ರಾಜಕೀಯ ಭಾಷಣಗಳ ಮುನ್ನ ಜನರನ್ನು ಮೈದಾನಗಳಿಗೆ ಕರೆತರುತ್ತಿದ್ದುದೇ ಈ ಜೋರಾಗಿ ಕೇಳಿಸುತ್ತಿದ್ದ ಹಾಡುಗಳು. ಎಲ್ಲೆಲ್ಲೂ ಈ ಹಾಡುಗಳು ಮೊಳಗುತ್ತಿದ್ದವು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಎಲ್ಲಿಯಾದರೂ ಉತ್ಸವಗಳಲ್ಲಿ ಹಾಡಲು ಬಂದಾಗ ಈ ಗೀತೆಗಳನ್ನು ಹಾಡಲಿ ಎಂದು ಜನ ಅಪೇಕ್ಷೆ ಪಡುತ್ತಿದ್ದರು. ಸಿ. ಅಶ್ವಥ್ ಅವರ ಸಂಗೀತ ಮತ್ತು ವೈದ್ಯನಾಥನ್ ಅವರ ವಾದ್ಯಸಂಯೋಜನೆಯಲ್ಲಿ ಮೂಡಿ ಬಂದ ಭಾವಗೀತೆಗಳು ಇವು. ಒಂದು ರೀತಿ ಸಿನಿಮಾ ಗೀತೆಗಳು ಭಾಸವಾಗುತ್ತಿದ್ದವು. ಇದನ್ನು ವಿಶೇಷ ಭಾವಗೀತೆಗಳು ಎಂದು ಕರೆಯಬಹುದಿತ್ತು.
ಕವಿ ದೊಡ್ಡರಂಗೇಗೌಡರ ಕವಿತೆಗಳನ್ನಿಟ್ಟುಕೊಂಡು ಸುಚೇಂದ್ರ ಪ್ರಸಾದ್‌ ನಿರ್ದೇಶಿಸಿರುವ ಸಿನಿಮಾ “ಮಾವು ಬೇವು” ಕುರಿತು ಬಿ.ಕೆ. ಸುಮತಿ ಬರಹ

ಹೂ ತೋಟದ ಹಾದಿಯಾಗೆ, ಯಾರಿಗುಂಟು ಯಾರಿಗಿಲ್ಲ,
ಮೂಡುತ ರವಿ ರಂಗು ತಂದೈತೆ..

ದೊಡ್ಡ ರಂಗೇಗೌಡರ ಈ ಕವನಗಳು 80ರ ದಶಕದಲ್ಲಿ ಹೊರಬಂದಿತು. ಆಗ ಇವು ಅತ್ಯಂತ ಜನಪ್ರಿಯವಾದ ಗೀತೆಗಳಾಗಿದ್ದವು. ಆಗ ಮೈದಾನ ಬಯಲು ಪ್ರದೇಶಗಳಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡುಗಳನ್ನು ಸ್ಪೀಕರ್‌ಗಳ ಮೂಲಕ ಜೋರಾಗಿ ಎಲ್ಲೆಡೆ ಕೇಳಿಸುವಂತೆ ಪ್ರಸಾರ ಮಾಡುವುದು ಒಂದು ಜನಪ್ರಿಯ ಸಂಗತಿಯಾಗಿತ್ತು.

ರಾಜಕೀಯ ಭಾಷಣಗಳ ಮುನ್ನ ಜನರನ್ನು ಮೈದಾನಗಳಿಗೆ ಕರೆತರುತ್ತಿದ್ದುದೇ ಈ ಜೋರಾಗಿ ಕೇಳಿಸುತ್ತಿದ್ದ ಹಾಡುಗಳು. ಎಲ್ಲೆಲ್ಲೂ ಈ ಹಾಡುಗಳು ಮೊಳಗುತ್ತಿದ್ದವು. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಎಲ್ಲಿಯಾದರೂ ಉತ್ಸವಗಳಲ್ಲಿ ಹಾಡಲು ಬಂದಾಗ ಈ ಗೀತೆಗಳನ್ನು ಹಾಡಲಿ ಎಂದು ಜನ ಅಪೇಕ್ಷೆ ಪಡುತ್ತಿದ್ದರು. ಸಿ. ಅಶ್ವಥ್ ಅವರ ಸಂಗೀತ ಮತ್ತು ವೈದ್ಯನಾಥನ್ ಅವರ ವಾದ್ಯಸಂಯೋಜನೆಯಲ್ಲಿ ಮೂಡಿ ಬಂದ ಭಾವಗೀತೆಗಳು ಇವು. ಒಂದು ರೀತಿ ಸಿನಿಮಾ ಗೀತೆಗಳು ಭಾಸವಾಗುತ್ತಿದ್ದವು. ಇದನ್ನು ವಿಶೇಷ ಭಾವಗೀತೆಗಳು ಎಂದು ಕರೆಯಬಹುದಿತ್ತು.

