”ತೀರಾ ಹೊಸತೂ ಅಲ್ಲದ ತೀರಾ ಹಳತೂ ಅಲ್ಲದ ಜೆನ್ನಿ ಅಜ್ಜಿಯ ಮನೆಯೊಳಗೆ ವಿಚಿತ್ರವಾದ ಮೌನವಿತ್ತು. ಮನೆಯ ಒಳಗಿಂದ ಆಗುಂಬೆಯ ಪೇಟೆ, ಮತ್ತೊಂದೆಡೆ ಕಾಡಿನ ಸೊಗಸು ಕಾಣುತ್ತಿತ್ತು. ಧ್ಯಾನ ಮಾಡಲು ಸುಂದರವಾದ ಜಾಗವಿತ್ತು, ಅಲ್ಲಿ ಧ್ಯಾನಕ್ಕಷ್ಟೇ ಬೇಕಾಗುವ ಗಾಳಿ, ಬೆಳಕಾಡುತ್ತಿತ್ತು. “ಸುಮ್ಮನೇ ಇಲ್ಲಿ ಕೂತು ಧ್ಯಾನ ಮಾಡಿದರೆ ಬದುಕಿಗೆ ಬೇಕಾದ ಸ್ಪೂರ್ತಿ ಎಲ್ಲಾ ಸಿಕ್ಕಿಬಿಡುತ್ತದೆ, ಕುವೆಂಪು ಹೇಳ್ತಾರಲ್ಲಾ “ಅನಂತ ತಾನ್ ಅನಂತವಾಗಿ” ಅಂತ. ಆ ಅನಂತತೆ ಇಲ್ಲಿನ ಹಕ್ಕಿಗಳ ಧ್ವನಿಯಲ್ಲಿ, ಮೌನದಲ್ಲಿ ಸಿಕ್ಕಿಬಿಡುತ್ತದೆ” ಎನ್ನುತ್ತಾ ಜೆನ್ನಿ ಅಜ್ಜಿ ಚಂದವಾಗಿ ನಕ್ಕರು.”
ಪ್ರಸಾದ್ ಶೆಣೈ ಬರೆಯುವ ಮಾಳ ಕಥಾನಕದ ಹತ್ತನೆಯ ಕಂತು.
ಮೊನ್ನೆ ಜೋರಾಗಿ ಒಂದು ಮಳೆ ಬಂದು ನಿಂತು, ಆಕಾಶ ಅಳು ನಿಲ್ಲಿಸಿದ ಮಗುವಿನ ಹಾಗೇ ಮುದ್ದಾಗಿ ನಗುತ್ತಾ ಇತ್ತು. ದೂರದಲ್ಲಿ ಇಷ್ಟಿಷ್ಟೇ ಉದ್ದದ ಗಿಡುಗಗಳು ಹಾಯಾಗಿ ತೇಲುತ್ತಾ, ತೇಲುತ್ತಾ ಅಲ್ಲೇ ದೂರದ ಪ್ರಪಾತಕ್ಕೋ, ಜಲಪಾತಕ್ಕೋ ಧುಮುಕಿದ ಹಾಗೆ ಕಂಡರೂ, ಮತ್ತೆ ಅಲ್ಲಿಂದ ಮೇಲೆ ಬಂದಂತೆ ಸುಯ್ ಸುಯ್ ಅಂತ ತೇಲಿ ತೇಲಿ ಮೋಡದ ಮರೆಯಲ್ಲಿ ಸುರುಳಿಯಾಗುತ್ತಾ ಹೋಯ್ತು. ಇಂತಹ ಒಂದು ರಮ್ಯ ಕಾಲದಲ್ಲಿ ಕತ್ತನ್ನು ಪೂರ್ವಕ್ಕೆ ತಿರುಗಿಸಿದರೆ, ಆಹಾ, ಅಲ್ಲಿ ಕುದುರೆಮುಖ ಗಿರಿ ಶೃಂಗ ಉದ್ದಕ್ಕೆ ಹರಡಿ ನಿಂತು ನೀಲಿ ಮೋಡದ ಜೊತೆ ಚಕ್ಕಂದವಾಡುತ್ತಿತ್ತು. ಅಲ್ಲೇ ಸೂಕ್ಷ್ಮವಾಗಿ ಗಮನಿಸಿದರೆ ನೊರೆಹಾಲಿನಂತೆ ಉದುರುತ್ತಿದ್ದ ಜಲಪಾತ ಒಮ್ಮೆ ಉದುರದೇ ಸ್ತಬ್ದವಾಗಿ ನಿಂತಂತೆ, ಮತ್ತೊಮ್ಮೆ ಹಗೂರನೇ ಉದುರಿ ಕಾಡಿನಲ್ಲಿರುವ ತನ್ನ ಮಾವನ ಮನೆಗೋ? ಹೆಂಡತಿಯ ಮನೆಗೋ ಹೋಗುವಂತೆ ಕಾಣುತ್ತಿತ್ತು. ಮತ್ತೆ ಕತ್ತನ್ನು ನೇರ ಮಾಡಿದರೆ ಆಹಾ, ಅಲ್ಲಿ ಅಜ್ಜಿಕುಂಜೆ, ಆಗುಂಬೆ, ಸೋಮೇಶ್ವರದ ಗಿರಿಶೃಂಗಗಳು ಸಾಲಾಗಿ ನಿಂತುಕೊಂಡು ಕುದುರೆಮುಖವನ್ನು ವಾರೆದೃಷ್ಟಿಯಲ್ಲಿ ನೋಡುತ್ತಾ, ಚೂರು ಚೂರು ನಾಚುತ್ತ, ಕುದರುರೆಮುಖಕ್ಕೆ ಲೈನ್ ಹೊಡೆಯುತ್ತಾ ನಿಂತಿದ್ದು ಬಹಳ ಗಮ್ಮತ್ತಾಗಿ ಕಾಣುತ್ತಿತ್ತು.
ದೂರದಲ್ಲಿ ಕುದುರೆಮುಖದಂತೆಯೇ ಕಾಣುವ ಈ ಆಗುಂಬೆ, ಸೋಮೇಶ್ವರದ ಬೆಟ್ಟಗಳು ಬಿಸಿಲುಗಾಲಲ್ಲಿ ಮಳೆ ಹನಿಯಂತೆ ಹೊಳೆಯುತ್ತ, ಮಳೆಗಾಲದಲ್ಲಿ ಬಿಸಿಲಿನಂತೆ ಹೊಳೆಯುತ್ತಾ, ಚಳಿಗಾಲದಲ್ಲಿ ಮಳೆ, ಬಿಸಿಲು, ಮಂಜು ಎಲ್ಲವೂ ತಾನಗುತ್ತ ನಿಂತಿರುವ ಅಪ್ರತಿಮ ನಿಗೂಢ ಬೆಟ್ಟ. ಇಲ್ಲಿ ಸೀತೆ ಅನ್ನೋ ಮಾಯಕದ ನದಿ, ಕಾಡು ಅನ್ನೋ ಪ್ರೀತಿಯ ರಾಮನನ್ನು ಚುಂಬಿಸುತ್ತಾ ಹರಿದು ಒಲವಿನ ಕೂಡ್ಲು ಜಲಪಾತವಾಗುತ್ತಾಳೆ. ಸೀತೆ ಹರಿಯುವ ಆ ಕಾಡು, ಅಲ್ಲಿನ ನೀರವ ಮೌನ, ಅಲ್ಲಿ ಕೇಳುವ ಕಾಡು ಹಕ್ಕಿಗಳ ಸಿಳ್ಳೆಯ ಝೇಂಕಾರ, ತಾನು ಉದುರುವಾಗಲೂ ಗಾಳಿಯ ಜೊತೆ ಕಟ್ಟಕಡೆಯ ಮಾತನಾಡಿ ಕೊನೆಗೆ ತಣ್ಣಗೇ ಬೀಳುವ ತರಗಲೆಗಳ ಹಾಡಿನ ಕೊನೆಯ ಪ್ಯಾರಾ, ಮೇಲೆಲ್ಲೋ ಕಾಡಿನ ಬಿಸಿಲಿಗೆ ಹೊಳೆಯುತ್ತ ಬಣ್ಣದ ತೋಳಿನ ಬಟ್ಟೆ ಹಾಕಿ ನಲಿದು ಬರುವ ಪಾತರಗಿತ್ತಿಗಳ ಭವ್ಯ ಹಾರಾಟ, ಇವೆಲ್ಲವನ್ನು ಸೀತೆ ಹರಿಯುವ ಕಾಡಲ್ಲಿ ನಿಂತು ಅನುಭವಿಸುತ್ತಿದ್ದರೆ ಮೈಮನದಲ್ಲಿ ಏನೆಲ್ಲಾ ರೋಮಾಂಚನವಾಗುತ್ತದೆ ಎಂದು ಹೇಳಲು ನಂಗಂತೂ ಸಾಧ್ಯವಿಲ್ಲ.
