Advertisement
ಬದುಕಿನ ರಾಗದ ಅವರೋಹಣ – ವೃದ್ಧಾಪ್ಯವೆಂಬ ಜೀವನಪದವಿ!: ಡಾ. ಎಲ್.ಜಿ. ಮೀರಾ ಅಂಕಣ

ಬದುಕಿನ ರಾಗದ ಅವರೋಹಣ – ವೃದ್ಧಾಪ್ಯವೆಂಬ ಜೀವನಪದವಿ!: ಡಾ. ಎಲ್.ಜಿ. ಮೀರಾ ಅಂಕಣ

ಸಾಮಾನ್ಯವಾಗಿ, ಬದುಕಿನ ಈ ಹಂತದ ಸಕಾರಾತ್ಮಕ ಚಿತ್ರಣವು ಅದೃಶ್ಯವಾಗಿರುತ್ತೆ ಅಥವಾ ನಕಾರಾತ್ಮಕವಾಗಿರುತ್ತೆ. ಇದರಿಂದಾಗಿ ಈ ಜೀವನದ ಬಗ್ಗೆ ಯೋಜನೆ, ಯೋಚನೆ, ಪೂರ್ವಚಿಂತನೆಗಳು ಸರಿಯಾಗಿ ನಡೆಯುವುದಿಲ್ಲ. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿ ಆದ ಅದ್ಭುತ ಮುನ್ನಡೆಗಳಿಂದಾಗಿ ಮಾರಾಣಾಂತಿಕ ರೋಗಗಳಿಂದ ಮನುಕುಲವು ಮುಕ್ತಿ ಪಡೆದುಕೊಂಡು, ಮನುಷ್ಯನ ಸರಾಸರಿ ಆಯುಸ್ಸು ಹೆಚ್ಚಿ, ತಮ್ಮ 60ನೇ ವಯಸ್ಸಿನಲ್ಲಿ ವೃತ್ತಿಯಿಂದ ನಿವೃತ್ತಿಗೊಂಡ ಮೇಲೂ ಜನರು ಸುಮಾರು 20ರಿಂದ 40 ವರ್ಷಗಳ ತನಕ ಬದುಕುತ್ತಾರೆ. ಹೀಗಾಗಿ ನಾವು ಬದುಕಿನ ರಾಗದ ಅವರೋಹಣ ಅಂದರೆ ವೃದ್ಧಾಪ್ಯದ ಹಂತದ ಜೀವನದ ಬಗ್ಗೆ ಅರಿವುಳ್ಳವರಾಗಬೇಕೆಂದು ಅನ್ನಿಸುತ್ತದೆ.
ಡಾ.
ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತನೆಯ ಬರಹ

ನಿವೃತ್ತಿಯ ನಂತರದ ಬದುಕು ಹಾಗೂ ಬಾಳಿನ ಇಳಿಸಂಜೆಯ ಬಗೆಗೆ ಒಂದಿಷ್ಟು ಚಿಂತನೆ

ಪ್ರಸ್ತುತದಲ್ಲಿ ಯೌವನಪ್ರಿಯ ಸಮಾಜ ಮತ್ತು ಸಂಸ್ಕೃತಿಗಳು ನಮ್ಮವು. ಹೀಗಾಗಿ ಬಾಲ್ಯ, ವಿದ್ಯಾಭ್ಯಾಸ, ಯೌವನ, ವೃತ್ತಿ, ಮದುವೆ, ಮಕ್ಕಳ ದೇಖರೇಖಿ ಮುಂತಾದ ಬದುಕಿನ ರಾಗದ ಆರೋಹಣ ಅಂದರೆ ಊರ್ಧ್ವಮುಖಿ ಜೀವನಘಟನೆಗಳಿಗೆ, ಹಂತಗಳಿಗೆ ಇರುವ ಪ್ರಾಮುಖ್ಯವು, ನಿವೃತ್ತಿ, ವೃದ್ಧಾಪ್ಯ, ಜೀವಿತದ ಕೊನೆಯ ವರ್ಷಗಳು ಮುಂತಾದ ಅವರೋಹಣದ ಘಟನೆಗಳಿಗೆ ಇಲ್ಲ. ಆದರೆ ಬದುಕೆಂಬುದು ಭೌತವಿಜ್ಞಾನದವರು ಹೇಳುವ `ಜ್ಯಾ’ದ (`ಸೈನ್ ಅಲೆ’ – Sine wಂve) ಅಂದರೆ, ಒಂದು ಶಿಖರವಿರುವ ಮಣ್ಣಿನ ದಿಬ್ಬದ ಆಕಾರದ್ದು. ಅದು ಒಂದು ಬಿಂದುವಿನಲ್ಲಿ (ಅಂದರೆ ಮನುಷ್ಯನ ಹುಟ್ಟಿನಲ್ಲಿ) ಪ್ರಾರಂಭವಾಗಿ, ಮೇಲೆ ಹೋಗುತ್ತಾ ಹೋಗುತ್ತಾ ಶಿಖರ ಮುಟ್ಟಿ, ಮುಂದೆ (ಅಂದರೆ ಮಧ್ಯವಯಸ್ಸಿನಲ್ಲಿ) ಕೆಳಗೆ ಇಳಿಯಲು ಪ್ರಾರಂಭಿಸುತ್ತದೆ, ಹಾಗೂ ಒಂದು ಬಿಂದುವಿನಲ್ಲಿ (ಅಂದರೆ ಮನುಷ್ಯನ ಸಾವಿನಲ್ಲಿ) ಮುಕ್ತಾಯಗೊಳ್ಳುತ್ತದೆ. ಆದರೆ ಏಕೋ ಏನೋ, ಜೀವನದ ಆರೋಹಣದ ಬಗೆಗಿರುವ ಉಲ್ಲಾಸ, ಉತ್ಸಾಹಗಳು ನಮ್ಮ ಸಂಸ್ಕೃತಿಯಲ್ಲಿ ಅವರೋಹಣದ ಬಗೆಗೆ ಇಲ್ಲ. ಆದರೆ ಬದುಕಿನ ಹಾಡಿಗೆ ಆರೋಹಣ, ಅವರೋಹಣ ಎರಡೂ ಮುಖ್ಯ ಅಲ್ಲವೆ? ಈ ವಿಷಯದಲ್ಲಿ ನಾವು ಗಮನಿಸಬಹುದಾದ ಸಂಗತಿಗಳನ್ನು ಒಂದೊಂದಾಗಿ ಈ ಕೆಳಗೆ ಬರೆಯುತ್ತಿದ್ದೇನೆ.

