Advertisement
“ಬಿಗಿ ಹಿಡಿದ ಮುಷ್ಟಿಯಲಿ ನವಿರು ಪ್ರೇಮದ ಘಮಲು”: ಎಂ. ತರುಣ್‌ ಕೃತಿಗೆ ಮೋದೂರು ತೇಜ ಮುನ್ನುಡಿ

“ಬಿಗಿ ಹಿಡಿದ ಮುಷ್ಟಿಯಲಿ ನವಿರು ಪ್ರೇಮದ ಘಮಲು”: ಎಂ. ತರುಣ್‌ ಕೃತಿಗೆ ಮೋದೂರು ತೇಜ ಮುನ್ನುಡಿ

ನಿಜವಾದ ಕವಿಗೆ ಒಳಗಣ್ಣು ತೆರೆದಿದ್ದಾಗ ಮಾತ್ರ ತನ್ನ ಸುತ್ತಲಿನ ವಸ್ತುಗಳಾಗಲಿ, ವ್ಯಕ್ತಿಗಳಾಗಲಿ ವಿಶೇಷವಾಗಿ ಕಾಣಿಸುತ್ತಾರೆ. ಅಂತಹ ಕಾಣುವ ಕಾಣ್ಕೆ ಈ ಯುವ ಕವಿ ದಕ್ಕಿಸಿಕೊಂಡಿದ್ದಾರೆ. ಆದರೆ ಅವಸರದ ಬೆನ್ನೇರಿ ಕುಳಿತಿರುವ ನಮಗೆ ಯಾವುದನ್ನೂ ಸಾವಧಾನವಾಗಿ ನೋಡುವ, ಕಾಣುವ ತಾಳ್ಮೆ, ತುಡಿತ ಇಲ್ಲದಂತಾಗಿದೆ. ಮೊಬೈಲ್‌ ಎಂಬ ಮಾಯಾಲೋಕ ಅಂಗೈಗೆ ಬಂದ ಮೇಲೆ ಎಲ್ಲವನ್ನೂ ಮೈಮರೆಯುವಂತೆ ಮಾಡುತ್ತಿರುವಾಗ, ಅದರಲ್ಲೂ ತಾನು ಬರೆದಿದ್ದೆಲ್ಲವೂ ಪ್ರಕಟಿಸಲು ಸಾಮಾಜಿಕ ಜಾಲತಾಣಗಳ ವೇದಿಕೆಗಳಿರುವಾಗ ಕಾಯುವ ಗುಣ ಯಾರಿಗೂ ಇಲ್ಲಂತಾಗಿದೆ. ಹಾಗಂತ ಎಲ್ಲರೂ ಸಂತೆಗೆ ಮೂರು ಮೊಳ ಕಂಬಳಿ ನೇಯುವಂತೆ ಕಾವ್ಯ ರಚನೆಯಲ್ಲಿ ತೊಡಗಿದ್ದಾರೆಂದು ಹೇಳಿದರೆ ತಪ್ಪಾಗುತ್ತದೆ. 
ಎಂ. ತರುಣ್‌ ಕವನ ಸಂಕಲನ “ಬಿಗಿ ಹಿಡಿದ ಮುಷ್ಟಿಯಲಿ”ಕ್ಕೆ ಮೋದೂರು ತೇಜ ಬರೆದ ಮುನ್ನುಡಿ

