ಅಷ್ಟಷ್ಟೇ ವೇಗವನ್ನು ಹೆಚ್ಚಿಸಿಕೊಳ್ಳುತ್ತಾ, ಜಾರುವ ಸೂರ್ಯನೊಂದಿಗೆ ಪೈಪೋಟಿ ನಡೆಸುತ್ತ ನಮ್ಮ ದೋಣಿ ಕರಿಬಿಯನ್ ನೀಲ ಕಡಲನ್ನು ಸೀಳಿಕೊಂಡು ಸುತ್ತಲ ಅಂದವನ್ನೆಲ್ಲ ಉಣಿಸುತ್ತ ಸಾಗುತ್ತಿತ್ತು. ಅಂಚಲ್ಲಿ ಕಾಣುವ ಮನೆ, ತೋಟಗಳ ಇತಿಹಾಸ ಇತ್ಯಾದಿ ವಿವರಣೆ ನೀಡುತ್ತಾ ನಮ್ಮ ಗೈಡ್ ಅಲ್ಲದೆ ಚಾಲಕನೂ ಆದ ಮ್ಯಾಟ್ ಹರಟುತ್ತಿದ್ದ. ಪೋರ್ತೋರಿಕನ್ ಮೂಲದವನೇ ಆದ ಮ್ಯಾಟ್ ನಡುವೆ ಒಂದಷ್ಟು ವರುಷ ಫ್ಲರಿಡಾದಲ್ಲಿದ್ದು, ನೆಲದ ಕರೆಯ ಸೆಳೆತಕ್ಕೆ ಹಿಂತಿರುಗಿ ಬಂದು ಇಲ್ಲಿಯೇ ನೆಲೆಯೂರಿದ್ದ.
ʻಜಗದ ಜಗಲಿಯಲಿ ನಿಂತುʼ ಪ್ರವಾಸ ಬರಹಗಳ ಸಾಲಿನಲ್ಲಿ ಲಾ ಪ್ಯಾರ್ಗೇರದ ಬಯೊಲುಮಿನಿಸೆನ್ಸ್ ಮಾಯಾಲೋಕದ ಕುರಿತು ಬರೆದಿದ್ದಾರೆ ವೈಶಾಲಿ ಹೆಗಡೆ
ನನಗೆ ಅಷ್ಟಷ್ಟು ದಿವಸಕ್ಕೆ ವಿಷಾದ ಹುಟ್ಟಿಕೊಳ್ಳುವುದು ಕೇವಲ ಒಂದೇ ಕಾರಣಕ್ಕೆ. ಈ ಜಗತ್ತಿನ ವಿಸ್ಮಯಗಳನೆಲ್ಲ ನೋಡಿಮುಗಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲವಲ್ಲ ದೇವಾ, ಮುಂದಿನ ಹತ್ತು ಹಲವು ಜನ್ಮಗಳೆಲ್ಲ ಇರಲಿ, ಆಗಲೂ ಈ ಭೂಮಿಯಲ್ಲೇ ನಾ ಹುಟ್ಟಿ ಬರಲಿ, ಈ ಭೂಮಿಯ ಅಂದ ಚಂದ ತೀರದಂತೆ ಮನುಷ್ಯಮಾತ್ರರಾದ ನಮ್ಮಲ್ಲಿ ಇರುವ ಈ ಬುದ್ಧಿಯೇನೆಂಬುದ ನಾಶಪಡಿಸು ದೇವಾ ಎಂದು.
ನನಗೆ ಈ ಮೋಕ್ಷ, ಕೈಲಾಸ, ಮಣ್ಣುಮಸಿಯೆಲ್ಲಾ ಎಂದೂ ಬೇಕೆಂದು ಅನಿಸುವುದಿಲ್ಲ. ದೇವರಂತೂ ಎಂದೂ ದೇವಾಲಯಗಳಲ್ಲಿ ಸಿಗಲಿಲ್ಲ. ಅದು ಇಂದಿಗೂ ಪ್ರಯತ್ನವಷ್ಟೇ. ಪರ್ವತದ ತುದಿಯಲ್ಲಿ, ಸಾಗರದ ಆಳದಲ್ಲಿ, ಬಿಸಿನೀರ ಬುಗ್ಗೆಯಲ್ಲಿ, ಹುಲ್ಲುಗಾವಲಲ್ಲಿ ತುಂಡುನೆಗೆವ ಜಿಂಕೆಮರಿಯಲ್ಲಿ ಸಿಕ್ಕಷ್ಟು ದೈವಾಂಶಾನುಭೂತಿ ಪ್ರಾರ್ಥನೆಗಳಲ್ಲಿ ಸಿಗಲಿಲ್ಲ.
ಇಂಥದ್ದೊಂದು ವರ್ಣನಾತೀತ ಆನಂದದ ಕ್ಷಣವೊಂದು ಸಿಕ್ಕಿದ್ದು ನನಗೆ “ಲಾ ಪ್ಯಾರ್ಗೇರ” ಕೊಲ್ಲಿಯ ನೀರಡಿಯಲ್ಲಿ.
ಬಯೋಲುಮಿನಿಸೆನ್ಸ್ – ಇದು ತೀರಾ ಪ್ರಚಲಿತ ಶಬ್ದವೇನಲ್ಲ, ಆದರೆ ಒಮ್ಮೆ ಈ ಕಣ್ಣಲ್ಲಿ ನೋಡಿದರೆ ಮರೆಯುವ ಶಬ್ದವಲ್ಲ.