(ದೊಡ್ಡರಂಗೇಗೌಡ)

ಹಾಗೆ 40 ವರುಷಗಳಿಂದ ಕೇಳುತ್ತಾ ಬಂದ ಗೀತೆಗಳು ಇಂದು ಸಿನಿಮಾ ತೆರೆಗೆ ಕಥೆ ಒಂದಕ್ಕೆ ಪೂರಕವಾಗಿ ಅಳವಡಿಸಲ್ಪಟ್ಟಿವೆ, ಮತ್ತು ಖ್ಯಾತ ನಿರ್ದೇಶಕ, ಸಂವೇದನಾಶೀಲ ಚಿಂತಕರಾದ ಕಲಾವಿದ ಸುಚೇಂದ್ರ ಪ್ರಸಾದ್ ಅವರ ನಿರ್ದೇಶನದಲ್ಲಿ ಇವು ಮತ್ತೆ ಅರಳಿದೆ ಎಂದಾಗ ಒಂದು ಸಹಜ ಕುತೂಹಲ ಮೂಡುತ್ತದೆ.

“ಮಾವು ಬೇವು” ದೊಡ್ಡ ರಂಗೇಗೌಡರ ಗೀತ ಗುಚ್ಛ. ಇದನ್ನು ತೆರೆಯ ಮೇಲೆ ಅಳವಡಿಸಲೆಂದೇ ಚಿತ್ರಕಥೆಯನ್ನು ಬರೆಯಲಾಗಿದೆ, ಬಹಳ ದಿನಗಳಿಂದ ಇದನ್ನು ತೆರೆಯ ಮೇಲೆ ತರುವ ಆಲೋಚನೆ ಇತ್ತು, ದೊಡ್ಡ ರಂಗೇಗೌಡ ಅವರ ಕನಸು ಕೂಡ ಇದಾಗಿತ್ತು, ಹೀಗೆಲ್ಲಾ ಪ್ರಚಾರ ಪಡೆದಿತ್ತು ಈ ಪ್ರಯೋಗ. ಇದೀಗ 2023ರ ಚಿತ್ರೋತ್ಸವದಲ್ಲಿ ಈ ಚಿತ್ರ ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಯಿತು.

ದೊಡ್ಡ ರಂಗೇಗೌಡರು ಮತ್ತು ಸುಚೇಂದ್ರ ಪ್ರಸಾದ್ ಅವರ ಬಹುದಿನಗಳ ಕನಸು ನನಸಾಗಿದೆ. ಚಿತ್ರ ನೋಡಿದ ಕೂಡಲೇ ಏನು ಅನ್ನಿಸಿತು? ಈ ಪ್ರಶ್ನೆಗೆ ತಟ್ಟನೆ ಮೂಡಿದ ಭಾವ “ಮೌನ”. ಮೌನವನ್ನು ಮಾತಿಗೆ ಇಳಿಸಿ ಎಂದರೆ ಒಂದು ಪದ, “ಸ್ತಂಭೀಭೂತಳಾದೆ” ಹೆಚ್ಚು ಮಾತನಾಡಲು ಸಾಧ್ಯವಾಗಲಿಲ್ಲ.

ಎಲ್ಲಾ ನಿರ್ದೇಶಕರು ನಿರ್ಮಾಪಕರು ನಮ್ಮದು ವಿಭಿನ್ನ ಚಿತ್ರ ಎಂದು ಹೇಳುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ನಿಜಕ್ಕೂ ಇದು “ವಿಭಿನ್ನ” ಚಿತ್ರ. ಇದು ಒಂದು ಪ್ರಯೋಗ. ಹಿಂದೆ ಕೆ. ಎಸ್. ನರಸಿಂಹಸ್ವಾಮಿಗಳ ಮೈಸೂರು ಮಲ್ಲಿಗೆ ಕವನಗಳನ್ನು ಆಧರಿಸಿ ಚಲನಚಿತ್ರ ಒಂದನ್ನು ಕನ್ನಡದಲ್ಲಿ ನಿರ್ಮಾಣ ಮಾಡಲಾಗಿತ್ತು. ಅದಕ್ಕೂ ಇದಕ್ಕೂ ಅಜಗಜಾಂತರ ವ್ಯತ್ಯಾಸವಿದೆ.

ಇದು ಮನಸ್ಸಿನ ಕಥೆ. ಉತ್ತರ ಸಿಗದ ಪ್ರಶ್ನೆಗಳ ಕಥೆ. ಕಥೆಯ ಒಳಗೆ ಹರಿದಾಡುವ ಕಥೆ. ದೊಡ್ಡರಂಗೇಗೌಡರ ಕವನಗಳು ಸಹಜವಾಗಿ ತೆರೆಯ ಮೇಲೆ ಹರಡಿಕೊಂಡು ಕಿವಿಯನ್ನು ತಂಪು ಮಾಡುತ್ತವೆ. ಒಂದೊಂದಾಗಿ ಕವನ ಬಿಚ್ಚಿಕೊಳ್ಳುತ್ತದೆ. ಕಥೆಯೋ? ಕವನವೋ? ಸಾಕ್ಷ್ಯಚಿತ್ರವೋ? ಕವನದಂತೆ ಇರುವ ಕಥೆ. ಸಾಕ್ಷ್ಯಚಿತ್ರದ ಹಾಗಿರುವ ಚಲನಚಿತ್ರ.

80 ರ ಗೀತೆಗಳು, 2023ರ ಕಾಲದ ಸವಾಲುಗಳು. ಇವುಗಳನ್ನು blend ಮಾಡಿರುವ ರೀತಿ ಅನನ್ಯ. ಚಿತ್ರ ಕಾವ್ಯ ಇದು. ಚಿತ್ರದ ನಾಯಕ ಸಿದ್ದೇಶ್, ನಾಯಕಿ ನೂಪುರ್. ಇವರಿಬ್ಬರ ಭಿನ್ನಾಭಿಪ್ರಾಯಗಳು, ಮತ್ತು ಪ್ರೀತಿಯ ಬೆಸುಗೆ ಇಲ್ಲಿಂದ ಆರಂಭವಾಗುವ ಕಥೆ. ಮಾತು, ಸಂಭಾಷಣೆ ಮೂಲಕ ಏನನ್ನೂ ಹೇಳುವುದಿಲ್ಲ. ಹೇಳಬೇಕಾದದ್ದೆಲ್ಲವನ್ನೂ ದೃಶ್ಯ ಹೇಳುತ್ತದೆ. ದೃಶ್ಯದಲ್ಲಿ ಬರುವ ಸಂಭಾಷಣೆಯೇ ಬೇರೆ. ಕಾಣುವುದೇ ಬೇರೆ. ನಮಗೆ ಅರ್ಥವಾಗುವುದೇ ಬೇರೆ.

ಆದರೆ ನಮ್ಮ ಮನಸಿನಲ್ಲಿ ಅದನ್ನು ನಾವು ನಿರ್ದೇಶನ ಮಾಡುತ್ತೇವೆ. ನಮಗೆ ಒಂದು ಬಂಧ ಸಿಗುತ್ತದೆ. ಇದೇ ಚಿತ್ರದ ತಂತ್ರಗಾರಿಕೆ. ಧಾರಾವಾಹಿಗಳ ನಿರ್ದೇಶಕನಾದ ನಾಯಕ ಸಿದ್ದೇಶ, ತನ್ನ ಸಂವೇದನೆಗಳೇ ತೆರೆಯ ಮೇಲೆ ಬರುತ್ತಿದೆ ಎನಿಸಲು ಆರಂಭವಾದಾಗ ನಿರ್ದೇಶನವನ್ನೇ ಬಿಟ್ಟು ಹಳ್ಳಿಗೆ ಬರುತ್ತಾನೆ. ತನ್ನ ನೆಲಮೂಲದವಳಲ್ಲದ ಭಿನ್ನ ಸಂಸ್ಕೃತಿಯ ಹುಡುಗಿಯ ಪ್ರೀತಿಯಲ್ಲಿ ಮುಳುಗಿ ಹೋಗಿರುತ್ತಾನೆ. ಅವಳಲ್ಲೂ ಪ್ರೀತಿ ಇದೆ. ಹಳ್ಳಿಯವನಾದ ಇವನನ್ನು ಆಕೆ ಮನಸಾರೆ ಪ್ರೀತಿಸಿರುತ್ತಾಳೆ. ಏಳು ವರ್ಷಗಳ ಪ್ರೀತಿ. ಆದರೂ ಹೊಂದಾಣಿಕೆಯ ಕೊರತೆ ಬರುವುದು ಏಕೆ? ಹೊಂದಾಣಿಕೆ ಮಾಡಿಕೊಳ್ಳಲು ನಾವು ಹಿಂಜರಿಯುವುದು ಏಕೆ? ಹೊಂದಾಣಿಕೆ ಮಾಡಿಕೊಂಡಾಗಲೂ ಜೀವನ ಎಡವಿ ಬಿಡುವುದು, ಕೆಡುವುದು ಏಕೆ? ನಮ್ಮ ಸೆಳೆತಗಳು ಏನು? ಬದುಕು ಮತ್ತು ಭಾವನೆ, ವ್ಯಾಪಾರಿಕರಣದ ಆಲೋಚನೆಗಳು, ಬದುಕೇ ಒಂದು ವ್ಯಾಪಾರ ಅನ್ನುವುದಾದಲ್ಲಿ ಕಳೆದುಕೊಳ್ಳುವುದೇನು ಗಳಿಸುವುದು ಏನು?

ಇಂತಹ ಪ್ರಶ್ನೆಗಳಿಗೆ ವಿಭಿನ್ನ ನೆಲೆಯಲ್ಲಿ ಉತ್ತರಗಳನ್ನು ಹುಡುಕಲು ಪ್ರಯತ್ನಿಸುತ್ತದೆ ಈ ಚಿತ್ರ. ಸಿದ್ದೇಶನ ತಂದೆ ತಾಯಿ, ಸಿದ್ದೇಶನ ಕೌನ್ಸಿಲಿಂಗ್ ಗೆಳೆಯ ಗೆಳತಿ ದಂಪತಿ, ನಿರ್ದೇಶಕ ಸಿದ್ದೇಶನ ಜೊತೆ ಕೆಲಸ ಮಾಡುವ ಬಳಗ, ಈ ಪಾತ್ರಗಳ ಮೂಲಕ ನಮ್ಮ ಮನದ ಪ್ರಶ್ನೆಗಳು ಬಿಚ್ಚಿಕೊಳ್ಳುತ್ತ ಪರದಾಡುತ್ತವೆ. ಸಿದ್ದೇಶನ ಪ್ರೀತಿ, ಅವನು ಬೆಳೆದು ಬಂದ ಸಂಸ್ಕೃತಿ, ಅವನ ಸಂಘರ್ಷಗಳು ಒಂದು ಕಡೆ. “ಸಿರಿ ಭೂ ವಲಯ” ಇದರ ಬಗ್ಗೆ ಅವನಿಗೆ ಇರುವ ಅಪಾರ ಒಲವು ಅದನ್ನು ಅರ್ಥಮಾಡಿಕೊಳ್ಳಲು ಅವನು ಪ್ರಯತ್ನಿಸುವ ವಿಧಾನಗಳು, ಮತ್ತೊಂದು ಮಗ್ಗುಲಾಗಿ ಗೋಚರಿಸುತ್ತದೆ.

ಪ್ರಪಂಚದ ಪ್ರಕೃತಿಯಲ್ಲಿ ಏನೆಲ್ಲ ಹೇಳಲಾಗಿದೆಯೋ ಅದೆಲ್ಲವೂ ಸಿರಿ ಭೂ ವಲಯದಲ್ಲಿ ಇದೆ ಎನ್ನುತ್ತಾ ಅದರ ಪಾಠ ಮಾಡುತ್ತ ಅವಧೂತ ಶೈಲಿಯ ಜೀವನ ನಡೆಸುತ್ತಿದ್ದವನು ಕೂಡ ಹುಡುಕಾಟದಲ್ಲಿಯೇ ಇದ್ದಾನೆ ಎಂಬ ಸತ್ಯವನ್ನು ಚಿತ್ರ ದರ್ಶನ ಮಾಡಿಸುತ್ತದೆ.

(ಸುಚೇಂದ್ರ ಪ್ರಸಾದ್‌)

“ಊಟ ಆಯ್ತಾ” ಅಂತ ಪ್ರತಿ ಬಾರಿ ಸಂಭಾಷಣೆ ಆರಂಭಿಸುವ ತಾಯಿ ಅದೊಂದೇ ವಾಕ್ಯದಲ್ಲಿ ಹೃದಯವನ್ನು ಬಸಿದುಬಿಡುತ್ತಾಳೆ.

“ಊಟ ಆಯ್ತಾ” ಎನ್ನುವುದು ಒಂದು ತಾಯಿತನದ ಮೇರುಮಟ್ಟದ ಪ್ರಾತಿನಿಧಿಕ ಸಂಕೇತವಾಗಿದೆಯೋ ಎಂಬಂತೆ ಚಿತ್ರಿತವಾಗಿದೆ. ಹಿರಿಯ ದಂಪತಿಗಳ ಪಾತ್ರದಲ್ಲಿ ನಟ ಶ್ರೀನಿವಾಸ ಮೂರ್ತಿ ಮತ್ತು ಸುಂದರಶ್ರೀ ಅವರನ್ನು ನೋಡುವುದು ಆಪ್ಯಾಯಮಾನ. ಹಳ್ಳಿಯಲ್ಲಿ ಏನೂ ತಿಳಿಯದ ಬಾಲೆ ಒಬ್ಬಳ ಮುಗ್ಧ ಪ್ರೀತಿ, ಪಟ್ಟಣದ ಕನಸು, ವಿಶೇಷ ಚೇತನ ಹಳ್ಳಿಗನ ಪ್ರೀತಿ ಬದುಕು, ಸಾಮಾನ್ಯರು, ಅವಿದ್ಯಾವಂತರು ಮತ್ತು ವಿದ್ಯಾವಂತರು, ಜ್ಞಾನ ಮತ್ತು ಶೋಷಣೆ, ಪ್ರೀತಿಯ ದಾಂಪತ್ಯ ಮತ್ತು ಬಿರುಕುಗಳು, ಮಕ್ಕಳ ಮೇಲೆ ಆಧುನಿಕ ತಂದೆ ತಾಯಿಗಳ ಚಿಂತನೆಗಳ ಪ್ರಭಾವ, ಲಿವಿಂಗ್ ಟುಗೆದರ್ ಪರಿಕಲ್ಪನೆ, ಯಾವುದೇ ಪ್ರದೇಶದ ಮೂಲ ಸಂಸ್ಕೃತಿ ಮತ್ತು ಇತರ ಸಂಸ್ಕೃತಿಗಳ ನಡುವೆ ಉಂಟಾಗುವ ಸಹಜ ಘರ್ಷಣೆಗಳು, ಇದ್ಯಾವುದನ್ನು ಮಾತಿನ ಮೂಲಕ ನಿರ್ದೇಶಕರು ಹೇಳುವುದಿಲ್ಲ. ಆದರೆ ಇಡೀ ಚಿತ್ರ ನಮ್ಮ ಹುಡುಕಾಟವಾಗಿರುತ್ತದೆ. ನಮ್ಮದೇ ದ್ವಂದ್ವಗಳಾಗಿರುತ್ತವೆ. ಇಂದು ನಾವು ನಿತ್ಯ ನೋಡುತ್ತಿರುವ ಕಥೆಗಳೇ ಆಗಿವೆ.

ಗಾಯಕಿ ಚೈತ್ರ ಇದರಲ್ಲಿ ಅಭಿನಯಿಸಿರುವುದು ವಿಶೇಷ. ಸಿದ್ದೇಶನ ಪಾತ್ರದಲ್ಲಿ ಕಲಾವಿದ ಸಂದೀಪ್ ಅವರ ಅಭಿನಯ ಅಮೋಘ. ಕೌನ್ಸೆಲಿಂಗ್ ಗೆಳೆಯನಾಗಿ ಡ್ಯಾನಿ ಕುಟ್ಟಪ್ಪ ಅವರ ಪಾತ್ರ ಕೂಡಾ ಕಾಡುತ್ತದೆ. ಗಾದೆ ರೂಪದ “ಸೂಚಿತ ” ಸಂಭಾಷಣೆ, ವಿಶೇಷ ಆಕರ್ಷಣೆ. “ತುಂಬಾ ಭಾರ ಆಯ್ತಾ?” ಎಂಬ ಸಂಭಾಷಣೆ ಸುಚೇಂದ್ರ ಪ್ರಸಾದ್ ಅವರನ್ನು ಕಾಡಿದ ಆಲೋಚನೆ ಇರಬಹುದು.