ಆಗುಂಬೆ-ಸೋಮೇಶ್ವರ ಅದೆಷ್ಟು ಸೂಕ್ಷ್ಮ ಕಾಡೆಂದರೆ, ಇಲ್ಲಿ ಸಣ್ಣ ಮರದ ಗೆಲ್ಲೊಂದು ಉದುರಿಬಿದ್ದರೂ ಸಾಕು, ಇಡೀ ಕಾಡಿಗೆ ಕಾಡೇ ಆ ಉದುರಿಬಿದ್ದ ಪುಟ್ಟ ಮರದ ಜೀವಕ್ಕೆ ಅಳುವಂತೆ ಆ ಬಿದ್ದ ಮರವನ್ನೇ ನೋಡಿಕೊಂಡು ಕೂರುತ್ತದೆ, ಮಳೆ ನೀರನ್ನು ತಮ್ಮಲ್ಲಿ ಪೂರ್ತಿಯಾಗಿ ಹಿಡಿದಿಟ್ಟುಕೊಂಡು, ತಾವು ಬೇರೂರಿರುವ ಭೂಮಿಯನ್ನು ತಂಪಾಗಿಟ್ಟುಕೊಳ್ಳುವ ಇಲ್ಲಿನ ಕಾಡುಗಳಿಗೆ ವಿಶಿಷ್ಟ ಸಂವೇದನೆ ಇದೆ. ಅಲ್ಲಿ ಗುಂಪಾಗಿರುವ ಪಶ್ಚಿಮಘಟ್ಟದ ಅಪರೂಪದ ಸಿಂಗಳೀಕ ಮಂಗಗಳಿಗೆ ಕರೆದಾಗ ತೌರುಮನೆ ಸೋಮೇಶ್ವರ, ನೆನೆದಾಗ ತನ್ನ ಮನೆ ಆಗುಂಬೆ. ಎರಡೂ ಆತ್ಮದಂತಿರುವ ಈ ಮನೆಗಳಲ್ಲಿ ಅಡ್ಡಾಡುತ್ತ, ಕಾಡಲ್ಲಿ ಕ್ಷಣ ಕ್ಷಣವೂ ಆಗುವ ಪಲ್ಲಟಗಳನ್ನು, ಮಾನವ ನಿರ್ಮಿತ ವಿಪತ್ತುಗಳನ್ನು ಗ್ರಹಿಸುತ್ತ ಹ್ಯಾಗೋ ಸುಖವಾಗಿರುವ ಈ ಸಿಂಗಳೀಕಗಳು, ಹನುಮಾನ್ ಬಾಲದ ಮಂಗಗಳು ಆಗುಂಬೆಯ ದೊಡ್ಡ ಕಣ್ಣುಗಳು. ಈ ಆಗುಂಬೆಯ ಕಣ್ಣುಗಳನ್ನು ನೋಡಿಕೊಂಡು ಹೋಗೋಣವೆಂದೂ, ಮಳೆಬಿಟ್ಟ ಹೊತ್ತಲ್ಲಿ ಆಗುಂಬೆ, ಸೋಮೇಶ್ವರ ಕಾಡುಗಳಷ್ಟು ಚೆಂದ ಬೇರೆ ಯಾವ ಕಾಡುಗಳೂ ಕಾಣುವುದಿಲ್ಲವೆಂದೂ ನಾವು ಆಗುಂಬೆಯ ದಾರಿ ಹಿಡಿದಿದ್ದೆವು.
ಹೆಬ್ರಿ ದಾಟಿದ ನಂತರ ಸಿಗುವ ಸೋಮೇಶ್ವರದಲ್ಲಿ ಸುಮ್ಮನೆ ನಿಂತರೆ, ತೀರಾ ಹತ್ತಿರದಿಂದ ಕರೆಯುವ ಆಗುಂಬೆಯ ಕಾಡುಗಳು ಆ ತಿಳಿಬಿಸಿಲಿನಲ್ಲಿ ಚಂದವಾಗಿ ಕಾಣುತ್ತಿತ್ತು. ಹಾಗೇ ಮುಂದಕ್ಕೆ ಸಾಗಿದಾಗ, ಆಗುಂಬೆ ಘಾಟಿ ರಸ್ತೆ ಏರುತ್ತ ಏರುತ್ತ ಮುಗಿಲಿಗೆ ಹತ್ತಿರವಾದಂತೆ, ಅಲ್ಲೇ ದೂರದಲ್ಲಿ ದೊಡ್ಡದಾದ ಬಂಡೆಗಲ್ಲೊಂದಕ್ಕೆ ಅಂಟಿಕೊಂಡ ತೇಗದ ಮರದ ಗೆಲ್ಲಿಗೆ ಸನಿಹವಾದಂತೆ ಅನ್ನಿಸುತ್ತಿತ್ತು. ಕೆಳಗೆ, “ನನ್ನಲ್ಲಿ ಧುಮುಕಲು ಯಾವ ನರಪಿಳ್ಳೆಗೂ ಸಾಧ್ಯವಿಲ್ಲ” ಎನ್ನುವ ಸೊಕ್ಕಿನಿಂದ ಮಲಗಿದ ಕರಿಬಣ್ಣದ ಪ್ರಪಾತಗಳು, ಇನ್ನೊಂದು ಪಕ್ಕಕ್ಕೆ ನೋಡಿದರೆ “ನನ್ನ ಮೈ ಮೇಲೆ ನಿಂತು ಒಮ್ಮೆ ಆ ಪ್ರಪಾತವನ್ನೇ ದಿಟ್ಟಿಸು, ಧುಮುಕುವುದು ಬಿಡು ಸರಿಯಾಗಿ ಕಣ್ಣು ತೆರೆದು ನೋಡು ಮೊದ್ಲು” ಎನ್ನುವ ಸವಾಲಿಗೆಳೆಯುತ್ತ ನಿಂತ ದಢೂತಿ ಕಲ್ಲುಗಳು, ಇವೆಲ್ಲಾ ಒಮ್ಮೆಗೇ ನಮ್ಮನ್ನೇ ದಿಟ್ಟಿಸಿ ನಗುತ್ತಿರುವಂತೆ ಕಂಡು ಮೌನವಾದೆ.
