ಅವಳು ‘ಕೇರ್ ಗಿವರ್’ ಸ್ಥಾನದಲ್ಲಿದ್ದಾಗ ಕುಟುಂಬದ ಇತರರು ಗಂಡಸು ಕುಟುಂಬದ ಹಿರಿಯ/ಮುಖ್ಯಸ್ಥ ಎನ್ನುವ ನಂಬಿಕೆಯನ್ನು ಮುಂದುವರೆಸುತ್ತಾರೆ. ಮುಂದೊಮ್ಮೆ ಅವಳು ಉದ್ಯೋಗಕ್ಕೆ ವಾಪಸ್ಸಾಗಿ ತಿಂಗಳ ಸಂಬಳ ಪಡೆದರೂ ಅಷ್ಟರಲ್ಲಿ ಮನೆ ಸಾಲ ತೀರಿಸುವುದು ಗಂಡಸು, ತಿಂಗಳ ಖರ್ಚಿಗೆ ದುಡಿಯುವುದು ಗಂಡಸು ಎನ್ನುವುದು ಆಳವಾಗಿ ಬೇರೂರಿರುತ್ತದೆ. ಕಡೆಗೆ ಹೆಂಗಸಿನ ಗಳಿಕೆ ‘ಸೆಕೆಂಡರಿ’ ಆಗಿಯೇ ಉಳಿಯುತ್ತದೆ. ತಾನು ಗಂಡಸಿನ ಆದಾಯದ ಮೇಲೆ ಅವಲಂಬಿತಳಾಗಿರುವುದು ಸರಿ ಎನ್ನುವ ಸಮರ್ಥನೆಯ ನಂಬಿಕೆಯೂ ಮಹಿಳೆಯಲ್ಲಿ ಬೆಳೆದು ಅವಳು ಅದನ್ನು ಇತರರಿಗೆ, ತನ್ನ ಮಕ್ಕಳಿಗೆ ದಾಟಿಸುವುದು ಮುಂದುವರೆಯುತ್ತದೆ. ಇದು ಸಮಾಜದ ಮುಖ್ಯ ನಂಬಿಕೆಯಾಗುತ್ತದೆ ಕೂಡ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”
ಪ್ರಿಯ ಓದುಗರೆ,
ಹಿಂದಿನ ಅಂಕಣ ಬರಹದಲ್ಲಿ ನಾನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಈ ವರ್ಷದ ವಿಶ್ವಸಂಸ್ಥೆ ಘೋಷಣೆಯ ಪ್ರಸ್ತಾವನೆ ಮಾಡಿದ್ದೆ. ಜಗತ್ತಿನೆಲ್ಲೆಡೆ ನಿನ್ನೆ ಮಾರ್ಚ್ ೮ ರಂದು ಮಹಿಳಾ ದಿನಾಚರಣೆ ನಡೆದಿದೆ. ಆರ್ಥಿಕ ಸ್ವಾವಲಂಬನೆಯ ಹಿನ್ನೆಲೆಯಲ್ಲಿ ಮಹಿಳೆಯ ಒಳಗೊಳ್ಳುವಿಕೆ ಮತ್ತು ಸೇರ್ಪಡೆಯ ಕುರಿತು ಮತ್ತಷ್ಟು ಚರ್ಚೆಗಳಾಗಿವೆ. ಆಸ್ಟ್ರೇಲಿಯಾದಲ್ಲಿ ನಡೆದ ಚರ್ಚೆಗಳೇನು, ಮಹಿಳೆಯ ಆರ್ಥಿಕ ಒಳಗೊಳ್ಳುವಿಕೆ ಎಂದಾಗ ಅದು ಆಸ್ಟ್ರೇಲಿಯಾದ ಸಾಧಾರಣ ಮಧ್ಯಮ ಮತ್ತು ಕಡಿಮೆ ವರಮಾನ ಕುಟುಂಬಗಳ ಹೆಂಗಸರ ಜೀವನದಲ್ಲಿ ಹೇಗೆ ಕಾಣಿಸುತ್ತಿದೆ? ಅದರ ಕುರಿತು ಸ್ವಲ್ಪ ಬರೆಯುತ್ತಿದ್ದೀನಿ.
