“ನನ್ನ ವೈಜ್ಞಾನಿಕ ವಲಯಗಳಲ್ಲಿ, ನಾನು ಕವಿತೆಗಳನ್ನು ಬರೆಯುತ್ತೇನೆ ಎಂಬ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸುತ್ತೇನೆ. ವಿಜ್ಞಾನಿಗಳಿಗೆ ಕವಿಗಳೆಂದರೆ ಅನುಮಾನ; ಕವಿಗಳು, ಒಂದು ರೀತಿಯಲ್ಲಿ, ಜವಾಬ್ದಾರಿ ಇಲ್ಲದವರು ಎಂದು ಅವರು ಭಾವಿಸುತ್ತಾರೆ. ಹಾಗೂ ತನ್ನ ವೈಜ್ಞಾನಿಕ ವೃತ್ತಿಯನ್ನು ಕೂಡ ತನ್ನ ಸಾಹಿತ್ಯಿಕ ಸ್ನೇಹಿತರು ಅದೇ ರೀತಿಯಾಗಿ ಶಂಕಿಸುತ್ತಾರೆ ಎಂದು ಅವರು ಒಪ್ಪಿಕೊಂಡರು…”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಚೆಕ್ ಗಣರಾಜ್ಯದ ಕವಿ ಮಿರೊಸ್ಲಾವ್ ಹೊಲುಪ್-ರವರ
(Miroslav Holub, 1923-1998) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ವಿಜ್ಞಾನಿ ಮತ್ತು ಕವಿ ಮಿರೊಸ್ಲಾವ್ ಹೊಲುಪ್ ಅವರು 1923-ರಲ್ಲಿ ಈಗ ಆಧುನಿಕ ಚೆಕ್ ಗಣರಾಜ್ಯದಲ್ಲಿರುವ, ಆಗ ಅವಿಭಾಜಿತ ಚೆಕೊಸ್ಲೊವಾಕಿಯಾದ ಪ್ಲಜೆನ್ (Plzeň) ನಗರದಲ್ಲಿ ಜನಿಸಿದರು. ಅವರು 1953-ರಲ್ಲಿ ಚಾರ್ಲ್ಸ್ ಯೂನಿವರ್ಸಿಟಿ ಸ್ಕೂಲ್ ಆಫ಼್ ಮೆಡಿಸಿನ್-ನಿಂದ MD ಪದವಿ ಹಾಗೂ 1958-ರಲ್ಲಿ ಚೆಕ್ ಅಕಾಡೆಮಿ ಆಫ಼್ ಸೈನ್ಸಸ್ ಇನ್‌ಸ್ಟಿಟ್ಯೂಟ್ ಆಫ಼್ ಮೈಕ್ರೋಬಯಾಲಜಿ-ಯಿಂದ PhD ಪದವಿ ಗಳಿಸಿದರು.
1947-ರಿಂದ ಕವನಗಳನ್ನು ಪ್ರಕಟಿಸಲು ಪ್ರಾರಂಭಿಸಿದ ಹೊಲುಪ್, 1950-ರ ದಶಕದ ಮಧ್ಯಭಾಗದಲ್ಲಿ ‘ಕ್ವೆಟೆನ್’ (Květen) ಎಂಬ ಸಾಹಿತ್ಯ ಪತ್ರಿಕೆಯ ಯುವ ಬರಹಗಾರರೊಂದಿಗೆ ಒಡನಾಡತೊಡಗಿದರು. ಈ ಯುವ ಬರಹಗಾರರು ಚೆಕೊಸ್ಲೊವಾಕಿಯಾದ ಕಮ್ಯುನಿಸ್ಟ್ ಆಡಳಿತಗಾರರಿಂದ ಪ್ರಚಾರಪಡಿಸಿದ ಶಬ್ದಾಡಂಬರದ ‘ಸೋಶಿಯಲಿಸ್ಟ್ ರಿಯಲಿಸಂ’ (Socialist Realism) ಸಾಹಿತ್ಯ ಶೈಲಿಯನ್ನು ವಿರೋಧಿಸಿದರು. ಹೊಲುಪ್ ಅವರ ಮೊದಲ ಪದ್ಯ ಸಂಗ್ರಹ Denní služba (Day Duty) 1958-ರಲ್ಲಿ ಪ್ರಕಟವಾಯಿತು.
1971-ರ ಹೊತ್ತಿಗೆ Achilles a želva (1960; Achilles and the Tortoise), Tak zvané srdce (1963; The So-Called Heart), ಹಾಗೂ Ačkoli (1969; Although) ಸಂಕಲನಗಳು ಸೇರಿ ಒಟ್ಟು 10 ಕವನ ಸಂಕಲನಗಳು ಪ್ರಕಟವಾದವು. ನಂತರ ಪ್ರಕಟವಾದ ಕವನ ಸಂಕಲನಗಳಲ್ಲಿ Notes of a Clay Pigeon (1977), Sagittal Section (1980), The Fly (1987), Intensive Care: Selected and New Poems (1996), ಹಾಗೂ Shedding Life: Disease, Politics, and Other Human Conditions (1997) ಮುಖ್ಯವಾದುವು. ಚೆಕ್ ಗಣರಾಜ್ಯದಲ್ಲಿ ಕಮ್ಯೂನಿಸ್ಟ್ ಸರಕಾರ ಕುಸಿದ ನಂತರವೇ ಅವರ ಕವನ ಸಂಕಲನಗಳು ಅಲ್ಲಿ ಪ್ರಕಟವಾಗತೊಡಗಿದವು. 1970-ರ ಹೊತ್ತಿಗೆ ಅವರ ಕೃತಿಗಳು 30-ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡವು ಮತ್ತು ಒಬ್ಬ ಉತ್ತಮ ಕವಿಯೆಂದು ವಿಮರ್ಶಕರಿಂದ ಪರಿಗಣಿಸಲ್ಪಟ್ಟರು.
