ತನ್ನ ಮಗಳು ಕಣ್ಣೆದುರಿಗೆ ಅಳುತ್ತಿರುವುದನ್ನು ಕಂಡೂ ಯಾವುದೇ ವಿಕಾರಗಳನ್ನು ಹರಿಸದೆ ಮೌನದಿಂದ ಶೂನ್ಯವನ್ನು ದಿಟ್ಟಿಸುತ್ತಾ, ಅಜ್ಜನನ್ನು ತಬ್ಬಿಕೊಂಡ ಮಗಳನ್ನು ಮತ್ತು ಅಪ್ಪ ಶೇಖರಪ್ಪಯ್ಯರನ್ನು ನಿರ್ಭಾವದಿಂದ ನೋಡುತ್ತಿದ್ದ. ಶೇಖರಪ್ಪಯ್ಯರ ಹೊಟ್ಟೆ ಹೊತ್ತಿಯೇ ಹೋಯಿತೇನೋ ಎನ್ನುವಂತೆ ಎಡಗೈಯಿಂದ ಹೊಟ್ಟೆಯನ್ನು ಹಿಡಿದು ಹಿಚುಕುತ್ತಾ ಸವರುತ್ತಾ, ಮೊಮ್ಮಗಳನ್ನು ಬಿಗಿದಪ್ಪಿಕೊಂಡು ಮಗನೇ… ಸೂರ್ಯ…. ನಾನು ಕಣೋ ಅಪ್ಪಾ… ಮಾತಾಡೋ, ಮಾತಾಡು ಕಂದ ಎಂದು ಸೂರ್ಯನಿಗೆ ಹೇಳುತ್ತಿದ್ದರೆ, ಮಗಳನ್ನೇ ದಿಟ್ಟಿಸುತ್ತಿದ್ದ ದೃಷ್ಟಿಯನ್ನು ಅಪ್ಪನತ್ತ ನಿರ್ಭಾವುಕನಾಗಿ ತಿರುಗಿಸಿದ ಸೂರ್ಯ ಕಣ್ಣು ಮುಚ್ಚದೆ ಅಪ್ಪನನ್ನು ಮತ್ತು ಮಗಳನ್ನು ನೋಡುತ್ತಲೇ ಇದ್ದ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸಂತೋಷ್ ಅನಂತಪುರ ಕತೆ “ಗಂಧ”
ಹಿಂದಿನ ರಾತ್ರಿಯ ಓದು ಅದೆಷ್ಟು ತಲೆ ಕೆಡಿಸಿತ್ತೆಂದರೆ, ಕಥೆಯ ತುಂಬಾ ಹಬ್ಬಿದ್ದ ನೀಲಗಿರಿ ತೋಪಿನ ಘಾಟನ್ನು ಹಾಸಿಗೆಯಿಂದ ಏಳುತ್ತಲೇ ಆಘ್ರಾಣಿಸಲು ತೊಡಗಿದ್ದೆ. ಅದರ ವಾಸನೆ ನನಗರಿವಿಲ್ಲದೆ ಇಂದ್ರಿಯಕ್ಕೆ ತಟ್ಟಿ ಮಸ್ತಿಶ್ಕದಲ್ಲಿ ಸಣ್ಣಗಿನ ಕಂಪನವನ್ನೂ ಸೃಷ್ಟಿಸಿಬಿಟ್ಟಿತ್ತು. ಹಟ್ಟಿ-ಸೆಗಣಿ-ಹಾಲು ಮತ್ತು ಅಮ್ಮ ಧಡಕ್ಕನೆದ್ದು ಬಂದು ಎದುರ-ಬದುರ ಕುಳಿತಷ್ಟೇ ತೀವ್ರವಾಗಿ ಮನಸ್ಸು ಹಿಂದಕ್ಕೆ ಓಡಿತು. ಬದುಕನ್ನು ಕಟ್ಟಿಕೊಳ್ಳಲು ಎರಡು ದನ ಮತ್ತೊಂದು ಎಮ್ಮೆಯನ್ನು ಅಮ್ಮ ಸಾಕಿದ್ದಳು. ಮಳೆಗಾಲದಲ್ಲಿ ಒಂದಲ್ಲ ಒಂದು ನಂಜು, ಗಾಯಗಳು ಅವುಗಳನ್ನು ಹೈರಾಣಾಗಿಸುತ್ತಿದುದರ ಜೊತೆಗೆ ಅಪ್ಪ-ಅಮ್ಮನಿಗೂ ಆತಂಕವನ್ನು ನೀಡುತ್ತಿದ್ದುದು ಸುಳ್ಳಲ್ಲ. ಎಮ್ಮೆ-ದನಗಳ ಗಾಯದೊಳಗೆ ನುಸುಳಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಹುಳಗಳು, ಮತ್ತವುಗಳು ಕ್ರಮೇಣ ದನ-ಎಮ್ಮೆಯ ಗೋರಿ ಅಗೆಯಲು ತೊಡಗುವುದು, ಅಪ್ಪ ಪೇಟೆಗೆ ಹೋಗಿ ಪಶುವೈದ್ಯರನ್ನು ಕರ್ಕೊಂಡು ಬರುವುದು, ಆ ಜೋರು ಮಳೆಯಲ್ಲಿ ಅಪ್ಪ ಒದ್ದೆಯಾಗಿಕೊಂಡೇ ಡಾ. ಬಷೀರ್‌ಗೆ ಕೊಡೆ ಹಿಡಿಯುತ್ತಾ ಬರುತ್ತಿದ್ದುದು… ಛೇ ಏನಿವತ್ತು ಹೀಗೆ ? ನೆನಪುಗಳ ಭರಾಟೆ! ನನಗೆ ಇನ್ನೂ ನೆನಪಿದೆ, ಡಾ. ಬಷೀರ್ ಹಸು-ಎಮ್ಮೆಯ ಗಾಯದ ಭಾಗವನ್ನು ತೊಳೆದು ಮದ್ದನ್ನು ಹಾಕುವ ಮೊದಲು ಹಾಕುತ್ತಿದ್ದುದು ಇದೇ ನೀಲಗಿರಿಯ ಎಣ್ಣೆಯನ್ನು. ನೀಲಗಿರಿ ಎಣ್ಣೆ ಬಿದ್ದ ಕೂಡಲೇ ಅವಿತಿರುತ್ತಿದ್ದ ಹುಳಗಳು ಚಡಪಡಿಸುತ್ತಾ ಒಂದೊಂದಾಗಿ ಹೊರಬಿದ್ದು ಮುಕ್ತಿ ಪಡೆಯುತ್ತಿದ್ದುವು. ಅಪ್ಪ-ಅಮ್ಮ ಎಮ್ಮೆಯನ್ನು ಹಿಡಿದುಕೊಂಡಿದ್ದರೆ ವೈದ್ಯರ ಜೊತೆಯಲ್ಲಿ ನಾನು ಅದನ್ನೆಲ್ಲಾ ತದೇಕ ಚಿತ್ತದಿಂದ ನೋಡುತ್ತಿದ್ದೆ. ಆವಾಗಲೆಲ್ಲಾ ಡಾ. ಬಷೀರ್ ನೀಲಗಿರಿ ಎಣ್ಣೆಯನ್ನು ಎಮ್ಮೆ-ದನಗಳ ಗಾಯಕ್ಕೆ ನನ್ನಿಂದ ಹಾಕಿಸಿ, ಮುಂದೆ ನೀನೊಬ್ಬ ಡಾಕ್ಟರ್ ಆಗಬೇಕು ಎಂದು ನನ್ನಲ್ಲಿ ವೈದ್ಯ ಸಂಸ್ಕೃತಿಯ ಬಗ್ಗೆ ಆಸಕ್ತಿಯನ್ನು ಹುಟ್ಟಿಸಲು ಪ್ರಯತ್ನಿಸುತ್ತಿದ್ದರು.
ಬೆಂಗಳೂರಿನ ಈ ವರ್ಷದ ಚಳಿ ಮುದುಡಿಯೇ ನನ್ನಿಂದ ಎಲ್ಲಾ ಕಾರ್ಯಗಳನ್ನು ಮಾಡಿಸುತ್ತಿತ್ತು. ಅಷ್ಟು ತೀವ್ರವಾಗಿತ್ತು ಚಳಿ. ಶೀತ, ಜ್ವರ ಬಾರದಿರಲೆಂದು ಇಂದು ಬೆಳಗ್ಗೆ ಸ್ನಾನದ ಬಿಸಿ ನೀರಿನ ಬಕೆಟ್ಟಿಗೆ ಎರಡು ಹನಿ ನೀಲಗಿರಿ ಎಣ್ಣೆಯನ್ನು ಭಾನುಮತಿ ಬೆರೆಸಿದ್ದಳು. ಸ್ನಾನ ಮಾಡಿ ಬಂದವನಿಗೆ ಕಣ್ಣು ನಿದ್ದೆಯತ್ತ ಎಳೆಯುತ್ತಿತ್ತು. ರಾತ್ರಿ ಓದಿದ ಕಥೆಯಲ್ಲಿನ ದಟ್ಟ ನೀಲಗಿರಿ ತೋಪು ಅಕ್ಷರಶಃ ಇಂದು ಬೆಳಗ್ಗೆ ತನ್ನ ಗಾಢ ಗಂಧವನ್ನು ಹರಡಿ, ಚಳಿಗೆ ಹೊದ್ದು ಮಲಗಿದ್ದ ನೆನಪುಗಳನ್ನೆಲ್ಲಾ ಬಡಿದೆಬ್ಬಿಸುತ್ತಿರುವುದು ಮಾತ್ರವಲ್ಲ ಒಂದಿಷ್ಟು ಅಸಂಗತ ಅಧ್ಯಾಯಗಳನ್ನು ಸ್ಮೃತಿ ಪಟಲದ ಮುನ್ನೆಲೆಗೆ ತಂದು ನಿಲ್ಲಿಸಿದವು. ಅದರಲ್ಲಿ ಬಹು ಮುಖ್ಯವಾದದ್ದು ಗೆಳೆಯ ಸೂರ್ಯ ಅಲಿಯಾಸ್ ಸೂರ್ಯಪ್ರಸಾದ್. ಆ ಸೂರ್ಯ ಬೆಳಗಿದ್ದೂ ಅಸ್ತಮಿಸಿದ್ದೂ ಹೀಗೆ…
*****
ಸೂರ್ಯ… ಏನು ಯೋಚನೆ ಮಾಡ್ತಾ ಇದ್ದಿ? ಎಂದು ನಿರ್ಮಲ ಕೇಳಿದಾಗಲೇ ದೃಷ್ಟಿಯನ್ನು ಮನೆಯ ಕಿಟಕಿಯ ಹೊರಗೆ ಚಾಚಿ, ದೂರದ ಬೆಟ್ಟದ ತುದಿಯ ಜೊತೆಗೆ ದೃಷ್ಟಿ ಸಂಧಾನವನ್ನು ಏರ್ಪಡಿಸುತ್ತಿದ್ದ ಸೂರ್ಯ ಅಲಿಯಾಸ್ ಸೂರ್ಯ ಪ್ರಸಾದ್ ಥಟ್.. ಎಂದು ನಿರ್ಮಲಳತ್ತ ತಿರುಗಿದ್ದು. ಸರಿ, ನಾನು ಹೊರಡಬೇಕು ಆಫೀಸ್‌ಗೆ, ನೀನು ತಿಂಡಿ ತಿಂದು ಮಿಕ್ಕಿದ್ದನ್ನು ಫ್ರಿಜ್‌ನಲ್ಲಿಟ್ಟುಬಿಡು ಎಂದವಳೇ ತನ್ನ ಲ್ಯಾಪ್‌ಟಾಪ್ ಬ್ಯಾಗ್ ಅನ್ನು ಹೆಗಲಿಗೇರಿಸಿ, ಮೊಬೈಲ್ ಅನ್ನು ಕಿವಿಗಿ ತಾಕಿಸಿಕೊಂಡು ಕಾರಿನತ್ತ ನಿರ್ಮಲ ಹೊರಟಳು.
ಸೂರ್ಯನಿಗೆ ಬೆಳಗ್ಗಿನ ತಿಂಡಿಯನ್ನು ರುಚಿಗಟ್ಟಾಗಿ ಮಾಡಲಾಗಲಿಲ್ಲ. ಮನೆಯಿಂದ ಹೊರಡುವ ಮೊದಲು ಮಗಳು – ಮಡದಿಗೊಂದು ಬೆಚ್ಚನೆಯ ಅಪ್ಪುಗೆಯನ್ನೂ ನೀಡಲು ಮರೆತಿದ್ದ. ಅಪ್ಪನಿಗೆ ಫೋನಾಯಿಸದೆ ಅದೆಷ್ಟೋ ದಿನಗಳೇ ಆಗಿದ್ದವು. ‘ಅಮ್ಮ ಇಲ್ಲದ ಅವನ ಪಾಡು ಅದೆಷ್ಟು ದುರ್ಬಲ. ನನ್ನ ಜೊತೆಗಿರು ಬಾ ಎಂದು ಕರೆದರೆ, ಒಲ್ಲೆ ಮಗನೆ, ಇಲ್ಲೆ ಈ ಹಳ್ಳಿಯ ತೋಟದ ಮನೆಯಲ್ಲಿ ನನ್ನ ಪೂಜೆ, ಪುನಸ್ಕಾರಗಳೊಂದಿಗೆ ನನ್ನವರು ಎನ್ನಬಹುದಾದ ಬೆರಳೆಣಿಕೆಯ ಮನಸ್ಸುಗಳೊಂದಿಗೆ ಕನಸನ್ನು ನನಸಾಗಿಸಿ, ಮನಸ್ಸನ್ನು ಹಗುರವಾಗಿಸಿಕೊಳ್ಳುತ್ತಿದ್ದೇನೆ. ನೀನು ಚೆನ್ನಾಗಿರು. ಬೇಕಾದಾಗ ಬೆಂದಕಾಳೂರಿಗೆ ನಾನೇ ಬರುತ್ತೇನೆ ಮತ್ತೊಂದಿಷ್ಟು ಬೇಯಲುʼ ಎಂದು ತನ್ನ ಎಂದಿನ ಹಾಸ್ಯ ಧಾಟಿಯಲ್ಲಿ ತನ್ನ ಇಂಗಿತವನ್ನು ಹೊರ ಹಾಕಿದ್ದ. ಮೊಮ್ಮಗಳು ಸಹನಾ ಎಂದರೆ ಅಪ್ಪನಿಗೆ ಜೀವ. ನಿನ್ನನ್ನೂ ನಾನು ಹೀಗೆ ಆಡಿಸುತ್ತಿದ್ದೆ ಮಗನೇ. ಅಮ್ಮ ಇರಬೇಕಿತ್ತು ನೋಡು ಈಗ, ಅದೆಷ್ಟು ಖುಷಿ ಪಡುತ್ತಿದ್ದಳು ಎನ್ನುವುದನ್ನು ನಾನು ಊಹಿಸಬಲ್ಲೆ’ ಎಂದು ಹೇಳುತ್ತಾ ಮಂಜಾದ ಕಣ್ಣನ್ನು ಒರೆಸಿಕೊಂಡು ಮೊಮ್ಮಗಳನ್ನು ಮುದ್ದಾಡಿಸುತ್ತಿದ್ದ ಚಿತ್ರ ಸೂರ್ಯನ ಕಣ್ಣ ಮುಂದೆ ಸುಳಿದು ಹೋಯಿತು. ಸೂರ್ಯನ ಕೆಲಸ ಮತ್ತವನ ವಯೋಸಹಜ ಉಡಾಫೆಯು ಆತನ ಅಪ್ಪನನ್ನು ಗಂಭೀರವಾಗಿ ಸ್ವೀಕರಿಸದಂತೆ ಮಾಡಿದ್ದು ಒಂದು ಕಡೆಯಾದರೆ, ಇನ್ನೊಂದು ಕಡೆ ಮೂಲತಃ ಅಂತರ್ಮುಖಿಯಾದ ಸೂರ್ಯ ಅಭಿವ್ಯಕ್ತಿಸುವುದು ಬಹಳ ಕಡಿಮೆ. ಎಲ್ಲವೂ ತಿರುಗುವುದು, ಇಳಿಯುವುದು, ಏರುವುದೆಲ್ಲ ಆತನ ಆಂತರ್ಯದಲ್ಲಿ ಮಾತ್ರ. ಬಂಧವನ್ನು ಹಚ್ಚಿಕೊಳ್ಳುತ್ತಲೇ ಅದರಿಂದ ಕಳಚಿಕೊಂಡು ಬಿಡುತ್ತಿದ್ದ. ಯಾವುದೇ ಭಾರವನ್ನು ಹೆಗಲೇರಿಸಿಕೊಳ್ಳುತ್ತಿರಲಿಲ್ಲ. ಅಷ್ಟರಮಟ್ಟಿಗೆ ಭಾರಹೀನ ಬದುಕು ಅವನದ್ದಾಗಿತ್ತು.
