ಇಂದ್ರಭವನದ ಎಲ್ಲ ಕೋಣೆಗಳನ್ನು, ವಿಲ್ಲಾಗಳನ್ನು ಒಳಗೆ ಹೋಗಿ ಕೂಲಂಕುಷವಾಗಿ ನೋಡಲು ನನಗೆ ಸಾಧ್ಯವಾಗಲಿಲ್ಲ. ಎಲ್ಲವೂ ಭರ್ತಿಯಾಗಿದ್ದವು. ಖಾಲಿಯಾದ ತಕ್ಷಣ ಹೊಸಬರು ಯಾರಾದರೂ ತಕ್ಷಣ ಬಂದು ಹಿಡಿದುಕೊಂಡುಬಿಡುತ್ತಿದ್ದರು. ಸಚಿವರು, ನಾಯಕರು, ಪದಾಧಿಕಾರಿಗಳು, ಕುಲಾಧಿಪತಿಗಳು, ಗುತ್ತಿಗೆದಾರರು, ಅಭಿಯಂತರರು, ಒಬ್ಬರ ಮೇಲೆ ಒಬ್ಬರು, ಒಬ್ಬರ ಹಿಂದೆ ಒಬ್ಬರು. ಪಿಸುಮಾತುಗಳಲ್ಲಿ ಕೇಳಿಸಿದ ಪ್ರಕಾರ, ನ್ಯಾಯಾಲವು ಜಾಮೀನು ಆದೇಶವನ್ನು ನೀಡುವಾಗ, ರದ್ದುಪಡಿಸುವಾಗ, ಇಂದ್ರಭವನದಲ್ಲಿ ಯಾವ ರೀತಿಯ, ಯಾವ ಸ್ತರದ ಮನೆಗಳು, ವಿಲ್ಲಾಗಳು ಯಾವಾಗ ಖಾಲಿಯಾಗುತ್ತವೆ ಎಂಬುದನ್ನು ಅನೌಪಚಾರಿಕವಾಗಿ ವಿಚಾರಿಸಿಯೇ ಮುಂದಿನ ಆದೇಶ ನೀಡುತ್ತಿತ್ತಂತೆ.
ಕೆ. ಸತ್ಯನಾರಾಯಣ ಬರೆಯುವ “ಜೈಲು ಕತೆಗಳು” ಸರಣಿಯ ಆರನೆಯ ಬರಹ ನಿಮ್ಮ ಓದಿಗೆ

ಈ ಬರಹವನ್ನು ನಾನು ಬಹಳ ವರ್ಷಗಳ ಹಿಂದೆಯೇ ಬರೆದಿದ್ದೆ, ಪರಿಷ್ಕರಿಸಿದ್ದೆ. ಪ್ರಕಟಿಸುವ ಧೈರ್ಯ ಬರಲಿಲ್ಲ. ಇದಕ್ಕೆ ಕಾರಣ, ಗೆಳೆಯರ ಪ್ರತಿಕ್ರಿಯೆ. ಇದೊಂದು ಕಲ್ಪಿತ ವಾಸ್ತವದ ಬರಹ ಎಂದರು ಕೆಲವರು. ಇನ್ನು ಕೆಲವರು ಉತ್ಪ್ರೇಕ್ಷೆಯು ಸಾಹಿತ್ಯಿಕ ಬರವಣಿಗೆಯಲ್ಲಿ ಇದ್ದೇ ಇರುವುದು ಸಹಜವಾದರೂ ಸತ್ಯವನ್ನು ಮರೆಮಾಡುವಷ್ಟು ಇರಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಆದರೆ ಈಗ ಪ್ರಕಟಿಸಬಹುದೆಂಬ ಧೈರ್ಯ ಬಂದಿದೆ. ಇದಕ್ಕೆ ಎರಡು ಕಾರಣಗಳೆಂದರೆ, ಇಂಡಿಯನ್‌ ಪೋಲೀಸ್‌ ಶ್ರೇಣಿಗೆ ಸೇರಿದ ಅಧಿಕಾರಿಯೊಬ್ಬರು ರಾಜ್ಯಮಟ್ಟದ ಹಿರಿಯ ಅಧಿಕಾರಿಯ ಮೇಲೆ ಒಂದು ಗಂಭೀರವಾದ ಲಿಖಿತ ಆಪಾದನೆ ಮಾಡಿ, ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದರು. ಗಣ್ಯರ ಕುಟುಂಬಕ್ಕೆ ಸೇರಿದ ಒಬ್ಬರಿಗೆ ಹಿರಿಯ ಅಧಿಕಾರಿಯ ಬೆಂಬಲದಿಂದಾಗಿ ಜೈಲಿನೊಳಗೆ ಸಕಲ ಇಂದ್ರಭೋಗವನ್ನು ಒದಗಿಸಲಾಗಿದೆ ಎಂಬುದೇ ಈ ಆಪಾದನೆ. ಇಲ್ಲ ಇದು ಸುಳ್ಳು ಎಂದು ಇಡೀ ಇಲಾಖೆಯು ಪ್ರತಿಭಟಿಸಿದರೂ ನಾಗರಿಕರ ಮಾಧ್ಯಮದ ವರಾತ ತಾಳಲಾರದೆ ದೂರು ಕೊಟ್ಟ ಅಧಿಕಾರಿಯನ್ನು ಸೇವೆಯಿಂದ ಅಮಾನತ್ತು ಮಾಡಲಾಯಿತು. ನಂತರ ಹಿರಿಯ ಅಧಿಕಾರಿಗೇ ಪಿಂಚಣಿ ನಿಲ್ಲಿಸಲಾಯಿತು.
ಬಂಧನಕ್ಕೊಳಗಾಗಿದ್ದ ಇನ್ನೊಬ್ಬ ಸಚಿವರಿಂದ ನಾನು ಉಪಕೃತನಾಗಿದ್ದೆ. ಬಂಧನಕ್ಕೊಳಗಾದ ಮೇಲೆ ಅವರು ಯಾವಾಗಲೂ ಒಂದಲ್ಲ ಒಂದು ಅನಾರೋಗ್ಯದ ತೊಂದರೆಯಿಂದಾಗಿ ಯಾವಾಗಲೂ ಸೀತಾರಾಮ್‌ ಗೋಯೆಲ್‌ ಆಸ್ಪತ್ರೆಯಲ್ಲೇ ಇರುತ್ತಿದ್ದರು. ಅವರನ್ನು ಆಸ್ಪತ್ರೆಯಲ್ಲೇ ಭೇಟಿ ಮಾಡಿದೆ. ಅವರಿಗೆ ಪ್ರತ್ಯೇಕ ಬ್ಲಾಕ್‌ನಲ್ಲಿ ವಿಶೇಷ ವಸತಿ ಒದಗಿಸಲಾಗಿತ್ತು. ವಸತಿಯು ಏಳನೇ ನಕ್ಷತ್ರ ಹೋಟಲಿನಂತೆ ಇತ್ತು. ನಿಜ ಹೇಳಬೇಕೆಂದರೆ, ಸಚಿವರ ಖಾಸಗಿ ಬಂಗಲೆಗಿಂತ ಮಜಬೂತಾಗಿತ್ತು. ಈ ಸಚಿವರ ನಂತರ ಬಂಧನಕ್ಕೊಳಗಾದ ಎಲ್ಲ ಸಚಿವರು, ಅಧಿಕಾರಿಗಳು ಜಾಮೀನು ಸಿಗುವ ತನಕ ಇಲ್ಲ ಮೊದಲನೆ ಹಂತದ ನ್ಯಾಯಾಂಗ ಶಿಕ್ಷೆ ವಿಧಿಸುವ ತನಕ “ನಾವೆಲ್ಲ ಸೀತಾರಾಮ್‌ ಗೋಯಲ್‌ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತೇವೆ” ಎಂದು ವಾದಿಸುತ್ತಿದ್ದರು.
ಆಡಿಟ್‌ ಕೆಲಸಗಳಿಗೆ ಹೋಗಲು ಅಧಿಕಾರಿಗಳು, ಸಿಬ್ಬಂದಿಗಳೇ ಸಿಗುತ್ತಿರಲಿಲ್ಲ. ಇದರಿಂದ ಕೆರಳಿದ, ರೋಸಿಹೋದ ಮೇಲಧಿಕಾರಿಗಳು, ಎಲ್ಲ ಇಲಾಖೆಗಳ ಆಡಿಟ್‌ಗೆ ಎಲ್ಲರೂ ಹೋಗುವಂತಹ ಒಂದು ಆಂತರಿಕ ಮೀಸಲಾತಿ ರೋಸ್ಟರ್‌ ಪದ್ಧತಿಯನ್ನು ಜಾರಿಗೆ ತಂದರು. ನನ್ನ ದುರಾದೃಷ್ಟಕ್ಕೆ ನಾನೇ ರೋಸ್ಟರ್‌ ಪದ್ಧತಿಗೆ ಮೊದಲ ವರ್ಷದಲ್ಲೇ ಬಲಿಯಾಗಿ, ಕೇಂದ್ರ ಬಂದೀಖಾನೆಯ ಆಡಿಟ್‌ಗೆ ಹೋಗಬೇಕಾಯಿತು. ಮೇಲಧಿಕಾರಿಗಳಿಗೂ, ಸಹೋದ್ಯೋಗಿಗಳಿಗೂ ನಾನು ಹೇಳದೆ ಹೋದ ಒಂದು ಗುಟ್ಟನ್ನು ಓದುಗರಲ್ಲಿ ಹಂಚಿಕೊಳ್ಳುವುದಾದರೆ, ಈ ರೀತಿಯ ವರ್ಗಾವಣೆಯಿಂದ ನನ್ನ ಬರವಣಿಗೆಗೆ ಸಾಕಷ್ಟು ಅನುಕೂಲವೇ ಆಯಿತು.
