ಅಲ್ಲಿದ್ದ ಟೀಪಾಯಿಯತ್ತ ನೋಡಿದರೆ ಚಹಾದ ಲೋಟ ಇಲ್ಲ. ಹೆಂಡತಿಯಲ್ಲಿ ಕೇಳೋಣ ಎಂದುಕೊಂಡ ಅವರು ಮನೆಯೊಳಗೆ ಹೋದರೆ ಅಲ್ಲಿ ಅವರ ಹೆಂಡತಿ ಇನ್ನೂ ಕೂಡಾ ಫೋನ್‌ನಲ್ಲಿ ಮಾತನಾಡುತ್ತಿದ್ದಾಳೆ. ಡೈನಿಂಗ್ ಟೇಬಲ್ ಮೇಲೆ ಚಹಾದ ಲೋಟ ಇದೆ. ಲೋಟ ಎತ್ತಿಕೊಳ್ಳಹೋದಾಗ ಕೃಷ್ಣಾಚಾರ್ಯರ ಕೈತಗುಲಿ ಲೋಟ ಬಿದ್ದು, ಒಂದು ಲೋಟ ಚಹಾ ಎಲ್ಲ ಚೆಲ್ಲಿಹೋಯಿತು. ಅದನ್ನು ನೋಡಿದ ಅವರ ಹೆಂಡತಿ “ಸರಿ ಕಂದಾ, ನಾನೇ ಮತ್ತೆ ಕಾಲ್ ಮಾಡುತ್ತೇನೆ” ಎಂದು ಹೇಳಿ, ಕಾಲ್ ಕಟ್ ಮಾಡಿದಳು. “ಇನ್ನೊಂದು ಲೋಟ ಚಹಾ ಮಾಡಿಕೊಂಡು ಬಾ” ಎಂದು ಹೇಳಿದ ಕೃಷ್ಣಾಚಾರ್ಯರು ಚಾವಡಿಯ ಸೋಫಾದಲ್ಲಿ ಹೋಗಿ ಕುಳಿತರು.
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಒಂದು ಲೋಟ ಚಹಾ”
ಯುವಕನೊಬ್ಬನ ಎದೆಯ ಮೇಲೆ ಕೂತು, ಅವನ ಕುತ್ತಿಗೆಯ ಕಡೆಗೆ ಕತ್ತಿಯನ್ನು ಬೀಸಿದ್ದರು ಮಧ್ಯವಯಸ್ಸು ದಾಟಿದವರಂತೆ ಕಾಣುತ್ತಿದ್ದ ಆ ವ್ಯಕ್ತಿ. ಆ ಯುವಕ ಮತ್ತು ಸುತ್ತಮುತ್ತ ಸೇರಿಕೊಂಡಿದ್ದ ಜನರು ಅವರನ್ನು ತಡೆಯದೇ ಇರುತ್ತಿದ್ದರೆ ಆ ವ್ಯಕ್ತಿಯ ಕೈಯ್ಯಲ್ಲಿದ್ದ ಕತ್ತಿ ಆ ಯುವಕನ ಕುತ್ತಿಗೆಯನ್ನು ಬಲು ಸುಲಭವಾಗಿ ಸೀಳಿಬಿಡುತ್ತಿತ್ತು. ಅಂತಹ ಆಕ್ರೋಶವಿತ್ತು ಅವರೊಳಗೆ. ಜನರೆಲ್ಲಾ ಅದೆಷ್ಟೇ ಎಳೆಯುತ್ತಿದ್ದರೂ ಯುವಕನ ಎದೆ ಬಿಟ್ಟು ಮೇಲೇಳಲು ಅವರು ಸಿದ್ಧರಿರಲಿಲ್ಲ. ಅಷ್ಟರಲ್ಲಿ ಅಲ್ಲಿಗೆ ಬಂದ ಮಣಿಯೂರಿನ ಗೋಪಾಲ ಈ ಕಡೆಗೆ ದೃಷ್ಟಿ ಹರಿಸಿದವನು ಒಂದೇ ಸಲಕ್ಕೆ ಉದ್ಗರಿಸಿದ- “ಚಹಾ ಕೃಷ್ಣಾಚಾರ್ಯರು”
*****
ಮಣಿಯೂರಿನ ಕೃಷ್ಣಾಚಾರ್ಯರು ಒಳ್ಳೆಯ ಕೃಷಿಕರಾಗಿ ಹೆಸರು ಪಡೆದಿದ್ದವರು. ಹಾಗೆಂದು ಅವರಿಗೆ ನೂರಾರು ಎಕರೆಯ ಜಾಗವೇನೂ ಇರಲಿಲ್ಲ. ಆದರೆ ಇದ್ದ ಜಾಗದಲ್ಲಿಯೇ ಚೆನ್ನಾಗಿ ದುಡಿಮೆ ಮಾಡಿ ಒಳ್ಳೆಯ ಅಡಿಕೆ ಫಸಲು ತೆಗೆಯುತ್ತಿದ್ದರು. ಒಂದು ಕಾಲಕ್ಕೆ ಬರಡು ಭೂಮಿಯಂತಿದ್ದುದನ್ನು ಇಂದು ಕೋಟಿ ಬೆಲೆಯದ್ದಾಗಿ ಪರಿವರ್ತಿಸಿದ್ದಾರೆ. ಇಂತಹ ಕೃಷ್ಣಾಚಾರ್ಯರಿಗೆ ಈಗ ವಯಸ್ಸು ಐವತ್ತಾರು.
