ಬೆಂಗಳೂರಿನಿಂದ ಗೌಹಾತಿಗೆ ಹೊರಟಿದ್ದ ರೈಲಿನಲ್ಲಿ ಒಬ್ಬ ಕನ್ನಡಿಗ ಪ್ರಯಾಣಿಕರ ಪರಿಚಯವಾಯಿತು. ಸದ್ಯದಲ್ಲೇ ಅವರು ನಿವೃತ್ತರಾಗಲಿದ್ದರು. ಬೆಂಗಳೂರಿಗೆ ಬಂದು ಬಂಧು-ಮಿತ್ರರ ಜೊತೆ ಬದುಕುತ್ತಾರೆ ಎಂಬುದು ನನ್ನ ನಿರೀಕ್ಷೆ. ಆದರೆ ಅವರು ಬೆಂಗಳೂರಿನಲ್ಲಿದ್ದ ಆಸ್ತಿಯನ್ನೆಲ್ಲ ಮಾರಿ, ಗೌಹಾತಿಯಲ್ಲೇ ಖಾಯಂ ಆಗಿ ನೆಲೆಸಲು ಹೊರಟಿದ್ದರು. ಈಗ ನಾವು ಅಲ್ಲಿ ಜೀವನ ಲಯಕ್ಕೆ ಹೊಂದುಕೊಂಡುಬಿಟ್ಟಿದ್ದೇವೆ. ನಮ್ಮ ತಂದೆ-ತಾಯಿ ಇಬ್ಬರೂ ಖಾಯಿಲೆ ಬಿದ್ದಾಗ ನಮಗಾಗಿ ಬಂದವರು ನೆಂಟರಿಷ್ಟರಲ್ಲ, ನಮ್ಮ ಕಾಲೊನಿಯ ಅಸ್ಸಾಮಿ ಬಂಧುಗಳು. ಅವರಿಗೆ ಕೃತಜ್ಞತೆ ಸಲ್ಲಿಸುವುದೆಂದರೆ, ಅವರೊಡನೆಯೇ ಮುಂದೆ ಬದುಕುವುದು ಎಂದುಬಿಟ್ಟರು. ಅವರು ನೀಡಿದ ಒಳನೋಟದಿಂದ ಚೇತರಿಸಿಕೊಳ್ಳಲು ತುಂಬಾ ದಿನಗಳೇ ಬೇಕಾದವು.
ಕತೆಗಾರ ಕೆ. ಸತ್ಯನಾರಾಯಣ ಅವರ “ನನ್ನ ಪುಸ್ತಕಗಳ ಆತ್ಮಚರಿತ್ರೆ” ಕೃತಿಯ ಒಂದು ಬರಹ ನಿಮ್ಮ ಓದಿಗೆ

‘ಈ ಸಂಕಲನದಲ್ಲಿ ಸಣ್ಣ ಕತೆ, ಕಿರುಗತೆ, ನೀಳ್ಗತೆಗಳನ್ನಷ್ಟೇ ಅಲ್ಲದೆ ಕೆಲವು ಜೀವನ ಸನ್ನಿವೇಶಗಳು, ಪ್ರಸಂಗಗಳು, ಕಥಾ ಸಂದರ್ಭಗಳನ್ನು ಕೂಡ ಓದುಗರ ಮುಂದೆ ಮಂಡಿಸುತ್ತಿದ್ದೇನೆ.’

‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಬರವಣಿಗೆಯನ್ನು ಮಾಡಲು ನನಗೆ ಸ್ವಲ್ಪವೂ ಇಷ್ಟವಿರಲಿಲ್ಲ.’

ಮೇಲಿರುವ ಎರಡು ಉಲ್ಲೇಖಗಳು ಈ ಸಂಕಲನದ ಕತೆಗಳನ್ನು ಬರೆಯುವಾಗ, ಜೋಡಿಸುವಾಗ ಇದ್ದ ನನ್ನ ಮನೋಸ್ಥಿತಿಯನ್ನು ಸೂಚಿಸುತ್ತವೆ. ಕತೆಗಳನ್ನು ಬರೆಯುತ್ತಾ ಬರೆಯುತ್ತಾ ಪ್ರಕಾರ ಒಂದು ಮಟ್ಟದ ಹಿಡಿತಕ್ಕೆ ಬಂದುಬಿಡುತ್ತದೆ. ಕತೆಗಳನ್ನು ಗ್ರಹಿಸುವುದು ಕೂಡ ಮನಸ್ಸಿಗೆ ಒಂದು ರೀತಿಯ ಅಭ್ಯಾಸವಾಗಿಬಿಡುತ್ತದೆ(Reflex Action). ಇದು ತುಂಬಾ ಅಪಾಯದ ಹಂತ. ನಾನು ಏಕೆ ಬರೆಯುತ್ತಿದ್ದೇನೆ, ನನ್ನ ಕತೆಗಳಿಗೂ ಈ ಜಗತ್ತಿಗೂ ಏನಾದರೂ ಸಂಬಂಧವಿದೆಯೇ? ನನಗೂ ನನ್ನ ಕತೆಗಳಿಗೂ ಇರುವ ಸಂಬಂಧವೇನು? ಎಂಬ ಪ್ರಶ್ನೆ, ಅನುಮಾನ ಶುರುವಾಗುತ್ತದೆ. ಈ ಪ್ರಶ್ನೆಗಳು ಮೂಡಿದ ನಂತರ ಕತೆಗಳನ್ನು ಬರೆಯುವುದು ಕಷ್ಟ. ಈ ಕಷ್ಟವನ್ನು ಎದುರಿಸದೆ ಕತೆಗಳನ್ನು ಬರೆದರೂ ಅದು ಕೇವಲ ಬರವಣಿಗೆಯಾಗುತ್ತದೆ, ನಿಜವಾದ ಬರವಣಿಗೆಯಾಗುವುದಿಲ್ಲ.

