ಮಕ್ಕಳ ಮನಸ್ಸು ಬಿಳಿ ಕಾಗದದಂತೆ. ನಾವು ಏನು ತುಂಬಿದರೂ ಅದನ್ನೆ ಬರೆದುಕೊಳ್ಳುತ್ತದೆ. ಹಾಗಾಗಿ ಶಿಕ್ಷಕರಾದವರು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸುವಾಗ ಬಹಳ ಎಚ್ಚರಿಕೆಯಿಂದ, ಸೂಕ್ಷ್ಮಮತಿಯಾಗಿ ಆರೋಗ್ಯಕರವಾಗಿ ತಿದ್ದಬೇಕು. ಆದ್ದರಿಂದ ಒಂದಷ್ಟು ಕಡಕ್ ದನಿಯನ್ನು ಸೇರಿಸಿ ಇನ್ನೂ ಮುಂದೆ ಅವನನ್ನು ತಿಕ್ಕಲು ಮಂಜ ಅನ್ನಬಾರದು. ಎಲ್ಲರೂ ಅವನನ್ನು ಮಂಜು ಅಥವಾ ಮಂಜುನಾಥ ಎಂದೆ ಕರೆಯಬೇಕು ಅಂದಾಗ ಎಲ್ಲಾ ಮಕ್ಕಳು ಸಾರಿ ಮಿಸ್ ಅಂದರು. ಮುಂದೆ ಆ ಮಕ್ಕಳಾರೂ ಅವನನ್ನು ತಿಕ್ಕಲ ಎಂದು ಕರೆಯಲಿಲ್ಲ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿಯಲ್ಲಿ ಮಂಜು ಎಂಬ ಹುಡುಗನ ಬಾಳಿನ ಕತೆ
ನಾನು ಹೈಯರ್ ಪ್ರೈಮರಿ ಶಾಲೆಯೊಂದಕ್ಕೆ ಸಾಮಾನ್ಯ ವರ್ಗಾವಣೆ ಪಡೆದು ಬಂದೆನು. ಹೊಸ ಶಾಲೆಗೆ ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳಬೇಕಿತ್ತು. ಆಗೆಲ್ಲ ಹೆರಿಗೆ ರಜೆ ನಾಲ್ಕುವರೆ ತಿಂಗಳು ಮಾತ್ರ ಇದ್ದಿತು. ಈಗ ಆ ಸೌಲಭ್ಯ ಆರು ತಿಂಗಳವರೆಗೆ ವಿಸ್ತರಣೆಯಾಗಿದೆ. ಮೊದಲು ಕೆಲಸ ಮಾಡುತ್ತಿದ್ದ ಶಾಲೆಯಿಂದ ಪೂರ್ವಾಹ್ನ ಕರ್ತವ್ಯದಿಂದ ಬಿಡುಗಡೆ ಪಡೆದು ಅಪರಾಹ್ನ ಹೊಸ ಶಾಲೆಗೆ ಬರಬೇಕಿತ್ತು. ಆದರೆ ಆ ಶಾಲೆ ಬಹು ದೂರದಲ್ಲಿ ಇತ್ತು. ನಾಲ್ಕೂವರೆ ತಿಂಗಳ ಹಸುಗೂಸನ್ನು ಇಡಿ ದಿನ ಬಿಟ್ಟು ಇರಲು ಅಸಾಧ್ಯವಾದ ಕಾರಣ ಮಗುವಿನೊಂದಿಗೆ ಶಾಲೆಗೆ ಬಂದೆನು. ಯತೀಶ್ ಅವರು ಮಗುವನ್ನ ಎತ್ತಿಕೊಂಡಿದ್ದರು. ಮುಖ್ಯ ಶಿಕ್ಷಕರನ್ನು ಭೇಟಿ ಮಾಡಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡಾಯಿತು. ಆ ವೇಳೆಗೆ ಶಾಲೆ ಬಿಡುವ ಸಮಯವಾಗಿತ್ತು. ಸರಿ “ನೀವಿನ್ನು ಹೊರಡಿ” ಎಂದು ಮುಖ್ಯ ಶಿಕ್ಷಕರಿಂದ ಹುಕುಂ ದೊರೆತ ನಂತರ ಶಾಲಾ ಕೊಠಡಿ ಇಂದ ಆವರಣದೊಳಗೆ ಕಾಲಿಟ್ಟೆವು. ತಕ್ಷಣ ಎಲ್ಲಿಂದಲೋ ಓಡಿಬಂದ ವಿದ್ಯಾರ್ಥಿಯೊಬ್ಬ ಅಚಾನಕ್ ಆಗಿ ಎದುರಾದನು. ನಮ್ಮ ಕಣ್ಣುಗಳು ಅವನೆಡೆ ಹೊರಳುವ ಮುನ್ನ ತನ್ನ ಎರಡು ಬೆರಳುಗಳಿಂದ ಮಗುವಿನ ಕೆನ್ನೆಯನ್ನು ಗಿಂಟುತ್ತಾ ಚಿನ್ನಮ್ಮ, ಮುದ್ದಮ್ಮ, ಬಂಗಾರಿ ಎಂದು ಮಗುವನ್ನು ಅತಿ ಭಾವಾವೇಶದಿಂದ ಮುದ್ದಿಸುತ್ತಿದ್ದನು. ಅವನ ಅತಿಯಾದ ಆವೇಶ, ವಯಸ್ಸಿಗೆ ಮೀರಿದ ದೇಹದ ಬೆಳವಣಿಗೆ ನೋಡಿ ಒಂದು ಕ್ಷಣ ಏನು ಮಾಡಬೇಕೆಂದು ತೋಚದಂತಾಗಿ ಗಾಬರಿಗೊಂಡೆನು.