ನಿನ್ನೆಯ ಒಂದು ವರದಿಯ ಪ್ರಕಾರ ಆಸ್ಟ್ರೇಲಿಯಾದ ನಗರಗಳಲ್ಲಿ ಶಿಶು ಪಾಲನೆ ಕೇಂದ್ರಗಳ (ಚೈಲ್ಡ್ ಕೇರ್ ಸೆಂಟರ್) ಕೊರತೆ ತೀವ್ರವಾಗುತ್ತಿದೆ. ಮಕ್ಕಳು ಹುಟ್ಟಿದ ಮೊದಲ ಕೆಲ ತಿಂಗಳುಗಳಲ್ಲಿ ಶಿಶು ಕೇಂದ್ರಗಳ ಸ್ಥಳ ಕಾಯ್ದಿರಿಸುವ ಪಟ್ಟಿಯಲ್ಲಿ (ವೈಟಿಂಗ್ ಲಿಸ್ಟ್) ಹೆಸರು ನೋಂದಾಯಿಸಿದರೂ ತಿಂಗಳಾನುಗಟ್ಟಲೆ ಕಾಯಬೇಕು. ಇದರಿಂದ ತಾಯಿ ತನ್ನ ಉದ್ಯೋಗಕ್ಕೆ ಹಿಂದಿರುಗಲು ಅಥವಾ ಹೊಸದೊಂದು ಅರೆಕಾಲಿಕ ಉದ್ಯೋಗವನ್ನು ಪಡೆಯಲು ಕಷ್ಟವಾಗುತ್ತದೆ. ತಾಯ್ತನವು ಆಕೆಯ ಆರ್ಥಿಕ ಸ್ವಾವಲಂಬನೆಗೆ ಅಡ್ಡವಾಗುತ್ತದೆ. ತನ್ನ ಎಳೆ ಕಂದನ ಲಾಲನೆ-ಪಾಲನೆಯತ್ತ ಗಮನ ಕೊಟ್ಟು ಸ್ವಲ್ಪ ಕಾಲ ತನ್ನ ಉದ್ಯೋಗ ಜೀವನಕ್ಕೆ ಕೊಕ್ ಕೊಟ್ಟರೆ ಉದ್ಯೋಗ ಕ್ಷೇತ್ರಕ್ಕೆ ವಾಪಸ್ಸಾಗುವುದು ಗಂಭೀರ ಸಮಸ್ಯೆಯಾಗುತ್ತದೆ. ಕಂದನ ಮುದ್ದು ಮುಖವೋ ಇಲ್ಲಾ ನೌಕರಿ ಕೊಡುವ ಸಂಬಳವೋ ಎನ್ನುವ ಆಯ್ಕೆ ಅನೇಕ ತಾಯಂದರನ್ನು ಕಾಡುತ್ತದೆ.
ಆಸ್ಟ್ರೇಲಿಯಾದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ನೌಕರರೂ ಕಡ್ಡಾಯವಾಗಿ ಹಲವಾರು ಪ್ರೊಫೆಷನಲ್ ಡೆವಲಪ್ಮೆಂಟ್ ತರಬೇತಿಗಳನ್ನು ಮಾಡಿ, ತಾನು ಪಾಲ್ಗೊಂಡದ್ದಕ್ಕೆ ಪ್ರಮಾಣಪತ್ರವನ್ನು (ಸರ್ಟಿಫಿಕೇಟ್) ಪಡೆದು ಅದನ್ನು ದಾಖಲಿಸಬೇಕು. ತನ್ನ ಕೆಲಸದ ಕ್ಷೇತ್ರದಲ್ಲಿ ನಡೆಯುವ ಬೆಳವಣಿಗೆಗಳಿಗೆ ಸ್ಪಂದಿಸಿ ತನ್ನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದೀನಿ ಎಂದು ತನ್ನ ಮೇಲಿನಧಿಕಾರಿಗಳಿಗೆ ರುಜುವಾತುಪಡಿಸಬೇಕು. ಪ್ರತಿವರ್ಷವೂ ಅವರು ನೌಕರರ ಬೆಳವಣಿಗೆಯನ್ನು ಪರಿಶೀಲಿಸುತ್ತಾರೆ.