ಸೂರ್ಯನ ಮನಸ್ಸು ಹಿಂದಿಂದಕ್ಕೆ ಓಡತೊಡಗಿತು; ಚಿಕ್ಕಂದಿನಲ್ಲಿ ಮನೆಯ ವಾತಾವರಣವೂ ಹಾಗೆಯೇ ಇದ್ದಿತ್ತು. ಕಿತ್ತು ತಿನ್ನುವ ಬಡತನ. ತುಂಡು ಭೂಮಿಯಲ್ಲಿನ ಉತ್ಪತ್ತಿಯು ಯಾವುದೇ ಸುಖದ ಸುಪ್ಪತ್ತಿಗೆಗೂ ಸಾಕಾಗುತ್ತಿರಲಿಲ್ಲ. ಪೂಜೆ-ಗೀಜೆ ಎಂದು ಒಂದಷ್ಟು ದಕ್ಷಿಣೆಯು ಅಪ್ಪನಿಗೆ ಸಿಗುತ್ತಿತ್ತು. ೪೦ ಮರಗಳಿರುವ ತೆಂಗಿನ ತೋಟವು ಅಲ್ಲಿಂದಲ್ಲಿಗೆ ನಮ್ಮನ್ನು ಸರಿತೂಗಿಸುತ್ತಿತ್ತು. ಅಮ್ಮ ಸಾಕಿದ ಗೌರಿಯ ಹಾಲಿನಿಂದ ತುಪ್ಪ, ಮೊಸರು, ಮಜ್ಜಿಗೆಯನ್ನು ಮಾರಿ ಬಂದ ದುಡ್ಡಲ್ಲಿ ನಮ್ಮ ಶಿಕ್ಷಣ. ಅಣ್ಣನ ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ದುಡ್ಡು ಹೊಂದಿಸಲು ಅಪ್ಪ-ಅಮ್ಮ ಪಟ್ಟ ಪಾಡು ಅಷ್ಟಿಷ್ಟಲ್ಲ. ಕೊನೆಗೆ ಗೌರಿಯ ಮಗಳು ಪುಟ್ಟ ಕರು ತುಂಗೆಯನ್ನು ಮಾರಿ ಅಣ್ಣನನ್ನು ಕಾಲೇಜಿಗೆ ಸೇರಿಸಲಾಯಿತು. ಆತ ಅದೆಷ್ಟು ಬುದ್ಧಿವಂತ ಎಂದರೆ ಪದವಿಯ ಮೊದಲ ವರ್ಷದಲ್ಲೇ ಸ್ಕಾಲರ್ಶಿಪ್ ಪಡೆದು ತನ್ನ ಮುಂದಿನ ಹಾದಿಯನ್ನು ತಾನೇ ನಿರ್ಮಿಸಿಕೊಂಡು, ತನ್ನ ಇಷ್ಟದ ವಿಷಯವಾದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಅಮೆರಿಕಾಗೆ ಹೋಗಿ ಅಲ್ಲಿಯೂ ತನ್ನ ಕಾರ್ಯ ಕ್ಷಮತೆಯಿಂದ ನಾಸಾದಲ್ಲಿ ಉದ್ಯೋಗ ಗಿಟ್ಟಿಸಿಕೊಂಡ. ಆ ಕ್ಷಣವನ್ನು ನಾನು ಸಹಿತ ಅಪ್ಪ ಅಮ್ಮ ಎಲ್ಲರೂ ಸಂಭ್ರಮಿಸಿದ್ದೆವು. ಅವನಿಂದ ಮನೆಯ ಆರ್ಥಿಕ ಪರಿಸ್ಥಿತಿ ಕೊಂಚ ಸುಧಾರಿಸಿತು. ಕನಿಷ್ಟ ಸುಖ ಎಂದರೇನು… ಎನ್ನುವುದರ ಪರಿಚಯವಾಯಿತು. ಇದೇ ಖುಷಿಯಲ್ಲಿ ಅಮ್ಮ ಅಣ್ಣನಿಗೆ ಹುಡುಗಿಯನ್ನು ನೋಡಲು ಶುರುವಿಟ್ಟಳು. ಹುಡುಗಿಯನ್ನು ಅಣ್ಣ ಸ್ಕೈಪ್ ಅಲ್ಲಿ ನೋಡಿ ಒಪ್ಪಿಗೆ ಸೂಚಿಸಿ ಮದುವೆಯ ದಿನವನ್ನೂ ನಿಕ್ಕಿ ಮಾಡಿದ್ದಾಯಿತು. ಮನೆಯಲ್ಲಿ ಸಂಭ್ರಮದ ಸುಗ್ಗಿ.
ಹಾಗಿರುವಾಗ ಒಂದು ದಿನ ರಾತ್ರಿ ಮನೆಯ ಫೋನು ಕಿಟಾರನೆ ಕಿರುಚಿಕೊಂಡಿತು. ಫೋನ್ ಎತ್ತಿಕೊಂಡ ಅಪ್ಪನಿಗೆ ಅತ್ತ ಕಡೆಯಿಂದ ಯಾರು ಏನು ಮಾತಾಡುತ್ತಿದ್ದಾರೆ ಎಂದು ತಿಳಿಯದೆ ನನ್ನನ್ನು ಕೂಗಿ ಕರೆದು, ಅಮೆರಿಕಾದಿಂದ…. ಅಮೆರಿಕಾದಿಂದ ಫೋನು… ಎಂದು ಮೆಲ್ಲನೆ ನನ್ನ ಕಿವಿಯಲ್ಲಿ ಉಸಿರಿದ. ನಿದ್ದೆಗಣ್ಣಿನಲ್ಲೇ ರಿಸೀವರ್ ಹಿಡಿದು, ಹಾಯ್ ದಿಸ್ ಈಸ್ ಸೂರ್ಯ, ಬ್ರದರ್ ಆಫ್ ಚಂದ್ರಶೇಕರ್, ಪ್ಲೀಸ್ ಟೆಲ್ ಮಿ.. ಎಂದು ಅಮೆರಿಕನ್ ಆಕ್ಸೆಂಟ್‌ನಲ್ಲಿ ತಕ್ಕಮಟ್ಟಿಗೆ ನುಡಿದ್ದಿದ್ದೆ. ಅದಕ್ಕೆ ಪ್ರತಿಯಾಗಿ ಅಲ್ಲಿಂದ ‘ಸಾರೀ ಮಿ. ಸೂರ್ಯ, ವುಡ್ ಲೈಕ್ ಟು ಟಾಕ್ ಟು ಯುವರ್ ಫಾದರ್ ಮಿ. ಶೇಖರಪ್ಪಯ್ಯ’ ಎಂದು ಹೇಳಿದರು. ಅಪ್ಪನಿಗೆ ಭಾಷೆಯ ಸಮಸ್ಯೆ ಹಾಗಾಗಿ ನೀವು ನನ್ನ ಬಳಿಯೇ ವಿಷಯವನ್ನು ಹೇಳಿ ಎಂದು ಭಿನ್ನವಿಸಿಕೊಂಡ ಮೇಲೆ ನೇರವಾಗಿ ವಿಷಯಕ್ಕೆ ಬಂದು, ‘ಮಿ.ಸೂರ್ಯ, ಯುವರ್ ಬ್ರದರ್ ಮಿ. ಚಂದ್ರಶೇಕರ್ ಈಸ್ ನೋ ಮೋರ್, ಹಿ ಹ್ಯಾಂಗ್ಡ್ ಹಿಮ್ಸೆಲ್ಫ್ ಅಟ್ ಹಿಸ್ ಅಪಾರ್ಟ್ಮೆಂಟ್…’ ಎನ್ನುವುದನ್ನು ಕೇಳಿ ನನ್ನ ಮುಖದಲ್ಲಾದ ಬದಲಾವಣೆಯನ್ನು ಗಮನಿಸಿದ ಅಮ್ಮ ಆಗಬಾರದ್ದೇನೋ ಆಗಿದೆ ಎಂದುಕೊಂಡು ತನ್ನ ಕಣ್ಣುಗಳನ್ನು ಅದಾಗಲೇ ಒದ್ದೆಯಾಗಿಸಿಕೊಂಡಿದ್ದಳು.
ಈ ವಿಷ್ಯವನ್ನು ಹೇಗೆ ಅಪ್ಪ- ಅಮ್ಮನಿಗೆ ತಿಳಿಸುವುದು ಎಂದು ಮನಸ್ಸಲ್ಲಿ ಸೂರ್ಯ ಯೋಚಿಸುತ್ತಿದ್ದ. ಫೋನ್ ಇಟ್ಟ ಕ್ಷಣ ದೇವಕಿ ಮತ್ತು ಶೇಖರಪ್ಪಯ್ಯ ಇಬ್ಬರೂ ಒಮ್ಮೆಲೆ ಸೂರ್ಯನ ಬಳಿ ಬಂದು, ಏನಂತೆ ಮಗ? ಅಣ್ಣ ಹುಷಾರಿದ್ದಾನ ಮಗಾ? ಎಂದು ಒಂದೇ ಸಮನೆ ಕೇಳುತ್ತಿದರು. ಮೊದಲೇ ಅಂತರ್ಮುಖಿಯಾದ ಸೂರ್ಯ ಈ ವಿಷ್ಯವನ್ನು ಹೆತ್ತವರಿಗೆ ಹೇಗೆ ತಿಳಿಸುವುದು ಎಂಬ ಭಾವ ಸಂದಿಗ್ಧದಲ್ಲಿ ಸಿಲುಕಿದ. ಕೊನೆಗೂ ಕಟ್ಟೆ ಒಡೆದು ಬಂದ ಅಳುವಿನ ಜೊತೆಗೆ ಅಮ್ಮಾ… ಅಣ್ಣಾ ಹೊ..ಗ್ಬಿ…ಟ್ಟ….! ಎಂದು ಹೇಳಿ ಅಲ್ಲೇ ಕುಸಿದು ಕುಳಿತ. ಆತನ ಅಮ್ಮ ದೇವಕಿಯಂತೂ ಕಿಟಾರನೆ ಕಿರುಚಿ ಅಲ್ಲೇ ಕುಸಿದು ಬಿದ್ದಳು. ದೇವಕಿಗೆ ಚಂದ್ರ ಅಂದರೆ ಆಯಿತು, ಅಷ್ಟು ಇಷ್ಟ. ಚಂದ್ರ ಅಂದರೆ ಸರ್ವಸ್ವ ದೇವಕಿಗೆ. ತನ್ನ ಎಲ್ಲಾ ಸುಖಗಳ ಕನಸನ್ನು ಅವಳು ಚಂದ್ರನಲ್ಲಿ ಕಾಣುತ್ತಿದ್ದಳು. ಶೇಖರಪ್ಪಯ್ಯ ಶೂನ್ಯದಲ್ಲಿ ದೃಷ್ಟಿ ನೆಟ್ಟು ಏದುಸಿರು ಬಿಡುತ್ತಾ ದೇವಕಿಯ ತಲೆಯನ್ನು ನೇವರಿಸುತ್ತಾ ಗೋಡೆಗೊರಗಿ ಕುಳಿತ. ಅತ್ತು ಬಿಡು ಅಮ್ಮ… ಪ್ಲೀಸ್ ಅತ್ತು ಬಿಡು ಎಂದು ಸೂರ್ಯ ಎಷ್ಟೇ ಕೇಳಿಕೊಂಡರೂ ದೇವಕಿಗೆ ಶೂನ್ಯದಿಂದ ತನ್ನ ದೃಷ್ಟಿಯನ್ನು ತೆಗೆಯಲಾಗದೆ ಜೀವಂತ ಶವವಾಗಿ ಬಿಟ್ಟಳು. ಚಂದ್ರನ ದೇಹವೂ ಅವರಿಗೆ ದಕ್ಕಲಿಲ್ಲ. ಅದೇನೋ ಕಾನೂನಿನ ಕಾರಣಗಳನ್ನು ಕೊಟ್ಟು, ಕೊನೆಗೆ ಅಲ್ಲಿರುವ ಚಂದ್ರನ ಸ್ನೇಹಿತರನ್ನು ಸಂಪರ್ಕಿಸಿದರೂ ಸೂರ್ಯನಿಗೆ ಅವನ ದೇಹವನ್ನು ಪಡೆಯಲು ಸಾಧ್ಯವಾಗಲಿಲ್ಲ. ಚಂದ್ರನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ ಕೊನೆಗೆ ಅವನನ್ನು ಅಮೆರಿಕಾದಲ್ಲೇ ದಫನ್ ಮಾಡಿ ಬಿಟ್ಟರು. ಚಂದ್ರನ ನಿಧನಂತರದ ಎರಡೇ ವಾರದಲ್ಲಿ ದೇವಕಿಯೂ ಚಂದ್ರನ ಬಳಿ ಹೊರಟು ಬಿಟ್ಟಳು. ಅಂದಿನಿಂದ ಶೇಖರಪ್ಪಯ್ಯ ಗಡ್ಡ ಕೂದಲಿಗೆ ಎಣ್ಣೆ ಮತ್ತು ಕತ್ತರಿಯನ್ನು ತಾಕಿಸುವುದನ್ನೇ ಬಿಟ್ಟುಬಿಟ್ಟ.
