ಯಾರೋ ನನ್ನನ್ನು ಗಮನಿಸುತ್ತಾ ಇದ್ದಾರೆ ಎಂದೂ ಅನಿಸಬೇಕೇ..? ನರಸಿಂಹಯ್ಯನವರ ಕಾದಂಬರಿ ಓದಿ ಬೆಳೆದವರಿಗೆ ಈ ಸನ್ನಿವೇಶ ಒಟ್ಟಿಗೇ ಎಂಟೋ ಹತ್ತೋ ಭಯಾನಕ ಭೂತಗಳು, ನಡು ಹಗಲಿನಲ್ಲಿ ಮೋಹಿನಿಯ ಕಾಟ, ಮಟಮಟ ಮಧ್ಯಾಹ್ನ ಕಾಡಿತ್ತು ಕರಿ ಮೋಹಿನಿ… ಮೊದಲಾದ ಆಕರ್ಷಕ ಶೀರ್ಷಿಕೆಗಳು ಇರುವ ಹಲವಾರು ಪತ್ತೇದಾರಿ ಕಾದಂಬರಿಗಳನ್ನು ಬರೆಯಲು ಮತ್ತು ಬರಹದಲ್ಲಿ ತಾನೇ ಸೆಂಟರ್ ಫಿಗರ್ ಆಗಿ ಮಿಂಚುವ ಅವಕಾಶಗಳೂ ಸಹ ಹೇರಳವಾಗಿದ್ದವು. ಆದರೆ ನಾನು ಹುಲು ಮಾನವ, ನರಸಿಂಹಯ್ಯನವರ ಹಂತ ದಾಟಿ ಅನಕೃ, ಕಾರಂತರ ಓದುಗ ಬಳಗದ ಹತ್ತಿರ ಹತ್ತಿರ ಬರುತ್ತಿದ್ದವನು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೭ನೇ ಬರಹ ನಿಮ್ಮ ಓದಿಗೆ
ಹಿಂದಿನ ಸಂಚಿಕೆ ಹೀಗೆ ತಾನೇ ಎಂಡ್ ಆಗಿದ್ದು?
…….ಪುಸ್ತಕಕ್ಕೆ ಹೆಸರು ಇಡಬೇಕಿತ್ತಲ್ಲ. ಮುಖಪುಟ ಬರೆದಾಗ ಪುಸ್ತಕದ ಹೆಸರೂ ಕೊಟ್ಟರೆ ಕಲರ್ ಕಾಂಬಿನೇಷನ್ಗೆ ಉತ್ತಮ ಎನ್ನುವ ಅಭಿಪ್ರಾಯ ಬಂದಿತ್ತು. ನನ್ನ ಕತೆಗಳ ಹಸ್ತಪ್ರತಿಯ ಒಂದು ಕತೆ ಹೆಸರು ವೈಶಾಖ ಎಂದು. ಈಗಾಗಲೇ ಚದುರಂಗ ಅವರು ವೈಶಾಖ ಎನ್ನುವ ಕಾದಂಬರಿ ಬರೆದು ಅದು ಪ್ರಖ್ಯಾತವಾಗಿತ್ತು. ನನ್ನ ಸಂಕಲನಕ್ಕೂ ವೈಶಾಖ ಹೆಸರು ಇಟ್ಟರೆ ಓದುಗರು ಕನ್ಫ್ಯೂಸ್ ಮಾಡಿಕೊಳ್ಳುವ ಸಂಭವ ಹೆಚ್ಚಿರುತ್ತೆ ಅನಿಸಿತು. ಆದರೂ ಚದುರಂಗರ ವೈಶಾಖ ಕಾದಂಬರಿಯು. ನನ್ನದು ಸಣ್ಣ ಕಥಾ ಸಂಗ್ರಹ, ಅದರಿಂದ ಹೆಸರು ಅದೇ ಇರಲಿ ಎನ್ನುವ ತೀರ್ಮಾನ ತೆಗೆದುಕೊಂಡೆ…! ಹೆಸರು ವೈಶಾಖ ಆಯ್ತಾ? ಹೆಸರು ನನ್ನ ಗೂಢ ನಾಮವೇ ಇರಲಿ, ಅದರಿಂದಲೇ ನಾನು ಖ್ಯಾತನಾಗಿರುವುದು ಅನಿಸಿತಾ…? ಇದುವರೆಗೂ ಕಾಪಾಡಿಕೊಂಡು ಬಂದಿದ್ದ ಒಂದು ಗುಟ್ಟು ನಿಮಗೂ ಓದುಗ ಮಹಾಪ್ರಭುಗಳಿಗೂ ಸಹ ರಿವೀಲ್ ಮಾಡುತ್ತಾ ಇದ್ದೇನೆ. ಪ್ರಭಾ ಇದು ನನ್ನ ಹಲವು ಗೂಢ ನಾಮಗಳಲ್ಲಿ ಒಂದು, ಹೆಚ್ಚು ಫೇಮಸ್ ಆಗಿರುವುದು…!
ಕಾರ್ಯಕ್ರಮ ಹೇಗಾಯಿತು, ಯಾವ ಯಾವ ಅಥಿತಿ (ಅತಿಥಿ ?)ಗಳು ಬಂದರು, ಅದೇನೇನು ಆಭಾಸಗಳಾದವು ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನಿಮಗೆ ವಿವರಿಸಲೇ ಬೇಕು. ಅದಕ್ಕಿಂತ ಮಿಗಿಲಾಗಿ ಒಂದು ಅಭ್ಯಾಸದಿಂದ ನನ್ನ ಇಮೇಜ್ ಹೇಗೆ ಅಪ್ಪಚ್ಚಿ ಆಯಿತು ಎನ್ನುವ ತಮಾಷೆ ನಿಮಗೆ ಹೇಳಲೇ ಬೇಕು….
ಈಗ ಮುಂದಕ್ಕೆ ಹೋಗೋಣವೇ…
ಮಾಸ್ತಿ ಟ್ರಸ್ಟ್ನ ಆಗಿನ ಅಧ್ಯಕ್ಷರು ಶ್ರೀ ನಿಟ್ಟೂರು ಶ್ರೀನಿವಾಸ ರಾವ್ ಅವರು. ಸಹಜವಾಗಿ ನನ್ನ ಪುಸ್ತಕ ಬಿಡುಗಡೆ ಅವರಿಂದಲೇ ಮಾಡಿಸುವುದು ಎಂದು ನಿರ್ಧಾರ ವಾಯಿತು.
