ನನಗಿಲ್ಲಿ ಲೇಖಕಿಯ ಬರೆಹಗಳು ಇಷ್ಟವಾಗುವುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಬಾಲ್ಯದಲ್ಲಿ ನಮಗೆ ನೋವು, ಕೀಳರಿಮೆ, ಅಪಮಾನ, ತಾರತಮ್ಯ ಎಲ್ಲದರ ಅನುಭವಗಳಿಗೆ ಒಡ್ಡಿಕೊಂಡು ಒಂದಲ್ಲ ಒಂದು ಹಂತದಲ್ಲಿ ಮನಸ್ಸನ್ನು ಹಿಡಿಮಾಡಿಕೊಂಡಿರುತ್ತೇವೆ. ಒಂದು ಕ್ಷಣ ಅದು ಮನಸ್ಸನ್ನು ಘಾಸಿಗೊಳಿಸಿದರೂ ಮರುಕ್ಷಣಕ್ಕೆ ಮರೆತು ಮೆಟ್ಟಿನಿಲ್ಲುವ ಛಾತಿಯೂ ಜೊತೆಜೊತೆಗೆ ಹುಟ್ಟಿಕೊಳ್ಳುತ್ತಿತ್ತು. ಹಾಗೆಯೇ ಬಾಲ್ಯ ಕೊಟ್ಟ ಕೆಲವೊಂದು ಕಷ್ಟದ ಕ್ಷಣಗಳಿಗೆ ಇಲ್ಲಿ ಲೇಖಕಿ ಯಾರ ಮೇಲೂ ಗೂಬೆ ಕೂರಿಸುವುದಿಲ್ಲ, ಆತ್ಮಾನುಕಂಪನವನ್ನು ಕೂಡ ಬಯಸುವುದಿಲ್ಲ.
ನಾಗರೇಖಾ ಗಾಂವಕರ ಬರೆದ ಬಾಲ್ಯದ ಅನುಭವಗಳ ಕುರಿತ ಬರಹಗಳ “ಬಣ್ಣದ ಕೊಡೆ” ಕೃತಿಯ ಕುರಿತು ಸ್ಮಿತಾ ಅಮೃತರಾಜ್ ಸಂಪಾಜೆ ಬರಹ
ಬಾಲ್ಯವೆಂಬುದು ಅನುಭವಗಳ ಖಜಾನೆ. ಕತೆಗಳ ಕಣಜ. ಬಹುಷಃ ನಮ್ಮಗಳ ಯಾರ ಬಾಲ್ಯವೂ ಇದಕ್ಕೆ ಹೊರತಾಗಿಲ್ಲ ಅಂತನ್ನಿಸುತ್ತದೆ. ಆ ಕಾಲಕ್ಕೆ ಬಾಲ್ಯ ನಮಗೆ ಕೊಟ್ಟ ಖುಷಿ, ಸಿಕ್ಕ ನೋವು, ಇನ್ನು ಹೇಳಿಕೊಳ್ಳಲಾಗದ ಅನೇಕ ಅಚ್ಚರಿಗಳು ಮುಪ್ಪರಿಗೊಂಡು ನಮ್ಮ ವ್ಯಕ್ತಿತ್ವವನ್ನು ರೂಪುಗೊಳಿಸುತ್ತಲೇ ಇರುತ್ತದೆ. ಟಿ.ವಿ., ಮೊಬೈಲ್, ಹೀಗೆ ಅಂತರ್ಜಾಲದ ಕಿಟಕಿಯೊಳಗೆ ಕಣ್ಣು ಕೀಲಿಸಿ ಕಳೆದುಹೋಗುತ್ತಿರುವ ನಮ್ಮ ಇಂದಿನ ಮಕ್ಕಳನ್ನು ನೋಡುವಾಗ ಯಾಕೋ ಅವರ ಕುರಿತು ಕನಿಕರ ಉಕ್ಕಿ, ನಮ್ಮ ಬಾಲ್ಯ ನೆಚ್ಚಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಆದರೆ ನಮ್ಮ ಮಕ್ಕಳಿಗೆ ನಮ್ಮ ಬಾಲ್ಯದ ಕತೆಗಳು ಕಟ್ಟುಕತೆಗಳಂತೆ ಗೋಚರಿಸುವ ಸಂಭವನೀಯತೆ ಹೆಚ್ಚಿರುವ ಕಾರಣ, ಜೊತೆಗೆ ಅವರಿಗೆ ಅವುಗಳ ಕುರಿತಾಗಿ ಅಷ್ಟೊಂದು ಆಸಕ್ತಿಯಿರದ ಕಾರಣ ಬಹುಷಃ ನಮ್ಮ ಬಾಲ್ಯ ನಮಗೆ ಇಷ್ಟ ಆದ ಹಾಗೆ ಪ್ರಸ್ತುತ ವಾತಾವರಣದಲ್ಲಿ ಅವರ ಬಾಲ್ಯ ಅವರಿಗೆ ಆಪ್ಯಾಯಮಾನವಾಗಿ ತೋರುತ್ತಿದೆಯೋ ಏನೋ? ಅದೇನೇ ಇರಲಿ, ನಾಗರೇಖಾರವರ ಇಡೀ ಬಾಲ್ಯದ ಕಥಾಬುತ್ತಿಯನ್ನು ಬಿಚ್ಚಿದಾಗ ನಮ್ಮ ಇಂದಿನ ಮಕ್ಕಳ ಬಾಲ್ಯ ಕಣ್ಣೆದುರಿಗೆ ಬಂತು ಅಷ್ಟೆ. ಪ್ರತಿದಿನವೂ ಒಂದೊಂದು ಕತೆಯಾಗುತ್ತಿದ್ದ ಬದುಕು ಮತ್ತು ಯಾವುದೋ ಕತೆಗಳಿಗೆ ಅಂತರ್ಜಾಲದಲ್ಲಿ ನಿರ್ಭಾವುಕರಾಗಿ ತಡಕುವ ನಮ್ಮ ಮಕ್ಕಳ ಬಾಲ್ಯವೂ…
ನಾಗರೇಖಾರ ಪ್ರತಿಯೊಂದು ಪ್ರಬಂಧಗಳನ್ನು ಓದುವಾಗಲೂ ಕೂಡಾ ನಾನು ನನ್ನ ಬಾಲ್ಯಕ್ಕೆ ಹೊರಳಿಕೊಳ್ಳುತ್ತಿದ್ದೆ. ಅವೇ ನದಿ, ಮಳೆಗಾಲ, ಬಾಲ್ಯದ ಕೆಲಸ, ಅದೇ ತುಂಟಾಟದ ಅನೇಕ ಕತೆಗಳು.ಆದರೆ ಅದು ನಮ್ಮನ್ನು ಕಾಡಿದ ಪರಿ, ನಮ್ಮ ಅನುಭವಕ್ಕೆ ದಕ್ಕಿದ ರೀತಿ ಬೇರೆಯದೇ ಬಗೆಯಲಿ. ಅಬ್ಬಾ! ಬಾಲ್ಯ ಎಷ್ಟೊಂದು ದಟ್ಟವಾಗಿ ನಮ್ಮೆದುರು ತೆರೆದುಕೊಂಡಿತ್ತಲ್ಲ? ಬಾಲ್ಯಕ್ಕಿಂತ ದೊಡ್ಡ ವಿಶ್ವವಿದ್ಯಾನಿಲಯ ಬೇರೆ ಯಾವುದೂ ಇಲ್ಲ ಅನ್ನುವುದು ಎಷ್ಟು ಸತ್ಯದ ಮಾತು. ಅಲ್ಲಿ ದಕ್ಕಿದ ಅನುಭವಗಳ ಗರಡಿಯಲ್ಲಿ ಪಳಗಿ ಬಂದವರು ನಾವೆಲ್ಲ. ಆದರೆ ಆ ಹೊತ್ತಿನಲ್ಲಿ ಅದರ ಕುರಿತು ಕಿಂಚಿತ್ತು ಅರಿವೂ ಇರಲಿಲ್ಲವಲ್ಲ ಅಂತ ಈಗ ಅಚ್ಚರಿ ಹುಟ್ಟಿ ಮೆಲುಕು ಹಾಕುವಂತೆ ಮಾಡುತ್ತದೆ.
ಲೇಖಕಿಯ ಇಲ್ಲಿಯ ಎಲ್ಲ ಪ್ರಬಂಧಗಳೂ ಕೂಡ ಬಾಲ್ಯದ ಅನಾವರಣವೇ. ಪ್ರತಿಯೊಂದು ಪ್ರಬಂಧದೊಳಗೂ ರೋಚಕವೂ, ಕುತೂಹಲಕರವಾದ ಘಟನೆಗಳ ಚಿತ್ರಣವಿದೆ. ಎಷ್ಟೆ ಬರೆದುಕೊಂಡರೂ ಇನ್ನೂ ಹೇಳಲು ಅದೆಷ್ಟೋ ಬಾಕಿ ಇದೆ ಅನ್ನುವಷ್ಟರ ಮಟ್ಟಿಗೆ ಇಲ್ಲಿಯ ಬಾಲ್ಯದ ಕತೆಗಳು ಪಿಸುಗುಟ್ಟಿದಂತಾಗುತ್ತದೆ. ಇದು ಲಲಿತ ಪ್ರಬಂಧವೂ, ಅನುಭವ ಕಥನವೂ ಯಾವುದೂ ಆಗಬಲ್ಲದು ಅಂತನ್ನಿಸುತ್ತದೆ. ಬರಹದ ತುಂಬಾ ಬಾಲ್ಯದ ಗಳಿಗೆಗಳ ಮೊಗೆಮೊಗೆದು ಕೊಟ್ಟರೂ ವಸ್ತು ವಿಷಯಗಳು ಇಲ್ಲಿ ಪುನರಾವರ್ತನೆಯಾಗದಿರುವುದೇ ವಿಶೇಷ. ಸ್ವತಃ ಆಕೆ ಕತೆಗಾರ್ತಿಯಾಗಿರುವ ಕಾರಣ ಹೆಚ್ಚಿನ ಸಂಗತಿಗಳು ಕಥನ ಮಾದರಿಯಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತವೆ.
ನನಗಿಲ್ಲಿ ಲೇಖಕಿಯ ಬರೆಹಗಳು ಇಷ್ಟವಾಗುವುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಬಾಲ್ಯದಲ್ಲಿ ನಮಗೆ ನೋವು, ಕೀಳರಿಮೆ, ಅಪಮಾನ, ತಾರತಮ್ಯ ಎಲ್ಲದರ ಅನುಭವಗಳಿಗೆ ಒಡ್ಡಿಕೊಂಡು ಒಂದಲ್ಲ ಒಂದು ಹಂತದಲ್ಲಿ ಮನಸ್ಸನ್ನು ಹಿಡಿಮಾಡಿಕೊಂಡಿರುತ್ತೇವೆ. ಒಂದು ಕ್ಷಣ ಅದು ಮನಸ್ಸನ್ನು ಘಾಸಿಗೊಳಿಸಿದರೂ ಮರುಕ್ಷಣಕ್ಕೆ ಮರೆತು ಮೆಟ್ಟಿನಿಲ್ಲುವ ಛಾತಿಯೂ ಜೊತೆಜೊತೆಗೆ ಹುಟ್ಟಿಕೊಳ್ಳುತ್ತಿತ್ತು. ಹಾಗೆಯೇ ಬಾಲ್ಯ ಕೊಟ್ಟ ಕೆಲವೊಂದು ಕಷ್ಟದ ಕ್ಷಣಗಳಿಗೆ ಇಲ್ಲಿ ಲೇಖಕಿ ಯಾರ ಮೇಲೂ ಗೂಬೆ ಕೂರಿಸುವುದಿಲ್ಲ, ಆತ್ಮಾನುಕಂಪನವನ್ನು ಕೂಡ ಬಯಸುವುದಿಲ್ಲ. ಆಗಿನ ಬದುಕಿನ ವಾತಾವರಣವೇ ಹಾಗಿತ್ತು ಎಂಬುದನ್ನು ಅಷ್ಟೇ ಸಹಜ ತಣ್ಣಗೆ ಹೇಳಿ ಮುಗಿಸುತ್ತಾರೆ. ಕೆಲವರು ನಮ್ಮ ಬಾಲ್ಯದಲ್ಲಿ ನಾವು ಎಷ್ಟೆಲ್ಲಾ ಅನುಭವಿಸಿದ್ದೇವೆ ಅಂತ ಪದೇ ಪದೇ ಸಂದರ್ಭ ಸಿಕ್ಕಾಗಲೆಲ್ಲಾ ಗೋಳಾಡುವುದನ್ನು ಗಮನಿಸಿದ್ದೇವೆ. ಆ ನಿಟ್ಟಿನಲ್ಲಿ ಹೇಳುವುದಾದರೆ ನಾಗರೇಖಾರ ಪ್ರಬಂಧಗಳು ಸಮಚಿತ್ತತೆಯಿಂದ ಮಾತನಾಡತೊಡಗುತ್ತವೆ. ಅವರಿಗೆ ಬಾಲ್ಯದ ಮೇಲೆ ಯಾವುದೇ ದೋಷಾರೋಪಗಳು ಇಲ್ಲ. ಸುಂದರ ಬಾಲ್ಯವೊಂದು ಹಿಡಿದಿಟ್ಟುಕೊಳ್ಳಲಾಗದೆ ಬೆರಳ ಸಂದಿಯಿಂದ ಹಾಗೇ ಜಾರಿ ಹೋಯಿತಲ್ಲ ಅಂತ ಕಳವಳಿಸಿದಂತೆ ತೋರುತ್ತದೆ.