‘ಅನುಭವವನ್ನು ನಾವು ಜೀವನ ಪ್ರವಾಹದಿಂದ ಆಯ್ದುಕೊಳ್ಳುತ್ತೇವೆ. ಜೀವನ ಪ್ರವಾಹವು ವಿಶ್ವಚೈತನ್ಯವು ಪ್ರಕಟವಾಗುವ ರೀತಿ. ಈ ಚೈತನ್ಯವು ಎಲ್ಲರಿಗೂ ಲಭ್ಯ. ಆದರೆ ನಮ್ಮ ಆಯ್ಕೆ ಪ್ರಾಮಾಣಿಕವಾಗಿರದಂತೆ, ನಿಸ್ಪೃಹವಾಗಿರದಂತೆ ಪೂರ್ವಗ್ರಹ, ಅಸಹನೆಯೆಲ್ಲಾ ಅಡ್ಡಿಬರುತ್ತವೆ. ನಮ್ಮ ಕೈಗೆ ದಕ್ಕುವುದು ವಿಶ್ವಚೈತನ್ಯದ ಒಂದು ಸಣ್ಣ ಭಾಗ ಮಾತ್ರ. ಆದರೆ ಅದನ್ನೇ ಸರ್ವಸ್ವವೆಂದು ಭಾವಿಸಿ ಅದರ ಆಕಾರದ ಮೇಲೇ ಕತೆ, ಪ್ರಮೇಯ, ಭ್ರಮೆ, ದರ್ಶನಗಳನ್ನು ಮಂಡಿಸಿ, ಸಕಲರೂ ಒಪ್ಪಬೇಕೆಂದು ಬಯಸುವುದು ಮೂರ್ಖತನ. ಆದರೆ ನಾವೆಲ್ಲರೂ ಅದನ್ನೇ ಮಾಡುತ್ತೇವೆ.’

ಅನುಭವವು ಯಾವ ಪ್ರಕಾರದಲ್ಲಿ ಯಾರಿಗೆ ಒಲಿಯುತ್ತದೆ ಎಂಬುದು ಗುಟ್ಟಿನ ಮತ್ತು ಅದೃಷ್ಟದ ಮಾತೇ ಸರಿ. ಆದರೆ ಚೈತನ್ಯದ ಎಲ್ಲ ಭಾಗವೂ ಇಡಿಯಾಗಿ ಎಂದಿಗೂ ಅಭಿವ್ಯಕ್ತಿ ಗೊಳ್ಳುವುದಿಲ್ಲ. ನಾವು ಬರೆಯುವ ಆಕೃತಿಗಳಿಗನುಗುಣವಾಗಿ, ಅನುಗುಣವಾದಷ್ಟು ಮಾತ್ರ ಅಭಿವ್ಯಕ್ತಿಗೊಳ್ಳುತ್ತದೆ. ಉಳಿದದ್ದು ನಮ್ಮ ಹಿಡಿತಕ್ಕೆ ಬರುವುದೇ ಇಲ್ಲ. ಈ ವಿನಯ ನಮಗಿರಬೇಕು. ಕತೆ ಬಗ್ಗೆ ಮಾತ್ರವಲ್ಲ, ಆಕೃತಿಯ ಬಗ್ಗೆ ಕೂಡ. ಇಂತಹ ಕತೆಯನ್ನೇ ಬರೆಯಬೇಕು, ಇಂತಹ ಆಕೃತಿಯಲ್ಲೇ ಬರೆಯಬೇಕು ಎಂಬ ಹಠವನ್ನು ಯಾವ ಕತೆಗಾರನೂ ತಾನು ಬರೆಯುವ ಕತೆಗಳ ಬಗ್ಗೆಯೂ ಮತ್ತೊಬ್ಬರು ಬರೆಯುವ ಕತೆಗಳ ಬಗ್ಗೆಯೂ ಎಂದಿಗೂ ಮಾಡಬಾರದು.

ಈ ನಂಬಿಕೆಗಳ ಹಿನ್ನೆಲೆಯಲ್ಲೇ ಇಲ್ಲಿ ಕತೆಯ ಆಕೃತಿಗಳನ್ನು ಮಾತ್ರವಲ್ಲ, ನಾನು ಹಿಂದೆ ಬರೆದ ಮತ್ತು ಮುಂದೆ ಬರೆಯಲಿರುವ ಕಥಾ ಆಕೃತಿಗಳಿಗೂ ಮಾನ್ಯ ಮಾಡಬೇಕು ಎಂಬುದು ಓದುಗರಲ್ಲಿ ನನ್ನ ಸವಿನಯ ಪ್ರಾರ್ಥನೆ.

ಕಥಾ ಸಂದರ್ಭ, ಪ್ರಸಂಗ, ಪ್ರಮೇಯ, ಜೀವನ ಸನ್ನಿವೇಶಗಳು ಕೂಡ ನಮ್ಮ ಕಥನದ ಭಾಗವಾಗಿದ್ದವು ಎಂಬುದನ್ನು ಕೂಡ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲಿಯ ಬರಹಗಳನ್ನು ಮಾಡುವಾಗ ನಾನು ಪ್ರಪಾತದ ತುದಿ ಮತ್ತು ಅಂಚಿನಲ್ಲೇ ಇದ್ದೆ ಎಂಬುದನ್ನು ಕೂಡ ನಿವೇದಿಸಿಕೊಳ್ಳಲೇಬೇಕು.

ಗೆಳೆಯರಾದ ಎನ್.ಎಸ್.ಶ್ರೀಧರಮೂರ್ತಿ ಈ ಸಂಪುಟಕ್ಕೆ ಮುನ್ನುಡಿ ಬರೆದಿದ್ದಾರೆ. ‘ಕಥನದ ಇನ್ನಷ್ಟು ಹೊಸ ಸಾಧ್ಯತೆಗಳ ಹುಡುಕಾಟ’ ಎಂಬ ಶೀರ್ಷಿಕೆ ಈ ಮುನ್ನುಡಿಗಿದೆ. ಶ್ರೀಧರಮೂರ್ತಿ ಬಹಳ ಹಿಂದಿನಿಂದ ನನ್ನ ಬರವಣಿಗೆಯನ್ನು ಗಮನಿಸುತ್ತಾ ಬರೆಯುತ್ತಾ ಬಂದವರು. ಹಾಗಾಗಿ ಅವರ ನೋಟಗಳು ಈ ಸಂಕಲನದ ಕತೆಗಳಿಗೆ ಮಾತ್ರವಲ್ಲ, ಹಿಂದಿನ ಬರವಣಿಗೆಗೂ ಕೂಡ ಅನ್ವಯವಾಗುವಂಥದ್ದು.