ತಥ್… ಬೋಳಿ ಮಗನೆ ಎಂದು ಚಾಲಕ ಬ್ರೇಕ್ ಅನ್ನು ಒತ್ತಿ ಉದ್ಘೋಷಿಸಿದಾಗಲೇ ಸೂರ್ಯಪ್ರಸಾದ್ ಅಲಿಯಾಸ್ ಸೂರಿ ಮರಳಿ ಜಗತ್ತಿನೊಳಗೆ ಇಳಿದು ಬಂದದ್ದು. ಭಾರತದ ಪ್ರಸಿದ್ಧ ಐ.ಟಿ ಕಂಪನಿಯೊಂದರ ದಕ್ಷಿಣ ಭಾರತದ ಮುಖ್ಯಸ್ಥನಾಗಿ ಕಾರ್ಯ ನಿರ್ವಹಿಸುತ್ತಿರುವ ಸೂರ್ಯ, ತನ್ನ ಕಾರ್ಯ ಕ್ಷಮತೆಯಿಂದ, ಸೇರಿದ ಅಲ್ಪಾವಧಿಯಲ್ಲೇ ಆ ಕಂಪೆನಿಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಿದ್ದ. ಅಪ್ಪ, ಮಗಳ, ಹೆಂಡತಿಯ ವಾರ್ಷಿಕ ಆರೋಗ್ಯ ತಪಾಸಣೆಯನ್ನು ಕಳೆದ ವಾರವಷ್ಟೇ ಮುಗಿಸಿದ್ದ. ತನ್ನ ತಪಾಸಣೆಯನ್ನು ಮುಂದೂಡುತ್ತಾ ಬಂದ ಸೂರ್ಯ ಮನೆಯವರ ಗಲಾಟೆ ತಡೆಯದೆ ಬೇಗನೆ ಮುಗಿಸುವೆ ಎಂದೂ ಹೇಳಿದ್ದ. ಅದರಂತೆ ಸರ್ಜಾಪುರ ರಸ್ತೆಯಲ್ಲಿರುವ ತನ್ನ ವಿಲ್ಲಾದಿಂದ ಇಲೆಕ್ಟ್ರೋನಿಕ್ಸ್ ಸಿಟಿಯಲ್ಲಿರುವ ಆಸ್ಪತ್ರೆಗೆ ಹೊರಟಿದ್ದ ಅವನನ್ನು ಯಾವತ್ತೂ ಕಾಡದ ನೆನಪುಗಳು ಅಂದು ಗುಂಪು ಗುಂಪಾಗಿ ಬಂದು ಮುತ್ತ ತೊಡಗಿದ್ದು ಯಾಕೆ? ಎಂದು ಟ್ರಾಫಿಕ್‌ನಲ್ಲಿ ನಿಂತ ಅಸಂಖ್ಯ ವಾಹನಗಳನ್ನು ನೋಡುತ್ತಾ ಸೂರ್ಯ ಯೋಚಿಸತೊಡಗಿದ್ದ. ಸರ್, ಬದಲಿ ರಸ್ತೆಯ ಮೂಲಕ ಹೋಗೋಣವೆ ? ಎಂದು ಚಾಲಕ ರಾಮನ್ ಸೂರ್ಯನನ್ನು ಕೇಳಿದಾಗ, ಬೇಡ ಕಣ್ರೀ, ಕಾಯೋಣ. ಕಾಯುವಿಕೆಯಲ್ಲೂ ಸುಖವಿದೆ. ಕಾಯುವಿಕೆಯು ಅದೆಷ್ಟೋ ಮರೆಯಾದ ನೆನಪುಗಳನ್ನು ಮತ್ತೆ ಮುನ್ನೆಲೆಗೆ ತಂದು ನಿಲ್ಲಿಸುತ್ತದೆ. ಮತ್ತೆ ಎಂದೂ ಮರೆಯದ ಹಾಗೆ. ಇರಲಿ ಬಿಡು ರಾಮನ್, ಆಳದಲ್ಲಿ ಹುದುಗಿರುವ, ಜಾರಿ ಹೋದ ನೆನಪುಗಳು ಮತ್ತೆ ಸಾಗರವು ಅಬ್ಬರಿಸುವಂತೆ ಮಸ್ತಿಷ್ಕವನ್ನು ಮಥಿಸಿಕೊಂಡು ಬರುವ ಸೊಬಗಿದೆಯಲ್ಲ, ಪ್ರತಿಯೊಬ್ಬರೂ ಅದನ್ನು ಒಮ್ಮೆಯಾದರೂ ಅನುಭವಿಸಲೇಬೇಕು. ಇಂದು ನಮ್ಮ ನಡೆ-ನುಡಿ ಎಲ್ಲವೂ ನಮ್ಮ ಗುರಿಯ ಕಡೆಗೆ. ಸಾಧಿಸುವ ಛಲದ ಧಾವಂತದಲ್ಲಿ, ಕಳೆದುಕೊಂಡ, ಕಳೆದುಕೊಳ್ಳುತ್ತಿರುವ ಭಾವಗಳನ್ನು ನಾವು ಗುರುತಿಸದೆ ಹೋಗಿ ಬಿಡುತ್ತೇವೆ. ಯಾವತ್ತೋ ಒಮ್ಮೆ ಹೀಗೆ ಈ ಮಹಾನಗರದ ಕಾಂಕ್ರೀಟ್ ಜಂಗಲಿನಲ್ಲಿ, ಮೋಟಾರುಗಳ ಕಪ್ಪು ಹೊಗೆಯಲ್ಲಿ ಎಚ್ಚರಿಕೆಯ ಘಂಟೆಯೋ ಎಂಬಂತೆ ಧಸಕ್ಕೆಂದು ಆಲಿಬಾಬಾನ ದೀಪದಿಂದ ಎದ್ದುಬರುವ ಮಾಂತ್ರಿಕನಂತೆ ನೆನಪುಗಳು ಎದ್ದು ಬರುತ್ತವೆ. ಕಳೆದುಕೊಳ್ಳಬಾರದ್ದನ್ನು ಕಳೆದುಕೊಂಡ ಬಳಿಕ ಆಗುವ ಅರಿವು ಮುಂದೆ ಕಳೆದುಕೊಳ್ಳಲಿರುವುದನ್ನು ನಾವು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕು ಎಂಬ ವಿವೇಕ ನಮ್ಮೊಳಗೆ ಹುಟ್ಟಬೇಕು ರಾಮನ್. ಹೇಗೂ ಟ್ರಾಫಿಕ್ ಜಾಮ್ ಆಗಿದೆ. ಕ್ಲಿಯರ್ ಆಗಲು ಅದೆಷ್ಟು ಹೊತ್ತೊ ಏನೋ? ಅಷ್ಟರವರೆಗೆ ನೀನೂ ಕಳೆದುಕೊಂಡದ್ದನ್ನು ನೆನಪಿಸಿಕೋ, ನಾನೂ ಕೂಡ ಅರ್ಧಕ್ಕೆ ನಿಂತ ಯಾನವನ್ನು ಮುಂದುವರಿಸುತ್ತೇನೆ ಎಂದು ಸೂರ್ಯ ಮೆತ್ತಗೆ ನೆನಪಿನಾಳಕ್ಕೆ ಇಳಿದ.
ರಾಮನ್, ಆಸ್ಪತ್ರೆ ಬಂತು ಎಂದು ಕೂಗಿದಾಗಲೇ ಸೂರ್ಯ ಮರಳಿ ಯಾಂತ್ರಿಕ ಹಳಿಗೆ ಬಂದದ್ದು. ಆಸ್ಪತ್ರೆಯ ಒಳಗೆ ಹೋದವನೇ ತನ್ನ ಗೋಲ್ಡನ್ ಹೆಲ್ತ್ ಕಾರ್ಡ್ ಅನ್ನು ತೋರಿಸಿ ಮುಂದಿನ ತಪಾಸಣೆಗಳಿಗೆ ಅಣಿಯಾದ. ಸುಮಾರು ೪ ರಿಂದ ೫ ಗಂಟೆಯ ತಪಾಸಣೆಯ ಬಳಿಕ ಡಾಕ್ಟರ್ ಅನ್ನು ಭೇಟಿಯಾದ ಸೂರ್ಯನಿಗೆ ವರದಿ ಕೇಳಿ ನೆಮ್ಮದಿ ಎನಿಸಿತು.
‘ಮಿ. ಸೂರ್ಯ, ಎವೆರಿತಿಂಗ್ ಈಸ್ ಪರ್ಫೆಕ್ಟ್. ಕಂಟಿನ್ಯೂ ಯುವರ್ ರುಟೀನ್ ವರ್ಕ್ ಔಟ್ಸ್ ಅಂಡ್ ಕಂಟಿನ್ಯೂ ಯುವರ್ ಡೈಯೆಟ್ & ಟ್ರೈ ಟು ಅವಾಯ್ಡ್ ಸ್ಮೋಕಿಂಗ್’ ಎಂದು ಹೇಳಿದರು. ಅದಕ್ಕುತ್ತರವಾಗಿ ಸೂರ್ಯ, ಡಾಕ್ಟರ್ ಧೂಮಲೀಲೆಯ ಲೀಲೆಯೇ ಹಾಗೆ ಎಂದು ನಗು ಬೀರಿದ. ಡಾಕ್ಟರ್ ಕೂಡಾ ಹೌದು ಸೂರ್ಯ ಆ ಲೀಲೆಯ ಉರುಳು ಕೂಡಾ ಅಂತಹದ್ದೇ ಎಂದು ನಕ್ಕರು. ಅಂತೂ ಕವಿ ಗೋಪಾಲಕೃಷ್ಣ ಅಡಿಗರು ನಮ್ಮಿಬ್ಬರಲ್ಲೂ ಹೊಕ್ಕಿ ಸುರುಳಿ, ಉರುಳಿ ಮರೆಯಾದರು ಎಂದು ಅಡಿಗರ ಪದ್ಯ ‘ಧೂಮಲೀಲೆ’ ಯ ಬಗ್ಗೆ ಕಾವ್ಯಾಸಕ್ತರಿಬ್ಬರು ಒಂದಿಷ್ಟು ಚರ್ಚಿಸಿ ಪರಸ್ಪರ ಬೀಳ್ಗೊಂಡರು.
ಬೈ ದ ವೇ, ನೀವು ಯಾವಾಗ ಮುಂಬೈ ಹೋಗುತ್ತೀರಿ ಅಂತ ಹೇಳಿದಿರಿ ಸೂರ್ಯ? ಎಂದು ಡಾಕ್ಟರ್ ಪ್ರಶ್ನಿಸಿದರು.
ಎರಡು ದಿನಗಳ ನಂತರ ಡಾಕ್ಟರ್. ಸರ್, ಆರ್ಡರ್ ಮೀ ವಾಟ್ ಡು ಯೂ ವಾಂಟ್ ?
ನತಿಂಗ್ ಸೂರ್ಯ, ಹ್ಯಾವ್ ವನ್ ಪಾರ್ಸಲ್ ಫಾರ್ ಮೈ ಸಿಸ್ಟರ್, ಶಿ ಸ್ಟೆಯ್ಸ್ ಇನ್ ಬಾಂದ್ರಾ. ವಿಲ್ ಯೂ ಡ್ರಾಪ್ ಇಟ್ ? ಎಂದು ಪ್ರಶ್ನಿಸಿದರು.
ವೈ ನಾಟ್ ಎಂದವನ ಕೈಗೆ ಒಂದು ಸಣ್ಣ ಹಾಂಡ್ ಬಾಗ್ ಒಂದನ್ನು ಕೊಟ್ಟರು.
ಏನು ಸರ್ ವಿಶೇಷ ಎಂದು ಸೂರ್ಯ ಕೇಳಿದ್ದಕ್ಕೆ; ‘ಇದು ವರ್ಷಂಪ್ರತಿ ತಂಗಿಗೆ ನೀಡುವ ಬಾಗಿನ. ನಮ್ಮ ಅಮ್ಮ ಈಗಿಲ್ಲ. ತಂಗಿಗೆ ತವರು ಮನೆಯ ಬಾಗಿನ ಕೊಡುವುದನ್ನು ನಾನು ಇಲ್ಲದ ಮೇಲೂ ನಿಲ್ಲಿಸಬೇಡ ಎಂದು ಅಮ್ಮ ಹೇಳಿದ್ದಳು. ಅಪ್ಪ ಆಕೆಗೆಂದು ಖರೀದಿಸಿದ ಇಷ್ಟವಾದ ಕೆಲವು ತಿಂಡಿಗಳು ಮತ್ತು ಉಪ್ಪಿನಕಾಯಿಯನ್ನೂ ತವರಿನ ಬಾಗಿನದ ಜೊತೆಗೆ ಇರಿಸಿದ್ದೇನೆ. ನೀವು ಲಾಸ್ಟ್ ವೀಕ್ ಬಂದಾಗ ಮುಂಬೈ ಭೇಟಿಯ ಬಗ್ಗೆ ಹೇಳಿದ್ದ್ರಿ. ನಿಮ್ಮನ್ನು ನೋಡಿದ್ದೆ ನೆನಪಾಯಿತು. ಅಂದು ತಂದು ಇರಿಸಿದ್ದು ಇಲ್ಲೇ ಇದೆ. ಹೂಂ… ಅಮ್ಮ ಇರಬೇಕಿತ್ತು ಸೂರ್ಯ….’ ಎಂದು ನೆನಪುಗಳತ್ತ ಮೆಲ್ಲಗೆ ಜಾರುತ್ತಲೇ…. ಘಟಕ್ಕೆಂದು ವಾಸ್ತವಕ್ಕೆ ಮರಳಿದರು. ನೆನಪುಗಳೇ ಹಾಗೆ ಅಲ್ಲವೇ ಸೂರ್ಯ? ಎಂದು ಕೇಳಿದರು.
ಹೌದು ಸರ್, ತಪಾಸಣೆಗೆ ಒಳಗಾಗುವವರೆಗೆ ನಾನೂ ನೆನಪುಗಳನ್ನೆಲ್ಲಾ ಹೊತ್ತುಕೊಂಡೇ ಇಲ್ಲಿಗೆ ಬಂದಿದ್ದೆ. ಇದೀಗ ನೀವೂ ನೆನಪುಗಳೊಂದಿಗೆ…! ಬಹುಶಃ ಇವತ್ತು ನಾನು ನೆನಪುಗಳನ್ನು ಮೆಲುಕು ಹಾಕುವವರನ್ನು ಭೇಟಿಯಾಗುತ್ತಿದ್ದೇನೆ ಎಂದೆನಿಸುತ್ತಿದೆ. ಇನ್ನುಳಿದ ಬದುಕನ್ನು ನೆನಪುಗಳೊಂದಿಗೆ ಕಳೆಯಬೇಕು, ಕಳಕೊಂಡಿದ್ದನ್ನು ಮರಳಿ ಪಡೆಯುವ ದಿಸೆಯಲ್ಲಿ ಬದುಕಬೇಕೆಂದು ತೀರ್ಮಾನಿಸಿದ್ದೇನೆ ಡಾಕ್ಟರ್ ಎಂದು ಹೇಳಿ ಅವರು ಕೊಟ್ಟ ಬಾಗಿನದ ಚೀಲವನ್ನು ಎತ್ತಿಕೊಂಡು ಸೂರ್ಯ ಹೊರನಡೆದ.
ಖುಷಿಯಿಂದಲೇ ಮೆಡಿಕಲ್ ರಿಪೋರ್ಟ್‌ಗಳನ್ನು ಎತ್ತಿಕೊಂಡು ಮನೆಗೆ ಬಂದ ಸೂರ್ಯ, ನಿರ್ಮಲಳಿಗೆ ವಿಷಯವನ್ನೆಲ್ಲಾ ವಿವರಿಸಿ ಮಗಳು ಸಹನಾ ಮತ್ತು ನಿರ್ಮಲಳನ್ನು ಕರ್ಕೊಂಡು ರಾತ್ರಿಯ ಊಟಕ್ಕೆ ಹೋಟೆಲಿಗೆ ಹೊರಟ. ಮೊಂಬತ್ತಿಯ ಬೆಳಕಲ್ಲಿ ನಿರ್ಮಲಾಳ ಮುಖವನ್ನೇ ಗಮನಿಸುತ್ತಿದ್ದ ಸೂರ್ಯ… ಅದೇ ಮುಖ, ಅದೇ ಭಾವ ಕಿಂಚಿತ್ತೂ ಬದಲಾಗಲಿಲ್ಲ. ಮೊದಲು ನೋಡಿದ ದಿನದಿಂದ ಇಂದಿನವರೆಗೂ… ಅದೆಂತಹ ನಿರ್ಲಿಪ್ತತೆ! ಎಂದು ಆಕೆಯ ಕೈಯನ್ನು ಮೆತ್ತಗೆ ತನ್ನ ಕೈಯೊಳಗೆ ಬಂಧಿಸಿ ಮನದಲ್ಲೇ ಆಡಿಕೊಂಡ. ಪಕ್ಕದಲ್ಲಿ ಕುಳಿತ ಮಗಳಿಗೆ ಬೆಚ್ಚನೆಯ ಅಪ್ಪುಗೆ ನೀಡಿ, ಏನು ತಿನ್ನುತ್ತಿ ಕಂದ? ಎಂದು ಪ್ರಶ್ನಿಸಿ, ನಿನಗಿಷ್ಟವಾದದ್ದನ್ನು ಆರ್ಡರ್ ಮಾಡು. ಇವತ್ತು ಡೈಯೆಟ್, ಹೆಲ್ತ್ ಗೆಲ್ಲಾ ಹೊಡಿ ಗೋಲಿ ಎಂದವನೇ ವೇಟರ್ ಅನ್ನು ಕರೆದು ಬೇಕಾದದ್ದನ್ನು ಆರ್ಡರ್ ಮಾಡಿದ. ಊಟದ ಮಧ್ಯದಲ್ಲಿ ಕಚೇರಿಯ ಫೋನು ಬರಲು, ಅದನ್ನು ಸ್ವೀಕರಿಸಿದವನಿಗೆ ನಾಳೆಯೇ ಮುಂಬೈಗೆ ಹೊರಟು ಬರಲು ಆದೇಶಿಸಲಾಗಿತ್ತು. ಮೂರು ದಿನಗಳ ನಂತರ ಹೊರಡಬೇಕಿದ್ದ ಸೂರ್ಯನಿಗೆ ಒಮ್ಮೆಲೆ ಅಚ್ಚರಿ ಹಾಗೂ ತಳಮಳ ಶುರುವಾಯಿತು. ಒಂದು ಸುಂದರ ಸಂಜೆಯನ್ನು ಹೊಟ್ಟೆಪಾಡಿನ ಕೆಲಸವು ಈ ರೀತಿ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಿರುವಾಗಲೇ ಕಮರಿಸಿಬಿಟ್ಟಿತಲ್ಲ ಎಂದು ತನ್ನೊಳಗೆ ಗೊಣಗಿಕೊಂಡ. ಬಲವಂತದ ಮೂಡಿನಲ್ಲಿ ರಸಗವಳವನ್ನು ಜಗಿದು ಅಂದಿನ ಊಟವನ್ನು ಪೂರೈಸಿದ.