“ಬಿಗಿ ಹಿಡಿದ ಮುಷ್ಟಿಯಲಿ” ನವಿರು ಪ್ರೇಮದ ನುಡಿಗಳು ನಲುಗಬಾರದೆಂಬ ಎಚ್ಚರದಲ್ಲಿ ಕಾವ್ಯಯಾನ ಆರಂಭಿಸಿರುವ ಯುವ ಕವಿ ಎಂ. ತರುಣ್‌ ಅವರ ಭಾವ ಪ್ರಪಂಚ ತುಂಬಾ ಆಪ್ತವಾದುದು. ಅದನ್ನು ಎದುರುಗೊಳ್ಳುವ ಪ್ರತಿ ಓದುಗರಿಗೂ ತಮ್ಮ ಹರೆಯದ ದಿನಗಳ ಮರೆಯಲಾಗದ ಮಧುರ ನೆನಪುಗಳನ್ನ ಕಣ್ಮುಂದೆ ತಂದು ಮುನ್ನಡೆಯುತ್ತದೆ. ಕಥೆ, ಕವಿತೆ ಹೀಗೆ ಯಾವ ಸಾಹಿತ್ಯವೇ ಆಗಿರಲಿ ಇನ್ನೊಬ್ಬರ ಭಾವಕೋಶವನ್ನು ಕಲಕುತ್ತದೆ ಎಂದರೆ, ಆ ಸಾಹಿತ್ಯ ಸತ್ವಭರಿತವಾದದ್ದು ಎನ್ನುವುದು ನನ್ನ ಭಾವನೆ. ಪ್ರೀತಿಯೇ ಸ್ಥಾಯಿಭಾವವಾಗಿರುವ ಇಲ್ಲಿನ ಕವಿತೆಗಳಲ್ಲಿ ಜೀವನ ಪ್ರೀತಿಯನ್ನ ಮಿಳಿತಗೊಳಿಸಿರುವುದು ಕವಿಯ ಪಕ್ವತೆಗೆ ಸಾಕ್ಷಿಯಾಗಿದೆ. ಹದಿಹರೆಯದ ದಿನಗಳಲ್ಲಿ ಸಹಜವಾಗಿ ಉಂಟಾಗುವ ಆಕರ್ಷಣೆಯನ್ನೇ ಪ್ರೀತಿಯೆಂದು ಭಾವಿಸಿ, ತಮ್ಮದೇ ಆದ ಒಂದು ಭ್ರಮಾಲೋಕದಲ್ಲಿ ವಿಹರಿಸುತ್ತಾ, ಚರ್ವಿತ ಚರ್ವಣ ವರ್ಣನೆಗಳಲ್ಲಿ ಮುಳುಗೇಳುತ್ತಿರುವ ಕೆಲವು ಕವಿಗಳಿಗಿಂತ, ಕಾವ್ಯವನ್ನ ಗಂಭೀರವಾಗಿ ಪರಿಗಣಿಸಿರುವ ತರುಣ್‌ ಬೇರೆಯವರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ.

(ಎಂ. ತರುಣ್‌)

ಪ್ರೀತಿ ಎಂದ ತಕ್ಷಣ ನಮ್ಮ ಮನಸು ಹದಿಹರೆಯದವರ ಸುತ್ತ ಗಿರಕಿ ಹೊಡೆಯುತ್ತದೆ. ಅದರಾಚೆಗೆ ನಾವು ಯೋಚಿಸುವುದೇ ಇಲ್ಲ. ತುಂಬಾ ವಿಶಾಲ ವ್ಯಾಪ್ತಿಯ ಪ್ರೀತಿಯ ಪರಿಧಿಯನ್ನ ಸಣ್ಣ ಚೌಕಟ್ಟಿನಲ್ಲಿ ಬಂಧಿಸಿಡಲು ಬಯಸುತ್ತೇವೆ. ಆದರೆ ಯುವಕವಿ ತರುಣ್‌ ಪ್ರೀತಿಗಿರುವ ವೈಶಾಲ್ಯತೆಯನ್ನ, ಅದರ ವಿಸ್ತಾರವಾದ ಅರ್ಥವನ್ನ ತಿಳಿಸಲು ಪ್ರಯತ್ನಿಸಿದ್ದಾರೆ. ಆ ಕಾರಣಕ್ಕೆ ಅವರು ಪ್ರೀತಿಗಿರುವ ಸಂಕುಚಿತ ಅರ್ಥವನ್ನ ದಾಟಿ, ಕಡಲಿಗಿಂತಲೂ ಅಗಾಧವಾದ ತಾಯಿ ಪ್ರೇಮವನ್ನ ನಮ್ಮ ಬದುಕನ್ನು ಬೆಳಗುವ ಬೆಳಕಿಗೆ ಹೋಲಿಸುತ್ತಾ;

ಕಳೆವಳೆಲ್ಲ ದಿನಗಳನು ನಿಸ್ವಾರ್ಥ ಸೇವೆಯಲಿ
ಅಮ್ಮ ಒಂದು ಅದ್ಭುತ ಬೆಳಕಲ್ಲವೆ..