ಮಳೆಯ ಊರು ಆಗುಂಬೆ, ಮಳೆಯಿಲ್ಲದೆಯೂ ಸಣ್ಣಗೇ ನಗುತ್ತಿರುವ ಹೊತ್ತು. ಅಲ್ಲೇ ಆಗುಂಬೆಯ ನಿಶಾನೆಗುಡ್ಡಕ್ಕೆ ಹೋಗುವ ದಾರಿಯ ಮೊದಲು ಸಿಗುವ ಪುಟ್ಟ ಕಾಡು ದಾರಿಯಲ್ಲಿ ಬೈಕೇರಿಸಿದೆವು. ಸುಮ್ಮನೇ ಯಾರೂ ಅಷ್ಟಾಗಿ ನಡೆಯದ ಕಾಡುದಾರಿಯಲ್ಲಿ ಹಾಗೇ ಹೋಗಿಬಿಡಬೇಕು. ಅಲ್ಲೊಂದು ಬೆಳಗೋ? ಮಟಮಟ ಮಧ್ಯಾಹ್ನವೋ? ಇರುಳನ್ನೋ ಕಳೆಯಬೇಕು. ಅಲ್ಲಿ ನಮ್ಮ ಹಾಳಾದ ಮೊಬೈಲ್, ನೆಟ್ವರ್ಕ್, ಇವ್ಯಾವುದರ ಸುದ್ದಿಯೂ ಅಪ್ಪಿತಪ್ಪಿ ಬರಬಾರದು. ಸುಮ್ಮನೇ ಉದುರಿಬಿದ್ದ ತರಗೆಲೆಗಳ ರಾಶಿಯ ನಡುವೆ ಹೋಗಿ ಕೂತುಬಿಡಬೇಕು ಅಲ್ಲಿ. ರೆಂಜೆ ಹೂವಿನ ಪರಿಮಳವೋ? ತನ್ನ ಹೆಸರೇ ಗೊತ್ತಿಲ್ಲದೇ ಬರೀ ಘಮಲಿನಿಂದಲೇ ಕರೆಯುವ ಕಾಡು ಹೂವಿನ ಮುಗಿಯದ ಕಂಪೋ, ಇವೆಲ್ಲವೂ ಸುತ್ತಲೂ ತುಂಬಿಕೊಂಡಿರಬೇಕು ಅಲ್ಲಿ, ಮೇಲೆ ಹಿತವಾದ ಬಿಸಿಲುಮಳೆ ಕಾಡಿನಲ್ಲೆಲ್ಲಾ ಚೆಲ್ಲಿ ನಾವು ಅದರಲ್ಲೇ ಅದ್ದಿಹೋಗಬೇಕು, ಈ ಎಲ್ಲಾ ಸುಖಗಳ ನಡುವೆ ನಾವು ಒಂದು ಮಾತೂ ಆಡಬಾರದು. ಮಾತಿಗಿಂತಲೂ ಮಿಗಿಲಾದ ಮೌನದಲ್ಲಿಯೇ ಬದುಕಿಗೆ ಬೇಕಾದುದೆಲ್ಲವೂ ಸಿಕ್ಕಿಬಿಡುತ್ತದಲ್ಲ, ಮತ್ಯಾಕೆ ಮಾತು?
ಗಾಳಿಯ ಜೊತೆ ಕಟ್ಟಕಡೆಯ ಮಾತನಾಡಿ ಕೊನೆಗೆ ತಣ್ಣಗೇ ಬೀಳುವ ತರಗಲೆಗಳ ಹಾಡಿನ ಕೊನೆಯ ಪ್ಯಾರಾ, ಮೇಲೆಲ್ಲೋ ಕಾಡಿನ ಬಿಸಿಲಿಗೆ ಹೊಳೆಯುತ್ತ ಬಣ್ಣದ ತೋಳಿನ ಬಟ್ಟೆ ಹಾಕಿ ನಲಿದು ಬರುವ ಪಾತರಗಿತ್ತಿಗಳ ಭವ್ಯ ಹಾರಾಟ, ಇವೆಲ್ಲವನ್ನು ಸೀತೆ ಹರಿಯುವ ಕಾಡಲ್ಲಿ ನಿಂತು ಅನುಭವಿಸುತ್ತಿದ್ದರೆ ಮೈಮನದಲ್ಲಿ ಏನೆಲ್ಲಾ ರೋಮಾಂಚನವಾಗುತ್ತದೆ ಎಂದು ಹೇಳಲು ನಂಗಂತೂ ಸಾಧ್ಯವಿಲ್ಲ.
ನಾವೂ ಆ ಕಾಡ ದಾರಿ ಹೊಕ್ಕು ಕೆಂಪಾಗಿ ಉದುರಿಬಿದ್ದ ತರಗೆಲೆಗಳ ನಡುವಿನಲ್ಲಿ ಕೂತುಬಿಟ್ಟೆವು. ದೂರದಲ್ಲಿ ಹಸಿರಗುಡ್ಡಗಳ ಮೇಲೆ ಹರಡಿಕೊಂಡ ಆಗುಂಬೆಯ ನಿಭಿಡ ಕಾಡುಗಳನ್ನು ನೋಡುತ್ತಲೇ ಇದ್ದಾಗ, ನಾವು ಕೂತಿದ್ದ ಕಾಡಲ್ಲಿ ಮರದ ಗೆಲ್ಲೊಂದು ದೊಪ್ಪೆಂದು ಬಿದ್ದಿತು, ಜುಳು ಜುಳು ಹಳ್ಳದಲ್ಲಿ ಮುಳುಗಿ ನೀರಕ್ಕಿ ಮೀನು ಹಿಡಿದ ಪಿಳಿಪಿಳಿ ಸದ್ದು, ಕಾಡಿನ ದಟ್ಟ ಪೊದೆಯಲ್ಲಿ ಹಾವೊಂದು ಹರಿದ ಸದ್ದು, ಅಷ್ಟೊತ್ತು ಹರಟೆ ಹೊಡೆಯುತ್ತಿದ್ದ ಹರಟೆಮಲ್ಲ ಹಕ್ಕಿಗಳು ಕೊನೆಯದಾಗಿ ಕೊಕ್ ಎಂದು ಕೂಗಿದ ಸದ್ದು, ದೂರದ ಹಳ್ಳದಲ್ಲಿ ಏನೋ ಬೊಸಲ್ ಎಂದು ಬಿದ್ದ ಸದ್ದು, ಕೊನೆಗೆಲ್ಲಾ ಮೌನವಾಗಿ, ಕಾಡೆಲ್ಲಾ ನಿಶ್ಚಲವಾಗಿ ಹುಗುರನೇ ಮೂಡುವ ಗವ್ವೆನ್ನುವ ವಿಚಿತ್ರ ಮೌನದ ಮರೆಯಲ್ಲಿ ಕಾನನ ಅಂದ ಮತ್ತಷ್ಟು ಚೆಂದ ಕಂಡಿತು. ಮತ್ತೊಂದಿಷ್ಟು ಅಲ್ಲೇ ಕೂತು ಕಾಡಿನ ಶಾಂತಿಯಲ್ಲಿ ವಿಶ್ರಾಂತಿ ಪಡೆದು ನಮ್ಮ ಇಷ್ಟದ ದೊಡ್ಡ ಮನೆಯ ಹತ್ತಿರ ಬಂದಾಗ, ದೂರದಿಂದ ನಿಶಾನೆಗುಡ್ಡದ ಇಷ್ಟಿಷ್ಟೇ ಹಸಿರ ತುಣುಕುಗಳು ದೊಡ್ಡ ಮನೆಯ ಜಗಲಿ ಮೇಲೆಲ್ಲಾ ಬಿದ್ದು, ಆ ದೊಡ್ಡ ಮನೆಯಷ್ಟು ಮುದ್ದಾದ ಜಗುಲಿ ಈ ಲೋಕದಲ್ಲಿಯೇ ಇಲ್ಲವೇನೋ ಅನ್ನಿಸುತ್ತಿತ್ತು. ಮಲೆನಾಡಿನ ಪುಟ್ಟಕ್ಕಿಯಂತಹ ಈ ಪುಟ್ಟೂರ ಬಿಸಿಲ ರೇಖೆಗಳು ದೊಡ್ಡ ಮನೆಯ ಹಂಚಿನಿಂದ ಇಣುಕಿ ಜಗಲಿಯ ಚಂದದ ಕಂಬಕ್ಕೆ ಪ್ರತಿಫಲಿಸಿದಾಗ ಅಲ್ಲೊಬ್ಬಳು ಅಜ್ಜಿ ಬಿಸಿಲಿಗೆ ಮಿಂಚಿದಳು. ಬಿಳಿಸೀರೆಯುಟ್ಟ ಅವಳು ಈಗ ಆಗುಂಬೆಯ ಈ ಬಿಸಿಲಿಗೆ ಬಿಸಿಲೇ ಆಗಿ ಕೂತಿದ್ದಳು.
ನಾವು ತುಂಬಾ ಸಲ ಈ ದೊಡ್ಡ ಮನೆಗೆ ಬಂದಿದ್ದರೂ ಈವರೆಗೂ ನಮಗೆ ಈ ಅಜ್ಜಿ ಕಂಡಿರಲಿಲ್ಲ. ಕಂಬದ ಕೆಳಗೆ ಕೂತಿದ್ದ ಆ ಅಜ್ಜಿಯನ್ನು ಸುಮ್ಮನೇ ನೋಡಿದೆ, ಅವಳೂ ನನ್ನನ್ನೇ ನೋಡುತ್ತಿದ್ದಳು. ಆಕೆಯ ಕಣ್ಣು ಅದೆಷ್ಟು ತೇಜಸ್ಸಿನಿಂದ ಹೊಳೆಯುತ್ತಿತ್ತೆಂದರೆ ಬಿಸಿಲೂ ಇವಳ ಕಣ್ಣಿನ ಮಿಂಚಿನಷ್ಟು ಹೊಳೆಯುತ್ತಿರಲಿಲ್ಲ, ಆ ಅಜ್ಜಿ ಕಣ್ಣಲ್ಲೇ ಸೂಸುತ್ತಿದ್ದ ಆದರ, ಹುರುಪು ನೋಡುತ್ತ ನೋಡುತ್ತ, “ಈ ಅಜ್ಜಿ ಖಂಡಿತಾ ಚೆಂದ ಕತೆ ಹೇಳಬಹುದು, ಇವತ್ತು ಇವಳ ಹತ್ತಿರ ಕತೆ ಕೇಳಿಯೇ ಹೋಗೋದು ಅಂತ ನಿರ್ಧಾರ ಮಾಡಿದೆ. ಅಷ್ಟೊತ್ತು ನಮ್ಮನ್ನೇ ನೋಡುತ್ತಿದ್ದ ಆ ಅಜ್ಜಿ, ಏನು ಬಂದಿದ್ದು, ಯಾರು ಬೇಕಿತ್ತು? ಅಂತೆಲ್ಲಾ ವಿಚಾರಿಸಿದಳು. “ಏನಿಲ್ಲ ಅಜ್ಜಿ, ಸುಮ್ಮನೆ ಸುತ್ತೋಕೆ ಬಂದಿದ್ದು, ಆಗುಂಬೆ ಎಷ್ಟು ಚೆಂದ ಊರಲ್ಲವಾ? ನಮ್ಮ ಮಾಳ ಕಾಡಿನಂತೆಯೇ ಇದೂ ಎಷ್ಟೊಂದು ಮುದ್ದು” ಅಂತ ನಾನು ಪೀಠಿಕೆ ಹಾಕಲು ಶುರುಮಾಡಿದೆ.
ಅಷ್ಟೊತ್ತು ಒಳಗೊಳಗೆ ಮಂತ್ರವೊಂದನ್ನು ಜಪಿಸುತ್ತ, ತನ್ನೊಳಗಿನ ಜಗತ್ತಿನಲ್ಲಿ ಪರವಶಳಾಗಿದ್ದ ಅಜ್ಜಿ, ಈಗ ಸಣ್ಣಗೇ ನಗುತ್ತಾ “ಚೆಂದ ಅನ್ಕೊಂಡರೆ ಚೆಂದ, ಇಲ್ಲದಿದ್ದರೆ ಇಲ್ಲ, ಆದ್ರೆ ನೋಡಿ ಕೆಲವರಿಗೆ ಚೆಂದ ಕಾಣುವುದು ಇಲ್ಲಿನ ಸಂಪತ್ತು, ಮರ, ಅಷ್ಟೆ. ಅದನ್ನೆಲ್ಲಾ ಖಾಲಿ ಮಾಡಿ, ಇಲ್ಲಿನ ಜಲಪಾತಗಳಲ್ಲಿ ತಿಂದು, ಕುಡಿದು ಹೋದರೆ ಮುಗೀತು, ಬೇರೆ ಅವರಿಗೆ ಯಾವುದೂ ಬೇಡ, ಇಲ್ಲಿನ ನಿಸರ್ಗದ ಸಹಜ ಸೌಂದರ್ಯ, ಇಲ್ಲಿನ ಮೌನ, ವನ್ಯ ಜೀವಿಗಳ ಕಷ್ಟ, ಆ ಕಾಡು ಕಡಿದಾಗ ಗೋಳೋ ಎನ್ನುವ ಆ ಮರದ ಅಳು, ಯಾವುದೂ ಬೇಡ, ನಿಸರ್ಗ ಎನ್ನುವವಳು ದೊಡ್ಡ ತಾಯಿ, ಅವಳಿಲ್ಲದೇ ನಾವಿಲ್ಲ. ಅವಳನ್ನೇ ನಾವು ಈ ರೀತಿ ನೋಡಿಕೊಂಡರೆ ನಮಗೆಲ್ಲಿ ಉಳಿಗಾಲ? ಹಿಂದೆ ಕಾಡು ಎಷ್ಟು ಸಮೃದ್ಧವಾಗಿತ್ತು. ಈಗ ನಾವೆಲ್ಲ ಸ್ವಾರ್ಥಿಗಳಾಗಿದ್ದೇವೆ. ತಾಯಿಯನ್ನು ಸಾಯಿಸುವುದೆಂದರೆ ದೊಡ್ಡ ವಿಷಯವೇ ಅನ್ನಿಸುವುದಿಲ್ಲ ನಮಗೆ” ಎಂದು ತನ್ನ ಮಿಂಚಿನ ಕಣ್ಣನ್ನು ಮತ್ತಷ್ಟು ಹೊಳೆಯಿಸುತ್ತ ದೂರ ದಿಗಂತದತ್ತ ನೋಡಿದಳು ಅಜ್ಜಿ.