ಆ ವೇಳೆಗೆ ಆ ತರಗತಿಯ ಕೆಲವು ಮಕ್ಕಳು ಓಡಿ ಬಂದು ಮಿಸ್ ಪಾಪುನ ಇವನಿಂದ ದೂರ ಇಟ್ಟುಕೊಳ್ಳಿ. ಇವನಿಗೆ ಮುಟ್ಟಿಸಬೇಡಿ. ಇವನು ತಿಕ್ಕಲ, ತಿಕ್ಕಲು ಮಂಜ. ಪಾಪುಗೆ ಹೊಡೆಯುತ್ತಾನೆ, ಎನ್ನುತ್ತಾ ಅವನನ್ನು ಎಳೆದೊಯ್ಯುತ್ತಿದ್ದರೇ, ಅವನ ಮುದ್ದು ಪ್ರೀತಿಯ ಹುಚ್ಚಾಟದಿಂದ ನನ್ನ ಕಂದಮ್ಮ ಮಾತ್ರ ಪಿಳಿಕಳಿ ಕಣ್ಣು ಬಿಡುತ್ತಾ, ಅವನನ್ನ ನೋಡುತ್ತಾ ಕಿಲಕಿಲ ನಗುತ್ತಿತ್ತು. ಆಗ ನನಗೆ ತುಸು ಸಮಾಧಾನವೆನಿಸಿತು. ಓಡಿಬಂದ ಮಕ್ಕಳು ಅವನನ್ನು ತರಗತಿಗೆ ಎಳೆದುಕೊಂಡು ಹೋದರು. ಪಾಪುವನ್ನು ಕರೆದುಕೊಂಡು ಬೇಗ ಹೋಗಿ ಮಿಸ್ ಇವನು ತಿಕ್ಕಲ, ತಿಕ್ಕಲು ಮಂಜ ಎಂದು ಕೂಗುತ್ತಿದ್ದರು. ಆ ಒಂದು ದೃಶ್ಯ ಎಂದಿಗೂ ನನ್ನೊಳಗೆ ಸೇರಿ ಹೋಗಿದೆ. ಈ ಘಟನೆಯಿಂದ ಶಾಂತವಾದ ನದಿಯಂತಿದ್ದ ನನ್ನ ಮನವು ಸುನಾಮಿಯ ಆರ್ಭಟಕ್ಕೆ ರೌದ್ರ ರೂಪ ತಾಳುವಂತೆ ಆಯಿತು. ಮನೆಗೆ ಬಂದರೂ ಸಮಾಧಾನವಿಲ್ಲದಂತೆ ಆಯಿತು. ಮತ್ತೊಮ್ಮೆ ಮಗದೊಮ್ಮೆ ಮನಸ್ಸು ಆ ಘಟನೆಯೆಡೆಗೆ ಹೊರಳುತ್ತಿತ್ತು. ಆ ಹುಡುಗನ ಬಗ್ಗೆಯೇ ಯೋಚಿಸುತ್ತಿತ್ತು.
ಅವನು ನೋಡಲು ತುಂಬಾ ಬಲಾಢ್ಯ ಹುಡುಗ. ಶರ್ಟಿನ ಗುಂಡಿಗಳು ಮೇಲು ಕೆಳಗಾಗಿದ್ದವು. ಕೈಕಾಲುಗಳು ಕಬ್ಬಿಣದ ಸರಳಿನಂತೆ ಕಂಡವು. ಕಣ್ಣುಗಳು ಕೆಂಪಾಗಿದ್ದವು. ಹಲ್ಲುಗಳು ಮಾತ್ರ ಹೆಂಗೆಳೆಯರ ಕೊರಳನೇರಿ ನಳನಳಿಸುವ ಮುತ್ತಿನ ಮಾಲೆಯಂತೆ ಬೆಳ್ಳಗೆ ಹೊಳೆಯುತ್ತಿದ್ದವು. ನನ್ನ ಮಗುವನ್ನು ಕಂಡು ಅವನ ಮೊಗದಾವರೆ ಅರಳಿತು. ಅವನ ಕಣ್ಣಂಚಲಿ ಆನಂದದ ಹೊನ್ನ ಕಿರಣ ಮಿಂಚಿ ಹಾರಿ ಹೋದಂತಾಯಿತು. ಯಾಕೋ, ಆ ರಾತ್ರಿ ದೀರ್ಘವೆನಿಸಿತು. ಮನಸ್ಸು ಬೆಳಗನ್ನೇ ಅರಸುತ್ತಿತ್ತು. ಯಾವಾಗ ಶಾಲೆಗೆ ಹೋದೇನು? ಅವನನ್ನು ನೋಡಿಯೇನು? ಎಂದು ಮನವು ಹಾತೊರೆಯುತ್ತಿತ್ತು. ಇದೇ ಚಿಂತೆಯಲ್ಲಿ ನಿದ್ದೆ ಕಾಣದ ನನ್ನ ಕಂಗಳನ್ನು ಮೃದುವಾಗಿ ಸ್ಪರ್ಶಿಸಿ ಎಬ್ಬಿಸಿದ್ದು ಸೂರ್ಯನ ಕಿರಣ. ಆಗ ನನ್ನೊಳಗೆ ನವ ಚೈತನ್ಯ ಮೂಡಿದಂತಾಯಿತು. ಲಗು ಬಗೆಯಿಂದ ಶಾಲೆಗೆ ಹೋಗಲು ತಯಾರಾದೆನು.
ಮದುವೆಯಾದ ಬಹು ದಿನಗಳ ನಂತರ ಜನಿಸಿದ ಮಗಳು ಜೀವಿತಳನ್ನು ನಾನು ಅದುವರೆಗೂ ಬಿಟ್ಟಿದ್ದೆ ಇಲ್ಲ. ನನ್ನ ಅತ್ತೆ “ಇವಳು ಮಗುವನ್ನು ಇಷ್ಟೊಂದು ಹಚ್ಚಿಕೊಂಡಿದ್ದಾಳೆ. ಇದನ್ನು ಬಿಟ್ಟು ನಿಜವಾಗಿ ಶಾಲೆಗೆ ಹೋಗುತ್ತಾಳಾ” ಎಂದು ತನ್ನ ಮಗನೊಂದಿಗೆ ಹಿಂದಿನ ದಿನ ಆತಂಕ ತೋಡಿಕೊಂಡಿದ್ದರು. ಆದರೆ ಆ ದಿನದ ನನ್ನ ನಡವಳಿಕೆ ಅತ್ತೆಯ ಮಾತನ್ನು ಸುಳ್ಳಾಗಿಸಿತ್ತು. ಜೊತೆಗೆ ನನ್ನ ವರ್ತನೆಯು ಅಚ್ಚರಿಯನ್ನು ಮೂಡಿಸಿತು. ನನ್ನ ಮಗುವಿನ ಕಡೆಗೆ ಗಮನವಿಲ್ಲದೆ ಆ ಹುಡುಗನನ್ನು ಕಾಣಲು ಕಂಗಳು ಪರಿತಪಿಸುತ್ತಿದ್ದವು. ಎಂದೂ ಶಾಲೆಗೆ ತಡವಾಗಿ ಹೋಗುವ ಅಭ್ಯಾಸ ಇಲ್ಲದ ನಾನು ಅರ್ಧ ಗಂಟೆ ಮುಂಚಿತವಾಗಿ ಶಾಲೆಗೆ ಬಂದೆನು. ತಕ್ಷಣ ನನ್ನ ಮುಂದೆ ಆ ಹುಡುಗ ಪ್ರತ್ಯಕ್ಷನಾದ. ಸಂಕೋಚಿಸುತ್ತಿದ್ದ ಅವನನ್ನು ನಾನೇ ಮಾತಿಗೆಳೆದು ಬಾ ಇಲ್ಲಿ ಪುಟ್ಟ, ನಿನ್ನ ಹೆಸರೇನು? ಎಂದೆನು. ಅವನು ನನ್ನ ಕ್ರಿಯೆಗೆ ಪ್ರತಿಕ್ರಿಯೆ ತೋರಿ ಮುಗುಳ್ನಗೆ ಬೀರುತ್ತಾ ತನ್ನ ಕಾಲಿನ ಬೆರಳಿನಿಂದ ನೆಲವನ್ನು ಸವರುತ್ತಾ ನಿಂತನು. ನೀನು ಹೆಸರು ಹೇಳದಿದ್ದರೆ ನಾನು ನಿನ್ನ ರಾಜ ಅಂತ ಕರೆಯುವೆ ಅಂದೆ. ತಕ್ಷಣ ಸರಿಯಾಗಿ ಉಚ್ಚಾರಣೆ ಬಾರದ ಅವನು ನನ್ನ…. ಹೆಸರು… ತಿಕ್ಕಲ ಮಂಜ… ಎಂದನು. ಈ ಮಾತನ್ನು ಅವನ ಬಾಯಿಂದಲೇ ಕೇಳಿ ನನಗೆ ಆಘಾತವಾಯಿತು. ಅಷ್ಟರಲ್ಲಿ ಇತರ ಶಿಕ್ಷಕರುಗಳು ಬಂದಾಗಿತ್ತು. ಪ್ರಾರ್ಥನಾ ಸಮಯವಾದ್ದರಿಂದ ಶಾಲೆಯ ಬೆಲ್ ರಿಂಗಣಿಸಿತು. ವಿದ್ಯಾರ್ಥಿಗಳೆಲ್ಲ ಸಭಾಂಗಣಕ್ಕೆ ಓಡಿದರು. ಆಗ ಅವನು ಕೂಡ ಅವರ ಹಿಂದೆ ಓಡಿದನು.
