ಒಂದೇ ಒಂದು ನಿಮಿಷದ ಹಿಂದಷ್ಟೇ, ಯಾವುದೋ ಆಶ್ರಮವೊಂದರ ಆರಾಮ ವಾತಾವರಣದಂತಿದ್ದ ತರೀಕೆರೆ ಆಸ್ಪತ್ರೆ, ಇದ್ದಕ್ಕಿದ್ದಂತೆ ಬದಲಾಗಿತ್ತು. ಎಮರ್ಜೆನ್ಸಿ ವಾರ್ಡಿನ ಉದ್ದಗಲಕ್ಕೂ ರಕ್ತ ಚೆಲ್ಲಿತ್ತು. ಎತ್ತ ತಿರುಗಿದರೂ ಡಾಕ್ಟರ್, ನರ್ಸ್‌ಗಳು. ಯಾರು ಏನು ಹೇಳುತ್ತಿದ್ದಾರೆ, ಯಾರಿಗೆ ಹೇಳುತ್ತಿದ್ದಾರೆ, ಯಾರು ಏನು ಮಾಡುತ್ತಿದ್ದಾರೆ ಎಂಬುದೊಂದೂ ಕಣ್ಣಿಗೆ ಅರಿವಾಗದ ಅಯೋಮಯ ಸನ್ನಿವೇಶ. ಇದೇ ಸನ್ನಿವೇಶದ ಒಂದು ತುದಿಯಲ್ಲಿ, ಅಪಘಾತದಲ್ಲಿ ಗಾಯಗೊಂಡು ಬಂದಿದ್ದ ಯುವಕನೊಬ್ಬನ ಹಣೆಗೆ ನರ್ಸ್‌ವೊಬ್ಬರು ಬ್ಯಾಂಡೇಜು ಸುತ್ತುತ್ತ ಏನನ್ನೋ ಹೇಳುತ್ತಿದ್ದರು. ಆತ ಅವರ ಮೊಗವನ್ನು ದಿಟ್ಟಿಸುತ್ತ ನಗು ತುಳುಕಿಸುತ್ತಿದ್ದ…
ಸಹ್ಯಾದ್ರಿ ನಾಗರಾಜ್ ಬರೆಯುವ ಅಂಕಣ ‘ಸೊಗದೆ’
ತರೀಕೆರೆ-ಭದ್ರಾವತಿಯನ್ನು ಜೋಡಿಸುವ ರಾಷ್ಟ್ರೀಯ ಹೆದ್ದಾರಿ 206. ಬೇಲೇನಹಳ್ಳಿಯ ಕೆರೆ ದಾಟಿ, ಗಂಟೆಕಣಿವೆ ಶುರುವಾಗುವ ಮೊದಲ ತಿರುವು. ಸರಕು ತುಂಬಿದ ಲಾರಿಯೊಂದು ಎದುರುಬದಿಯ ಲೇನಿನಲ್ಲಿ ಆ ಕಡೆ ಮುಖ ತಿರುಗಿಸಿಕೊಂಡು ನಿಂತಿತ್ತು! ಮೊದಲೇ ಆಕ್ಸಿಡೆಂಟ್ ಝೋನು. ಅದರಲ್ಲೂ, ಗಾಡಿ ಇದ್ದದ್ದು ಎದುರುಬದಿಯ ಲೇನಿನಲ್ಲಿ. ಆಕ್ಸಿಡೆಂಟ್ ಆಗುವ ಮುಂಚೆ ಎಚ್ಚರಿಸಬೇಕಲ್ಲ… ಹೆಚ್ಚೂಕಡಿಮೆ ಓಡಿದೆ. ಅಲ್ಲಿಗೆ ತಲುಪಿದ ಮೇಲೆ, ಮೊದಲಿದ್ದ ಗಾಬರಿ ಹಲವು ಪಟ್ಟು ಹೆಚ್ಚಿತು. ಲಾರಿ ಅದಾಗಲೇ ಎದುರುಬದಿಯ ಲೇನನ್ನೂ ದಾಟಿ, ರಸ್ತೆ ಬಲಬದಿಯ ದೊಡ್ಡ ನೀಲಗಿರಿ ಮರಕ್ಕೆ ಜೋರು ಡಿಕ್ಕಿ ಹೊಡೆದು ನಿಂತಿತ್ತು. ಸಣ್ಣಗೆ ಹೊಗೆ.