ಶ್ರೀ ನರಸಿಂಹ ಮೂರ್ತಿ ಅವರು ಪುಸ್ತಕದ ಬಗ್ಗೆ ಮಾತನಾಡುವುದು ಎಂದು ಮೊದಲೇ ತೀರ್ಮಾನಿಸಿದ್ದೆವು. ಕಾರ್ಯಕ್ರಮಕ್ಕೆ ಒಂದು ವಿಭಿನ್ನ ಟಚ್ ಕೊಡಲು ಒಂದು ಐಡಿಯಾ ಹರಿಹರ ಪ್ರಿಯ ಸೂಚಿಸಿದ್ದರು. ಕನ್ನಡ ಕಥಾ ಪರಂಪರೆ ಬಗ್ಗೆ ಮಾತಾಡುವುದು ಮತ್ತು ಅದನ್ನು ಶ್ರೀ ರಾಮಚಂದ್ರ ಶರ್ಮಾ ಮತ್ತು ಹರಿಹರಪ್ರಿಯ ನಡೆಸುವುದು ಎಂದು.
ಆಹ್ವಾನ ಪತ್ರಿಕೆಯಲ್ಲಿ ಈ ಭಾಗದ ಕಾರ್ಯಕ್ರಮಕ್ಕೆ ಕಥಾ ಕಾರಂಜಿ ಎನ್ನುವ ಹೆಸರು ಸೂಚಿತವಾಯಿತು.
ಶ್ರೀ ಹರಿಹರಪ್ರಿಯ ಆಹ್ವಾನ ಪತ್ರಿಕೆ ತಯಾರಿಯಲ್ಲಿ ಪಾಲುಗೊಂಡರು. ಅವರ ನೈಜ ನಾಮ ಆಹ್ವಾನ ಪತ್ರಿಕೆಯಲ್ಲಿಟ್ಟರು… ಸಾತವಲ್ಲಿ ವೆಂಕಟ ವಿಶ್ವನಾಥ (ಖ್ಯಾತ ಸಾಹಿತಿಗಳು) ಅಂತ..!
ಶ್ರೀ ಬಿಸಿ ರಾಮಚಂದ್ರ ಶರ್ಮಾ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲು ಅವರ ಮನೆಗೆ ಹೋಗಿದ್ದೆ. ಅವರ ಮನೆ ಸಹ ಜಯನಗರದಲ್ಲಿ ಇತ್ತು ಮತ್ತು ನರಸಿಂಹ ಮೂರ್ತಿ ಅವರಿಗೆ ನಿಕಟರು ಸಹ. ರಾಮಚಂದ್ರ ಶರ್ಮಾ ಅವರ ಮನೆಗೆ ಹೋಗಿದ್ದಾಗ ಒಂದು ಅಪೂರ್ವ ಅನುಭವವಾಯಿತು. ಸುಮಾರು ವರ್ಷ ಈ ಅನುಭವ ನನ್ನನ್ನು ಕಾಡಿತ್ತು. ಕಾಡಿತ್ತು ಅನ್ನುವ ಪದ ಸರಿ ಅಲ್ಲ, ಅದನ್ನು ಕಚಗುಳಿ ಎಂದು ಬದಲಾಯಿಸುತ್ತೇನೆ! ಈಗ ಆ ಕಚಗುಳಿಯ ಸಂಗತಿ ವಿವರಿಸಲೇ.. ತಮ್ಮ ಅನುಮತಿಯಿಂದ.
ರಾಮಚಂದ್ರ ಶರ್ಮಾ ಅವರ ಮನೆ ವಿಳಾಸ ಪಡೆದು ಒಂದು ಸಂಜೆ ಅವರ ಮನೆಗೆ ಹೋದೆ. ವಿಶಾಲವಾದ ಮನೆ, ಹೊರಬಾಗಿಲು ಕಾಂಪೌಂಡ್ ದಾಟಿ ಹೋದ ನಂತರ ಸಿಕ್ಕಿತು. ಮುಂಬಾಗಿಲು ತೆರೆದಿರಲಿಲ್ಲ.
ಬಾಗಿಲ ಪಕ್ಕದಲ್ಲಿದ್ದ ಬೆಲ್ ಗುಂಡಿ ಒತ್ತಿದೆ. ಒಬ್ಬರು ಯುವಕರು ಬಂದರು. ರಾಮಚಂದ್ರ ಶರ್ಮಾ ಅವರ ಫೋಟೋ ಈ ಮೊದಲೇ ನೋಡಿದ್ದೆ, ಅದರಿಂದ ಬೇರೆಯವರ ಸಂಗಡ confuse ಆಗುವ ಸಾಧ್ಯತೆ ಇರಲಿಲ್ಲ. ಯುವಕ ಶರ್ಮಾ ಅವರ ಮಗ ಇರಬೇಕು ಅಂದುಕೊಂಡೆ. ಗೊತ್ತಿರಲಿಲ್ಲ…
ಬಾಗಿಲು ತೆರೆದವರು ಹಾಗೇ ನಿಂತರು, ಏನು ಬೇಕು ಯಾರು ಬೇಕು ಎಂದು ಕೇಳುವ ಹಾಗೆ
“ರಾಮಚಂದ್ರ ಶರ್ಮಾ ಅವರನ್ನು ಕಾಣಬೇಕಿತ್ತು. ಒಂದು ಪುಸ್ತಕ ಬಿಡುಗಡೆ ಸಮಾರಂಭ…..” ಅಂದೆ.
(ಆಗ ಈಗಿನ ಹಾಗೆ ಗೋಪಾಲ್ ಸರ್ನ ನೋಡಬೇಕು ಎನ್ನುವ ವಾಕ್ಯ ಚಾಲ್ತಿಯಲ್ಲಿ ಇನ್ನೂ ಬಂದಿರಲಿಲ್ಲ. ಅದರಿಂದ ಸರ್ ಪದ ಪ್ರಯೋಗ ಇಲ್ಲ..)
ಈ ಅಥವಾ ಇಂತದೇ ಕಾರಣ ಇಟ್ಟುಕೊಂಡು ಕಾಲಿಂಗ್ ಬೆಲ್ ಹೊಡೆಯುವ ಅದೆಷ್ಟೋ ಸಾವಿರಾರು ಅನುಭವ ಆಗಲೇ ಅವರಿಗೆ ಆಗಿರಬೇಕು.
“ಬನ್ನಿ ಒಳಗೆ ಕೂತಿರಿ ಕರೀತೀನಿ” ಅಂತ ಹೇಳಿ ಒಳಗೆ ಹೋದರು. ನಾನು ಅಲ್ಲೇ ಇದ್ದ ಸೋಫಾ ಮೇಲೆ ಕೂತೆ. ಅದು ಸುಮಾರು ದೊಡ್ಡ ಹಾಲು. ಬಹುಶಃ ಅಂತಹ ದೊಡ್ಡ ಹಾಲು ನಾನು ಮೊಟ್ಟ ಮೊದಲಬಾರಿ ನೋಡಿದ್ದು ಅಂತ ಕಾಣುತ್ತೆ. ನನ್ನನ್ನು ಕೂಡಿಸಿದ ಹುಡುಗ ಕಂ ಯುವಕ ಹಾಲಿಗೆ ಸೇರಿದ ಹಾಗಿದ್ದ ಮಹಡಿ ಮೆಟ್ಟಲು ಏರಿ ಮೇಲಿನ ಒಂದು ಕೊಠಡಿಯ ಒಳಹೊಕ್ಕಿದ್ದ.
