ನಮ್ಮ ಟೀಚರ್ಸ್ ಡೇ ಸೆಲೆಬ್ರೇಷನ್ನಿಗೂ ಮಳೆರಾಯ ತಪ್ಪದೆ ಹಾಜರಿ ಹಾಕುತ್ತಿದ್ದ. ಯಾವಾಗಲು ಸೆಪ್ಟೆಂಬರ್ 4 ರ ಮಧ್ಯಾಹ್ನ ಕಾರ್ಯಕ್ರಮ ನಿಗದಿಯಾಗಿರುತ್ತಿತ್ತು. ಕಾರ್ಯಕ್ರಮ ಪ್ರಾರಂಭವಾಗಿ ಸ್ವಾಗತ ಉದ್ಘಾಟನೆ ಮೊದಲಾದ ಔಪಚಾರಿಕ ಕಾರ್ಯಕ್ರಮ ಮುಗಿದು ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಗುವ ಹೊತ್ತಿಗೆ ಹಾಡು ಕೇಳದಷ್ಟು ಜೋರು ಮಳೆ. ಮುಸಿ ಮುಸಿ ನಗುತ್ತಾ ಬರೆ ಡಾನ್ಸ್ ನೋಡುತ್ತಿದ್ದೆವು. ಡಾನ್ಸ್ ಮಾಡುವವರಿಗೂ ಹಾಡು ಕೇಳಿಸದೆ ಒಬ್ಬೊಬ್ಬರು ಒಂದೊಂದು ಸ್ಟೆಪ್ ಹಾಕುತ್ತಿದ್ದರು. ಟೀಚರ್‌ಗಳಿಗೆ ಹಾಡು ಗೊತ್ತಿದ್ದರೆ ಅವರೆ ಬಂದು ಹಾಡು ಹೇಳುತ್ತಿದ್ದರು. ಅಲ್ಲಿಯೂ ಪಲ್ಲವಿ ಚರಣ ವ್ಯತ್ಯಾಸದಿಂದ ಡಾನ್ಸ್ ವ್ಯತ್ಯಾಸವಾಗುತ್ತಿತ್ತು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಏಳನೆಯ ಕಂತು ನಿಮ್ಮ ಓದಿಗೆ
ಆಟಿ ಕಳೆದರೂ… “ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ” ಅಂದರೂ ನಾವು ಎಲ್ಲೂ ಹೊರಗೆ ಹೋಗುವಂತಿಲ್ಲ. ಇದು ಆಗಸ್ಟ್-ಸೆಪ್ಟೆಂಬರ್ ತಿಂಗಳವರೆಗೂ ಮಳೆರಾಯನ ಲೀಲೆ ಮುಂದುವರೆಯುತ್ತಲೇ ಇರುತ್ತಿತ್ತು. ಸ್ವಾತಂತ್ರ್ಯ ದಿನಾಚರಣೆಯ ಪೆರೆಡ್ಡಿಗಂತೂ ಮಳೆರಾಯ ಭರ್ರನೆ ಹಾಜರಿ ಹಾಕುತ್ತಿದ್ದ. ಕೋಟೆ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ಇರುತ್ತಿತ್ತು. ಸಂಪೂರ್ಣ ಮಳೆಯಲ್ಲಿ ತೋಯ್ದು ಹೋದರೂ ಪೆರೆಡ್ ಸಾವಧಾನವಾಗಿ ನಡೆಯುತ್ತಿತ್ತು. ಮಳೆಯಲ್ಲಿ ನೆನೆದು ತೊಪ್ಪೆಯಾದರೂ ಖುಷಿ ಇರುತ್ತಿತ್ತು. ಸಂಜೆ ಟೌನ್‌ಹಾಲಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಿರುತ್ತಿತ್ತು. ಆದರೆ ಮಳೆರಾಯನ ಪ್ರಭಾವದಿಂದ ಯಾವತ್ತೂ ಹೋಗಿದ್ದು ನೆನಪಿಲ್ಲ!
