ಹಿಂದೆ ಕೂಲಿ ಕೆಲಸ ಮಾಡುವ ಜನರು ಬೇಸಿಗೆಯಲ್ಲಿ ಒಣಗಿಸಿಟ್ಟ ಹಲಸಿನ ಬೀಜಗಳನ್ನು ಮಳೆಗಾಲದಲ್ಲಿ ಮುಖ್ಯ ಆಹಾರವಾಗಿ ಬಳಸುತ್ತಿದ್ದರು. ಆಗ ಅಧಿಕ ಮಳೆ ಹೊಯ್ಯುತ್ತಿದ್ದುದರಿಂದ ಅವರಿಗೆ ಕೂಲಿಕೆಲಸ ಸಿಗುತ್ತಿರಲಿಲ್ಲ, ದವಸಧಾನ್ಯಗಳನ್ನು ಕೊಳ್ಳಲು ಆಗುತ್ತಿರಲಿಲ್ಲ. ಒಂದುಹೊತ್ತು ಅನ್ನವನ್ನೋ ಗಂಜಿಯನ್ನೋ ಉಂಡರೆ ಇನ್ನೊಂದು ಹೊತ್ತಿಗೆ ಹಲಸಿನ ಬೇಳೆಯೇ ಆಹಾರವಾಗಿತ್ತು. ಹೀಗೆ ಹಲಸಿನ ಬೇಳೆ ಅವರನ್ನು ಸಲಹುತ್ತಿತ್ತು. ಇತ್ತೀಚೆಗೆ ಹಲಸಿನ ಬೇಳೆಯಲ್ಲಿ ಅತ್ಯಧಿಕ ಪೌಷ್ಟಿಕಾಂಶ ಇದೆ ಎನ್ನುವ ಸಂಗತಿ ಪ್ರಚಲಿತವಾಗಿದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯಲ ಮೂರನೆಯ ಕಂತಿನಲ್ಲಿ ಹಲಸಿನ ಕಾಲದ ಸಂಭ್ರಮಗಳನ್ನು ಬರೆದಿದ್ದಾರೆ
ʻನಾಳೆ ನಮ್ಮನೆಯಲ್ಲಿ ಮುಳ್ಳಕ್ಕಿ ಹೊಡಿತಾರಂತೆ, ತಪ್ಪದೆ ಬಾʼ ಅಂತ ಹೇಳಿದಾಗ ಒಂದು ಕ್ಷಣ ಗೊಂದಲವಾಗಿದ್ದಂತೂ ಹೌದು. ಇತ್ತೀಚಿನ ವರ್ಷಗಳಲ್ಲಿ ಆ ಪದ ಮರೆತೇಹೋಗಿತ್ತು. ಮಲೆನಾಡಿನ ಕೆಲವು ಭಾಗಗಳಲ್ಲಿ ಹಲಸಿನ ಹಣ್ಣಿಗೆ ಮುಳ್ಳಕ್ಕಿ ಎಂದು ತಮಾಶೆಯಾಗಿ ಹೇಳುವ ರೂಢಿ. ಹಲಸಿನಕಾಯಿಗೆ ಮೈಯೆಲ್ಲ ಮುಳ್ಳು. ಅದಕ್ಕಾಗಿ ಮುಳ್ಳಕ್ಕಿ ಎನ್ನುವ ಅಭಿದಾನ. ʻಒರಟು ಹಲಸು ಒಳಗೆ ಸೊಗಸುʼ ಎನ್ನುವ ಮಾತು ಅದರ ಸ್ವಾದಕ್ಕೆ ನೀಡಿದ ವ್ಯಾಖ್ಯಾನ. ಹಲಸು ಮಲೆನಾಡಿನಲ್ಲಿ ಹಲವು ವಿಧದಲ್ಲಿ ಬಳಕೆಯಾಗುತ್ತ ಬಂದಿದೆ. ಅದರಲ್ಲಿಯೂ ಹಲಸಿನಹಣ್ಣಿನ ಕಡುಬು ಎಂದರೆ ಮಲೆನಾಡಿನವರಿಗೆ ವಿಶೇಷ ಪ್ರೀತಿ. ಮಳೆಗಾಲ ಪ್ರಾರಂಭವಾಗುವ ಕಾಲಕ್ಕೆ ಹಲಸಿನ ಹಣ್ಣಿನ ಶ್ರಾಯ. ಬಿಸಿಬಿಸಿಯಾದ ಕಡುಬಿಗೆ ಘಮ್ಮೆನ್ನುವ ತುಪ್ಪ ಹಾಕಿಕೊಂಡು ತಿನ್ನುವ ಸ್ವಾದ ತಿಂದವರಿಗಷ್ಟೆ ಗೊತ್ತು. ಆದರೆ ಅದನ್ನು ತಯಾರಿಸುವುದು ಮಾತ್ರ ಅಷ್ಟೊಂದು ಸುಲಭದ್ದಲ್ಲ.
ಈಗ ಎಲ್ಲರ ಮನೆಯಲ್ಲಿಯೂ ಮಿಕ್ಸಿ ಇರುವುದರಿಂದ ಕಷ್ಟವಿಲ್ಲ. ಅಮ್ಮ, ಅಜ್ಜಿಯರ ಕಾಲದಲ್ಲಿ ಅಂಬಲಿ ಹಲಸಿನಹಣ್ಣನ್ನು ಸೋಸಿ ಸೊಳೆಗಳನ್ನು ಬಿಡಿಸಿ ಅದನ್ನು ಬಿದಿರು ಇಲ್ಲವೆ ಬೆತ್ತದ ಜರಡಿಯಲ್ಲಿ ಗಾಳಿಸಬೇಕಿತ್ತು. ಹಣ್ಣನ್ನು ಕಿವುಚಿ ಅದರ ರಸವನ್ನು ಕೆಳಗೆ ಬೀಳಿಸುವಷ್ಟರಲ್ಲಿ ಕೈ ಸೋಲುತ್ತಿತ್ತು. ಅದಕ್ಕೆ ಸೇರಿಸಲು ಅಕ್ಕಿರವೆಯ ಆಯ್ಕೆ ಸರಿಯಾಗಿರಬೇಕು. ತೀರ ಸಣ್ಣಗಾತ್ರದ ರವೆಯಾದರೆ ಕಡುಬು ಅಂಟಂಟಾಗುತ್ತದೆ. ಮಧ್ಯಮ ಗಾತ್ರ ರವೆಯನ್ನು ತುಸುವೇ ಬಿಸಿಮಾಡಿ ಅದು ಆರಿದ ನಂತರದಲ್ಲಿ ಗಾಳಿಸಿ ಇಟ್ಟಿರುವ ಹಣ್ಣಿನ ರಸಕ್ಕೆ ಸಿಹಿಯಾಗುವಷ್ಟು ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹಿಟ್ಟನ್ನು ತಯಾರಿಸಿದರೆ ಹದ ಸರಿಯಾಗುತ್ತದೆ. ಈಗಿನವರು ಅದನ್ನು ಅಳತೆಮಾಡಿ ತಯಾರಿಸುತ್ತೇವೆ. ಅಮ್ಮ, ಅಜ್ಜಿಯವರದು ಕಣ್ಣಂದಾಜು ಇಲ್ಲವೆ ಹಿಟ್ಟನ್ನು ಕೈಯಿಂದ ಮುಟ್ಟಿ ಸರಿಯಾಯಿತು ಎನ್ನುತ್ತಿದ್ದರು. ಇಡ್ಲಿಯಂತೆಯೇ ಹಿಟ್ಟನ್ನು ಹದಗೊಳಿಸಿ ಅದನ್ನು ದೊಡ್ಡ ಗಾತ್ರದ ಒಲೆಯ ಮೇಲಿಟ್ಟು ಉಗಿಯಲ್ಲಿ ಬೇಯಿಸುವುದಾದರೂ ಇಡ್ಲಿಯಂತೆ ಪಾತ್ರೆಯಲ್ಲಿ ಅಲ್ಲ, ಬಾಳೆಲೆಯಲ್ಲಿ. ಸಾಮಾನ್ಯವಾದ ಊಟದ ಬಾಳೆಲೆಯ ಗಾತ್ರ ಅದಕ್ಕೆ ಸಾಲುವುದಿಲ್ಲ. ಉದ್ದವಾಗಿರುವ ಬಾಳೆಲೆಯನ್ನು (ಹರಿದಿರಬಾರದು) ಬಾಡಿಸಿ ಕೊಟ್ಟೆಕಟ್ಟುತ್ತಿದ್ದರು. ಬಾಳೆಲೆ ಹರಿಯದಂತೆ ಕೊಟ್ಟೆಕಟ್ಟುವುದು ಒಂದು ಕಲೆಯೇ. ಇಡ್ಲಿಡ್ರಮ್ಮಿಗೆ ಸಾಕಷ್ಟು ನೀರುಹಾಕಿ ಅದರಲ್ಲಿ ಕೊಟ್ಟೆಯನ್ನು ಜೋಡಿಸಿ ಒಂದು ತಾಸಿಗೂ ಹೆಚ್ಚು ಅವಧಿಯಲ್ಲಿ ಬೇಯಿಸಬೇಕಿತ್ತು. ಅದೊಂದು ಶ್ರದ್ಧೆಯಿಂದ ಮಾಡುತ್ತಿದ್ದ ಸಂಭ್ರಮದ ಕೆಲಸವಾಗಿತ್ತು. ಇದು ಕೊಟ್ಟೆಕಡುಬು. ಈ ಕೊಟ್ಟೆಕಡುಬನ್ನು ಇಡಿಯಾಗಿ ತಿನ್ನುವವರೂ ಇದ್ದರು. ನಮ್ಮ ಸೋದರಮಾವ ಒಬ್ಬರು ಇಡಿಯಾಗಿ ಒಂದು ಕೊಟ್ಟೆಕಡುಬನ್ನು ತಿನ್ನುತ್ತಿದ್ದರಂತೆ. ಅವರನ್ನು ತಮಾಶೆಯಾಗಿ ಕೊಟ್ಟೆಸುಬ್ಬ ಎಂದು ಕರೆಯುತ್ತಿದ್ದರಂತೆ.
ಹಲಸು ವಾರ್ಷಿಕ ಬೆಳೆಯಾದರೂ ವರ್ಷದಲ್ಲಿ ಸುಮಾರು ನಾಲ್ಕೈದು ತಿಂಗಳು ಅದನ್ನು ಅಡುಗೆಯಲ್ಲಿ ಬಳಸಬಹುದು. ಚಳಿಗಾಲ ಮುಗಿಯುವ ಹೊತ್ತಿನಲ್ಲಿ ಇದರ ಗುಜ್ಜೆ, ಗುಚುಕು ಎಂದು ಕರೆಯುವ ಹೀಚುಕಾಯಿಯಿಂದ ಹಿಡಿದು ಆಷಾಢಮಾಸದಲ್ಲಿ ಆಗುವ ಹಣ್ಣಿನ ಕೊನೆಕಂತಿನವರೆಗೆ ಇದರ ಉಪಯುಕ್ತತೆ. ನಾವು ಚಿಕ್ಕವರಿರುವಾಗ ಪೇಟೆಯಿಂದ ತರಕಾರಿಗಳನ್ನು ತರುತ್ತಿದ್ದುದು ವಿಶೇಷ ದಿನಗಳಲ್ಲಿ ಮಾತ್ರ. ಉಳಿದಂತೆ ಮನೆಯ ಹಿತ್ತಿಲಿನಲ್ಲಿ ಬೆಳೆಯುವ ತೊಂಡೆ, ಬೆಂಡೆ, ಹಾಗಲ, ಹೀರೆ ಮುಂತಾದವುಗಳ ಜೊತೆಗೆ ಹಿತ್ತಿಲಿನಲ್ಲಿ ಇಲ್ಲವೆ ಕಾಡಂಚಿನಲ್ಲಿ ತಾನಾಗಿ ಬೆಳೆಯುತ್ತಿದ್ದ ಹಲಸು ನಾಲ್ಕಾರು ತಿಂಗಳ ಅಗತ್ಯವನ್ನು ಪೂರೈಸುತ್ತಿತ್ತು. ಅಡಿಕೆ ತೋಟ ಇರುವವರು ತೋಟದ ಅಂಚಿನಲ್ಲಿ ಹಲಸಿನ ಮರವನ್ನು ನೆಟ್ಟಿರುತ್ತಾರೆ. ಅಡುಗೆಗೆ ಮಾತ್ರವಲ್ಲ, ಹಪ್ಪಳ ಮಾಡಿಟ್ಟರೆ ವರ್ಷದ ಕೊನೆಯವರೆಗೆ ಅದರ ಉಪಯೋಗ. ಮನೆಗೆ ಯಾರಾದರೂ ನೆಂಟರು ಬಂದಾಗ ಹಪ್ಪಳ ಮನೆಯ ಹೆಂಗಸರಿಗೆ ಪ್ರಯೋಜನಕ್ಕೆ ಬರುವುದು ಒಂದಾದರೆ ಮಳೆ ಹೊಯ್ಯುತ್ತಿದ್ದರೆ ಮಕ್ಕಳಿಗೆ ಅದನ್ನು ಕೆಂಡದಲ್ಲಿ ಸುಟ್ಟು ಕೈಲಿಟ್ಟರೆ ಒಂದಿಷ್ಟು ಹೊತ್ತು ಅವರ ರಗಳೆಯನ್ನು ನಿಯಂತ್ರಿಸಲು ಬಳಕೆಯಾಗುತ್ತಲೂ ಇತ್ತು. ಹಪ್ಪಳ ಎಂದಾಗ ನೆನಪಾಗುವುದು ಅದನ್ನು ಮಾಡುತ್ತಿರುವಾಗ ಹಪ್ಪಳದ ಹಿಟ್ಟನ್ನು ತಿನ್ನುವ ಗಮ್ಮತ್ತು. ಮಕ್ಕಳು ಅಮ್ಮಂದಿರನ್ನು ಕೇಳುತ್ತಿದ್ದೆವು. ʻಯಾವಾಗ ಹಪ್ಪಳ್ದಿಟ್ಟು ಕೊಟ್ತೀಯೆ?ʼ ಅಂತ. ಮಕ್ಕಳ ಹೇಳಿಕೆಲ್ಲಿ ನಿದ್ದೆ ಅಂತಾರಲ್ಲ, ಹಾಗೆ ದೊಡ್ಡವರಿಗೂ ಅದು ಪ್ರಿಯವೇ. ಹಪ್ಪಳ ಹಚ್ಚಲು ತಯಾರಿಸಿದ ಹಪ್ಪಳದ ಹಿಟ್ಟಿಗೆ ನಾಲಿಗೆಗೆ ಹಿತವಾಗುವಷ್ಟು ಹಸಿಮೆಣಸಿನ ಖಾರ, ರುಚಿಗೆ ಬೇಕಾಗುವಷ್ಟು ಉಪ್ಪುಹಾಕಿ ನಿಂಬೆಹುಳಿ ಅಥವಾ ಕಂಚಿಹುಳಿ (ಹೇರಳೆಕಾಯಿ) ರಸವನ್ನು ಸೇರಿಸಿ ಕಲಸಿ ಕೊಡುತ್ತಿದ್ದರು. ಅದನ್ನು ತಿಂದು ನಾಲಿಗೆ ತುಸು ಉರಿಯುತ್ತಿದ್ದರೆ ʻಎಂಥ ಕಮ್ಮಗೆ ಇತ್ತುʼ ಅನ್ನುವ ಪ್ರತಿಕ್ರಿಯೆ. ಅದು ಅವತ್ತಿಗೆ ಮಾತ್ರ. ಮತ್ತೆ ಹಪ್ಪಳ ಮಾಡಿದಾಗ ಹಪ್ಪಳದ ಹಿಟ್ಟಿನ ಬೇಡಿಕೆ.
