ಪೂರ್ಣಿಮಾ ಅವರದು ಅವರೇ ತಮ್ಮ ಮಾತಿನಲ್ಲಿ ಹೇಳುವ ಹಾಗೆ ‘ಕತೆಗಾತಿಯ ವೇಷ’. ಕಥೆಯ ನಿರುದ್ವಿಗ್ನತೆ ಮತ್ತು ನೆಮ್ಮದಿಯ ದೃಷ್ಟಿಯಿಂದ ಈ ವೇಷ ಅಗತ್ಯ ಎಂದು ನನಗೆ ಇಷ್ಟೆಲ್ಲ ಬರೆದಾದ ಮೇಲೆ ಈಗ ಅನ್ನಿಸುತ್ತದೆ. ಬರೆಯುವವರು ತಮ್ಮದೇ ಕಥೆಯಲ್ಲಿ ಕಳೆದುಹೋಗುವ ಅಪಾಯದಿಂದ ಬಿಡುಗಡೆಗೊಳ್ಳುವ ದಾರಿ ಇದು. ಇದು ಬಹು ದೊಡ್ಡ ಸವಾಲಿನ ದಾರಿಯೂ ಹೌದು. ಬರೆಯುವವರಿಗೆ ಈ ದಾರಿಯಲ್ಲಿ ಕ್ರಮಿಸಲು ಬಹಳ ಲೋಕಜ್ಞಾನ ಇರಬೇಕಾಗುತ್ತದೆ. ಸಕಲ ಜೀವ ವ್ಯಾಪಾರಗಳ ಕುರಿತು ಒಂದು ಸಮತೂಕದ ನಿರ್ಲಿಪ್ತತೆ ಬೇಕಾಗುತ್ತದೆ.
ಪೂರ್ಣಿಮಾ ಭಟ್ಟ ಸಣ್ಣಕೇರಿ ಕಥಾಸಂಕಲನ “ಕತೆ ಜಾರಿಯಲ್ಲಿರಲಿ” ಕೃತಿಗೆ ಅಬ್ದುಲ್ ರಶೀದ್ ಬರೆದ ಮುನ್ನುಡಿ
ಕನ್ನಡದ ಸಣ್ಣಕಥಾ ಪ್ರವಾಹದಲ್ಲಿ ಕಂಡೂ ಕಾಣಿಸದ ಹಾಗೆ ಎರಡು ಮೂರು ಬಗೆಯ ಜಲಮೂಲಗಳು ಹರಿಯುವುದನ್ನು ನಾನು ಗಮನಿಸಿರುವೆ. ಒಂದು, ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿ ಅದನ್ನು ಅಧ್ಯಾಪನ ಇತ್ಯಾದಿ ಪ್ರವೃತ್ತಿ ಮತ್ತು ಹೊಟ್ಟೆಪಾಡಿನ ವೃತ್ತಿಯನ್ನಾಗಿಸಿ ಈ ವೃತ್ತಿ ಪ್ರವೃತ್ತಿಗಳ ನಡುವೆ ಉಪ ಉತ್ಪನ್ನವಾಗಿ ಕಥೆ ಕಾದಂಬರಿ ಇತ್ಯಾದಿಗಳನ್ನು ಬರೆಯುತ್ತಾ ತಾವು ಕಲಿಸುವ ಸಾಹಿತ್ಯ ಸಿದ್ಧಾಂತ ಮತ್ತು ತಾವು ಬರೆದ ಕಥಾ ಸಾಹಿತ್ಯದ ನಡುವೆ ತಾವೇ ಸಿಲುಕಿಕೊಂಡು ಕೆಲವೊಮ್ಮೆ ನಿಖರವಾಗಿಯೂ ಕೆಲವೊಮ್ಮೆ ಸಂದೇಹಾಸ್ಪದವಾಗಿಯೂ ಯೋಚಿಸುವ ಕಥೆಗಾರರ ಬರಹಗಳು. ಇದಕ್ಕೆ ಉದಾಹರಣೆಯಾಗಿ ಕನ್ನಡದ ಹಲವು ಹಳೆಯ ಪಳೆಯ ಹಿರಿಯ ಕಿರಿಯ ಕಥೆಗಾರರ ಮುಖಗಳು ಈಗಾಗಲೇ ನಿಮ್ಮ ಕಣ್ಣ ಮುಂದೆ ತೇಲಿ ಹೋಗಿರಬಹುದು.