ಮರುದಿನದ ಬೆಳಗ್ಗಿನ ೫ ಗಂಟೆಯ ವಿಮಾನದಲ್ಲಿ ಮುಂಬೈಗೆ ಹೊರಟು ೭ ಗಂಟೆಗೆಲ್ಲಾ ಏರ್ಪೋರ್ಟ್‌ನಿಂದ ಹೊರಗೆ ಬಂದವನನ್ನು ಕಂಪೆನಿಯ ಕಾರು ಹೊತ್ತುಕೊಂಡ ಬಾಂದ್ರಾದಲ್ಲಿರುವ ಕೇಂದ್ರ ಕಚೇರಿಯತ್ತ ನುಗ್ಗಿತು. ಬೆಂಗಳೂರಿನ ಚುಮು ಚುಮು ಚಳಿಯಿಂದ ಮಗ್ಗುಲು ಬದಲಾಯಿಸಿದ ಸೂರ್ಯನಿಗೆ ಮುಂಬೈಯ ಹ್ಯುಮಿಡಿಟಿ ಒಂದಷ್ಟು ಕಿರಿಕಿರಿ ಸೃಷ್ಟಿಸಿದ್ದು ಸುಳ್ಳಲ್ಲ. ಕಚೇರಿಯ ಗೆಸ್ಟ್ ಹೌಸ್ ನಲ್ಲಿ ತುಸು ಸುಧಾರಿಸ್ಕೊಂಡು ೯.೩೦ ರೆಯ ಮೀಟಿಂಗಿಗೆ ಕಚೇರಿಯ ಕಾನ್ಫರೆನ್ಸ್ ಹಾಲ್‌ಗೆ ಅಡಿಯಿಟ್ಟು ನೆರೆದಿದ್ದ ತನ್ನ ಸಹದ್ಯೋಗಿಗಳ ಕೈ ಕುಲುಕುತ್ತಿರುವಾಗಲೇ ಕಂಪೆನಿಯ ಹಿರಿಯ ಅಧಿಕಾರಿಯ ಆಗಮನವಾಯಿತು. ಬಂದವರೇ ಇಂದು ಕಚೇರಿ ಎಂದಿಗಿಂತ ಹೆಚ್ಚೇ ಪ್ರಕಾಶಮಾನವಾಗಿದೆ! ಎಂದು ಸೂರ್ಯನನ್ನು ನೋಡಿ ನಕ್ಕರು. ಮುಂದಿನ ಮೂರು ತಾಸು ಎಲ್ಲರಿಗೂ ಡ್ರಿಲಿಂಗ್ ಸೆಶನ್ ನಡೆಸಿ ಮುಂದಿನ ಕಾರ್ಯ ತಂತ್ರದ ಹೊಣೆಗಾರಿಕೆಯನ್ನು ಸೂರ್ಯನ ಹೆಗಲಿಗೇರಿಸಿ ನಡೆದರು. ರಾತ್ರಿ ಹಗಲೆನ್ನದೆ ಸತತ ಮೂರು ದಿನಗಳ ಕಾಲ ಮೀಟಿಂಗ್ ನಡೆಯಿತು. ನಾಲ್ಕನೇ ದಿನ ಬೆಂಗಳೂರಿನ ಡಾಕ್ಟರ್ ಅವರ ತಂಗಿಗೆ ಕೊಟ್ಟ ಬಾಗಿನದ ನೆನಪಾಗಿ ಆಕೆಗೆ ಫೋನಾಯಿಸಿ ಕಚೇರಿಯಿಂದ ೧೫ ನಿಮಿಷಗಳ ದಾರಿಯ ಆಕೆಯ ಮನೆಗೆ ಹೋಗಿ ಬಾಗಿನವನ್ನು ಕೊಟ್ಟು, ಡಾಕ್ಟರ್ರಿಗೂ ಫೋನಾಯಿಸಿ ನಿಮ್ಮ ನೆನಪುಗಳನ್ನು ತಂಗಿಯ ಮಡಿಲಿಗೆ ತುಂಬಿದ್ದೇನೆ ಎಂದು ಹೇಳಿದ. ಧನ್ಯವಾದ ತಿಳಿಸಿದ ಡಾಕ್ಟರ್ ಆರೋಗ್ಯ ಚೆನ್ನಾಗಿದೆ ತಾನೇ? ಎಂದು ವಿಚಾರಿಸಿಕೊಂಡರು. ನೀವೇ ಚೆನ್ನಾಗಿದೆ ಎಂದು ಋಜು ಮಾಡಿದ ಮೇಲೆ ಅಲ್ಲವೇ ನಾನು ಮುಂಬಯಿಗೆ ಹೊರಟಿದ್ದು ಎಂದು ಚೆಂಡನ್ನು ಅವರ ಅಂಗಳಕ್ಕೆಸೆದು, ಅವರಿಂದಲೂ, ಅವರ ತಂಗಿಯಿಂದಲೂ ಬೀಳ್ಗೊಂಡು ಕಚೇರಿಯತ್ತ ನಡೆದ. ಕಚೇರಿಗೆ ಹೋಗುತ್ತಿರುವ ದಾರಿಯಲ್ಲಿ ಕಂಡ ‘ಶರ್ಮಾ’ಸ್ ವಡಾಪಾವ್’ ಸೂರ್ಯನ ಟೇಸ್ಟ್ ಬಡ್ಸ್ ಅನ್ನು ಕೆರಳಿಸಿ, ಚಾಲಕನಿಗೆ ನಿಲ್ಲಿಸಲು ಹೇಳಿ, ಮುಂದೆ ಎಲ್ಲಾದರೂ ಕಾರನ್ನು ಪಾರ್ಕಿಸು, ಫೋನಾಯಿಸುತ್ತೇನೆ ಆಗ ಬಂದು ಬಿಡು ಎಂದು ಹೇಳಿ ವಡಾಪಾವ್ ಗಾಡಿಯತ್ತ ಹೊರಳಿದ. ವಡಾಪಾವ್ ಮತ್ತು ಕರಿದ ಮೆಣಸಿನಕಾಯಿಯನ್ನು ಜಗಿದ ಮೇಲೆ ಸ್ವರ್ಗಕ್ಕೆ ಮೂರೇ ಗೇಣು ಸರ್ವಜ್ಞ ಎನ್ನುತ್ತಲೇ ಇನ್ನೆರಡನ್ನು ಇಳಿಸಿ, ಅದ್ರಕ್ ಚಹಾಗೆ ಹೇಳಿ, ಸಕ್ಕರೆ ಹಾಕಬೇಡವೆಂದೂ ತಿಳಿಸಿ ಜೇಬಿನಲ್ಲಿದ್ದ ಕಿಂಗ್ಸ್ ಲೈಟ್ಸ್ ಸಿಗರೇಟನ್ನು ತುಟಿಗೊತ್ತಿ ಬೆಂಕಿ ತಗುಲಿಸಿದ. ಚಹಾದ ಜೊತೆ ಸಿಗರೇಟಿನ ರುಚಿಯನ್ನು ಆಸ್ವಾದಿಸುತ್ತಿರುವಾಗಲೇ ಸೂರ್ಯ ಧೊಪ್ಪೆಂದು ಕುಸಿದು ಬಿದ್ದ. ಎಚ್ಚರ ತಪ್ಪಿ ಬಿದ್ದ ಅವನನ್ನು ಗಾಡಿಯವನು ಮತ್ತು ಅಕ್ಕ ಪಕ್ಕದ ಜನರೆಲ್ಲ ಸೇರಿ ನೀರು ಚಿಮುಕಿಸಿ ಎಚ್ಚರಿಸಲು ಪ್ರಯತ್ನಪಟ್ಟರೂ ಸಫಲವಾಗಲಿಲ್ಲ. ಅಲ್ಲಿಯ ಜನಕ್ಕೆ ಈತ ಯಾರು? ಏನು? ಎತ್ತ? ಎಂಬುದರ ಬಗ್ಗೆ ಯಾವುದೇ ಸುಳಿವಿಲ್ಲದೆ ಏನು ಮಾಡುವುದೆಂದು ತಿಳಿಯದಾದರು. ಸಂಪರ್ಕಿಸಬೇಕಾದವರನ್ನು ಪತ್ತೆ ಹಚ್ಚಲು ಫೋನನ್ನು ತಡಕಾಡಿದರೆ ಅದು ಹೊಚ್ಚ ಹೊಸ ಐ ಫೋನ್ ೧೦. ಪಾಸ್ವರ್ಡ್ ಇಲ್ಲದೆ ಒಳ ಪ್ರವೇಶಿಸಲು ಫೋನ್ ಒಪ್ಪಲಿಲ್ಲ. ಕೊನೆಗೆ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು. ಅಷ್ಟರಲ್ಲಿ ಸೂರ್ಯನ ಕಾರಿನ ಚಾಲಕ ವಡಾಪಾವ್ ಅಂಗಡಿಯ ಪಕ್ಕದಲ್ಲಿರುವ ಬೀಡಾ ಅಂಗಡಿಗೆ ಬಂದವನು ಜನ ಸೇರಿದ್ದನ್ನು ನೋಡಿ ತಾನೂ ಇಣುಕಿ ನೋಡಿ, ಗರ ಬಡಿದವನಂತೆ ಹೇ… ಭಗವಾನ್… ಎ ಹಮಾರಾ ಸಾಬ್ ಹೈ.. ಎಂದು ಕೂಗಿದ. ಅವನ ಕೂಗು ಅಲ್ಲಿ ನೆರೆದಿದ್ದವರಿಗೆ ತುಸು ನೆಮ್ಮದಿಯನ್ನು ತಂದಿತಲ್ಲದೆ ಮಕಾಡೆ ಮಲಗಿದ ಜೀವಕ್ಕೊಬ್ಬ ವಾರಸುದಾರ ಸಿಕ್ಕನಲ್ಲ ಎಂದು ನಿಟ್ಟುಸಿರು ಬಿಟ್ಟರು. ಅಂತೂ ಮುಂಬಯಿಯ ಜನ ಜಂಗುಳಿ, ಟ್ರಾಫಿಕ್ಕಿನ ನಡುವೆಯೂ ದಾರಿ ಬಿಡಿ… ದಾರಿ ಬಿಡಿ… ಎಂದು ಅರಚುಕೊಳ್ಳುತ್ತಲೇ ಆಂಬ್ಯುಲೆನ್ಸ್ ಬಂದು ಸೂರ್ಯನನ್ನು ಕರೆದೊಯ್ಯಿತು. ಇತ್ತ ದಿಗಂತದ ಸೂರ್ಯ ನುಣ್ಣಗೆ ಕಡಲೊಳಗೆ ಇಳಿಯುತ್ತಿದರೆ, ಸೂರ್ಯಪ್ರಸಾದ್ ಮುಂಬಯಿಯ ಆಸ್ಪತ್ರೆಯೊಂದರ ಐ. ಸಿ. ಯು ವಿನಲ್ಲಿ ಹಲವು ಸಲಕರಣೆಗಳ ಜೊತೆ ಒಂದಷ್ಟು ಸೂಜಿಗಳನ್ನು, ಮತ್ತೊಂದಿಷ್ಟು ವಯರುಗಳನ್ನು ದೇಹಕ್ಕೆ ಅಳವಡಿಸಿಕೊಂಡು ಮಲಗಿದ್ದ.
