ಸುಮನ ತನ್ನ ಉದ್ಯೋಗದಲ್ಲಿ ಎದುರಿಸುವ ಮತ್ತೊಂದು ಸೂಕ್ಷ್ಮ ಇಕ್ಕಟ್ಟೆಂದರೆ, ತಾಯಿಯ ಮೊಲೆಯನ್ನು ಕಚ್ಚಿಕೊಂಡಿರುವ ಮರಿಗಳನ್ನು ತಾಯಿ ಇಲಿಯಿಂದ ಬೇರ್ಪಡಿಸುವ ಕ್ರಿಯೆ. ಇದು ಅವಳಿಗೆ ಹಿಂಸೆಯನ್ನುಂಟು ಮಾಡುತ್ತದೆ. ಆ ಟ್ರಾನ್ಸ್‌ಜೆನಿಕ್ ಇಲಿಗಳ ಸ್ಥಿತಿಯು ತನ್ನ ಸ್ಥಿತಿಗಿಂತ ಭಿನ್ನವೇನಲ್ಲ ಎಂದು ಭಾಸವಾಗುತ್ತದೆ. ಆ ಇಲಿಗಳಿಗೆ ಅನಸ್ತೇಶಿಯಾ ನೀಡಿ ಪ್ರಜ್ಞೆಯನ್ನು ತಪ್ಪಿಸುವುದು. ನಂತರ ಅದರ ದೇಹದ ಒಂದೊಂದು ಭಾಗವನ್ನು ಬೇರ್ಪಡಿಸುವ ಕ್ರಿಯೆ ಇದು ತನ್ನಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲುತ್ತಾಳೆ. ಸುಮನಳಿಗೆ ಮೂಡಿದ ಈ ನೈತಿಕ ಇಕ್ಕಟ್ಟಿನ ಪ್ರಶ್ನೆ ಕ್ಷಣಿಕವಾದುದು. ಮಾರನೆ ದಿನ ಇದನ್ನೆಲ್ಲ ಮರೆತು ಎಂದಿನಂತೆ ಕಾರ್ಯಪ್ರವೃತ್ತಳಾಗುತ್ತಾಳೆ.
ಚೀಮನಹಳ್ಳಿ ರಮೇಶ್‌ಬಾಬು ಕಾದಂಬರಿ “ಮಂಪರು” ಕುರಿತು ಸುಧಾಕರ ದೇವಾಡಿಗ ಬಿ ಬರಹ
ಚಿಮನಹಳ್ಳಿ ರಮೇಶಬಾಬು ಅವರ ‘ಮಂಪರುʼ ಕಾದಂಬರಿಯು ವಸ್ತು ಹಾಗು ಕಥನವನ್ನು ನಿರ್ವಹಿಸಿದ ರೀತಿಯಿಂದ ಗಮನಸೆಳೆಯುತ್ತದೆ. ನಗರದ ಕಾರ್ಪೊರೇಟ್ ಜಗತ್ತಿನ ವಸ್ತುವನ್ನು ಹೊಂದಿದ ಹಲವು ಕಥನಗಳು ಕನ್ನಡದಲ್ಲಿವೆ. ‘ಮಂಪರುʼ ಕಾದಂಬರಿಯು ಕಾರ್ಪೊರೇಟ್ ಜಗತ್ತಿನ ವಸ್ತುವನ್ನು ಆಯ್ದುಕೊಂಡಿದೆ. ಆದರೆ ಕಥನವು ಇದಕ್ಕೆ ಸೀಮಿತವಾಗದೆ ಕಾರ್ಪೊರೇಟ್ ಜಗತ್ತಿನ ಆಚೆಗಿನ ಹಲವು ಆಯಾಮಗಳನ್ನು ಒಳಗೊಳ್ಳುವ ಮೂಲಕ ಭಿನ್ನವಾಗುತ್ತದೆ. ನಗರ ಬದುಕಿನ ತಲ್ಲಣ, ಗ್ರಾಮ್ಯ ಬದುಕಿನ ಸ್ವರೂಪ, ಸ್ತ್ರೀ ಸಂವೇದನೆ, ಮಾನವ ಕಲ್ಯಾಣದ ಹೊಣೆಹೊತ್ತ ಸಂಶೋಧನೆಗಳ ಒಳಗಿನ ಕ್ರೌರ್ಯ, ಅನೈತಿಕ ನಡೆ, ನಗರದ ರಿಯಲ್ ಎಸ್ಟೇಟ್ ಬೆಳವಣಿಗೆಯಿಂದ ಆಟೋ ಚಾಲಕರಲ್ಲಿ ಮೂಡಿದ ಕನಸುಗಳು ಹೀಗೆ ಹಲವು ಆಯಾಮಗಳ ಶೋಧನೆಯನ್ನು ಕಥನವು ತನ್ನ ಒಡಲಲ್ಲಿರಿಸಿಕೊಂಡಿದೆ.