(ಪೂರ್ಣಿಮಾ ಭಟ್ಟ ಸಣ್ಣಕೇರಿ)
ಇನ್ನೊಂದು, ಸಾಹಿತ್ಯ ಅಧ್ಯಯನದ ಗೋಜಿಲ್ಲದೆ ತಮ್ಮ ತಮ್ಮ ಉದ್ಯೋಗ, ಹೊಟ್ಟೆಪಾಡಿನ ಚಾಕರಿಗಳಲ್ಲಿ ಮುಳುಗಿ ಈ ನಡುವೆ ಒಂದು ಗೀಳಿನ ಹಾಗೆ ಬರೆಯುತ್ತಾ ಯಾರ ಜಪ್ತಿಗೂ ಸಿಗದ ನವಿಲುಗಳಂತೆ ಬರೆದವರ ಕಥೆ ಕಾದಂಬರಿಗಳು. ಮಾಸ್ತಿ, ಗೊರೂರು, ನವರತ್ನ ರಾಮರಾಯರು, ನಿರಂಜನ, ಕಟ್ಟೀಮನಿ, ಬಾಗಲೋಡಿ ದೇವರಾಯ, ಚಿತ್ತಾಲ, ವೈದೇಹಿ, ನಾ.ಡಿಸೋಜಾ, ಜಯಂತ್, ವಿವೇಕ್, ಬೊಳುವಾರು ಇನ್ನೂ ಮುಂತಾದವರು ಈ ಜಲಮೂಲಕ್ಕೆ ಸೇರಿದವರು.
ಇನ್ನೂ ಒಂದು ಜಲದ ಕವಲು ಸಾಹಿತ್ಯ ಸಿದ್ಧಾಂತಗಳನ್ನು ಓದಿಕೊಂಡಿದ್ದರೂ ಆ ಓದು ಅಧ್ಯಯನಗಳ ಕರ್ಮಠತನಗಳಿಂದ ಹೊರಬಂದು ಬರೆಯುತ್ತಾ ಚೇತರಿಸಿಕೊಂಡವರದ್ದು. ನಮ್ಮ ಚದುರಂಗ, ಲಂಕೇಶ್, ತೇಜಸ್ವಿ, ದೇವನೂರು, ಆಲನಹಳ್ಳಿ ಮುಂತಾದ ಇನ್ನೂ ಹಲವರು ಈ ಸಮರ್ಥವಾದ ಮತ್ತು ಕಠಿಣವಾದ ದಾರಿಗೆ ಸೇರಿದವರು.
