ಮಗನೂ ಕೂಡ ಅಪ್ಪನಂತೆ ಮಿಲ್ಟ್ರಿಗೆ ಸೇರಿಬಿಡುತ್ತಾನೋ, ದಾರಿ ತಪ್ಪುತ್ತಾನೋ ಎಂಬ ಆತಂಕದಲ್ಲಿ ತಾಯಿ ಶಾಂತಕ್ಕನ ಜೀವನ ತೊಳಲಾಡುತ್ತಾ ಕಾಯುತ್ತಿರುತ್ತದೆ. ಶಾಂತಕ್ಕ ತನಗೆ ತಾನೇ ಸಮಾಧಾನಪಡಿಸಿಕೊಳ್ಳುವ “ಕಣ್ಣಲ್ಲಿ ಎರಡುಹನಿ ನೀರ್ ಇರುವತನಕ ಮಗನನ್ನು ಕಟ್ಟಿ ಹಾಕುತ್ತೇನೆ.” ಎಂಬ ಸಮಾಧಾನದ ಮಾತು ಅಂತಃಕರಣ ಕಲಕುತ್ತದೆ. ಪಿತೃ ಪ್ರಧಾನ ಕುಟುಂಬಗಳು ಸಾಮಾನ್ಯವಾಗಿರುವ ಈ ಹೊತ್ತಿನಲ್ಲಿ ಮಾತೃ ಸಂಸ್ಕೃತಿಯನ್ನು ಇದು ಬಿಂಬಿಸುತ್ತದೆ.
ನಟರಾಜ್ ಹುಳಿಯಾರ್ ಬರೆದ ‘ಕಾಮನ ಹುಣ್ಣಿಮೆ’ ಕಾದಂಬರಿ ಕುರಿತು ಆಲೂರು ದೊಡ್ಡನಿಂಗಪ್ಪ ಬರಹ
ಒಂದಲ್ಲ ಒಂದು ದಿನ ಎಲ್ಲವೂ ಸರಿಯಾಗುತ್ತದೆ ಎಂಬ ಶಾಂತಕ್ಕನ ಕನಸಿನೊಂದಿಗೆ ಆರಂಭಗೊಳ್ಳುವ ಕಾದಂಬರಿ, ಮುಂದೆ ಚಂದ್ರ ಬೆಳೆದಂತೆ ಅವನ ಕಾಲೇಜಿನ ದಿನಗಳು, ಮೈಸೂರಿನ ಗಬ್ಬು ವಾಸನೆಯ ರೂಮು ಅವನ ತೊಳಲಾಟಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ.
ಮಗನೂ ಕೂಡ ಅಪ್ಪನಂತೆ ಮಿಲ್ಟ್ರಿಗೆ ಸೇರಿಬಿಡುತ್ತಾನೋ, ದಾರಿ ತಪ್ಪುತ್ತಾನೋ ಎಂಬ ಆತಂಕದಲ್ಲಿ ತಾಯಿ ಶಾಂತಕ್ಕನ ಜೀವನ ತೊಳಲಾಡುತ್ತಾ ಕಾಯುತ್ತಿರುತ್ತದೆ. ಶಾಂತಕ್ಕ ತನಗೆ ತಾನೇ ಸಮಾಧಾನಪಡಿಸಿಕೊಳ್ಳುವ “ಕಣ್ಣಲ್ಲಿ ಎರಡುಹನಿ ನೀರ್ ಇರುವತನಕ ಮಗನನ್ನು ಕಟ್ಟಿ ಹಾಕುತ್ತೇನೆ.” ಎಂಬ ಸಮಾಧಾನದ ಮಾತು ಅಂತಃಕರಣ ಕಲಕುತ್ತದೆ. ಪಿತೃ ಪ್ರಧಾನ ಕುಟುಂಬಗಳು ಸಾಮಾನ್ಯವಾಗಿರುವ ಈ ಹೊತ್ತಿನಲ್ಲಿ ಮಾತೃ ಸಂಸ್ಕೃತಿಯನ್ನು ಇದು ಬಿಂಬಿಸುತ್ತದೆ.
ಗಂಡನ ಮನೆ ಬಿಟ್ಟು ಬರುವ ಚೆಲುವಕ್ಕ, ಚಂದ್ರನ ದೊಡ್ಡಪ್ಪ, ರಾಜಣ್ಣನಂತಹ ಪಾತ್ರಗಳು ಅಷ್ಟೇನೂ ಕಾಡದಿದ್ದರೂ, ಶಾಂತಕ್ಕ, ಚಂದ್ರ, ನೀಲಗಂಗಯ್ಯ ಅವರಂತೆ ಭಾರತಿ, ಚಂದ್ರನೊಳಗೆ ಉಳಿದುಬಿಡುವ ಕಮಲಿ ಇಂಥ ಪಾತ್ರಗಳು ಓದುಗರ ನಿದ್ರೆಗೆಡಿಸುತ್ತವೆ. ಚಂದ್ರ ಬೆಳೆದಂತೆ ಅವನ ಓದು, ಐಡಿಯಾಲಜಿ ವಿಸ್ತಾರಗೊಳ್ಳುವ ಹೊತ್ತಿಗೆ, ರೈತ ಸಂಘದ ಶ್ರೀನಿವಾಸ್, ರಾಮದಾಸ್ ಹಾಗೂ ದಲಿತ ಸಂಘಟನೆ ಮೂಲಕ ಚಂದ್ರನ ಪಾತ್ರ ಬೆಳೆಯುತ್ತ ಹೋಗುವುದರ ಜತೆಗೆ ಶಿವಣ್ಣನಂಥ ಸ್ನೇಹಿತರು ಮತ್ತು ಶಿವತೀರ್ಥನ್ ಅವರಂತ ಮೇಷ್ಟ್ರು ಸಿಗುತ್ತಾರೆ.
ಪಂಚಮ, ಲಂಕೇಶ್ ಪತ್ರಿಕೆಗಳ ವೈಚಾರಿಕ ಓದಿನೊಂದಿಗೆ ಗ್ರಾಮೀಣ ಪ್ರದೇಶದಿಂದ ಬಂದ ಚಂದ್ರನೆಂಬ ಯುವಕನ ಕಣ್ಣಿಗೆ ಹಾಲಕ್ಕಿ ರಾಮಯ್ಯನಂಥವರು ವ್ಯವಸ್ಥೆಯ ಸುಳಿಯಲ್ಲಿ ಸಿಕ್ಕಿ ಒದ್ದಾಡುವುದು, ಈ ವ್ಯವಸ್ಥೆ ಅಂಥವರನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಕಂಡು ಚಂದ್ರನಂತಹ ಯುವಕರಲ್ಲಿ ಒಂದು ಉತ್ಕಟ ಎಚ್ಚರ ಸೃಷ್ಟಿಯಾಗುತ್ತದೆ.
ಕಂಟಲಗೆರೆ ಬರೆದಿರುವ, “ಈ ಕಾದಂಬರಿಗೆ ಮನಃಶಾಸ್ತ್ರೀಯ ಗುಣ ಇದೆ” ಎಂಬ ಮಾತು ನನಗೂ ಸೂಕ್ತ ಅನಿಸಿತು. ಭಾವನಾತ್ಮಕವಾಗಿ ಮನುಷ್ಯ, ಮನುಷ್ಯನ ಸಂಬಂಧವನ್ನು ಕಟ್ಟುವಲ್ಲಿ ಚಂದ್ರ, ಶಾಂತಕ್ಕ ಹಾಗೂ ನೀಲಗಂಗಯ್ಯನ ಪಾತ್ರಗಳು ಬಹುಮುಖ್ಯವಾಗಿ ಕಾಣುತ್ತವೆ. ಓದುಗರ ಒಳಗೂ ಉಳಿಯುತ್ತವೆ. ಕಾದಂಬರಿ ಓದಿ ಮುಗಿಸಿದ ನಂತರ ಇಲ್ಲಿನ ಪಾತ್ರಗಳು ಎಡೆಬಿಡದೆ ಕಾಡಿದವು.
ಒಟ್ಟಾರೆ, ‘ಕಾಮನ ಹುಣ್ಣಿಮೆ’ ಪ್ರೇಮ, ಕಾಮ, ಎಲ್ಲವನ್ನೂ ಮೀರಿ ನಿಲ್ಲುವ ಕೃತಿಯಾಗಿದೆ.
ಸೈನಿಕನೊಬ್ಬ ಕೊನೆಯವರೆಗೂ ಒಂಟಿಯಾಗಿ ದೇಶ ಕಾಯುವಂತೆ ತನ್ನ ಮನೆ ಕಾಯುವ ಶಾಂತಕ್ಕ, ಮನುಷ್ಯ ಸಂಬಂಧಗಳೊಳಗೆ ಗಟ್ಟಿಯಾಗಿ ಉಳಿದುಬಿಡುತ್ತಾಳೆ.
(ಕೃತಿ: ಕಾಮನ ಹುಣ್ಣಿಮೆ(ಕಾದಂಬರಿ), ಲೇಖಕರು: ನಟರಾಜ್ ಹುಳಿಯಾರ್, ಪ್ರಕಾಶಕರು: ಪಲ್ಲವ ಪ್ರಕಾಶನ, ಬೆಲೆ: 180/-)
ಆಲೂರು ದೊಡ್ಡನಿಂಗಪ್ಪ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಮಾಲೂರಿನವರು. ಸದ್ಯಕ್ಕೆ ಮೈಸೂರಿನ ರಂಗಾಯಣದಲ್ಲಿ ಉದ್ಯೋಗಿ. ಈಗಾಗಲೇ ನೇಕಾರ, ಮುಟ್ಟು, ಎದೆಯ ಹೊಲದಲ್ಲಿ ಸೂರ್ಯಕಾಂತಿ, ಕವನಸಂಕಲನಗಳನ್ನು ಹೊರತಂದಿದ್ದಾರೆ.