ಮನೆ ಭಾಗವಾದಾಗ ಮಧ್ಯಕ್ಕೆ ಪೂರ್ತಿ ಗೋಡೆ ಕಟ್ಟದೆ ಅಟ್ಟದವರೆಗೆ ಮಾತ್ರ ಕಟ್ಟಿದ್ದರಿಂದ ಅಟ್ಟ ಎಲ್ಲರಿಗೂ ಒಂದೆ ಇತ್ತು ಹಾಗಾಗಿ ಪಕ್ಕದ ಮನೆಯಲ್ಲಿ ಮಾತಾಡುವುದೆಲ್ಲ ಪಕ್ಕದಲ್ಲೆ ಮಾತಾಡಿದಷ್ಟು ಸ್ಪಷ್ಟವಾಗೆ ಕೇಳುತ್ತಿತ್ತು. ಸಾವಿ ನಿದ್ದೆ ಬಾರದೆ ಗಂಡನನ್ನು ಹೇಗಾದರು ಮಾಡಿ ಸೂಳೆ ಸಹವಾಸ ಬಿಡಿಸಿ ನನ್ನ ಕಡೆ ಸೆಳೆಯಬೇಕೆಂದು ಯೋಚಿಸುತ್ತಿದ್ದಳು. ಪಕ್ಕದ ಮನೆಯಲ್ಲಿ ಮಾವ ಅಕ್ಕಂದಿರು ತನ್ನ ಗಂಡನ ಬಗ್ಗೆ ಪಿಸುಗುಡುವುದು ಗೊತ್ತಾಗುತಿತ್ತು. ಸಾವಿತ್ರಿ ತನಗರಿವಿಲ್ಲದೆ ಶೋಕಿಸುತ್ತ ಮಗಳು ಕನಕಳನ್ನು ತಬ್ಬಿ ಕಣ್ಣು ಮಿಟುಕಿಸಿದಾಗ ಕಣ್ತುಂಬಿದ್ದ ಅಶ್ರು ದಳದಳನೆ ಇಳಿದು ಎಣ್ಣೆ ಜಿಡ್ಡು ಮೆತ್ತಿ ಕೊಳಕಾಗಿದ್ದ ತಲೆದಿಂಬು ಸಹ ಅದನ್ನು ಹೀರದೆ ಕೆಳಕ್ಕೆ ಹರಿದವು.
ನಗೋಲತೆ ಬರೆದ “ಬೆದ್ಲು ಬದ್ಕು” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ
“ನಿಮಿಗೇನ್ ಒಂದ್ ಎಳ್ ಕಾಳೋಷ್ಟರ ಜವಾಬ್ದಾರಿ ಇಲ್ಲ ವಯಸ್ಸಿಗೆ ಬಂದ್ ಮಗುಳ್ನ ಇನ್ನು ಮನೆಗೆ ಇಟ್ಕಂಡಿದಿರಲ್ಲ. ನನಗಿಂತ ಸಣ್ಣುಡ್ರಿಗೆಲ್ಲ ಮದ್ವೆ ಆಗ್ತೈತಿ. ನನ್ನುನ್ ನೋಡಕ್ ಒಂದೇ ಒಂದ್ ಗಂಡ್ ಕರ್ಕಂಡ್ ಬಂದಿಲ್ಲ ಇನ್ನೂ. ಇಲ್ಲೇ ನಿಮ್ಮ ಚಾಕ್ರಿ ಮಾಡ್ಕೆಂದು ಬಿದ್ದಿರ್ಲಿ ಅಂತನೇನು ನೀವು” ಎಂದು ಅಪ್ಪ ಅವ್ವನಿಗೆ ಮೂದಲಿಸಿ ಜಗಳವಾಡುತಿದ್ದುದನ್ನು ನೆನೆದು ತೊಡೆಯ ಮೇಲೆ ಪವಡಿಸಿದ್ದ ಹೆಣ್ಣು ಕೂಸಿನ ಮೇಲೆ ಗೊತ್ತಿಲ್ಲದೆ ಕಣ್ಣೀರು ಹನಿಕಿಸುತ್ತ ಅಂತರ್ಮುಖಿಯಾಗಿದ್ದಾಳೆ ಸಾವಿತ್ರಿ.
ಇನ್ನೊಂದು ಮೂರು ಮೂರುವರೆ ವರ್ಷದ ಕೂಸು ಹಿತ್ತಲ ಬಾಗಿಲಿನ ಪಕ್ಕದಲ್ಲಿ ಗುಡ್ಡದಂತೆ ಒಟ್ಟಿದ್ದ ಮೈಲಿಗೆ ಬಟ್ಟೆಯ ಸಂಧಿಯಲ್ಲಿ ತೋಟದ ಕಡೆಯಿಂದ ಬಂದು ಸರಸದಲ್ಲಿದ್ದ ಎರಡು ಕಪ್ಪೆಗಳನ್ನು ಕೈಯಲ್ಲೇ ಹಿಡಿದು ತಾಯಿಗೆ ತೋರಿಸಲೆಂದು ಮನೆಯೊಳಗೆ ತಂದು “ಅಮ್ಮ ಇಲ್ಲಿ ನೋಡು ಕಪ್ಪೆ, ಎರೆಡು ಜಗಳ ಆಡ್ತಿದ್ವು ಅದಿಕ್ಕೆ ಜಗಳ ಬಿಡಿಸಿ ಎತ್ಕೆಂಬಂದೆ” ಎಂದು “ಹಿ ಹಿ ಹಿ” ಎಂದು ಕಿಸಿಯುತ್ತಿದ್ದ ಆ ಹುಡುಗಿಗೆ ತಾಯಿಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಮತ್ತೆ “ಅಮ್ಮಾ….” ಎಂದಳು ಎಳೆ ಕೈಯಿಂದೊಮ್ಮೆ ಸ್ಪರ್ಶಿಸಿ. ಮೈ ಜಲಕಿಸಿ ಎಚ್ಚರಗೊಂಡ ಸಾವಿ ತನ್ನ ದುಖ: ಮಗಳಿಗೆ ತಿಳಿಯಬಾರದೆಂದು ಸೆರಗಿನಲ್ಲಿ ಮುಖ ತಿಕ್ಕಿಕೊಂಡು “ಏನಮ್ಮಾ ಕನಕ ?” ಎಂದಾಗ ಕೈಲಿದ್ದ ಎರಡು ಕಪ್ಪೆಗಳನ್ನು ಮುಂಚಾಚಿ ತೋರಿದಳು. ಕೊರಗಿ ಮಂಕಾಗಿದ್ದ ಮುಖವನ್ನು ಕಿವುಚಿ “ಶೀ….. ಬಿಸಾಕಮ್ಮ ಹಂಗೆಲ್ಲ ಹಿಡಿತಾರೇನೆ ಬರಿಗೈಲಿ” ಅಂದು ಬಿಸಾಕಲೇಳಿ ಈ ದಿನವಾದರು ತನ್ನ ಗಂಡ ಮನೆಗೆ ಬರಬಹುದು ಬೇಗ ಅಡಿಗೆ ಮಾಡೋಣವೆಂದು ತೊಡೆ ಮೇಲಿದ್ದ ಕೂಸನ್ನ ಬಿದಿರ ತೊಟ್ಟಿಲಿಗೆ ಹಾಕಿ ಒಲೆಯ ಕಡೆ ಸಾರಿದಳು.