ಇಂತಹ ಕಡ್ಡಾಯ ನಿಯಮಗಳು, ನಿರೀಕ್ಷೆಗಳು ಇದ್ದಾಗ ಒಬ್ಬ ತಾಯಿ ‘ಕೆರಿಯರ್ ಬ್ರೇಕ್’ ತೆಗೆದುಕೊಳ್ಳುವುದು ಅಸಾಧ್ಯವಾಗುತ್ತದೆ. ತೆಗೆದುಕೊಂಡು ನಂತರ ಉದ್ಯೋಗಕ್ಕೆ ಮರಳಿದಾಗ ತನ್ನ ಇತರ ಸಹೋದ್ಯೋಗಿಗಳ ಮಟ್ಟಕ್ಕೆ ಕೆಲಸ ಮಾಡಬಲ್ಲೆ ಎನ್ನುವುದನ್ನು ರುಜುವಾತು ಮಾಡಲು ಅಧಿಕ ಶ್ರಮ ಪಡಬೇಕಾಗುತ್ತದೆ. ಇದಲ್ಲೆದರ ಗೋಳು ಬೇಡವೇ ಬೇಡ ಎಂದು ನಿರ್ಧರಿಸಿ ಕೆಲ ಮಹಿಳೆಯರು ತಾಯ್ತನವನ್ನು ಮುಂದೂಡಿ ನಡು-ಮೂವತ್ತರಲ್ಲಿ ಮಾತೃತ್ವವನ್ನು ಅಪ್ಪಿಕೊಳ್ಳುತ್ತಾರೆ. ತಮ್ಮ ಮಕ್ಕಳು ಶಾಲೆಗೆ ಹೋಗುವ ವಯಸ್ಸಿಗೆ ಬಂದಾಗ ಇವರು ಮತ್ತೆ ಯೂನಿವರ್ಸಿಟಿ ಶಿಕ್ಷಣಕ್ಕೆ ಮರಳಿ ಬೇರೊಂದು ಡಿಗ್ರಿ ಓದುತ್ತಾ ಉದ್ಯೋಗಜೀವನಕ್ಕೆ ಮರಳುತ್ತಾರೆ.
ಇದೆಲ್ಲಾ ನಡೆಯುವಾಗ ಮಹಿಳೆಯ ಆರ್ಥಿಕ ಸ್ವಾವಲಂಬನೆ ವಿಷಯ ಏನಾಗುತ್ತದೆ? ತನ್ನ ಜೀವನಸಂಗಾತಿಯನ್ನು ನಂಬಿ, ಅವನನ್ನು ಅವಲಂಬಿಸಬೇಕಾಗುತ್ತದೆ. ಆಗ ನೋಡಿ, ಅನೇಕ ಮಹಿಳೆಯರ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆಗಳಾಗುತ್ತವೆ. ಅವನನ್ನು ಅವಲಂಬಿಸಿದಾಗ ಅವಳು ತನ್ನಲ್ಲಿ ತಾನೇ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತಾಳೆ. ಅವನನ್ನು, ಮಕ್ಕಳನ್ನು ‘ನೋಡಿಕೊಳ್ಳುವುದು’ ತನ್ನ ಪ್ರಥಮ ಕರ್ತವ್ಯವೆಂದು ಕುಟುಂಬದಲ್ಲಿ ತನ್ನ ಸ್ಥಾನ ಬದಲಾವಣೆಯನ್ನು ಮಾಡಿಕೊಳ್ಳುತ್ತಾಳೆ. ಅವನ ಸ್ಥಾನ ಪ್ರಥಮ, ಅವನ ಗಳಿಕೆ ಪ್ರಥಮ, ಅವಳದ್ದು ‘ಸೆಕೆಂಡರಿ’ ಎನ್ನುವುದು ಮನೋಭಾವದಲ್ಲಿ, ಚರ್ಯೆಯಲ್ಲಿ ಕಂಡುಬರುತ್ತದೆ. ಅವಳು ‘ಕೇರ್ ಗಿವರ್’ ಸ್ಥಾನದಲ್ಲಿದ್ದಾಗ ಕುಟುಂಬದ ಇತರರು ಗಂಡಸು ಕುಟುಂಬದ ಹಿರಿಯ/ಮುಖ್ಯಸ್ಥ ಎನ್ನುವ ನಂಬಿಕೆಯನ್ನು