ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಕವಿತೆ ಬರೆಯುತ್ತಿದ್ದಳು. ಸರಳವಾದ ಪದದ ಅರ್ಥ-ಅದನ್ನು ತರಗತಿಯಲ್ಲೂ ಕೇಳಬಹುದಿತ್ತು- ಕೇಳಿಕೊಂಡು ಸ್ಟಾಫ್‌ರೂಮಿಗೆ ಬರುತ್ತಿದ್ದಳು. ಸಹೋದ್ಯೋಗಿಗಳು `ನೀನೇ ಹುಡುಗಿ ತರಹ ನಾಚ್ಕೊತೀ ಯಲ್ಲೋ’ ಎಂದು ಛೇಡಿಸುತ್ತಿದ್ದರು. ಬದುಕಿನ ಬಗ್ಗೆ ಭವಿಷ್ಯದ ಬಗ್ಗೆ ಚಿಂತನೆ ಹೊಣೆಗಾರಿಕೆ ಇಲ್ಲದೆ ಹುಟ್ಟಿದ ಎಳಸು ಆಕರ್ಷಣೆಗಳವು. ಆದರೂ ಒಬ್ಬಾಕೆಯ ದೊಡ್ಡ ಕಣ್ಣುಗಳ ಮುಖ ಚಿತ್ತದಲ್ಲಿ ಉಳಿದುಬಿಟ್ಟಿದೆ. ಚೆಲ್ಲು ವರ್ತನೆಯ ಆಕೆ, ಕನ್ನಡದಲ್ಲಿ ಭಯಂಕರ ಕಾಗುಣಿತ ತಪ್ಪು ಮಾಡುತ್ತಿದ್ದಳು. ಚೆಲುವನ್ನು ಕೊಟ್ಟು ಬುದ್ಧಿಯನ್ನು ಕೊಡದ ವಿಧಿಯನ್ನು ಬೈದುಕೊಂಡು, ಭಾಷಾ ದೋಷಗಳನ್ನು ಉದಾರವಾಗಿ ತಿದ್ದುತ್ತಿದ್ದೆ.
ಡಾ. ರಹಮತ್‌ ತರೀಕೆರೆಯವರ ಆತ್ಮಕಥನ “ಕುಲುಮೆ”ಯ ಒಂದು ಅಧ್ಯಾಯ ನಿಮ್ಮ ಓದಿಗೆ

ನನ್ನ ತಾರುಣ್ಯ ಯೌವನಗಳ ಹೊತ್ತಗೆಯು ಏಕಮುಖೀ ಅಥವಾ ವಿಫಲಪ್ರೇಮದ ಅಧ್ಯಾಯಗಳಿಂದ ತುಂಬಿ ಹೋಗಿದೆ.

ಮೊದಲನೆಯ ಅಧ್ಯಾಯವು ಪಿಯುಸಿ ಕಲಿಯುವಾಗ ಆಯಿತು. ಆಗೊಬ್ಬ ಸಹಪಾಠಿ ಆಕರ್ಷಣೆ ಹುಟ್ಟಿಸಿದ್ದಳು. ನಕ್ಕರೆ ಚಂದ. ನೀಟಾಗಿ ನೋಟ್ಸ್ ಬರೆಯುತ್ತಿದ್ದಳು. ಅವಳ ನಂತರ ನೀಟಾಗಿ ಬರೆಯುವವರ ಪಟ್ಟಿಯಲ್ಲಿ ನನ್ನದೇ ಹೆಸರಿತ್ತು. ಆಕೆ ರಜೆ ಮಾಡಿದಾಗ ನನ್ನ ನೋಟ್ಸನ್ನು ಕಡವಾಗಿ ಪಡೆಯುತ್ತಿದ್ದಳು. ನಾನೊಂದು ವಾರ ಕಾಯಿಲೆ ಬಿದ್ದು ಕಾಲೇಜಿಗೆ ಹೋಗಿರಲಿಲ್ಲ. ಭಾನುವಾರ. ಜ್ವರ ತುಸು ಬಿಟ್ಟಿತ್ತು. ಸಂಜೆ ಆಕೆಯ ಮನೆಗೆ ಹೋದೆ. ಕಾಂಪೌಂಡಿದ್ದ ಅಂಗಳದಲ್ಲಿ ಮನೆಯವರೆಲ್ಲ ಕುಳಿತು ಚಹ ಕುಡಿಯುತ್ತ ಹರಟುತ್ತಿದ್ದರು. ಆಕೆಯ ಅಪ್ಪನ ಮುಖದ ಮೇಲೆ ಮುಳುಗುವ ಸೂರ್ಯನ ಬೆಳಕು ಬಿದ್ದು ಹೊಳೆಯುತ್ತಿತ್ತು. ಗೇಟಿನ ಬಳಿ ಹೋಗಿ ನಿಂತೆ. ಸಹಪಾಠಿಣಿಯ ಗಲಿಬಿಲಿ ಹೇಳತೀರದು. ಅಪ್ಪನು ತಟ್ಟನೆದ್ದು ರಭಸದಲ್ಲಿ ಬಂದವನೇ, ಮುಖದಿಂದ ಕಿತ್ತು ಹೊರ ಬರುತ್ತವೆಯೊ ಎಂಬಂತೆ ಕೆಕ್ಕರು ಕಂಗಳಿಂದ `ಯಾರೊ ನೀನು?’ ಎಂದು ಗರ್ಜಿಸಿದ- ಕನ್ಯಾಪಹರಣಕ್ಕೆ ಕುದುರೆ ಮೇಲೆ ಬಂದಿರುವೆನೊ ಎಂಬಂತೆ. ಜ್ವರದಿಂದ ಹೈರಾಣಾಗಿದ್ದ ದೇಹ ಬಿರುಗಾಳಿಗೆ ಸಿಕ್ಕ ಒಣಮರದಂತೆ ತತ್ತರಿಸಿತು. ತೊದಲುತ್ತ `ನೋಟ್ಸ್ ಬೇಕಿತ್ತು’ ಎಂದೆ. ಮಗಳತ್ತ ತಿರುಗಿ-
“ಇವನ ಪುಸ್ತಕ ನೀನ್ಯಾಕೆ ತಗೊಂಡೆ?”