ಬಾಲ್ಯದಲ್ಲಿ ಬದುಕು ಎಲ್ಲ ರೀತಿಯ ಮಗ್ಗಲುಗಳಿಗೆ ಒಡ್ಡಿಕೊಂಡ ಕಾರಣ ಬದುಕು ಹೇಗೆ ಪರಿಪಾಕಗೊಂಡು ನಮ್ಮನ್ನು ಹೇಗೆ ಪಕ್ವವಾಗಿ ಬೆಳೆಸಬಲ್ಲುದು ಎಂಬುದಕ್ಕೆ ಅವರ ಒಂದು ಪ್ರಬಂಧದ ಸಾಲು ನನ್ನ ಗಾಢವಾಗಿ ತಟ್ಟಿತು. ‘ಹಾಲುಮಾರಿ ಶಾಲೆಗೆ ಪಾದ ಬೆಳೆಸಬೇಕಾದ ಅನಿವಾರ್ಯತೆಯಿದ್ದ ಸಂದರ್ಭದಲ್ಲಿ ಒಮ್ಮೆ ನೀರು ಹಾಕಿ ತಂದಿಯೇನೇ?’ ಅಂತ ಶಾಂತಕ್ಕ ಗುರಾಯಿಸಿದ್ದಕ್ಕೆ ಮುಖ ದುಮ್ಮಿಸಿಕೊಂಡು ಹೋದ ಹುಡುಗಿ ಇವತ್ತು ಸರಕಾರಿ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕಿಯಾಗಿದ್ದಾಳೆಂಬುದ್ದಕ್ಕೆ ಇನ್ಯಾವ ನಿದರ್ಶನ ಬೇಕಿಲ್ಲ ಅನಿಸುತ್ತದೆ. ಆದರೆ ತಾನು ಈ ಮಟ್ಟಕ್ಕೆ ಬರಲು ಇವೆಲ್ಲ ಕಾರಣಗಳು ಅಂತ ಆಕೆ ಎಲ್ಲೂ ಬಡಬಡಿಸಿಕೊಳ್ಳುವುದಿಲ್ಲ. ಆದರೆ ಓದುಗರಾದ ನಮ್ಮೊಳಗೆ ಇಳಿದು ಒಂದು ಸಂಚಲನ ಉಂಟುಮಾಡಬಲ್ಲದು.