ಕನ್ನಡದ ಹೊಸ ತಲೆಮಾರಿನ ಗಮನಾರ್ಹ ಕಥೆಗಾರ್ತಿ ಪೂರ್ಣಿಮಾ ಭಟ್ಟ ಸಣ್ಣಕೇರಿಯವರ ಈ ಪ್ರಶಸ್ತಿ ವಿಜೇತ ಕಥಾಸಂಕಲನದ ಮುನ್ನುಡಿಯ ಮೊದಲಲ್ಲೇ ಕನ್ನಡ ಕಥಾಪರಂಪರೆಯ ಕುರಿತ ಈ ಮಾತುಗಳನ್ನು ನಾನು ಹೇಳಲೇಬೇಕಾಗಿದೆ. ಏಕೆಂದರೆ ಈಗ ಕನ್ನಡದಲ್ಲಿ ಸಮರ್ಥವಾಗಿ ಬರೆಯುತ್ತಿರುವ ಹೊಸಬ ಹೊಸಬಿಯರು ಒಂದು ರೀತಿಯಲ್ಲಿ ಅದೃಷ್ಟಶಾಲಿಗಳು. ಯಾಕೆಂದರೆ ಅವರಿಗೆ ನಮ್ಮ ತಲೆಮಾರಿನವರಿಗೆ ಇದ್ದ ಹಾಗೆ ವಿಮರ್ಶಕ ಅಧ್ಯಾಪಕ ಶಕ್ತಿಪೀಠಗಳ ಹಂಗಿಲ್ಲ. ಇನ್ನೊಂದು ರೀತಿಯಲ್ಲಿ ದುರದೃಷ್ಟವಂತರು ಯಾಕೆಂದರೆ ಇವರಿಗೆ ನಮಗೆ ಇದ್ದ ಹಾಗೆ ಒಳ್ಳೆಯ ಓದಿನ ದಾರಿ ತೋರಿಸುತ್ತಿದ್ದ, ಕೆಟ್ಟದಾಗಿ ಬರೆದಾಗ ಉಗಿದು ಉಪ್ಪಿನಕಾಯಿ ಹಾಕುತ್ತಿದ್ದ ಸಹೃದಯಿ ಹಿರಿಯರಿಲ್ಲ. ಒಂದು ರೀತಿಯಲ್ಲಿ ಅದೃಷ್ಟಶಾಲಿಗಳು ಏಕೆಂದರೆ ಬದುಕಲು ವಿಪುಲವಾದ ದಾರಿಗಳಿವೆ ಮತ್ತು ಬರೆಯಲು ಬೆರಳ ತುದಿಯಲ್ಲೇ ಗಣಕಗಳಿವೆ, ಹೊಟ್ಟೆಪಾಡು ಮತ್ತು ಬಡತನ ಹಿಂದಿನಷ್ಟು ದಾರುಣವಾಗಿಲ್ಲ. ಇನ್ನೊಂದು ರೀತಿಯಲ್ಲಿ ದುರದೃಷ್ಟವಂತರು ಏಕೆಂದರೆ ಬರೆದದ್ದೆಲ್ಲವೂ ಪ್ರಕಟವಾಗುವುದರಿಂದ, ಬರೆದದ್ದಕ್ಕೆಲ್ಲ ಪ್ರಶಸ್ತಿ ಭಾಗ್ಯ ಮತ್ತು ಪ್ರಕಟಣಾ ಭಾಗ್ಯಗಳು ಸುಲಭವಾಗಿ ಒದಗುವುದರಿಂದ ಇವುಗಳೇ ನಿಜವಾದ ಮೌಲ್ಯಮಾಪನ ಅಂದುಕೊಂಡು ಯಾರ್ಯಾರೋ ತೋಡಿದ ಹಳ್ಳಗಳಿಗೆ ನೇರವಾಗಿ ಬೀಳುವ ದೌರ್ಭಾಗ್ಯವಂತರು ಇವರು. ಒಂದು ರೀತಿಯಲ್ಲಿ ಅದೃಷ್ಟಶಾಲಿಗಳು ಏಕೆಂದರೆ ಪ್ರಪಂಚದ ಅತ್ಯುತ್ತಮ ಕೃತಿಗಳನ್ನು ಓದಲು ಗಹನವಾದ ತರಗತಿಗಳು ಅಥವಾ ಬೃಹತ್ ಗ್ರಂಥಾಲಯಗಳ ಎಡತಾಕಬೇಕಾದ ದರ್ದಿಲ್ಲ. ಪ್ರಪಂಚದ ಸಮಸ್ತ ಅತ್ಯುತ್ತಮ ಬರಹಗಳು ಅಂತರ್ಜಾಲದಲ್ಲಿ ಅಡಕವಿದೆ. ಇನ್ನೊಂದು ರೀತಿಯಲ್ಲಿ ದುರದೃಷ್ಟವಂತರು ಏಕೆಂದರೆ ಅಂತರ್ಜಾಲದಿಂದ ಕದ್ದು ರೂಪಾಂತರಿಸಿ ಮರುರೂಪಾಂತರಿಸಿ ಅಸ್ತವ್ಯಸ್ತಗೊಳಿಸಿ ಜೋಡಿಸಿ ತಮ್ಮಂದೆದೇ ಪ್ರಕಟಿಸುವ ಚೋರಚರಣದಾಸರ ದೊಡ್ಡ ಪಡೆಯ ನಡುವೆ ಚೆನ್ನಾಗಿ ಒರಿಜಿನಲ್ಲಾಗಿ ಬರೆದರೂ ಕಡೆಗಣಿಸಲ್ಪಡುವ ಅಪಾಯವಿದೆ.