ನಾನೂ ಇತ್ತ ಪಾತಾಳ ಲೋಕದಲ್ಲಿ ಪಿಳಿ ಪಿಳಿ ಕಣ್ಣು ಬಿಡುತ್ತಾ ಸೋಫಾದ ಮುಂತುದಿಯಲ್ಲಿ ಕೂತಿದ್ದೆ…. ಒಂದೆರೆಡು ಕ್ಷಣದಲ್ಲಿ (ಕ್ಷಣ ಅಂದರೆ ಸೆಕೆಂಡ್ ಲೆಕ್ಕ ಇವರೇ) ನಾನು ಒಬ್ಬಂಟಿ ಅಲ್ಲ ಈ ಹಾಲಿನಲ್ಲಿ… ಅನಿಸಲು ಶುರು ಆಯಿತು. ಯಾರೋ ಜತೆಗೆ ಇದ್ದಾರೆ, ನನ್ನ ಎದೆಯ ಬಡಿತ ಅವರಿಗೆ ಕೇಳಿಸುತ್ತಿದೆ.. ಅದರ ಜತೆಗೆ ಯಾರೋ ನನ್ನನ್ನು ಗಮನಿಸುತ್ತಾ ಇದ್ದಾರೆ ಎಂದೂ ಅನಿಸಬೇಕೇ..? ನರಸಿಂಹಯ್ಯನವರ ಕಾದಂಬರಿ ಓದಿ ಬೆಳೆದವರಿಗೆ ಈ ಸನ್ನಿವೇಶ ಒಟ್ಟಿಗೇ ಎಂಟೋ ಹತ್ತೋ ಭಯಾನಕ ಭೂತಗಳು, ನಡು ಹಗಲಿನಲ್ಲಿ ಮೋಹಿನಿಯ ಕಾಟ, ಮಟಮಟ ಮಧ್ಯಾಹ್ನ ಕಾಡಿತ್ತು ಕರಿ ಮೋಹಿನಿ… ಮೊದಲಾದ ಆಕರ್ಷಕ ಶೀರ್ಷಿಕೆಗಳು ಇರುವ ಹಲವಾರು ಪತ್ತೇದಾರಿ ಕಾದಂಬರಿಗಳನ್ನು ಬರೆಯಲು ಮತ್ತು ಬರಹದಲ್ಲಿ ತಾನೇ ಸೆಂಟರ್ ಫಿಗರ್ ಆಗಿ ಮಿಂಚುವ ಅವಕಾಶಗಳೂ ಸಹ ಹೇರಳವಾಗಿದ್ದವು. ಆದರೆ ನಾನು ಹುಲು ಮಾನವ, ನರಸಿಂಹಯ್ಯನವರ ಹಂತ ದಾಟಿ ಅನಕೃ, ಕಾರಂತರ ಓದುಗ ಬಳಗದ ಹತ್ತಿರ ಹತ್ತಿರ ಬರುತ್ತಿದ್ದವನು. ಹಾಗಾಗಿ ತಲೆಯಿಂದ ಮೋಹಿನಿಗಳು, ಮಟಮಟ ಮಧ್ಯಾಹ್ನಗಳು, ಘನ ಘೋರ ಸುಡು ಬಿಸಿಲು… ಮೊದಲಾದ ಹೆಸರುಗಳು ಹುಟ್ಟಲಿಲ್ಲ. ಬದಲಿಗೆ ಈ ಹಾಲಿಗೆ ಬಂದಕೂಡಲೇ ಇಂತಹ ವಿಶಿಷ್ಟ ಹಾಗೂ ವಿಲಕ್ಷಣ ಅನುಭವಗಳು ಯಾಕೆ ಉದ್ಭವವಾಯಿತು ಎನ್ನುವ ವಿಶ್ಲೇಷಣೆಗೆ ಮನಸ್ಸು ವೇದಿಕೆ ರೂಪಿಸಿಗೊಳ್ಳುತ್ತಿತ್ತು. ಈ ವೇಳೆಗೆ ನರಸಿಂಹಯ್ಯ ಹಂತ ದಾಟಿ ಅನಕೃ ಕಾರಂತರ ಸಮೀಪ ಇದ್ದೇ ಅಂತ ಹೇಳಿದೆ ಅಲ್ವಾ? ಎಚ್ಚೆನ್ ಈ ವೇಳೆಗೆ ತಲೆ ಹೊಕ್ಕಿದ್ದರು. ಯಾರು ಈ ಎಚ್ಚೆನ್ ಅಂದರೆ ಡಾ. ನರಸಿಂಹಯ್ಯ, ವಿಚಾರವಾದಿ ಮತ್ತು ಬೆಂಗಳೂರು ವಿವಿಯ ಮಾಜಿ ಉಪಕುಲಪತಿ ಅವರು. ಎರಡು ನರಸಿಂಹಯ್ಯ ಅವರುಗಳು ನಮ್ಮ ಪೀಳಿಗೆಗೆ ಬಹು ಮುಖ್ಯರು. ಒಂದು ಎನ್ ನರಸಿಂಹಯ್ಯ, ನಮ್ಮ ಪೀಳಿಗೆಯವರಿಗೆ ಓದಿನ ಜಾಡ್ಯ ಅಂಟಿಸಿದ ಪತ್ತೇದಾರಿ ಕಾದಂಬರಿ ಪಿತಾಮಹರು. ಇವರ ಜತೆ ಅನಕೃ ಅವರನ್ನೂ ಸೇರಿಸಿ ಜಾಡ್ಯ ಅಂಟಿಸಿದ ಮಹಾತ್ಮರಲ್ಲಿ ಇಬ್ಬರೂ ಪ್ರಮುಖರು. ಇನ್ನೊಂದು ಹೆಸರು ಅಂದರೆ ನರಸಿಂಹಯ್ಯ ಅಂದರೆ ಡಾ ಎಚ್ಚೆನ್ ಅವರು. ಬೆಂಗಳೂರು ವಿವಿ ಕುಲಪತಿಗಳಾಗಿ ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಯಶಸ್ವಿಯಾಗಿದ್ದರು. ಎಲ್ಲವನ್ನೂ ಪ್ರಶ್ನಿಸಿ ಪ್ರಶ್ನಿಸಿ, ಪ್ರಶ್ನಿಸದೇ ಏನನ್ನೂ ಒಪ್ಪಬೇಡಿ ಇದು ಇವರ ಟ್ಯಾಗ್ ಲೈನ್. ನಮ್ಮ ಪೀಳಿಗೆಯವರಲ್ಲಿ ಈ ಟ್ಯಾಗ್ ಲೈನ್ ಹೆಚ್ಚು ಪ್ರಚಲಿತವಾಗಿತ್ತು! ಮತ್ತು ಅದೇ ಟ್ಯಾಗ್ ಲೈನ್ ಈಗ ನನ್ನನ್ನು ನನ್ನ ಆ ಕ್ಷಣದ ವಿಲಕ್ಷಣ ಅನುಭವಕ್ಕೆ ಕಾರಣ ಹುಡುಕಲು ನಾಲ್ಕು ತಲೆ ಮೇಲೆ ಬಾರಿಸಿತಾ?