ವಾಸ್ತವ ಮಾರ್ಗದಿಂದ ಆರಂಭವಾಗುವ ಕತೆ ರೂಪಕಗಳ ನೆಲೆಯ ಫ್ಯಾಂಟಸಿ ದಾರಿಯನ್ನೂ ಹಿಡಿಯುತ್ತದೆ. ವಾಸ್ತವಿಕ ವಿವರಗಳು ಕಡಿಮೆ ಇದ್ದಾಗ, ಕತೆಯ ತಾತ್ವಿಕತೆ ಕತೆಗೆ ವಿಸ್ತಾರ ನೀಡುತ್ತದೆ. ವಾಸ್ತವಿಕತೆಯ ಕ್ಷಿತಿಜವನ್ನು ಅವಾಸ್ತವಿಕ ಸಾಧ್ಯತೆಯ ಮೂಲಕ ವಿಸ್ತರಿಸುತ್ತಾ ಕಥನದ ಸಮಕಾಲೀನ ಮತ್ತು ಸಾರ್ವಕಾಲೀನ ನೆಲೆಗಳ ಸಮೀಕರಣವನ್ನು ಸಾಧಿಸಲು ಯತ್ನಿಸುತ್ತಾರೆ. ಸಮಕಾಲೀನತೆಯಿಂದ ಹಗುರಾಗಲು ಕೂಡ ಈ ಕತೆಗಳು ಪ್ರಯತ್ನಿಸುತ್ತಿರಬಹುದು -ಇಷ್ಟು ಶ್ರೀಧರಮೂರ್ತಿಯವರ ಅಭಿಪ್ರಾಯದ ಸಂಗ್ರಹ. ಮುನ್ನುಡಿಯನ್ನು ಓದಿದ ಬಹುಪಾಲು ಮಿತ್ರರು ಈ ಮಾತುಗಳನ್ನು ಸ್ವಾಗತಿಸಿದರು. ಆದರೆ ಚರ್ಚೆ ಯಾವ ರೀತಿಯಲ್ಲೂ ಮುಂದುವರೆಯಲಿಲ್ಲ.

*****

ನಮ್ಮ ಊರಿನಲ್ಲಿ ಒಂದು ಬಡಬ್ರಾಹ್ಮಣ ಕುಟುಂಬವಿತ್ತು. ಉಳಿದ ಕುಟುಂಬಗಳ ಆರ್ಥಿಕ ಸ್ಥಿತಿಗತಿಗೂ, ಈ ಕುಟುಂಬದ ಸ್ಥಿತಿಗತಿಗೂ ಅಂತಹ ವ್ಯತ್ಯಾಸವೇನಿರಲಿಲ್ಲ. ಆದರೆ ಈ ಕುಟುಂಬದವರು ದುಡಿದು ತಿನ್ನುತ್ತಿದ್ದರು. ಪ್ರಯಾಣಿಕರಿಗೆ, ಬಸ್ ಸಿಬ್ಬಂದಿಗೆ ಒಂದು ಮೆಸ್ ನಡೆಸುತ್ತಿದ್ದರು. ಮನೆಯ ಹೆಂಗಸರು ಲಕ್ಷಣವಾಗಿದ್ದರು. ಊಟ ತಿಂಡಿ ಬಡಿಸುವುದು, ಆತಿಥ್ಯವೆಲ್ಲ ಹೆಂಗಸರದ್ದೇ ಜವಾಬ್ದಾರಿ. ಇಷ್ಟಕ್ಕೇ ಆ ಮನೆಯವರು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಸುದ್ದಿ, ನಂಬಿಕೆ. ಹೀಗೆ ಆಪಾದಿಸುತ್ತಿದ್ದವರು ಹೆಂಗಸರೇ, ಬಂಧುಗಳೇ, ಸತ್ಕುಲಪ್ರಸೂತರೇ! ಶಾಲಾ ಬಾಲಕನಾದ ನಾನು ಕೂಡ ಇದನ್ನು ನಂಬಿದ್ದೆ. ನಮ್ಮ ಮೇಷ್ಟರೊಬ್ಬರಿಗೆ ಮಧ್ಯಾಹ್ನದ ಊಟಕ್ಕೆ ಸಾರು, ಪಲ್ಯ ತರುವ ಜವಾಬ್ದಾರಿ ಸ್ವಲ್ಪ ದಿನ ನನ್ನ ಮೇಲೆ ಬಿತ್ತು. ಹೋಗಿ ನೋಡಿದರೆ ಹೆಂಗಸರೆಲ್ಲ ಮೈಮುರಿದು ದುಡಿಯುತ್ತಿದ್ದರು. ಮನೆ ಗಂಡಸರು ಪ್ರಯಾಣಿಕರ, ಬಸ್ ಸಿಬ್ಬಂದಿ ವರ್ಗದವರ ಜೊತೆ ಮೋಜು ಮಾಡುತ್ತಿದ್ದರು. ನಾನು ನೋಡಿರುವುದು ಇದು, ಇಷ್ಟು ಎಂದು ಬಿಡಿಸಿ ಹೇಳುವ ಧೈರ್ಯ ನನಗಿರಲಿಲ್ಲ. ಮುಂದೆ ಎಷ್ಟೋ ವರ್ಷಗಳ ನಂತರ ನಾನು ಆ ಮನೆ ಮುಂದೆ ಓಡಾಡುವಾಗಲೆಲ್ಲ ನನ್ನ ಮನಸ್ಸು ನಾನು ನೋಡದ ವೇಶ್ಯಾವಾಟಿಕೆಯನ್ನು ಅಲ್ಲಿ ಕಾಣಲು ಬಯಸುತ್ತಿತ್ತು. ನೋಡದೆಯೂ ನಾನು ನಂಬಿದ್ದೆ. ನಂಬಿದ್ದನ್ನೇ ನೋಡಲು ಬಯಸಿದ್ದೆ. ಇದೇ ನಾನು ನಂಬಿದ(?) ವೇಶ್ಯಾವಿಲಾಸ. ಸಂಗತ, ಅಸಂಗತ ವಿವರಗಳನ್ನೇ ಹೇಳುತ್ತಾ, ಓದುಗರನ್ನು ತುದಿಯಲ್ಲಿ ನಿಲ್ಲಿಸುವ ರೀತಿಯಲ್ಲಿ ನಿರೂಪಿಸುತ್ತಾ ಈ ಕತೆ ಬರೆದೆ. ಇದು ಕತೆಯೇ ಮೂಡಿಸಿದ ಆಕೃತಿ.

ರೈಲು ಪ್ರಯಾಣದಲ್ಲಿ ಸಿಗುವಷ್ಟು ಒಳ್ಳೆಯ ಕತೆಗಳು ಬೇರೆಲ್ಲೂ ಸಿಗುವುದಿಲ್ಲ. ನನ್ನ ಸೊಸೆಯ ಕಾಮನ ಬಿಲ್ಲು, ಮಧುಗಿರಿ ರಾಮು ಮತ್ತು ಸಾಹಿತಿ ಮುದುಕಪ್ಪ, ಈ ರೀತಿಯ ಕತೆಗಳು. ಬೆಂಗಳೂರಿನಿಂದ ಗೌಹಾತಿಗೆ ಹೊರಟಿದ್ದ ರೈಲಿನಲ್ಲಿ ಒಬ್ಬ ಕನ್ನಡಿಗ ಪ್ರಯಾಣಿಕರ ಪರಿಚಯವಾಯಿತು. ಸದ್ಯದಲ್ಲೇ ಅವರು ನಿವೃತ್ತರಾಗಲಿದ್ದರು. ಬೆಂಗಳೂರಿಗೆ ಬಂದು ಬಂಧು-ಮಿತ್ರರ ಜೊತೆ ಬದುಕುತ್ತಾರೆ ಎಂಬುದು ನನ್ನ ನಿರೀಕ್ಷೆ. ಆದರೆ ಅವರು ಬೆಂಗಳೂರಿನಲ್ಲಿದ್ದ ಆಸ್ತಿಯನ್ನೆಲ್ಲ ಮಾರಿ, ಗೌಹಾತಿಯಲ್ಲೇ ಖಾಯಂ ಆಗಿ ನೆಲೆಸಲು ಹೊರಟಿದ್ದರು. ಈಗ ನಾವು ಅಲ್ಲಿ ಜೀವನ ಲಯಕ್ಕೆ ಹೊಂದುಕೊಂಡುಬಿಟ್ಟಿದ್ದೇವೆ. ನಮ್ಮ ತಂದೆ-ತಾಯಿ ಇಬ್ಬರೂ ಖಾಯಿಲೆ ಬಿದ್ದಾಗ ನಮಗಾಗಿ ಬಂದವರು ನೆಂಟರಿಷ್ಟರಲ್ಲ, ನಮ್ಮ ಕಾಲೊನಿಯ ಅಸ್ಸಾಮಿ ಬಂಧುಗಳು. ಅವರಿಗೆ ಕೃತಜ್ಞತೆ ಸಲ್ಲಿಸುವುದೆಂದರೆ, ಅವರೊಡನೆಯೇ ಮುಂದೆ ಬದುಕುವುದು ಎಂದುಬಿಟ್ಟರು. ಅವರು ನೀಡಿದ ಒಳನೋಟದಿಂದ ಚೇತರಿಸಿಕೊಳ್ಳಲು ತುಂಬಾ ದಿನಗಳೇ ಬೇಕಾದವು. ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಾ ಬರೆದ ಕತೆ ‘ನಾವು ನಮ್ಮವರೆಂಬ ಸುಳ್ಳು.’

ನೋಡಿದ್ದನ್ನು, ನೋಡಿದ ರೀತಿಯಲ್ಲೇ ಬರೆದರೆ, ಬರೆದದ್ದೆಲ್ಲ ತಾನೇ ತಾನಾಗಿ Surrealistic ಆಗುತ್ತದೆ. Magical Realism ಕೂಡ ಬರವಣಿಗೆಗೆ ಪ್ರಾಪ್ತವಾಗುತ್ತದೆ. ನಮ್ಮ ತಂದೆ, ಅವರ ತಾಯಿಯ ಜೊತೆ ಜಗಳ ಕಾದುಕೊಂಡು ಒಂದು ವರ್ಷ ತಿಥಿಗೆ ಬರಲಿಲ್ಲ. ಏನೇ ಜಗಳ ಕಾದಿದ್ದರೂ ಮಗ ತಿಥಿಗೆ ಬಂದೇ ಬರುತ್ತಾನೆ ಎಂಬ ನಂಬಿಕೆ ಅಜ್ಜಿಗೆ. ತಿಥಿಯೆಲ್ಲ ಮುಗಿದು ಸಂಜೆಯಾದರೂ ನಮ್ಮ ತಂದೆ ಬರಲೇ ಇಲ್ಲ. ಬಾ, ಸಂತೆಮಾಳಕ್ಕೆ ಹೋಗೋಣ, ಬಂದೇ ಬರ್ತಾನೆ, ಬಸ್‌ನಿಂದ ಇಳಿಸಿ ಕರೆದುಕೊಂಡು ಬರೋಣ ಎಂದು ನನ್ನನ್ನೂ ಎಳೆದುಕೊಂಡು ಬಸ್ ಬರುವ ಜಾಗಕ್ಕೆ ಕರೆದುಕೊಂಡು ಹೋದರು. ನಮ್ಮ ತಂದೆ ಬಂದಿರಲಿಲ್ಲ. ಬಸ್ ಹತ್ತಿ ಪರೀಕ್ಷಿಸುತ್ತೇನೆಂದು ಅಜ್ಜಿ ಬಸ್ ಒಳಕ್ಕೆ ನುಗ್ಗಲು ಪ್ರಯತ್ನಿಸಿದರು. ಕಂಡಕ್ಟರ್ ದೂರ ತಳ್ಳಿದ. ಬಸ್ ಧೂಳು ಎಬ್ಬಿಸಿ ಹೊರಟುಹೋಯಿತು. ಧೂಳಿನಲ್ಲೇ ನೆಗೆದಾಡುತ್ತಾ, ಬಸ್ಸನ್ನು, ಬಾರದ ಮಗನನ್ನು ಹಿಡಿಯಲು ನಮ್ಮಜ್ಜಿ ಪ್ರಯತ್ನಿಸಿದರು. ಇಷ್ಟೇ ದೃಶ್ಯ. ಇಷ್ಟೇ ಕತೆ. ಇದನ್ನು ಓದಿದ ಕತೆಗಾರರೊಬ್ಬರು Surrealistic ಎಂದರು. ನಾನೇನೂ ಪ್ರತಿಕ್ರಿಯಿಸಲಿಲ್ಲ. ಈ ನೋಟ ನೀಡುವ ಮೊದಲು ಅವರು ಸಾಕಷ್ಟು ಸಮಯ ತೆಗೆದುಕೊಂಡು ನನ್ನ ಇನ್ನೊಂದು ಕತೆ ‘ಬರೆದನು ಕತೆಯ ಯಾಕೂಬ್ ನಲಗೊಂಡ’ಯನ್ನು Deconstruct ಮಾಡಿದ್ದರು. ‘ಧೂಳು’ ಕತೆಗೆ ಅವರು ಮಾಡಿದ್ದ ವಿಶ್ಲೇಷಣೆ ಕೆಲವೇ ವಾಕ್ಯಗಳದ್ದು, ಹೃತ್ಪೂರ್ವಕವಾದದ್ದು (ಕೆ.ಆರ್. ಕಿರಣಕುಮಾರ್).