ಆ ವಿದ್ಯಾರ್ಥಿಯ ಹೆಸರು ಮಂಜುನಾಥ. ಆದರೆ ಅದು ಮಕ್ಕಳ ಬಾಯಿಯಲ್ಲಿ ಜೊಲ್ಲು ಊರಿನವರ ಬಾಯಲ್ಲಿ ತಿಕ್ಕಲ ಮಂಜ ಎಂದು ಕರೆಯಲ್ಪಡುತ್ತಿತ್ತು. ಇವನು ಬುದ್ಧಿಮಾಂದ್ಯ ಮಗು. ನನಗೆ ನಿಜಕ್ಕೂ ಈ ಪದ ಬಳಸಲು ನೋವಾಗುತ್ತದೆ. ನಾನು ಇಂತಹ ಮಕ್ಕಳನ್ನು ಕಡಿಮೆ ಬುದ್ಧಿಮತ್ತೆ IQ ಇರುವ ಮಕ್ಕಳೆಂದು ಕರೆಯಲು ಬಯಸುವೆ. ಇವನಿಗೆ ಸ್ಪಷ್ಟವಾಗಿ ನಿರರ್ಗಳವಾಗಿ ಮಾತನಾಡಲು ಬರುತ್ತಿರಲಿಲ್ಲ. ಒಂದೆರಡು ಪದಗಳಲ್ಲೇ ತನ್ನೆಲ್ಲ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ. ಹೇಳಿದ್ದನ್ನೇ ಪದೇ ಪದೇ ಹೇಳುತ್ತಿದ್ದ. ಅವನ ಮನೋಗತವನ್ನು ನಮಗೆ ಅರ್ಥ ಮಾಡಿಸುವುದು ಅವನ ಉದ್ದೇಶವಾಗಿತ್ತು. ನರ ದೌರ್ಬಲ್ಯದ ಕಾರಣದಿಂದ ಅವನು ಕೆಲವೊಮ್ಮೆ ನಿಯಂತ್ರಣ ಕಳೆದುಕೊಳ್ಳುತ್ತಿದ್ದನಾದರೂ ಅಷ್ಟು ವರ್ಷಗಳಲ್ಲಿ ಯಾರಿಗೂ ಸಣ್ಣ ಅಪಾಯನ್ನು ಕೂಡ ಮಾಡಿದವನಲ್ಲ. ಬದಲಾಗಿ ಜನರ ಹೊಡೆತಗಳಿಗೆ ಬಲಿಬಶುವಾಗುತ್ತಿದ್ದವನು.
ದಿನವೂ ಅಲ್ಲಿಯ ಶಿಕ್ಷಕರನ್ನು ಮಾತ್ರ ನೋಡಿದ್ದ ಅವನಿಗೆ ನಾನು ಹೋಗಿದ್ದು ಏನೋ ಒಂದು ರೀತಿಯ ಖುಷಿಯ ತಂದಿತ್ತು. ಪ್ರಾರ್ಥನೆ ಮುಗಿಸಿ ನಾನು ಹೋಗುತ್ತಿದ್ದಂತೆ ನನ್ನ ಹಿಂದೆಯೇ ಬಂದ ಅವನು ಮಿಸ್ ಬಾ ನಮ್ಮ ಕಾಸು(ಕ್ಲಾಸ್) ಅಂದನು. ಮುಖ್ಯ ಶಿಕ್ಷಕರು ಮಿಸ್ ಬರುತ್ತಾರೆ. ನೀನು ಹೋಗಪ್ಪಾ ಎಂದು ಹೇಳುತ್ತಿದ್ದಂತೆ, ಮರು ಮಾತನಾಡದೇ ತರಗತಿ ಕೊಠಡಿಗೆ ತೆರಳಿದನು. ಮುಖ್ಯ ಶಿಕ್ಷಕರ ಹೆಸರು ಆಂಜನಪ್ಪ. ತುಂಬಾ ಸಂಭಾವಿತರು ಮತ್ತು ವೃತ್ತಿ ನಿಷ್ಠೆಗೆ ಹೆಸರಾದವರು. ಮುಖ್ಯ ಶಿಕ್ಷಕರು ಎಂದರೆ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗುವಂತೆ ಇದ್ದವರು.
ನಾನು ಅವನಿರುವ ತರಗತಿಗೆ ಹೋದೆನು. ಎಲ್ಲಾ ಮಕ್ಕಳ ಪರಿಚಯ ಮಾಡಿಕೊಳ್ಳುವಾಗ ಬೇಕೆಂದೇ ಮಂಜುನಾಥನನ್ನು ಕೊನೆವರೆಗೂ ಕಾಯ್ದಿರಿಸಿದೆ. ಇವರು ಹೇಳುವುದನ್ನು ಕೇಳಿಸಿಕೋ; ನೀನು ಹಾಗೆ ಹೇಳಬೇಕು ಎಂದು ಮೊದಲೇ ತಿಳಿಸಿದೆ. ಅವನ ಸರದಿ ಬಂದಾಗ ನನಗೆ ತುಂಬಾ ಕುತೂಹಲ. ಬೆಳಗ್ಗೆ ನಾನವನ ಹೆಸರು ಕೇಳಿದಾಗ ತಿಕ್ಕಲು ಮಂಜ ಎಂದು ಹೇಳಿದ್ದನು. ಈಗ ತನ್ನ ಸ್ನೇಹಿತರು ತಮ್ಮತಮ್ಮ ಹೆಸರು ಹೇಳುವುದನ್ನು ಕೇಳಿದ್ದಾನೆ. ಈಗ ಅವನು ಹೇಗೆ ಉತ್ತರಿಸಬಹುದು ಎಂದು ಆಲೋಚಿಸುತ್ತಿದ್ದ ನನ್ನ ಕರ್ಣಪಟಲಕ್ಕೆ ಅಲೆಯೊಂದು ಸಮುದ್ರದ ದಡಕ್ಕೇ ಒಮ್ಮೆಗೇ ಬಂದು ಅಪ್ಪಳಿಸುವ ಅನುಭವ ನೀಡಿದ್ದು ಅವನ ನಿಷ್ಕಲ್ಮಶ ಹಾಗೂ ಮುಗ್ಧ ಉತ್ತರ. ಮತ್ತೆ… ಮಿಸ್… ಮತ್ತೆ ನಾನು ತಿಕ್ಕಲ ಮಂಜ ಎಂದನು. ಇಂತಹ ಮಕ್ಕಳಿಗೆ ತೀವ್ರ ಹಿಂಜರಿಕೆ ಹಾಗೂ ಸಂಕೋಚ ಸ್ವಭಾವ.
ನಿನ್ನ ಹೆಸರು ಮಂಜುನಾಥ ಅಂತ ನಾನೆಷ್ಟು ಬಾರಿ ಹೇಳಿಕೊಟ್ಟರೂ, ಅವನು ಒಪ್ಪಿಕೊಳ್ಳಲು ಸಿದ್ಧನಿರಲಿಲ್ಲ. ಇದರಲ್ಲಿ ಅವನ ತಪ್ಪಾದರೂ ಏನಿದೆ. ಜಗದ ಪರಿವೆ ಇಲ್ಲದ ಅವನಿಗೆ ಸರಿ ತಪ್ಪು, ಒಳಿತು ಕೆಡುಕುಗಳ ಕಲ್ಪನೆಯಾದರು ಹೇಗೆ ಬಂದೀತು? ಅವನ ಮಾತುಗಳಿಗೆ ಇಡೀ ತರಗತಿ ಗೊಳ್ಳೆಂದು ನಕ್ಕಿತು. ಅವರ ಅಪಹಾಸ್ಯದ ನಗುವನ್ನು ಗುರುತಿಸಲು ಅಶಕ್ತನಾಗಿ ಅವರ ನಗುವಿನೊಂದಿಗೆ ಇವನು ಸೇರಿಕೊಂಡು ನಗಲಾರಂಭಿಸಿದ. ನನಗೆ ಮುಗ್ಧತೆಯ ಪ್ರತಿರೂಪವೇ ಎದುರುಗೊಂಡಾಯಿತು. ಕರುಳು ಚುರುಕ್ ಎಂದಿತು. ನಾನು ಶಿಕ್ಷಕಿ ಎಂಬುದಕ್ಕಿಂತ ನಾನು ಕೂಡ ಒಬ್ಬ ತಾಯಿ ಅಲ್ಲವೇ? ಮಕ್ಕಳ ವರ್ತನೆ ತುಸು ಬೇಸರ ತಂದಿತಾದರೂ ಕೋಪಗೊಳ್ಳದೆ ಕುರುಡ ತನ್ನ ಕೈಯಲ್ಲಿ ಲ್ಯಾಂಪ್ ಹಿಡಿದು ಓಡಾಡುತ್ತಿದ್ದ ಕಥೆಯನ್ನು ಹೇಳಿದೆ. ಅವನಿಗೆ ಆ ದೀಪದಿಂದ ಏನೂ ಉಪಯೋಗ ಇರಲಿಲ್ಲ. ಆದರೂ ಇತರರಿಗಾಗಿ ಆತ ದೀಪ ಹಿಡಿದು ದಾರಿ ತೋರುತ ಅಷ್ಟು ಒಳ್ಳೆಯ ಕೆಲಸ ಮಾಡಿರುವಾಗ ಬುದ್ದಿವಂತರಾದ ನೀವು ಅವನ ಅಮಾಯಕತೆಯನ್ನು ಉಪಯೋಗಿಸಿಕೊಂಡು ಹೀಯಾಳಿಸುವುದು ತಪ್ಪು ಎಂದು ತಿಳಿ ಹೇಳಿದೆ.
ಮಕ್ಕಳ ಮನಸ್ಸು ಬಿಳಿ ಕಾಗದದಂತೆ. ನಾವು ಏನು ತುಂಬಿದರೂ ಅದನ್ನೆ ಬರೆದುಕೊಳ್ಳುತ್ತದೆ. ಹಾಗಾಗಿ ಶಿಕ್ಷಕರಾದವರು ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸುವಾಗ ಬಹಳ ಎಚ್ಚರಿಕೆಯಿಂದ, ಸೂಕ್ಷ್ಮಮತಿಯಾಗಿ ಆರೋಗ್ಯಕರವಾಗಿ ತಿದ್ದಬೇಕು. ಆದ್ದರಿಂದ ಒಂದಷ್ಟು ಕಡಕ್ ದನಿಯನ್ನು ಸೇರಿಸಿ ಇನ್ನೂ ಮುಂದೆ ಅವನನ್ನು ತಿಕ್ಕಲು ಮಂಜ ಅನ್ನಬಾರದು. ಎಲ್ಲರೂ ಅವನನ್ನು ಮಂಜು ಅಥವಾ ಮಂಜುನಾಥ ಎಂದೆ ಕರೆಯಬೇಕು ಅಂದಾಗ ಎಲ್ಲಾ ಮಕ್ಕಳು ಸಾರಿ ಮಿಸ್ ಅಂದರು. ಮುಂದೆ ಆ ಮಕ್ಕಳಾರೂ ಅವನನ್ನು ತಿಕ್ಕಲ ಎಂದು ಕರೆಯಲಿಲ್ಲ. ನನ್ನ ಭಯದಿಂದಲೋ ಅಥವಾ ನಾನು ಮೂಡಿಸಿದ ಅರಿವಿನಿಂದಲೋ ಒಟ್ಟಿನಲ್ಲಿ ಅವನನ್ನು ಮಂಜು ಎನ್ನಲು ಪ್ರಾರಂಭಿಸಿದರು. ಇಂತಹ ಸಕಾರಾತ್ಮಕ ಬದಲಾವಣೆಗಳೇ ಶಿಕ್ಷಕರ ಆಶಯವಾಗಿರುತ್ತದೆ. ಶಿಕ್ಷಣದ ಗುರಿಯೂ ಕೂಡ ಮಕ್ಕಳ ಸರ್ವತೋಮುಖ ಪ್ರಗತಿಯಾಗಿದೆ.