“ನಾ ತಗೊಂಡಿಲ್ಲ ಪಪ್ಪಾ”
“ಮತ್ಯಾಕೆ ಬಂದಿದಾನೆ ಇವನು ಮನೆ ಹತ್ರ?”
ಸಹಪಾಠಿಯ ತಾಯಿ ಬಿಪಿಯೇರಿದ ಪತಿದೇವರನ್ನು ಹಿಂದಕ್ಕೆಳೆದು, ಗೇಟಿನ ಮೇಲೆ ಕೈಯಿಟ್ಟು ನಿಂತಿದ್ದ ನನ್ನ ಬಳಿ ಬಂದು, ಶಾಂತಸ್ವರದಿಂದ `ಏನಪ್ಪ ಸಮಾಚಾರ?’ ಎಂದು ವಿಚಾರಿಸಿದರು. ವಿವರಿಸಿದೆ. ಅವರು (ಇನ್ನೂ ಭುಸುಗುಡುತ್ತಿದ್ದ ಗಂಡನಿಗೆ) `ನೀವು ಸ್ವಲ್ಪ ಸುಮ್ಮನಿರಿ. (ಮಗಳಿಗೆ) ಹೋಗೆ ಅದೇನು ತಂದುಕೊಡು’ ಎಂದರು. ಇತಿಹಾಸದ ನೋಟ್ಸ್ ಬೇಕಿತ್ತು. ಸಮಾಜಶಾಸ್ತ್ರದ ನೋಟ್ಸ್ ಸಿಕ್ಕಿತು. ನೋಟ್ಸನ್ನು ಕಾಲೇಜಲ್ಲಿ ಹಿಂತಿರುಗಿಸುವಾಗ `ತಪ್ಪಾಯ್ತಾ?’ ಎಂದು ಕೇಳಿದೆ. ಆಕೆ `ಇನ್ನೊಂದ್ಸಲ ಮನೆಹತ್ರ ಬರಬ್ಯಾಡ’ ಎಂದಳು. ಅದು ಎಚ್ಚರಿಕೆಯೊ ವಿನಂತಿಯೊ ಅರಿಯದಾದೆ. ಅಲ್ಲಿಗೆ ಎಳೆಯನೊಬ್ಬನ ದುಸ್ಸಾಹಸವೆಂಬ ಪ್ರಥಮ ಅಧ್ಯಾಯವು ಮೊದಲ ಮುತ್ತಿಗೆ ಹಲ್ಲು ಮುರಿಯಿತೆಂಬಂತೆ ಪರಿಸಮಾಪ್ತಿಯಾಯಿತು.

ಎರಡನೆಯ ಅಧ್ಯಾಯವು ಪದವಿಯಲ್ಲಿದ್ದಾಗ ಬರೆಯಲ್ಪಟ್ಟಿತು. ಉಕ್ಕುಪ್ರಾಯದ ಮೊದಲ ದಿನಗಳು. ಹುಡುಗಿಯರ ಬಗ್ಗೆ ಸೆಳೆತ-ಹಿಂಜರಿಕೆಗಳಿಂದ ಕೂಡಿದ್ದವು. ಮಾತಾಡಿಸುವ ತವಕ. ಪರಿಣಾಮ ಏನಾಗುವುದೊ ಭಯ. ಚೆಲುವೆಯಾದ ಒಬ್ಬ ಸಹಪಾಠಿಣಿ ಸಖಿಯರ ಹಿಂಡಿನಲ್ಲಿ ಬರುವಾಗ, ಕಿಟಕಿ ಕಟ್ಟೆಯಲ್ಲಿ ಕಾಲು ಇಳಿಬಿಟ್ಟು ಕೂರುತ್ತಿದ್ದ ನಾನು, ತಟ್ಟನೆ ಇಳಿದು ನಿಲ್ಲುತ್ತಿದ್ದೆ- ನನ್ನತ್ತ ಒಮ್ಮೆ ನೋಡಲಿ ಎಂದು. ಆಕೆ ನನ್ನ ಗೌರವ ವಂದನೆಗಾಗಲಿ ಕಾತರದ ಪ್ರತೀಕ್ಷೆಗಾಗಲಿ ಸೊಪ್ಪುಹಾಕದೆ ಮುನ್ನಡೆಯುತ್ತಿದ್ದಳು. ಆಕೆಗೆ ಎಷ್ಟೊ ಮಂದಿ ನನ್ನಂತೆಯೇ ಗುಪ್ತಪ್ರೇಮಿಗಳು ಇದ್ದಿರಬಹುದು. ಒಂದು ದಿನ ಆಕೆ ಹಾಡಿನ ಸ್ಪರ್ಧೆಯಲ್ಲಿ ಬಹುಮಾನ ಪಡೆಯುತ್ತಿದ್ದ ಭದ್ರಾವತಿ ಹುಡುಗನ ಜತೆ ತಿರುಗಾಡುವುದನ್ನು ಕಂಡೆ. ಕೀಳರಿಮೆ ಅಸೂಯೆಗಳಿಂದ ಬೆಂದ ಆತ್ಮ ತಳಮಳಿಸಿತು: `ದೇವರೇ, ನನಗೇಕೆ ಮಧುರವಾದ ದನಿಯನ್ನು ಕೊಡದೆ ಹೋದೆ?’

ಕಾಲೇಜಿನ ಡಿಬೇಟು ಸ್ಪರ್ಧೆಗಳಲ್ಲಿ ನನಗೆ ಎರಡು-ಮೂರನೇ ಬಹುಮಾನ ಬರುತ್ತಿದ್ದವು. ಮೊದಲನೇ ಬಹುಮಾನವನ್ನು ಕಡ್ಡಾಯವೆಂಬಂತೆ ಒಬ್ಬಾಕೆ ಪಡೆಯುತ್ತಿದ್ದಳು. ಆದರೆ ಪ್ರಬಂಧ ಸ್ವರ್ಧೆಯಲ್ಲಿ ನಾನವಳನ್ನು ಹಿಂದಿಕ್ಕುತ್ತಿದ್ದೆ. ನಾವಿಬ್ಬರೂ ಹಲವಾರು ಕಾಲೇಜುಗಳಲ್ಲಿ ಭೇಟಿಯಾಗುತ್ತಿದ್ದೆವು. ನಮಗರಿಯದೇ ಗೆಳೆಯರಾಗುತ್ತಿದ್ದೆವು. ಒಮ್ಮೆ ಸ್ಪರ್ಧೆಯೊಂದಕ್ಕೆ ಒಟ್ಟಿಗೆ ಪಯಣಿಸಬೇಕಾಯಿತು. ಸಂಘಟಕರು ಕಾರ್ಯಕ್ರಮದ ಬಳಿಕ ಬಹುಮಾನಿತರನ್ನು ಸಮೀಪವಿದ್ದ ಜೋಗಕ್ಕೆ ಕಳಿಸಿಕೊಟ್ಟರು. ನೀರು ರಭಸವಾಗಿ ಧುಮ್ಮಿಕ್ಕುತ್ತಿತ್ತು. ನಾವಿಬ್ಬರೂ ಜಲಪಾತದ ತಳಭಾಗಕ್ಕೆಂದು ಕಣಿವೆಯ ಕಿಬ್ಬದಿಯ ಹಾದಿಯಲ್ಲಿ ಇಳಿದೆವು. ಕಿರುದಾರಿ. ಆಗಷ್ಟೆ ಬಿದ್ದ ಮಳೆಯಿಂದ ಪಾಚಿಗಟ್ಟಿದ ನೆಲ ಜಾರುತ್ತಿತ್ತು. ಆಕೆ ಎಡವಿದಾಗ ನಾನೂ ನಾನುರುಳಿದಾಗ ಆಕೆಯೂ ಕೈಹಿಡಿದೆಬ್ಬಿಸುತ್ತ ಕೆಳಗಿಳಿದೆವು. ಕಾಲಿಗೆ ಇಂಬಳ ಅಡರಿದ ಖಬರೂ ಇರಲಿಲ್ಲ. ಹುಡುಗಿಯೊಂದಿಗೆ ಕಣಿವೆ ಇಳಿವ ರೋಮಾಂಚನ. ಆದರೆ ಯಾರಾದರೂ ಹಿಂಬಾಲಿಸಿ ಗಮನಿಸುತ್ತಿದ್ದಾರೆಯೆ ಎಂಬ ಅಳುಕು. ಹತ್ತುವಾಗ ಸುಸ್ತಾಗಿ ಒಂದೆಡೆ ನಿಂತೆವು. ಆಕೆಯ ಮುಖದ ಮೇಲೆ ಬೆವರ ಹನಿಗಳು. ಒರೆಸಲೇ ಅನಿಸಿತು. ಆಕೆ ನನ್ನನ್ನೇ ಓರೆಗಣ್ಣಲ್ಲಿ ಚೂಪಾಗಿ ನೋಡಿದಳು. ಅರ್ಥವನ್ನು ಅಸ್ಪಷ್ಟ ಊಹಿಸಿದೆ. ಚುಂಬಿಸಲು ಸಾಧ್ಯವಾಗಲಿಲ್ಲ. ನನ್ನ ಅಧೈರ್ಯ ನನಗೇ ಕೆಟ್ಟದೆನಿಸಿತು.

