Advertisement
ರಾಜಲಕ್ಷ್ಮಿ ಎನ್. ರಾವ್ ಬರೆದ ಕತೆ “ಆಗಸ್ಟ್ ಹದಿನೈದು”

ರಾಜಲಕ್ಷ್ಮಿ ಎನ್. ರಾವ್ ಬರೆದ ಕತೆ “ಆಗಸ್ಟ್ ಹದಿನೈದು”

ಎಲ್ಲಿಂದಲೋ ಸಿನೆಮಾ ಹಾಡು ಕೇಳಿ ಬಂತು. ಕಡೆಯ ಆಟ ಮುಗಿಯಿತೇನೋ ‘ತಾರಾ ಗಗನಮೇ…’ ತಲೆಯೆತ್ತಿ ನೋಡಿದ. ಆಕಾಶದಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮ. ಲಕ್ಷೋಪಲಕ್ಷ ನಕ್ಷತ್ರಗಳು, ಬೊಂಬಾಯಿನಲ್ಲಿ ವಿದ್ಯುದ್ದೀಪಮಾಲೆಗಳ ನಡುವಿನಲ್ಲಿ ಇವುಗಳನ್ನು ಗಮನವಿಟ್ಟು ನೋಡಿರಲಿಲ್ಲ. ಇಲ್ಲಿ ನಿಸರ್ಗಕ್ಕೆ ಮಾನವನ ಸ್ಪರ್ಧೆಯಿಲ್ಲ. ಬೊಂಬಾಯಿನಲ್ಲಿ ವಿದ್ಯುದ್ದೀಪಗಳ ಗೊಂದಲಕ್ಕೆ ಸಿಕ್ಕಿ ಆಕಾಶ ಕೆಂಪಾಗಿತ್ತು. ಇಷ್ಟವಿಲ್ಲದಿದ್ದರೂ ಆ ದೀಪಗಳನ್ನು ಪ್ರತಿಬಿಂಬಿಸಿತ್ತು.
ಹಿರಿಯ ಕತೆಗಾರ್ತಿ ರಾಜಲಕ್ಷ್ಮಿ ಎನ್. ರಾವ್ ಬರೆದ ಸಮಗ್ರ ಕತೆಗಳನ್ನು ಚಂದನ್‌ ಗೌಡ “ಸಂಗಮ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ್ದು, ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಈ ಸಂಕಲನದ “ಆಗಸ್ಟ್ ಹದಿನೈದು” ಕತೆ ನಿಮ್ಮ ಓದಿಗೆ

‘ಬೊಂಬಾಯಿನಿಂದ ಕಲ್ಯಾಣ,

ಒಂದು ಗಂಟೆಯ ಪ್ರಯಾಣ…’

ರೈಲಿನ ಚಕ್ರ ಹಾಡಿಗೆ ತಾಳ ಹಾಕುತ್ತಿತ್ತು. ಗಾಡಿ ತಲೆದೂಗುತ್ತಿತ್ತು. ಗಂಟಲನ್ನು ಬಿಟ್ಟು ಹೊರಗೆ ಬರದ ಹಾಡು ತಡೆಯಿಲ್ಲದೆ ಸಾಗಿತ್ತು.

‘ಬೊಂಬಾಯಿನಿಂದ ಕಲ್ಯಾಣ,

ಒಂದು ಗಂಟೆಯ ಪ್ರಯಾಣ…’

ದೀಪಸಾಲಿನ ಮುನ್ನುಡಿ ಇಲ್ಲದೆಯೇ ರೈಲು ನಿಲ್ದಾಣ ಕತ್ತಲೆಯಿಂದ ಎದ್ದು ಬಂದು ಮುಂದೆ ನಿಂತಿತು. ಹತ್ತಾರು ಜನರ ಜೊತೆಗೆ ಅವನೂ ಗಾಡಿಯಿಂದ ಧುಮುಕಿದ. ಅವರೊಡನೆಯೇ ಸಾಗಿ ಬಾಗಿಲಿನಲ್ಲಿ ಕಾದು ನಿಂತಿದ್ದ ಅಧಿಕಾರಿಗೆ ಕೈಯಲ್ಲಿದ್ದ ರೊಟ್ಟಿನ ತುಂಡನ್ನು ನೀಡಿದ. ನಿಲ್ದಾಣದ ಬಾಗಿಲಿನ ಬಳಿ ಅವರನ್ನೆಲ್ಲ ಕತ್ತಲೆಗೊಪ್ಪಿಸಿ ಹತ್ತಿರವೇ ನಿಂತಿದ್ದ ಬಸ್ಸನ್ನು ಹತ್ತಿದ. ಐದು ನಿಮಿಷಗಳ ಬಳಿಕ, ಇನ್ನಾರೂ ಅದರ ಆಶ್ರಯವನ್ನು ಕೋರಿ ಬರದಿದ್ದನ್ನು ನೋಡಿ ಒಂದು ನಿಟ್ಟುಸಿರೆಳೆದು ಬಸ್ಸು ಹೊರಟಿತು.

ಚಲಿಸುತ್ತಿದ್ದ ಮಂಕು ದೀಪದ ಕೋಣೆಯಲ್ಲಿ ಏಳೆಂಟು ಜನ ಮಾತ್ರ ಇದ್ದರು. ಹೆಂಗಸರಿಗಾಗಿ ಕಾಯ್ದಿಟ್ಟ ಸ್ಥಳ ಖಾಲಿಯಾಗಿತ್ತು. ಎಲ್ಲರಿಂದಲೂ ದುಡ್ಡು ತೆಗೆದುಕೊಂಡ ಮೇಲೆ ಕಂಡಕ್ಟರ್ ಮೂಲೆಯೊಂದರಲ್ಲಿ ಕುಳಿತು ಕಾಲು ಚಾಚಿದ. ಅವನ ಪಕ್ಕದಲ್ಲಿ ಕುಳಿತಿದ್ದ ಚಿಲ್ಲರೆ ಅಂಗಡಿ ವ್ಯಾಪಾರಿಗಳು ಸಿಂಧಿಯಲ್ಲಿ ಮಾತನಾಡತೊಡಗಿದರು. ಅವನ ದೃಷ್ಟಿ ಕಿಟಕಿಯಾಚೆಯ ಕತ್ತಲಿನತ್ತ ಸಾಗಿತು. ವೈವಿಧ್ಯ ರಹಿತ, ಘನೀಭೂತ ಕತ್ತಲು ಬೇಸರವೆನಿಸಿದಾಗ ಕಣ್ಣು ಮುಚ್ಚಿದ. ರೆಪ್ಪೆಗಳು ಕೂಡುವ ಮೊದಲೇ ಅವುಗಳೆಡೆಗೆಓಡಿಬಂದ ಕತ್ತಲೆ ಕಣ್ಣಿಗೆ ತಂಪು ಕೊಟ್ಟಿತು.