ಅದೇ ನೀಲಗಿರಿ ಮರದಡಿ ಡ್ರೈವರ್ ಕಾಲು ಚಾಚಿ ಕುಂತಿದ್ದ. ತರಚು ಗಾಯ ಬಿಟ್ಟರೆ ಎಂತ ಆಗಿರಲಿಲ್ಲ. ಅವನ ಕೋರಿಕೆ ಮೇರೆಗೆ ಲಾರಿಯ ಸುತ್ತ ಒಂದಷ್ಟು ಕಲ್ಲು ಜೋಡಿಸಿ, ಹಿಂಬದಿ-ಮುಂಬದಿಗೆ ಸೊಪ್ಪು ಸಿಗಿಸಿದೆ. “ಥ್ಯಾಂಕ್ಯೂ ಬಾಸ್. ಲೋಡ್ ಜಾಸ್ತಿ ಆಯ್ತು ಅಂದ್ರೂ ಕೇಳ್ಲಿಲ್ಲ. ಬಿಗ್ದು-ಬಿಗ್ದು ತುಂಬಿದ್ರು. ನಾನೂ ಗಡಿಬಿಡೀಲಿ ಟಯರ್ ಚೆಕ್ ಮಾಡ್ಲಿಲ್ಲ. ರೈಟ್ ಫ್ರಂಟ್ ಟಯರ್ ಬಸ್ಟ್ ಆಗೋಯ್ತು. ಸದ್ಯ ಕ್ಲೀನರ್ ಬರ್ಲಿಲ್ಲ. ಅವನು ಬಂದಿದ್ದಿದ್ರೆ ಅವ್ರಪ್ನಾಣೆ ಸತ್ತೋಗಿರೋನು,” ಅನ್ನುತ್ತಾ, ಲಾರಿಯ ಒಂದು ಬದಿಯತ್ತ ಬೆರಳು ತೋರಿದ. ನೀಲಗಿರಿ ಮರಕ್ಕೆ ಇನ್ನೂ ಅಂಟಿಕೊಂಡೇ ಇದ್ದ ಲಾರಿಯ ಎಡಮೂತಿಯನ್ನು ಗಮನಿಸಿದೆ. ಏನು ಹೇಳುವುದೆಂದು ತೋಚಲಿಲ್ಲ. ನಿಟ್ಟುಸಿರು. “ನನ್ನ ಲಕ್ಕು ಚೆನ್ನಾಗಿತ್ತು; ಆ ಮರ ಸ್ಟೇರಿಂಗ್ ಕಡೀಕೆ ಸಿಗ್ಲಿಲ್ಲ. ಇಲ್ಲಾಂದಿದ್ರೆ ಇಷ್ಟೊತ್ಗೆ ನನ್ ಕತೆ…” ಅನ್ನುತ್ತ, ಕಣ್ತುಂಬಿಕೊಂಡು, ಕೈಲಿದ್ದ ಪರ್ಸ್ ಬಿಡಿಸಿ, ಏನನ್ನೋ ದಿಟ್ಟಿಸತೊಡಗಿದ. ಅವನ ಮೊಗದಲ್ಲಿದ್ದ ನೋವು ಅಕ್ಷರಶಃ ಮಾಯವಾಗಿ, ನೆಮ್ಮದಿಯ ಮಂದಹಾಸ ಆವರಿಸಿದ್ದನ್ನು ಕಂಡು ಬೆರಗಾದೆ. ಎರಡು ಹೆಜ್ಜೆ ಮುಂದಕ್ಕಿಟ್ಟು ಇಣುಕಿ ನೋಡಿದರೆ, ಹುಡುಗಿಯೊಬ್ಬಳ ಜೊತೆ ಅವನಿರುವ ಫೋಟೊ. ಇಂಥದ್ದೇ ಮಂದಹಾಸವನ್ನು 1997ರ ಒಂದು ರಾತ್ರಿ ತರೀಕೆರೆ ಸರ್ಕಾರಿ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡಿನಲ್ಲಿ ಕಂಡದ್ದಿತ್ತು.