ಮುಂದುವರೆಸುತ್ತಾರೆ. ಮುಂದೊಮ್ಮೆ ಅವಳು ಉದ್ಯೋಗಕ್ಕೆ ವಾಪಸ್ಸಾಗಿ ತಿಂಗಳ ಸಂಬಳ ಪಡೆದರೂ ಅಷ್ಟರಲ್ಲಿ ಮನೆ ಸಾಲ ತೀರಿಸುವುದು ಗಂಡಸು, ತಿಂಗಳ ಖರ್ಚಿಗೆ ದುಡಿಯುವುದು ಗಂಡಸು ಎನ್ನುವುದು ಆಳವಾಗಿ ಬೇರೂರಿರುತ್ತದೆ. ಕಡೆಗೆ ಹೆಂಗಸಿನ ಗಳಿಕೆ ‘ಸೆಕೆಂಡರಿ’ ಆಗಿಯೇ ಉಳಿಯುತ್ತದೆ. ತಾನು ಗಂಡಸಿನ ಆದಾಯದ ಮೇಲೆ ಅವಲಂಬಿತಳಾಗಿರುವುದು ಸರಿ ಎನ್ನುವ ಸಮರ್ಥನೆಯ ನಂಬಿಕೆಯೂ ಮಹಿಳೆಯಲ್ಲಿ ಬೆಳೆದು ಅವಳು ಅದನ್ನು ಇತರರಿಗೆ, ತನ್ನ ಮಕ್ಕಳಿಗೆ ದಾಟಿಸುವುದು ಮುಂದುವರೆಯುತ್ತದೆ. ಇದು ಸಮಾಜದ ಮುಖ್ಯ ನಂಬಿಕೆಯಾಗುತ್ತದೆ ಕೂಡ.
ಈ ರೀತಿಯ ಆರ್ಥಿಕ ಅವಲಂಬನೆ / ಸ್ವಾವಲಂಬನೆ ಸುಳಿಗೆ ಸಿಕ್ಕ ಕುಟುಂಬದಲ್ಲಿ ಲಿಂಗ-ಆಧಾರಿತ ಹಿಂಸೆ, ಕಿರುಕುಳ, ಕೌಟುಂಬಿಕ ಹಿಂಸೆ ಪ್ರಕರಣಗಳು ಜಾಸ್ತಿಯಾಗುತ್ತವೆ. ಮಕ್ಕಳಲ್ಲಿ ಅಪ್ಪನ ಬಗ್ಗೆ, ಅಮ್ಮನ ಬಗ್ಗೆ ತಾರತಮ್ಯದ ನಂಬಿಕೆಗಳು ಬೆಳೆಯುತ್ತವೆ. ಕುಟುಂಬದ ಮಗಳು ಮತ್ತು ಮಗನ ಮಧ್ಯೆ ಲಿಂಗಾಧಾರಿತ ಅಭಿಪ್ರಾಯಗಳು ಬೆಳೆಯುತ್ತವೆ. ಹುಡುಗಿಯ ಬಗ್ಗೆ ಇರುವ ಏಕರೂಪ ಮಾದರಿಗಳು (ಸ್ಟೀರಿಯೋಟೈಪ್ಸ್) ಮುಂದುವರೆಯುತ್ತವೆ.
ಆಸ್ಟ್ರೇಲಿಯಾದ ಉದ್ಯೋಗ ರಂಗದಲ್ಲಿ ಕೆಲ ಸಂಸ್ಥೆಗಳಲ್ಲಿ ಈಗಲೂ ಜೆಂಡರ್ ಪೇ ಗ್ಯಾಪ್ ಇದೆ. ಒಂದೇ ರೀತಿಯ ಕೆಲಸ ಮಾಡುವ ಗಂಡಸಿಗೆ ಹೆಚ್ಚು ಸಂಬಳ, ಹೆಂಗಸಿಗೆ ಕಡಿಮೆ ಸಂಬಳವಿದೆ. ಉದ್ಯೋಗ ಕ್ಷೇತ್ರದಲ್ಲಿರುವ ಹೆಚ್ಚಿನ ಮಹಿಳೆಯರು ಕೆಳಸ್ತರದ ಕೆಲಸಗಳಲ್ಲಿ ಮತ್ತು ಅರೆಕಾಲಿಕ ಸ್ಥಾನಗಳಲ್ಲಿ ಇದ್ದಾರೆ. ಮೇಲಿನ ಸ್ತರದ ನಾಯಕತ್ವ ಮತ್ತು ನಿರ್ಧಾರ ಕೈಗೊಳ್ಳುವ ಗುರುತರ ಸ್ಥಾನಗಳಲ್ಲಿ ಇರುವ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟು.
