ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಮನೆಯಿಂದ ನಡಿಗೆಯಲ್ಲಿ ಇಡೀ ಊರಿನ ಮಕ್ಕಳು ಶಾಲೆ ತಲುಪುತ್ತಿದ್ದೆವು. ರಸ್ತೆಯಲ್ಲಿ ಗುರುಗಳು ಎದುರಾದರೆ ತಲೆ ತಗ್ಗಿಸಿ ‘ನಮಸ್ತೆ’ ಹೇಳದೆ ಅವರನ್ನು ಯಾವ ಮಕ್ಕಳೂ ಹಾದುಹೋಗುತ್ತಲೇ ಇರಲಿಲ್ಲ. ಗುರುಗಳ ಬಗ್ಗೆ ಗೌರವ ಭಯಗಳ ಜೊತೆಗೆ ನಮ್ಮ ಗುರುಗಳು ನಮ್ಮೊಡನೆಯೇ ಬದುಕುತ್ತಿದ್ದರೆನೋ ಅನಿಸುವ ಅನುಭವಗಳೂ ಶಾಲೆಯಲ್ಲಿ ಆಗುತ್ತಿದ್ದವು. ಗುರುಗಳು ವಿದ್ಯಾರ್ಥಿಗಳೊಡನೆ ಭುಜ ತಾಗಿಸಿಕೊಂಡು ಶಾಲೆಯ ವಟಾರದ ಕಸ ಹೆಕ್ಕುವುದು, ಹೊಸತಾಗಿ ಕಟ್ಟಿದ ಶಾಲೆಯ ಆವರಣದ ಗೋಡೆಗೆ ನೀರು ಹಾಕುವುದು, ನಮ್ಮೊಡನೆ ಆಟ ಆಡುವುದು, ಕುಣಿಯುವುದು ಮಾಡುತ್ತಿದ್ದರು.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್.

 

ಅಧ್ಯಾಪನ ವೃತ್ತಿಯ ಜೊತೆಗೆ ಆತ್ಮೀಯ ಆಪ್ತ ಸಂಬಂಧ ಇಟ್ಟುಕೊಂಡವರಲ್ಲಿ ನಾನೂ ಒಬ್ಬ; ನನಗೂ ಅದಕ್ಕೂ ಹೆತ್ತವರಿಗೂ -ಮಕ್ಕಳಿಗೂ ಅಥವಾ ಅಜ್ಜ – ಮೊಮ್ಮಕ್ಕಳಿಗೂ ಇರುವ ಸಂಬಂಧ ಎನ್ನಬಹುದು. ನನ್ನ ತಂದೆ ಮತ್ತು ತಾಯಿ ಹೈಸ್ಕೂಲು, ಕಾಲೇಜುಗಳಲ್ಲಿ ಪಾಠ ಹೇಳಿದವರು. ತಂದೆ-ತಾಯಿಯರ ಹಿಂದಿನ ತಲೆಮಾರುಗಳು ಕೂಡ ಅಧ್ಯಾಪನ ವೃತ್ತಿಯಲ್ಲಿದ್ದವರು. ಅಜ್ಜ, ನನ್ನ ತಂದೆ ತಾಯಿಯರಿಗೆ ಗುರುಗಳಾಗಿದ್ದರು. ಇವರೆಲ್ಲ ಸೇರಿ ಎಷ್ಟು ಜನರಿಗೆ ಕಲಿಸಿದ್ದರೆಂದರೆ, ಕುಂದಾಪುರ ಉಡುಪಿಯ ಪರಿಸರದಲ್ಲಿ ಸಿಗುವ ಹೆಚ್ಚಿನ ವ್ಯಕ್ತಿಗಳು ಒಂದು ಕಾಲದಲ್ಲಿ ಇವರಿಂದ ಪಾಠ ಹೇಳಿಸಿಕೊಂಡವರೇ ಆಗಿದ್ದರು.