ಈಗೀಗ ನಗರ ಪ್ರದೇಶದ ಜನರಿಗೂ ಹಲಸಿನಕಾಯಿಯ ಚಿಪ್ಸ್ ರುಚಿ ಗೊತ್ತಿದೆ. ಈಗಲೂ ನಮ್ಮೂರಿನ ಕಡೆ ಅದಕ್ಕೆ ಹಲಸಿನಕಾಯಿ ಸಂಡಿಗೆ ಎನ್ನುವ ಹೆಸರೇ. ಎಲ್ಲ ಹಲಸಿನಕಾಯಿಯೂ ಸಂಡಿಗೆಗೆ ಯೋಗ್ಯವಲ್ಲ. ತಿನ್ನುವ ಹಣ್ಣಿಗಾಗಿ ಬೆಳೆಯುವ ಹಲಸು ಸಂಡಿಗೆಗೆ ಬರುವುದಿಲ್ಲ. ಅದಕ್ಕೆ ಅಂಬಲಿಹಲಸೇ ಆಗಬೇಕು. ಸಂಡಿಗೆಮರ ಎಂದು ಕರೆಯುವ ಮರದ ಸೊಳೆಯಿಂದ ತಯಾರಿಸಿದ ಸಂಡಿಗೆ ಬಹಳ ರುಚಿ. ಈ ಹಲಸನ್ನು ಅಂಬಲಿ, ಬೆಳವ ಎಂದು ಕರೆಯುತ್ತಾರೆ. ತಿನ್ನುವುದು ಬಕ್ಕೆಹಣ್ಣು. ಅದು ಗಟ್ಟಿಯಾಗಿದ್ದರೆ ಇದು ಮೃದುವಾದ್ದು. ಹಪ್ಪಳಕ್ಕೆ, ಸಂಡಿಗೆಗೆ, ಉಪ್ಪಿನಸೊಳೆಗೆ, ಪಳದ್ಯ, ಹುಳಿ ಮಾಡಲಿಕ್ಕೆ ಇದರ ಕಾಯಿಯ ಸೊಳೆಯೇ. ಇದರ ಸೊಳೆಯ ದೋಸೆ ಬಾರಿ ಸವಿಯಾದ್ದು. ಚಟ್ನಿಯೇ ಬೇಕೆಂದಿಲ್ಲ, ಜೇನುತಪ್ಪ ಇದ್ದರೆ ಅದರ ಮಜವೇ ಬೇರೆ. ಹಲಸಿನ ಗುಜ್ಜೆಯ ಹುಳಿ ಮಾಡುವುದು ಎಲ್ಲರಿಗೂ ಗೊತ್ತು. ಆದರೆ ಅದರ ಚಟ್ನಿಯನ್ನು ಮಲೆನಾಡಿಗರು ತಮ್ಮ ಲೆಕ್ಕಕ್ಕೆ ಹಾಕಿಕೊಂಡಿದ್ದಾರೆ. ಬೆಳೆದ ಕಾಯಿಯಲ್ಲಿ ಮಾಡುವ ಪಳದ್ಯ, ಮೊಸರು ಬಜ್ಜಿ, ಪಲ್ಯ ಎಲ್ಲವೂ ವಿಶಿಷ್ಟವೇ. ಅದರಲ್ಲಿಯೂ ಚಕ್ಕೆಪಳದ್ಯ ಎಂದರೆ ಸಾಕು ಎಂಥವರ ಬಾಯಲ್ಲೂ ನೀರೂರುತ್ತದೆ. ಕಳೆದ ವರ್ಷ ನಮ್ಮೂರಿನ ಒಂದು ಮದುವೆಗೆ ಹೋಗಿದ್ದೆ. ಅಂದಿನ ಸಂಜೆ ಚಕ್ಕೆಪಳದ್ಯ ಮಾಡಿದ್ದರು. ಹೆಚ್ಚು ಜನರಿರಲಿಲ್ಲ. ಎಲ್ಲ ವಯೋಮಾನದ ಐವತ್ತು ಅರವತ್ತು ಜನರಿದ್ದರು. ಎಲ್ಲರೂ ಅದನ್ನು ಸವಿದ ಪರಿಯನ್ನು ಕಂಡು ಬೆರಗಾಗಿದ್ದೆ.
ಇನ್ನು ಉಪ್ಪಿನಲ್ಲಿ ಹಾಕಿಟ್ಟ ಸೊಳೆ ಮಳೆಗಾಲದಲ್ಲಿ ಮಹಿಳೆಯರಿಗೆ ಅಡುಗೆ ಮಾಡಲು ಹುಡುಕುವ ತಲೆಬಿಸಿ ಇಲ್ಲದೆ ಸಹಾಯಕ. ಹೀಗೆ ಕಾಪಿಟ್ಟ ಸೊಳೆಯನ್ನು ಎರಡೋ ಮೂರೋ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಚೆನ್ನಾಗಿ ತೊಳೆದು ಅಡುಗೆಗೆ ಬಳಸುತ್ತಾರೆ. ಅಜ್ಜಿ ಇರುವಾಗ ವಾರಕ್ಕೊಮ್ಮೆ ಕೆಸಿನಸೊಪ್ಪಿನೊಂದಿಗೆ ಉಪ್ಪುಸೊಳೆಯ ಪಲ್ಯ ಮಾಡುವಂತೆ ಹೇಳುತ್ತಿದ್ದರು. ಈಗಲೂ ಕೆಲವರು ಸಣ್ಣಮೆಣಸು ಹಾಕಿ ಕೆಸವಿನಸೊಪ್ಪಿನೊಂದಿಗೆ ಉಪ್ಪಿನಸೊಳೆ ಸೇರಿಸಿ ಪಲ್ಯ ತಯಾರಿಸಿ ಎರಡೋ ಮೂರೋ ದಿನ ಕಮ್ಮಗೆ ಉಣ್ಣುವುದಿದೆ. ಇದೇ ಉಪ್ಪಿನಸೊಳೆಯಿಂದ ಮಾಡುವ ಸಿಹಿತಿನಿಸು ಕೊಚ್ಚಲು, ಉಂಡಲೆಕಾಳು ಎಲ್ಲವೂ ಈಗ ಬರಿ ನೆನಪು ಮಾತ್ರ. ಈಗಿನ ಮಕ್ಕಳನ್ನು ಕೇಳಿದರೆ ʻಅದೂ ಒಂದು ಸ್ವೀಟ?