Advertisement
‘ಮೋಹಿತ’ನ ಮೋಹಕ ಕವಿತೆಗಳು: ಅಬ್ದುಲ್‌ ರಶೀದ್‌ ಕವನ ಸಂಕಲನಕ್ಕೆ ಎಸ್‌. ಮಂಜುನಾಥ್‌ ಮುನ್ನುಡಿ

‘ಮೋಹಿತ’ನ ಮೋಹಕ ಕವಿತೆಗಳು: ಅಬ್ದುಲ್‌ ರಶೀದ್‌ ಕವನ ಸಂಕಲನಕ್ಕೆ ಎಸ್‌. ಮಂಜುನಾಥ್‌ ಮುನ್ನುಡಿ

ಕರಗಿ-ಹರಿಯುವ- ಈ ಶಬ್ದಗಳನ್ನು ಬಳಸಬೇಕಾಗುವುದರಿಂದ ರಶೀದರದ್ದು ಒಂದು ‘ದ್ರವ ಪ್ರತಿಭೆ’! ತನ್ನನ್ನು ಪೂರಾ ಬಿಟ್ಟುಕೊಟ್ಟೇ ಹರಿದುಹೋಗುವಂತಿರುವುದು ನದಿಯ ಜೀವಂತಿಕೆ ತಾನೇ? ಇಷ್ಟು ಹೇಳಿದರೆ ರಶೀದರ ಕವಿತೆಯ ಗುಣವನ್ನು ಪೂರ್ತಿ ಹೇಳಿದಂತಾಗುವುದಿಲ್ಲ. ಅಷ್ಟು ವೈಚಿತ್ರ್ಯಗಳನ್ನು ಒಳಗೊಂಡುದು ಅದು. ಮಾತಿನಲ್ಲಿ ಪ್ರತಿಮೆಯಲ್ಲಿ ಚಿಂತನೆಯಲ್ಲಿ ಭಾವನೆಯಲ್ಲಿ ಹಾಗೆ ವಿಚಿತ್ರವಾದುದು. ಒಂದು ಕಾರಣ: ಇದು ಕವಿತೆಗೆ ಸೇರುವುದು. ಇದು ಸೇರಲಾರದ್ದು ಎಂಬ ಭೇದವಿರದೆ ಏನೆಲ್ಲವನ್ನು ಬೇಕಾದರೂ ಒಳಗೊಳ್ಳುವಂಥದು. ಹಾಗಿದ್ದೂ ಅಂತಿಮವಾಗಿ ಸಹಜತೆಯೇ ಹೆಗ್ಗುರುತಾದ್ದು.
ಅಬ್ದುಲ್‌ ರಶೀದ್‌ ಕವನ ಸಂಕಲನ “ನರಕದ ಕೆನ್ನಾಲಿಗೆಯಂಥ ನಿನ್ನ ಬೆನ್ನ ಹುರಿ”ಗೆ ಎಸ್‌. ಮಂಜುನಾಥ್‌ ಬರೆದ ಮುನ್ನುಡಿ

ಮಲ್ಲಿಕಾರ್ಜುನ ಮನ್ಸೂರರನ್ನು ಒಮ್ಮೆ ಯಾರೋ ಕೇಳಿದರಂತೆ: ನೀವು ಸ ರಿ ಗ ಮ ಎಂದು ಸ್ವರ ಯಾಕೆ ಹಾಡುವುದಿಲ್ಲ-ಎಂದು. ಅದಕ್ಕೆ ಮನ್ಸೂರರು-ಅದೆಲ್ಲ ಬೇರೆ ಬೇರೆ ಅಲ್ಲ, ಒಂದರಿಂದಲೇ ಮತ್ತೊಂದು, ಸಂಗೀತ ತುಂಡುಗಡಿಯದ ಪ್ರವಾಹ ಎಂದರಂತೆ. ರಶೀದರೆ ಕವಿತೆ ಕೂಡಾ ಹಾಗೇ, ಅವರ ಕವಿತೆಯ ವಿಶೇಷವೇ ಅದು ಒಂದು ಧಾರೆ, ಒಂದು ಹರಿವಿನಂತಿರುವುದು, ತರ್ಕ, ವಿಚಾರ, ಬುದ್ಧಿ, ಶಬ್ದಾರ್ಥ ಇದೆಲ್ಲ ಕರಗಿ ಒಂದು ಸಂವೇದನೆಯಾಗಿ ಹರಿಯುವುದು.

(ಅಬ್ದುಲ್‌ ರಶೀದ್‌)

ಕರಗಿ-ಹರಿಯುವ- ಈ ಶಬ್ದಗಳನ್ನು ಬಳಸಬೇಕಾಗುವುದರಿಂದ ರಶೀದರದ್ದು ಒಂದು ‘ದ್ರವ ಪ್ರತಿಭೆ’! ತನ್ನನ್ನು ಪೂರಾ ಬಿಟ್ಟುಕೊಟ್ಟೇ ಹರಿದುಹೋಗುವಂತಿರುವುದು ನದಿಯ ಜೀವಂತಿಕೆ ತಾನೇ?

ಇಷ್ಟು ಹೇಳಿದರೆ ರಶೀದರ ಕವಿತೆಯ ಗುಣವನ್ನು ಪೂರ್ತಿ ಹೇಳಿದಂತಾಗುವುದಿಲ್ಲ. ಅಷ್ಟು ವೈಚಿತ್ರ್ಯಗಳನ್ನು ಒಳಗೊಂಡುದು ಅದು. ಮಾತಿನಲ್ಲಿ ಪ್ರತಿಮೆಯಲ್ಲಿ ಚಿಂತನೆಯಲ್ಲಿ ಭಾವನೆಯಲ್ಲಿ ಹಾಗೆ ವಿಚಿತ್ರವಾದುದು. ಒಂದು ಕಾರಣ: ಇದು ಕವಿತೆಗೆ ಸೇರುವುದು. ಇದು ಸೇರಲಾರದ್ದು ಎಂಬ ಭೇದವಿರದೆ ಏನೆಲ್ಲವನ್ನು ಬೇಕಾದರೂ ಒಳಗೊಳ್ಳುವಂಥದು. ಹಾಗಿದ್ದೂ ಅಂತಿಮವಾಗಿ ಸಹಜತೆಯೇ ಹೆಗ್ಗುರುತಾದ್ದು.

ಅಂದರೆ ಅದು ಜೀವದ ಸಹಜ ಹರಿವು. ಹರಿವಿಗೆ ಮಲಿನ ನಿರ್ಮಲದ ಹಂಗೇನಿದೆ? ಮತ್ತು ಅದಕ್ಕೆ ಯಾವುದೇ ತತ್ವ, ವಿಚಾರಗಳ ನಿರ್ಬಂಧವೂ ಇಲ್ಲ. ಹಾಗಾಗಿ ಬುದ್ದಿಯನ್ನು ಬಳಸಿ ಹಾಯ್ದು ಜೀವವನ್ನು ನೇರವಾಗಿ ಮುಟ್ಟುವುದು ಅದರ ಹವಣಿಕೆ. ಮತ್ತೆ ಸಂಗೀತದ ಹಾಗೆ! ಆದರೆ ‘ಕಿಂಚಿದೂನ’ವಾಗಿ.

ಆ ಜೀವ ಈ ಕವಿತೆಗಳಲ್ಲಿ ಗೆಳತಿ, ಎಡೆಬಿಡದ ಸಂಗಾತಿ. ಆದರೂ ಅವಳು ಸ್ವಭಾವತಃ ಚಂಚಲೆ, ಪಾತರಗಿತ್ತಿ. ಗುರು, ದೇವರು ಯಾವುದನ್ನೂ ಗಟ್ಟಿಯಾಗಿ ನಂಬಲಾಗದ ಕನಸಿನ ಈ ಬದುಕಿನಲ್ಲಿ, ನಂಬಿಕೆ ಸಾಧ್ಯವಾಗದಿದ್ದರೂ ತುಸು ಹೆಚ್ಚು ನೆಚ್ಚಿಕೊಳ್ಳಬೇಕೆನಿಸುವ ಮಾಯೆ-ಹೆಣ್ಣು. ಅದೊಂದು ‘ಕಾಮಕಲುಷಿತ ಪ್ರೇಮ’

