ಹೀಗೆ ಕಡುಹಿಂಸೆಯಲ್ಲೇ ಹದಿನೈದು ದಿನ ಕಳೆದ ಮೇಲೆ ಕೊನೆಗೊಂದು ದಿನ ಸ್ವತಃ ಮಾಂಟ್ಗೊಮರಿ ಸಾಹೇಬರು, `ಕಾರಕೋರಂ ಶ್ರೇಣಿಯ ಎರಡು ಶಿಖರಗಳ ಅನ್ವೇಷಣೆ ದೊಡ್ಡ ಸಾಧನೆ. ನಂಗಾ ಪರ್ವತದ ವಿವರಗಳನ್ನು ಕಲೆ ಹಾಕಿದ್ದೂ ಸಾರ್ಥಕವಾಯಿತು. ಕಾರಕೋರಂ ಶ್ರೇಣಿಯ ದ್ವಿತೀಯ ಶಿಖರ, ಪೀಕ್ ಹದಿನೈದನ್ನೂ ಮೀರಿಸುವಷ್ಟು ಎತ್ತರ ಇರುವಂತಿದೆ’ ಎಂದು ಹೆಮ್ಮೆಯಿಂದ ಹೇಳಿದ್ದರು. ಉಳಿದವರೂ ತಲೆಯಾಡಿಸಿ ಸಮ್ಮತಿಸಿದ್ದರು. ಅವರ ಸಂಭಾಷಣೆ ಕೇಳಿ, `ಕಾರಕೋರಂ ಕಾಶ್ಮೀರದ ಉತ್ತರದಲ್ಲಿರುವ ಪರ್ವತಶ್ರೇಣಿ ಎಂಬುದು ಯಾರಿಗೆ ಗೊತ್ತಿಲ್ಲ. ಅದರಲ್ಲಿರುವ ಎರಡು ಎತ್ತರದ ಶಿಖರಗಳನ್ನು ಇವರೇ ಶೋಧಿಸಿದರಂತೆ!
ಡಾ. ಗಜಾನನ ಶರ್ಮ ಹೊಸ ಕಾದಂಬರಿ “ಪ್ರಮೇಯ”ದ ಕೆಲವು ಪುಟಗಳು ನಿಮ್ಮ ಓದಿಗೆ
ಪರ್ವತಾಗ್ರದ ಅವಘಡ
ನಿದ್ದೆಯ ಮಂಪರಿನಲ್ಲಿ ಗಾಯಗೊಂಡಿದ್ದ ಕಾಲನ್ನು ಹೊರಳಿಸಲೆತ್ನಿಸಿ ಉಂಟಾದ ನೋವಿಗೋ, ಪೆಟ್ಟುಬಿದ್ದು ಊದಿಕೊಂಡಿದ್ದ ತೋಳು ಟೆಂಟಿನ ಗುಡಾರಕ್ಕೆ ತಾಕಿ ಉಂಟಾದ ಬಾಧೆಗೋ ಸಾಹೇಬರು ನರಳಿದ ಸದ್ದು ಕೇಳಿಸಿ, ಮಂಚದ ಬದಿಗೆ ನೆಲದಲ್ಲಿ ಹುಲ್ಲುಚಾಪೆಯ ಮೇಲೆ ಗುಡಾರಹಾಸಿ ಕಂಬಳಿಹೊದ್ದು ಮಲಗಿದ್ದ ಐವಾನ್ ದಡಬಡಿಸಿ ಮೇಲೆದ್ದು ಕುಳಿತ. ಕಣ್ಣುಜ್ಜಿಕೊಂಡು ಟೆಂಟಿನ ಮೂಲೆಯಲ್ಲಿ ಸಣ್ಣಗೆ ಉರಿಯುತ್ತಿದ್ದ ಲಾಂದ್ರದ ಬತ್ತಿಯನ್ನು ತುಸು ಮುಂದೆ ಮಾಡಿ ಲಾಂದ್ರವನ್ನು ಎತ್ತಿ ಹಿಡಿದು ಸಾಹೇಬರನ್ನು ಗಮನಿಸಿದ. ನೋವಿನ ತೀವ್ರತೆಗೆ ಕಿವುಚಿಕೊಂಡಿದ್ದ ಮುಖದ ನಿರಿಗೆಗಳು ಸಡಿಲಗೊಳ್ಳುತ್ತಿದ್ದವು. ಅರೆತೆರೆದಿದ್ದ ಕಣ್ಣುಗಳು ಮೆಲ್ಲಗೆ ಮುಚ್ಚಿಕೊಳ್ಳುತ್ತಿದ್ದವು. ಲಾಂದ್ರವನ್ನು ಮಂಚದ ಪಟ್ಟಿಯ ಮೇಲಿಟ್ಟು ಬಲಗೈಯಿಂದ ಹೊದಿಕೆಯನ್ನು ಮೆಲ್ಲಗೆ ಬದಿಗೆ ಸರಿಸಿದ ಐವಾನ್, ತೋಳು ಮತ್ತು ಕಾಲಿಗೆ ವೈದ್ಯರು ಕಟ್ಟಿದ್ದ ಕಟ್ಟನ್ನು ಪರೀಕ್ಷಿಸಿದ. ಹಸಿರೌಷಧ ಲೇಪಿಸಿ, ಬಿಳಿಬಟ್ಟೆಯನ್ನು ಸುತ್ತಿ ಅದರ ಮೇಲೆ ಮೊಳದುದ್ದದ ದೇವದಾರು ಕಟ್ಟಿಗೆಯನ್ನಿಟ್ಟು ಕಟ್ಟಿದ್ದ ಕಟ್ಟುಗಳು ಸುಸ್ಥಿತಿಯಲ್ಲಿದ್ದವು. `ಅಕಸ್ಮಾತ್ ನಿದ್ದೆಗಣ್ಣಲ್ಲಿ ಹೊರಳಿ ಕಟ್ಟು ಸಡಿಲವಾದರೆ ವಾಸಿಯಾಗುವುದು ನಿಧಾನವಾಗುತ್ತದೆ, ಜಾಗ್ರತೆಯಿಂದ ಗಮನಿಸುತ್ತಿರಬೇಕು’ ಎಂದು ವೈದ್ಯ ಕೈವಲ್ಯನಾಥ ಮಟ್ಟು ಮೊದಲ ದಿನವೇ ತಾಕೀತು ಮಾಡಿದ್ದ.
ನೋವಿನಿಂದ ನರಳಿದರೆ ಕುಡಿಸಲೆಂದು ವೈದ್ಯರು ಕೊಟ್ಟಿದ್ದ ಔಷಧವನ್ನು ಕುಡಿಸುವುದೋ ಬಿಡುವುದೋ ಎಂದು ಯೋಚಿಸುತ್ತ ತುಸುಹೊತ್ತು ಅವರನ್ನೇ ಗಮನಿಸುತ್ತ ಕುಳಿತಿದ್ದ ಐವಾನ್, ಸದ್ದಿಲ್ಲದೆ ಅವರು ಕಣ್ಮುಚ್ಚಿ ನಿದ್ರಿಸತೊಡಗಿದ್ದನ್ನು ಕಂಡು ಔಷಧ ಬೇಡವೆಂದು ನಿರ್ಧರಿಸಿ, ಮಲಗಲು ಸಿದ್ಧನಾಗುವಷ್ಟರಲ್ಲಿ ಅವನನ್ನು ಮೂತ್ರಶಂಕೆ ಬಾಧಿಸತೊಡಗಿತು. ಆ ಚಳಿರಾತ್ರಿಯಲ್ಲಿ ನಂದಕೋಲ್ ಸರೋವರದ ಮೇಲಿನಿಂದ ಬೀಸಿಬರುವ ತಣ್ಣನೆ ಗಾಳಿಯ ನೆನಪಾಗಿ ಹೊರಗೆ ಹೋಗುವುದು ಬೇಡವೆಂದು ಮಲಗಲು ಹೊರಟವನಿಗೆ ಮೂತ್ರಬಾಧೆ ಇನ್ನಷ್ಟು ಒತ್ತರಿಸತೊಡಗಿತು. ‘ದರಿದ್ರ, ಒಮ್ಮೆ ಬರುತ್ತಿದೆಯೆಂಬ ಶಂಕೆ ಆರಂಭವಾದರೆ ಸಾಕು, ಕ್ರಮೇಣ ತಡೆಯಲಾಗದ ಒತ್ತಡವೇ ಶುರುವಿಟ್ಟುಕೊಳ್ಳುತ್ತದೆ’ ಎಂದು ಬೈದುಕೊಂಡವನಿಗೆ ಒಂದು ಆಲೋಚನೆ ಬಂತು. ಟೆಂಟಿನ ಬಲಮೂಲೆಯಲ್ಲಿ ಪರದೆಯೊಂದನ್ನು ಮರೆಮಾಡಿ ಸಾಹೇಬರ ಶೌಚಕ್ಕೆ ತಾತ್ಕಾಲಿಕ ವ್ಯವಸ್ಥೆಯೊಂದನ್ನು ಕಲ್ಪಿಸಲಾಗಿತ್ತು. ಹೇಗೂ ಅವರು ನಿದ್ದೆಯಲ್ಲಿರು ವುದರಿಂದ ಅಲ್ಲಿ ಮೂತ್ರವಿಸರ್ಜನೆ ಮಾಡಲು ಅಡ್ಡಿಯಿಲ್ಲವೆಂಬ ಉಪಾಯ ಹೊಳೆಯಿತಾದರೂ, ಅದು ಸಾಹೇಬರಿಗಾಗಿ ಮೀಸಲಿಟ್ಟ ವಿಶೇಷ ವ್ಯವಸ್ಥೆ, ಸಹಾಯಕರು ಅದನ್ನು ಬಳಸಕೂಡದು ಎಂದು ಜಾನ್ಸನ್ ಸಾಹೇಬ ಕಟ್ಟುನಿಟ್ಟಾಗಿ ಆದೇಶಿಸಿದ್ದು ನೆನಪಿಗೆ ಬಂತು. ಹಾಗೆ ಆತ ಆಜ್ಞೆ ಮಾಡಲೂ ಕಾರಣವಿತ್ತು. ಎಲ್ಲರೂ ಅಲ್ಲೆ ಮಲಮೂತ್ರ ವಿಸರ್ಜಿಸಿದರೆ ಟೆಂಟಿನೊಳಗೆ ಇರುವುದು ಕಷ್ಟವಾಗುತ್ತಿತ್ತು. ಮಲಮೂತ್ರ ವಿಸರ್ಜಿಸಿದ ನಂತರ ಮುಚ್ಚಲೆಂದು ಬುಟ್ಟಿಯಲ್ಲಿ ಹುಡಿ ಮಣ್ಣು ಇಡಲಾಗಿತ್ತಾದರೂ ಒಟ್ಟಾರೆ ವ್ಯವಸ್ಥೆ ಸಾಹೇಬರಿಗಷ್ಟೇ ಮೀಸಲಾಗಿತ್ತು. ಕಳೆದ ಮೂರು ವರ್ಷಗಳಿಂದ ಮಾಂಟ್ಗೊಮರಿ ಸಾಹೇಬರ ನೆಚ್ಚಿನ ಶಿಷ್ಯನಾಗಿದ್ದ ಐವಾನ್ ಎಂದೂ ಸಾಹೇಬರುಗಳ ಆದೇಶವನ್ನು ಮೀರಿದವನಲ್ಲ. ಜೊತೆಗೆ ಶಿಸ್ತಿಗೆ ಕಟ್ಟುಬೀಳುವ ಪರಂಗಿ ಸಾಹೇಬರುಗಳ ಗುಣವೂ ಅವನಿಗೆ ಚೆನ್ನಾಗಿ ತಿಳಿದಿತ್ತು. ಅದರಲ್ಲೂ ಅಪ್ಪಿತಪ್ಪಿ ತಮ್ಮ ಆದೇಶವನ್ನು ಮೀರಿದ್ದು ಗೊತ್ತಾದರೆ, ಮಾಂಟ್ಗೊಮರಿ ಸಾಹೇಬರು ಕ್ಷಮಿಸಿದರೂ, ಕಠಿಣ ಶಿಸ್ತಿನ ಜಾನ್ಸನ್ ಕ್ಷಮಿಸಲಾರರೆಂಬುದು ಆತನಿಗೆ ತಿಳಿದಿತ್ತು. `ಇನ್ನೇನು, ಹೇಗೂ ಒಂದೆರಡು ತಾಸಿನಲ್ಲಿ ಬೆಳಗಾದೀತು, ಸುಮ್ಮನೆ ಈ ತಗಾದೆಯೆಲ್ಲ ಯಾಕೆ’ ಎಂದು ಗಟ್ಟಿಮನಸ್ಸು ಮಾಡಿ ಮುಸುಕೆಳೆದು ಮಲಗಿಬಿಟ್ಟ. ಆತನ ದುರಾದೃಷ್ಟಕ್ಕೆ ನಿದ್ದೆಮಾಡಲು ಯತ್ನಿಸಿದಷ್ಟೂ ಮೂತ್ರದೊತ್ತಡ ಹೆಚ್ಚಿದಂತೆ ಅನ್ನಿಸತೊಡಗಿತ್ತು. ತಾನೇಕೆ ಹೀಗೆ ಹೊರಗೆ ಹೋಗಿ ಹತ್ತುಹೆಜ್ಜೆ ನಡೆದು ಮೂತ್ರವಿಸರ್ಜನೆ ಮಾಡಿಬರಲು ಹಿಂಜರಿಯುತ್ತಿದ್ದೇನೆಂಬುದು ಆತನಿಗೇ ಅರ್ಥವಾಗಲಿಲ್ಲ.
ಈ ಚಳಿ ತನಗೇನು ಹೊಸದೇ? ಕೇವಲ ಐದು ವಾರಗಳ ಹಿಂದೆ ಇದೇ ಸಾಹೇಬರ ತಂಡ ಮೂರು ವಾರಗಳ ಕಾಲ ಹರ್ಮುಖ ಪರ್ವತದ ನೆತ್ತಿಯ ಮೇಲಿನ ಭೀಕರ ಚಳಿಯಲ್ಲಿ ತಮ್ಮನ್ನೆಲ್ಲ ಕೊಳೆಹಾಕಿರಲಿಲ್ಲವೇ? ಅಲ್ಲಿದ್ದ ಚಳಿಗೆ ಹೋಲಿಸಿದರೆ ಇದೇನು ಮಹಾ, ಇದಕ್ಕೆಲ್ಲ ತಾನು ಹೆದರುವವನೇ ಎಂದು ಹುಂಬಧೈರ್ಯವನ್ನು ಆವಾಹಿಸಿಕೊಂಡು ಹೊರಗೆ ಹೋಗಲು ನಿರ್ಧರಿಸಿ ಎದ್ದು ಕುಳಿತ. ಟೆಂಟಿನ ಮೂಲೆಯಲ್ಲಿದ್ದ `ಕಾಂಗಾರ’ನ್ನು ಹತ್ತಿರಕ್ಕೆಳೆದು ಅದರ ಕೆಂಡ ಕೆದರಿ ಅದಕ್ಕೊಂದಿಷ್ಟು ಚೀಡ್ ಮರದ ಚಕ್ಕೆಪುಡಿ ಸುರಿದು ಗಾಳಿಯೂದಿದ. ಚಕ್ಕೆಪುಡಿಯ ಉರಿಗೆ ಕೆಂಡಗಳು ಕೆಂಪಾಗಿ ಕಾಂಗಾರ್ ಸಾಕಷ್ಟು ಬೆಚ್ಚಗಾಗಿದ್ದೇ ತಡ, `ಫಿರಾನ್’ ಮೇಲಕ್ಕೆತ್ತಿ ಪಾಯಿಜಾಮ ಸಡಿಲಿಸಿ ಅದನ್ನು ಕಿಬ್ಬೊಟ್ಟೆಯ ಅಡಿಗೆ ಸೇರಿಸಿ ಅದರ ಕಂಠದ ಹುರಿಯನ್ನು ಸೊಂಟಕ್ಕೆ ಬಿಗಿದು ಕಟ್ಟಿಕೊಂಡ. ಕಿವಿಮುಚ್ಚುವಂತೆ ತಲೆಗೆ ಪಗ್ರಿ, ಅದರ ಮೇಲೆ ಕಬ್ಬಿಣದ ಟೊಪ್ಪಿಗೆಯಿಟ್ಟು, ಕೈಗವಸು ತೊಟ್ಟ. ಕಾಲಿಗೆ ಚರ್ಮದ ಪಟ್ಟಿಸುತ್ತಿ, ಹುಲ್ಲುಕಡ್ಡಿಯ ಪಾದರಕ್ಷೆ ತೊಟ್ಟು ಟೆಂಟಿನಿಂದ ಹೊರಹೋಗಲು ಬಿಟ್ಟಿದ್ದ ಗುಡಾರದ ಸೀಳಿನ ಕಟ್ಟುಬಿಚ್ಚಿ ಅದನ್ನು ತುಸು ಓರೆಮಾಡಿ ಮೊದಲಿಗೆ ಮಂಡೆಯನ್ನು ಮಾತ್ರ ಹೊರಗೆ ಹಾಕಿ ಇಣುಕಿದ. ಹಿಂದಿನ ರಾತ್ರಿ ಬಹುಹೊತ್ತು ಮಂಜಿನಮಳೆ ಸುರಿಸುತ್ತಿದ್ದ ಮೋಡಗಳು ಮರೆಯಾಗಿ ತೊಳೆದಿಟ್ಟಂತೆ ತಿಳಿಗೊಂಡಿದ್ದ ಆಕಾಶದಲ್ಲಿ ಅರ್ಧಚಂದ್ರ ಮುಖ ತೋರಿಸಿ, ಹೊರಗೆ ಲಾಂದ್ರದ ಅವಶ್ಯಕತೆಯಿಲ್ಲವೆಂದು ಖಚಿತ ಪಡಿಸಿದ. ಗಟ್ಟಿ ಮನಸ್ಸುಮಾಡಿ ಟೆಂಟಿನ ಹೊರಗೆ ಅಡಿಯಿಡುತ್ತಿದ್ದಂತೆಯೇ ಬಾಗಿಲು ಬಳಿ ಆತನ ಬರುವಿಕೆಯನ್ನೇ ಕಾದು ಕುಳಿತಿದ್ದ ಚಳಿ ಅವನನ್ನು ಗಬಕ್ಕನೆ ಹಿಡಿದು ನಖಶಿಖಾಂತ ನಡುಗಿಸಿಬಿಟ್ಟಿತು.