ಆ ದಿನ ಕೃಷ್ಣಾಚಾರ್ಯರು ಪೇಟೆಗೆ ಹೊರಡುವ ನಿರ್ಧಾರ ಮಾಡಿದ್ದರು. ನಾಲ್ಕು ಗೋಣಿ ಅಡಿಕೆಯನ್ನು ಮಾರುವುದು, ಒಂದಷ್ಟು ದಿನಸಿ ಸಾಮಾನು ತೆಗೆದುಕೊಳ್ಳುವುದು ಅವರ ಯೋಚನೆಯಾಗಿತ್ತು. ಯಾವತ್ತಿಗಿಂತ ಒಂದು ಗಂಟೆ ಮೊದಲೇ ಎದ್ದಿದ್ದ ಅವರು ಸ್ನಾನ ಮುಗಿಸಿ, ಬಟ್ಟೆ ಧರಿಸಿ ಆಗಿತ್ತು. ಅಷ್ಟಾಗುವಾಗ ಅವರ ಪತ್ನಿ ತಿಂಡಿಯನ್ನು ತಂದು ಡೈನಿಂಗ್ ಟೇಬಲ್ ಮೇಲಿಟ್ಟರು. ಗಂಡನನ್ನು ತಿಂಡಿಗೆ ಕರೆದರು. “ನನಗೆ ತಿಂಡಿ ಬೇಡ. ನಮ್ಮ ನರಸಿಂಹಾಚಾರ್ಯರ ಹೋಟೆಲ್ಲಿನಲ್ಲೇ ತಿನ್ನುತ್ತೇನೆ. ಒಂದು ಲೋಟ ಚಹಾ ಕೊಡು ಸಾಕು” ಎಂದರು ಕೃಷ್ಣಾಚಾರ್ಯರು ತಮ್ಮ ಪತ್ನಿಗೆ. “ಸರಿ ಕೊಡುತ್ತೇನೆ” ಎಂದು ಪತ್ನಿ ಹೇಳುವಷ್ಟರಲ್ಲಿ ಮೊಬೈಲ್ ರಿಂಗ್ ಆಯಿತು. ಹಾಸ್ಟೆಲ್‌ನಲ್ಲಿದ್ದು ಕಲಿಯುತ್ತಿದ್ದ ಮಗ ಕಾಲ್ ಮಾಡಿದ್ದ. “ನನಗೀಗ ಮಾತಾಡುವುದಕ್ಕೆ ಪುರುಸೊತ್ತಿಲ್ಲ. ನೀನೇ ಮಾತಾಡು” ಎಂದು ಮೊಬೈಲನ್ನು ಪತ್ನಿಗೆ ಕೊಟ್ಟ ಕೃಷ್ಣಾಚಾರ್ಯರು “ಹ್ಞಾ! ಒಂದು ಲೋಟ ಚಹಾ ತಂದು ಚಾವಡಿಯಲ್ಲಿಡು” ಎಂದು ಹೇಳಿ, ಅಡಿಕೆ ಗೋಣಿ ತುಂಬಿಸಿಟ್ಟಿದ್ದ ತಮ್ಮ ಮನೆಯ ಗೋಡೌನಿನಾಚೆ ಹೋದರು.
ಕೃಷ್ಣಾಚಾರ್ಯರ ಚಹಾ ಪ್ರೀತಿ ಇಂದು ನಿನ್ನೆಯದಲ್ಲ. ಯುವಕರಾಗಿದ್ದಾಗಿನಿಂದಲೂ ಅವರಿಗೆ ಚಹಾ ಎಂದರೆ ಬಹಳ ಇಷ್ಟ. ಚಹಾ ಕುಡಿಯದೆ ಅವರ ದಿನ ಆರಂಭವಾಗುತ್ತಿರಲಿಲ್ಲ. ಬೆಳಗ್ಗೆ ಒಂದು ಲೋಟ ಚಹಾ ಕುಡಿದರೆ ಇಡೀ ದಿನಕ್ಕೆ ಬೇಕಾದ ಶಕ್ತಿ ಸಿಗುತ್ತದೆ ಎನ್ನುವುದು ಅವರ ನಂಬಿಕೆ. ಸ್ವಭಾವತಃ ಸ್ವಲ್ಪ ಗಲಿಬಿಲಿಯ ಮನುಷ್ಯನಾಗಿದ್ದ ಅವರಿಗೆ ನಿರಾಳತೆ ದೊರೆಯುತ್ತಿದ್ದುದೇ ಚಹಾ ಕುಡಿಯುವುದರಿಂದ. ಆದ್ದರಿಂದ ಬೆಳಗ್ಗೆ ಚಹಾ ಕುಡಿಯುವುದನ್ನು ಅವರು ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಇಷ್ಟೂ ವರ್ಷಗಳಲ್ಲಿ ಅವರು ತಿಂಡಿ ತಿನ್ನದೆ ಇದ್ದ ದಿನ ಇರಬಹುದು. ಆದರೆ ಚಹಾ ಕುಡಿಯದೆ ಅವರ ದಿನ ಆರಂಭವಾದದ್ದಿಲ್ಲ. “ಇದು ಅಸಿಡಿಟಿ. ನೀವು ಚಹಾ ಕುಡಿಯುವುದು ಬಿಟ್ಟರೆ ಒಳ್ಳೆಯದು” ಎಂದು ಅವರ ಕುಟುಂಬ ವೈದ್ಯರು ಹೇಳಿದ್ದರೂ ಕೃಷ್ಣಾಚಾರ್ಯರು ಈ ಮಾತನ್ನು ತಲೆಗೇ ಹಾಕಿಕೊಂಡಿಲ್ಲ. ಚಹಾದ ಬಗೆಗೆ ಅವರಿಗಿದ್ದ ಆಸ್ಥೆಯನ್ನು ನೋಡಿದ ಕೆಲವರು ಅವರನ್ನು ‘ಚಹಾ ಕೃಷ್ಣಾಚಾರ್ಯ’ರೆಂದೇ ಕರೆಯುತ್ತಿದ್ದರು.
ಕೃಷ್ಣಾಚಾರ್ಯರು ಗೋಡೌನಿಗೆ ಹೋದಾಗ ರಿಕ್ಷಾದ ಕೂಸಪ್ಪ ಬಂದಾಗಿತ್ತು. ಅವನ ರಿಕ್ಷಾ ಗೋಡೌನಿನ ಬಾಗಿಲಿಗೆ ಬೆನ್ನಂಟಿಸಿಕೊಂಡು ನಿಂತಿತ್ತು. ಕೆಲಸದ ಮೋನಪ್ಪ ನಾಲ್ಕನೇ ಗೋಣಿಯನ್ನು ರಿಕ್ಷಾಕ್ಕೆ ತುಂಬಿಸಿಡುತ್ತಿದ್ದ. ಕೂಸಪ್ಪನಲ್ಲಿ ನಗಾಡಿ ಮಾತನಾಡಿದ ಕೃಷ್ಣಾಚಾರ್ಯರು ಮೋನಪ್ಪನಲ್ಲಿ “ಒಟ್ಟು ಎಷ್ಟು ಕೆ.ಜಿ. ಅಡಿಕೆಯಿದೆ?” ಎಂದು ವಿಚಾರಿಸಿದರು. “ಒಂದು ಗೋಣಿಯಲ್ಲಿ ನಲುವತ್ತು ಕೆ.ಜಿ. ಒಟ್ಟು ನೂರಾ ಅರುವತ್ತು ಕೆ.ಜಿ.” ಎಂದ ಆತ ತೋಟದಾಚೆ ನಡೆದ. “ನೀನು ಗೇಟಿನ ಹತ್ತಿರ ಇರು. ನಾನೀಗ ಬರುತ್ತೇನೆ” ಎಂದು ಕೃಷ್ಣಾಚಾರ್ಯರು ಹೇಳಿದಾಗ ಅವನು “ನನಗೆ ಈಗಲೇ ಇನ್ನೊಂದು ಬಾಡಿಗೆ ಬಂದಿದೆ. ನಿಮ್ಮನ್ನು ಪೇಟೆಗೆ ಬಿಟ್ಟು, ತಕ್ಷಣ ಬರಬೇಕು. ಸ್ವಲ್ಪ ಬೇಗ ಬನ್ನಿ ಆಯ್ತಾ” ಎಂದ. “ಸರಿ. ಈಗಲೇ ಬರುತ್ತೇನೆ” ಎಂದ ಕೃಷ್ಣಾಚಾರ್ಯರು ಮನೆಯ ಚಾವಡಿಯ ಕಡೆಗೆ ನಡೆದರು.
