ಸಂಕಲನದ ಮೊದಲ ಕಥೆ ‘ಎಗ್ ರೈಸ್ ಮಂತ್ರಿ’ ಹಾಸ್ಯದ ಜೊತೆಗೆ ಎಚ್ಚರವನ್ನೂ ಮೂಡಿಸುತ್ತದೆ. ಶಾಲಾ ಸಂಸತ್ತಿಗೆ ನಡೆಯುವ ಚುನಾವಣೆಯಲ್ಲಿ ವಿದ್ಯಾರ್ಥಿಯೊಬ್ಬ ಮಂತ್ರಿಯಾಗುವ ಆತುರದಲ್ಲಿ ಪೊಳ್ಳು ಭರವಸೆ ನೀಡಿ, ಗೆದ್ದಮೇಲೆ ಎಗ್ ರೈಸ್ ಕೊಡಿಸಲಾಗದೇ ಇರುವ ಸ್ಥಿತಿ, ಅದನ್ನು ಪಡೆಯಲು ಪ್ರಯತ್ನಿಸುವ ಅವನ ಗೆಳೆಯರು ಮಾಡುವ ಸತತ ಪ್ರಯತ್ನ ಹಾಸ್ಯವನ್ನುಕ್ಕಿಸುತ್ತದೆ. ಇದರಲ್ಲಿ ಸತ್ಯಾಂಶವೂ ಇದೆ. ಆದರೆ ನಾಗ ‘ನನಗೆ ಅಷ್ಟು ದುಡ್ಡು ಎಲ್ಲಿಂದ ಬರತೈತಿ, ಆಗಲ್ಲ ಬೇಕಾದ್ರ ಶಾಲಿಗೆ ಒಳ್ಳೆ ಕೆಲ್ಸ ಮಾಡ್ತೇನಿ’ ಅಂತ ಹೇಳಿದ್ದು ಅವನ ಪ್ರಾಮಾಣಿಕತೆಯಾದರೆ, ಆಸೆಗೆ ಬಲಿಯಾಗಬೇಡಿ ಎಂಬುದನ್ನೂ ಕಥೆ ಸೂಚ್ಯವಾಗಿ ಹೇಳುತ್ತದೆ.
ಗುಂಡುರಾವ್ ದೇಸಾಯಿ ಬರೆದ “ಮಕ್ಕಳೇನು ಸಣ್ಣವರಲ್ಲ” ಮಕ್ಕಳ ಕಥಾ ಸಂಕನದ ಕುರಿತು ನಾಗರಾಜ ಎಂ ಹುಡೇದ ಬರಹ

ಇತ್ತೀಚಿನ ಕನ್ನಡ ಮಕ್ಕಳ ಸಾಹಿತ್ಯಕ್ಕೆ ಶುಕ್ರದೆಸೆ ತಿರುಗಿದೆ ಎನ್ನಬಹುದು. ಹಲವು ಅಗತ್ಯತೆಗಳನ್ನು ಅದು ನೀಗಿಸಿಕೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಹಾಸ್ಯ ಸಾಹಿತ್ಯಕ್ಕೆ ಮತ್ತೊಂದು ಕೃತಿ ಸೇರ್ಪಡೆಯಾಗಿದೆ. ಗುಂಡುರಾವ್ ದೇಸಾಯಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರು. ಶಿಕ್ಷಕರಾಗಿ ಮಕ್ಕಳ ಒಡನಾಡಿಯಾಗಿ ಮಕ್ಕಳ ಒಳಿತನ್ನೆ ಬಯಸುವ, ಅವರು ಮಕ್ಕಳಿಗಾಗಿ ‘ಮಕ್ಕಳೇನೂ ಸಣ್ಣವರಲ್ಲ’ ಎಂಬ ಕಥಾಸಂಕಲನವನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ಮಕ್ಕಳಿಗೆಂದೇ ಆದರೂ ಎಲ್ಲರೂ ಓದುವಂತ ಹಾಸ್ಯಭರಿತ ಕಥೆಗಳನ್ನು ರಚಿಸಿದ್ದಾರೆ.

