ಪರಿಹಾರದ ಹಣ ಕೈಗೆ ಬರುತ್ತಲೇ ಕೆಲವರು ಕೃಷಿ ವಿಚಾರ ಕೈಬಿಟ್ಟು ಬಸ್ ಅಂಗಡಿ ಹೋಟೆಲ್ ತೆರೆದಿದ್ದು ಅಭ್ಯಾಸವಿಲ್ಲದ ಈ ಉದ್ಯಮಗಳಲ್ಲಿ ಕೈಸುಟ್ಟುಕೊಂಡಿದ್ದರು. ಬಡ್ಡಿ ಆಸೆಗೆ ಬಿದ್ದು ಇದ್ದ ಹಣವನ್ನೆಲ್ಲ ಕಳೆದುಕೊಂಡಿದ್ದರು. ಕೆಲವರು ಅಂದಾದುಂದಿ ವೆಚ್ಚಮಾಡಿ ಸಾಲಗಾರರಾಗಿ ಬರಿಗೈಯಾದರು. ಇಷ್ಟಾಗಿಯೂ ನಾಲ್ಕು ದಶಕಗಳ ನಂತರವೂ ಇನ್ನೂ ಪರಿಹಾರದ ಹಣ ಬರದಿರುವ ಪ್ರಸಂಗಗಳೆಷ್ಟೋ ಇವೆ ಎನ್ನುತ್ತಾರೆ ಲೇಖಕರು.
ಎಂ. ಎಂ. ಪ್ರಭಾಕರ ಕಾರಂತ್ ಬರೆದ “ಮುಳುಗಡೆ ಒಡಲಾಳ” ಕೃತಿಯ ಕುರಿತು ಕೆ.ಆರ್.ಉಮಾದೇವಿ ಉರಾಳ ಬರಹ ನಿಮ್ಮ ಓದಿಗೆ
ವಾರಾಹಿ ನದಿ ಯೋಜನೆಯಿಂದಾಗಿ ಮುಳುಗಡೆಯಾದ ಊರುಗಳ ಜನರ ನೋವಿನ ಕಥನ ಪ್ರಭಾಕರ ಕಾರಂತರ “ಮುಳುಗಡೆ ಒಡಲಾಳ”. ವಾರಾಹಿ ನದಿ ಹರಿವಿನ ಪ್ರದೇಶವು ದಟ್ಟ ಹಸಿರು ಕಾನನದ ಅತ್ಯಮೂಲ್ಯವಾದ ಮರಗಳು, ಜೀವನೋಪಾಯಕ್ಕೆ ಸಮೃದ್ಧವಾಗಿ ಪೂರಕವಾಗಿದ್ದ ಕಾಡುತ್ಪನ್ನಗಳು, ಅಸಂಖ್ಯ ವಿಧವಿಧದ ಮೃಗ-ಪಕ್ಷಿಗಳು ಎಂದು ಜೀವ ವೈವಿಧ್ಯತೆಯಿಂದ, ಸುಂದರ ಜಲಪಾತಗಳಿಂದ ನಿಸರ್ಗ ಬರೆದ ವರ್ಣಚಿತ್ರದಂತಿದ್ದ ಪ್ರದೇಶವಾಗಿತ್ತು. ಈ ಪ್ರಕೃತಿ ರಮ್ಯ ಸ್ಥಳದಲ್ಲಿ ವಾಸಿಸುತ್ತಿದ್ದ ಜನರಾದರೂ ಹರಿವ ನೀರಿನ ತಂಪಿನಂತೆಯೇ ತಣ್ಣಗೆ ತಮ್ಮ ಬದುಕನ್ನು ಶಾಂತವಾಗಿ ಸಂತೃಪ್ತಿಭರಿತವಾಗಿ ರೂಪಿಸಿಕೊಂಡಿದ್ದವರು. ಪರಸ್ಪರರಲ್ಲಿ ಸೌಹಾರ್ದತೆ, ಸ್ನೇಹ, ಸಾಂಪ್ರದಾಯಕ ಜೀವನ ಶೈಲಿ, ಹಬ್ಬಗಳು, ಹುಲಿವೇಷ, ಕೋಲಾಟ, ಅಂಟಿಗೆ ಪಂಟಿಗೆ, ವಾದ್ಯ ತಂಡಗಳು, ಇಸ್ಪೀಟು ಮಂಡಲಗಳು, ಸಂಭಾವನೆ ಭಟ್ಟರುಗಳು, ಕಮಲಶಿಲೆ ಯಕ್ಷಗಾನ ಮೇಳದ ಆಟಗಳ ಸಂಭ್ರಮ, ಕೊನೆಗೆ ಪರಸ್ಪರರ ಜಗಳಗಳು ಕೂಡ ಬದುಕಿನ ಅವಿಭಾಜ್ಯ ಅಂಗವೆಂಬಂತೆ ಸಂತೃಪ್ತ ಬಾಳು ಬಾಳುತ್ತಾ ಪ್ರಕೃತಿ ಮಾತೆಯ ಮಡಿಲ ಮಕ್ಕಳಂತೆ ನೆಮ್ಮದಿಯಿಂದ ಬಾಳುತ್ತಿದ್ದವರು. ಈ ಭಾಗದ ಪ್ರಭಾವಿ ಶೀರ್ನಾಳಿ ಮನೆತನ ಸುತ್ತಮುತ್ತಲಿನವರೆಲ್ಲರ ಗೌರವಾದರಗಳಿಗೆ ಪಾತ್ರವಾಗಿತ್ತು. ಎತ್ತಿನ ಗಾಡಿಗಳೇ ಬದುಕಿನ ಲಕ್ಷುರಿಯಾಗಿದ್ದವು.
ಕೃತಿಯ ಪ್ರಾರಂಭದಲ್ಲಿ ಪ್ರಭಾಕರ ಕಾರಂತರು ವಾರಾಹಿ ಸಮೀಪದ ತಮ್ಮ ಊರು ಮರಸೂರು ಮತ್ತು ಅದರ ಸಮೀಪದ ದೊಡ್ಡಿನಮನೆ ಜಡ್ಡು, ಇವುಗಳ ಚಿತ್ರಣ ನೀಡುತ್ತಾ, ತಮ್ಮ ತಂದೆ ದೊಡ್ಡಿನಮನೆ ಜಡ್ಡುವಿನಲ್ಲಿ ಶಾಲೆ ಪ್ರಾರಂಭಿಸುವುದರೊಂದಿಗೆ ಮುಂದೆ ಅಂಗಡಿ ಹೋಟೆಲು ಯುವಕಸಂಘ ಇತ್ಯಾದಿಗಳು ತಲೆಯೆತ್ತುತ್ತಾ ಅದೊಂದು ಚಟುವಟಿಕೆ ಪುಟಿಪುಟಿವ ಊರಾಗಿ ರೂಪುದಳೆಯುವುದನ್ನು ಆಪ್ತವಾಗಿ ಚಿತ್ರಿಸುತ್ತಾರೆ. ಆ ಪ್ರದೇಶ, ಅಲ್ಲಿನ ಜನರು, ಅವರ ಬಾಳುವೆಯ ಶೈಲಿಯನ್ನು, ಪರಿಸರವನ್ನು ನೆನಪಿನಾಳದಿಂದ ಹೆಕ್ಕಿ ತೆಗೆದು ನೂರಾರು ಜನರನ್ನು ಹಳ್ಳಿಗಳನ್ನು