“ಗುರುಗಳ ಮಗ” ಎನ್ನುವುದೇ ಈಗಲೂ ಹಲವು ಕಡೆಗಳಲ್ಲಿ ನನ್ನ ಗುರುತು. ತಮ್ಮ ಗುರುಗಳ ಮಗ ಎನಿಸಿಕೊಂಡದ್ದರಿಂದ ಕಾಲೇಜು ದಿನಗಳಲ್ಲಿ ಸಹಪಾಠಿಗಳು ನನ್ನೊಡನೆ ಬೆರೆಯುವ ರೀತಿ ಸ್ವಲ್ಪ ಭಿನ್ನ ಆಗಿರುತ್ತಿತ್ತು. ಕೆಲವರಿಂದ ಪ್ರೀತಿಯನ್ನೂ, ಕೆಲವರಿಂದ ಅಸಹನೆಯನ್ನೂ ನಾನು ಅನಾಯಾಸವಾಗಿ ಪಡೆಯುತ್ತಿದ್ದೆ, ಮತ್ತೆ ಕೆಲವರಿಗೆ ನನ್ನ ಬಗ್ಗೆ ಭಯ ಮತ್ತು ನಿರೀಕ್ಷೆಗಳು ಇರುತ್ತಿದ್ದವು . ಯಾರೋ ತಮ್ಮ ಗುರುಗಳ ಬಗ್ಗೆ ಆಡುವ ಹಿತನುಡಿಗಳು ಇಲ್ಲದಿದ್ದರೆ ಚುಚ್ಚುಮಾತುಗಳು ಅನಪೇಕ್ಷಿತವಾಗಿ ನನ್ನನ್ನು ನಾಟುತ್ತಿದ್ದವು; ಯಾಕೆಂದರೆ ಶಿಕ್ಷಕರ ವಿಷಯ ಬಂದರೆ ನಾನು “ಶಿಕ್ಷಕರ ಮನೆ”ಯೊಳಗಿನವನು. ಪದವಿಪೂರ್ವ ತರಗತಿಯನ್ನು ಹೊಕ್ಕ ಕಾಲದಲ್ಲಿ ಬಹಳ ವಿದ್ಯಾರ್ಥಿಗಳಿಗೆ ತಮ್ಮ ಗುರುಗಳನ್ನು ‘ಅವನು’, ‘ಅವಳು’ ಎಂದು ಏಕವಚನದಲ್ಲಿ (ಅವರ ಬೆನ್ನ ಹಿಂದೆ ) ಸಂಬೋಧಿಸುವುದು ಒಂದು ಹೆಮ್ಮೆಯ ವಿಷಯವಾಗಿತ್ತು; ಅದು ವಿದ್ಯಾರ್ಥಿ ಬೆಳೆದುದರ, ಆತನ ಆಕೆಯ ಆತ್ಮವಿಶ್ವಾಸ ಧೈರ್ಯದ ಸಂಕೇತವೂ ಆಗಿ ಅಂತಹವರಿಗೆ ತೋರುತ್ತಿತ್ತು. ನನಗೆ ಪರಿಚಯವೇ ಇಲ್ಲದ ಗುರುಗಳ ಬಗ್ಗೆ ಯಾರಾದರು ಹಾಗೆ ಅಂದುದು ಕೂಡ ನನ್ನನ್ನು ಬಹಳ ಕಾಡುತ್ತಿತ್ತು.

ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಮನೆಯಿಂದ ನಡಿಗೆಯಲ್ಲಿ ಇಡೀ ಊರಿನ ಮಕ್ಕಳು ಶಾಲೆ ತಲುಪುತ್ತಿದ್ದೆವು. ರಸ್ತೆಯಲ್ಲಿ ಗುರುಗಳು ಎದುರಾದರೆ ತಲೆ ತಗ್ಗಿಸಿ ‘ನಮಸ್ತೆ’ ಹೇಳದೆ ಅವರನ್ನು ಯಾವ ಮಕ್ಕಳೂ ಹಾದುಹೋಗುತ್ತಲೇ ಇರಲಿಲ್ಲ. ಗುರುಗಳ ಬಗ್ಗೆ ಗೌರವ ಭಯಗಳ ಜೊತೆಗೆ ನಮ್ಮ ಗುರುಗಳು ನಮ್ಮೊಡನೆಯೇ ಬದುಕುತ್ತಿದ್ದರೆನೋ ಅನಿಸುವ ಅನುಭವಗಳೂ ಶಾಲೆಯಲ್ಲಿ ಆಗುತ್ತಿದ್ದವು. ಗುರುಗಳು ವಿದ್ಯಾರ್ಥಿಗಳೊಡನೆ ಭುಜ ತಾಗಿಸಿಕೊಂಡು ಶಾಲೆಯ ವಟಾರದ ಕಸ ಹೆಕ್ಕುವುದು, ಹೊಸತಾಗಿ ಕಟ್ಟಿದ ಶಾಲೆಯ ಆವರಣದ ಗೋಡೆಗೆ ನೀರು ಹಾಕುವುದು, ನಮ್ಮೊಡನೆ ಆಟ ಆಡುವುದು, ಕುಣಿಯುವುದು ಮಾಡುತ್ತಿದ್ದರು.

ಇನ್ನು ಮಕ್ಕಳಲ್ಲಿ ಹೆದರಿಕೆ ಹುಟ್ಟಿಸುತ್ತಿದ್ದ ಅಧ್ಯಾಪಕರೂ ಸುಮಾರು ಜನ ಇದ್ದರು; ಅಂದರೆ ಮಕ್ಕಳಿಗೆ ಪೆಟ್ಟು ಕೊಡುವವರು. ಒಬ್ಬೊಬ್ಬ ಗುರುವಿನ ಪೆಟ್ಟಿನ ರೀತಿ, ಹದ ಒಂದೊಂದು ತರಹ. ವರ್ಷಾನುಗಟ್ಟಲೆ ಅಡಿಗೆ ಮಾಡಿದ ಪರಿಣತಿಯವರು ಒಬ್ಬೊಬ್ಬರು ಒಂದೊಂದು ಬಗೆಯ ರುಚಿಯ ಸಾರು ಮಾಡುವಂತೆ ಮತ್ತು ಒಂದೊಂದು ದಿನ ಅದೇ ಅದೇ ಮಸಾಲೆಯ ಬಳಕೆಯಲ್ಲೇ ಹೊಸ ಹೊಸ ಪರಿಮಳದ ಖಾದ್ಯ ತಯಾರಿಸುವಂತೆ ಆ ಗುರುಗಳ ಪೆಟ್ಟಿನ ರುಚಿಯೂ ಶಬ್ದವೂ…. ಕಿವಿ ಹಿಂಡುವವರು ಕೆಲವರು, ಮರದ ಫುಟ್ ರೋಲ್ ನಿಂದ ಪೆಟ್ಟು ಕೊಟ್ಟು ತುಂಡರಿಸುವ ಶಿಕ್ಷಕರು ಕೆಲವರು, ಬಹಳ ಮುತುವರ್ಜಿಯಲ್ಲಿ ಗಾಳಿಮರದ ಸಪೂರ ಅಡರನ್ನು ಆಯ್ದು ತಂದು “ಸುಯ್ನ್ಯಾಕ್ ಸುಯ್ನ್ಯಾಕ್” ಬೀಸುವವರು, ದೂರದ ದಟ್ಟ ಗಿರಿಕಾನನದಿಂದ ನಾಗರಬೆತ್ತವನ್ನೇ ಹೇಳಿ ತರಿಸುವ ಮಾಷ್ಟ್ರೂ ಆಗ ಇದ್ದರು. ಇದ್ಯಾವುದರ ಅವಲಂಬನೆ ಇಲ್ಲದೆ ಕೈಯ ಬಿಗಿ ಮುಷ್ಟಿಯಲ್ಲಿ ತಲೆಯ ಮೇಲೆ ಮೊಟಕಿ, ಕುಟುಕಿ ಅಥವಾ ಆ ಸಿಟ್ಟಿನ ಕ್ಷಣಕ್ಕೆ ಕೈಗೆ ಸಿಕ್ಕಿದ ವಸ್ತುವನ್ನೇ ಆಯುಧವನ್ನಾಗಿಸಿ ಪ್ರಹಾರಗೈಯುತ್ತಿದ್ದವರೂ ಕೆಲವರು.