ಈ ಎಲ್ಲ ಇದೆ ಇಲ್ಲಗಳ ಚಕ್ರವ್ಯೂಹದ ನಡುವೆ ಏಕಾಂಗಿ ಬಾಲಕಿಯಂತೆ ಕಥಾ ಸಾಹಸಕ್ಕೆ ಇಳಿದಿರುವ ಪೂರ್ಣಿಮಾ ಬಹಳ ಹಿಂದೆಯೇ ಅಂದರೆ ಸುಮಾರು ಹದಿಮೂರು ವರ್ಷಗಳ ಹಿಂದೆಯೇ ಅವರ ಕಥೆಯೊಂದರ ಮೂಲಕ ನನ್ನ ಗಮನ ಸೆಳೆದಿದ್ದರು. ಅಮೇರಿಕ ಸಂಯುಕ್ತ ಸಂಸ್ಥಾನದ ಕನ್ನಡ ಪ್ರೀತಿಯ ಕೂಟವೊಂದು ನಡೆಸುತ್ತಿದ್ದ ಕಥಾ ಸ್ಪರ್ಧೆಯಲ್ಲಿ ಇವರ ಕತೆಯೂ ಇತ್ತು ಮತ್ತು ನಾನಲ್ಲಿ ತೀರ್ಪುಗಾರನಾಗಿದ್ದೆ. ಇವರ ಕಥೆಯನ್ನು (ಅದರ ಹೆಸರು ನೆನಪಿಲ್ಲ) ನಾನು ಉಲ್ಲೇಖಿಸಿ ಒಂದೆರಡು ಮಾತುಗಳನ್ನು ಹೇಳಿದ್ದೆ. ಅದನ್ನು ಈಗಲೂ ನೆನಪಿಸಿಕೊಂಡು ಒಂದು ಹಠಮಾರಿ ಮಗುವಂತೆ ತನ್ನ ಕಥೆಗಾರಿಕೆಯನ್ನು ಪರಿಪಕ್ವಗೊಳಿಸುತ್ತಾ ಬರೆಯುತ್ತಿರುವ ಪೋರಿಯ ಹಾಗೆ ಇರುವ ಪೂರ್ಣಿಮಾ ಎಷ್ಟು ಎಚ್ಚರದ, ಎಷ್ಟು ಪಕ್ವ ತಿಳಿವಳಿಕೆಯ, ಎಷ್ಟು ಜಾಗತಿಕ ಅರಿವಿನ ಕಥೆಗಾರ್ತಿ ಎನ್ನುವುದನ್ನು ಈ ಸಂಕಲನದ ಕಥೆಗಳನ್ನು ಓದುತ್ತಾ ಅರಿತುಕೊಂಡೆ.