ಟ್ರಾನ್ಸ್‌ಜೆನಿಕ್ ಇಲಿಗಳ ಅಧ್ಯಯನ, ಪ್ರಯೋಗದ ಮೂಲಕ ಮಾನವನನ್ನು ಕಾಡುವ ರೋಗಗಳಿಗೆ ಔಷಧಿಯನ್ನು ಆವಿಷ್ಕರಿಸುವ ಕಾರ್ಪೊರೇಟ್ ಕಂಪೆನಿಯಲ್ಲಿ ಸುಮನ ಉದ್ಯೋಗಿಯಾಗಿದ್ದಾಳೆ. ಸುಮನಳ ಕಣ್ನೋಟದ ಮೂಲಕ ಕಥನ ತೆರೆದುಕೊಳ್ಳುತ್ತದೆ. ಕೋಲಾರದ ಬಳಿಯ ಕೊಡದವಾಡಿ ಎಂಬ ಸಣ್ಣಹಳ್ಳಿಯಿಂದ ಬಂದ ಇವಳು ಎದುರಿಸುವ ಸಮಸ್ಯೆಗಳಿಗೆ ಎರಡು ಮುಖಗಳಿವೆ. ಒಂದು ಬಾಹ್ಯಕ್ಕೆ ಸಂಬಂಧಿಸಿದ ಬಿಕ್ಕಟ್ಟು. ಇದು ತನ್ನ ಕಂಪೆನಿಯ ಕೆಲಸದ ಒತ್ತಡದಿಂದ ಸೃಷ್ಟಿಯಾಗಿದೆ. ಇನ್ನೊಂದು ತನ್ನ ಅಂತರಂಗ ಸೃಷ್ಟಿಸಿದ ಬಿಕ್ಕಟ್ಟು. ಈ ಅಂತರಂಗ ಮತ್ತು ಬಾಹ್ಯದ ಬಿಕ್ಕಟ್ಟು ಎರಡೂ ಬೇರೆಯಾದರು ಇವು ಪರಸ್ಪರ ಭಿನ್ನವಲ್ಲ. ಕೆಲವೊಮ್ಮೆ ಈ ಎರಡು ಬಿಕ್ಕಟ್ಟು ಮೇಳೈಸಿ ಸುಮನಳನ್ನು ಹಿಂಡುತ್ತವೆ. ಇವೆರೆಡು ಬಿಕ್ಕಟ್ಟುಗಳಿಗೆ ಕಥನ ಎದುರಾದ ಬಗೆಯನ್ನು ಪರಿಶೀಲಿಸಲಾಗಿದೆ.
ಸುಮನ ಟ್ರಾನ್ಸ್‌ಜೆನಿಕ್ ಇಲಿಗಳ ಅಧ್ಯಯನ ನಿರತ ತಂಡವೊಂದರ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಾಳೆ. ಈ ಅಧ್ಯಯನದಲ್ಲಿ ಸುಮನಳ ತಂಡವನ್ನು ಮುನ್ನಡೆಸುವ ಟೀಮಿನ ಲೀಡರಾಗಿ ಅರವಿಂದನಿದ್ದಾನೆ. ಇವನ ಲೈಂಗಿಕ ಕಿರುಕುಳಕ್ಕೆ ಸುಮನ ತುತ್ತಾಗುತ್ತಾಳೆ. ಇದನ್ನು ದಿಟ್ಟವಾಗಿ ಎದುರಿಸುವ ದೈರ್ಯವನ್ನು ಅಲ್ಲಿನ ವ್ಯವಸ್ಥೆ ಇವಳಿಗೆ ನೀಡುವುದಿಲ್ಲ. ಈ ಅಧಿಕಾರ ವ್ಯವಸ್ಥೆಯಲ್ಲಿ ಇದೆಲ್ಲ ಸಹಜವೆಂಬಂತಿದೆ. ಇವಳೊಟ್ಟಿಗೆ ಕಾರ್ಯನಿರ್ವಹಿಸುವ ನಮಿತ ಇದನ್ನು ಒಪ್ಪಿಕೊಂಡಿದ್ದಾಳೆ. ಸುಮನಳ ಮೌನವು ಅರವಿಂದನು ಮೈ ಮುಟ್ಟಿ ಮಾತನಾಡಿಸುವ ಹಂತಕ್ಕೆ ತಂದು ನಿಲ್ಲಿಸಿದೆ. ಇದರ ವಿರುದ್ಧ ಸುಮನ ಸಣ್ಣ ಮಟ್ಟಿಗಾದರು ತನ್ನ ಅಸಹನೆಯನ್ನು ದಾಖಲಿಸುತ್ತಾಳೆ. ಅರವಿಂದನ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಬೇಕಿರುವುದರಿಂದ ಈ ಹಿಂಸೆಯನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ.
ಕಂಪೆನಿಯ ಮುಖ್ಯಸ್ಥರಾದ ತಾರನಾಥರೊಂದಿಗಿನ ಮಹತ್ವದ ಸಭೆಯಲ್ಲಿ ಪ್ರಾಮಾಣಿಕನು, ನಿಷ್ಟೂರ ಗುಣವನ್ನು ಹೊಂದಿದ ರಾಜೀವನ ಎದರು ಅರವಿಂದನಿಗೆ ಮುಖಭಂಗವಾಗುತ್ತದೆ. ಇದನ್ನು ಕಂಡು ಸುಮನ ಹರ್ಷಿಸುತ್ತಾಳೆ. ಸಮಾಜದ ನೈತಿಕ ಕಟ್ಟಳೆಗಳ ನೆಲೆಯಲ್ಲಿ ನೋಡಿದರೆ ಅರವಿಂದನಿಗಾದ ಅಪಮಾನವನ್ನು ಕಂಡು ಹರ್ಷಿಸುವ ಸುಮನಳ ಗುಣ ಅಮಾನವೀಯವಾಗಿ ಕಾಣುತ್ತದೆ. ಇದು ಸುಮನಳ ಸಣ್ಣತನವಾಗಿ ಕಥನದಲ್ಲಿ ಅಭಿವ್ಯಕ್ತವಾಗುವುದಿಲ್ಲ. ಇನ್ನೊಬ್ಬರನ್ನು ಅಪಮಾನವಿಸುವಾಗ ಅಪಮಾನಿತರಿಗೆ ಆಗುವ ನೋವಿನ ಸ್ವರೂಪ ಎಂಥದ್ದೆಂಬ ಪಾಠ ಅರವಿಂದನಿಗೆ ತಿಳಿಯಬೇಕು ಎಂಬ ದೃಷ್ಟಿ ಕಥನದಲ್ಲಿದೆ. ಅರವಿಂದ ತನ್ನ ಟೀಮಿನ ಸ್ತ್ರೀಯರನ್ನು ಕಾಮುಕ ದೃಷ್ಟಿಯಿಂದ ಕೀಳಾಗಿ ಕಾಣುತ್ತಾನೆ. ಸಭೆಯಲ್ಲಾದ ಅಪಮಾನ, ಸುಮನಳ ಮಾತಿಗೆ ಸಿಕ್ಕ ಮನ್ನಣೆ ಇವನನ್ನು ಕಂಗೆಡಿಸುತ್ತವೆ. ಅದೇ ಸಿಟ್ಟಿನಲ್ಲಿ ಸಮನಳನ್ನು ಲೈಂಗಿಕ ಬೈಗುಳದ ಮೂಲಕ ನಿಂದಿಸುವನು. ಸುಮನ ಕಂಪೆನಿ ಬಾಸ್ ಆದ ತಾರನಾಥನಿಗೆ ಅರವಿಂದನ ವರ್ತನೆಯ ಕುರಿತು ದೂರು ನೀಡುತ್ತಾಳೆ. ಈ ಘಟನೆಯನ್ನು ಸಾಬೀತು ಪಡಿಸುವಲ್ಲಿ ವಿಫಲಳಾದರೆ ಉದ್ಯೋಗ ಕಳೆದುಕೊಳ್ಳುವ ಇಕ್ಕಟ್ಟನ್ನು ಎದುರಿಸುತ್ತಾಳೆ. ಈ ಘಟನೆಯನ್ನು ಸಾಬೀತು ಪಡಿಸುವ ಸಾಕ್ಷ್ಯವು ಅವಳಿಗಿಲ್ಲ. ಅರವಿಂದ ನಮಿತ ಮಾತ್ರ ಈ ಘಟನೆಗೆ ಸಾಕ್ಷಿಯಾಗಿದ್ದಾರೆ. ನಮಿತ ತನ್ನ ಬೆಂಬಲಕ್ಕಿದ್ದಾಳೆ. ನಿನ್ನಿಂದ ಏನು ಮಾಡಲು ಸಾಧ್ಯವೆಂಬ ವ್ಯಂಗ್ಯದಲ್ಲಿ ಅರವಿಂದ ವಿಚಾರಣೆಗೆ ಬರುತ್ತಾನೆ. ಅರವಿಂದನ ಆಪ್ತಳಾದ ನಮಿತ ಸತ್ಯದ ಪರನಿಂತು ಸುಮನಳ ದೂರಿಗೆ ಸಾಕ್ಷಿಯಾಗುತ್ತಾಳೆ. ಅರವಿಂದ ಕೆಲಸವನ್ನು ಕಳೆದುಕೊಳ್ಳುತ್ತಾನೆ. ಒಬ್ಬ ಸ್ತ್ರೀ ಅಸಹಾಯಕಳಾದಾಗ ಮತ್ತೊಬ್ಬ ಸ್ತ್ರೀ ಅವಳ ಬೆಂಬಲಕ್ಕೆ ನಿಲ್ಲುವ ಕಥನದ ದೃಷ್ಟಿಕೋನ ವಿಶೇಷವಾದುದು. ‘ಹೆಣ್ಣಿಗೆ ಹೆಣ್ಣೆ ಶತ್ರುʼವೆಂಬ ಗಂಡಾಳ್ವಿಕೆಯ ಜನಪ್ರಿಯ ನಿಲುವನ್ನು ಕಥನ ಪಲ್ಲಟಿಸುತ್ತದೆ.
ಸುಮನ ತನ್ನ ಉದ್ಯೋಗದಲ್ಲಿ ಎದುರಿಸುವ ಮತ್ತೊಂದು ಸೂಕ್ಷ್ಮ ಇಕ್ಕಟ್ಟೆಂದರೆ, ತಾಯಿಯ ಮೊಲೆಯನ್ನು ಕಚ್ಚಿಕೊಂಡಿರುವ ಮರಿಗಳನ್ನು ತಾಯಿ ಇಲಿಯಿಂದ ಬೇರ್ಪಡಿಸುವ ಕ್ರಿಯೆ. ಇದು ಅವಳಿಗೆ ಹಿಂಸೆಯನ್ನುಂಟು ಮಾಡುತ್ತದೆ. ಆ ಟ್ರಾನ್ಸ್‌ಜೆನಿಕ್ ಇಲಿಗಳ ಸ್ಥಿತಿಯು ತನ್ನ ಸ್ಥಿತಿಗಿಂತ ಭಿನ್ನವೇನಲ್ಲ ಎಂದು ಭಾಸವಾಗುತ್ತದೆ. ಆ ಇಲಿಗಳಿಗೆ ಅನಸ್ತೇಶಿಯಾ ನೀಡಿ ಪ್ರಜ್ಞೆಯನ್ನು ತಪ್ಪಿಸುವುದು. ನಂತರ ಅದರ ದೇಹದ ಒಂದೊಂದು ಭಾಗವನ್ನು ಬೇರ್ಪಡಿಸುವ ಕ್ರಿಯೆ ಇದು ತನ್ನಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲುತ್ತಾಳೆ. ಸುಮನಳಿಗೆ ಮೂಡಿದ ಈ ನೈತಿಕ ಇಕ್ಕಟ್ಟಿನ ಪ್ರಶ್ನೆ ಕ್ಷಣಿಕವಾದುದು. ಮಾರನೆ ದಿನ ಇದನ್ನೆಲ್ಲ ಮರೆತು ಎಂದಿನಂತೆ ಕಾರ್ಯಪ್ರವೃತ್ತಳಾಗುತ್ತಾಳೆ. ಟ್ರಾನ್ಸ್‌ಜೆನಿಕ್ ಇಲಿಗಳ ಜೀವನ ವಿವರ ಈ ಕಥನದಲ್ಲಿ ಸಂಕೇತವಾಗಿ ಬರುತ್ತದೆ. ಸಮನಳಿಗೆ ತನ್ನತಾಯಿ ರೇಣುಕಳು ‘ಪ್ರಯೋಗಕ್ಕೆ ಒಳಪಟ್ಟ ಟ್ರಾನ್ಸ್‌ಜೆನಿಕ್ ಇಲಿಯಂತೆ ಕಾಣತೊಡಗಿದಳುʼ(ಪು.೧೫೮) ಎಂಬ ವಿವರವಿದೆ.
