ಆಶ್ವಯುಜ ಮಾಸದಲ್ಲಿ ಬರುವ ಭೂಮಿ ಹುಣ್ಣಿಮೆಯ ಕುರಿತು ಹೇಳುತ್ತಿದ್ದೇನೆ. ಮಲೆನಾಡಿಗರ ಭಾಷೆಯಲ್ಲಿ ಇದು ಭೂಮಣಿ ಹಬ್ಬ. ಭೂಮಿಹುಣ್ಣಿಮೆ ಎಂದ ಕೂಡಲೇ ನನ್ನ ಮನ ನಿಲ್ಲದೆ ತೀರ್ಥಹಳ್ಳಿಯ ಸಮೀಪದ ನನ್ನ ಅಜ್ಜಿ ಮನೆಯೆಡೆಗೆ ಓಡುತ್ತದೆ. ನಮ್ಮ ಅಜ್ಜಿ ಈ ಹಬ್ಬವನ್ನು ತುಂಬಾ ಶ್ರದ್ಧೆಯಿಂದ ಆಚರಿಸುತ್ತಿದ್ದರು. ಹಬ್ಬದ ಮುನ್ನಾ ದಿನ ಗದ್ದೆಯ ಅಂಚಿನ ಒಂದು ಭಾಗವನ್ನು ಶುಚಿಗೊಳಿಸಿ, ಸಗಣಿ ಸಾರಿಸಿ, ಬಾಳೆಕಂಬ, ತೋರಣಗಳಿಂದ ಅಲಂಕರಿಸಿ ಬರುತ್ತಾರೆ. ಅಂದು ಮನೆಯ ಮಕ್ಕಳು ಒಂದು ಬುಟ್ಟಿ ಹಿಡಿದು ಸುತ್ತಮುತ್ತ ತಿರುಗಿ ಬಗೆಬಗೆಯ ಸೊಪ್ಪುಗಳನ್ನು ಆಯ್ದು ತರಬೇಕು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ ನಿಮ್ಮ ಓದಿಗೆ
ನವರಾತ್ರಿಯ ನವಧಾತ್ರಿಯ
ಈ ಶ್ಯಾಮಲ ವನಧಿಯಲಿ
ಹಸುರಾದುದೊ ಕವಿಯಾತ್ಮಂ
ರಸಪಾನ ಸ್ನಾನದಲಿ…
ಎತ್ತೆತ್ತ ನೋಡಿದರತ್ತ ಹಸಿರ ಸಿರಿ ತುಂಬಿ ತುಳುಕುತಿರುವಾಗ ಭೂರಮೆಯ ಸೌಂದರ್ಯ ಕವಿಯ ಕಣ್ಮನಗಳ ತಣಿಸಿ, ಆತ್ಮವೂ ರಸಪಾನದಲಿ ಲೀನವಾಗಿ ಅದ್ವೈತ ಸ್ಥಿತಿ ತಲುಪುವ ಸುಂದರ ಅನುಭವವನ್ನು ಕವಿ ಕುವೆಂಪು ಅವರ ಹಸುರು ಪದ್ಯದ ಈ ಸಾಲುಗಳು ಹೃದ್ಯವಾಗಿ ಬಣ್ಣಿಸುತ್ತವೆ. ಇಂತಹ ಅನುಭವ ನಿಮಗೆ ನಿಜಕ್ಕೂ ಬೇಕೆಂದರೆ ನವರಾತ್ರಿಯ ಈ ಸಮಯದಲ್ಲಿ ಮಲೆನಾಡಿಗೆ ಬರಬೇಕು. ಮುಂಗಾರಿನ ಕಲರವದೊಂದಿಗೆ ಆರಂಭವಾದ ಭತ್ತದ ಗದ್ದೆಯ ನೆಟ್ಟಿ ಮುಗಿದು, ಬೆಳೆದ ಸಸಿಗಳಿಗೆ ಗೊಬ್ಬರ, ಔಷಧಿ ಒದಗಿಸಿ, ಕಳೆ ತೆಗೆದು ಆರೈಕೆ ಮಾಡಿದ ರೈತರ ಮೊಗದಲ್ಲಿ ನಗು ಮೂಡುವ ಸವಿ ಸಮಯವಿದು. ರೈತನ ಬೆವರಿಗೆ ಭೂಮಿ ತಾಯಿ ಹರಸಿ ಫಲ ನೀಡಲು ಅನುವಾಗಿದ್ದಾಳೆ. ಭತ್ತದ ಸಸಿಗಳು ತೆನೆಯಿಂದ ಸಿಂಗಾರಗೊಂಡು ಭೂಮಿಹಬ್ಬಕ್ಕೆ ರೈತಮಕ್ಕಳನ್ನು ಗದ್ದೆಗಳಲ್ಲಿ ಸ್ವಾಗತಿಸುತ್ತಿವೆ.