ನಿನ್ನೆ ನಾನು ನಮ್ಮ ವಿಶ್ವವಿದ್ಯಾಲಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂವಾದ ಕಾರ್ಯಕ್ರಮದಲ್ಲಿ (ಪ್ಯಾನೆಲ್) ಪಾಲ್ಗೊಂಡಿದ್ದೆ. ಯೂನಿವರ್ಸಿಟಿ ಮಟ್ಟದಲ್ಲಿ ನಡೆದ ಕಾರ್ಯಕ್ರಮವನ್ನು ನಡೆಸಿಕೊಟ್ಟದ್ದು ನಮ್ಮ ವೈಸ್ ಚಾನ್ಸಲರ್. ಎಲ್ಲಾ ಹಿರಿಯ ನಾಯಕತ್ವ ಸ್ಥಾನದ ಅಧಿಕಾರಿಗಳು, ನೂರಾರು ಸಹೋದ್ಯೋಗಿಗಳು ಇದ್ದ ವಾತಾವರಣದಲ್ಲಿ ನಾನು ಮಾತನಾಡುವುದು ನನ್ನಲ್ಲಿ ಸ್ವಲ್ಪ ನಡುಕವನ್ನುಂಟು ಮಾಡಿತ್ತು.
ಪಾಲ್ಗೊಂಡಿದ್ದ ನಾವು ಮೂವರು ಮಹಿಳೆಯರು ಮತ್ತು ಒಬ್ಬ ಗಂಡಸು ಸಹೋದ್ಯೋಗಿ (ally) ಹೇಳಿದ್ದು ‘ಮನೋಭಾವಗಳಲ್ಲಿ ಬದಲಾವಣೆಯಾಗಬೇಕು’ ಎಂದು. ಇದು ಎಲ್ಲಾ ಹಂತಗಳಲ್ಲೂ ಮತ್ತು ಸ್ತರಗಳಲ್ಲೂ ಪ್ರತಿಫಲಿಸಬೇಕು. ವಿಶ್ವವಿದ್ಯಾಲಯಗಳಲ್ಲಿ ಹುಡುಗಿಯರಿಗೆ ಮತ್ತು ಮಹಿಳೆಗೆ ಅವರ ಶಿಕ್ಷಣ ಮುಂದುವರಿಕೆಗೆ ಪ್ರೋತ್ಸಾಹ ಕೊಡುವ scholarship ಗಳು ಇರಬೇಕು. ತಾಯಂದಿರು ಶಿಕ್ಷಣಕ್ಕೆ ಮರಳಿದಾಗ ಅವರನ್ನು ಪ್ರೋತ್ಸಾಹಿಸುವ, ಅವರಿಗೆ ಬೆಂಬಲ ಕೊಡುವ ನಡೆಗಳು ಜಾರಿಗೆಯಲ್ಲಿರಬೇಕು. ನಾನಾಕಾರಣಗಳಿಂದ ತಮ್ಮ ಉದ್ಯೋಗ ಜೀವನಕ್ಕೆ ಧಕ್ಕೆಯಾಗಿ ನಂತರ ಪೂರ್ಣಾವಧಿ ಕೆಲಸವನ್ನು ಗಳಿಸಿರುವ ಮಹಿಳೆಯರ ಪ್ರಗತಿಯನ್ನು ವಿಶೇಷವಾಗಿ ಗಮನಿಸಬೇಕು. ಕೆಲಸದ ಸ್ಥಳದಲ್ಲಿ ಮಹಿಳೆಯರ ಬಗ್ಗೆ ಗಂಡಸು ಸಹೋದ್ಯೋಗಿಗಳಲ್ಲಿ ಗೌರವ ಹೆಚ್ಚಬೇಕು. ಆರ್ಥಿಕವಾಗಿರುವ ಹೆಂಗಸಿನ ಕೊಡುಗೆಯನ್ನು ಸಬಲತೆಯ ದೃಷ್ಟಿಯಿಂದ ನೋಡಬೇಕು.
ನಮ್ಮ ಪ್ಯಾನೆಲ್ ಸಂವಾದದಲ್ಲಿ ಜೊತೆಯಲ್ಲಿದ್ದ ಮಹಿಳಾ ಸಹೋದ್ಯೋಗಿ ತಮ್ಮ ಜೀವನಗಾಥೆಯನ್ನು ತೆರೆದಿಟ್ಟರು. ತಾನು ಮೊದಲ ಡಿಗ್ರಿ ಪದವಿಗೆಂದು ಓದುತ್ತಿದ್ದಾಗ ಗರ್ಭವತಿಯಾಗಿ, ಓದನ್ನು ಕೈಬಿಟ್ಟು ಮಗುವನ್ನು ಪೋಷಿಸುವತ್ತ ಗಮನ ಕೊಟ್ಟಿದ್ದರಿಂದ ಹಿಡಿದು ಮದುವೆ, ವಿಚ್ಛೇದನ, ಶಿಕ್ಷಣಕ್ಕೆ ಮರಳಿದ್ದು, ಮತ್ತೆ ಮದುವೆ ಮತ್ತು ಮಕ್ಕಳ ಜನನದ ನಡುವೆಯೂ ತಾನು ಪಿ.ಎಚ್.ಡಿ ಮಾಡಿದ್ದು, ಹಲವಾರು ವಿಶ್ವವಿದ್ಯಾಲಯಗಳಲ್ಲಿ ಬೇರೆ ಬೇರೆ ಅರೆಕಾಲಿಕ ಮತ್ತು ಪೂರ್ಣಾವಧಿ ಕೆಲಸಗಳಲ್ಲಿ ದುಡಿಯುತ್ತಾ ಆಳವಾಗಿ ಬೇರೂರಿರುವ ವ್ಯವಸ್ಥೆಯನ್ನು ಪ್ರಶ್ನಿಸುತ್ತಾ, ಹೋರಾಡುತ್ತಾ ಉನ್ನತ ಸ್ಥಾನಗಳಿಗೆ ಏರಿದ್ದು ಮತ್ತು ಈಗ ತಾನು ಕಿರಿಯ ಸ್ಥಾನಗಳಲ್ಲಿರುವ ಮಹಿಳಾ ಸಹೋದ್ಯೋಗಿಗಳನ್ನು ಪ್ರೋತ್ಸಾಹಿಸಿ ಅವರ ಕೆರಿಯರ್ ಮುನ್ನಡೆಯನ್ನು ಪೋಷಿಸುವ ತಮ್ಮ ಉತ್ಸಾಹವನ್ನು ಹಂಚಿಕೊಂಡರು. ಅವರ ಕಥೆ ಅನೇಕ ಮಹಿಳೆಯರ ಕಥೆಯೂ ಆಗಿದೆ. ದಾರಿದೀಪವೂ ಆಗಿದೆ. ಮಹಿಳಾ ಚೈತನ್ಯದ ಉತ್ತಮ ಉದಾಹರಣೆಯೂ ಆಗಿದೆ.
ಇನ್ನೊಬ್ಬ ಮಹಿಳಾ ಸಹೋದ್ಯೋಗಿ ಹಂಚಿಕೊಂಡಿದ್ದು ಆಸ್ಟ್ರೇಲಿಯನ್ ಸಮಾಜದಲ್ಲಿ ಹೇಗೆ ಆನ್ಲೈನ್ ಕಂಪನಿಗಳು ಹೋಂ-ಮೇಕರ್ ಮಹಿಳೆಯರನ್ನು ಮೋಸಗೊಳಿಸುತ್ತವೆ, ಇದರಿಂದ ಮಹಿಳೆಯ ಶೋಷಣೆ ಹೇಗೆ ಮುಂದುವರೆಯುತ್ತಿದೆ ಎಂದು. ಇಂತಹ ಕಂಪನಿಗಳು ಮನೆ ಹೊರಗಿನ ಉದ್ಯೋಗ ಕ್ಷೇತ್ರದಲ್ಲಿ ಇರದೇ ಇರುವ, ಮನೆವಾರ್ತೆ ನಡೆಸಿಕೊಂಡು ಇರುವ ಹೆಂಗಸರನ್ನು ಬಲೆಗೆ ಹಾಕಿಕೊಳ್ಳುತ್ತವೆ. ಅವರ ಫೋನ್ಗಳಿಗೆ ಸಂದೇಶ ಕಳಿಸಿ ‘ಈ ಲಿಂಕ್ ಒತ್ತಿ, ಇದು