ಸಾಗರಲೋಕದ ಮಿನುಗುವ ಜೀವಜಗತ್ತಿದು. ಈ ಪ್ರಕೃತಿಯಲ್ಲಿನ ಅನೇಕ ನಿಗೂಢಗಳಲ್ಲಿ ಇದೂ ಒಂದು. ಸಾಗರನ ಮೇಲ್ಮೈಯಿಂದ ಹಿಡಿದು ಕತ್ತಲ ಒಡಲಿನವರೆಗೆ ಹಲವು ಬಗೆಯ ಬಯೊಲುಮಿನಿಸೆಂಟ್ ಜೀವಿಗಳಿವೆ. ಕೆಲ ಬಗೆಯ ಮೀನು, ಜೆಲ್ಲಿಫಿಶ್, ಬ್ಯಾಕ್ಟೀರಿಯಾ, ಮತ್ತು ವ್ಯಾಪಕವಾಗಿ ಕಂಡುಬರುವ ಆಲ್ಗೆಗಳು ತಣ್ಣನೆಯ ನೀಲಿಯುಕ್ತ ಬೆಳಕನ್ನು ಸೂಸುತ್ತ ಸಾಗರದ ಆಳದಲ್ಲಿ ಬದುಕುವ ಜೀವಿಗಳು. ಈ ಬಯೋಲುಮಿನಿಸೆನ್ಸ್ ಸಾಗರದ ಕತ್ತಲಿನ ಆಳದಲ್ಲಿ ಕಂಡುಬಂದರೂ ಹೊರಜಗತ್ತಿಗೆ, ಮೇಲ್ಮೈಯಲ್ಲಿ ತೋರುವಂತೆ ಇರುವ ಜಾಗಗಳು ಬಹು ವಿರಳವೇ ಆಗಿವೆ. ಅದರಲ್ಲೂ ವ್ಯಾಪಕವಾಗಿ ಕಾಣಸಿಗುವಂಥವುಗಳು “ಡೈನೋಫ್ಲ್ಯಾಜಲಟ್ಸ್”. ಇವು ಏಕಕೋಶ ಜೀವಿಗಳು. ಅವುಗಳ ಸುತ್ತಲಿನ ವಾತಾವರಣವನ್ನು ಕೆಣಕಿದಾಗ, ಪ್ರತಿಕ್ರಿಯೆಯಾಗಿ ನಕ್ಷತ್ರದಂತೆ ಮಿನುಗುತ್ತವೆ. ಇವು ಒಂದು ಬಗೆಯಲ್ಲಿ ನೀರೊಳಗಿನ ಮಿಂಚುಹುಳಗಳಂಥವು. ತನ್ನ ಬೇಟೆಯಾಡುವ ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಇರುವ ಒಂದು ಬಗೆಯ ಆತ್ಮರಕ್ಷಣೆಯ ಅಲಾರ್ಮ್ ಸಂಕೇತವಾಗಿ ಈ ನಡವಳಿಕೆಯನ್ನು ತೋರುತ್ತವೆ. ಇವು ಗಾತ್ರದಲ್ಲಿ ಸುಮಾರು ೩೦ ಮೈಕ್ರೋಮೀಟರಿನಿಂದ ೧ ಮಿಲಿಮೀಟರಿನಷ್ಟು ಸಣ್ಣವು. ಇವು ಜಗತ್ತಿನಾದ್ಯಂತ ಎಲ್ಲ ಕಡೆಯ ಸಮುದ್ರದಲ್ಲಿದ್ದರೂ ಎಲ್ಲವೂ ಹೊಳೆಯುವ ಬಗೆಯವುಗಳಲ್ಲ. ಈ ಮಿನುಗು ಕೋಶಜೀವಿಗಳು ಸಾಕಷ್ಟು ಸಂಖ್ಯೆಯಲ್ಲಿ ಒಟ್ಟುಗೂಡಿದಾಗ ಸೃಷ್ಟಿಯಾಗುವ ಮಾಯಾಲೋಕವೇ ಬೇರೆ. ಇಂಥ ಈ “ಬಯೋಲುಮಿನಿಸೆಂಟ್ ಬೇ” ಗಳು ಪುರ್ತೋರಿಕೊ ದ್ವೀಪದ ಸುತ್ತಲೂ ಅಲ್ಲಲ್ಲಿ ಕಂಡುಬರುತ್ತವೆ. ಇದಲ್ಲದೆ ಕರೀಬಿಯನ್ ಸಮುದ್ರದ ಕೆಲವು ದ್ವೀಪಪ್ರದೇಶಗಳಲ್ಲಿ ಸಹ ನೀವು ಇವನ್ನು ಕಾಣಬಹುದು. ಪೋರ್ತೋರಿಕೊದಲ್ಲಿ ಕಾಣಸಿಗುವ ಇವುಗಳ ಸಮೂಹ ಜಗತ್ಪ್ರಸಿದ್ಧ. ಇಲ್ಲಿನ ಮಾಸ್ಕಿಟೊ ಬೇ ಪ್ರಬಲವಾದ ಸಮೂಹ ಹೊಂದಿದ ಕೊಲ್ಲಿ ಪ್ರದೇಶ. ಇದು ಮುಖ್ಯ ದ್ವೀಪದಿಂದ ಹೊರಗಿರುವ ಇನ್ನೊಂದು ಪುಟ್ಟ ದ್ವೀಪದಲ್ಲಿದೆ. ಫಯಾರ್ಡೋ ಕೊಲ್ಲಿ ಮತ್ತು ಲಾ ಪೆರ್ಗೆರ ಕೊಲ್ಲಿಗಳು ಮುಖ್ಯ ದ್ವೀಪದಲ್ಲಿಯೇ ಇರುವುದರಿಂದ ಭೇಟಿ ನೀಡಲು ಅನುಕೂಲಕರವಾದ ಸ್ಥಳಗಳು. ಅಲ್ಲದೆ, ಲಾ ಪೆರ್ಗೆರ ಕೊಲ್ಲಿಯಲ್ಲಿ ಮಾತ್ರ ಈ ಮಿನುಗುವ ನೀರಿನಲ್ಲಿ ಈಜುವ ಅವಕಾಶವಿದೆ. ಹಾಗಾಗಿ ನಮ್ಮಪೋರ್ತೋರಿಕೊ ಪ್ರಯಾಣದಲ್ಲಿ ಲಾಪೆರ್ಗೆರ ಭೇಟಿ ಒಂದು ಮುಖ್ಯಪಾತ್ರವಾಗಿದ್ದು, ಅದರ ಸುತ್ತಲೂ ನಮ್ಮ ಇತರ ಪ್ರಯಾಣಗಳ, ಉಳಿದ ತಾಣಗಳ ಭೇಟಿಯ ನಕ್ಷೆ ರೂಪುಗೊಂಡಿತ್ತು.