ನಿಜ ಹೇಳಬೇಕೆಂದರೆ, ಈ ಇಲಾಖೆ ಕೂಡ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇತರ ಎಲ್ಲ ಇಲಾಖೆಗಳಂತೆಯೇ ಇತ್ತು. ಸಾರ್ವಜನಿಕರ ಹಣ ಅಂದರೆ ಎಲ್ಲರ ಹಣ. ಆದ್ದರಿಂದ ಯಾರೂ (ನಾವೂ/ನಾನೂ ಸೇರಿದಂತೆ) ಜವಾಬ್ದಾರರಲ್ಲ. ನಾಗರಿಕರಾಗಿ ನಾವು ಸರ್ಕಾರದಿಂದ ಯಾವಾಗಲೂ “ಪಡೆಯಬೇಕು”, “ಪಡೆಯುತ್ತಿರಬೇಕು”; ನಮ್ಮ ಕಡೆಯಿಂದ ಕೊಡುವಂಥದ್ದು ಏನೂ ಇಲ್ಲ ಎಂಬ ಧೋರಣೆ. ಈ ಧೋರಣೆಯನ್ನು ಸಮರ್ಥಿಸಿಕೊಳ್ಳಲು ನಾನಾ ಕಲ್ಪಿತ ಕಾರಣಗಳು ಎಲ್ಲರಲ್ಲೂ ಇದ್ದವು. ಎಲ್ಲ ವೆಚ್ಚವೂ ಅಗತ್ಯವಿರುವುದಿಲ್ಲ. ಎಷ್ಟೋ ವೆಚ್ಚಗಳಿಗೆ ರಶೀದಿ, ದಾಖಲೆಗಳೇ ಇರುವುದಿಲ್ಲ. ಆದೇಶ, ಹುಕುಂಗಳಿಲ್ಲದೆ ವೆಚ್ಚ ಮಾಡಿರುತ್ತಾರೆ. ಏನಾದರೂ ವಿವರಣೆ ಕೇಳಿದರೆ, ಎಲ್ಲ ಕಡೆಯೂ ಉತ್ತರ ಕೊಡುವಂತೆ ಇಲ್ಲೂ ಒಣವಿವರಣೆ, ಸಮಾಧಾನ, ಮುಂದೆ ಹೀಗಾಗುವುದಿಲ್ಲವೆಂಬ ಭರವಸೆ, ಹೀಗೆ ಎಲ್ಲ ಪಟ್ಟುಗಳೂ ಈ ಇಲಾಖೆಯಲ್ಲೂ ಇತ್ತು. ಎಲ್ಲರಿಗೂ ಒಪ್ಪಿಗೆ ಆಗುವಂತಹ ಆಡಿಟ್‌ ತನಿಖಾ ವರದಿ ಸಲ್ಲಿಸಿ, ಎಲ್ಲವೂ ಸುಖಾಂತವಾಗಿ ಮುಗಿಯುತ್ತಿತ್ತು.
ಇದೆಲ್ಲವನ್ನೂ ಮೀರಿ, ಎಲ್ಲ ಒಳಸುಳಿಗಳನ್ನೂ ದಾಟಿ, ಕೇಂದ್ರ ಬಂದೀಖಾನೆಯಲ್ಲಿ ಒಂದು ಇಂದ್ರಭವನ ನಿರ್ಮಿಸಿದ್ದರು. ಇಂದ್ರಭವನವೆಂದರೆ ಬೇರೇನೂ ಅಲ್ಲ, ಗಣ್ಯಾತಿಗಣ್ಯರು, ಲೋಕಪ್ರಸಿದ್ಧರು ಬಂಧನಕ್ಕೊಳಗಾದಾಗ, ಬಂಧನಕ್ಕೊಳಗಾಗುತ್ತಲೇ ಇರುವಾಗ, ಜಾಮೀನು ಸಿಗುವ ತನಕ ಯಾವುದೇ ಆತಂಕ, ತಳಮಳವಿಲ್ಲದೆ ವಾಸಿಸಲು ಬೇಕಾದ ಕೋಣೆಗಳು, ವಿಲ್ಲಾಗಳು ಇರುವ ಒಂದು ಭಾಗ. ಅಪಾರ್ಟ್‌ಮೆಂಟುಗಳಲ್ಲಿರುವಂತೆ, ಒಂದು ಕೋಣೆ, ಎರಡು ಕೋಣೆಗಳು, ಮೂರು ಕೋಣೆಗಳ ಫ್ಲಾಟ್‌. ಹೆಚ್ಚಿನ ಕೋಣೆಗಳಿಗೆ ಪ್ರತ್ಯೇಕವಾದ ಶೌಚಾಲಯ, ಸ್ನಾನದ ಮನೆ, ಇದ್ದೇ ಇದ್ದವು. ಕಸ, ಧೂಳು ಸಂಗ್ರಹವಾಗದಂತೆ ನೆಲದ ಹಾಸಿಗೆ ನುಣುಪುಗಲ್ಲು, ಅಡುಗೆ ಮನೆಯಲ್ಲಿ ಈಚಿನ ಮಾದರಿಯ ಫ್ರಿಜ್‌, ಓವೆನ್‌, ಗ್ರೈಂಡರ್‌, ಹಾಂಕಾಂಗ್‌ ಕಂಪನಿಯ ಪಿಂಗಾಣಿ ಬಟ್ಟಲುಗಳು, ಹಾಸಿಗೆ ಹೆಸರಿನಲ್ಲಿ ಸುಪ್ಪತ್ತಿಗೆ, ಹೀಗೆ ಒಂದೇ ಎರಡೇ. ಇದನ್ನೆಲ್ಲ ನೋಡುತ್ತಿದ್ದ ನನಗೇ ಎಷ್ಟು ಆಸೆಯಾಗುತ್ತಿದ್ದೆಂದರೆ, ಇದೆಲ್ಲವನ್ನೂ ಯಾವ ಕಂಪನಿ ತಯಾರಿಸಿದ್ದು, ಎಲ್ಲಿ ಸೋವಿಯಾಗಿ ಸಿಗುತ್ತದೆ ಎಂಬ ವಿವರಗಳನ್ನು ಸೂಕ್ಷ್ಮವಾಗಿ ಸಂಗ್ರಹಿಸುತ್ತಿದ್ದೆ. ನನಗೆ ತುಂಬಾ ಇಷ್ಟವಾದುದ್ದೆಂದರೆ, ಆಗಮ ಶಾಸ್ತ್ರದ ನಿಯಮಗಳಿಗನುಗುಣವಾಗಿ ನಿರ್ಮಿಸಲಾದ ದೇವರ ಮನೆ. ದೇವರ ಪಟಗಳ ಜೊತೆಗೆ ಪವಿತ್ರ ಗ್ರಂಥಗಳ ಓದಿಗೆ ಅನುಕೂಲವಾಗಲೆಂದು ವ್ಯಾಸಪೀಠದ ವ್ಯವಸ್ಥೆಯೂ ಇತ್ತು. ಇಳಿಬಿಟ್ಟ ಹಿತ್ತಾಳೆ ನಂದಾದೀಪವಂತೂ ನೋಡುವವರ ಕಣ್ಣಿಗೆ ಹಬ್ಬ. ರಾಮಾಯಣ, ಮಹಾಭಾರತ, ಭಾಗವತಗಳ ಕ್ಯಾಲಿಕೋ ಪ್ರತಿಗಳ ಸೆಟ್ಟನ್ನೂ ದಿವಾನ್‌ಖಾನೆಯಲ್ಲಿ ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು.

ಇಂದ್ರಭವನದ ಎಲ್ಲ ಕೋಣೆಗಳನ್ನು, ವಿಲ್ಲಾಗಳನ್ನು ಒಳಗೆ ಹೋಗಿ ಕೂಲಂಕುಷವಾಗಿ ನೋಡಲು ನನಗೆ ಸಾಧ್ಯವಾಗಲಿಲ್ಲ. ಎಲ್ಲವೂ ಭರ್ತಿಯಾಗಿದ್ದವು. ಖಾಲಿಯಾದ ತಕ್ಷಣ ಹೊಸಬರು ಯಾರಾದರೂ ತಕ್ಷಣ ಬಂದು ಹಿಡಿದುಕೊಂಡುಬಿಡುತ್ತಿದ್ದರು. ಸಚಿವರು, ನಾಯಕರು, ಪದಾಧಿಕಾರಿಗಳು, ಕುಲಾಧಿಪತಿಗಳು, ಗುತ್ತಿಗೆದಾರರು, ಅಭಿಯಂತರರು, ಒಬ್ಬರ ಮೇಲೆ ಒಬ್ಬರು, ಒಬ್ಬರ ಹಿಂದೆ ಒಬ್ಬರು. ಪಿಸುಮಾತುಗಳಲ್ಲಿ ಕೇಳಿಸಿದ ಪ್ರಕಾರ, ನ್ಯಾಯಾಲವು ಜಾಮೀನು ಆದೇಶವನ್ನು ನೀಡುವಾಗ, ರದ್ದುಪಡಿಸುವಾಗ, ಇಂದ್ರಭವನದಲ್ಲಿ ಯಾವ ರೀತಿಯ, ಯಾವ ಸ್ತರದ ಮನೆಗಳು, ವಿಲ್ಲಾಗಳು ಯಾವಾಗ ಖಾಲಿಯಾಗುತ್ತವೆ ಎಂಬುದನ್ನು ಅನೌಪಚಾರಿಕವಾಗಿ ವಿಚಾರಿಸಿಯೇ ಮುಂದಿನ ಆದೇಶ ನೀಡುತ್ತಿತ್ತಂತೆ. ಈ ಇಂದ್ರಭವನದ ನಿವಾಸಿಗಳಲ್ಲಿ ವಿದೇಶೀಯರು, ಬೇರೆ ರಾಜ್ಯಗಳವರು ಇದ್ದರು ಎಂಬುದೂ ಒಂದು ವಿಶೇಷ. ಇವರೆಲ್ಲ ಮಾಡಿದ ಅಪರಾಧ, ಪಾಪ-ಪುಣ್ಯವೆಲ್ಲ ಕರುನಾಡಿನ ಕಾನೂನು ವ್ಯಾಪ್ತಿಯಲ್ಲಿ ಬರದೇ ಹೋದರೂ, ಬಂಧನದ ಸಮಯದಲ್ಲಿ ಕರುನಾಡಿನಲ್ಲಿ ಸಿಕ್ಕಿಹಾಕಿಕೊಂಡರೆ, ಇಂದ್ರಭವನದ ಮೊಕ್ಕಾಂ ಗ್ಯಾರಂಟಿ ಎಂಬುದು ಈ ವಿದ್ಯಮಾನಕ್ಕೆ ಕಾರಣವಾಗಿತ್ತು.

