ನಮಗಿಲ್ಲಿ ಅನಲೆ ಯುದ್ಧದ ನೇರ ಭಾಗಿತ್ವದಿಂದ ನೋವನ್ನು ಅನುಭವಿಸಿ ಹೆಣ್ಣಿನ ಸಲುವಾದ ಹೋರಾಟವನ್ನು ಮಾಡಲು ಆಲೋಚಿಸಿ ಯುದ್ಧವನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಾಳೆ. ಆ್ಯನ್ ಫ್ರಾಂಕ್ ನೇರವಾಗಿ ಯುದ್ಧಕ್ಕೆ ಮುಖಾಮುಖಿಯಾಗದೆ ಇದ್ದರು ಎರಡನೆ ಮಹಾಯುದ್ಧದ ದುಷ್ಟಪರಿಣಾಮಕ್ಕೆ ಮುಖಾಮುಖಿಯಾಗುತ್ತಾಳೆ. ತನ್ನ ಜನಾಂಗಕ್ಕಾದ ಶೋಷಣೆಯನ್ನು ತನಗಾದ ಯಾತನೆಯನ್ನು ಅಳಿಸಲಾಗುವ ನಾಶಪಡಿಸಬಹುದಾದ ಕಾಗದದ ಮೆಲೆ ಭರವಸೆ ಇಟ್ಟು ಬರೆಯುವುದು ಸಾಧನೆಯೇ ಅನ್ನಿಸುತ್ತದೆ.
ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಅನಲೆ ಹಾಗೂ ಆನ್ ಫ್ರಾಂಕ್ ಎಂಬ ಇಬ್ಬರು ವಿಶಿಷ್ಟ ವ್ಯಕ್ತಿಗಳ ಕುರಿತು ಸುಮಾವೀಣಾ ಬರಹ
ಜಗತ್ತು ಇಂದಿಗೆ ಸಂಘರ್ಷದೊಂದಿಗೆ ಹೆಜ್ಜೆಯಿಡುತ್ತಿದೆ. ಯುದ್ಧಗಳು ಮಾನವ ಲೋಕದ ಮಾಯದ ಗಾಯಗಳು. ಅಹಮಿಕೆಯ ಕಾರಣಕ್ಕೆ ನಡೆದ ಒಂದೊಂದು ಯುದ್ಧಗಳೂ ಒಂದೊಂದು ಬೃಹತ್ ವೃಣವೇ. ಈ ಬರೆಹದ ಮೊದಲ ಭಾಗದಲ್ಲಿ ಆ ಕಾಲದಲ್ಲಿಯೇ ಯುದ್ಧ ನಿಲ್ಲಿಸುವ ಪ್ರೇರಕ ಶಕ್ತಿಯಾಗಿ ದುಡಿದು ಆದರೆ ಸೋತ ವಿಭೀಷಣನ ಮಗಳು ಅನಲೆಯ ಕುರಿತ ಪ್ರಸ್ತಾಪ ಮಾಡಿದ್ದೇನೆ. ಎರಡನೆ ಭಾಗದಲ್ಲಿ ಎರಡನೆ ಮಹಾಯುದ್ಧ ಕಾಲದಲ್ಲಿ ನಾಝಿಗಳ ಸ್ವೇಚ್ಛಾಚಾರಕ್ಕೆ ಹೆದರಿ ಸುಮಾರು ಇಪ್ಪತ್ತೈದು ತಿಂಗಳು ಅಡಗುತಾಣದಲ್ಲಿ ಕಳೆದ ಹದಿಮೂರರ ಬಾಲೆ ಆ್ಯನ್ ಫ್ರಾಂಕಳ ಡೈರಿ ಕುರಿತು ಹೇಳಿದ್ದೇನೆ. ಪೌರಾಣಿಕ ಹಿನ್ನೆಲೆಯ ಅನಲೆ ಹಾಗು ಐತಿಹಾಸಿಕ ಹಿನ್ನೆಲೆಯ ಆ್ಯನ್ ಈ ಇಬ್ಬರೂ ಷೋಡಶಿಯರು (ಇಂದಿಗೆ ಪ್ರಸ್ತುತವಾಗಿರುವ ಕುವೆಂಪುರವರ ರಾಮಾಯಣ ದರ್ಶನಂನ ಅನಲೆಯ ಮಾತುಗಳನ್ನೇ ಇಲ್ಲಿ ತೆಗೆದುಕೊಂಡಿದ್ದೇನೆ) ಕನಸುಗಳ ಉಡ್ಡಯನದಲ್ಲಿ ಇರಬೇಕಾದವರು ತಮ್ಮ ಭಿನ್ನ ಆಲೋಚನೆಗಳ ಮೂಲಕ ಗಮನ ಸೆಳೆಯುತ್ತಾರೆ.