ಅದೇ ಸಮಯಕ್ಕೆ ಮಹಡಿ ಮೆಟ್ಟಲು ಇಳಿಯುತ್ತಾ ರಾಮಚಂದ್ರ ಶರ್ಮಾ ಅವರು ಬರುತ್ತಿದ್ದರು. ನನ್ನ ಅನ್ವೇಷಣೆಗಳಿಗೆ (ಅನ್ವೇಷಣೆ ಹೆಸರಿನ ಒಂದು ಕಾದಂಬರಿ ಡಾ.ಎಸ್ ಎಲ್ ಭೈರಪ್ಪ ಬರೆದಿದ್ದಾರೆ ಮತ್ತು ಅದಕ್ಕೂ ಇದಕ್ಕೂ ನೇರಾನೇರ ಸಂಬಂಧವಿಲ್ಲ..!) ಒಂದು ಬ್ರೇಕ್ ಕೊಟ್ಟೆ. ಒಂದು ನಶ್ಯ ಕಲರಿನ ಜುಬ್ಬಾ ಮತ್ತು ಕೊಂಚ ಟೈಟ್ ಅನ್ನಬಹುದಾದ ಪೈಜಾಮ ತೊಟ್ಟಿದ್ದರು. ಅವರಿಗೆ ಆಗ ಹತ್ತಿರ ಹತ್ತಿರ ಅರವತ್ತು ಇರಬೇಕು. ಅವರು ಕೆಳಗೆ ಬರುವ ವೇಳೆಗೆ ನಾನು ಎದ್ದು ಅಟೆನ್ಷನ್ನಲ್ಲಿ ನಿಂತಿದ್ದೆ. ನಮಸ್ಕಾರ ಹೇಳಿ ನನ್ನ ಪ್ರವರ ಶುರು ಮಾಡಿದೆ. ಅಹಂಭೋ ಅಭಿ ವಾದಿಯೇ…. ಬರುವ ಮೊದಲು ಕೂಡಿ ಎಂದರು. ಪ್ರವರ ಹೇಳೋದು ಅಂದರೆ ನಿಮಗೆ ಗೊತ್ತಾ? ಗೊತ್ತಿಲ್ಲ ಅಂದರೆ ಈ ಪ್ಯಾರಾ ನೀವು ಖಂಡಿತ ಓದಲೇ ಬೇಕು. ನಮ್ಮ ಪೂರ್ವಿಕರ ಕಾಲದಲ್ಲಿ ಅಪರಿಚಿತ ಗುರು ಹಿರಿಯರನ್ನು ಭೇಟಿ ಮಾಡಿದಾಗ ನಮ್ಮ ಬಗ್ಗೆ ಒಂದು ಸೆಲ್ಫ್ ಬಯೋ ಡೇಟಾ ಕೊಡಬೇಕಿತ್ತು. ಅದು ನಮ್ಮ ಪೂರ್ವಜ, ನಮ್ಮ ವಂಶ, ನಮ್ಮ ಗುರು ಹಿರಿಯ ನಮ್ಮ ಗೋತ್ರದ ಮೂಲಪುರುಷ ಇವೆಲ್ಲವನ್ನೂ ಹೇಳಿ ಕೊನೆಗೆ ತನ್ನ ಹೆಸರು ಹೇಳಿ ಅದಕ್ಕೆ ಶರ್ಮಾ ಅಂತ ಸೇರಿಸಿ ಅಹಂಭೋ ಅಭಿ ವಾದಿಯೇ…. ಅಂತ ಮುಗಿಸಬೇಕಿತ್ತು. ಇದು ತಿಥಿ ಮಾಡಬೇಕಾದರೆ ಮೊದಲು ಪುರೋಹಿತರು ಹೇಳಿಸುತ್ತಾರೆ, ಅದರಿಂದ ಇದು ನಾನು ನೋಡಿ ಕಲಿತಿರುವುದು.. ಕೆಲವಮ್ ಬಲ್ಲವರಿಂದ ಅಂತ ಅದೇನೋ ಒಂದು ಹಾಡೋ ಶ್ಲೋಕವೋ ಸೂಕ್ತಿಯೋ ಇದೆಯಲ್ಲಾ ಅದರ ರೀತಿ. ಇದು ಅಪ್ಪಡಿ ಇರಕಟ್ಟುಂ…
ಶರ್ಮರ ಮುಂದೆ ನಿಂತು ನಾನೂ ಶರ್ಮ ಅಂತ ಹೇಳಬಹುದೇ ಎನ್ನುವ ಜಿಜ್ಞಾಸೆ ಆಗ ಕಾಡಲಿಲ್ಲ. ಎದ್ದು ನಿಂತು ಸಾರ್ ನಾನು ಹೀಗೆ ಹೀಗೆ. ಒಂದು ಕಥಾ ಸಂಕಲನ ಮಾಸ್ತಿ ಪ್ರಶಸ್ತಿ ನರಸಿಂಹ ಮೂರ್ತಿ…. ಅಂತ ಒಂದಕ್ಕೊಂದು ಲಿಂಕ್ ಕೊಟ್ಟುಕೊಂಡು ಅಲ್ಲಿ ಅವರ ಮುಂದೆ ನಾನು ನಿಂತಿರುವ ಕಾರಣ ವಿವರಿಸುತ್ತಾ ಇದ್ದೆ ತಾನೇ? ಅವರು ಕೂಡಿ ಅಂದರು. ಕೂತೆ. ಕೈಯಲ್ಲಿ ನನ್ನ ಪುಸ್ತಕದ ಪ್ರತಿ ಇತ್ತು. ಅದನ್ನು ಮುಂದಕ್ಕೆ ಚಾಚಿದೆ. ತೆಗೆದುಕೊಂಡರು. ನೀವು ಸಣ್ಣ ಕತೆಗಳ ಬಗ್ಗೆ ಮಾತಾಡಬೇಕು ಸರ್ ಅಂದೆ. ಹೀಗೆ ಹೀಗೆ ಅಂತ ಕಾರ್ಯಕ್ರಮದ ರೂಪು ರೇಷೆಗಳನ್ನು ವಿವರಿಸಿದೆ. ಆಗಲಿ ಎಂದರು. ಕಾಫಿ ಬಂತು. ಅದನ್ನು ಮುಗಿಸಿ ನಮಸ್ಕಾರ ಇನ್ವಿಟೇಷನ್ ರೆಡಿ ಆದಮೇಲೆ ಮತ್ತೆ ಬರ್ತೀನಿ ಅಂತ ಹೊರಟೆ. ಪುಸ್ತಕದ ಮಾರಾಟ ಹೇಗೆ ಮಾಡ್ತೀರಿ ಅಂತ ಕೇಳಿದರು. ಅದನ್ನು ಅವರಿಗೆ ವಿವರಿಸಿದೆ. ಇದರ ಬಗ್ಗೆ ನಿಮಗೆ ಆಮೇಲೆ ಹೇಳುತ್ತೇನೆ.