ಮಾಗುವಿಕೆ ಮತ್ತು ಅಂತ್ಯದ ಸ್ವೀಕೃತಿ

`ನಾವು ಯಾವಾಗಲೂ ಹೀಗೆ ಕೇವಲ `ಆರೋಹಣಗಮನಿ’ಗಳಾಗಿದ್ದೆವೇನು?’ ಎಂದು ಕೇಳಿಕೊಂಡರೆ ಇಲ್ಲ, ಹಾಗಿರಲಿಲ್ಲ ನಾವು. ಐವತ್ತು ವರ್ಷಗಳ ಹಿಂದೆ ಸಹ ಅಂದರೆ ಜಾಗತೀಕರಣಕ್ಕೆ ಮುಂಚೆ, ಮಧ್ಯವಯಸ್ಸು, ಬಿಳಿಗೂದಲು, ವೃದ್ಧಾಪ್ಯಗಳ ಬಗ್ಗೆ ಇಂತಹ ಸಾಮುದಾಯಿಕ ಮರೆವು ಅಥವಾ ತಿರಸ್ಕಾರ ಇರಲಿಲ್ಲ. `ವಾನಪ್ರಸ್ಥಾಶ್ರಮ’ ಎಂಬ ಪರಿಕಲ್ಪನೆಯು ಬಹಳ ಜನಜನಿತವಾಗಿದ್ದ ಕಾಲವೂ ನಮ್ಮಲ್ಲಿತ್ತಲ್ಲವೆ? (ವಾನಪ್ರಸ್ಥಾಶ್ರಮ – `ಬಾಲ್ಯ, ಬ್ರಹ್ಮಚರ್ಯ, ಗ್ರಹಸ್ಥಾಶ್ರಮದ ನಂತರ ಕಾಡಿಗೆ ತೆರಳಿ ಮೋಕ್ಷಚಿಂತನೆಯನ್ನು ನಡೆಸುವುದು, ಶಾಂತಿಯುತವಾಗಿ ಭಗವಂತನ ಪಾದ ಸೇರಿಕೊಳ್ಳುವುದು’ ಎಂಬ ಚಿಂತನೆ – ಹಿಂದೂ ವೈದಿಕ ಶಾಸ್ತ್ರ-ಪುರಾಣಗಳಲ್ಲಿ ಸಾಕಷ್ಟು ಚರ್ಚಿತವಾಗಿರುವ ವಿಷಯವಿದು).

`ರೈಪ್‌ನೆಸ್ ಈಸ್ ಆಲ್’ (ಮಾಗುವಿಕೆಯೇ ಎಲ್ಲ) – ಇದು ಶೇಕ್ಸ್‌ಪಿಯರ್ ಮಹಾಶಯನ `ಕಿಂಗ್ ಲಿಯರ್’ ದುರಂತ ನಾಟಕದ ಅಂಕ 5, ದೃಶ್ಯ 2 ರಲ್ಲಿ ಎಡ್ಗರ್ ಎಂಬ ಪಾತ್ರವು ಹೇಳುವ ಮಾತು. ಇದರ ಅರ್ಥವೇನೆಂದರೆ ಮರದಲ್ಲಿನ ಹಣ್ಣು ತಾನು ಸಂಪೂರ್ಣ ಮಾಗಿದಾಗ ತೊಟ್ಟು ಕಳಚಿ ಬೀಳಲು ತಯಾರಾದಂತೆ ಮನುಷ್ಯನು ತನ್ನ ಸಾವಿಗೆ ತಯಾರಾಗಬೇಕು. ಈ ಉಕ್ತಿಯನ್ನು ನಮ್ಮ ಕನ್ನಡ ಸಾಹಿತ್ಯದ ನವ್ಯ ಚಳುವಳಿಯ ಲೇಖಕರು ಸಾಕಷ್ಟು ಸಲ ಉಲ್ಲೇಖಿಸಿ ಚರ್ಚಿಸಿದ್ದಾರೆ. ಮರದಲ್ಲಿನ ಪೀಚುಕಾಯಿಯು ಮಾಗುತ್ತಾ ಬರುತ್ತಿದ್ದಂತೆ ತನ್ನ ಕಹಿ, ಹುಳಿಗಳನ್ನು ಕಳೆದುಕೊಂಡು ಸಿಹಿಯಾದ ಹಣ್ಣಾಗುವಂತೆ ಮನುಷ್ಯನು ಕೂಡ ವಯಸ್ಸಾಗುತ್ತಾ ಹೋದಂತೆ `ತನ್ನ ಸಣ್ಣತನ, ಅವಿವೇಕ, ದುಡುಕುಗಳನ್ನು ಕಳೆದುಕೊಂಡು ಹಿತಕರವಾದ, ಗೌರವಾರ್ಹವಾದ, ಘನತೆಯುಳ್ಳ ವ್ಯಕ್ತಿತ್ವವನ್ನು ಗಳಿಸಬೇಕು, ಹಾಗೂ ಸಮಯ ಬಂದಾಗ ಗಾಂಭೀರ್ಯ-ಸಂಯಮಗಳೊಂದಿಗೆ ತೊಟ್ಟು ಕಳಚಿ ಬಿದ್ದು ಅನಂತವನ್ನು ಸೇರಬೇಕು’ ಎಂಬ ಚಿಂತನೆ ಇದು.