*****
ವರ್ಕ್ ಫ್ರಮ್ ಹೋಮ್ ಎಂಬ ಸೌಭಾಗ್ಯವನ್ನು ತಾನು ಕೆಲಸ ಮಾಡುತ್ತಿರುವ ಸಾಫ್ಟ್ವೇರ್ ಕಂಪೆನಿಯಿಂದ ನಿರ್ಮಲ ಪಡೆದುಕೊಂಡಿದ್ದಳು. ಅಂದು ಮಟ ಮಟ ಮಧ್ಯಾಹ್ನ ತುರ್ತಾಗಿ ಕಾರ್ಯ ನಿಮಿತ್ತ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಒದ್ದಾಡಿಕೊಂಡು, ಗುದ್ದಾಡಿಕೊಂಡು ಹಾರ್ನ್‌ಗಳ ಮೇಲೆ ಹಾರ್ನ್‌ಗಳ ಹೊಡೆಯುತ್ತಾ ಕಚೇರಿಗೆ ಸಾಗುತ್ತಿರುವಾಗ ಆಕೆಯ ಮೊಬೈಲ್ ರಿಂಗಣಿಸಿತು. ಡ್ರೈವ್ ಮಾಡುತ್ತಾ ಕಾರಿನ ಡಿಸ್ಪ್ಲೇ ಸ್ಕ್ರೀನಿನಲ್ಲಿ ನೋಡಿದ ನಿರ್ಮಲ ಅದೊಂದು ಲ್ಯಾಂಡ್ ಲೈನ್‌ನಿಂದ ಬಂದ ಕರೆ ಎಂದು ಅರಿತುಕೊಂಡಳು. ಹೆಸರು, ಗುರುತು ಇಲ್ಲದ್ದು ಎಂದು ತಿಳಿದು ಕರೆಯನ್ನು ಸ್ವೀಕರಿಸದೆ ರಸ್ತೆಯ ಮೇಲೆ ಗಮನ ಹರಿಸಿದಳು. ಆದರೆ ಪದೇ ಪದೇ ಅದೇ ಸಂಖ್ಯೆಯಿಂದ ಫೋನು ಬರಲು ಎಸ್.ಟಿ.ಡಿ ಕೋಡ್ ಅನ್ನು ಗಮನಿಸಿದರೆ ಅದು ಮುಂಬಯಿಯದ್ದು ಎಂದು ತಿಳಿದು ಚಕ್ಕನೆ ಅದೇ ಸಖ್ಯೆಗೆ ಕರೆಯನ್ನು ಮಾಡಿದರೆ ವೆಲ್ಕಂ ಟು….. ಹಾಸ್ಪಿಟಲ್, ಎಂದು ಒಂದಷ್ಟು ಮುದ್ರಿತ ಸಂಭಾಷಣೆಗಳು ಬರಲು ತೊಡಗಿದವು. ಏನೋ ಅಪ್ಪಿ ತಪ್ಪಿ ಬಂದಿರಬೇಕೆಂದು ತಿಳಿದುಕೊಂಡು ಕಾರನ್ನು ಎಡ ಬದಿಗೆ ತರಲು ಇಂಡಿಕೇಟರ್ ಅನ್ನು ಅದುಮಿ ನಿಧಾನಕ್ಕೆ ಸ್ಟಿಯರಿಂಗ್ ಅನ್ನು ಎಡಕ್ಕೆ ತಿರುಗಿಸಲು ಧಸಕ್ಕನೆ ಎಡಗಡೆಯಿಂದ ನುಗ್ಗಿದ ಸ್ಕೂಟಿಯು ಈಕೆಯನ್ನು ಬ್ರೇಕ್ ಅದುಮಲು ಪ್ರೇರೇಪಿಸಿತು. ಅಷ್ಟರಲ್ಲಿ ಹಿಂದಿನಿಂದ ಬಂದ ಆಟೋ ರಿಕ್ಷವೊಂದು ನಿರ್ಮಲಾಳ ಕಾರಿನ ಹಿಂಭಾಗಕ್ಕೆ ಗುದ್ದಿತು. ಕೆಲವೇ ನಿಮಿಷಗಳಲ್ಲಿ ರಸ್ತೆಯು ಅಸ್ತವ್ಯಸ್ತಗೊಂಡಿತು. ಆಟೋದವನು ಇವಳಿಗೂ, ಇವಳು ಅವನಿಗೂ ಮತ್ತು ಸ್ಕೂಟಿಯ ಹೆಂಗಸಿಗೂ ಬೈದಾಡಿಕೊಳ್ಳಲು ಶುರುವಿಟ್ಟರು. ಅಷ್ಟರಲ್ಲಿ ಆಕೆಯ ಫೋನಿಗೆ ಮತ್ತದೇ ಸಂಖ್ಯೆಯಿಂದ ಕರೆ ಬರತೊಡಗಿದ್ದನ್ನು ಗಮನಿಸಿದ ನಿರ್ಮಲ, ಏನಾದ್ರೂ ಮಾಡ್ಕೊಂಡು ಸಾಯ್ರಿ… ಎಂದವಳೇ ಕಾರನ್ನು ತುಸು ಮುಂದಕ್ಕೆ ತೆಗೆದುಕೊಂಡು ಹೋಗಿ ಎಡ ಬದಿಯಲ್ಲಿ ನಿಲ್ಲಿಸಿ ಕರೆಯನ್ನು ಸ್ವೀಕರಿಸಿದಳು. ಅತ್ತ ಕಡೆಯಿಂದ ಆಮ್ ಐ ಸ್ಪೀಕಿಂಗ್ ಟು ನಿರ್ಮಲ ಸೂರ್ಯ ಪ್ರಸಾದ್ ? ಎಂದು ಕೇಳಿದ ಹೆಣ್ಣಿನ ಧನಿಗೆ ಹೌದೆಂದು ಉತ್ತರಿಸಿದಳು. ವೈಟ್ ಆ ಮೊಮೆಂಟ್ ಡಾ. ವಾಸ್ವಾನಿ ವುಡ್ ಲೈಕ್ ಸ್ಪೀಕ್ ಟು ಯೂ… ಎಂದವಳೇ ಕರೆಯನ್ನು ವರ್ಗಾಯಿಸಿದಳು. ಮುಂದಿನ ಹತ್ತು ನಿಮಿಷಗಳ ಕಾಲ ಅತ್ತ ಕಡೆಯಿಂದ ಡಾ. ವಾಸ್ವಾನಿ ನಿರ್ಮಲಳಿಗೆ ಸೂರ್ಯನಿಗಾದ ಘಟನೆಯನ್ನು ತಿಳಿಸಿ, ಮುಂದೆ ನಡೆಯಬೇಕಾದ ಆಪರೇಷನಿಗೆ ಆಕೆಯ ಒಪ್ಪಿಗೆಯನ್ನು ಪಡೆದುಕೊಂಡರು. ನಾಲ್ಕು ದಿನದ ಮುಂಚೆ ಹೆಲ್ತ್ ಚೆಕ್ ಅಪ್ ಮಾಡಿಸಿ, ಏನೂ ಇಲ್ಲವೆಂದು, ಎಲ್ಲವೂ ಸರಿ ಇದೆ ಎಂದು ಡಾಕ್ಟರ್ ತಿದಿ ಒತ್ತಿ ಕೊಟ್ಟ ಸೂರ್ಯನ ರಿಪೋರ್ಟ್ ಅವಳ ಕಣ್ಣ ಮುಂದೆ ಹಾಗೆ ಒಮ್ಮೆ ಹಾದು ಹೋಯಿತು. ಜನ್ಮತಹ ಸೂರ್ಯನಿಗೆ ಹೃದಯ ಕವಾಟವೊಂದು ಸಂಕುಚಿತವಾಗಿದ್ದದ್ದು ನಿಮ್ಮಿಗೆ ತಿಳಿದಿತ್ತು. ಅದು ಕ್ರಮೇಣ ಇನ್ನೂ ಹೆಚ್ಚು ಸಂಕುಚಿತಗೊಂಡು ಮಿದುಳಿಗೆ ರಕ್ತ ಪೂರೈಕೆಯು ಅನಿಯಮಿತವಾಗಿ ನಡೆದು, ಅಂದು ರಕ್ತ ಸಂಚಾರದಲ್ಲಿ ಆದ ತೊಂದರೆಯೇ ಸೂರ್ಯನು ಪ್ರಜ್ಞೆ ತಪ್ಪಿ ಬೀಳುವಂತೆ ಮಾಡಿದ್ದು. ಕೃತಕ ಕವಾಟದ ಜೋಡಣೆಯ ಆಪರೇಷನಿಗಾಗಿ ನಿರ್ಮಲಾಳ ಒಪ್ಪಿಗೆಯನ್ನು ಪಡೆದ ಡಾ. ವಾಸ್ವಾನಿ ಕೂಡಲೇ ಮುಂಬಯಿಗೆ ಬರುವಂತೆ ಸೂಚಿಸಿದರು. ನೀವು ಬರುವವರೆಗೆ ನಾವು ಕಾಯುವುದಿಲ್ಲ, ಆಪರೇಷನ್ ಶುರು ಮಾಡುತ್ತೇವೆ. ನೀವು ಮುಂಬಯಿಗೆ ಹೊರಟು ಬಂದು ಬಿಡಿ ಎಂದು ಹೇಳಿ ಡಾ ವಾಸ್ವಾನಿ ಫೋನಿಟ್ಟರು. ಇತ್ತ ಮಗಳು ಶಾಲೆಗೆ ಹೋಗಿದ್ದಾಳೆ, ಅವಳನ್ನು ಎಲ್ಲಿ ಬಿಟ್ಟು ಹೋಗುವುದು ಎಂದು ಯೋಚಿಸುತ್ತಲೇ ಕಚೇರಿಗೆ ಫೋನಾಯಿಸಿ ವಿಷಯವನ್ನು ತಿಳಿಸಿ ಕಾರನ್ನು ಮನೆಯತ್ತ ತಿರುಗಿಸಿದಳು. ಅರ್ಧ ದಾರಿ ತಲಪುವಷ್ಟರಲ್ಲಿ ಅವಳ ಮಾವ ಶೇಖರಪ್ಪಯ್ಯನ ಫೋನು. ನಿಮ್ಮಿ ನೀನು ಮನೆಯಲ್ಲಿ ಇಲ್ಲವಾ? ನಾನು ಮೈಸೂರಿಗೆ ಬಂದಿದ್ದೆ. ಹಾಗೆ ನಿಮ್ಮನ್ನು ನೋಡಿ ಹೋಗುವ ಅಂತ ಬಂದೆ ಎಂದು ಏದುಸಿರು ಬಿಡುತ್ತಾ ಸೂರ್ಯನ ಅಪ್ಪ ಶೇಖರಪ್ಪಯ್ಯ ವರದಿ ಒಪ್ಪಿಸಿದರು. ಒಮ್ಮೆಲೆ ಕಮರಿದ ಕನಸಿಗೆ ಸಣ್ಣಗಿನ ಭರವಸೆಯ ಬೆಳಕೊಂದು ನಿರ್ಮಲಾಳ ಮನದಲ್ಲಿ ಹಾದು ಹೋಯಿತು. ಮಾವ ಬರ್ತಾ ಇದ್ದೀನಿ, ನೀವು ಅಲ್ಲೇ ಇರಿ ಎಂದವಳೇ, ಕಾರನ್ನು ಸಹನಾಳ ಶಾಲೆಯತ್ತ ತಿರುಗಿಸಿದಳು.
ಮನೆಗೆ ಬಂದವಳೇ, ಮಾವ ಶೇಖರಪ್ಪಯ್ಯನ ಬಳಿ ತುರ್ತಾಗಿ ಎರಡು ದಿನಕ್ಕೆ ಮುಂಬಯಿಗೆ ಹೋಗಿ ಬರುತ್ತೇನೆ. ಸಹನಾ ಎರಡು ದಿನ ಶಾಲೆಗೆ ಹೋಗುವುದಿಲ್ಲ. ಅಂದ್ರೆ ನಾನು ಬರುವ ತನಕ ಇಲ್ಲೇ ಇದ್ದು ಬಿಡಿ ಎಂದು ನಿರ್ಲಿಪ್ತ ಭಾವದಿಂದ ಹೇಳಿ, ಸಹನಾಳಿಗೆ ಅಜ್ಜನಿಗೆ ಕಾಟ ಕೊಡಬೇಡವೆಂದು ಹೇಳಿ ಆಕೆಯ ಹಣೆಗೆ ಮುತ್ತಿಕ್ಕಿ, ಮಾವನಿಗೆ ನಮಸ್ಕರಿಸಿ, ಕೈಗೆ ಸಿಕ್ಕಿದ ಬಟ್ಟೆಗಳನ್ನು ಬ್ಯಾಗಿಗೆ ತುರುಕಿಸಿಕೊಂಡು, ಪರ್ಸ್ ಮತ್ತು ಒಂದಿಷ್ಟು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳನ್ನು ಎತ್ತಿಕೊಂಡು ಹೊರಗೆ ಕಾಯುತ್ತಿದ್ದ ಊಬರ್ ನೊಳಕ್ಕೆ ನುಸುಳಿದಳು. ಸಹನಾಳ ಕೈ ಹಿಡಿದುಕೊಂಡಿದ್ದ ಅಜ್ಜ ಶೇಖರಪ್ಪಯ್ಯ, ಮಗಳೆ ನಿಮ್ಮಿ… ಎಲ್ಲಾ ಕ್ಷೇಮ ತಾನೇ? ಎಂದು ತನ್ನ ಉದ್ದನೆಯ ಬಿಳಿ ಗಡ್ಡವನ್ನು ನೀವುತ್ತಾ ತನ್ನ ಬೊಚ್ಚು ಬಾಯಿಯೊಳಗೆ ನಾಲಗೆಯನ್ನು ಅತ್ತಿತ್ತ ಹೊರಳಿಸಿ, ಸಹನಾಳನ್ನು ನಾನು ನೋಡಿಕೊಳ್ಳುತ್ತೇನೆ ನೀನು ಚಿಂತೆ ಮಾಡಬೇಡ ಎಂದು ಮೊಮ್ಮಗಳನ್ನು ಹತ್ತಿರಕ್ಕೆಳೆದು ಅಪ್ಪಿಕೊಂಡು, ಏದುಸಿರು ಬಿಡುತ್ತಾ ಮೂಗಿನ ಹೊಳ್ಳೆಗಳಿಂದ ತನ್ನೊಳಗಿನ ದುಗುಡವನ್ನು ಹೊರ ಹಾಕಿದರು.
ದಾರಿಯುದ್ದಕ್ಕೂ ಇಂಟರ್ನೆಟ್‌ನಲ್ಲಿ ಮುಂಬಯಿಗೆ ಇರುವ ವಿಮಾನಗಳ ಪಟ್ಟಿಯನ್ನು ಗುರುತಿಸಿ, ಊಬರಿನ ಚಾಲಕನ ಬಳಿ ವಿಮಾನ ನಿಲ್ದಾಣಕ್ಕೆ ತಲುಪಲು ಎಷ್ಟು ಹೊತ್ತಾಗಬಹುದೆಂದು ವಿಚಾರಿಸಿಕೊಂಡು ಆನ್ಲೈನ್ ಮೂಲಕ ಟಿಕೆಟ್ ಅನ್ನು ಪಡೆದುಕೊಂಡಳು. ಮುಂಬಯಿ ಬರುವವರೆಗೂ ಎಲ್ಲವನ್ನೂ ಮೆಲುಕು ಹಾಕಿಕೊಂಡು ಬಂದ ನಿರ್ಮಲಳನ್ನು ಸೂರ್ಯನ ಕಚೇರಿಯ ಕಾರು ವಿಮಾನ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಿತು. ಅಷ್ಟರಲ್ಲಿ ಸೂರ್ಯನ ಆಪರೇಷನ್ ಮುಗಿಸಿ ನಿರ್ಮಲಾಳಿಗಾಗಿ ಡಾ. ವಾಸ್ವಾನಿ ಕಾಯುತ್ತಿದ್ದರು. ಅದಾಗಲೇ ಗಡಿಯಾರದ ಮುಳ್ಳು ೧೨ ನ್ನು ದಾಟಿ ಒಂದರ ಆಸುಪಾಸಿಗೆ ಬಂದಿತ್ತು. ತನ್ನ ಕೋಣೆಗೆ ನಿರ್ಮಲಾಳನ್ನು ಕರೆಸಿಕೊಂಡ ಡಾ. ವಾಸ್ವಾನಿ ನಡೆದ ವಿಷಯವನ್ನು ತಿಳಿಸಿ, ಆಪರೇಷನ್ ಸಕ್ಸೆಸ್ ಆಗಿದೆ ಎಂದು ಹೇಳಿ ಕುರ್ಚಿಯಲ್ಲಿ ತಮ್ಮ ದೇಹವನ್ನು ಹಿಂದಕ್ಕೆ ವಾಲಿಸಿದರು. ಮುಂಬಯಿಗೆ ಬರುವ ನಾಲ್ಕು ದಿನಗಳ ಮೊದಲು ಬೆಂಗಳೂರಿನ ಆಸ್ಪತ್ರೆಯಲ್ಲಿ ನಡೆಸಿದ ಹೆಲ್ತ್ ಚೆಕ್ ಅಪ್ಪಿನ ರಿಪೋರ್ಟ್ ಅನ್ನು ಡಾ. ವಾಸ್ವಾನೀಯವರ ಮುಂದೆ ನಿರ್ಮಲ ಹಿಡಿದಳು. ಎಲ್ಲವನ್ನೂ ಓದಿ ನೋಡಿದ ಡಾ. ವಾಸ್ವಾನಿ ದೈವಿಚ್ಚೆ ಮಿಸಸ್. ಸೂರ್ಯಪ್ರಸಾದ್. ಈ ವರದಿಯಲ್ಲಿ ಹುಟ್ಟಿನಿಂದ ಇದ್ದ ಕವಾಟದ ತೊಂದರೆಯ ಬಗ್ಗೆ ಬರೆದಿದ್ದಾರೆ. ಆದರೆ ಇಷ್ಟು ಬೇಗ ಆರೋಗ್ಯ ಕೈ ಕೊಡುತ್ತೆ ಎಂದು ಯಾರೂ ಯೋಚಿಸಲಿಲ್ಲ. ರೆಸ್ಟ್ ಎವೆರಿತಿಂಗ್ ಈಸ್ ಪರ್ಫೆಕ್ಟ್. ಆಫ್ಟರ್ ಆಲ್… ಹಿ ಈಸ್ ಜಸ್ಟ್ ೪೨! ಎಂದು ಕನ್ನಡಕವನ್ನು ಮೂಗಿನ ತುದಿಗೆ ತಂದು ನಿಲ್ಲಿಸಿ ನಿರ್ಮಲಾಳನ್ನು ನೋಡಿದರು.