ಮನೆಯಿಂದ ಹೊರಡಲು ನಿಂತಿದ್ದವನನ್ನು ಎಚ್ಚೆನ್ ತಡವಿದರು. ಎಚ್ಚೆನ್ ಆಗಿನ್ನೂ ಟಾಪ್ ಫಾರ್ಮ್ನಲ್ಲಿದ್ದವರು. ಈಗ ಡಾ. ಎಚ್ಚೆನ್ ಪರೀಕ್ಷಿಸಿ ನೋಡು ಪರೀಕ್ಷಿಸಿ ನೋಡು ಪರೀಕ್ಷಿಸಿ ನೋಡು ಪರೀಕ್ಷಿಸಿ ನೋಡು .. ಅಂತ ಕಿವಿ ಪಕ್ಕ ನಿಂತು ಕೂಗು ಮಾರಿಯ ಹಾಗೇ ಕೂಗು ಮಂತ್ರ ಹೇಳಲು ಆರಂಭಿಸಿದ್ದರು!
ಹೊರಡಲು ಎದ್ದು ನಿಂತಿದ್ದೆ. ಹಾಗೇ ಸುತ್ತಲೂ ಕಣ್ಣಾಡಿಸಿದೆ. ನಾನು ಆ ವರೆಗೆ ನೋಡಿದ್ದ ಮನೆಗಳಲ್ಲಿನ ಹಾಲ್ಗೆ ಹಾಗೂ ಈಗ ನಿಂತಿರುವುದಕ್ಕೆ ಒಂದು ವಿಶೇಷ ಕಂಡಿತು. ಬೇರೆ ಮನೆಗಳಲ್ಲಿ ತ್ರೀ ಸೀಟರ್ ಸೋಫಾ ಒಂದು ಮಿಕ್ಕಿದ್ದು ಎರಡು ಸಿಂಗಲ್ ಸೀಟರು. ಇಲ್ಲಿ ಸಿಂಗಲ್ ಸೋಫಾಗಳು ಇಲ್ಲ. ತ್ರೀ ಸೀಟರ್ ಸೋಫಾಗಳು ನಾಲ್ಕೋ ಐದೋ ಇವೆ ಮತ್ತು ಮಧ್ಯೆ ಮಧ್ಯೆ ಒಂದು ಟೀ ಪಾಯಿ ಇಡುವಷ್ಟು ಜಾಗ ಬಿಟ್ಟು ಜೋಡಿಸಲ್ಪಟ್ಟಿವೆ. ಶರ್ಮಾ ಅವರು ಹೊರಳಿ ಮೆಟ್ಟಲು ಕಡೆ ನೋಡಿದವರು ನಾನು ಆಚೆ ಹೋಗಲಿ ಎಂದೇನೋ ಒಂದು ಕ್ಷಣ ಹಾಗೇ ನಿಂತಿದ್ದರು. ನಮ್ಮಿಬ್ಬರ ನಡುವೆ ಒಂದು ಕಾರ್ಪೆಟ್. ಕಾರ್ಪೆಟ್ ಆಕಡೆ ಅವರು ಈಕಡೆ ನಾನು. ಅವರ ಹಿಂದೆ ಎರಡು ಸೋಫಾಗಳು. ಸೋಫಾ ಕಡೆ ನೋಡಿದೆ, ಅದರ ಮೇಲೆ ಕೂತಿರುವವರನ್ನೂ ಸಹ ನೋಡಿದೆ! ಒಂದೇ ಒಂದು ಕ್ಷಣ ಅಷ್ಟೇ ತಬ್ಬಿಬ್ಬು ಆಗಿಬಿಟ್ಟೆ. ಇಷ್ಟು ಹೊತ್ತೂ ನನ್ನನ್ನು ಕಾಡಿದ ರಹಸ್ಯವನ್ನು ಭೇದಿಸಿದ್ದೆ!
ಸೋಫಾ ಮೇಲೆ ಆರಡಿ ಎತ್ತರದ ದಷ್ಟ ಪುಷ್ಟ ಬೊಂಬೆ ಪ್ಯಾಂಟು ಶರಟು ಕೋಟು ಧರಿಸಿತ್ತು ಕೂತಿದೆ. ಅದು ಒಂದು ಕಾಲು ಅಗಲಿಸಿ ಮೈ ನೇರ ನಿಲ್ಲಿಸಿ ಕೂತಿತ್ತು. ಬಹುಶಃ ಬೆಂಗಳೂರಿನ ಮನೆಯ ಹಾಲ್ಗಳಲ್ಲಿ ಮೊದಲ ಬಾರಿಗೆ ಮನುಷ್ಯ ಗಾತ್ರದ ಬೊಂಬೆ ಒಂದು ಸೋಫಾ ಮೇಲೆ ಕೂತಿರುವುದನ್ನು ನೋಡಿದೆ! ಬಹುಶಃ ಶರ್ಮಾ ಅವರ ಈ ಮನೆ ನೋಡಿದ ಮೇಲೆ ಈ ಫ್ಯಾಷನ್ ಜನಪ್ರಿಯ ಆಗಿರಬೇಕು. ನಂತರ ಸುಮಾರು ಮನೆಗಳಲ್ಲಿ ಈ ದೃಶ್ಯ ಅಂದರೆ ಮನೆಯಲ್ಲಿ ಎಲ್ಲೆಂದರಲ್ಲಿ ಕೂತು ನಿಂತು ಮಲಗಿರುವ ಲೈಫ್ ಸೈಜ್ ಬೊಂಬೆಗಳು ಇರುವುದನ್ನು ನೋಡಿದ್ದೇನೆ. ಆದರೆ ಇಲ್ಲಿಯದು ಮಾತ್ರ ಸುಮಾರು ವರ್ಷ ಆಗಾಗ ನೆನಪಿಗೆ ಬಂದು ನನ್ನ ಅಂದಿನ ಕ್ಷಣಗಳನ್ನು ಮತ್ತೆ ಮತ್ತೆ ರಿ ಬಿಲ್ಡ್ ಮಾಡಿ ನೆನಪು ಫ್ರೆಷ್ ಮಾಡಿದೆ ಮತ್ತು ಇಷ್ಟೂ ವರ್ಷ ಮೆದುಳಿನ ಒಂದು ಸಂದಿಯಲ್ಲಿ ಗಟ್ಟಿಯಾಗಿ ಕೂತು ಆಗಾಗ ಕಚಗುಳಿ ಇಡುತ್ತದೆ.