ನನ್ನಂತಹವರು ಬರೆಯುವುದನ್ನು ಮತ್ತು ಬರೆವ ಬದುಕನ್ನು ಒಂದು ವ್ಯಾಮೋಹದಂತೆ, ಒಂದು ಅನುರಾಗದಂತೆ ಓಲೈಸುತ್ತಾ ಬರೆಯುವ ರಾಗ, ಬರೆಯಲಾಗದ ಕಳವಳ ಮತ್ತಿತರ ಮೋಹ ದ್ವೇಷ ಮದ ಮತ್ಸರಗಳಲ್ಲಿ ಬದುಕಿನ ಬಹುಭಾಗವನ್ನು ಕಳೆದುಕೊಂಡವರು. ಇದು ಒಂದು ತರಹದ ಬರೆವವನೇ ಬರೆವಣಿಗೆಯ ಪಾತ್ರಧಾರಿಯೂ ಆಗಿ ಬಿಡುವ ಉನ್ಮಾದತೆ. ಆದರೆ ಪೂರ್ಣಿಮಾ ಅವರದು ಅವರೇ ತಮ್ಮ ಮಾತಿನಲ್ಲಿ ಹೇಳುವ ಹಾಗೆ ‘ಕತೆಗಾತಿಯ ವೇಷ’. ಕಥೆಯ ನಿರುದ್ವಿಗ್ನತೆ ಮತ್ತು ನೆಮ್ಮದಿಯ ದೃಷ್ಟಿಯಿಂದ ಈ ವೇಷ ಅಗತ್ಯ ಎಂದು ನನಗೆ ಇಷ್ಟೆಲ್ಲ ಬರೆದಾದ ಮೇಲೆ ಈಗ ಅನ್ನಿಸುತ್ತದೆ. ಬರೆಯುವವರು ತಮ್ಮದೇ ಕಥೆಯಲ್ಲಿ ಕಳೆದುಹೋಗುವ ಅಪಾಯದಿಂದ ಬಿಡುಗಡೆಗೊಳ್ಳುವ ದಾರಿ ಇದು. ಇದು ಬಹು ದೊಡ್ಡ ಸವಾಲಿನ ದಾರಿಯೂ ಹೌದು. ಬರೆಯುವವರಿಗೆ ಈ ದಾರಿಯಲ್ಲಿ ಕ್ರಮಿಸಲು ಬಹಳ ಲೋಕಜ್ಞಾನ ಇರಬೇಕಾಗುತ್ತದೆ. ಸಕಲ ಜೀವ ವ್ಯಾಪಾರಗಳ ಕುರಿತು ಒಂದು ಸಮತೂಕದ ನಿರ್ಲಿಪ್ತತೆ ಬೇಕಾಗುತ್ತದೆ. ಜೊತೆಜೊತೆಗೇ ಲೋಕವನ್ನು ಅರಿಯುವ ಪುಟ್ಟ ಮಗುವಿನ ಕುತೂಹಲಭರಿತ ಬೆರಗು, ಓದುಗರ ಕುರಿತ ತಾಯಿಯಂತಹ ಕಟ್ಟೆಚ್ಚರ ಹಾಗೂ ವಾತ್ಸಲ್ಯ, ಕಥೆಗಾರಿಕೆಯ ಉಳಿ ಹಿಡಿದ ಶಿಲ್ಪಿಯೊಬ್ಬಳ ಕಲೆಗಾರಿಕೆ ಮತ್ತು ಕುಸುರಿಯ ಜಾಣ್ಮೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಬರಹದಿಂದ ಓದುಗ ಮತ್ತು ಬರಹಗಾರ್ತಿ/ಬರಹಗಾರ ಇಬ್ಬರಿಗೂ ಸಿಗುವ ಭಾವ ಬಿಡುಗಡೆಯ ನಿರುಮ್ಮಳತೆಯ ಅರಿವು ಇರಬೇಕಾಗುತ್ತದೆ.