ವೃತ್ತಿಯಿಂದ ಒಬ್ಬ ಕ್ಲಿನಿಕಲ್ ಪ್ಯಾಥೋಲಜಿಸ್ಟ್ (clinical pathologist) ಹಾಗೂ ಇಮ್ಯುನೊಲಜಿಸ್ಟ್ (immunologist) ಆಗಿದ್ದ ಹೊಲುಪ್ ಕಾವ್ಯದ ಸೃಜನಾತ್ಮಕತೆಗಿಂತ ತಮ್ಮ ವಿಜ್ಞಾನಿಯ ವೃತ್ತಿಗೆ ಆದ್ಯತೆ ನೀಡಿದರು. ಕವಿತೆ ಬರೆಯುವುದಕ್ಕಾಗಿ ಎರಡು ವರ್ಷಗಳ ಕಾಲವನ್ನು ಮೀಸಲಾಗಿಡಲು ಕೋರಿ, ಇದನ್ನು ಅನುವು ಮಾಡಿಕೊಡಲು ಸಂಶೋಧನಾ ವಿಜ್ಞಾನಿಯಾಗಿ ಅವರಿಗೆ ದೊರಕುವ ಸಂಬಳಕ್ಕೆ ಸಮಾನವಾದ ಸ್ಟೈಫಂಡ್-ನ್ನು ನೀಡುವ ಪ್ರಸ್ತಾವವನ್ನು ಚೆಕ್ ಬರಹಗಾರರ ಒಕ್ಕೂಟವು ಹೊಲುಪ್-ರ ಮುಂದಿಟ್ಟಿತ್ತು, ಎಂದು ಸಂದರ್ಶನವೊಂದರಲ್ಲಿ ಹೊಲುಪ್-ರು ಹೇಳಿದರು. “ಆದರೆ, ನಾನು ವಿಜ್ಞಾನವನ್ನು ಇಷ್ಟಪಡುತ್ತೇನೆ, ಆದಾಗ್ಯೂ, ಕವಿತೆಗಳನ್ನು ಬರೆಯಲು ನನಗೆ ಜಗತ್ತಿನಲ್ಲಿರುವ ಎಲ್ಲಾ ಸಮಯವಿದ್ದರೂ, ನನ್ನಿಂದ ಏನನ್ನೂ ಬರೆಯಲಾಗಲ್ಲ ಎಂಬ ಭಯವಿದೆ ನನ್ನಲ್ಲಿ,” ಎಂದು ಅವರು ಹೇಳಿದರು.
“ನನ್ನ ವೈಜ್ಞಾನಿಕ ವಲಯಗಳಲ್ಲಿ, ನಾನು ಕವಿತೆಗಳನ್ನು ಬರೆಯುತ್ತೇನೆ ಎಂಬ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸುತ್ತೇನೆ. ವಿಜ್ಞಾನಿಗಳಿಗೆ ಕವಿಗಳೆಂದರೆ ಅನುಮಾನ; ಕವಿಗಳು, ಒಂದು ರೀತಿಯಲ್ಲಿ, ಜವಾಬ್ದಾರಿ ಇಲ್ಲದವರು ಎಂದು ಅವರು ಭಾವಿಸುತ್ತಾರೆ. ಹಾಗೂ ತನ್ನ ವೈಜ್ಞಾನಿಕ ವೃತ್ತಿಯನ್ನು ಕೂಡ ತನ್ನ ಸಾಹಿತ್ಯಿಕ ಸ್ನೇಹಿತರು ಅದೇ ರೀತಿಯಾಗಿ ಶಂಕಿಸುತ್ತಾರೆ ಎಂದು ಅವರು ಒಪ್ಪಿಕೊಂಡರು. ಆದರೆ ವಿಜ್ಞಾನ ಮತ್ತು ಕಾವ್ಯದ ನಡುವೆ ನಿಜವಾದ ಸಂಘರ್ಷವಿದೆ ಎಂದು ಹೊಲುಪ್-ಗೆ ಅನಿಸುವುದಿಲ್ಲ. ವಿಜ್ಞಾನಿಯಾಗಿ, ಅವರು “ವಸ್ತುನಿಷ್ಠ ವಾಸ್ತವಿಕತೆ”ಯಲ್ಲಿ ನಂಬಿಕೆಯಿಟ್ಟವರು ಮತ್ತು ಮೂಢನಂಬಿಕೆಯನ್ನು ದ್ವೇಷಿಸಿದವರು ಎಂದು ಅವರು ಹೇಳಿರುವರು. ಆದರೆ, “ನಾನು