ಬಾಲ್ಯದಲ್ಲಿ ಹುಟ್ಟಿಕೊಂಡ ಇಂಗ್ಲೀಷ್ ಆಕರ್ಷಣೆ, ಮೇಷ್ಟ್ರ ಮೇಲಿನ ಸಿಟ್ಟಿನಲ್ಲಿ ಹರಕೆ ಹೊರುವುದು, ಹರಕೆ ಹೊತ್ತರೂ ಮೇಷ್ಟ್ರಿಗೆ ಏನೂ ಆಗದೇ ಇರುವುದು. ನಂತರ ಅದೇ ವಿಷಯ ಗೋಟಾಳಿ ಆಗುವುದು, ಇವೆಲ್ಲಾ ಬಾಲ್ಯದಲ್ಲಿ ಮಾತ್ರ ಘಟಿಸಬಹುದಾದ ಸಂಗತಿಗಳು. ಹಾಗೇ ಅಲ್ಲಿ ನಗಲು, ನಗಿಸಲು ಎಷ್ಟೊಂದು ಕಾರಣಗಳು? ಆ ನಗುವನ್ನು ಹಂಚಿಕೊಳ್ಳುವ ಭರದಲ್ಲಿ ನಮ್ಮೊಳಗಿನ ನಗುವಿನ ಸೆಲೆಯನ್ನು ಒಕ್ಕುತ್ತಾರೆ. ಇನ್ನು ಭೂತ ದೆವ್ವದ ಜೊತೆಗೆ ಅಂಟಿಕೊಂಡ ಅದೆಷ್ಟು ಭಯಾನಕ ರಸವತ್ತಾದ ಕತೆಗಳು? ಅವರಿಗೆ ನೆನಪುಗಳು ಜೀರುಂಡೆ ಸಾಲಿನಂತೆ. ಎಳವೆಯಲ್ಲಿ ಹಕ್ಕಿ ಕಾವಲು ಕೂತದ್ದು, ತೆರೆದ ಕೊಡೆಯ ಕಡ್ಡಿಯಿಂದ ಮಳೆಯ ಹನಿಯೊಂದಿಗೆ ನೆನಪುಗಳು ತೊಟ್ಟಿಕ್ಕುತ್ತಾ ಕತೆಯಾಗಿ ಜೊತೆಗೆ ಪಾದ ಸವೆಸಿದ್ದು, ಒಂದೇ ಎರಡೇ?
ನಾಗರೇಖಾರ ನೆನಪಿನ ಶಕ್ತಿ ನಮ್ಮನ್ನು ಬೆರಗುಗೊಳಿಸುತ್ತದೆ. ಅವರ ನೆನಪಿನ ಕೋಶದಲ್ಲಿ ಇನ್ನು ಅದೆಷ್ಟೋ ಕತೆಗಳು ಹಸಿಹಸಿಯಾಗಿಯೇ ಇವೆ. ಸಮಯ ಸಂದರ್ಭ ಬಂದಾಗಲೆಲ್ಲಾ ಅವು ತಲೆ ಹೊರಗೆ ಹಾಕಿ ಇಣುಕುತ್ತವೆ. ಹಳ್ಳಿಯ ಮನಸ್ಸುಗಳ ನಿಷ್ಕಲ್ಮಷ ಪ್ರೇಮ, ಪೇಟೆಯ ನಾಟಕೀಯತೆ ಜೊತೆಗೆ ಮನಸ್ಸು ತುಲನೆ ಮಾಡಿಕೊಳ್ಳುತ್ತದೆ. ಹಳ್ಳಿಯ ತೃಪ್ತ ಬದುಕಿನ ಸಮಾಧಾನಗಳನ್ನು ಅರಸುತ್ತಾ ಬಂದರೆ, ಮಮತೆಯ ಒರತೆಗಳಾದ ಹಿರಿಜೀವಗಳು ಕಳಚಿ ಹೋದುದರ ಕುರಿತು ವಿಷಾದ ವ್ಯಕ್ತಪಡಿಸುತ್ತಾ ಬದುಕು ಅಂದರೆ ಇಷ್ಟೇ ಅನ್ನುವ ವೇದಾಂತವನ್ನು ಇಲ್ಲಿಯ ಬರಹಗಳು ಕಟ್ಟಿಕೊಡುತ್ತವೆ. ತಂದೆ, ತಾಯಿ, ಒಡಹುಟ್ಟಿದವರ ಒಡನಾಟದಲ್ಲಿ ಬದುಕು ಹಸನಾದುದರ ಕುರಿತು ಅವರಿಗೆ ಅಪಾರ ಪ್ರೀತಿಯಿದೆ. ಅಲ್ಲಿ ಸಿಕ್ಕ ಪ್ರತಿಯೊಂದು ಘಟನೆಗಳ ಹಿಂದೆ ಸರಿ ತಪ್ಪುಗಳ ತರ್ಕವಿದೆ. ಬಹುಷಃ ಈ ಅನುಭವವೇ ಅವರ ಸಾಹಿತ್ಯಕ್ಕೆ ಪ್ರೇರಣೆ. ಸಣ್ಣ ಸಣ್ಣ ಜಗಳಗಳನ್ನು, ತಾನು ಮಾಡಿದ ತಪ್ಪುಗಳನ್ನು ಕೂಡ ಇಲ್ಲಿ ಲೇಖಕಿ ಯಾವುದೇ ಮುಲಾಜಿಲ್ಲದೆ ಬರೆಯುತ್ತಾರೆ. ಬಾಲ್ಯದಲ್ಲಿ ಮಾಡಿದ ತಂಟೆ ತಕರಾರುಗಳು ಯಾವುದೂ ಉದ್ದೇಶಪೂರ್ವಕವಾದುದ್ದಲ್ಲ ಅನ್ನುವುದನ್ನು ಇದು ಸಾಬೀತುಪಡಿಸುತ್ತದೆ.