ನಿಲ್ದಾಣದಿಂದ ಕ್ಯಾಂಪಿಗೆ ಇಪ್ಪತ್ತು ನಿಮಿಷ.

ಕಳೆದ ಹನ್ನೆರಡು ಗಂಟೆಗಳಲ್ಲಿ ನಡೆದ ಘಟನೆಗಳು ಇಪ್ಪತ್ತು ನಿಮಿಷಗಳಲ್ಲಿ, ಸಂಕ್ಷಿಪ್ತವಾಗಿ ಸ್ಮೃತಿಪಟಲದ ಮೇಲೆ ಹಾದು ಹೋದುವು.

(ರಾಜಲಕ್ಷ್ಮಿ ಎನ್. ರಾವ್)

ಸ್ವಾತಂತ್ರ್ಯ ದಿನೋತ್ಸವಕ್ಕಾಗಿ ಅಂದಿನ ಸಂಜೆ ಬೊಂಬಾಯಿನ ದೊಡ್ಡ ಸರ್ಕಾರಿ ಕಟ್ಟಡಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆಂದು ತಿಂಗಳ ಹಿಂದೆಯೇ ಘೋಷಿಸಲಾಗಿತ್ತು. ಈ ಅಪೂರ್ವ ದೃಶ್ಯವನ್ನು ನೋಡಲು ಹೋಗಬೇಕೆಂದು ತನ್ನ ಮೂವರು ಸ್ನೇಹಿತರೊಂದಿಗೆ ಅವನು ನಿರ್ಧರಿಸಿದ್ದ. ಆದರೆ ಅಂದು ಹೊರಟಿದ್ದು ಅವನೊಬ್ಬನೇ. ಅವರೊಬ್ಬರ ಕೈಯಲ್ಲೂ ಅಷ್ಟು ದುಡ್ಡಿರಲಿಲ್ಲ. ಅವರೆಲ್ಲರೂ ತಿಂಗಳಿನ ಮೊದಲ ವಾರದಲ್ಲಿ ಊರಿಗೆ ಹಣ ಕಳುಹಿಸುತ್ತಿದ್ದರು. ಅವರೆಲ್ಲರಿಗೆ ಕೊಡುವಷ್ಟು ಹಣ ಇವನಲ್ಲಿರಲಿಲ್ಲವಾದ್ದರಿಂದ ಒಬ್ಬನೇ ಹೊರಡಬೇಕಾಯಿತು. ಇದರಿಂದ ಹೊರಡುವಾಗ ಮನಸ್ಸು ಮುದುಡಿತ್ತು. ಆದರೆ ಬೊಂಬಾಯಿಗೆ ಹೋದಮೇಲೆ ಉಲ್ಲಾಸ ತಾನೇ ತಾನಾಗಿ ಅರಳಿತ್ತು. ರಜೆಯ ದಿನದ ಉತ್ಸಾಹ-ಭರಿತ ಜನಸಂದಣಿಯಲ್ಲಿ ಇವನೆಡೆಗೆ ಕೈಚಾಚಿ ಬಂದ ಗೆಳೆಯರ ಗುಂಪಿನಲ್ಲಿ ಒಬ್ಬನಾದ.

ತಿರುಗಾಟ, ಮಾತುಕತೆ, ನಗು, ಊಟ, ಸಿನಿಮಾ ಇವುಗಳಲ್ಲಿ ದಿನ ಕಳೆಯಿತು. ಥಿಯೇಟರಿನಿಂದ ಹೊರಗೆ ಬಂದ ಸ್ವಲ್ಪ ಹೊತ್ತಿಗೆ ಕತ್ತಲೆ ಧಾವಿಸಿ ಬಂದಿತ್ತು. ಮರುಕ್ಷಣ ಕತ್ತಲೆಗೆ ಮರುಳು ಹಿಡಿಸುತ್ತ ಬಂತು ಬೆಳಕು. ಅಡಗಿ ಕುಳಿತಿದ್ದ ದೀಪಗಳು ಪ್ರತಿ ಕಟ್ಟಡದ ಮೇಲೂ ಕಿಲಕಿಲ ನಗುತ್ತ ಎದ್ದು ಕುಳಿತವು. ಕತ್ತಲೆಯ ಮೈಯನ್ನು ಚುಚ್ಚಿ, ಹಿಂಸಿಸಿ, ವಿಜಯೋತ್ಸಾಹದಿಂದ ನಕ್ಕವು. ರಸ್ತೆಗಳನ್ನು ತುಂಬಿದ್ದ ಜನ ಜಯಘೋಷ ಮಾಡಿದರು. ಜೊತೆಯ ಯುವಕರೊಡನೆ ಅವನೂ ಸಡಗರದಿಂದ ಕೂಗಾಡಿದ. ಜನರೊಡನೆ ಸಂಕೋಚವಿಲ್ಲದೆ ಬೆರೆತ. ಜನರು ರಸ್ತೆಗಳನ್ನು ಬಿಟ್ಟು ಮನೆಗಳನ್ನು ಸೇರತೊಡಗಿದಾಗ ಎಚ್ಚೆತ್ತು, ಗೆಳೆಯರಿಂದ ಬೀಳ್ಕೊಂಡು ರೈಲನ್ನು ಹತ್ತಿದ.

*****

ಸಿಂಧಿ ಮಾತು ಇದ್ದಕಿದ್ದಂತೆ ನಿಂತಿತು. ಕಣ್ಣೆರೆದ. ಬಸ್ಸು ಒಮ್ಮೆ ನರಳಿ ನಿಂತುಕೊಂಡಿತು. ಕ್ಯಾಂಪಿನ ಥಿಯೇಟರ್ ಪಕ್ಕದಲ್ಲಿ ಕಣ್ಣು ಮಿಟುಕಿಸುತ್ತಿತ್ತು. ಎಲ್ಲರೊಡನೆ ತಾನೂ ಇಳಿದ. ಮನೆಯತ್ತ ನಡೆಯತೊಡಗಿದ…

ಬಸ್ ನಿಂತಲ್ಲಿಂದ ಮನೆಗೆ ಹತ್ತು ನಿಮಿಷ.