ಸೆಪ್ಟೆಂಬರ್ ತಿಂಗಳಲ್ಲಿ ಗಣೇಶ ಚೌತಿ ಸಂಭ್ರಮ. ಆ ದಿನ ಕಡೆ ಪಕ್ಷ ಕೋಟೆ ಗಣಪತಿ ದೇವಸ್ಥಾನಕ್ಕೆ ಹೋಗಬೇಕು ಅನ್ನುವ ಆಸೆ. ಆದರೆ ಮಳೆ ಬಿಡುತ್ತಿರಲಿಲ್ಲ. ಒಂದು ವೇಳೆ ಧೈರ್ಯ ಮಾಡಿ ಹೋದರೂ ಕೋಟೆಯ ಕಲ್ಲಿನ ಗೋಡೆಗಳ ಬುಡದಲ್ಲಿ ಓಡಾಡುವ ಹಾಗಿರಲಿಲ್ಲ. ಗೋಡೆ ಬಿಟ್ಟು ಒಂದು ಅಡಿಯವರೆಗೆ ನೀರು ಹರಿದು ಪಾಚಿ ಕಟ್ಟಿರುತ್ತಿತ್ತು. ಒಂದು ಲೆಕ್ಕಕ್ಕೆ ಜಾರಿಬಿದ್ದವರಿಗೆ ಆಗುತ್ತಿದ್ದ ನೋವುಗಳಿಗಿಂತ ಅವಮಾನವೇ ಹೆಚ್ಚು. ಆದರೂ ಎದ್ದೆದ್ದು ಬೀಳುವರಿಗೇನೂ ಕಡಿಮೆಯಿರುತ್ತಿರಲಿಲ್ಲ. ಮಡಿಕೇರಿಯ ಕೋಟೆ ಗಣಪತಿ ಬಹಳ ಫೇಮಸ್. ಅಲ್ಲಿ ಹರಕೆ ಎಂದರೆ ಹರಸಿಕೊಂಡಷ್ಟು ತೆಂಗಿನ ಕಾಯಿಗಳನ್ನು ಒಡೆಯುವುದು. ಒಡೆದ ಕಾಯಿ ಲೋಡುಗಟ್ಟರೆ ರಾಶಿಯಾಗುತ್ತಿತ್ತು. ಅದನ್ನು ತೆಗೆಯಲು ಬೇರೆ ಬೇರೆ ಊರುಗಳಿಂದ ಜನ ಬರುತಿದ್ದರು. ದೇವಸ್ಥಾನಕ್ಕೆ ಹೋಗಿದ್ದಾಯಿತು ಆದರೆ ಮಳೆಯ ಭಾರೀ ಸೂಚನೆ ಇರುತ್ತಿದ್ದ ಕಾರಣ ಮನೆಗೆ ಹೋಗಲು ತರಾತುರಿ ಇದ್ದೇಇರುತ್ತಿತ್ತು. ಮಳೆಯಲ್ಲಿ ಚಂಡಿಯಾದರೂ ಅಡ್ಡಿಯಿಲ್ಲ ಶಾಪಿಂಗ್ ಮಾಡಬೇಕೆಂದರೂ ಆಗುತ್ತಿರಲಿಲ್ಲ. ಚೌತಿ ಚಂದಿರನನ್ನು ನೋಡಬಾರದು ಅನ್ನುವ ನಿಯಮ ಬೇರೆ! ತಲೆ ತಗ್ಗಿಸಿ ಆಚೀಚೆ ನೋಡದೆ ಹೋಗುತ್ತಿದ್ದರೂ ರಸ್ತೆ ಗುಂಡಿಗಳಲ್ಲಿ ನಿಂತ ಮಳೆ ನೀರಲ್ಲಿ ಚಂದ್ರ ಇಣುಕಿಬಿಡುತ್ತಿದ್ದ. ಇನ್ನೇನು ಬಿಂಬವೋ ಪ್ರತಿಬಿಂಬವೋ ನೋಡಿದ್ದಾಯ್ತಲ್ಲ ಎಂದು ತಲೆ ಎತ್ತಿ ಅವನನ್ನು ನೋಡಿಬಿಡುತ್ತಿದ್ದೆವು. ಎಷ್ಟೇ ಆದರೂ ಚೌತಿ ಚಂದಿರ ಅಲ್ವೆ ರವರವನೆ ಹೊಳೆಯುತ್ತಿರುತ್ತಿದ್ದ. ಮರುದಿನ ಶಾಲೆಗೆ ಪಂಚಕಜ್ಜಾಯ, ಕರ್ಜಿಕಾಯಿ ಜೊತೆಗೆ ತೆರಳುವುದು. ಫ್ರೆಂಡ್ಸ್ ಪಂಚಕಜ್ಜಾಯ ತಿನ್ನಬೇಕಾದರೆ ಬೇಕಂತಲೆ ಯಾರಾದರೂ ಕೀಟಲೆ ಮಾಡಿದರೆ ಇದ್ದವರ ಮೇಲೆ ಪುಡಿಯ ಸಿಂಚನವಾಗುತ್ತಿತ್ತು.
ಅಷ್ಟರಲ್ಲಿ ಮಳೆ ಸ್ವಲ್ಪ ಕಡಿಮೆಯಾಗಿ ಶಾಲೆಯಲ್ಲಿ ಪಿ ಟಿ ಪೀರಿಯಡ್‌ಗೆ ಹೊರಗೆ ಬಿಡುತ್ತಿದ್ದರು. ಮಳೆ ಕಾರಣಕ್ಕೆ ಹೊರಗೆ ಹೋಗದೆ ಬಹಳ ದಿನಗಳಾಗಿರುತ್ತಿದ್ದುದರಿಂದ ಪಂಜರದಿಂದ ಬಿಟ್ಟ ಪಕ್ಷಿಗಳಂತಾಗುತ್ತಿದ್ದೆವು. ಸೂರ್ಯ ರಶ್ಮಿಗೆ ಮೈಯೊಡ್ಡುವ ಖುಷಿ ಬೇರೆ. ನೆವಿ ಬ್ಲೂ ಕಲರ್ ನೋಡಿ ನೋಡಿ ಆಯಾಸವಾಗಿದ್ದ ನಮಗೆ ಸ್ಕೈ ಬ್ಲೂ ನೋಡುವುದೆಂದರೆ ಇನ್ನಿಲ್ಲದ ಖುಷಿ. ಸ್ವೆಟರ್, ಸ್ಕಾರ್ಫ್, ಸಾಕ್ಸ್ ಎಲ್ಲವೂ ನೇವಿ ಬ್ಲೂನಲ್ಲಿ ಇರುತ್ತಿದ್ದೆವು. ಇಡೀ ಶಾಲೆಯ ಬಣ್ಣವೆ ನೆವಿ ಬ್ಲೂ. ನಮಗೇನಾದರೂ ಸ್ವೆಟರ್ ಸಾಕ್ಸ್ ಖರೀದಿ ಮಾಡಬೇಕಾದಾಗ ಕಾನ್ವೆಂಟ್ ಬ್ಲೂ ಅಂದರೆ ಬೇಗ ಕೆಲಸ ಆಗಿಬಿಡುತ್ತಿತ್ತು.