ಅಂತೂ ಮುಂದೊಂದು ದಿನ ಬೇರೆ ತರಗತಿ ಪ್ರವೇಶಿಸಿದೆ. ಅಲ್ಲಿ ನೋಡಿದರೆ ಇದೇ ಮಂಜು ಹಾಜರಾಗಿದ್ದನು. ಏ ಮಂಜು, ಇಲ್ಲಿ ಬಾ ನೀನು ಯಾಕೆ ಇಲ್ಲಿ ಕುಳಿತಿದ್ದೀಯಾ? ನಿನ್ನ ತರಗತಿಗೆ ಹೋಗು ಎಂದೆ. ನಾನು ಇಲ್ಲ ಮಿಸ್… ಬೇಡ… ಮಿಸ್ ಅನ್ನುತ್ತಾ ತುಂಬಾ ದೈನ್ಯತೆಯಿಂದ ಹೇಳುತ್ತಿದ್ದ. ಅಷ್ಟರಲ್ಲಿ ಅವನು ತರಗತಿಯಲ್ಲಿ ಕಾಣದಿದ್ದಾಗ ಮುಖ್ಯ ಶಿಕ್ಷಕರು ಅವನನ್ನು ಹುಡುಕುತ್ತಾ ಬಂದರು. ಮಂಜು ಕಾಣುತ್ತಿಲ್ಲ. ಎಲ್ಲಿ ಹೋದ? ಇಲ್ಲಿದ್ದಾನಾ? ಅಂತ ಕೂಗಿದರು. ಮಕ್ಕಳ ಬಗ್ಗೆ ತುಂಬಾ ಕಾಳಜಿ ಅವರಿಗೆ. ಮೇಲಾಗಿ ಅಂತಃಕರಣವುಳ್ಳ ವ್ಯಕ್ತಿ. ವಿಶೇಷವಾಗಿ ಇವನ ಮೇಲೆ ಇನ್ನೂ ಹೆಚ್ಚು ಪ್ರೀತಿ. ಬಾ ಇಲ್ಲಿ, ನೀನು ಯಾಕೆ ಇಲ್ಲಿ ಕುಳಿತಿದ್ದೀಯಾ? ಅಂದರು. ಮುಖ್ಯ ಶಿಕ್ಷಕರು ಇವನನ್ನು ಹೊಡೆಯುವುದಿರಲಿ ಗದರುತ್ತಲೂ ಇರಲಿಲ್ಲ. ಆದರೂ ಇವರನ್ನು ಕಂಡರೆ ತುಂಬಾ ಹೆದರುತ್ತಿದ್ದನು. ಆದರೂ ಧೈರ್ಯ ಮಾಡಿ ಇಲ್ಲ ಹೋಗು ನಾನು ಮಿಸ್ ಕಾಸು ಹೋಗು ನೀನು ಎಂದನು. ಇವರು ಇವನ ಮನೆಯ ಪರಿಸ್ಥಿತಿ ನೆನೆದು ತುಂಬಾ ನೋವುಪಡುತ್ತಿದ್ದರು. ಮುಂದಿನ ದಿನಗಳಲ್ಲಿ ನನ್ನ ಜೊತೆ ತುಂಬಾ ಆಪ್ತವಾಗಿ ಹೊಂದಿಕೊಳ್ಳಲಾರಂಭಿಸಿದ. ಮುಖ್ಯ ಶಿಕ್ಷಕರು ಅವನು ನನ್ನ ತರಗತಿಗೆ ಬಂದು ಕುಳಿತಿರುವುದಕ್ಕೇನೂ ಆಕ್ಷೇಪಿಸುತ್ತಿರಲಿಲ್ಲ.
ಇವನಿಗೆ ಸ್ಪಷ್ಟವಾಗಿ ನಿರರ್ಗಳವಾಗಿ ಮಾತನಾಡಲು ಬರುತ್ತಿರಲಿಲ್ಲ. ಒಂದೆರಡು ಪದಗಳಲ್ಲೇ ತನ್ನೆಲ್ಲ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದ. ಹೇಳಿದ್ದನ್ನೇ ಪದೇ ಪದೇ ಹೇಳುತ್ತಿದ್ದ. ಅವನ ಮನೋಗತವನ್ನು ನಮಗೆ ಅರ್ಥ ಮಾಡಿಸುವುದು ಅವನ ಉದ್ದೇಶವಾಗಿತ್ತು. ನರ ದೌರ್ಬಲ್ಯದ ಕಾರಣದಿಂದ ಅವನು ಕೆಲವೊಮ್ಮೆ ನಿಯಂತ್ರಣ ಕಳೆದುಕೊಳ್ಳುತ್ತಿದ್ದನಾದರೂ ಅಷ್ಟು ವರ್ಷಗಳಲ್ಲಿ ಯಾರಿಗೂ ಸಣ್ಣ ಅಪಾಯನ್ನು ಕೂಡ ಮಾಡಿದವನಲ್ಲ. ಬದಲಾಗಿ ಜನರ ಹೊಡೆತಗಳಿಗೆ ಬಲಿಬಶುವಾಗುತ್ತಿದ್ದವನು.
ಇಂತಹ ಮಕ್ಕಳನ್ನು ಶಿಕ್ಷಣ ಇಲಾಖೆ ಬುದ್ಧಿಮಾಂದ್ಯರು, ಅಂಗವಿಕಲರು ಎಂದು ಸಂಬೋಧಿಸುವುದಿಲ್ಲ. ಬದಲಾಗಿ ‘ವಿಶೇಷ ಚೇತನರು’ ಎಂದು ವಿಶೇಷವಾಗಿ ಗೌರವಿಸುತ್ತದೆ. ಪ್ರತಿ ವಿಕಲತೆಗೂ ವಿಶೇಷ ಶಾಲೆಗಳು ಇದ್ದರೂ ಕೂಡ ಸರ್ಕಾರಿ ಶಾಲೆಗಳಲ್ಲಿ ಅವರನ್ನು ಇತರ ಸಾಮಾನ್ಯ ಮಕ್ಕಳ ಜೊತೆ ಸೇರಿಸಿ ಶಿಕ್ಷಣ ನೀಡಲಾಗುತ್ತದೆ. ಇದಕ್ಕಾಗಿ ಶಿಕ್ಷಣ ನೀಡುವ ವಿಧಾನ ಕುರಿತು ಶಿಕ್ಷಕರಿಗೆ ಇಲಾಖೆಯಿಂದ ‘ಸಮನ್ವಯ ಶಿಕ್ಷಣ’ ವೆಂಬ ತರಬೇತಿ ನೀಡಲಾಗುತ್ತದೆ. ಇಲ್ಲಿ ವಿವಿಧ ದೋಷವುಳ್ಳ ಮಕ್ಕಳ ನಿರ್ವಹಣಾ ವಿಧಾನ, ಅನುಸರಿಸಬೇಕಾದ ಬೋಧನಾ ಕ್ರಮಗಳು ಹಾಗೂ ಮೌಲ್ಯಮಾಪನ ಕ್ರಿಯೆಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಆದರೂ ಇವೆಲ್ಲ ಸಾಕಾರಗೊಳ್ಳಲು ಶಿಕ್ಷಕರಿಗೆ ತಾಳ್ಮೆ ಬಹಳ ಮುಖ್ಯ. ಕೋಪಿಷ್ಟ ಮತ್ತು ತಿರಸ್ಕಾರ ಮನೋಭಾವವುಳ್ಳ ಶಿಕ್ಷಕರಿಗೆ ಇಂತಹ ಮಕ್ಕಳು ಸವಾಲಾಗಿ ಪರಿಣಮಿಸುತ್ತಾರೆ. ಪ್ರೀತಿ ಅಂತಃಕರಣವುಳ್ಳ ಶಿಕ್ಷಕರು ಬಹಳ ಸುಲಭವಾಗಿ ಇವರನ್ನು ಸಂಭಾಳಿಸಬಹುದು.