ಆ ಮನೆ, ಅದೊಂದು ಸಣ್ಣ ಕೆಂಪು ಹಂಚಿನ ಕೋಣೆ ಅದಕ್ಕೆ ಅಂಟಿಕೊಂಡೆ ಚಿಕ್ಕ ಅಡಿಗೆ ಮನೆ ಅದರಲ್ಲೆ ಕೈಬಚ್ಚಲು ಒಂದು ಊಡೊಲೆ ಮತ್ತೆ ಹೇಳುವಂತದ್ದೇನು ಇಲ್ಲ. ಸಾವಿತ್ರಿ ಮದುವೆಯಾಗಿ ಬಂದಾಗ ದೊಡ್ಡದಿತ್ತು. ಬರುಬರುತ್ತಾ ಗಂಡ ಮತ್ತೆ ಗಂಡನ ಅಣ್ಣಂದಿರಿಬ್ಬರು ತಂದೆಯ ಎಲ್ಲ ಆಸ್ತಿಯನ್ನು ಪಾಲು ಮಾಡಿಕೊಂಡಾಗ ಅದೇ ಮನೆಯನ್ನು ಮೂರು ಭಾಗ ಮಾಡಿ ಹಂಚಿಕೊಂಡಿದ್ದರಿಂದ ಇವರ ಪಾಲಿಗೆ ಬಂದ ಮನೆಯ ಭಾಗ ತೀರ ಸಣ್ಣದಾಗಿತ್ತು.
ಆದರೆ ಆ ಉಳ್ಳಾಗಡ್ಡಿ ಹೊನ್ನೂರುನಲ್ಲಿ ಬಹುತೇಕ ಮನೆಗಳ ಪಾಡು ಇದೇ ಆಗಿದ್ದರಿಂದ ಮೊದಮೊದಲು ಸಣ್ಣದಾಗಿ ತೋರುತ್ತಿದ್ದ ಗುಡಿಸಲು ಈಗ ವಾಸಿಸಲು ತೊಂದರೆ ಇಲ್ಲದ ಮನೆಯಾಗಿದೆ. ಮುಂಚೆಯಿಂದಲು ಬಹಳ ಈರುಳ್ಳಿ ಬೆಳೆಯುತ್ತಿದ್ದರಿಂದ ಹೊನ್ನೂರಿಗೆ ಉಳ್ಳಾಗಡ್ಡಿ ಎಂದು ಹೆಸರು ಜೋಡಿಯಾಗಿತಂತೆ. ಸಣ್ಣ ಗ್ರಾಮ, ಊರ ಮಧ್ಯದಲ್ಲೆ ಬಸ್ ಸ್ಟಾಪ್ ಅದರೆದುರು ಗ್ರಾಮ ಪಂಚಾಯತಿ, ಪೊಲೀಸ್ ಠಾಣೆ, ಪೋಸ್ಟ್ ಆಫೀಸ್ ಮೂರೂ ಒಂದೇ ಸೂರಿನಡಿ ಇದ್ದವು. ಇವುಗಳ ಪಕ್ಕದಲ್ಲಿ ಸರಕಾರಿ ಪ್ರಾಥಮಿಕ ಶಾಲೆ. ಊರಿಂದ ಸ್ವಲ್ಪ ದೂರದಲ್ಲಿ ಒಂದು ದನದಾಸ್ಪತ್ರೆಯೂ ಇದೆ ಸುತ್ತಲ ನಾಲ್ಕು ಹಳ್ಳಿಗೂ ಉಪಕಾರವಾಗುವಂತೆ. ಊರ ಹೆದ್ದಾರಿಯಲ್ಲಿ ಬೆಳಗ್ಗೆ ಒಂದು ಬಸ್ಸು ಬಿಟ್ಟರೆ ಸಂಜೆ ಒಂದು ಬಸ್ಸು ಮಾತ್ರ ಓಡಾಡುತ್ತಿದ್ದದ್ದು ಇದು ಬಿಟ್ಟರೆ ಮೂರ್ನಾಲ್ಕು ಪುಟ್ಟ ಗುಡಿಗಳು, ಐದಾರು ಒಣಗಿದ ಬಾವಿಗಳು, ಒಂದು ಕೆರೆಯೂ ಇದೆ, ಆದರೆ ಅದರಲ್ಲೂ ನೀರು ಮಾತ್ರ ಎಂದೆಂದೂ ಇರುವುದಿಲ್ಲ ಸದಾ ಹಸಿರು ಬೆಳೆದಿರುತ್ತದೆ. ದನಗಾಯಿಗಳು, ಕುರುಬರೆಲ್ಲ ಅದರಲ್ಲೆ ತಮ್ಮ ಜಾನುವಾರುಗಳನ್ನೆಲ್ಲಾ ಮೇಯಿಸುತ್ತಿರುತ್ತಾರೆ. ಆ ಊರಿನ ಜನ ಬಸ್ಸಿನಲ್ಲಿ ಓಡಾಡುವುದಕ್ಕಿಂತ ಪಕ್ಕದ ಊರಿನಲ್ಲಿದ್ದ ರೈಲ್ವೆ ಮಾರ್ಗವನ್ನೇ ಹೆಚ್ಚು ಬಳಸುತ್ತಿದ್ದರು. ಹಂಗಾಗಿ ಸಂಪರ್ಕಕ್ಕೇನು ತೊಡಕು ಕಾಣುತ್ತಿರಲಿಲ್ಲ..