ಅನುಭವವು ಯಾವ ಪ್ರಕಾರದಲ್ಲಿ ಯಾರಿಗೆ ಒಲಿಯುತ್ತದೆ ಎಂಬುದು ಗುಟ್ಟಿನ ಮತ್ತು ಅದೃಷ್ಟದ ಮಾತೇ ಸರಿ. ಆದರೆ ಚೈತನ್ಯದ ಎಲ್ಲ ಭಾಗವೂ ಇಡಿಯಾಗಿ ಎಂದಿಗೂ ಅಭಿವ್ಯಕ್ತಿ ಗೊಳ್ಳುವುದಿಲ್ಲ. ನಾವು ಬರೆಯುವ ಆಕೃತಿಗಳಿಗನುಗುಣವಾಗಿ, ಅನುಗುಣವಾದಷ್ಟು ಮಾತ್ರ ಅಭಿವ್ಯಕ್ತಿಗೊಳ್ಳುತ್ತದೆ. ಉಳಿದದ್ದು ನಮ್ಮ ಹಿಡಿತಕ್ಕೆ ಬರುವುದೇ ಇಲ್ಲ. ಈ ವಿನಯ ನಮಗಿರಬೇಕು. ಕತೆ ಬಗ್ಗೆ ಮಾತ್ರವಲ್ಲ, ಆಕೃತಿಯ ಬಗ್ಗೆ ಕೂಡ.