ರಾಷ್ಟ್ರಕವಿ ಕುವೆಂಪುರವರ ‘ಶ್ರೀ ರಾಮಾಯಣ ದರ್ಶನಂ’ನ ಲಂಕಾ ಸಂಪುಟದ ಎಂಟನೆಯ ಸಂಚಿಕೆ ‘ನಿನ್ನಮಗಳಲ್ತೆನ್ನವಳ್ ಅನಲೆ’! ಹಾಗು ಶ್ರೀ ಸಂಪುಟದ ಮೂರನೆ ಸಂಚಿಕೆ ‘ದೂರಮಿರದಿನ್ ಸುಗತಿ!’ ಎಂಬ ಅಧ್ಯಾಯಗಳಲ್ಲಿ ಲೋಕೋತ್ತರ ಚಿಂತನೆ ಹೊಂದಿದ್ದ ಇಂದಿನ ಯುವ ಮನಸ್ಸುಗಳಿಗೂ ಸ್ಪೂರ್ತಿಯಾಗಬಲ್ಲ ಅನಲೆಯನ್ನು ನೋಡಬಹುದು.

ಸಹೋದರನ ಅಂತಃಸ್ಥಿತಿಯ ತಿಳಿದ ವಿಭೀಷಣ ತನ್ನ ಮನೆಗೆ ತೆರಳಿದ ಬಳಿಕ ಮಗಳು ಅನಲೆಗೆ ದೊಡ್ಡಯ್ಯ ಅಸ್ವಸ್ಥಗೊಂಡಿರುವ ವಿಚಾರವನ್ನು ತಿಳಿಸಿ ದೊಡ್ಡಮ್ಮನೊಂದಿಗೆ ಆತನ ಶುಶ್ರೂಷೆ ಮಾಡಲು ಕಳುಹಿಸುತ್ತಾನೆ. ಅಂಗೈಯಲ್ಲಿ ಜೀವ ಹಿಡಿದುಕೊಂಡು ಬೆಳಗಾದ ಕೂಡಲೆ ಮತ್ತೆ ತನ್ನಣ್ಣನನ್ನು ನೋಡಲು ಹೋಗುತ್ತಾನೆ.
ತಂದೆಯನ್ನು ಕಂಡ ಕೂಡಲೆ ಅನಲೆ ದೊಡ್ಡಯ್ಯ ಸೌಖ್ಯವಿಲ್ಲ ಎಂಬ ಸಂಜ್ಞೆ ಮಾಡುತ್ತಾಳೆ. ಅವಿಂಧ್ಯ ತಡೆದರೂ ಕೂಡ ಹೆಣ್ಣು ಹೆರದ ರಾವಣನ ಕಣ್ಮಣಿಯಾಗಿದ್ದ ಅನಲೆಯ ಹಿಂದೆ ವಿಭೀಷಣ ನಡೆಯುತ್ತಾನೆ. ಚಿಂತಾಜನಕ ಸ್ಥಿತಿಯಲ್ಲಿದ್ದ ರಾವಣ ಅನಲೆಯನ್ನು “ಇಲ್ಲೇ ಇರುವೆಯಾ, ಏನಿಲ್ಲಾ ನನ್ನನ್ನು ನೀನು ಅಗಲಿದಂತೆ ಕನಸಾಯಿತಕ್ಕ” ಎಂದು ಬಿಕ್ಕಳಿಸುತ್ತಾ ತಮ್ಮನನ್ನು ಮಾತನಾಡಿಸುತ್ತಾನೆ. ವಿಭೀಷಣ ಮಗಳನ್ನು ಕರೆದುಕೊಂಡು ಹೊರಡುವಾಗ ಈ ಸುಕುಮಾರಿಯನ್ನು ಕರೆದೊಯ್ದು ನನ್ನನ್ನು ಕಷ್ಟಕ್ಕೀಡುಮಾಡಬೇಡ ಎಂದು ಭಿನ್ನವಿಸಿಕೊಂಡಾಗ ಮನ್ನಿಸು ತಂದೆಯೊಡನಿದ್ದು ಧರ್ಮವನ್ನು ಸೇವಿಸುತ್ತೇನೆ” ಎಂದರೆ ಇಲ್ಲಿದ್ದೆ ಧರ್ಮವನ್ನು ಸೇವಿಸು ಎಂದು ಪ್ರತಿಯಾಗಿ ರಾವಣ ಹೇಳುತ್ತಾನೆ.
ಧರ್ಮಮಂ ಪೊರಗಟ್ಟಿ ಸೇವಿಪ್ಪುದೆಂತು?
‘ಧರ್ಮವನ್ನು ಹೊರಗಟ್ಟಿದ ಮೇಲೆ ಹೇಗೆ ಸೇವಿಸಲಿ” ಎಂದು ಹಾಸ್ಯಕ್ಕೆಂಬಂತೆ ನುಡಿಯುತ್ತಾಳೆ.
ನನ್ನನ್ನರಂ ನಿನ್ನನ್ನರುಳಿಯೆ ಧರ್ಮಮುದ್ಧಾರಮಾದಪುದೇ?
ರಾವಣ ಪ್ರತಿಯಾಗಿ ನನ್ನಂಥವರನ್ನು ನಿನ್ನಂಥವರು ತೊರೆದರೆ ಧರ್ಮ ಉದ್ಧಾರಗುವುದೇ ಎನ್ನುತ್ತಾನೆ. ದೊಡ್ಡಪ್ಪ ಮತ್ತು ಮಗಳ ಧರ್ಮದ ಕುರಿತ ಜಿಜ್ಞಾಸೆ ಇಲ್ಲಿ ಬಹಳ ಮಾರ್ಮಿಕವಾಗಿದೆ. ಧರ್ಮ ಕಲುಷಿತವಾಗಿದೆ ಎಂಬ ಸತ್ಯ ಓದುಗರೆದಿರು ತೆರೆದಿಡುವ ಕುವೆಂಪು ಇಲ್ಲಿ ಅದ್ವಿತೀಯರು.
ಅಶೋಕವನದಲ್ಲಿ ತ್ರಿಜಟೆ ಯುದ್ಧದಿಂದ ತನಗಾದ ನೋವನ್ನು ಸೀತೆಯಲ್ಲಿ ಆಕ್ರೋಶದಿಂದ ತೋಡಿಕೊಳ್ಳುತ್ತಾಳೆ. ‘ಕಳೆದ ರಾತ್ರಿ ಯುದ್ಧ ರಂಗದಿಂದ ತಂದೆ ಮರಳಲಿಲ್ಲ. ನನ್ನ ತಮ್ಮ ಅವನನ್ನು ಅರಸಿ ಹೊರಟಾಗ ತಲೆಯೊಡೆದ ಸ್ಥಿತಿಯಲ್ಲಿ ಬಿದ್ದಿದ್ದ ಅವನನ್ನು ಕರೆತರಲು ಪ್ರಯತ್ನಿಸಿದರೆ ಸೈನಿಕರು ತಡೆಯೊಡ್ಡಿ ಶವವನ್ನು ನೀಡಿಲ್ಲ. ಹಾಗಾಗಿ ಕೈ ಕಾಲು ಮುರಿದುಕೊಂಡು ಬಿದ್ದಿದ್ದ ಅಣ್ಣನನ್ನು ಮನೆಗೆ ಕರೆತಂದಿದ್ದಾನೆ. ಅವನ ಸ್ಥಿತಿ ಇನ್ನೂ ಶೋಚನೀಯವಾಗಿದೆ! ನಾಳೆ ಏನಾಗುತ್ತದೆಯೋ? ನಿನ್ನೊಬ್ಬಳಿಂದ ಯಾರು ಯಾರಿಗೆ ಏನೇನು ಕಾದಿದೆಯೋ? ಏನೋ? ಎಂದರೆ ಸೀತೆ ‘ನಿನ್ನೊಬ್ಬಳ ಸಂಕಟಕ್ಕಲ್ಲ ಇಡೀ ಲೋಕದ ಸಂಕಟಕ್ಕೆ ನಾನೆ ಕಾರಣ ಎನ್ನುವಂತಾಗಿದೆ’ ಎಂದು ದುಃಖಿಸುತ್ತಾಳೆ. ಆದರೂ ಸೀತೆ ಧೈರ್ಯ ಮಾಡಿ ‘ನಿನ್ನ ಮಾಂಗಲ್ಯ ಭಾಗ್ಯ ಅಲುಗದಿರಲಿ’ ಎಂಬ ವಿಶ್ವಾಸನೀಯ ಮಾತುಗಳನ್ನಾಡುತ್ತಾಳೆ.
ಯುದ್ಧ ತಡೆಯಲು ಸೀತೆಯೇ ಸೂಕ್ತ ಎಂದೇ ನಿಶ್ಚಯಿಸಿ ಯುವ ಸಂಧಾನಕಾರಳಂತೆ ಬರುವ ಅನಲೆ ಇಲ್ಲಿ ತನ್ನ ಚಿಂತನೆಯಿಂದ ಈಗಿನ ಯುವ ಮನಸ್ಸುಗಳನ್ನು ಜಾಗೃತಗೊಳಿಸುವ ಶಕ್ತಿಯಾಗಿ ಇಲ್ಲಿ ಚಿತ್ರಿತಳಾಗಿದ್ದಾಳೆ. “ಕಾಳಗದ ಕಣಕಿಂ ಮಿಗಿಲ್ ದೊಡ್ಡಯ್ಯನರಮನೆ” ಎಂದು ಶೋಕದರಮನೆಯಾಗಿದ್ದ ರಾವಣನ ಅರಮನೆಯಿಂದ ಬಂದವಳೆ ಸೀತೆಗೆ ನಮಸ್ಕರಿಸಿದರೆ ‘ತಾಯ್ ಮಗಳನೆಂತಂತೆವೋಲ್ ಕಂಬನಿಯೊರೆಸಿದಳ್ ಮೊಗವ ಮುಂಡಾಡಿದಳ್” ಅರ್ಥಾತ್ ಸೀತೆ ಅನಲೆಯನ್ನು ಮಮತೆಯ ಮೂರ್ತಿಯಾಗಿ ತೋಳ್ತೆಕ್ಕೆಯಲ್ಲಿ ಸಂತೈಸುತ್ತಾಳೆ. ಇಲ್ಲಿ ಹೆಣ್ಣು ಹೆಣ್ಣಿಗೆ ಮರುಗುವ ರೀತಿಯನ್ನು ಕಾಣಬಹುದು. ಅಷ್ಟಕ್ಕೂ ಸುಮ್ಮನಿರಲಾರದ ಅನಲೆ ಸೀತೆಯನ್ನು ಕುರಿತು “ನಿನ್ನನ್ನು ಹೇಗೆ ಸಂತೈಸುವುದೋ ತಿಳಿಯುತ್ತಿಲ್ಲ, ನನಗೇಕೆ ನೀನು ಕಣ್ಣಿರು ಸುರಿಸುತ್ತಿರುವೆ ನಿನಗೇ…. ಕಣ್ಣೀರು ಸಾಲದು. ನಿನ್ನ ಒಂದೊಂದು ಕಂಬನಿಯು ಲಂಕೆಯ ಶೋಕಸಾಗರವನ್ನು ಹಿಗ್ಗಿಸುತ್ತದೆ” ಎನ್ನುವಲ್ಲಿ ಸೀತೆಯ ದುಃಖಕ್ಕೆ ಮರುಗುವುದನ್ನೂ ಕಾಣಬಹುದು. ಮತ್ತೆ ದುಃಖವನ್ನು ಹಿಮ್ಮೆಟ್ಟಿಕೊಂಡು ‘ದೊಡ್ಡಯ್ಯ ಮರಣ ಶಯ್ಯೆಯಲ್ಲಿದ್ದಾನೆ. ಯುದ್ಧ ಎಲ್ಲರ ಮನಸ್ಸನ್ನು ಕಾಡುತ್ತಿದೆ, ಹಿಂಸಿಸುತ್ತಿದೆ. ಇದನ್ನು ಇಲ್ಲಿಗೆ ನಿಲ್ಲಿಸೋಣ! ಎನ್ನುವುದು ಆಕೆಯ ಯುದ್ಧವನ್ನು ತಡೆಯುವ, ಶಾಂತಿ ಬಯಸುವ ಮನಃಸ್ಥಿತಿಯನ್ನು ಬಿಂಬಿಸುತ್ತದೆ.
ತಾಯಿ,
ಇರ್ಕೆಲದೊಳಪ್ಪ ಹೆಣದ ಹತ್ಯೆಯಂ- ಪೆಣ್
ತಟಸ್ಥಮಿರಲೇಕೆ, ಗಂಡುಗಳಿಂತು ಮೆಯ್ ಮರೆತು,
ಕ್ರೋಧಮೂರ್ಛಿತರಾಗಿ, ಸರ್ವನಾಶಕೆ ಮಲೆತು
ಪಣೆ ಪಣೆದು ನಿಲ್ಲಲ್?
ಎಂದು ತಹತಹದಿಂದ ಉದ್ಗರಿಸುತ್ತಾ ‘ಯುದ್ಧದಿಂದ ಎರಡೂ ಕಡೆಯೂ ಸರ್ವನಾಶ! ತಾಯಿ ಗಂಡುಗಳು ಕ್ರೋಧದಿಂದ ಮೈಮರೆತು ವಿನಾಶ ಕಾರ್ಯದಲ್ಲಿ ತೊಡಗಿರುವಾಗ ಹೆಣ್ಣು ಏಕೆ ಸುಮ್ಮನಿರಬೇಕು? ನೀನು ಒಪ್ಪುವುದಾದರೆ ನಾನು, ದೊಡ್ಡಮ್ಮ ತಾರಾಕ್ಷಿ ಚಂದ್ರನಖಿ ಎಲ್ಲರೂ ನೆರವಾಗುತ್ತೇವೆ. ಯುದ್ಧವನ್ನು ಇಲ್ಲಿಗೆ ನಿಲ್ಲಿಸೋಣ ಎಂದು ಭಿನ್ನವಿಸಿಕೊಳ್ಳುತ್ತಾಳೆ.
‘ದಶಗ್ರೀವನಾತ್ಮಮುಂ ಬಗೆಯಾಗಿಹಳ್’ ಎನ್ನುತ್ತಾ ರಾವಣನ ಆತ್ಮವೂ ಮಾಗುತ್ತಿರುವ ಸೂಚನೆ ಕಂಡು ಬರುತ್ತಿದೆ. ಆದರೆ ಅವನು ಆತ್ಮಾಭಿಮಾನಿ, ಹಾಗೆ ತಾನೆ ಬಂದು ಯುದ್ಧವನ್ನು ನಿಲ್ಲಿಸಲಾರ ಎನ್ನುತ್ತಲೇ ಉನ್ಮತ್ತಳಾಗಿ ‘ತಡೆಯಲೀ ಕಾಳೆಗದ ಕೊಲೆಯಂ’ ಎಂದು ನಿರ್ಧಾರದ ಧ್ವನಿಯಲ್ಲಿ ಯುದ್ಧ ನಿಲ್ಲಲಿ ಎಂದು ಕಂಠೋಷ್ಟಿತವಾಗಿ ಹೇಳುತ್ತಾಳೆ. ಕೇವಲ ಹದಿನಾರು ವರ್ಷದ ಅನಲೆಯಲ್ಲಿ ಅದೆಷ್ಟು ಲೋಕೋತ್ತರವಾದ ಚಿಂತೆಯಿದೆ, ಎನ್ನುತ್ತಾ ಸೀತೆ ಅನಲೆಯನ್ನು ಉದ್ದೇಶಿಸಿ ‘ನಾನು ಅಸ್ವತಂತ್ರೆ; ನೀನು ಮತ್ತು ನಿನ್ನವರು ಸ್ವತಂತ್ರರು ತಪಸ್ಸೆ ನನಗಿರುವ ಶಕ್ತಿ’ ಎನ್ನುತ್ತಾ ನಿನ್ನ ಚಿತ್ತಭಿತ್ತಿಯ ಶಾಂತಿಯ ಬಯಕೆ ಹಿರಿದು ನಿನ್ನಾಸೆ ಫಲಿಸಲಿ ಎನ್ನುತ್ತಾಳೆ.
ಅಷ್ಟಕ್ಕೆ ತೃಪ್ತಳಾಗದ ಅನಲೆ ‘ದೇವಿ ನಿರಾಸೆಯನ್ನು ಬಿಡು ಏನಾದರೂ ಮಾಡು, ವಾನರರು ವಿಘ್ನವನ್ನು ಒಡ್ಡುತ್ತಾರೆ, ಮಿಗಿಲಾಗಿ ಮೇಘನಾದ ನಿರ್ವಿಘ್ನವಾಗಿ ಯಾಗ ಮುಗಿಸಿದರೆ ಇನ್ನೂ ಅನಾಹುತವಾಗುತ್ತದೆ. ಅದಕ್ಕೂ ಮೊದಲು ದೊಡ್ಡಯ್ಯ ಇಲ್ಲಿಗೆ ಬರುವಂತೆ ಮಾಡುವೆ ಆಗ,
ದೊಡ್ಡಯ್ಯನಿಂದಿಲ್ಲಿಗೈತರಲ್, ನಮ್ಮಿದಿರ್
ತಾಯಾಗಿ ತೋರ್ಪವೋಲ್ ತೋರಿ, ಕಂದಂಗೆಂತೋ
ಅಂತೆ, ಹಿತವನೊರೆ ಸದ್ಭುದ್ಧಿಯಂ
ಎಂದು ಬೇಡಿಕೊಳ್ಳುತ್ತಾಳೆ. ಅಂದರೆ ದೊಡ್ಡಯ್ಯ ಇಲ್ಲಿಗೆ ಬಂದಾಗ ‘ನೀನು ನನಗೆ ಮಮತೆ ತೋರಿದಂತೆ ಅವನಿಗೂ ತಾಯಾಗಿ ಬುದ್ಧಿ ಹೇಳು. ತಾಯಿಯಾದವಳು ತನ್ನದೇ ಗರ್ಭ ರುಧಿರ ಪ್ರವಾಹವಾಗುವುದನ್ನು ಬಯಸುವಳೆ? ಅದನ್ನು ತಡೆಯುವುದಿಲ್ಲವೇ ಅಂತೆಯೇ ನೀನು ಯುದ್ಧಕ್ಕೆ ತಡೆಯಾಗು ಎನ್ನುತ್ತಾಳೆ.
ಬಲ್ಲೆನೆನ್ನ ದೊಡ್ಡಯ್ಯನಂ
ನಾನ್. ದರ್ಪಕಾರಣಕೆಕೂರ್ಪನೆ ತೋರ್ಪನಪ್ಪೊಡಂ
ಕೂರ್ಮೆಗೆ ಮಣಿವ ಮೃದುಲತೆಯಿರ್ಪುದವನೆದೆಯ
ಕರ್ಬುನಕೆ
ಎನ್ನುತ್ತಾ ಆತ ಎಲ್ಲರ ಕಣ್ಣಿಗೆ ನಿರ್ದಯಿಯಾಗಿ ಕಾಣಬಹುದು. ಆದರೆ ಅವನಂತರಂಗ ಸುಕೋಮಲವಾದದ್ದು. ಅವನಿಗೆ ಸುಗತಿಯನ್ನು ತೋರು’ ಎನ್ನುತ್ತಾಳೆ.
‘ವೈರತ್ವವನ್ನು ಇಲ್ಲಿಗೆ ನಿಲ್ಲಿಸೋಣ!’ ಎನ್ನುವುದು ಯುದ್ಧವನ್ನು ತಡೆಯುವ ಲೋಕೋಪಕಾರಿ ನೀತಿಯನ್ನು ಬಿಂಬಿಸುತ್ತದೆ. ದುರಂತವನ್ನು ಮನಗಾಣದೆ ಮುಗ್ಧವಾಗಿ ಬಿಕ್ಕುತ್ತಿದ್ದ ಅನಲೆಯ ತಲೆ ಮೈಯನ್ನು ನೇವರಿಸುತ್ತಾ ರಾವಣ ಬಂದಾಗ ‘ನನ್ನಾತ್ಮ ಏನನ್ನು ಹೇಳುತ್ತದೆಯೋ ಹಾಗೆ ಮಾಡುತ್ತೇನೆ’ ಎನ್ನುವ ನಿರ್ಧಾರಕ್ಕೆ ಸೀತೆ ಬರುತ್ತಾಳೆ. ಇದು ‘ರಾಮಾಯಣ ದರ್ಶನಂ’ನ ಷೋಡಶಿ ಅನಲೆಯ ಯುದ್ಧ ನಿಲ್ಲಿಸುವ, ಶಾಂತಿ ಸ್ಥಾಪಿಸುವ ಯತ್ನ.

ಜನಾಂಗೀಯ ದ್ವೇಷದಿಂದ ಜರ್ಮನಿಯ ನಾಝಿಗಳು ನೆದರ್ಲ್ಯಾಂಡನ್ನು ವಶಪಡಿಸಿಕೊಂಡಾಗ ಆಹಾರ ಸಂಸ್ಕರಣ ಘಟಕ ನಡೆಸುತ್ತಿದ್ದ ಒಟ್ಟಾಫ್ರಾಂಕ್ ತನ್ನ ಹೆಂಡತಿ ಎಡಿಫ್ ಹಾಗು ಮಕ್ಕಳಾದ ಮಾರ್ಗರೇಟ್ ಮತ್ತು ಆ್ಯನ್ ಸೇರಿದಂತೆ ಎಂಟು ಜನರು 1942 ರಿಂದ 1944 ಜೂನ್ 12 ರವರೆಗೆ ಅಕ್ಷರಶಃ ಅಜ್ಞಾತವಾಸಿಗಳಾಗುತ್ತಾರೆ. ತನ್ನ ಹದಿಮೂರನೆ ಜನ್ಮದಿನ ನಿಮಿತ್ತ ದೊರೆತ ಡೈರಿಯೊಂದರಲ್ಲಿ ಬರೆಹವನ್ನು ಆ್ಯನ್ ದಾಖಲಿಸುತ್ತಾಳೆ. ಆ ಸಂಕಷ್ಟದಲ್ಲಿಯೂ ಕ್ವಚಿತ್ತಾಗಿ ಕಳೆದ ಸುಂದರ ಕ್ಷಣಗಳನ್ನೂ ದಾಖಲಿಸುವುದರ ಜೊತೆಗೆ ಹೆಚ್ಚಾಗಿ ನೋವು-ಹತಾಶೆ, ಹಿಟ್ಲರನ ಸರ್ವಾಧಿಕಾರಿ ಧೋರಣೆಯನ್ನು ತನ್ನದೇ ಆದ ರೀತಿಯಲ್ಲಿ ದಾಖಲಿಸಿದ್ದಾಳೆ. ಈ ಕಾರಣಕ್ಕೆ ಈಕೆಯ ಡೈರಿ ಯುನೆಸ್ಕೋ ಗುರುತಿಸಿರುವ ಜಾಗತಿಕ ವಸ್ತುಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.
ತನ್ನ ಗೆಳೆಯ ಕಿಟ್ನನ್ನು ಸಂಭೋಧಿಸಿರುವ ಪತ್ರಗಳಲ್ಲಿ ಹಗಲು ಹೊತ್ತಿನ ಸಂಗತಿಗಳನ್ನು ಮಾತ್ರ ಹೇಳುತ್ತೇನೆ. ಕಳೆದ ರಾತ್ರಿಗಳು ಅತ್ಯಂತ ಭಯಾನಕವಾಗಿದ್ದವು. ಸರಕು ಸಾಗಣೆ ರೈಲಿನಲ್ಲಿ ತುಂಬಿ ನಮ್ಮನ್ನು ಪೋಲೆಂಡಿನ ಸ್ಥಳದಲ್ಲಿ ಬಂಧಿಸಿಡಲಾಗಿತ್ತು. 6 ಮಿಲಿಯನ್ಗಿಂತ ಹೆಚ್ಚು ಮಂದಿ ಹೆಂಗಸರು ಮತ್ತು ಮಕ್ಕಳು ಬಂಧಿಗಳಾಗಿದ್ದರು. ಅವರನ್ನೆಲ್ಲಾ ವಿಷಾನಿಲದಿಂದ ಕೊಂದು ಅಲ್ಲೇ ಸುಡುತ್ತಿದ್ದರು ಅದರ ವಾಸನೆ ಯಾತನಾಮಯವಾಗಿತ್ತು. ಮುಖ್ಯವಾಗಿ ಕುಟುಂಬದ ಸದಸ್ಯರನ್ನು ವಿಘಟಿಸುತ್ತಿದ್ದರು. ಕಳಪೆ ಆಹಾರ ನೀಡಿ ಹತಾಶೆಗೊಳಿಸುತ್ತಿದ್ದರು, ಆಹಾರ ಕೊರತೆ ಉಂಟಾಗಿ ಆಲೂಗೆಡ್ಡೆಯನ್ನು ಕಳ್ಳತನ ಮಾಡುವರು ಇದ್ದರು ಎಂದು ಬರೆದುಕೊಳ್ಳುತ್ತಾಳೆ. ಇವೆಲ್ಲವೂ ಸರ್ವಾಧಿಕಾರಿ ಹಿಟ್ಲರನ ಅಮಾನವೀಯತೆಯ ಮುಖವಾಣಿ ಎನ್ನಬಹುದು.
ಎರಡನೆ ಮಹಾಯುದ್ಧ ಸಂದರ್ಭದಲ್ಲಿ ನಡೆದ ರಾಜಕೀಯ ಚರಿತ್ರೆಯ ಕುರಿತ ಅಗಣಿತ ದಾಖಲೆಗಳು ಸಿಗುತ್ತವೆ. ಆದರೆ ಆ ಸಂದರ್ಭದಲ್ಲಿ ಸಾಮಾನ್ಯ ಜನರು ಅನುಭವಿಸಿದ ಖಾಸಗಿ ಬದುಕಿನ ತಲ್ಲಣಗಳು ಆ್ಯನ್ ಫ್ರಾಂಕ್ ಡೈರಿಯಲ್ಲಿ ಮಾತ್ರ ಸಿಗುತ್ತವೆ. ಹಾಗಾಗಿ ಈ ಕೃತಿ ಅತ್ಯಂತ ಮುಖ್ಯ ಅನ್ನಿಸುತ್ತದೆ. ನಮ್ಮ ಸ್ವಾತಂತ್ರ್ಯವನ್ನು ಮಿತಿಗೊಳಿಸಲಾಗಿತ್ತು. ಆದಾಗ್ಯೂ ಸಹ್ಯ ಅನ್ನುವಂಥ ಸಂಗತಿಗಳನ್ನು ಅಸಹ್ಯ ಬದುಕಿನ ಕ್ಷಣಗಳನ್ನು ತನ್ನ ದಿನಚರಿಯಲ್ಲಿ ದಾಖಲಿಸುತ್ತಾಳೆ. ಅದರಲ್ಲೂ 1942 ಅಕ್ಟೋಬರ್ 9 ರಂದು ಬರೆದ ಪತ್ರ ವಿಶೇಷವಾಗಿದೆ. ಅದರಲ್ಲಿ ಕಿಟಿಯನ್ನು ಉದ್ದೇಶಿಸಿ ನಮ್ಮ ಯಹೂದಿ ಮಿತ್ರರನ್ನು ಗುಂಪು ಗುಂಪಾಗಿ ಎಳೆದೊಯ್ಯಲಾಗುತ್ತಿದೆ. ಗೆಸ್ಟಪೋಗಳು ಕ್ರೂರವಾಗಿ ನಡೆದುಕೊಳ್ಳುತ್ತಿದ್ದಾರೆ. ದನದ ಗಾಡಿಗಳಲ್ಲಿ ತುರುಕಿ ವೆಸ್ಟರ್ ಬ್ರಾಕ್ಗೆ ರವಾನಿಸುತ್ತಿದ್ದಾರೆ. ಶೌಚದಂಥ ಚಿಕ್ಕ ಚಿಕ್ಕ ಕೋಣೆಗಳಲ್ಲಿ ಹಲವರನ್ನು ತುರುಕಿ ಇಡಲಾಗುತ್ತಿದೆ. ಸರಿಯಾದ ಶೌಚದ ವ್ಯವಸ್ಥೆ ಇಲ್ಲ. ಗಂಡು ಹೆಣ್ಣುಗಳಿಗೆ ಪ್ರತ್ಯೇಕ ವಾಸದ ವ್ಯವಸ್ಥೆಗಳಿಲ್ಲ. ಎಲ್ಲರೂ ಒಂದೇ ಜಾಗದಲ್ಲಿ ಮಲಗುವುದು. ಭಯಾನಕವಾದ ಅನೈತಿಕ ಸಂಗತಿಗಳನ್ನು ಕೇಳಬೇಕಾಗಿದೆ. ಇಲ್ಲಿನ ಹೆಂಗಸರು ಹುಡುಗಿಯರು ಯಾವಾಗ ಬೇಕಾದರೂ ಗರ್ಭಿಣಿಯರಾಗಬಹುದು ಎಂಬ ಕರಾಳತೆಯನ್ನು ಹದಿನೈದಯ ಹದಿನಾರು ವಯಸ್ಸಿನ ಬಾಲೆ ಬರೆಯುತ್ತಾಳೆ ಎಂದರೆ ಆಕೆಯ ಮನಸ್ಸು ಎಂಥ ತಹತಹಗಳನ್ನು ಅನುಭವಿಸಿರಬಹುದು ಎಂಬುದು ಅನೂಹ್ಯವೇ!
ಹದಿಮೂರು ವರ್ಷದಿಂದ ಹದಿನಾರರ ವರ್ಷದವರೆಗೆ ನಿರಂತರ ಯುದ್ಧ ಹೋರಾಟ, ವನವಾಸಿ ಬದುಕು, ಸೆರೆಯಾಳಿನ ಬದುಕು ಆಕೆಯ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಿರುತ್ತದೆ. ನಾಝಿ ಸೈನಿಕರ ಕಾನ್ಸಂಟ್ರೇಶನ್ ಕ್ಯಾಂಪ್ನ ಗ್ಯಾಸ್ ಚೇಂಬರ್ನಲ್ಲಿ ತನ್ನ ಸಹಚರರು ಸುಟ್ಟು ಬೂದಿಯಾಗುವ ಅಸಹನೀಯ ದೃಶ್ಯಗಳನ್ನು ನೋಡುತ್ತಲೇ ತಾನೂ ಬೂದಿಯಾಗುತ್ತಾಳೆ. ಆದರೆ ಅವಳ ಡೈರಿ ಸುರಕ್ಷಿತವಾಗಿರುತ್ತದೆ. ಇಲ್ಲಿ ಹಿಟ್ಲರನ್ನು ಕೊಲೆ ಮಾಡುವ ಸಂಚಿನ ಬಗ್ಗೆಯೂ ದಾಖಲಿಸುತ್ತಾಳೆ. ಸಾಯುವ ಕಾಲಕ್ಕೆ ಗುಳಿಹೋದ ಕಣ್ಣುಗಳು, ಮಾಸಿದ ಬಟ್ಟೆ, ತನ್ನ ಸುತ್ತ ಏನು ಘಟನೆಗಳು ಘಟಿಸುತ್ತವೆ ಎಂಬುದರ ಅರಿವಿಲ್ಲದೆ 1945 ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ತೀರಿಕೊಳ್ಳುತ್ತಾಳೆ. ತಂದೆ ಒಟ್ಟೊ ಫ್ರಾಂಕ್ 1947 ರಲ್ಲಿ ಮೊದಲಿಗೆ ಡಚ್ ಭಾಷೆಯಲ್ಲಿ ಪ್ರಕಟಿಸುತ್ತಾರೆ. The Diary Of Anne Frank ಕೃತಿಯನ್ನು ನಾಗರೇಖಾ ಗಾಂವ್ಕರ್ ಕನ್ನಡಕ್ಕೆ ತಂದಿದ್ದಾರೆ. ಕನಸುಗಳನ್ನು ಕಳೆದುಕೊಂಡ ಅನುಭವ ಕಥನದ ನಿರೂಪಕಿಯಾಗಿರುವ ಆ್ಯನ್ ಫ್ರಾಂಕ್ ಯುವಜನತೆಗೊಂದು ಸಿದ್ಧ ಮಾದರಿ ಎನ್ನಬಹುದು. ಅದಕ್ಕಿಂತ ಆಕೆ ಅಂತಹ ಸಂದಿಗ್ಧತೆಯಲ್ಲೂ ಹಲವು ಪುಸ್ತಕಗಳನ್ನು ಓದಿರುವ, ಟಿಪ್ಪಣಿ ಮಾಡಿರುವ, ಭಾಷಾಂತರ ಮಾಡಿರುವ ಹೊಸ ಪದಗಳ ಪಟ್ಟಿಯನ್ನು ಮಾಡಿರುವುದು ಆಕೆಯ ಕ್ರಿಯಾಶೀಲತೆಯನ್ನು ಸಾಬೀತು ಮಾಡುತ್ತದೆ.

ನಮಗಿಲ್ಲಿ ಅನಲೆ ಯುದ್ಧದ ನೇರ ಭಾಗಿತ್ವದಿಂದ ನೋವನ್ನು ಅನುಭವಿಸಿ ಹೆಣ್ಣಿನ ಸಲುವಾದ ಹೋರಾಟವನ್ನು ಮಾಡಲು ಆಲೋಚಿಸಿ ಯುದ್ಧವನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಾಳೆ. ಆ್ಯನ್ ಫ್ರಾಂಕ್ ನೇರವಾಗಿ ಯುದ್ಧಕ್ಕೆ ಮುಖಾಮುಖಿಯಾಗದೆ ಇದ್ದರು ಎರಡನೆ ಮಹಾಯುದ್ಧದ ದುಷ್ಟಪರಿಣಾಮಕ್ಕೆ ಮುಖಾಮುಖಿಯಾಗುತ್ತಾಳೆ. ತನ್ನ ಜನಾಂಗಕ್ಕಾದ ಶೋಷಣೆಯನ್ನು ತನಗಾದ ಯಾತನೆಯನ್ನು ಅಳಿಸಲಾಗುವ ನಾಶಪಡಿಸಬಹುದಾದ ಕಾಗದದ ಮೆಲೆ ಭರವಸೆ ಇಟ್ಟು ಬರೆಯುವುದು ಸಾಧನೆಯೇ ಅನ್ನಿಸುತ್ತದೆ.
ಗ್ರಂಥ ಋಣ: ಕುವೆಂಪು ರಾಮಾಯಣ ದರ್ಶನಂ
ನಾಗರೇಖ ಗಾಂವ್ಕರ್ ಅನುವಾದಿತ: ದಿ ಡೈರಿ ಆಫ್ ಯಂಗ್ ಗರ್ಲ್

ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.