ಹೌದು. ಕೆಲವು ಕಡೆ ಭಾರ ಅನಿಸುತ್ತದೆ. ಹಾಗೆ ಭಾರ ಅನಿಸುವುದು ಭಾಷೆ ಅಥವಾ ಭಾವದಿಂದ ಅಲ್ಲ. ಇತ್ತೀಚೆಗೆ ನಮ್ಮ ಗ್ರಹಿಸುವ ಸಾಮರ್ಥ್ಯ ಕಡಿಮೆಯಾಗಿದೆ ಎನ್ನುವ ಕಾರಣಕ್ಕೆ.

ಚಿತ್ರ ಕಥೆಯಲ್ಲಿ ಅನಿರೀಕ್ಷಿತ ತಿರುವುಗಳು ಕೂಡಿಕೊಂಡು ಬಂದಿವೆ. ಎಲ್ಲೂ ಏನನ್ನೂ ತುರುಕಿದ ಹಾಗೆ ಭಾಸವಾಗುವುದಿಲ್ಲ. ಸಹಜ ಸುಂದರ ಶೈಲಿಯಲ್ಲಿ ಕಥೆ ನಿರೂಪಿತವಾಗಿದೆ. ಇಂತಹ ಕನ್ನಡ ಕೇಳಿ ಅದೆಷ್ಟು ದಿನಗಳಾಗಿದ್ದವೋ.. ಒಳ್ಳೆಯ ಕನ್ನಡ ಕೇಳಬೇಕೆಂದರೆ ಖಂಡಿತಾ ಈ ಚಿತ್ರವನ್ನು ನೋಡಲೇಬೇಕು. ಬದುಕು ಒಂದು ಟ್ರಾಫಿಕ್ ಜ್ಯಾಮ್‌ನಂತೆ. ಸಿಗ್ನಲ್ ಬಿದ್ದಿದೆ. ಶಬ್ದಗಳು ಶಬ್ದಗಳು ಶಬ್ದಗಳು…

ಟ್ರಾಫಿಕ್ 20 ನಿಮಿಷ ಮುಂದೆ ಸಾಗುವುದಿಲ್ಲ ಎಂದು ತಿಳಿದಾಗ ಎಲ್ಲ ವಾಹನಗಳು ಇಂಜಿನ್‌ಗಳನ್ನು ಆಫ್ ಮಾಡುತ್ತವೆ. ಅದೊಂದು ಬಗೆಯ ಮೌನ ರಸ್ತೆಯಲ್ಲಿ. ಹಸಿರು ದೀಪಕ್ಕಾಗಿ ಕಾಯುತ್ತಲೇ ಇರುತ್ತೇವೆ. ಹಸಿರು ಬರುವವರೆಗೂ ಗೊಣಗಾಡುತ್ತಲೇ ಇರುತ್ತೇವೆ. ಹಾಗೆಯೇ ಈ ಚಿತ್ರದ ಭಾವ. ಪ್ರಶ್ನೆಗಳು. ದ್ವಂದ್ವಗಳು. ಹುಡುಕಾಟ. ಬಂಧನಗಳು. ಬಿಡುಗಡೆ. ಬೆಸುಗೆ. ಮನೋ ವ್ಯಾಪಾರ ಮತ್ತು ಮನೋ ಮಾಲಿನ್ಯ… ಇವೆಲ್ಲದರ ಸುತ್ತ ಮನಸ್ಸು ಓಡುತ್ತದೆ. ಚಿತ್ರಮಂದಿರದಿಂದ ಹೊರಗೆ ಬಂದ ಕೂಡಲೇ ಹಸಿರು ದೀಪ ಸಿಗ್ನಲ್ ಬಿದ್ದ ಹಾಗೆ. ಮತ್ತೆ ಅದೇ ಟ್ರಾಫಿಕ್ ಜಾಮ್. ಸ್ಮಶಾನ ವೈರಾಗ್ಯ ಎನ್ನುತ್ತೇವೆಲ್ಲ, ಹಾಗೆ. ಒಟ್ಟಿನಲ್ಲಿ ಹೇಳುವುದಾದರೆ “ಮಾವು ಬೇವು” ಒಂದು ಪ್ರಯೋಗಶೀಲ ಸೃಜನಾತ್ಮಕ ಮತ್ತೂ ಬಹಳ ಕಾಡುವ ಚಿತ್ರ. ನಿರ್ದೇಶಕ ಸುಚೇಂದ್ರ ಪ್ರಸಾದ್ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು.