ನನ್ನ ಹೆಂಡತಿ ಇಂಗ್ಲಿಷ್‌ನಲ್ಲಿ ಇಷ್ಟೆಲ್ಲ ಹೇಳಿದಳು. ಇದು ಆಕೆಗೆ ಅರ್ಥವಾಯಿತೋ ಇಲ್ಲವೋ ಗೊತ್ತಾಗಲಿಲ್ಲ. ನಾಯಿಮರಿಯನ್ನು ಕಂಕುಳಿನಲ್ಲಿ ಬಿಗಿಯಾಗಿ ಇಟ್ಟುಕೊಂಡು ಕತ್ತನ್ನು ಹಿಸುಕುತ್ತಾ ತಲೆಯ ಮೇಲೆ ಜೋರಾಗಿ ಮೊಟಕುತ್ತಾ ಕರೆದುಕೊಂಡು ಹೋದಳು. ನಾಯಿಮರಿ ಕೂಡ ಬೊಗಳುತ್ತಲೇ ಕೊಸರಾಡುತ್ತಿತ್ತು. ನಾವು ನಾಲ್ಕೂ ಜನ ಮಂಕಾದೆವು, ಗಾಬರಿ ಬಿದ್ದೆವು. ವಾಯು ವಿಹಾರದ, ಆಟದ ಸಂತೋಷ ಮಾಯವಾಗಿತ್ತು. ನಮ್ಮಿಂದಾಗಿ ನಾಯಿಮರಿಗೆ ಅಷ್ಟೊಂದು ಹಿಂಸೆ, ಏಟು ಬಿತ್ತಲ್ಲ ಎಂಬ ಯೋಚನೆಯಲ್ಲೇ ಪರಸ್ಪರ ಮಾತನಾಡದೆ ಮನೆ ಸೇರಿಕೊಂಡೆವು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಒಂಭತ್ತನೆಯ ಬರಹ
(1) ಬುಡಾಪೆಸ್ಟ್‌ನಲ್ಲಿ:
ಈ ಮೂರು ಪ್ರಕರಣಗಳನ್ನು ನಾನೇ ನಾನಾಗಿ ಬೇಕೆಂದು ನೋಡಿದೆನೋ, ಇಲ್ಲ ಪ್ರಾಸಂಗಿಕವಾಗಿ ಅವು ಕಂಡವೋ ನನಗೇ ಗೊತ್ತಿಲ್ಲ. ನಾನಾಗಿ ನಾನೇ ಇವನ್ನು ನೋಡಿದ್ದರೆ ಅದು ಸರಿಯೋ ತಪ್ಪೋ ಅದೂ ಕೂಡ ಗೊತ್ತಿಲ್ಲ.
ನೆದರ್‌ಲ್ಯಾಂಡ್ಸ್‌ನಲ್ಲಿ ವಾಸವಾಗಿದ್ದ ಎಂಟು ಒಂಭತ್ತು ತಿಂಗಳು ಮತ್ತು ಈ ಕಾಲಾವಧಿಯಲ್ಲೇ ಪಶ್ಚಿಮ ಮತ್ತು ಪೂರ್ವ ಯುರೋಪಿನ ಬೇರೆ ಬೇರೆ ದೇಶಗಳಿಗೆ ಪ್ರವಾಸ ಮಾಡಿದ ಸಂದರ್ಭದಲ್ಲಿ ಧ್ವನಿ ಎತ್ತರಿಸಿ ಮಾತನಾಡಿದವರೇ ಕಡಿಮೆ. ವಿಮಾನ ನಿಲ್ದಾಣಗಳಲ್ಲಿ ನಮ್ಮ ಮುಖ, ಬಣ್ಣ ನೋಡಿ ಮುಖ ಕಿವುಚಿಕೊಂಡವರಿದ್ದಾರೆ, ಗೊಣಗಿದವರಿದ್ದಾರೆ, ಪಿರಿಪಿರಿ ಮಾಡಿದವರಿದ್ದಾರೆ. ಇದು ಬಿಟ್ಟರೆ ನೆರೆಹೊರೆಯಲ್ಲಾಗಲೀ ಸಾರ್ವಜನಿಕರು ಸೇರುವ ಸ್ಥಳಗಳಲ್ಲಾಗಲೀ ನಾನು ಯಾವ ರೀತಿಯ ಹಿಂಸೆ ಗಲಾಟೆಯನ್ನು ಕಂಡಿಲ್ಲ. ಹಾಗಾಗಿ, ಈ ಮೂರು ಪ್ರಕರಣಗಳನ್ನು ದಾಖಲಿಸಬೇಕೆನ್ನಿಸಿದೆ. ಭಾರತದಲ್ಲೇ ಇದ್ದಾಗ ಇಂತಹ ಪ್ರಕರಣಗಳು ನಡೆದಿದ್ದರೆ ನಾನು ಗಮನಿಸುತ್ತಿದ್ದೆನೇ, ಗಮನಿಸಿದ್ದರೆ ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದೆ ಎಂಬುದು ನನಗೂ ಗೊತ್ತಿಲ್ಲ.
ಮೊದಲನೆಯ ಪ್ರಕರಣ, ಬುಡಾಪೆಸ್ಟ್ ನಗರಕ್ಕೆ ಸಂಬಂಧಿಸಿದ್ದು. 5 ದಿನಗಳ ಹಂಗೇರಿ ಪ್ರವಾಸವನ್ನು ಮುಗಿಸಿ ಮಾರನೆಯ ದಿನ ಬೆಳಿಗ್ಗೆ ಆಮ್‌ಸ್ಟರ್‌ಡ್ಯಾಂಗೆ ಹೊರಡಬೇಕಿತ್ತು. ಹೋಟೆಲಿನ ಸ್ವಾಗತ ಕಛೇರಿಯಲ್ಲಿ ಹೇಳಿ ಬೆಳಿಗ್ಗೆ ಏಳೂ ಮುಕ್ಕಾಲಿಗೆ ಟ್ಯಾಕ್ಸಿ ಕರೆಸಿದ್ದಾಯಿತು. ನಾನು ನನ್ನ ಹೆಂಡತಿ ಒಂದು ಕೋಣೆಯಲ್ಲಿ. ಮಗಳು, ಅಳಿಯ, ಮೊಮ್ಮಕ್ಕಳು ಇನ್ನೊಂದು ಕೋಣೆಯಲ್ಲಿ. ಹಿರಿಯರಾದ (?) ನಾವೆಲ್ಲ ಬೆಳಿಗ್ಗೆ ಆರು ಘಂಟೆಗೇ ಎದ್ದು ಸ್ನಾನ ಮಾಡಿ, ತಿಂಡಿ ತಿಂದು ರೆಡಿಯಾದೆವು. ಮೊಮ್ಮಕ್ಕಳು ಏಳಬೇಕಲ್ಲ. ಎದ್ದರೂ ನಿಮಿಷ ನಿಮಿಷಕ್ಕೆ ಅವರ ಮನಸ್ಸಿನ ಲಹರಿ, ಆದ್ಯತೆ ಬದಲಾಗುತ್ತಿರುತ್ತದೆ. ಇಬ್ಬರು ಮೊಮ್ಮಕ್ಕಳನ್ನು ಸಂಭಾಳಿಸಿ, ತಿಂಡಿ ತಿನ್ನಿಸಿ ರೆಡಿ ಮಾಡಿ ಹೊರಟೆವು. ನಿಗದಿತ ಸಮಯಕ್ಕೇ ಹೊರಟೆವು. ಕೆಲವು ನಿಮಿಷಗಳು ಆಕಡೆ, ಈ ಕಡೆಯಾಗಿತ್ತು. ಟ್ಯಾಕ್ಸಿ ಸ್ವಲ್ಪ ದೂರ ಹೋಗಿದೆ. ಚಾಲಕ ಕೆಂಪು ಬಣ್ಣದ ದಪ್ಪನೆಯ ಆಸಾಮಿ. ಮುಖ ಸಿಂಡರಿಸಿಕೊಂಡು ಗೊಣಗಾಡಲು ಶುರು ಮಾಡಿದ. ನಮಗೇನು ಹಂಗೇರಿಯನ್ ಭಾಷೆ ಅರ್ಥವಾಗುತ್ತಿರಲಿಲ್ಲ. ನಾವು ತಡವಾಗಿ ಹೊರಟೆವು ಎಂಬುದು ಅವನ ಗೊಣಗಾಟದ ಸಾರಾಂಶ. ಚಾಲನೆಯಲ್ಲಿ ಸ್ವಲ್ಪ ಗಡಿಬಿಡಿ ಮಾಡಿದ. ಗೇರ್ ಬದಲಿಸುವಾಗ ಕಿರ್‌ಕಿರ್ ಶಬ್ದ ಮಾಡಿದ. ಕುಳಿತಲ್ಲೇ ಹಾರಾಡುವ ಪ್ರಯತ್ನ ಮಾಡಿದ. ನಾನು ಅವನ ಪಕ್ಕದಲ್ಲೇ ಕುಳಿತಿದ್ದೆ. ಮುಖವನ್ನು ಗಮನಿಸಿದೆ. ವ್ಯಗ್ರವಾಗಿತ್ತು. ಸಣ್ಣ ಧ್ವನಿಯಲ್ಲಿ ಕಿಟಕಿಟ ಮಾಡುತ್ತಿದ್ದ. ಗೊಣಗುವುದು, ಲೊಚಗುಟ್ಟುವುದು, ಸ್ಟೀರಿಂಗ್ ವೀಲ್ ಗುದ್ದುವುದು ನಡೆಯುತ್ತಲೇ ಇತ್ತು.