ನಿಮ್ಮ ಸ್ಕೂಲ್ ಮಂಜ ನನ್ನನ್ನು ಬೈದನು, ಹೊಡೆದನು ಎಂದು ಹಿರಿಯ ವಿದ್ಯಾರ್ಥಿಗಳಿಂದ ಇವನ ಮೇಲೆ ಆಗಾಗ ಕಂಪ್ಲೇಂಟ್ ಬರುತ್ತಿದ್ದವು. ನಾನು ಮಂಜುವನ್ನು ಕರೆದು “ನೀನು ತುಂಬಾ ಜಾಣ ಹುಡುಗ ಅಲ್ವ; ಯಾರಿಗೂ ಬೈಬಾರ್ದು ಅಂತ ನಾನು ಹೇಳಿದ್ದೆ. ಆದರೂ ನೀನು ಹಾಗೆ ಮಾಡುತ್ತಿದ್ದೀಯಾ ನೀನು ನನ್ನ ಜೊತೆ ಮಾತನಾಡಬೇಡ” ಎಂದು ಸ್ವಲ್ಪ ಹೊತ್ತು ಹುಸಿಕೋಪ ತೋರಿಸಿದೆ.
ಆಗ ಅವನು “ಮಿಸ್ ಮಾತಾಡು, ಮಿಸ್ ಮಾತಾಡು… ಅವರು ಮತ್ತೆ “ಅವರು ತಿಕ್ಕಲ ಮಂಜ ಅಂದ್ರು…” ಅಂದಾಗ ನನಗೆ ಇವನ ಕೋಪದ ಹಿಂದಿನ ವಾಸ್ತವ ಅರಿವಾಯಿತು. ಮೊದಲಾದರೆ ಅವನು ತಿಕ್ಕಲ ಮಂಜ ಎಂದರೆ ಎಂಜಾಯ್ ಮಾಡುತ್ತಿದ್ದ. ಆದರೆ ಅವನಿಗೆ ಅದು ತನ್ನನ್ನು ಹೀಯಾಳಿಸುವುದು ಎಂದು ಈಗೀಗ ಅರಿವಾಗುತ್ತಿತ್ತು. ಅದರಿಂದಾಗಿ ಇವನ ಆಕ್ರೋಶವನ್ನು ಅವರ ಮೇಲೆ ಈ ರೀತಿ ವ್ಯಕ್ತಪಡಿಸುತ್ತಿದ್ದನು. ಮುಂದಿನ ದಿನಗಳಲ್ಲಿ ಕಂಪ್ಲೇಂಟ್ ಹೇಳಲು ಬರುತ್ತಿದ್ದ ವಿದ್ಯಾರ್ಥಿಗಳಿಗೆ “ಮಂಜುವಿಗೆ ಬುದ್ಧಿ ಕಡಿಮೆ. ನೀವೆಲ್ಲ ತುಂಬಾ ಜಾಣರಲ್ವಾ, ಅವನಿಗೂ ನಿಮಗೂ ಏನು ವ್ಯತ್ಯಾಸ? ನೀವು ಅವನನ್ನ ಅನುಸರಿಸಿಕೊಂಡು ಹೋಗಬೇಕು. ಹಾಗೆಲ್ಲ ಹೀಯಾಳಿಸಬಾರದು, ಪ್ರೀತಿಯಿಂದ ಮಾತನಾಡಿಸಬೇಕು ಎಂದು ಆಗಾಗ ಬುದ್ಧಿವಾದ ಹೇಳಲು ಶುರು ಮಾಡಿದೆ. ಮುಂದೆ ಅಂತಹ ಕಂಪ್ಲೆಂಟ್‌ಗಳು ಬರಲಿಲ್ಲ. ಮಂಜು ಕೋಪ ಕಡಿಮೆ ಮಾಡಿಕೊಂಡನೋ, ಅಥವಾ ನನ್ನ ಬುದ್ಧಿವಾದ ಕೇಳಲಾರದೆ ಬೇಸರಗೊಂಡು ಶಾಲೆ ಕಡೆ ಬರುವುದನ್ನು ಬಿಟ್ಟನೋ… ಆ ಪ್ರಶ್ನೆಗೆ ಉತ್ತರವಂತೂ ನನಗೆ ಸಿಗಲಿಲ್ಲ.
ಈ ಮಧ್ಯೆ ಮಂಜುವಿಗೆ ಮತ್ತೊಂದು ದುರಭ್ಯಾಸವಾಗಿತ್ತು. ಅದು ಅನಿವಾರ್ಯ ಕಾರಣಗಳಿಂದ ಬಂದಿದ್ದ ವ್ಯಸನವಾಗಿತ್ತು. ಯಾರಾದರೂ ಹೊಸಬರು ಊರಲ್ಲಿ ಕಂಡರೆ ಸಾಕು ಕೊಂಡು ಸಾ, ಕಾಸು... ಕಾಸು… ಅನ್ನುತ್ತಾ ಅವರ ಹಿಂದೆ ಬೀಳುತ್ತಿದ್ದ. ಮನೆಯಲ್ಲಿದ್ದ ಬೇಜವಾಬ್ದಾರಿ ತಾಯಿ ಸರಿಯಾಗಿ ಊಟ ಹಾಕದಿದ್ದಾಗ ಇವನು ಇದನ್ನು ರೂಢಿಸಿಕೊಂಡಿದ್ದ. ಹಸಿವು ಏನೆಲ್ಲ ಮಾಡಿಸುತ್ತದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಬಲ್ಲದು. ಇದರ ಅರಿವಿದ್ದ ನಮ್ಮ ಮುಖ್ಯ ಶಿಕ್ಷಕರು ಬಿಸಿ ಊಟವನ್ನು ಬಡಿಸುವಾಗ ಎರಡು ಮೂರು ಬಾರಿ ಅವನನ್ನು ಕೇಳಿ ಬಡಿಸುತ್ತಿದ್ದರು.
ಒಮ್ಮೆ ಕಾಸು ಕೇಳಲು ಯಾರು ಸಿಕ್ಕಿಲ್ಲ. ಹಸಿವು ತಾಳಲಾರದೆ ಹೊಟ್ಟೆ ಹಿಡಿದುಕೊಂಡು ಅಳುತ್ತಿದ್ದನು. ನಾನು ಯಾಕೆ? ಏನಾಯಿತು? ಎಂದು ಪ್ರಶ್ನಿಸಿದೆ. ಏನು ಮಾತನಾಡದೇ ಹೊಟ್ಟೆ ಹಿಡಿದು ಜೋರಾಗಿ ಅಳಲಾರಂಭಿಸಿದನು. ಅವನ ಅಳುವಿನ ಮೂಲ ಯಾವುದೆಂದು ತಿಳಿಯಿತು. ನಾನು ಹಿಂದಿನ ಮೂರ್ನಾಲ್ಕು ದಿನದ ಹಿಂದೆ ನಾನು “ನೋಡು ಮಂಜು ನೀನು ಊರಿಗೆ ಬರುವವರನ್ನು ಕಾಸು ಕೇಳಿದರೆ ನಿಮ್ಮ ಟೀಚರ್ ಇದನ್ನೇ ಏನು ಕಲಿಸಿರೋದು ಅಂತ ನನ್ನ ಬೈತಾರೆ. ನನ್ನನ್ನು ಅವರು ಬೈಯಬಾರದು ಅಂದ್ರೆ ನೀನು ಯಾರನ್ನೂ ಕಾಸು ಕೇಳಬಾರದು” ಎಂದು ಸ್ವಲ್ಪ ಏರುಧ್ವನಿಯಲ್ಲಿ ಹೇಳಿದೆ. ನನ್ನ ಕೋಪ ಮಿಶ್ರಿತ ಮಾತನ್ನು ಕೇಳಿ ಅವನು ಸ್ವಲ್ಪ ಗಡಿಬಿಡಿಯಾದರೂ ನನ್ನೊಂದಿಗೆ ಇದ್ದ ಆತ್ಮೀಯತೆಯಿಂದ ಮರು ಮಾತನಾಡದೇ ಹೂಂ ಅನ್ನುವಂತೆ ತಲೆ ಆಡಿಸಿದ್ದನು. ನಾವು ಆಗಾಗ ಅವನಿಗೆ ಬ್ರೆಡ್ ಅಥವಾ ಬಿಸ್ಕತ್ತು ಕೊಡುತ್ತಿದ್ದೆವು. ನಂತರ ಹಸಿವು ಅನ್ನುವಾಗ ಅವರಮ್ಮ ಬೆಳಿಗ್ಗೆ ಸರಿಯಾಗಿ ಊಟ ಕೊಡುತ್ತಿರುವುದು ಎಂದು ಸುಮ್ಮನಾದೆ. ಹಲವು ದಿನಗಳ ನಂತರ ತಿಳಿಯಿತು. ಗೆಳೆಯರು “ಯಾಕೋ ಮಂಜು, ನಿನಗೆ ಮಿಸ್ ಈಗ ಬಿಸ್ಕೆಟ್ ಕೊಡಿಸಲ್ಲ ಎಂದಿದ್ದಕ್ಕೆ, ಬೇಡ ಮಿಸ್ಸ್ …ಕಾಸು… ಖಾಲಿ… ಮಿಸ್…. ಕಾಸು…. ಖಾಲಿ ಎನ್ನುತ್ತಿದ್ದನಂತೆ. ಅವರಮ್ಮನನ್ನು ಕರೆಸಿ “ನೀನು ಹೆತ್ತ ಮಗನನ್ನು ನೀನೇ ನಿರ್ಲಕ್ಷಿಸಿದರೆ ಅವನ ಪರಿಸ್ಥಿತಿ ಏನಾಗುತ್ತದೆ?” ಎಂದು ಅವನ ಅಸಹಾಯಕ ಪರಿಸ್ಥಿತಿಯ ಕುರಿತು ಅರಿವು ಮೂಡಿಸಲು ಯತ್ನಿಸಿದೆವು. ಮುಂದಿನ ದಿನಗಳಲ್ಲಿ ಸ್ವಲ್ಪ ಪರಿಸ್ಥಿತಿ ಸುಧಾರಿಸಿತು ಅನಿಸುತ್ತೆ.
ನನ್ನ ಮಗಳು ಜೀವಿತಳನ್ನು ಅವನು ನೋಡಿದ್ದು ನಾಲ್ಕೂವರೆ ತಿಂಗಳ ಮಗುವಿದ್ದಾಗ. ಅವನ ದೃಷ್ಟಿಯಲ್ಲಿ ಅವಳು ಬೆಳೆದು ದೊಡ್ಡವಳಾಗಲೇ ಇಲ್ಲ. ಮಗಳು ಜೀವಿತ ಐದಾರು ವರ್ಷ ಕಳೆದರೂ ಕೈಗಳನ್ನು ಪುಟ್ಟದು ಮಾಡಿ ಚಿನ್ನಮ್ಮ… ಚಿನ್ನಮ್ಮ (ಚೆನ್ನಾಗಿದ್ದಾಳಾ) ಎನ್ನುತ್ತಾ ಅದೆಷ್ಟು ಸಂಭ್ರಮ ಪಡುತ್ತಿದ್ದ ಎಂದರೆ ನನಗೆ ಅವನೊಳಗೊಬ್ಬ ಅಮ್ಮ ಕಾಣುತ್ತಿದ್ದಳು. ನಮ್ಮ ಶಾಲೆಯ ಟೀಚರ್ಸ್ ಬೈಕ್‌ನಲ್ಲಿ ಬಂದರೆ ಸಾಕು ಓಡಿ ಬಂದು ನಾನು ದೊಡ್ಡ ಆಗಿ ಗಾಡಿ ಮಿಸ್ ನಿನ್ನ ಕರೆದುಕೊಂಡು ಟೂರು… ಅನ್ನುತ್ತಿದ್ದನು. ಆಗ ಬೇರೆ ಟೀಚರ್ಸ್, ‘ಹೇ ಮಂಜು ನನ್ನ ಕರ್ಕೊಂಡು ಹೋಗು’ ಅಂತ ರೇಗಿಸುತ್ತಿದ್ದರು. ‘ಬೇಡ, ನೀನು ಬೇಡ, ಮಿಸ್ … ನೀನು ಊಹೂಂ.. ಪೆಟ್ರೋಲು ಖಾಲಿ” ಎನ್ನುತ್ತಿದ್ದ. ನಮ್ಮ ಶಿಕ್ಷಕರ ಬೈಕ್ ಏರಿ ಕುಳಿತು ಮಿಸ್ ಬಾ ಕುತ್ಕೊ ಡ್ರೂಂ ಅಂತ ಹೋಗ್ತೀನಿ ಅನ್ನುತ್ತಾ ನಲಿಯುತ್ತಿದ್ದನು.