ಜುಲೈ ತಿಂಗಳ ಅಮಾವಾಸ್ಯೆಯ ರಾತ್ರಿಯೊಂದನ್ನು ಗಮನದಲ್ಲಿಟ್ಟುಕೊಂಡು, ಸುತ್ತಲಿನ ಯಾವ ಬೆಳಕೂ ನಮ್ಮ ನೀರೊಳಗಿನ ಬೆಳಕಿನ ಅನುಭವಕ್ಕೆ ಧಕ್ಕೆ ತರದಂತೆ ಪ್ರಯಾಣದ ದಿನಗಳನ್ನು ನಿಗದಿಪಡಿಸಿಕೊಂಡಿದ್ದೆ. ಪೋರ್ತೋರಿಕೊಕ್ಕೆ ಹೋದರೆ ನನಗೆ ಊರಿಗೆ ಬಂದಿಳಿದಿದ್ದೇನೋ ಎಂಬಂತೆ ಆಗಿತ್ತು. ಸುತ್ತಲಿನ ತೆಂಗು, ಮಾವು ಪೇರಲ ಮರಗಳು, ಅಲೆ ಮಗಚುವ ನೀಲಿ ಕಡಲು, ಊರಲ್ಲಿರುವಂತೆ ಕಂಪೌಂಡ್ ಹಾಕಿ ಕಟ್ಟಿದ ಸಿಮೆಂಟಿನ ತಾರಸಿ ಮನೆಗಳಿರುವ ಈ ಊರು! ನನ್ನ ಊರಲ್ಲದೆಯೂ ಊರೆಂಬ ಆಪ್ತತೆಯಲ್ಲಿ ಅಪ್ಪಿಕೊಂಡಂತೆ ಅನಿಸಿತ್ತು. ಎಂಥ ಚಂದದ ಜನ ಇವರು. ಒಂದು ಪ್ರಶ್ನೆ ಕೇಳಿದರೆ ಆತ್ಮೀಯವಾಗಿ ಇಡೀ ಕತೆ ಹೇಳಿ ದಾರಿತೋರುವ ಹೃದಯವಂತರು. ಎಲ್ಲಿ ಹೋಗಿ ನಿಂತರೂ ಕೇಳಿಬರುವ ಎದೆ ತುಂಬುವ ಜೊತೆಗೆ ನಿತಂಬ ಕುಣಿವ ಸಂಗೀತದ ತವರು. ಇವರು ಸದಾ ಕುಣಿಯುತ್ತಲೇ ಇರುವ ಖುಷಿಯ ಜನರು. ಜಗತ್ತನ್ನೇ ಕುಣಿಸಿದ ಹಾಡು ಡೆಸ್ಪಸಿತೋ ಹಾಡಿನ ಲೂಯಿ ಫಾನ್ಸಿ, ನಮ್ಮ ಹರೆಯದ ಹೊತ್ತಿನಲ್ಲಿ ಹೆಜ್ಜೆ ಹಾಕಿಸುತ್ತಿದ್ದ ರಿಕಿ ಮಾರ್ಟಿನ್ ಆದಿಯಾಗಿ ಜಗತ್ಪ್ರಸಿದ್ಧ ಸಂಗೀತಗಾರರನ್ನು, ಕೊನೆಯಿಲ್ಲದ ಸಂಗೀತವನ್ನು ಜಗತ್ತಿಗೆ ನೀಡಿದ ನೆಲವಿದು. ಇಲ್ಲಿನ ಮಣ್ಣಿನಲ್ಲೇ ನಲಿತವೂ ನುಲಿತವೂ ಇದೆ ಎಂಬಂತೆ ಇದ್ದಾರೆ ಇಲ್ಲಿನ ಜನ.
ಅಂದು ಪೋರ್ತೋರಿಕೊ ರಾಜಧಾನಿ ಸ್ಯಾನ್ಹುವಾನ್ನಿಂದ ಡ್ರೈವ್ ಮಾಡಿಕೊಂಡು ದ್ವೀಪದ ಅಂಚಿನ ಗುಂಟ ಪಶ್ಚಿಮಾಭಿಮುಖಿಯಾಗಿ ಹೊರಟು, ಅಲ್ಲಲ್ಲಿ ಸಮುದ್ರದ ಬಳಿ ಇಳಿದು ಆಡುತ್ತ ಹಾಡುತ್ತ ಲ ಪೆರ್ಗೆರ ತಲುಪುವ ಹೊತ್ತಿಗೆ ಸೂರ್ಯಾಸ್ತದ ಸಮಯವಾಗಿತ್ತು. ಲಾ ಪರ್ಗೆರ ಇಡೀ ಊರಿಗೆ ಊರೇ ಏನೋ ಸಮಾರಂಭವಿರುವಂತೆ ಸಂಭ್ರಮದಲ್ಲಿ ಗಿಜಿಗುಡುತ್ತಿತ್ತು. ನಾವೂ ಕುತೂಹಲದಿಂದ ಏನು ಹಬ್ಬವೋ ಎಂದುಕೊಂಡು ಅಲ್ಲೊಂದು ಕಡೆ ಕಾರು ನಿಲ್ಲಿಸಿ ಭದ್ರಗೊಳಿಸಿ ನಾವು ಹೋಗಲಿರುವ ದೋಣಿಕಾರರ ಅಂಗಡಿಯ ಗುರುತು ಕೇಳುತ್ತ ನಡೆಯತೊಡಗಿದೆವು. ಊರ ಮಧ್ಯೆ ಬರುತ್ತಿದ್ದಂತೆ, ಎಲ್ಲೆಡೆಯೂ ಸಂಗೀತ.