`ವಯಸ್ಸಾಗುವುದು ಅಂದರೆ ಜೀವನದಲ್ಲಿ ಮಾಗುವುದು’ ಎಂಬ ಈ ಗೃಹೀತವು ನಮ್ಮ ದೇಶದ ಸಂಸ್ಕೃತಿಯಲ್ಲಿ ಕೂಡ ಹಿಂದೆ ತುಂಬ ಬಲವಾಗಿತ್ತು. ಹಳ್ಳಿಯ ಹಿರಿಯರು ಅಂದರೆ `ಸಾವಿರ ಗಾದೆಗಳನ್ನು ಬಲ್ಲವರು’, `ಮನೆಯಲ್ಲಿ ಕಷ್ಟ, ತೊಂದರೆಗಳು ಬಂದಾಗ ವಯಸ್ಸಾದ ಅಜ್ಜಿ, ತಾತ, ಅತ್ತೆ, ಮಾವ ಮುಂತಾದವರನ್ನು ಕೇಳಿದರೆ ಏನೋ ಒಂದು ಪರಿಹಾರ ಸಿಗುತ್ತದೆ, ತುಂಬ ಜೀವನಾನುಭವ ಇರುವ ಅವರು ನಮಗೆ ಏನಾದರೂ ದಾರಿ-ದಿಕ್ಕು ತೋರಿಸುತ್ತಾರೆ’ ಎಂಬ ನಂಬಿಕೆ ಇತ್ತು. ಈ ದೃಷ್ಟಿಯಿಂದ ಬಿಳಿತಲೆಯವರಿಗೆ ಮನೆಯಲ್ಲಿ, ಮತ್ತು ಒಟ್ಟು ಸಮಾಜದಲ್ಲಿ ವಿಶೇಷವಾದ ಸ್ಥಾನಮಾನ, ಗೌರವಗಳಿದ್ದವು. ಹಿಂದಿ ಭಾಷೆಯಲ್ಲಿ “ಏ ಬಾಲ್ ಧೂಪ್ ಮೆ ನಹಿಂ ಪಕೆ’’ ಎಂಬ ಒಂದು ಮಾತಿದೆ. `ಈ ಕೂದಲುಗಳು ಬಿಸಿಲಲ್ಲಿ ಬೆಂದಿಲ್ಲ, ಇವು ಬೆಂದಿದ್ದು ಜೀವನದ ಕಷ್ಟ ಸುಖಗಳನ್ನು ಅನುಭವಿಸಿ’ ಎಂಬ ಅರ್ಥ ಬರುವ ಜಾಣ್ಣುಡಿ ಇದು. ಅಂದರೆ ಜೀವನಾನುಭವದಿಂದ ನೊಂದು ಬೆಂದು ಬಿಳಿಗೂದಲನ್ನು `ಗಳಿಸಿದ್ದು’ ಎಂಬ ಒಂದು ಹೆಮ್ಮೆಯ ಭಾವ ಇಲ್ಲಿ ತೋರುತ್ತದೆ. ಈ ಹೆಮ್ಮೆಯು ಸಮರ್ಥನೀಯ ಎಂದು ನನ್ನ ಅನಿಸಿಕೆ. ನಾವು ನಮ್ಮ ಶೈಕ್ಷಣಿಕ ಪದವಿಗಳು, ರ‍್ಯಾಂಕು-ಪುರಸ್ಕಾರಗಳ ಬಗ್ಗೆ ಹಮ್ಮೆ ಪಡುವಂತೆ, `ವೃದ್ಧಾಪ್ಯ’ ಎಂಬ ಜೀವನಪದವಿಯ ಬಗೆಗೂ ಹೆಮ್ಮೆ ಪಡಬೇಕಲ್ಲವೆ? ಬದುಕು ಮತ್ತು ಕಾಲ ನಮಗೆ ಕೊಟ್ಟ ಗಾಯ, ಹೊಡೆತಗಳನ್ನು ನಾವು ಎದುರಿಸಿದ ರೀತಿ ಹಾಗೂ ನಮ್ಮ ದೇಹಗಳಲ್ಲಿ ಅದು ಉಳಿಸಿದ ಗಾಯ, ಕಲೆ, ಗುರುತುಗಳನ್ನು ಸುಮ್ಮಾನದಿಂದ ಧರಿಸಬೇಕಲ್ಲವೆ? ವೀರರು ಯುದ್ಧದಲ್ಲಿ ತಮಗೆ ಆದ ಗಾಯಗಳನ್ನು ಒಡವೆಗಳೆಂದು ಭಾವಿಸಿ ಎದೆಯುಬ್ಬಿ ಧರಿಸುವಂತೆ?