ಎಂದು ಕೇಳಿಕೊಳ್ಳುತ್ತಾರೆ. ಜಗತ್ತಿನಲ್ಲಿ ಅಮ್ಮನ ಪ್ರೀತಿಗಿಂತ ಮಿಗಿಲಾದದ್ದು ಏನಿದೆ? ತನ್ನ ಇಡೀ ಬದುಕೇ ತನ್ನ ಕುಟುಂಬಕ್ಕಾಗಿ ಸಮರ್ಪಿಸುವ ತಾಯಿಯ ನಿಸ್ವಾರ್ಥ ಸೇವೆಯನ್ನ “ಅಮ್ಮ ಒಂದು ಅದ್ಭುತ ಬೆಳಕಲ್ಲವೆ..” ಕವಿತೆ ಪ್ರತಿಪಾದಿಸುತ್ತದೆ. ಇದು ಪ್ರೀತಿ ಮತ್ತು ಜೀವನ ಪ್ರೀತಿಯನ್ನ ಏಕಗೊಳಿಸುವ ಪರಿ. ಈ ಸೂಕ್ಷ್ಮತೆ ಕವಿಗೆ ಇರುವುದರಿಂದ ಇದರಲ್ಲಿ ಸಫಲರಾಗಿದ್ದಾರೆ.

ಕವಿಗೆ ಕಾಣುವ ಕಣ್ಣಿರಬೇಕು. ಆಗ ಲೋಕದ ಸಾಮಾನ್ಯ ವಸ್ತುಗಳೂ ಸಹ ಅಸಮಾನ್ಯವಾಗಿ ಕಾಣುತ್ತವೆ. ಅದನ್ನೆ ಕೆ.ಬಿ. ಸಿದ್ದಯ್ಯನವರು “ಕಣ್ಣು ಧರಿಸಿ ಕಾಣಿರೊ” ಎಂದು ಹೇಳಿರುವುದು. ಕವಿಗೆ ಆ ರೀತಿ ಲೋಕಗ್ರಹಿಕೆಯನ್ನು ಮೀರಿದ ಒಳನೋಟವಿರಬೇಕು. ಆಗ ಅಂಚೆ ಪೆಟ್ಟಿಗೆಯೂ ಒಂದು ಭಾವ ತುಂಬಿದ ಪ್ರಪಂಚವಾಗಿ ಕಾಣುತ್ತದೆ.

ಬರಿ ಬಣ್ಣದ ತಗಡಿನ ಬಾಯ್ದೆರೆದ ನಿರ್ಜೀವ ಪೆಟ್ಟಿಗೆಯಲ್ಲ
ಬರಪೂರಿತ ಭಾವಗಳ ಭಾರವನೊತ್ತ ಹೃದಯ ತೆರೆದು
ಮನಗಳ ಸಂಧಿಸುವ ಪ್ರೇಮವು ಜೀವಿಸುವ ಜಾಗ ಈ ಹೃದಯದಂಚೆ..