ಹಾಡುವವರೊಂದಿಷ್ಟು ಜನ, ಅಲ್ಲೇ ಜೊತೆ ಜೊತೆಯಾಗೂ, ಗುಂಪಾಗಿಯೂ ಕುಣಿಯುವವರೊಂದಿಷ್ಟು ಜನ, ಸುಮ್ಮನೆ ನಡೆಯುತ್ತಲೂ ಮೈಯೆಲ್ಲಾ ಸಂಗೀತವಾದಂತೆ ಓಡಾಡುವರೊಂದಿಷ್ಟು ಜನ. ಇಲ್ಲಿ ಎಲ್ಲ ಅಲ್ಲಿನ ಊರ ಜನರೇ ಬಹುತೇಕ ಎನಿಸುತ್ತಿದ್ದು, “ಟೂರಿಸ್ಟ್” ಗಳಂತೆ ಕಾಣುತ್ತಿದ್ದವರು ಬಹಳ ಕಡಿಮೆ. ಹಾಗಾಗಿ ಆ ಊರಿಗೊಂದು ಆತ್ಮವಿತ್ತು. ಅಲ್ಲೊಂದು ಅಂಗಡಿಯಲ್ಲಿ ಏನು ಹಬ್ಬ ಇವತ್ತು ಹೀಗೆ ಸಂಭ್ರಮವಲ್ಲ ಎಂದು ಕೇಳಿದೆ. ಅವನಿಗೆ ಬರುವ ಹರಕು ಮುರುಕು ಇಂಗ್ಲೀಷಿನಲ್ಲಿ ಹೇಳಿದ್ದು ನನಗೆ ಏನೂ ಅರ್ಥವಾಗಲಿಲ್ಲ. ಶಾಲೆಯಲ್ಲಿ ಎರಡನೇ ಭಾಷೆಯಾಗಿ ಸ್ಪ್ಯಾನಿಷ್ ಕಲಿಯುತ್ತಿರುವ ಮಗಳನ್ನು ಮುಂದಕ್ಕೆಳೆದು, ಏನು ಹಬ್ಬ ಕೇಳು ಸ್ಪ್ಯಾನಿಷ್‌ನಲ್ಲಿ, ಜೊತೆಗೆ ನಮ್ಮ ದೋಣಿಕಂಪನಿಯ ಅಂಗಡಿಯ ಗುರುತನ್ನೂ ಕೇಳು, ಎಂದೆ. ಅವಳು ಪ್ರಶ್ನೆ ಕೇಳಿದ್ದಲ್ಲದೆ, ಮತ್ತಷ್ಟು ಏನೇನೋ ಹರಟಿದಳು, ಅವನ ಉತ್ತರಕ್ಕೆ ಪಕಪಕ ನಕ್ಕಳು. ಇದು ಪೋರ್ತೋರಿಕೊ ಅಮ್ಮ, ಇಲ್ಲಿನ ಜನ ಇರುವುದೇ ಹೀಗೆ, ಇಲ್ಲಿ ಪ್ರತಿ ಸಂಜೆಯೂ ಹೀಗೆ ಹಬ್ಬದಂತೆ ಇರುತ್ತದಂತೆ, ಅದರಲ್ಲೂ ಇವತ್ತು ಶನಿವಾರ, ಇವರಿಗೆ ಸಂಭ್ರಮಿಸಲು ನೆಪ ಬೇಡ, ಹಾಡೊಂದು ಕೇಳಿದರೆ ಸಾಕು ಎಂದು ಹೇಳಿದ ಎಂದಳು. ಈ ಜನರ ಮೇಲಿನ ಪ್ರೀತಿ ಇನ್ನೂ ಹೆಚ್ಚಾಗಿ ಹೋಯಿತು. ನಡೆಯುತ್ತಾ ನಾವು ಬಂದರಿನಂತ ಜಾಗಕ್ಕೆ ಬಂದು ಮುಂಚೆಯೇ ಜಾಗ ಕಾಯ್ದಿಟ್ಟುಕೊಂಡ ದೋಣಿಕಾರರ ಅಂಗಡಿ ತಲುಪಿದೆವು. ಅಲ್ಲಿ ಆಗಲೇ ನಮ್ಮಂತೆ ಬಯೋಲುಮಿನಿಸೆಂಟ್ ಬೇ ಪ್ರಯಾಣಕ್ಕಾಗಿ ಬಂದ ಇನ್ನೆರಡು ಕುಟುಂಬಗಳಿದ್ದವು. ಸೂರ್ಯ ದೂರದಲ್ಲಿ ಇವರ ಸಂಗೀತ ಕೇಳುತ್ತ ಮೈಮರೆತವನಂತೆ ಮನೆಗೆ ಹೋಗಲೋ ಬೇಡವೋ ಎಂಬ ದ್ವಂದ್ವದಲ್ಲಿ ಹೊಳೆಯುತ್ತಲಿದ್ದ. ನಮಗೆಲ್ಲ ಲೈಫ್ ಜಾಕೆಟ್‌ಗಳನ್ನು ಕೊಟ್ಟು ನಮ್ಮ ದೋಣಿಯ ಚಾಲಕ ತನ್ನ ದೊಡ್ಡ ಮೋಟಾರು ಬೋಟಿನ ಹಿಂಬದಿಗೆ ಎಂಟು ಕಾಯಾಕ್ ಗಳನ್ನು ಕಟ್ಟತೊಡಗಿದ. ಸೂರ್ಯ ಇನ್ನೇನು ಮುಳುಗುವ ಎನ್ನುವಾಗ ಭರ ಭರೆಂದು ನೀರೆಬ್ಬಿಸುತ್ತ ದಡ ಬಿಡುತ್ತ ಕ್ಷಿತಿಜದಂಚನ್ನು ಬೆನ್ನಟ್ಟಿ ನಿಧಾನಕ್ಕೆ ಚಲಿಸತೊಡಗಿತು ನಮ್ಮ ಮೋಟಾರುಬೋಟ್.
ಪೋರ್ತೋರಿಕೊದಲ್ಲಿ ಕಾಣಸಿಗುವ ಇವುಗಳ ಸಮೂಹ ಜಗತ್ಪ್ರಸಿದ್ಧ. ಇಲ್ಲಿನ ಮಾಸ್ಕಿಟೊ ಬೇ ಪ್ರಬಲವಾದ ಸಮೂಹ ಹೊಂದಿದ ಕೊಲ್ಲಿ ಪ್ರದೇಶ. ಇದು ಮುಖ್ಯ ದ್ವೀಪದಿಂದ ಹೊರಗಿರುವ ಇನ್ನೊಂದು ಪುಟ್ಟ ದ್ವೀಪದಲ್ಲಿದೆ. ಫಯಾರ್ಡೋ ಕೊಲ್ಲಿ ಮತ್ತು ಲಾ ಪೆರ್ಗೆರ ಕೊಲ್ಲಿಗಳು ಮುಖ್ಯ ದ್ವೀಪದಲ್ಲಿಯೇ ಇರುವುದರಿಂದ ಭೇಟಿ ನೀಡಲು ಅನುಕೂಲಕರವಾದ ಸ್ಥಳಗಳು.