*****
ಕೆಮ್ಮಣ್ಣುಗುಂಡಿಯಲ್ಲಿ ಕಬ್ಬಿಣದ ಅದಿರಿನ ಕನ್ನ ಇನ್ನೂ ಜೀವಂತ ಇದ್ದ ಹೊತ್ತದು. ಕೆಂಪು, ಹಸುರು, ಹಳದಿ ಬಣ್ಣದ ಸಣ್ಣ ಟಿಪ್ಪರ್ ಲಾರಿಗಳು ಕೆಮ್ಮಣ್ಣುಗುಂಡಿಯಿಂದ ಭದ್ರಾವತಿವರೆಗಿನ ರಸ್ತೆಯನ್ನು ನಿರ್ದಾಕ್ಷಿಣ್ಯವಾಗಿ ಹುರಿದು ಮುಕ್ಕುತ್ತಿದ್ದವು. ನಮ್ಮೂರಿನ (ನಂದಿ) ಗೇಟ್ ಇದ್ದದ್ದು ಈ ಕಬ್ಬಿಣದ ಅದಿರು ಕೊಳ್ಳೆಯಾಗುತ್ತಿದ್ದ ದಾರಿಯ ನಟ್ಟನಡುವೆ. ಅಂದರೆ, ನಮ್ಮೂರಿನ ಗೇಟ್‌ನಿಂದ ಅತ್ತ ಕೆಮ್ಮಣ್ಣುಗುಂಡಿಗೂ 26 ಕಿಲೋಮೀಟರ್, ಇತ್ತ ಭದ್ರಾವತಿಗೂ 26 ಕಿಲೋಮೀಟರ್. ಆಗಷ್ಟೇ ಪ್ರೈಮರಿ ಶಾಲೆಯಲ್ಲಿದ್ದ ನಮಗೆಲ್ಲ ಈ ಲಾರಿಗಳ ಕತೆಗಳು ಸಿಗುತ್ತಿದ್ದದ್ದು ಪುಕಾರಿನ ರೂಪದಲ್ಲಿ.
ಬೆಳ್ಳಂಬೆಳಗ್ಗೆ ಸಂತೆಗೆಂದು ಟ್ರ್ಯಾಕ್ಟರಿನಲ್ಲಿ ತರೀಕೆರೆಯತ್ತ ಹೋಗುವಾಗಲೋ, ಲಿಂಗದಹಳ್ಳಿ ಕಡೆಗೆ ಬಸ್ಸಿನಲ್ಲಿ ಹೋಗುವಾಗಲೋ ಈ ಲಾರಿಗಳ ದರ್ಶನ. ಒಂದರ ಹಿಂದೊಂದು ರೇಸ್ ಕಾರುಗಳಂತೆ ಕಂಡು, ಕಂಡಷ್ಟೇ ವೇಗದಲ್ಲಿ ಕಣ್ಮರೆಯಾಗುತ್ತಿದ್ದವು. ಆಟೋಗಳಂತೆಯೇ, ಈ ಲಾರಿಗಳ ಹಿಂದೆಮುಂದೆಯೂ ತರಹೇವಾರಿ ಹೆಸರುಗಳು, ಡೈಲಾಗುಗಳು. ಮೇಕೆಗಡ್ಡದ ತುಂಬಾ ಕೆಂಪು ಧೂಳು ತುಂಬಿಕೊಂಡ ಡ್ರೈವರ್‌ಗಳ ಮೊಗ. ಹಾರ್ನ್ ಇಲ್ಲದೆ ಗಾಡಿ ಒಂದಿಂಚೂ ಕದಲದು ಎಂಬ ಭ್ರಮೆ. ಅದಿರು ತುಂಬಿರಲಿ ಅಥವಾ ಖಾಲಿ ಇರಲಿ, ವೇಗ ಮಾತ್ರ ಸಾವಿಗೆ ಸರಿಸಮ.
ಊರಿನವರ ಬಾಯಿಯಲ್ಲಿ ಈ ಲಾರಿಗಳು ಮೂರು ಕಾರಣಕ್ಕೆ ಪ್ರಸಿದ್ಧವಾಗಿದ್ದವು. ಒಂದು, ವೇಗದ ಕಾರಣಕ್ಕೆ. ಇನ್ನೊಂದು, ಡ್ರೈವರ್‌ಗಳ ಉಡಾಳತನದ ಕಾರಣಕ್ಕೆ. ಮತ್ತೊಂದು, ಆಕ್ಸಿಡೆಂಟ್‌ಗಳ ಕಾರಣಕ್ಕೆ. ಕೆಮ್ಮಣ್ಣುಗುಂಡಿಯ ಪೊಲೀಸ್ ಔಟ್‌ಪೋಸ್ಟ್‌ನಿಂದ ಶುರುಮಾಡಿ, ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಸ್ಟೇಷನ್ ನಡುವಿನ ಎಲ್ಲ ಠಾಣೆಗಳಲ್ಲಿ ದಾಖಲಾದ ಅಪಘಾತದ ಅಂಕಿ-ಅಂಶಗಳನ್ನು ಒಂದೆಡೆ ಸೇರಿಸಿದರೆ, ಈಗಲೂ, ಮುಂದಿನ ಹಲವು ದಶಕಗಳು ಕಳೆದರೂ, ಈ ಲಾರಿಗಳದ್ದೇ ಪಾರುಪತ್ಯ.