ಬಾಲ್ಯದಲ್ಲಿ ನಮಗೆ ದಲಿತರ ಅಸಹಾಯಕತೆ, ಅವಮಾನ ಅರ್ಥವಾಗುತ್ತಿದ್ದುದು ಬಡತನ ಮತ್ತು ನಿರುದ್ಯೋಗದ ಮೂಲಕವಲ್ಲ. ಏಕೆಂದರೆ, ಎಲ್ಲ ಜಾತಿಗಳಲ್ಲೂ ಬಡವರಿದ್ದರು, ನಿರುದ್ಯೋಗಿಗಳಿದ್ದರು. ದಲಿತ ಹೆಂಗಸರನ್ನು, ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ಸ್ತ್ರೀ ಕಾರ್ಮಿಕರನ್ನು ಜಮೀನ್ದಾರರು, ಶ್ರೀಮಂತರು ಖಾಯಂ ಆಗಿ ಇಟ್ಟುಕೊಳ್ಳುತ್ತಿದ್ದರು. ಈ ಹೆಂಗಸರ ಗಂಡಂದಿರೂ ಕೂಡ ಇದೇ ಸಾಹುಕಾರರ ಹತ್ತಿರ ಕೆಲಸ ಮಾಡುತ್ತಿದ್ದರು. ಮಾತಾಡುವ ಹಾಗಿಲ್ಲ. ಇವರ ಮಕ್ಕಳು ಕೂಡ ನಮ್ಮ ಸಹಪಾಠಿಗಳೇ. ಇದೆಲ್ಲ ದಲಿತೇತರ ಮಕ್ಕಳಿಗೆ ಗೊತ್ತಾಗುತ್ತಿದೆಯೆಂದು ಆ ಮಕ್ಕಳಿಗೆ ಗೊತ್ತಾಗುತ್ತಿತ್ತು. ಇದನ್ನೆ ನಾವು ದಿನವೂ ನೋಡುತ್ತಿದ್ದರಿಂದ ರೂಢಿಯಾಗಿ ಹೋಯಿತು. ಇದೇ ಸಹಜವೆನಿಸಿತು. ಕಪ್ಪು ಬರವಣಿಗೆಯಲ್ಲಿ ಲೈಂಗಿಕ ಶೋಷಣೆ, ಹಿಂಸೆಯದೇ ಪ್ರಧಾನ ಅಭಿವ್ಯಕ್ತಿ. ಇದು ಅರಿವಿಗೆ ಬಂದಾಗ, ದಲಿತರು ವಿದ್ಯಾವಂತರಾದಾಗ, ಬರವಣಿಗೆಗೆ ಶುರು ಮಾಡಿಕೊಂಡಾಗ, ವ್ಯಕ್ತವಾಗುವ ರೋಷ, ಪ್ರತಿಭಟನೆ, ಮೇಲುಜಾತಿಯ ಹೆಂಗಸರನ್ನು ಕುರಿತು ತೋರುವ ಧೋರಣೆ ಇವೆಲ್ಲವೂ ಬರವಣಿಗೆಯಲ್ಲಿ ಯಾಕೆ ಮೂಡಿ ಬರುವುದಿಲ್ಲ. ಹಿಂಜರಿಕೆಯೇ, ಅಸಹಾಯಕತೆಯೇ, ಮೇಲು ವರ್ಗದ ಓದುಗರ ಮನಸ್ಸಿಗೆ ನೋವಾಗುವುದೆಂಬ ಭಯವೇ? ಇದೆಲ್ಲ ಇಲ್ಲದಿದ್ದರೂ, ಮೇಲು ವರ್ಗದವರೊಡನೆ ದಿನನಿತ್ಯದ ಬದುಕಿನಲ್ಲಿ ಒಡನಾಟ ಬೇಕಾಗಿರುವುದರಿಂದ ಬರವಣಿಗೆಯಲ್ಲಿ ಅಷ್ಟೊಂದು ತುದಿ ನಿಲುವು ಸಾಧ್ಯವಾಗುವುದಿಲ್ಲವೇ? ಈ ಪ್ರಶ್ನೆಯನ್ನು ಎದುರಿಸುವಾಗ ನಾನು ಓದಿದ್ದ ಕೆಲವು ಕಪ್ಪು ಲೇಖಕರ ನಿವೇದನೆಗಳು ನೆರವಾದವು. ‘ದಲಿತರ ಸೌಮ್ಯೋಪಖ್ಯಾನ’ ಭಾಷಣದ ಧಾಟಿಯಲ್ಲಿರುವ ಕತೆ. ಕತೆಯಲ್ಲಿ ನೋವಿದೆ, ತಿಳುವಳಿಕೆಯಿದೆ, ದೂರದೃಷ್ಟಿಯಿದೆ. ದಲಿತ ಹೆಂಗಸರ ದೇಹದ ಖಾಸಗಿ ಭಾಗಗಳ ಮೇಲೆ ಆಗಿರುವ ಗಾಯ, ನೋವು, ರಕ್ತ, ಕೀವುಗಳ ಸೂಚ್ಯ ವಿವರ ಬರುತ್ತದೆ. ಇದನ್ನೆಲ್ಲ ನೀವು ಕಂಡಿಲ್ಲ, ಏಕೆ ಬರೆದಿರಿ, ಹೇಗೆ ಬರೆದಿರಿ ಎಂದು ಕೇಳುವವರು ಹಲವರು. ಈ ವಿವರಗಳೆಲ್ಲ ರೋಚಕವಾಗಿದೆ ಎಂದು ಕೆಲವರು, ಬೀಭತ್ಸ ವರ್ಣನೆ ಎಂದು ಕೆಲವರು. ಇದನ್ನೆಲ್ಲ ದಲಿತರು ಬರೆಯದೇ ಇರುವುದರಲ್ಲೂ ಒಂದು ಉದಾತ್ತವಾದ ಆಶಯ ಇರಬಹುದೇ ಎಂಬುದನ್ನು ಕತೆ ಪರಿಶೀಲಿಸುತ್ತದೆ. ಸನ್ನಿವೇಶ, ಪಾತ್ರಗಳ ಮೂಲಕ ದಲಿತರ ಮೇಲೆ ಕತೆ ಬರೆಯುವುದು ಒಂದು ಬಗೆ, ಅವರೇ ಅವರನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ ಎಂಬುದನ್ನು ಪರಕಾಯ ಪ್ರವೇಶ ಮಾಡಿ ಬರೆಯುವುದು ಇನ್ನೊಂದು ಬಗೆ. ಈ ಕತೆ ಆಪ್ತ ವಲಯಗಳಲ್ಲಿ ಹುಟ್ಟುಹಾಕಿದ ಸಂವಾದದಿಂದ ನಾನು ಬೆಳೆದಿದ್ದೇನೆ, ನನಗೆ ಸಮಾಧಾನವಾಗಿದೆ.

ನಮ್ಮ ಬಡಾವಣೆಯ ತುಂಬ ಪ್ರಧಾನ ಮಂತ್ರಿ, ಮುಖ್ಯ ಮಂತ್ರಿಗಳಾಗಿದ್ದವರೆಲ್ಲ ಇದ್ದಾರೆ. ಜನಸಾಮಾನ್ಯರು ದಿನವೂ ಅವರನ್ನು ನೋಡುತ್ತಿರುತ್ತಾರೆ. ಒಬ್ಬ ಪೌರಕಾರ್ಮಿಕೆ ಕೂಡ ಅವರನ್ನು ರಸ್ತೆ ಮಧ್ಯದಲ್ಲಿ ನಿಂತು ಮಾತಾಡಿಸುತ್ತಾಳೆ. ಮಂತ್ರಿಗಳಿಗೆ ಆಸ್ಪತ್ರೆಯಲ್ಲಿ ಎಲ್ಲ ಪರೀಕ್ಷೆಗಳು ಪುಕ್ಕಟೆ ಎಂದು ಕೇಳಿಕೊಂಡ ಒಬ್ಬ ಕೂಲಿ ಮಹಿಳೆ, ನಾನೂ ಕೂಡ ಮುಖ್ಯ ಮಂತ್ರಿಯಾದರೆ, ನನಗೂ ಎಲ್ಲ ಚಿಕಿತ್ಸೆ, ಪರೀಕ್ಷೆಗಳು ಪುಕ್ಕಟೆ. ಅದಕ್ಕಾಗಿ ಸಚಿವೆಯಾಗಬೇಕು ಎಂದು ಹೇಳಿದಳು. ಇವೆರಡೂ ಪ್ರಸಂಗಗಳನ್ನು ದಾಖಲಿಸಬೇಕೆನ್ನಿಸಿತು. ಪ್ರಸಂಗದ ರೂಪದಲ್ಲಿ ಬರೆಯಬಹುದು ಎನ್ನಿಸಿತು.
ಚೂರಿ ಇರಿಯಿತು ಕತೆಯಲ್ಲಿ ನಾನು ಮತ್ತು ನನ್ನ ವಾಹನ ಚಾಲಕ ಇಬ್ಬರೂ ಸಿಕ್ಕಿಹಾಕಿಕೊಂಡೆವು. ಕತೆಯಲ್ಲಿ ಬರುವಂತೆ, ನಂಜಪ್ಪ ನಾಯಡು ಎಂಬ ಗೃಹಸ್ಥ ಕೈಯಲ್ಲಿ ಚೂರಿ ಹಿಡಿದು ಅಳಿಯನನ್ನು ಕೊಲೆ ಮಾಡುತ್ತೇನೆಂದು ಓಡಲು ಶುರು ಮಾಡಿದರು. ನಾವಿಬ್ಬರೂ ಅವರ ಹಿಂದೆ ಓಡುತ್ತಾ ಹಿಂಬಾಲಿಸಿದೆವು. ಒಂದು ಸ್ವಲ್ಪ ದೂರ ಓಡಿದ ನಂತರ ನಾನು ಕಂಗಾಲಾಗಿ ನಿಂತೆ. ಚಾಲಕ ಇನ್ನೂ ಸ್ವಲ್ಪ ದೂರ ಓಡಿದ. ಆವತ್ತು ಅವರು ಸಿಗಲೇ ಇಲ್ಲ. ಕತೆಯ ಅಂತ್ಯ, ಕತೆಯ ಶಿಲ್ಪ ಪೂರ್ತಿಯಾಗದೆಂದು ಕಲ್ಪಿಸಿ ಸೇರಿಸಿದ್ದು. ಎಷ್ಟೋ ತಿಂಗಳುಗಳ ನಂತರ ನಂಜಪ್ಪ ನಾಯಡು ಮತ್ತೆ ಸಿಕ್ಕರು. ದುಃಖವನ್ನೆಲ್ಲ ನುಂಗಿಕೊಂಡಿದ್ದರು. ಈಗಲೂ ನಾನಾ ಸಂಘ-ಸಂಸ್ಥೆಗಳಲ್ಲಿ ನಿಸ್ಪೃಹವಾಗಿ ಕೆಲಸ ಮಾಡುತ್ತಲೇ ಇದ್ದಾರೆ.