ಕಲ್ಪನೆ ಅಲಂಕಾರಗಳ ಮೆರುಗಿಲ್ಲದೆ ವಾಸ್ತವಿಕವಾದ ಚಿತ್ರಣಗಳನ್ನು ನೈಜ ಘಟನೆಗಳಿಂದ ದಾಖಲಿಸುತ್ತಾ ಹೋಗುತ್ತಾರೆ. ತಣ್ಣಗೆ ಮೌನವಾಗಿದ್ದು ಮುಂದೆ ಕಾಯಕಲ್ಪ ಪಡೆದಿದ್ದ ಅದೇ ದೊಡ್ಡಿನಮನೆ ಜಡ್ಡು ಊರಿಗೆ ಊರೇ ಇಡಿಯಾಗಿ ನೀರಿನಲ್ಲಿ ಮುಳುಗಿ ಹೋಗುವುದು ಮುಂದಿನ ಅಧ್ಯಾಯಗಳಲ್ಲಿ ಲೇಖಕರು ವಿವರಿಸುವ ಮುಳುಗಡೆಗೊಳಗಾದ ಅಂತಹ ಹಲವು ಸ್ಥಳಗಳಿಗೆಲ್ಲಾ ಸಾಂಕೇತಿಕವಾಗಿದೆ ಎಂದು ಪರಿಗಣಿಸಬಹುದು. ಹೀಗೆ ಊರು ಬೆಳೆದುದನ್ನೂ ಕಣ್ಮುಂದೇ ಅವು ಅಳಿದುದನ್ನೂ ನೋಡಿದ ನತದೃಷ್ಟ ತಾನು ಎಂದು ಮರುಗುತ್ತಾ ಪರಿತಪಿಸುವಾಗ ಓದುಗರೂ ಅವರೊಂದಿಗೆ ನಿಟ್ಟುಸಿರಿಡುವಂತಾಗುತ್ತದೆ.
ಮುಳುಗಡೆ ಬರಿಯ ಭೂಮಿಯ ಕಾಡಿನ ಮುಳುಗಡೆಯಲ್ಲ. ಅಲ್ಲಿ ಬದುಕಿ ಬಾಳಿದ ಜನರು ತಮ್ಮದೇ ಜೀವನ ಶೈಲಿ, ಆಪ್ತ ಬಾಂಧವ್ಯ, ಪ್ರಕೃತಿಯೊಂದಿಗಿನ ಒಡನಾಟ, ಸಾಕುಪ್ರಾಣಿಗಳೊಂದಿಗೆ ಬೆಸೆದಂತಹ ಬದುಕು, ಕೃಷಿ ಇವೆಲ್ಲವನ್ನೂ ಒಳಗೊಂಡು ಒಂದು ಸಂಸ್ಕೃತಿಯನ್ನೇ ಪೋಷಿಸಿಕೊಂಡು ಬಂದಿರುತ್ತಾರೆ. ಅಭಿವೃದ್ಧಿಯ ಕಾರಣಕ್ಕಾಗಿ ಆಗುವ ಮುಳುಗಡೆ ಈ ಎಲ್ಲ ಮಾನವೀಯ ಬಂಧಗಳನ್ನು, ಭಾವನಾತ್ಮಕ ಬೆಸುಗೆಗಳನ್ನು, ಜೀವನ ಶೈಲಿಯನ್ನು, ಜನರು ರೂಪಿಸಿಕೊಂಡ ಸಂಸ್ಕೃತಿಯನ್ನು ನುಂಗಿ ನೊಣೆದು ನೀರು ಕುಡಿಯುವುದು ಬೆಲೆ ಕಟ್ಟಲಾಗದ ಒಂದು ನಷ್ಟವೇ ಸರಿ.
ಊರ ಜನರು ವಾರಾಹಿಗೆ ಡ್ಯಾಂ ಕಟ್ಟಿ ತಮ್ಮ ಊರು ಮುಳುಗಡೆಯಾಗುತ್ತದೆ ಎಂಬುದನ್ನು ಪ್ರಾರಂಭದಲ್ಲಿ ಕಲ್ಪಿಸಿಕೊಳ್ಳಲಾಗದಷ್ಟು ಮುಗ್ಧರಾಗಿದ್ದವರು. ನೋಡನೋಡುತ್ತಿದ್ದಂತೆ ಜಾಗ ಗುರ್ತಿಸುವಿಕೆ, ಕಾಡು ಕಡಿತಲೆ, ಬಂಡೆ ಬ್ಲಾಸ್ಟ್, ಲಾರಿ ಸಂಚಾರ ಆರಂಭವಾದಾಗಲೇ ತಾವು ಕೇಳಿದ್ದ ಮುಳುಗಡೆ ಖಚಿತ ಎಂಬುದರ ಅರಿವಾದವರು. ಕೃಷಿಯ ವಿನಃ ಬೇರೆ ಕೆಲಸ ಗೊತ್ತಿಲ್ಲದ ಎರಡು ಸಾವಿರದ ಇನ್ನೂರು ಕುಟುಂಬಗಳ ಇಪ್ಪತ್ತು ಸಾವಿರ ಮುಗ್ಧ ಗ್ರಾಮೀಣ ಜನರು ತಾವು ಮುಳುಗಡೆಗೊಳಗಾಗಲಿರುವವರೆಂಬುದರ ಅರಿವಾದಾಗ ಕಂಗಾಲಾದರು. ಕೆಲವರು ಕಾಯಿಲೆಗೆ, ಮನೋ ವೈಕಲ್ಯಕ್ಕೆ ಒಳಗಾದರು. ಹಲವರು ಆತ್ಮಹತ್ಯೆಗೂ ಶರಣಾದರು. ಮನೆಮಾರು ತೋಟ ಗದ್ದೆ ಜಾನುವಾರುಗಳನ್ನೆಲ್ಲ ತೊರೆದು ಹೋಗಬೇಕಾದರೂ ಎಲ್ಲಿಗೆ ಮುಂದೇನು ಮಾಡಬೇಕು ಎಂದೇ ತೋಚದೆ ದಿಕ್ಕೆಟ್ಟರು. ಈ ದಿಗಿಲು ಆ ತಲೆಮಾರಿನ ಜನರ ಬದುಕಿನ ನೆಮ್ಮದಿಗೇ ಸಂಚಕಾರ ತಂದಿತ್ತು.
ಪರಿಹಾರವಾಗಿ ದೊರೆಯಲಿದ್ದ ಹಣವನ್ನು ಪಡೆಯುವುದೇನು ಸುಲಭದ ಸಂಗತಿಯಾಗಿರಲಿಲ್ಲ. ಮುಗ್ಧ ಜನ ತಮಗೆ ಬರಬೇಕಾದುದಷ್ಟನ್ನೇ ನ್ಯಾಯಯುತವಾಗಿ ಕೇಳಿದ್ದರು. ಕೇಳುವಾಗ ಜಾಸ್ತಿ ಕೇಳಬೇಕೆಂಬ ಲೋಕ ಜ್ಞಾನವೂ ಇಲ್ಲದ ಪ್ರಾಂಜಲ ಮನದವರು. ಕೇಳಿದ್ದ ಅರ್ಧದಷ್ಟು ಕೂಡ ಸಿಕ್ಕಿಲ್ಲದ ಪಡಿಪಾಟಲಿಗೊಳಗಾದರು. ಹಾಗೆ ಸಿಕ್ಕಿದ್ದರಲ್ಲೂ ಭ್ರಷ್ಟ ಅಧಿಕಾರಿಗಳಿಗೆ ಪಾಲು ಕೊಡಲೇಬೇಕಿದ್ದ ಸನ್ನಿವೇಶಗಳು. ಮುಳುಗಡೆ ಜನರು ಬೇರು ಕಿತ್ತ ಮರದಂತೆ ತತ್ತರಗೊಂಡು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ಎಂಬುದರ ಕಿಂಚಿತ್ತೂ ಅರಿವಿಲ್ಲದೆ ಪರಿಹಾರದ ಹಣ ಸಂದಾಯ ಮಾಡಲು ಜನರನ್ನು ಪೀಡಿಸುತ್ತಾ ಕೊನೆಗೂ ದಾನ ಕೊಟ್ಟಂತೆ ಕೊಟ್ಟಂತಹ ಸಂವೇದನಾರಹಿತ ಅಧಿಕಾರಿಗಳು. ಹಾಗೆ ಪರಿಹಾರದ ಹಣ ಪಡೆಯಲು ಕೂಡ ಹೋರಾಟಗಳನ್ನೇ ಮಾಡಬೇಕಾಗಿ ಬಂದಂತಹ ಸಂದರ್ಭಗಳು ಸಾಕಷ್ಟು. ಕಾನೂನು ಓದಿದ್ದ ಕಾರಂತರು ಇಂತಹ ಅನೇಕ ಸನ್ನಿವೇಶಗಳಲ್ಲಿ ಊರುಮನೆಯವರಾದ ಸಂತ್ರಸ್ತರಿಗೆ ಸಹಾಯಕರಾಗಿ ನಿಂತು ಅವರಿಗೆ ಬರಬೇಕಿದ್ದ ಹಣ ಪಡೆದುಕೊಳ್ಳಲು ಸಹಾಯ ಹಸ್ತ ಚಾಚಿದ್ದ ಹಲವಾರು ಸಂದರ್ಭಗಳಿದ್ದು, ಇದಕ್ಕಾಗಿ ಅವರು ಅಧಿಕಾರಿಗಳ ಅವಕೃಪೆಗೂ ಪಾತ್ರರಾಗುತ್ತಾರೆ. ಆದರೆ ಹುಟ್ಟೂರು ಬಿಟ್ಟಮೇಲೂ ಅಲ್ಲಿನ ಮಂಡಲ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಎದುರಾಳಿಗಳು ಜಾತಿಯ ವಿಷಬೀಜ ಬಿತ್ತಲು ಮಾಡಿದ್ದ ಪ್ರಯತ್ನಗಳನ್ನೂ ಮೀರಿ ಊರವರು ನಿರ್ಮಲ ಮನದಿಂದ ಇವರಿಗೆ ಗೆಲುವಿನ ಉಡುಗೊರೆ ನೀಡಿ ತಾವು ಪಡೆದಿದ್ದ ಸಹಾಯಕ್ಕೆ ಕೃತಜ್ಞತೆ ತೋರಿದ್ದರು.
ಮುಳುಗಡೆಗೊಳಗಾದ ಜನರು ಪರಿಹಾರದ ಹಣ ಪಡೆದು ಬೇರೆಡೆಗೆ ನೆಲೆ ನಿಲ್ಲಲು ಹೋದಾಗ, ಆ ಊರಿನ ನೆರೆಯವರು, ಊರವರು ದಾರಿಗಾಗಿ ನೀರಿಗಾಗಿ ಬೇಲಿಗಾಗಿ ಕಿರುಕುಳ ನೀಡುತ್ತಾ ಜಗಳ ಮಾಡುತ್ತಾರೆ. ಅವರಿಗೆ ಬದುಕು ಸಮಸ್ಯೆಗಳನ್ನು ಮುಂದಿಡುತ್ತಲೇ ಇತ್ತು. ಪರಿಹಾರದ ಹಣ ಕೈಗೆ ಬರುತ್ತಲೇ ಕೆಲವರು ಕೃಷಿ ವಿಚಾರ ಕೈಬಿಟ್ಟು ಬಸ್ ಅಂಗಡಿ ಹೋಟೆಲ್ ತೆರೆದಿದ್ದು ಅಭ್ಯಾಸವಿಲ್ಲದ ಈ ಉದ್ಯಮಗಳಲ್ಲಿ ಕೈಸುಟ್ಟುಕೊಂಡಿದ್ದರು. ಬಡ್ಡಿ ಆಸೆಗೆ ಬಿದ್ದು ಇದ್ದ ಹಣವನ್ನೆಲ್ಲ ಕಳೆದುಕೊಂಡಿದ್ದರು. ಕೆಲವರು ಅಂದಾದುಂದಿ ವೆಚ್ಚಮಾಡಿ ಸಾಲಗಾರರಾಗಿ ಬರಿಗೈಯಾದರು. ಇಷ್ಟಾಗಿಯೂ ನಾಲ್ಕು ದಶಕಗಳ ನಂತರವೂ ಇನ್ನೂ ಪರಿಹಾರದ ಹಣ ಬರದಿರುವ ಪ್ರಸಂಗಗಳೆಷ್ಟೋ ಇವೆ ಎನ್ನುತ್ತಾರೆ ಲೇಖಕರು. ವರ್ಷಗಳುರುಳಿದಂತೆ ಅಂತೂ ಹೇಗೋ ಒಂದೆಡೆ ನೆಲೆ ನಿಂತು ಕ್ರಮೇಣ ಊರವರ ಪ್ರೀತಿಗೂ ಪಾತ್ರರಾದರಾದರೂ ಎದೆಯಲ್ಲಿ ಅಚ್ಚೊತ್ತಿ ನಿಂತ ತಮ್ಮ ಮೂಲನೆಲೆಯಾಗಿದ್ದ ವಾರಾಹಿ ಹರಿವಿನ ಆ ಪ್ರದೇಶದ ಆಪ್ತ ಚಿತ್ರಣ ಇನ್ನು ನೋಡಲು ಕೂಡ ಸಿಗದೆಂಬ ವೇದನೆ ಮಾತ್ರ ಸದಾ ಜ್ವಲಂತವಾಗಿರುತ್ತದೆ.
ಮುಳುಗಡೆ ಪೂರ್ವದ ತಮ್ಮೂರು ಮತ್ತು ಸುತ್ತಮುತ್ತಲಿನ ಜನರಲ್ಲಿ ಹಲವಾರು ವ್ಯಕ್ತಿ ಚಿತ್ರಣಗಳ ಕುರಿತ ಅಧ್ಯಾಯಗಳಿವೆ. ಘಟ್ಟದ ಕೆಳಗಿಂದ ಬಂದಿದ್ದ ಕುಡುಬಿ ಜನಾಂಗದ “ಪುರುಷನಾಯ್ಕ” ಅಧ್ಯಾಯ ಮನಸ್ಸನ್ನು ಆರ್ದ್ರವಾಗಿಸುತ್ತದೆ. ತನ್ನ ತುಂಟತನ ಕೀಟಲೆಗಳಿಂದ ಜನರನ್ನು ಮಂಗ ಮಾಡುತ್ತಿದ್ದ “ಊರ ಹೀರೋ ಸೋಮ” ನಗುವುಕ್ಕಿಸುತ್ತದೆ. “ಸಾವಿತ್ರಮ್ಮನವರು” ಅಧ್ಯಾಯದ ಸಾವಿತ್ರಮ್ಮನ ದಿಟ್ಟತನ, ವೈಚಾರಿಕತೆ, ಕ್ರಿಯಾಶೀಲತೆ ನಮ್ಮನ್ನು ಚಕಿತಗೊಳಿಸುತ್ತದೆ. “ನಿಗರ್ವಿ ಕೃಷ್ಣಮೂರ್ತಿ” ಅಧ್ಯಾಯ ಬದುಕಿಗೆ ಭರವಸೆ ಮೂಡಿಸುತ್ತದೆ.
ಮುಳುಗಡೆಯಾದ ನಾಲ್ಕು ದಶಕಗಳ ನಂತರದಲ್ಲೂ ಲೇಖಕರು ಆಗಿನ ಜನರು, ಅವರವರ ಬಾಂಧವ್ಯ ಊರು ಹಳ್ಳಿಗಳ ಕರಾರುವಾಕ್ಕಾದ ಚಿತ್ರಣವನ್ನು ನೆನಪಿನ ಆಧಾರದಿಂದ ಹೇಳಿರುವುದು ಅಚ್ಚರಿ ಮೂಡಿಸುತ್ತದೆ. ಆದರೆ ಈ ಸುದೀರ್ಘ ಕಾಲದ ಅಂತರವು ನಿರ್ಮಮತೆಯಿಂದ ನಿರುಕಿಸಬಲ್ಲ ಸಾಮರ್ಥ್ಯ ನೀಡಿ ವಸ್ತುನಿಷ್ಠತೆಯ ನಿರೂಪಣೆಗೆ ಸಹಾಯಕವಾಗಿದೆ. ಒಂದು ರೀತಿಯಲ್ಲಿ ಮುಳುಗಡೆ ಪೂರ್ವದ ನಿರುಮ್ಮಳ ಸ್ಥಿತಿ, ಮುಳುಗಡೆಯ ಹಂತದ ತವಕತಲ್ಲಣಗಳ ತುರೀಯಾವಸ್ಥೆ, ಮುಳುಗಡೆ ನಂತರದ ಪಡಿಪಾಟಲುಗಳು, ಕೊನೆಗೂ ಮನದಲ್ಲಿ ನೆಲೆನಿಂತ ಊರ ಕುರಿತ ವಿಷಾದ, ಅಂದಿನ ಮಲೆನಾಡು, ಮಲೆನಾಡಿಗರ ಜನಜೀವನ ಶೈಲಿ ಇವೆಲ್ಲದಕ್ಕೂ ಒಂದು ಅಧಿಕೃತತೆ ತಂದುಕೊಟ್ಟಿದೆ ಈ ವಸ್ತುನಿಷ್ಠತೆ. ಹಿರಿಯ ಸಾಹಿತಿ ಶರತ್ ಕಲ್ಕೋಡರ ಸುದೀರ್ಘ ಮುನ್ನುಡಿಯ ಈ ಪುಸ್ತಕದ ಲೋಕಾರ್ಪಣೆಯನ್ನು ಕೂಡ ಕಾರಂತರು ಮುಳುಗಡೆ ಪ್ರದೇಶದಲ್ಲಿದ್ದು ಮುಳುಗಡೆಯಾಗದೆ ಉಳಿದುಕೊಂಡ ಸಂಚಾರ ಸಂಪರ್ಕ ವ್ಯವಸ್ಥೆಯಿಲ್ಲದ ನಿರ್ಜನ ಪ್ರದೇಶ ಎನ್ನಬಹುದಾದ ಮೇಲುಸುಂಕ ಎಂಬಲ್ಲಿನ ಅಂದಿನ ಜನರ ಆರಾಧ್ಯ ದೈವವಾಗಿದ್ದ ದುರ್ಗಾಪರಮೇಶ್ವರಿ ದೇಗುಲದಲ್ಲಿ ನೆರವೇರಿಸಿ ನೂರಾರು ಮಂದಿ ನಾಡಿನಾದ್ಯಂತದಿಂದ ಬರುವಂತೆ ಮಾಡಿದ ಸಾಹಸಕ್ಕೆ ಕಾರಣರಾದರು.
(ಕೃತಿ: “ಮುಳುಗಡೆ ಒಡಲಾಳ“, ಲೇಖಕರು: ಎಂ.ಎಂ.ಪ್ರಭಾಕರ ಕಾರಂತ್, ಪ್ರಕಾಶಕರು: ಸಾಧನಾ ಪಬ್ಲಿಕೇಷನ್ (ಸಂಪರ್ಕ ಸಂಖ್ಯೆ: 9448088960), ಪುಟಗಳು: 310, ಬೆಲೆ: 300/-)
ಉಮಾದೇವಿ ನಿವೃತ್ತ ಉಪನ್ಯಾಸಕಿ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. “ಮುಂಬೆಳಕಿನ ಮಿಂಚು”, “ಮಕ್ಕಳಿಗಿದು ಕಥಾ ಸಮಯ”, “ಮುಳ್ಳುಬೇಲಿಯ ಹೂಬಳ್ಳಿ”, ಬಾನಾಡಿ ಕಂಡ ಬೆಡಗು, “ಗ್ರಾಮ ಚರಿತ್ರ ಕೋಶ” ಇವರ ಪ್ರಕಟಿತ ಕೃತಿಗಳು.
ಧನ್ಯವಾದ
ಗಳು.
ಪ್ರಭಾಕರ ಕಾರಂತ