ಮಾರನೇ ದಿನ ಬೆಳಗ್ಗೆ ಕಣ್ಣು ತೆರೆದ ಸೂರ್ಯ ಒಂದೇ ಸಮನೆ ಅಪ್ಪಾ, ಅಪ್ಪಾ, ಅಪ್ಪಾ.. ಎಂದು ಕೂಗ ತೊಡಗಿದ. ಕೂಡಲೇ ಡ್ಯೂಟೀ ಡಾಕ್ಟರ್ ಡಾ. ವಾಸ್ವಾನೀಯವರನ್ನು ಕರೆದರು. ನಿರ್ಮಲಾಳ ಜೊತೆ ಬಂದ ಡಾ. ವಾಸ್ವಾನಿ ಸೂರ್ಯನನ್ನು ಪರೀಕ್ಷಿಸಿ, ನೋಡು ಇಲ್ಲಿ ಯಾರು ಬಂದಿದ್ದಾರೆ! ಎಂದು ನಿರ್ಮಲಳನ್ನು ತೋರಿಸಿದರು. ಆಕೆಯನ್ನೇ ತದೇಕ ದೃಷ್ಟಿಯಿಂದ ನೋಡುತ್ತಿದ್ದ ಸೂರ್ಯನ ಬಳಿ ತೆರಳಿದ ನಿರ್ಮಲ, ಸೂರಿ ಇದು ನಾನು ಕಣೋ ನಿಮ್ಮಿ… ಎಂದು ಮೆತ್ತಗೆ ತಲೆಯನ್ನು ಸವರಿದಳು. ಆಕೆಯನ್ನೇ ದಿಟ್ಟಿಸಿ ನೋಡಿದ ಸೂರ್ಯ ಕೆಲ ಹೊತ್ತಿನ ನಂತರ ಮತ್ತೆ ಅಪ್ಪ, ಅಪ್ಪಾ.. ಎಂದು ಕೂಗತೊಡಗಿದ. ಅಯ್ಯೋ…. ಎಂದು ಕಿರುಚಿದ ನಿಮ್ಮಿಯ ಕಣ್ಣುಗಳಿಂದ ತೊಟ್ಟಿಕ್ಕಿದ ನೀರು ಡ್ರಿಪ್ ಹಾಕಿದ್ದ ಸೂರ್ಯನ ಮುಂಗೈಯ ಮೇಲೆ ಬಿದ್ದು ಒದ್ದೆಯಾಗಿಸಿದವು. ಡಾ. ವಾಸ್ವಾನಿ ನಿರ್ಮಲಳನ್ನು ಉದ್ದೇಶಿಸಿ, ಮಿಸಸ್. ಸೂರ್ಯ, ಸರಿಯಾದ ಪ್ರಮಾಣದಲ್ಲಿ ರಕ್ತ ಮಿದುಳಿಗೆ ಪ್ರವಹಿಸದಿದ್ದುದರಿಂದ ಆತನ ನೆನಪು ಶಕ್ತಿಗೆ ಆಘಾತವಾಗಿದೆ. ಪ್ರಜ್ಞೆತಪ್ಪಿ ಬಿದ್ದ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರೆ ಇಷ್ಟು ದೊಡ್ಡ ಪ್ರಮಾಣದ ಡ್ಯಾಮೇಜ್ ಆಗುತ್ತಿರಲಿಲ್ಲ. ಪ್ರಜ್ಞೆ ತಪ್ಪಿ ಸುಮಾರು ಮುಕ್ಕಾಲು ಗಂಟೆಯ ನಂತರ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಆ ಸಮಯದಲ್ಲಿ ಮಿದುಳಿಗೆ ಪೂರ್ಣ ಪ್ರಮಾಣದ ರಕ್ತ ಸಂಚಾರವಾಗದೆ ಆತನ ನೆನಪಿನ ಶಕ್ತಿಗೆ ಏಟು ಬಿದ್ದಿದೆ. ಕ್ರಮೇಣ ವೈದ್ಯೋಪಚಾರವು ಆತನ ನೆನಪಿನ ಶಕ್ತಿಯನ್ನು ಮರಳಿ ಹಳಿಗೆ ತರಬಹುದು ಎಂಬ ನಂಬಿಕೆ ನನ್ನದು. ಇದೀಗ ಬಾಲ್ಯದ ನೆನಪುಗಳನ್ನು ಕಟ್ಟಿಕೊಂಡು ಆತನಿಗೆ ಪ್ರಜ್ಞೆ ಮರಳಿದೆ. ನಿಮ್ಮ ಸಹಕಾರ, ಪ್ರಾರ್ಥನೆ ಭಗವಂತನ ಕೃಪೆಯಿಂದ ಸೂರ್ಯ ಮತ್ತೆ ನಿಮ್ಮ ಬಾಳಲ್ಲಿ ಪ್ರಕಾಶಿಸಲಿ. ಇನ್ನೆರಡು ದಿನ ಇಲ್ಲೆ ಇದ್ದು. ಒಂದಿಷ್ಟು ಟ್ರೀಟ್ಮೆಂಟ್ ಅನ್ನು ತೆಗೆದುಕೊಂಡು ಬೆಂಗಳೂರಿಗೆ ಶಿಫ್ಟ್ ಆಗಿ. ಅಲ್ಲಿನ ತಜ್ಞ ವೈದ್ಯರಿಗೆ ನಾನು ಫೋನು ಮಾಡಿ ಹೇಳುತ್ತೇನೆ ಎಂದು ನಿರ್ಮಲಾಳ ತಲೆ ಸವರಿ ಗಾಡ್ ಬ್ಲೆಸ್ಸ್ ಯೂ ಬೋತ್ ಎಂದವರೇ ವಾರ್ಡ್‌ನಿಂದ ಹೊರ ನಡೆದರು.
ಭಾರವಾದ ಮನಸ್ಸಿನಿಂದ ಹೊರ ಬಂದ ನಿರ್ಮಲಾಳು ಕಿಟಕಿಯ ಆಚೆ ಚಾಚಿದ ದಿಗಂತದತ್ತ ಮುಖ ಮಾಡಿ ಒಂದೇ ಸಮನೆ ಭೋರ್ಗರೆಯುವ ಸಾಗರದ ಅಬ್ಬರಕ್ಕೆ ಕಿವಿಯಾಲಿಸಿದಳು. ಸಣ್ಣಗೆ ಬೀಸುವ ತಂಗಾಳಿಯು ಆಕೆಯ ಮುಂಗುರಳನ್ನು ಕಿವಿಯತ್ತ ಮೆಲ್ಲ ಮೆಲ್ಲಗೆ ನೂಕುತಲಿತ್ತು. ಆಕೆಯ ಬೆರಳುಗಳೆರಡು ಮುಂಗುರುಳನ್ನು ಸರಿಸುತ್ತಾ ಮತ್ತೆ ಸುರುಟಿಸಿಕೊಳ್ಳುತ್ತಿದ್ದುವು. ಎಲ್ಲೋ ಮೌನದಲ್ಲಿ ಹುದುಗಿದ್ದ ಮನಸ್ಸನ್ನು ಮೆತ್ತ ಮೆತ್ತಗೆ ಮಾತಿನ ಹಳಿಗೆ ತರಲು ನಿರ್ಮಲ ಬಲವಂತದ ಪ್ರಯತ್ನ ಪಡುತ್ತಿದ್ದಳು. ಮಾವ… ಎಂದು ಉಸಿರಿದ ಅವಳ ತುಟಿಯೆರಡು ಹೊಲಿದುಕೊಂಡವು. ಮಾವನಿಗೆ ವಿಷಯವನ್ನು ತಿಳಿಸುವುದು ಸೂಕ್ತ ಎಂದುಕೊಂಡು ಮೊಬೈಲ್ ಅನ್ನು ಕೈಗೆತ್ತಿಕೊಂಡಳು. ಆದರೆ ಏನೆಂದು ಹೇಳುವುದು? ಬೆಂಗಳೂರಿನಿಂದ ಬಂದ ಮೇಲೆ ಒಮ್ಮೆಯೂ ಮನೆಯನ್ನು ಸಂಪರ್ಕಿಸಿಲ್ಲ. ಸಹನಾ ಹೇಗಿದ್ದಾಳೋ? ಪಾಪ ಮಾವ, ಎಂದು ಮನದಲ್ಲೇ ನೊಂದುಕೊಳ್ಳುತ್ತಾ ಮಾವ ಶೇಖರಪ್ಪಯ್ಯನ ಮೊಬೈಲ್‌ಗೆ ಫೋನಾಯಿಸಿದಳು. ತಕ್ಷಣ ಅತ್ತಕಡೆಯಿಂದ ಒಂದೇ ರಿಂಗಿಗೆ ತೆರೆದುಕೊಂಡ ಶೇಖರಪ್ಪಯ್ಯರ ಫೋನ್, ನಿರ್ಮಲ…. ಮಗಳೆ ಹೇಗಿದ್ದಿ? ಇಷ್ಟು ದಿನ ಫೋನೇ ಇಲ್ಲ?! ಸೂರ್ಯ ಸಿಕ್ಕಿದ್ನಾ? ಅವನೂ ಮುಂಬಯಿಗೆ ಹೋದದ್ದು ಅಲ್ವಾ? ಎಂದು ತಮ್ಮ ಬೊಚ್ಚು ಬಾಯಿಯಿಂದ ನಗುವುದನ್ನು ನಿರ್ಮಲ ಇಲ್ಲಿಂದಲೇ ಕಾಣುತ್ತಿದ್ದಳು. ನಿಧಾನಕ್ಕೆ ತೆರೆದುಕೊಂಡ ನಿರ್ಮಲಾಳ ಮನಸ್ಸು ಶೇಖರಪ್ಪಯ್ಯನಿಗೆ ನಡೆದ ಅಷ್ಟೂ ವಿಷಯಗಳನ್ನು ತಿಳಿಸಿ ಗೋಳೋ ಎಂದು ಅತ್ತಳು. ಹಗುರ ಮಾಡಿಕೊ ಮನಸನ್ನ ಮಗಳೆ, ಹಗುರ ಮಾಡಿಕೊ ಎಂದ ಶೇಖರಪ್ಪಯ್ಯರು ಮೆಲು ದನಿಯಲ್ಲಿ ಏದುಸಿರು ಬಿಡುತ್ತಾ ನಿರ್ಮಲಳಿಗೆ ಸಮಾಧಾನ ಹೇಳುತ್ತಿದ್ದರು. ನೀವು ಹುಷಾರು ಮಾವ, ನಾಳೆಯೇ ಬೆಂಗಳೂರಿಗೆ ಬರುತಿದ್ದೇವೆ, ಎಂದು ಹೇಳಿ ನಿರ್ಮಲ ಫೋನ್ ಕತ್ತರಿಸಿದಳು.
*****
ದಷ್ಟ ಪುಷ್ಟವಾಗಿದ್ದ ಆರಡಿ ಮೂರು ಇಂಚಿನ ಸೂರ್ಯಪ್ರಸಾದ್ ತೀರಾ ಕುಗ್ಗಿ, ನೀರಲ್ಲಿ ಹಾಕಿದ ಮಾವಿನ ಮಿಡಿಯಂತೆ ಮುದುಡಿ ಹೋಗಿದ್ದ. ದೇಹದ ಒಂದು ಭಾಗ ತುಸು ಸ್ವಾಧೀನವನ್ನೂ ಕಳಕೊಂಡಿತ್ತು. ಮನೆಗೆ ಬಂದವನನ್ನು ಮಗಳು ಅಪ್ಪಾ, ಅಪ್ಪಾ… ಎಂದು ಕೂಗಿ ಹೋಗಿ ಅಪ್ಪಿಕೊಂಡರೆ, ಅಲ್ಲಿ ಏನೂ ನಡೆದೇ ಇಲ್ಲವೇನೋ ಎಂಬಂತೆ ಸೂರ್ಯ ಶೂನ್ಯದತ್ತ ತನ್ನ ದೃಷ್ಟಿಯನ್ನು ನೆಟ್ಟ. ಮಗಳು ಒಂದೇ ಸಮನೆ ಅಪ್ಪಾ, ಅಪ್ಪಾ… ಎಂದು ಕರೆದಾಗಲೂ ಯಾವುದೇ ವಿಕಾರಗಳಿಲ್ಲದೆ ತದೇಕ ಚಿತ್ತದಿಂದ ಅವಳನ್ನೇ ದಿಟ್ಟಿಸಿ ನೋಡಿದ. ಯಾವುದೇ ತರದ ಸ್ಪಂದನೆಯು ತನ್ನ ಅಪ್ಪನಿಂದ ಬಾರದ ಸ್ಥಿತಿಯಲ್ಲಿ ಒಂದೂ ಅರಿಯದ ಮುಗ್ಧ ಮನಸ್ಸು ಅಜ್ಜನನ್ನು ಹಿಡಿದುಕೊಂಡು ಗೋಳೋ ಎಂದು ಅಳ ಹತ್ತಿತು. ತನ್ನ ಮಗಳು ಕಣ್ಣೆದುರಿಗೆ ಅಳುತ್ತಿರುವುದನ್ನು ಕಂಡೂ ಯಾವುದೇ ವಿಕಾರಗಳನ್ನು ಹರಿಸದೆ ಮೌನದಿಂದ ಶೂನ್ಯವನ್ನು ದಿಟ್ಟಿಸುತ್ತಾ, ಅಜ್ಜನನ್ನು ತಬ್ಬಿಕೊಂಡ ಮಗಳನ್ನು ಮತ್ತು ಅಪ್ಪ ಶೇಖರಪ್ಪಯ್ಯರನ್ನು ನಿರ್ಭಾವದಿಂದ ನೋಡುತ್ತಿದ್ದ. ಶೇಖರಪ್ಪಯ್ಯರ ಹೊಟ್ಟೆ ಹೊತ್ತಿಯೇ ಹೋಯಿತೇನೋ ಎನ್ನುವಂತೆ ಎಡಗೈಯಿಂದ ಹೊಟ್ಟೆಯನ್ನು ಹಿಡಿದು ಹಿಚುಕುತ್ತಾ ಸವರುತ್ತಾ, ಮೊಮ್ಮಗಳನ್ನು ಬಿಗಿದಪ್ಪಿಕೊಂಡು ಮಗನೇ… ಸೂರ್ಯ…. ನಾನು ಕಣೋ ಅಪ್ಪಾ… ಮಾತಾಡೋ, ಮಾತಾಡು ಕಂದ ಎಂದು ಸೂರ್ಯನಿಗೆ ಹೇಳುತ್ತಿದ್ದರೆ, ಮಗಳನ್ನೇ ದಿಟ್ಟಿಸುತ್ತಿದ್ದ ದೃಷ್ಟಿಯನ್ನು ಅಪ್ಪನತ್ತ ನಿರ್ಭಾವುಕನಾಗಿ ತಿರುಗಿಸಿದ ಸೂರ್ಯ ಕಣ್ಣು ಮುಚ್ಚದೆ ಅಪ್ಪನನ್ನು ಮತ್ತು ಮಗಳನ್ನು ನೋಡುತ್ತಲೇ ಇದ್ದ. ಗಾಢ ದಟ್ಟ ಮೌನವು ಬೇಗುದಿಯನ್ನು ಸೃಷ್ಟಿಸಿತ್ತು. ಶೇಖರಪ್ಪಯ್ಯ, ನಿರ್ಮಲ, ಸಹನ ಮೂರೂ ಜನರ ಕಣ್ಣುಗಳಲ್ಲಿ ಕಟ್ಟೆ ಒಡೆದು ಹರಿಯುತ್ತಿರುವ ಕಣ್ಣೀರಿಗೆ ಒಡ್ಡನ್ನು ಕಟ್ಟಲಾಗದೆ ದೀರ್ಘವಾದ ಮೌನವೊಂದು ನಾಲ್ಕೂ ಜನರ ನಡುವೆ ಆವರಿಸಿಬಿಟ್ಟಿತು. ಸೂರ್ಯ ಮೌನದಿಂದಲೇ ಶೂನ್ಯವನ್ನು ತಿವಿಯತೊಡಗಿದ. ಇಂದೋ ನಾಳೆಯೋ ಎಂದು ಕ್ಷಣ ಗಣನೆ ಮಾಡುತ್ತಿದ್ದ ಶೇಖರಪ್ಪಯ್ಯರ ಬಲ ಹೆಗಲಲ್ಲಿ ವಯಸ್ಸಿಗೆ ಬಂದ ಮಗ, ಎಡ ಹೆಗಲಲ್ಲಿ ಸೊಸೆ ನಿಮ್ಮಿ, ಸೊಂಟ ಹಿಡಿದು ಹೊಟ್ಟೆಗೆ ತಲೆ ತಾಕಿಸಿ ಅಪ್ಪಿಕೊಂಡ ಮೊಮ್ಮಗಳು ಸಹನ. ಪ್ರಕಾಶಮಾನವಾದ ನಿರ್ಮಲ ಬದುಕಲ್ಲಿ ಈಗ ಬೇಕಾಗಿರುವುದು ಸಹನೆ… ಸಹನೆ ಮಾತ್ರ! ನಾನು ಬದುಕಬೇಕು. ಮಗಳೇ ನಿಮ್ಮಿ ಹೆದರದಿರು. ಇನ್ನುಳಿದ ನನ್ನ ಆಯಸ್ಸು ಇವನಿಗೆ ಮುಡಿಪು ಎಂದು ನಿಮ್ಮಿಯ ತಲೆ ಸವರಿದರು. ಪೂಜಿಸದ ದೇವರಿಲ್ಲ. ಸುತ್ತದ ಗುಡಿ ಕಟ್ಟೆಗಳಿಲ್ಲ. ಕಾಣದ ಜ್ಯೋತಿಷಿಯರಿಲ್ಲ. ಹರಕೆ ಹೇಳಿಕೊಳ್ಳದ ದೈವ- ದೇವರಿಲ್ಲ. ಎಲ್ಲವನ್ನೂ ಕೊಟ್ಟ ಬದುಕು ಮುಖ್ಯವಾಗಿ ಮನುಷ್ಯನಿಗೆ ಬೇಕಾಗಿದ್ದನ್ನೇ ಕಸಿದುಕೊಂಡಿತ್ತು. ಎಲ್ಲವೂ ಇದ್ದು ಇಲ್ಲದಂತೆ! ಸೂರ್ಯ ಮಂಕಾಗಿಬಿಟ್ಟ.