ಇಲ್ಲಿನ ಕಥೆಗಳನ್ನು ಓದುತ್ತಾ ಮೇಲ್ಕಂಡ ಈ ಎಲ್ಲವೂ ಲಜ್ಜಾವತಿಯಂತಹ ಈ ಕಥೆಗಾರ್ತಿಯ ಪುಟ್ಟದಾದ ಆದರೆ ದೃಢವಾದ ಹೆಜ್ಜೆಗುರುತುಗಳಲ್ಲಿ ಒಡಮೂಡುತ್ತಿರುವುದನ್ನು ನಾನು ಕಾಣುತ್ತಿದ್ದೇನೆ.
ಇಲ್ಲಿನ ಕಥೆಗಾರ್ತಿ ಕಥೆಗಳನ್ನು ಮಡಿಲಿಗೆ ಕರೆಯುವ ತಾಯಿ. ಇಲ್ಲಿ ನೇತು ಬಿಟ್ಟ ಸೀರೆಯ ಪರದೆಗಳೂ ಈಕೆಗೆ ಕಥೆ ಹೇಳುತ್ತವೆ. ಒಬ್ಬಾತನ ಮಗಳ ಸಾವಿನ ಕತೆಯನ್ನು ಆತನ ಬಳಿಯೇ ಕೇಳಬಾರದು ಎಂದೆಲ್ಲ ಗೊತ್ತಾಗುವ ವಯಸ್ಸಾಗಿರಲಿಲ್ಲ ನನ್ನದು ಎನ್ನುತ್ತಾ ತನ್ನನ್ನೂ ಒಂದು ಕಥಾಪಾತ್ರವಾಗಿಸಿಕೊಳ್ಳಬಲ್ಲ ಕಾಣ್ಕೆಯೂ ಈ ಕಥೆಗಾರ್ತಿಗಿದೆ. ಅಲ್ಲಿಯವರೆಗೆ ಚಂದವಾಗಿಯೇ ಇದ್ದ ಆ ಬೆಳಗು ಆ ಅಮಾಯಕಳ ಸಾವಿನ ಸುದ್ದಿಯನ್ನು ಕೇಳುತ್ತಾ ಇದ್ದಕ್ಕಿದ್ದಂತೆ ದುಃಖವನ್ನು ತಬ್ಬಿಕೊಂಡಂತೆ ಕಾಣಿಸಿತು ಎನ್ನುವ ಚಿತ್ರಕ ಶಕ್ತಿಯೂ ಇದೆ. ಇವತ್ತು ಸೂರ್ಯನಿಗೇ ಬೆಂಕಿ ತಗುಲಿಕೊಂಡಂತಹ ಬೇಗೆ ಎಂದು ಮತ್ತೆ ನಮ್ಮನ್ನು ಕಥೆಯ ಕಾಡ್ಗಿಚ್ಚಿನ ಕಡೆಗೆ ಕರೆದೊಯ್ಯಬಲ್ಲಳು ಆಕೆ. ಕಥೆ ಕೇಳುತ್ತಾ ಆಕೆಯ ಎದೆಯಿಂದಲೂ ಹಾಲು ಒಸರಿ ಕೂತಲ್ಲೇ ಆರ್ದ್ರವಾಗಬಲ್ಲಳು. ತನ್ನ ಕಥೆ ಹೇಳುವ ಅನುಕೂಲಸ್ಥ ಕಲೆ ಮತ್ತು ಕಥೆಯಾದವರ ತಲೆತಲಾಂತರದ ವ್ಯಥೆ ಎರಡೂ ಅನುವಂಶೀಯವೇ ಎಂದೂ ಉದ್ವಿಗ್ನಗೊಳ್ಳಬಲ್ಲಳು. ಹಾಗೆ ಉದ್ವಿಗ್ನಗೊಂಡು ಕಥೆಯಲ್ಲಿ ಕಳೆದುಹೋಗದೆಯೇ ಕಥೆಗಾರಿಕೆಯನ್ನು ಕಾಪಿಡಬಲ್ಲಳು. ಬದುಕನ್ನು ಸಾಲು ತಪ್ಪಿಸಿಕೊಂಡ ಇರುವೆಯ ದಿಕ್ಕುಪಾಲಾದ ಕಥೆಯೆಂದು ಹೇಳಬಲ್ಲಳು.

