ಮಗು ಹುಟ್ಟಿದೆ

ಮಗು ಹುಟ್ಟಿದೆ
ಈಗ ಅಳುತ್ತಿದೆ ಮುಂದೆ ನಗುತ್ತದೆ
ಮತ್ತೆ ಆಗಾಗ ಅಳುವುದು
ಇದ್ದೇ ಇದೆ ಬಿಡಿ

ಇಷ್ಟವಿಲ್ಲದ ಕಾನ್ವೆಂಟಿಗೆ ಹೋಗುವುದಿದೆ
ಬೋರ್ಡು ಮೇಲೆ ಬರೆದ ಅಕ್ಷರಗಳನ್ನು
ಅ ಉ ತಪ್ಪದಂತೆ ಉರು ಹೊಡೆದು
ಹಳೆಯ ಕನ್ನಡಕದ ಟೀಚರ್ ಕೈಯ್ಯಲ್ಲಿ
ಬೆನ್ನು ತಟ್ಟಿಸಿಕೊಳ್ಳುವುದಿದೆ
ಬ್ರಹ್ಮಾಂಡ ಗೆದ್ದ ಸಂತಸದಲ್ಲಿ ಅರಳುವುದಿದೆ

ಬಸ್ಸಿನ ಸೀಟನ್ನು ಭದ್ರವಾಗಿರಿಸಿಕೊಳ್ಳುವ
ಉಪಾಯವನ್ನು ಕಲಿಯುವುದಿದೆ
ಇನ್ನೊಬ್ಬರನ್ನು ಗೇಲಿಮಾಡಿ ಗುಂಪಿನಲ್ಲಿ ಮೆರೆಯುವ
ತಂತ್ರವನ್ನು ಅರಗಿಸಿಕೊಳ್ಳುವುದಿದೆ

ಪಕ್ಕದ ಮನೆಯವರ
ನಗುವಿನ ಹಿಂದಿರುವ
ಮೂದಲಿಕೆಯನ್ನು ಕಂಡೂ
ಕಾಣದಂತಿರಬೇಕಿದೆ
ಅಂಕ ಕತ್ತರಿಸುವ ಪ್ರೊಫೆಸರ್‌ನ
ತಪ್ಪು ಮಾತುಗಳಿಗೆ
ಕಿವಿಯಾದರೂ ತೆಪ್ಪಗಿರಬೇಕಿದೆ
ಹೆಂಡತಿಯಿಂದ ಬೈಸಿಕೊಂಡು
ಊರವರ ಮೇಲೆಲ್ಲ ರೇಗಾಡುವ
ಬಾಸ್‌ನ ಬೈಗುಳ ಕೇಳಿಯೂ
ಕೇಳದಂತಿರಬೇಕಿದೆ

ಜಾಗತಿಕ ತಾಪಮಾನ ಏರಿಕೆ
ಮಾನವೀಯತೆ ಇಳಿಕೆ
ಉಗ್ರ ದಾಳಿ, ನೆರೆ ಹಾವಳಿ
ಭಾಷೆ, ದೇಶ, ಜಾತಿ, ಕೋಮು
ಹೊಡೆದುಕೊಂಡರಂತೆ ಒಂದಾದರಂತೆ
ಅಬ್ಬಬ್ಬಾ ಏನೆಲ್ಲಾ
ಕಾಣುವುದಕ್ಕಿದೆ ಆ ಮಗು!