ನನ್ನ ದುರಾದೃಷ್ಟಕ್ಕೆ ನಾನೇ ರೋಸ್ಟರ್‌ ಪದ್ಧತಿಗೆ ಮೊದಲ ವರ್ಷದಲ್ಲೇ ಬಲಿಯಾಗಿ, ಕೇಂದ್ರ ಬಂದೀಖಾನೆಯ ಆಡಿಟ್‌ಗೆ ಹೋಗಬೇಕಾಯಿತು. ಮೇಲಧಿಕಾರಿಗಳಿಗೂ, ಸಹೋದ್ಯೋಗಿಗಳಿಗೂ ನಾನು ಹೇಳದೆ ಹೋದ ಒಂದು ಗುಟ್ಟನ್ನು ಓದುಗರಲ್ಲಿ ಹಂಚಿಕೊಳ್ಳುವುದಾದರೆ, ಈ ರೀತಿಯ ವರ್ಗಾವಣೆಯಿಂದ ನನ್ನ ಬರವಣಿಗೆಗೆ ಸಾಕಷ್ಟು ಅನುಕೂಲವೇ ಆಯಿತು.

ನನ್ನ ಗಮನ ಸೆಳೆದ ಇನ್ನೊಂದು ವ್ಯವಸ್ಥೆಯೆಂದರೆ, ಸುಸಜ್ಜಿತವಾದ ಪ್ರಶಾಂತ ಪ್ರಾರ್ಥನಾ ಮಂದಿರ. ನಾಲ್ಕೂ ಕಡೆಯ ಗೋಡೆಗಳಲ್ಲಿ ದಶಾವತಾರ, ಬುದ್ಧ ನಿರ್ವಾಣ, ವಿಶ್ವರೂಪ ದರ್ಶನ, ಗೊಮ್ಮಟೇಶ್ವರ, ಕೈಲಾಸ ಪರ್ವತ, ಇದರ ದೃಶ್ಯಗಳ ಪಟಗಳು. ಪ್ರತಿದಿನದ ಪ್ರಾತಃಕಾಲ, ಇಳಿಸಂಜೆಯ ಸಮೂಹ ಪ್ರಾರ್ಥನೆಯಲ್ಲದೆ, ವಾರಾಂತ್ಯಗಳಲ್ಲಿ ಗಣ್ಯ ಧಾರ್ಮಿಕ ಗುರುಗಳು, ಮಠಾಧೀಶರು, ಕವಿ-ಕಲಾವಿದರು ಕೂಡ ಬಂದು ಉಪನ್ಯಾಸ ನೀಡುತ್ತಿದ್ದರು. ಮತಾಚಾರ್ಯರ, ಜಗದ್ಗುರುಗಳ ವರ್ಧಂತಿ ಉತ್ಸವವನ್ನು ಕೂಡ ಆಚರಿಸುತ್ತಿದ್ದರು. ಒಳ್ಳೆಯ ಭದ್ರತಾ ವ್ಯವಸ್ಥೆ, ಹೋಗಿ ಬರುವ ಸಿಬ್ಬಂದಿ, ಆಯಾಗಳು, ಸ್ವಯಂಸೇವಕರು, ಇವರ ಶುಭ್ರ ಶ್ವೇತವಸ್ತ್ರ ಧಾರಣೆಯನ್ನು ಗಮನಿಸುತ್ತಾ ನಾಗರಿಕ ಪ್ರಪಂಚದ ದೇವಾಲಯ, ಮತಾಲಯಗಳಲ್ಲಿ ಕೆಲಸ ಮಾಡುವ ಅರ್ಚಕರ, ಸ್ವಯಂಸೇವಕರ ಮುಖಗಳಲ್ಲಿ ಏಕೆ ಈ ರೀತಿ ಸದಾ ಪ್ರಶಾಂತ ಕಳೆ ಚಿಮ್ಮುತ್ತಿರುವುದಿಲ್ಲ ಎಂದು ನನಗೆ ಸೋಜಿಗವಾಯಿತು. ಆದರೆ ಇಂತಹ ವೈಭವೋಪೇತ ನಿರ್ಮಾಣಕ್ಕೆ ಸಂಬಂಧಪಟ್ಟ ಯಾವ ದಾಖಲೆಗಳೂ ಇರಲಿಲ್ಲ. ಯಾವಾಗ ನಿರ್ಮಾಣವಾಯಿತು ಎಂಬ ಇತಿಹಾಸ ಕೂಡ ಯಾರಿಗೂ ಗೊತ್ತಿರಲಿಲ್ಲ. ಮತ್ತೆ ಮತ್ತೆ ಕೇಳಲಾಗಿ, ಇಲಾಖಾ ವರಿಷ್ಠರೇ ನನ್ನನ್ನು ಖುದ್ದಾಗಿ ಕಂಡು ಮಾತನಾಡುವುದಾಗಿ ತಿಳಿಸಿದರು. ನನ್ನೊಬ್ಬನನ್ನೇ ಅವರ ಮನೆಗೆ ರಾತ್ರಿಯ ಊಟಕ್ಕೆ ಆಹ್ವಾನಿಸಿದರು. ಪಕ್ಕದಲ್ಲೇ ಕೂರಿಸಿಕೊಂಡು ಇನ್ನಿಲ್ಲದ ಅನುನಯದಿಂದ ಜ್ಞಾನ ಬೋಧನೆ ಮಾಡಿದರು.