ಮನೆ? ಒಂದೇ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ನಾಲ್ಕು ಅವಿವಾಹಿತ ತರುಣರು ವಾಸಿಸುತ್ತಿದ್ದ ಮೂರು ಕೋಣೆಗಳ ಒಂದು ಒರಟು ಕಟ್ಟಡ: ವಾಸಿಸುವ ಕೋಣೆ, ಅಡಿಗೆ ಮನೆ, ಬಚ್ಚಲ ಮನೆ, ಅಡಿಗೆಯವನು ಅಡಿಗೆ ಮನೆಯಲ್ಲಿಯೇ ಮಲಗುತ್ತಿದ್ದ.

ಮನೆಯೆಡೆಗೆ ನಡೆಯತೊಡಗಿದ. ಬೊಂಬಾಯಿನಲ್ಲಿ ಸಂಭ್ರಮದಿಂದ ಅರಳಿ ಜನರೆಡೆಗೆ ತಿರುಗಿದ್ದ ಮನಸ್ಸು ಈಗ ಮುದುಡಿ ಎಂದಿನಂತೆ ಏಕಾಕಿ ಮೊಗ್ಗಾಗಿತ್ತು. ಜನರ ಸಂಪರ್ಕದಿಂದ ಬಿಸಿಗೊಂಡಿದ್ದ ಮೈ ಈಗ ರಾತ್ರಿಯಷ್ಟೇ ತಂಪಾಗಿತ್ತು.

ದಾರಿ ಮೊಟಕಾಗುತ್ತ ಬಂತು. ಎರಡು ಬದಿಗಳಲ್ಲೂ ಮೊಣಕಾಲನ್ನು ಊರಿ ಕುಳಿತಿದ್ದ ನಿರಾಶ್ರಿತರ ಗುಡಿಸಲುಗಳು ಕತ್ತಲೆಗೆ ಏನೂ ಪ್ರತಿಭಟನೆಯನ್ನು ತೋರದೆ ಶರಣಾಗತವಾಗಿದ್ದವು. ಕೆಲಸಕ್ಕೆ ಸೇರಿದ ಹೊಸತರಲ್ಲಿ ನಿರಾಶ್ರಿತರ ಮುರುಕು ಮನೆ, ಮುರುಕು ಮುರುಕು ಮನಸ್ಸುಗಳಿಂದ ಅಗಾಧವಾದ ಖಿನ್ನತೆಯುಂಟಾಗುತ್ತಿತ್ತು. ಈಗ ರೂಢಿಯಿಂದ ಖಿನ್ನತೆಯ ಮೇಲೆ ಉದಾಸೀನದ ನಾಯಿ ಕೊಡೆಗಳು ಬೆಳೆದಿದ್ದವು.

ದೂರದಲ್ಲಿ ಅಂಬರನಾಥನ ದೀಪಗಳು ಕಾಣಿಸುತ್ತಿದ್ದವು. ಬೆಳಕಿನ ಪೂರ್ಣ ವಿರಾಮ ಚಿಹ್ನೆಗಳು. ವಾಕ್ಯಗಳಾವುವು?… ಬೆಳಗಿನ ಹೊತ್ತು ಬೃಹದಾಕಾರದ ಸಿಗಾರಿನಂತೆ ಕಾಣುತ್ತಿದ್ದ ಕಾರ್ಖಾನೆಯ ಹೊಗೆ ಕೊಳವೆಗೆ ಇಂದು ದೀಪಮಾಲೆಯನ್ನು ಸುತ್ತಿದ್ದರು. ಭೂಮಿಯಿಂದ ಹೊರಟ ಬೆಳಕಿನ ಸರಳರೇಖೆಯ ಚಿಲುಮೆ. ಅಚಲ ಕಾರಂಜಿ, ಅದರ ಪಕ್ಕದಲ್ಲಿ ಇನ್ನೊಂದು ಕಾರ್ಖಾನೆಯ ಹೊಗೆಕೊಳವೆ ಮೊದಲಿನದರಷ್ಟು ಎತ್ತರವಿಲ್ಲ; ಅದಕ್ಕಿಂತ ತೆಳುವು. ಚಿನ್ನದ ಪೆನ್ಸಿಲ್ ಏನು ಪ್ರಯೋಜನ? ಸೀಸವಿಲ್ಲ.

ಮಾಂಸದಂಗಡಿಗಳ ಬಳಿ ಬಂದ. ಬಾಗಿಲುಗಳಿಲ್ಲದ ಸಣ್ಣ ಮರದ ಶಿಥಿಲ ಕಟ್ಟಡಗಳು. ಅವುಗಳಿಂದ ಪಿಸುಮಾತು, ಅಡಗಿಸಿದ ನಗು ಕೇಳಿಬಂತು. ಬಳಿಯಲ್ಲಿ ಮಲಗಿದ್ದ ನಾಯಿಗಳು ಎಚ್ಚರಗೊಂಡು ಸುತ್ತಲೂ ನೋಡಿದವು, ಅನಾಸಕ್ತಿಯಿಂದ ಮತ್ತೆ ಮಲಗಿದವು. ಈ ಕಟ್ಟಡಗಳಿಗೆ ಏನೇನು ಉಪಯೋಗ! ಬೆಳಗಿನ ಹೊತ್ತು ಕೊಲೆ, ಮಾರಾಟ; ರಾತ್ರಿ ಮಾರಾಟ, ಕೊಲೆ. ನಿಲ್ದಾಣಕ್ಕೆ ಅನತಿ ದೂರದಲ್ಲಿ ಮರದ ಕೆಳಗೆ ನಿಂತಿದ್ದ ದೊಡ್ಡ ಕಾರು: ಬಸ್ಸಿನ ದೀಪಗಳಿಗೆ ಬೆದರದೆ ಮರಗಳ ಮರೆಯಲ್ಲಿ ನಿಂತಿತ್ತು. ವೈಭವಯುಕ್ತ ದೊಡ್ಡ ಕಾರು, ಮರದ ಶಿಥಿಲ ಕಟ್ಟಡ, ಹುಲ್ಲಿನ ಗುಡಿಸಲು-ಹೊದಿಕೆಗಳಲ್ಲಿ ಮಾತ್ರ ವ್ಯತ್ಯಾಸ.

ಯೋಚನೆಯ ಸರಪಣಿಯನ್ನು ಕತ್ತರಿಸಲು ಲಗುಬಗೆಯಿಂದ ಓಡಿಬಂತು ರೈಲು. ದೊಡ್ಡ ದೀಪದ ಹಿಂದೆ ವೇಗವಾಗಿ ಚಲಿಸುತ್ತಿದ್ದ ಬೆಳಕಿನ ನೇರವಾದ ಗೆರೆ. ಚಕ್ರಗಳ ಸಾಲಿಗೆ ಕಟ್ಟಿದ್ದ ಮಿಣುಕು ಹುಳುಗಳು ರೈಲು ಹತ್ತಿರದಲ್ಲಿ ಸುಳಿದು ಕಣ್ಮರೆಯಾಯಿತು.