ಜಗಲಿಯ ಹಳೆಯ ಕಂಬಗಳ ಹಿನ್ನೆಲೆಯಲ್ಲಿಯೇ ಕೂತು ಅಜ್ಜಿಯ ಮಾತನ್ನು ಕೇಳುತ್ತ, “ಈ ಅಜ್ಜಿ ಬರೀ ಅಜ್ಜಿಯಲ್ಲ, ಹೊರಗಿನಿಂದಲೂ, ಒಳಗಿನಿಂದಲೂ ದೇವರಂತೆ ಕಾಣುತ್ತಾಳಲ್ವಾ ಅನ್ನಿಸಿ ನಂಗೆ ಅಜ್ಜಿಯ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿತು. “ಅಜ್ಜಿ ನೀವು ಇಲ್ಲಿಯವರೇ ಹಾಗಾದ್ರೆ?” ಅಂತ ಅವರ ಬದುಕಿನ ವಿವರಗಳೂ ಹಗುರನೇ ಹೊರಗೆ ಬರಲಿ ಅಂತ ಕೇಳಿದೆ. ನಾವು ಕೊಂಕಣಿ ಅಂತ ಗೊತ್ತಾದ ಮೇಲೆ ಅಜ್ಜಿ ಕೊಂಕಣಿಯಲ್ಲಿಯೇ ಮಾತು ಶುರುಮಾಡಿದಳು.
“ಹೌದು ನಾನು ಇಲ್ಲಿಯವಳೇ ನನ್ನ ಹೆಸರು ಜೆನ್ನಿ, ಕೆಲವರು ಜೆನ್ನಿಬಾಯಿ ಅಂದರೆ, ಮತ್ತೆ ಜೆನ್ನಿಫರ್ ಅನ್ನುವವರೂ ಇದ್ದಾರೆ. ನಂಗೆ ಎಲ್ಲಾ ಧರ್ಮದಲ್ಲಿಯೂ ನಂಬಿಕೆ ಇದೆ, ಹಾಗಾಗಿ ಜೆನ್ನಿ ಅನ್ನುವ ಹೆಸರನ್ನು ಬೇರೆ ಬೇರೆ ಧರ್ಮದವರು ಅವರ ಧರ್ಮಕ್ಕೆ ಸಲ್ಲುವ ಹೆಸರಿನ ಹಾಗೆ ಕರಿತಾರೆ. ಇರ್ಲಿ ನಂಗೆ ಮನುಷ್ಯ ಧರ್ಮದಲ್ಲಿ ತುಂಬಾ ನಂಬಿಕೆ, ನಾನು ಎಷ್ಟೋ ವರ್ಷ ಶುಶ್ರೂಷಕಿಯಾಗಿ ಕೆಲಸ ಮಾಡಿದ್ದೇನೆ, ಈಗ ನಂಗೆ ೮೩ ವರ್ಷ ದಾಟಿದರೂ ಯಾರಿಗಾದರೂ, ಶುಶ್ರೂಷೆ ಮಾಡಿ ಅಂತ ಆಗುಂಬೆಯಲ್ಲಿ ಕರೆದರೆ ಹೋಗುತ್ತೇನೆ. ಸಮಾಜ ಸೇವೆ ನನ್ನ ಮೊದಲ ಶಕ್ತಿ. ಸಾಯುವವರೆಗೂ ಅದರಲ್ಲೇ ಉಳಿದುಕೊಳ್ಳಬೇಕು, ಸಾಯುವ ಮೊದಲು ಒಂದಿಷ್ಟು ಜನಕ್ಕೆ, ಮರುಗುವ ಜೀವಗಳಿಗೆ ಸಹಾಯ ಮಾಡಿಯೇ ನನ್ನ ಜೀವ ಸವೆದುಹೋಗಲಿ ಅಂತ ತುಂಬಾ ಆಸೆ ನಂಗೆ” ಅಂತ ಅರೆಕ್ಷಣ ಮಾತು ನಿಲ್ಲಿಸಿದರು. ಮತ್ತೆ ಆಗುಂಬೆಯ ಕಾಡುಗಳನ್ನೊಮ್ಮೆ ಧೇನಿಸಿ ಮತ್ತೆ ಮಾತು ಶುರುಮಾಡಿದರು.
“ನಂಗೆ ಮದುವೆಯ ಬಗ್ಗೆ ನಂಬಿಕೆಯಿರಲಿಲ್ಲ. ಮದುವೆಯಾದರೆ ಸಮಾಜಸೇವೆ ನಿಂತೇ ಹೋಗುವ ಸಾಧ್ಯತೆ ಇತ್ತು. ಹಾಗಾಗಿ ಶುಶ್ರೂಷಕಿಯಾಗಿಯೇ ಬಡವರ ಸೇವೆ ಮಾಡಬೇಕು ಎನ್ನುವ ಆಸೆಯಿಂದ ಜೀವನವನ್ನೇ ಅದಕ್ಕೋಸ್ಕರ ಮೀಸಲಿಟ್ಟೆ” ಎಂದಳು ಜೆನ್ನಿ ಅಜ್ಜಿ.
ಮತ್ತೆ ತನ್ನ ಕಣ್ಣಗಳನ್ನು ನಮ್ಮತ್ತ ಹೊರಳಿಸಿ, ತುಸುವೇ ಅಲುಗಾಡುವ ತನ್ನ ಮೈಯಲ್ಲಿ ಮಾತು ಶುರುಮಾಡಿದಳು. ಪಾಪದವರಿಗೆ ಒಂದಿಷ್ಟು ಸಹಾಯ ಮಾಡುವುದರಿಂದ ಮನಸ್ಸಿಗೆಷ್ಟು ಸಮಾಧಾನ ಸಿಗುತ್ತೆ, ಬರೀ ಪ್ರೀತಿಯಿಂದ ಕೆಲಸ ಮಾಡುತ್ತಲೇ ಮನುಷ್ಯ ಎಷ್ಟೊಂದು ಬದಲಾವಣೆ ತರಬಹುದು, ನಾನು ಶುಶ್ರೂಷೆ ಮಾಡುತ್ತಿದ್ದ ವ್ಯಕ್ತಿಗಳು ಹುಷಾರಾಗಿ ನಗಲು ಶುರುಮಾಡಿದಾಗ ನಂಗೆ ಸಿಕ್ಕಿದ್ದು ಪ್ರೀತಿ, ನಾನೇನೋ ಸಮಾಧಾನ ಮಾಡಿದಾಗ ಅವರು ತುಂಬಿಕೊಂಡಿದ್ದೇ ನಂಗೆ ಪ್ರೀತಿ, ನಾನು ಬದುಕಲ್ಲಿ ಅನುಭವಿಸಿದ ಅತೀ ದೊಡ್ಡ ಖುಷಿ ಅಂದ್ರೆ ಮದರ್ ಥೆರೇಸಾರ ಅಪ್ಪುಗೆ, ಅವರು ಈ ಲೋಕ ಬಿಟ್ಟು ಹೋಗುವ ಕೆಲ ವರ್ಷದ ಮೊದಲು, ನಾವೆಲ್ಲ ಅವರನ್ನು ಕಾಣುವ ಕ್ಷಣ ಬಂದಿತ್ತು. ಚಿತ್ರಗಳಲ್ಲೇ ನೋಡಿ ಸುಖಿಸಿದ್ದ ಆ ಮಹಾನ್ ಚೇತನ ಆ ದಿನ ಪಕ್ಕದಲ್ಲಿಯೇ ನಿಂತಿತ್ತು. ಆಗ ನನ್ನ ಜೊತೆಗಿದ್ದ ಹಿರಿಯ ವ್ಯಕ್ತಿಯೊಬ್ಬರು ಅವರಿಗೆ ನನ್ನ ಬಗ್ಗೆ ಹೇಳಿದ್ದರು. ಆಗ ಅವರ ಕಣ್ಣುಗಳಲ್ಲಿ ಅದೆಷ್ಟು ಪ್ರೀತಿ ಒಂದೇ ಸಲ ಹರಿದು ಬಂತು ಅಂತೆಲ್ಲಾ ಈಗ ನೆನೆದರೆ ಕಣ್ಣೀರು ಹರಿಯುತ್ತದೆ ನಂಗೆ, ಒಮ್ಮೆ ನನ್ನನ್ನು ಮಮತೆಯಿಂದ ನೋಡಿದ ಮದರ್ ಥೆರೆಸಾ, ನನ್ನನ್ನು ಆನಂದದಿಂದ ತಬ್ಬಿಹಿಡಿದರು. ಆ ಅನಿರೀಕ್ಷಿತ ಅಪ್ಪುಗೆಯಿಂದ ಆ ಕ್ಷಣಕ್ಕೆ ನಾನು ಭಾವುಕಳಾಗಿದ್ದೆ, ಅದುವರೆಗೆ ಯಾವ ಸ್ಪರ್ಶಗಳೂ ಕೂಡ ನಂಗೆ ಅಷ್ಟೊಂದು ಸುಖ ಕೊಟ್ಟಿರಲಿಲ್ಲ. ಆದರೆ ಥೆರೆಸಾರ ಆ ಅಪ್ಪುಗೆ ನನ್ನಲ್ಲಿ ಹೊಸ ಬೆಳಕನ್ನೇ ಮೂಡಿಸಿತು. ಅವರ ಆಶೀರ್ವಾದ ನನ್ನನ್ನು ಆಗಾಗ ಕಾಪಾಡುತ್ತಿತ್ತು. ಆಗುಂಬೆ ಸೇರಿದಂತೆ ಬೇರೆ ಬೇರೆ ಕಡೆ ದಾದಿಯಾಗಿ ಸಮಾಜ ಸೇವೆ ಮಾಡಬೇಕು ಎಂದು ಮತ್ತಷ್ಟು ಪಣತೊಟ್ಟೆ. ಬಯಸಿದ್ದನ್ನು ಬದುಕಿದೆ. ಹಾಗೆ ಬದುಕುವುದನ್ನೇ ಬಯಸಿದೆ.
ಈಗಲೂ ನಂಗೆ ಶಕ್ತಿ ಇಲ್ಲದ ಜೀವಗಳಿಗೋಸ್ಕರ ಏನಾದರೂ ಮಾಡಬೇಕು ಎನ್ನುವ ಆಸೆಯಿದೆ. ಏನೂ ಇಲ್ಲದಾಗ ಇಲ್ಲೇ ಇರುವ ನನ್ನ ಪುಟ್ಟ ಮನೆಯಲ್ಲಿ ನಾಯಿಯನ್ನೋ, ಬೆಕ್ಕನ್ನೋ ಸಾಕುತ್ತಾ ಅವುಗಳು ಕೊಡುವ ಪ್ರೀತಿಯಲ್ಲಿ ಭಾಗಿಯಾಗುತ್ತೇನೆ. ಧ್ಯಾನ ಮಾಡುತ್ತೇನೆ. ನಮ್ಮದೊಂದು ಧ್ಯಾನ ಶಿಬಿರವಿದೆ. ಆಗಾಗ ಬೇರೆ ಬೇರೆ ಊರಿಗೆ ಹೋಗಿ ಯಾರಿಗಾದರೂ ಧ್ಯಾನದ ಮಹತ್ವವನ್ನು ಹೇಳಿ ಬರ್ತೇನಷ್ಟೆ” ಎಂದು ನೆನಪಿನ ಕಾಡಿಗೆ ಚಾರಣ ಮಾಡುತ್ತ ಜೆನ್ನಿ ಅಜ್ಜಿ ನುಡಿದಾಗ ದೊಡ್ಡ ಮನೆಯ ಕಂಬದಡಿಯಲ್ಲಿ ಕೂತು ನಮ್ಮ ಮಾತನ್ನೇ ಕೇಳುತ್ತಿದ್ದ ಗುಬ್ಬಿಯೊಂದು ಹಾರಿ ಬಾನಿನ ನೀಲಿಯಲ್ಲಿ ಕಣ್ಮರೆಯಾಗಿಹೋಯ್ತು.
“ಮಕ್ಕಳು ಅಂದ್ರೆ ನಂಗಿಷ್ಟ, ನನಗೊಬ್ಬಳು ದತ್ತುಪುತ್ರಿ ಇದ್ದಾಳೆ. ಹೆಣ್ಣು ಮಕ್ಕಳು ಪೊರೆಯುವ ಸುಖವೇ ಬೇರೆ, ಅವಳ ಜೊತೆ ಆರಾಮಾಗಿದ್ದೇನೆ “ಎಂದು ಮತ್ತೆ ಅರಳುಗಣ್ಣುಬಿಡುತ್ತ ನಮ್ಮನ್ನೇ ನೋಡಿದರು ಜೆನ್ನಿಬಾಯಿ, ಮದರ್ ಥೆರೆಸಾರ ಹಾಗೆ ಸೀರೆಯುಟ್ಟ, ಅವರಂತೆಯೇ ಆಶಾವಾದಿಯಾಗಿ ನಗುತ್ತಿದ್ದ ಜೆನ್ನಿಬಾಯಿಯನ್ನು ನೋಡುತ್ತ ಅವರ ಮಾತಿನ ಮೇಲೆ, ಚಿಂತನೆಗಳ ಮೇಲೆ ಪ್ರೀತಿ ಜಾಸ್ತಿಯಾಯಿತು. ಜೆನ್ನಿಬಾಯಿ ಆ ವಯಸ್ಸಿನಲ್ಲಿಯೂ ಸುಮಾರು ೭೦ ವರ್ಷದ ಜೀವದಂತೆ ಕಾಣುತ್ತಿದ್ದರು. ಅವರ ಕಣ್ಣುಗಳಲ್ಲಿ, ಮಾತುಗಳಲ್ಲಿ ಪ್ರೀತಿಯಿತ್ತು. ಈ ಕಾಲದ ಹುಡುಗರು ತನ್ನ ಕತೆ ಕೇಳುತ್ತಿದ್ದಾರಲ್ಲ ಎನ್ನುವ ಸಾರ್ಥಕತೆ ಇತ್ತು.
“ನಂಗೆ ಮದುವೆಯ ಬಗ್ಗೆ ನಂಬಿಕೆಯಿರಲಿಲ್ಲ. ಮದುವೆಯಾದರೆ ಸಮಾಜಸೇವೆ ನಿಂತೇ ಹೋಗುವ ಸಾಧ್ಯತೆ ಇತ್ತು. ಹಾಗಾಗಿ ಶುಶ್ರೂಷಕಿಯಾಗಿಯೇ ಬಡವರ ಸೇವೆ ಮಾಡಬೇಕು ಎನ್ನುವ ಆಸೆಯಿಂದ ಜೀವನವನ್ನೇ ಅದಕ್ಕೋಸ್ಕರ ಮೀಸಲಿಟ್ಟೆ” ಎಂದಳು ಜೆನ್ನಿ ಅಜ್ಜಿ.
ಅಷ್ಟೊತ್ತಿಗೆ ದಿಗ್ಗನ್ನೆದ್ದ ಜೆನ್ನಿಬಾಯಿ, “ಬನ್ನಿ ನಮ್ಮ ಮನೆಗೊಮ್ಮೆ ಬಂದು ಹೋಗಿ, ಎಂದು ಆಹ್ವಾನಿಸಿದರು. ದೊಡ್ಡ ಮನೆಯ ಪಕ್ಕದಲ್ಲಿದ್ದ ಗೇಟನ್ನು ಹಗುರನೇ ತೆಗೆದು, ತಮಗಿನ್ನೂ ಪ್ರಾಯವೇ ಆಗಿಲ್ಲ ಎನ್ನುವ ಹಾಗೆ ಸುಟು ಸುಟು ಮನೆಯ ಅಂಗಳಕ್ಕೆ ನಡೆದು, “ಇದೇ ನೋಡಿ ನಮ್ಮ ಮನೆ, ಪುಟ್ಟ ಕೈ ತೋಟ, ಇದರ ಜೊತೆಗೆ ಖುಷಿಯಾಗಿದ್ದೇನೆ” ಎಂದರು. ಆಗ ಅದೆಲ್ಲಿತ್ತೋ ಪಾಪದ ನಾಯಿಯೊಂದು ಜೆನ್ನಿ ಅಜ್ಜಿಯನ್ನು ನೋಡಿದ್ದೇ, ಪಟ ಪಟ ಅಂತ ಬಾಲ ಬಡಿದು ತನ್ನ ಅಮ್ಮ ಎನ್ನುವ ಹಾಗೇ ಜೆನ್ನಿ ಅಜ್ಜಿಯ ಕಾಲನ್ನು ಸ್ಪರ್ಶಿಸುತ್ತ ದೀನವಾಯಿತು. “ನೋಡಿ ಪ್ರಾಣಿಗಳು ನಮ್ಮನ್ನು ಪ್ರೀತಿಸುವಷ್ಟು ಮನುಷ್ಯರು ಪ್ರೀತಿಸುವುದಿಲ್ಲ ಅನ್ನಿಸುತ್ತದೆ ಕೆಲವೊಮ್ಮೆ .ಎಲ್ಲೋ ಅನಾಥವಾಗಿ ಬಿದ್ದ ನಾಯಿ ಇದು, ರಸ್ತೆಯಲ್ಲಿ ವಾಹನಗಳಿಗೆ ಸಿಲುಕಿ ಸಾಯುವುದು ಬೇಡ ಎಂದು ಮನೆಗೆ ತಂದು ಅನ್ನ ಹಾಕಿದೆ. ಈಗ ನೋಡಿ ನನ್ನನ್ನದು ಬಿಡುವುದಿಲ್ಲ. ನನ್ನೆಲ್ಲಾ ಕೆಲಸಗಳಿಗೆ ರಕ್ಷೆಯಾಗಿದೆ” ಎಂದಳು ಜೆನ್ನಿ ಅಜ್ಜಿ.
ತೀರಾ ಹೊಸತೂ ಅಲ್ಲದ ತೀರಾ ಹಳತೂ ಅಲ್ಲದ ಜೆನ್ನಿ ಅಜ್ಜಿಯ ಮನೆಯೊಳಗೆ ವಿಚಿತ್ರವಾದ ಮೌನವಿತ್ತು. ಮನೆಯ ಒಳಗಿಂದ ಆಗುಂಬೆಯ ಪೇಟೆ, ಮತ್ತೊಂದೆಡೆ ಕಾಡಿನ ಸೊಗಸು ಕಾಣುತ್ತಿತ್ತು. ಧ್ಯಾನ ಮಾಡಲು ಸುಂದರವಾದ ಜಾಗವಿತ್ತು, ಅಲ್ಲಿ ಧ್ಯಾನಕ್ಕಷ್ಟೇ ಬೇಕಾಗುವ ಗಾಳಿ, ಬೆಳಕಾಡುತ್ತಿತ್ತು. “ಸುಮ್ಮನೇ ಇಲ್ಲಿ ಕೂತು ಧ್ಯಾನ ಮಾಡಿದರೆ ಬದುಕಿಗೆ ಬೇಕಾದ ಸ್ಪೂರ್ತಿ ಎಲ್ಲಾ ಸಿಕ್ಕಿಬಿಡುತ್ತದೆ, ಕುವೆಂಪು ಹೇಳ್ತಾರಲ್ಲಾ “ಅನಂತ ತಾನ್ ಅನಂತವಾಗಿ” ಅಂತ. ಆ ಅನಂತತೆ ಇಲ್ಲಿನ ಹಕ್ಕಿಗಳ ಧ್ವನಿಯಲ್ಲಿ, ಮೌನದಲ್ಲಿ ಸಿಕ್ಕಿಬಿಡುತ್ತದೆ” ಎನ್ನುತ್ತಾ ಜೆನ್ನಿ ಅಜ್ಜಿ ಚಂದವಾಗಿ ನಕ್ಕರು. ಹೊರಗೆ ಕತ್ತಲು ಕವಿಯಲು ಇನ್ನೇನು ಕೆಲವೇ ಕ್ಷಣಗಳಿತ್ತು. “ಇನ್ನೊಮ್ಮೆ ಬರುತ್ತೇವೆ.ಇನ್ನಷ್ಟು ಕತೆ ಹೇಳಿ” ಎನ್ನುತ್ತಾ ಹೊರಟಾಗ ಮದರ್ ಥೆರೆಸಾರ ಹಾಗೆ ನಕ್ಕ ಜೆನ್ನಿಬಾಯಿ, ನಿಮಗೆ ಒಳ್ಳೆಯದಾಗಲಿ ಅಂತ ಆಶೀರ್ವದಿಸಿದರು. ಆ ಸಂಜೆ ನನ್ನ ಸ್ವಂತದ ಅಜ್ಜಿಯಂತೆಯೇ ಕಾಡಿದ ಜೆನ್ನಿ ಅಜ್ಜಿಯನ್ನು ಬೀಳ್ಕೊಟ್ಟು ಹೊರಟಾಗ ಆಗುಂಬೆ ಕಾಡುಗಳ ನೆತ್ತಿಯಲ್ಲಿ ಕೆಂಪು ಕೆಂಪು ಸೂರ್ಯ ಹತ್ತಿ, ದಾರಿಯೆಲ್ಲಾ ಓಕುಳಿ ನೀರಲ್ಲಿ ಮಿಂದೇಳುತ್ತಿರುವಂತೆ ಕಂಡಿತು. ಆ ಓಕುಳಿಯ ಮಿಂದಾಟದಲ್ಲಿ ಆಗುಂಬೆಯ ತಿರುವೊಂದಕ್ಕೆ ಬಂದು ನಿಂತಾಗ, ಮರಿಮಂಗವೊಂದು ಆಗುಂಬೆ ತಿರುವಿನ ನಡು ರಸ್ತೆಗೆ ಬಿದ್ದು ಅದರ ಜೀವ ಆದಾಗಲೇ ಹಾರಿಹೋಗಿತ್ತು. ರಸ್ತೆ ತುಂಬಾ ಚೆಲ್ಲಿದ್ದ ಅದರ ರಕ್ತ ಸಿಕ್ತ ದೇಹವನ್ನು ದಾಟಿ ಅದೆಷ್ಟೋ ವಾಹನಗಳು ಹಾದುಹೋಗಿತ್ತು.
“ಅದ್ಯಾವ ಹಾಳಾದ ಚಾಲಕನೋ, ಮುಗ್ದ ಮಂಗದ ಜೀವ ಬಲಿ ತೆಗೆದುಕೊಂಡ ದುಷ್ಟ” ಅಂತ ನಾವು ಸಿಟ್ಟಿನಿಂದ ಇದ್ದ ಬದ್ದ ವಾಹನಗಳನ್ನು ನೋಡುತ್ತ ನಿಂತಾಗ, ಅಲ್ಲೇ ಕೂತ ತಾಯಿ ಮಂಗವೊಂದು ಸತ್ತು ಬಿದ್ದ ತನ್ನ ಪುಟ್ಟ ಮಗುವನ್ನು ಎಷ್ಟೊಂದು ಅಳುಮೋರೆಯಿಂದ ನೋಡುತ್ತಿತ್ತೆಂದರೆ, ತಲೆ ಎಲ್ಲಾ ಆಗುಂಬೆ ತಿರುವಿನ ದಂಡೆಗೆ ಇಳಿಸಿ ಒಂದೇ ಸಮನೆ ಒತ್ತರಿಸಿ ಬರುವ ಮೂಕ ನೋವಿನ ಕಡಲನ್ನು ಆಗುಂಬೆ ಕಾಡಿನ ಮಡಿಲಲ್ಲಿ ಚೆಲ್ಲುತ್ತಿತ್ತು. ತನ್ನನ್ನು ಬಿಡುಬೀಸಾಗಿ ಹಾದುಹೋಗುತ್ತಿರುವ ವಾಹನಗಳ ಸಾಲುಗಳನ್ನು ಒಮ್ಮೆ ಸಿಟ್ಟಿನಿಂದ, ಏನೂ ಮಾಡಲಾಗದ ಅಸಹಾಯಕತೆಯಿಂದ, ಕಣ್ಣಲ್ಲಿ ಮಡುಗಟ್ಟಿದ ಶೋಕದಿಂದ ನೋಡುತ್ತಿತ್ತು.