ʼ ಅಂತ ಮುಖ ಹಿಂಡಿದರೆ ಆಶ್ಚರ್ಯಪಡಬೇಕಿಲ್ಲ. ಹಲಸಿನ ಹಣ್ಣಿನಲ್ಲಿ ಹಲವು ಬಗೆಯ ತಿಂಡಿ ತಯಾರಿಸುತ್ತ ಬಂದಿದ್ದಾರೆ. ಸೊಳೆಯಿಂದ ಪಾಯಸ, ಮುಳುಕ, ದೋಸೆ, ಕಡುಬು, ಕೊಚ್ಚಲು, ಉಂಡಲೆಕಾಳು ಅಂತ. ಮಲೆನಾಡಿನ ಜನಕ್ಕೆ ಪೇಟೆ-ಪಟ್ಟಣ ಸೇರಿದರೂ ಹಲಸಿನ ತಿನಿಸುಗಳ ಬಗೆಗಿನ ವ್ಯಾಮೋಹ ಬಿಟ್ಟಿಲ್ಲ. ಮಕ್ಕಳಿಗೆ ರಜೆಯೆಂದು ಊರಿಗೆ ಹೋದವರು ಬರುವಾಗ ಹಪ್ಪಳ, ಸಂಡಿಗೆಗಳನ್ನು ಮಾತ್ರ ತರುವುದಿಲ್ಲ. ಜೊತೆಯಲ್ಲಿ ಹಲಸಿನ ಹಣ್ಣಿನ ಗುಳ (ಹಣ್ಣನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ಅದಕ್ಕೆ ಸಿಹಿಯಾಗುವಷ್ಟು ಬೆಲ್ಲ ಬೆರಸಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕಾಯಿಸಿ ಪಲ್ಪ್‌ನಂತೆ) ಇದ್ದೇ ಇರುತ್ತದೆ. ನಮ್ಮ ತಂಗಳುಪೆಟ್ಟಿಗೆಯಲ್ಲಿ ಅದಕ್ಕೆ ತುಸು ಜಾಗ ಸಾಕು. ಬೇಕೆನಿಸಿದಾಗ ಕಡುಬಿನ ತಯಾರಿಗೆ. ನಾವಷ್ಟೆ ಇದನ್ನು ಕಾಪಿಡುತ್ತೇವೆ ಎಂದು ಡೌಲು ಮಾಡುವಂತಿಲ್ಲ. ಅಜ್ಜಿ ಇರುವಾಗ ಹಣ್ಣಿನ ಹಪ್ಪಳ ಮಾಡಿ ಬಿಸಿಲಿನಲ್ಲಿ ಒಣಗಿಸಿ ಮಕ್ಕಳಿಗೆ ಸಿಗದಂತೆ ಡಬ್ಬಿಯಲ್ಲಿ ಹಾಕಿಡುತ್ತಿದ್ದರು. (ಮಕ್ಕಳು ಕಂಡರೆ ಅಜ್ಜಿಯನ್ನು ಬೇಡಿ ಪಡೆದು ಕೆಲವನ್ನು ಖಾಲಿಮಾಡುತ್ತಿದ್ದರು) ಎರಡ್ಮೂರು ತಿಂಗಳುಗಳ ಕಾಲ ಹಾಳಾಗದೆ ಇರುತ್ತಿತ್ತು. ಬೇಕೆನಿಸಿದಾಗ ಅದನ್ನು ತುಂಡುಮಾಡಿ ನೀರಲ್ಲಿ ನೆನೆಸಿಟ್ಟು ಅಕ್ಕಿಯೊಂದಿಗೆ ರುಬ್ಬಿ ದೋಸೆ ತಯಾರಿಸುತ್ತಿದ್ದರು. ಈಗ ನಮ್ಮ ತಂಗಳುಪೆಟ್ಟಿಗೆಯಲ್ಲಿ ಆರೆಂಟು ತಿಂಗಳು ಇಡಬಹುದು.
ಅಡಿಕೆ ತೋಟ ಇರುವವರು ತೋಟದ ಅಂಚಿನಲ್ಲಿ ಹಲಸಿನ ಮರವನ್ನು ನೆಟ್ಟಿರುತ್ತಾರೆ. ಅಡುಗೆಗೆ ಮಾತ್ರವಲ್ಲ, ಹಪ್ಪಳ ಮಾಡಿಟ್ಟರೆ ವರ್ಷದ ಕೊನೆಯವರೆಗೆ ಅದರ ಉಪಯೋಗ. ಮನೆಗೆ ಯಾರಾದರೂ ನೆಂಟರು ಬಂದಾಗ ಹಪ್ಪಳ ಮನೆಯ ಹೆಂಗಸರಿಗೆ ಪ್ರಯೋಜನಕ್ಕೆ ಬರುವುದು ಒಂದಾದರೆ ಮಳೆ ಹೊಯ್ಯುತ್ತಿದ್ದರೆ ಮಕ್ಕಳಿಗೆ ಅದನ್ನು ಕೆಂಡದಲ್ಲಿ ಸುಟ್ಟು ಕೈಲಿಟ್ಟರೆ ಒಂದಿಷ್ಟು ಹೊತ್ತು ಅವರ ರಗಳೆಯನ್ನು ನಿಯಂತ್ರಿಸಲು ಬಳಕೆಯಾಗುತ್ತಲೂ ಇತ್ತು.
ಹಲಸಿನ ಹಣ್ಣನ್ನು ಕುರಿತಂತೆ ಒಂದು ಕುಸುಮ ಷಟ್ಪದಿ ಕೂಡ ರಚಿತವಾಗಿದೆ.