ಕೆಮ್ಮಣ್ಣುಗುಂಡಿಯಿಂದ ತರೀಕೆರೆವರೆಗೆ ಜಿಲ್ಲಾ ರಸ್ತೆ. ತರೀಕೆರೆಯಿಂದ ಭದ್ರಾವತಿವರೆಗೆ ರಾಷ್ಟ್ರೀಯ ಹೆದ್ದಾರಿ. ಜಿಲ್ಲಾ ರಸ್ತೆಯಲ್ಲಿ ಆ ಕಾಲದಲ್ಲಂತೂ ದೊಡ್ಡ ವಾಹನಗಳು ತುಂಬಾನೇ ಕಡಿಮೆ ಇದ್ದವು. ಆದರೆ, ಹೆದ್ದಾರಿಯಲ್ಲಿ ಕೇಳಬೇಕೇ? ಕೆಎಸ್‌ಆರ್‌ಟಿಸಿ ಬಸ್‌ಗಳು, ಖಾಸಗಿ ಬಸ್‌ಗಳು, ಸರಕು ಸಾಗಣೆ ಲಾರಿಗಳು, ಕಬ್ಬು ಸಾಗಿಸುತ್ತಿದ್ದ ಲಾರಿಗಳು, ಕಾರುಗಳು, ಟ್ರ್ಯಾಕ್ಟರ್‌ಗಳು, ಎತ್ತಿನ ಗಾಡಿಗಳು… ಹೀಗೆ ಸದಾ ಗಿಜಿಗಿಜಿ. ಇದೇ ಕಾರಣಕ್ಕೆ ಅಪಘಾತಗಳೂ ಹೆಚ್ಚಿದ್ದವು. ಅವುಗಳಲ್ಲಿ ಹೆಚ್ಚೂಕಡಿಮೆ ಮುಕ್ಕಾಲುಪಾಲು ಕಬ್ಬಿಣದ ಅದಿರು ಸಾಗಿಸುವ ಲಾರಿಗಳದ್ದೇ ಪಾಲು.
ಒಂದೇ ಬಗೆಯ ಹಾವಭಾವದ ಡ್ರೈವರ್‌ಗಳನ್ನು ಅದ್ಯಾವ ಬಲೆಯಲ್ಲಿ ಹಿಡಿದು ತರಲಾಗಿತ್ತೋ ಗೊತ್ತಿಲ್ಲ. ಸಂಯಮ ಎಂಬುದು ಭೂತಕನ್ನಡಿಯಲ್ಲಿ ಹುಡುಕಿದರೂ ಸಿಗುತ್ತಿರಲಿಲ್ಲ. ಕ್ಯಾಂಟೀನುಗಳಲ್ಲಿ ಜಗಳ ಮಾಡಿಕೊಳ್ಳುವುದು, ಓವರ್‌ಟೇಕ್ ಮಾಡುವಾಗ ಬೇಕೆಂದೇ ಸಡನ್ನಾಗಿ ಎಡಕ್ಕೆ ಎಳೆಯುವುದು, ಸದಾ ಗುಟ್ಕಾ ಅಗಿದು ಉಗಿಯುತ್ತಿರುವುದು, ಡ್ರೈವ್ ಮಾಡುತ್ತಲೇ ಬೀಡಿ ಎಳೆಯುವುದು, ಎಣ್ಣೆ ಹೊಡೆದು ಗಾಡಿ ಓಡಿಸುವುದು, ಯಾರಾದರೂ ಪ್ರಯಾಣಿಕರು ಕೈ ಅಡ್ಡ ಹಾಕಿದರೆ ಹತ್ತಿಸಿಕೊಂಡು ಅವರಿಂದ ಹೆಚ್ಚು ದುಡ್ಡು ಕೇಳಿ ಬೆದರಿಸುವುದು… ಹೀಗೆ ಒಂದು ಪುಟ ಬರೆಯುವಷ್ಟು ದೂರುಗಳ ರಾಶಿ. ‘ಮುಖಾಮುಖಿ ಡಿಕ್ಕಿ’ ಎಂಬುದಂತೂ ಆ ಕಾಲದ ತೀರಾ ಸಾಮಾನ್ಯ ಸುದ್ದಿ. ಇನ್ನು, ಹಿಂದಿನಿಂದ ಗುದ್ದಿದ ಕೇಸುಗಳಂತೂ ಲೆಕ್ಕವಿಲ್ಲದಷ್ಟು.