ಇಲ್ಲಿಯ ಎಲ್ಲ ಕಥೆಗಳಲ್ಲೂ ಗುಂಡುರಾವ್ ಅವರು ತಮ್ಮ ಪರಿಸರದ ಸುತ್ತಲಿನ ಘಟನೆಗಳಲ್ಲಿ ಹಾಸ್ಯದ ಎಳೆಯನ್ನು ಹಿಡಿದು ಸುಂದರ ಕಥೆಯಾಗಿಸುವ ಪ್ರಯತ್ನವನ್ನು ಮಾಡಿದ್ದಾರೆ. ವಿಭಿನ್ನ ವಿಷಯವಸ್ತು, ಸಂಭಾಷಣೆ, ಸರಳ ಆಡು ಭಾಷೆ ಮೂಲಕ ಚೇತೋಹಾರಿಯಾಗಿವೆ. ಹಾಗೆಯೇ ಇಲ್ಲಿ ಕಥೆಯ ನಿರೂಪಣೆಗಿಂತ ಸಂಭಾಷಣೆಯ ರೂಪದಲ್ಲಿ ಸಾಗಿರೋದು ಆಪ್ತಭಾವ ಮೂಡಿಸುತ್ತವೆ.

(ಗುಂಡುರಾವ್ ದೇಸಾಯಿ)

ಸಂಕಲನದ ಮೊದಲ ಕಥೆ ‘ಎಗ್ ರೈಸ್ ಮಂತ್ರಿ’ ಹಾಸ್ಯದ ಜೊತೆಗೆ ಎಚ್ಚರವನ್ನೂ ಮೂಡಿಸುತ್ತದೆ. ಶಾಲಾ ಸಂಸತ್ತಿಗೆ ನಡೆಯುವ ಚುನಾವಣೆಯಲ್ಲಿ ವಿದ್ಯಾರ್ಥಿಯೊಬ್ಬ ಮಂತ್ರಿಯಾಗುವ ಆತುರದಲ್ಲಿ ಪೊಳ್ಳು ಭರವಸೆ ನೀಡಿ, ಗೆದ್ದಮೇಲೆ ಎಗ್ ರೈಸ್ ಕೊಡಿಸಲಾಗದೇ ಇರುವ ಸ್ಥಿತಿ, ಅದನ್ನು ಪಡೆಯಲು ಪ್ರಯತ್ನಿಸುವ ಅವನ ಗೆಳೆಯರು ಮಾಡುವ ಸತತ ಪ್ರಯತ್ನ ಹಾಸ್ಯವನ್ನುಕ್ಕಿಸುತ್ತದೆ. ಇದರಲ್ಲಿ ಸತ್ಯಾಂಶವೂ ಇದೆ. ಆದರೆ ನಾಗ ‘ನನಗೆ ಅಷ್ಟು ದುಡ್ಡು ಎಲ್ಲಿಂದ ಬರತೈತಿ, ಆಗಲ್ಲ ಬೇಕಾದ್ರ ಶಾಲಿಗೆ ಒಳ್ಳೆ ಕೆಲ್ಸ ಮಾಡ್ತೇನಿ’ ಅಂತ ಹೇಳಿದ್ದು ಅವನ ಪ್ರಾಮಾಣಿಕತೆಯಾದರೆ, ಆಸೆಗೆ ಬಲಿಯಾಗಬೇಡಿ ಎಂಬುದನ್ನೂ ಕಥೆ ಸೂಚ್ಯವಾಗಿ ಹೇಳುತ್ತದೆ.

‘ಮಗ ಮತ್ತು ಗಾಳಿಪಟ’ ಕಥೆಯಲ್ಲಿ ಮಕ್ಕಳ ಸಹಜ ಸ್ವಭಾವ ವ್ಯಕ್ತವಾಗಿದೆ. ಮಕ್ಕಳು ಸದಾ ಉತ್ಸಾಹದ ಬುಗ್ಗೆಯಂತಿರುತ್ತಾರೆ. ಅವರ ಕಾರ್ಯಕ್ಕೆ ದೊಡ್ಡವರು ಪ್ರೋತ್ಸಾಹಿಸಬೇಕು. ಇಲ್ಲಿ ಮಗ ಸಮುದು ನಿತ್ಯ ಹೊಸ ಹೊಸ ಪ್ರಯತ್ನ ಮಾಡುತ್ತಲೇ ಇರುವನು. ಛಲ ಬಿಡದೆ ಗಾಳಿಪಟ ಹಾರಿದಾಗ ಎಲ್ಲರೂ ಖುಷಿ ಪಡುತ್ತಾರೆ. ಹಾಗೆಯೇ ಮಕ್ಕಳು ಸ್ವ ಅನುಭವದ ಮೂಲಕ ತಾವೇ ಪಡೆಯುವಂತಾದರೆ ಅವರ ಬುದ್ದಿಮಟ್ಟವೂ ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ.