ಎನ್ನುತ್ತಾರೆ. ಹೀಗೆ ನಿಜವಾದ ಕವಿಗೆ ಒಳಗಣ್ಣು ತೆರೆದಿದ್ದಾಗ ಮಾತ್ರ ತನ್ನ ಸುತ್ತಲಿನ ವಸ್ತುಗಳಾಗಲಿ, ವ್ಯಕ್ತಿಗಳಾಗಲಿ ವಿಶೇಷವಾಗಿ ಕಾಣಿಸುತ್ತಾರೆ. ಅಂತಹ ಕಾಣುವ ಕಾಣ್ಕೆ ಈ ಯುವ ಕವಿ ದಕ್ಕಿಸಿಕೊಂಡಿದ್ದಾರೆ. ಆದರೆ ಅವಸರದ ಬೆನ್ನೇರಿ ಕುಳಿತಿರುವ ನಮಗೆ ಯಾವುದನ್ನೂ ಸಾವಧಾನವಾಗಿ ನೋಡುವ, ಕಾಣುವ ತಾಳ್ಮೆ, ತುಡಿತ ಇಲ್ಲದಂತಾಗಿದೆ. ಮೊಬೈಲ್‌ ಎಂಬ ಮಾಯಾಲೋಕ ಅಂಗೈಗೆ ಬಂದ ಮೇಲೆ ಎಲ್ಲವನ್ನೂ ಮೈಮರೆಯುವಂತೆ ಮಾಡುತ್ತಿರುವಾಗ, ಅದರಲ್ಲೂ ತಾನು ಬರೆದಿದ್ದೆಲ್ಲವೂ ಪ್ರಕಟಿಸಲು ಸಾಮಾಜಿಕ ಜಾಲತಾಣಗಳ ವೇದಿಕೆಗಳಿರುವಾಗ ಕಾಯುವ ಗುಣ ಯಾರಿಗೂ ಇಲ್ಲಂತಾಗಿದೆ. ಹಾಗಂತ ಎಲ್ಲರೂ ಸಂತೆಗೆ ಮೂರು ಮೊಳ ಕಂಬಳಿ ನೇಯುವಂತೆ ಕಾವ್ಯ ರಚನೆಯಲ್ಲಿ ತೊಡಗಿದ್ದಾರೆಂದು ಹೇಳಿದರೆ ತಪ್ಪಾಗುತ್ತದೆ.  ತರುಣ್‌ ಅವರಂತಹ ಯುವಕವಿಗಳ ಕವಿತೆಗಳನ್ನು ಓದುತ್ತಾ ಹೋದಂತೆ ನಮ್ಮ ಋಣಾತ್ಮಕ ಗೊಣಗಾಟವೆಲ್ಲ ತಲೆಕೆಳಗಾಗಿ ಒಂದು ಆಶಾಭಾವನೆ ಮೂಡುತ್ತದೆ. ಯುವ ಸಮೂಹದಲ್ಲಿ ಸಾಹಿತ್ಯದ ಅಭಿರುಚಿ ಬೆಳೆಯುತ್ತಿರುವುದು ಕಂಡು ಸಂತಸವಾಗುತ್ತಿದೆ.

ಸಾಹಿತ್ಯ ರಚನೆ ಎಂದರೆ, ನನ್ನ ಖುಷಿಗೆ ನಾನು ಬರೆಯುತ್ತೇನೆ ಎನ್ನುವ ನಿರಾಳ ಭಾವನೆ ಕವಿಗೂ ಇಲ್ಲ, ಸಮಾಜದಲ್ಲೂ ಅಂತಹ ನೆಮ್ಮದಿಯ ವಾತಾವರಣವೂ ಇಲ್ಲ. ತನ್ನ ಸುತ್ತಲಿನ ಸಮಾಜಕ್ಕೆ ಕಿವಿಯಾಗಿ ಕಣ್ಣಾಗುವ ಕವಿ, ತನ್ನೆದುರಿನ ಲೋಪಗಳನ್ನ ಖಂಡಿಸದೆ ಇರಲಾರ.

ಶತ ಶತಮಾನಗಳಿಂದಲು
ಶೋಷಣೆಗೆ ಮೈಯೊಡ್ಡಿ
ಇರುವಂತವರ ಕಾಲ್ತುಳಿತಕ್ಕೆ ಸಿಕ್ಕಿ
ನೆಲ ಕಚ್ಚಿದ ಬಡವರು
ಪುಟಿದೆದ್ದು ಎದುರು ನಿಲ್ಲುವ
ಕಾಲ ಬರಬೇಕಿದೆ
ಎನ್ನುವ ನಿರೀಕ್ಷೆಯೊಂದಿಗೆ ಸಾಗುವ ಕವಿತೆ ಕೊನೆಗೆ ವಾಸ್ತವತೆಯನ್ನು ಒಪ್ಪಿಕೊಳ್ಳುತ್ತಾ;

(ಮೋದೂರು ತೇಜ)

ಕಾಲವು ಶ್ರೀಮಂತರ
ಕೈ ವಶವಾಗಿರಬಹುದೇನೊ
ಅದಕ್ಕೂ ಬಂಗಾರದ ಫ್ರೇಮ್‌ ಹಾಕಿ
ಗೋಡೆಗೆ ಜೋತು ಬಿಟ್ಟಿರುವಾಗ
ಕಾಲವು ಇನ್ನೆಲ್ಲಿ ಬಂದೀತು..

ಎನ್ನುವ ನಿರಾಸೆಯೊಂದಿಗೆ ಕೊನೆಗೊಳ್ಳುತ್ತದೆ. ಆದರೆ ಕಾಲ ಯಾರ ಅಧೀನವೂ ಅಲ್ಲ, ಯಾವ ಬಂಧನಕ್ಕೂ ಸಿಲುಕುವುದಿಲ್ಲ. ಕಾಲ ಎನ್ನುವುದೇ ಕಾಲಾತೀತ. ಬೇಂದ್ರೆಯವರು ಹೇಳುವಂತೆ, ಕಾಲವೆಂಬ ಹಕ್ಕಿ ಸಾರ್ವಭೌಮರ ನೆತ್ತಿಯನ್ನೇ ಕುಕ್ಕಿ, ಮಂಡಲ ಗಿಂಡಲಗಳ ಗಡ ಮುಕ್ಕಿರುವಾಗ ಈ ಹಣವಂತರು ಯಾವ ಲೆಕ್ಕ? ಎಲ್ಲವೂ ಎಲ್ಲರೂ ಕಾಲಕ್ಕೆ ತಲೆಬಾಗಲೇಬೇಕು. ಆ ಬದಲಾವಣೆಯನ್ನ ಕಾಲ ತಂದೇ ತರುತ್ತದೆ ಎನ್ನುವ ನಂಬಿಕೆ, ಆಶಾವಾದ ಕವಿಗಿರಬೇಕು.

ಈ ಸಂಕಲನದಲ್ಲಿ ನನಗೆ ತುಂಬಾ ಇಷ್ಟವಾದ ಕವಿತೆ ಎಂದರೆ, “ಮಳೆಯೊಂದಿಗೆ ಕವಿತೆ” ಸರಳವಾದ, ಸುಂದರವಾದ ಪುಟ್ಟ ಕವಿತೆ. ಆದರೆ ಅದರ ಅರ್ಥ ಸಾಧ್ಯತೆಗಳು ಹಲವು ಆಯಾಮಗಳಲ್ಲಿ ಧ್ವನಿಸುತ್ತವೆ. ಅಂತಹದ್ದೇ ಧ್ವನಿಶಕ್ತಿಯನ್ನು ಪಡೆದ; ಗಾಯಗೊಂಡ ಸಾಲುಗಳು, ಯಾರಾದರು ವರ ಗೋಳು ಕೇಳುವಿರ, ಬಲೂನಿನಲ್ಲಿ ಅವನ ಉಸಿರು, ನೀ ನನ್ನ ಮೊದಲ ಮಳೆ ಗೆಳೆಯ. ಈ ಕವಿತೆಗಳ ಬಿಗಿಬಂಧ, ಅವು ಹೊಮ್ಮಿಸುವ ಧ್ವನಿಪೂರ್ಣತೆ, ಕಾವ್ಯದ ಲಯ ಎಲ್ಲವು ಹದವರಿತು ಮೂಡಿಬಂದಿರುವುದರಿಂದ ಮತ್ತೆ ಮತ್ತೆ ಓದಬೇಕೆನಿಸುತ್ತದೆ. ಇಡೀ ಸಂಕಲನದಲ್ಲಿ ವಸ್ತು ವೈವಿಧ್ಯತೆ ಕಂಡು ಬಂದರೂ, ಪ್ರೇಮವೇ ಪ್ರಧಾನ ಧಾರೆಯಲ್ಲಿ ಅಭಿವ್ಯಕ್ತಗೊಂಡಿದೆ. ಆದರೂ ಅದು ಏಕತಾನತೆ ಎನಿಸುವುದಿಲ್ಲ. ಆಗ ತಾನೆ ಅರಳಿದ ಹೂವಿನ ಪಕಳೆಯ ಮೇಲೆ ಕುಳಿತ ಹಿಮದ ಬಿಂದುವಿನಂತೆ ತಾಜಾತನದಿಂದ ಕೂಡಿವೆ. ಹೊಸತನದಲ್ಲಿ ಮನಸೆಳೆಯುತ್ತವೆ.

ಹಾಗಂತ ಇಡೀ ಕವನ ಸಂಕಲನದಲ್ಲಿ ಮಿತಿಗಳೇ ಇಲ್ಲವೆಂದು ಮರೆಮಾಚಿ ಯುವಕವಿಯನ್ನು ದಿಕ್ಕುತಪ್ಪಿಸುತ್ತಿಲ್ಲ. ಅಲ್ಪಸ್ವಲ್ಪ ಓರೆಕೋರೆಗಳಿರುವುದು ನಿಜವಾದರೂ ಅದನ್ನು ಮುಂದಿನ ದಿನಗಳಲ್ಲಿ ಕವಿ ಸರದೂಗಿಸಬಲ್ಲ ಎನ್ನುವ ಭರವಸೆಯನ್ನು ಮೊದಲ ಸಂಕಲನದಲ್ಲೆ ಮೂಡಿಸಿದ್ದಾರೆ. ಕಾವ್ಯ ಕಟ್ಟುವ ಕಲೆ, ಅದನ್ನೇ ದೇನಿಸುವ ತಾದಾತ್ಮ್ಯತೆ, ಭಾಷೆಯ ಮೇಲಿನ ಹಿಡಿತ ಕವಿಗೆ ಸಿದ್ಧಿಸಿದೆ. ಕನ್ನಡ ಕಾವ್ಯ ಪರಂಪರೆಯ ಜಾಡು, ಅದರ ವೈವಿಧ್ಯತೆ, ವೈಶಿಷ್ಟ್ಯತೆ ಪರಿಚಯವಾದಂತೆಲ್ಲಾ ಪದ ಬಳಕೆಯಲ್ಲಿ ಮತ್ತಷ್ಟು ಜಿಪುಣತನ ತೋರಬೇಕೆಂಬ ಔಚಿತ್ಯ ಪ್ರಜ್ಞೆ ಕವಿಗೆ ತಾನಾಗಿಯೇ ಮೂಡುತ್ತದೆ. ಆಗ ತನ್ನ ಕಾವ್ಯಕ್ಕೆ ಮತ್ತಷ್ಟು ಹೊಳಪು ನೀಡುವ ಅಂತಃಶಕ್ತಿ ಬೆಳೆಯುತ್ತದೆ. ಆ ಹಾದಿಯಲ್ಲಿ ಸಾಗಲಿ ಎಂದು ಆಶಿಸುತ್ತಾ ಮೊದಲ ಸಂಕಲನದಲ್ಲೆ ಭರವಸೆಯ ಹೆಜ್ಜೆ ಗುರುತು ಮೂಡಿಸಿರುವ ಯುವಕವಿ ಎಂ. ತರುಣ್‌ ಗೆ ಅಭಿನಂದನೆಗಳು.

(ಕೃತಿ: ಬಿಗಿ ಹಿಡಿದ ಮುಷ್ಠಿಯಲಿ (ಕವನ ಸಂಕಲನ), ಲೇಖಕರು: ಎಂ. ತರುಣ್‌, ಬೆಲೆ: 150/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