(ಅಬ್ದುಲ್ ರಶೀದ್)
ಈ ಸಂಕಲನದಲ್ಲಿ ನನಗೆ ಇಷ್ಟವಾದ ಕಥೆಗಳಲ್ಲಿ ‘ಬದುಕು ಕದನದ ತೆರನೆ’ ಕೂಡಾ ಒಂದು. ಇಲ್ಲಿ ನಗರವೂ ಬರುತ್ತದೆ ಗ್ರಾಮವೂ ಬರುತ್ತದೆ. ಮುದುಕರ ಬಾಯಿಯ ಹಲ್ಲಂತೆ ದೂರದೂರಕ್ಕೊಂದು ಮನೆಗಳಿರುವ ಈ ಗ್ರಾಮದಲ್ಲಿ ಅಲೆಮಾರಿ ಜನಾಂಗದ ಪರಿತ್ಯಕ್ತ ಮಗುವೊಂದು ಸಾಕಿದ ತಾಯಿಯ ಕೈಗೂಸಾಗಿದ್ದ ಸ್ಥಿತಿಯಿಂದ ಅದೇ ಮನೆಯ ಕೈ ಆಳಾಗಿ ನಗರ ಸೇರುತ್ತಾನೆ. ನಗರದ ಲೇಔಟ್ ಒಂದರ ಎಸ್ಟಿಪಿ ಪ್ಲಾಂಟಿನ ಗಲೀಜು ಹೊರುವವನಾಗಿ ಕೆಲಸ ಮಾಡುತ್ತಿರುವಾಗ ಮಾನವಹಕ್ಕು ಉಲ್ಲಂಘನೆ ತನಿಖೆಗೆ ಬೆದರಿ ಮತ್ತೆ ಹಳ್ಳಿಗೆ ಹಿಂದಿರುಗುತ್ತಾನೆ. ಈ ಪರಿತ್ಯಕ್ತ ಮಗುವಿನ ಹಳ್ಳಿ ಪಟ್ಟಣಗಳ ಭೌತಿಕ ಯಾತ್ರೆ ಕಥೆಯಲ್ಲಿ ಒಂದು ರೂಪಕವಾಗಿ ಇಡೀ ವ್ಯವಸ್ಥೆಯ ಅಮಾಯಕ ಕ್ರೌರ್ಯವನ್ನು ತಣ್ಣಗೆ ಹೇಳುತ್ತದೆ.