ಚರಿತ್ರೆಯನ್ನು ಯಾವಾಗ ಹೇಳಬೇಕು, ಯಾರು ಹೇಳಿದರೆ ಯಥೋಚಿತವಾಗಿರುತ್ತದೆ? ಅವರವರ ಚರಿತ್ರೆಯನ್ನು ಅವರೇ ಹೇಳಬೇಕು ಸರಿ! ಆದರೆ ಏಕೆ ಹೇಳಬೇಕು? ಹೇಗೆ ಹೇಳಬೇಕು? ನಮ್ಮ ಬಂಧುಗಳಲ್ಲೇ ಒಂದು ತಲೆಮಾರಿನಲ್ಲಿ ನೆಲ ಕಚ್ಚಿದ, ಅಡ್ಡಾದಿಡ್ಡಿಯಾದ ಒಬ್ಬ ಮನುಷ್ಯ ‘ಆಪ್ತ’ನಾಗಿದ್ದ. ನಾವ್ಯಾರೂ ಅವನನ್ನು, ಅವನ ಕುಟುಂಬವನ್ನು ಮೂಸುತ್ತಿರಲಿಲ್ಲ. ಆದರೆ ಎರಡನೇ ತಲೆಮಾರಿನಲ್ಲಿ ಈ ಮನೆತನ ಮುಂದುವರೆದು, ನಗರದಲ್ಲೇ ಗಣ್ಯ ಕುಟುಂಬವಾಯಿತು. ಈಗ ನಮಗೆ ಅವರು ಬೇಕಾಯಿತು. ಆದರೆ ಅವರ ಇತಿಹಾಸದ ಬಗ್ಗೆ ನಮಗೆಲ್ಲ ಸಂಕೋಚ. ಅವರಿಗೂ ಕೀಳರಿಮೆ ಇರಬಹುದೆಂಬ ಗುಮಾನಿ. ಹಾಗೇನೂ ಇರಲಿಲ್ಲ. ಅವರ ಮನೆಯ ಮಗಳೇ ಒಂದು ಸಮಾರಂಭದಲ್ಲಿ ಮುಂದೆ ಬಂದು, ‘ನೋಡಿ ನಮ್ಮಪ್ಪ ಅಡ್ಡಾದಿಡ್ಡಿ ಮನುಷ್ಯನಾಗಿದ್ದ’ ಎಂದು ಪ್ರಾರಂಭಿಸಿ ಚರಿತ್ರೆಯೆಲ್ಲವನ್ನೂ ಇಡಿಯಾಗಿ, ವಸ್ತುನಿಷ್ಠವಾಗಿ ಹೇಳಿ ನಮ್ಮೆಲ್ಲರನ್ನೂ ನಿರಾಳಗೊಳಿಸಿದಳು. ಸ್ವಲ್ಪ ಪದ್ಯ ಭಾಗ, ಸ್ವಲ್ಪ ಚರಿತ್ರೆ, ಸ್ವಲ್ಪ ಕತೆ, ಸ್ವಲ್ಪ ನಿವೇದನೆ, ಎಲ್ಲವನ್ನೂ ಬೆರೆಸಿ ಬರೆದಿದ್ದರಿಂದ ಈ ಕತೆ ಬರೆಯಲು ಸಾಧ್ಯವಾಯಿತು. ಈ ಸಂಕಲನದಲ್ಲಿ ಯಾವ ಯಾವ ಕತೆಗಳು ಯಾವ ಪ್ರಕಾರಕ್ಕೆ ಹತ್ತಿರವಿದೆ ಎಂಬುದನ್ನು ಕೂಡ ಶ್ರೀಧರಮೂರ್ತಿ ತಮ್ಮ ಮುನ್ನುಡಿಯಲ್ಲಿ ಚರ್ಚಿಸಿದ್ದಾರೆ.