ಈ ಸಂಭ್ರಮವನ್ನು ಆಚರಿಸಲು ಮಲೆನಾಡಿನ ಮನೆಗಳಲ್ಲಿ ಸಿದ್ಧತೆ ಆರಂಭವಾಗಿದೆ. ಹೌದು ಆಶ್ವಯುಜ ಮಾಸದಲ್ಲಿ ಬರುವ ಭೂಮಿ ಹುಣ್ಣಿಮೆಯ ಕುರಿತು ಹೇಳುತ್ತಿದ್ದೇನೆ. ಮಲೆನಾಡಿಗರ ಭಾಷೆಯಲ್ಲಿ ಇದು ಭೂಮಣಿ ಹಬ್ಬ. ಭೂಮಿಹುಣ್ಣಿಮೆ ಎಂದ ಕೂಡಲೇ ನನ್ನ ಮನ ನಿಲ್ಲದೆ ತೀರ್ಥಹಳ್ಳಿಯ ಸಮೀಪದ ನನ್ನ ಅಜ್ಜಿ ಮನೆಯೆಡೆಗೆ ಓಡುತ್ತದೆ. ನಮ್ಮ ಅಜ್ಜಿ ಈ ಹಬ್ಬವನ್ನು ತುಂಬಾ ಶ್ರದ್ಧೆಯಿಂದ ಆಚರಿಸುತ್ತಿದ್ದರು. ಹಬ್ಬದ ಮುನ್ನಾ ದಿನ ಗದ್ದೆಯ ಅಂಚಿನ ಒಂದು ಭಾಗವನ್ನು ಶುಚಿಗೊಳಿಸಿ, ಸಗಣಿ ಸಾರಿಸಿ, ಬಾಳೆಕಂಬ, ತೋರಣಗಳಿಂದ ಅಲಂಕರಿಸಿ ಬರುತ್ತಾರೆ. ಅಂದು ಮನೆಯ ಮಕ್ಕಳು ಒಂದು ಬುಟ್ಟಿ ಹಿಡಿದು ಸುತ್ತಮುತ್ತ ತಿರುಗಿ ಬಗೆಬಗೆಯ ಸೊಪ್ಪುಗಳನ್ನು ಆಯ್ದು ತರಬೇಕು. ಒಟ್ಟು ನೂರೊಂದು ಕುಡಿ ಸೊಪ್ಪುಗಳನ್ನು ಸೇರಿಸಿ ಪಲ್ಯ ಮಾಡಲಾಗುತ್ತದೆ. ಇದಕ್ಕೆ ಬೆರಕೆ ಸೊಪ್ಪು ಎನ್ನುತ್ತಾರೆ. ಬಣ್ಣದ ಸೌತೆಕಾಯಿ, ಹೀರೇಕಾಯಿ ಮತ್ತು ಅಮಟೆಕಾಯಿಯನ್ನು ಈ ಬೆರಕೆ ಸೊಪ್ಪಿಗೆ ಹಾಕುತ್ತಾರೆ. ಇದು ಭೂಮಿ ತಾಯಿಗೆ ಅತಿ ಶ್ರೇಷ್ಠ ನೈವೇದ್ಯ. ಸ್ನಾನ ಮಾಡಿ, ಇಡೀ ರಾತ್ರಿ ನಿದ್ದೆ ಮಾಡದೆ ಮನೆಯ ಗೃಹಿಣಿಯರು ಭೂಮಿತಾಯಿಗೆ ವಿವಿಧ ಬಗೆಯ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಹೀಗೆ ರಾತ್ರಿ ನಿದ್ದೆಗೆಡುವಾಗ ಅಕ್ಕಪಕ್ಕದ ಮನೆಯವರು ಬರುವುದು, ಮನರಂಜನೆಗೆ ಕೆಲವು ಆಟ ಆಡುವುದು ಇರುತ್ತದೆ. ಮನೆಯವರನ್ನು ಮಾತನಾಡಿಸುವ ನೆಪದಲ್ಲಿ ಮಜ್ಜಿಗೆ ಕಡೆಯುವ ಕಡೆಗೋಲು, ಕಡೆಯುವ ಕಲ್ಲಿನ ಗುಂಡುಕಲ್ಲು, ಹಾಲು ಕರೆಯುವ ಪಾತ್ರೆ ಹೀಗೆ ಅತಿ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ ಮುಚ್ಚಿಡುವುದು, ಹಾಲು ಕುಡಿಯುವ ಕರುಗಳನ್ನು ತಾಯಿ ಹಸು ಬಳಿ ಬಿಡುವುದು… ಹೀಗೆ ಮನೆಯವರಲ್ಲಿ ಗಡಿಬಿಡಿ ಮೂಡಿಸಿ ಮೋಜಿನ ಆಟವಾಡುತ್ತಾರೆ.
ಈ ಹಬ್ಬದಲ್ಲಿ ಹಳ್ಳಿ ತರಕಾರಿಗಳಿಗೆ ಆದ್ಯತೆ. ಗೆಡ್ಡೆ, ಗೆಣಸು, ಕೆಸುವಿನ ಎಲೆ, ಕೆಸುವಿನ ದಂಟು, ಅಮಟೆಕಾಯಿ, ಸೌತೆಕಾಯಿ, ಚೀನಿಕಾಯಿ, ಬಾಳೆದಿಂಡು ಇರಲೇಬೇಕು. ಒಟ್ಟು ಏಳು ಬಗೆಯ ತರಕಾರಿ ಪಲ್ಯಗಳು, ಪಾಯಸ, ಹೋಳಿಗೆ, ಕಜ್ಜಾಯ ಮೊದಲಾದ ಸಿಹಿ ಮಾಡುತ್ತಾರೆ. ಕೊಟ್ಟೆಕಡುಬು ವಿಶೇಷ ಖಾದ್ಯ. ಇದನ್ನು ಅಕ್ಕಿ ನೆನೆಸಿಟ್ಟು ಅದಕ್ಕೆ ಕೆಸುವಿನ ದಂಟನ್ನು ಹಾಕಿ ಕಡೆದು, ಬಾಳೆಲೆ ಕೊಟ್ಟೆಯಲ್ಲಿ ಹಾಕಿ ಕಟ್ಟಿ ಬೇಯಿಸುತ್ತಾರೆ. ಹಾಲು, ಮಜ್ಜಿಗೆ, ಜೀರಿಗೆ, ಬೆಲ್ಲ ಬೆರೆಸಿ ಮಾಡಿದ ಹಾಲಂಬಲಿ ಎಂಬ ವಿಶೇಷ ಖಾದ್ಯ ಕೂಡ ಇರುತ್ತದೆ.
ಮುಂಜಾನೆ ಕಾಗೆ ಕೂಗುವ ಮೊದಲೇ ಭೂಮಿತಾಯಿಗೆ ನೈವೇದ್ಯ ಪೂಜೆ ಸಲ್ಲಬೇಕೆಂಬ ನಂಬಿಕೆ ಇದೆ. ಬೆಳಿಗ್ಗೆ ನಾಲ್ಕು ಗಂಟೆಯಿಂದಲೇ ಮನೆಮಂದಿಯೆಲ್ಲಾ ಎದ್ದು ಸ್ನಾನ ಮಾಡಿ ಶುಭ್ರ ಉಡುಪು ಧರಿಸಿ ಮೊದಲ ರಾತ್ರಿ ಮಾಡಿದ ಭಕ್ಷ್ಯಗಳನ್ನು ಸಗಣಿ, ಕೆಮ್ಮಣ್ಣು ಬಳಿದು ಅಲಂಕರಿಸಿದ ಬುಟ್ಟಿಯಲ್ಲಿ ತುಂಬಿಕೊಂಡು ಗದ್ದೆಯೆಡೆಗೆ ಹೋಗುತ್ತಾರೆ. ಮನೆಯೊಡತಿಯ ಮಾಂಗಲ್ಯ ಸರವನ್ನು ಭೂಮಿ ಪೂಜೆಗೆ ಸಿದ್ಧ ಮಾಡಿದ ಸ್ಥಳದಲ್ಲಿ ಭೂಮಾತೆಗೆ ಹಾಕಿ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಹಸಿರು ಬಳೆ ಅರ್ಪಿಸುತ್ತಾರೆ. ತಿನಿಸುಗಳನ್ನು ಬಾಳೆಲೆಗೆ ಬಡಿಸಿ ನೈವೇದ್ಯ ಮಾಡುತ್ತಾರೆ. ಬೆರಕೆ ಸೊಪ್ಪು ಅನ್ನದ ಮಿಶ್ರಣವನ್ನು ಗದ್ದೆಯ ಎಲ್ಲಾ ಭಾಗದಲ್ಲಿ ಚೆಲ್ಲುತ್ತಾರೆ. ಹೀಗೆ ಚೆಲ್ಲುವಾಗ ಹಾಲಂಬಲಿ, ಹಚ್ಚಂಬಲಿ ಬೇಲಿ ಮೇಲಿರುವ ದಾರಿ ಹೀರೇಕಾಯಿ ಗುಡ್ಡದ ಮೇಲಿನ ನೂರೊಂದು ಕುಡಿ ಭೂಮಿ ತಾಯಿಗೆ ಬಯಕೆ…. ಬಯಕೆ…. ಎಂದು ಕೂಗಿ ಹೇಳುವ ವಾಡಿಕೆ ಇದೆ.
ಕೊಟ್ಟೆಕಡುಬನ್ನು ಗದ್ದೆಯ ಒಂದೊಂದು ಭಾಗದಲ್ಲಿ ಹೂಳುತ್ತಾರೆ. ಹೀಗೆ ಹೂತ ಕಡುಬು ಗದ್ದೆ ಕೊಯ್ಲಿನ ಸಮಯದಲ್ಲಿ ಸಿಗುತ್ತದೆ. ಅದನ್ನು ತಂದು ಸುಗ್ಗಿ ಹಬ್ಬದ ಹೊಸತಿನಲ್ಲಿ ಪಾಯಸ ಮಾಡಿ ಹಿರಿಯರಿಗೆ ಎಡೆ ಇಡುತ್ತಾರೆ. ಭೂಮಿಪೂಜೆಯ ನಂತರ ಮನೆಗೆ ಬಂದು ಮಾಡಿದ ತಿನಿಸುಗಳನ್ನು ಹಿರಿಯರಿಗೂ ಎಡೆಮಾಡಿ ಪೂಜಿಸುತ್ತಾರೆ. ನಂತರ ಮನೆಯವರು ಊಟ ಮಾಡುತ್ತಾರೆ.
ಮನೆಮಗಳು ಗರ್ಭಿಣಿ ಇರುವಾಗ ಹೇಗೆ ಅವಳಿಗೆ ಸೀಮಂತ ಶಾಸ್ತ್ರ ಮಾಡಿ ಆಕೆಯ ಬಯಕೆಗಳನ್ನೆಲ್ಲಾ ತೀರಿಸುತ್ತಾರೋ ಹಾಗೆ ತೆನೆ ಧರಿಸಿದ ಭೂಮಿಗೂ ಬಯಕೆ ನೀಡುವ ವಿಶಿಷ್ಟ ಆಚರಣೆ ಇದಾಗಿದೆ. ಬೆರಕೆ ಸೊಪ್ಪಿಗೆ ಎಲೆಗಳನ್ನು ಆಯುವಾಗಲೂ ಯಾವುದೇ ನಂಜಿನ ಅಂಶವಿರುವ ಎಲೆಗಳನ್ನು ಕೊಯ್ಯುವುದಿಲ್ಲ. ಬಸುರಿಗೆ ನಂಜಾಗಬಾರದೆಂಬ ನಂಬಿಕೆಯೇ ಇಲ್ಲೂ ಇರುವುದು ವಿಶೇಷ. ಗದ್ದೆ, ತೋಟ, ಹಸಿರೇ ಉಸಿರಾದ ಮಲೆಯ ಮಕ್ಕಳು ಪ್ರಕೃತಿಯ ಕೂಸುಗಳೆಂದು ಅರಿವಾಗುವುದೇ ಇಂತಹ ಆಚರಣೆಗಳ ಹಿನ್ನೆಲೆ ಮತ್ತು ಮಹತ್ವವಾಗಿದೆ. ಪ್ರಕೃತಿ ಜಡವಲ್ಲ, ಚಿರನೂತನ ಚೈತನ್ಯದ ಸೆಲೆ. ಅದನ್ನು ಆರಾಧಿಸುವುದು ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿ.
ಹಳ್ಳಿಗಳಿಂದ ನಗರಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗಿ, ರೈತಾಪಿ ಕೆಲಸಗಳನ್ನು ಮಾಡುವವರೇ ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಭೂಮಿ ಹುಣ್ಣಿಮೆಯಂತಹ ಹಸಿರು, ಭೂಮಿಯ ಆರಾಧನೆ ಯುವಮನಸ್ಸುಗಳನ್ನು ಮರಳಿ ಮಣ್ಣಿಗೆ ಕರೆತರುವಂತಾಗಲಿ ಎಂಬುದೇ ಆಶಯ.

ಭೂಮಿ ಹುಣ್ಣಿಮೆಯ ಮಹತ್ವ ತಿಳಿದು ಖುಷಿಯಾಯಿತು. ಮಲೆನಾಡಿನ ರೈತರ ಬದುಕೇ ವಿಶೇಷ. ಓದಿನ ಖುಷಿ ಕೊಟ್ಟ ಬರಹ 🙏