ಅನುಭವದ ಎಲ್ಲಾ ವಿದ್ಯಮಾನಗಳ ಬಗ್ಗೆ, ತರ್ಕಹೀನ ವಿಷಯಗಳೂ ಸೇರಿದಂತೆ, ಮುಕ್ತ ಮನಸ್ಸಿನವನಾಗಿದ್ದೇನೆ” ಎಂದು ಅವರು ಸೇರಿಸುತ್ತಾರೆ. “ವಾಸ್ತವಗಳನ್ನು ಸೂಕ್ಷ್ಮವಾಗಿ, ವಿಮರ್ಶಾತ್ಮಕವಾಗಿ ಸ್ವೀಕರಿಸುವುದು, ಹಾಗೂ ವಿಷಯಗಳನ್ನು ಮುಚ್ಚಿಡಲು ಅಥವಾ ಅವುಗಳನ್ನು ಹೊಗಳಲು ನಿರಾಕರಿಸುವುದು,” ಇವು ಹೊಲುಪ್-ರ ಕಾವ್ಯ-ಶಕ್ತಿಯ ಮೂಲವೆಂದು ಅವರ ಆಯ್ದ ಕವನಗಳ ಸಂಗ್ರಹವನ್ನು (Selected Poems, 1967) ಪರಿಚಯಿಸುತ್ತಾ ಎ. ಅಲ್ವಾರೆಜ್ ಹೇಳುತ್ತಾರೆ. ಅಂತಿಮವಾಗಿ, ಅವರ ಕಾವ್ಯ ಆಧುನಿಕ ಪ್ರಪಂಚದ ಭಾವರಹಿತ, ಶೋಧಾತ್ಮಕ, ಸಹಾನುಭೂತಿಯ, ಹಾಗೂ ಹಾಸ್ಯದ ಅರ್ಥದಲ್ಲಿ ನೆಲೆಸಿದೆ.
ಹೊಲುಪ್ ಅವರು ಆಗಾಗ್ಗೆ ತಮ್ಮ ಕವಿತೆಗಳಲ್ಲಿ ವೈಜ್ಞಾನಿಕ ರೂಪಕಗಳನ್ನು ಬಳಸಿದರು. ಈ ತಂತ್ರ ‘ರಿಸ್ಕ್’ ಎಂದು ಅವರು ಪರಿಗಣಿಸಿದರೂ, ಇದು ಅವರಿಗೆ “ಮೈಕ್ರೊ-ಪ್ರಪಂಚದ ಹೊಸ ವಾಸ್ತವಕ್ಕೆ ಕಾವ್ಯಾತ್ಮಕ ಸಮಾನತೆಯನ್ನು ಕಂಡುಹಿಡಿಯಲು” ಅವಕಾಶ ನೀಡುತ್ತದೆ ಎಂದು ಹೇಳಿದರು. ಈ ರೂಪಕಗಳನ್ನು ಬಳಸುವುದಕ್ಕೆ ಒಂದು ಕಾರಣ “ವೈಚಾರಿಕತೆಯ ಶುಷ್ಕತೆಯನ್ನು ದೂರವಿಡುವುದಕ್ಕಾಗಿ” ಎಂದು ಅವರು ಹೇಳಿರುವರು. “ಇನ್ನೊಂದು ಕಾರಣವೇನೆಂದರೆ, ನಾನು ಕವಿತೆಯಲ್ಲಿನ ಕಲ್ಪನೆಗಳ ‘ಆಟ’ವನ್ನು ಇಷ್ಟಪಡುವಂತೆಯೇ ರೂಪಕಗಳ ಆಟ ಅಥವಾ ನೃತ್ಯವನ್ನು ಸಹ ಇಷ್ಟಪಡುತ್ತೇನೆ. ನನ್ನ ಕವಿತೆಗಳು ಯಾವಾಗಲೂ ಒಂದು ಕಲ್ಪನೆಯೊಂದಿಗೆ ಪ್ರಾರಂಭವಾಗುತ್ತವೆ, ಒಂದು ರೀತಿಯ ಗೀಳುಹಿಡಿದ ಕಲ್ಪನೆ… ನನ್ನ ಉದ್ದನೆಯ ಸಾಲುಗಳಿಂದ ‘ಸಸ್ಪೆನ್ಸ್’-ನ ಪ್ರಭಾವಗಳನ್ನು ಸಾಧಿಸಲು ಮತ್ತು ನನ್ನ ಚಿಕ್ಕ ಸಾಲುಗಳಿಂದ ಪ್ರಚಂಡವಾದ ಸ್ವರಭಾರ ಸಾಧಿಸಲು ಪ್ರಯತ್ನಿಸುತ್ತೇನೆ,” ಎಂದು ಅವರು ಹೇಳಿರುವರು.