ಅಲ್ಲಿದ್ದ ಟೀಪಾಯಿಯತ್ತ ನೋಡಿದರೆ ಚಹಾದ ಲೋಟ ಇಲ್ಲ. ಹೆಂಡತಿಯಲ್ಲಿ ಕೇಳೋಣ ಎಂದುಕೊಂಡ ಅವರು ಮನೆಯೊಳಗೆ ಹೋದರೆ ಅಲ್ಲಿ ಅವರ ಹೆಂಡತಿ ಇನ್ನೂ ಕೂಡಾ ಫೋನ್‌ನಲ್ಲಿ ಮಾತನಾಡುತ್ತಿದ್ದಾಳೆ. ಡೈನಿಂಗ್ ಟೇಬಲ್ ಮೇಲೆ ಚಹಾದ ಲೋಟ ಇದೆ. ಲೋಟ ಎತ್ತಿಕೊಳ್ಳಹೋದಾಗ ಕೃಷ್ಣಾಚಾರ್ಯರ ಕೈತಗುಲಿ ಲೋಟ ಬಿದ್ದು, ಒಂದು ಲೋಟ ಚಹಾ ಎಲ್ಲ ಚೆಲ್ಲಿಹೋಯಿತು. ಅದನ್ನು ನೋಡಿದ ಅವರ ಹೆಂಡತಿ “ಸರಿ ಕಂದಾ, ನಾನೇ ಮತ್ತೆ ಕಾಲ್ ಮಾಡುತ್ತೇನೆ” ಎಂದು ಹೇಳಿ, ಕಾಲ್ ಕಟ್ ಮಾಡಿದಳು. “ಇನ್ನೊಂದು ಲೋಟ ಚಹಾ ಮಾಡಿಕೊಂಡು ಬಾ” ಎಂದು ಹೇಳಿದ ಕೃಷ್ಣಾಚಾರ್ಯರು ಚಾವಡಿಯ ಸೋಫಾದಲ್ಲಿ ಹೋಗಿ ಕುಳಿತರು.
ಟೀಪಾಯಿ ಮೇಲಿದ್ದ ಪೇಪರೊಂದನ್ನು ಎತ್ತಿಕೊಂಡು ಅದರ ಮೇಲೆ ಕಣ್ಣೋಡಿಸುತ್ತಿದ್ದರಷ್ಟೇ, ಕೃಷ್ಣಾಚಾರ್ಯರಿಗೆ ಮನೆಹಿಂದಿನಿಂದ ಹೆಣ್ಣುಧ್ವನಿಯೊಂದು ಕೇಳಿತು. ಧ್ವನಿ ಕೇಳಿದಾಗಲೇ ಸ್ಪಷ್ಟವಾಯಿತು- ಬಂದಿರುವವಳು ಪುಟ್ಟಮ್ಮಜ್ಜಿ. ಇವರ ಮನೆಯ ಹಿಂದುಗಡೆಯೇ ಇದ್ದ ಪುಟ್ಟಮ್ಮಜ್ಜಿಗೆ ಪ್ರಾಯ ಎಪ್ಪತ್ತು ಕಳೆದಿದೆ. ಪ್ರತೀದಿನ ಇವರ ಪತ್ನಿಯಲ್ಲಿ ಪಟ್ಟಾಂಗ ಹೊಡೆಯುವುದಕ್ಕೆಂದೇ ಬರುತ್ತಾಳೆ. ಬಂದರೆ ಎರಡು ಗಂಟೆಗಿಂತ ಕಮ್ಮಿ ಮಾತನಾಡಿದ ಉದಾಹರಣೆಯೇ ಇಲ್ಲ. ಯಾವಾಗಲೂ ಬೆಳಗ್ಗೆ ಒಂಭತ್ತೂವರೆ ಕಳೆದಮೇಲೆ ಬರುವ ಅಜ್ಜಿ ಇವತ್ತು ಸ್ವಲ್ಪ ಬೇಗ ಬಂದಿದ್ದಳು. ಒಂದು ವಿಷಯದಲ್ಲಿ ತೊಡಗಿಸಿಕೊಂಡರೆ ಇನ್ನೊಂದನ್ನು ಮರೆತೇಬಿಡುವ ಮರೆಗುಳಿತನ ಕೃಷ್ಣಾಚಾರ್ಯರ ಪತ್ನಿಗಿತ್ತು. ಈಗ ಪುಟ್ಟಮ್ಮಜ್ಜಿಯಲ್ಲಿ ಮಾತನಾಡುವುದಕ್ಕೆಂದು ಬಂದುನಿಂತ ಪತ್ನಿ ತನ್ನ ಗಂಡನಿಗೆ ಚಹಾ ಕೊಟ್ಟಾಗಿದೆ ಎಂದು ಅಂದುಕೊಳ್ಳುತ್ತಲೇ ಹರಟೆ ಹೊಡೆಯತೊಡಗಿದಳು. ನಿಮಿಷ ಕಳೆಯುತ್ತಲೇ ಇತ್ತು. ಹತ್ತು ನಿಮಿಷ ಕಳೆದರೂ ಚಹಾ ಕೃಷ್ಣಾಚಾರ್ಯರ ಕೈಸೇರಲಿಲ್ಲ.
ಮನೆಯ ಹಿಂಬಾಗಿಲಿನ ಬಳಿಹೋದ ಕೃಷ್ಣಾಚಾರ್ಯರು ಅಸಮಾಧಾನದಿಂದ “ಚಹಾ ಕೊಟ್ಟೇ ಇಲ್ಲವಲ್ಲ ನೀನು” ಎಂದರು ಪತ್ನಿಯಲ್ಲಿ ಅಸಮಾಧಾನದಿಂದ. “ಅಯ್ಯೋ ಮರೆತೇಬಿಟ್ಟಿದ್ದೇನೆ. ಈಗ ಮಾಡಿಕೊಂಡು ಬರುತ್ತೇನೆ ಇರಿ” ಎಂದು ಅವಳಂದ ಬೆನ್ನಿಗೇ ರಿಕ್ಷಾದ ಹಾರ್ನ್ ಕೃಷ್ಣಾಚಾರ್ಯರ ಕಿವಿಗೆ ಬಿತ್ತು. ಅವರು ಗಡಿಬಿಡಿ ಮಾಡಿಕೊಳ್ಳಲು ಅಷ್ಟೇ ಸಾಕಿತ್ತು. “ನೀನೂ ಬೇಡ. ನಿನ್ನ ಚಹಾವೂ ಬೇಡ” ಎಂದು ಕೋಪದಿಂದ ಹೇಳಿದ ಕೃಷ್ಣಾಚಾರ್ಯರು ಆತುರಾತುರವಾಗಿ ಮನೆಯ ಗೇಟಿನ ಕಡೆಗೆ ನಡೆದರು. ಅವರು ಚಹಾ ಕುಡಿಯದೆ ಮನೆಯಿಂದ ಹೊರಟದ್ದು ಅದೇ ಮೊದಲು.