ಅಷ್ಟಷ್ಟೇ ವೇಗವನ್ನು ಹೆಚ್ಚಿಸಿಕೊಳ್ಳುತ್ತಾ, ಜಾರುವ ಸೂರ್ಯನೊಂದಿಗೆ ಪೈಪೋಟಿ ನಡೆಸುತ್ತ ನಮ್ಮ ದೋಣಿ ಕರಿಬಿಯನ್ ನೀಲ ಕಡಲನ್ನು ಸೀಳಿಕೊಂಡು ಸುತ್ತಲ ಅಂದವನ್ನೆಲ್ಲ ಉಣಿಸುತ್ತ ಸಾಗುತ್ತಿತ್ತು. ಅಂಚಲ್ಲಿ ಕಾಣುವ ಮನೆ, ತೋಟಗಳ ಇತಿಹಾಸ ಇತ್ಯಾದಿ ವಿವರಣೆ ನೀಡುತ್ತಾ ನಮ್ಮ ಗೈಡ್ ಅಲ್ಲದೆ ಚಾಲಕನೂ ಆದ ಮ್ಯಾಟ್ ಹರಟುತ್ತಿದ್ದ. ಪೋರ್ತೋರಿಕನ್ ಮೂಲದವನೇ ಆದ ಮ್ಯಾಟ್ ನಡುವೆ ಒಂದಷ್ಟು ವರುಷ ಫ್ಲರಿಡಾದಲ್ಲಿದ್ದು, ನೆಲದ ಕರೆಯ ಸೆಳೆತಕ್ಕೆ ಹಿಂತಿರುಗಿ ಬಂದು ಇಲ್ಲಿಯೇ ನೆಲೆಯೂರಿದ್ದ. ಕೆಲವರ್ಷಗಳ ಹಿಂದೆ ಕತ್ರೀನಾ ಚಂಡಮಾರುತಕ್ಕೆ ಸಿಕ್ಕು ಚೂರು ಚೂರಾದ ಊರು ಹೇಗೆ ಮತ್ತೆ ಚಿಗುರಿದೆ, ಆದರೂ ಆ ದಾರುಣ ದಿನಗಳ ಅವಶೇಷ ಎಲ್ಲಾ ಹೇಗೆ ಇನ್ನೂ ಇದೆ ಎಂದು ವಿವರಿಸುತ್ತಿದ್ದ. ಚಂಡಮಾರುತದಿಂದ ಕೊಚ್ಚೆಯೆದ್ದು ಹೋಗಿದ್ದ ಕೊಲ್ಲಿ ಪ್ರದೇಶದಲ್ಲಿ ನಶಿಸಿಹೋಗಿದ್ದ ಡೈನೋಪ್ಲಾಜಲಟ್ಸ್ ಲೋಕ ಹೇಗೆ ಈಗ ನಿಧಾನಕ್ಕೆ ಸುಸ್ಥಿತಿಗೆ ಬರುತ್ತಿದೆ ಎಂದು ಹೇಳುವಾಗ ನನಗೆ ಹಾಗಿದ್ದರೆ ಈ ಅನುಭವ ದಕ್ಕುವುದೋ ಇಲ್ಲವೋ ಎಂದು ಸಣ್ಣಗೆ ಸಂಶಯ ಮೂಡುತ್ತಿತ್ತು. ಕಡಲ ನಡುವಿನಿಂದ ಕಾಣುವ ನಡುಗಡ್ದೆಯೀಗ ಸಂಜೆಗತ್ತಲಲ್ಲಿ ಅಲ್ಲಲ್ಲಿ ಬೆಳಕು ಮೂಡಿಸಿಕೊಂಡು ಹೊಸತಾಗಿ ತೋರುತ್ತಿತ್ತು. ನಿಧಾನಕ್ಕೆ ಆ ಬೆಳಕೂ ದೂರವಾಗಿ ಆಗಸದಲ್ಲಿ ನಕ್ಷತ್ರ ಮೂಡುತ್ತಿತ್ತು. ಅಲ್ಲೊಂದು ಮ್ಯಾಂಗ್ರೋವ್ ಕಾಡಿನಂತ ಕೊಲ್ಲಿ ಪ್ರದೇಶ ದೂರದಲ್ಲಿ ಹೌದೋ ಅಲ್ಲವೋ ಎಂಬಂತೆ ದೋಣಿಯ ಬೆಳಕಲ್ಲಿ ತೋರುತ್ತಿತ್ತು. ಆಗ ಇದ್ದಕ್ಕಿದ್ದಂತೆ ದೋಣಿ ನಿಲ್ಲಿಸಿದ ಮ್ಯಾಟ್ ಇಂಜಿನ್ ಕೂಡ ಆರಿಸಿಬಿಟ್ಟ. ಕ್ಷಿತಿಜದ ಬೆಳಕು ಇನ್ನೇನು ಆರುತ್ತಿದೆ ಎಂಬಂತಿರುವಾಗ ದಡಬಡನೆ ಕಾಯಾಕ್‌ಗಳನ್ನು ಬಿಚ್ಚಿ ಇಬ್ಬಿಬ್ಬರಂತೆ ಒಂದೊಂದು ಕಾಯಾಕಿನಲ್ಲಿ ಕೂರಿಸಿ, ಹುಟ್ಟುಕೊಟ್ಟು ನಮ್ಮನ್ನು ಹೋಗಿ ನಿಮ್ಮಷ್ಟಕ್ಕೆ ನೀವು ಆಡಿಕೊಂಡಿರಿ ಎಂಬಂತೆ ತೇಲಿಸಿಬಿಟ್ಟ. ನಾವು ಹುಟ್ಟು ಹಾಕುತ್ತ ಕಾಯಾಕ್ ನಡೆಸುವ ಕ್ರಮಕ್ಕೆ ಒಗ್ಗಿಕೊಳ್ಳುತ್ತ ಒಂದು ಗತಿ ಕಂಡುಕೊಂಡೆವು ಎನ್ನುತ್ತಲೇ ಚಂದ್ರನಿಲ್ಲದ ಕತ್ತಲ ರಾತ್ರಿ ನೆಲದ ಸಂಗೀತವೂ ಕೇಳದಂತೆ ಗವ್ವೆಂದು ಆವರಿಸತೊಡಗಿತ್ತು. ಸುತ್ತಲಿನ ಮ್ಯಾಂಗ್ರೋವ್ ಮೇಲಿಂದ ಬೀಸುವ ತಣ್ಣನೆ ಗಾಳಿಯಲ್ಲಿ ಅಲ್ಲಲ್ಲಿ ರಾತ್ರಿಕೀಟಗಳ ಸದ್ದು, ನಮ್ಮ ಹುಟ್ಟು ನೀರ ಬಗೆವ ಸದ್ದು ವಿಲಕ್ಷಣ ಭಯವೊಂದನ್ನೂ, ಜೊತೆಗೆ ಅತೀವ ಶಾಂತಿಯೊಂದನ್ನೂ ಎದೆಯಲ್ಲಿ ಹುಟ್ಟುಹಾಕುತ್ತಿತ್ತು.
ನಮ್ಮ ಕಣ್ಣು ಆ ಕತ್ತಲೆಗೆ ಹೊಂದಿಕೊಳ್ಳತೊಡಗಿದಂತೆ ಹೌದೋ ಅಲ್ಲವೋ ಎಂಬಂತೆ ಸಣ್ಣ ಮಿಣುಕು ಹುಳದಂತೆ ಆಗೊಂದು ಈಗೊಂದು ಕಂಡಿದ್ದು, ಹುಟ್ಟು ಹಾಕಿದಲ್ಲಿ ಛತ್ತೆಂದು ಮಿನುಗಿ ಮಾಯವಾಗುವಂಥ ಏನೋ ಒಂದು ಹೊಳೆದು ಆರುತ್ತಿತ್ತು. ನಮ್ಮ ಹುಟ್ಟು ಹಾಕುವ ಪರಿ ಜೋರಾಗತೊಡಗಿತು. ಹಲವು ದಿಕ್ಕಿನಲ್ಲಿ ಈ ಮಿನುಗಿ ಮಾಯವಾಗುವ ಬೆಳಕು ಹುಡುಕುತ್ತ ಕಾಯಾಕ್ ನಡೆಸತೊಡಗಿದೆವು. ಆಗ ಮ್ಯಾಟ್ ಆತನ ದೋಣಿಯ ಹಾರ್ನ್ ಹಾಕಿದ. ಮುಂಚೆಯೇ ನಾವು ನಿಧಾನಕ್ಕೆ ಕಾಯಾಕ್ ಅನ್ನು ಮೋಟಾರುಬೋಟಿನತ್ತ ನಡೆಸಿಕೊಂಡು ಬರುತ್ತಿದ್ದಂತೆ ಪ್ರಯಾಣಿಕರಿಗೆಲ್ಲ ಆತ ನೀರೊಳಗೆ ಉಸಿರಾಡಲು ಬರುವಂತ ಸ್ನಾರ್ಕಲಿಂಗ್ ಉಪಕರಣಗಳನ್ನು ಕೆಲಸಮಯ ಬಳಸಲು ಕೊಟ್ಟ. ನಮ್ಮ ಬಳಿಯಿರುವ ಸ್ನಾರ್ಕಲಿಂಗ್ ಉಪಕರಣಗಳನ್ನು ನಾವೇ ಕೊಂಡುಕೊಂಡು ಹೋಗಿದ್ದರಿಂದ ನಮಗೆ ಅಲ್ಲಿ ಇದ್ದಷ್ಟು ಹೊತ್ತೂ ಈಜಲು ಅನುಕೂಲವಾಗಿತ್ತು. ಮಕ್ಕಳಿಬ್ಬರೂ ಪುರುಸೊತ್ತಿಲ್ಲದವರಂತೆ ತಮ್ಮ ಉಪಕರಣ ಏರಿಸಿ ನೀರೊಳಗೆ ಧುಮುಕಿದವರು ಕತ್ತಲ ಗರ್ಭದಲ್ಲಿ ಮಾಯವಾಗಿ ಹೋದರು. ನನಗೋ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತೆ ಅನುಭವ. ಮೊದಲೇ ಅಷ್ಟಾಗಿ ಈಜು ಬರದವಳು ನಾನು. ಏನೋ ಸಾಯದೆ ಕೆಲ ಕಾಲ ಬದುಕಬಲ್ಲೆ, ಒಂದಷ್ಟು ದೂರ ಜೀವ ಹಿಡಿದು ಈಜಿಬಿಡಬಲ್ಲೆ ಅಷ್ಟೇ. ಹಗಲಲ್ಲಾದರೆ ಈಜಲು ಅಷ್ಟೇನೂ ಭಯವಿಲ್ಲದ ನನಗೆ, ಈ ಕತ್ತಲಲ್ಲಿ ಅದೂ ಮೂಗು ಬಾಯಿ ಕಣ್ಣೆಲ್ಲ ಕವಚ ಧರಿಸಿ ನೀರೊಳಗೆ ಮೀನಾಗಿಬಿಡು ಎಂದರೆ ಕೈಕಾಲೇ ಆಡಲಿಲ್ಲ. ಲೈಫ್ ಜ್ಯಾಕೆಟ್ ಹಾಕಿಕೊಂಡಿರುವೆ ಎಂದು ಗೊತ್ತಿದ್ದರೂ ಮನದ ತಡೆ ಕರಗಲಿಲ್ಲ.
ಮೋಟಾರುಬೋಟಿನ ಅಂಚಿನ ಹ್ಯಾಂಡಲ್ ಹಿಡಿದು ಹಾಗೇ ತಲೆ ಹೊರಗಿಟ್ಟು ನೀರೊಳಗೆ ಕಾಲಾಡಿಸುತ್ತ ತೇಲುತ್ತಲಿದ್ದೆ. ಅಷ್ಟರಲ್ಲಿ ಧುತ್ತೆಂದು ನನ್ನೆದುರು ಎದ್ದು ಪ್ರತ್ಯಕ್ಷರಾದ ಮಕ್ಕಳು, ಅವರಪ್ಪ ಎಲ್ಲ ಹುಚ್ಚರಂತೆ ಕಿರುಚಿದರು. ಒಳಗೆ ಬಾ ತಲೆ ಒಳಗೆ ಹಾಕು ಇಷ್ಟೆಲ್ಲಾ ಯೋಜನೆ ರೂಪಿಸಿ ಈ ಅನುಭವಕ್ಕಾಗಿ ನಮಗೆಲ್ಲ ಆಸೆ ತೋರಿಸಿ ಕರೆತಂದವಳು ನೀನು, ಒಮ್ಮೆ ನೀರೊಳಗೆ ಸಂಪೂರ್ಣ ತಲೆಹಾಕಿ ಈಜು, ನಿನಗೂ ಹುಚ್ಚು ಹಿಡಿಯದಿದ್ದರೆ ಹೇಳು ಎಂದು ಕೂಗಿದರು. ನಾನು ನಿಧಾನಕ್ಕೆ ಒಂದು ಕೈಯನ್ನು ಮೋಟಾರುಬೋಟಿನ ಹಗ್ಗ ಹಿಡಿದಂತೆಯೇ ಒಳನುಗ್ಗಿ ಇನ್ನೊಂದು ಕೈಯಲ್ಲಿ ನೀರ ಬಗೆಯುತ್ತಾ ಈಜತೊಡಗಿದೆ. ನನ್ನ ಸುತ್ತಲೂ ನಕ್ಷತ್ರಕಡ್ಡಿ ಹಚ್ಚಿದಂತೆಯೋ, ದೀಪಾವಳಿಯ ಪ್ಲಾವರ್‌ಪಾಟ್ ಪಟಾಕಿ ಹೊತ್ತಿಕೊಂಡಂತೆಯೋ, ನನ್ನ ದೇಹವೇ ಬೆಳಕು ಸೂಸುತ್ತಿದೆ ಎಂಬಂತೆ ಪ್ರಭಾವಳಿ! ಕೈ ಆಡಿಸಿದಂತೆ ಕಾಲಾಡಿಸಿದಂತೆ ಪಟಪಟನೇ ಮಿಂಚುವ ನಕ್ಷತ್ರಲೋಕ. ಇಡೀ ನೀರೊಳಗೆ ಯಾವುದೋ ಪಾರ್ಟಿ ಲೈಟ್ ಹಾಕಿದ್ದಾರೋ, ಲಾ ಪೆರ್ಗೆರ ಊರಿನ ಪಾರ್ಟಿ ಇಲ್ಲಿಗೆ ಸ್ಥಳಾಂತರಿಸಿತೋ ಎಂಬಂತೆ ಚಕಪಕ ಚಕಾಪಕ ಎಲ್ಲೆಲ್ಲೂ.
ನೀರೊಳಗೆ ಹುಟ್ಟಿದ ಹೊಸ ಆಕಾಶಕಾಯಗಳ ಸಂತೆಯೋ ಎಂಬಂತೆ, ನಾನು ಆಗಸದ ಆಳದಲ್ಲಿ ಮಿಲ್ಕಿವೇಯಲ್ಲಿ ಎಲ್ಲಿಯೋ ಈಜಿದಂತೆ ಮಿನುಗುತ್ತಿದ್ದ ಮಿಲಿಯಗಟ್ಟಲೆ ಡೈನೋಪ್ಲಾಜಲೆಟ್ ಜೀವಲೋಕ. ಮುಂದೆ ಸಾಗಿದಂತೆ ನನ್ನ ಒಡನೆಯೇ ಸಾಗುವ ಬೆಳಕಿನ ಸುರುಳಿ. ಕೊಂಚ ಧೈರ್ಯ ತಂದುಕೊಂಡು ಸಾಗುತ್ತ ಗಂಡ ಮಕ್ಕಳನ್ನು ಸೇರಿಕೊಂಡೆ. ಹಗ್ಗ ದೂರವಾಗುತ್ತಿದ್ದಂತೆ ಭಯ ಹುಟ್ಟಿದ ನನಗೆ ಗಟ್ಟಿ ಕೈಹಿಡಿದುಕೊಳ್ಳಲು ಒಬ್ಬರು ಬೇಕಿತ್ತು. ನಾವು ಒಟ್ಟಾಗಿ ಈಜಿದಂತೆ ಆ ಒಟ್ಟೂ ಗದ್ದಲಕ್ಕೆ ಸಾವಿರ ಸಾವಿರ ಪಟಾಕಿ ಹೊತ್ತಿದಂತೆ ನೀರೊಳಗೆ ಮಿಂಚಿನ ಸಂಚಾರ. ಬೆಳಕಿನ ಓಕುಳಿ. ನನಗೆ ಹೀಗೆಲ್ಲ ಇದೆ ಎಂದು ಯಾರು ಹೇಳಿದ್ದರೂ ಖಂಡಿತ ನಂಬುತ್ತಿರಲಿಲ್ಲ. ಮೇಲೆದ್ದು ಬಂದು ಉಸಿರೆಳೆದುಕೊಂಡು ನಾನೂ ಗಟ್ಟಿಯಾಗಿ ಖುಷಿಯಲ್ಲಿ ಕಿರುಚಿದೆ. ಕಣ್ಣು ಬಿಟ್ಟರೆ ಏನೂ ಕಾಣದ ಕತ್ತಲ ರಾತ್ರಿ. ಮೇಲೆ ನಿಂತು ನೋಡಿದರೆ, ನೀರೊಳಗೆ ಹೀಗೊಂದು ಲೋಕವಿದೆಯೆಂದು ಊಹಿಸಲೂ ಅಸಾಧ್ಯ.