ನಿಮ್ಮ ಕುತೂಹಲ, ಪ್ರಶ್ನೆ, ಅನುಮಾನ ಎಲ್ಲ ಸರಿಯಿದೆ. ಆದರೆ, ಬದಲಾಗುತ್ತಿರುವ ಕಾಲ, ಸಮಾಜ, ಮನುಷ್ಯರನ್ನು ಕೂಡ ನೀವು ಅರ್ಥ ಮಾಡಿಕೊಳ್ಳಬೇಕು. ಈಗ ಜೈಲು, ಆಪಾದನೆ, ತನಿಖೆ, ಆಯೋಗ, ಜಾಮೀನು, ದಾಳಿ, ವಿಚಾರಣೆ, ಎಲ್ಲವೂ ಸರ್ವೇಸಾಮಾನ್ಯವಾಗಿದೆ. ಎಲ್ಲ ಪಕ್ಷದವರೂ, ಎಲ್ಲ ಇಲಾಖೆಗಳವರೂ ಇದರಲ್ಲಿ ಭಾಗಿಗಳು, ಫಲಾನುಭವಿಗಳು. ನೀವೇ ಪತ್ರಿಕೆಗಳಲ್ಲಿ ಪ್ರತಿದಿನ ಓದುತ್ತಿರುತ್ತೀರಿ, ಪ್ರತಿ ತಿಂಗಳು, ಪ್ರತಿ ವಾರ, ವಾಯಿದೆಗಿಂತಲೂ ನಿಗದಿಯಾಗಿ ಲೋಕಾಯುಕ್ತರ, ಆದಾಯ ತೆರಿಗೆ ಇಲಾಖೆಯವರ ದಾಳಿ ನಡೆಯುತ್ತಲೇ ಇರುತ್ತದೆ. ಒಬ್ಬರೇ ಒಬ್ಬರ ವಿಷಯದಲ್ಲೂ ಈ ದಾಳಿಗೆ, ತನಿಖೆಗೆ ಇವರು ಅನರ್ಹರು ಎಂದು ನಾವು ಹೇಳಬಹುದೇ? ಯಾವ ದಾಳಿಯೂ ವಿಫಲವಾಗಲ್ಲ. ನಗದು, ಚಿನ್ನ, ಬೆಳ್ಳೆ, ವಜ್ರ, ಕ್ರಯಪತ್ತ, ಈ ವಾರಕ್ಕಿಂತ ಮುಂದಿನ ವಾರ ಹೆಚ್ಚಾಗಿಯೇ ಸಿಗುತ್ತದೆ. ಇವರೆಲ್ಲರೂ ವಾಸಿಸುವ ಬಂಗಲೆಗಳ ವಾಸ್ತು ವಿನ್ಯಾಸ ನೋಡಿ ವಿದೇಶ ವಾಸ್ತು ಪರಿಣತರು ಕೂಡ ದಂಗುಬಡಿದು ಹೋಗಿದ್ದಾರೆ. ಮುಖ್ಯಮಂತ್ರಿಗಳಾಗಿದ್ದವರು, ಆಗಬಲ್ಲವರು, ಸಕಲ ಪಕ್ಷಗಳ ಸಕಲ ಧುರೀಣರು, ಆಯುಕ್ತರು, ಗುತ್ತಿಗೆದಾರರು, ಅಭಿಯಂತರರು, ಎಲ್ಲರೂ ಒಂದಲ್ಲ ಒಂದು ಸಂದರ್ಭದಲ್ಲಿ ಬಂದು ಈ ವಿಲ್ಲಾಗಳಲ್ಲಿ, ಕೋಣೆಗಳಲ್ಲಿ ಇದ್ದು ಹೋಗಿದ್ದಾರೆ. ಇಲ್ಲಿರುವ ವ್ಯವಸ್ಥೆ, ಅನುಕೂಲ ಕಂಡು ಸಂತಸ ವ್ಯಕ್ತಪಡಿಸಿದ್ದಾರೆ. ಇಲ್ಲಿಂದ ಹೋದ ಮೇಲೆ ಕೃತಜ್ಞತಾರೂಪವಾಗಿ ದೇಣಿಗೆ ಕೊಡುತ್ತಾರೆ. ನಾನಾ ರೀತಿಯ ಅನುಕೂಲ ಮಾಡಿಕೊಡುತ್ತಾರೆ. ಹಾಗಾಗಿ, ಇದೆಲ್ಲ ಇಲ್ಲಿ ಸುಸಜ್ಜಿತವಾಗಿದೆ. ಇಲಾಖೆಯ ಬಾಬ್ತು ಕೂಡ ಬೇರೆ ಬೇರೆ ರೂಪದಲ್ಲಿ ಇದೆಲ್ಲದರ ನಿರ್ಮಾಣಕ್ಕೆ ಹೋಗುತ್ತೆ ಅನ್ನುವುದನ್ನು ನಾನೇನೂ ಅಲ್ಲಗೆಳೆಯುವುದಿಲ್ಲ.