ಇವರು ರಿಕ್ಷಾ ಹತ್ತಿ ಕುಳಿತುಕೊಳ್ಳುತ್ತಿದ್ದಂತೆ ಕೂಸಪ್ಪ “ಆ ಮೋನಪ್ಪ ನಾನು ಬಂದ ಮೇಲೆ ಅಡಿಕೆ ತೂಕ ಮಾಡುವುದಕ್ಕೆ ಶುರುಮಾಡಿದ್ದು. ಅಲ್ಲಿಯೂ ತಡ ಆಯಿತು. ಈಗ ಹತ್ತು ನಿಮಿಷ ಕಾದಿದ್ದೇನೆ. ವ್ಹೇಟಿಂಗ್ ಚಾರ್ಜ್ ಕೊಡಬೇಕು” ಎಂದ. “ಕೊಡುತ್ತೇನೆ ಮಾರಾಯ. ನೀನು ಕಾದದ್ದಕ್ಕೆ ಹಣ ಕೊಡಬೇಕು ಅಂತ ಗೊತ್ತಿದೆ. ಅಷ್ಟೂ ಗೊತ್ತಿಲ್ಲವಾ ನನಗೆ!” ಎಂದರು ಕೃಷ್ಣಾಚಾರ್ಯರು ಕೋಪದಿಂದ. ಯಾವಾಗಲೂ ಇವರ ತಾಳ್ಮೆಯನ್ನು ಮಾತ್ರವೇ ಕಂಡಿದ್ದ ಕೂಸಪ್ಪನಿಗೆ ಈ ಕೋಪ ಅಚ್ಚರಿ ಮೂಡಿಸಿತು. “ಅಲ್ಲ, ಮೊದಲೇ ಹೇಳಬೇಕಾದ್ದು ಸರಿಯಾದ ಕ್ರಮ. ಅದಕ್ಕೆ ಹೇಳಿದ್ದಷ್ಟೇ ನಾನು” ಎಂದ ತಣ್ಣಗಿನ ಧ್ವನಿಯಲ್ಲಿ. “ಹ್ಞೂ ಹೊರಡು. ಈಗಲೇ ತಡ ಆಗಿದೆ” ಎಂದು ಅಸಮಾಧಾನದ ಧ್ವನಿಯಲ್ಲಿ ಕೃಷ್ಣಾಚಾರ್ಯರು ಹೇಳಿದ ತಕ್ಷಣ ರಿಕ್ಷಾ ಅಲ್ಲಿಂದ ಹೊರಟಿತು.
ಮನೆಯ ಹಿಂಬಾಗಿಲಿನ ಬಳಿಹೋದ ಕೃಷ್ಣಾಚಾರ್ಯರು ಅಸಮಾಧಾನದಿಂದ “ಚಹಾ ಕೊಟ್ಟೇ ಇಲ್ಲವಲ್ಲ ನೀನು” ಎಂದರು ಪತ್ನಿಯಲ್ಲಿ ಅಸಮಾಧಾನದಿಂದ. “ಅಯ್ಯೋ ಮರೆತೇಬಿಟ್ಟಿದ್ದೇನೆ. ಈಗ ಮಾಡಿಕೊಂಡು ಬರುತ್ತೇನೆ ಇರಿ” ಎಂದು ಅವಳಂದ ಬೆನ್ನಿಗೇ ರಿಕ್ಷಾದ ಹಾರ್ನ್ ಕೃಷ್ಣಾಚಾರ್ಯರ ಕಿವಿಗೆ ಬಿತ್ತು. ಅವರು ಗಡಿಬಿಡಿ ಮಾಡಿಕೊಳ್ಳಲು ಅಷ್ಟೇ ಸಾಕಿತ್ತು. “ನೀನೂ ಬೇಡ. ನಿನ್ನ ಚಹಾವೂ ಬೇಡ” ಎಂದು ಕೋಪದಿಂದ ಹೇಳಿದ ಕೃಷ್ಣಾಚಾರ್ಯರು ಆತುರಾತುರವಾಗಿ ಮನೆಯ ಗೇಟಿನ ಕಡೆಗೆ ನಡೆದರು.
“ಧಣಿ, ಅದರಲ್ಲಿ ನೂರಾ ಅರುವತ್ತು ಕೆ.ಜಿ. ಇಲ್ಲ. ನಾಲ್ಕು ಕೆ.ಜಿ. ಕಮ್ಮಿ ಇದೆ. ನೂರಾ ಐವತ್ತಾರು ಕೆ.ಜಿ. ಅಷ್ಟೇ. ಒಂದು ಗೋಣಿಯಲ್ಲಿ ನಲುವತ್ತು ಕೆ.ಜಿ. ಇಲ್ಲ. ಮೂವತ್ತಾರು ಅಷ್ಟೇ ಇರುವುದು. ನೀವು ತೂಗುವಾಗ ತಪ್ಪಾಗಿರಬೇಕು” ಎಂದು ಅಡಿಕೆ ಅಂಗಡಿಯವ ಹೇಳಿದಾಗ ಕೃಷ್ಣಾಚಾರ್ಯರಿಗೆ ವಿಪರೀತ ಗೊಂದಲ. ಅಡಿಕೆ ಅಂಗಡಿಯೆದುರು ರಿಕ್ಷಾ ನಿಂತ ತಕ್ಷಣ ಕೃಷ್ಣಾಚಾರ್ಯರು ಅಂಗಡಿಯೊಳಗಿನ ಕುರ್ಚಿಯಲ್ಲಿ ಹೋಗಿ ಕುಳಿತಿದ್ದರು. ಯಾವಾಗಲೂ ಬಂದೂ ಬಂದೂ ಪರಿಚಯವಾಗಿದ್ದ ಅಂಗಡಿಯವನೇ ಆಗಿದ್ದುದರಿಂದ ಅಡಿಕೆ ತೂಕ ಮಾಡುವುದನ್ನು ನೋಡಬೇಕು ಎನ್ನುವ ಯೋಚನೆಯೂ ಅವರಿಗೆ ಬಂದಿರಲಿಲ್ಲ. ಈಗ ನೋಡಿದರೆ ನಾಲ್ಕು ಕೆ.ಜಿ. ಕಮ್ಮಿ ಇದೆ ಎಂದು ಅಂಗಡಿಯವ ಹೇಳುತ್ತಿದ್ದಾನೆ. ಇವರ ಬೆಪ್ಪಾದ ಮುಖ ನೋಡಿದ ಅಂಗಡಿಯವ “ನಿಮ್ಮ ಗೋಣಿ ಅಲ್ಲೇ ಇದೆ ಧಣಿ. ಬೇಕಿದ್ದರೆ ನೀವೇ ಹೋಗಿ ತೂಕ ನೋಡಿಬನ್ನಿ. ನನ್ನ ವ್ಯವಹಾರ ಸರಿಯಿಲ್ಲ ಎಂದು ನೀವು ಅಂದುಕೊಳ್ಳುವ ಹಾಗಾಗಬಾರದು” ಎಂದು ತೂಗುವ ಮೆಷೀನ್ ಇದ್ದ ಕಡೆಗೆ ಕೈತೋರಿಸಿದ. ಅಡಿಕೆ ಮಾರುವುದಕ್ಕೆಂದು ಬಂದುನಿಂತಿದ್ದ ನಾಲ್ಕೈದು ಮಂದಿ ಮತ್ತು ಸುತ್ತಲಿನ ಅಂಗಡಿಯಲ್ಲಿದ್ದ ಐದಾರು ಮಂದಿ ಕೃಷ್ಣಾಚಾರ್ಯರ ಕಡೆಗೇ ನೋಡುತ್ತಿದ್ದರು.
“ಒಂದು ನಿಮಿಷ ಬರುತ್ತೇನೆ” ಎಂದು ಸಪ್ಪೆ ಮುಖ ಮಾಡಿ ಅಂಗಡಿಯವನಲ್ಲಿ ಹೇಳಿದ ಕೃಷ್ಣಾಚಾರ್ಯರು ಅಂಗಡಿಯಿಂದ ತುಸು ಈ ಕಡೆಗೆ ಬಂದು ಫೋನ್ ಮಾಡಿದ್ದು ಮೋನಪ್ಪನಿಗೆ. ಅವನು ಫೋನ್ ಎತ್ತಲಿಲ್ಲ. ಇನ್ನೊಮ್ಮೆ ಕಾಲ್ ಮಾಡಿದರು. ಫೋನ್ ಎತ್ತಿದ ತಕ್ಷಣ “ಎಲ್ಲಿ ಸತ್ತಿದ್ದೆ ಮಾರಾಯ!” ಎಂದರು ಕೋಪದಿಂದ. “ನಾನಿಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದೇನೆ” ಎಂದ ಆತ. “ಅದು ಬಿಡು. ಅಡಿಕೆ ತೂಗಿದೆಯಲ್ಲ, ಅದು ಎಷ್ಟು ಕೆ.ಜಿ. ಇತ್ತು ಹೇಳು” ಎಂದರು ದನಿಯೆತ್ತರಿಸಿ. “ನೂರಾ ಅರುವತ್ತು ಕೆ.ಜಿ. ಇತ್ತು” ಎಂದ ಆತ. ಕೃಷ್ಣಾಚಾರ್ಯರಿಗೆ ಈಗ ಮತ್ತಷ್ಟು ಗೊಂದಲ. “ಸರಿಯಾಗಿ ತೂಗಿದ್ದೀಯಾ? ಇಲ್ಲಿ ಅಂಗಡಿಯವ ನಾಲ್ಕು ಕೆ.ಜಿ. ಕಮ್ಮಿ ಇದೆ ಅಂತ ಹೇಳುತ್ತಿದ್ದಾನಲ್ಲ” ಎಂದರು. “ಇಲ್ಲ, ನೂರಾ ಅರುವತ್ತು ಇದೆ” ಎಂದ ಮೋನಪ್ಪ. ಅವನ ಧ್ವನಿಯಲ್ಲಿ ಖಚಿತತೆ ಇತ್ತು. ಫೋನಿಟ್ಟ ಕೃಷ್ಣಾಚಾರ್ಯರ ಮನಸ್ಸಿನ ತುಂಬ ಗೊಂದಲ. ನಾಲ್ಕು ಕೆ.ಜಿ. ಕಮ್ಮಿ ಇದ್ದದ್ದರಿಂದಾಗಿ ಭಾರೀ ಹಣದ ನಷ್ಟವೇನೂ ಇರಲಿಲ್ಲ. ಆದರೆ ಯಾವಾಗಲೂ ವ್ಯಾಪಾರ ಮಾಡುವ ಅಂಗಡಿಯವನ ಎದುರು ಮುಜುಗರಪಟ್ಟುಕೊಳ್ಳುವಂತಾಯಿತಲ್ಲ ಎಂಬ ಯೋಚನೆ ಅವರದ್ದು. ಏನಾಗಿರಬಹುದು? ಎಂದು ಯೋಚಿಸತೊಡಗಿದರು ಅವರು. ಮೋನಪ್ಪನ ಕೈಯ್ಯಲ್ಲೊಂದು ಸ್ಮಾರ್ಟ್‌ಫೋನ್ ಬಂದಿದೆ ಈಚೆಗೆ. ಯಾವಾಗಲೂ ಅದರಲ್ಲೇ ಮುಳುಗಿರುವ ಅವನಿಗೆ ಈಗೀಗ ಕೆಲಸದ ಮೇಲೆ ಮೊದಲಿನಷ್ಟು ನಿಷ್ಠೆ ಇಲ್ಲ. ಅದರಿಂದಲೇ ಈ ಎಡವಟ್ಟು ಎನ್ನುವುದು ಅವರಿಗೆ ಸ್ಪಷ್ಟವಾಯಿತು. “ಈ ಪಟಿಂಗ ತಪ್ಪು ಮಾಡಿದ್ದಕ್ಕೆ ನನಗೆ ಸಮಸ್ಯೆ” ಎಂದು ಮೋನಪ್ಪನನ್ನು ಮನಸ್ಸಿನಲ್ಲೇ ಬೈದುಕೊಳ್ಳುತ್ತಾ ಮತ್ತೆ ಅಂಗಡಿಯವನ ಬಳಿ ಹೋದವರು “ನೀವು ಹೇಳಿದ್ದೇ ಸರಿ ಇದೆ. ನಮ್ಮ ಕೆಲಸದವನು ತೂಗುವಾಗ ತಪ್ಪು ಮಾಡಿರಬೇಕು” ಎಂದರು. ಅವನು ಕೊಟ್ಟ ಹಣವನ್ನು ತೆಗೆದುಕೊಳ್ಳುವಾಗ “ಇವತ್ತಾದ ಈ ಎಡವಟ್ಟನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಡಿ” ಎಂದು ಹೇಳಬೇಕೆನಿಸಿದರೂ ಹೇಳುವುದಕ್ಕಾಗಲಿಲ್ಲ ಕೃಷ್ಣಾಚಾರ್ಯರಿಗೆ.
ಹಾಗೆಯೇ ಅಂಗಡಿಯಿಂದ ಸ್ವಲ್ಪ ಈಚೆ ಬಂದಾಗ ಕೂಸಪ್ಪ ತನ್ನ ರಿಕ್ಷಾದ ಸಮೇತ ಅಲ್ಲಿ ನಿಂತಿದ್ದ. “ನೀನಿನ್ನೂ ಹೋಗಿಲ್ಲವಾ ಮಾರಾಯ?” ಎಂದರು ಕೃಷ್ಣಾಚಾರ್ಯರು. “ನೀವು ಬಾಡಿಗೆ ಹಣ ಕೊಟ್ಟರೆ ಅಲ್ಲವಾ ಹೋಗುವುದು?” ಎಂದ ಆತ. ಕೃಷ್ಣಾಚಾರ್ಯರಿಗೀಗ ನೆನಪಾಯಿತು. ಅಡಿಕೆ ಅಂಗಡಿ ಮುಂದೆ ರಿಕ್ಷಾದಿಂದಿಳಿದ ಅವರು ಸೀದಾ ಅಂಗಡಿಯೊಳಗೆ ಹೋಗಿ ಕುಳಿತಿದ್ದರು. ಕೂಸಪ್ಪನ ಬಾಡಿಗೆ ಹಣ ಕೊಟ್ಟಿರಲಿಲ್ಲ. “ಅಲ್ಲ ನೀನು ಅಲ್ಲಿಯೇ ಇದ್ದರೆ ಬಾಡಿಗೆ ಹಣ ಕೊಡುತ್ತಿದ್ದೆ. ನೀನಿಲ್ಲಿಗೆ ಬಂದರೆ ನನಗೆ ಗೊತ್ತಾಗುವುದು ಹೇಗೆ?” ಎಂದು ಸುಳ್ಳೊಂದನ್ನು ಬಿಟ್ಟರು. ನಿಜವಾಗಿ ಅವರಿಗೆ ಬಾಡಿಗೆ ಹಣ ಕೊಟ್ಟಿಲ್ಲ ಎಂದು ನೆನಪಾದದ್ದೇ ಈಗ ಕೂಸಪ್ಪ ಕೇಳಿದ ಮೇಲೆ. “ಅದು ಜೀಪೊಂದು ಬಂತಲ್ಲ, ಅದಕ್ಕೆ ಅಲ್ಲಿ ಜಾಗ ಸಾಕಾಗುವುದಿಲ್ಲ ಅಂತ ನಾನು ಇಲ್ಲಿಗೆ ಬಂದದ್ದು. ನೀವೀಗ ಹೇಗೂ ನನ್ನ ಜೊತೆಗೇ ಬರುತ್ತೀರಲ್ಲ. ಬಾಡಿಗೆ ಹಣ ಮನೆಯಲ್ಲಿಯೇ ಕೊಟ್ಟರಾಯಿತು” ಎಂದ. “ಇಲ್ಲ, ನನಗೆ ಇಲ್ಲಿ ಸ್ವಲ್ಪ ಕೆಲಸ ಇದೆ. ನೀನೀಗ ಹೋಗು” ಎಂದ ಕೃಷ್ಣಾಚಾರ್ಯರು ಮೊದಲೇ ಮಾತನಾಡಿದಷ್ಟು ಬಾಡಿಗೆ ಹಣದ ಜೊತೆಗೆ ಬೆಳಗ್ಗೆಯ ವ್ಹೇಟಿಂಗ್ ಚಾರ್ಜನ್ನೂ ಸೇರಿಸಿ ಕೊಟ್ಟರು. “ಇನ್ನೂ ಇಪ್ಪತ್ತು ರೂಪಾಯಿ ಹೆಚ್ಚು ಕೊಡಬೇಕು” ಎಂದು ಅವನು ಹಲ್ಲು ಕಿರಿದು “ಈಗ ಇಲ್ಲಿ ಇಪ್ಪತ್ತು ನಿಮಿಷ ಕಾದದ್ದಕ್ಕೆ” ಎಂದಾಗ ಕೃಷ್ಣಾಚಾರ್ಯರ ರಕ್ತದೊತ್ತಡ ಏರತೊಡಗಿತು.
*****
ಸಕ್ಕರೆ ಡಬ್ಬಿಯೊಳಗಿನ ದೊಡ್ಡ ಇರುವೆಗಳಂತೆ ಬ್ಯಾಂಕ್ ತುಂಬ ಸೇರಿಕೊಂಡಿದ್ದ ಜನರನ್ನು ಕಂಡಾಗ ಕೃಷ್ಣಾಚಾರ್ಯರಿಗೆ ತಲೆಸುತ್ತು ಬಂದಂತಾಯಿತು. ರಿಕ್ಷಾದ ಕೂಸಪ್ಪನಿಗೆ ಬೈದು, ಅವನಲ್ಲಿ ಜಗಳ ಆಡಿ, ಆಮೇಲೆ ಅವನು ಕೇಳಿದಷ್ಟೇ ಹಣವನ್ನು ಕೊಟ್ಟು ಕಳಿಸಿದ್ದರು. ತನ್ನಲ್ಲೀಗ ಉಳಿದ ಹಣ ಖರ್ಚಿಗೆ ಸಾಕಾಗುವುದಿಲ್ಲ ಎಂದು ಅವರಿಗೆ ಅನಿಸಿತ್ತು. ಮನೆಗೆ ದಿನಸಿ ಸಾಮಾನು ತೆಗೆದುಕೊಂಡು ಹೋಗಬೇಕು. ಮುಂದಿನ ವಾರ ಅಡಿಕೆ ಗಿಡಕ್ಕೆ ಮದ್ದು ಬಿಡಬೇಕು. ಅದಕ್ಕೆ ಇಷ್ಟು ಹಣ ಸಾಕಾಗುವುದಿಲ್ಲ ಎಂದು ಅಂದುಕೊಂಡ ಅವರು ದಿನಸಿ ಅಂಗಡಿಗೆ ಹೋಗುವ ಮೊದಲು ಹಣ ಬಿಡಿಸುವುದಕ್ಕಾಗಿ ಬ್ಯಾಂಕಿಗೆ ಹೋಗಿದ್ದರು. ಈ ಬ್ಯಾಂಕಿನಲ್ಲಿ ಅಕೌಂಟ್ ಇದ್ದರೂ ಅವರು ಇಲ್ಲಿಂದ ಹಣ ಬಿಡಿಸಿದ್ದಿಲ್ಲ. ಅಂತಹ ಅಗತ್ಯ ಅವರಿಗೆ ಬಂದಿರಲಿಲ್ಲ.
ಮೊದಲ ಕೌಂಟರಿನಲ್ಲಿದ್ದ ಸಿಬ್ಬಂದಿಯಲ್ಲಿ “ಹಣ ಬಿಡಿಸಬೇಕಿತ್ತು” ಎಂದರು. “ಅಲ್ಲಿ ಹೋಗಿ” ಎಂದು ಆತ ಕೈ ತೋರಿಸಿದ. ಇವರೀಚೆಗೆ ತಿರುಗುತ್ತಿದ್ದಂತೆಯೇ “ಅಲ್ಲಿ ವಿದ್‌ಡ್ರಾಯಲ್ ಸ್ಲಿಪ್ ಇದೆ. ಅದನ್ನು ಭರ್ತಿ ಮಾಡಿ ತೆಗೆದುಕೊಂಡು ಹೋಗಿ” ಎಂದ. ಕರ್ಚೀಫಿನಿಂದ ಮುಖ ಒರೆಸಿಕೊಳ್ಳುತ್ತಾ, ವಿದ್‌ಡ್ರಾಯಲ್ ಸ್ಲಿಪ್ ತುಂಬಿಸಿದ ಇವರು ಆ ಕಡೆಗೆ ನಡೆದರು. ಅದು ಹದಿನೈದು ಜನರ ಕ್ಯೂ. ಹದಿನಾರನೆಯವರಾಗಿ ಹೋಗಿನಿಂತ ಕೃಷ್ಣಾಚಾರ್ಯರು ತಮ್ಮ ಸರದಿಗಾಗಿ ತವಕಿಸತೊಡಗಿದರು.
ಕ್ಯೂನಲ್ಲಿ ನಿಂತಾಗ ಹನ್ನೆರಡರ ಸನಿಹವಿದ್ದ ಗಡಿಯಾರದ ಮುಳ್ಳು ಈಗ ಒಂದರಾಚೆಗೆ ಗಡಿಪಾರಾಗಿತ್ತು. ಇನ್ನೊಬ್ಬ ವ್ಯಕ್ತಿಯಷ್ಟೇ ಇದ್ದದ್ದು ಇವರ ಮುಂದೆ. ಮುಂದಿನ ಸರದಿ ತನ್ನದೇ ಎಂದು ತಿಳಿದ ತಕ್ಷಣ ಆ ವ್ಯಕ್ತಿ ಬ್ಯಾಗಿನಿಂದ ಹಣದ ಕಟ್ಟೊಂದನ್ನು ಈಚೆಗೆ ತೆಗೆದ. “ಇದು ಹಣ ಬಿಡಿಸುವ ಕ್ಯೂ. ಹಣ ಕಟ್ಟುವುದಕ್ಕಿರುವುದಲ್ಲ” ಎಂದರು ಕೃಷ್ಣಾಚಾರ್ಯರು ನಗುತ್ತಾ ಆ ವ್ಯಕ್ತಿಯಲ್ಲಿ. “ಇಲ್ಲ, ಇದು ಹಣ ಕಟ್ಟುವ ಕೌಂಟರ್” ಎಂದ ಆ ವ್ಯಕ್ತಿ ತಣ್ಣಗೆ. ಕೌಂಟರ್ ಒಳಗಿದ್ದ ಸಿಬ್ಬಂದಿಯೂ ಸಹ ಹೌದು ಎನ್ನುವಂತೆ ತಲೆಯಾಡಿಸಿದ. ಕೃಷ್ಣಾಚಾರ್ಯರಿಗೆ ಹೃದಯಾಘಾತವೇ ಆದಂತಾಯಿತು.
ತನಗೆ ಅಲ್ಲಿ ನಿಲ್ಲಬೇಕೆಂದು ಕೈತೋರಿಸಿದ್ದ ಸಿಬ್ಬಂದಿಯ ಬಳಿಗೆ ಬಂದವರು “ನನಗೆ ಹಣ ಬಿಡಿಸಬೇಕಿತ್ತು. ನಿಮ್ಮಲ್ಲಿ ಕೇಳಿದ್ದಕ್ಕೆ ಆ ಕಡೆಗೆ ಕೈ ತೋರಿಸಿದಿರಿ. ಅದು ಹಣ ಕಟ್ಟಿಸಿಕೊಳ್ಳುವ ಕೌಂಟರ್. ನಿಮಗೆ ಅಷ್ಟೂ ಗೊತ್ತಿಲ್ಲವಾ!” ಎಂದರು ಕೋಪದಿಂದ. “ನಾನು ಕೈ ತೋರಿಸಿದ್ದು ನಾಲ್ಕನೇ ಕೌಂಟರ್ ಕಡೆಗೆ. ನೀವು ತಪ್ಪು ಅರ್ಥ ಮಾಡಿಕೊಂಡು ಮೂರನೇ ಕೌಂಟರ್ ಮುಂದೆ ನಿಂತರೆ ನಾನೇನು ಮಾಡಬೇಕು” ಎಂದ ಆ ಸಿಬ್ಬಂದಿಯ ಧ್ವನಿಯಲ್ಲಿ ಧಿಮಾಕಿತ್ತು. “ಅಲ್ಲ ನೀವು ಸರಿಯಾಗಿ…” ಎಂದೇನೋ ಹೇಳುವುದಕ್ಕೆ ಹೊರಟರು ಕೃಷ್ಣಾಚಾರ್ಯರು. “ಸುಮ್ಮನೆ ಇಲ್ಲಿ ನನ್ನ ಕೆಲಸಕ್ಕೆ ತೊಂದರೆ ಮಾಡುವುದು ಬೇಡ. ಬಾಯ್ಮುಚ್ಚಿಕೊಂಡು ಹೋಗಿ” ಎಂದು ಆ ಸಿಬ್ಬಂದಿ ದೊಡ್ಡ ಧ್ವನಿಯಲ್ಲಿ ಹೇಳಿದಾಗ ಬ್ಯಾಂಕಿನಲ್ಲಿದ್ದ ಎಲ್ಲರೂ ಇವರ ಕಡೆಗೇ ನೋಡತೊಡಗಿದರು. ಮತ್ತೆ ಮಾತು ಬೆಳೆಸದೆ ನಾಲ್ಕನೇ ಕೌಂಟರಿನತ್ತ ನಡೆದ ಕೃಷ್ಣಾಚಾರ್ಯರು ಹದಿನೇಳು ಜನರಿದ್ದ ಕ್ಯೂ ಸೇರಿಕೊಂಡರು.
ಸ್ವಲ್ಪ ಹೊತ್ತು ಕಳೆಯುವಾಗ ಅವರಿಗೆ ವಿಪರೀತ ಹಸಿವಾಗತೊಡಗಿತು. ತಲೆ ಸಿಡಿದಂತಹ ಅನುಭವ. ನರಸಿಂಹಾಚಾರ್ಯರ ಹೋಟೆಲ್ಲಿಗೆ ಹೋಗಿ ಊಟ ಮಾಡಿಬರಲೇ ಎಂದುಕೊಂಡರು. ಆದರೆ ಈಗ ಕ್ಯೂ ಬಿಟ್ಟು ಹೋದರೆ ಮತ್ತಷ್ಟು ಜನ ಸೇರಿಕೊಳ್ಳುತ್ತಾರೆ ಎಂಬ ಯೋಚನೆ ಬಂದದ್ದೇ ತಡ, ಬಳಿಯಲ್ಲಿದ್ದ ಕಂಬಕ್ಕೆ ಕೈ ಕೊಟ್ಟು ಅಲ್ಲೇ ನಿಂತುಕೊಂಡರು. ಹಣ ಪಡೆದು ಅವರಲ್ಲಿಂದ ಹೊರಡಲು ತೊಂಭತ್ತೈದು ನಿಮಿಷ ಬೇಕಾಯಿತು.
*****
ನರಸಿಂಹಾಚಾರ್ಯರ ಹೋಟೆಲ್ ಕಡೆಗೆ ಹೊರಟಿದ್ದ ಕೃಷ್ಣಾಚಾರ್ಯರಿಗೆ ಕಂಡದ್ದು ಅಲ್ಲೇ ರಸ್ತೆಬದಿಯಲ್ಲಿ ಮಾರುವುದಕ್ಕೆಂದು ಇಟ್ಟಿದ್ದ ಕತ್ತಿಗಳ ರಾಶಿ. ಕತ್ತಿ ತೆಗೆದುಕೊಳ್ಳುವುದು ಎರಡು ನಿಮಿಷದ ಕೆಲಸ. ಇದನ್ನು ಮುಗಿಸಿಯೇ ಹೋಟೆಲ್ ಹೊಕ್ಕರಾಯಿತು ಎಂದುಕೊಂಡ ಅವರು ಕತ್ತಿಗಳ ರಾಶಿಯೆದುರು ನಿಂತು, ಮಾರುತ್ತಿದ್ದ ಯುವಕನಲ್ಲಿ “ಎಷ್ಟಪ್ಪಾ ರೇಟು?” ಎಂದರು. ಅವನು ಬೆಲೆ ಹೇಳಿದ. ಅದೆಷ್ಟೆನ್ನುವುದು ಇವರ ತಲೆಗೇ ಹೋಗಲಿಲ್ಲ. ಅಸಮಾಧಾನವಾದಂತಾಯಿತು ಇವರಿಗೆ. “ಹರಿತ ಇದೆಯಾ?” ಎಂದು ಕೇಳಿದವರು ಬಾಗಿ ಕತ್ತಿಯೊಂದನ್ನು ಎತ್ತಿಕೊಂಡು, ಅದರ ಅಲಗನ್ನು ಬೆರಳಲ್ಲಿ ಸವರಿದರು. ಆಗ ಆ ಯುವಕ “ನಿಮಗಾಗದವರ ತಲೆಯನ್ನು ಬೇಕಿದ್ದರೂ ಕತ್ತರಿಸಬಹುದು” ಎಂದ ನಗುತ್ತಾ. ನೋಡುವುದಕ್ಕೆ ಹಾಸ್ಯಪ್ರವೃತ್ತಿ ಇದ್ದವನಂತಿದ್ದ ಆ ಯುವಕ ಈ ಮಾತನ್ನು ಹೇಳಿದ್ದು ತಮಾಷೆಯ ಧಾಟಿಯಲ್ಲಿ. ಇದ್ದಕ್ಕಿದ್ದಂತೆಯೇ ಕೃಷ್ಣಾಚಾರ್ಯರಿಗೆ ಅದೇನಾಯ್ತೋ ಗೊತ್ತಿಲ್ಲ, “ಹಾಗಿದ್ದರೆ ನಿನ್ನ ತಲೆಯನ್ನೇ ಕತ್ತರಿಸುತ್ತೇನೆ” ಎಂದವರು ಅವನ ಮೇಲೆ ಬಿದ್ದು, ಎದೆ ಮೇಲೆ ಕುಳಿತು, ಕತ್ತಿಯನ್ನು ಅವನ ಕುತ್ತಿಗೆ ಕಡೆಗೆ ಬೀಸತೊಡಗಿದ್ದರು.
ಜನರೆಲ್ಲಾ ಸೇರಿಕೊಂಡು ಕೃಷ್ಣಾಚಾರ್ಯರ ಕೈಯ್ಯಿಂದ ಆ ಯುವಕನನ್ನು ಬಿಡಿಸಿ, ಇವರನ್ನು ಈಚೆಗೆ ಕರೆತಂದಿದ್ದರು. ಸುತ್ತ ಇದ್ದ ಒಬ್ಬ ವ್ಯಕ್ತಿ “ಪೋಲೀಸ್‌ಗೆ ಇನ್ಫಾರ್ಮ್ ಮಾಡಿ” ಎಂದು ಬೊಬ್ಬೆ ಹೊಡೆಯುತ್ತಿದ್ದ. ಆಗ ಮಣಿಯೂರು ಗೋಪಾಲ “ಅಯ್ಯೋ ಅದೆಲ್ಲ ಬೇಡ. ಇವರು ನನ್ನ ಪರಿಚಯದವರು. ಹೀಗೆ ಗಲಾಟೆ ಎಲ್ಲ ಮಾಡುವವರಲ್ಲ. ಬಹಳ ಗ್ಫಿಳ್ಮೆ ಇರುವವರು. ಇಂದೇನೋ ಹೀಗೆ ಮಾಡಿದ್ದಾರಷ್ಟೇ. ಪೋಲೀಸ್‌ಗೆ ತಿಳಿಸುವುದೆಲ್ಲ ಬೇಡ” ಎಂದಾಗ ಜನರೆಲ್ಲ ಚದುರಲಾರಂಭಿಸಿದರು. “ಬನ್ನಿ ನಾನೇ ನಿಮ್ಮನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಬಿಡುತ್ತೇನೆ” ಎಂದು ಗೋಪಾಲ ಹೇಳಿದಾಗ ಕೃಷ್ಣಾಚಾರ್ಯರು “ನಾನೇ ಹೋಗುತ್ತೇನೆ ಬಿಡು” ಎಂದು ಗಡುಸಾಗಿ ಹೇಳಿದಾಗ ಇವರನ್ನು ವಿಚಿತ್ರವಾಗಿ ನೋಡುತ್ತಾ ಅವನು ಅಲ್ಲಿಂದ ಹೊರಟುಹೋದ. ದೊಡ್ಡ ದೊಡ್ಡ ಹೆಜ್ಜೆಗಳನ್ನಿಡುತ್ತಾ ಹೋಟೆಲ್ ಕಡೆಗೆ ನಡೆಯತೊಡಗಿದರು ಕೃಷ್ಣಾಚಾರ್ಯರು. ಹೋಟೆಲ್ ಹತ್ತಿರವಾದಂತೆ ಹೋಟೆಲ್‌ನೊಳಗಿಂದ ಕೇಳಿಬಂದ “ಒಂದು ಲೋಟ ಚಹಾ” ಎಂಬ ಸಪ್ಲೇಯರ್‌ನ ಧ್ವನಿ ಅವರಲ್ಲಿ ಮತ್ತೆ ಕೋಪವನ್ನು ಹುಟ್ಟುಹಾಕತೊಡಗಿತು…
ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.
Interesting Story and feel sorry for Krishnacharya for a rough day without a cup of Tea!