ಸೆಪ್ಟಂಬರ್ 5 ರ ಶಿಕ್ಷಕರ ದಿನಾಚರಣೆಯ ಆಚರಣೆ ನಮ್ಮಲ್ಲಿ ವಿಶೇಷ. ನಮಗೆ ಪಾಠ ಮಾಡುತ್ತಿದ್ದ ಟೀಚರ್ಸ್‌ಗೆ ತಿಳಿಯದಂತೆ ಸೆಕ್ಷನ್‌ಗೆ ಎರಡರಂತೆ ಕಾರ್ಯಕ್ರಮಗಳನ್ನು ಕೊಡಬೇಕಾಗಿತ್ತು, ಕಾಸ್ಟ್ಯೂಮ್, ಡಾನ್ಸ್ ಪ್ರಾಕ್ಟೀಸ್ ಎಲ್ಲವೂ ನಮ್ಮದೆ. ಜೊತೆಗೆ ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ ಇರುತ್ತಿತ್ತು. “ಡಾನ್ಸ್‌ಗಳಿಗೆ ನನ್ನನ್ನು ಯಾರೂ ಸೇರಿಸಿಕೊಳ್ಳುತ್ತಿರಲಿಲ್ಲ. ಸ್ಟೆಪ್ಸ್ ಹಾಕಕೆ ಬರಲ್ಲ, ಉಫ್ ಅಂದ್ರೆ ಬಿದ್ದೆ ಹೋಗ್ತೀನಿ ಅಂತ”, ಆದರೂ ಬೆಳವಾಡಿ ಮಲ್ಲಮ್ಮನ ಫ್ಯಾನ್ಸಿ ಡ್ರೆಸ್ ಹಾಕಿದ್ದೆ. ಅಚ್ಚ ನೀಲಿಬಣ್ಣದ ಚಿಕ್ಕ ಚೌಕುಳಿ ಕಂಬಿ ಸೀರೆ (ಮೈಸೂರು ಭಾಗದಲ್ಲಿ ರೇಷಿಮೆಸೀರೆ ಎಂದರೆ ಕೊಡಗಿನಲ್ಲಿ ‘ಕಂಬಿಸೀರೆ’ ಎಂದೇ ಕರೆಯುವುದು. ಇಲ್ಲಿ ‘ಕಂಬಿ’ ಎಂದರೆ ಬಾರ್ಡರ್ ಝರಿ ಬಾರ್ಡರ್ ಸೀರೆ ಎಂದರ್ಥ. ಕಂಬಿಯ ಮೆಲೆ ಅರ್ತಾತ್ ಬಾರ್ಡರಿನ ಅಳತೆ, ಅದರ ಪ್ಯೂರಿಟಿಯ ಮೇಲೆ ಬೆಲೆ ನಿರ್ಧಾರವಾಗಿರುತ್ತದೆ.) ಉಟ್ಟಿದ್ದು ಚೆನ್ನಾಗಿ ನೆನಪಿದೆ. ನಮ್ಮ ಮನೆಯಲ್ಲಿ ಚೌಕುಳಿ ರೇಷಿಮೆ ಸೀರೆ ಇಲ್ಲ ಅನ್ನುವ ಕಾರಣಕ್ಕೆ ಪಕ್ಕದ್ಮನೆ ದೇವಕಿ ಆಂಟಿ ಆ ಸೀರೆ ಕೊಟ್ಟಿದ್ದರು. ದೇವಕಿ ಆಂಟಿ ಕ್ಯಾನ್ಸರ್ ಗೆದ್ದು ಈಗ ಚೇತರಿಸಿಕೊಳ್ಳುತ್ತಿದ್ದಾರೆ, ವೃತ್ತಿಯಲ್ಲಿ ನರ್ಸ್ ಆಗಿ ನಿಸ್ವಾರ್ಥ ಸೇವೆ ಮಾಡಿದವರು ಅವರು. ನಮ್ಮನ್ನೆಲ್ಲ ಅದರಲ್ಲೂ ನನ್ನ ತಮ್ಮ ರಘುನನ್ನು ಅಮ್ಮನಿಗಿಂತಲೂ ಹೆಚ್ಚಾಗಿ ನೋಡಿಕೊಂಡ ಜೀವ. ಈ ಮೂಲಕ ದೇವಕಿ ಆಂಟಿಗೆ ಹೃನ್ಮನದ ಧನ್ಯವಾದಗಳು.