ಕಣಿವೆಯೇರಿ ಮೇಲೆ ಬಂದ ಬಳಿಕ ಈಜಾಡಬೇಕೆನಿಸಿತು. ಆಕೆ ಈಜುಕೊಳದ ದಡದಲ್ಲಿ ಕೂತಳು. ನಮ್ಮೂರ ಕೆರೆಗಳಲ್ಲಿ ಕಲಿತ ಈಜಿನ ಹತ್ತಾರು ಪಟ್ಟುಗಳನ್ನು ತೋರಿಸಿದೆ. ಆಕೆ ಜೀವನ ಸಂಗಾತಿಯಾಗುವ ಉದ್ದೇಶ ತಿಳಿಸಿ ಪತ್ರ ಬರೆದಳು. ಮನೆಗೂ ಬಂದಳು. ನಮ್ಮ ಹೆಣ್ಣಜ್ಜಿಗೆ ಮೊಮ್ಮಗನ ಹುಡುಕಿ ಹುಡುಗಿಯೊಬ್ಬಳು ಬಂದಿದ್ದು ಸಾಂಸ್ಕೃತಿಕ ಆಘಾತ. ನಾನೆಲ್ಲೊ ಹೋದವನು ಮರಳಿ ಬರುವ ತನಕ ಕೂರಿಸಿ ಕುಡಿಯಲು ಹಾಲು ಕಾಸಿಕೊಟ್ಟಿದ್ದಳು. `ಯಾವ ಮತದವರಮ್ಮ ನೀವು?’ ಎಂದು ಸಿಬಿಐ ತನಿಖೆ ಮಾಡಿ ಮುಗಿಸಿದ್ದಳು. ನನ್ನನ್ನು ಸ್ಪರ್ಧೆಗಳಲ್ಲಿ ಸೋಲಿಸುತ್ತಿದ್ದ ಆಕೆ ನನಗೆ ಮನಸೋತಿದ್ದಳು. ಅವಳ ಮನಸ್ಸನ್ನು ಓದಲು ಶಕ್ತನಾಗಿದ್ದೆ. ಜಾತಿಧರ್ಮ-ಕುಟುಂಬದ ಸಂಬಂಧಗಳನ್ನು ಹರಿದು ಬರುವ ಆಕೆಯ ದಿಟ್ಟತನ ಗೌರವ ಹುಟ್ಟಿಸಿತು. ಆದರೆ ನನ್ನೊಳಗೆ ಒಲವು ಯಾಕೊ ಸಹಜವಾಗಿ ಅಂಕುರಿಸಲಿಲ್ಲ. ಭದ್ರವಾದ ನೆಲೆಯಿಲ್ಲದೆ ಜೀವನ ಸಂಗಾತಿ ಬಗ್ಗೆ ತಲೆಕೆಡಿಸಿಕೊಳ್ಳಲು ತಯಾರಾಗಲಿಲ್ಲ. `ನಾನಿನ್ನೂ ಎಂಎ ಓದಬೇಕು’ ಎಂದೆ. ಎಳೆಯಲಾಗದ ಎತ್ತೆಂದು ಆಕೆಗೆ ತಿಳಿಯಿತು. ಹಸಿಬಿಸಿ ಯೌವನದ ಸಂಬಂಧ, ಲಡ್ಡಾದ ಎಳೆಗಳಿಂದ ಮಾಡಿದ ಹಗ್ಗದಂತೆ ತುಂಡಾಯಿತು.