“ನನ್ನ ಲಕ್ಕು ಚೆನ್ನಾಗಿತ್ತು; ಆ ಮರ ಸ್ಟೇರಿಂಗ್ ಕಡೀಕೆ ಸಿಗ್ಲಿಲ್ಲ. ಇಲ್ಲಾಂದಿದ್ರೆ ಇಷ್ಟೊತ್ಗೆ ನನ್ ಕತೆ…” ಅನ್ನುತ್ತ, ಕಣ್ತುಂಬಿಕೊಂಡು, ಕೈಲಿದ್ದ ಪರ್ಸ್ ಬಿಡಿಸಿ, ಏನನ್ನೋ ದಿಟ್ಟಿಸತೊಡಗಿದ. ಅವನ ಮೊಗದಲ್ಲಿದ್ದ ನೋವು ಅಕ್ಷರಶಃ ಮಾಯವಾಗಿ, ನೆಮ್ಮದಿಯ ಮಂದಹಾಸ ಆವರಿಸಿದ್ದನ್ನು ಕಂಡು ಬೆರಗಾದೆ.
ಏನೋ ಕಡ ಕೊಟ್ಟವರಂತೆ ಕೆಮ್ಮಣ್ಣುಗುಂಡಿ-ಭದ್ರಾವತಿ ನಡುವೆ ಹಗಲೂ-ರಾತ್ರಿ ಅಡ್ಡಾಡುತ್ತಿದ್ದ ಈ ಲಾರಿಗಳ ಮೂರು ಆಕ್ಸಿಡೆಂಟುಗಳು ಬದುಕಿಡೀ ಕಾಡುವಂಥವು. ಅದೊಂದು ದಿನ ಭದ್ರಾವತಿಗೆ ಹೋಗಿಬಂದ ಅಪ್ಪನ ಮಾತಿನಲ್ಲಿ ನಡುಕ. ಗಮನಿಸಿದರೆ, ಆತ ತನ್ನ ಗೆಳೆಯರಿಗೆ ಹೇಳುತ್ತಿದ್ದದ್ದು ಕಾರೇಹಳ್ಳಿ ಬಳಿ ನಡೆದ ಅಪಘಾತದ ಕುರಿತು. ಮರುದಿನದ ಪತ್ರಿಕೆಯಲ್ಲಿ, ಒಂದು ಬದಿಯನ್ನೇ ಕಳೆದುಕೊಂಡು ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಫೋಟೊ ಜೊತೆಗೆ, ಏಳು ಮಂದಿಯ ಸಾವಿನ ಸುದ್ದಿ! ವಾಹನವೊಂದನ್ನು ಹಿಂದಿಕ್ಕಲು ಹೊರಟಿದ್ದ ಅದಿರು ತುಂಬಿದ್ದ ಲಾರಿಯವ, ಎದುರಿನಿಂದ ಯಾವುದಾದರೂ ಗಾಡಿ ಬರುತ್ತಿದೆಯಾ ಎಂದು ನೋಡಲು ಬಲಕ್ಕೊಮ್ಮೆ ಸರಿಸಿದ್ದಾನೆ. ಅದೇ ಹೊತ್ತಿಗೆ, ತೀರಾ ಹತ್ತಿರದಲ್ಲೇ ಕೆಎಸ್‌ಆರ್‌ಟಿಸಿ ಬಸ್ ಕಂಡು, ತಕ್ಷಣ ಎಡಕ್ಕೆ ತಿರುಗಿಸಿದ್ದಾನೆ. ಆದರೆ, ಪೂರಾ ಎಡಕ್ಕೆ ಸರಿಯುವ ಮೊದಲೇ, ಬಸ್‌ನ ಕಾಲು ಭಾಗದಷ್ಟು ಅಂಚನ್ನು ಲಾರಿಯ ಹಿಂಬದಿಯ ಟಿಪ್ಪರ್‌ನ ಹೊರಚಾಚು ಸಂಪೂರ್ಣ ಎರೆದುಹಾಕಿತ್ತು!