ನಮ್ಮ ಅಳಿಯ ಅವಿನಾಶ್ ಇಂಗ್ಲಿಷ್-ಡಚ್ ಭಾಷೆಯಲ್ಲಿ ಪ್ರತಿಭಟಿಸಿದರು. ನಾವು ತಡವಾಗಿ ಹೊರಡಲಿಲ್ಲ. ನೀನು ಭಾವಿಸುವಷ್ಟು ತಡವಾಗಿ ಹೊರಡಲಿಲ್ಲ ಎಂದು ರೇಗಿದರು. ಇಲ್ಲ ನೀವು ತಡವಾಗಿ ಹೊರಟಿರಿ ಎಂದು ಅವನು ಕಿರುಚಾಡಿದ. ಇದರಿಂದ ನನ್ನ ಮುಂದಿನ ಗಿರಾಕಿಗೆ ತೊಂದರೆಯಾಗಿದೆ. ನನ್ನ ವ್ಯಾಪಾರ ಹಾಳಾಯಿತು. ಮುಂದಿನ ಗಿರಾಕಿ ನನಗೆ ಕಾಯುವುದಿಲ್ಲ. ಬೇರೆಯವರ ಜೊತೆ ಹೋಗುತ್ತಾನೆ. ನನ್ನ ವೃತ್ತಿಖ್ಯಾತಿ ಹಾಳಾಯಿತು ಎಂದು ಕೂಗಾಡಿದ. ನಾವು ಕುಳಿತಿದ್ದ ಕಾರಿನೊಳಗೆ ಶಾಖ ಬೆಂಕಿ ಎಲ್ಲವೂ ಜಾಸ್ತಿಯಾಯಿತು. ಸ್ಟೀರಿಂಗ್ ವೀಲ್ ಗುದ್ದುವುದು ಇನ್ನೂ ಜೋರಾಯಿತು. ಈ ಸಿಟ್ಟಿನಲ್ಲಿ ಕಾರು ಯಾರಿಗಾದರೂ ಗುದ್ದಿದರೆ ಏನು ಮಾಡುವುದು ಎಂದು ನನಗೆ ಭಯ, ಆತಂಕ ಶುರುವಾಯಿತು. ನಾನು ಅವನನ್ನೇ ಗಮನಿಸುತ್ತಿದ್ದೆ. ಅವನ ಬಲಗಡೆ ಒಂದು ಪುಟ್ಟ ನೋಟ್ ಬುಕ್ ಇತ್ತು. ಅದರಲ್ಲಿ ಆವತ್ತು ಅವನಿಗೆ ನಿಗದಿಯಾಗಿದ್ದ ಗಿರಾಕಿಗಳು, ದೂರವಾಣಿ ಸಂಖ್ಯೆ, ಎಷ್ಟು ಹೊತ್ತಿಗೆ ಯಾರ ಬಳಿ ಹೋಗಬೇಕು ಎಲ್ಲವನ್ನೂ ಪಟ್ಟಿ ಮಾಡಿಕೊಂಡಿದ್ದ. ನೋಡಿದರೆ, ಬೆಳಿಗ್ಗೆ ನಾಲ್ಕು ಘಂಟೆಯಿಂದ ಅವನ ಕೆಲಸ ಶುರುವಾಗಿದೆ. ಮಧ್ಯಾಹ್ನ ಮೂರು ಘಂಟೆಯ ತನಕ ಅವನ ಸೇವೆಯನ್ನು ಗಿರಾಕಿಗಳು ಗೊತ್ತುಮಾಡಿಕೊಂಡಿದ್ದಾರೆ. ಸ್ಥೂಲ ದೇಹಿ. ಇಷ್ಟೊಂದು ಸಿಡುಕು ಬೇರೆ. ಹೇಗೆ ಇಷ್ಟೊಂದು ಕೆಲಸ ನಿರ್ವಹಿಸುತ್ತಾನೋ? ಇಷ್ಟೊಂದು ಸಮಯ ಬಿಡುವಿಲ್ಲದೆ ಕೆಲಸ ಮಾಡಲು ಏನು ಜರೂರಿದೆಯೋ? ಎಂದು ನಾನು ಯೋಚಿಸುತ್ತಿದ್ದೆ. ಏನೇ ಇರಲಿ, ಮನುಷ್ಯನಿಗೆ ಸೌಜನ್ಯ, ತಾಳ್ಮೆ ಕಡಿಮೆ ಅನಿಸಿತು. ಪ್ರವಾಸಿಗರ ಬಗ್ಗೆ ಗೌರವವಿಲ್ಲವೆನಿಸಿತು.
ಸ್ವಲ್ಪ ಸಮಯದ ನಂತರ ಏನೂ ಮಾತನಾಡದೆ ಸುಮ್ಮನೆ ಕಾರು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದ ಮುಖದಲ್ಲಿ ಸೆಡವು ಕೂಡ ಕಡಿಮೆಯಾಯಿತು. ಅವಿನಾಶ್ ಕೂಡ ಮಾತನಾಡುವುದನ್ನು ನಿಲ್ಲಿಸಿಬಿಟ್ಟರು. ಆದರೂ ಕಾರಿನೊಳಗಡೆ ಬಿಗು ವಾತಾವರಣ ಮುಂದುವರೆದಿತ್ತು. ಸದ್ಯ, ಮಹಾನುಭಾವ ಯಾವ ರೀತಿಯ ತೊಂದರೆಯನ್ನೂ ಮಾಡದೆ ವಿಮಾನ ನಿಲ್ದಾಣವನ್ನು ತಲುಪಿಸಿದರೆ ಸಾಕು ಎಂದು ಸುಮ್ಮನಾದೆ. ಬಿಗುವಿನ ವಾತಾವರಣದಿಂದಾಗಿ ನಾವೂ ಕೂಡ ಯಾರೂ ಪರಸ್ಪರ ಮಾತನಾಡುತ್ತಿರಲಿಲ್ಲ. ಮಕ್ಕಳು ಎಂದಿನಂತೆ ಗಲಾಟೆ ಮಾಡಲು ಪ್ರಯತ್ನಿಸಿ ಗದರಿಸಿಕೊಂಡವು.
ಸರಿ, ಇನ್ನು ಕಾರಿನಿಂದ ಇಳಿಯುವಾಗ ಇನ್ನೊಂದು ರಾಮಾಯಣವಾಗುತ್ತದೆ, ವಾದ-ವಿವಾದ ನಡೆಯುತ್ತದೆ. ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಲೆಕ್ಕಾಚಾರ ಹಾಕುತ್ತಾ ಕುಳಿತಿದ್ದೆ.