ಅವನ ಮುಂದೆ, ದಿಗಂತದತ್ತ ಧಾವಿಸುತ್ತಿದ್ದ ಸಣ್ಣ ಕಾರು ಇದ್ದಕಿದ್ದಂತೆ ಬಲಕ್ಕೆ ಹೊರಳಿತು. ಆಕಾಶ ಒಂದು ಕ್ಷಣ ಬೆಳಕಿನ ಬೀಸಣಿಗೆಯಾಯಿತು. ಮರುಕ್ಷಣದಲ್ಲಿ ಆಕಾಶ, ದಿಗಂತ, ದಾರಿ, ಕಾರು ಎಲ್ಲವೂ ಕತ್ತಲೆಯಲ್ಲಿ ಮರೆಯಾದುವು.

ಕಾರಿನ ದೀಪದ ಬೆಳಕಿನಲ್ಲಿ ಅದೃಶ್ಯವಾಗಿದ್ದ ಬೀದಿಯ ದೀಪಗಳು ಮತ್ತೆ ನಗುತ್ತ ನಿಂತವು. ಹಸಿವಿನ ನಗು. ದೀಪದ ಕಂಬಗಳ ಕೆಳಗೆ, ತುಂಬಿದ ಮಳೆಹಳ್ಳಗಳಲ್ಲಿ ಬೆಳಕು ನೈದಿಲೆಗಳು ಮೂಡಿದ್ದವು. ಮಣ್ಣಿನಲ್ಲಿ ಇಂಗದೆ ದಾರಿಯುದ್ದವೂ ಹರಿದಿದ್ದ ಮಳೆನೀರಿನ ಪಕ್ಕದಲ್ಲಿ ಬೈಸಿಕಲ್ಲುಗಳೆರಡು ಸಾವಕಾಶವಾಗಿ ಸಾಗಿದವು. ನೆಲದುದ್ದ ಮಿಂಚು. ವಕ್ರಗತಿಯ ಹೊನ್ನು ಹೊಳಿ. ರಾಜ್ಯತ್ಯಾಗ ಮಾಡಿದ ದೊರೆಯ ಕಿರೀಟ, ವಸ್ತ್ರಾಭರಣಗಳು ನೆಲದ ಮೇಲೆ ಪ್ರಣಯ ಕೇಳಿಯಲ್ಲಿ ನಿರತರಾಗಿದ್ದ ಹಳದಿ ಬಣ್ಣದ ಹಾವುಗಳು.

ಎಲ್ಲಿಂದಲೋ ಸಿನೆಮಾ ಹಾಡು ಕೇಳಿ ಬಂತು. ಕಡೆಯ ಆಟ ಮುಗಿಯಿತೇನೋ ‘ತಾರಾ ಗಗನಮೇ…’ ತಲೆಯೆತ್ತಿ ನೋಡಿದ. ಆಕಾಶದಲ್ಲೂ ಸ್ವಾತಂತ್ರ್ಯೋತ್ಸವದ ಸಂಭ್ರಮ. ಲಕ್ಷೋಪಲಕ್ಷ ನಕ್ಷತ್ರಗಳು, ಬೊಂಬಾಯಿನಲ್ಲಿ ವಿದ್ಯುದ್ದೀಪಮಾಲೆಗಳ ನಡುವಿನಲ್ಲಿ ಇವುಗಳನ್ನು ಗಮನವಿಟ್ಟು ನೋಡಿರಲಿಲ್ಲ. ಇಲ್ಲಿ ನಿಸರ್ಗಕ್ಕೆ ಮಾನವನ ಸ್ಪರ್ಧೆಯಿಲ್ಲ. ಬೊಂಬಾಯಿನಲ್ಲಿ ವಿದ್ಯುದ್ದೀಪಗಳ ಗೊಂದಲಕ್ಕೆ ಸಿಕ್ಕಿ ಆಕಾಶ ಕೆಂಪಾಗಿತ್ತು. ಇಷ್ಟವಿಲ್ಲದಿದ್ದರೂ ಆ ದೀಪಗಳನ್ನು ಪ್ರತಿಬಿಂಬಿಸಿತ್ತು. (ಅದಕ್ಕೂ ಸರ್ಕಾರದ ಆಜ್ಞೆಯಾಗಿತ್ತೇನೋ! ಸಮುದ್ರ ಸ್ವಲ್ಪವೂ ಪಕ್ಷಪಾತವಿಲ್ಲದೆ ವಿದ್ಯುದ್ದೀಪಗಳು, ನಕ್ಷತ್ರಗಳು ಎರಡನ್ನೂ ಪ್ರತಿಬಿಂಬಿಸಿತ್ತು. ಎರಡು ವಿವಿಧ ದೀಪಗಳ ಸಮ್ಮಿಲನದಿಂದ ಸಮುದ್ರದಲ್ಲಿ ಕಪ್ಪು ಬಣ್ಣಕ್ಕೆ ಅವಕಾಶವೇ ಇಲ್ಲದಂತಾಗಿತ್ತು.

ದೀಪ, ದೀಪ, ಎಲ್ಲಿ ನೋಡಿದರೂ ದೀಪ ರಸ್ತೆಗಳುದ್ದ, ಕಟ್ಟಡಗಳ ಸುತ್ತ ಬಣ್ಣ ಬಣ್ಣದ ದೀಪಗಳು. ರಸ್ತೆಗಳಲ್ಲಿ ದೀಪಗಳಷ್ಟೇ ಜನ. ಅವುಗಳಷ್ಟೇ ವರ್ಣ ವೈವಿಧ್ಯದ ಉಡುಪುಗಳನ್ನು ಧರಿಸಿ ನಲಿದಾಡುತ್ತಿದ್ದ ಜನ ಬಾಣ ಬಿರುಸುಗಳನ್ನು ನೋಡಿ ಕುಣಿದಾಡುವ ಹುಡುಗರು.

ಹೋಟಲುಗಳ ಬಳಿಯಂತೂ ಕಾಲಿಡಲಾಗದಷ್ಟು ಜನಸಂದಣಿ. ದೀಪಗಳಿಂದ, ಹೂಮಾಲೆಗಳಿಂದ ಅಲಂಕರಿಸಲ್ಪಟ್ಟ ಹೋಟಲುಗಳು. ದೊಡ್ಡ ಹೋಟಲುಗಳ ಸುತ್ತ ದೊಡ್ಡ ಕಾರುಗಳು. ಸಣ್ಣ ಹೋಟಲುಗಳ ಸುತ್ತ ಸಣ್ಣ ಕಾರುಗಳು ದೊಡ್ಡ ಹೋಟಲಿನೊಳಗೆ ಪ್ರವೇಶಿಸಲಾಗದ ಜನರು ಹೊರಗೆ ನಿಂತು ಒಳಗೆ ಹೋಗುವವರನ್ನು ನೋಡಿ ಬೆರಗಾಗುತ್ತಿದ್ದರು. ಹಣವಂತರು, ಸಮಾಜದ ಮುಂದಾಳುಗಳು, ರಾಜಕೀಯ ಮುಖಂಡರು, ಪ್ರಖ್ಯಾತ ಕಲಾವಿದರು ನಟನಟಿಯರು..

ಕಾರುಗಳ ಕೋಟೆಯನ್ನು ದಾಟಿ ದೀಪಾಲಂಕೃತ ಅರಮನೆಯ ಒಳಗೆ ಹೋದಾಗ ಒಳಗೆ ಕಂಡುದು ಶೂನ್ಯ. ನೃತ್ಯಶಾಲೆಯಲ್ಲಿ ಕೇವಲ ಬಣ್ಣ ಬಳಿದುಕೊಂಡ ಸೂತ್ರದ ಬೊಂಬೆಗಳು. ತಮ್ಮ ಅಧಿಪತಿ ಹಣದ ಮುಂದೆ ಕೆಂಪು ದಾರದ ನಗೆಗಳನ್ನು ಚೆಲ್ಲುತ್ತ, ಒಬ್ಬರ ಕೈಯನ್ನೊಬ್ಬರು ಅದುಮುತ್ತ, ಎಲ್ಲರೂ ಸೇರಿ ತಮ್ಮ ಒಡೆಯನಿಗೆ ಸಾಷ್ಟಾಂಗ ನಮಸ್ಕಾರಗಳನ್ನರ್ಪಿಸುತ್ತಿದ್ದ ರೇಶಿಮೆ ಉಟ್ಟ ಕಬ್ಬಿಣದ ಬೊಂಬೆಗಳು. ಆದರೆ ಪ್ರಬಲ, ಉಪದ್ರವಕಾರಿ, ನಿರ್ದಯಿ ಪ್ರೇತಗಳು, ಕೆಂಪು ಬಾಯಿ, ಕೆಂಪು ಬೆರಳು, ಕೆಂಪು ಕೊರಳಿನ ವಿನಾಶಕಾರಿ ರಕ್ಕಸಿಯರು. ನೃತ್ಯಶಾಲೆಯ ಗೋಡೆಗಳ ಮೇಲೆಲ್ಲ ಜೇಡನ ಬಲೆ ಹಬ್ಬಿತ್ತು. ನೃತ್ಯದಲ್ಲಿ ಮಗ್ನರಾದ ಜೋಡಿಗಳು ಇದೂ ಒಂದು ಅಲಂಕಾರವೆಂದು ತಿಳಿದರು. ‘How clever of the decorator, my dear!’ ಬಲೆಯ ರೇಶಿಮೆಯ ಮೇಲೆ ಚಿನ್ನದ ಪುಡಿ ಮಿನುಗುತ್ತಿತ್ತು; ವಜ್ರಗಳು ಗರ್ವದಿಂದ ತುಟಿಗಳನ್ನು ಗಂಟು ಹಾಕಿಕೊಂಡಿದ್ದವು. ಇವುಗಳನ್ನೆಲ್ಲಾ ಮೆಚ್ಚುತ್ತ ಜನರು ನರ್ತಿಸುತ್ತಿದ್ದರು. ಒಬ್ಬರ ತೋಳ ಬಲೆಯಲ್ಲಿ ಒಬ್ಬರು. ಅದೇ, ಅದೇ ನೃತ್ಯ; ಅದೇ, ಅದೇ ವೃತ್ತ. ಹತ್ತಲಾಗದ ಎತ್ತರದ ಚಿನ್ನದ ಗೋಡೆಗಳು ಹೊರಗಿನ ಪ್ರಪಂಚವನ್ನು ಅವರಿಂದ ಮರೆಮಾಡಿದ್ದವು.

ಹೌಹಾರಿ ಒಂದು ಹೋಟಲಿಗೆ ಹೋಗಿದ್ದ. ಇದು ಮೊದಲಿನಕ್ಕಿಂತ ಸ್ವಲ್ಪ ಸಣ್ಣದು. ನೆರೆದವರಲ್ಲಿ ಬಹುಪಾಲು ಜನ ಸಿಹಿತಿಂಡಿಗಳನ್ನು ತಿನ್ನುವುದರಲ್ಲಿ ಮಗ್ನರಾಗಿದ್ದರು. ಫ್ಯಾಶನ್ನಿನ ಬೇಟೆ ನಾಯಿಗಳ ಗುಂಪಿಗೆ ಸೇರಿದವರು. ಬಹಳ ಹಣವನ್ನು ವೆಚ್ಚಮಾಡಲಾಗದವರು, ವೆಚ್ಚಮಾಡಲು ಇಷ್ಟವಿಲ್ಲದವರು. ಯಾರೂ ಕೇಳದ ರೇಡಿಯೋದ ಹಾಡಿಗೆ ತಟ್ಟೆ, ಚಮಚಗಳ ಪ್ರಶಂಸೆ ಸಿಕ್ಕುತ್ತಿತ್ತು. ಮಾತಿಲ್ಲದ, ನಗೆಯಿಲ್ಲದ ಜನರು ದೃಷ್ಟಿಯನ್ನು ತಟ್ಟೆಯ ಬಿಳಿಯ ವೃತ್ತದಲ್ಲಿ ಸೆರೆ ಇಟ್ಟಿದ್ದರು.

