ಕೆಫೆಯ ದೀಪಗಳಿಗೆ……
ಎಂಥಾ ಸಂಭ್ರಮದ ಮಿಲನದಲ್ಲೂ
ಇರುವ ಒಂಟಿತನವನ್ನು
ಗಂಟಲಿನಲ್ಲೇ ಉಳಿದುಬಿಟ್ಟ
ಮಾತಿನಂತೇ ತೊಟ್ಟ ಸಂಜೆ
ರಾತ್ರಿಯನ್ನು ಸಂಧಿಸುತ್ತಲೇ,
ಕೈಗೆಟಕುವ ಕೊಂಬೆಗಳಲ್ಲಿ
ಹೂವರಳಿದಂತೆ ಅರಳಿತ್ತು
ಕೆಫೆಯೊಳಗಿನ ಗೊಂಚಲು ಗೊಂಚಲು ದೀಪಗಳು
ಪಕ್ಕದಲ್ಲೇ ಸಾಲಾಗಿ ಜೋಡಿಸಿಟ್ಟಿದ್ದ
ಗುಲಾಬಿ ಗಿಡಗಳಿಗೆ ಹಾಕಿದ
ಕುರಿ ಗೊಬ್ಬರದಂತೆ
ತೊಪ್ಪೆಯಾಗಿ ಬಿದ್ದಿತ್ತು ಮಾತು
ಎಲ್ಲರ ಮುಂದಿನ ಟೇಬಲ್ಲಿನಲ್ಲೂ,
ಮಾತು ಹೀಗೇ ಸಾಯಬೇಕು
ಆಗಾಗ, ಸತ್ತು ಮರೆಯಾಗಿ
ಹೊಸದಾಗಿ ಮೂಡಬೇಕು
ಪ್ರತಿಯೊಂದು ಪದದ ಅರ್ಥ
ಮೊದಲು ಎದೆಯ ಹಸಿಮಣ್ಣಲ್ಲಿ
ನಂತರ ನಾಲಗೆಯ ಹೂಗಿಡದಲ್ಲಿ
ಏನೇನೂ ಘಟಿಸದ,
ಎಲ್ಲ ಬಂಧವ ಕಳಚಿದವರಂತೆ
ತಂತಮ್ಮ ಪಾಡಿಗೆ ತಮ್ಮೊಳಗೆ
ಎಲ್ಲರೂ ಬಂಧಿಯಾದ
ಇಂಥ ಸಂಜೆಗಳಲ್ಲೇ
ಮರಳುವುದು
ಮರೆತ ಎಲ್ಲ ಕಂತೆ,
ಉದಾಸೀನತೆ ತುಂಬಿ ತುಳುಕುವ
ಮುಖಗಳ ಮೇಲೆ ಕಂಡ
ಗೀರುಗಳು
ಉರಿವ ಗಾಯಕ್ಕೆ ಉಪ್ಪು ಸುರಿಯುವ
ಮಂದ ಹಿನ್ನೆಲೆ ಸಂಗೀತ
ಝಿಮ್ ಝಿಮ್ ಎಂಬ
ನಿರಂತರ ನಾದಕ್ಕೆ
ಕಿಡಿ ಹೊತ್ತಿ ಜ್ವಾಲೆಯಾಡುವ
ಅತೃಪ್ತಿ, ಬಾಯಾರಿಕೆ
ಮಾತು ಮಾತಿನ ನಡುವಿನ ಮೌನ
ಕ್ರಿಯೆಯ ನರನಾಡಿಗಳಲ್ಲಿ
ಹರಿಯುವ ನಿಷ್ಕ್ರಿಯೆ
ರಾತ್ರಿಗಳಲ್ಲೇ ಆಳವಾಗಿ ಬೇರು ಬಿಡುವ
ಕಣ್ಣ ನೋಟದ ಬೀಜ
ಅಪ್ಪಳಿಸುವ ಮುಂಚೆ
ಹಿಂದೆ ಸರಿಯುವ ತೆರೆ
ಎಲ್ಲವೂ ನೀರವತೆಯ ಮಿಂಚುಹುಳುಗಳಾಗಿ
ಗಾಜಿನ ಡಬ್ಬಿಯಲ್ಲಿ ಕೂತು
‘ಈ ಸಂಜೆಯೂ ಅಷ್ಟೇ
ಎಲ್ಲ ಸಂಜೆಗಳಂತೆ
ಕಳೆದುಹೋಗುತ್ತದೆ’
ಎಂದು
ಗೊಣಗುತ್ತಿದ್ದವು.
ರಮ್ಯಾ ಶ್ರೀಹರಿ ತತ್ತ್ವಶಾಸ್ತ್ರದಲ್ಲಿ ಎಂ.ಎ ಮಾಡಿದ್ದಾರೆ.
ಮನಃಶಾಸ್ತ್ರ ಮತ್ತು ತತ್ತ್ವಶಾಸ್ತ್ರದ ಕುರಿತು ಕನ್ನಡದಲ್ಲಿ ಸರಳ ಲೇಖನಗಳನ್ನು ಬರೆಯುತ್ತಾರೆ.
‘ಅನಿಶ್ಚಿತತೆಯಿಂದ ಆನಂದದೆಡೆಗೆ’ ಇವರ ಪ್ರಕಟಿತ ಕೃತಿ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