ದಿನಾ ಪೆಟ್ಟು ತಿನ್ನುವ ಹವ್ಯಾಸದ ಮಕ್ಕಳು ದೂರದಿಂದ ಯಾರಿಗೋ ಬಿದ್ದ ಪೆಟ್ಟಿನ ಸದ್ದನ್ನು ಕೇಳಿಯೇ ಇದು ಯಾರ ಹಾಗು ಯಾವುದರಿಂದ ಬಿದ್ದ ಪೆಟ್ಟು ಎಂದು ಹೇಳುವಷ್ಟು ನಿಷ್ಣಾತರಿದ್ದರು. ನಾಗರಬೆತ್ತವನ್ನು ಕೈಯಲ್ಲಿ ಹಿಡಿದು ಓಡಾಡುವ ಗುರುಗಳಿಗೆ ಸಾಮಾನ್ಯ ಪೊಲೀಸರೇ ತುಂಬಿರುವ ಊರಿನಲ್ಲಿ ಮಿಲಿಟರಿ ಜವಾನರು ಬಂದೂಕಿನೊಂದಿಗೆ ಬಂದಾಗ ಸಿಗುವ ಭಯತುಂಬಿದ ಗೌರವ ಸಿಗುತ್ತಿತ್ತು. ಪ್ರತಿ ಶಾಲೆ ಕಾಲೇಜುಗಳ ಗೋಡೆ ಮಾಡುಗಳಲ್ಲಿ ಒಂದು ಹದಿನೈದು ಇಪ್ಪತ್ತು ವರ್ಷ ಹಿಂದಿನವರೆಗೂ ಪೆಟ್ಟಿನ ಪ್ರಕರಣಗಳದ್ದೇ ದೊಡ್ಡ ಇತಿಹಾಸ ಸಿಗುತ್ತಿತ್ತು. ಹೀಗೆ ತೀವ್ರ ಶಿಕ್ಷೆ ಒಂದು ಕಾಲದಲ್ಲಿ ಶಿಕ್ಷಣದ ಭಾಗವೇ ಆಗಿದ್ದರೂ ಗುರುಗಳ ಮುಷ್ಠಿಯೊಳಗಿನ ಬೆತ್ತಕ್ಕೆ, ಉರಿ ಹಸ್ತಕ್ಕೆ ಹೆದರದ ಪುಂಡ ಮಕ್ಕಳು ಗುರುಗಳ ವ್ಯಕ್ತಿತ್ವ, ಚಾರಿತ್ಯ್ರಕ್ಕೆ ನಡುಗುತ್ತಿದ್ದರು. ಪೆಟ್ಟು ತಿಂದು ತಿಂದು ಹೊರಚರ್ಮ ಜಡ್ಡುಗಟ್ಟಿದ್ದರೂ ಒಳಮನಸ್ಸಿನ ನವಿರು ಸೂಕ್ಷ್ಮ ಆತ್ಮಸಾಕ್ಷಿ ಸುಳ್ಳು ಹೇಳದ ತಪ್ಪು ನಡೆಯದ ಸರಳ ಉಡುಗೆಯ ಸೇವಾ ಮನೋಭಾವದ ಗುರುಗಳೆಂದರೆ ಗೌರವ ಭಕ್ತಿ ಸೂಚಿಸುತ್ತಿತ್ತು.

ಒಂದೊಂದು ಊರಿನಲ್ಲೂ ಸರಕಾರೀ ಶಾಲೆಯ ಅಧ್ಯಾಪಕರೆಂದರೆ ಸಮಾಜದ ನೈತಿಕ ಎಚ್ಚರಕ್ಕೆ ಭದ್ರ ಕಾವಲುಗಾರರಂತೆ ಇದ್ದರು. ಅಂತಹವರಲ್ಲಿ ಹಲವರು ಪಾಠ ಹೇಳಿಕೊಡುವುದನ್ನೇ ಉದ್ಯೋಗವಾಗಿಸಿಕೊಳ್ಳಬೇಕೆಂಬ ಕನಸು ಕಂಡವರು. ಸೇವೆಯನ್ನೂ ಕರ್ತವ್ಯ ಎಂದು ನಂಬುತ್ತಿದ್ದವರು; ಶಾಲೆಯ ಒಳಗೂ ಹೊರಗೂ ಮನೆಯಲ್ಲೂ ಪೇಟೆಯಲ್ಲೂ ಸೋಮವಾರದ ಶಾಲಾದಿನವೂ ಆದಿತ್ಯವಾರದ ರಜಾದಿನವೂ ಅಂತಹವರು ಗುರುಗಳೇ; ನಿದ್ದೆಯಲ್ಲೂ ಎಚ್ಚರದಲ್ಲೂ…. ನಾಗರ ಹಾವಿನ ‘ಚಾಮಯ್ಯ ಮೇಷ್ಟ್ರ’ನ್ನು ನೆನಪಿಸುವವರು. ಅಲ್ಲ.. ‘ಚಾಮಯ್ಯ ಮೇಷ್ಟ್ರು’ ತರಹದ ಒಂದು ಪಾತ್ರಕ್ಕೆ ಪ್ರೇರಣೆ ಆದವರು.