ಕಾವ್ಯದ ಜೊತೆಗೆ, ಹೊಲುಪ್ ಅವರು ವಿಜ್ಞಾನದ ವಿವಿಧ ವಿಷಯಗಳ ಬಗ್ಗೆ, ವಿಶೇಷವಾಗಿ ಜೀವಶಾಸ್ತ್ರ ಮತ್ತು ವೈದ್ಯಶಾಸ್ತ್ರ (ವಿಶೇಷವಾಗಿ ರೋಗನಿರೋಧಕ ಶಾಸ್ತ್ರ) ಹಾಗೂ ಜೀವನದ ಮೇಲೆ ಅನೇಕ ಸಣ್ಣ ಪ್ರಬಂಧಗಳನ್ನು ಬರೆದರು. The Dimension of the Present Moment ಎಂಬ ಶೀರ್ಷಿಕೆಯಡಿಯಲ್ಲಿ ಈ ಪ್ರಬಂಧಗಳನ್ನು ಸಂಗ್ರಹಿಸಲಾಗಿದೆ. 1960-ರ ದಶಕದಲ್ಲಿ, ಅವರು ಅಮೇರಿಕಾ ದೇಶಕ್ಕೆ ಭೇಟಿ ನೀಡಿ ಕಳೆದ ದಿನಗಳ ಕುರಿತು Anděl na kolečkách: poloreportáž z USA (Angel on Wheels: Sketches from the U.S.A., 1963) ಹಾಗೂ Žit v New Yorku (To Live in New York, 1969) ಎಂಬ ಎರಡು ‘ಸೆಮಿ-ರಿಪೋರ್ಟೇಜ್’ ಎಂದು ಕರೆಯುವ ಪುಸ್ತಕಗಳನ್ನು ಪ್ರಕಟಿಸಿದರು.
ಖ್ಯಾತ ಐರಿಷ್ ಕವಿ ಶೇಯ್ಮಸ್ ಹೀನಿ ಅವರು ಹೊಲುಪ್ ಅವರ ಕಾವ್ಯವನ್ನು ಹೀಗೆಂದು ವಿವರಿಸಿದರು: “ವಿಷಯಗಳ ಹೊದಿಕೆಯನ್ನು ಕಳಚಿ ಅವನ್ನು ಬರಿದಾಗಿಸುವಂತಹ ಕಾವ್ಯ ಹೊಲುಪ್-ರದ್ದು; ಅಂದರೆ, ಚರ್ಮದ ಅಡಿಯಲ್ಲಿರುವ ತಲೆಬುರುಡೆ ಅಷ್ಟೇ ಅಲ್ಲ, ತಲೆಬುರುಡೆಯ ಅಡಿಯಲ್ಲಿರುವ ಮೆದುಳನ್ನು ಸಹ ತೋರಿಸುವ ಕಾವ್ಯ ಅವರದ್ದು. ಅವರ ಬರವಣಿಗೆಯಲ್ಲಿ ಸಂಬಂಧಗಳ ಆಕಾರ, ರಾಜಕೀಯ, ಇತಿಹಾಸ; ಪ್ರೀತಿ ಮತ್ತು ಅಸಮಾಧಾನದ ಲಯಗಳು; ನಂಬಿಕೆ, ಭರವಸೆ, ಹಿಂಸೆ, ಹಾಗೂ ಕಲೆಯ ಉಬ್ಬರ ಮತ್ತು ಹರಿವು, ಇವುಗಳನ್ನೆಲ್ಲ ಕಾಣುತ್ತೇವೆ.” ಇನ್ನೊಬ್ಬ ಖ್ಯಾತ ಇಂಗ್ಲಿಷ್ ಕವಿ ಟೆಡ್ ಹ್ಯೂಸ್ ಅವರು 1988-ರಲ್ಲಿ ಹೊಲುಪ್-ರನ್ನು, “ಲೋಕದ ಯಾವುದೇ ಭಾಗದಲ್ಲಿ ಬರೆಯುವ ಅರ್ಧ ಡಜನ್ ಪ್ರಮುಖ ಕವಿಗಳಲ್ಲಿ ಒಬ್ಬರು,” ಎಂದು ಕರೆದರು.
ನಾನು ಇಲ್ಲಿ ಕನ್ನಡ ಭಾಷೆಗೆ ಅನುವಾದಿಸಿರುವ ಮಿರೊಸ್ಲಾವ್ ಹೊಲುಪ್-ರವರ ಹತ್ತು ಕವನಗಳಲ್ಲಿ ಮೊದಲ ನಾಲ್ಕು ಕವನಗಳನ್ನು ಜಾರ್ಜ್ ಥೆಯ್ನರ್ (George Theiner), ನಂತರದ ಮೂರು ಕವನಗಳನ್ನು ಎವಾಲ್ಡ್ ಓಸರ್ಸ್ (Ewald Osers), ಎಂಟನೆಯ ಕವನವನ್ನು ಸ್ಟುವರ್ಟ್ ಫ್ರೀಬರ್ಟ್ ಹಾಗೂ ಡ್ಯಾನಾ ಹಬೊವಾ (Stuart Friebert & Dana Habova), ಒಂಬತ್ತನೆಯ ಕವನವನ್ನು ಡೇವಿಡ್ ಯಂಗ್ ಹಾಗೂ ಡ್ಯಾನಾ ಹಬೊವಾ (David Young & Dana Habova), ಹಾಗೂ ಹತ್ತನೆಯ ಕವನವನ್ನು ಇಯನ್ ಮಿಲ್ನರ್-ರವರು (Ian Milner) ಮೂಲ ಚೆಕ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿರುವರು.
೧
ರಾತ್ರಿಯ ಮಳೆ
ಮೂಲ: The Rain at Night
ಇಲಿಯಂತಹ ಹಲ್ಲುಗಳಿಂದ ಮಳೆಯು
ಕಲ್ಲನ್ನು ಕೊರಕುತ್ತದೆ.
ಮರಗಳು ಪ್ರವಾದಿಗಳಂತೆ ಊರ ತುಂಬಾ
ಮೆರವಣಿಗೆ ಹೋಗುತ್ತವೆ.
ಕತ್ತಲ ಕರಾಳ ಕಡವರಾಳುಗಳ ಬಿಕ್ಕಳಿಕೆಗಳೇನೋ,
ಹೊರಗೆ ತೋಟದಲ್ಲಿರುವ ಹೂಗಳ ಅದುಮಿದ ನಗೆಗಳೇನೋ,
ತಮ್ಮ ಮರ್ಮರಗಳಿಂದ ಕ್ಷಯರೋಗವ
ನಿವಾರಿಸುವ ಪ್ರಯತ್ನದಲ್ಲಿದ್ದಂತಿದೆ.
ಯಾವುದೋ ಮುಸುಕಿನಡಿಯಲ್ಲಿ ಗುರುಗುಟ್ಟುವ ದಿವ್ಯ ಕ್ಷಾಮವೇನೋ.
ಮಾತಿಗೆ ಮೀರಿದ ಸಮಯವಿದು,
ಧ್ವನಿವರ್ಧಕಗಳ ಧ್ವನಿ ಒಡೆಯುತ್ತಿದೆ,
ಪದ್ಯಗಳು ಪದಗಳಿಂದಲ್ಲ
ಹನಿಗಳಿಂದ ರಚಿಸಲ್ಪಡುತ್ತಿವೆ.
೨
ಅಡವಿ
ಮೂಲ: The Forest
ಆದಿಕಾಲದ ಬಂಡೆಗಳ ನಡುವೆ
ಪಕ್ಷಿಯಾತ್ಮಗಳು ಗ್ರಾನೈಟ್ ಬೀಜಗಳನ್ನು ಒಡೆಯುತ್ತಿವೆ,
ವಿಗ್ರಹದಂತ ಮರಗಳು ತಮ್ಮ ಕಪ್ಪು ಕೈಗಳಿಂದ
ಮೋಡಗಳನ್ನು ಬೆದರಿಸುತ್ತಿವೆ,
ಇದ್ದಕ್ಕಿದ್ದಂತೆ
ಒಂದು ಗುಡುಗಾಟದ ಸದ್ದು,
ಇತಿಹಾಸವೇ ಬುಡಮೇಲಾಗುತ್ತಿದೆಯೋ ಎಂಬಂತೆ,
ಹುಲ್ಲಿನ ದಳಗಳು ನಿಮಿರುತ್ತವೆ,
ಬಂಡೆಗಳು ನಡುಗುತ್ತವೆ,
ಭೂಮಿ ಬಿರಿಯುತ್ತದೆ
ಅಲ್ಲಿ ಒಂದು ಅಣಬೆ ಬೆಳೆಯುತ್ತದೆ,
ಜೀವನದಂತೆ ಅಗಾಧವಾದ ಅಣಬೆ,
ಬಿಲಿಯಾಂತರ ಜೀವಕಣಗಳಿಂದ ತುಂಬಿದೆ,
ಅಗಾಧವಾಗಿದೆ ಅದು ಜೀವನದಂತೆ,
ಅನಂತವಾಗಿ, ಜಲಮಯವಾಗಿ,
ಕಾಣಿಸಿಕೊಳ್ಳುತ್ತಿದೆ ಈ ಲೋಕದಲ್ಲಿ
ಮೊದಲ ಸಲ
ಹಾಗೂ ಕೊನೆಯ ಸಲ.
೩
ಬೆಕ್ಕು
ಮೂಲ:The Cat
ಹೊರಗೆ ರಾತ್ರಿ ಕವಿದಿತ್ತು
ಅಕ್ಷರಗಳಿಲ್ಲದ ಪುಸ್ತಕದ ಹಾಗೆ.
ಶಹರದ ಜರಡಿಯ ಮೂಲಕ
ಆ ಅನಂತ ಕತ್ತಲು
ನಕ್ಷತ್ರಗಳೊಳಗೆ ಹನಿಹನಿಯಾಗಿ ತೊಟ್ಟಿಕ್ಕುತ್ತಿತ್ತು.
ನಾನವಳಿಗೆ ಹೇಳಿದೆ,
ಹೋಗಬೇಡ ನೀನು,
ನೀನು ಬರಿದೆ ಬಲೆಗೆ ಬೀಳುವೆ,
ವಶೀಕರಿಸಲ್ಪಡುವೆ,
ವಿನಾ ಕಾರಣ ಬಾಧೆಪಡುವೆ.
ನಾನವಳಿಗೆ ಹೇಳಿದೆ,
ಹೋಗಬೇಡ ನೀನು,
ಇಲ್ಲದಿರುವುದು
ಯಾಕೆ ಬೇಕು ನಿನಗೆ?
ಆದರೆ, ಒಂದು ಕಿಟಕಿ ತೆರೆಯಿತು,
ಅವಳು ಹೋಗಿ ಬಿಟ್ಟಳು,
ಆ ಕರಿ ರಾತ್ರಿಯೊಳಗೆ ಒಂದು ಕರಿ ಬೆಕ್ಕು,
ಅವಳು ಕರಗಿಹೋದಳು,
ಆ ಕರಿ ರಾತ್ರಿಯಲ್ಲಿ ಒಂದು ಕರಿ ಬೆಕ್ಕು,
ಅವಳು ಹಾಗೇ ಕರಗಿಹೋದಳು,
ಅವಳು ಮತ್ತೆ ಯಾರಿಗೂ ಕಾಣಸಿಗಲಿಲ್ಲ.
ಸ್ವತಃ ಅವಳಿಗೂ ಸಹ.
ಆದರೆ, ಕೆಲವೊಮ್ಮೆ ಅವಳ ದನಿ
ಕೇಳಿಬರುತ್ತೆ,
ಶಾಂತವಾಗಿರುವಾಗ
ಬಡಗಣ ಗಾಳಿ ಬೀಸುತ್ತಿರುವಾಗ,
ನಿನ್ನದೇ ತಾನನ್ನು ನೀನು
ಕಿವಿಗೊಟ್ಟು ಆಲಿಸುವೆ ಆಗ.
೪
ಎಲುಬುಗಳು
ಮೂಲ: Bones
ಕೆಲಸಕ್ಕೆ ಬಾರದ ಎಲುಬುಗಳು,
ಉರಗಗಳ ಪಕ್ಕೆಲುಬುಗಳು,
ಬೆಕ್ಕುಗಳ ದವಡೆಗಳು,
ಚಂಡಮಾರುತದ ಸೊಂಟೆಲುಬು,
ವಿಧಿಯ ಕೊರಳೆಲುಬು,
ಇವುಗಳನ್ನೆಲ್ಲ ಪಕ್ಕಕ್ಕೆ ಇಟ್ಟೆವು.
ಮನುಷ್ಯನ ಬೆಳೆಯುತ್ತಿರುವ ತಲೆಗೆ
ಆಧಾರ ಕೊಡಲು
ನೇರವಾಗಿ ನಿಲ್ಲಲು ಸಾಧ್ಯವಾಗುವಂತಹ
ಒಂದು ಬೆನ್ನೆಲುಬನ್ನು
ಅರಸುತ್ತಿದ್ದೇವೆ ನಾವು.
೫
ಮಧ್ಯಾಹ್ನ
ಮೂಲ: Midday
ಹಗಲು ತೀರಕ್ಕೆ ಬಂದು ಲಂಗರು ಹಾಕಿದೆ.
ಮರಗಳು ಖುಷಿಯಿಂದ ಕಂಪಿಸುತ್ತಿವೆ
ಸಾವಿರದ ಚಿಟ್ಟೆಗಳು ಹಾಡುತ್ತಿವೆ
ಅಂತಹ ಒಂದು ದಿನ
ನಾವು ಪ್ರೀತಿಸುವ ಮುಖದಂತೆ
ಆಕಾಶ ಇನಿದಾಗಿದೆ
ಬೆಟ್ಟದ ಇಳಿಜಾರುಗಳಿಂದ
ಮಕ್ಕಳ ಮೆಲುದನಿಗಳು ಉರುಳುತ್ತಿವೆ
ಬಿಸಿಲು, ಹಾಡು, ಶಾಂತಿ:
ಏನೋ ಗಂಡಾಂತರ ಕಾದಿದೆ.
೬
ಅಪಘಾತ
ಮೂಲ: Casualty
ತರುತ್ತಾರವರು ಜಜ್ಜಿಹೋದ ಬೆರಳುಗಳನ್ನು,
ರಿಪೇರಿ ಮಾಡಿ, ಡಾಕ್ಟರೇ.
ತರುತ್ತಾರವರು ಸುಟ್ಟುಹೋದ ಕಣ್ಣುಗಳನ್ನು,
ಪೀಡಿತ ಗೂಬೆಗಳಂತಹ ಹೃದಯಗಳನ್ನು,
ತರುತ್ತಾರವರು ಒಂದು ನೂರು ಬಿಳಿ ದೇಹಗಳನ್ನು,
ಒಂದು ನೂರು ಕೆಂಪು ದೇಹಗಳನ್ನು,
ಒಂದು ನೂರು ಕರಿ ದೇಹಗಳನ್ನು,
ರಿಪೇರಿ ಮಾಡಿ, ಡಾಕ್ಟರೇ,
ತರುತ್ತಾರವರು ಆ್ಯಂಬುಲೆನ್ಸ್-ಗಳ ಪಾತ್ರೆಗಳಲ್ಲಿ
ರಕ್ತದ ಹುಚ್ಚಾಟವನ್ನು
ಮಾಂಸದ ಚೀರಾಟವನ್ನು
ಸುಟ್ಟ ಚರ್ಮದ ಮೌನವನ್ನು,
ರಿಪೇರಿ ಮಾಡಿ, ಡಾಕ್ಟರೇ,
ಮತ್ತೆ ನಾವು ಹೊಲಿಯುತ್ತಿರುವಾಗ ಇಂಚು ಇಂಚಾಗಿ,
ರಾತ್ರಿಯಿಂದ ರಾತ್ರಿಗೆ,
ನರವನ್ನು ನರದ ಜತೆ,
ಸ್ನಾಯುವನ್ನು ಸ್ನಾಯುವಿನ ಜತೆ,
ದೃಷ್ಟಿಯನ್ನು ಕಣ್ಣಿಗೆ,
ತರುತ್ತಾರವರು ಮತ್ತೂ ಉದ್ದನೆಯ ಖಡ್ಗಗಳನ್ನು,
ಇನ್ನೂ ಹೆಚ್ಚು ಗುಡುಗಾಡುವ ಬಾಂಬುಗಳನ್ನು,
ಇನ್ನೂ ಹೆಚ್ಚು ವೈಭವದ ಯಶಸ್ಸುಗಳನ್ನು,
ಮುಠ್ಠಾಳರು.
೭
ವರ್ಣಮಾಲೆ
ಮೂಲ: Alphabet
ಮಯೋಸೀನ್ ಯುಗದಿಂದ
ಹತ್ತು ಮಿಲಿಯ ವರ್ಷಗಳಿಂದೀಚೆ
ಜ್ಯೆಚ್ನಾ ರಸ್ತೆಯಲ್ಲಿರುವ
ಪ್ರಾಥಮಿಕ ಶಾಲೆಯೊಂದರಲ್ಲಿ.
ನಮಗೆ a-ನಿಂದ z-ವರೆಗೂ
ಎಲ್ಲಾ ಗೊತ್ತಿದೆ
ಆದರೆ, ಕೆಲವೊಮ್ಮೆ ಬೆರಳು ನಿಲ್ಲುತ್ತದೆ
a ಮತ್ತು b ಅಕ್ಷರಗಳ ಮಧ್ಯೆ
ಇರುವ ಆ ಖಾಲಿ ಜಾಗದಲ್ಲಿ,
ರಾತ್ರಿಯಲ್ಲಿ ಕಾಣುವ ಹುಲ್ಲುಗಾವಲಿನಂತೆ ಖಾಲಿ,
g ಮತ್ತು h ಅಕ್ಷರಗಳ ಮಧ್ಯೆ,
ಕಡಲ ಕಣ್ಗಳಂತೆ ಆಳ,
m ಮತ್ತು n ಅಕ್ಷರಗಳ ಮಧ್ಯೆ,
ಮಾನವನ ಹುಟ್ಟಿನಂತೆ ದೀರ್ಘ,
ಕೆಲವೊಮ್ಮೆ ಅದು ನಿಲ್ಲುತ್ತದೆ
z ಅಕ್ಷರದ ನಂತರ ಇರುವ
ಆಕಾಶಗಂಗೆಯ ತಣುವಿನಲ್ಲಿ,
ಆರಂಭದಲ್ಲಿ ಹಾಗೂ ಅಂತ್ಯದಲ್ಲಿ,
ವಿಚಿತ್ರ ಹಕ್ಕಿಯೊಂದರ ಹಾಗೆ
ತುಸು ಕಂಪಿಸುತ್ತಾ.
ಹತಾಶೆಯಿಂದಲ್ಲ.
ಸುಮ್ಮನೆ ಹೀಗೆ.
೮
ಲಾಜಿಕ್ ಬಗ್ಗೆ ಒಂದು ಸಂಕ್ಷಿಪ್ತ ಚಿಂತನೆ
ಮೂಲ: Brief Reflection on Logic
ದೊಡ್ಡ ಸಮಸ್ಯೆ ಏನೆಂದರೆ ಎಲ್ಲದಕ್ಕೂ
ಅದರದ್ದೇ ಲಾಜಿಕ್ ಇರುತ್ತೆ.
ನೀವು ಯಾವುದರ ಬಗ್ಗೆಯಾದರೂ ಯೋಚಿಸಿ,
ಯಾವುದು ಬಂದು ನಿಮ್ಮ ತಲೆಗೆ ಬಡಿಯುತ್ತೋ, ಅದರ ಬಗ್ಗೆ.
ಯಾರಾದರೂ ಬಂದು ಅದಕ್ಕೊಂದು
ಲಾಜಿಕ್ ಜೋಡಿಸಿಬಿಡುತ್ತಾರೆ.
ನಿನ್ನ ತಲೆಯೊಳಗೋ, ನಿನ್ನ ತಲೆಯ ಮೇಲೋ.
ಒಂದು ಸಿಲಿಂಡರ್ ಕೂಡ ಅರ್ಥ ಹೊಂದಿರುತ್ತೆ,
ಕನಿಷ್ಟವೆಂದರೆ, ಅದು ಕ್ಯೂಬ್ ಅಲ್ಲವೆಂದು.
ಒಂದು ಕಂದರವೂ ಅರ್ಥ ಹೊಂದಿರುತ್ತೆ,
ಅದೊಂದು ಮಹಾ ಪರ್ವತವಲ್ಲ ಎಂದಷ್ಟೇ.
ತಮ್ಮನ್ನು ಕ್ಯೂಬ್-ಗಳೆಂದು
ತೋರಿಸಿಕೊಳ್ಳುವ ಸಿಲಿಂಡರ್-ಗಳಿಗೆ
ಒಂದು ವಿಶೇಷ ಲಾಜಿಕ್-ನ್ನು ಗೊತ್ತುಮಾಡಬೇಕು.
ಮತ್ತೆ ತಮ್ಮನ್ನು ಮಹಾ ಪರ್ವತಗಳೆಂದು
ತಿಳಿದುಕೊಳ್ಳುವ ಕಂದರಗಳಿಗೆ ಕೂಡ.
ಈ ವಸ್ತುಗಳ ಲಾಜಿಕ್ ಹೇಗಿರುವುದೆಂದರೆ
ಅವು ಬೇರೆ ವಸ್ತುಗಳ ಅರ್ಥಗಳನ್ನು ಸುಲಿದು ಹಾಕುತ್ತವೆ.
ಈ ಚಿಂತನೆ ಅಮೂರ್ತವಲ್ಲ.
ಇತ್ತೀಚಿನ ಇತಿಹಾಸದ ದೃಷ್ಟಿಯಿಂದ ಹುಟ್ಟಿದ್ದು.
೯
ಇನ್ನೇನು ಮಾಡುವುದು
ಮೂಲ: What else
ಇನ್ನೇನು ಮಾಡುವುದು,
ಒಂದು ಕೋಲು ತಗೊಂಡು
ನಿನ್ನೊಳಗಿರುವ ಆ ಸಣ್ಣ
ನಾಯಿಯನ್ನು ಹೊರಗೋಡಿಸುವುದು, ಅಲ್ಲವಾ?
ಭಯದಿಂದ ನಿಮಿರಿದೆ ಹಿಂಗತ್ತಿನ ರೋಮ,
ಅವನು ಗೋಡೆಬದಿಯಲ್ಲಿ ಮುದುರಿಕೊಳ್ಳುವನು,
ಸಾಂಸಾರಿಕ ಗೃಹಮಂಡಲದೊಳಗೆ ತೆವಳುವನು,
ಕುಂಟುವನು,
ಮುಸುಡಿಯಿಂದ ನೆತ್ತರು ಸುರಿಸುತ್ತಾ.
ನೀನು ಅವನಿಗೆ ಕೈಯ್ಯಾರೆ ಉಣಿಸಬಹುದು
ಆದರೆ ಅದರಿಂದ ಏನೂ ಪ್ರಯೋಜನವಿಲ್ಲ.
ಕಾವ್ಯವೆಂದರೆ ಇನ್ನೇನೂ ಅಲ್ಲ,
ನಿನ್ನೊಳಗಿರುವ ಆ ಸಣ್ಣ
ನಾಯಿಯನ್ನು ಕೊಂದುಹಾಕುವುದು, ಅಲ್ಲವಾ?
ಆಮೇಲೆ, ಸುತ್ತಲೂ ಬೌ, ಬೌ, ಬೊಗಳುವ ಸದ್ದು,
ಬೆಕ್ಕುಗಳು ಬೊಗಳುತ್ತಿವೆ
ಹುಚ್ಚುಹಿಡಿದಂತೆ.
೧೦
ಬಾಗಿಲು
ಮೂಲ: The Door
ಹೋಗು … ಬಾಗಿಲು ತೆರೆ.. ಹೊರಗೆ
ಇರಬಹುದೇನೋ
ಒಂದು ಮರ ಅಥವಾ
ಒಂದು ಅಡವಿ ಅಥವಾ
ಒಂದು ಉದ್ಯಾನ ಅಥವಾ
ಒಂದು ಜಾದೂ ನಗರಿ.
ಹೋಗು… ಬಾಗಿಲು ತೆರೆ.
ಇರಬಹುದೇನೋ ಏನನ್ನೋ
ಹುಡುಕುತ್ತಿರುವ ಒಂದು ನಾಯಿ,
ಕಾಣಬಹುದೇನೋ ನೀನು
ಒಂದು ಮುಖವನ್ನು ಅಥವಾ
ಒಂದು ಕಣ್ಣನ್ನು ಅಥವಾ
ಒಂದು ಚಿತ್ರದ ಚಿತ್ರವನ್ನು.
ಹೋಗು… ಬಾಗಿಲು ತೆರೆ.
ಹೊರಗೆ ಮಂಜು ಕವಿದಿರುವುದಾದರೆ
ಅದು ಕರಗುತ್ತೆ.
ಹೋಗು… ಬಾಗಿಲು ತೆರೆ.
ಬರೀ ಕತ್ತಲೆ ಕಾಲ ಕಳೆಯುತ್ತಿರಬಹುದು,
ಬರೀ ಪೊಳ್ಳು-ಗಾಳಿ ಬೀಸುತ್ತಿರಬಹುದು,
ಅಲ್ಲಿ ಏನಿಲ್ಲದಿದ್ದರೂ ಸರಿ…
ಹೋಗು… ಬಾಗಿಲು ತೆರೆ
ಕಡೇ ಪಕ್ಷ ಇರಬಹುದು ತಂಗಾಳಿ.
ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.