ಈಗ ಆಮೇಲೆ ಹೇಳುತ್ತೇನೆ ಎಂದು ಹೇಳಿದ ಪುಸ್ತಕ ಮಾರಾಟದ ಯೋಜನೆ ಬಗ್ಗೆ. ಪುಸ್ತಕ ಬಿಡುಗಡೆ ದಿವಸ ರಿಯಾಯಿತಿ ದರದಲ್ಲಿ ಪುಸ್ತಕ ಬಿಕರಿಗೆ ಇಡುವುದು ಮೊದಲಿನಿಂದಲೂ ಸಂಪ್ರದಾಯ. ಪುಸ್ತಕ ಬಿಡುಗಡೆ ಮೊದಲೇ ಅದನ್ನು ಸ್ನೇಹಿತರಿಗೆ ಮಾರಿದರೆ ಹೇಗೆ ಎನ್ನುವ ಯೋಚನೆ ಹುಟ್ಟಿತು. ಅದನ್ನು ಹೇಗೆ ಜಾರಿಗೆ ತಂದೆವು ಅಂದರೆ ಅಂಗಡಿಯಲ್ಲಿ ಸಿಗುವ ರಸೀತಿ ಪುಸ್ತಕ ಕೊಂಡೆವು. ಒಂದು ರಬ್ಬರ್ ಸೀಲ್ ಮಾಡಿಸಿ ಪುಸ್ತಕದ ಹೆಸರು ಹಾಕಿ ಇಂತಹವರಿಂದ ಪುಸ್ತಕದ ಮಾರಾಟದ ಮೊತ್ತ ಸ್ವೀಕರಿಸಲಾಗಿದೆ ಎಂದು ಸೇರಿಸಿದೆವು. ಕೃತಜ್ಞತಾ ಪೂರ್ವಕವಾಗಿ ಎಂದೂ ಸಹ ಇತ್ತು. ಬಿಡುಗಡೆಗೆ ಮುನ್ನ ಏಳುನೂರು ಚಿಲ್ರೆ ರಸೀತಿ ಮಾರಾಟ ಆಗಿತ್ತು. ಪುಸ್ತಕದ ಬೆಲೆ ಹದಿನೆಂಟು ಇಟ್ಟು ಹತ್ತು ರೂಪಾಯಿಗೆ ಮಾರಾಟ ಮಾಡಿದ್ದೆವು. ನನ್ನ ಮಿತ್ರರು ಇಡೀ ಫ್ಯಾಕ್ಟರಿ ಸುತ್ತು ಹಾಕಿ ಇಂತಹ ಒಂದು ಸೇಲ್ಸ್ ನಡೆಸಿಕೊಟ್ಟಿದ್ದರು! ಇದು ಆಗ ಒಂದು ದೊಡ್ಡ ದಾಖಲೆ. ಶರ್ಮಾ ಅವರ ಹತ್ತಿರ ಹೋದಾಗ ಈ ಅಂಶ ವಿವರಿಸಿ ಆರ್ನೂರು ಪುಸ್ತಕ ಆಗಲೇ ಮಾರಾಟ ಆಗಿದೆ ಎಂದು ಹೇಳಿದ್ದೆ!
ಕಾರ್ಯಕ್ರಮದ ರೂಪುರೇಷೆ ಎರಡು ದಿವಸ ಕೂತು ಸಿದ್ಧ ಮಾಡಿದರು, ಗೆಳೆಯರು. ಪ್ರಸನ್ನ ವೆಂಕಟೇಶ ಮೂರ್ತಿ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದರು. ಅಧ್ಯಕ್ಷತೆ ಮತ್ತು ಪುಸ್ತಕ ಬಿಡುಗಡೆ ಮಾಸ್ತಿ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ನಿಟ್ಟೂರು ಶ್ರೀನಿವಾಸರಾಯರು, ಪುಸ್ತಕದ ಬಗ್ಗೆ ಶ್ರೀ ಕೆ.ನರಸಿಂಹಮೂರ್ತಿ , ಕಥಾ ಕಾರಂಜಿಯಲ್ಲಿ ಶ್ರೀ ಬಿ ಸಿ ರಾಮಚಂದ್ರಶರ್ಮ ಮತ್ತು ಶ್ರೀ ಸಾತವಲ್ಲಿ ವೆಂಕಟ ವಿಶ್ವನಾಥ ಅವರು ಅಂತ ನಿರ್ಧಾರ ಆಗಿತ್ತಲ್ಲ..
ಈ ನಡುವೆ ಶ್ರೀ ನಿಟ್ಟೂರು ಶ್ರೀನಿವಾಸರಾಯರ ಮೊಮ್ಮಗ ಶ್ರೀರಘುರಾಮ್ ಅವರು ನಮ್ಮ ಕಾರ್ಖಾನೆಯಲ್ಲಿ ಅಧಿಕಾರಿಯಾಗಿ ಸೇರಿದ್ದರು ಮತ್ತು ನಮ್ಮ ರಾಮಮೂರ್ತಿ ಗೌತಮ ಅವರಿಗೆ ಗೆಳೆಯರು ಸಹ. ಪುಸ್ತಕದ ಬಿಡುಗಡೆ ವಿಚಾರ ತಿಳಿದ ಅವರು ನಮ್ಮ ಹಣಕಾಸಿನ ಬಗ್ಗೆ ಸೂಕ್ಷ್ಮವಾಗಿ ವಿಚಾರಿಸಿದರು. ನಮ್ಮ ಬಡತನ ಮತ್ತು ಕಾರ್ಯಕ್ರಮಗಳಿಗೆ ನಾವು ನಾವೇ ದುಡ್ಡು ಪೂಲ್ ಮಾಡಿ ಹೊಂದಿಸುವುದನ್ನು ಗೌತಮ ಅವರಿಗೆ ಹೇಳಿದರು.(ಇದು ನನ್ನ ಊಹೆ. ಊಹೆ ಯಾಕೆ ಅಂದರೆ ಮುಂದಿನ ಆಗು ಹೋಗು ಇದನ್ನು ಖಚಿತ ಪಡಿಸುತ್ತದೆ.)