ಆನ್ಲೈನ್ ಸೇಲ್ಸ್ ಕೆಲಸ. ಇದರಿಂದ ನೀವು ಮನೆಯಲ್ಲೇ ಇದ್ದು ವರಮಾನ ಗಳಿಸಬಹುದು, ದಿನಕ್ಕೆ ನೂರಾರು ಡಾಲರ್ ಸಂಪಾದನೆ ಇದೆ’ ಎಂದು ಮಹಿಳೆಯರನ್ನು ನಂಬಿಸಿ ಅವರಿಂದ ರಿಜಿಸ್ಟ್ರೇಷನ್ ಫೀಸ್ ಪಡೆದು ಮೋಸ ಮಾಡುವ ಜಾಲವಿದು. ಮತ್ತೆಮತ್ತೆ ಮಹಿಳೆಯನ್ನೇ ಗುರಿಯಾಗಿಸಿಕೊಂಡು ಅವಳನ್ನು ಬಳಸಿಕೊಳ್ಳುವ ತಂತ್ರವೂ ಶೋಷಣೆಯಾಗಿದೆ. ಇದು ಈ ಸಹೋದ್ಯೋಗಿಯ ಅಧ್ಯಯನವೂ ಆಗಿದ್ದರಿಂದ ಆಸ್ಟ್ರೇಲಿಯಾದಂತಹ ಮುಂದುವರೆದ ದೇಶದಲ್ಲೂ ಕೂಡ ಮಹಿಳಾ ಶೋಷಣೆ ಅನೇಕ ರೂಪಗಳಲ್ಲಿ ಇದ್ದೇ ಇದೆ ಎನ್ನುವುದು ಮನದಟ್ಟಾಯಿತು.
ನಮ್ಮೆಲ್ಲಾ ಸಂವಾದದಿಂದ ಮತ್ತೊಮ್ಮೆ ಗೋಚರಿಸಿದ ಪ್ರಶ್ನೆ ಮಹಿಳೆಯ ಆರ್ಥಿಕ ಸ್ವಾವಲಂಬನೆ ಬಹು ಮುಖ್ಯ, ಅವಳ ಒಳಗೊಳ್ಳುವಿಕೆ ಮುಖ್ಯ ಹೌದು, ಈ ವಿಷಯವನ್ನು ನಾವು ಮತ್ತಷ್ಟು ಬಲಪಡಿಸಬೇಕು ಎಂದಾಗ ಮಹಿಳೆಯನ್ನು ಯಾರ ಮತ್ತು ಯಾವ ವ್ಯವಸ್ಥೆಯಲ್ಲಿ ಸೇರಿಸಿಕೊಳ್ಳಬೇಕು? ಕೈಗಾರೀಕರಣ ಯುಗದಲ್ಲಿ ಹೊಸ ಆರ್ಥಿಕ ವ್ಯವಸ್ಥೆಯು ರೂಪುಗೊಂಡಿದ್ದು ಗಂಡಸರಿಂದ ಮತ್ತು ಗಂಡಸರಿಗಾಗಿ. ಯಾವಾಗಲೂ ಈ ಪುರುಷ-ಕೇಂದ್ರಿತ ವ್ಯವಸ್ಥೆಯಲ್ಲಿ ಮಹಿಳೆಯನ್ನು ಸೇರಿಸಿಕೊಳ್ಳಬೇಕು ಎಂದಾಗ ಮೊದಲು ಅವಳ ಸ್ಥಾನ-ಮಾನ, ಅವಳ ಪಾಲ್ಗೊಳ್ಳುವಿಕೆಗೆ ಸಮಾನ ಗೌರವ ಮತ್ತು ಸರಿಯಾದ ಮೌಲ್ಯ ಸಿಗಬೇಕು ಎನ್ನುವುದು ಮುನ್ನೆಲೆಗೆ ಬರಬೇಕು. ಇದಾಗಬೇಕು ಎಂದರೆ ಗಂಡಸರ ಮನೋಭಾವಗಳಲ್ಲಿ ಬದಲಾವಣೆಗಳಾಗಬೇಕು. ಒಟ್ಟಾರೆ ಸಮಾಜದಲ್ಲಿ ಮಹಿಳಾ-ಪರ ಪ್ರಗತಿ ಹೆಚ್ಚಾಗಬೇಕು.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.