ಈ ಸಂಕಲನದ ಶಿರ್ಷಿಕೆಯ ಕಥೆ ‘ಮಕ್ಕಳೇನು ಸಣ್ಣವರಲ್ಲ’ ಕಥೆಯು ನಮ್ಮ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಘಟನೆಯೇ ಆಗಿದೆ. ಕೆಲವು ಸಾರಿ ಮಕ್ಕಳು ದೊಡ್ಡವರಿಗಿಂತಲೂ ಹೆಚ್ಚಿನ, ದೊಡ್ಡವರಿಗೆ ಗೊತ್ತಿಲ್ಲದ ವಿಷಯಗಳನ್ನೂ ತಿಳಿದುಕೊಂಡಿರೋದು ಸೋಜಿಗವೆನಿಸುತ್ತದೆ. ಅದಕ್ಕೆ ಅವರ ಪ್ರಾಂಜಲ ಮನಸ್ಸು, ಪ್ರಶ್ನಿಸುವಿಕೆಯೂ ಕಾರಣವಾಗಿರುತ್ತದೆ. ಪಾರಿವಾಳಗಳನ್ನು ಸಾಕುವುದು ಒಂದು ಹವ್ಯಾಸ. ಅದರ ಜೊತೆಗೆ ಲಾಭದಾಯಕವೂ, ಅವುಗಳ ವಿಶಿಷ್ಟ ಗುಣಗಳು, ಪಾರಿವಾಳಗಳ ಉಪಯೋಗಗಳನ್ನು ಮಕ್ಕಳು ತಿಳಿಯಲು ಪ್ರಯತ್ನಿಸುತ್ತಾರೆಂಬ ವಿಷಯವನ್ನು ಕಥೆಯಲ್ಲಿ ಸುಂದರವಾಗಿ ಆಸಕ್ತಿದಾಯಕವಾಗಿ ಕಟ್ಟಿಕೊಟ್ಟಿದ್ದಾರೆ.

ಇನ್ನೊಂದು ಚೆಂದದ ಕಥೆ ‘ನಾಯಿಯೊಂದಿಗಿನ ಸಖ್ಯ’. ನಾಯಿ ಮತ್ತು ಮರಿಗಳೆಂದರೆ ಮಕ್ಕಳಿಗೆ ತುಂಬಾ ಇಷ್ಟ. ಕೆಲವು ಮಕ್ಕಳಂತೂ ಚಿಕ್ಕಂದಿನಲ್ಲಿಯೇ ಹಚ್ಚಿಕೊಂಡರೆ ಬಿಟ್ಟಿರುವುದೇ ಇಲ್ಲ. ಅಷ್ಟೊಂದು ಅನ್ಯೋನ್ಯತೆ ಉಂಟಾಗಿಬಿಡುತ್ತದೆ. ಆದರೆ ಮೈಡಿ ಮೈಲಿಗೆಯ ಧರ್ಮಾಚರಣೆಯ ಸಂದರ್ಭದಲ್ಲಿ ಹಿರಿಕಳಾದ ಅಜ್ಜಿಯ ಮಡಿವಂತಿಕೆ ಮತ್ತು ಮಕ್ಕಳ ಪ್ರೀತಿ ಇಕ್ಕಟ್ಟಿನಲ್ಲಿ ಸಿಲುಕುವ, ಮಕ್ಕಳ ಮನಸ್ಸನ್ನು ಕದಡುವ ಪ್ರಸಂಗವನ್ನು ಈ ಕಥೆ ಕಟ್ಟಿಕೊಡುತ್ತದೆ. ಈ ಕಥೆ ಓದುತ್ತಾ ನಮ್ಮ ನಮ್ಮ ಬಾಲ್ಯದ ಪ್ರಸಂಗಗಳೂ ತೆರೆದುಕೊಳ್ಳುತ್ತವೆ.