ಇದನ್ನೆಲ್ಲ ನಾವು ಯಾವ ಬಾಬ್ತಿನಲ್ಲಿ ತೋರಿಸಬೇಕು. ಎಲ್ಲಿಂದ ಯಾವ ಹೆಸರಿನಲ್ಲಿ ಅನುದಾನ ಪಡೆಯಬೇಕು ಎಂದು ಚರ್ಚಿಸಲು ಕಲಿಯುಗ ಪ್ರಾರಂಭವಾಗುವ ಮೊದಲನೇ ದಿವಸ ಒಂದು ಗುಟ್ಟಾದ ಸಭೆ ನಡೆಯಿತು. ರಾಜ್ಯಪಾಲರೇ ನಾಯಕತ್ವ ವಹಿಸಿದ್ದರು. ರಾಷ್ಟ್ರೀಯ ಪಕ್ಷಗಳ, ಧಾರ್ಮಿಕ ಸಂಘಟನೆಗಳ, ನಾನಾ ಬಣದ ಚಿಂತಕರ ಪ್ರತಿನಿಧಿಗಳು, ವಣಿಕರು, ಸೇನಾಧಿಕಾರಿಗಳು, ತ್ರಿಮತಸ್ಥರು, ಎಲ್ಲರೂ ಭಾಗವಹಿಸಿದ್ದರು. ಸರ್ವಪಕ್ಷದ ಸಭೆ ಮಾತ್ರವಲ್ಲ, ಸರ್ವಸಮ್ಮತ ಸಭೆಯು ಕೂಡ. ಬಂದೀಖಾನೆ ಇಲಾಖೆಗೆ ಸಿಗುವ ವಾರ್ಷಿಕ ಅನುದಾನದಿಂದ ಒಂದಿಷ್ಟು ಭಾಗವನ್ನು ಇಂದ್ರಭವನದ ನಿರ್ಮಾಣಕ್ಕೆ ಅನಧಿಕೃತವಾಗಿ ಸೂಕ್ಷ್ಮವಾಗಿ ನಾಲ್ಕು ಜನರ ಕಣ್ಣಿಗೆ ಬೀಳದ ಹಾಗೆ ಖರ್ಚು ಮಾಡಬೇಕೆಂದು ಒಪ್ಪಿಗೆ ನೀಡಲಾಯಿತು. ಯಾರನ್ನೂ ಬಲವಂತ ಮಾಡಬಾರದು, ಯಾರಿಂದಲೂ ದಾನ-ದೇಣಿಗೆ, ಉಡುಗೊರೆಗಳನ್ನು ನಿರಾಕರಿಸಬಾರದು, ದೇಶೀ ಮೂಲ, ವಿದೇಶೀ ಮೂಲ, ನಗದು ಉಡುಗೊರೆ, ವಸ್ತು ಉಡುಗೊರೆ ಎಂದು ಪಂಕ್ತಿಬೇಧ, ಪಕ್ಷಬೇಧ ಮಾಡಬಾರದು. ಇದನ್ನೆಲ್ಲ ಅನ್ಯಥಾ ಭಾವಿಸಬೇಡಿ. ಈ ಅನುಕೂಲದ ಫಲಾನುಭವಿಗಳಲ್ಲಿ ಎಲ್ಲ ಪಕ್ಷದವರೂ, ಎಲ್ಲ ಧರ್ಮದವರೂ, ಎಲ್ಲ ಜಾತಿ-ವರ್ಗದವರೂ ಇದ್ದಾರೆ. ಮಾಧ್ಯಮದಲ್ಲಾಗಲೀ, ಶಾಸನ ಸಭೆಗಳಲ್ಲಾಗಲೀ, ಸಾಹಿತ್ಯ ಶಿಬಿರಗಳಲ್ಲಾಗಲೀ ಯಾರೂ ಇದರ ಬಗ್ಗೆ ಚಕಾರವೆತ್ತುವುದಿರಲಿ, ಪ್ರಸ್ತಾಪ ಕೂಡ ಮಾಡುವುದಿಲ್ಲ. ಹೀಗೆ ಎಲ್ಲರೂ ಒಪ್ಪುವಂತಹ, ಎಲ್ಲರೂ ಬಳಸುವಂತಹ ಒಂದು ವ್ಯವಸ್ಥೆ, ಒಂದು ಅನುಕೂಲದ ಬಗ್ಗೆ ನೀವೊಬ್ಬರು ಯಾಕೆ ಹೇಗೆ ಖ್ಯಾತೆ ತೆಗೆಯುತ್ತೀರಿ?
ಇಷ್ಟನ್ನು ಸಮಾಧಾನವಾಗಿ, ಆರ್ದ್ರ ಧ್ವನಿಯಲ್ಲಿ ಹೇಳಿದ ವರಿಷ್ಠರು, ನನ್ನ ಕುಟುಂಬದ ಹಿತೈಷಿಯಂತೆ ಕೂಡ ಕಂಡರು. ನನ್ನ ಕುಟುಂಬ, ಆಸ್ತಪಾಸ್ತಿಯ ವಿವರ, ಮಕ್ಕಳ ಉದ್ಯೋಗ, ವಿದ್ಯಾಭ್ಯಾಸದ ವಿವರಗಳನ್ನು ಕೇಳಿ ನೋಟ್‌ ಬುಕ್‌ನಲ್ಲಿ ಗುರುತು ಮಾಡಿಕೊಂಡರು. ನೀವು ತಲುಪಬೇಕಾದ ಎತ್ತರ, ಕ್ರಮಿಸಬೇಕಾದ ಹಾದಿ ತುಂಬಾ ಇದೆ; ನಿಮಗೆ ಒಳ್ಳೆಯದಾಗಲಿ ಎಂದು ಶುಭ ಕೋರಿದರು.