“ಮುಪ್ಪನ್ನು ಮುಂದೂಡಿ
ನೆಪ್ಪಿಡುವ ಬುದ್ಧಿಯನು
ತಪ್ಪಿಲದೆ ಕೊಡುತಿರಲು ಹಲಸಿನಹಣ್ಣು”
ಎಂದು ಪ್ರಾರಂಭವಾಗುವ ಈ ಷಟ್ಪದಿ ಮುಂದುವರಿದು
“ಬಡವರ ಹಣ್ಣಾಗಿ
ಕಡೆತನಕ ಮುಳ್ಳಿನಲಿ
ತುಡಗನ್ನು ಮಾಡದಿರೆ ಬರುವುದಿಲ್ಲ
ಚಡಪಡಿಸಿ ಮನವಿಂದು
ಜಡವಿರುವ ಕಾಯಕ್ಕೆ
ಹುಡುಗತನ ತಂದಿರಲು ಹಲಸುಹಣ್ಣು”
ಶಂಕರಾನಂದ ಹೆಬ್ಬಾಳ ಅವರು ಹೀಗೆ ತಮಾಶೆಯಾಗಿ ಬರೆದಿದ್ದಾರೆ.
ಹಲಸಿನ ಹಣ್ಣನ್ನು ಅಜೀರ್ಣ ಆಗದಂತೆ ತಿನ್ನಬೇಕೆಂದರೆ ಉಪ್ಪುಖಾರ ಸಮೇತ ತಿನ್ನಬೇಕು. ತಿಂದವರೆ ಬಲ್ಲರು ಅದರ ಸವಿಯ. ಗಟ್ಟಿ ಹಣ್ಣಲ್ಲ ಅಂಬಲಿ ಹಣ್ಣನ್ನು. ಚಿಕ್ಕ ಚಿಕ್ಕ ಸೊಳೆಗಳಿರುವ ಒಂದು ಜಾತಿಯ ಅಂಬಲಿ ಹಣ್ಣುಗಳಿವೆ, ಅದನ್ನು ತಿಂಬಹಣ್ಣು ಎಂದು ಕರೆಯುತ್ತಾರೆ. ಪಟ್ಟಾಂಗ ಹೊಡೆಯುತ್ತ ಹತ್ತೋ ಇಪ್ಪತ್ತೋ ಸೊಳೆಗಳನ್ನು ಆರಾಮವಾಗಿ ತಿಂದು ಜೀರ್ಣಿಸಬಹುದು. ಉಪ್ಪಿಗೆ ಸರಿಯಾಗಿ ಖಾರ ಆಗುವಂತೆ ಹಸಿಮೆಣಸಿನಕಾಯಿ ಜಜ್ಜಿಹಾಕಿ ನಿಂಬೆಹುಳಿ ಸೇರಿಸಿ ಬೇಕಿದ್ದರೆ ತುಸುಕೊಬ್ಬರಿ ಎಣ್ಣೆಯನ್ನೂ ಬೆರಸಿ ಅದರಲ್ಲಿ ಸೊಳೆಯನ್ನು ಅದ್ದಿ ತಿನ್ನುವುದಿದೆಯಲ್ಲ ಎಂಥ ಗಮ್ಮತ್ತು ಗೊತ್ತೇ? ಕೆಲವು ಬಾರಿ ಎಲ್ಲ ಸೇರಿ ತಿನ್ನುತ್ತ ಕುಳಿತಾಗ ತಿಂದವರು ತಿಂದ ಹಣ್ಣಿನ ಬೀಜಗಳನ್ನು ಮತ್ತೊಬ್ಬರ ಎದುರಿಗೆ ಹಾಕಿ ʻಅರೆ ನೀನು ಇಷ್ಟೊಂದು ಹಣ್ಣು ತಿಂದೆ. ತಡಿ ನಾಳೆ ಹೊಟ್ಟೆನೋವು ಬರುವುದ ಗ್ಯಾರೆಂಟಿʼ ಎಂದು ರೇಗಿಸುವುದಿದೆ. ಇವೆಲ್ಲವೂ ಬದುಕಿನ ಬಗ್ಗೆ ಆಸಕ್ತಿ ಇರುವವರಿಗೆ ಬದುಕನ್ನು ಪುರುಸೊತ್ತಾಗಿ ಸವಿಯುವವರಿಗೆ ಸೀಮಿತ. ಕೆಲವು ಸ್ನೇಹಿತರು ಹೇಳುವುದಿದೆ ʻಹೀಗೆಲ್ಲ ಹೇಳಿ, ಬರೆದು ನಮ್ಮ ಹೊಟ್ಟೆ ಉರಿಸಬೇಡಿʼ ಎಂದು. ಆಧುನಿಕ ಬದುಕಿನ ಜಂಜಡಗಳಲ್ಲಿ ಈಗಿವೆಲ್ಲ ಅಜ್ಜಿಕತೆಗಳಾಗಿ ಕಾಣಲೂಬಹುದು.
ಇವೆಲ್ಲ ಹಲಸಿನಕಾಯಿ, ಹಣ್ಣಿನ ಬಳಕೆಯಾದರೆ ಇದರ ಬೀಜವೂ ಉಪಯುಕ್ತವೇ. ಸಾಧಾರಣವಾಗಿ ಹಲಸಿನ ಸೊಳೆಯಲ್ಲಿ ಪಳದ್ಯ ಮಾಡುವಾಗ ಬೇಳೆಯನ್ನು ಬಿಳಿಮಾಡಿ (ಸಿಪ್ಪೆಯನ್ನು ಬಿಡಿಸಿ) ಜೊತೆಯಲ್ಲಿ ಬೇಯಿಸುತ್ತಾರೆ. ಬೇಳೆ ಸೇರಿಸಿದರೆ ಪಳದ್ಯ ದಪ್ಪವಾಗುತ್ತದೆ ಮತ್ತು ರುಚಿ ಹೆಚ್ಚು ಅಂತ. ನಾವೆಲ್ಲ ಮಳೆಗಾಲದಲ್ಲಿ ಶಾಲೆಗೆ ರಜೆ ಇರುವ ದಿನ ಬಚ್ಚಲೊಲೆಯ ಬಬ್ಬೂದಿಯಲ್ಲಿ (ಚಿಕ್ಕ ಕೆಂಡದ ತುಣುಕುಗಳಿರುವ ಬೂದಿ) ಹಲಸಿನ ಬೀಜವನ್ನು ಸುಟ್ಟು ತಿನ್ನುತ್ತಿದ್ದೆವು. ಕೆಲವೊಮ್ಮೆ ಅದು ಸಿಡಿದು ದೊಡ್ಡವರಿಂದ ಮಂತ್ರಾಕ್ಷತೆ ಸಿಗುವುದೂ ಇತ್ತು. ಬೀಜವನ್ನು ಬಿಸಿಲಿನಲ್ಲಿ ಒಣಗಿಸಿಟ್ಟು ನಾಗರಪಂಚಮಿ ಹಬ್ಬದಲ್ಲಿ ಅದನ್ನು ಬೇಯಿಸಿ ಬೆಲ್ಲದೊಂದಿಗೆ ಸೇರಿಸಿ ಹೂರಣ ತಯಾರಿಸಿ ತಟ್ಟಿ ಕಾವಲಿಯಲ್ಲಿ ಬೇಯಿಸುವುದು ಕೆಲವು ಕಡೆ ರೂಢಿ, ಇದಕ್ಕೆ ಬೇಳೆ ಒಬ್ಬಟ್ಟು ಎನ್ನುತ್ತಾರೆ. ಪಂಚಮಿಹಬ್ಬಕ್ಕೆ ಬೇಳೆ ಒಬ್ಬಟ್ಟೇ ಆಗಬೇಕು ಎನ್ನುವ ರಿವಾಜು ಕೆಲವರದು. ಹಿಂದೆ ಕೂಲಿ ಕೆಲಸ ಮಾಡುವ ಜನರು ಬೇಸಿಗೆಯಲ್ಲಿ ಒಣಗಿಸಿಟ್ಟ ಹಲಸಿನ ಬೀಜಗಳನ್ನು ಮಳೆಗಾಲದಲ್ಲಿ ಮುಖ್ಯ ಆಹಾರವಾಗಿ ಬಳಸುತ್ತಿದ್ದರು. ಆಗ ಅಧಿಕ ಮಳೆ ಹೊಯ್ಯುತ್ತಿದ್ದುದರಿಂದ ಅವರಿಗೆ ಕೂಲಿಕೆಲಸ ಸಿಗುತ್ತಿರಲಿಲ್ಲ, ದವಸಧಾನ್ಯಗಳನ್ನು ಕೊಳ್ಳಲು ಆಗುತ್ತಿರಲಿಲ್ಲ. ಒಂದುಹೊತ್ತು ಅನ್ನವನ್ನೋ ಗಂಜಿಯನ್ನೋ ಉಂಡರೆ ಇನ್ನೊಂದು ಹೊತ್ತಿಗೆ ಹಲಸಿನ ಬೇಳೆಯೇ ಆಹಾರವಾಗಿತ್ತು. ಹೀಗೆ ಹಲಸಿನ ಬೇಳೆ ಅವರನ್ನು ಸಲಹುತ್ತಿತ್ತು. ಇತ್ತೀಚೆಗೆ ಹಲಸಿನ ಬೇಳೆಯಲ್ಲಿ ಅತ್ಯಧಿಕ ಪೌಷ್ಟಿಕಾಂಶ ಇದೆ ಎನ್ನುವ ಸಂಗತಿ ಪ್ರಚಲಿತವಾಗಿದೆ. ಇದನ್ನು ಆಲೂಗಡ್ಡೆಯಂತೆ ಸಾಗು, ಕೂರ್ಮ ಮಾಡಲು ಬಳಸಬಹುದಾಗಿದೆ.
ಇತ್ತೀಚೆಗೆ ಮೌಲ್ಯವರ್ಧನೆ ಮಾಡುವ ಆಹಾರ ಪದಾರ್ಥಗಳ ಪಟ್ಟಿಯಲ್ಲಿ ಹಲಸೂ ಸೇರಿದೆ. ಹಾಗಾಗಿ ಮೇತಿಂಗಳ ಕೊನೆಯಲ್ಲಿ ಅಥವಾ ಜೂನ್ ತಿಂಗಳಿನಲ್ಲಿ ಹಲಸಿನ ಮೇಳಗಳು ನಡೆಯುತ್ತಿವೆ. ಅಲ್ಲಿ ವಿವಿಧ ಜಾತಿಯ ಹಲಸು ಸವಿಯಲು ಸಿಗುತ್ತವೆ. ಆಸಕ್ತಿ ಇದ್ದು ಬೆಳೆಯುವವರಿಗೆ ಅದಕ್ಕೆ ಬೇಕಾದ ವಿವರಗಳು ದೊರಕುತ್ತವೆ. ಬರ್ಫಿ, ಹಲ್ವಾಗಳನ್ನು ಹಿಂದೆಯೂ ಮಾಡುತ್ತಿದ್ದರು. ಈಗಿನಂತೆ ಐಸ್‌ಕ್ರೀಂ ಜಾಂ, ಪಲ್ಪ್ ತಯಾರಿಸುತ್ತಿರಲಿಲ್ಲ. ತೋಟಗಾರಿಕೆ ಇಲಾಖೆ ಹಲವು ತಳಿಗಳನ್ನು ಅಭಿವೃದ್ಧಿ ಪಡಿಸಿದೆ. ಹಳೆಯ ತಳಿಗಳಾದ ಅಂಬಲಿ, ಬಕ್ಕೆ, ನೀರುಬಕ್ಕೆ, ಚಂದ್ರಬಕ್ಕೆ ಎಂದು ಕರೆಯುತ್ತಿದ್ದ ತಳಿಗಳು ಹೊಸ ರೂಪದಲ್ಲಿ ಹೊಸಹೆಸರಿನಿಂದ ಕರೆಸಿಕೊಳ್ಳುತ್ತಲೂ ಇವೆ.