ಸಾವಿಮನೆ ಊರಿನ ಪೂರ‍್ವದ ಸೆರಗಿನಲ್ಲಿದ್ದು ಮನೆಯ ಹಿಂದೆಯೇ ಒಂದು ಎಕರೆ ತೆಂಗಿನ ತೋಟ. ಹೊರಗಿನಿಂದ ನೋಡಲು ಒಂದೇ ಮನೆಯಂತೆ ಕಂಡರೂ ಅದರಲ್ಲಿ ಮೂರು ಮನೆಗಳಿವೆ. ದೂರದಿಂದ ನೋಡಿದವರಿಗೆ ಅಡಿಗೆ ಕೋಣೆಗಳಿಂದ ಏಳುವ ಹೊಗೆ ಮನೆಯ ಹಂಚಿಗೆ ಮೋಡ ಹತ್ತಿದ ಹಾಗೆ ಕಾಣುತ್ತದೆ. ಸಾವಿಯ ಮಾವ ಸತ್ತು ಮಕ್ಕಳು ಆಸ್ತಿ ಪಾಲು ಮಾಡಿಕೊಂಡಾಗ ಒಬ್ಬೊಬ್ಬರಿಗೆ ಎರಡು ಎಕರೆ ಬೆದ್ದಲು ಹಾಗು ಮನೆ ಹಿಂದೆ ಇರುವ ತೆಂಗಿನ ತೋಟದಲ್ಲಿ ತಲಾ ಇಪ್ಪತ್ಮೂರು ಮರಗಳು ದೊರಕಿದ್ದವು. ತಮ್ಮ ಸುಬ್ಬನನ್ನು ಕಂಡರೆ ಹಿರೆ ಅಣ್ಣನಿಗೂ, ಕಿರೆ ಅಣ್ಣನಿಗೂ ಮೊದಲಿನಿಂದ ತಾತ್ಸಾರ. ಅವನೇನು ದುಡಿಮೆ ಮಾಡದೇ ಹಣ ಹಾಳು ಮಾಡುವುದೆ ಇದಕ್ಕೆ ಕಾರಣ. ಇದೇ ಕಾರಣದಿಂದಲೇ ಜಗಳವಾಡಿ ಭಾಗ ಮಾಡಿಕೊಂಡಿದ್ದು.
ಒಂದು ವಾರದಿಂದ ಬರದೇ ಸೂಳೆಯ ಮನೆಯಲ್ಲೇ ಟಿಕಾಣಿ ಊಡಿದ್ದ ಗಂಡ ಇವತ್ತು ಬರಬಹುದೆಂಬ ಭ್ರಮೆಯಲ್ಲಿ ಉಣ್ಣದೆ ಕಾಯುತ್ತಿದ್ದ ಸಾವಿಗೆ ಸಮಯ ಜರುಗಿದಂತೆಲ್ಲ ಆಸೆ ಕರಗಿ ಮಕ್ಕಳಿಗೆ ಅನ್ನಕ್ಕೆ ಕೊಂಚ ಹೆಸರಾಕಿ ಕಲಸಿ ಮೆದ್ದಿ ಹಸಿವು ನೀಗಿಸಿ ತಾನು ಒಂದಿಷ್ಟು ತಿಂದು ಉಳಿದ ಅನ್ನವನ್ನು ನಾಯಿಗಾಕಲೆಂದು ಮನೆಯ ಹಿಂದೆ ಹೋಗಿ “ಹುಲಿಯಾ ಬಾ…” ಎಂದು ಕೂಗಿದೊಡನೆ ತೋಟದಲ್ಲಿ ಬೆಳೆದು ನಿಂತಿದ್ದ ಕಾಂಗ್ರೆಸ್ ಗಿಡಗಂಟೆಗಳ ನಡುವೆ ಇಲಿ ಹೆಗ್ಗಣಗಳ ಶೋಧನೆಯಲ್ಲಿದ್ದ ಹುಲಿಯಾ ಚಂಗನೆ ನೆಗೆದು ಹಾರಿ ಚಿರತೆಯ ವೇಗದಲ್ಲಿ, ಬಾಲ ಅಲ್ಲಾಡಿಸುತ್ತ ಸಾವಿಯ ಎದುರು ಹಾಜರಿದ್ದ. ಹೆಸರಿಗೆ ತಕ್ಕ ಹುಲಿಯ ಬಲು ಧೈರ್ಯವಂತ. ಅನ್ನಕ್ಕೆ ಸಾರಾಕಿ ಕಲಸಿ ಕಲ್ಲಿನ ಮೇಲಾಕಿದಳು. ಸಾವಿಯ ಹಿರಿಯ ಕೂಸು ಕನಕ ಹುಲಿಯನ ತಲೆ ಸವರುತ್ತ ಅದು ತಿನ್ನುವುದನ್ನೇ ನೋಡುತ್ತಿದ್ದಳು.
ತೋಟದಲ್ಲೆಲ್ಲ ನೀರವ ಕತ್ತಲು. ಮನೆಯ ಹಿಂದಿದ್ದ ನೂರು ವ್ಯಾಟ್ ಬಲ್ಬಿನ ಬೆಳಕಿನ ಪ್ರಖರತೆಗೆ ಹತ್ತಿರವಿದ್ದ ಒಂದೆರಡು ಮರಗಳ ಬುಡ ಕಾಣುತಿದ್ದವು ಅದನ್ನು ಹೊರತು ಮತ್ತೇನು ಇಲ್ಲ. ಕನಕ ಒಮ್ಮೆ ತಲೆ ಎತ್ತಿ ನೋಡಿದಳು. ಭಯವಾಗಿ ಅಮ್ಮ ತನ್ನ ಹಿಂದೆ ಇರುವಳೆಂದು ಹಿಂದೆ ನೋಡಿದರೆ ಇರಲಿಲ್ಲ! ಒಮ್ಮೆ ಜೀವ ಬಾಯಿಗೆ ಬಂದಂತಾಯ್ತು, ಆದರು ಹುಲಿಯಾ ಇರುವನಲ್ಲ ಎಂಬ ಧೈರ್ಯ. ಗೂಬೆ ಕೂಗಿದ ಸದ್ದಿಗೆ ಆ ಧೈರ್ಯವೂ ಮಾಯವಾಗಿ ಒಳಗೆ ಓಡಿದಳು. ಆಗಲೇ ತಂಗಿ ನಿಧಿ ತೊಟ್ಟಿಲಲ್ಲಿ ಮಲಗಿದ್ದಾಳೆ. ಅಮ್ಮ ಸಾವಿತ್ರಿ ಮಂಕಾಗಿ ಕಡ್ಡಿ ಚಾಪೆ ಹಾಕಿ ಮಲಗಲು ಹಾಸುತ್ತಿದ್ದಾಳೆ. ಹುಲಿಯ ಹೊರಗೆ ಹಾಕಿದ್ದ ಅನ್ನ ತಿಂದು ಹಿತ್ತಲ ಬಾಗಿಲಿನಿಂದಲೇ ನೆಲ ಮೂಸುತ್ತಾ ಒಳಗೆ ಬಂದುದ್ದನ್ನು ನೋಡಿ ಸಾವಿ “ಹಚ್ಚ ಹಚ್ಚ” ಎಂದು ಗದರಲು ಹಿಂದಿನಿಂದಲೇ ಮತ್ತೆ ತೋಟದ ಪೊದೆಗಳ ನಡುವೆ ಕಾಣದಾಯಿತು.