ಕಾರು ನಿಂತಾಗ ಚಾಲಕ ಬಿಗು ಕಳೆದುಕೊಳ್ಳದಿದ್ದರೂ ಮಾತಾಡಲಿಲ್ಲ. ಬದಲಿಗೆ ಎಲ್ಲ ಸೂಟ್‌ಕೇಸ್‌ಗಳನ್ನು ಸೌಜನ್ಯದಿಂದಲೇ ಇಳಿಸಿಕೊಟ್ಟ. ಮುಖದಲ್ಲಿ ವ್ಯಗ್ರತೆಯನ್ನು ಕಡಿಮೆ ಮಾಡಿಕೊಳ್ಳದೆ, ನಮಗೆಲ್ಲ ಶುಭ ಪ್ರಯಾಣ ಕೋರಿದ. ಟಾಟಾ ಹೇಳಿದ. ಕೈ ಬೀಸಿನಲ್ಲಿ ಹೃತ್ಪೂರ್ವಕತೆಯೇನು ಕಾಣಲಿಲ್ಲ.
*****
(2) ಟೆನಿಸ್ ಕೋರ್ಟ್‌ನಲ್ಲಿ:
ಕ್ರೀಡಾ ಚಟುವಟಿಕೆಗಳೂ ಸೇರಿದಂತೆ ಇಲ್ಲಿ ಎಲ್ಲ ಹವ್ಯಾಸಗಳೂ ವೃತ್ತಿಪರವೇ! ಹವ್ಯಾಸಕ್ಕಾಗಿ, ಖುಷಿಗಾಗಿ, ಸಂತೋಷಕ್ಕಾಗಿ, ಲಹರಿಗಾಗಿ ಯಾವುದೂ ಇಲ್ಲ! ವೃತ್ತಿಪರತೆಯಿಂದ ಬರುವ ಸಾಧನೆ, ಸಂತೋಷದ ಕಡೆಗೇ ಇಲ್ಲಿ ಗೌರವ, ಆದ್ಯತೆ, ಸಂಪನ್ಮೂಲಗಳ-ಸಮಯದ ಬಳಕೆ.
ಒಂದು ಅಥವಾ ಎರಡು ಆಟಗಳನ್ನು ಮಕ್ಕಳಿಗೆ ಗಂಭೀರವಾಗಿ ಕಲಿಸುವ ಪ್ರಯತ್ನವನ್ನು ಚಿಕ್ಕಂದಿನಿಂದಲೇ ಮಾಡಲಾಗುತ್ತದೆ. ಶಾಲೆಯ ಆವರಣದೊಳಗೇ ವ್ಯಾಯಾಮಶಾಲೆ, ಬ್ಯಾಸ್ಕೆಟ್ ಬಾಲ್, ಫುಟ್ ಬಾಲ್, ಇಂತಹ ಆಟಗಳನ್ನು ಕಲಿಯಲು, ಆಡಲು ಅವಕಾಶವಿದೆ. ಟೆನಿಸ್ ಅಂತಹ ಆಟವನ್ನು ವಿಶೇಷ ತರಬೇತಿ ಪಡೆದು ಕ್ಲಬ್‌ಗಳಲ್ಲೇ ಕಲಿಯಬೇಕಾಗುತ್ತದೆ.
ನನ್ನ ಮೊಮ್ಮಗ ಕೂಡ ಇಲ್ಲಿಗೆ ಬಂದಾಗಿನಿಂದ ವಾರಕ್ಕೆ ಒಂದು ದಿನ ಟೆನಿಸ್ ತರಗತಿಗೆ ಹೋಗುತ್ತಿದ್ದ. ನಗರದಲ್ಲೇ ಪ್ರಮುಖವಾದ ಕ್ಲಬ್ ಅದು. ಟೆನಿಸ್ ಅಲ್ಲದೆ, ಬ್ಯಾಡ್ಮಿಂಟನ್, squash ಕೂಡ ಕಲಿಯಲು ಅವಕಾಶವಿತ್ತು. ಬೇಸಿಗೆಯಲ್ಲಿ (ವರ್ಷಕ್ಕೆ ಮೂರು ಮೂರೂವರೆ ತಿಂಗಳು) ಹೊರ ಮೈದಾನದಲ್ಲಿ ತರಬೇತಿ ತರಗತಿಗಳು ನಡೆಯುತ್ತವೆ. ಚಳಿಗಾಲ, ಮಳೆಗಾಲ, ಹಿಮಗಾಲ (ಸುಮಾರು ಎಂಟು ಒಂಭತ್ತು ತಿಂಗಳು) ಒಳಾಂಗಣದಲ್ಲಿ ಕಲಿಸುತ್ತಾರೆ. ನನ್ನ ಅಂದಾಜಿನ ಪ್ರಕಾರ ಒಂದು 30-35 ಕೋರ್ಟ್‌ಗಳಿವೆ. ಜೊತೆಗೆ ಕ್ಯಾಂಟೀನ್, ಬಾರ್ ಮತ್ತು ಕ್ರೀಡೋಪಕರಣಗಳನ್ನು ಮಾರುವ ಅಂಗಡಿ ಕೂಡ.
ತರಬೇತಿಯನ್ನು ಶಿಸ್ತಿನಿಂದ ನೀಡುತ್ತಾರೆ. ವೃತ್ತಿಪರವಾಗಿ ಕಲಿಸುತ್ತಾರೆ. ಹಂತ ಹಂತವಾಗಿ ಹೇಳಿಕೊಡುತ್ತಾರೆ. ಜೊತೆಗೆ ಸ್ವಲ್ಪ ದೈಹಿಕ ವ್ಯಾಯಾಮ ಕೂಡ. ತರಬೇತಿ ತರಗತಿಗಳನ್ನು ನೋಡುವುದೇ ಒಂದು ಚಂದ. ಚಾಂಪಿಯನ್‌ಗಳ ಆಟವನ್ನು ನಾವು ಮೆಚ್ಚುತ್ತೇವೆ. ಆದರೆ ಅದರ ಹಿಂದೆ ಇರುವ ಹತ್ತಾರು ವರ್ಷಗಳ ತರಬೇತಿ, ಶ್ರಮ, ಪ್ರಯೋಗಶೀಲತೆಗಳ ಬಗ್ಗೆ ನಮಗೇನೂ ಗೊತ್ತೇ ಇರುವುದಿಲ್ಲ. ಕೈ ನೀಡುವುದು ಹೇಗೆ, ಬಳಕಿಸುವುದು ಹೇಗೆ, ಕಾಲು ಚಾಚುವುದು ಹೇಗೆ, ಕೂರುವುದು, ಮಂಡಿ ಬಗ್ಗಿಸುವುದು, ನಿಲ್ಲುವುದು, ಹಿಮ್ಮಡಿಯ ಮೇಲೆ ನಿಲ್ಲುವುದು ಹೇಗೆ, ಅಂಗೈ, ಮುಂಗೈ, ಬೆರಳು, ತೋಳು, ಭುಜ, ಮಣಿಕಟ್ಟು ಇವನ್ನೆಲ್ಲ ಬಳಸುವುದು ಹೇಗೆ, ಕೊನೆಗೆ ರಾಕೆಟ್ ಮತ್ತು ಚೆಂಡನ್ನು ಹೇಗೆ ಬಳಸಬೇಕು, ಪ್ರಯೋಗಿಸಬೇಕು ಎಂಬುದನ್ನು ಹಂತ ಹಂತವಾಗಿ, ವಿವರ ವಿವರವಾಗಿ, ಸೂಕ್ಷ್ಮವಾಗಿ ಪ್ರತಿಯೊಂದು ಮಗುವಿನ ಒಲವು, ಸಾಮರ್ಥ್ಯಗಳನ್ನು ಪರಿಗಣಿಸಿ ಪ್ರೀತಿಯಿಂದ ಹೇಳಿಕೊಡುತ್ತಾರೆ.
ಮಕ್ಕಳು ಒಬ್ಬ ಶಿಕ್ಷಕನಿಗೇ ಹೊಂದಿಕೊಳ್ಳುತ್ತವೆ, ಆತುಕೊಳ್ಳುತ್ತವೆ. ಹಾಗಾಗಿ ನಾಲ್ಕು ವರ್ಷಗಳಿಂದ ನನ್ನ ಮೊಮ್ಮಗ ಒಬ್ಬನೇ ಶಿಕ್ಷಕನ ಹತ್ತಿರ ಕಲಿಯುತ್ತಿದ್ದಾನೆ. ಶಿಕ್ಷಕನನ್ನು ಬದಲಾಯಿಸುವುದಾದರೆ ನಾನು ಕಲಿಯಲು ಹೋಗುವುದೇ ಇಲ್ಲ ಎಂದು ಹಠ ಮಾಡುತ್ತಾನೆ.
ಶಿಕ್ಷಕ, ತುಂಬಾ ಗಂಭೀರ ಸ್ವಭಾವದವನು. ಸುಮಾರು ಆರೂ ಕಾಲು ಅಡಿ ಎತ್ತರ. ದೇಹದಲ್ಲಿ ಬೊಜ್ಜೆಂಬುದು ಇಲ್ಲವೇ ಇಲ್ಲ. ಮಿಲಿಟರಿ ಹೇರ್ ಕಟ್, ನುಣುಪಾದ ಮಿಂಚುವ ಗಡ್ಡ. ಒಂದು ಕಾಲದಲ್ಲಿ ಒಳ್ಳೆಯ ಆಟಗಾರನಿರಬೇಕು. ಪ್ರತಿಯೊಂದು ಮಗುವೂ ಕಲಿಯುತ್ತಿದ್ದ ರೀತಿಯಿಂದಲೇ ಅವನಿಗೆ ಸಂತೋಷ, ಸಂಭ್ರಮ. ಮಕ್ಕಳ ಕಿರಿಕಿರಿಯನ್ನು ನಗುತ್ತಲೇ ಸಹಿಸುತ್ತಿದ್ದ. ನಿನ್ನ ತರಬೇತಿ ನೋಡಲೆಂದೇ ನಾನು ಭಾರತದಿಂದ ಪದೇ ಪದೇ ಬರುತ್ತಿದ್ದೇನೆ ಎಂದು ರೇಗಿಸುತ್ತಿದ್ದೆ. ಗೊಗ್ಗರು ಧ್ವನಿಯಲ್ಲಿ ನಗುತ್ತಾ ಡಚ್ ಭಾಷೆಯಲ್ಲಿ ಏನೋ ಉತ್ತರಿಸುತ್ತಿದ್ದ. ಅವನ ಗಮನವೆಲ್ಲ ತರಬೇತಿ ಕೊಡುವ ಕಡೆಗೇ ಇತ್ತೇ ಹೊರತು ನನ್ನಂಥವನ ಪ್ರಾಸಂಗಿಕ ಮಾತುಗಳ ಕಡೆಗಲ್ಲ.
ಅದೊಂದು ದಿವಸ ಇನ್ನೂ ಕೆಟ್ಟ ಮಧ್ಯಾಹ್ನ. ಭಾರತದ ಇನ್ನೊಂದು ಮಗುವೊಂದು ಕೂಡ ಇಲ್ಲೇ ತರಬೇತಿಗೆ ಬರುತ್ತಿತ್ತು. ಸಾಕಷ್ಟು ತಡವಾಗಿ ಬಂದ. ರಾಕೆಟ್ ಆ ಕಡೆ, ಈ ಕಡೆ ಬೀಸಿಕೊಂಡು ಉಡಾಫೆಯಾಗಿ ಬರುತ್ತಿದ್ದ. ತಡವಾಗಿ ಬಂದದ್ದಕ್ಕೆ ಬೇಸರವೂ ಇಲ್ಲ, ಭಯವೂ ಇಲ್ಲ. ಹುಡುಗಾಟದ ಲಹರಿಯಲ್ಲಿದ್ದ. ಶಿಕ್ಷಕ ನೀಡುತ್ತಿದ್ದ ಯಾವ ಸೂಚನೆಯನ್ನೂ ಗಮನಿಸುತ್ತಿರಲಿಲ್ಲ. ರಾಕೆಟ್ ಹಿಡಿಯುವುದರಲ್ಲಿ, ಗುರಿ ಇಡುವುದರಲ್ಲಿ, ಚೆಂಡನ್ನು ಆಯುವಲ್ಲಿ ಮತ್ತೆ ಮತ್ತೆ ತಪ್ಪುಗಳಾಗುತ್ತಿದ್ದವು. ಮಗುವಿಗೆ ಏಕಾಗ್ರತೆಯಿರಲಿಲ್ಲ. ಆಂಗಿಕ ಭಾಷೆಯಲ್ಲೂ ಯಾವ ರೀತಿಯ ಶಿಸ್ತೂ ಕಂಡುಬರಲಿಲ್ಲ. ಶಿಕ್ಷಕ ತಿದ್ದಿದಾಗಲೂ ತಿದ್ದಿಕೊಳ್ಳುತ್ತಿರಲಿಲ್ಲ, ಉದಾಸೀನವಾಗಿರುತ್ತಿದ್ದ.
ಒಂದು ತರಬೇತಿ ತರಗತಿಯಲ್ಲಿ ನಾಲ್ಕು ಮಕ್ಕಳಿರುತ್ತವೆ. ಇವನಿಂದ ಉಳಿದ ಮಕ್ಕಳ ತರಬೇತಿಗೂ ಅಡ್ಡಿ ಬರುತ್ತಿತ್ತು. ಅವರ ಏಕಾಗ್ರತೆ, ಗಾಂಭೀರ್ಯಕ್ಕೆ ಕೂಡ ಭಂಗ ಬರುತ್ತಿತ್ತು. ಒಂದಿಬ್ಬರು ಮಕ್ಕಳು ಅವನನ್ನೇ ಅನುಕರಿಸುವಂತೆ ಕಂಡಿತು. ಇದನ್ನೆಲ್ಲ ನೋಡುತ್ತಿದ್ದ ನನಗೇ ಕಿರಿಕಿರಿಯಾಯಿತು. ಎಲ್ಲರ ಸಮಯವನ್ನೂ ಹುಡುಗ ಪೋಲು ಮಾಡುತ್ತಿದ್ದಾನೆ ಅನಿಸಿತು.
ಆಜಾನುಭಾಹು ಶಿಕ್ಷಕ ಸಿಂಹದಂತೆ ಕೆರಳಿಬಿಟ್ಟ. ತನ್ನ ಕೈಯಲ್ಲಿದ್ದ ರಾಕೆಟ್ ಮತ್ತು ಚೆಂಡನ್ನು ಬಿಸಾಡಿದ. ಕೆಳಗೆ ಬಿದ್ದಿದ್ದ ಚೆಂಡುಗಳನ್ನು ತೆಗೆದುಕೊಂಡು ಗೊತ್ತು ಗುರಿಯಿಲ್ಲದೆ ಎಸೆದಾಡಿದ. ಕಾಲಿನಿಂದ ನೆಲವನ್ನು ಗಟ್ಟಿಯಾಗಿ ಒದ್ದ. ಮುಷ್ಠಿ ಕಟ್ಟಿ ಗಾಳಿಯಲ್ಲಿ ಪ್ರಹಾರ ಮಾಡಿದ.
ಶಿಕ್ಷಕನಿಗೆ ಇಂಗ್ಲಿಷ್ ಅಷ್ಟೊಂದು ಚೆನ್ನಾಗಿ ಬರುತ್ತಿತ್ತೆಂದು ನನಗೆ ಗೊತ್ತೇ ಇರಲಿಲ್ಲ. ಒಂದಿಪ್ಪತ್ತು ನಿಮಿಷ ತೀವ್ರವಾಗಿ ವಾಕ್ ಪ್ರಹಾರ ಮಾಡಿದ. ಎಲ್ಲರಿಗೂ ನೀಡಬೇಕಾದ ಸಮಯ ಗಮನವನ್ನು ನೀನೇ ಕಬಳಿಸುತ್ತಿರುವೆ. ನೀನು ತರಬೇತಿಗೆ ಬರುತ್ತಿಲ್ಲ ಅಂತ ಯಾರು ಅಳುತ್ತಿದ್ದಾರೆ. ನನ್ನ ಜೀವನದಲ್ಲಿ ನಿನ್ನಂತಹ ಬಾಲಕನನ್ನು ನಾನು ನೋಡೇ ಇಲ್ಲ. ನಿನ್ನಂತಹ ಬೇಜವಾಬ್ದಾರಿ ಮಕ್ಕಳನ್ನು ತಂದೆ-ತಾಯಿ ಏಕೆ ತರಬೇತಿಗೆ ಕಳಿಸುತ್ತಾರೆ?
ಹೀಗೆ ಹೇಳಿದ್ದನ್ನೇ ಹೇಳುತ್ತಾ ಗದಾ ಪ್ರಹಾರ, ವಾಕ್ ಪ್ರಹಾರ. ಕೋರ್ಟ್‌ಗೆ ರಣಾಂಗಣದ ಕಳೆ. ಕಣ್ಣುಗಳು ಕೆಂಗಣ್ಣಾದವು. ಧ್ವನಿ ಕೂಡ ಕರ್ಕಶವಾಗುತ್ತಿತ್ತು.
ತೊಂದರೆ ಕೊಡುತ್ತಿದ್ದ ಮಗು ಇದನ್ನೆಲ್ಲ ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತದೆ. ಮೊದಲು ಗಲಿಬಿಲಿಗೊಂಡ. ನಂತರ ಭಯಭೀತನಾದ. ಮುಖವೆಲ್ಲ ಕಪ್ಪಿಟ್ಟಿತು. ಏನು ಮಾಡಲೂ ತಿಳಿಯದೆ ಪೆದ್ದು ಪೆದ್ದಾಗಿ ಎಲ್ಲರನ್ನೂ ನೋಡುತ್ತಾ ಮುಖ ಕೆಳಗೆ ಹಾಕಿ ನಿಂತ. ಉಳಿದ ಮಕ್ಕಳು ಕೂಡ ಹೆದರಿದರು. ಶಿಕ್ಷಕನನ್ನು ಬಾಲಕನನ್ನು ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ನೋಡುತ್ತಾ ಮೂಕವಾಗಿ ನಿಂತುಬಿಟ್ಟರು.
ನನಗೂ ಇದು ಹೊಸದು. ಒಂದು ಮಗುವನ್ನು ಹೀಗೆ ಸತತವಾಗಿ ಇಪ್ಪತ್ತು ನಿಮಿಷ ಹೀನಾಮಾನವಾಗಿ ಬೈಯ್ಯುವುದನ್ನು ನಾನು ನೋಡಿರಲಿಲ್ಲ. ಮಕ್ಕಳ ತರಬೇತಿ ನೋಡಲೆಂದು ಕೋರ್ಟ್ ಹತ್ತಿರ ಬರುತ್ತಿದ್ದವನು ಸಾಮಾನ್ಯವಾಗಿ ನಾನೊಬ್ಬನೇ. ಸುಮ್ಮನೆ ಅಸಹಾಯಕನಾಗಿ ನಿಂತಿದ್ದೆ.
ಶಿಕ್ಷಕನೇ ದಣಿದನೆಂದು ಕಾಣುತ್ತದೆ. ಮಾತು ನಿಲ್ಲಿಸಿದ. “ಇಲ್ಲಿಗೆ ಕ್ಲಾಸ್ ಮುಗಿಯಿತು” ಹಾಗೆಂದು ರಣಘೋಷಣೆ ಮಾಡಿ ದುರ್ದಾನ ತೆಗೆದುಕೊಂಡವನಂತೆ ಬಿರುಗಾಳಿಯೋಪಾದಿಯಲ್ಲಿ ಕೋರ್ಟ್‌ನಿಂದ ಹೊರಗಡೆ ನಡೆದ.
ಮಂಕಾಗಿದ್ದ ಬಾಲಕನೂ ಸೇರಿದಂತೆ ಎಲ್ಲ ಮಕ್ಕಳೂ ಕೆಲವೇ ನಿಮಿಷಗಳಲ್ಲಿ ಎಂದಿನಂತಾದರು. ಏನೂ ನಡೆದೇ ಇಲ್ಲವೆಂಬಂತೆ ಅವರವರ ಚಟುವಟಿಕೆಗಳಲ್ಲಿ ತೊಡಗಿದರು. ಸ್ವಲ್ಪ ಸಮಯದ ನಂತರ ತಮ್ಮ ತಮ್ಮ ರಾಕೆಟ್, ನೀರಿನ ಬಾಟಲ್, ಟವೆಲ್, ಜಾಕೆಟ್ ತೆಗೆದುಕೊಂದು ಹೊರಟರು.
ನಾನು ನನ್ನ ಮೊಮ್ಮಗ ಧ್ರುವ, ಕಾರು ನಿಲ್ಲಿಸಿದ್ದ ಸ್ಥಳದ ಕಡೆ ಹೊರಟೆವು. ಅಲ್ಲಿ ನಮ್ಮ ಅಳಿಯ ಮೊಮ್ಮಗಳನ್ನು ನೋಡಿಕೊಳ್ಳುತ್ತಾ, ದೂರವಾಣಿಯಲ್ಲಿ ಸಂಭಾಷಿಸುತ್ತಾ ಆಫೀಸು ಕೆಲಸದಲ್ಲೂ ತೊಡಗಿಕೊಂಡಿರುತ್ತಿದ್ದರು.
ಅಲ್ಲಿಗೆ ತಲುಪುವ ಮುನ್ನ ನಾನು ಬಾಲಕನ ಬಗ್ಗೆ ನನ್ನ ಮೊಮ್ಮಗನ ಹತ್ತಿರ ವಿಚಾರಿಸಿದೆ. ಬಾಲಕ ಮೊದಲಿನಿಂದಲೂ ಅಶಿಸ್ತಿನವನೇ. ಈವತ್ತು ಬೇಜವಾಬ್ದಾರಿತನ ಕೂಡ ಸೇರಿಕೊಂಡಿತು. ಮಾಸ್ಟರ್ ಇಷ್ಟು ಸಿಟ್ಟಾದುದನ್ನು ನಾನು ಈ ನಾಲ್ಕು ವರ್ಷಗಳಲ್ಲಿ ನೋಡೇ ಇಲ್ಲ ಎಂದು ಹೇಳಿದ.
ಆ ಬಾಲಕನ ತಂದೆ ಕೂಡ ಇದೇ ಸಮಯದಲ್ಲಿ ಸ್ವಲ್ಪ ದೂರದಲ್ಲಿದ್ದ ಇನ್ನೊಂದು ಕೋರ್ಟ್‌ನಲ್ಲಿ ಟೆನಿಸ್ ಆಡುತ್ತಿದ್ದರು. ನಾನು ನಡೆದದ್ದನ್ನೆಲ್ಲ ಅವರ ಬಳಿ ಮಾತನಾಡಲೇ ಎಂದು ಮೊಮ್ಮಗನನ್ನು ಕೇಳಿದೆ. ನಾನು ಅವರನ್ನು ಭೇಟಿ ಮಾಡಬಾರದೆಂದು, ಅವರ ಮಗನ ಬಗ್ಗೆ ಏನನ್ನೂ ಹೇಳಬಾರದೆಂದು, ಮೇಲೆ ಬಿದ್ದು ಪರಿಚಯ ಮಾಡಿಕೊಳ್ಳಬಾರದೆಂದು, ಇದೆಲ್ಲ ಇಲ್ಲಿಯ ಶಿಷ್ಟಾಚಾರವಲ್ಲವೆಂದೂ ಹೇಳಿದ. ಮನೆ ತಲುಪಿದ ಮೇಲೆ ಆವತ್ತು ರಾತ್ರಿ, ಸಂಜೆಯೆಲ್ಲಾ ಇದೇ ಚರ್ಚೆ.