ಮೂರನೇ ಅಧ್ಯಾಯವು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಬಿಚ್ಚಿಕೊಂಡಿತು. ಹೊಸ ಜೀವನ ಸಂಗಾತಿಯನ್ನು ಕಂಡುಕೊಳ್ಳಲು ದೃಢವಾಗಿ ನಿರ್ಧರಿಸಿದೆ. ರಿಸಲ್ಟ್ ಬಂದ ಬಳಿಕ ಲೆಕ್ಚರರ್ ಕೆಲಸ ಸಿಕ್ಕುತ್ತದೆ. ಸಂಸಾರ ನಡೆಸಬಲ್ಲೆವು ಎನ್ನುವ ಧೈರ್ಯವಿತ್ತು. ಗೆಳೆಯರೂ ಸಹಪಾಠಿಗಳೂ ಪ್ರೇಮಪಥದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರು. ಆಗ ಅಂತರ್ಜಾತೀಯ ಮದುವೆ ಆದರ್ಶವಾಗಿತ್ತು. ಕೆಲವರಿಗೆ ಪುಟ್ಟ ವಿಧವೆಯ ಕೈಹಿಡಿದು ಲೋಕದೆದುರು ಧೀರೋದಾತ್ತ ನಾಯಕನಾಗಿ ಮೆರೆವ ಉಮೇದು, ಯಾರೂ ತರುಣಿಯರು ವಿಧವೆಯರೇ ಆಗುತ್ತಿಲ್ಲವಲ್ಲ ಎಂದು ಹಂಬಲಿಸುವಷ್ಟು ಅತಿರೇಕದಲ್ಲಿತ್ತು. ಪರಸ್ಪರ ಪ್ರೇಮ ಅಂಕುರಿಸಿದೆಯೇ, ಜೀವನದೃಷ್ಟಿಯಲ್ಲಿ ಸಮಸ್ಯೆಯಿಲ್ಲವೇ-ಈ ಯಾವ ಪ್ರಶ್ನೆಯೂ ಮುಖ್ಯವಾಗಿರಲಿಲ್ಲ. ಲೋಕವಿರೋಧಿ ಆಗಬೇಕು. ಸಂಪ್ರದಾಯವಾದಿಗಳ ಹೊಟ್ಟೆ ಉರಿಸಬೇಕು. ಚಳುವಳಿಗಾರರ ಮೆಚ್ಚುಗೆಗೆ ಪಾತ್ರರಾಗಬೇಕು, ಕ್ರಾಂತಿಯಾಗಬೇಕು-ಥೇಟು `ಚಿದಂಬರ ರಹಸ್ಯ’ದ ಹುಡುಗರ ತುರಿಸು. ನೀಟಾಗಿ ಡ್ರೆಸ್ ಮಾಡಿಕೊಂಡು ಮಿರುಗುವ ಶೂ ಧರಿಸಿ ಬರುತ್ತಿದ್ದ ಚೆನ್ನಾಗಿ ಉಂಡುತಿಂದು ಸೊಕ್ಕಿದ ಸಹಪಾಠಿಗಳ ಮುಂದೆ, ನನ್ನ ಬಡಕಲು ಮೈಕಟ್ಟು, ತಿರುಗಾಮುರುಗ ಉಡುತ್ತಿದ್ದ ಎರಡು ಜತೆ ಬಟ್ಟೆ, ಕೀಳರಿಮೆ ಹುಟ್ಟಿಸಿದ್ದವು. ಇಂತಹ ಆತ್ಮವಿಶ್ವಾಸವಿಲ್ಲದ ಹೊತ್ತಲ್ಲಿ ಒಬ್ಬಳು ನನ್ನನ್ನು ಸೆಳೆದಳು. ಅವಳ ಮಂದವಾದ ಹಾಸವು ನೂರು ಸ್ವಪ್ನಗಳನ್ನು ಹುಟ್ಟಿಸುತ್ತಿತ್ತು. ಅವಳು ಸಂಗಾತಿಯಾದರೆ ಬದುಕು ಚಂದವಾದೀತೆಂದು ಹಂಬಲಿಸಿದೆ. ಅಪ್ಪ-ಅಕ್ಕಂದಿರನ್ನು ಒಪ್ಪಿಸುವುದು ಕಷ್ಟವಾಗಿರಲಿಲ್ಲ.

ನೋಟ್ಸನ್ನು ಕಾಲೇಜಲ್ಲಿ ಹಿಂತಿರುಗಿಸುವಾಗ `ತಪ್ಪಾಯ್ತಾ?’ ಎಂದು ಕೇಳಿದೆ. ಆಕೆ `ಇನ್ನೊಂದ್ಸಲ ಮನೆಹತ್ರ ಬರಬ್ಯಾಡ’ ಎಂದಳು. ಅದು ಎಚ್ಚರಿಕೆಯೊ ವಿನಂತಿಯೊ ಅರಿಯದಾದೆ. ಅಲ್ಲಿಗೆ ಎಳೆಯನೊಬ್ಬನ ದುಸ್ಸಾಹಸವೆಂಬ ಪ್ರಥಮ ಅಧ್ಯಾಯವು ಮೊದಲ ಮುತ್ತಿಗೆ ಹಲ್ಲು ಮುರಿಯಿತೆಂಬಂತೆ ಪರಿಸಮಾಪ್ತಿಯಾಯಿತು.

ಗೆಳೆಯರೆಲ್ಲ ಪ್ರವಾಸ ಹೋದೆವು. ಅಲ್ಲಿನ ಸರೋವರದಲ್ಲಿ ದೋಣಿವಿಹಾರ ಕಾರ್ಯಕ್ರಮವಿತ್ತು. ಭಾವೀ ಸಂಗಾತಿಯನ್ನು ನನ್ನ ನಾವೆಗೆ ಆಹ್ವಾನಿಸಿದೆ. ಆಕೆ ಹಿಂಜರಿಯುತ್ತ ನಾವೆಯನ್ನೇರಿದಳು. ಹುಟ್ಟುಹಾಕುತ್ತ `ದೋಣಿಸಾಗಲಿ ಮುಂದೆ ಹೋಗಲಿ’ ಹಾಡಿದೆ. ದೋಣಿ ವಾಲಾಡಿತು. ಸಿನಿಮಾದಲ್ಲಿ ನಾಯಕ ಹುಟ್ಟು ಹಾಕುವಾಗ ಆಗುವಂತೆ, ಆಕೆ ಲಜ್ಜಾಭರಿತ ಪ್ರೇಮದ ನೋಟದಿಂದ ನೋಡಲಿಲ್ಲ. ಮುಳುಗಿಸುತ್ತಾನೆ ಎಂದು ಗಾಬರಿಯಾಗಿ ದಡಕ್ಕೆ ತಿರುಗಿಸು ಎಂದು ಗೋಗರೆದಳು. ನಾನು ಮುಳುಗುವಾಗ ಆಕೆ ಭರವಸೆ ನೀಡುವ ದಡವಾಗಬೇಕೆಂದು ಬಯಸಿದ್ದೆ. ಆದರೆ ದೋಣಿ ಇಬ್ಬರನ್ನು ಕೆಡವಿ ತಾನೊಂದೆ ದಡಕ್ಕೆ ಹೋಗುವ ದುಷ್ಟತನ ತೋರಿತು. ನನ್ನ ಹಾಡಿನ ಅಪಸ್ವರವೂ ದಿಗಿಲು ಹುಟ್ಟಿಸಿರಬಹುದು. ಪ್ರವಾಸದಿಂದ ಮರಳಿದೆವು. ಆಕೆ ಸುಡು ಮಧ್ಯಾಹ್ನ ಕುಕ್ಕರಹಳ್ಳಿ ಕೆರೆಯ ಏರಿಯ ಮೇಲೆ ಭೇಟಿಯಾಗಲು ತಿಳಿಸಿದಳು. ಹೋದೆ. ನಿರ್ಭಾವುಕ ಭಂಗಿಯಲ್ಲಿ ನಿಂತು, ಎಚ್ಚರಿಕೆ ನಿವೇದನೆ ಬೆರೆತ ದನಿಯಲ್ಲಿ ನುಡಿದಳು: `ಪ್ರೀತಿಗೀತಿ ಅಂತ ತಲೆಗೆ ಹಚ್ಚಕೋಬ್ಯಾಡ. ಸ್ನೇಹಿತರಾಗಿ ಉಳಿಯೋಣ. ನಮ್ಮ ಮದುವೆ ಸಾಧ್ಯವಿಲ್ಲ. ನನಗೆ ಚಿಕ್ಕಂದಿನಲ್ಲೇ ನಿಶ್ಚಯವಾಗಿದೆ. ಮುರಿದರೆ ಅಮ್ಮ ಆತ್ಮಹತ್ಯೆ ಮಾಡಿಕೊಳ್ತಾಳೆ’. ದಿಗ್ಮೂಢನಂತೆ ಕೇಳಿಸಿಕೊಂಡೆ. ಕೆರೆಯೊಡೆದು ಇಬ್ಬರನ್ನೂ ಕೊಚ್ಚಿ ಹೋಗಬಾರದೇ? ಹುಚ್ಚು ಹಿಡಿವಷ್ಟು ಪ್ರೇಮ ಬೇರು ತಳೆದಿರಲಿಲ್ಲ. ಹೀಗಾಗಿ ದೇವದಾಸನಾಗಲಿಲ್ಲ. ಆದರೆ ಪ್ರೇಮವಿವಾಹವಾಗಿ ಸಾಮಾಜಿಕ ಕ್ರಾಂತಿಯೆಸಗುವ ಅವಕಾಶ ಕಳೆದುಕೊಂಡ ದುಗುಡ ಬಹುಕಾಲ ಉಳಿದಿತ್ತು. ನಾನು ಅಧೀರನಾಗಿಯೇ ಉಳಿದೆ.

ನಾಲ್ಕನೇ ಅಧ್ಯಾಯವು ಶಿವಮೊಗ್ಗದಲ್ಲಿ ಬರೆಯಲ್ಪಟ್ಟಿತು. ನನಗಾಗ 23. ಅಧ್ಯಾಪಕ ನೆಂಬ ಗೌರವ, ಪಾಠಕ್ಕಾಗಿ ಮೆಚ್ಚುಗೆ, ಹದಿಹರೆಯದ ವಯಸ್ಸಿನ ದುಡುಕು, ಸಂಚಾರಿ ಭಾವವಾಗಿ ಹಾದುಹೋಗುವ ಗಂಡಿನಾಕರ್ಷಣೆಗಳ ನಡುವಿನ ಗೆರೆ ಕಿರಿದು. ಪ್ರೇಮ ಪತ್ರಗಳು ಬರುತ್ತಿದ್ದವು. ಕೆಲವರು ಕಾಲೇಜ್ ಡೇ ದಿನ ಸಮಯ ಸಾಧಿಸಿ, ಒಲವನ್ನು (ವಿದಾಯದ ಹೊತ್ತಿನ ಭಾವುಕತೆಯನ್ನು ತಪ್ಪಾಗಿ ಅರ್ಥೈಸಿಕೊಂಡೆನೇ?) ತೋಡಿಕೊಳ್ಳುತ್ತಿದ್ದರು. ನನ್ನನ್ನು ಹಚ್ಚಿಕೊಂಡಿದ್ದವರ ಕತೆಗಳನ್ನು ಹಳೇ ವಿದ್ಯಾರ್ಥಿಗಳು ಈಗ ತಮಾಶೆಯಾಗಿ ನಿರೂಪಿಸುವುದುಂಟು.

ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಕವಿತೆ ಬರೆಯುತ್ತಿದ್ದಳು. ನಾಟಕದಲ್ಲಿ ನಟಿಸುತ್ತಿದ್ದಳು. ಸರಳವಾದ ಪದದ ಅರ್ಥ-ಅದನ್ನು ತರಗತಿಯಲ್ಲೂ ಕೇಳಬಹುದಿತ್ತು- ಕೇಳಿಕೊಂಡು ಸ್ಟಾಫ್‌ರೂಮಿಗೆ ಬರುತ್ತಿದ್ದಳು. ಸಹೋದ್ಯೋಗಿಗಳು `ನೀನೇ ಹುಡುಗಿ ತರಹ ನಾಚ್ಕೊತೀ ಯಲ್ಲೋ’ ಎಂದು ಛೇಡಿಸುತ್ತಿದ್ದರು. ಬದುಕಿನ ಬಗ್ಗೆ ಭವಿಷ್ಯದ ಬಗ್ಗೆ ಚಿಂತನೆ ಹೊಣೆಗಾರಿಕೆ ಇಲ್ಲದೆ ಹುಟ್ಟಿದ ಎಳಸು ಆಕರ್ಷಣೆಗಳವು. ಆದರೂ ಒಬ್ಬಾಕೆಯ ದೊಡ್ಡ ಕಣ್ಣುಗಳ ಮುಖ ಚಿತ್ತದಲ್ಲಿ ಉಳಿದುಬಿಟ್ಟಿದೆ. ಅದು ಪ್ರೇಮವೊ ಚೆಲುವಿನ ಆರಾಧನೆಯೊ ಕಾಣೆ. ಚೆಲ್ಲು ವರ್ತನೆಯ ಆಕೆ, ಕನ್ನಡದಲ್ಲಿ ಭಯಂಕರ ಕಾಗುಣಿತ ತಪ್ಪು ಮಾಡುತ್ತಿದ್ದಳು. ಚೆಲುವನ್ನು ಕೊಟ್ಟು ಬುದ್ಧಿಯನ್ನು ಕೊಡದ ವಿಧಿಯನ್ನು ಬೈದುಕೊಂಡು, ಭಾಷಾ ದೋಷಗಳನ್ನು ಉದಾರವಾಗಿ ತಿದ್ದುತ್ತಿದ್ದೆ. ಹೀಗಿರುವಲ್ಲಿ ಆಕೆ ಒಂದು ದಿನ ಲಗ್ನಪತ್ರಿಕೆ ಕೊಟ್ಟು, ಎದೆಗೆ ಬೆಂಕಿಯಿಟ್ಟು ಹೋದಳು.

ಕೊನೆಯ ಅಧ್ಯಾಯವು ಶಿವಮೊಗ್ಗದಲ್ಲಿ ಬಾಡಿಗೆಗಿದ್ದ ಮನೆಯಲ್ಲಿ ಬರೆಯಲ್ಪಟ್ಟಿತು. ವಿಧವೆಯನ್ನು ವರಿಸಬೇಕೆಂಬ ನನ್ನ ಪುರಾತನ ಆದರ್ಶವನ್ನು ಅಗ್ನಿಪರೀಕ್ಷೆಗೆ ಒಡ್ಡಲೆಂದೇ ವಿಧಿ ಹೂಡಿದ ಹೂಟದಂತಿತ್ತು. ಆಕೆ ಸುಂದರಿ. ವಿಚ್ಛೇದನವಾಗಿತ್ತು. ಒಂದು ಕೂಸಿತ್ತು. ವಯಸ್ಸಿನಲ್ಲಿ ತುಸು ಹಿರಿಯಳು. ವಿಶೇಷ ಅಡುಗೆ ಮಾಡಿದಾಗೆಲ್ಲ ಆಕೆಯೂ ಆಕೆಯ ಪುಟ್ಟಮಗನೂ ಕೋಣೆಗೆ ಹೊತ್ತು ತರುತ್ತಿದ್ದರು. ನಾನುಣ್ಣುವ ತನಕವೂ ಇರುತಿದ್ದರು. ಅವರು ತೆರಳಿದ ಅರ್ಧಗಂಟೆಯ ತನಕವೂ ಕಟುವಾದ ಸುಗಂಧ ರೂಮಿನಲ್ಲಿ ಇರುತ್ತಿತ್ತು. ಆಕೆ ನನ್ನನ್ನು ವರಿಸುವ ಪ್ರಸ್ತಾಪವನ್ನು ಅಕ್ಕಂದಿರ ಮೂಲಕ ಮುಂದಿಟ್ಟಳು. ಬದುಕಿನಲ್ಲಿ ಬೆಂದು ಹೋಗಿದ್ದ ಆಕೆಯೊಳಗೆ ಮೂಡಿದ್ದ ಮುಗ್ಧತೆ ಕಳೆದುಕೊಂಡ ಅತಿಯೆಚ್ಚರ, ಪ್ರಬುದ್ಧತೆ, ಕೂಸನ್ನು ಬೆಳೆಸುವ ಚಿಂತೆ, ಕುಟುಂಬದ ರಗಳೆ ಸುತ್ತಿಕೊಂಡು ಹೈರಾಣಾದ ಮ್ಲಾನವದನ-ನನ್ನ ಕಲ್ಪನೆಯ ಜೀವನ ಸಂಗಾತಿಗೆ ಹೊಂದಿಕೊಳ್ಳಲಿಲ್ಲ. ಕೂಸಿರದಿದ್ದರೆ ಮದುವೆ ಆಗುತ್ತಿದ್ದೇನೊ ಏನೊ? ಆದರೆ ತಾರುಣ್ಯದ ಭಾವುಕತೆ ಮತ್ತು ಉದಾತ್ತ ಆದರ್ಶಗಳನ್ನು ಬಿಟ್ಟುಕೊಟ್ಟು ಈಗ ಲೆಕ್ಕಾಚಾರದ ಸಂಸಾರಿಯಾಗಲು ಸಿದ್ಧನಾಗಿದ್ದೆ.

ಒಮ್ಮೆ ಪಾನಗೋಷ್ಠಿಯಲ್ಲಿದ್ದಾಗ ಹಿರಿಯ ಲೇಖಕರೊಬ್ಬರು ಸಿಬಿಐ ಅಧಿಕಾರಿಯಂತೆ `ನೀವು ಒಬ್ಬ ಹೆಣ್ಣನ್ನು ಪ್ರೀತಿಸಿ ಕೈಕೊಟ್ಟಿರಂತೆ. ಬಲ್ಲ ಮೂಲಗಳಿಂದ ನನ್ನಲ್ಲಿ ಖಚಿತ ಮಾಹಿತಿ ಇದೆ’ ಎಂದರು. ನಶೆಯಲ್ಲಿದ್ದ ನಾನು ದುಃಖದಿಂದ ನನ್ನ ಪ್ರೇಮ ಪ್ರಕರಣಗಳನ್ನು ನಿರೂಪಿಸಿ, `ಪ್ರೀತಿ ಮಾಡಿದ್ದು ನಿಜ. ಯಾರಿಗೂ ಕೈಕೊಡಲಿಲ್ಲ’ ಎಂದೆ. ಅವರು `ತಮಾಶೆಗೆ ಕೇಳಿದೆ ಕಂಡ್ರಿ. ಎಲ್ಲರ ಜೀವನದಲ್ಲೂ ಮದುವೆಗೆ ಮುನ್ನ ಹಲವರು ಪ್ರವೇಶಿಸಿರುತ್ತಾರೆ. ಖಚಿತಪಡಿಸಿಕೊಳ್ಳೋಕೆ ಕೇಳಿದೆ ಅಷ್ಟೆ. ನೀವು ದೋಣಿವಿಹಾರ ಮಾಡಿಸಿದ ಹುಡುಗಿಯನ್ನು ಹಠ ಹಿಡಿದು ಮದುವೆ ಆಗಬೇಕಿತ್ತು. ಆಕೆಯ ತಾಯಿ ಕೆರೆಬಾವಿ ಪಾಲಾಗುತ್ತಿರಲಿಲ್ಲ. ಸಂಪ್ರದಾಯವಾದಿಗಳು ಹೀಗೇ ಹೆದರಿಸುವುದು. ಮುಂದಿನ ಜನ್ಮದಲ್ಲಿ ಪ್ರಯತ್ನ ಯಶಸ್ವಿಯಾಗಲಿ’ ಎಂದು ಹಾರೈಸಿದರು. ಮೆಲುದನಿಯಲ್ಲಿ `ಆಮೆನ್’ ಎಂದೆ-ದೂರದಲ್ಲಿದ್ದ ಬಾನುಗೆ ಕೇಳಿಸೀತೆಂಬ ಅಂಜಿಕೆಯಲ್ಲಿ.

(ಕೃತಿ: ಕುಲುಮೆ (ಆತ್ಮ ಕಥನ), ಲೇಖಕರು: ರಹಮತ್‌ ತರೀಕೆರೆ, ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಬೆಲೆ: 330/-)