ಇನ್ನೊಂದು ಆಕ್ಸಿಡೆಂಟು ನಡೆದದ್ದು ಕೆಂಚಾಪುರದ ಬಳಿ. ಗುಟ್ಕಾ ಹಾಕಿಕೊಂಡು, ದಾರಿಯುದ್ದಕ್ಕೂ ಬಾಗಿ-ಬಾಗಿ ಡೋರ್‌ನಿಂದ ಆಚೆ ಉಗಿಯುತ್ತಿದ್ದ ಡ್ರೈವರನೊಬ್ಬ, ಸಣ್ಣ ಸೇತುವೆ ಬಳಿ ಹಾಗೆ ಬಾಗಿ ಉಗಿಯಲು ಹೋಗಿ, ಆಕಸ್ಮಿಕವಾಗಿ ಡೋರ್ ತೆರೆದುಕೊಂಡು, ಕೆಳಕ್ಕೆ ಬಿದ್ದು ಸತ್ತಿದ್ದ. ಆ ಲಾರಿ ಮನೆಯೊಂದರೊಳಕ್ಕೆ ನುಗ್ಗಿತ್ತು. ಆ ಹೊತ್ತಿನಲ್ಲಿ ಆ ಮನೆಯಲ್ಲಿ ಯಾರೂ ಇದ್ದಿರಲಿಲ್ಲ.
ಮೂರನೆಯ ಅಪಘಾತ ನಡೆದದ್ದು 1997ರ ಒಂದು ರಾತ್ರಿ, ಬಳ್ಳಾವರ ಬಳಿ. ಎಂಟು ಗಂಟೆಯ ಹೊತ್ತಿಗೆ ಲಿಂಗದಹಳ್ಳಿಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಲಾರಿಗೆ ಕೈ ಅಡ್ಡ ಹಾಕಿದ್ದಾರೆ. ಲಾರಿ ಖಾಲಿ ಇತ್ತು, ಜನರೂ ಜಾಸ್ತಿ ಇದ್ದರು, ಖರ್ಚಿಗೆ ಕಾಸಾದೀತು ಅಂದುಕೊಂಡ ಡ್ರೈವರ್, ಎಲ್ಲರನ್ನೂ ಹಿಂದೆ ಹತ್ತಿಸಿಕೊಂಡು ಯಾವತ್ತಿನ ವೇಗದಲ್ಲಿ ಓಡಿಸಿದ್ದಾನೆ. ಅದೊಂದು ದೊಡ್ಡ ತಿರುವಿನಲ್ಲಿ ಬೆಟ್ಟ ಹತ್ತುವಾಗ ಲಾರಿ ಮಗುಚಿದೆ. ಎಲ್ಲ ಗಾಯಾಳುಗಳನ್ನೂ ತರೀಕೆರೆ ಸರ್ಕಾರಿ ಆಸ್ಪತ್ರೆಗೆ ತಂದಿದ್ದರು. ಅವರೆಲ್ಲ ಕಾಫಿ ಎಸ್ಟೇಟಿನ ಪಟ್ಟಿಯಾಳುಗಳು. ವಿಷಯ ತಿಳಿದು, ಬಳ್ಳಾವರದ ಸುತ್ತಮುತ್ತಲ ಜನರೆಲ್ಲ ಆಸ್ಪತ್ರೆಯಲ್ಲಿ ಜಮಾಯಿಸಿದ್ದರು. ಧಾರಾಕಾರ ಅಳು, ಮಧ್ಯೆ-ಮಧ್ಯೆ ಆಕ್ರೋಶ, ಅಸಹಾಯಕತೆ, ಗಾಯಗೊಂಡವರ ಆಕ್ರಂದನ… ನಾನಂತೂ ಬೆವರಿದ್ದೆ!
ಒಂದೇ ಒಂದು ನಿಮಿಷದ ಹಿಂದಷ್ಟೇ, ಯಾವುದೋ ಆಶ್ರಮವೊಂದರ ಆರಾಮ ವಾತಾವರಣದಂತಿದ್ದ ತರೀಕೆರೆ ಆಸ್ಪತ್ರೆ, ಇದ್ದಕ್ಕಿದ್ದಂತೆ ಬದಲಾಗಿತ್ತು. ಎಮರ್ಜೆನ್ಸಿ ವಾರ್ಡಿನ ಉದ್ದಗಲಕ್ಕೂ ರಕ್ತ ಚೆಲ್ಲಿತ್ತು. ಎತ್ತ ತಿರುಗಿದರೂ ಡಾಕ್ಟರ್, ನರ್ಸ್‌ಗಳು. ಯಾರು ಏನು ಹೇಳುತ್ತಿದ್ದಾರೆ, ಯಾರಿಗೆ ಹೇಳುತ್ತಿದ್ದಾರೆ, ಯಾರು ಏನು ಮಾಡುತ್ತಿದ್ದಾರೆ ಎಂಬುದೊಂದೂ ಕಣ್ಣಿಗೆ ಅರಿವಾಗದ ಅಯೋಮಯ ಸನ್ನಿವೇಶ. ಇದೇ ಸನ್ನಿವೇಶದ ಒಂದು ತುದಿಯಲ್ಲಿ, ಅಪಘಾತದಲ್ಲಿ ಗಾಯಗೊಂಡು ಬಂದಿದ್ದ ಯುವಕನೊಬ್ಬನ ಹಣೆಗೆ ನರ್ಸ್‌ವೊಬ್ಬರು ಬ್ಯಾಂಡೇಜು ಸುತ್ತುತ್ತ ಏನನ್ನೋ ಹೇಳುತ್ತಿದ್ದರು. ಆತ ಅವರ ಮೊಗವನ್ನು ದಿಟ್ಟಿಸುತ್ತ ನಗು ತುಳುಕಿಸುತ್ತಿದ್ದ… ಉಫ್… ಇಡೀ ಎಮರ್ಜೆನ್ಸಿ ವಾರ್ಡಿನ ಎಲ್ಲ ಆಕ್ರಂದನ, ಸಿಟ್ಟು, ಆಕ್ರೋಶ, ಅಸಹಾಯಕತೆ, ಅಳು, ಸಂಕಟಗಳನ್ನು ಅಮಾನತು ಮಾಡುವಷ್ಟು ದೊಡ್ಡದಿತ್ತು ಗಾಯಾಳುವಿನ ಆ ಕಿರುನಗು.
******
ಬಳ್ಳಾವರ ಅಪಘಾತದ ಒಂದು ವರ್ಷದ ನಂತರ, 1998ರಲ್ಲಿ, ಕಬ್ಬಿಣದ ಅದಿರನ್ನು ಯಶಸ್ವಿಯಾಗಿ ಕೊಳ್ಳೆ ಹೊಡೆದು ಮುಗಿಸಿದ ಹಿನ್ನೆಲೆಯಲ್ಲಿ, ಕೆಮ್ಮಣ್ಣುಗುಂಡಿಯಿಂದ ಭದ್ರಾವತಿಯ ಸರ್ ಎಂ ವಿ ಉಕ್ಕಿನ ಕಾರ್ಖಾನೆಗೆ ಅದಿರು ಸಾಗಿಸುತ್ತಿದ್ದ ಲಾರಿಗಳೆಲ್ಲ ರಸ್ತೆಯಿಂದ ದಿಢೀರ್ ನಾಪತ್ತೆಯಾದವು. ಆದರೆ, ಆ ಲಾರಿಗಳ ಮಾಲೀಕರು ಬಹುತೇಕ ತರೀಕೆರೆಯವರೇ ಆಗಿದ್ದರು ಅಥವಾ ತರೀಕೆರೆಯ ನಂಟು ಇದ್ದವರೇ. ಹಾಗಾಗಿ, ಅಲ್ಲೊಂದು ಇಲ್ಲೊಂದು ಲಾರಿಗಳು ಪೇಟೆ ಸುತ್ತಮುತ್ತಲ ಕಟ್ಟಡ ಕಾಮಗಾರಿಗಳ ಸ್ಥಳದಲ್ಲೋ, ಕಲ್ಲು ಕ್ವಾರಿಗಳ ಬಳಿಯೋ, ಗ್ಯಾರೇಜಿನಲ್ಲೋ, ಪೊಲೀಸ್ ಸ್ಟೇಷನ್ನುಗಳ ಆಸುಪಾಸೋ ಕಾಣಿಸುತ್ತಿದ್ದುಂಟು. 2010ರ ವೇಳೆಗೆ ಆ ಸ್ಥಳದಿಂದಲೂ ಎತ್ತಂಗಡಿಯಾದವು.