ತೊಟ್ಟಬಟ್ಟೆಯನ್ನೂ ಲೆಕ್ಕಿಸದೆ ಸೀದ ಚರ್ಮದೊಳಗೆ ತೂರಿ, ಮಾಂಸಖಂಡಗಳ ಆಳಕ್ಕೆ ನುಗ್ಗಿ, ಮೂಳೆಯ ಒಳತಳಕ್ಕಿಳಿದು ಕೊರೆಯತೊಡಗಿದ ಶೀತಲಗಾಳಿಯ ಪರಿಣಾಮಕ್ಕೆ ಇಡೀ ಮೈ ಮರಗೆಟ್ಟು ಮಂಜುಗಡ್ಡೆಯ ಶಿಲ್ಪವಾದಂತೆ ಭಾಸವಾಯಿತು. ಹಲ್ಲುಗಳೆಲ್ಲ ಕಳಚಿ ಬಿದ್ದೇ ಹೋದವೆಂಬತೆ ದವಡೆಗಳೆರಡೂ ಅನಿಯಂತ್ರಿತವಾಗಿ ಕಂಪಿಸತೊಡಗಿದವು. ತಣ್ಣನೆಯ ಗಾಳಿಗೆ ತೆರೆದುಕೊಂಡ ದೇಹದ ಭಾಗಗಳು ಸ್ಪರ್ಶಜ್ಞಾನವನ್ನೇ ಕಳೆದುಕೊಂಡು ಕೊರಡಾದಂತೆ ಅನ್ನಿಸಿತು. ಸ್ವಲ್ಪಹೊತ್ತು ಹೊರಬಿದ್ದ ಜಾಗದಲ್ಲೇ ನಿಂತು ತಿಂಗಳ ಬೆಳಕಿಗೆ ಕಣ್ಣನ್ನು ಒಗ್ಗಿಸಿಕೊಂಡು ನೆಲದಲ್ಲಿ ಉದ್ದಕ್ಕೂ ಹಾಸಿಬಿದ್ದ ಕಲ್ಲುಗಳನ್ನು ಎಡವದಂತೆ ಟೆಂಟಿನ ಬದಿಯಲ್ಲಿ ನಿಧಾನಕ್ಕೆ ಹತ್ತೆಂಟು ಹೆಜ್ಜೆ ನಡೆದು, ನಿಂತಲ್ಲೇ ಫಿರಾನ್ ನೆಲಕ್ಕೆ ತಾಗುವಷ್ಟು ತಗ್ಗಿ ಮುಂಭಾಗವನ್ನು ಎತ್ತಿ ಹಿಡಿದುಕೊಂಡು, ಕಾಂಗಾರ್ ಕೆಳಗೆ ಬೀಳದಂತೆ ಜಾಗ್ರತೆಯಿಂದ ಪಾಯಿಜಾಮದ ಲಾಡಿಯನ್ನು ಸಡಿಲಿಸಿ ಲಂಗೋಟಿ ಬದಿಗೆ ಸರಿಸಿ ಕುಕ್ಕರುಗಾಲಿನಲ್ಲಿ ಕೂತು ಮೂತ್ರ ವಿಸರ್ಜನೆಗೆ ಯತ್ನಿಸಿದರೆ ಜಠರದ ಸ್ನಾಯುಗಳು ಮೂತ್ರಕೋಶದ ಮೇಲೆ ಒತ್ತಡ ಹೇರಿ ಮೂತ್ರವನ್ನು ಹೊರದಬ್ಬುವ ಶಕ್ತಿಯನ್ನೇ ಕಳೆದುಕೊಂಡಂತೆ ಭಾಸವಾಯಿತು. ಐವಾನನಿಗೆ ಇಂತಹ ಅನುಭವ ಇದು ಮೊದಲೇನೂ ಅಲ್ಲ. ಹಾಗಾಗಿ ಪಕ್ಕದಲ್ಲಿದ್ದ ಬಂಡೆಗಲ್ಲಿಗೆ ಒರಗಿ ತುಸುಹೊತ್ತು ಅಲ್ಲಾಡದೇ ನಿಂತು, ಆದಷ್ಟೂ ದೀರ್ಘವಾಗಿ ಉಸಿರಾಡಿ ಸಾಕಷ್ಟು ಸುಧಾರಿಸಿಕೊಂಡು ಮತ್ತೆ ಕುಕ್ಕುರುಗಾಲಿನಲ್ಲಿ ಕೂತು ಸಾಕಷ್ಟು ಒತ್ತಡಹಾಕಿ ಹನಿಹನಿಯಾಗಿ ಮೂತ್ರ ವಿಸರ್ಜಿಸಿ ಮುಗಿಸುವ ಹೊತ್ತಿಗೆ ಜೀವ ಬಾಯಿಗೆ ಬಂದಿತ್ತು. ಬಗ್ಗಿ ಪಾಯಿಜಾಮ ಮೇಲೆತ್ತಿ ಲಂಗೋಟಿ ಸರಿಸಿ ಸಡಿಲಿಸಿದ ಲಾಡಿಯನ್ನು ಬಿಗಿದು ಕಟ್ಟಲು ಹವಣಿಸಿದರೆ ಇದುವರೆಗೂ ಗವಸಿನೊಳಗೇ ಇದ್ದಿದ್ದರೂ, ಈಗ ಬೆರಳನ್ನು ಆಡಿಸಲಾಗದ ಮಟ್ಟಿಗೆ ಕೈಗಳು ಮರಗಟ್ಟು ಹೋಗಿದ್ದವು. ಸ್ವಲ್ಪಹೊತ್ತು ಕೈಗಳನ್ನು ಕಿಬ್ಬೊಟ್ಟೆಗೆ ಕಟ್ಟಿದ್ದ ಕಾಂಗಾರ್ ಮೇಲಿಟ್ಟು ಬೆರಳಾಡುವಷ್ಟು ಬಿಸಿಮಾಡಿಕೊಂಡು ಲಾಡಿಬಿಗಿದು ಮೇಲೇಳಲು ಹೊರಟರೆ ಕುಳಿತಲ್ಲಿಂದ ಏಳುವುದೂ ಸುಲಭವಿರಲಿಲ್ಲ. ಅಂತೂ ಇಂತೂ ಕಷ್ಟಪಟ್ಟು ಪಕ್ಕದಲ್ಲಿದ್ದ ಬಂಡೆಯ ಮೇಲೆ ಕೈಯೂರಿ ಮೆಲ್ಲಗೆ ಮೇಲೆದ್ದು ಮುಖವೆತ್ತಿ ಆಕಾಶವನ್ನು ದಿಟ್ಟಿಸಿದರೆ ಬೆಳಗಾಗಲು ಕನಿಷ್ಟವೆಂದರೂ ಎರಡು ತಾಸು ಇದ್ದಂತೆನ್ನಿಸಿತ್ತು. ವಿಶಾಲವಾಗಿ ಹರಡಿಕೊಂಡಿದ್ದ ನೀಲಾಗಸದ ಟೆಂಟಿನಡಿಯಲ್ಲಿ ಲಕ್ಷೋಪಲಕ್ಷ ನಕ್ಷತ್ರಗಳು ಚಳಿಗೆ ಗಡಗಡ ನಡುಗುತ್ತ ಮುದುಡಿ ಕುಳಿತು ಅಸಹಾಯಕವಾಗಿ ಕಣ್ಣು ಪಿಳುಕಿಸುತ್ತಿದ್ದುದನ್ನು ಕಂಡ ಐವಾನ ಚಳಿಗಾಳಿಯ ಚಿತ್ರಹಿಂಸೆಗೆ ತುತ್ತಾದವನು ತಾನೊಬ್ಬನೇ ಅಲ್ಲವೆಂದು ಸಮಾಧಾನ ಪಟ್ಟುಕೊಂಡ. ಅಪರಾತ್ರಿಯ ಘನಘೋರ ನೀರವವನ್ನು ಭೇದಿಸಿ ನಂದಕೋಲ್ ಕೊಳದ ನೀರು ದಡಕ್ಕೆ ಬಡಿದು ಹಿಂದಿರುಗುವ ಸದ್ದು ಸುಸ್ಪಷ್ಟವಾಗಿ ಕೇಳಿಸುತ್ತಿತ್ತು. ಪಕ್ಕದಲ್ಲಿದ್ದ ಹರ್ಮುಖ ಪರ್ವತ ಶಿಖರವೂ ಹಿಮದಹೊದಿಕೆ ಹೊದ್ದು ಚಳಿಗಾಳಿಗೆ ಹೆದರಿ ಮುಡಿಯನ್ನು ಮೋಡದ ಮುಸುಕಿನೊಳಗೆ ಹುದುಗಿಸಿಕೊಂಡಿತ್ತು. ಅದರ ಭುಜಪ್ರದೇಶದಲ್ಲಿ ಹರಡಿಕೊಂಡಿದ್ದ ಬೃಹತ್ ಹಿಮನದಿಯ ಹರಹು ಪರ್ವತದ ಎದೆಗೆ ಬಿಳಿಯ ದುಪ್ಪಟವನ್ನು ಹೊದೆಸಿದಂತೆ ಕಾಣುತಿತ್ತು.