*****
ಇತ್ತೀಚೆಗೆ ಆರೋಗ್ಯದ ದೃಷ್ಟಿಯಿಂದ ಮತ್ತು ನಿತ್ಯದ ರಗಳೆಯಿಂದ ತುಸು ನೆಮ್ಮದಿಗಾಗಿ ನಾನು ಬೆಳಗ್ಗೆ ತಪ್ಪಿದರೆ ಸಂಜೆಯ ಹೊತ್ತು ವಾಕಿಂಗ್ ಅನ್ನು ಶುರು ಮಾಡಿದ್ದೇನೆ. ಹಾಗೆ ಹೆಜ್ಜೆ ಹಾಕುವಾಗ ಅಪಾರ್ಟ್ಮೆಂಟಿನ ಕೆಲವೊಂದು ಪರಿಚಯಸ್ಥ ಮುಖಗಳು ನನ್ನ ನೋಡಿ ನಕ್ಕರೆ, ಇನ್ನುಳಿದವು ಇವನಿಗೇನೋ ರೋಗ ಆಂಟಿ ಕೊಂಡಿರಬೇಕು, ಅದಕ್ಕೆ ಈ ವಾಕಿಂಗನ್ನು ಧಿಡೀರನೆ ಶುರು ಹಚ್ಚಿಕೊಂಡಿದ್ದಾನೆ. ಇಲ್ಲ ಎಂದರೆ ಈ ಮನುಷ್ಯ ಮನೆ, ಕಚೇರಿ ಬಿಟ್ಟು ಹೊರಗೆ ಬರುವವನೇ ಅಲ್ಲ, ಬಂದದ್ದನು ನಾವಂತೂ ನೋಡಿಲ್ಲ. ನಮ್ಮ ಜೊತೆ ಬೆರೆಯಲೂ ಇವನಿಗೆ ಕಷ್ಟ. ಸಂಘದ ಯಾವುದೇ ಕಾರ್ಯಕ್ರಮಗಳಿಗೆ ಬಂದಿದ್ದಾದರೂ ಉಂಟಾ? ಈಗ ಜೀವಭಯ ಹತ್ತಿರಬೇಕು ಅದಕ್ಕೆ ಈ ನಡೆದಾಟ. ಏನೇ ಇರಲಿ ಜೊತೆಗೆ ಒಂದಿಷ್ಟು ನಗುವುದನ್ನಂತೂ ಕಲಿತಿದ್ದಾನೆ ಎಂದು ಅಲ್ಲೇ ಕುಳಿತ, ಅತ್ತ ಇತ್ತ ಸುಳಿಯುತ್ತಿದ್ದ ಒಂದಷ್ಟು ಮುಖಗಳು ಮನಸ್ಸಲ್ಲೇ ಗೊಣಗುವುದನ್ನು ಅವರ ಮುಖ ನೋಡಿ ನಾನು ಅರ್ಥೈಸಿಕೊಂಡೆ ಮತ್ತು ಒಂದಿಷ್ಟು ಬಲವಂತದ ನಗುವನ್ನು ಅವರತ್ತ ಚೆಲ್ಲಿದೆ. ಹೀಗಿರಲು ನಡೆಯುತ್ತಾ ನಡೆಯುತ್ತಾ ನನ್ನ ಶೂಸಿನ ಲೇಸು ಕಳಚಿಕೊಂಡಿತು. ಅಲ್ಲೇ ಇದ್ದ ಕಲ್ಲು ಬೆಂಚಿನಲ್ಲಿ ಕುಳಿತು ಶೂವಿನ ಲೇಸನ್ನು ಕಟ್ಟಲು ಬೆನ್ನನ್ನು ಬಾಗಿಸುವಷ್ಟರಲ್ಲಿ ‘ಢಮಾರ್’ ಎಂಬ ಸದ್ದು ನನ್ನನ್ನು ಬೆಚ್ಚಿ ಬೀಳಿಸುವುದರ ಜೊತೆಗೆ ವಿಚಿತ್ರ ತಲ್ಲಣಗಳು ನನ್ನೊಳಗೆ ಸೃಷ್ಟಿಯಾಗಲು ತೊಡಗಿತು.
ಅಪಾರ್ಟ್‌ಮೆಂಟಿನ ಪಕ್ಕದಲ್ಲಿರುವ ಗುಡ್ಡವನ್ನು ಕಲ್ಲು ಕ್ವಾರಿಗಾಗಿ ಡೈನಮೈಟ್ ಇಟ್ಟು ಸ್ಫೋಟಿಸುತ್ತಿದ್ದರು. ಅದರ ದಟ್ಟ ವಾಸನೆಯು ಪರಿಸರವನ್ನೆಲ್ಲಾ ಆವರಿಸಿ ಆಗಸಕ್ಕೇ ಕಪ್ಪು ಹೊಗೆಯನ್ನು ಹೊದಿಸಿಬಿಟ್ಟಿತ್ತು. ಸದ್ದಿಗೆ ಹೆದರಿದ ಕಾಗೆಗಳ ಹಿಂಡು ಕಪ್ಪು ಬಣ್ಣಕ್ಕೆ ಸೆಡ್ಡು ಹೊಡೆಯುವಂತೆ ಹೊಮ್ಮಿದ ದಟ್ಟ ಹೊಗೆಯ ನಡುವೆಯೇ ಕಿರುಚುತ್ತಾ ದಿಕ್ಕು ದೆಸೆ ಇಲ್ಲದೆ ಹಾರಾಡುತ್ತಿದ್ದುವು. ಕಲ್ಲು ಬೆಂಚಿನ ಹಿಂದೆ ಇದ್ದ ನೀಲಗಿರಿಯ ಒಂದೇ ಒಂದು ಮರವು ಸಣ್ಣಗೆ ಅತ್ತಿಂದಿತ್ತ ಮನಸ್ಸಿಲ್ಲದ ಮನಸ್ಸಿನಿಂದ ಗಾಳಿಗೆ ತಲೆಯಾಡಿಸುತ್ತಿತ್ತು. ಅಷ್ಟರಲ್ಲಿ ತಣ್ಣಗಿನ ಕೈಯೊಂದು ಮೆಲ್ಲಗೆ ಬೆನ್ನನ್ನು ನೇವರಿಸಿತು. ಯಾರು ಎಂದು ತಿರುಗಿ ನೋಡಲು ಕೃಶ ದೇಹದ, ನೀಳ ಬಿಳಿಗಡ್ಡದ, ಹಣ್ಣಾದ ಉದ್ದನೆಯ ಕೂದಲಿನ ಮನುಷ್ಯ ಪಂಚೆಯುಟ್ಟು, ತೋಳವರೆಗೆ ಮಡಚಿದ ಇಸ್ತ್ರಿ ಕಾಣದ ಅಂಗಿಯನ್ನು ತೊಟ್ಟ ಜೀವವೊಂದು ನನ್ನ ನೋಡಿ ನಗುತ್ತಿತ್ತು. ತುಟಿಯಲ್ಲಿ ಹೊಮ್ಮಿದ ನಗುವನ್ನು ಪೊದೆಯಂತೆ ಬೆಳೆದ ಮೀಸೆಯು ಹಿಡಿದಿಟ್ಟಿತ್ತು. ತಕ್ಷಣ ಅವರನ್ನು ಗುರುತಿಸಿದೆ.ಅರೆ, ಶೇಖರಣ್ಣ… ನೀವು ಇಲ್ಲಿ? ಎಂದು ಆಶ್ಚರ್ಯವೂ, ಕುತೂಹಲವೂ ತಡೆಯದೆ ಕೇಳಿದೆ. ನೀನು ಹೇಗಿದ್ದಿ ಮಾರಾಯ? ಅಪ್ಪ–ಅಮ್ಮ- ಅಣ್ಣ ಎಲ್ಲ ಹೇಗಿದ್ದಾರೆ? ಎಂದು ವಿಚಾರಿಸಿದರು.
ಶೇಖರಣ್ಣ ನನ್ನೂರಿನ ಪಕ್ಕದೂರಿನವರು ಮತ್ತು ಪರಿಚಯಸ್ಥರು ಕೂಡಾ. ನಾನು ಮತ್ತು ಅಣ್ಣ ಸಣ್ಣವರಿರುವಾಗ ಅಂಬಿಲಡ್ಕ ದೇವಸ್ಥಾನದ ಜಾತ್ರೆಗೆ ಹೋದಾಗ ಇವರ ಮನೆಯಲ್ಲಿ ಹೊತ್ತು ಕಳೆಯುತ್ತಿದ್ದೆವು. ಅದಕ್ಕೆ ಕಾರಣ ನಮ್ಮದೇ ವಯೋಮಾನದ ಚಂದ್ರಶೇಖರ ಮತ್ತು ಸೂರ್ಯಪ್ರಸಾದ್. ಜಾತ್ರೆಯಲ್ಲಿ ಅಲೆದು ಸುಸ್ತಾಗಿ ನಿದ್ದೆ ಬಂದರೆ ಶೇಖರಣ್ಣನ ಮನೆಯಲ್ಲಿ ಮಲಗಿ ಮಾರನೇ ದಿನ ಬೆಳಗ್ಗೆ ಬೇಗ ಎದ್ದು ಮನೆಯತ್ತ ಹೊರಡುತ್ತಿದ್ದೆವು. ಶೇಖರಣ್ಣನ ದೊಡ್ಡ ಮಗ ಚಂದ್ರ ಆವಾಗಲೇ ವಿಜ್ಞಾನ- ತಂತ್ರಜ್ಞಾನ ಎಂದು ಏನೇನೋ ಪರೀಕ್ಷೆಗಳನ್ನು ಸ್ವತಹ ತಾನೇ ಮಾಡುತ್ತಿದ್ದ. ರೋಬೋಟ್, ಉಪಗ್ರಹಗಳ ಮಾದರಿಯನ್ನು ತಾನೇ ತಯಾರಿಸಿ ಒಂದು ದಿನ ನಾನೂ ಈ ತರದ ಉಪಗ್ರಹವನ್ನು ಅಂತರಿಕ್ಷಕ್ಕೆ ಕಳಿಸುತ್ತೇನೆ ನೋಡ್ತಾ ಇರು ಎಂದು ಪಿಳಿ ಪಿಳಿ ಗುಟ್ಟುತ್ತಿದ್ದ ನನ್ನ ಕಣ್ಣ ಮುಂದೆ ಅದನ್ನು ಹಿಡಿದು ಜಾತ್ರೆಯ ಬೆಳಕಲ್ಲಿ ಒಂದಾದ ಕತ್ತಲಿನ ನಭವನ್ನು ತೋರಿಸುತ್ತಾ ನಮಗೆ ಹೇಳುತ್ತಿದ್ದ. ಅಂತರಿಕ್ಷ ಎಂದು ತೋರಿಸಿದ ಆಕಾಶವನ್ನು ಆಆ… ಎಂದು ಬಾಯಿ ತೆರೆದು ನೋಡುತ್ತಿದ್ದ ನನ್ನ ಬಾಯಿಯನ್ನು ನನ್ನದೇ ವಯಸ್ಸಿನ ಸೂರ್ಯಪ್ರಸಾದ್ ತನ್ನ ಕೈಯಿಂದ ಮುಚ್ಚಿ ಹಿ…ಹಿ… ಎಂದು ನಕ್ಕಿದ್ದ. ಹೀಗೆ ವರ್ಷಕ್ಕೆ ಒಂದೋ ಎರಡೋ ಬಾರಿ ನಮ್ಮ ಮುಲಾಕಾತುಗಳು ನಡೆಯುತ್ತಿದುವು.
ಮುಂದುವರಿದು ಮಾತನಾಡಿದ ಶೇಖರಣ್ಣ ನಾವೀಗ ಈ ಅಪಾರ್ಟ್ಮೆಂಟ್‌ನಲ್ಲಿ ಇದ್ದೇವೆ. ನಮ್ಮ ವಿಲ್ಲಾವನ್ನು ಬಾಡಿಗೆಗೆ ಕೊಟ್ಟಿದ್ದೇವೆ ಮಾರಾಯ. ಓಹ್ ಹೌದಾ ಬಹಳ ಸಂತೋಷ ಶೇಖರಣ್ಣ. ಊರಿನವರು ಜೊತೆಗಿದ್ದರೆ ಅದಕ್ಕಿಂತ ಬೇರೆ ಖುಷಿ ಏನಿದೆ ಹೇಳಿ? ಎಂದು ಶೇಖರಣ್ಣನಿಗೆ ಹೇಳಿದೆ. ಸೂರಿ-ನಿಮ್ಮಿ-ಸಹನ ಎಲ್ಲರೂ ಆರಾಮ ತಾನೇ? ಎಂದೂ ವಿಚಾರಿಸಿದೆ. ಅಲ್ಲೇ ಪಕ್ಕದಲ್ಲಿ ಹಾದು ಹೋಗುತ್ತಿದ್ದ ಮುಖರ್ಜಿ ಅಂಕಲ್ ಹೇಯ್ ಸ್ಯಾಂಟಿ ಮ್ಯಾನ್ ಹೌ ಆರ್ ಯೂ ? ಎಂದು ಕೈ ಬಿಸಿ ಪ್ರಶ್ನಿಸಿ ನನ್ನಿಂದ ಉತ್ತರವನ್ನೂ ಪಡೆದು ಗಜ ಗಾತ್ರದ ತಮ್ಮ ಹೊಟ್ಟೆಯನ್ನು ಹೊತ್ತು ಧಿಡ್… ಧಿಡ್… ಎಂದು ಬಲವಂತದ ಹೆಜ್ಜೆ ಹಾಕಿ ಮುಂದೆ ನಡೆದರು. ಮತ್ತೆ ಶೇಖರಣ್ಣನ ಬಳಿ ಊರಿನ ವಿಷಯ ಕೇಳೋಣ ಎಂದು ತಿರುಗಿ ನೋಡಿದರೆ ಅವರ ಹಿಂದೆ ಸಣಕಲು ದೇಹವೊಂದು ಟಿ ಶರ್ಟ್ ಮತ್ತು ಬರ್ಮುಡಾ ಧರಿಸಿ ಅಪ್ಪಾ, ಅಪ್ಪಾ… ಯಾರದು? ಯಾರದು? ಮನೆಗೆ ಹೋಗೋಣ… ಮನೆಗೆ ಹೋಗೋಣ, ಎಂದು ಹೇಳುತ್ತಿತ್ತು. ಯಾರು ಶೇಖರಣ್ಣ ಇದು ಎಂದು ಕೇಳಬೇಕೆನಿಸುವಷ್ಟರಲ್ಲಿ, ಓ ಮೈ ಗಾಡ್… ಎನ್ನುವ ಉದ್ಘಾರದೊಂದಿಗೆ ಸೂ…ರಿ ಎಂದು ಹೇಳಿಕೊಳ್ಳುತ್ತಲೇ ಕೈಯಿಂದ ನನ್ನ ಬಾಯನ್ನು ಮುಚ್ಚಿಕೊಂಡೆ. ಶೇಖರಣ್ಣ ಏನಿದು? ಒಂದೂ ಅರ್ಥವಾಗ್ತಾ ಇಲ್ಲ ಎಂದು ನನ್ನ ಆತಂಕ, ದುಗುಡ, ನೋವನ್ನು ಅವರ ಕೈ ಹಿಡಿದು ಪ್ರಶ್ನಿಸಿದೆ. ಏನು ಹೇಳುವುದು ಮಾರಾಯ?! ನನ್ನಂತ ಪಾಪಿ ತಂದೆ ಈ ಲೋಕದಲ್ಲಿ ಇರಲಿಕ್ಕಿಲ್ಲ. ಅಷ್ಟು ಹೇಳುತ್ತಿರುವಾಗ ಅಲ್ಲೇ ಮೆತ್ತಗೆ ನಡೆದಾಡುತ್ತಿದ್ದ ಸೂರ್ಯ ಶೇಖರಣ್ಣನ ಬಳಿ ಬಂದು ಅಪ್ಪಾ…ಮನೆಗೆ ಹೋಗುವ, ಮನೆಗೆ ಹೋಗುವ ಎಂದು ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಿ, ಇದು ಯಾರು? ಇದು ಯಾರು? ಎಂದು ಮತ್ತೆ ಮತ್ತೆ ಪ್ರಶ್ನಿಸ ತೊಡಗಿದ. ಅವನನ್ನು ಪುಟ್ಟ ಮಕ್ಕಳಂತೆ ಸಂತೈಸಿದ ಶೇಖರಣ್ಣ, ಒಂದೈದು ನಿಮಿಷ ಮಗ ನೀನು ಇಲ್ಲೆ ಸ್ವಲ್ಪ ನಡೆದಾಡಿ ಬಾ ಆಮೇಲೆ ಮನೆಗೆ ಹೋಗುವ ಆಯ್ತಾ… ಎಂದು ಅವನನ್ನು ರಮಿಸಿ ಒಪ್ಪಿಸಿದರು. ಇದೆಲ್ಲ ಏನು ಶೇಖರಣ್ಣ? ಎಂದು ಮತ್ತೆ ಪ್ರಶ್ನಿಸಿದೆ. ಏನೂಂತ ಹೇಳಲಿ. ನಡೆದ ಘಟನೆಯನ್ನೆಲ್ಲ ಶೇಖರಣ್ಣ ವಿವರಿಸಿ ಹೇಳಿದರು. ವಿಷಯ ತಿಳಿದು ನನ್ನ ಅಡಿಯಿಂದ ಮುಡಿಯವರೆಗೆ ಫಟ ಫಟನೆ ಬೆವರ ಹನಿಗಳು ಮುತ್ತಿಕ್ಕ ತೊಡಗಿದವು. ಸಂಜೆಯ ಕುಳಿರ್ ಗಾಳಿ ಬೀಸುತ್ತಲೇ ಇತ್ತು. ಬೆವರ ಹನಿಗಳು ಹಣೆಯ ಮೇಲೆ ಒಡೆಯುತ್ತಲೇ ಇದ್ದವು.