(ಕನ್ನಡದ ಸೀರೆ ಈಗ ಸ್ಯಾರಿ ಆಗಿ ವಿಕಸನಗೊಂಡಿದೆ. ಹಿಂದಿಯಲ್ಲಿ ‘ಸಾಡಿ’ ಸಂಸ್ಕೃತದಲ್ಲಿ ‘ಶಾಟಿ’ ಎಂದು ಕರೆಸಿಕೊಳ್ಳುವ ಹೊಲಿಗೆ ಮಾಡದ ಉದ್ದದ ವಸ್ತ್ರ ಇದು. ಗ್ರಾಮ್ಯ ಭಾಷೆಯಲ್ಲಿ ಶಾಲೆ>ಶ್ಯಾಲೆ ಎಂದೂ ಕರೆಯುತ್ತಾರೆ ಸ>ಶ ವ್ಯತ್ಯಾಸಕ್ಕೆ ಒಂದು ಉತ್ತಮ ಉದಾಹರಣೆ) ದೇವಕಿ ಆಂಟಿ ಕೊಟ್ಟ ಸೀರೆಗೆ ಬ್ಲೌಸ್ ಹೊಲಿಸುವ ಗೋಜಿಗೆ ಹೋಗಿರಲಿಲ್ಲ. ಯೂನಿಫಾರ್ಮಿನ ಬಿಳಿ ಬ್ಲೌಸ್ ಅಡ್ಜಸ್ಟ್ ಆಯಿತು. ಬಿದಿರಿನ ಪಟ್ಟಿಯನ್ನೆ ಕತ್ತಿಯಾಕರಕ್ಕೆ ತಂದು ಅದರ ಹಿಡಿಗೆ ಗೋಲ್ಡನ್ ಪೇಪರ್, ಮುಂಭಾಗಕ್ಕೆ ಕೆಂಪು ಬಣ್ಣದ ಪೇಪರ್ ಅಂಟಿಸಿದ್ದು ಆಗ ನಿಜವಾದ ಯುದ್ಧ ಕತ್ತಿಯನ್ನು ಮೀರಿಸುವಂತಿತ್ತು. ಜೊತೆಗೆ, ಇಡ್ಲಿ ಪಾತ್ರೆಯ ಮುಚ್ಚಳವನ್ನು ಗೋಲ್ಡನ್ ಪೇಪರಿಂದ ಕವರ್ ಮಾಡಿ ‘ಗುರಾಣಿ’ ಎಂದು ಕೊಟ್ಟಿದ್ದರು. ಚಾಕ್‌ಪೀಸಿನಲ್ಲಿ ಬರೆಸಿಕೊಂಡ ವಿಭೂತಿ (ಚಾಕ್ ಪೀಸಿಗೆ ಸೀಮೆ ಸುಣ್ಣವೆಂದು ಕರೆಯುವುದು ಅಂದರೆ ಬೇರೆ ಸೀಮೆಯಿಂದ ಬಂದ ಪದಾರ್ಥ ಎನ್ನುವ ಹಾಗೆ ಸೀಮೆಬದನೆ, ಸೀಮೆ ಅಕ್ಕಿ, ಸೀಮೆಣ್ಣೆ ಮುಂತಾದವುಗಳನ್ನು ಇಲ್ಲಿ ಹೆಸರಿಸಬಹುದು) ಮಡಿಕೇರಿಯ ಚೌಕಿಯಲ್ಲಿರುವ ಅರುಣ ಸ್ಟೋರ್‌ನಲ್ಲಿ ಸಿಕ್ಕ ಬಿಳಿ ಮಣಿಸರಗಳೆ ನನ್ನ ಮುತ್ತಿನ ಹಾರಗಳು. ಸಿಂಪಲ್ ಆಗಿ ಸೂಪರ್ ಆಗಿದ್ದವು. ಆದರೆ ಪಕ್ಕದ ಕ್ಲಾಸಿನ ಹುಡುಗಿ ನನ್ನ ಬಿದಿರಿನ ಯುದ್ಧ ಕತ್ತಿಯನ್ನು ತೆಗೆದುಕೊಂಡು ಕೊಡಲೇ ಇಲ್ಲ. ಪರಿಣಾಮ “ಮುಂದಕ್ಕೆ ಬೇಕಾದರೆ ಮತ್ತೆ ಮಾಡಕ್ಕಾಗುತ್ತ” ಎಂದು ಮನೆಯಲ್ಲಿ ಉಪಚಾರಗಳೂ ನಡೆದವು. ನಾವು ನೀಡುವ ಕಾರ್ಯಕ್ರಮಗಳಿಂದ ನಮ್ಮ ಕ್ಲಾಸ್ ಟೀಚರಿಗೆ ಕೆಟ್ಟ ಹೆಸರು ಬರಬಾರದು ಅನ್ನುವ ಧಾವಂತವಾಗಿರುತ್ತಿದ್ದರೆ, ನಮ್ಮ ಕ್ಲಾಸ್ ಟೀಚರಿಗೆ ನನ್ನ ಕ್ಲಾಸ್ ಮಕ್ಕಳು ಅದೇನ್ ಪರ್ಫಾರ್ಮ್ ಮಾಡ್ತಾರೋ ಅನ್ನುವ ಧಾವಂತ ಇರುತ್ತಿದ್ದುದು ಸತ್ಯ.
ನಮ್ಮ ಟೀಚರ್ಸ್ ಡೇ ಸೆಲೆಬ್ರೇಷನ್ನಿಗೂ ಮಳೆರಾಯ ತಪ್ಪದೆ ಹಾಜರಿ ಹಾಕುತ್ತಿದ್ದ. ಯಾವಾಗಲು ಸೆಪ್ಟೆಂಬರ್ 4 ರ ಮಧ್ಯಾಹ್ನ ಕಾರ್ಯಕ್ರಮ ನಿಗದಿಯಾಗಿರುತ್ತಿತ್ತು. ಕಾರ್ಯಕ್ರಮ ಪ್ರಾರಂಭವಾಗಿ ಸ್ವಾಗತ ಉದ್ಘಾಟನೆ ಮೊದಲಾದ ಔಪಚಾರಿಕ ಕಾರ್ಯಕ್ರಮ ಮುಗಿದು ಸಾಂಸ್ಕೃತಿಕ ಕಾರ್ಯಕ್ರಮ ಪ್ರಾರಂಭವಾಗುವ ಹೊತ್ತಿಗೆ ಹಾಡು ಕೇಳದಷ್ಟು ಜೋರು ಮಳೆ. ಮುಸಿ ಮುಸಿ ನಗುತ್ತಾ ಬರೆ ಡಾನ್ಸ್ ನೋಡುತ್ತಿದ್ದೆವು. ಡಾನ್ಸ್ ಮಾಡುವವರಿಗೂ ಹಾಡು ಕೇಳಿಸದೆ ಒಬ್ಬೊಬ್ಬರು ಒಂದೊಂದು ಸ್ಟೆಪ್ ಹಾಕುತ್ತಿದ್ದರು. ಟೀಚರ್‌ಗಳಿಗೆ ಹಾಡು ಗೊತ್ತಿದ್ದರೆ ಅವರೆ ಬಂದು ಹಾಡು ಹೇಳುತ್ತಿದ್ದರು. ಅಲ್ಲಿಯೂ ಪಲ್ಲವಿ ಚರಣ ವ್ಯತ್ಯಾಸದಿಂದ ಡಾನ್ಸ್ ವ್ಯತ್ಯಾಸವಾಗುತ್ತಿತ್ತು. ಅಂತೂ ಸೆಪ್ಟೆಂಬರ್ ಕಳೆಯುತ್ತಿದ್ದಂತೆ ಮಹಾಲಯ ಅಮವಾಸ್ಯೆಯ ಕಾಲಕ್ಕೆ ಅರ್ಥಾತ್ ಅಕ್ಟೋಬರಿನ ಮಧ್ಯವಾರ್ಷಿಕ ಪರೀಕ್ಷೆಯಕಾಲಕ್ಕೆ ಜಡಿ ಮಳೆ ಬಿಟ್ಟಂತಾಗಿ ಗಾಂಧಿಜಯಂತಿ ಆಚರಣೆಗೆ ಬಿಸಿಲಿರುತ್ತಿತ್ತು.
ಶಾಲಾ ಸಮವಸ್ತ್ರದ ಅವಿಭಾಜ್ಯಅಂಗ ಶೂ ಸಾಕ್ಸ್ ಅಂದರೆ ಕಾಲು ಚೀಲ. ಕಾಲುಚೀಲ ಹಾಕುವವರ ದೈಹಿಕ ಗುಣಪ್ರವೃತ್ತಿ ಜೊತೆಗೆ ಅವುಗಳ ತಯಾರಿಯಲ್ಲಿ ಕೆಮಿಕಲ್ ಯುಕ್ತ ಮೂಲವಸ್ತುಗಳು ಹೆಚ್ಚಿದ್ದಲ್ಲಿ ಬೇಗ ನಾತ ಅಲ್ಲ ದುರ್ನಾತ ಬರುತ್ತದೆ. ಈ ವಾಸನೆ ನಮ್ಮ ಇಲಿಗಳಿಗೆ ಬಹಳ ಖುಷಿ ಅನ್ನಿಸುತ್ತದೆ. ಬೇಗ ಕಚ್ಚಿ ತಮ್ಮ ಗುಪ್ತ ಸ್ಥಳಕ್ಕೆ ಕೊಂಡೊಯ್ಯುತ್ತವೆ. ಅದು ಅವಗಳ ಬ್ಯುಸಿನೆಸ್ ಎಂಥ ಮಾಡ್ಲಿಕ್ಕಾಗುತ್ತೆ.
ಮಳೆ ಸ್ವಲ್ಪ ಕಡಿಮೆಯಾಗಿ ಶಾಲೆಯಲ್ಲಿ ಪಿ ಟಿ ಪೀರಿಯಡ್‌ಗೆ ಹೊರಗೆ ಬಿಡುತ್ತಿದ್ದರು. ಮಳೆ ಕಾರಣಕ್ಕೆ ಹೊರಗೆ ಹೋಗದೆ ಬಹಳ ದಿನಗಳಾಗಿರುತ್ತಿದ್ದುದರಿಂದ ಪಂಜರದಿಂದ ಬಿಟ್ಟ ಪಕ್ಷಿಗಳಂತಾಗುತ್ತಿದ್ದೆವು. ಸೂರ್ಯ ರಶ್ಮಿಗೆ ಮೈಯೊಡ್ಡುವ ಖುಷಿ ಬೇರೆ. ನೆವಿ ಬ್ಲೂ ಕಲರ್ ನೋಡಿ ನೋಡಿ ಆಯಾಸವಾಗಿದ್ದ ನಮಗೆ ಸ್ಕೈ ಬ್ಲೂ ನೋಡುವುದೆಂದರೆ ಇನ್ನಿಲ್ಲದ ಖುಷಿ. ಸ್ವೆಟರ್, ಸ್ಕಾರ್ಫ್, ಸಾಕ್ಸ್ ಎಲ್ಲವೂ ನೇವಿ ಬ್ಲೂನಲ್ಲಿ ಇರುತ್ತಿದ್ದೆವು.