ಪರ್ವತದ ಮೇಲ್ಮೈಯಲ್ಲಿ ಗುಂಡಿಗಳಿರುವ ಪ್ರದೇಶದಲ್ಲೆಲ್ಲ ಚೆಲ್ಲಿಕೊಂಡ ಬೆಳ್ಳನೆಯ ಹಿಮರಾಶಿ ಮತ್ತು ಉಬ್ಬುದಿಬ್ಬಗಳಲ್ಲಿ ಎದ್ದುತೋರುವ ಕಪ್ಪುಶಿಲೆಗಳು ತಿಂಗಳ ಬೆಳಕಿನಲ್ಲಿ, ಕಪ್ಪುಬಿಳಿ ಚಿತ್ತಾರದ ಫಿರಾನ್ ತೊಟ್ಟ ದಢೂತಿ ಮುದುಕಿಯೊಬ್ಬಳು ಚಳಿಯಲ್ಲಿ ಮುದುಡಿ ಕುಳಿತಂತೆ ಕಾಣುತ್ತಿತ್ತು. ಪರ್ವತ ತಪ್ಪಲಿನ ಹಿಮಮೌನವನ್ನು ಸೀಳಿ ಬರುತ್ತಿದ್ದ ಕೊಳದ ಅಲೆಗಳ ಲಯಬದ್ಧ ಸದ್ದಿನ ಜೊತೆಗೆ ಬಿಟ್ಟುಬಿಟ್ಟು ಬರುತ್ತಿದ್ದ ಇನ್ನೊಂದು ಸದ್ದು ಯಾವುದೆಂಬ ಕುತೂಹಲ ಹುಟ್ಟಿ, ಆತ ನಾಲ್ಕಾರು ಹೆಜ್ಜೆ ಮುಂದಿಟ್ಟು ಸರೋವರವನ್ನೇ ಗಮನಿಸುತ್ತ ನಿಂತ. ಕಿವಿಗೊಟ್ಟು ಆಲಿಸಿದಾಗ ಅದು ಮೀನು, ಕಪ್ಪೆಗಳೇ ಮೊದಲಾದ ಜಲಚರಗಳು ಮುಳುಗೇಳುವ ಸದ್ದು ಎನ್ನಿಸಿತು. ಕೊರೆಯುವ ಚಳಿಯಲ್ಲಿ ತಣ್ಣೀರಿನೊಳಗೆ ಜಲಚರಗಳು ಅಷ್ಟೊಂದು ಚಟುವಟಿಕೆಯಿಂದ ಹೇಗಿರುವವೋ ಎಂಬ ಹುಚ್ಚು ಪ್ರಶ್ನೆ ಹುಟ್ಟಿಕೊಂಡಿತು. ಇದ್ದಕ್ಕಿದ್ದಂತೆ ಆತನಿಗೆ ಬಾಲ್ಯದಲ್ಲಿ ತಾನು ತನ್ನಪ್ಪನೊಂದಿಗೆ ಬಂದು ಇದರಲ್ಲಿ ಮತ್ತು ಇದರ ಮೇಲ್ಭಾಗದಲ್ಲಿರುವ ಗಂಗಬಾಲ್ ಸರೋವರದಲ್ಲಿ ಕಂದು ಮೀನುಗಳನ್ನು ಹಿಡಿಯುತ್ತಿದ್ದುದು ನೆನಪಾಗಿ ಬಾಯಲ್ಲಿ ನೀರೂರಿತು. ನಾಳೆ ಮಾಂಟ್ಗೊಮರಿ ಸಾಹೇಬರ ಒಪ್ಪಿಗೆ ಪಡೆದು ದಡೂತಿ ಕಂದು ಮೀನು ಹಿಡಿದು ಅಡುಗೆ ಮಾಡಿಸಿ ಅವರಿಗೂ ಈ ಸರೋವರದ ಮೀನುಗಳ ವಿಶೇಷ ರುಚಿ ತೋರಿಸಬೇಕು ಎಂದುಕೊಳ್ಳುವಷ್ಟರಲ್ಲಿ ಮತ್ತೊಮ್ಮೆ ಜೋರಾಗಿ ಚಳಿಗಾಳಿ ಬೀಸಿತು. ಮೀನು ಹಿಡಿಯುವ ಯೋಚನೆಯನ್ನು ಅಲ್ಲಿಗೇ ಕೈಬಿಟ್ಟು ಮೊದಲು ಒಳಗೆ ಹೋಗಿ ಬೆಚ್ಚಗೆ ಮಲಗಲು ನಿರ್ಧರಿಸಿ, ಗಡಗಡ ನಡುಗುತ್ತ ಅವಸರದಲ್ಲಿ ಟೆಂಟಿನತ್ತ ನಡೆದು ಒಳಸೇರಿಕೊಳ್ಳುವ ಹೊತ್ತಿಗೆ ಆತನಿಗೆ ಸಾಕುಸಾಕಾಗಿತ್ತು. ಪಾದರಕ್ಷೆಗಳನ್ನು ಕಳಚಿ, ಪಗ್ರಿ, ಟೊಪ್ಪಿಯನ್ನು ತೆಗೆದಿಟ್ಟು ಕಿಬ್ಬೊಟ್ಟೆಯಲ್ಲಿದ್ದ ಕಾಂಗಾರನ್ನು ತೆಗೆಯದೇ ಹಾಗೇ ಇರಿಸಿಕೊಂಡು ಕಂಬಳಿ ಹೊದ್ದು ನಿಶ್ಚಲನಾಗಿ ಕುಳಿತ. ತುಸುಹೊತ್ತಿನ ನಂತರ ಕುಳಿತಲ್ಲೇ ಮತ್ತೊಮ್ಮೆ ಲಾಟೀನು ಎತ್ತಿ ಹಿಡಿದು ಕಣ್ಮುಚ್ಚಿ ಮಲಗಿದ್ದ ಸಾಹೇಬರನ್ನು ಗಮನಿಸಿದ. ಹೊರಜಗತ್ತಿನ ಪರಿವೆಯಿಲ್ಲದೆ ನಿದ್ರಿಸಿದ್ದ ಅವರನ್ನು ನೋಡಿ ನಿದ್ದೆಯಲ್ಲಿ ಅದ್ಯಾವ ಶಿಖರದ ಎತ್ತರವನ್ನು ಅಳೆಯುತ್ತಿದ್ದಾರೋ ಪುಣ್ಯಾತ್ಮ ಎಂಬ ಯೋಚನೆ ಬಂದು ತನ್ನೊಳಗೇ ಮುಗುಳ್ನಕ್ಕ. ಇನ್ನೇನು ನಿದ್ದೆ ಬರುತ್ತಿದೆ ಎನ್ನಿಸಿದಾಗ ಕಾಂಗಾರನ್ನು ಕಳಚಿ ಬದಿಗಿಟ್ಟು ಕಂಬಳಿ ಹೊದ್ದು ಕಣ್ಮುಚ್ಚಿ ಮಲಗಿದ.
ಅಂದಿಗೆ ಮಾಂಟ್ಗೊಮರಿ ಸಾಹೇಬರಿಗೆ ಪೆಟ್ಟುಬಿದ್ದ ದುರ್ಘಟನೆ ಸಂಭವಿಸಿ ಏಳು ದಿನ ಕಳೆದಿತ್ತು. ಅಂದಿನ ಅವಘಡದ ಭಯಾನಕ ಸನ್ನಿವೇಶ ನೆನಪಾದರೆ ಐವಾನನಿಗೆ ದುಃಸ್ವಪ್ನವೊಂದನ್ನು ಕಂಡಂತೆ ಈಗಲೂ ಮೈನಡುಕ ಹುಟ್ಟುತ್ತಿತ್ತು. ತಾವೆಲ್ಲ ಅಂದು ಬದುಕಿ ಬಂದದ್ದು ಅಲ್ಲಾನ ಕೃಪೆಯಿಂದ ಮಾತ್ರ ಎಂಬುದು ಆತನ ಗಟ್ಟಿ ನಂಬಿಕೆಯಾಗಿತ್ತು.
ಸರಿಸುಮಾರು ಎರಡು ವಾರಗಳ ಹಿಂದೆ, ಇಪ್ಪತ್ತು ದಿನಗಳ ಕಾಲ ದುರ್ಗಮ ಹರ್ಮುಖ ಪರ್ವತದ ನೆತ್ತಿಯಲ್ಲಿ ಉಳಿದುಕೊಂಡಾಗಿನ ಕಡುಸಂಕಷ್ಟಗಳು ಆತನಿಗೆ ನೆನಪಾಗತೊಡಗಿದವು. ಪರ್ವತದ ನೆತ್ತಿಯಲ್ಲಿ ಹೂಡಿಕೊಂಡಿದ್ದ ಶಿಬಿರಗಳನ್ನೇ ಕಿತ್ತು ಹೊತ್ತೊಯ್ಯುವ ವೇಗದಲ್ಲಿ ಬೀಸುತ್ತಿದ್ದ ಬಿರುಗಾಳಿ, ಸಂಜೆ ಮುಂಜಾನೆ ಬಿಡುವಿಲ್ಲದೆ ಸುರಿಯುತ್ತಿದ್ದ ಹಿಮ, ಸದಾ ಸುತ್ತುವರಿದಿರುತ್ತಿದ್ದ ದಟ್ಟಮಂಜು, ಇದ್ದಕ್ಕಿದ್ದಂತೆ ಆಗಸವನ್ನೆಲ್ಲ ಆವರಿಸಿಕೊಳ್ಳುತ್ತಿದ್ದ ಕಾರ್ಮೋಡ, ತಲೆಗೂದಲನ್ನು ನೆಟ್ಟಗಾಗಿಸಿ, ಮೈಮೇಲಿನ ಬಟ್ಟೆಗಳು ಅಲ್ಲಾಡಿದರೂ ಕಿಡಿಗೆದರಿಸುತ್ತಿದ್ದ ವಿದ್ಯುದಾವೇಶಿತ ಮೋಡ, ಹಗಲೆಲ್ಲ ನೆತ್ತಿಸುಡುವ ಉರಿಬಿಸಿಲಿನ ಝಳ, ಸಂಜೆಯಾದೊಡನೆ ಮೈಕೊರೆಯುತ್ತಿದ್ದ ಚಳಿ, ಬಾಯಾರಿಕೆ ನೀಗಿಕೊಳ್ಳಲೂ ಮಂಜುಗಡ್ಡೆಯನ್ನು ಕರಗಿಸಿ ಕುಡಿಯಬೇಕಿದ್ದ ಅನಿವಾರ್ಯ ಪರಿಸ್ಥಿತಿ, ಶಿಬಿರದೊಳಗೆ ಉರಿಹೊತ್ತಿಸಲು ಪಡಬೇಕಿದ್ದ ಪಾಡು, ಹೊತ್ತಿಸಿದಷ್ಟೂ ಆರಿಹೋಗುತ್ತಿದ್ದ ಬೆಂಕಿ, ಸ್ಟವ್ ಮೇಲಿಂದ ಕೆಳಗಿಳಿಸಿದ ಮರುಗಳಿಗೆಯಲ್ಲೇ ತಣ್ಣಗಾಗುತ್ತಿದ್ದ ಅಡುಗೆ, ಹೀಗೆ ಅಲ್ಲಿದ್ದ ಸಂಕಷ್ಟ ಒಂದೆರಡಲ್ಲ. ಎಷ್ಟೋ ರಾತ್ರಿ ಬೀಸುವ ಗಾಳಿಯ ರಭಸಕ್ಕೆ ಟೆಂಟಿನ ಗುಡಾರ ಹಾರಿಹೋಗಬಹುದೆಂಬ ಆತಂಕ, ಗಾಢನಿದ್ದೆಗೂ ಆಸ್ಪದ ನೀಡುತ್ತಿರಲಿಲ್ಲ.
ಪಕ್ಕದಲ್ಲಿದ್ದ ಹರ್ಮುಖ ಪರ್ವತ ಶಿಖರವೂ ಹಿಮದಹೊದಿಕೆ ಹೊದ್ದು ಚಳಿಗಾಳಿಗೆ ಹೆದರಿ ಮುಡಿಯನ್ನು ಮೋಡದ ಮುಸುಕಿನೊಳಗೆ ಹುದುಗಿಸಿಕೊಂಡಿತ್ತು. ಅದರ ಭುಜಪ್ರದೇಶದಲ್ಲಿ ಹರಡಿಕೊಂಡಿದ್ದ ಬೃಹತ್ ಹಿಮನದಿಯ ಹರಹು ಪರ್ವತದ ಎದೆಗೆ ಬಿಳಿಯ ದುಪ್ಪಟವನ್ನು ಹೊದೆಸಿದಂತೆ ಕಾಣುತಿತ್ತು.
ಹಲ್ಲುಜ್ಜುವುದು, ಮುಖ ತೊಳೆಯುವುದು, ಮಲಮೂತ್ರ ವಿಸರ್ಜನೆ ಮೊದಲಾದ ನೈಸರ್ಗಿಕ ಕ್ರಿಯೆಗಳೂ ಸುಲಭವಿರಲಿಲ್ಲ. ಮೂಗಿನಲ್ಲಿ ಸದಾ ಸುರಿಯುತ್ತಿದ್ದ ನೀರು, ದವಡೆಗಳ ಅನಿಯಂತ್ರಿತ ಕಂಪನ, ಅವಯವಗಳ ಸೆಳೆತ, ಅಂಗಾಲು ಅಂಗೈಗಳ ನವೆ, ಮೂಗು ಮತ್ತು ಕಣ್ಣುಗಳ ಉರಿ ಸಾಮಾನ್ಯವಾಗಿದ್ದವು. ಉಸಿರಾಡುವುದೂ ಚಿತ್ರಹಿಂಸೆ ಯಾಗಿತ್ತು. ಸೂರ್ಯಕಿರಣವನ್ನು ಪ್ರತಿಫಲಿಸುತ್ತಿದ್ದ ಹಿಮಶಿಖರಗಳ ಪ್ರಭೆ, ಕಣ್ಣುಗಳ ದೃಷ್ಟಿಯನ್ನೇ ಮಂದವಾಗಿಸಿ ಹಿಮಗುರುಡುತನಕ್ಕೆ ಈಡುಮಾಡುವಂತಿತ್ತು. ಸುತ್ತಿದ್ದ ಚರ್ಮದ ಪಟ್ಟಿಗಳ ಹೊರತಾಗಿಯೂ ಕಾಲುಗಳಿಗೆ ಹಿಮಹುಣ್ಣು ಹತ್ತುತ್ತಿತ್ತು. ಮೈಚರ್ಮ ವೆಲ್ಲ ಬಿರುಕುಬಿಟ್ಟು ತೇವಾಂಶ ತುಂಬಿದ ಚಳಿಗಾಳಿ ತಾಗಿದರೆ ಪ್ರಾಣವೇ ಹೋದಷ್ಟು ಬಾಧೆಯಾಗುತ್ತಿತ್ತು. ಸುಂಯ್ ಎಂದು ಸದಾ ಬೀಸುತ್ತಿದ್ದ ಗಾಳಿಯ ಸದ್ದಿಗೆ ಕಿವಿಗಳು ಡಬ್ಬು ಹಾಕಿಕೊಂಡಿದ್ದವು. ಇಂತಹ ತೊಂದರೆಗಳ ನಡುವೆ ಆ ದುರ್ಗಮ ಪರ್ವತಗಳ ನೆತ್ತಿಯಲ್ಲಿ ಅದೇಕೆ ಅಷ್ಟೊಂದು ಕಷ್ಟಪಡಬೇಕೆಂಬುದೇ ಅರ್ಥವಾಗುತ್ತಿರಲಿಲ್ಲ. ಆದರೆ ಪರಂಗಿ ಸಾಹೇಬರು ಮಾತ್ರ ಮೈಯಲ್ಲಿ ಸೈತಾನ ಹೊಕ್ಕವರಂತೆ ಸದಾ ಒಂದಿಲ್ಲೊಂದು ಕೆಲಸದಲ್ಲಿ ತಾವೂ ತೊಡಗಿರುತ್ತಿದ್ದರು, ಸಿಬ್ಬಂದಿಗಳನ್ನೂ ತೊಡಗಿಸುತ್ತಿದ್ದರು. ಒಬ್ಬರು ಪ್ರಿಸ್ಮಾಟಿಕ್ ಕಂಪಾಸ್ ತರಲು ಹೇಳುತ್ತಿದ್ದರೆ, ಇನ್ನೊಬ್ಬರು ಕುದಿದು ಆವಿಯಾಗುವ ನೀರಿಗೆ ಥರ್ಮಾಮೀಟರ್ ಅದ್ದಲು, ಮತ್ತೊಬ್ಬರು ದೂರ ಪರ್ವತದ ರೀಡಿಂಗ್ ತೆಗೆದುಕೊಳ್ಳಲು ಥಿಯೋಡಲೈಟ್ ಸೆಟ್ ಮಾಡಲು ಹೇಳುತ್ತಿದ್ದರು. ಮಗದೊಬ್ಬರು ಪರ್ವತ ಶ್ರೇಣಿಯಲ್ಲಿ ಸಿಗ್ನಲ್ಮನ್ಗಳು ಹಿಡಿದ ಬಾವುಟ ಅಥವಾ ದೀಪಗಳನ್ನು ಟೆಲಿಸ್ಕೋಪ್ ಮೂಲಕ ಗುರುತಿಸಿ, ಶಿಖರಗಳ ಸಂಖ್ಯೆ ಬರೆದುಕೊಂಡು ಡ್ರಾಯಿಂಗ್ ಬೋರ್ಡ್ ಮೇಲೆ ಅದರ ರೇಖಾಚಿತ್ರ ಬಿಡಿಸಿದರೆ, ಇನ್ನೊಬ್ಬರು ಕ್ರೋನೋಮೀಟರ್ ಹಿಡಿದು ಓಡಾಡುತ್ತಿದ್ದರು. ಮಾಡಿದ್ದನ್ನೇ ಬೆಳಿಗ್ಗೆ ಒಮ್ಮೆ ಮಧ್ಯಾಹ್ನ ಒಮ್ಮೆ, ರಾತ್ರಿ ಇನ್ನೊಮ್ಮೆ ಮಾಡಿಸುತ್ತಿದ್ದರು. ಇಷ್ಟೂ ಸಾಲದೆಂಬಂತೆ ಉದ್ದಕೊಳವೆಯ ಝೆನಿತ್ ಟೆಲಿಸ್ಕೋಪ್ ಇಟ್ಟುಕೊಂಡು ಇಡೀ ರಾತ್ರಿ ನಕ್ಷತ್ರಗಳನ್ನು ಗುರುತಿಸಿ ನೋಟ್ ಮಾಡಿಕೊಳ್ಳುತ್ತಿದ್ದರು. ಇಂದಲ್ಲ ನಾಳೆ ಮುಗಿದೀತೆಂದು ತಾವೆಲ್ಲ ಕಾಯುತ್ತಿದ್ದರೆ ಸಾಹೇಬರುಗಳ ಕೆಲಸಕ್ಕೆ ತುದಿಮೊದಲೆಂಬುದೇ ಇರಲಿಲ್ಲ. ತಮಗೆಲ್ಲ ಸಿಟ್ಟು ಬರುತ್ತಿತ್ತು. `ದುರ್ಗಮ ಪರ್ವತದ ನೆತ್ತಿಗೆ ಕರೆತಂದು ನಮ್ಮನ್ನು ಹೀಗೆ ಗೋಳು ಹೊಯ್ದುಕೊಳ್ಳುವುದಲ್ಲದೆ ತಾವೂ ಇಷ್ಟೆಲ್ಲ ಕಷ್ಟಪಡಲು ಇವರಿಗೆ ತಲೆಕೆಟ್ಟಿರಬೇಕು. ಕೆಳಗೇ ಕುಳಿತು ಏನೋ ಒಂದು ಲೆಕ್ಕಬರೆದು ತೋರಿಸಿದರೆ ಇಲ್ಲಿಗೆ ಬಂದು ಪರೀಕ್ಷಿಸಿ ಸುಳ್ಳು ಎನ್ನಲು ಯಾರಿಗೆ ಸಾಧ್ಯವಿತ್ತು? ಇವರಂತೂ ಹೆಂಡಿರು ಮಕ್ಕಳನ್ನು ಬಿಟ್ಟುಬಂದ ಪರದೇಶಿಗಳು, ನಾವೇನು ಎಲ್ಲವನ್ನೂ ಬಿಟ್ಟ ಸನ್ಯಾಸಿಗಳೇ’ ಎಂದು ತಾವೆಲ್ಲ ಸಾಹೇಬರನ್ನು ಬೈದುಕೊಳ್ಳುತ್ತಿದ್ದುದು ಆತನಿಗೆ ನೆನಪಾಯಿತು.
ಹೀಗೆ ಕಡುಹಿಂಸೆಯಲ್ಲೇ ಹದಿನೈದು ದಿನ ಕಳೆದ ಮೇಲೆ ಕೊನೆಗೊಂದು ದಿನ ಸ್ವತಃ ಮಾಂಟ್ಗೊಮರಿ ಸಾಹೇಬರು, `ಕಾರಕೋರಂ ಶ್ರೇಣಿಯ ಎರಡು ಶಿಖರಗಳ ಅನ್ವೇಷಣೆ ದೊಡ್ಡ ಸಾಧನೆ. ನಂಗಾ ಪರ್ವತದ ವಿವರಗಳನ್ನು ಕಲೆ ಹಾಕಿದ್ದೂ ಸಾರ್ಥಕವಾಯಿತು. ಕಾರಕೋರಂ ಶ್ರೇಣಿಯ ದ್ವಿತೀಯ ಶಿಖರ, ಪೀಕ್ ಹದಿನೈದನ್ನೂ ಮೀರಿಸುವಷ್ಟು ಎತ್ತರ ಇರುವಂತಿದೆ’ ಎಂದು ಹೆಮ್ಮೆಯಿಂದ ಹೇಳಿದ್ದರು. ಉಳಿದವರೂ ತಲೆಯಾಡಿಸಿ ಸಮ್ಮತಿಸಿದ್ದರು. ಅವರ ಸಂಭಾಷಣೆ ಕೇಳಿ, `ಕಾರಕೋರಂ ಕಾಶ್ಮೀರದ ಉತ್ತರದಲ್ಲಿರುವ ಪರ್ವತಶ್ರೇಣಿ ಎಂಬುದು ಯಾರಿಗೆ ಗೊತ್ತಿಲ್ಲ. ಅದರಲ್ಲಿರುವ ಎರಡು ಎತ್ತರದ ಶಿಖರಗಳನ್ನು ಇವರೇ ಶೋಧಿಸಿದರಂತೆ! ಇವರಜ್ಜಿ ಪಿಂಡ. ಆ ಪರ್ವತದ ಹತ್ತಿರ ಇದ್ದವರು ಇವರಿಗಿಂತ ಮೊದಲು ಆ ಶಿಖರಗಳನ್ನು ಕಂಡಿರಲಿಲ್ಲವೇ? ಇವರು ನೋಡುವುದಕ್ಕೂ ಮೊದಲು ಆ ಶಿಖರಗಳು ತಲೆಮರೆಸಿಕೊಂಡಿದ್ದವೇ? ಇವರು ಬಂದು ನೋಡುವವರೆಗೆ ಯಾರಿಗೂ ಮುಖ ತೋರಿಸಬಾರದೆಂದು ನಾಚಿಕೊಂಡಿ ದ್ದವೇ? ತಾವೇ ಕಂಡುಹಿಡಿದಿದ್ದೇವೆ ಎಂಬುದು ಇವರ ಬೊಗಳೆ’ ಎಂದು ನಾಸಿರ್ ಹಾಸ್ಯ ಮಾಡಿಕೊಂಡು ನಕ್ಕಿದ್ದ. `ಪರ್ವತ ಶಿಖರವನ್ನು ಯಾರೋ ಕಂಡು ಹಿಡಿಯು ತ್ತಾರೆಂದರೆ ಅದು ಹೇಗೆ, ಅದು ಮೊದಲಿನಿಂದ ಅಲ್ಲೇ ಇದ್ದಿತ್ತಲ್ಲವೇ’ ಎಂದು ತನಗೂ ಅನ್ನಿಸಿದ್ದು ನೆನಪಾಗಿ ಆತ ಮುಗುಳ್ನಕ್ಕ.
ಅಂತೂ ಹರ್ಮುಖದ ನೆತ್ತಿಯ ನರಕವಾಸ ಮುಗಿಯುತ್ತಿದೆಯೆಂದು ತಾವೆಲ್ಲ ಖುಷಿಯಾಗಿದ್ದರೆ ಸಾಹೇಬರುಗಳ ಅತೃಪ್ತ ಆತ್ಮಗಳಿಗಿನ್ನೂ ತೃಪ್ತಿಯಾದಂತಿರಲಿಲ್ಲ. ಒಂದು ಮಧ್ಯಾಹ್ನ, ಪರ್ವತದ ನೆತ್ತಿಯಲ್ಲಿದ್ದ ಬಂಡೆಯೊಂದನ್ನು ಹತ್ತಿ ಕಾರಕೋರಂ ಶ್ರೇಣಿಯ ಅವೆರಡೂ ಶಿಖರಗಳಿಗೆ ಹೀಲಿಯೋಟ್ರೋಪಿನಿಂದ ಬೆಳಕನ್ನು ಬಿಡಿಸಿ ಮತ್ತೊಂದಿಷ್ಟು ರೀಡಿಂಗ್ ತೆಗೆದುಕೊಳ್ಳಲು ಮಾಂಟ್ಗೊಮರಿ ಸಾಹೇಬರು ನಿಶ್ಚಯಿಸಿ ಕೊಂಡಿದ್ದರು. ಅವರ ದುರಾದೃಷ್ಟವೋ ನಮ್ಮ ಗ್ರಹಚಾರವೋ ಮತ್ತೆ ನಾಲ್ಕೈದು ದಿನ ಕಳೆದರೂ ಮೋಡಮುಸುಕಿದ ವಾತಾವರಣ ತಿಳಿಯಾಗದೆ ಬಂಡೆಗಲ್ಲಿನ ಮೇಲೇರಿ ರೀಡಿಂಗ್ ತೆಗೆದುಕೊಳ್ಳುವ ಅವರ ಆಸೆ ಈಡೇರಿರಲಿಲ್ಲ. ಸರಿ, ಸಾಹೇಬರ ತಲೆಗೆ ಇನ್ನೇನೋ ಉಪಾಯ ಹೊಳೆದು, ಸರ್ವೆತಂಡಕ್ಕೆ ಇಳಿಯಲು ಅನುಮತಿ ಕೊಟ್ಟರಲ್ಲದೆ ಇಡೀ ತಂಡಕ್ಕೆ ಒಂದು ವಾರದ ರಜೆ ಘೋಷಿಸಿದ್ದರು.
ದುರದೃಷ್ಟವೆಂದರೆ ತಾವೆಲ್ಲ ರಜೆ ಮುಗಿಸಿ ಹಿಂದಿರುಗಿದರೂ ಮಾಂಟ್ಗೊಮರಿ ಸಾಹೇಬರ ಹರ್ಮುಖದ ಹುಚ್ಚು ಬಿಟ್ಟಿರಲಿಲ್ಲ. ಹಾಗಾಗಿ ಮೊದಲಿನ ಜಾಗ ಬಿಟ್ಟು, ವಾಂಗಟ್ ಕಣಿವೆಯ ನಾರಾನಾಗ್ ಗ್ರಾಮದ ಮೂಲಕ ಪುನಃ ಹರ್ಮುಖ ಪರ್ವತ ಹತ್ತಿ ಸರ್ವೆ ನಡೆಸಲು ಅವರು ನಿಶ್ಚಯಿಸಿಕೊಂಡಿದ್ದರು. ಸರಿ, ಎಲ್ಲರೂ ಕಂಗನ್ ಪಟ್ಟಣದ ಮೂಲಕ ನಾರಾನಾಗ್ ಗ್ರಾಮವನ್ನು ತಲುಪಿ, ಅದರ ಬೆನ್ನಿಗೆ ಆತುಕೊಂಡಂತಿದ್ದ ಭೂತೇಸರ್ ಪರ್ವತವನ್ನು ಹತ್ತಿ ಟ್ರಂಕೋಲ್ ಮೂಲಕ ಇದೇ ನಂದಕೋಲ್ ಸರೋವರವನ್ನು ದಾಟಿ ಗಂಗಬಾಳ್ ಸರೋವರದ ದಿಬ್ಬದಂತಿದ್ದ ಬೆಟ್ಟದ ಏಣಿನ ಮೇಲೆ ನಡೆದು, ನಡುವೆ ಹರಡಿಕೊಂಡಿದ್ದ ನೀರ್ಗಲ್ಲನ್ನು ಕಷ್ಟಪಟ್ಟು ದಾಟಿ, ಹಗ್ಗದ ಮೂಲಕ ಹರ್ಮುಖದ ಬಲಭಾಗದ ನಂದಿಪರ್ವತವನ್ನು ಏರಿದ್ದೆವು. ಹರ್ಮುಖ ಪರ್ವತದ ಆ ಭಾಗದಲ್ಲಿ ಮತ್ತೆ ನಮ್ಮ ಸರ್ವೆ ಕೆಲಸಗಳ ಪುನರಾರಂಭವಾಗಿತ್ತು. ಅದರ ಮರುದಿನವೇ ಸಂಭವಿಸಿತ್ತು ಮಹಾ ಅವಘಡ.
ನಾವು ಸರ್ವೆ ಆರಂಭಿಸಿದ್ದ ಜಾಗದಲ್ಲೊಂದು ದೊಡ್ಡ ಬಂಡೆ ಆಕಾಶದತ್ತ ಕೋಡಿನಂತೆ ಚಾಚಿಕೊಂಡಿತ್ತು. ಅದರ ಮೇಲಿನಿಂದ ಕಾರಕೋರಂ ಶಿಖರದ ನಿಖರ ಅಳತೆ ಸಾಧ್ಯವಾಗುವುದೆಂಬ ನಿರೀಕ್ಷೆಯಲ್ಲಿ ಮಾಂಟ್ಗೊಮರಿ ಸಾಹೇಬರು, ಅಂದು ಮಧ್ಯಾಹ್ನದ ಊಟದ ನಂತರ, ಆ ಕೋಡುಗಲ್ಲಿಗೆ ಏಣಿಯನ್ನು ಒರಗಿಸಲು ಸೂಚಿಸಿ, ಜಬ್ಬಾರ್, ಖಾಸಿಂ, ಖಾದರ್ ಮುಂತಾದ ಕೆಲಸಗಾರರ ಜೊತೆಗೆ ಬಂಡೆಯ ಮೇಲೇರಿ ಸಹಾಯಕರ ಜೊತೆಗೆ ಥಿಯೋಡಲೈಟ್ ರೀಡಿಂಗ್ ತೆಗೆದುಕೊಳ್ಳುವುದರಲ್ಲಿ ನಿರತ ರಾಗಿದ್ದರು. ಕ್ರಮೇಣ ಕಾರ್ಮೋಡಗಳು ಶಿಖರದ ನೆತ್ತಿಯನ್ನು ಮುತ್ತಿ ಸಂಜೆಗತ್ತಲು ಆವರಿಸತೊಡಗಿತ್ತು. ವಿಪರೀತ ಹಿಮಪಾತ ಆರಂಭವಾಗಿತ್ತು. ವಾತಾವರಣ ವಿದ್ಯುದಾವೇಶ ಗೊಂಡು ತಲೆಗೂದಲೆಲ್ಲ ಮೇಲೆದ್ದು ನಿಂತಿತ್ತು. ಥಿಯೋಡಲೈಟ್ ಮೇಲೆ ಹಿಮ ಸುರಿಯದಂತೆ ಛತ್ರಿ ಹಿಡಿದಿದ್ದ ಜಬ್ಬಾರ್ ತುಸು ಅಲ್ಲಾಡಿದರೂ ಜುಮ್ಮೆನ್ನುತ್ತಿದ್ದ ಅದರ ಲೋಹದ ಹಿಡಿಕೆಯನ್ನು ಹಿಡಿದುಕೊಳ್ಳಲು ತಿಣುಕುತ್ತಿದ್ದ. ಪರಿಸ್ಥಿತಿಯನ್ನು ಗಮನಿಸಿದ ಸಾಹೇಬರು, `ವಾತಾವರಣ ವಿದ್ಯುತ್ ಪ್ರೇರಿತವಾಗಿದೆ. ಇಲ್ಲಿದ್ದರೆ ಅಪಾಯ ಸಂಭವಿಸುವ ಸಾಧ್ಯತೆಯಿದೆ. ತಕ್ಷಣ ಕೆಲಸ ನಿಲ್ಲಿಸಿ, ಉಪಕರಣಗಳನ್ನು ಎತ್ತಿಕೊಂಡು ಎಲ್ಲರೂ ಕೆಳಗಿಳಿಯಿರಿ’ ಎಂದರು. ಅಷ್ಟರಲ್ಲಾಗಲೇ ಗುಡುಗು ಮಿಂಚುಗಳ ಆರ್ಭಟ ಆರಂಭವಾಗಿತ್ತು. ಕೆಳಗಿಳಿಯುವ ಅವಸರದಲ್ಲಿ ಹುಸೇನ್ ಮೊದಲು ಲೈಟ್ನಿಂಗ್ ಕಂಡಕ್ಟರ್ ಕಂಬವನ್ನು ಭೂ-ಸಂಪರ್ಕಕ್ಕೆ ಜೋಡಿಸಿದ್ದ ತಂತಿಯನ್ನು ಬಿಚ್ಚಿ, ನಂತರ ಕಂಬವನ್ನು ಮೇಲೆತ್ತಲು ಎರಡೂ ಕೈಯಲ್ಲಿ ಹಿಡಿದು ಅಲ್ಲಾಡಿಸತೊಡಗಿದ್ದ. ಉಪಕರಣ ಹೊತ್ತು ಇಳಿಯುತ್ತಿದ್ದವರಿಗೆ ಆಧಾರವಾಗಿ ಖಾಸಿಂ ಕೋಡುಗಲ್ಲಿಗೆ ಒರಗಿಸಿದ್ದ ಲೋಹದ ಏಣಿಯನ್ನು ಹಿಡಿದು ನಿಂತಿದ್ದ. ಛತ್ರಿಯನ್ನು ಮಡಚಿ ಕೆಳಗಿಟ್ಟು ಜಬ್ಬಾರ್ ಥಿಯೋಡಲೈಟಿನ ಟ್ರೈಪಾಡ್ ಸ್ಟ್ಯಾಂಡ್ ಬಿಚ್ಚುತ್ತಿದ್ದ. ಹುಸೇನ್ ಟೆಲಿಸ್ಕೋಪನ್ನು ಎತ್ತಿಕೊಳ್ಳಲು ಕೈಯಿಕ್ಕುವಷ್ಟರಲ್ಲಿ ಇದ್ದಕ್ಕಿದ್ದಂತೆ ಕಣ್ಣುಕೋರೈಸಿ ಇಡೀ ಪ್ರದೇಶವನ್ನು ಬೆಳ್ಳಂಬೆಳಗಿಸಿ ಭಾರೀ ಮಿಂಚೊಂದು ಅಪ್ಪಳಿಸಿತ್ತು. ಶಿಖರವೇ ಸೀಳಿ ಹೋಯಿತೆನ್ನುವಂತಹ ಅಬ್ಬರ. ಕ್ಷಣಾರ್ಧದಲ್ಲಿ ಲೈಟ್ನಿಂಗ್ ಪೋಲ್ ಕೀಳುತ್ತಿದ್ದ ಹುಸೇನನ ಕೈಗಳೆರಡೂ ಸುಟ್ಟು ಕರಕಲಾಗಿ ಆತ ಕಿರಿಚಿಕೊಂಡು ಎಚ್ಚರದಪ್ಪಿ ಕೆಳಗುರುಳಿ ಬಿದ್ದಿದ್ದ. ಏಣಿ ಹಿಡಿದಿದ್ದ ಖಾಸಿಂ ಅದನ್ನು ಕಿತ್ತೆಸೆದು ಅಯ್ಯೋ ಎಂದು ಕೈಕೊಡವುತ್ತ ಬಂಡೆಯಿಂದ ಉರುಳಿದ್ದ.
ಜಬ್ಬಾರನ ಕೈಯಿಂದ ಕಿತ್ತೆಸೆಯಲ್ಪಟ್ಟ ಥಿಯೋಡಲೈಟಿನ ಸ್ಟಾ÷್ಯಂಡು ಮಾಂಟ್ಗೊಮರಿ ಸಾಹೇಬರ ಭುಜ ಮತ್ತು ಕಾಲಿಗೆ ಬಡಿದು ಅವರೂ ನರಳುತ್ತ ಕೆಳಗುರುಳಿ ಸ್ಮೃತಿತಪ್ಪಿ ಬಿದ್ದಿದ್ದರು. ಹುಸೇನ ವಿಲವಿಲನೆ ಒದ್ದಾಡುತ್ತ ಅರಚಿಕೊಳ್ಳುತ್ತಿದ್ದ. ಮಿಂಚಿನ ಪ್ರಖರತೆಗೆ ಕಣ್ಣು ಕುರುಡಾಗಿ ಹೋಯಿತೆಂದು ಪೀಟರ್ ಕುಣಿಯುತ್ತಿದ್ದರು. ಕಣ್ಣುಗುಡ್ಡೆ ಸಿಡಿದು ಹೋದಂತಾಗಿ ಬೆಚ್ಚಿ ತಾನೂ ನರಳುತ್ತ ಮಂಜಿನ ರಾಶಿಯ ಮೇಲೆ ಬಿದ್ದು ಒದ್ದಾಡುತ್ತಿದ್ದುದನ್ನು ಐವಾನ್ ನೆನೆಸಿಕೊಂಡ. ಎದೆಯ ಮಾಂಸಖಂಡಗಳು ಬಿಗಿದು ಡಗ್ಲಾಸ್ ಉಸಿರುಗಟ್ಟಿ ಬಿದ್ದು ಹೊರಳಾಡುತ್ತಿದ್ದರು. ಇದೆಲ್ಲಕ್ಕಿಂತ ಭಯಾನಕವಾಗಿ ಶಿಖರದ ಬಲತುದಿಯ ಬಂಡೆಯ ಪಕ್ಕ ನಿರ್ಮಿಸಿದ್ದ ಅಡುಗೆ ಡೇರೆಯಲ್ಲಿ ಸ್ಟವ್ ಉರಿಸಿ ಚಹಾ ಮಾಡುತ್ತಿದ್ದ ಉಮ್ಮರ್ ಹೊರಗೆ ಬಂದು ನಡುಗುತ್ತ ಬಾಯ್ಬಡಿದುಕೊಳ್ಳುತ್ತಿದ್ದ. ಮಿಂಚಿನ ಹೊಡೆತಕ್ಕೆ ಲೋಹದ ಸ್ಟವ್ ಸಿಡಿದು ಎರಡು ಹೋಳಾಗಿ ಸೀಮೆಯೆಣ್ಣೆ ಎರಚಿ ಡೇರೆಯ ಗುಡಾರವೇ ಹೊತ್ತಿ ಉರಿಯ ತೊಡಗಿತ್ತು. ಸಕಾಲದಲ್ಲಿ ಉಮ್ಮರ್ ಹೊರಗೋಡಿ ಬರದಿದ್ದರೆ ಕ್ಷಣಾರ್ಧದಲ್ಲಿ ಬೆಂಕಿಯ ಝಳಕ್ಕೆ ಸಿಲುಕಿ ಕರಕಲಾಗಿ ಹೋಗುತ್ತಿದ್ದ. ಅವನ ಸಹಾಯಕನಿಗೆ ಸ್ಟವ್‌ನಿಂದ ಸಿಡಿದ ಲೋಹದ ಚೂರು ಬಡಿದು ಭುಜದಿಂದ ಎದೆಯವರೆಗೆ ಕತ್ತರಿಸಿ ರಕ್ತ ಸೋರುತಿತ್ತು. ಕಣ್ಮುಚ್ಚಿ ತೆರೆಯುವುದರೊಳಗೆ ಎಲ್ಲಿ ನೋಡಿದರೂ ನೋವಿನಿಂದ ಅರಚುವವರೇ, ಬಿದ್ದು ಒದ್ದಾಡುವವರೇ. ಒಂದರೆ ಕ್ಷಣದಲ್ಲಿ ಪರಿಸ್ಥಿತಿ ಅಯೋಮಯವಾಗಿತ್ತು. ಇಲ್ಲಿ ನಡೆದಿದ್ದ ಕಿರಿಚಾಟ ಕೇಳಿ ಶಿಖರದ ಇನ್ನೊಂದು ದಿಕ್ಕಿನಲ್ಲಿ ಸರ್ವೆ ನಡೆಸುತ್ತಿದ್ದ ಜಾನ್ಸನ್ ಸಾಹೇಬರ ತಂಡ ಗಾಬರಿಯಿಂದ ಓಡಿಬಂದಿತ್ತು. ಅಲ್ಲಾನ ಕೃಪೆಯಿಂದ ಎತ್ತರದ ಬಂಡೆಯೊಂದರ ಕೆಳಗಿದ್ದ ಅವರ್ಯಾರೂ ಸಿಡಿಲಿನ ಆಘಾತಕ್ಕೆ ಸಿಲುಕಿರಲಿಲ್ಲ. ಇಲ್ಲಿ ನಡೆದಿದ್ದ ಅನಾಹುತವನ್ನು ಕಂಡು ಹೌಹಾರಿದ್ದ ಅವರು ಬಿದ್ದು ಒದ್ದಾಡುತ್ತಿದ್ದವರ ಸಹಾಯಕ್ಕೆ ಧಾವಿಸಿದ್ದರು. ವಿಷಮ ಪರಿಸ್ಥಿತಿಯನ್ನು ನಿಭಾಯಿಸಿ ಅನುಭವವಿದ್ದ ಜಾನ್ಸನ್ ಸಾಹೇಬರು ತಮ್ಮ ತಂಡದವರನ್ನು ಕರೆದು, ಸುಟ್ಟು ಗಾಯಗೊಂಡವರನ್ನು ಮತ್ತು ಪೆಟ್ಟು ತಿಂದವರನ್ನು ಮೊದಲು ಉಪಚರಿಸಿ ಟೂಲ್ ಕಿಟ್ಟಿನಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ತೆರೆದು ಚಿಕಿತ್ಸೆ ನೀಡಲು ಸೂಚಿಸುತ್ತ ಒಬ್ಬೊಬ್ಬರನ್ನೇ ನಿಧಾನಕ್ಕೆ ನಂದಕೋಲ್ ಸರೋವರದ ಸಮೀಪಕ್ಕೆ ಒಯ್ಯಲು ಸಿದ್ಧತೆ ನಡೆಸಿದ್ದರು. ಅಡುಗೆ ಮತ್ತು ಉಗ್ರಾಣ ಶಿಬಿರಗಳೆರಡೂ ಸುಟ್ಟು ಕರಕಲಾಗಿ ಹೋಗಿದ್ದರಿಂದ ಜೋಲಿ ಮಾಡಿ ಕರೆದೊಯ್ಯಲು ಬೇಕಾದ ಕಂಬಳಿ, ಚಾದರ, ಹುರಿ, ಹಗ್ಗ, ಗಳಗಳೂ ಸುಟ್ಟು ಹೋಗಿದ್ದವು.
ಇದ್ದುದರಲ್ಲೇ ವ್ಯವಸ್ಥೆ ಮಾಡಿಕೊಂಡು ಮೊದಲು ತೀವ್ರ ಪೆಟ್ಟಾದವರನ್ನು, ಎಚ್ಚರತಪ್ಪಿದವರನ್ನು ಒಬ್ಬೊಬ್ಬರನ್ನಾಗಿ ಸಾಗಿಸಿ ನಂತರ ಉಳಿದವರನ್ನು ಕೆಳಗೊಯ್ಯುವುದೆಂದು ನಿರ್ಧರಿಸಿದ ಜಾನ್ಸನ್, ಒಂದೊಂದಾಗಿ ಅಗತ್ಯಕ್ರಮ ಕೈಗೊಳ್ಳತೊಡಗಿದ್ದರು. ಮಾಂಟ್ಗೊಮರಿ ಸಾಹೇಬರು ಎಚ್ಚರದಪ್ಪಿ ಬಿದ್ದಿದ್ದರು. ಡಗ್ಲಾಸ್ ಮತ್ತು ಪೀಟರ್ ಪೆಟ್ಟು ತಿಂದು ಕಂಗೆಟ್ಟಿದ್ದರು. ಆಪತ್ತುಗಳ ನಿರ್ವಹಣೆಯಲ್ಲಿ ಅಪಾರ ಅನುಭವವಿದ್ದ ಜಾನ್ಸನ್ ಕುದುರೆ ಸವಾರಿಯಲ್ಲಿ ಚುರುಕಾಗಿದ್ದ ಮಕ್ಬುಲ್ ಹುಸೇನನ ಮೂಲಕ ಟ್ರಂಕಾಲ್ ಕಣಿವೆಯಲ್ಲಿದ್ದ ಬೇಸ್‌ಕ್ಯಾಂಪಿಗೆ, ತುರ್ತು ಅಗತ್ಯವಿದ್ದ ಟೆಂಟು, ಕಂಬಳಿ, ಹುರಿ, ಹಗ್ಗ, ಆಹಾರ, ಪಾನೀಯವೇ ಮುಂತಾದ ಅಗತ್ಯ ಸಾಮಗ್ರಿ ಒದಗಿಸಲು ಹಾಗೂ ಒಂದಿಷ್ಟು ಸಹಾಯಕರನ್ನು ಕೂಡಲೇ ಕಳಿಸಿ ನಂದಕೋಲ್ ತೀರದಲ್ಲಿ ಟೆಂಟ್ ಹಾಕಲು ಸೂಚನೆ ರವಾನಿಸಿದ್ದರು. ಅವಘಡಕ್ಕೆ ತುತ್ತಾದವರನ್ನು ಶಿಖರದ ತುದಿಯಿಂದ ಜೋಲಿಗಳಲ್ಲಿ ಹೊತ್ತು ತರುವ ಹೊತ್ತಿಗಾಗಲೇ ಬೇಸ್ ಕ್ಯಾಂಪಿನ ಸಿಬ್ಬಂದಿ ಧಾವಿಸಿ ಬಂದು ನಂದಕೋಲ್ ತೀರದಲ್ಲಿ ಟೆಂಟ್ ಹಾಕ ತೊಡಗಿದ್ದರು. ಜಾನ್ಸನ್ನರ ಸೂಚನೆಯಂತೆ ಬೇಸ್ ಕ್ಯಾಂಪಿಗೆ ಸಂದೇಶ ತಲುಪಿಸಿದ ಹುಸೇನ, ಅಲ್ಲಿಂದ ಸೀದ ನಾರಾನಾಗ್ ಮತ್ತು ಸುತ್ತಮುತ್ತಲ ಹಳ್ಳಿಗಳಿಗೆ ತೆರಳಿ ಕುಂದನ್ ಗ್ರಾಮದಿಂದ ವೈದ್ಯರೊಬ್ಬರನ್ನು ತಲಾಷ್ ಮಾಡಿ ಕರೆತಂದಿದ್ದ. ತೀವ್ರ ಪೆಟ್ಟಾಗಿದ್ದ ಐವರು ಸಹಾಯಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಹಾಯಕರ ಜೊತೆಗೂಡಿಸಿ ಪೋನಿಗಳ ಮೇಲೆ ಶ್ರೀನಗರಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗಿತ್ತು. ಇಡೀ ಘಟನೆಯಲ್ಲಿ ಸಾವು ಸಂಭವಿಸಲಿಲ್ಲ ಎಂಬುದೊಂದೇ ಸಮಾಧಾನದ ಸಂಗತಿಯಾಗಿತ್ತು. ತನಗೂ ಎರಡು ಮೂರು ದಿನ ಕಣ್ಣುಗುಡ್ಡೆ ತೊಂದರೆ ಕೊಟ್ಟಿದ್ದನ್ನು ಐವಾನ್ ನೆನಪಿಸಿಕೊಂಡ. ಆ ದುರ್ಘಟನೆಯ ನೆನಪಿನಲ್ಲಿ ಬಹುಹೊತ್ತು ನಿದ್ದೆ ಬಾರದೆ ಒದ್ದಾಡುತ್ತಿದ್ದವನಿಗೆ, `ಒಂದು ರೀತಿಯಲ್ಲಿ ಮಾಂಟ್ಗೊಮರಿ ಸಾಹೇಬರಿಗೆ ಪೆಟ್ಟು ಬಿದ್ದದ್ದೇ ಒಳ್ಳೆಯದಾಯಿತು, ಅವರೇನಾದರೂ ಎದ್ದು ಓಡಾಡುವಂತಿದ್ದಿದ್ದರೆ ತಮಗೆಲ್ಲ ಇಷ್ಟು ವಿಶ್ರಾಂತಿಯೂ ದೊರೆಯುತ್ತಿರಲಿಲ್ಲ’ ಎಂಬ ಹುಸೇನನ ಕುಚೇಷ್ಟೆಯ ಮಾತು ನೆನಪಾಗಿ, ನಾಳೆ ಬೆಳಿಗ್ಗೆ ಗೆಳೆಯರ ಜೊತೆ ಚಹಾ ಕುಡಿಯುವಾಗ ಅದನ್ನು ಹೇಳಿ ಎಲ್ಲರನ್ನೂ ನಗಿಸಬೇಕೆಂದು ಯೋಚಿಸುತ್ತ ಕಂಬಳಿಯನ್ನು ಮತ್ತಷ್ಟು ಬಿಗಿಯಾಗಿ ಮುಚ್ಚಿಕೊಂಡು ಮುರುಟಿ ಮಲಗಿದ.
(ಕೃತಿ: ಪ್ರಮೇಯ (ಕಾದಂಬರಿ), ಲೇಖಕರು: ಡಾ. ಗಜಾನನ ಶರ್ಮ, ಪ್ರಕಾಶಕರು: ಅಂಕಿತ ಪುಸ್ತಕ, ಬೆಲೆ: 395/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