ದಿನಾ ಪೆಟ್ಟು ತಿನ್ನುವ ಹವ್ಯಾಸದ ಮಕ್ಕಳು ದೂರದಿಂದ ಯಾರಿಗೋ ಬಿದ್ದ ಪೆಟ್ಟಿನ ಸದ್ದನ್ನು ಕೇಳಿಯೇ ಇದು ಯಾರ ಹಾಗು ಯಾವುದರಿಂದ ಬಿದ್ದ ಪೆಟ್ಟು ಎಂದು ಹೇಳುವಷ್ಟು ನಿಷ್ಣಾತರಿದ್ದರು. ನಾಗರಬೆತ್ತವನ್ನು ಕೈಯಲ್ಲಿ ಹಿಡಿದು ಓಡಾಡುವ ಗುರುಗಳಿಗೆ ಸಾಮಾನ್ಯ ಪೊಲೀಸರೇ ತುಂಬಿರುವ ಊರಿನಲ್ಲಿ ಮಿಲಿಟರಿ ಜವಾನರು ಬಂದೂಕಿನೊಂದಿಗೆ ಬಂದಾಗ ಸಿಗುವ ಭಯತುಂಬಿದ ಗೌರವ ಸಿಗುತ್ತಿತ್ತು.

ಪ್ರಾಥಮಿಕ ವಿಧ್ಯಾಭ್ಯಾಸದಿಂದ ಪದವಿಪೂರ್ವ ಕಲಿಕೆಯ ತನಕವೂ ಶಾಲಾ ಆವರಣದ ಹೊರಗಿನ ಬದುಕಿನಲ್ಲೂ ನನಗೆ ಶಾಲೆಯ ಒಳಗಿದ್ದ ಅನುಭವವೇ ಆಗುತ್ತಿತ್ತು. ಶಾಲೆಯ ವೇಳೆಯ ಹೊರಗಿನ ಅವಧಿಯಲ್ಲಿ ನಾವು ಮಾಡುವ “ಸಣ್ಣ ಅಥವಾ ದೊಡ್ಡ ಕೆಲಸಗಳು” ಹೇಗೋ ನಮ್ಮ ಮನೆಯನ್ನು ತಲುಪುತ್ತಿದ್ದವು. ಒಂಭತ್ತೋ ಹತ್ತನೆಯ ತರಗತಿಯಲ್ಲಿರುವಾಗ, ನಾನೊಮ್ಮೆ ಮಳೆಗಾಲದ ಸಾಯಂಕಾಲ ಮರವಂತೆ ಪೇಟೆಯ ಮೈದಾನದಲ್ಲಿ ಫುಟ್ ಬಾಲ್ ಆಡುತ್ತಿದ್ದೆ. ಮೈದಾನದ ತುಂಬಾ ನೀರು ಹರಿಯುತ್ತಿದ್ದುದರಿಂದ ಆಟ ಆಡುವಾಗ ಜಾರಿ ಬಿದ್ದೆ. ನಾನು ಹೇಗೆ ಬಿದ್ದೆ, ಎದ್ದೆ ಎನ್ನುವ ಸುದ್ದಿ ನಾನು ಆಟ ಮುಗಿಸಿ ಮನೆ ಮುಟ್ಟುವ ಮೊದಲೇ ಮನೆ ತಲುಪಿಯಾಗಿತ್ತು. ಹಾಗೆ ಮನೆಗೆ ಸುದ್ದಿ ಕೊಟ್ಟವರು “ಮಾಸ್ಟ್ರ ಮಗನ ಕೈಕಾಲು ಮುರ್ದೆ ಹೋಯ್ತು” ಅಂತ ಅಂದುಕೊಂಡಿದ್ದರಂತೆ. ಸಾಮಾನ್ಯವಾಗಿ ಹಳ್ಳಿಯೊಂದರ ಶಿಕ್ಷಕರ ಮನೆಯಲ್ಲಿ ಬೆಳೆದ ಮಕ್ಕಳು ಮನೆಯ ಮಾತ್ರವಲ್ಲದೆ ಇಡೀ ಊರಿನವರ ವಿಶೇಷ ಕಾವಲಿನಲ್ಲಿ ಕಾಳಜಿಯಲ್ಲಿ ಬೆಳೆಯುತ್ತಿದ್ದರು. ಮುಂದೆ ಇಂಜಿನಿಯರಿಂಗ್ ವ್ಯಾಸಾಂಗ ಮುಗಿಸಿ ನಾನೊಂದು ಖಾಸಗಿ ಕಚೇರಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. ಹಾಗೊಮ್ಮೆ ರಜೆಯಲ್ಲಿ ಮರವಂತೆಯ ಊರಿನ ಮನೆಗೆ ಭೇಟಿ ಕೊಟ್ಟಾಗ, ಶಿಕ್ಷಕರಾದ ನನ್ನ ಹೆತ್ತವರ ಬಗ್ಗೆ ಅಪಾರ ಅಭಿಮಾನ ಹೊಂದಿದ ಮುಗ್ಧ ಗ್ರಾಮಸ್ಥರೊಬ್ಬರು ಬೇಸರಪಟ್ಟು “ಮಾಷ್ಟ್ರ ಮಗ ಬೆಂಗಳೂರಲ್ಲಿ ಕೆಲ್ಸಕ್ಕೆ ಸೇರಿ ಮೂರು ವರ್ಷ ಆಯಿತಂತೆ, ಇನ್ನೂ ಒಂದು ಗೌರ್ಮೆಂಟು ಕೆಲಸ ಸಿಗಲಿಲ್ಲ, ಪಾಪ” ಎಂದಿದ್ದರಂತೆ.

