ಪಾತ್ರಗಳ ಒಳತೋಟಿಯನ್ನು ಅನುಭವಕ್ಕೆ ತಂದುಕೊಡುವ ಅವರ ರೀತಿಯು ಸಾಂಪ್ರದಾಯಿಕ ಕಾವ್ಯ ಮಾದರಿ ಮತ್ತು ಆಧುನಿಕ ಸಂವೇದನೆಗಳನ್ನು ಮೇಳೈಸಿರುವುದರ ಸೂಚನೆ. ಹೀಗಾಗಿ ಶಂಕರ ಭಟ್ಟರು ನವೋದಯ ಘಟ್ಟದ ಬಹುಮುಖ್ಯ ಕವಿಯಾಗಿದ್ದಾರೆ. “ಕಡೆಂಗೋಡ್ಲು, ಬೇಂದ್ರೆ, ಕುವೆಂಪು – ಈ ಮೂವರು ಹೊಸಗನ್ನಡದ ಕವಿರತ್ನತ್ರಯರೆಂದು” ಅಮ್ಮೆಂಬಳ ಶಂಕರನಾರಾಯಣ ನಾವಡರು ಅವರ ಬಗ್ಗೆ ಹೇಳಿದ್ದಾರೆ.
ಕತೆಗಾರ – ನಾಟಕಕಾರ – ಕಾದಂಬರಿಕಾರ
ವರ್ಗ ಶೋಷಣೆ ಇತ್ಯಾದಿ ವಸ್ತುಗಳನ್ನು ಧರಿಸುವ ಶಕ್ತಿಯಿಲ್ಲ ಎಂದು ಅವರಿಗೆ ಅನಿಸಿದಾಗ ಅವರು ಸಣ್ಣಕತೆಯ ಮಾಧ್ಯಮವನ್ನು ಬಳಸಿದ್ದಾರೆ. ಅವರ ‘ಅದ್ದಿಟ್ಟು’ (ಸ್ತ್ರೀಶೋಷಣೆ), ‘ದುಡಿಯುವ ಮಕ್ಕಳು’ (ವರ್ಗ ತಾರತಮ್ಯ; ವರ್ಗಾಧಾರಿತ ಶೋಷಣೆ) ಮತ್ತು ‘ಚೂರಿಯ ಕಥೆ’ (ಕೋಮು ಸಾಮರಸ್ಯದ ರಾಜಕೀಯ ಪ್ರಜ್ಞೆ) ಈ ಬಗೆಯ ಮುಖ್ಯ ಕತೆಗಳಾಗಿವೆ.
ಕಡೆಂಗೋಡ್ಲು ಶಂಕರ ಭಟ್ಟರ ‘ಅದ್ದಿಟ್ಟು’ ಎನ್ನುವುದು ಕನ್ನಡದ ಕ್ಲಾಸಿಕ್ ಕತೆಗಳಲ್ಲಿ ಒಂದು. ಹೆಣ್ಣಿನ ಅಂತರಂಗವನ್ನು, ಹೆಣ್ಣಿನ ಬದುಕನ್ನು ಅಷ್ಟು ಒಳ-ಅರಿವಿನಿಂದ ಚಿತ್ರಿಸಿದ ಬೇರೊಂದು ಕೃತಿ ಕನ್ನಡದಲ್ಲಿ ಇರಲಾರದು ಎನ್ನುವಷ್ಟು ಅದು ರಸಾರ್ದ್ರವಾಗಿದೆ. ‘ದೊಡ್ಡಣ್ಣʼ, ‘ಹೊಡೆಯುವ ಗಡಿಯಾರ’ ಮುಂತಾದ ಕೆಲವು ಕತೆಗಳು ಗಮನಾರ್ಹವಾಗಿವೆ. ಅವರ ಮೂರು ಸಂಕಲನಗಳು ಜೀವಿತಾವಧಿಯಲ್ಲಿ ಪ್ರಕಟವಾಗಿದ್ದವು.
ಕಡೆಂಗೋಡ್ಲು ಅವರು ಸುಮಾರು 15 ನಾಟಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಪೌರಾಣಿಕ ಕಥಾನಕಗಳನ್ನು ಹೊಸಬೆಳಕಿನಲ್ಲಿ ನೋಡುವ ಪ್ರಯತ್ನ ಕಾಣುತ್ತದೆ. ರಸಪೋಷಣೆಗೂ, ಪಾತ್ರ ಪೆಪೋಷಣೆಗೂ ಬೇಕಾದ ಆವರಣಗಳನ್ನು ನಿರ್ಮಿಸುವುದರಲ್ಲಿ ಅವರು ಸೋತ ಕಾರಣ ಅವರ ನಾಟಕಗಳು ಅಷ್ಟು ಮುಖ್ಯವಲ್ಲ ಎಂಬ ಅಭಿಪ್ರಾಯ ವಿಮರ್ಶಕರದು.
ಕಡೆಂಗೋಡ್ಲು ಅವರ ನಾಲ್ಕು ಕಾದಂಬರಿಗಳೆಂದರೆ, ‘ಧೂಮಕೇತು’ [1936], ‘ದೇವತಾ ಮನುಷ್ಯ’ [1946], ‘ಲೋಕದ ಕಣ್ಣು’ [1948] ಮತ್ತು ‘ಈ ಪೀಳಿಗೆ’ [ಮರಣೋತ್ತರ ಪ್ರಕಟಣೆ]. ‘ಲೋಕದ ಕಣ್ಣು’ ಪತ್ರಿಕೋದ್ಯಮದ ಮೂಲಕ ಸಮಾಜ ಶಿಕ್ಷಣ ಕೊಡುವ ಕಥಾವಸ್ತುವನ್ನುಳ್ಳದ್ದು. ಈ ಪೀಳಿಗೆ ಕಾದಂಬರಿಯಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿ ಕುಟುಂಬ ಜೀವನದ ಮೇಲೆ ಮಾಡಿದ ಪರಿಣಾಮವನ್ನು ಗ್ರಹಿಸಲು ಪ್ರಯತ್ನಿಸುವಂಥದ್ದು. ಈ ಕಾದಂಬರಿ ಅಪೂರ್ಣವಿರಬೇಕು. ಅವರ ಕಾದಂಬರಿಗಳು ಅವರ ವೈಚಾರಿಕ ನಿಲುವನ್ನು ಹೇಳುವ, ಅವರ ಚಿಂತನೆಯಿಂದ ಮೂಡಿದ ಕಾದಂಬರಿಗಳು. ಅವುಗಳಿಗೆ ಹೆಚ್ಚಿನ ಮಹತ್ವವನ್ನು ಸಾಹಿತ್ಯಲೋಕ ಕೊಟ್ಟಿಲ್ಲ.
ಲಲಿತ ಪ್ರಬಂಧ, ವೈಚಾರಿಕ ಬರಹ, ಸಂಪಾದಕೀಯಗಳು, ಪುಸ್ತಕ ವಿಮರ್ಶೆ ಹೀಗೆ ಅವರ ಗದ್ಯ ಬರವಣಿಗೆಯ ಹರಹು ಬಹಳ ದೊಡ್ಡದಾಗಿದೆ.
ಪತ್ರಿಕೋದ್ಯಮಿ
ಕಡೆಂಗೋಡ್ಲು ಶಂಕರ ಭಟ್ಟರು ಪತ್ರಿಕೋದ್ಯಮಿಯಾಗಿ, ಮೊದಲು ಮಂಗಳೂರಿನ ‘ರಾಷ್ಟ್ರ ಬಂಧು’ ವಾರಪತ್ರಿಕೆಯ ಮೂಲಕ ಮತ್ತು ನಂತರ ತಮ್ಮದೇ ಆದ ‘ರಾಷ್ಟ್ರ ಮತ’ ಪತ್ರಿಕೆಯ ಮೂಲಕ ನಲುವತ್ತು ವರ್ಷಗಳ ಕಾಲ ರಾಜಕೀಯವನ್ನು, ಜನಜೀವನವನ್ನು ವಿಮರ್ಶಿಸುತ್ತಾ, ಮಾರ್ಗದರ್ಶನ ನೀಡುತ್ತಾ ಬಂದರು. ಈ ಅವಧಿಯಲ್ಲಿ ಅವರು ಜಿಲ್ಲೆಯ ಹಲವಾರು ಯುವ ಸಾಹಿತಿಗಳನ್ನು ಬೆಳಕಿಗೆ ತಂದು ಅವರನ್ನು ಪ್ರೋತ್ಸಾಹಿಸಿ ಬೆಳೆಸಿದುದು ಇದುವರೆಗೆ ಯಾರೂ ಗುರುತಿಸದ ಸಂಗತಿಯಾಗಿದೆ. ಹೀಗೆ ಕಡೆಂಗೋಡ್ಲು ಶಂಕರ ಭಟ್ಟರಿಂದ ಪ್ರೋತ್ಸಾಹ ಪಡೆದ ಒಬ್ಬ ಮುಖ್ಯ ಸಾಹಿತಿಯೆಂದರೆ ಉಡುಪಿಯ ಸಾಂತ್ಯಾರು ವೆಂಕಟರಾಜರು.
‘ರಾಷ್ಟ್ರ ಬಂಧು’ ಮತ್ತು ‘ರಾಷ್ಟ್ರಮತ’ ಪತ್ರಿಕೆಗಳಲ್ಲಿ ಅವರ ಸಂಪಾದಕೀಯ ಮತ್ತು ‘ಅಲ್ಲಿಷ್ಟು ಇಲ್ಲಿಷ್ಟು’ ಎಂಬ ಸುತ್ತುನೋಟದ ಹರಿತವಾದ ವರದಿಗಳು ಜನಪ್ರಿಯವಾಗಿದ್ದವು. ಪತ್ರಿಕಾ ಭಾಷೆಗೆ ಅವರು ನೀಡಿದ ಕೊಡುಗೆಯೂ ಗಣ್ಯವಾದದ್ದು.
ಕಾಲೇಜಿನಿಂದ ನಿವೃತ್ತರಾದ ಮೇಲೆ ಕಡೆಂಗೋಡ್ಲು ಶಂಕರ ಭಟ್ಟರು ಮಂಗಳೂರು ತೊರೆದು ತಮ್ಮ ಹಳ್ಳಿಯ ಮನೆಯಲ್ಲಿಯೇ ವಾಸಿಸುತ್ತಿದ್ದರು. ಪತ್ರಿಕೆಯ ಕೆಲಸಕ್ಕೆ ಮಂಗಳೂರಿಗೆ ಬಸ್ಸಿನಲ್ಲಿ ಬಂದು ಹೋಗುತ್ತಿದ್ದರು. ಹಾಗೆ 1968 ರಲ್ಲಿ ಒಂದು ದಿನ ‘ರಾಷ್ಟ್ರಮತ’ದ ಮುಂದಿನವಾರದ ಸಂಪಾದಕೀಯವನ್ನು ಹಿಡಿದುಕೊಂಡು ಬಸ್ಸು ಹತ್ತಿದವರು ಬಸ್ಸಿನಲ್ಲಿಯೇ ಹೃದಯಸ್ಥಂಭನವಾಗಿ ಕೊನೆಯುಸಿರೆಳೆದರು. ಬಸ್ಸನ್ನು ಅವರ ಊರಿಗೆ ಹಿಂದಿರುಗಿಸಿ, ಪಾರ್ಥಿವ ಶರೀರವನ್ನು ಅವರ ಮನೆಗೆ ಸಾಗಿಸಲಾಯಿತು.
ಕಡೆಂಗೋಡ್ಲು ಅವರ ಕಾವ್ಯ ಶಕ್ತಿ ಅವರ ಪತ್ರಿಕಾ ವ್ಯವಸಾಯದಿಂದಾಗಿ ಕುಂದಿತೆಂದೇ ಹೆಚ್ಚಿನವರು ಅಭಿಪ್ರಾಯ ಪಡುತ್ತಾರೆ. ಅವರಿಗೂ ಅದರ ಅರಿವಿತ್ತು. ಆದರೆ ಅದನ್ನು ತೋರಿಸಿಕೊಳ್ಳದೆ ತನಗೆ ಹೇಳಬೇಕಾದದ್ದನ್ನು ಹೇಳಿ ಆಗಿದೆ ಎಂದು ಹೇಳುತ್ತಿದ್ದರು. ಆದರೆ ಅವರು ಪತ್ರಿಕಾ ವ್ಯವಸಾಯ ಮಾಡದಿದ್ದರೆ, ಅಥವಾ ತಮ್ಮ ಹಳ್ಳಿ ಪರಿಸರದಲ್ಲಿ ಇನ್ನಷ್ಟು ವರ್ಷ ಬದುಕಿ, ಬರೆದಿದ್ದರೆ ಇನ್ನಷ್ಟು ಮುಖ್ಯವಾದ ಕಾವ್ಯ ಕೃತಿಗಳನ್ನು ನೀಡುತ್ತಿದ್ದರು. ಊಹನೆ ಬಿಟ್ಟು ವಾಸ್ತವವನ್ನು ನೋಡಿದರೂ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕಡೆಂಗೋಡ್ಲು ಶಂಕರ ಭಟ್ಟರ ಕೊಡುಗೆ ಮಹತ್ವದ್ದಾಗಿದೆ ಎನ್ನುವುದು ಎಲ್ಲರೂ ಒಪ್ಪಿದ ಮಾತಾಗಿದೆ.