ಸಣ್ಣ ಹೋಟಲು ಒಂದಕ್ಕೆ ಹೋದ. ಬೆಳಕು ಬಹಳ ಇಲ್ಲದ ಪ್ರದೇಶದಲ್ಲಿ ಇದ್ದ ಹೋಟಲು ರೇಡಿಯೋದ ಬದಲು ನೆಗಡಿ ಗಂಟಲಿನ ಗ್ರಾಮೋಫೋನ್. ಚಹಾ ಕುಡಿಯಲು ಬಂದ ಕೂಲಿಕಾರರು, ನಿರುದ್ಯೋಗಿಗಳು, ವಿದ್ಯಾರ್ಥಿಗಳು, ಪತ್ರಿಕೋದ್ಯಮಿಗಳು. ಅದರಂತೆಯೇ ನಿಧಾನವಾಗಿ ಚಹಾ ಕುಡಿಯುತ್ತ ಕುಳಿತ. ಮೂಲೆಯ ಮೇಜಿನ ಬಳಿ ಕುಳಿತಿದ್ದ ಹುಡುಗಿಯೊಬ್ಬಳು ಎದ್ದು ಇವನೆಡೆಗೆ ಬಂದಳು. ತಲೆಯ ಮೇಲೆ ಪೇರಿಸಿದ್ದ ಕಪ್ಪು ಕೂದಲು, ಪೆನ್ಸಿಲಿನಿಂದ ಕೊಯ್ದ ಅರ್ಧ ವರ್ತುಲಾಕಾರದ ಹುಬ್ಬುಗಳು, ಹುಚ್ಚು ಕೆಂಪು ಬಳಿದ ಬಾಯಿ, ಸೀಮೆಸುಣ್ಣದ ಬಿಳುಪು ಚರ್ಮ, ಒಂದು ಕ್ಷಣ ಮುಟ್ಟಿಬಿಟ್ಟ ತೂಗುದೀಪದ ಮೈ, ಅಗಲವಾದ ಹಸಿರು, ಹಳದಿ ನೆರದಿ, ನೇರಳೆ ಬಣ್ಣದ ಹೂಗಳ ಅಚ್ಚು ಹೊಡೆದಿದ್ದ ಲಂಗ. ನಿಯಾನ್ ದೀಪದ ನೆರಳು ಅಲಂಕರಿಸಿದ ಅಸ್ಥಿಪಂಜರವನ್ನು ತಬ್ಬಿಕೊಂಡಿತ್ತು. ಮುಖ ಹಸಿರು, ಹಳದಿ, ನೇರಳೆಬಣ್ಣದ, ತ್ರಿಕೋಣಾಕೃತಿಯ ಘೋರ ಅಡವಿಯಾಯಿತು. ಹಳದಿ ಚರ್ಮ, ಹಸಿರು ಹುಬ್ಬು, ನೇರಳೆ ಬಾಯಿ. ಇವನ ಕಡೆಗೊಮ್ಮೆ ನೋಡಿ-ಅಡವಿಯಲ್ಲಿ ಎರಡು ಸರ್ಪಗಳು ನಾಲಿಗೆ ನೀಡಿದವು-ಮುಂದಿನ ಮೇಜಿಗೆ ನಡೆದಳು.

ದೀಪ, ದೀಪ, ದೀಪದ ಚಾವಣಿಯ ಕೆಳಗೆ ಬೆರಗು ಬಡಿದ ಬೆಳಕಿಲ್ಲದ ಜನ. ಯಾರ ಬಾಯಲ್ಲೂ ಸ್ವಾತಂತ್ರ್ಯದ ಮಾತಿಲ್ಲ…

ದೀಪದ ತೀಕ್ಷ್ಣ ಎಳೆ ಕಣ್ಣನ್ನು ಕುಕ್ಕಿತು. ಬೆಚ್ಚಿ ಎದುರಿಗೆ ನೋಡಿದ. ಕೋಣೆಯ ಬಾಗಿಲು ತೆಗೆದಿತ್ತು ಒಳಗೆ ಸ್ನೇಹಿತರು ಇಸ್ಪೀಟಾಟವನ್ನಾಡುತ್ತಿದ್ದರು. ಅಂದವಿಲ್ಲದ ಕೋಣೆಯಲ್ಲಿ ಅಂದವಿಲ್ಲದ ಸಾಮಾನುಗಳು, ಅಂದವಿಲ್ಲದ ಜನ. ಹೊಸ್ತಿಲನ್ನು ದಾಟಲು ಕಾಲು ಹಿಂದೆಗೆಯಿತು. ಆದರೆ ಬೂಟುಕಾಲಿನ ಬರುವಿಕೆಯನ್ನು ಕಲ್ಲುನೆಲ ಆಟಗಾರರಿಗೆ ತಿಳಿದಿತ್ತು. ಎಲ್ಲರೂ ಬಾಗಿಲಿನ ಕಡೆಗೆ ತಿರುಗಿ ಉತ್ಸಕಿತ ಪ್ರಶ್ನೆಗಳನ್ನು ಹಾಕತೊಡಗಿದರು.

ಉತ್ಸಕಿತ ಪ್ರಶ್ನೆಗಳಿಗೆ ಸಂಕುಚಿತ ಉತ್ತರಗಳನ್ನು ಕೊಡುತ್ತ ಬಟ್ಟೆ ಬದಲಾಯಿಸ-ತೊಡಗಿದ. ಅವನ ನಿರುತ್ಸಾಹ ಗೆಳೆಯರ ಪ್ರಶ್ನೆಗಳನ್ನು ತಡೆಗಟ್ಟಿತು. ನಿದ್ರೆ ಬರುತ್ತದೆಯೆಂದು ನೆವ ಒಡ್ಡಿ ಆಟವಾಡಲು ನಿರಾಕರಿಸಿದ. ಹಸಿವಿಲ್ಲವೆಂದು ಹೇಳಿ ಊಟ ಮಾಡದೆ ಮಲಗಿದ. ತಾವು ಅವನ ಜೊತೆಗೆ ಹೋಗದಿದ್ದಕ್ಕಾಗಿ ಅವನಿಗೆ ಸಿಟ್ಟು ಬಂದಿದೆಯೆಂದು ಗೆಳೆಯರು ತಿಳಿದರು. ಆಟ ಸಪ್ಪೆಯಾಯಿತು.

ತನ್ನ ಮೌನವನ್ನು ಗೆಳೆಯರು ತಪ್ಪು ತಿಳಿದರೆಂದು ಅವನಿಗೆ ಗೊತ್ತಾಯಿತು. ಎದ್ದು ಆಟಕ್ಕೆ ಸೇರಿಕೊಳ್ಳಲು ಪ್ರಯತ್ನಿಸಿದ. ದೇಹವನ್ನು ಸುಟ್ಟ ನರಗಳ ತುರಾಯಿಯನ್ನಾಗಿ ಮಾಡಿದ ದಣಿವು; ಮನಸ್ಸನ್ನು ಹಸು ಮೆಟ್ಟಿದ ಹುಲ್ಲುಗಿಡವನ್ನಾಗಿ ಮಾಡಿದ ಶೂನ್ಯತೆ, ಇವುಗಳು ಪ್ರಯತ್ನದ ಎರಡು ತೋಳುಗಳನ್ನೂ ಹಿಡಿದು ನಿಲ್ಲಿಸಿದವು. ಚಲನೆ ಹೊರಳಿನಲ್ಲಿ ಕೊನೆಗೊಂಡಿತು.