ಆದರೆ `ಈಗ, ಈ ಕೊಳ್ಳುಬಾಕ ಯುಗದಲ್ಲಿ ಮಾಗುವುದರ ಬಗ್ಗೆ ಹೆಮ್ಮೆ ಇದೆಯೇ? ಬಿಳಿಗೂದಲನ್ನು ಹೊಂದಿರುವುದರ ಬಗ್ಗೆ ಎಷ್ಟು ಜನ ಇಂದು ಗರ್ವಿಸಬಲ್ಲರು?’ ಎಂಬ ಪ್ರಶ್ನೆಗಳನ್ನು ನಾವು ಕೇಳಿಕೊಂಡರೆ ನಮಗೆ ಸಿಗುವ ಉತ್ತರ ನಿರಾಶಾದಾಯಕ. `ಸದಾ ಮಾರುತ್ತಿರು – ಬೇಕೊ ಬೇಡವೊ ಒಟ್ಟಿನಲ್ಲಿ ಕೊಳ್ಳುತ್ತಿರು’ ಅನ್ನುವ ಸಂಸ್ಕೃತಿಯಲ್ಲಿ ವೃದ್ಧಾಪ್ಯಕ್ಕೆ ಮಾರುಕಟ್ಟೆಮೌಲ್ಯ ಇಲ್ಲ. ಹೀಗಾಗಿ ಪರದೆಯ ಮೇಲೆ (ಜಾಣ ದೂರವಾಣಿ, ಗಣಕಯಂತ್ರದ ಪರದೆಗಳು) ಬೆರಳು ಜಾರಿಸುವ ಸಂಸ್ಕೃತಿಗೆ ಸಲ್ಲಲಿಕ್ಕಾಗಿ, ಇಲ್ಲದ ಯೌವನವನ್ನು ಹೇಗಾದರೂ ಆವಾಹಿಸಿಕೊಳ್ಳಲೇಬೇಕಾದ ಒತ್ತಡವು ಬಹುತೇಕರ ಮೇಲೆ ಉಂಟಾಗುತ್ತದೆ. ಅದಕ್ಕೇ ಅಲ್ಲವೆ ಮಾರುಕಟ್ಟೆಯ ತುಂಬ ಕೂದಲನ್ನು ಕಪ್ಪಾಗಿಸುವ ಬಣ್ಣಗಳು ಮತ್ತು ವಯಸ್ಸನ್ನು ಧಿಕ್ಕರಿಸುವ ಲೇಪನಗಳು (ಏಜ್ ಡಿಫೈಯಿಂಗ್ ಕ್ರೀಮ್ಸ್) ಅಂಗಡಿಗಳ ಕಪಾಟುಗಳಲ್ಲಿ ಗಿಡಿದು ಗಿಡಿದು ಇಡಲ್ಪಟ್ಟಿರುವುದು!?

ಒಟ್ಟು ಸಮಾಜ, ಸಂಸ್ಕೃತಿ, ಅದರ ಪ್ರತಿಬಿಂಬ-ಗತಿಬಿಂಬಗಳಾದ ಮಾಧ್ಯಮಗಳಲ್ಲಿ ವೃದ್ಯಾಪ್ಯ ಅಂದರೆ ಬಾಳಿನ ಇಳಿಸಂಜೆಯ ಬಗ್ಗೆ ಉತ್ಸಾಹ ಇಲ್ಲದಿರುವುದರಿಂದ, ಸಾಮಾನ್ಯವಾಗಿ, ಬದುಕಿನ ಈ ಹಂತದ ಸಕಾರಾತ್ಮಕ ಚಿತ್ರಣವು ಅದೃಶ್ಯವಾಗಿರುತ್ತೆ ಅಥವಾ ನಕಾರಾತ್ಮಕವಾಗಿರುತ್ತೆ. ಇದರಿಂದಾಗಿ ಈ ಜೀವನದ ಬಗ್ಗೆ ಯೋಜನೆ, ಯೋಚನೆ, ಪೂರ್ವಚಿಂತನೆಗಳು ಸರಿಯಾಗಿ ನಡೆಯುವುದಿಲ್ಲ. ಆದರೆ, ವೈದ್ಯಕೀಯ ಕ್ಷೇತ್ರದಲ್ಲಿ ಆದ ಅದ್ಭುತ ಮುನ್ನಡೆಗಳಿಂದಾಗಿ ಮಾರಾಣಾಂತಿಕ ರೋಗಗಳಿಂದ ಮನುಕುಲವು ಮುಕ್ತಿ ಪಡೆದುಕೊಂಡು, ಮನುಷ್ಯನ ಸರಾಸರಿ ಆಯುಸ್ಸು ಹೆಚ್ಚಿ, ತಮ್ಮ 60ನೇ ವಯಸ್ಸಿನಲ್ಲಿ ವೃತ್ತಿಯಿಂದ ನಿವೃತ್ತಿಗೊಂಡ ಮೇಲೂ ಜನರು ಸುಮಾರು 20ರಿಂದ 40 ವರ್ಷಗಳ ತನಕ ಬದುಕುತ್ತಾರೆ. ಹೀಗಾಗಿ ನಾವು ಬದುಕಿನ ರಾಗದ ಅವರೋಹಣ ಅಂದರೆ ವೃದ್ಧಾಪ್ಯದ ಹಂತದ ಜೀವನದ ಬಗ್ಗೆ ಅರಿವುಳ್ಳವರಾಗಬೇಕೆಂದು ಅನ್ನಿಸುತ್ತದೆ.