‘ಕಿವಿ ತಿರಪೇಕಾಯಿ’ ಕೂಡಾ ನನಗೆ ಇಷ್ಟವಾದ ಇನ್ನೊಂದು ಕಥೆ. ಇಂಗ್ಲೆಂಡಿನಲ್ಲಿ ತಳವೂರಿದ ದೇಸೀಮೂಲದ ತಾಯಿ ಮಗಳ ಸಾಂಸ್ಕೃತಿಕ ತಾಕಲಾಟಗಳ ಆಧುನಿಕ ಕಥೆ ಇದು. ಅರಲುಗದ್ದೆಯಲ್ಲಿ ಕಾಲು ಹುಗಿದು ಬಿದ್ದಂತಹ ಸ್ಥಿತಿಯಲ್ಲಿರುವ ತಾಯಿ ಮತ್ತು ತಾಯಿಯ ಹುಸಿ ನಂಬಿಕೆಗಳನ್ನೆಲ್ಲ ಫುಟ್ಬಾಲಿನಂತೆ ನಿಸೂರಾಗಿ ಒದೆಯಬಲ್ಲ ಮಗಳು. ಇವರಿಬ್ಬರ ಅಂತಃಕರಣ ಮತ್ತು ಸಂಘರ್ಷ ಈ ಕತೆಯ ವಸ್ತು. ಕಥೆಗಾರ್ತಿ ತಾಯಿಯೂ ಆಗಿ ಮಗಳೂ ಆಗಿ ನಡೆಸುವ ತಂತಿಯ ಮೇಲಿನ ನಡಿಗೆ ನನಗೆ ಇಷ್ಟವಾಗಿದ್ದು. ಇದೇ ರೀತಿ ಈ ಸಂಕಲನದ ಕೊನೆಯ ಎರಡು ಕಥೆಗಳೂ ಕೂಡಾ ತಮ್ಮ ಜೀವಂತಿಕೆಯಿಂದ, ನವಿರು ನಿರೂಪಣೆಯಿಂದ, ತುಂಟ ಮನಸ್ಥಿತಿಯ ಕಥಾಕ್ರಮದಿಂದ ಅಂತಹ ಬಿಗುವಿನಲ್ಲೂ ಓದುಗರ ಮನಸಿನಲ್ಲಿ ಮಂದಹಾಸ ಮೂಡಿಸುತ್ತವೆ.
ಬಹುಶಃ ಕಳೆದ ಕೆಲವು ವರ್ಷಗಳಿಂದ ಪೂರ್ಣಿಮಾ ಬರೆದ ಬಹುತೇಕ ಕಥೆಗಳ ಪ್ರಕಟಣಾಪೂರ್ವ ಓದುಗರಲ್ಲಿ ನಾನು ಕೂಡಾ ಒಬ್ಬ. ಇಲ್ಲಿರುವ ಕಥೆಗಳನ್ನು ಇನ್ನೊಮ್ಮೆ ಓದಿ ಮುಗಿಸಿದ ಮೇಲೆ, ‘ಇದೇ ರೀತಿಯ ಇನ್ನೂ ಒಳ್ಳೊಳ್ಳೆಯ ಕಥೆಗಳು ಇದ್ದವಲ್ಲಾ, ಅವೆಲ್ಲಾ ಎಲ್ಲಿ ಹೋದವು ತಾಯೀ’ ಎಂದು ಕೇಳಿದೆ. ಅವುಗಳು ಇನ್ನೊಂದು ಕಥಾ ಹಸ್ತಪ್ರತಿ ಸ್ಪರ್ಧೆಯ ಸರತಿಯಲ್ಲಿ ಸೂರ್ಯನಿಗೇ ಬೆಂಕಿ ತಗುಲಿಕೊಂಡಂತಹ ಬೇಗೆಯಲ್ಲಿ ನಿಂತು ಕಾಯುತ್ತಿವೆಯಂತೆ. ಇಲ್ಲಿ ಬಹುಮಾನ ಗೆದ್ದ ಸದರಿ ಕತೆಗಾರ್ತಿಯ ಕತೆಗಳು ಅಲ್ಲಿಯೂ ಗೆದ್ದು ಆ ಒಳ್ಳೊಳ್ಳೆಯ ಕಥೆಗಳು ಇನ್ನೊಂದು ಸಂಕಲನದ ರೂಪದಲ್ಲಿ ನಿಮ್ಮ ಓದಿಗೆ ಒದಗಿ ಬರಲಿ ಎಂದು ಹಾರೈಸುತ್ತಿರುವೆ.
(ಕೃತಿ: ಕತೆ ಜಾರಿಯಲ್ಲಿರಲಿ (ಕಥಾ ಸಂಕಲನ), ಲೇಖಕರು: ಪೂರ್ಣಿಮಾ ಭಟ್ಟ ಸಣ್ಣಕೇರಿ, ಪ್ರಕಾಶಕರು: ಸಸಿ ಪ್ರಕಾಶನ, ಬೆಲೆ: 175/-)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