*****
ಕಡೆಂಗೋಡ್ಲು ಇತರ ಕೃತಿಗಳು
ನಾಟಕಗಳು :
1. ಉಷೆ [1927]
2. ಹಿಡಿಂಬೆ [1927]
3. ವಿರಾಮ – ಏಕಾಂಕ ನಾಟಕ
4. ಯಜ್ಞ ಕುಂಡ – ಏಕಾಂಕ ನಾಟಕ
5. ಅಜಾತಶತ್ರು – ಏಕಾಂಕ ನಾಟಕ
6. ಗುರು ದಕ್ಷಿಣೆ [1953]
7 ರಿಂದ 15 – ಕಡೆಂಗೋಡ್ಲು ಸಾಹಿತ್ಯ ಸಂಪುಟದಲ್ಲಿರುವ ನಾಟಕಗಳು.
ಕಾದಂಬರಿ :
1 ಧೂಮಕೇತು [1936]
2. ದೇವತಾ ಮನುಷ್ಯ [1946]
3. ಲೋಕದ ಕಣ್ಣು [1948]
4. ಈ ಪೀಳಿಗೆ [ಕಡೆಂಗೋಡ್ಲು ಸಾಹಿತ್ಯ ಸಂಪುಟದಲ್ಲಿದೆ]
ಸಣ್ಣಕಥಾ ಸಂಕಲನಗಳು :
1. ಗಾಜಿನ ಬಳೆ [1947]
2. ಹಿಂದಿನ ಕಥೆಗಳು [1949]
3. ದುಡಿಯುವ ಮಕ್ಕಳು [1959]
4. ಕಡೆಂಗೋಡ್ಲು ಆಯ್ದ ಕತೆಗಳು [1990]
ಸಾಹಿತ್ಯ ವಿಮರ್ಶೆ :
ವಾಙ್ಮಯ ತಪಸ್ಸು [1967]
ಮರಣೋತ್ತರ ಗ್ರಂಥಗಳು :
1. ಕಡೆಂಗೋಡ್ಲು ಸಾಹಿತ್ಯ [1987]
ಮಂಗಳೂರು ವಿಶ್ವವಿದ್ಯಾಲಯ ಪ್ರಕಟಿಸಿದ ಸಮಗ್ರ ಅಪ್ರಕಟಿತ ಕೃತಿಗಳು.
2. ಕಡೆಂಗೋಡ್ಲು ಸಮಗ್ರ ಸಾಹಿತ್ಯ – 6 ಸಂಪುಟಗಳು (ಸಮಗ್ರ)
ಗೋವಿಂದ ಪೈ ಸಂ. ಕೇಂದ್ರ, ಉಡುಪಿ
ಗ್ರಂಥ ಋಣ:
1. ವಾಙ್ಮಯ ಆರಾಧಕ ಕಡೆಂಗೋಡ್ಲು. ಡಾ. ಸುನೀತಿ ಉದ್ಯಾವರ. ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ. ಮುಂಬಯಿ.2003.
2. ಕಡೆಂಗೋಡ್ಲು ಸಾಹಿತ್ಯ. ಸಂ. ಪ್ರೊ. ಬಿ.ಎ. ವಿವೇಕ ರೈ. ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು. 1987.
3. ಕಡೆಂಗೋಡ್ಲು ಸಮಗ್ರ ಸಾಹಿತ್ಯ – 6 ಸಂಪುಟಗಳು. ಸಂ. ಪ್ರೊ.ಎಂ.ರಾಮಚಂದ್ರ, ಡಾ.ಪಾದೇಕಲ್ಲು ವಿಷ್ಣು ಭಟ್ಟ, ಪ್ರೊ.ಹೆರಂಜೆ ಕೃಷ್ಣಭಟ್ಟ. ಗೋವಿಂದ ಪೈ ಸಂ. ಕೇಂದ್ರ, ಉಡುಪಿ. 2003.
ಕೃತಜ್ಞತೆಗಳು:
1. ಡಾ. ಕಡೆಂಗೋಡ್ಲು ಈಶ್ವರ ಭಟ್
2. ಪ್ರೊ. ಎ. ವಿ. ನಾವಡ
3. ರಾಷ್ಟ್ರಕವಿ ಗೋವಿಂದಪೈ ಸಂಶೋಧನ ಕೇಂದ್ರ, ಉಡುಪಿ.
4. ಶ್ರೀಮತಿ ಸವಿತಾ ಶಾಂತಪ್ರಿಯ
5. ಕಾಂತಾವರ ಕನ್ನಡ ಸಂಘ.
ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82.