ತನ್ನೊಡಲಲ್ಲಿ ಬೆಳೆಯುತ್ತಿರುವ ಮಗುವಿನ ವಿಚಾರವನ್ನು ಸಮನ ರಾಜೀವನಿಗೆʼ ನನ್ನ ಹೊಟ್ಟೆಯೊಳಗೆ ನೀನು ಡೋಸಿಂಗ್ ಮಾಡಿರುವ ಇಲಿ ಬೆಳೀತಾ ಇದೆʼ ಎಂದು ಹೇಳುತ್ತಾಳೆ. ಇದನ್ನು ಕೇಳಿದ ರಾಜೀವ ‘ಅಸ್ತೇಶಿಯಾದ ಘಾಟಿಗೆ ನಿಶ್ಚಲಗೊಂಡ ಇಲಿಯಂತೆ ನಿಂತುಬಿಟ್ಟʼ (ಪು.೨೦೦) ಹೀಗೆ ಕಥನದಲ್ಲಿ ಟ್ರಾನ್ಸ್‌ಜೆನಿಕ್ ಇಲಿಗಳು ಹಲವು ಅರ್ಥ ಸಾಧ್ಯತೆಗಳನ್ನು ಧ್ವನಿಸುತ್ತವೆ. ಹೀಗೆ ಬಾಹ್ಯವು ಸೃಷ್ಟಿಸಿದ ಬಿಕ್ಕಟ್ಟುಗಳ ಶೋಧ ಕಥನದಲ್ಲಿದೆ.
ಮೈಮನದ ಕಾಮನೆಗಳು ಸೃಜಿಸಿದ ಹಿಂಸೆಯು ಅಂತರಂಗದ ಬಿಕ್ಕಟ್ಟಾಗಿ ಶೋಧಿತವಾಗಿದೆ. ಸುಮನ ತನ್ನ ಊರಿನಲ್ಲಿ ರತ್ನಾಕರನಿಂದ ಪಡೆದ ದೇಹಸುಖದ ನೆನಪು ಅವಳನ್ನು ಪರಿಪರಿಯಾಗಿ ಕಾಡುತ್ತದೆ. ರತ್ನಾಕರನ ನೆನಪಿನಲ್ಲಿ ಮೂಡುವ ಕಾಮನೆಗಳು ಅವಳ ಮನಸ್ಸನ್ನು ಅಸ್ವಸ್ಥವಾಗಿಸಿದೆ. ಇದು ಮಾನಸಿಕ ಗೀಳಾಗಿ ಅವಳ ಬದುಕನ್ನು ನಿಯಂತ್ರಿಸಿದೆ. ಮೈಮನದ ಕಾಮನೆಗಳು ಸುಮನಳ ನಿದ್ರೆಯನ್ನು ಕಬಳಿಸಿ ನಿದ್ರಾಮಾತ್ರೆಯ ವ್ಯಸನಕ್ಕೆ ದೂಡಿವೆ. ಹಾಗಾಗಿ ರತ್ನಾಕರನ ಜೊತೆಗಿನ ಸುಖದ ಮಂಪರಿನಲ್ಲಿಯೆ ಅವಳು ಕಾಲ ಕಳೆಯುವಳು. ಈ ಅಂತರಂಗದ ವ್ಯಸನದಿಂದ ಪಾರಾಗಲು ಆಗದೆ ತೊಳಲಾಡುತ್ತಾಳೆ. ವೈನು, ನಿದ್ರಾಮಾತ್ರೆಗಳು ಈ ವ್ಯಸನದಿಂದ ತಾತ್ಕಾಲಿಕವಾಗಿ ಹೊರತರಬಲ್ಲವೆ ಹೊರತು ಶಾಶ್ವತವಾಗಿಯಲ್ಲ. ಸಮನಳ ಮನದಲ್ಲಿ ಮೂಡುವ ಕಾಮನೆಗಳಿಗೆ ಹೊತ್ತುಗೊತ್ತಿನ ಹಂಗಿಲ್ಲ. ಅವಳ ಮೈಮನ ಸುಡು ಕೆಂಡದಂತಹ ಕಾಮನೆಗಳಿಂದ ತುಂಬಿದೆ. ಈ ‘ಕಾಮʼ ಜೀವನಶೋಧನೆಯ ಪ್ರಶ್ನೆಯಾಗಿ ಕಥನದಲ್ಲಿ ಮೈದೆಳದಿದೆ. ಹಾಗಾಗಿ ನವ್ಯಕಥನಗಳು ಶೋಧಿಸಿದ ಕಾಮದ ಸ್ವರೂಪಕ್ಕಿಂತ ಭಿನ್ನವು, ವಿಶಾಲವು ಆಗಿದೆ. ಈ ಮೂಲಕ ಹಲವು ನೈತಿಕ ಮೌಲ್ಯಗಳ ಇಕ್ಕಟ್ಟಿನ ಪ್ರಶ್ನೆಗಳಿಗು ಕಥನ ಮುಖಾಮುಖಿಯಾಗಿದೆ.
ಮೈಮನಗಳ ಸಂಬಂಧದ ಪ್ರಶ್ನೆ ಕಥನದುದ್ದಕ್ಕು ಬರುತ್ತದೆ. ಈ ಬಯಕೆಯ ತಾಪದಿಂದ ಹೊರಬರುವ ದಾರಿ ಅರಿಯದೆ ಸುಮನ ತಲ್ಲಣಿಸುತ್ತಾಳೆ. ಪಾರ್ಕಿನಲ್ಲಿರುವ ಹುಚ್ಚ, ಅವನ ಪದಗಳಲ್ಲಿನ ಅರ್ಥ ಅವಳನ್ನು ತಟ್ಟುತ್ತವೆ. ಹುಚ್ಚನಲ್ಲಿ ರತ್ನಾಕರನನ್ನು ಹುಡುಕುತ್ತಾಳೆ. ಅವನನ್ನು ಸೇರಿ ತನ್ನ ಮನದ ಕಾಮನೆಗಳಿಗೆ ಹೊರದಾರಿ ತೋರಲು ಪ್ರಯತ್ನಿಸುತ್ತಾಳೆ. ಅವನನ್ನು ಕೂಡಲು ಹತ್ತಿರವಾದಾಗ ಹುಚ್ಚನಲ್ಲಿ ತಂದೆಯನ್ನು ಕಂಡು ತಲ್ಲಣಿಸುತ್ತಾಳೆ. ಆದರೆ ಹುಚ್ಚನೆಡೆಗಿನ ಆಕರ್ಷಣೆ ಕುಂದುವುದಿಲ್ಲ. ನಂತರ ರತ್ನಾಕರನನ್ನು ತನ್ನ ಕಂಪೆನಿಯ ಹೆಡ್ ರಾಜೀವನಲ್ಲಿ ಕಾಣುತ್ತಾಳೆ. ರತ್ನಾಕರ ನೆನಪು, ಮೈಮನಗಳ ಕಾಮನೆಯನ್ನು ತಣಿಸಿಕೊಳ್ಳಲು ರಾಜೀವನೊಂದಿಗೆ ಕೂಡುತ್ತಾಳೆ. ಅವನೊಟ್ಟಿಗೆ ಸುಖಿಸುತ್ತಾಳೆ. ಆದರೆ ಇದು ಸುಮನಳನ್ನು ಅಂತರಂಗದ ಕ್ಷೋಬೆಯಿಂದ ಪಾರುಮಾಡುವುದಿಲ್ಲ. ರಾಜೀವನ ಜೊತೆಗಿನ ಸಂಬಂಧ ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸುತ್ತದೆ.