‘ಬಂಡವಾಳಶಾಹಿಯ ಮೂರು ಸಾಕ್ಷಿಗಳು’ ಕತೆಯ ಪಾತ್ರಗಳು ಎಲ್ಲಿ ನಿಜವಾಗುತ್ತವೆ, ನಿಜವಾಗಲೂ ಪ್ರಯತ್ನಿಸುವುದೇ ಇಲ್ಲವೇ, ಕೌಟುಂಬಿಕವಾಗಿ, ವೃತ್ತಿಯಲ್ಲಿ, ಆಪ್ತ ಸಂಬಂಧಗಳಲ್ಲಿ ಕೂಡ ನಾವು ನಿಜವಾಗಲಾರದೇ? ಆತ್ಮಸಾಕ್ಷಿಯೇ ಇಲ್ಲದವರು ಸಮಕಾಲೀನತೆ ಬಗ್ಗೆಯಾಗಲೀ, ಚರಿತ್ರೆಯ ಬಗ್ಗೆಯಾಗಲೀ ಸಾಕ್ಷಿ ಹೇಳಲು ಹೊರಟರೆ ಏನಾಗುತ್ತದೆ? ನಮ್ಮ ಕಾಲದಲ್ಲಿ ಯಾವುದೂ ಗಂಭೀರ ಶೋಧನೆಯಾಗುವುದಿಲ್ಲವಲ್ಲ! ಹೀಗಾಗಿ, ಚರಿತ್ರೆಗೊಂದು ಪ್ರಣಾಳಿಕೆ ಬರೆಯುವವರ ಮನೋಧರ್ಮ, ಚಾರಿತ್ರ್ಯ ಯಾವ ರೀತಿಯದಿರಬೇಕು ಎಂಬ ಹುಡುಕಾಟ ‘ಚರಿತ್ರೆಗೊಂದು ಪ್ರಣಾಳಿಕೆ’ ಕತೆಯಲ್ಲಿದೆ. ಈ ಕತೆಯ ನಾಯಕ ನಾನು ಕತೆ ಬರೆದಾಗ ಜ್ವಲಂತ ಆತ್ಮಸಾಕ್ಷಿಯ ಮನುಷ್ಯರಾಗಿದ್ದವರು. ಕ್ರಮೇಣ, ಕೆಲವು ವಿಷಯಗಳಲ್ಲಿ Binaryಗೆ ಸಿಕ್ಕಿಹಾಕಿಕೊಂಡರು. ಚರಿತ್ರೆಗೆ ಪ್ರಣಾಳಿಕೆ ಬರೆಯುವ ಸಾಮರ್ಥ್ಯವಿದ್ದವರು Binaryಯಲ್ಲಿ ಸಿಕ್ಕಿಹಾಕಿಕೊಂಡರು. ಕತೆಗಾರನಾಗಿ ನಾನು ಸೃಷ್ಟಿಸಿದ ಪಾತ್ರಗಳನ್ನು ಕತೆಯ ಮಟ್ಟಿಗೇ ಬಿಟ್ಟು ಬಿಡುವುದಿಲ್ಲ. ಅವರೆಲ್ಲ ಪಾತ್ರಗಳು ಮಾತ್ರವಲ್ಲ, ಮನುಷ್ಯರೂ ಕೂಡ ಆದ್ದರಿಂದ, ನಾನು ಅವರ ಬದುಕನ್ನು ಅನುಸರಿಸುತ್ತೇನೆ. ಜೊತೆಯಲ್ಲೇ ಪ್ರಯಾಣ ಮಾಡುತ್ತಿರುತ್ತೇನೆ. ಏಕೆಂದರೆ, ಮನುಷ್ಯ ತನ್ನ ಅದೃಷ್ಟವನ್ನು ತಾನೆ ರೂಪಿಸಿಕೊಳ್ಳುತ್ತಾ ಚರಿತ್ರೆಯೆಂಬ ನಾಟಕದಲ್ಲಿ ಪಾತ್ರಧಾರಿಯಾಗುತ್ತಲೇ ಇರುತ್ತಾನೆ. ಕತೆಗಳು ಸಿಗುವುದೇ ಇಲ್ಲಿ.

ಈ ಸಂಕಲನದಲ್ಲಿ ಇಪ್ಪತ್ತೊಂದು ಕತೆಗಳಿವೆ, ಕತೆಗಳಂತ ಬರವಣಿಗೆಯಿದೆ. ಎರಡೇ ಎರಡು ಕತೆಗಳು ಮಾತ್ರ 2018ರ ಮುನ್ನ ಬರೆದಿದ್ದುದು. ‘ಕೋಮಾ ಪುರಾಣ’ ಲೋಕನಾಯಕರ ಮೇಲುಕೋಟೆ ಪುರಾಣದ ಮುಂದಿನ ಭಾಗ. ‘ಚೂರಿ ಇರಿಯಿತು’ ಕತೆಯಲ್ಲಿ ಸಿಕ್ಕಿಹಾಕಿಕೊಳ್ಳ ಬೇಕಾಯಿತು. ಉಳಿದ ಕತೆಗಳೆಲ್ಲಾ ಬರೆಯುತ್ತಾ ಬರೆಯುತ್ತಲೇ ಸಿಕ್ಕಿದವು. ಒಂದು ಕತೆ ಬರೆಯತ್ತಿದ್ದಂತೆ ಇನ್ನೊಂದು ಕತೆ ಆಹ್ವಾನಿಸುತ್ತಿತ್ತು.

ಕತೆಗಳ ವಿವಿಧ ಆಕೃತಿಗಳ ಬಗ್ಗೆ ಇರುವ ಕಾಳಜಿಯನ್ನು ಮೀರಿ, ತಕ್ಷಣದ, ಎದುರಿಗಿನ ಜೀವನದಿಂದ ಕತೆ ಅರಳುತ್ತಿರುವಾಗಲೇ ನಾಡಿ ಹಿಡಿದು ಬರೆದ ಮಾಪಸಾ, ಚೆಕೋವ್ ಮಾದರಿಯ ಕತೆಗಳನ್ನು ಬರೆಯಬೇಕೆನಿಸಿ ಬರೆದದ್ದು ‘ಮನುಷ್ಯರು ಬದಲಾಗುವರೆ?’ ಸಂಕಲನದ ಕತೆಗಳು.

(ಕೃತಿ: ನನ್ನ ಪುಸ್ತಕಗಳ ಆತ್ಮಚರಿತ್ರೆ, ಲೇಖಕರು: ಕೆ. ಸತ್ಯನಾರಾಯಣ, ಪ್ರಕಾಶಕರು: ಯಾಜಿ ಪ್ರಕಾಶನ, ಬೆಲೆ: 360/-)