ಡೆತ್ ಕ್ಲೀನಿಂಗ್ ಎಂಬ ಪರಿಕಲ್ಪನೆ ಹಾಗೂ ಉಯಿಲು (ಮರಣಶಾಸನ) ಲೇಖನ

ಕೆಲವು ಯುರೋಪಿಯನ್ ದೇಶಗಳಲ್ಲಿ `ಡೆತ್ ಕ್ಲೀನಿಂಗ್’ ಅನ್ನುವ ಪರಿಕಲ್ಪನೆ ಇದೆಯಂತೆ: ಕನ್ನಡದಲ್ಲಿ `ಮರಣಸಂಬಂಧೀ ಶುಚಿಗೊಳಿಸುವಿಕೆ’ ಅನ್ನಬಹುದೇನೊ ನಾವು. ಸ್ವೀಡನ್ ದೇಶದ ಲೇಖಕಿ ಮಾರ್ಗರೇಟಾ ಮಾಗ್ನುಸನ್ ಅವರು 2017ರಲ್ಲಿ ಬರೆದ ತಮ್ಮ ಪುಸ್ತಕ `ದ ಜೆಂಟ್‌ಲ್ ಆರ್ಟ್ ಆಫ್ ಸ್ವೀಡಿಷ್ ಡೆತ್ ಕ್ಲೀನಿಂಗ್: ಹೌ ಟು ಫ್ರೀ ಯುವರ್‌ಸೆಲ್ಫ್ ಅಂಡ್ ಯುವರ್ ಫ್ಯಾಮಿಲಿ ಫ್ರಂ ಎ ಲೈಫ್‌ಟೈಮ್ ಆಫ್ ಕ್ಲಟ್ಟರ್’ದಲ್ಲಿ ವಿವರಿಸಿರುವ ಪರಿಕಲ್ಪನೆ ಇದು. `ಡೆತ್ ಕ್ಲೀನಿಂಗ್’ ಎಂಬ ಅಭ್ಯಾಸವನ್ನು ಅವರು, `ಜೀವನದ ಅಂತ್ಯವನ್ನು ಕುರಿತು ಅಸ್ವಸ್ಥ-ವಿಕಾರ ಭಾವನೆ (ಮಾರ್ಬಿಡ್ ಎಂಬ ಅರ್ಥದಲ್ಲಿ) ಇಟ್ಟುಕೊಳ್ಳುವ ಬದಲು ಉದಾತ್ತ ಅನುಕಂಪೆಯ, ಸುವಿಚಾರಪೂರ್ಣ ನಿಲುವನ್ನು ಹೊಂದಿರಬೇಕು’ ಎಂಬುದನ್ನು ವಿವರಿಸುವಾಗ ಮುನ್ನೆಲೆಗೆ ತಂದರು (ಅಂದ ಹಾಗೆ ಅವರು ಇದೇ ಮಾರ್ಚ್ 12 ರಂದು ತಮ್ಮ 91ನೆಯ ವಯಸ್ಸಿನಲ್ಲಿ ತೀರಿಕೊಂಡರು, ತೀರಿಕೊಂಡಾಗ ಅವರು ಇದ್ದಂತಹ ಮನೆಯ ಅಟ್ಟ ಶುಚಿಯಾಗಿ, ಖಾಲಿಯಾಗಿ ಇತ್ತಂತೆ).

ತಮ್ಮ ವಸ್ತುಗಳು, ಸ್ವತ್ತುಗಳು, ಸಂಗ್ರಹಗಳು ಮುಂತಾದವುಗಳನ್ನು ಮುಂಬರಲಿರುವ ತಮ್ಮ ಸಾವನ್ನು ನೆನೆದು ವಿತರಣೆ ಮಾಡುತ್ತಾ ಹಾಗೂ ಬೇಡ ಅನ್ನಿಸಿದ್ದನ್ನು ಎಸೆಯುತ್ತಾ ಹೋಗುವ ಕೆಲಸವೇ ಮರಣಸಂಬಂಧೀ ಶುಚಿಗೊಳಿಸುವಿಕೆ – ಡೆತ್ ಕ್ಲೀನಿಂಗ್. ಬಾಲ್ಯದಿಂದ ಮಧ್ಯವಯಸ್ಸು ಅಥವಾ ನಿವೃತ್ತಿಯ ತನಕ ನಾವು ಮನುಷ್ಯರು ಸಂಗ್ರಹಿಸಿಕೊಳ್ಳುವ ವಸ್ತುಗಳಿಗೆ ಮಿತಿ ಎಂಬುದಿರುವುದಿಲ್ಲ. ಅಕ್ಷರಶಃ ಮತ್ತು ರೂಪಕಾತ್ಮಕವಾಗಿ ಅನೇಕ ರೀತಿಯ ಆಟಿಕೆಗಳನ್ನು ನಾವು ಸಂಗ್ರಹಿಸುತ್ತೇವೆ. ಮನೆಯುಪಕರಣಗಳು, ಒಡವೆಗಳು, ಉಡುಪುಗಳು, ಪಾದರಕ್ಷೆಗಳು, ವಾಹನಗಳು, ನಿವೇಶನಗಳು, ವಿಮೆ ದಾಖಲೆಗಳು, ಹಣಹೂಡಿಕೆಯ ಒಡಂಬಡಿಕೆಗಳು, ಖಾಯಿಶ್ ಇದ್ದವರು ಸಂಗ್ರಹಿಸುವ ಪುಸ್ತಕಗಳು, ಸಂಗೀತವಾದ್ಯಗಳು, ನಾಣ್ಯಗಳು, ಚಿತ್ರಗಳು, ಶಿಲ್ಪಗಳು, ಇನ್ನೂ ಹೇಳಬೇಕೆಂದರೆ ಮುದ್ದು ಪ್ರಾಣಿಗಳು, ಈಗಿನ ಕಾಲದಲ್ಲಿ ಗಣಕಯಂತ್ರ, ಜಂಗಮವಾಣಿಗಳಂತಹ ವಿದ್ಯುನ್ಮಾನ ಯಂತ್ರಗಳು(ಗ್ಯಾಡ್ಜೆಟ್ಸ್ ಎಂಬ ಅರ್ಥದಲ್ಲಿ)…….. ಓಹ್ ಕೊನೆಮೊದಲಿಲ್ಲದ ಪಟ್ಟಿ ಇದು! ನಾವು ಬದುಕಿರುವ ತನಕ ಇವು ನಮಗೆ ಬಹು ಮುಖ್ಯವಾಗಿರಬಹುದು, ನಾವು ಅವುಗಳನ್ನು ಜೀವದಂತೆ ಕಾಯಬಹುದು, ಇವುಗಳಿಗೆ ಸಾಕಷ್ಟು ಹಣ ಖರ್ಚು ಮಾಡಿ ತನ್ಮೂಲಕ ಸಂತೋಷ ಕಾಣಬಹುದು. ಆದರೆ ನಮ್ಮ ಕಾಲ ಮುಗಿದ ನಂತರ ಈ ವಸ್ತುಗಳಲ್ಲಿ ಅನೇಕವು ನಮ್ಮ ಮುಂದಿನ ಪೀಳಿಗೆಯವರಿಗೆ ವ್ಯರ್ಥ ಅನ್ನಿಸಬಹುದು! ಬೇಡದ ತಲೆನೋವು ಅನ್ನಿಸಬಹುದು!! ಉದಾಹರಣೆಗೆ ಸಾಹಿತ್ಯವೋ, ತತ್ವಜ್ಞಾನವೋ, ಇತಿಹಾಸವೋ ಮುಂತಾದ ಯಾವುದಾದರೂ ವಿಷಯಕ್ಕೆ ಸಂಬಂಧಿಸಿದ ಅನೇಕ, ಅಮೂಲ್ಯ, ಅಪರೂಪದ ಪುಸ್ತಕಗಳು ಆ ಜ್ಞಾನಶಿಸ್ತುಗಳಲ್ಲಿ ಅಭಿರುಚಿ ಇರುವವರಿಗೆ ಬಹಳ ಮುಖ್ಯವೆನ್ನಿಸಿದರೂ ಅದರಲ್ಲಿ ಅಭಿರುಚಿ ಇಲ್ಲದವರಿಗೆ ಅವು ರದ್ದಿ ಅನ್ನಿಸುತ್ತವೆ! ಸೀರೆಗಳು, ಒಂದು ಅವಧಿಯ ವಿಶಿಷ್ಟಶೈಲಿಯ ಉಡುಪುಗಳಿಗೂ ಈ ಮಾತು ಅನ್ವಯಿಸುತ್ತದೆ. ಕೆಲವರಿಗೆ ಇವು ಪ್ರಾಣಪ್ರಿಯವಾದರೆ ಇನ್ನು ಕೆಲವರಿಗೆ ಅದರಲ್ಲೂ ಇಂತಹ ಅಭಿರುಚಿ ಇಲ್ಲದ ನಂತರದ ಪೀಳಿಗೆಯವರಿಗೆ ಬೇಡದ ಕಸ!

ಈ ವಿಷಯದಲ್ಲಿ ಇನ್ನೊಂದು ಗಂಭೀರ ಸಮಸ್ಯೆ ಇರುತ್ತದೆ. ಒಂದು ವೇಳೆ ಬ್ಯಾಂಕ್ ದಾಖಲೆಗಳು, ಆಸ್ತಿ ಪತ್ರಗಳು, ವಿಮೆಯ ದಾಸ್ತಾವೇಜುಗಳು ಮುಂತಾದವುಗಳ ಬಗ್ಗೆ ಮನೆಯವರಿಗೆ ವಿವರವಾಗಿ ತಿಳಿಸಿಕೊಡದೆ, ನಾಮನಿರ್ದೇಶನ ಪತ್ರಗಳನ್ನು ತಯಾರಿಸದೆ, ತಮ್ಮ ಪರಿಷ್ಕೃತ ಅತ್ಯಾಧುನಿಕ ವಿದ್ಯುನ್ಮಾನ ಉಪಕರಣಗಳಿಗೆ ಕೊಟ್ಟಿರುವಂತಹ ಪ್ರವೇಶಪದ(ಪಾಸ್‌ವರ್ಡ್)ಗಳನ್ನು ತಮ್ಮ ವಾರಸುದಾರರಿಗೆ ತಿಳಿಯುವಂತೆ ಬರೆದಿಡದೆ ಹಿರಿಯರೊಬ್ಬರು ಕಾಲವಾದರೆ, ಆನಂತರ ಅವರ ಮಕ್ಕಳ ಅಥವಾ ವಾರಸುದಾರರ ಪಾಡು ಹೇಳತೀರದು. ಆಸ್ತಿ ನೋಂದಣಿ ಮಾಡುವ ಉಪನೋಂದಣಾಧಿಕರಿಗಳ ಕಛೇರಿಗಳಲ್ಲಿ, ಬ್ಯಾಂಕುಗಳಲ್ಲಿ ಆ ಕಿರಿಯರು ವಿಪರೀತ ಕಷ್ಟ ಪಡಬೇಕಾಗುತ್ತದೆ. ಅದಕ್ಕೇ ನೋಡಿ, ಬ್ಯಾಂಕುಗಳ `ಅಮಾನತ್ತು ಜಮೆಯ ಖಾತೆ(ಸಸ್ಪೆನ್ಸ್ ಅಕೌಂಟ್)ಗಳಲ್ಲಿ, ವಿಮಾ ಕಛೇರಿಗಳಲ್ಲಿ ಹೇಳುವವರು ಕೇಳುವವರು ಇಲ್ಲದೆ ಕೋಟ್ಯಾಂತರ ಮೌಲ್ಯದ ಹಣ ಬಿದ್ದಿರುತ್ತದಂತೆ1 ಹೀಗೆ `ತಿಂದಂಗಲ್ಲ, ಉಂಡಂಗಲ್ಲ’ ಎಂಬ ಗ್ರಾಮೀಣ ನಾಣ್ಣುಡಿಯಂತೆ. ಆ ಹಿರಿಯರ ಸ್ವಯಾರ್ಜಿತವೋ, ಪಿತ್ರಾರ್ಜಿತವೋ ಒಟ್ಟಾರೆ ಅವರ ಸ್ವತ್ತು ಅವರ ಪ್ರೀತಿಪಾತ್ರರಿಗೇ ಇಲ್ಲದೆ ಹೋಗುತ್ತದೆ! ಬದುಕಿರುವಾಗ ತಮ್ಮ ಮನೆಮಂದಿಯನ್ನು, ಪ್ರೀತಿಪಾತ್ರರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುವ ಹಿರಿಯರು ತಮ್ಮ ಕಾಲ ಮುಗಿದ ನಂತರವೂ ಅವರಿಗೆ ತೊಂದರೆ ಆಗದಂತೆ ಕಾಳಜಿ ವಹಿಸಬೇಕಲ್ಲವೆ? ಆದರೆ ಈ ಬಗ್ಗೆ ಯೋಚಿಸುವವರು ಕಡಿಮೆ. ಬಹುಶಃ ಮಹಾಭಾರತದ ಯುಧಿಷ್ಠಿರನು ಯಕ್ಷಪ್ರಶ್ನೆಗೆ ಉತ್ತರಿಸುವಾಗ ಹೇಳಿದಂತೆ “ದಿನಾಲೂ ತಮ್ಮ ಸುತ್ತಮುತ್ತ ಜನರು ಸಾಯುವುದನ್ನು ನೋಡುತ್ತಿದ್ದರೂ ತಾನು ಸಾಯುವುದೇ ಇಲ್ಲ, ಸಾವಿರಾರು ವರ್ಷ ಬದುಕಿರುತ್ತೇನೆ” ಎಂದು ಮನುಷ್ಯರು ಭ್ರಮಿಸುವುದೇ ಈ ಭೂಮಿಯ ಮೇಲಿನ ಅತಿ ದೊಡ್ಡ ವಿಚಿತ್ರ ಸಂಗತಿಯಿರಬಹುದು! ಒಟ್ಟಿನಲ್ಲಿ ಸಾವನ್ನು, ಬದುಕಿನ ಅಂತ್ಯವನ್ನು ಕುರಿತ ಮನುಷ್ಯರ `ವಿಸ್ಮೃತಿ’ಯು ಅವರ ನಂತರದ ಪೀಳಿಗೆಯವರಿಗೆ ಸಾಕಷ್ಟು ತೊಂದರೆ ಕೊಡುವುದಂತೂ ನಿಜ.

ನಿವೃತ್ತರ ಬಗೆಗಿನ ನಕಾರಾತ್ಮಕ ದೃಷ್ಟಿಕೋನ 

ಮೇಲೆ ವಿವರಿಸಿದ `ವಿಸ್ಮೃತಿ’ಯಿಂದಾಗಿ ವೃತ್ತಿನಿವೃತ್ತಿಯನ್ನು ಸ್ವಾಗತಿಸುವ ಮನಃಸ್ಥಿತಿ, ಯೋಜಿಸುವ ಅಚ್ಚುಕಟ್ಟುತನ ನಮ್ಮ ಜೀವನಕ್ರಮದಲ್ಲಿ ಕಡಿಮೆ. ನಿವೃತ್ತರನ್ನು, ವೃದ್ಧರನ್ನು ಸಮಾಜದ ಉತ್ಪಾದನಾ ನೆಲೆಗೆ ಬೇಡದವರೆಂದು ನೋಡುವ ದೃಷ್ಟಿಕೋನ ಇರುತ್ತದೆ. ನಿವೃತ್ತಿಯ ನಂತರದ ಮಾನವ ಸಂಬಂಧಗಳು ಬದಲಾಗುತ್ತವೆ. ಹೊಸದಾಗಿ ನಿವೃತ್ತರಾದ ತಮ್ಮ ಗಂಡನಿಗೆ ಅವರ ಹೆಂಡತಿಯು “ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 1.00 ಗಂಟೆಯವರೆಗೆ ನೀವು ಮನೆಯಲ್ಲಿರಬೇಡಿ, ಅದು ನನ್ನ ವಿಶ್ರಾಂತಿ ಸಮಯ, ನೀವು ಕೆಲಸಕ್ಕೆ ಹೋಗ್ತಾ ಇದ್ದಾಗ ನಂಗೆ ಆ ಹೊತ್ತಲ್ಲಿ ಮಲಗಿ ಅಭ್ಯಾಸ ಆಗಿದೆ, ಆಗ ನೀವು ಮನೆಯಲ್ಲಿದ್ರೆ ನಂಗೆ ತೊಂದರೆ ಅನ್ಸುತ್ತೆ” ಎಂದರಂತೆ! ಈಗ ಆ ಸದ್ಯೋನಿವೃತ್ತ ಹಿರಿಯರು ತಮ್ಮ ಹೆಂಡತಿಯ `ವಿಶ್ರಾಂತಿ ಸಮಯ’ದಲ್ಲಿ ಉದ್ಯಾನವನಗಳಲ್ಲೋ, ಸ್ನೇಹಿತರ ಮನೆಗಳಲ್ಲೋ ಸಮಯ ಕಳೆಯುತ್ತಾರೆ! ದಶಕಗಳ ಕಾಲ ಜೊತೆಗೆ ಜೀವಿಸಿದ ಜೀವನಸಂಗಾತಿಯದ್ದೇ ಈ ಮನಃಸ್ಥಿತಿ ಆಗಿದ್ದಾಗ ನಿವೃತ್ತರ ಬಗೆಗೆ ಸಮಾಜದ ದೃಷ್ಟಿಕೋನದ ಬಗ್ಗೆ ಏನು ಹೇಳೋಣ!!