ನಿನಗೇ ಗೊತ್ತು, ದೊಡ್ಡವ ಚಂದ್ರ ಅವನ ಬದುಕಲ್ಲಿ ಹಾಗೊಂದು ದುರಂತ ನಡೆಯಿತು. ನಂತರ ದೇವಕಿಯೂ ಹೊರಟು ಬಿಟ್ಟಳು. ಇದ್ದವ ಇವನೊಬ್ಬ. ಎಲ್ಲವೂ ಅಂದುಕೊಂಡ ಹಾಗೆ ಬದುಕು ಸಾಗುತ್ತಿತ್ತು. ಇದೀಗ ನೋಡು… ಭಗವಂತ ನನ್ನ ಪಾಲಿಗೆ ಈ ನೋವನ್ನೂ ಕೊಟ್ಟು ಬಿಟ್ಟ. ಸೂರಿಯ ನೆನಪು ಹದಿನೈದು- ಹದಿನಾರು ವರ್ಷದಷ್ಟು ಮಾತ್ರ ಮಾರಾಯ. ನಂತರದ ಯಾವುದೇ ನೆನಪು ಅವನಿಗಿಲ್ಲ. ಕಟ್ಟಿಕೊಂಡ ಹೆಂಡತಿಯನ್ನು, ಹುಟ್ಟಿಸಿದ ಮಗಳನ್ನು ಕೂಡ ಗುರುತು ಹಿಡಿಯುವುದಿಲ್ಲ ಅಂದರೆ ಇದಕ್ಕೆ ಏನೂಂತ ಹೇಳುವುದು ಹೇಳು? ನನ್ನ ಗುರುತು ಮಾತ್ರ ಹತ್ತಿದೆ ಅವನಿಗೆ. ಇದಕ್ಕಿಂತ ದೊಡ್ಡ ದುರಂತ ಇದೆಯಾ ಹೇಳು? ಎಂದು ಇಳಿಬಿಟ್ಟಿದ್ದ ನನ್ನ ಕೈಯನ್ನು ಹಿಡಿದೆಳೆದು ಅದುಮಿ ಭಾವನೆಗಳನ್ನು ವ್ಯಕ್ತಪಡಿಸಿದರು. ನನಗೆ ಅರ್ಥ ಆಗ್ತತದೆ ಶೇಖರಣ್ಣ, ನೀವು ಬೇಜಾರು ಮಾಡಿಕೊಳ್ಳಬೇಡಿ ಎಂದು ಒಂದಿಷ್ಟು ಸಂತೈಸಿದೆ. ಎಂತಾ ಬೇಜಾರು ಮಾರಾಯ.., ಹಾಗಂದರೇನು? ಎಂದು ತಮ್ಮ ಬೊಚ್ಚು ಬಾಯಿಯನ್ನು ತೆರೆದು ನಕ್ಕು ನನ್ನನ್ನು ಕೇಳಿದರು. ಒಮ್ಮೊಮ್ಮೆ ಇವ ಹಟ ಮಾಡುವುದು ಎಂದರೆ ಹೇಳಿ ಪ್ರಯೋಜನವಿಲ್ಲ. ಹೇಳದೆ ಕೇಳದೆ ಮನೆಯಿಂದ ಹೊರಟು ಬಿಡುತ್ತಾನೆ. ತಿರುಗಿ ಬರಲು ಗೊತ್ತಾಗುವುದಿಲ್ಲ. ಎಲ್ಲೋ ಅಲೆಯುತ್ತಿರುತ್ತಾನೆ. ಇವನ ಮಾತಿನಲ್ಲಿ ಸ್ಪಷ್ಟತೆ ಇಲ್ಲ. ಮನೆ ಭಾಷೆ ಬಿಟ್ಟು ಬೇರೆ ಭಾಷೆ ಬರುವುದೂ ಇಲ್ಲ, ಅರ್ಥವಾಗುವುದೂ ಇಲ್ಲ. ಹೋಮ್ ನರ್ಸ್ ಅನ್ನು ಇರಿಸಿದ್ದಾಯಿತು. ಅವನಿಗೆ ಒಂದು ದಿನ ಇವನು ನಾಲ್ಕು ಬಾರಿಸಿದ. ಮರುದಿನದಿಂದ ಅವ ನಾಪತ್ತೆ. ನಿಮ್ಮಿ ಒಂದಷ್ಟು ವರ್ಷ ವರ್ಕ್ ಫ್ರಮ್ ಹೊಮ್ ಅಡಿಯಲ್ಲಿ ಕೆಲಸ ಮಾಡಿದಳು ಇದೀಗ ಅವಳನ್ನು ಹೊಸ ಪ್ರಾಜೆಕ್ಟ್‌ಗೆ ಹೆಡ್ ಆಗಿ ನೇಮಿಸಿದ್ದಾರೆ. ಆಕೆಯೂ ಕಚೇರಿಗೆ ಹೊಗುವವಳೆ, ಮೊಮ್ಮಗಳು ಶಾಲೆಗೆ. ನಾನು ಹುಟ್ಟಿಸಿದ ಕರ್ಮಕ್ಕೆ ನೋಡು ಭಗವಂತ ಕೊಟ್ಟ ಶಿಕ್ಷೆ. ಕೆಲವೊಮ್ಮೆ ಜೋರು ಮಾಡಿದರೆ ಸಿಟ್ಟಿನಿಂದ ನನಗೆ ಹೊಡೆಯುತ್ತಾನೆ. ಅದೆಷ್ಟೋ ಸಲ ಮುಖ ಮೂತಿ ನೋಡದೆ ನನಗೆ ಹೊಡೆದಿದ್ದಾನೆ. ನಾನೂ ಸಹಿಸಿಕೊಂಡೆ. ನಿಧಾನವಾಗಿ ಹಂಡತಿಗೆ, ಮಗಳಿಗೆ ಹೊಡೆಯಲು ಶುರು ಮಾಡಿದ. ಪುಟ್ಟ ಮಗುವಿನ ಹಟ. ಯಾವುದೇ ಉಧ್ವೇಗವಿಲ್ಲದ ಮನಸ್ಥಿತಿಯಿಂದ ಹೊಡೆಯುತ್ತಿದ್ದ. ನಾನೂ ಸಹಿಸಿಕೊಳ್ಳುವಷ್ಟು ಸಹಿಸಿದೆ. ಗದರಿಸಿದೆ, ಬೆದರಿಸಿದೆ. ಬಗ್ಗಲಿಲ್ಲ, ಜಗ್ಗಲಿಲ್ಲ. ಒಂದು ದಿನ ಹಟಕ್ಕೆ ಬಿದ್ದವನು ನನ್ನ ಕಪಾಳಕ್ಕೆ ಹೊಡೆದ. ತಕ್ಷಣ ನಾನೂ ಅವನ ಕಪಾಳಕ್ಕೆ ಬಿಟ್ಟೆ, ಎಂದು ಮಂಜಾದ ಕಣ್ಣನ್ನು ಒರೆಸಿಕೊಂಡರು. ಇಂತಹ ದುಃಸ್ಥಿತಿ ಯಾವ ಅಪ್ಪನಿಗೂ ಬರಬಾರದು. ನನ್ನಂತಹ ನತದೃಷ್ಟ ಯಾರೂ ಇಲ್ಲ. ನಾನು ಏನು ಪಾಪ ಮಾಡಿದ್ದೇನೆ ಹೇಳು? ಬಂದ ಕೆಲಸ ಮುಗಿಸಿದ್ದೇನೆ ಇನ್ನು ಹೊರಟು ಬಿಡುತ್ತೇನೆಂದು ಎಷ್ಟೋ ಸಲ ಅಂದುಕೊಂಡದ್ದಿದೆ. ಅಂತಹ ಸಮಯದಲ್ಲಿ ಏನಾದರೊಂದು ಕಷ್ಟಗಳು ಬಂದು ನನ್ನನ್ನಿಲ್ಲಿಯೇ ಹುಡುಗಿ ಬಿಡುತ್ತವೆ. ಇದೀಗ ಬದುಕಲ್ಲಿ ಎಲ್ಲವೂ ಸರಿಯಾಯಿತು ಎಂದುಕೊಳ್ಳುವಷ್ಟರಲ್ಲಿ ಧುತ್ತೆಂದು ಎರಗಿದ ಈ ಕರಾಳ ಸ್ಥಿತಿಯಿಂದ ಇವರನ್ನು ಬಿಟ್ಟು ಹೋಗುವುದಾದರೂ ಹೇಗೆ? ನೀನೇ ಹೇಳು? ಹಾಗಂತ ನಾನು ಎಷ್ಟೋ ಸಲ ಯೋಚಿಸುವುದುಂಟು. ಯಾವ ಅಪ್ಪನಿಗೂ ಇಂತಹ ಕಷ್ಟ ಬರಬಾರದು ಮಾರಾಯ ಎಂದು ತಮ್ಮ ಕೈಯನ್ನು ನನ್ನ ಹೆಗಲಲ್ಲಿ ಇರಿಸಿ ಮುಖವನ್ನು ಬದಿಗೆ ಸರಿಸಿ ಉಮ್ಮಳಿಸಿ ಬಂದ ದುಃಖವನ್ನು ಹೊರಗೆ ದಬ್ಬಿದರು. ನನ್ನ ನಿಟ್ಟುಸಿರು ಶೇಖರಣ್ಣನ ಕೂದಲನ್ನು ಸವರಿ ಗಾಳಿಯಲ್ಲಿ ಲೀನವಾಯಿತು.
ಅಷ್ಟರಲ್ಲಿ ಇವರಿಬ್ಬರನ್ನು ಹುಡುಕಿಕೊಂಡು ಪಾರ್ಕ್ ನತ್ತ ಬರುತ್ತಿರುವ ನಿಮ್ಮಿ ಮತ್ತು ಸಹನಾಳನ್ನು ಗಮನಿಸಿದ ಶೇಖರಣ್ಣ, ನೋಡು ನಿಮ್ಮಿಯ ಕಾಳಜಿ. ಇನ್ನೂ ಬಂದಿಲ್ಲ ಯಾಕೆ ಅಂತ ಹುಡುಕಿಕೊಂಡು ಬಂದಿದ್ದಾರೆ. ಫೋನ್ ತರುವುದನ್ನು ಮರೆತನಲ್ಲ ನಾನು, ಹಾಗಾಗಿ. ಅಲ್ಲಿಗೆ ಬಂದ ಸೂರಿ ಅಪ್ಪಾ… ಮನೆಗೆ ಹೋಗುವ, ಮನೆಗೆ ಹೋಗುವ… ಇದು ಯಾರು, ಇದು ಯಾರು ಅಪ್ಪಾ? ಎಂದು ಒಂದೇ ಸಮನೆ ಕೇಳುತ್ತಿದ್ದ. ತಕ್ಷಣ ಎಚ್ಚೆತ್ತುಕೊಂಡ ಶೇಖರಣ್ಣ ಬರ್ತೇನೆ ಮಾರಾಯ. ನಾನು ಇರುವವರೆಗಾದರೂ ಇವನಿಗೆ ನಾನೇ ಗತಿ. ನಿರ್ಮಲ ಮತ್ತು ಸಹನಾಳನ್ನು ನೆನೆದರೆ ಹೊಟ್ಟೆ ಉರಿಯುತ್ತದೆ. ಇಂತಹ ಗತಿ ಯಾವ ಅಪ್ಪನಿಗೂ ಬಾರದಿರಲಿ. ನನ್ನದೊಂದು ಶಾಪಗ್ರಸ್ತ ಜನ್ಮ. ನೀನು ಮಾತ್ರ ಹುಷಾರು. ಒಂದೊಂದು ಕೇಳುವಾಗ, ನೋಡುವಾಗ, ಓದುವಾಗ ಯಾಕಾದ್ರೂ ಈ ಭೂಮಿಗೆ ಬಂದೆವು ಅಂತ ಅನಿಸುತ್ತದೆ ಎಂದು ಹೇಳುತ್ತಿರುವಾಗಲೇ ಅಲ್ಲಿಗೆ ಬಂದ ನಿಮ್ಮಿ ಮತ್ತು ಸಹನಾಳನ್ನು ಸೇರಿಕೊಂಡ ಶೇಖರಣ್ಣ, ಮಗನ ಕೈ ಹಿಡಿದು ಬಾ ಹೋಗುವ ಎಂದು ಮನೆಯತ್ತ ನಡೆದರು. ನಾನು ಇದ್ದವನು, ಸೂರಿ…. ಸೂರಿ ಎಂದು ಕರೆದೆ. ಅದಕ್ಕೆ ಉತ್ತರವಾಗಿ ಸೂರಿ ನನ್ನನ್ನು ತಿರುಗಿ ನೋಡುತ್ತಾ ಶೇಖರಣ್ಣನನ್ನು ಕೇಳುತ್ತಿದ್ದ ಅಪ್ಪ,ಅಪ್ಪಾ… ಯಾರು ಯಾರದು? ಹೇಳು, ಹೇಳು ಅಪ್ಪಾ ಎಂದು ಕೇಳುತ್ತಲೇ ಇದ್ದ. ಆರಡಿ ಮೂರು ಇಂಚಿನ ಸ್ಪುರದ್ರೂಪಿ ಸೂರ್ಯ ಹೋಂಡಾ ಸಿವಿಕ್‌ನಲ್ಲಿ ಕೂತು ಸಿಗರೇಟ್ ಸೇದುತ್ತಾ ಪುಸ್ತಕವನ್ನು ಓದುತ್ತಾ ಹೋಗುವ ಚಿತ್ರವು ನನ್ನ ಮನದಲ್ಲಿ ಮೂಡಿ ಹಾ…ಗೆ… ಮರೆಯಾಯಿತು. ಬದುಕೆಂದರೇನೆಂದು ನನ್ನನ್ನು ನಾನೇ ಪ್ರಶ್ನಿಸಿಕೊಂಡೆ. ಮತ್ತೊಮ್ಮೆ ಬಂಡೆಯನ್ನು ಒಡೆದ ಡೈನಮೈಟ್ ನ ವಾಸನೆ ಜೊತೆಗೆ ದಟ್ಟವಾಗಿ ಆವರಿಸಿದ ಕಪ್ಪು ಹೊಗೆಯು ಹೊಟ್ಟೆಯನ್ನು ಕಲಕಿ ಉಮ್ಮಳಿಸಿ ಬರುವಂತೆ ಮಾಡಿತು. ಸುರುಳಿ ಸುತ್ತಿ ನನ್ನೊಳಗೆ ಬಿದ್ದಿದ್ದ ನೆನಪುಗಳು ಒಂದೊಂದಾಗಿ ಹೊರ ಬರಲು ಹವಣಿಸುತ್ತಿದ್ದುವು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