“ಯಾರು ನನ್ನ ಮಗುವನ್ನು ಸಾಯಿಸಿದ್ದು? ಅಂತ ಬಸ್ಸಿನ ಕಿಟಕಿಗಳನ್ನು, ಟಯರುಗಳನ್ನು, ಸಹ್ಯಾದ್ರಿ ನೆತ್ತಿಯನ್ನು, ವಿಚಿತ್ರ ವೇಗದಿಂದ ಹೋಗುತ್ತಿರುವ ಲಾರಿಗಳನ್ನು ಕೇಳುತ್ತಿದ್ದ ಆ ಕಾಡ ಜೀವವನ್ನು ನೋಡುತ್ತ
“ಮನುಷ್ಯ ಅನ್ನೋ ಸ್ವಾರ್ಥದ ಜೀವಿಗೆ ಮೂಕ ಪ್ರಾಣಿಗಳ ನೋವು ಯಾಕೆ ಅರ್ಥವಾಗುದಿಲ್ಲ” ಅಂತ ನೋವಾಯಿತು.
ಅಷ್ಟೊತ್ತಿಗೆ ಆ ಬಿದ್ದ ಮರಿಮಂಗವನ್ನು ಎತ್ತಿಕೊಂಡು ನಾಯಿಯೊಂದು ಕಾಡಿನಲ್ಲಿ ಹೋಗಿಬಿಟ್ಟಿತು. ತಾಯಿ ಮಂಗ ಆಕ್ರೋಶಗೊಂಡು ಅದರ ಹಿಂದೆಯೇ ಓಡಿತು. ಎಷ್ಟು ಓಡಿದರೂ ಕರಗಿಹೋದ ಅದರ ಜೀವ ಮರಳಿ ಬರುತ್ತದಾ?
ರಸ್ತೆಯಲ್ಲಿ ಸಿಗುವ ಕಾಡಿನ ಈ ಪುಟ್ಟ ಜೀವಿಗಳು ದೊಡ್ಡದ್ದೇ ಅಲ್ಲ ಅಂತ ನಾವು ಯಮ ವೇಗದಿಂದ ಬಸ್ಸಿನಲ್ಲೋ, ಲಾರಿನಲ್ಲೋ ಹೋಗಬೇಕಾದ ಊರಿಗೆ ಹೋಗಿಬಿಡುತ್ತೇವೆ, ಆದರೆ ಇಂತಹ ಮೂಕಜೀವಿಗಳು ಮಾತ್ರ ಹೋಗುವುದು ಈ ಲೋಕಬಿಟ್ಟು ಅಂತ ಒಳಗೊಳಗೇ ಬೇಸರವೊಂದು ಕಲಕಿತು.
ನಾವು ಮತ್ತೆ ಆಗುಂಬೆಯ ತಿರುವು ಬಿಟ್ಟು ಹೋಗುತ್ತಿದ್ದಾಗ ಆ ಮಂಗ ಗಟ್ಟಿಯಾಗಿ ಕೂಗಿದ್ದು ಕೇಳಿಸಿತು. ಕೊನೆಗೆ ಆ ಕೂಗು ಆಗುಂಬೆಯ ದಟ್ಟದ ಕಾನನದ ಕತ್ತಲಲ್ಲಿ ಕರಗಿ ಕರಗಿ ಹೋಯಿತು. ಆ ಇರುಳಲ್ಲಿ ತನ್ನ ಮುದಿತನದಲ್ಲಿಯೂ ಯುವತಿಯಂತೆ ಬದಕುತ್ತಿರುವ ಜೆನ್ನಿ ಅಜ್ಜಿಯ ಇಷ್ಟಿಷ್ಟೇ ನಗು, ಅವಳ ಕಣ್ಣ ತೇಜಸ್ಸು, ಜೀವನಪ್ರೀತಿ ಇವೆಲ್ಲಾ ಆಗುಂಬೆ-ಸೋಮೇಶ್ವರ ಕಾಡಿನ ಪ್ರಪಾತದ ಮೌನದಲ್ಲಿ, ಸಾಯಂಕಾಲದ ಕೊನೆ ಬೆಳಕಿನಲ್ಲಿ ಇನ್ನಷ್ಟು ಜಿಗ್ಗೆಂದಿತು.
ಪ್ರಸಾದ್ ಶೆಣೈ ಹೊಸ ತಲೆಮಾರಿನ ಪ್ರತಿಭಾವಂತ ಕಥೆಗಾರ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ ಕಥೆಗಳಿಗೆ 2019 ರ ಕನ್ನಡ ಕ್ರೀಯಾಶೀಲ ಬರವಣಿಗೆಯಲ್ಲಿ ಟೋಟೋ ಫಂಡ್ಸ್ ಆಫ್ ಆರ್ಟ್ ನ ಟೋಟೋ ಪುರಸ್ಕಾರ ಲಭಿಸಿದೆ. “ಲೂಲು ಟ್ರಾವೆಲ್ಸ್” (ಕಥಾ ಸಂಕಲನ) “ಒಂದು ಕಾಡಿನ ಪುಷ್ಟಕ ವಿಮಾನ”(ಪರಿಸರ ಕಥಾನಕ) ಇವರ ಪ್ರಕಟಿತ ಕೃತಿಗಳು.
ಈ ಜೆನ್ನಿಬಾಯಿ ಹದಿನೈದು ವರ್ಷಗಳ ಹಿಂದೆ ಮೈತ್ರಿ ಸಂಘಟನೆಯ ಹೆಸರಿನಲ್ಲಿ ಒಣಗಿದ ಎಲೆ ಹೂ ಅಡಿಕೆ ಹಾಳೆ ಗಳಿಂದ ಸುಂದರವಾದ ಗ್ರೀಟಿಂಗ್ ಕಾರಡ್ ಮಾಡಿ ಮಾರುತ್ತಿದ್ದರು .ನಾನು ಕೆಲವು ವರ್ಷ ತಂದಿದ್ದೆ. ಮತ್ತೆ ನೀವು ಹೇಳಿದ ದೊಡ್ಡ ಮನೆಯ ಹುಡುಗಿಯೊಬ್ಬಳು ಪಿ ಲ್ಲಂಕೆಶ್ ಅವರ ಕ್ಲಾಸ್ ಮೇಟ್ ಆಗಿದ್ದಳಂತೆ .ಅವ್ರ ಮನೆಗೆ ಒಮ್ಮೆ ಭೇಟಿ ಕೊಟ್ಟ ಕುರಿತು ಹುಳಿಮಾವಿನ ಮರದಲ್ಲಿ ಬರೆದಿದ್ದಾರೆ.
ಸುಮಿತ್ರಾ ಎಲ್ ಸಿ