ಶಾಲಾ ಕಾಲೇಜು ಜೀವನದ ಉದ್ದಕ್ಕೂ ಶಿಕ್ಷಕರನ್ನು “ಸರ್” ಎಂತಲೂ ಶಿಕ್ಷಕಿಯರನ್ನು “ಟೀಚರ್” ಎಂತಲೂ ಸಂಬೋಧಿಸುವುದು ರೂಢಿ ಆಗಿತ್ತು. ಹೈಸ್ಕೂಲಿನಲ್ಲಿ ತಾಯಿ ವಿಜ್ಞಾನದ ಗುರು, ಪದವಿಪೂರ್ವ ಹಂತದಲ್ಲಿ ತಂದೆ ಆಂಗ್ಲ ಭಾಷೆ ಬೋಧಿಸಿದವರು. ಶಾಲೆಯಲ್ಲಿ ಅವರನ್ನು ಕ್ರಮವಾಗಿ ‘ಸರ್’ ಮತ್ತು ‘ಟೀಚರ್ ‘ ಎಂದು ಕರೆಯುತ್ತಿದೆ. ಶಾಲೆಯಲ್ಲಿ ಗಂಡಸರೂ (ಶಿಕ್ಷಕರೂ) ‘ಟೀಚರ್ ‘ ಎಂದು ಕರೆಸಿಕೊಳ್ಳುತ್ತಾರೆಂದು ಇಂಗ್ಲೆಂಡಿಗೆ ಬಂದ ಮೇಲೆ ಇಲ್ಲಿ ಮಗಳ ಅಂಗನವಾಡಿ ಶಾಲೆಯಲ್ಲಿ ತಿಳಿಯಿತು. ಈ ಊರು ದೇಶದಲ್ಲಿ ‘ಟೀಚ್’ ಮಾಡುವವವರೆಲ್ಲ ‘ಟೀಚರ್’. ಇಲ್ಲಿನ ಹೆಚ್ಚಿನ ಮಕ್ಕಳು ಸರಕಾರಿ ಶಾಲೆಗಳಿಗೆ ಹೋಗುತ್ತಾರೆ. ಮತ್ತು ಇಲ್ಲಿನ ಸರಕಾರಿ ಶಾಲೆಗಳಲ್ಲಿ ಎಲ್ಲ ವರ್ಗದ ಮಕ್ಕಳು ಬೆರೆಯುತ್ತಾರೆ. ಖಾಸಗಿ ಶಾಲೆಗಳೂ ಇವೆ ಇಲ್ಲಿ, ಅವು ದುಬಾರಿ. ಖಾಸಗಿ ಶಾಲೆಗೆ ಹೋಗುವುದು ಇಲ್ಲಿ ತೀರ ಸಾಮಾನ್ಯ ವಿಷಯ ಅಲ್ಲ. ಶಾಲೆ ಸರಕಾರಿ ಇರಲಿ ಖಾಸಗಿ ಇರಲಿ, ಮಕ್ಕಳ ಶಿಕ್ಷಣದ ಆರಂಭದ ವರ್ಷಗಳಲ್ಲಿ ಸೃಜನಶೀಲತೆಯನ್ನು ಚಿವುಟದೆ, ಮನೋವಿಕಾಸಕ್ಕೆ ಒತ್ತು ನೀಡಿ ಆಟ, ಹಾಡು, ಚಿತ್ರಗಳ ಮೂಲಕವೇ ವಿದ್ಯಾರ್ಥಿಗಳನ್ನು ಬೆಳೆಸುತ್ತಾರೆ. ಮಕ್ಕಳನ್ನು ನಾಜೂಕಿನಲ್ಲಿ ನೋಡಿಕೊಳ್ಳುವ ಹೊಣೆ ಟೀಚರುಗಳಿಗೂ ಇದೆ.