ಶೂನ್ಯದ ಕಪ್ಪು ಬಿಲದಿಂದ ಅಸ್ಪಷ್ಟ ನೋವಿನ ವೃತ್ತಗಳು ಮೈಮುರಿಯುತ್ತ ಎದ್ದು ಬಂದವು. ತುಕ್ಕುಹಿಡಿದ ಮುಳ್ಳು ತಂತಿಯ ತುಂಡುಗಳು ಹಾಸಿಗೆಯ ಮೇಲೆ ಹೊರಳಾಡತೊಡಗಿದವು. ಹಾಸಿಗೆಯಲ್ಲಿ ಸ್ಥಳ ಸಾಲದೆ ಕೆಳಗೆ ಧುಮುಕಿ ಕೋಣೆಯನ್ನೆಲ್ಲ ತುಂಬಿದವು. ಹರಿತವಾದ ತಂತಿಯ ಮೊನೆ ಕಣ್ಣನ್ನು ಚುಚ್ಚಿ, ರೆಪ್ಪೆಗಳನ್ನು ಮೀಟಿ, ಬೇರ್ಪಡಿಸಿತು. ಎದೆಯ ಮೇಲೆ ಸ್ಥಾಪಿತವಾದ ಕಬ್ಬಿಣದ ಭಾರ ಉಸಿರಿನೆಳೆಗೆ ಸುತ್ತಿಗೆ ಏಟು ಕೊಟ್ಟಿತು. ಮೇಲುಸಿರಿನ ತಪ್ಪು ಕಾಣಿಕೆಯನ್ನೊಪ್ಪಿಸಿ ಕಣ್ತೆರೆದ. ಮುಳ್ಳು ತಂತಿ ಅದೃಶ್ಯವಾಯಿತು. ರಕ್ತ ಬಳಿದುಕೊಂಡ ದೃಷ್ಟಿ ಕೋಣೆಯುದ್ದ ಕುಂಟತೊಡಗಿತು.
ಕಂದು ಬಣ್ಣದ ಹೆಂಚಿನ ಚಾಪೆಯ ಮೇಲೆ ಮರದ ತೊಲೆಗಳು ಹೆಬ್ಬಾವಿನಂತೆ ಮಲಗಿದ್ದವು. ಹಿಂದೆಂದೋ ಬಿಳುಪಾಗಿದ್ದ ಗೋಡೆಗಳು ಚಾವಣಿಯನ್ನು ಅಸಮಾಧಾನದಿಂದ ಹೊತ್ತು ನಿಂತಿದ್ದವು. ಮಂಚಗಳು, ಕುರ್ಚಿಗಳು, ಮೇಜು, ಮಂಚದ ಚೌಕಟ್ಟಿನ ಮೇಲೆ ಅವ್ಯವಸ್ಥೆಯಿಂದ ತೂರಾಡುತ್ತಿದ್ದ ಬಟ್ಟೆಗಳು, ಬಾಗಿಲಿರದ ಗೂಡಿನಲ್ಲಿ ಅಲಂಕಾರ ಸಾಮಗ್ರಿಗಳು…

ಕೋಣೆಯನ್ನು ಪರೀಕ್ಷಿಸುತ್ತಿದ್ದ ಕಟು ದೃಷ್ಟಿಗೆ ಮುಸುಕು ಹಾಕುವದಕ್ಕೋಸ್ಕರ ದೀಪ ಹಟಾತ್ತನೆ ಆರಿಹೋಯಿತು. ಆಟಗಾರರು ನಿಸ್ಸಂಕೋಚದಿಂದ ದೀಪವನ್ನು ಶಪಿಸಿದರು. ಅವರಲ್ಲೊಬ್ಬ ತಡವರಿಸುತ್ತ ಹೋಗಿ ಒಂದು ಹಣತೆಯನ್ನು ಹಚ್ಚಿ ತಂದ. ಮಲಗಲಿಷ್ಟವಿಲ್ಲದೆ ಬೆಳಕಿನ ಬರುವಿಕೆಯನ್ನು ಕಾಯ್ದು ಕುಳಿತರು.

ಮೇಜಿನ ಮಧ್ಯೆ ಇಟ್ಟಿದ್ದ ದೀಪ ಮೇಜಿನ ಸುತ್ತ ಕುಳಿತಿದ್ದವರನ್ನು ಕುತೂಹಲದಿಂದ ನೋಡತೊಡಗಿತು. ಅವನು ಮಲಗಿದ್ದಲ್ಲಿಂದಲೇ ಸೀಳು ಉರಿಯನ್ನು ದೃಷ್ಟಿಸಿದ. ಬತ್ತಿಯ ಉರಿಯುವ ಭಾಗ ಕಪ್ಪು ಬಣ್ಣಕ್ಕೆ ಬಿಗಿದುಕೊಂಡಿತ್ತು; ಇನ್ನೂ ಉರಿಯದೆ ಎಣ್ಣೆಯ ಮಡಿಲಲ್ಲಿ ನಿದ್ರಿಸುತ್ತಿದ್ದ ಭಾಗ ಮೃದುವಾಗಿ ಬೆಳ್ಳಗಿತ್ತು. ಜ್ವಾಲೆ ಮೆಟ್ಟಿಲು ಮೆಟ್ಟಿಲಾಗಿ ಉರಿಯುತ್ತಿತ್ತು. ಪ್ರತಿ ಮೆಟ್ಟಿಲಿನಲ್ಲೂ ಬೇರೆ ಬೇರೆ ಬಣ್ಣದ ದೀಪಗಳನ್ನು ಹಚ್ಚಿಡಲಾಗಿತ್ತು. ಹಸಿರು, ತೀಕ್ಷ್ಣ ನೀಲಿ, ಕೆಂಪು, ಕಿತ್ತಳೆ, ಹಳದಿ, ಬಿಳಿ, ಕುರ್ಚಿಯ ಮೇಲಿನ ಬಿಳಿ ಬಟ್ಟೆಗಳ ಮೇಲೆ ನೀಲಿ ನೆರಳು ಒರಗಿತ್ತು. ಬಟ್ಟೆ ಒಗೆಯುವ ನೀರಿಗೆ ಹಾಕಿದ ನೀಲಿ ಹೆಚ್ಚಾದಂತೆ. ನೇರವಾಗಿ ಹಾರಿ ಒಂದು ಸಣ್ಣ ಬೂದುಬಣ್ಣದ ಪತಂಗ ಬಿಸಿ ಎಣ್ಣೆಯಲ್ಲಿ ಬಿದ್ದಿತು. ಎರಡು ಕ್ಷಣ ಪ್ರತಿಭಟಿಸಿತು.

****

ಸ್ವಲ್ಪ ಹೊತ್ತಾದ ಮೇಲೆ, ಕತ್ತಲೆಯಿಂದ ಬೇಸರಗೊಂಡ ಆಟಗಾರರು ಮಲಗಲು ಎದ್ದರು. ಹಠಾತ್ತಾಗಿ ಕತ್ತು ಮುರಿಸಿಕೊಂಡ ದೀಪ ಎಣ್ಣೆ ಉಸಿರಿನಲ್ಲಿ ವಿಕಾರವಾಗಿ ಕೂಗಿಕೊಂಡಿತು ಓಡಿ ಬಂದ ಕತ್ತಲೆ, ಕೂಗು ಯಾರಿಗೂ ಕೇಳಿಸದಂತೆ ದೀಪದ ಗಂಟಲನ್ನು ಒತ್ತಿ ಹಿಡಿಯಿತು.

ಅರ್ಧ ಗಂಟೆ ಕಳೆದಿರಬಹುದು. ಕೋಣೆಯಲ್ಲಿ ಕತ್ತಲೆ, ಮೌನ ಇವುಗಳ ನಡುವಿನ ಚಕ್ಕಂದವನ್ನು ಆಲಿಸುತ್ತ ಮಲಗಿದ್ದವನು ಬೆಚ್ಚಿದ. ದೂರದ ಕಾರ್ಖಾನೆಯ ಸೈರನ್ನು ಪೈಶಾಚಿಕ ಕಂಠದಿಂದ ಕಿರಿಚಿತ್ತು. ಈ ವಿಕಟ ಧ್ವನಿಗೆ ಹೆದರಿ ಕತ್ತಲೆ ಓಡಿಹೋಯಿತು. ವಿದ್ಯುದ್ದೀಪ ಮತ್ತೆ ಬೆಳಗತೊಡಗಿತು. ಪರಿತ್ಯಕ್ತೆ ಮೌನ ರೋಧಿಸಲಾರಂಭಿಸಿದಳು. ಹೊರಗೆ ಮಳೆ ಸಣ್ಣಗೆ ಬೀಳತೊಡಗಿತು.

ಅವನು ಎದ್ದ. ಸ್ನೇಹಿತರು ಆರಿಸಲು ಮರೆತಿದ್ದ ದೀಪದ ಸ್ವಿಚ್ಚಿನ ಕಡೆಗೆ ನಡೆದ.

ಸ್ವಿಚ್ಚಿನ ಪಕ್ಕದಲ್ಲಿ ಸ್ನೇಹಿತರಲ್ಲೊಬ್ಬ ತೂಗುಹಾಕಿದ್ದ ಕೃಷ್ಣನ ಚಿತ್ರ ಕಣ್ಣಿಗೆ ಬಿತ್ತು. ಗೆಳೆಯ ಇವನಿಂದ ಎಷ್ಟು ಹಾಸ್ಯ ಮಾಡಿಸಿಕೊಂಡರೂ ಚಿತ್ರವನ್ನು ಗೋಡೆಯ ಮೇಲಿನಿಂದ ತೆಗೆದಿರಲಿಲ್ಲ. ಚಿತ್ರವನ್ನು ನೋಡಿದ. ಬಹುಕಾಲ ಮುಚ್ಚಿದ್ದ ಕಣ್ಣುಗಳಿಗೆ ಚಿತ್ರ ಎಂದಿಗಿಂತ ದೊಡ್ಡದಾಗಿದ್ದಂತೆ ತೋರಿತು. ಆತ್ಮ ತೃಪ್ತ, ನಿರಾತಂಕ ಮುಖಭಾವದ ಕೃಷ್ಣನ ತುಟಿಗಳ ಮೇಲೆ ಕೃತಕ ಹುಸಿನಗೆ ಹಬ್ಬಿತ್ತು. ‘ಮೋನಾಲೀಸಾವನ್ನು ಅನುಕರಿಸಲು ಪ್ರಯತ್ನಿಸುತ್ತಿದ್ದೀಯಾ?’ ಕಂದು ಬಣ್ಣದ ಗುಂಗುರು ತಲೆಕೂದಲಿನ ಸುತ್ತ ಒಂದೂವರೆ ಆಣೆ ಗಜದ ಮಿಂಚುಪಟ್ಟಿ, ಅದಕ್ಕೆ ಸಿಕ್ಕಿಸಿದ ಬಾಡಿದ ಒಂದು ನವಿಲು ಗರಿ. ಕುತ್ತಿಗೆಯಲ್ಲಿ ಮೂರು ಎಳೆಯ ಮುತ್ತಿನ ಸರ (ಒಂದು ಎಳೆಗೆ ಹನ್ನೆರಡು ಆಣೆ), ಜಪಾನೀ ಕಬ್ಬಿನ ಸಿಪ್ಪೆಯ ಬಣ್ಣದ ಹಾರ. ಚಿತ್ರದ ತುಂಬ ಬೂದಿಯ ಬಣ್ಣದ ಹತ್ತಿ-ಉಂಡೆ ಮೋಡಗಳು, ಮುಖದ ಹಿಂದೆ ಹೈಡ್ರೋಜನ್ ಬಾಂಬ್ ಸಿಡಿತದ ಧೂಳಿನ ಪ್ರಭಾವಳಿ… ‘ಅಯ್ಯೋ ಕೃಷ್ಣ!’


ಒಳಗಿನಿಂದ ಎದ್ದು ಬಂದ ನಗು, ಹೊರಗಿನಿಂದ ಕುಣಿದುಬಂದ ಮಳೆ ಹನಿ, ಎರಡೂ ಸೇರಿ ಕಪ್ಪು ವಿಷದ ಬಿಲಕ್ಕೆ ಮುಚ್ಚಳ ಹಾಕಿದವು. ಸ್ವಿಚ್ಚನ್ನಾರಿಸಿ ನಿದ್ರೆ ಮಾಡಲು ಹೋದ.

(1954 ರಲ್ಲಿ ಪ್ರಕಟಿತ ಕತೆ)
(ಕೃತಿ: ಸಂಗಮ-Pastorale (ರಾಜಲಕ್ಷ್ಮೀ ಎನ್‌ ರಾವ್‌ ಸಮಗ್ರ ಕತೆಗಳು-ದ್ವೈಭಾಷಿಕ ಸಂಪುಟ), ಸಂಪಾದಕರು: ಚಂದನ್‌ ಗೌಡ, ಪ್ರಕಾಶಕರು: ಸಂಕಥನ, ಬೆಲೆ: 320/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Krishna_Swamy

    ಪದಚಿತ್ರಳು ಮನದಲ್ಲಿ ತೇಲಿ ನವಿರಾದ ನೀರವದಲ್ಲಿ ವಿಲೀನ..

    A concoction/concatenation of feastful imageries…

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