ಇನ್ನು ‘ಚಿರತೆ ಮತ್ತು ಸ್ನ್ಯಾಕ್ಸ್‌’ ಕಥೆಯಲ್ಲಿ ಮಕ್ಕಳ ಸಾಹಸಗಾಥೆ, ಮಗುವಿನ ಮುಗ್ಧತೆ ವ್ಯಕ್ತವಾಗುತ್ತದೆ. ಇಲ್ಲಿ ಕಾಡು ಬೆಳೆಸಲು ಮಕ್ಕಳು ತಾವು ಸಂಗ್ರಹಿಸಿದ ಬೀಜದುಂಡೆಗಳನ್ನು ಮಸ್ಕಿ ಗುಡ್ಡಕ್ಕೆ ಹೋಗಿ ಒಗೆದು ಬರುವ ಸಂದರ್ಭದಲ್ಲಿ ಚಿರತೆ ಕಾಣಿಸಿಕೊಂಡು ಅವರನ್ನು ಅಟ್ಟಿಸಿಕೊಂಡು ಓಡತೊಡಗಿತು. ಮಕ್ಕಳು ಹಗ್ಗದ ಸಹಾಯದಿಂದ ಬಂಡೆಗಲ್ಲೊಂದನ್ನು ಏರಿ ಕುಳಿತುಕೊಳ್ಳುತ್ತಾರೆ. ಅಲ್ಲಿ ಅವರು ಚಿರತೆಯಿಂದ ಪಾರಾಗಲು ಹಲವು ಪ್ರಯತ್ನಗಳನ್ನು ಮಾಡುವ ಪ್ರಯತ್ನದಲ್ಲಿ, ತಮ್ಮ ಬಳಿಯಿದ್ದ ಸ್ನ್ಯಾಕ್ಸನ್ನು ಚೂರು ಚೂರು ಮಾಡಿ ಅದರತ್ತ ಎಸೆಯುತ್ತಾರೆ. ಮಸಾಲೆ ರುಚಿ ತಾಗಿ, ಅದನ್ನು ಚಿರತೆ ತಿಂದದನ್ನು ನೋಡಿ ಮಕ್ಕಳು ಒಳಗೊಳಗೇ ಸಂತೋಷಡುತ್ತಾರೆ. ಸಮುದು ಬಲು ತುಂಟ. ಅದರ ಕಣ್ಣಿಗೆ ಖಾರ ಬಿದ್ದರೆ ಓಡಿ ಹೋಗುತ್ತದೆ ಎಂದು ಹಾಗೆ ಮಾಡುತ್ತಿದ್ದ. ಭಯದ ನಡುವೆ ಸಮುದು ಹಾಸ್ಯಮಯವಾಗಿ ಕೀಟಲೇ ಮಾಡುತ್ತಿರುತ್ತಾನೆ. ಕೊನೆಗೂ ಮಕ್ಕಳೆಲ್ಲ ಸುರಕ್ಷಿತವಾಗಿ ಮನೆ ತಲಪುತ್ತಾರೆ. ಹೀಗೆ ಕಥೆ ಕುತೂಹಲ ಮೂಡಿಸುತ್ತದೆ. ಮಕ್ಕಳಲ್ಲಿ ಜಾಗೃತೆ ಕುರಿತು ಮಾಹಿತಿ ತಿಳಿಯಪಡಿಸುತ್ತದೆ.

ಹಾಗೆಯೇ ‘ದೆವ್ವ ಬಂತು ದೆವ್ವ’, ‘ನಾನು ನೀರಿನ ಮೇಲೆ ನಡೆಯುವೆ’, ‘ರಾಮುವಿನ ನಾಯಿ’, ಮತ್ತು ‘ಪ್ಲಾಸ್ಟಿಕಾಯಣ’ ಕಥೆಗಳು ಗಮನ ಸೆಳೆಯುತ್ತವೆ. ಮಕ್ಕಳ ನಡುವೆಯೇ ನಡೆಯುವ ನೈಜ ಸಂಭಾಷಣೆ ಇಲ್ಲಿಯ ಕಥೆಗಳ ಯಶಸ್ಸಾಗಿದೆ. ಸ್ಥಳೀಯ ಭಾಷಾ ಸೊಗಡು ಕತೆಯನ್ನು ಮತ್ತಷ್ಟು ಚೆಂದಗಾಣಿಸಿದೆ. ಕಲಾವಿದ ಸಂತೋಷ ಸಸಿಹಿತ್ಲು ಅವರು ರಚಿಸಿದ ಅತ್ಯಾಕರ್ಷಕವಾದ ಮುಖಪುಟ ಮತ್ತು ಒಳ ಚಿತ್ರಗಳು ಚೆಂದಕಿಂತ ಚೆಂದ ಇವೆ. ನೋಡಿದ ತಕ್ಷಣ ಓದಲು ಕೈಗೆತ್ತಿಕೊಳ್ಳುವಂತೆ ಮಾಡುತ್ತವೆ. ಈ ಕೃತಿಯನ್ನು ಕೀರ್ತಿ ಪ್ರಕಾಶನ ಮಸ್ಕಿ ಇವರು ಪ್ರಕಟಿಸಿದ್ದಾರೆ. ಒಟ್ಟು ಹನ್ನೆರೆಡು ಕಥೆಗಳಿರುವ ಈ ಸಂಕಲನ ಓದಲು ಖುಷಿ ನೀಡುತ್ತದೆ.

ಈ ಕೃತಿಗೆ ಮುನ್ನುಡಿ ಬರೆದಿರುವ ಹಿರಿಯ ಸಾಹಿತಿಗಳಾದ ಆನಂದ ಪಾಟೀಲ ಅವರು ‘ಇಲ್ಲಿನ ಕಥಾ ಬಗೆಗಳಿಗೆ ಅಗತ್ಯವಾಗುವ ಸಹಜದ ಆಡುಮಾತಿನ ವರಸೆಗಳನ್ನು ಗುಂಡುರಾವ್ ಬಹಳ ಸೊಗಸಾಗಿ ತಂದುಕೊಂಡಿದ್ದಾರೆ. ಅದರಲ್ಲೂ ಅವರ ರಾಯಚೂರಿನ ಕಡೆಯ ಘಾಟು ಇಲ್ಲಿ ಮೂಗಿಗೆ ಚೆನ್ನಾಗಿಯೇ ಬಡಿಯುತ್ತದೆ. ಬಲು ದೊಡ್ಡ ಯಶಸ್ಸು ಈ ಭಾಷಾ ಪರಿಕರದಲ್ಲಿಯೇ ಅವರಿಗೆ ಸರಳವಾಗಿ ಸಾಧ್ಯವಾಗಿದೆ. ಹಾಸ್ಯ ಗುಂಡುರಾಯರ ಸ್ವಭಾವದ ಆಯ್ಕೆಯಾಗಿರುವಂತೆಯೇ ಇಲ್ಲಿನ ಮಕ್ಕಳ ಲೋಕದ ಆಯ್ಕೆ ಬಲು ಅಂಟಿಕೊಂಡೇ ಬಂದುದಾಗಿ ಭಾರಿ ಹೊಂದಿಕೊಂಡು ಬಿಟ್ಟಿದೆ.’ ಎಂದು ಹೇಳಿದ್ದಾರೆ.


ಹಾಸ್ಯಕ್ಕೆ ಆಯಸ್ಸು ವೃದ್ಧಿಸುವ ಶಕ್ತಿಯಿದೆ. ಹಾಗಾಗಿಯೇ ಹಾಸ್ಯ ಸಾಹಿತ್ಯ ನಮ್ಮ ಮಕ್ಕಳಿಗೂ ದೊರೆಯಲಿ. ಈ ಕಥೆ ಓದುತ್ತಾ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿ, ರಂಜಿಸಿದರೆ ಲೇಖಕರ ಸಂತೋಷಕ್ಕೆ ಪಾರವೇ ಇಲ್ಲ. ಆ ಕಾರ್ಯ ಕೈಗೂಡಲು ಮಕ್ಕಳ ಕೈಗೆ ಈ ಕೃತಿಯನ್ನು ಓದಲು ನೀಡೋಣ. ಸಾಂದರ್ಭಿಕವಾಗಿಯಾದರೂ ಇಲ್ಲಿಯ ಕಥೆಗಳನ್ನು ಮಕ್ಕಳಿಗೆ ಹೇಳೋಣ.

(ಕೃತಿ: ಮಕ್ಕಳೇನು ಸಣ್ಣವರಲ್ಲ (ಮಕ್ಕಳಿಗಾಗಿ ಕಥೆಗಳು), ಲೇಖಕರು: ಗುಂಡುರಾವ್ ದೇಸಾಯಿ, ಪ್ರಕಾಶಕರು: ಕೀರ್ತಿ ಪ್ರಕಾಶನ ಮಸ್ಕಿ, ಬೆಲೆ: 80/-, ಪುಟಗಳು: 96)