ಶಾಲೆಯ ಆರಂಭದ ಕೆಲವು ವರ್ಷಗಳಲ್ಲಿ ಮಕ್ಕಳಿಗೆ ಸ್ವತಂತ್ರವಾಗಿ ಯೋಚಿಸುವ, ಅನುಭವಿಸುವ ಅವಕಾಶ ನೀಡುತ್ತಾರೆ. ಕತೆ ಓದುವುದು, ಕತೆ ಹೇಳುವುದು ಇಲ್ಲಿನ ಮೊದಲ ಪಾಠಗಳು. ಮತ್ತೆ ಮಕ್ಕಳು ಬೇರೆ ಯಾವ ತರದ ಒತ್ತಡ, ಶೋಷಣೆಗೆ ಒಳಗಾಗದಂತೆ ಕಾನೂನು ನೋಡಿಕೊಳ್ಳುತ್ತದೆ. ಆಂಗ್ಲ ಸಮಾಜದಲ್ಲಿ ಮಕ್ಕಳು ಕಾನೂನು ವ್ಯವಸ್ಥೆಯ ಅಪಾರ ಬಲ ಪಡೆದವರು. ಮಕ್ಕಳಿಗೆ ಬೆದರಿಸಿದವರು, ಪೆಟ್ಟು ಹೊಡೆದವರು, ಹೆತ್ತವರಿರಲಿ ಗುರುಗಳಿರಲಿ ಸೆರೆಮನೆ ಸೇರುವ ಸಾಧ್ಯತೆ ಇದೆ. ಗುರುಗಳ ಜವಾಬ್ದಾರಿಯ ಜೊತೆಗೆ ಹದಿನಾರು ವರ್ಷದವರೆಗಿನ ಕಡ್ಡಾಯ ಶಿಕ್ಷಣದ ಹೊಣೆ ಹೆತ್ತವರ ಮೇಲೂ ಇದೆ. ಕಾರಣವಿಲ್ಲದೆ ಮಕ್ಕಳು ಶಾಲೆಗೆ ಗೈರು ಹಾಜರಾದರೆ ಪೊಲೀಸರು ಮನೆ ಬಾಗಿಲು ತಟ್ಟುತ್ತಾರೆ. ಮಕ್ಕಳಿಂದ ಬಿಗಿ ಕಾನೂನಿನ ದುರುಪಯೋಗ, ಹೆತ್ತವರ ಅಸಹಾಯಕತೆ, ಹದಿನಾರು ವರ್ಷಕ್ಕೆ ಶಿಕ್ಷಣ ಮೊಟಕುಗೊಳಿಸಿ ಅಡ್ನಾಡಿಗಳಾಗಿ ಯಾವ ಕೆಲಸವೂ ಮಾಡದ ಮಕ್ಕಳು ಮತ್ತು ಅಂತಹ ಮಕ್ಕಳನ್ನು ಸರಿ ದಾರಿಗೆ ತರುವಲ್ಲಿ ವ್ಯಯ ಆಗುವ ಹಣ, ಸಮಯ, ದುಡಿಯದೆ ಇರುವವರು ಸರಕಾರದ ಭತ್ಯೆ ಪಡೆದು ಬದುಕಬಹುದಾದ ಅವಕಾಶ ಇಂತಹ ವಿಷಯಗಳನ್ನು ಗಮನದಲ್ಲಿಟ್ಟು ಕೆಲವು ಕಾನೂನುಗಳನ್ನು ಬದಲಿಸಬೇಕು ಎನ್ನುವ ಮಾತುಗಳು ಚರ್ಚೆಗಳು ಇಂಗ್ಲೆಂಡ್ ನಲ್ಲಿ ಕೇಳಿ ಬರುತ್ತಲೇ ಇರುತ್ತವೆ.

ಆಂಗ್ಲ ಸಮಾಜದಲ್ಲಿ ಗುರುಗಳ ಹೊಣೆ ಶಾಲೆಯ ಆವರಣದೊಳಗೆ ಆರಂಭ ಆಗಿ ಅಲ್ಲೇ ಮುಗಿಯುತ್ತದೆ, ಹೆತ್ತವರದು ಮನೆಯೊಳಗೆ. ಸಾಮಾಜಿಕ ಜವಾಬ್ದಾರಿಗಳು ಇಲ್ಲಿ ಯಾವುದೊ ಒಂದು ಎರಡೋ ವೃತ್ತಿಗಳಿಗೆ ಸೀಮಿತವಲ್ಲ, ಎಲ್ಲರದ್ದೂ. ಇನ್ನು ಮನೆ ಮತ್ತು ಶಾಲೆಯ ಹೊರಗಿನ ಬದುಕಿನ ಮೇಲೆ ಒಂದೋ ಕಾನೂನು ಇಲ್ಲ ಆತ್ಮಸಾಕ್ಷಿ ಕಣ್ಣಿಡಬೇಕು. ಇದು ನಾನು ಬಾಲ್ಯ ಕಳೆದ ಭಾರತದ ಒಂದು ಹಳ್ಳಿಯ ಮತ್ತು ಈಗ ಬದುಕುತ್ತಿರುವ ಇಂಗ್ಲೆಂಡ್ ನ ಬದುಕಿಗೂ ಇರುವ ಒಂದು ವ್ಯತ್ಯಾಸ. ಭಾರತದಲ್ಲಿ ಶಿಕ್ಷಣ ವ್ಯವಸ್ಥೆ, ಶಾಲೆ ಹಾಗು ಸಮಾಜದ ಸಂಬಂಧ, ಗುರು ಶಿಷ್ಯರ ಒಡನಾಟ ಈಗ ಬದಲಾಗಿದೆ ಎಂದು ತಿಳಿದಿದ್ದೇನೆ. ಆದರೆ ನೆನೆಪುಗಳಿಗೆ ಈ ಬದಲಾವಣೆಗಳ ಹಂಗಾಗಲೀ ತೊಡರಾರಗಲೀ ಯಾವುದೂ ಇಲ್ಲ ಬಿಡಿ.

ಸಮಾಜವನ್ನು ಕಟ್ಟುವ ಕಾಯುವ ನಿಟ್ಟಿನಲ್ಲಿ ಗುರು ಪರಂಪರೆ, ಗುರು ಸಮುದಾಯದ ಜವಾಬ್ದಾರಿ ಮತ್ತು ಅವರ ಮೇಲಿನ ನಿರೀಕ್ಷೆಗಳು ಇಂಗ್ಲೆಂಡ್ ನಲ್ಲಿ ಕಡಿಮೆ ಅಥವಾ ಇಲ್ಲ. ಅಥವಾ ‘ತಂದೆಯ ದಿನ’, ತಾಯಿಯ ದಿನ’, ಗೆಳೆಯರ ದಿನ, ‘ಪ್ರೇಮಿಗಳ ದಿನ’ದ ನೆಪದಲ್ಲಿ ದೊಡ್ಡ ಮಾರುಕಟ್ಟೆಯನ್ನು ಸೃಷ್ಟಿಸಿ ಬೆಳೆಸುತ್ತಿರುವ ಬಂಡವಾಳಶಾಹಿಗಳ, ವ್ಯಾಪಾರಿಗಳ ಕಣ್ಣಿಗೆ ‘ಶಿಕ್ಷಕರ ದಿನ’ ಕಡಿಮೆ ಆಕರ್ಷಕ; ಕಡಿಮೆ ಲಾಭದಾಯಕ ಇರಬೇಕು. ಹಾಗಾಗಿ ಶಿಕ್ಷಕರ ದಿನ ಇಲ್ಲಿ ಒಂದು ಆಚರಣೆ ನೆನಪು ಕತೆಯಲ್ಲ. ಭಾರತದಲ್ಲಿ ಕಳೆದ ಎಳವೆಯಲ್ಲಿ ಕಂಡ ಶಿಕ್ಷಕ-ಶಿಕ್ಷಕಿಯರನ್ನು ಹಾಗು ಶಿಕ್ಷಕರ ದಿನವನ್ನು ಇಂಗ್ಲೆಂಡಿನ ಹಿನ್ನೆಲೆಯಲ್ಲಿ ತಿಳಿಯುವುದು ತಿಳಿಸುವುದು ಸುಲಭವಲ್ಲ. ಜೊತೆಗೆ ನೈತಿಕಪ್ರಜ್ಞೆಯ ಕಾವಿನಲ್ಲಿ ಕರ್ತವ್ಯನಿಷ್ಠೆಯ ತಪಸ್ಸಿನಲ್ಲಿ ತಮ್ಮ ಶಿಷ್ಯರನ್ನು ಸುತ್ತಲಿನ ಸಮಾಜವನ್ನು ಎಚ್ಚರದಲ್ಲಿಟ್ಟ ಇಡುತ್ತಿರುವ ಅದೆಷ್ಟೋ ಗುರುಗಳನ್ನು ಮತ್ತು ಗುರು-ಶಿಷ್ಯರ ನಡುವಿನ ಅನುಭವಗಳನ್ನು ಸ್ಮರಣೆಗಳನ್ನು ಮರೆಯುವುದೂ ಸಾಧ್ಯವಿಲ್ಲ.