ಏನು ಸಿಕ್ಕರೂ ದಾನ ಕೊಟ್ಟು ದಾನವೀರರು ಎಂದು ಕರೆಸಿಕೊಳ್ಳುವುದು ಒಂದು ರೀತಿಯಾದರೆ, ಏನು ಸಿಕ್ಕರೂ ಇನ್ಯಾರಿಗೊ ಕೊಟ್ ಬಿಡ್ತಾರೆ ಅನ್ನುವ ಆಪಾದನೆ ಇನ್ನೊಂದು ರೀತಿಯದ್ದು. ಇಲ್ಲೊಂದು ಜಿಜ್ಞಾಸೆ ಇದೆ; ಏನೆಂದರೆ ತಪ್ಪು ಮಾಡಿ ಬೈಗುಳ ತಿಂದ (ಮೈಸೂರು ಸೀಮೆಯಲ್ಲಿ ಬೈಸಿಕೊಳ್ಳುವುದು ಎಂದೇ ಬಳಕೆಯಲ್ಲಿದೆ) ಮೇಲೆ ಬೇಸರ ಮಾಡಿಕೊಳ್ಳುವುದು ಸರಿಯೋ? ತಪ್ಪಿಲ್ಲದೆ ಬೈಗುಳ ತಿಂದು ತಲೆ ಕೆಡಿಸಿಕೊಳ್ಳಬೇಕೋ ಎಂಬುದೋ? ಸರಿ! ಸರಿಯಲ್ಲ! ಎಂಬ ಅಭಿಪ್ರಾಯಗಳು ತಕ್ಕಡಿ ತೂಗಿದಂತೆ ಎರಡೂ ಕಡೆ ಬರುತ್ತವೆ. ಮನೆಯವರೆ ಆಗಿರಲಿ ಎಲ್ಲರೆದಿರು ಬೈಸಿಕೊಳ್ಳುವುದು ಕೊಂಚ ಅಪಮಾನದ ಸಂಗತಿ ಎಂದು ನಂಬುವಳು ನಾನು..
ಮಲೆನಾಡಲ್ಲಿ ಮಳೆಗಾಲಕ್ಕೂ ಪೂರ್ವದಲ್ಲಿ ಅರ್ಥಾತ್ ಯುಗಾದಿ ಕಳೆದ ಮೇಲೆ ಅಟ್ಟಿ ಲೆಕ್ಕದಲ್ಲಿ ಸೌದೆ ಹಾಕಿಸಿಕೊಳ್ಳುವುದು ವಾಡಿಕೆ. ಜೀಪಿನಲ್ಲಿ (ಅಟ್ಟಿ ಅನ್ನುವುದು ಸೌದೆಯನ್ನು ಅಳೆಯುವ ಪ್ರಮಾಣ) ಮಿನಿ ಲಾರಿಯಲ್ಲಿ ಸೌದೆ ಹಾಕುವವರು. ಅದನ್ನು ಮನೆಮಕ್ಕಳೆಲ್ಲಾ ಸೇರಿ ಕೊಟ್ಟಿಗೆಯಲ್ಲಿ ಒಟ್ಟುವುದು ಒಂದು ಕಾರ್ಯಕ್ರಮವೇ ಸರಿ! ಇಷ್ಟಾದ ಮೇಲೆ ಇಲಿಗಳೂ ಮಳೆಗಾಲಕ್ಕೆ ಸುರಕ್ಷಿತ ವಾಸ್ತವ್ಯಕ್ಕೆ ಸೂಕ್ತ ಜಾಗ ಹುಡುಕುವ ಅವು ಇನ್ನೂ ಬೆಚ್ಚಗಿರಲು ಏನೇನು ಬೆಚ್ಚನೆ ವಸ್ತ್ರ ಸಿಗುತ್ತವೋ ಎಲ್ಲವನ್ನು ಹೊಂದಿಸಿಕೊಳ್ಳುತ್ತಿದ್ದವು. ಅದು ಅವುಗಳ ತಯಾರಿ.
ಶಾಲೆಯಲ್ಲಿ ಪಿಟಿ ಪ್ರಾರಂಭವಾದ ಮೇಲೆ ಹಿಂದಿನ ವರ್ಷದ ಹಳೆ ಸಾಕ್ಸ್‌ಗಳನ್ನು ಹಾಕಲು ಬೇಜಾರೆ. ಚಿಕ್ಕದು! ಲೂಸು! ಎನ್ನುವ ನೆಪವೊಡ್ಡಿ ಹೊಸದನ್ನೆ ತರಿಸಿ ಹಾಕುತ್ತಿದ್ದ ಜಾಣರು ನಾವು. ಇನ್ನೇನಿಲ್ಲ ಹೊಸ ಶೈಕ್ಷಣಿಕ ವರ್ಷಕ್ಕೆ ಎಲ್ಲವು ಹೊಸವೆ ಆಗಬೇಕು ಅನ್ನುವುದು ನಮ್ಮ ಬೈಲಾದ ನಿಯಮ. ಈಗ ಹಾಗಿಲ್ಲ ಅನೇಕ ತಿದ್ದುಪಡಿಗಳಾಗಿವೆ ಬಿಡಿ.
ನಾನು ಒಂಬತ್ತನೆಯ ತರಗತಿಯಲ್ಲಿದ್ದಾಗ ನಡೆದೊಂದು ಘಟನೆಯನ್ನು ಇಲ್ಲಿ ಉದಾಹರಿಸುವೆ. ಶಾಲೆಯಿಂದ ಬಂದು ಕಾಲುಚೀಲಗಳನ್ನು ಬಿಚ್ಚಿ ಇಟ್ಟಿದ್ದರೆ ಬೆಳಗಾಗುವುದರ ಒಳಗೆ ಒಂದೊಂದು ಇರುತ್ತಿತ್ತು ಇನ್ನೊಂದೊಂದು ಇರುತ್ತಿರಲಿಲ್ಲ. ಮರುದಿನ ಉಳಿದೊಂದೊಂದೂ ಇರುತ್ತಿರಲಿಲ್ಲ. ಸಾಕ್ಸ್ ಹುಡುಕಿದರೂ ಸಿಗದೆ ಇದ್ದಾಗ ಯಥಾ ಪ್ರಕಾರ ಹೊಸವನ್ನು ತರಸಿಕೊಳ್ಳುವುದು ಮತ್ತೆ ಕಳೆದುಕೊಳ್ಳುವುದು. ಹೀಗೆ ವಾರ- ಹದಿನೈದು ದಿನಗಳು ಕಳೆದವು.
ಮನೆಯವರಿಗೆಲ್ಲಾ ಇದೊಂದು ಬೃಹತ್ ಸಮಸ್ಯೆಯಾಗಿಯೆ ಕಾಡಿತು. ನಾನಿಲ್ಲದೆ ಇರುವಾಗ ಎಲ್ಲಾರು ಸಭೆ ಸೇರಿ ನನ್ನನ್ನೆ ಅಪಾದಿತೆ ಎಂದು ತೀರ್ಮಾನಿಸಿದ್ದರು. ಅಂದರೆ ನಾನೆ ಕಾಲುಚೀಲಗಳನ್ನು ಇನ್ಯಾರಿಗೋ ಕೊಟ್ಟಿರುವೆ ಎನ್ನುವ ತೀರ್ಮಾನಕ್ಕೆ ಬಂದು ಬಿಟ್ಟಿದ್ದರು. ಅದರಲ್ಲೂ ನಮ್ಮಜ್ಜಿ “ನಾಳೆ ಶಾಲೆಗ್ ಬರ್ತೀ….ನೆ… ಕೇಳ್ತೀನಿ ಕಾಲು ಚೀಲ ತಂದು ಯಾಗೋರ್ಗೋ ಕೊಟ್ಟಿದ್ದಾಳೆ ಸ್ವಲ ವಿಚಾರಿಸಿ ಅಂತ” ಎಂದು ಹೇಳಿ ಹೆದರಿಸುತ್ತಿದ್ದರು. ಅವರೆಷ್ಟು ಕೇಳಿದರು “ಇಲ್ಲ! ನಾನಲ್ಲ! ನನಗೆ ಗೊತ್ತಿಲ್ಲ!” ಎನ್ನುವ ಉತ್ತರ ಕೊಟ್ಟು ನಾನು ತತ್ತರಿಸಿ ಹೋಗಿದ್ದೆ. ಮತ್ತೆ ಮತ್ತೆ ಅವರು ಕೇಳುವ ಅವವೆ ರೂಪಾಂತರಿ ಪ್ರಶ್ನೆಗಳಂತೂ ಕಿರಿ ಕಿರಿ ತರುತ್ತಿದ್ದವು.
ಅಂತೂ ದಸರಾ ರಜೆ ಸಿಕ್ಕಿತು. ಇನ್ನೇನು ರಜೆ ಮುಗಿಯುತ್ತಿದೆ ಅನ್ನುವಷ್ಟರಲ್ಲಿ ಸೌದೆ ಕೊಟ್ಟಿಗೆ ಕಡೆಯಿಂದ ಗಾಳಿ ಬರುತ್ತಿದ್ದಂತೆ ಎನೋ ನಾತ ಅನ್ನಿಸುತ್ತಿತ್ತು. ಇರಲಿ ಮಳೆ ನಿಂತಿದೆ, ಹೊಳಹು ಇದೆ ಎನ್ನುತ್ತಾ ಸೌದೆ ಕೊಟ್ಟಿಗೆ ಶುದ್ಧ ಮಾಡುವ ಕೆಲಸ ಮತ್ತೆ ಪ್ರಾರಂಭವಾಯಿತು. ಹಾಗೆ ಮೇಲಿನ ಪದರದ ಸೌದೆಗಳು ಖಾಲಿಯಾಗುತ್ತಿದ್ದಂತೆ ಗಬ್ಬು ನಾತ ಹೆಚ್ಚೆಚ್ಚು ಬರಲಾರಂಭವಾಯಿತು ಹಾಗೆ ತೆಗೆಯುವಷ್ಟರಲ್ಲಿ ಇನ್ನು ಅಲ್ಲಿರಲಾರದಷ್ಟು ನಾತ. ಹಾಗೆ ಏನೋ ಕಾಣಿಸುತ್ತಿದೆ ಎನ್ನುತ್ತಲೇ ಉದ್ದನೆ ಕೋಲು ಹಾಕಿದರೆ ಏನೋ ಬಟ್ಟೆ ಇದ್ದಹಾಗೆ ಹಾಗಾಯಿತು. ಇನ್ನೂ ಸೌದೆ ತೆಗೆದರೆ, ಕಾಲು ಚೀಲಗಳು ಅಲ್ಲಿದ್ದವು. ಕೊಳೆತ ಟೊಮೆಟೊ, ಆಲೂಗಡ್ಡೆ, ಬದನೆಕಾಯಿ, ಕೊತ್ತಂಬರಿಗಳಿಂದ ಅಸೊಗಯಿಸುತ್ತಿದ್ದವು. ಸಂಪೂರ್ಣ ತೆಗೆದರೆ ಕಳೆದ ಅಷ್ಟೂ ಕಾಲುಚೀಲಗಳು ಅಲ್ಲಿ ಜೋಪಾನವಾಗಿದ್ದವು. ಅವನ್ನು ಹೊರ ತೆಗೆಯುತ್ತಿದ್ದಂತೆ ಆಗ ತಾನೆ ಜನ್ಮ ತಳೆದಿರಬಹುದು ಎನ್ನಬಹುದಾದ ಬೋಳುತಲೆಯ ಇಲಿ ಮರಿಗಳು, ತಲೆ ಎತ್ತುವುದೋ? ಬೇಡವೋ? ಅನ್ನುವಂತೆ ಇದ್ದವು. ಎಂದಿಗೂ ಸೌದೆ ರಿಪೇರಿ ಕೆಲಸಕ್ಕೆ ಹೋಗದ ನಾನು ಮುಂದೆ ಮುಂದೆ ನಿಲ್ಲುತ್ತಿದ್ದೆ.
ಮನೆಯವರೆಲ್ಲಾ ಬೇರೆ ಕೆಲಸ ನೋಡು! ಹಾಲಿಡೇ ಹೋಂವರ್ಕ್ ಮಾಡು ಎಂದರೂ ನಾನು ಅಲ್ಲಿಂದ ಕದಲಲು ತಯಾರಿರಲಿಲ್ಲ. ಬೇಕಂತಲೇ “ಅಜ್ಜಿ…. ಏನ್ ಸಿಕ್ಕಿದೆ? ಏನಿದು?” ಎನ್ನುತ್ತಿದ್ದೆ. ಅದರಲ್ಲಿ ನನಗೆ ಆವರಿಸಿದ್ದ ಕಾಲು ಚೀಲ ಕಳ್ಳಸಾಗಾಣೆಯ ಅಪವಾದದಿಂದ ಹೊರಬಂದ ಖುಷಿ ಇತ್ತು. ಸಿಕ್ಕ ಕಾಲುಚೀಲಗಳು ಇಲಿಯಣ್ಣನ ಅಪೂರ್ವ ಕಲಾಕೃತಿಗಳೋ? ಎಂಬಂತಿದ್ದವು ಆದರೆ ಯಾವುವೂ ಮರುಬಳಕೆಯ ಸ್ಥಿತಿಯಲ್ಲಿ ಇರಲಿಲ್ಲ. ಅದನ್ನೇನು ಮಾಡುವುದು? ಇನ್ನೇನು? ಎಸೆಯೋದೆ ಅಲ್ವ! ಅವುಗಳನ್ನೆಲ್ಲಾ ಮನೆಯ ಅನತಿ ದೂರದಲ್ಲಿ ಹರಿಯುತ್ತಿತ್ತ ‘ಸಪಾತಿ’ ತೋಡಿಗೆ ಎಸೆಯಲು ತೀರ್ಮಾನಿಸಿ (ಮಡಿಕೇರಿಯ ಜಿಲ್ಲಾಸ್ಪತ್ರೆಯಿಂದ ಮೊದಲುಗೊಂಡು ಊರಿನ ಕೊಳೆ ಹೊತ್ತು ತರುತ್ತಿದ್ದ ಕಾರಣದಿಂದ ಆ ತೋಡನ್ನು ಸಕಲ ಪಾವನ ತೀರ್ಥ ಅನ್ನುವ ಹೆಸರಿನಿಂದ ಕರೆಯುತ್ತಿದ್ದೆವು) ಪ್ಲಾಸ್ಟಿಕ್ ಚೀಲದಲ್ಲಿ ತುಂಬಿದ್ದರೆ ಬರೋಬ್ಬರಿ ಸುಮಾರು ಕಾಲು ಚೀಲ ಕಾಲುಚೀಲಗಳೆ ತುಂಬಿದ್ದವು. ಅಂತೂ ನನ್ನ ಮೇಲೆ ಬಂದಿದ್ದ ಕಾಲುಚೀಲ ಕಳ್ಳಸಾಗಣೆ ಅಪವಾದ ಕಣ್ಮರೆಯಾಯಿತು. ಕಿರಿ ಕಿರಿ ಕರ್ಕಶ ಪ್ರಶ್ನೆಗಳಿಂದ ಆರಾಮ ಸಿಕ್ಕಿತು. ಆದರೆ ಹಾಲಿ ‘ಕೊಡಗಿನ ವರ್ಷ ಕಾಲ’ದ ಸರಣಿಗಲ್ಲ. ಇನ್ನೂ ವಿಭಿನ್ನ ವಿಷಯದೊಂದಿಗೆ ಮುಂದಿನ ಬರೆಹದಲ್ಲಿ ಭೇಟಿಯಾಗುವೆ.
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.