ಈಗ ಕಯಾಕ್‌ನಲ್ಲಿ ಸಾಗುವುದು ಯಾರಿಗೂ ಬೇಡವಾಗಿತ್ತು. ಈಜುತ್ತಾ ಸಾಗುವ ಈ ನಕ್ಷತ್ರಲೋಕದ ಅನುಭವ ಎಂದೂ ಮುಗಿಯದಿರಲಿ ಎನಿಸುತ್ತಿತ್ತು. ಈಜಿದರೆ ಸಾಕು ಎಂಬಂತಿದ್ದ ನಾನು ನೀರೊಳಗೆ ತೆಗೆವಂತ ಕ್ಯಾಮರವನ್ನೇನೂ ಕೊಂಡುಹೋಗದ ಕಾರಣ, ಈ ಅತೀಂದ್ರೀಯ ಅನುಭವದ ಚಿತ್ರಣ ನನ್ನ ಕಣ್ಣ ಕ್ಯಾಮೆರದಲ್ಲಷ್ಟೇ ದಾಖಲಾಗಿ ಮಿದುಳ ಮೆಮೊರಿ ಕಾರ್ಡ್ ಅಲ್ಲಿ ಕುಳಿತಿದೆ ಬಿಟ್ಟರೆ, ದಾಖಲೆಯಾಗಿ ಯಾವ ಫೋಟೋವೂ ನನ್ನ ಬಳಿಯಿಲ್ಲ. ಆಗಾಗ ಮೇಲೆದ್ದು ಬಂದು ಧುಡುಂ ಎಂದು ಹಾರುತ್ತ ಬೆಳಕು ಹೊಮ್ಮಿಸುತ್ತ ಕತ್ತಲ ನೀರಲ್ಲಿ ಮಿಂಚು ಹೊತ್ತಿಸುತ್ತಿದ್ದ ಮಕ್ಕಳನ್ನು ಮೋಟಾರು ಬೋಟು ಹತ್ತಿಸುವುದು ಅಸಾಧ್ಯ ಎಂಬಂತಾಗಿದ್ದ ನನಗೆ, “ತಮ್ಮ ಜೀವಿತದ ಇಲ್ಲಿನವರೆಗಿನ ಅತಿ ಉತ್ತಮ ಅನುಭವವಿದು” ಎಂದು ನೀರಿಂದ ಮೇಲೇಳಲು ತಯಾರಿಲ್ಲದ ಮಕ್ಕಳು ಹೇಳಿದ ಷರಾ ಸಾಕು, ಮನದ ಮೆಮೊರಿ ಕಾರ್ಡ್ ಭದ್ರವಾಗಿರಿಸಲು. ಕೊನೆಯ ಒಂದು ಸುತ್ತು ಎಂದು ನಾವೆಲ್ಲಾ ಒಂದು ಬಾರಿ ಮತ್ತೊಮ್ಮೆ ಆ ಅನೂಹ್ಯ ಅನುಭವವೊಂದನ್ನು ಕಣ್ಣಲ್ಲಿ ತುಂಬಿಕೊಂಡು ಹಿಂತಿರುಗುವಾಗ ಯಾರೊಬ್ಬರಿಗೂ ಮಾತು ಹೊರಡದು. ಎಲ್ಲಿ ಕಣ್ಣಲ್ಲಿ ಕಟ್ಟಿದ ಅನುಭವ ಕಣ್ಣು ಬಿಟ್ಟರೆ ಕಳೆದು ಹೋಗುವುದೋ ಎಂಬಂತೆ ಮಾತಿಗೆ ಮೀರಿದ ಮೌನಕ್ಕೆ ಶರಣಾಗಿದ್ದೆವು. ನಮ್ಮ ಬೋಟು ಮತ್ತೆ ದಡ ತಲುಪಿದಾಗ ಕುಣಿಯುತ್ತಿದ್ದ ಲಾಪೆರ್ಗೆರ ಊರು ಇನ್ನೂ ವೇಗದಲ್ಲಿ ಹೆಜ್ಜೆ ಹಾಕುತ್ತಿತ್ತು. ಇಲ್ಲಿನ ಸಂಗೀತಕ್ಕೆ ಅಲ್ಲೂ ನೀರೊಳಗೆ ನಡೆಯುತ್ತಿದ್ದ ಜೀವಲೋಕದ ಪಟಾಕಿ ಪಾರ್ಟಿ ಬಹುಶಃ ಕುಣಿಯುತ್ತಿತ್ತು. ಎಂಥ ನೆಲವಿದು! ಇಲ್ಲಿನ ಪ್ರತಿಜೀವಿಯ ಮೈಯಲ್ಲೂ ಮಿಂಚಿನ ಸಂಚಾರವನ್ನು ದಯಪಾಲಿಸಿಬಿಟ್ಟಿದ್ದಾನೆ ದೇವರು. ಅನಂತ ಆಕಾಶದಲ್ಲಿ ಸಂಚರಿಸಲು ಸಾಧ್ಯವಾಗದಿದ್ದರೇನಂತೆ, ಅನೂಹ್ಯ ಸಾಗರದಾಳ ಆ ಅನುಭವವನ್ನು ದಕ್ಕಿಸಿಕೊಟ್ಟಿತ್ತು.
ಕಳೆದ ವರ್ಷದ ಈ ಎಲ್ಲ ಅನುಭವವನ್ನು ಕಣ್ಮುಚ್ಚಿ ನೆನೆಸಿಕೊಂಡರೆ ದೇವರಿಗೆ ಇಂದು ಈ ಥ್ಯಾಂಕ್ಸ್‌ಗಿವಿಂಗ್ ದಿವಸ, ಒಂದು ಥ್ಯಾಂಕ್ಸ್ ಎನ್ನದೆ ಇನ್ನೇನು ಹೇಳಲಿ? ಈ ಅದ್ಭುತ ಭೂಮಿಯ ಮೇಲೆ ನನ್ನನ್ನು ಹುಟ್ಟಿಸಿದ್ದಕ್ಕೆ ಥಾಂಕ್ಯೂ ದೇವರೇ.
ಊರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ಅಮೆರಿಕಾದ ಬಾಸ್ಟನ್ ಸಮೀಪ ಈಗ ಕಟ್ಟಿಕೊಂಡ ಸೂರು. ತಂತ್ರಜ್ಞಾನದ ಉದ್ದಿಮೆಯಲ್ಲಿ ಕೆಲಸ. ದೇಶ ಸುತ್ತುವುದು, ಬೆಟ್ಟ ಹತ್ತುವುದು, ಓಡುವುದು, ಓದು, ಸಾಹಸ ಎಂಬ ಹಲವು ಹವ್ಯಾಸ. ‘ಒದ್ದೆ ಹಿಮ.. ಉಪ್ಪುಗಾಳಿ’ ಇವರ ಪ್ರಬಂಧ ಸಂಕಲನ. “ಪ್ರೀತಿ ಪ್ರಣಯ ಪುಕಾರು” ನೂತನ ಕಥಾ ಸಂಕಲನ.