ಒಮ್ಮೆ ಮಂಜು ಜ್ವರದಿಂದ ನರಳುತ್ತಿದ್ದ. ಅವನ ಅಮ್ಮ ಊರಲ್ಲಿ ಇರಲಿಲ್ಲ. ಇದ್ದರೂ ವ್ಯತ್ಯಾಸವೇನು ಆಗುತ್ತಿರಲಿಲ್ಲ. ಮುಖ್ಯ ಶಿಕ್ಷಕರು ತಾವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತೀರ್ಮಾನಿಸಿದರು. ಆದರೆ ಅವನು ಹೋಗಲು ಅನುವಾಗಲಿಲ್ಲ. ಬಾ ಮಂಜು ಬೈಕ್ ಹತ್ತಿ ಕೂರು ಎಂದು ಎಷ್ಟು ಕರೆದರೂ ಬೈಕ್ ಏರಲಿಲ್ಲ. ನಾನು ಹೋಗು ಮಂಜು ನೀನು ಜಾಣಮರಿ ಅಲ್ವಾ ಎಂದೆ. ಊಹೂಂ ನಾನು ಹೋಗಲ್ಲ, ನಾನು ಹೋಗಲ್ಲ, ಮಿಸ್ ನೀನು ಬಾ ಅಂತ ಸೀರೆ ಹಿಡಿದು ಜಗ್ಗುತ್ತಿದ್ದನು. ಅದನ್ನು ಗಮನಿಸಿದ ಮುಖ್ಯ ಶಿಕ್ಷಕರು ನೀವು ಬರುವವರೆಗೂ ಅವನು ಬರಲ್ಲ. ನೀವು ಬನ್ನಿ ಮೇಡಂ ಅಂದಾಗ ಖುಷಿಯಾಗಿ ನನ್ನ ಜೊತೆ ಬಂದನು. ದಾರಿಯುದ್ದಕ್ಕೂ ಮಿಸ್ ಹುಷಾರು, ಕೈ ಹಿಡಕೋ ಅನ್ನುತ್ತಲೇ ಹೋದ. ಇಲ್ಲಿ ಯಾರ ಕಾಳಜಿ ಯಾರು ಮಾಡಿದರು ಎಂದೇನು ವಿಶೇಷವಾಗಿ ಹೇಳಬೇಕಿಲ್ಲ. ಇಂತಹ ಅದೆಷ್ಟೋ ಅನುಭವಗಳು ಮರೆಯಲಾರದಷ್ಟು ಮನದೊಳಗೆ ಸೇರಿಹೋಗಿವೆ.
ಕೊರೋನ ಕಾಲದಲ್ಲಿ ಬಂದ ಒಂದು ಫೋನ್ ಕರೆ ನನ್ನ ಮನವನ್ನು ಅಲ್ಲೋಲ ಕಲ್ಲೋಲವಾಗಿಸಿತ್ತು. ಕೊರೋನಾ ಮಾರಿ ಮಂಜು ಎಂಬ ಮುಗ್ಧ ಜೀವವನ್ನೂ ತನ್ನ ತೆಕ್ಕೆಗೆ ಎಳೆದುಹಾಕಿಕೊಂಡಿತ್ತು. ಜ್ವರ ಮತ್ತು ಹೊಟ್ಟೆ ನೋವು ಎಂದು ಮಲಗಿದವನು ಸಕಾಲದಲ್ಲಿ ಸೂಕ್ತ ಆರೈಕೆ ಹಾಗೂ ಚಿಕಿತ್ಸೆ ದೊರೆಯದೆ ನಮ್ಮನ್ನೆಲ್ಲ ಅಗಲಿದ್ದನು. ಮಂಜುವಿನೊಂದಿಗಿನ ಐದಾರು ವರ್ಷಗಳ ಒಡನಾಟದಲ್ಲಿ ಅವನು ನನ್ನ ಮನದ ಭಾವಕೋಶದೊಳಗೆ ಸೇರಿ ಹೋಗಿದ್ದ. ಹಾಗಾಗಿ ಆ ಕಾಡುವ ನೆನಪು ಇಂದಿಗೂ ಹಾಗೇ ಇದೆ… ನನಗೆ ಅವನ ಪ್ರೀತಿ, ತುಂಟಾಟ, ಮಾತುಕತೆಗಳು ಗಾಯದ ಕಲೆಗಳಂತೆ ಮನದೊಳಗೆ ಕುರುಹನ್ನು ಉಳಿಸಿವೆ. ಅವನು ದೈಹಿಕವಾಗಿ ನನ್ನಿಂದ ದೂರವಿರಬಹುದು. ಭಾವನಾತ್ಮಕವಾಗಿ ಸದಾ ನನ್ನೊಳಗೆ ಇದ್ದು ಆಗಾಗ ಮಿಸ್ ಜೀವಿತ ಚಿನ್ನಮ್ಮ… ಎಂದು ಕೂಗಿದಂತೆ ಪ್ರತಿಧ್ವನಿಸುತ್ತಲೇ ಇದ್ದಾನೆ.
ಅನುಸೂಯ ಯತೀಶ್ ಅವರು ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಕಥೆ ಕವನ ಗಜಲ್ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರೆಯುವ ಇವರ ಮೆಚ್ಚಿನ ಆದ್ಯತೆ ವಿಮರ್ಶೆಯಾಗಿದೆ. ಈಗಾಗಲೆ ಅನುಸೂಯ ಯತೀಶ್ ಅವರು ‘ಕೃತಿ ಮಂಥನ’, ‘ನುಡಿಸಖ್ಯ’, ‘ಕಾವ್ಯ ದರ್ಪಣ’ ಎಂಬ ಮೂರು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ.
ಲೇಖನ ಭಾವಪೂರ್ಣವಾಗಿದೆ.
ನಿಮ್ಮ ತಾಳ್ಮೆ, ಸಹನೆ ಮೆಚ್ಚುವಂತಹದು, ವಿಶೇಷ ಚೇತನ ಮಕ್ಕಳನ್ನು ಸಂಭಾಳಿಸುವುದು ನಿಜವಾಗಿಯೂ ಕಷ್ಟದ ಕೆಲಸ. ಪ್ರೀತಿ ಮತ್ತು ಅಂತಃಕರಣವಿರುವ ಶಿಕ್ಷಕರು ಮಾತ್ರ ಇಂಥವರನ್ನು ಸಂಭಾಳಿಸಬಲ್ಲರು ಎನ್ನುವ ನಿಮ್ಮ ಮಾತು ಅಕ್ಷರಸ ಸತ್ಯ.