ದಶಕಗಳ ಕಾಲದ ಕೆಮ್ಮಣ್ಣುಗುಂಡಿಯ ಕಬ್ಬಿಣದ ಅದಿರಿನ ದುಸ್ಸಾಹಸಗಾಥೆಗೆ 1998ರಲ್ಲಿ ತೆರೆ ಬಿದ್ದದ್ದೇನೋ ಹೌದು. 2010ರ ಸುಮಾರಿಗೆ ಈ ದುಸ್ಸಾಹಸಗಾಥೆಯ ಪಳೆಯುಳಿಕೆಗಳಾಗಿದ್ದ ಟಿಪ್ಪರ್ ಲಾರಿಗಳೂ ಸಂಪೂರ್ಣ ಕಾಣೆಯಾದದ್ದೂ ನಿಜ. ಆದರೆ, ಇಡೀ ಅಧ್ಯಾಯಕ್ಕೆ ಚಂದದ ಎಳ್ಳುನೀರು ಬಿಟ್ಟದ್ದು ಮಾತ್ರ ಕೇರಳ ಮೂಲದ ರಸ್ತೆ ಕಾಮಗಾರಿ ಕಂಪನಿ. 2001ರಲ್ಲಿ ತರೀಕೆರೆಯಿಂದ ಚಿಕ್ಕಮಗಳೂರಿನವರೆಗೆ (ಲಿಂಗದಹಳ್ಳಿ, ಶಾಂತವೇರಿ, ಕೈಮರ ಮಾರ್ಗ) ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದ್ದ ಈ ಸಂಸ್ಥೆ, ಅದುವರೆಗೂ ಇದ್ದ ರಸ್ತೆಯನ್ನು ಬುಡಸಮೇತ ಕಿತ್ತು ಬಿಸಾಡಿ, ಮೂರು ಅಡಿ ಆಳಕ್ಕೆ ಅಗೆದು, ಹೊಸದಾಗಿ ಕಚ್ಚಾ ಕಾಂಕ್ರೀಟು ತುಂಬಿ, ತಳ ಗಟ್ಟಿ ಮಾಡಿ, ಅದರ ಮೇಲೆ ಜಲ್ಲಿ ಎಳೆದು, ಡಾಂಬರು ಹಾಕಿ ಗೆದ್ದಿತು. ಆ ಮೂಲಕ, ಕಬ್ಬಿಣದ ಅದಿರಿನ ಲಾರಿಗಳು ಹಲವು ದಶಕಗಳ ಕಾಲ ನಮ್ಮ ರಸ್ತೆಯಲ್ಲಿ ಚೆಲ್ಲಿದ್ದ ಕೆಂಪು ಧೂಳು, ರಸ್ತೆಯ ಎರಡೂ ಬದಿ ಬಿದ್ದಿರುತ್ತಿದ್ದ ಅದಿರಿನ ಕಲ್ಲುಗಳು ಮತ್ತು ರಸ್ತೆಗಂಟಿದ ರಕುತವನ್ನೂ ಗುರುತಿರದಂತೆ ಒರೆಸಿತ್ತು.
ಅಲ್ಲಲ್ಲಿ ಸೇತುವೆಗಳ ಬಳಿ, ನೀರು ಹೆಚ್ಚಿರುವ ಕಡೆ ಸಣ್ಣಪುಟ್ಟ ತೇಪೆಯ ಹೊರತಾಗಿ, ಬರೋಬ್ಬರಿ ಇಪ್ಪತ್ತು ವರ್ಷವಾದರೂ ಈಗಲೂ ಆ ಕಂಪನಿ ಮಾಡಿದ ರಸ್ತೆ ಜಗ್ಗದೆ ಉಳಿದುಕೊಂಡಿದೆ. ನೋವನ್ನೂ ಗೆಲ್ಲುವ ಜಾದೂ ಕಾಣಿಸಿದ ಆ ಇಬ್ಬರ ಮಂದಹಾಸ ಕೂಡ ನನ್ನೊಳಗೆ ಬೆಚ್ಚಗೆ ಉಳಿದಿದೆ.