ಹಲಸು ಸರ್ವೋಪಯೋಗಿ. ಅದರ ಎಲೆ, ತೊಗಟೆ, ಮರ ಎಲ್ಲವೂ ಉಪಯುಕ್ತವೇ. ಧಾರ್ಮಿಕ ಕಾರ್ಯಗಳಲ್ಲಿ ಹಲಸಿನ ಎಲೆಯನ್ನು ಸಮಿತ್ತಾಗಿ, ಅದರ ತೊಗಟೆ ಅಥವಾ ಚಕ್ಕೆಯನ್ನು ಹೋಮಕ್ಕೆ ಬಳಸುತ್ತಾರೆ. ಬಲಿತ ಹಲಸಿನ ಮರದ ಹಲಗೆಯಿಂದ ಕಿಟಕಿ, ಬಾಗಿಲು ಹಾಗೂ ಪೀಠೋಪಕರಣಗಳನ್ನು ತಯಾರಿಸಿ ಬಳಸುತ್ತಾರೆ. ತೇಗದ (ಸಾಗವಾನಿ) ಮರದಂತೆಯೇ ಕಾಣುವ ಹಲಸಿನ ಮರದಿಂದ ತಯಾರಾಗಿರುವ ಮಂಚ, ಕುರ್ಚಿ, ಬೆಂಚು ಎಲ್ಲವೂ ಬಹಳ ಕಾಲ ಬಾಳಿಕೆ ಬರುತ್ತವೆ. ತೇಗದಷ್ಟು ದುಬಾರಿ ಅಲ್ಲದುದರಿಂದ ಹಲಸಿನ ಮರದ ಬಳಕೆ ಮಲೆನಾಡಿನ ಭಾಗದಲ್ಲಿ ಹೆಚ್ಚು. ಮನೆಯ ಹೊಸ್ತಿಲು ಬಾಗಿಲಿಗೆ ಹಲಸಿನ ಮರವೇ ಸೂಕ್ತ ಎಂದು ಅದನ್ನೇ ನಿಲ್ಲಿಸುತ್ತಾರೆ. ಅದು ಪೂಜೆಗೆ ಯೋಗ್ಯ ಎನ್ನುವ ಭಾವನೆ ಇದೆ. ನಾವು ನಮ್ಮ ಮನೆಗೆ ಎಂದು ಊರಿನಿಂದ ಸಿದ್ಧಪಡಿಸಿ ತಂದಿದ್ದ ಹಲಸಿನ ಬಾಗಿಲು, ಕಿಟಕಿಗಳನ್ನು ನೋಡಿದ ಇಲ್ಲೊಬ್ಬರು ಅದನ್ನು ದುಪ್ಪಟ್ಟು ಬೆಲೆಗೆ ಕೊಂಡುಕೊಳ್ಳಲು ನಮ್ಮನ್ನು ಕೇಳಿದ್ದರು. ʻನಮ್ಮನೆಗೆ ಎಂದು ತರಿಸಿದ್ದುʼ ಎಂದರೂ ಕೇಳಲಿಲ್ಲ. ʻನೀವು ಮತ್ತೆ ಊರಿನಿಂದ ತರಿಸಿಕೊಳ್ಳಿ. ಇದನ್ನು ನಮಗೆ ಕೊಡಿʼ ಎಂದು ದಂಬಾಲು ಬಿದ್ದಿದ್ದರು ಆತ. ಮನೆಗೆ ತೆರಿಗೆ ನಿಗದಿಗೊಳಿಸಲು ಬಂದಿದ್ದ ಮನುಷ್ಯ ಹಲಸು ಎಂದರೆ ಒಪ್ಪದೆ ತೇಗದ ಮರದ ಕಿಟಾಕಿ, ಬಾಗಿಲುಗಳು ಎಂದು ಬರೆದುಕೊಂಡ ಹೋಗಿದ್ದ.
ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಹಲಸು ಪ್ರಿಯವೇ ಅಂಗಳದಲ್ಲಿ ಹಲಸಿನಕಾಯಿ ಅಥವಾ ಹಣ್ಣನ್ನು ಕತ್ತರಿಸುತ್ತಿದ್ದರೆ ಕೊಟ್ಟಿಗೆಯಿಂದ ಬಗೆಬಗೆಯ ಸದ್ದು ಕೇಳಿಸುತ್ತದೆ. ʻಏನ್ ಕೂಗ್ತವೇನ ಯಾರಾದ್ರೂ ಒಂಚೂರು ಹಾಕಿಕ್ಕಿ ಬನ್ನಿʼ ಅಂತ ಹಿರಿಯರು ಮಕ್ಕಳಿಗೆ ಹೇಳುತ್ತಿದ್ದರು, ಯಾಕೆಂದರೆ ಕೊಟ್ಟಿಗೆ ಪಾಲು ಸಂದರಷ್ಟೆ ನಮಗೆ ನಿರಾಳ. ಹೆಚ್ಚು ಕೊಟ್ಟರೆ ಮರುದಿನದ ಹಾಲು, ಮೊಸರಿಗೆ ಹಲಸಿನ ವಾಸನೆ.
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.
ಆಹಾ , ಆಹಾ ಓದ್ತಾ ಓದ್ತಾ , ಬಾಯಲ್ಲಿ ನೀರು ಸುರೀತು. ರುಚಿಕಟ್ಟಾದ!! ಲೇಖನ ಮೇಡಂ.
ಧನ್ಯವಾದಗಳು ಸರಯು ಅವರೇ