ಇಡೀ ಕಥನ ಸುಮನಳ ಬಾಹ್ಯ ಜಗತ್ತಿನ ನಿರೂಪಣೆಗಿಂತ ಹೆಚ್ಚಾಗಿ ಅವಳ ಅಂತರಂಗದ ಮನೋವ್ಯಾಪಾರವನ್ನು ಹಿಡಿದಿಡಲು ಪ್ರಯತ್ನಿಸಿದೆ. ಇವಳು ಬಾಹ್ಯದಲ್ಲಿ ಎಷ್ಟೇ ಗಟ್ಟಿಯಾಗಿ ಗೋಚರಿಸಿದರು ಅಂತರಂಗದ ಕ್ಷೋಭೆಯಲ್ಲಿ ಇಂಚಿಂಚೆ ದಹಿಸುತ್ತ ಹೋಗುತ್ತಾಳೆ. ಅವಳ ಎಷ್ಟೊ ವಿಚಾರಗಳು ಬಾಹ್ಯವಾಗಿ ಪ್ರಕಟವಾಗುವುದಿಲ್ಲ. ಅವು ಅಂತರಂಗದಲ್ಲಿ ಬೇರೊಂದು ಸ್ವರೂಪದಲ್ಲಿ ನರ್ತಿಸುತ್ತವೆ. ಸುಮನ ತನ್ನೊಳಗೆ ಬೆಳೆಯುತ್ತಿರುವ ರಾಜೀವನ ಮಗುವಿನ ವಿಚಾರವನ್ನು ತಾಯಿಗಾಗಲಿ, ಮನೆಯವರಿಗಾಗಲಿ ಹೇಳದೆ ಮನದೊಳಗಿರಿಸಿಕೊಳ್ಳುತ್ತಾಳೆ. ಇವಳ ಅಂತರಂಗದ ವಿಚಾರಗಳು ರತ್ನಾಕರ ರಾಜೀವ ಬಿಟ್ಟರೆ ಬೇರೆಯವರೊಂದಿಗೆ ಪ್ರಕಟಗೊಳ್ಳುವುದಿಲ್ಲ.
ಈ ತರಹದ ಭ್ರಮೆಯಲ್ಲಿ ವಿಹರಿಸುವ ಸಮಸ್ಯೆ ಸುಮನಳಲ್ಲಿ ಮಾತ್ರ ಕಾಣಿಸುತ್ತದೆ ಎಂದು ಕಥನ ಸರಳೀಕರಿಸುವುದಿಲ್ಲ. ಇದು ರಾಜೀವನು ಎದುರಿಸುತ್ತಿರುವ ಸಮಸ್ಯೆಯು ಹೌದು. ಸುಮನಳಷ್ಟು ತೀವ್ರವಾಗಿ ರಾಜೀವನ ಮನೋವ್ಯಾಪರ ಪ್ರಕಟವಾಗುವುದಿಲ್ಲ. ಅವನೂ ಸುಮನಳ ಹಾಗೆ ಭ್ರಮಾತ್ಮಕ ಜಗತ್ತಿನಲ್ಲಿ ಸುಖಿಸುವವನು. ಇವನು ತನ್ನ ಬಾಲ್ಯದ ಸಹಪಾಠಿ ರೇಣುಕಳ ನೆನಪಿನ ಮಂಪರಿನಲ್ಲಿ ಮುಳುಗಿದ್ದಾನೆ. ಇದೇ ಕಾರಣಕ್ಕೆ ಪತ್ನಿಯಿಂದ ವಿಚ್ಛೇದನ ಪಡೆದವನು. ಈ ಸಮಸ್ಯೆಯಿಂದ ಪಾರಾಗಲು ಆಗದೆ ನಿದ್ರೆಮಾತ್ರೆಗೆ ಶರಣಾದವನು. ಇವರಿಬ್ಬರ ನಡುವೆ ವಯೋಮಾನದ ಅಂತರವನ್ನು ಬಿಟ್ಟರೆ ಎದುರಿಸುತ್ತಿರುವ ಸಮಸ್ಯೆಯ ಸ್ವರೂಪ ಒಂದೇ ಆಗಿದೆ. ಸಮನ ರತ್ನಾಕರನಿಂದ ದೇಹಸುಖವನ್ನು ಪಡೆದವಳು. ಜಾತಿ ಸಮಸ್ಯೆಯ ಕಾರಣಕ್ಕೆ ಅವನಿಂದ ತಿರಸ್ಕೃತಳಾದವಳು. ಆದರೆ ರಾಜೀವನದು ರೇಣುಕಳ ಜೊತೆಗಿನದು ಏಕಮುಖಿ ಪ್ರೀತಿಯ ಸಂಬಂಧ. ಆದರು ಅವಳ ಹಾಡು, ನೆನಪಿನಿಂದ ಮುಕ್ತನಾಗಲು ರಾಜೀವನಿಗೆ ಸಾಧ್ಯವಾಗುವುದಿಲ್ಲ. ಜೀವನ ಪೂರ್ತಿ ಈ ಕಾಡುವ ನೆನಪಿನ ಮೂಟೆಯನ್ನು ಹೊತ್ತು ನರಳಿದ್ದಾನೆ. ರಾಜೀವ ಈ ನೆನಪನ್ನು ಯಾರೆದುರೂ ಬಿಚ್ಚಿಟ್ಟು ಹಗುರಾದವನಲ್ಲ. ತನಗೆ ಸಂಗಾತಿಯಾಗಿ ಬಂದ ಸುಮನಳು ತನ್ನಂತೆ ಎಂದು ತಿಳಿದು ಈ ವಿಚಾರವನ್ನು ಹಂಚಿಕೊಂಡಿದ್ದಾನೆ. ಹೆಣ್ಣು ಅಲ್ಲದ ಗಂಡು ಅಲ್ಲದ ಸ್ಥಿತಿಯಲ್ಲಿ ನರಳುವ ತಾರನಾಥ ಈ ಸಂಗತಿಯನ್ನು ಅಂತಸ್ಥವಾಗಿಟ್ಟುಕೊಂಡವನು. ಸಾಂದರ್ಭಿಕವಾಗಿ ಇದು ರಾಜೀವ ಸುಮನರ ಎದುರು ಪ್ರಕಟವಾಗುವವರೆಗು ಯಾರಿಗು ತಿಳಿದಿರಲಿಲ್ಲ. ಈ ತರಹದ ಹಲವು ಒಳಸುಳಿಗಳನ್ನು ಕಥನ ಅಂತರಂಗದಲ್ಲಿ ಇರಿಸಿಕೊಂಡಿದೆ.
ಕಾರ್ಪೊರೇಟ್ ಕಂಪೆನಿಯ ಉದ್ಯೋಗದಲ್ಲಿರುವ ಇವರಿಗೆ ಈ ಗೀಳು ಏಕೆ ಅಂಟಿಕೊಂಡಿದೆ ಎಂಬ ಪ್ರಶ್ನೆ ಎದುರಾಗುತ್ತದೆ. ಇದು ರಾಜೀವ, ಸುಮನಳ ಮನವು ಸೃಷ್ಟಿಸಿಕೊಂಡ ಹಳವಂಡವೆ, ತನ್ನ ಜೀವನ, ಉದ್ಯೋಗ ಸೃಷ್ಟಿಸಿದ ಒತ್ತಡದಿಂದ ಪಾರಾಗುವ ಹೊರರೂಪವೆ, ಅಥವ ಸಮಾಜದ ಕಟ್ಟುಗಳನ್ನು ಮೀರಲು ಸಾಧ್ಯವಾಗದೆ ಅದರಿಂದ ಹೊರಬರಲು ಕಟ್ಟಿಕೊಂಡ ಉಪಾಯವೆ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಕಥನದ ಆಂತರ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇದು ಕೆಲಸದ ಒತ್ತಡದಿಂದ ಪಾರಾಗುವ ಹೊರದಾರಿಯಾಗಿಯೆ ಗೋಚರಿಸುತ್ತದೆ. ರೇಣುಕಳಿಗೆ ರಾಜೀವನ ನೆನಪುಗಳಿದ್ದರು ಅದು ಬಾಹ್ಯವಾಗಿ ಪ್ರಕಟವಾಗುವುದಿಲ್ಲ. ಅದೊಂದು ಗೀಳು ಎಂಬಂತೆ ಕಥನ ಅಭಿವ್ಯಕ್ತಿಸುವುದಿಲ್ಲ. ಸುಮನಳ ಮನೆಯ ಮಾಲಿಕ ಗಿಡ, ಮರಗಳೊಂದಿಗೆ ಮಾತನಾಡುವ ಚಿತ್ರಣವಿದೆ. ಮನೆಯಲ್ಲಿ ಮಗ ಸೊಸೆಯಿಲ್ಲದ ಮಾತಿನ ಕೊರತೆಯನ್ನು ಹೀಗೆ ನೀಗಿಸಿಕೊಳ್ಳುತ್ತಾನೆ. ಇದನ್ನು ಗ್ರಹಿಸುವಾಗ ಇದು ನಗರದ ಒತ್ತಡದ ಬದುಕು ಸೃಷ್ಟಿಸಿದ ಸಮಸ್ಯೆಯೆಂಬ ಸೂಚನೆ ದೊರೆಯುತ್ತದೆ.
ತೆಲುಗು ಮಿಶ್ರಿತ ತತ್ವಪದಗಳನ್ನು ಹಾಡುವ ಹುಚ್ಚನ ಪಾತ್ರ ಚಿತ್ರಣ ಕಥನದಲ್ಲಿದೆ. ಇವನ ಪದಗಳು ಸುಮನಳನ್ನು ಕ್ಷಣಿಕವಾಗಿಯಾದರು ಮಂಪರಿನಿಂದ ಪಾರುಮಾಡಿ ಸಂತೈಸಬಲ್ಲವು. ಯಾವ ಒತ್ತಡಗಳಿಗು ಸಿಲುಕದ, ಲೋಕದ ದೃಷ್ಟಿಯಲ್ಲಿ ಮರುಳನಾದ ಹುಚ್ಚನ ಗೀತೆಗಳಲ್ಲಿ ಆಧ್ಯಾತ್ಮಿಕ ಶಾಂತಿ ಸುಮನಳಿಗೆ ದೊರೆಯುತ್ತದೆ. ಈ ಆದ್ಯಾತ್ಮಿಕ ಆಯಾಮದಿಂದಲೆ ಹುಚ್ಚನು ನಿರ್ಮಿಸಿಕೊಂಡ ಜೋಪಡಿಯು ಕಥನಕ್ಕೆ ಕಲಾತ್ಮಕವಾಗಿ ಕಾಣುತ್ತದೆ. ಇವನು ಕಣ್ಮರೆಯಾದಾಗ, ಸಾಂತ್ವನ ಗುಣವುಳ್ಳ ಅವನ ಪದ ಕೇಳದೆ ಸುಮನ ತಲ್ಲಣಿಸುತ್ತಾಳೆ. ಹುಚ್ಚನೆಡೆಗಿನ ಹಂಬಲವು ರತ್ನಾಕರನ ಹಂಬಲದಷ್ಟೆ ತೀವ್ರವಾಗಿ ಸುಮನಳನ್ನು ಕಾಡುತ್ತದೆ.
*****
ಸೇರುವಿಕೆ ಮತ್ತು ಆಗಲಿಕೆ ಎರಡು ಮುಖ್ಯ ಕ್ರಿಯೆಯಾಗಿ ಕಥನದುದ್ದಕ್ಕು ಕ್ರಿಯಾಶೀಲವಾಗಿದೆ. ಇದು ಸುಮನ ರತ್ನಾಕರ, ರಾಜೀವ ಸುಮನ, ಅಂಜನಪ್ಪ ರೇಣುಕ, ರಾಜೀವ ರೇಣುಕ, ಅಲ್ಲಭಕ್ಷ ತನ್ನೂರಿನ ಹಿಂದು ಧರ್ಮೀಯರು ಹೀಗೆ ಹಲವು ಆಯಾಮಗಳಲ್ಲಿ ಶೋಧಿತವಾಗಿದೆ. ಗ್ರಾಮ್ಯ ಬದುಕು, ನಗರ ಜೀವನ ಎರಡೂ ಸಹ ತೊರೆಗಳಾಗಿ ಈ ಕಥನದುದ್ದಕ್ಕು ಒಟ್ಟಿಗೆ ಸಾಗುತ್ತವೆ. ಗ್ರಾಮ್ಯ ಬದುಕನ್ನು ಜಾತೀಯತೆ, ಬಚ್ಚರೆಡ್ಡಿಯ ಜಮೀನ್ದಾರಿಕೆಯ ದರ್ಪ, ಲೈಂಗಿಕ ಶೋಷಣೆ ಹೀಗೆ ಹಲವು ಆಯಾಮಗಳಲ್ಲಿ ಕಥನ ಶೋಧಿಸಿದೆ. ಬಚ್ಚರೆಡ್ಡಿಯ ಲೈಂಗಿಕತೆಗೆ ಅನೇಕ ಅಸಹಾಯಕ ಹೆಣ್ಣುಮಕ್ಕಳು ಬಲಿಯಾಗಿದ್ದಾರೆ. ಇವನ ಕಾಮ ತೃಷೆಗೆ ಬಲಿಯಾದವರಲ್ಲಿ ರೇಣುಕಳು ಒಬ್ಬಳು. ವಿಷಯ ತಿಳಿದ ಅಂಜನಪ್ಪ ರೆಡ್ಡಿಯನ್ನು ಎದುರಿಸಲಾರದೆ ಪತ್ನಿ ರೇಣುಕಳನ್ನು ಹೊಡೆದು ಹೈರಾಣಾಗಿಸುತ್ತಾನೆ. ಕೊನೆಗೊಂದು ದಿನ ಇದನ್ನು ನೋಡಲಾಗದೆ ಪತ್ನಿಯನ್ನು ತೊರೆದು ಹೋಗುತ್ತಾನೆ. ರೇಣುಕ ಕ್ಯಾನ್ಸರ್ ವ್ಯಾದಿಗೆ ತುತ್ತಾದ ವಿಷಯ ತಿಳಿದು ಮರಳಿಬಂದು ಅವಳ ಆರೈಕೆಗೆ ನಿಲ್ಲುತ್ತಾನೆ. ಬಚ್ಚರೆಡ್ಡಿಯ ಜಾತಿಪ್ರಜ್ಞೆ ರತ್ನಾಕರ, ಸುಮನಳ ಪ್ರೀತಿಗೆ, ವಿವಾಹಕ್ಕೆ ತಡೆಯೊಡ್ಡುತ್ತದೆ. ಇವೆಲ್ಲವನ್ನು ಗ್ರಾಮ್ಯ ಜೀವನದ ಭಿನ್ನ ರೂಪಗಳಾಗಿ ಕಥನ ಅಭಿವ್ಯಕ್ತಿಸಿದೆ.
ಗ್ರಾಮೀಣ ಪ್ರದೇಶದಲ್ಲಿ ಜಾತೀಯತೆಯ ಜೊತೆಗೆ ಮತೀಯತೆಯ ಕ್ರೌರ್ಯವು ತಲೆಯೆತ್ತಿದೆ. ಇದು ಅಲ್ಲಭಕ್ಷಿಯನ್ನು ಮಾನವನಾಗಿ ಕಾಣದೆ ತಿರಸ್ಕರಿಸಿದೆ. ಅವನ ಮಾಂಸದ ವ್ಯಾಪಾರಕ್ಕು ಮತೀಯತೆಯ ನಂಜು ತಟ್ಟಿದೆ. ಅಂಜನಪ್ಪ, ರೇಣುಕ, ರತ್ನಾಕರರನ್ನು ಬಿಟ್ಟರೆ ಇಡೀ ಊರು ಅವನನ್ನು ಹೊರಗಿಟ್ಟಿದೆ. ಜಮೀನ್ದಾರಿ ಕುಟುಂಬದ ಬಚ್ಚರೆಡ್ಡಿಯ ಪುತ್ರ ರತ್ನಾಕರ ತಂದೆಯ ಕೌರ್ಯ, ಜಾತೀಯತೆಯ ಹಾದಿ ತೊರೆದು ಮಾನವೀಯತೆಯತ್ತ ಸಾಗಿದ್ದಾನೆ. ಮಾನವೀಯತೆಯ ಪ್ರತಿರೂಪವಾಗಿದ್ದ ಅಲ್ಲಭಕ್ಷನ ಮಗನು ಧರ್ಮದ ಅಮಲೇರಿಸಿಕೊಂಡು ಭಯೋತ್ಪಾದಕನಾಗಿದ್ದಾನೆ. ಇದು ಇಂದಿನ ಗ್ರಾಮ್ಯ ಬದುಕು ಸಾಗುತ್ತಿರುವ ಎರಡು ತುದಿಗಳಾಗಿ ಕಥನ ಕಾಣಿಸಿದೆ. ಮತ್ತೊಂದೆಡೆ ಕಾರ್ಪೊರೇಟ್ ಕೇಂದ್ರಿತ ನಗರದ ಕಂಪೆನಿಯು ಪ್ರಮಾಣೀಕತೆ, ನೈತಿಕ ಮೌಲ್ಯಗಳ ಪ್ರತೀಕವಾಗಿದ್ದ ರಾಜೀವನನ್ನು ಉದ್ಯೋಗದಿಂದ ತೆಗೆದುಹಾಕಿದೆ. ತಾರನಾಥನು ತನ್ನ ಪದವಿಗೆ ರಾಜೀನಾಮೆ ನೀಡುವ ತಿರುವಿಗೆ ತಂದು ನಿಲ್ಲಿಸಿದೆ. ಅನೈತಿಕತೆ, ವಂಚನೆ, ಸ್ತ್ರೀ ಲೋಲನಾದ ಅರವಿಂದನಿಗೆ ಕಂಪೆನಿ ಮಣೆಹಾಕಿದೆ. ಈ ಎರಡು ಪಲ್ಲಟಗಳನ್ನು ಕಥನ ಸೂಕ್ಷ್ಮವಾಗಿ ಅಭಿವ್ಯಕ್ತಿಸಿದೆ.
ಒಂದು ಬಿಂದುವಿನಿಂದ ಆರಂಭವಾದ ಕಥನ ವೃತ್ತದ ರೀತಿ ಅದೇ ಬಿಂದುವಿಗೆ ಬಂದು ತಲುಪಿ ಮುಕ್ತಾಯವಾಗುತ್ತದೆ. ಇದರರ್ಥ ಕಥನ ಏಕಮುಖಿಯಾಗಿ, ಸರಳ ರೇಖಾತ್ಮಕವಾಗಿ ಚಲಿಸುತ್ತದೆಂದಲ್ಲ. ಇದು ಹಲವು ಸಂಕೀರ್ಣ ಆಯಾಮಗಳನ್ನು ಒಳಗೊಳಸಿಕೊಂಡಿದೆ. ರಾಜೀವನು ಬಯಸಿದ ರೇಣುಕ ಸುಮನಳ ತಾಯಿ ಎಂಬ ಸತ್ಯದ ಬಿಂದುವಿಗೆ ತಂದು ನಿಲ್ಲಿಸುತ್ತದೆ. ರತ್ನಾಕರ ಸುಖದ ಬಯಕೆಯ ಮಂಪರು ಸುಮನಳನ್ನು ರಾಜೀವನಿಂದ ದೇಹ ಸುಖವನ್ನು ಪಡೆಯುವಂತೆ ಮಾಡಿದೆ. ಇದರ ಪರಿಣಾಮವಾಗಿ ಅವಳ ಒಡಲಲ್ಲಿ ರಾಜೀವನ ಕುಡಿ ಅರಳಿದೆ. ಇದು ಹೊಸ ಸವಾಲುಗಳಿಗೆ ಎದುರಾಗಬೇಕಾದ ತಿರುವಿಗೆ ತಂದು ನಿಲ್ಲಿಸಿದೆ. ನಗರ ಜೀವನಕ್ಕೆ ಶರಣಾದ ಇವರನ್ನು ಕೊಡದವಾಡಿಗೆ ತಂದು ನಿಲ್ಲಿಸಿ ಮುಖಾಮುಖಿಯಾಗಿಸಿದೆ. ಇಲ್ಲಿಂದ ಮುಂದಕ್ಕೆ ರಾಜೀವ, ಸುಮನರ ಬದುಕು ಹೊಸ ಜಿಗಿತವನ್ನು ಕಾಣಬೇಕೆಂಬ ಅಂತಸ್ಥ ಸೂಚನೆಯೊಂದಿಗೆ ‘ಮಂಪರುʼ ಕಾದಂಬರಿ ಮುಗಿಯುತ್ತದೆ.
ವರ್ತಮಾನದಿಂದ ಗತಕ್ಕೆ ಅಂದರೆ ವಾಸ್ತವದಿಂದ ನೆನಪಿನ ಮಂಪರಿಗೆ ಚಲಿಸುವ ಕಥನ ತಂತ್ರ, ನಿರೂಪಣ ವಿಧಾನ ಕಥನದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಗತ ಮತ್ತು ವರ್ತಮಾನದ ನಡುವಲ್ಲಿ ಕಥನ ತೆರೆದುಕೊಳ್ಳುತ್ತದೆ. ಕೋಲಾರ ಸೀಮೆಯ ತೆಲುಗು ಮಿಶ್ರಿತ ಕನ್ನಡ ಭಾಷೆಯ ಬಳಕೆ ಕಥನಕ್ಕೆ ಭಿನ್ನ ಆಯಾಮವನ್ನು ನೀಡಿದೆ. ಹುಚ್ಚನು ಹಾಡುವ ತತ್ವಪದಗಳು, ತೆಲುಗು ಮಿಶ್ರಿತ ನುಡಿಯಲ್ಲಿನ ಕಾವ್ಯತ್ಮಕ ಲಯವು ಗಮನ ಸೆಳೆಯುತ್ತದೆ. ಚಿಮನಹಳ್ಳಿ ರಮೇಶಬಾಬು ಅವರ ʼಮಂಪರುʼ ಕಾದಂಬರಿಯು ತನ್ನ ವಸ್ತು ಮತ್ತು ಪ್ರಯೋಗಶೀಲತೆಯಿಂದ ಕನ್ನಡ ಕಥನ ಲೋಕದಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ.
(ಕೃತಿ: ಮಂಪರು (ಕಾದಂಬರಿ), ಲೇಖಕರು: ಚೀಮನಹಳ್ಳಿ ರಮೇಶಬಾಬು, ಪ್ರಕಾಶಕರು:ಅನಿಮ ಪುಸ್ತಕ, ಚಿಂತಾಮಣಿ, ಬೆಲೆ: 204/-)
ಸುಧಾಕರ ದೇವಾಡಿಗ ಬಿ ಇವರು ಕುಂದಾಪುರ ಸಮೀಪದ ಕೋಟೇಶ್ವರದವರು. ಪ್ರಸ್ತುತ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಲಲಿತ ಪ್ರಬಂಧಗಳನ್ನು ಕುರಿತ ಅಧ್ಯಯನಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ. ‘ಉಳಿದ ಆಕಾಶʼ ಎಂಬುದು ಪ್ರಕಟಿತ ಕೃತಿಯಾಗಿದೆ.