ನದಿಗಳಿಗೆ ನೀವಿಟ್ಟ ಹೆಸರು ಹಿಡಿದು
ಮಲೆಗಳಿಗೆ ನೀವಿಟ್ಟ ಹೆಸರು ಹಿಡಿದು
ಎಂದು ಶುರುವಾಗುವ ‘ಧರ್ಮಗುರುವಿಗೆ’ ಎಂಬ ಪದ್ಯ ನೋಡಿ, ದೇವರು ಸೃಷ್ಟಿ ಮಾಡುತ್ತಾನೆ. ಅದಕ್ಕೆ ಹೆಸರಿಟ್ಟು ಕರೆಯುವವನು ಗುರು. ಎಲ್ಲ ಹೆಸರೂ ದೇವನ ಹೆಸರೇ. ಆದರೆ ಎಲ್ಲ ಹೆಸರೂ ಬರೀ ಇಟ್ಟ ಹೆಸರೇ ಆಗಿರುವುದರಿಂದ ಅವ ನಿಜವಲ್ಲ. ನಿಜ ದೇವರಾದರೆ, ಭಾಷೆ ನಾವು ಮಾಡಿಕೊಂಡಿದ್ದು-ಸುಳ್ಳು, ಗುರು, ದೈವದ ಬಗ್ಗೆ ನಮ್ಮ ಕಲ್ಪನೆಯೂ ಕೃತಕವೇ. ನಮ್ಮ ಅರಿವಿನ ಮೊತ್ತವೂ ಅಂಥದೇ ಹಾಗಾಗಿ ಈ ಕವಿ ಆ ಬಗೆಯ ಅರಿವಿನ ಬಗ್ಗೆ ಒಲವುಳ್ಳವರಲ್ಲ, ಈ ಬಗೆಯ ಮನಸ್ಥಿತಿಯ ಎದುರಾಗುವವರು ಮೂವರು ಹುಡುಗಿಯರು. ನೀರ ಮೇಲೆ ಬರೆದ ಚಿತ್ತಾರದಂತೆ ನರಕವಾಗಿ ನಿಜವೆನ್ನಿಸುವವರು. ಹೀಗೆಲ್ಲ ಜಿಜ್ಞಾಸೆಯ ಮೂಲಕ ಹಾದು ಬರುವ ಕವಿ ಮನಸ್ಸು ಗಳಿಸುವುದು ಒಂದು ಅನನ್ಯವಾದ ದೈವಿಕತೆಯನ್ನು, ಅದೇ ಬದುಕಿನ ಗುಣವೆಂದು ಸೂಚಿಸುವುದು ರಶೀದ್ ಕವಿತೆ. ಈ ಕವಿಯ ಜೀವಾಳವೂ ಇದೇ-ಬುದ್ಧಿಗೆಟಕುವ ಸುಲಭವಾದ ಸತ್ಯ ಮಿಥ್ಯಗಳನ್ನು ಪರಿಗಣಿಸದ, ಸುಲಭವಾದ ಸರಿ-ತಪ್ಪು, ಶೀಲ- ಅಶ್ಲೀಲಗಳನ್ನು ಕಡೆಗಣಿಸಿದ ಈ ‘ಹುಚ್ಚು ಬತ್ತಲೆ ದಿವ್ಯತೆ’, ರಶೀದರ ಕವಿತೆ ಇಂಥ ಅಪರೂಪದ ಸಾಹಸದ ‘ನಾಚಿಕೆಗೆಟ್ಟ’ ಕವಿತೆ. ಹಾಗಾಗಿಯೇ ಅದು ನಮ್ಮನ್ನು ಅಚ್ಚರಿಗೊಳಿಸುವಷ್ಟು ಚಂದ, ವಿಶೇಷ!

ಅವರು ಅನುವಾದಿಸಿರುವ ಸೂಫಿ ಸಂತ ರೂಮಿಯ ಬಗ್ಗೆ ಅವರಿಗಿರುವ ಪ್ರೇಮಕ್ಕೂ ಇದೇ ಕಾರಣ.

ರಶೀದರ ಕವಿತೆಯಲ್ಲಿ ಹೀಗೆ ಯಾವುದೇ ಅರ್ಥವನ್ನು ಹೆಕ್ಕಿ ತೆಗೆದ ತಕ್ಷಣ ಅದು ಹಾಗಲ್ಲ, ಅದು ತಾನಷ್ಟೇ- ಎಂಬಂತೆ ಮೋಹಕವಾಗಿರುತ್ತದೆ. ಇಲ್ಲಿ ‘ಮೋಹಿತನ ಪದ್ಯಗಳು’ ಎಂದು ಬರೆದ ಹಲವು ಪುಟ್ಟ ಪದ್ಯಗಳಿವೆ. ಜೀವನವನ್ನು ಅರ್ಥೈಸುವ ಉದ್ಯೋಗಕ್ಕಿಂತ ಅದರ ಹುಚ್ಚು ಮೋಹಕತೆ ಮತ್ತು ಅದರ ಬಗ್ಗೆ ಹುಚ್ಚು ಮೋಹಿತತೆ ಲೋಕದಲ್ಲಿ ಕವಿತೆಯನ್ನು ಹುಟ್ಟಿಸುತ್ತದೆ-ಎಂಬುದು ರಶೀದರ ಧೋರಣೆ.

ಇಂಥ ಜೀವದ ಜಟಿಲತೆಯನ್ನು ವ್ಯಕ್ತಪಡಿಸುವ ‘ಬಂದೇ ನವಾಜ್’ ಇಲ್ಲಿರುವ ಮುಖ್ಯ ಕವಿತೆ. ‘ಹಜ್ ಹಬ್ಬದ ನೆನಪ’ಲ್ಲಿ ಹೊರಟ ಬಾಲಕ ಈಗೊಮ್ಮೆ ‘ಬಂದೇ ನವಾಜ್’ ತಲುಪಿದ್ದಾನೆ. ಈವರೆಗೆ ಹೇಳಿದ್ದೆಲ್ಲಕ್ಕಿಂತ ಬೇರೆಯದೊಂದು ಅಂಶವನ್ನು ಒಳಗೊಂಡ ಕವಿತೆ ಇದು. ಬಹುಷಃ ಆರ್ತ ಪ್ರಾರ್ಥನೆಯ ಅಂಶ ಅದು. ಯಾವುದೂ ಕಚ್ಚಿ ನಿಲ್ಲದ, ಎಲ್ಲವೂ ಹರಿದು ಹೋಗುವ ಕನಸಿನಂಥ ಬದುಕಿನೊಳಗಿಂದ ಹೊಮ್ಮುವ ಮೊರೆ ಅದು ಅಂತಿಮವಾದ್ದು. ಮನುಷ್ಯನ ಒಳದ್ರವ್ಯದ್ದು.

ಇದರ ಪ್ರಾರ್ಥನೆಯಾದರೂ-ನನ್ನನ್ನು ಇಲ್ಲದಂತಾಗಿಸು ಬಂದೇ ನವಾಜ್ ಎಂದೇ. ಯಾಕೆಂದರೆ ಆತನೂ ಇಲ್ಲದಂತೆಯೇ ಇರುವವನು ಅಥವಾ ಇರುವಂತೆ ಇಲ್ಲದಿರುವವನು;
‘ಕನಸಲ್ಲಿ ನಿನ್ನ ಖರಪುಟ ಸದ್ದು ಆಕಾಶದಲ್ಲ ಹಾಹಾಕಾರʼ

‘ಈ ಅರೆ ಚಂದ್ರ ಇರುಳು ಈ ನಕ್ಷತ್ರ ರಾತ್ರಿ
ಈ ಮಿಂಚಿಲ್ಲದ ಸದ್ದಿಲ್ಲದ ಆಗಸದಲ್ಲಿ ತೋರಿಸು ನಿನ್ನ ಇರುವುʼ

‘ನಾ ಪರಾಧೀನ ನಿನ್ನ ಪಾದಗಳಲಿ ಹಣೆಯಿಟ್ಟು ಚುಂಬಿಸುತಿರುವೆ ನನ್ನನೇ ನಾನುʼ

(ಭ್ರಮೆ ಮಾತ್ರ ಇರಬಹುದು. ಅಥವಾ ಅನ ಹಲ್‌ ಹಕ್‌ ಎಂಬಂತಿರಬಹುದು)
ಬೊಗಸೆಯಲ್ಲಿ ನರಿವ ಬೆಂಕಿ ಚೆಲುವ ಚೆಲ್ಲುತ್ತ ಹಸಿರು ಮಾಂಸ ನೆತ್ತರು ಹೊತ್ತು ನಡೆಯುತ್ತಿರುವ
ಈ ಚೆಲುವೆಯರು ಆಹಾ ಇವರ ಕಣ್ಣುಗಳು ಇವರ ಗಾಢ ಬೆವರುʼ

(ಇಂದ್ರಿಯಗಳಿಗೆ ಆಗುತ್ತಿರುವ ಈ ಅನುಭವ ಮಾತ್ರ ಸುಲಭವಾಗಿ ಕಡೆಗಣಿಸಲಾಗದಷ್ಟು ನಿಜವೆನಿಸುವಂತಿದೆ!)

ಮತ್ತು ಈ ಕವಿತೆಯ ಹಿಂದೆ ಈ ಮೊರೆ-
‘ಕಣ್ಣಿಂದ ಕಾಣಿಸುತ್ತಿರುವ ಎಲ್ಲವ ಇಲ್ಲದಂತಾಗಿಸು ಹೇ ಗೇಸುದರಾಜ್
ನಾ ಇಲ್ಲಿಂದ ಹೋಗುತಿರುವೆನು
ಇಲ್ಲದ ಆ ಇನ್ನೊಂದು ಶಹರಿನ ದಾರಿ ತೋರಿಸುʼ

-ಸಾವು, ಇರುವು, ಅತೀತತೆ ಎಲ್ಲಕ್ಕೂ ಆಗಿಬರುವ ಈ ಸರಳ ಶಬ್ದಗಳ ಸಹಜ ಸಂಕೀರ್ಣತೆ ಈ ಬದುಕಿನ ಗುಣವೇ ಆಗಿದೆ.

ನನಗನ್ನಿಸುವಂತೆ ಈ ನಾಡಿನಲ್ಲಿ ಇದು ಕವಿತೆಯ ಕಾಲವಲ್ಲ. ಅಭಿಪ್ರಾಯದ ಕಾಲ. ಪ್ರಜಾಪ್ರಭುತ್ವದ ಕಡಾಯಿಯ ಕುದಿತ ಜೋರಾಗಿರುವುದರಿಂದ ಇರಬಹುದು. ಇಂಥ ವೇಳೆ ಅಬ್ದುಲ್‌ ರಶೀದರ ಬಿಲ್‌ಕುಲ್‌ ಅಭಿಪ್ರಾಯ ಶೂನ್ಯವಾದ ಬರೀ ಚೆಲುವಾದ ಕವಿತೆಗಳು ನಮ್ಮ ಕೈಯಲ್ಲಿದ್ದು ನಗುತ್ತಿವೆ. ಹಲವರನ್ನು ಮುದಗೊಳಿಸಬಲ್ಲ ಇದು ಕವಿತೆಗೆ ಕವಿತೆಗಿಂತ ಬೇರೆ ಉದ್ದೇಶಗಳನ್ನು ಮುಖ್ಯವಾಗಿಸುವವರನ್ನು ಪೆಚ್ಚಾಗಿಸಲೂಬಹುದು. ಹೇಗೆಂದರೆ ಯುದ್ಧಕ್ಕೆ ಹೊರಟವನಿಗೆ ಹೂಗುಚ್ಛ ಕೊಟ್ಟ ಹಾಗೆ!

ರಶೀದರ ಕವಿತೆಗೆ ಏನು ಸಿಕ್ಕುತ್ತದೋ, ಅದರಿಂದ ನಾವು ಏನು ಪಡೆಯಬಲ್ಲೆವೋ ಅದು ನಮ್ಮ-ಅದರ ಲಭ್ಯ.‌

(ಕೃತಿ: ನರಕದ ಕೆನ್ನಾಲಿಗೆಯಂಥ ನಿನ್ನ ಬೆನ್ನ ಹುರಿ (ಕವನ ಸಂಕಲನ), ಲೇಖಕರು: ಅಬ್ದುಲ್‌ ರಶೀದ್‌, ಪ್ರಕಾಶಕರು: ವೀರಲೋಕ ಬುಕ್ಸ್‌, ಬೆಲೆ: 130/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