ಶ್ರೀ ರಘುರಾಮ್ ಅವರೇ ಕಾರ್ಯಕ್ರಮದ ಅತಿಥಿಗಳನ್ನು ಅವರ ವಾಹನದಲ್ಲಿಯೇ ಕರೆದು ತರುವ ಹೊಣೆ ಸ್ವಯಂ ಪ್ರೇರಿತರಾಗಿ ಹೊತ್ತರು. ಭಾಷಣಕಾರರು ಯಾರೂ ತಮಗೆ ವಾಹನದ ವ್ಯವಸ್ಥೆ ಅದು ಇದು ಎನ್ನುವ ಯೋಚನೆ ಮಾಡಲಿಲ್ಲ (ಇದು ಯಾಕೆ ಹೇಳುತ್ತಾ ಇದೀನಿ ಅಂದರೆ ಮುಂದೆ ನಾವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಇಂತಹ ಬೇಡಿಕೆಗಳು ಸಹಜವಾಗಿ ಬರುತ್ತಿದ್ದವು ಮತ್ತು ಕೆಲವು ನಮ್ಮ ಜೇಬಿನ ಭಾರ ತಡೆಯಲು ಆಗದವು. ಅದರಿಂದ ಬೇರೆ ದಾರಿ ಇಲ್ಲದೇ ಕೆಲವರ ಕೋರಿಕೆ ಮನ್ನಿಸಲಾಗದೇ ಬೇಜಾರಾಗುತ್ತಿತ್ತು. ಸಹಜವಾಗಿ ಕನ್ನಡ ಸಾಹಿತಿಗಳು ಬಡತನ ಹೊತ್ತು ಬಂದವರು ಮತ್ತು ಅವರ ಬಿಡುವಿನ ಸಮಯ). ಇವೆಲ್ಲಕ್ಕಿಂತಲೂ ಮಿಗಿಲಾದದ್ದು ಆಗಿನ ಹಿರಿಯ ಸಾಹಿತಿಗಳು ನನ್ನಂತಹ nobody ಗಳ ಮೇಲೆ ತೋರಿದ ಪ್ರೀತಿ ಮತ್ತು ವಿಶ್ವಾಸ. ಜತೆಗೆ ಅವರು ಭಾಷಣ ತಯಾರಿಸಿಕೊಂಡು ಅದನ್ನು ಪ್ರಸ್ತುತ ಪಡಿಸಿದ ರೀತಿ.
ಕಾರ್ಯಕ್ರಮದ ನಿರೂಪಣೆ ಶ್ರೀ ಮುಳಕುಂಟೆ ಪ್ರಕಾಶ್ ಹೊತ್ತಿದ್ದರು. ಮಿಕ್ಕ ಹಲವು ಹೊಣೆಗಳನ್ನು ಕೃಷ್ಣ, ರಾಮಮೂರ್ತಿ, ಗುಂಡೂರಾವ್, ಸೂರಿ, ಮಹದೇವಪ್ಪ, ಲಲಿತಾ ಅವರು ನಿರ್ವಹಿಸಿದರು. ರೂಪುರೇಷೆ ಎರಡು ಮೂರು ಸಲ ನೋಡಿ ತೀರ್ಮಾನಿಸಿ ಅದು ಪರ್ಫೆಕ್ಟ್ ಎನ್ನುವಂತೆ ಆಗಿತ್ತು.
ತಮಾಷೆ ಮತ್ತು ಮೊದಲನೇ ಅಭಾಸ ಕಾರ್ಯಕ್ರಮ ಆರಂಭದಲ್ಲೇ ಎದುರಾಯ್ತು. ಪ್ರಮುಖ ಭಾಷಣಕಾರ ಶ್ರೀ ಸಾತವಳ್ಳಿ ವೆಂಕಟ ವಿಶ್ವನಾಥ ಗೈರು ಆದರು.
ಶ್ರೀ ನಿಟ್ಟೂರು ಶ್ರೀನಿವಾಸ ರಾಯರು ಪುಸ್ತಕ ಬಿಡುಗಡೆ ಮಾಡಿ ತಮ್ಮ ಸಂತೋಷ ಹಂಚಿಕೊಂಡರು. ಶ್ರೀ ನರಸಿಂಹ ಮೂರ್ತಿ ಪುಸ್ತಕದ ಬಗ್ಗೆ ತುಂಬಾ ಅಂದರೆ ತುಂಬಾ ಒಳ್ಳೆಯ ಮಾತುಗಳನ್ನು ಹೇಳಿದರು. ಹಲವು ಲೇಖಕರ ಕಥಾಸಂಕಲನಗಳು ಇವರ ಮುನ್ನುಡಿಯಿಂದ ಹೊರಬಂದಿವೆ. ತಮಾಷೆ ಎಂದರೆ ಅವರು ಯಾರೂ ಎರಡನೇ ಸಂಕಲನ ತಂದಿಲ್ಲ, ಇವರು ಹಲವು ಸಂಕಲನ ತರುತ್ತಾರೆ ಎನ್ನುವ ನಂಬಿಕೆ ಇದೆ ಅಂದರು. ತಮಾಷೆ ಅಂದರೆ ನಾನು ನನ್ನ ಎರಡನೇ ಕಥಾ ಸಂಕಲನ ಈವರೆಗೂ ತರಲೇ ಇಲ್ಲ. ಅದಕ್ಕಿಂತಲೂ ನೋವಿನ ಸಂಗತಿ ಅಂದರೆ ದತ್ತಿ ನಿಧಿಯಿಂದ ಪುಸ್ತಕ ಪ್ರಕಟಣೆಗೆ ಧನಸಹಾಯ ನೀಡಿದಾಗ ಡಾ. ಲಕ್ಷ್ಮಣ್ ಒಂದು ಮಾತು ಹೇಳಿದ್ದರು “ಮೊದಲ ಪುಸ್ತಕದಲ್ಲಿ ಬರುವ ಲಾಭದಲ್ಲಿ ನೀವು ಮುಂದೆ ನಿಮ್ಮ ಪುಸ್ತಕ ನೀವೇ ಪಬ್ಲಿಷ್ ಮಾಡಬಹುದು…” ಎಂದು. ಕಥಾಸಂಕಲನಕ್ಕೆ ಎಂದು ಫಂಡ್ ಕೊಡುತ್ತಿರುವುದರಿಂದ ಕಥಾಸಾಹಿತ್ಯ ಬೆಳೆಸಲು ಇದು ಪೂರಕ ಎಂದು ನಾನು ಅರ್ಥೈಸಿದ್ದೆ…! ಈ ದೃಷ್ಟಿಯಿಂದಲೂ ಮತ್ತೆ ಮತ್ತೆ ಬರಬೇಕಿದ್ದ ಕಥಾ ಸಂಕಲನಗಳು ಬಂದಿಲ್ಲ ಎನ್ನುವ ನೋವು ಸಹ ಕಾಡಿದೆ!
ಕಥಾ ಕಾರಂಜಿ ಕಾರ್ಯಕ್ರಮದಲ್ಲಿ ಶ್ರೀ ಶರ್ಮಾ ಅವರೊಬ್ಬರೇ ಮಾತಾಡಿದ್ದು. ನನ್ನ ಸಂಕಲನದ ಬಗ್ಗೆ ಸಖತ್ ಜಾಡಿಸಿಬಿಟ್ಟರು! ಎಂಬತ್ತು ವರ್ಷ ಹಿಂದೆ ಮಾಸ್ತಿ ಬರೆದ ಹಾಗೇ ಈಗಲೂ ಬರೆದರೆ ಕತೆಗಳು ಬೆಳೆಯೋದು ಬೇಡವೇ…. ಹೀಗೆ ಅವರ ಭಾಷಣ ಇತ್ತು. ಆರುನೂರು ಪುಸ್ತಕ ಮಾರಿದರಂತೆ….. ಅಂತ ನಕ್ಕರು! ನಮ್ಮ ಗೆಳೆಯ ಸಹೋದ್ಯೋಗಿ ಮತ್ತು ಕನ್ನಡ ಪರಿಚಾರಕ ಶ್ರೀ ಎಂ ಎ ವೆಂಕಟೇಶ್ ಅವರೂ ಜಯನಗರದವರು. ವಾಪಸ್ ಅತಿಥಿಗಳ ಜತೆ ಅದೇ ಕಾರಿನಲ್ಲಿ ವಾಪಸ ಹೋದರು. ಕಾರ್ನಲ್ಲಿ ಶ್ರೀ ಶರ್ಮಾ ಅವರಿಗೂ ಶ್ರೀ ನರಸಿಂಹ ಮೂರ್ತಿ ಅವರಿಗೂ ನನ್ನ ಸಂಕಲನದ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು ಎಂದು ಮಾರನೇ ದಿವಸ ತಿಳಿಸಿದರು. ಪುಸ್ತಕ ಮಾರಾಟ ಆಗಿರುವುದು ಸತ್ಯ ಎಂದು ವೆಂಕಟೇಶ್ ತಿಳಿಸಿದರಂತೆ…
ವಂದನಾರ್ಪಣೆ ಸಮಯ ಬಂತಾ?
ಮುಳಕುಂಟೆ ಪ್ರಕಾಶ್ ಒಬ್ಬೊಬ್ಬರ ಹೆಸರು ಹೇಳುವುದು. ಹೆಸರಿನವರು ಬಂದು ಹಾರ ಹಾಕುವುದು.. ಇದು ಯೋಜಿತ ವ್ಯವಸ್ಥೆ. ಇಳಾ ಮುದ್ರಣಾಲಯದಿಂದ ಶ್ರೀಮತಿ ವಿಜಯ ಅವರೂ ಕಾರ್ಯಕ್ರಮಕ್ಕೆ ಬಂದಿದ್ದರು. ಅವರಿಗೆ ಮಾಲಾರ್ಪಣೆ ಶ್ರೀಮತಿ ಪ್ರಭಾ (ಇದು ನನ್ನ ಬಾಸ್) ಅವರಿಂದ ಆಗಬೇಕು, ನಮ್ಮ ರೂಪು ರೇಷೆ ಪ್ರಕಾರ.
ಮುಳ ಕುಂಟೆ ಪ್ರಕಾಶ್ ಈಗ ಇಳಾ ಮುದ್ರಣಾಲಯದ ಶ್ರೀಮತಿ ವಿಜಯ ಅವರಿಗೆ ಶ್ರೀಮತಿ ಪ್ರಭಾ ಅವರಿಂದ ಮಾಲಾರ್ಪಣೆ ಎಂದು ಅನೌನ್ಸ್ ಮಾಡಿದರು. ತಟಕ್ಕನೆ ಒಂದು ಹುಡುಗಿ ಹಾರ ತೆಗೆದುಕೊಂಡು ಶ್ರೀಮತಿ ವಿಜಯ ಅವರ ಕೊರಳಿಗೆ ಹಾಕಿ ಬಿಟ್ಟಿತು. ಮುಂದೆ ಬಂದ ನನ್ನಾಕೆ ಮುಜುಗರದಿಂದ ಹಿಂದೆ ಸರಿದರು. ಮುಳಕುಂಟೆ ಪ್ರಕಾಶ್ ಮುಖದಲ್ಲಿ ಗೊಂದಲ ಗಲಿಬಿಲಿ ಕಾಣಿಸಿದರೆ ಅದನ್ನು ಮಾಚಿ(ಮಾಚಿ ಅಂದರೆ ಮರೆಸಿ ಅಂತ) ಅವರು ಮುಂದಿನ ಮಾಲಾರ್ಪಣೆಗೆ ಮುಂದಾದರು.
ಲಲಿತಾ ಅವರ ಬಂಧು ಒಬ್ಬರಿಗೆ ಈ ಹಾರಹಾಕುವ ಕೆಲಸ ಒಪ್ಪಿಸಿ ಅದನ್ನು ನಿರೂಪಕರಿಗೆ ಲಲಿತಾ ಅವರು ತಿಳಿಸಿರಲಿಲ್ಲ. ಅದರಿಂದ ಈ ಅಭಾಸ ಆಯಿತು ಎಂದು ನಂತರ ತಿಳಿಯಿತು!

ಇದರ ಎಫೆಕ್ಟ್ ಸುಮಾರು ದಿವಸ ಸುಮಾರು ಕಡೆ ಆಯಿತು ಅಂತ ಬೇರೆ ಹೇಳಬೇಕಿಲ್ಲ. ಅದರದ್ದೇ ಒಂದು ಪುರಾಣ…. ಪುಸ್ತಕ ಮಾರಾಟದ ವಿಕ್ರಮ ಮತ್ತು ಅದರಿಂದ ಉಂಟಾದ ಮುಜುಗರಗಳು, ಪುಸ್ತಕದ ಸಂಬಂಧ ಕರ್ನಾಟಕ ಸರ್ಕಾರದ ಮೇಲೆ ಕೇಸ್ ಹಾಕಿದ್ದು….. ಹೀಗೆ ಹತ್ತು ಹಲವು ನೆನಪುಗಳು ತಲೆ ತುಂಬಾ ತುಂಬಾ ತುಂಬಾ ತುಂಬುತ್ತಿವೆ…
ಇದನ್ನು ಸರಿಯಾಗಿ ಜೋಡಿಸಿ ನಿಮಗೆ ಒಂದೊಂದನ್ನೇ ಹೇಳಬೇಕು ಸರ, ಮೇಡಮ್ಮೊರಾ… ಅಲ್ಲಿ ತನಕ ಕೊಂಚ ಸಮಯ ಕೊಡ್ರಾಲಾ…..
ಇನ್ನೂ ಉಂಟು….

ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