ನಿವೃತ್ತರ ಬಗೆಗೆ ಮಕ್ಕಳ ದೃಷ್ಟಿಕೋನ 

ಅಮಿತಾಭ್ ಬಚ್ಚನ್ – ಹೇಮಾ ಮಾಲಿನಿ ನಟಿಸಿದ `ಭಾಗ್‌ಬನ್’ ಎಂಬ ಹಿಂದಿ ಸಿನಿಮಾವನ್ನು ಈ ಲೇಖನದ ಓದುಗರಲ್ಲಿ ಕೆಲವರು ನೋಡಿರಬಹುದು. ಇದೇ ಸಿನಿಮಾವನ್ನು ಕನ್ನಡದಲ್ಲಿ ವಿಷ್ಣುವರ್ಧನ್ ಹಾಗೂ ಜಯಪ್ರದಾ ಅವರ ಅಭಿನಯದಲ್ಲಿ `ಈ ಬಂಧನ’ ಎಂಬ ಹೆಸರಿನಲ್ಲಿ ಮರುನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ತನ್ನ ವೃತ್ತಿಜೀವನವಿಡೀ ಒಂದು ಸಣ್ಣ ಉದ್ಯೋಗದಲ್ಲಿ ದುಡಿದು, ಸಿನಿಮಾ ಪ್ರಾರಂಭವಾಗುವಾಗ ಆ ಉದ್ಯೋಗದಿಂದ ನಿವೃತ್ತರಾದ ಒಬ್ಬ ಹಿರಿಯರು, ಹಾಗೂ ಅವರಿಗೆ ಬಹಳ ಅನುಕೂಲೆಯಾಗಿದ್ದು ಅವನನ್ನು ಹೃದಯಕ್ಕೆ ಹಚ್ಚಿಕೊಂಡಿದ್ದ ಅವರ ಹೆಂಡತಿ ಪ್ರಧಾನಪಾತ್ರಗಳಲ್ಲಿರುತ್ತಾರೆ. ಸ್ವಂತ ಮನೆ ಅಥವಾ ಹೇಳಿಕೊಳ್ಳುವಂತಹ ನಿವೃತ್ತಿಲಾಭಗಳು ಇಲ್ಲದ ಸನ್ನಿವೇಶ ಆ ವೃದ್ಧರದು. `ತಂದೆ-ತಾಯಿಯರು ಇನ್ನು ಮುಂದೆ ಆರ್ಥಿಕವಾಗಿ ಸಬಲರಾಗಿರುವುದಿಲ್ಲ, ಅವರು ತಮಗೆ ಭಾರವಾಗುತ್ತಾರೆ’ ಎಂಬುದನ್ನು ಗ್ರಹಿಸಿದ ಅವರ ಮಕ್ಕಳು, ತಂದೆಯನ್ನೊಬ್ಬರು, ತಾಯಿಯನ್ನೊಬ್ಬರು, ಬೇರೆ ಬೇರೆ ಊರುಗಳಲ್ಲಿದ್ದ ತಮ್ಮ ತಮ್ಮ ಮನೆಗಳಿಗೆ ಕರೆದುಕೊಂಡು ಹೋಗುವ ನಿರ್ಧಾರ ಮಾಡುತ್ತಾರೆ. ಈಗ ವಯಸ್ಸಾಗಿರುವ, ಆದರೆ ದಶಕದಶಕಗಳ ಕಾಲ ಒಟ್ಟಿಗೆ ಸಂತೋಷವಾಗಿ ಜೀವನ ಮಾಡಿದ ತಮ್ಮ ತಂದೆತಾಯಿಯರನ್ನು ತಾವು ಹೀಗೆ ಬೇರೆ ಬೇರೆ ಇರಿಸಿದರೆ, ಬಾಳಿನ ಇಳಿಸಂಜೆಯ ಜೀವಗಳ ಗತಿ ಏನಾಗಬೇಕು ಎಂಬ ಯೋಚನೆಯು ಆ ಮಕ್ಕಳ ವ್ಯಾವಹಾರಿಕ ಬುದ್ಧಿಗೆ ಬರುವುದಿಲ್ಲ. ತಮ್ಮನ್ನು ಪ್ರೀತಿಯಿಂದ ಸಾಕಿದ ತಂದೆತಾಯಂದಿರ ಬಗ್ಗೆ ಅವರ ಮಕ್ಕಳು ಹೀಗೆ ಅಸೂಕ್ಷ್ಮಗೊಳ್ಳುವುದು ಇಂದು ನಾವು ಅನೇಕ ಕಡೆ ಗಮನಿಸುವ ಸಂಗತಿಯಾಗಿದೆ.

ಒಟ್ಟಿನಲ್ಲಿ ನಿವೃತ್ತ ಜೀವನ ಹಾಗೂ ವೃದ್ಧಾಪ್ಯದ ಬಗೆಗೆ ಹೊಸ ಹಾಗೂ ಸಕಾರಾತ್ಮಕ ರೀತಿಯಲ್ಲಿ ಸ್ವತಃ ಹಿರಿಯರು ಹಾಗೂ ಅವರ ಸಂಬಂಧಿಕರು ಮತ್ತು ಒಟ್ಟು ಸಮಾಜಗಳು ಆಲೋಚಿಸುವ ಕಾಲ ಬಂದಿದೆ ಅನ್ನಿಸುತ್ತಿದೆ.

About The Author

ಡಾ. ಎಲ್.ಜಿ. ಮೀರಾ

ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ  ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