ನಂತರ ರಾಜರಹಸ್ಯವೊಂದನ್ನು ತೋರಿಸುವಂತೆ, “ನೋಡಿ, ಇದುವರೆಗೆ ಇಲ್ಲಿ ವಾಸಿಸಿರುವವರ ವಿವರಗಳೆಲ್ಲ ಈ ರಿಜಿಸ್ಟರ್‌ನಲ್ಲಿ ದಾಖಲಾಗಿದೆ ಎಂದು ತೋರಿಸಿದರು. ಪುಟ ತಿರುವಿ ಹಾಕಿದರೆ, ಸಮಗ್ರ ಕರುನಾಡಿನ ಸಂಪೂರ್ಣ ದರ್ಶನವಾಯಿತು. ಪರಿವಿಡಿ, ಅಡಿಟಿಪ್ಪಣಿಗಳು ಕೂಡ ಸ್ಪಷ್ಟವಾಗಿದ್ದವು. ನಟರ, ಸಂಗೀತಗಾರರ ಹೆಸರುಗಳು ಕೂಡ ಇತ್ತು. ನನ್ನ ಮುಖದಲ್ಲಿ ಮೂಡಿದ ಆಶ್ಚರ್ಯಭಾವದಿಂದ ಚಕಿತರಾದ ಅವರು, “ಇವರೆಲ್ಲ ಫಲಾನುಭವಿಗಳಲ್ಲ. ಆದರೆ ಇಲ್ಲಿ ವಾಸಮಾಡುವ ಗಣ್ಯರಿಗೆ ಮನರಂಜನೆ ನೀಡಲು ಆಗಾಗ್ಗೆ ಬಂದು ಇಲ್ಲಿ ಉಳಿಯುತ್ತಾರೆ ಅಷ್ಟೇ. ಇದರಿಂದ ಎರಡು ರೀತಿಯ ಲಾಭ, ಗಣ್ಯರಿಗೆ ಮನರಂಜನೆ, ಮನಸ್ಸಿಗೆ ಆಹ್ಲಾದ. ಕಲಾವಿದರಿಗೂ ಒಳ್ಳೆಯ Network ಬೆಳೆಯುತ್ತದೆ. ಮುಂದೆ ಒಳ್ಳೆ ಕಾರ್ಯಕ್ರಮಗಳು, ಉನ್ನತ ಸಂಭಾವನೆ ಸಿಗುತ್ತದೆ” ಎಂದು ಹೇಳಿದರು.
ಈ ಸನ್ನಿವೇಶ, ಸಂಭಾಷಣೆ, ಸಮಾಧಾನ ಎಲ್ಲವನ್ನೂ ನನ್ನ ಅಂತಿಮ ಆಡಿಟ್‌ ವರದಿಯಲ್ಲಿ ನಿರೂಪಿಸುವುದು ಹೇಗೆ? ನಾನು ಗಲಿಬಿಲಿಗೊಂಡು ನಂತರ ಹೇಳಿದೆ:

“ನೋಡಿ ಸರ್‌, ಇದೆಲ್ಲ, ಇಷ್ಟೆಲ್ಲ ಸರ್ವಸಮ್ಮತಿಯಿಂದ ನಡೆಯುತ್ತಿದೆ ಎಂದು, All Party Government, National Government ತರಹ ಶಿಕ್ಷಣ, ಆರೋಗ್ಯ, ವಸತಿ, ಸಾರಿಗೆ ಇಂತಹ ಸಣ್ಣಪುಟ್ಟ ಸಂಗತಿಗಳ ಬಗ್ಗೆಯೂ ಇಷ್ಟೇ ಸರ್ವಾನುಮತದ ಸಂಕಲ್ಪ, ಇಷ್ಟೇ ಕಾಳಜಿಯನ್ನು ಎಲ್ಲರೂ ತೋರಿದರೆ, ಎಷ್ಟು ಚೆನ್ನಾಗಿರುತ್ತದಲ್ಲವೇ?”

ವರಿಷ್ಠಾಧಿಕಾರಿಗಳು ಸಂಭಾವಿತರು. ನನ್ನ ಪ್ರಶ್ನೆಯನ್ನೇನು ವ್ಯಂಗ್ಯವಾಗಿ ತೆಗೆದುಕೊಳ್ಳಲಿಲ್ಲ. ಇನ್ನೂ ಸಮಾಧಾನಚಿತ್ತರಾಗಿಯೇ ಹೇಳಿದರು:
“ಇದನ್ನೆಲ್ಲ ದಿನವೂ ನೋಡುಕೊಳ್ಳುತ್ತಿರುವ ನನಗೂ ಹಾಗೇ ಅನಿಸಿದೆ. ಮುಂದೊಂದು ಕಾಲದಲ್ಲಿ ಅಂತಹ ಸಂದರ್ಭವೂ ಬರಬಹುದು. ಆದರೆ ಅದೆಲ್ಲ ನಮ್ಮ ಜೀವಮಾನದಲ್ಲಿ ಆಗುತ್ತದೆ ಅನ್ನುವ ಭರವಸೆ ಇಟ್ಟುಕೊಳ್ಳಬಾರದು. ಸದ್ಯಕ್ಕೆ ಹೀಗೇ ನಡೆದುಕೊಂಡು ಹೋಗುತ್ತದೆ.”