ಹಿತ್ತಲ ಬಾಗಿಲಾಕಲೆಂದು ಹೋಗುತ್ತಿದ್ದ ಸಾವಿಯ ಹಿಂದೆ ಹೋಗಿ ನಿಂತ ಕನಕ ಅವಳಮ್ಮನ ಸೆರಗ ಜಗ್ಗಿ “ಉಚ್ಚೆ ಒಯ್ಬೇಕು ಕರ್ಕಂಡೋಗು” ಎಂದಳು. ಬಚ್ಚಲು ಪಾಯಿಖಾನೆ ಇಲ್ಲದ ಮನೆಯಾದ್ದರಿಂದ ಬಾಗಿಲು ತೆಗೆದು ನೂರಡಿ ತೋಟದ ಕಡೆ ಹೋಗಿ ತಾಯಿ ಮಗಳು ಇಬ್ಬರು ಪೊದೆಗಳ ನಡುವೆ ಕೂತು ಮೂತ್ರ ವಿಸರ್ಜನೆ ಮಾಡಿ ಒಳ ನಡೆದು ಬಾಗಿಲ ಅಗಳಿ ಹಾಕಿ ಅರವತ್ತು ವ್ಯಾಟ್‌ನ ಬಲ್ಬನ್ನು ಕಳುಬಿ ಆಗ ತಾನೆ ಬಳಕೆಗೆ ಬಂದ ಪ್ಲಾಸ್ಟಿಕ್ ಚಾಪೆಯ ಮೇಲೆ ಉರುಳಿದರು.
ಮನೆ ಭಾಗವಾದಾಗ ಮಧ್ಯಕ್ಕೆ ಪೂರ್ತಿ ಗೋಡೆ ಕಟ್ಟದೆ ಅಟ್ಟದವರೆಗೆ ಮಾತ್ರ ಕಟ್ಟಿದ್ದರಿಂದ ಅಟ್ಟ ಎಲ್ಲರಿಗೂ ಒಂದೆ ಇತ್ತು ಹಾಗಾಗಿ ಪಕ್ಕದ ಮನೆಯಲ್ಲಿ ಮಾತಾಡುವುದೆಲ್ಲ ಪಕ್ಕದಲ್ಲೆ ಮಾತಾಡಿದಷ್ಟು ಸ್ಪಷ್ಟವಾಗೆ ಕೇಳುತ್ತಿತ್ತು. ಸಾವಿ ನಿದ್ದೆ ಬಾರದೆ ಗಂಡನನ್ನು ಹೇಗಾದರು ಮಾಡಿ ಸೂಳೆ ಸಹವಾಸ ಬಿಡಿಸಿ ನನ್ನ ಕಡೆ ಸೆಳೆಯಬೇಕೆಂದು ಯೋಚಿಸುತ್ತಿದ್ದಳು. ಪಕ್ಕದ ಮನೆಯಲ್ಲಿ ಮಾವ ಅಕ್ಕಂದಿರು ತನ್ನ ಗಂಡನ ಬಗ್ಗೆ ಪಿಸುಗುಡುವುದು ಗೊತ್ತಾಗುತಿತ್ತು. ಸಾವಿತ್ರಿ ತನಗರಿವಿಲ್ಲದೆ ಶೋಕಿಸುತ್ತ ಮಗಳು ಕನಕಳನ್ನು ತಬ್ಬಿ ಕಣ್ಣು ಮಿಟುಕಿಸಿದಾಗ ಕಣ್ತುಂಬಿದ್ದ ಅಶ್ರು ದಳದಳನೆ ಇಳಿದು ಎಣ್ಣೆ ಜಿಡ್ಡು ಮೆತ್ತಿ ಕೊಳಕಾಗಿದ್ದ ತಲೆದಿಂಬು ಸಹ ಅದನ್ನು ಹೀರದೆ ಕೆಳಕ್ಕೆ ಹರಿದವು. ತೋಟದ ಕಡೆಯಿಂದ ಜೋರಾಗಿ ಬೀಸುವ ಗಾಳಿ ಹಂಚಿನ ಮಧ್ಯೆ ತೂರುವಾಗ “ಶಿಳ್” ಎಂಬ ಶಬ್ದ, ತೆಂಗಿನ ಗರಿಗಳು ಒಂದಕ್ಕೊಂದು ಬಡಿಯುತ್ತಿರುವ “ಪಟಪಟ” ಸದ್ದು, ನಾಯಿಗಳ ಊಳು ಇದ್ಯಾವುದರ ಅರಿವಿಲ್ಲದೆ ಅಂತರ್ಮುಖಿಯಾಗಿದ್ದ ಸಾವಿ ನಿದ್ರಾವಶಳಾದಳು.
ಬೆಳಗ್ಗೆ ಪಕ್ಕದ ಮನೆಯ ಹಿರಿಮಾವನ ಮನೆಯಲ್ಲಿ ಸಾಕಿದ್ದ ಕೋಳಿಗಳು ಬಿದಿರ ಜಲ್ಲೆಯನ್ನು ಎತ್ತಿದ್ದೆ ತಡ ನಾಮುಂದು ತಾಮುಂದು ಎಂದು ಹಾರಿ ಓಡಿ ಜಿಗಿದು ಆಹಾರ ಶೋಧನೆಗೆ ಶುರುಇಟ್ಟವು. ಹಿಂದೆ ತೊಳೆಯದೆ ಬಿಟ್ಟಿದ್ದ ಪಾತ್ರೆಗಳಲ್ಲಿ ಉಳಿದಿದ್ದ ಮುದ್ದೆಯ ಸೀಕು ಅನ್ನದಗುಳ ತಿನ್ನುತ್ತಾ “ಕೊಕೊಕೋ ಕೋ” ಎಂದು ಕೂಗುತಿದ್ದವು. ನೇಸರನ ಎಳೆ ಬಿಸಿಲಿಗೆ ತೆಂಗಿನ ಮರಗಳ ನೆರಳು ಮನೆಯ ಮೇಲೆ ಬಿದ್ದು ಇನ್ನು ಹೊತ್ತಾಗಿಲ್ಲ ಎಂಬಂತೆ ಒಳಗಿದ್ದವರಿಗೆ ಅನ್ನಿಸುವಂತಿತ್ತು.
ಆ ಉಳ್ಳಾಗಡ್ಡಿ ಹೊನ್ನೂರುನಲ್ಲಿ ಬಹುತೇಕ ಮನೆಗಳ ಪಾಡು ಇದೇ ಆಗಿದ್ದರಿಂದ ಮೊದಮೊದಲು ಸಣ್ಣದಾಗಿ ತೋರುತ್ತಿದ್ದ ಗುಡಿಸಲು ಈಗ ವಾಸಿಸಲು ತೊಂದರೆ ಇಲ್ಲದ ಮನೆಯಾಗಿದೆ. ಮುಂಚೆಯಿಂದಲು ಬಹಳ ಈರುಳ್ಳಿ ಬೆಳೆಯುತ್ತಿದ್ದರಿಂದ ಹೊನ್ನೂರಿಗೆ ಉಳ್ಳಾಗಡ್ಡಿ ಎಂದು ಹೆಸರು ಜೋಡಿಯಾಗಿತಂತೆ. ಸಣ್ಣ ಗ್ರಾಮ, ಊರ ಮಧ್ಯದಲ್ಲೆ ಬಸ್ ಸ್ಟಾಪ್ ಅದರೆದುರು ಗ್ರಾಮ ಪಂಚಾಯತಿ, ಪೊಲೀಸ್ ಠಾಣೆ, ಪೋಸ್ಟ್ ಆಫೀಸ್ ಮೂರೂ ಒಂದೇ ಸೂರಿನಡಿ ಇದ್ದವು. ಇವುಗಳ ಪಕ್ಕದಲ್ಲಿ ಸರಕಾರಿ ಪ್ರಾಥಮಿಕ ಶಾಲೆ. ಊರಿಂದ ಸ್ವಲ್ಪ ದೂರದಲ್ಲಿ ಒಂದು ದನದಾಸ್ಪತ್ರೆಯೂ ಇದೆ ಸುತ್ತಲ ನಾಲ್ಕು ಹಳ್ಳಿಗೂ ಉಪಕಾರವಾಗುವಂತೆ.
ಮೂರು ಮನೆಗಳಲ್ಲಿ ಮೊದಲು ಏಳುತ್ತಿದ್ದವನೇ ಹಿರಿ ಅಣ್ಣ ಹನುಮಂತ. ಬೆಳ್ಳಂಬೆಳ್ಳಗೆಯೇ ಹೋಗಿ ತನ್ನ ಮರಗಳದ್ದಲ್ಲದೆ ತಮ್ಮಂದಿರ ಮರಗಳ ಕೆಳಗೆ ಬಿದ್ದಿರುವ ತೆಂಗಿನಕಾಯಿ ಗರಿಗಳನೆಲ್ಲ ಕದ್ದು ಯಾರಿಗೂ ಗೊತ್ತಾಗದಂತೆ ತಂದಿಟ್ಟುಕೊಳ್ಳುತ್ತಿದ್ದ. ನಂತರ ಆ ವಿಷಯ ಉಳಿದೆರಡು ಮನೆಯವರಿಗೆ ಗೊತ್ತಾಗಿ ಜಗಳವಾದಾಗಿನಿಂದ ತನ್ನ ೨೩ ಮರಗಳದ್ದಷ್ಟೇ ತರುತ್ತಿದ್ದಾನೆ.
ಸಾವಿತ್ರಿಯ ಸಣ್ಣ ಕೂಸು ನಿಧಿ ತೊಟ್ಟಿಲಲ್ಲಿ ಅಬ್ಬರಿಸುತ್ತಾ ಒದ್ದಾಡುತಿತ್ತು. “ವತ್ತಾರೆ ವತ್ತಾರೆಲೆ ಇದುರ್‌ದೊಂದ್ ಕಾಟ” ಅಂತ ಗೊಣುಗುತ್ತ ಎದ್ದು ನೋಡಿದರೆ ತೊಟ್ಟಿಲೆಲ್ಲ ರಾಡಿ!. ಕಕ್ಕ ಉಚ್ಚೆ ಮಾಡಿಕೊಂಡಿದೆ ಮನೆ ತುಂಬಿದ್ದ ವಾಸನೆ ಹೋಗಲೆಂದು ಮುಂದಿನ ಬಾಗಿಲು ತೆರೆದು ಬಿದಿರ ತೊಟ್ಟಿಲನ್ನು ಹಗ್ಗದಿಂದ ಬಿಡಿಸಿ ಎತ್ತಿಕೊಂಡು ಹೊರಕ್ಕೆ ಹೋದಳು.
“ಅಯ್ಯೋ… ನಿನ್ನೇನು ಇದುರವ್ ಇಸ್ಸೀ ಬಟ್ಟೆ ತೊಳುದಿಲ್ಲ. ಇವಾಗಿದುರಡಿಗೆ ಏನ್ ಆಕದು?” ಅಂತ ಯೋಚಿಸುತ್ತ ಒಳಗೆ ಹೋಗಿ ಒಂದು ಗಂಟು ಬಿಚ್ಚಿ ಹಳೆ ಸೀರೆ ತಂದು ಗಲೀಜಾಗಿರೋ ಬಟ್ಟೆಗಳನ್ನೆಲ್ಲ ತೆಗೆದು ಆ ಸೀರೆಯನ್ನು ಮಡಿಸಿ ಹಾಕಿ ಕೂಸಿನ ಮುಕಳಿ ತೊಳೆದು ಕಾಲಿಗೆಲ್ಲ ನೀರಾಕಿ ಒರೆಸಿ ಹಾಸಿದ್ದ ಚಾಪೆಯ ಮೇಲೆ ಬಿಟ್ಟು ಮಗುವಿನ ಕಕ್ಕದ ಬಟ್ಟೆ ತೊಳೆಯಲು ಹಿಂದಕ್ಕೆ ಹೋದಳು.
ಹಿಂದೆ ಸಾವಿಯ ಗಂಡ ಸುಬ್ಬುನ ಅಣ್ಣಂದಿರು ಹನುಮಂತ ಹಾಗು ಗಣೇಶನ ಹೆಂಡತಿಯರು ಸಹ ಪಾತ್ರ‍್ರೆ ತೊಳೆಯುತ್ತಿದ್ದರು ಅವರಿಬ್ಬರು ಕಾಸ ಅಕ್ಕಾ ತಂಗಿಯರು. ಸಾವಿತ್ರಿ ಹೋದ ತಕ್ಷಣ ಗೊತ್ತಿದ್ದರೂ “ಏನೇ ಸಾವಿ ನಿನ್ ಗಂಡ ಸೂಳೆಮನೆಯಿಂದ ಇನ್ನು ಬರ್ಲಿಲ್ವೇನೇ? ಒಬ್ಳೆ ಇಲ್ಲೇನ್ ಮಾಡ್ತಿಯಾ ತವರಿಗಾದ್ರು ಹೋಗ್ಬಾರ್ದಾ?, ಆ ಸಣ್ಣ ಕೂಸುಗಳನ್ನು ಒಬ್ಳೆ ಹೆಂಗ್ ಸಾಕ್ತಿಯ?” ಎಂದೆಲ್ಲ ಪ್ರಶ್ನೆಗಳ ಬಾಣಗಳನ್ನು ಬಿಟ್ಟರು. ಮೊದಲೆ ಇವಳ ಮನಸ್ಸಿನಲ್ಲಾದ ಗಾಯಗಳಿಗೆ ಅವು ನಾಟಿ ಇನ್ನೂ ನೋವಾಯಿತು. ಆದರೆ ಸಾವಿ ಅದನ್ನು ಹೊರ ಹಾಕದೆ ಮೌನಿಯಾಗಿ ಕೂಸಿನ ಹೊಲಸು ಬಟ್ಟೆಯನ್ನು “ಉಸ್ ಉಸ್” ಎಂದು ತಿಕ್ಕಿ ತೊಳೆಯುತ್ತಿದ್ದಾಳೆ.
“ಥೂ..ತೂ, ಹೇ ಸಾವಿ ಮಗಿನ ಉಚ್ಚೆನೆಲ್ಲ ಸಿಡಿಯ ಹಂಗೆ ಶೆಳಿತಿಯಲ್ಲ ನಿಧಾನುಕ್ಕೆ ತೊಳಿಯೇ” ಎಂದಳು ಕಿರಿ ಮಾಮ ಗಣೇಶನ ಹೆಂಡತಿ. ಅಷ್ಟರಲ್ಲೇ ಕನಕ ಎದ್ದು ತಂಗಿಯ ಕೈ ಹಿಡಿದು ಮೆಲ್ಲಗೆ ನೆಡೆಸಿಕೊಂಡು ಬಂದು ಅಮ್ಮನ ಪಕ್ಕ ಕುಂತು ಕಣ್ಣು ತಿಕ್ಕಿಕೊಳ್ಳುತಿದ್ದಳು. ಅವನ್ನು ನೋಡಿದ ಸಾವಿಗೆ ಅಯ್ಯೋ ಕಾಫಿ ಕಾಸಕ್ಕೆ ಹಾಲಿಲ್ಲ, ರಾಗಿ ಗಂಜಿ ಕಾಸನ ಅಂದ್ರೆ ಕಟ್ಗೆನೂ ಇಲ್ಲ ಅಂತ ಆ ಹೇಲಿನ ಅರಿವೆಗಳನ್ನ ಬೇಲಿಯ ಮೇಲೆ ಹಾಕಿ ತೋಟದೊಳಕೆ ಓಡಿ ಒಂದೈದು ನಿಮಿಷದಲ್ಲಿ ಒಂದು ತೆಂಗಿನ ಮಟ್ಟೆಯನ್ನು ಎಳೆದು ತಂದು ಕನಕಳಿಗೆ ಮಚ್ಚು ತರಲು ಹೇಳಿ ಹಿತ್ತಲ ಬಾಗಿಲಲ್ಲಿ ಕುಳಿತು ಕಾಲಿನ ಬಳಿಯಿದ್ದ ಇರುವೆ ಗೂಡನ್ನು ನೋಡುತ್ತಾ ಏನನ್ನೋ ಯೋಚಿಸುತ್ತಿದ್ದಳು. ಕನಕ ಬಂದು ಭಾರದ ಮಚ್ಚನ್ನು ಎರಡು ಕೈಲಿ ಹಿಡಿದು “ಅಮ್ಮ ಹಿಡಿ…” ಎಂದಾಗ ಎಚ್ಚೆತ್ತು ಗರಿಯನ್ನೆಲ್ಲ ಬಿಡಿಸಿ ಮಟ್ಟೆಯ ಕಡಿದು ಒಲೆಯ ಪಕ್ಕ ಹಾಕಿ ನೆಗ್ಗಿದ್ದ ಸಿಲ್ವರ್ ಪಾತ್ರೆಯಲ್ಲಿ ನೀರು ಬೆಲ್ಲ ಒಂದು ಚಿಟಿಗೆ ಉಪ್ಪು ಹಾಕಿ ರಾಗಿ ಹಿಟ್ಟು ಕಲಸಿ ಒಲೆ ಹೊತ್ತಿಸಿದಳು. ತೆಂಗಿನ ಮಟ್ಟೆ ಇನ್ನು ಹಸಿಹಸಿಯಿದ್ದರಿಂದ ಬೆಂಕಿ ಬೇಗ ಕಚ್ಚಿಕೊಳ್ಳದೆ ಹೊಗೆ ದಟ್ಟವಾಯ್ತು ಬದಿಯಲ್ಲಿದ್ದ ಸೀಮೆ ಎಣ್ಣೆ ಸ್ವಲ್ಪ ಹಾಕಿದಾಗ “ದಗ್” ಎಂದು ಹೊತ್ತಿ ಗಂಜಿ ಕುದಿಯಲು ಶುರುವಾಯ್ತ್ತು. ಗಂಜಿ ಕುದ್ದು ಮೇಲೆ ಬರುತ್ತಿದ್ದರು ಸಾವಿಗೆ ಗಮನವಿಲ್ಲದೆ ಒಲೆಯನ್ನೇ ನೋಡುತ್ತಿದ್ದಳು. ಗಂಜಿ ಉಕ್ಕಿ ಒಲೆಯ ಮೇಲೆ “ಚುಸ್ ಚುಸ್” ಎಂದು ಬಿದ್ದಾಗ, ಬರಿಗೈಲಿ ಪಾತ್ರೆ ಇಳಿಸ ಹೋಗಿ ಕೈ ಸುಟ್ಟುಕೊಂಡ ನಂತರ ಮಸಿ ಬಟ್ಟೆಯಿಂದ ಪಾತ್ರೆ ಇಳಿಸಿ ಗಂಜಿ ತಣ್ಣಗಾಗಲೆಂದು ತಟ್ಟೆಗೆ ಹಾಕಿ ಆರಿಸಿ ಲೋಟಕ್ಕೆ ಸರೇ ಹೊಯ್ದು, ಒಂದು ಚಮಚ ಇಟ್ಟು, ಕನಕಳಿಗೆ ಕೊಡುತ್ತ ತಂಗಿಗೂ ತಿನಿಸೆಂದು ಬಾಗಿಲು ಬಳಿಯಲು ಹೋದಳು.
ಒಂದಿಬ್ಬರು ಕ್ಯಾನ್ ಹಾಗು ಚೀಲ ಹಿಡಿದು ಹೋಗುತ್ತಿದ್ದುದನ್ನು ಕಂಡು ‘ಹೋ ರೇಷನ್ ಕೊಡುತ್ತಿರಬೇಕು’ ಎಂದು ತಿಳಿದು ಹತ್ತಿರ ಹೋಗಿ ದೃಢಪಡಿಸಿಕೊಂಡು ತಾನೂ ಚೀಲ, ಕ್ಯಾನ್ ಹಿಡಿದು ಕಾರ್ಡ್ ಹುಡುಕಿ ಸಣ್ಣ ಕೈ ಚೀಲಕ್ಕೆ ಹಾಕಿಕೊಂಡು “ಹೇ ಕನಕ ತಂಗಿ ಹುಷಾರು” ಎಂದು ಹೇಳಿ ಹೊರಟಳು.
ನ್ಯಾಯ ಬೆಲೆ ಅಂಗಡಿ ಮುಂದೆ ಜನ ಸಾಗರ. ನೂಕು ನುಗ್ಗಲು, ಇವಳು ಹೋಗಿ ನಿಂತಳು. ಇನ್ನು ಅಂಗಡಿ ತೆಗೆದಿರಲಿಲ್ಲ. ಎಲ್ಲರು ತಮ್ಮ ಚೀಲ ಕ್ಯಾನುಗಳನ್ನು ತಮ್ಮ ಪರವಾಗಿ ಸರದಿ ಸಾಲಿನಲ್ಲಿಟ್ಟು ಹತ್ತಿರದ ನೆರಳಿನಲ್ಲೇ ಕುಳಿತಿದ್ದರು. ಸಾವಿತ್ರಿ ಯಾರೋ ಇಬ್ಬರು ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳುತ್ತಿದ್ದಳು:
“ಯಾರೋ ನಮ್ಮನಿಗೆ ಮಾಡಿಸಿಬಿಟ್ಟಾರೆ, ನಮ್ಮನೆ ನೆಮ್ಮದಿನೇ ನುಚ್ಚು ನೂರಾಗೈತಿ” ಅಂತ ಒಂದು ಧ್ವನಿ ಹೇಳಿ ಮುಗಿಸುತ್ತಲು ಇನ್ನೊಂದು “ಅಯ್ಯೋ ಅದಿಕ್ಯಾಕೆ ಚಿಂತೆ ಮಾಡ್ತಿಯಾ ಆ ಸರ್ಕಾರಿ ದನಿನ್ ದವಾಖಾನಿ ಐತಲಾ ಅದುರ್ ಪಕ್ಕದಾಗೆ ಒಂದ್ ಕಾಲ್ದಾರಿ ಐತಿ ನೋಡು, ಅದುರಗುಂಟೆ ಸ್ವಲ್ಪ ಮುಂದೋದ್ರೆ ಅಲ್ಲೊಬ್ಬ ಮಂತ್ರವಾದಿ ಅದನೆ ಅವ್ನು ಎಲ್ಲ ಮಂತ್ರನ ನಿವಾಳಿಸಿ ಬಿಸಾಡ್ತಾನೆ” ಎಂದಿತು. ಅದಕ್ಕೆ ಪ್ರತ್ಯುತ್ತರವಾಗಿ “ಹು ನಾನು ಆ ಮಂತ್ರವಾದಿ ಬಗ್ಗೆ ಕೇಳಿದಿನಿ ಅವ್ನ ಹತ್ರ ಹಾಕಿಸಿದ್ ಮಂತ್ರ ತಪ್ದೆ ನೆಡಿತಾವಂತೆ” ಎಂದಿತು.
ಸಮಾಧಾನದಿಂದ ಕುಳಿತಿದ್ದ ಜನ ಒಂದೇ ಕ್ಷಣದಲ್ಲಿ ದಾಯಾದಿಗಳಂತೆ ನಾಮುಂದೆ ತಾಮುಂದೆ ಎಂದು ತೆರೆದ ನ್ಯಾಯ ಬೆಲೆ ಅಂಗಡಿ ಮುಂದೆ ಕುರಿಗಳಂತೆ ನುಗ್ಗುತ್ತಿದ್ದರು. “ನೀವಿಂಗೆಲ್ಲ ಮಾಡಿದ್ರೆ ನಾನ್ ಯಾ ನನ್ ಮಗ್ನಿಗೂ ಸಾಮಾನ್ ಕೊಡೋದಿಲ್ಲ” ಎಂದು ಅಧಿಕಾರದ ದನಿಯಲ್ಲಿ ಅಂಗಡಿಯವ ನುಡಿದಿದ್ದಕ್ಕೆ ಮತ್ತೆ ಎಲ್ಲರು ಸಾಲಾಗಿ ನಿಂತರು.
ಸಾವಿ ಅಕ್ಕಿ ಬೇಳೆ ಗೋಧಿಯನ್ನು ತಲೆ ಮೇಲೆ ಹೊತ್ತುಕೊಂಡು ಕೈನಲ್ಲಿ ಸೀಮೆ ಎಣ್ಣೆ ಕ್ಯಾನ್ ಹಿಡಿದು ಇರುವ ಎಲ್ಲ ಶಕ್ತಿ ಬಳಸಿ ಹೆಜ್ಜೆ ಹಾಕುತ್ತ ಮನೆ ತಲುಪಿದಳು. ಪೂರ ದಣಿದಿದ್ದ ಜೀವಕ್ಕೆ ತಲೆ ಮೇಲಿನ ಭಾರ ಇಳಿಸಿದ ತಕ್ಷಣ ಒಂದು ಖುಷಿ ಆವರಿಸಿತು. ಮನದಲ್ಲೆ ನ್ಯಾಯ ಬೆಲೆ ಅಂಗಡಿಯ ಬಳಿ ಆ ದನಿಗಳು ಮಾತಾಡಿಕೊಂಡ ಜಾಗಕ್ಕೆ ಹೋಗಿ ನನ್ನ ಗಂಡ ನನಗೆ ಸಿಗುವಂತೆ ಮಂತ್ರ ಹಾಕಿಸಲೆಬೇಕೆಂದು ನಿಶ್ಚಿಯಿಸಿದಳು. ಕೈಲಿದ್ದ ದುಡ್ಡೆಲ್ಲ ಖಾಲಿ ಆಗಿದೆ. ಮನೆಯಲ್ಲಿ ದುಡಿದು ಹಾಕಬೇಕಾದ ಜವಾಬ್ದಾರಿ ಹೊತ್ತ ಗಂಡ ಸೂಳೆ ಸೆರಗ ಹಿಡಿದಿದ್ದಾನೆ. ಇವತ್ತೊಂದು ದಿನ ಈರುಳ್ಳಿ ಕೊಯ್ಯಲು ಹೋಗಬೇಕು ಎಂದು ಮನದಲ್ಲೇ ಅಂದುಕೊಂಡು, ರೇಷನ್ ಚೀಲ ಮನೆ ಒಳಕ್ಕೆ ಒಯ್ದು ಗಡಿಯಾರ ನೋಡಿದರೆ ಆಗಲೇ ಹನ್ನೊಂದು ಗಂಟೆ ದಾಟಿತ್ತು. ಇನ್ನೇನು ಕೂಲಿ ಹೋಗೋದು ಎಂದು ಅಸೆ ಕೈ ಬಿಟ್ಟಳು.
ಮಕ್ಕಳೆರಡು ಹಿಂದೆ ಹುಲಿಯನೊಂದಿಗೆ ಆಡುತ್ತಿವೆ. ಅಯ್ಯೋ ಆಗಲೆ ಮಧ್ಯಾಹ್ನ. ಬೆಳಗ್ಗೆಯಿಂದ ತಾನು ಹೊಟ್ಟೆಗೇನು ತಿಂದಿಲ್ಲ ಎಂದು ನೆನಪಿಗೆ ಬಂದು ಅನ್ನಕಿಟ್ಟಳು. ಇವತ್ತು ಮಂತ್ರವಾದಿಯ ಬಳಿಗೆ ಹೋಗಲೆ ಬೇಕೆಂದು ನಿಶ್ಚಯಿಸಿದಳು.
ಅನ್ನ ಬೆಂದ ಮೇಲೆ ಹೊಲೆಯಿಂದ ಇಳಿಸಿ ನಿನ್ನೆಯ ತಂಗಳು ಸಾರಿನಲ್ಲಿ ಅನ್ನ ಮೆದ್ದಿ ತನ್ನೆರಡು ಕೂಸುಗಳಿಗೂ ತಿನಿಸಿ ತಾನು ಉಂಡು ಗಂಡನ ಈ ಕೆಟ್ಟ ಚಪಲವನ್ನು ಹೇಗೆ ಬಿಡಿಸಬೇಕೆಂದು ಯೋಚಿಸುತ್ತ ಕರಿ ಕಡಪದ ಕಲ್ಲಿನ ಮೇಲೆ ತೆಲೆದಿಂಬು ಹಾಕಿ ಹಾಗೆ ಉಶ್ ಎಂದು ಉರುಳಿಕೊಂಡಳು. ಮಕ್ಕಳಿಗೆ ಸ್ನಾನ ಮಾಡಿಸದೆ ಎರಡು ದಿನವಾಯ್ತು, ತಾನು ಮಿಂದು ಮೂರು ದಿನ ಆಗಿರುವುದನ್ನು ಮರೆತು ಗಂಡನ ಚಿಂತೆಯಲ್ಲೆ ಕೊರಗುತ್ತ ನಿದ್ರಾಸಾಗರದಲ್ಲಿ ಮೆಲ್ಲಗೆ ಮುಳುಗಿದಳು ಸಾವಿ.
(ಕೃತಿ: ಬೆದ್ಲು ಬದ್ಕು (ಕಾದಂಬರಿ), ಲೇಖಕರು: ನಗೋಲತೆ, ಪ್ರಕಾಶಕರು: ನನ್ನಿ ಪುಸ್ತಕ, ಪುಟಗಳು: 240, ಬೆಲೆ: 250/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಬಹುಮುಖ ಪ್ರತಿಭೆಯ ಬರಹಗಾರ ತೇಜಸ್.
ಶುಭಾಶಯ.
ಹಳ್ಳಿಯ ಬಡ ಮುಗ್ದ ಹೆಣ್ಣುಮಗಳ ಬದುಕಿನ ಚಿತ್ರವನ್ನು ಅಕ್ಷರಗಳ ಮೂಲಕ ಸುಂದರವಾಗಿ ಕಟ್ಟಿ ಕೊಟ್ಟರುವ ಕಾದಂಬರಿಯನ್ನು . ಓದುವ ಕುತೂಹಲ ಹೆಚ್ಚಿಸಿದೆ.