ನಾಗರೇಖಾರ ಪ್ರಬಂಧವನ್ನು ಓದಿ ಮುಗಿಸಿದಾಗ ಸರಿದ ಬಾಲ್ಯವೊಂದು ಕಣ್ಣ ಮುಂದೆ ಚಲಿಸಿದಂತೆ ಭಾಸವಾಗುತ್ತದೆ. ಮುದಕೊಡುವ ಭಾಷೆಯೊಂದಿಗೆ ಸರಳ ಸಹಜ ನಿರೂಪಣೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಸ್ವಲ್ಪ ತಿಳುವಳಿಕೆ ಇದ್ದರೆ ಬಾಲ್ಯದ ಗಳಿಗೆಗಳನ್ನ ಮೊಗೆಮೊಗೆದು ಅನುಭವಿಸಬಹುದ್ದಿತ್ತಲ್ಲ ಅಂತ ಅನ್ನಿಸಿದ್ದು ಸುಳ್ಳಲ್ಲ. ಇಲ್ಲಿಯ ಬರಹಗಳನ್ನು ಓದಿದ ಮೇಲೆ ನನ್ನ ಬಾಲ್ಯ ಮತ್ತು ನಾಗರೇಖರ ಬಾಲ್ಯಕ್ಕಿಂತ ಬೇರೆಯಲ್ಲ ಅಂತ ಅನ್ನಿಸಿದ್ದು, ಮತ್ತು ಅಂದಿನ ನೆನಕೆಗಳು ಇವತ್ತು ನೆನಪಾಗಿ ನೇವರಿಸಿ ಕೈ ಹಿಡಿದು ಬರೆಯಿಸುತ್ತಾ ಬದುಕನ್ನ ಸಹ್ಯಗೊಳಿಸುತ್ತಿರುವುದು, ಇದು ಬಾಲ್ಯ ಕೊಟ್ಟ ಬಹುದೊಡ್ಡ ಉಡುಗೊರೆ. ನೆನಪುಗಳಿಗೆ ಜೀವ ತುಂಬಿದ ನಾಗರೇಖಾರಿಗೆ ಅಭಿನಂದನೆಗಳು.
(ಕೃತಿ : ಬಣ್ಣದ ಕೊಡೆ, ಲೇಖಕರು: ನಾಗರೇಖಾ ಗಾಂವಕರ, ಪ್ರಕಾಶಕರು: ನಿವೇದಿತ ಪ್ರಕಾಶನ, ಬೆಂಗಳೂರು, ಬೆಲೆ:150, ಪುಟಗಳು: 132
ಸ್ಮಿತಾ ಅಮೃತರಾಜ್ ಕೊಡಗಿನ ಸಂಪಾಜೆ ಬಳಿಯ ಚೆಂಬುವಿನ ನಿವಾಸಿ. ಗೃಹಿಣಿ, ಕೃಷಿಕ ಮಹಿಳೆ. ‘ಕಾಲ ಕಾಯುವುದಿಲ್ಲ’, ‘ತುಟಿಯಂಚಿನಲ್ಲಿ ಉಲಿದ ಕವಿತೆಗಳು’ ಸೇರಿದಂತೆ ಮೂರು ಕವನ ಸಂಕಲನ ಹಾಗೂ ಮೂರು ಲಲಿತ ಪ್ರಬಂಧಗಳು ಪ್ರಕಟವಾಗಿವೆ.
ಹಕ್ಕಿಯೊಂದು ಹಕ್ಕಿಯ ಪರಿಚಯ ಮಾಡಿಕೊಂಡಂತೆ.