ಮುಂದಿನ ವಾರ ನಾನು ಮೊಮ್ಮಗನ ಜೊತೆ ಕೋರ್ಟ್‌ಗೆ ಹೋಗುವ ಪ್ರಸಂಗವೇ ಬರಲಿಲ್ಲ. ಬೇಸಿಗೆ ರಜೆಯ ಕಾಲಾವಧಿಯ ತರಬೇತಿ ತರಗತಿಗಳು ಕೊನೆಯಾಗಿ, ಅಕ್ಟೋಬರ್‌ನಲ್ಲಿ ಮತ್ತೆ ತರಬೇತಿ ಶುರುವಾಗುವುದೆಂದು ತಿಳಿಯಿತು. ಸೆಪ್ಟೆಂಬರ್ ಕೊನೆಯ ವಾರದಲ್ಲಿ ನಾವು ಭಾರತಕ್ಕೆ ವಾಪಸ್ ಹೊರಟಿದ್ದೆವು. ಹಾಗಾಗಿ, ಮುಂದೇನಾಯಿತು ಎಂಬುದನ್ನು ಮೊಮ್ಮಗನಿಂದಲೇ ತಿಳಿಯಬೇಕು.
*****
(3) ನಾಯಿಮರಿಗೆ ಚಚ್ಚಿದರು:
ಬೆಂಗಳೂರಿನ ನಮ್ಮ ಮನೆಯಲ್ಲಿ ಒಂದು ನಾಯಿಯಿದೆ. ಅದೇನು ನಾವು ಕೊಂಡು ತಂದು ಸಾಕಿದ ನಾಯಿಯಲ್ಲ. ಒಂದು ದಿನ ಹಸಿದುಕೊಂಡು ಬಂತು. ನನ್ನ ಹೆಂಡತಿ ಊಟ ಹಾಕಿದಳು. ಆವತ್ತಿನಿಂದ ನಮ್ಮ ಮನೆಯಲ್ಲೇ ಉಳಿಯಿತು. ಈ ನಾಯಿಯ ಸಖ-ಸಖಿಯರು ಕೂಡ ಆಗಾಗ್ಗೆ ಬಂದು ಕಾಂಪೋಂಡಿನೊಳಗೆ ಸಮ್ಮೇಳನ ನಡೆಸುತ್ತಾ ಕಾಂಪೋಂಡಿನಲ್ಲಿ ರಾಡಿ ಎಬ್ಬಿಸುವುದುಂಟು. ಆಗೆಲ್ಲ ಸಿಟ್ಟು ಬಂದು, ನಮ್ಮ ನಾಯಿಯನ್ನು ಕಾರ್ಪೊರೇಷನ್ ವಶಕ್ಕೆ ಕೊಟ್ಟುಬಿಡಬೇಕು ಎಂದು ನಿರ್ಧರಿಸುತ್ತೇವೆ. ಅದು ಕ್ಷಣಿಕ ನಿರ್ಧಾರ. ಸ್ವಲ್ಪ ಹೊತ್ತಿನಲ್ಲೇ ಮರೆತುಹೋಗುತ್ತದೆ. ನಾಯಿ ಕುಟುಂಬದ ಭಾಗವಾಗಿದೆ. ವಿದೇಶಗಳಲ್ಲಿರುವ ಮಕ್ಕಳು, ಮೊಮ್ಮಕ್ಕಳು ಕೂಡ ನಾಯಿಯೊಡನೆ ವೀಡಿಯೋ ಸಂಪರ್ಕದಲ್ಲಿರುತ್ತಾರೆ. ಮೊದಲ ಅಂತಸ್ತಿನಲ್ಲಿರುವ ಬಾಡಿಗೆದಾರರು ಕೂಡ ಅವರ ಶ್ರೀಮಂತಿಕೆಗನುಗುಣವಾಗಿ ದೊಡ್ಡ ನಾಯಿಯೊಂದನ್ನು ಸಾಕಿಕೊಂಡಿದ್ದಾರೆ. ಅದನ್ನು ವಾಯು ವಿಹಾರಕ್ಕೆ ಕರೆದುಕೊಂಡು ಹೋಗಲೆಂದೇ ಒಬ್ಬ ಕೆಲಸದಾಳು ಪ್ರತಿ ಸಂಜೆ ಬರುತ್ತಾನೆ.
ಹೀಗೆ ನಾಯಿಯ ಬಳಕೆಯಿದ್ದರೂ ಅದು ಜೀವನ ಶೈಲಿಯ ಭಾಗವಾಗಿ ದಿನನಿತ್ಯದ ಜೀವನದಲ್ಲಿ ಹೀಗೆಲ್ಲ ಬೆರೆತುಹೋಗಿರುತ್ತದೆ ಎಂಬುದು ಗೊತ್ತಾದದ್ದು ನೆದರ್‌ಲ್ಯಾಂಡ್ಸ್‌ಗೆ ಮತ್ತೆ ಮತ್ತೆ ಪ್ರವಾಸಕ್ಕೆ ಬಂದಾಗಲೇ.
ನೆದರ್‌ಲ್ಯಾಂಡ್ಸ್‌ನಲ್ಲಿ ಮಕ್ಕಳಿಲ್ಲದ ಮನೆಗಳಿವೆ. ಕಾರಿಲ್ಲದ ಮನೆಗಳಿವೆ. ನಾಯಿಯಿಲ್ಲದ ಮನೆಗಳೇ ಇಲ್ಲ. ಆನೆ, ಜಿರಾಫೆ ಆಕಾರದ ಪ್ರಾಣಿಗಳನ್ನು ಬಿಟ್ಟು ಇನ್ನೆಲ್ಲ ಆಕಾರದ, ಆಕೃತಿಯ ನಾಯಿಗಳನ್ನು ನೋಡಿದೆ. ಅವುಗಳ ವೇಶಭೂಷಣ, ಅಲಂಕಾರ, ದಿವಾನ್‌ಗಿರಿಯನ್ನೆಲ್ಲ ವರ್ಣಿಸಲು ನನಗೆ ಬರುವುದಿಲ್ಲ. ಸಾರ್ವಜನಿಕ ಸಾರಿಗೆಯಲ್ಲೂ ನಾಯಿಗಳಿಗೆ ಪ್ರತ್ಯೇಕ ವ್ಯವಸ್ಥೆಯಿದೆ.
ನಾಯಿಗಳಿಗೆಂದೇ ಪ್ರತ್ಯೇಕವಾಗಿ ಮೀಸಲಾದ ಕಾಲುದಾರಿಯಿದೆ, ಉದ್ಯಾನವನಗಳಿವೆ. ಇದು ನನಗೆ ಗೊತ್ತಿರಲಿಲ್ಲ. ಇಲ್ಲಿ ಚಳಿಗಾಲದಲ್ಲಿ ಸಂಜೆ ನಾಲ್ಕು ಘಂಟೆಗೇ ಕತ್ತಲಾಗುತ್ತದೆ. ಮನೆಯ ಬಲಭಾಗದಲ್ಲಿರುವ ಕಾಲುವೆಯ ಮುಂಭಾಗದಲ್ಲಿ ನಿಂತಿದ್ದೆ. ಮಿಣಮಿಣ ಕೆಂಪು ಬೆಳಕು ಕಾಣಿಸಿತು. ಅದು ಅಲ್ಲಾಡುತ್ತಿತ್ತು, ಚಲಿಸುತ್ತಿತ್ತು, ಮಂಕಾಗುತ್ತಿತ್ತು ಪ್ರಖರವಾಗುತ್ತಿತ್ತು. ಸುತ್ತ ಮುತ್ತ ಯಾರೂ ಇಲ್ಲ. ದಟ್ಟವಾದ ಕತ್ತಲೆ. ನನಗೂ ಭಯವಾಯಿತು. ನಂತರ ಗೊತ್ತಾಯಿತು, ಆ ಕತ್ತಲಿನಲ್ಲೂ ನಾಯಿಯ ಮಾಲೀಕರು ವಾಯು ವಿಹಾರಕ್ಕೆ ಹೊರಟಿದ್ದರು. ನಾಯಿಯ ಕತ್ತಿಗೆ ಹಾಕಿದ ಬೆಲ್ಟ್‌ನಲ್ಲಿ ಬ್ಯಾಟರಿ ದೀಪ ಕಟ್ಟಿದ್ದರು. ನಾಯಿಗಳ ವಿಹಾರಕ್ಕೆಂದೇ ಮೀಸಲಾದ ಕಾಲುದಾರಿಯ ಹತ್ತಿರ ನಾನು ನಿಂತಿದ್ದೆ. ಅಲ್ಲಿ ಬೇರೆ ಯಾರೂ ಓಡಾಡುವ ಹಾಗಿರಲಿಲ್ಲ. ಈ ನಿಯಮ ಗೊತ್ತಾಗದೇ ನಾನು ಅದೆಷ್ಟೋ ಸಲ ಆ ಕಾಲುದಾರಿಯಲ್ಲಿ ಓಡಾಡಿದ್ದೆ. ವಾಯು ವಿಹಾರಕ್ಕೆ ಪ್ರಶಾಂತವಾದ ಸ್ಥಳ ಎಂಬುದು ನನ್ನ ಭಾವನೆಯಾಗಿತ್ತು. ಅಲ್ಲೇ ಒಂದು ಸಣ್ಣದಾದ ಸೂಚನಾ ಫಲಕವಿತ್ತು. ಬೇರೆ ಯಾರೂ ಓಡಾಡಬಾರದೆಂದು. ನಾನು ಗಮನಿಸಿರಲೇ ಇಲ್ಲ.
ಇಂತಹ ಕಾಲುದಾರಿಗೆ ಹೊಂದಿಕೊಂಡೇ ಉದ್ಯಾನವನದ ಒಂದು ಭಾಗವನ್ನು ನಾಯಿಗಳಿಗೆ ಮೀಸಲಿಟ್ಟು, ಅದರ ಸುತ್ತ ಗಿಡ ಪೊದೆಗಳ ಬೇಲಿಯಿರುತ್ತದೆ. ನಾಯಿಗಳನ್ನು ಆಡಲು ಬಿಟ್ಟು ಮಾಲೀಕರು ಒಂದು ಮೂಲೆಯಲ್ಲಿ ಹರಟುತ್ತಾ ಕುಳಿತಿರುತ್ತಾರೆ. ಬೀದಿಯಲ್ಲಿ, ಉದ್ಯಾನವನದ ಆಸುಪಾಸಿನಲ್ಲಿ ಓಡಾಡುವವರ ಹತ್ತಿರ ನಾಯಿಗಳು ಕೆನೆದು, ಕರೆದು ಸಂಭಾಷಣೆ ನಡೆಸುತ್ತವೆ, ಯೋಗ ಕ್ಷೇಮ ವಿಚಾರಿಸುತ್ತವೆ.
ಶಿಷ್ಟಾಚಾರವೆನ್ನಿ, ಒಳ್ಳೆಯ ತರಬೇತಿಯೆನ್ನಿ, ಯುರೋಪಿಯನ್ ಶಿಷ್ಟಾಚಾರವೆನ್ನಿ, ಎಷ್ಟೇ ನಾಯಿಗಳನ್ನು ನೀವು ಎದುರಾದರೂ ಅವು ನಿಮ್ಮನ್ನು ಕಚ್ಚುವುದಿಲ್ಲ. ನಿಮ್ಮ ಹತ್ತಿರ ಕೂಡ ಬರುವುದಿಲ್ಲ. ನಾವೇ ಒಮ್ಮೊಮ್ಮೆ ಆತಂಕದಿಂದ, ಭಯದಿಂದ ಬಡಬಡಿಸಿದರೂ ನೀವೇನೂ ಯೋಚನೆ ಮಾಡಬೇಡಿ, ಬಡಬಡಿಸಬೇಡಿ ಎಂದು ವಾರಸುದಾರರು ಮುಗುಳ್ನಗುತ್ತಿರುತ್ತಾರೆ. ಮಾಲೀಕರು ಎರಡು ಮೂರು ನಾಯಿಗಳ ಜೊತೆ ವಾಯು ವಿಹಾರಕ್ಕೆ ಹೊರಡುತ್ತಾರೆ. ಎಲ್ಲ ನಾಯಿಗಳನ್ನು ಸಮಾನವಾಗಿ ಗಮನಿಸುವುದಿಲ್ಲ. ಆದರೂ ನಾಯಿಗಳು ಬೀದಿಯಲ್ಲಿ ಓಡಾಡುವವರಿಗೆ ಯಾವ ರೀತಿಯ ತೊಂದರೆಯನ್ನೂ ಕೊಡುವುದಿಲ್ಲ.
ಈ ಹಿನ್ನೆಲೆಯಲ್ಲೇ ಆ ಮುಸ್ಸಂಜೆ ಆ ಗೃಹಿಣಿ ಒಂದು ಪುಟ್ಟ ನಾಯಿಮರಿಯನ್ನು ನಮ್ಮ ಎದುರಿಗೇ ಹಿಡಿದು ಚಚ್ಚಿದಾಗ, ಅದು ಅತ್ತಾಗ, ಕಿರುಚಿದಾಗ, ಮೈನೆಲ್ಲ ಪರಪರನೆ ಪರಚಿಕೊಂಡು ನೆಗೆದಾಡಿದಾಗ ನಮಗೆ ಗಾಬರಿಯಾದದ್ದು. ನೋವಾದದ್ದು.
ನಾನು ನನ್ನ ಹೆಂಡತಿ ಮೊಮ್ಮಕ್ಕಳನ್ನು ಆಡಿಸಿಕೊಂಡು ಪಾರ್ಕ್‌ನಿಂದ ಮನೆಗೆ ಬರುತ್ತಿದ್ದೆವು. ಪಾರ್ಕ್‌ನಲ್ಲಿ ಆಟ ಮುಗಿಯುವ ಹೊತ್ತಿಗೆ ಇಬ್ಬರು ಮೊಮ್ಮಕ್ಕಳೂ ಅಶಿಸ್ತು, ಅರಾಜಕತೆಯ ತಾರಕ ಸ್ಥಿತಿಯಲ್ಲಿರುತ್ತಿದ್ದರು. ಇಬ್ಬರಿಗೂ ಜಗಳ ಶುರುವಾಗಿಬಿಡುವುದು. ಹಾಗಾಗಿ, ನಾವು ನೇರ ಮಾರ್ಗದಲ್ಲಿ ಹೋಗದೆ, ಬೇಗ ಬೇಗ ಮನೆ ತಲುಪಲು ಒಳದಾರಿ ಹಿಡಿಯುತ್ತಿದ್ದೆವು. ಇನ್ನೊಂದೆರಡು ಅಪಾರ್ಟ್ಮೆಂಟ್‌ಗಳ ಒಳಗಿನಿಂದಲೇ ದಾರಿ ಮಾಡಿಕೊಂಡು ಹೊರಟಿದ್ದೆವು. ಆ ಮುಸ್ಸಂಜೆ ಕೂಡ ಅದೇ ಹಾದಿಯಲ್ಲಿ. ಕೈಗಾಡಿ ಇರುವುದು ಪುಟ್ಟ ಮಕ್ಕಳಿಗೆ. ಅದರಲ್ಲಿ ತನ್ನನ್ನು ಕೂರಿಸಿಕೊಂಡು ನಾವು ತಳ್ಳಬೇಕೆಂದು ಒಂಭತ್ತು ವರ್ಷದ ನನ್ನ ಮೊಮ್ಮಗ ಹಠ ಮಾಡುತ್ತಿದ್ದ, ಪಿರಿಪಿರಿ ಮಾಡುತ್ತಿದ್ದ. ಒಂದೂ ಮುಕ್ಕಾಲು ವರ್ಷದ ನನ್ನ ಮೊಮ್ಮಗಳು ಇದಕ್ಕೆ ಒಪ್ಪದೆ ಹಠ ಮಾಡುತ್ತಿದ್ದಳು. ಕೈಗಾಡಿಯಲ್ಲಿ ಇಬ್ಬರಿಗೆ ಜಾಗವಿಲ್ಲ. ಅವಳನ್ನು ಒಪ್ಪಿಸಿ, ಮೊಮ್ಮಗನನ್ನು ಕೂರಿಸಿಕೊಂಡರೂ ತಳ್ಳುವುದು ಕಷ್ಟವಾಗುತ್ತಿತ್ತು. ಮೊಮ್ಮಗನನ್ನು ಮೊಮ್ಮಗಳು ನೂಕುತ್ತಿದ್ದಳು. ನೀನು ನನ್ನ ಜೊತೆ ಕೂರಬೇಡ ಎಂದು ತಳ್ಳಿ ಗಲಾಟೆ ಮಾಡುತ್ತಿದ್ದಳು. ಇದೆಲ್ಲದರಿಂದ ಗಲಾಟೆ, ಗೊಂದಲ. ನಾನೂ ಕೂಡ ತಾಳ್ಮೆ ಕಳೆದುಕೊಂಡು ಕಿರುಚಾಡುತ್ತಿದ್ದೆ.
ಆವತ್ತು ಕೂಡ ಹಾಗೇ ಆಯಿತು. ನಮ್ಮ ಗಲಾಟೆ ಕೇಳಿ, ನಾಯಿಮರಿ ಹೆದರಿತೋ, ಪ್ರಚೋದನೆಗೆ ಒಳಗಾಯಿತೋ, ನಮ್ಮ ಬಳಿ ಓಡಿ ಬಂತು, ನೆಗೆದಾಡಿತು, ಬೊಗಳಿತು. ನಮಗೇನೂ ಹೆದರಿಕೆ ಆಗಲಿಲ್ಲ. ಮಕ್ಕಳು ಪತರಗುಟ್ಟಲು ಪ್ರಾರಂಭಿಸಿದವು. ಅವರ ಆಟಗುಳಿತನಕ್ಕೆ ನಾಯಿಯ ಕಿರುಚಾಟ ಕೂಡ ಸೇರಿಕೊಂಡು ಎಲ್ಲವೂ ರಂಗುರಂಗಾಯಿತು. ಕೋಲಾಹಲ ಮೂಡಿತು. ಮಾಲೀಕೆ ಓಡಿ ಬಂದಳು. ಬರುವಾಗಲೇ ನಾಯಿಗೆ ಡಚ್ ಭಾಷೆಯಲ್ಲಿ ಸಹಸ್ರನಾಮ. ಬಂದು ನಾಯಿಯ ಕತ್ತು ಹಿಚುಕುತ್ತಾ ರಪರಪನೆ ಹೊಡೆಯಲು ಪ್ರಾರಂಭಿಸಿದಳು. ನಾಯಿಮರಿ ಕುಯ್ಯೋ ಅಂದಿತು, ಕೊಸರಾಡಿತು. ಇನ್ನೂ ಏಟು ಬಿತ್ತು. ಇನ್ನೂ ಕೊಸರಾಡಿತು. ನಮಗೆ ದಿಕ್ಕೇ ತೋಚಲಿಲ್ಲ. ಮಕ್ಕಳಿಗೂ ಕೂಡ ನಾಯಿಮರಿಗೆ ಹಾಗೆಲ್ಲ ಹೊಡೆದು ಹಿಂಸೆ ಮಾಡುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಇಬ್ಬರೂ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತಿದ್ದರು.
ನನ್ನ ಹೆಂಡತಿ ಪರಿಪರಿಯಾಗಿ ನಿವೇದಿಸಿಕೊಂಡಳು. ದಯವಿಟ್ಟು ಹೊಡೆಯಬೇಡಿ. ಅದು ನಮ್ಮನ್ನು ಕಚ್ಚಿಲ್ಲ. ಕಚ್ಚುವ ಪ್ರಯತ್ನವನ್ನು ಕೂಡ ಮಾಡಿಲ್ಲ. ಸುಮ್ಮನೆ ಬಂದು ನೆಗೆದಾಡಿದೆ. ಆಡುತ್ತಿದ್ದ, ಸಣ್ಣಗೆ ಕಿರುಚಾಡುತ್ತಿದ್ದ ಮಕ್ಕಳ ಜೊತೆ ತಾನೂ ಸೇರಿಕೊಳ್ಳಲು ಬಂದಿದೆ. ಮಕ್ಕಳಿಗೂ ಕೂಡ ಇದೊಂದು ಆಟ.
ನನ್ನ ಹೆಂಡತಿ ಇಂಗ್ಲಿಷ್‌ನಲ್ಲಿ ಇಷ್ಟೆಲ್ಲ ಹೇಳಿದಳು. ಇದು ಆಕೆಗೆ ಅರ್ಥವಾಯಿತೋ ಇಲ್ಲವೋ ಗೊತ್ತಾಗಲಿಲ್ಲ. ನಾಯಿಮರಿಯನ್ನು ಕಂಕುಳಿನಲ್ಲಿ ಬಿಗಿಯಾಗಿ ಇಟ್ಟುಕೊಂಡು ಕತ್ತನ್ನು ಹಿಸುಕುತ್ತಾ ತಲೆಯ ಮೇಲೆ ಜೋರಾಗಿ ಮೊಟಕುತ್ತಾ ಕರೆದುಕೊಂಡು ಹೋದಳು. ನಾಯಿಮರಿ ಕೂಡ ಬೊಗಳುತ್ತಲೇ ಕೊಸರಾಡುತ್ತಿತ್ತು. ನಾವು ನಾಲ್ಕೂ ಜನ ಮಂಕಾದೆವು, ಗಾಬರಿ ಬಿದ್ದೆವು. ವಾಯು ವಿಹಾರದ, ಆಟದ ಸಂತೋಷ ಮಾಯವಾಗಿತ್ತು. ನಮ್ಮಿಂದಾಗಿ ನಾಯಿಮರಿಗೆ ಅಷ್ಟೊಂದು ಹಿಂಸೆ, ಏಟು ಬಿತ್ತಲ್ಲ ಎಂಬ ಯೋಚನೆಯಲ್ಲೇ ಪರಸ್ಪರ ಮಾತನಾಡದೆ ಮನೆ ಸೇರಿಕೊಂಡೆವು.
ಈ ಮೂರೂ ಹಿಂಸಾ ಪ್ರಕರಣಗಳು ನನ್ನನ್ನು ತುಂಬಾ ಕಾಡಿದವು. ಭಾರತದ ಗಲಾಟೆ, ಹಿಂಸೆಯ ವಾತಾವರಣದಲ್ಲಿ ಇದೆಲ್ಲ ನನ್ನ ಗಮನಕ್ಕೆ ಬರುತ್ತಲೇ ಇರಲಿಲ್ಲ. ಈ ಪ್ರಕರಣಗಳೆಲ್ಲ ಪ್ರಾಸಂಗಿಕವಾಗಿರಬಹುದು. ಏನನ್ನೂ ಸೂಚಿಸದೇ ಕೂಡ ಇರಬಹುದು. ಆದರೂ ಯುರೋಪಿಯನ್ ಶಿಷ್ಟಾಚಾರ, ಮೌನದ ವಾತಾವರಣದ ನಡುವೆ ನನಗೆ ತೀವ್ರ ಹಿಂಸಾತ್ಮಕ ಪ್ರಕರಣಗಳೇ ಕಂಡವು. ಈಗಲೂ ಈ ಪ್ರಕರಣಗಳ ಬಗ್ಗೆ ಯೋಚಿಸುವಾಗ, ಒಂದು ರೀತಿಯ ಅಸಹಾಯಕತೆ ಮೂಡುತ್ತದೆ.

ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ.