ಪ್ರೀತಿ ಅಭಿಮಾನ ಗೌರವದಿಂದ ಸೀತೆಯನ್ನು ಬರಮಾಡಿಕೊಳ್ಳಬೇಕಾಗಿದ್ದ ಕ್ಷಣ ಅದು. ಎಲ್ಲರೂ ಅಂತಹದೊಂದು ಕ್ಷಣಕ್ಕೆ ಸಾಕ್ಷಿಯಾಗಲು ಅಲ್ಲಿ ನಿಂತವರು. ಆದರೆ ತುಂಬು ನಿರೀಕ್ಷೆಯಿಂದ ರಾಮನ ಎದುರು ಬಂದು ನಿಲ್ಲುವ ಸೀತೆಗೆ ಸಿಕ್ಕಿದ ಸ್ವಾಗತವಾದರೂ ಎಂಥದ್ದು? ಪ್ರೀತಿ ಮತ್ತು ಸಂಭ್ರಮದಲ್ಲಿ ಅರಳಬೇಕಾಗಿದ್ದ ರಾಮನ ಮುಖ ಸಿಟ್ಟಿನಿಂದ ಉಗ್ರವಾಗುತ್ತದೆ. ಲಕ್ಷ್ಮಣ, ವಿಭೀಷಣ, ಆಂಜನೇಯರಿಗೆ ಇದು ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ಮುಂದೆ ರಾಮ ಆಡುವ ಮಾತುಗಳನ್ನು ಕೇಳಿಸಿಕೊಂಡ ಸೀತೆಗೆ ಅಗ್ನಿ ಪ್ರವೇಶ ಮಾಡುವುದು ಬಿಟ್ಟು ಬೇರೆ ವಿಕಲ್ಪವೇನೂ ಉಳಿಯುವುದಿಲ್ಲ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಒಂಭತ್ತನೆಯ ಬರಹ
ನಿಂತರೂ ನಡೆದವರು ನಡೆದ ನಡೆ ಕಾಡುವುದು
~ ಎಚ್ಚೆಸ್ವಿ
ನಮ್ಮ ನಡುವೆ ಇದ್ದು ಸಮಾಜಕ್ಕೆ ಒಂದು ಮಾದರಿಯಾಗಿ ಬದುಕಿ ಕಾಲವಾಗಿ ಹೋದವರ ನಡೆಗಳು ಯಾವತ್ತಿಗೂ ನಮ್ಮನ್ನು ಕಾಡುತ್ತವೆ. ಅವರ ಬದುಕು, ಅವರು ತೆಗೆದುಕೊಂಡ ನಿರ್ಧಾರಗಳು ಮತ್ತು ಅದರಿಂದ ಆದ ಪರಿಣಾಮಗಳು ಎಲ್ಲವನ್ನೂ ನಿಕಷಕ್ಕೆ ಒಳಪಡಿಸಿ ನೋಡುತ್ತಾ ಅವರ ಕುರಿತಾಗಿ ನಮ್ಮ ನಮ್ಮ ನಿಲುವುಗಳನ್ನು ಕಟ್ಟಿಕೊಳ್ಳುತ್ತೇವೆ. ರಾಮನಿಂದ ಗಾಂಧಿಯವರೆಗೆ ಈ ಪ್ರಶ್ನೆಗಳು ಯಾರನ್ನೂ ಬಿಟ್ಟಿಲ್ಲ. ಯಾವತ್ತೋ ಈ ನೆಲದಲ್ಲಿ ಬದುಕಿದ ವ್ಯಕ್ತಿತ್ವವನ್ನು ಈ ಹೊತ್ತಲ್ಲಿ ನಿಂತು ಒರೆಗೆ ಹಚ್ಚುವಾಗ ಪರ ವಿರೋಧಗಳು ಇಲ್ಲದೆ ಇರಲು ಸಾಧ್ಯವಿಲ್ಲ.
ಒಟ್ಟಿಗೆ ಇದ್ದಾಗಲೂ ತನ್ನೆಲ್ಲಾ ಗುಟ್ಟುಗಳನ್ನು ಬಿಟ್ಟುಕೊಡದ ಅವರ ಎಲ್ಲಾ ನಡೆಗಳು ಅರ್ಥವಾಗದೇ ಇರುವಾಗ, ನಮಗೆ ದೊರೆತ ಅವರ ಬಗೆಗಿನ ಕೆಲವೇ ಕೆಲವು ಸಂಗತಿಗಳಿಂದ ಅವರ ವ್ಯಕ್ತಿತ್ವವನ್ನು ಅಳೆದು ಅವರು ಇಂಥವರೇ ಅನ್ನುವ ಸರ್ಟಿಫಿಕೇಟ್ ಕೊಡುವುದು ನಿಜಕ್ಕೂ ನಮ್ಮ ಮಿತಿ ಅನ್ನಿಸಿಬಿಡುತ್ತದೆ. ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ? ಈ ವಿಷಯ ಇನ್ನೂ ಮನದಟ್ಟಾಗಲು ನಮ್ಮ ಸಮಕಾಲೀನ ಸಾಮಾಜಿಕ ರಂಗದಲ್ಲಿರುವ ವ್ಯಕ್ತಿಗಳನ್ನು ಮತ್ತು ಅವರ ನಡೆಗಳನ್ನು ಒಮ್ಮೆ ಗಮನಿಸಬೇಕು. ಅವರ ನಡೆಗಳನ್ನು ಸಮರ್ಥಿಸುವ ಮತ್ತು ಟೀಕಿಸುವ ಎರಡೂ ಪಕ್ಷಗಳು ನಮಗೆ ಕಾಣುತ್ತವೆ. ಅವರ ಬದುಕನ್ನು ಸಮಗ್ರವಾಗಿ ನೋಡದೇ ಇತಿಹಾಸದಿಂದಲೂ ನಮಗೆ ಬೇಕಾದುದನ್ನು ಮತ್ತು ನಮಗೆ ಬೇಕಷ್ಟನ್ನು ಮಾತ್ರ ತೆಗೆದುಕೊಳ್ಳುತ್ತೇವೆ.
ವಾಲ್ಮೀಕಿ ರಾಮಾಯಣದಲ್ಲಿ ವಾಲಿಯ ವಧೆ ಮತ್ತು ಸೀತೆಯ ಅಗ್ನಿ ಪ್ರವೇಶ ಈ ಎರಡೂ ಸಂದರ್ಭಗಳಲ್ಲಿ ರಾಮನ ನಡೆ ಶತಮಾನಗಳಿಂದ ಪ್ರಶ್ನಾರ್ಥಕವಾಗಿಯೇ ಉಳಿದಿದೆ. ಪ್ರತೀ ಸಲ ಈ ಪ್ರಸಂಗ ಬಂದಾಗ ಸಹಜವಾಗಿಯೇ ರಾಮ ಮಾಡಿದ್ದು ಸರಿಯೋ ಅಥವಾ ತಪ್ಪೋ ಅನ್ನುವ ದ್ವಂದ್ವ ನಮ್ಮನ್ನು ಕಾಡುತ್ತದೆ. ವಾಲಿಯ ಮತ್ತು ಸೀತೆಯ ದೃಷ್ಟಿಯಿಂದಲೂ ನೋಡುವ ಹಾಗೆ ನಮ್ಮನ್ನು ಕಾವ್ಯ ಪ್ರಚೋದಿಸುತ್ತದೆ. ಇದು ಕಾವ್ಯದ ಶಕ್ತಿ ಕೂಡ ಹೌದು. ಅಂತಹ ಪ್ರಶ್ನೆ ಮತ್ತು ಜಿಜ್ಞಾಸೆಗಳನ್ನು ಹುಟ್ಟುಹಾಕದ ಕೃತಿ ಜನಮಾನಸದಲ್ಲಿ ಉಳಿಯುವುದೂ ಇಲ್ಲ. ಆದರೆ ಇತಿಹಾಸದಲ್ಲಿನ ಮನುಷ್ಯನ ವರ್ತನೆಗಳೆಲ್ಲವೂ ಆಯಾ ಕಾಲದ ಸಾಮಾಜಿಕ ಧಾರ್ಮಿಕ ರಾಜಕೀಯ ಚೌಕಟ್ಟಿನೊಳಗೆ ವಿಶ್ಲೇಷಣೆಗೆ ಒಳಪಡಿಸಬಹುದೇ ಹೊರತು ಈಗಿನ ಕಾಲದ ಗುಣಧರ್ಮಕ್ಕೆ ಅನುಗುಣವಾಗಿ ಅಲ್ಲ ಅನ್ನುವುದನ್ನು ಗಮನದಲ್ಲಿರಿಸಿದರೆ ಬೇರೆಯೇ ಆಯಾಮಗಳು ನಮಗೆ ಸಿಗುತ್ತವೆ.
ಯುದ್ಧ ಮುಗಿದಿದೆ. ರಾವಣನ ಸಂಹಾರವಾಗಿ ಲಂಕೆ ರಾಮನ ಕೈವಶವಾಗಿದೆ. ಸೀತೆಗೆ ಈ ವಿಷಯವನ್ನು ತಿಳಿಸಲು ಹನುಮಂತನನ್ನು ಕಳುಹಿಸುತ್ತಾನೆ ರಾಮ. ನಂತರ ಸೀತೆ ಅಭ್ಯಂಜನ ಮುಗಿಸಿ ಸರ್ವಾಲಂಕಾರ ಭೂಷಿತಳಾಗಿ ಬರಲಿ ಅಂತ ವಿಭೀಷಣನ ಜೊತೆ ಹೇಳಿ ಕಳಿಸುತ್ತಾನೆ. ಆದರೆ ಈ ಪ್ರಸ್ತಾಪ ಸೀತೆಗೆ ಇಷ್ಟವಾಗುವುದಿಲ್ಲ. ನನ್ನ ದೇವರನ್ನು ನಾನು ಮತ್ತೆ ಕಾಣುತ್ತಿದ್ದೇನೆ. ಅವನಿಗೂ ಗೊತ್ತಾಗಬೇಕು ನಾನು ಹೇಗೆ ಕಳೆದೆ ಇಲ್ಲಿನ ದಿನಗಳನ್ನು ಅಂತ. ಹೀಗೆಯೇ ಹೋಗುತ್ತೇನೆ ಅಂತ ಸೀತೆ ಅಸಮ್ಮತಿ ವ್ಯಕ್ತಪಡಿಸಿದರೂ ಕಡೆಗೆ ರಾಮ ಬಯಸಿದ ಹಾಗೆಯೇ ನಡೆಯುತ್ತದೆ. ಹಾಗೆ ಬಂದ ಸೀತೆಯನ್ನು ನೋಡಬೇಕು ಅನ್ನುವ ಕುತೂಹಲದಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ನೆರೆದಿರುವ ಕಪಿಗಳು ರಾಕ್ಷಸರು. ಎಲ್ಲೆಡೆ ಗದ್ದಲ ತವಕ. ಸೈನಿಕರು ಜನರನ್ನು ಚದುರಿಸಲು ನೋಡುವಾಗ ರಾಮ ಎಲ್ಲರೂ ಇರಲಿ ಅವರೂ ನೋಡಲಿ ಅನ್ನುತ್ತಾನೆ.
ಸೀತೆಯನ್ನು ಕಳೆದುಕೊಂಡ ವಿರಹದಿಂದ ಪರಿತಪಿಸಿದ ರಾಮ ಯುದ್ಧ ಮುಗಿದ ಬಳಿಕ ತಾನೇ ಅಶೋಕವನಕ್ಕೆ ಹೋಗಿ ಸೀತೆಯನ್ನು ಏಕಾಂತದಲ್ಲಿ ಕಂಡು ಅವಳನ್ನು ಕರೆತರಬೇಕಾಗಿತ್ತು. ಅವಳ ಗೌರವವನ್ನೂ ಕುಗ್ಗಿದ ಆತ್ಮವಿಶ್ವಾಸವನ್ನೂ ಎತ್ತಿಹಿಡಿಯಬೇಕಾಗಿತ್ತು. ಆದರೆ ಅವನು ಸೀತೆಯನ್ನು ಹೀಗೆ ಕರೆಸುತ್ತಾನೆ. ಅದೂ ರಣರಂಗಲ್ಲಿ ಅಷ್ಟು ಜನರ ನಡುವೆ. ನಾಚಿಕೆ ಸಂಕೋಚದ ಮುದ್ದೆಯಾಗಿ ಬಂದು ನಿಂತ ಸೀತೆಗೆ ರಾಮನೊಂದೇ ಭರವಸೆ.
ಸುತ್ತಮುತ್ತ ಇಣುಕುವ ಕುತೂಹಲದ ನೂರು ಕಣ್ಣುಗಳ ನಡುವೆ ಸೀತೆ ಬರುತ್ತಾಳೆ ಸರ್ವಾಲಂಕಾರ ಭೂಷಿತಳಾಗಿ. ಸೀತೆಯನ್ನು ಕಳೆದುಕೊಂಡು, ಆ ವಿರಹದಲ್ಲಿ ಇಷ್ಟು ದಿನ ನೊಂದು ಅವಳನ್ನು ಮರಳಿ ಪಡೆಯಲು ಯುದ್ಧವನ್ನೇ ಮಾಡಿದ್ದಾನೆ. ಅಂತಹ ತನ್ನ ಪ್ರೀತಿಯ ಸೀತೆಯನ್ನು ಮತ್ತೆ ಎದುರುಗೊಳ್ಳುವ ಸಮಯದಲ್ಲಿ ರಾಮನ ಮನಸ್ಸಿನಲ್ಲಿ ಏನು ನಡೆಯುತ್ತಿರಬಹುದು? ವಾಲ್ಮೀಕಿ ಈ ಭಾವವನ್ನು ಸಮರ್ಥವಾಗಿ ಕಟ್ಟಿಕೊಡುತ್ತಾರೆ. ಹರ್ಷ, ದೈನ್ಯ ಮತ್ತು ರೋಷದ ಸಮ್ಮಿಶ್ರ ಭಾವದ ಗೂಡಾಗಿತ್ತು ರಾಮನ ಮನಸ್ಸು ಅಂತ. ಮನಸ್ಸಿನಲ್ಲಿ ಹೀಗೆ ಭಾವಗಳ ಕೋಲಾಹಲ ನಡೆಯುತ್ತಿರುವಾಗಲೇ ಸೀತೆ ಬಂದು ಎದುರು ನಿಲ್ಲುತ್ತಾಳೆ.

ಪ್ರೀತಿ ಅಭಿಮಾನ ಗೌರವದಿಂದ ಸೀತೆಯನ್ನು ಬರಮಾಡಿಕೊಳ್ಳಬೇಕಾಗಿದ್ದ ಕ್ಷಣ ಅದು. ಎಲ್ಲರೂ ಅಂತಹದೊಂದು ಕ್ಷಣಕ್ಕೆ ಸಾಕ್ಷಿಯಾಗಲು ಅಲ್ಲಿ ನಿಂತವರು. ಆದರೆ ತುಂಬು ನಿರೀಕ್ಷೆಯಿಂದ ರಾಮನ ಎದುರು ಬಂದು ನಿಲ್ಲುವ ಸೀತೆಗೆ ಸಿಕ್ಕಿದ ಸ್ವಾಗತವಾದರೂ ಎಂಥದ್ದು? ಪ್ರೀತಿ ಮತ್ತು ಸಂಭ್ರಮದಲ್ಲಿ ಅರಳಬೇಕಾಗಿದ್ದ ರಾಮನ ಮುಖ ಸಿಟ್ಟಿನಿಂದ ಉಗ್ರವಾಗುತ್ತದೆ. ಲಕ್ಷ್ಮಣ, ವಿಭೀಷಣ, ಆಂಜನೇಯರಿಗೆ ಇದು ನಿಜಕ್ಕೂ ಗಾಬರಿ ಹುಟ್ಟಿಸುತ್ತದೆ. ಮುಂದೆ ರಾಮ ಆಡುವ ಮಾತುಗಳನ್ನು ಕೇಳಿಸಿಕೊಂಡ ಸೀತೆಗೆ ಅಗ್ನಿ ಪ್ರವೇಶ ಮಾಡುವುದು ಬಿಟ್ಟು ಬೇರೆ ವಿಕಲ್ಪವೇನೂ ಉಳಿಯುವುದಿಲ್ಲ.
“ನಿನ್ನನ್ನು ಅಪಹರಿಸಿದ ಶತ್ರುವನ್ನು ರಣರಂಗದಲ್ಲಿ ಕೊಂದು ವಶಪಡಿಸಿಕೊಂಡಿದ್ದೇನೆ ಮತ್ತೆ ನಿನ್ನನ್ನು. ನನಗಾದ ಅಪಮಾನಕ್ಕೆ ತಕ್ಕ ಪ್ರತಿಕಾರವನ್ನು ಮಾಡಿದ್ದೇನೆ. ಜಗತ್ತು ನನ್ನ ಪೌರುಷ ಕಂಡಿತು. ನಾನೀಗ ಸ್ವತಂತ್ರ. ನಿನ್ನನ್ನು ಪಡೆಯುವುದಕ್ಕೆ ನಾನು ಯುದ್ಧ ಮಾಡಿಲ್ಲ. ನನ್ನ ವಂಶದ ಹಿರಿಮೆಯನ್ನು ಎತ್ತಿ ಹಿಡಿಯುವ ಸಲುವಾಗಿ ಯುದ್ಧ ಮಾಡಿದೆ. ನೀನು ರಾವಣನ ಆಶ್ರಯದಲ್ಲಿ ಹತ್ತು ತಿಂಗಳು ಕಳೆದವಳು. ನಿನ್ನ ಈ ದಿವ್ಯರೂಪವನ್ನು ಕಂಡು ಅವನು ಸುಮ್ಮನಿರಲು ಸಾಧ್ಯವಿಲ್ಲ. ಪರಗೃಹದಲ್ಲಿರುವ ಸ್ತ್ರೀಯನ್ನು ಸ್ವೀಕರಿಸಿದರೆ ನನ್ನ ಕುಲದವರು ಏನಂದುಕೊಳ್ಳುತ್ತಾರೆ? ಟೀಕೆ ಮಾಡುತ್ತಾರೆ. ಹೀಗೆ ನಿನ್ನನ್ನು ಸ್ವೀಕರಿಸಲು ನನ್ನಿಂದ ಸಾಧ್ಯವಿಲ್ಲ. ನೀನೀಗ ಸ್ವತಂತ್ರಳು. ಎಲ್ಲಿಗೆ ಬೇಕಾದರೂ ಹೋಗಬಹುದು. ಯಾರ ಜೊತೆ ಬೇಕಾದರೂ ಹೋಗಬಹುದು. ಬೇಕಾದರೆ ಲಕ್ಷ್ಮಣನ ಕಡೆಗೆ ಹೋಗು. ಇಲ್ಲವೇ ಭರತನ ಜೊತೆಗೆ, ಸುಗ್ರೀವನ ಜೊತೆಗೆ ಅಥವಾ ವಿಭೀಷಣನ ಕಡೆಗೆ. ನನಗೂ ನಿನಗೂ ಯಾವುದೇ ಸಂಬಂಧವಿಲ್ಲ”
ಎಂಥಹ ಮಾತುಗಳು ಮರ್ಯಾದ ಪುರುಷೋತ್ತಮನಾದ ರಾಮನಿಂದ! ಯಾಕೆ ಹೀಗಾಯ್ತು? ರಾಮ ಮತ್ತು ಸೀತೆಯರದ್ದು ಅದೆಂತಹ ಅನ್ಯೋನ್ಯ ದಾಂಪತ್ಯ. ಲೋಕದ ಅಪವಾದಕ್ಕೆ ಅಂಜಿ ತನ್ನ ಪ್ರಿಯ ಪತ್ನಿಯ ಶೀಲದ ಮೇಲೆ ಸಂಶಯ ಪಟ್ಟದ್ದರಿಂದ ಆ ಕ್ಷಣದ ಕಾವ್ಯ ರಾಮನನ್ನು ಒಬ್ಬ ಸಾಮಾನ್ಯ ಮನುಷ್ಯನ್ನಾಗಿ ಚಿತ್ರಿಸುತ್ತದೆ. ಅವನು ಸೀತಾರಾಮ ಮಾತ್ರವಲ್ಲ ರಾಜಾರಾಮ ಕೂಡ. ಮುಂದೆ ಎದುರಾಗಬಹುದಾದ ಪ್ರಶ್ನೆಗಳನ್ನು ಯೋಚಿಸಿಯೇ ರಾಮ ಸೀತೆಯನ್ನು ಹೀಗೆ ಪ್ರಶ್ನಿಸಿದ್ದು ಮತ್ತು ಅವಳ ಉತ್ತರವನ್ನು ಜನರ ಎದುರೇ ಪಡೆದದ್ದು ಅನ್ನುವ ಎಷ್ಟೇ ಸಮಾಜಯಿಸಿ ಕೊಟ್ಟರೂ ಅದು ಮನಸ್ಸಿಗೆ ಒಪ್ಪಿತವಾಗುವುದಿಲ್ಲ.
“ನನ್ನ ದೇವರೇ ನನ್ನಲ್ಲಿ ಅಪನಂಬಿಕೆ ತೋರಿಸಿದರೆ ನಾನೆಲ್ಲಿ ಹೋಗಲಿ? ನೀನು ವೀರಾಗ್ರಣಿ ಪುರುಷ ಶ್ರೇಷ್ಠ. ಯಾರೋ ಸಾಮಾನ್ಯನ ಹಾಗೆ ಮಾತಾಡುತಿದ್ದಿಯಾ. ನನ್ನ ಶೀಲದ ಕುರಿತು ಸಂದೇಹದ ಮಾತುಗಳೇ? ಅದೂ ನನ್ನ ರಾಮನಿಂದ? ಆಣೆ ಮಾಡಿ ಹೇಳುತ್ತೇನೆ ಯಾವ ಭಂಗವೂ ಆಗಿಲ್ಲ. ನಾನು ಪರಿಶುದ್ಧಳು. ಸದಾ ನಿನ್ನ ಧ್ಯಾನದಲ್ಲಿ ಇದ್ದವಳು. ಇನ್ನು ನಾನು ಬೇಡವೇ ಬೇಡ ಅಂತ ನಿನ್ನ ಮನಸ್ಸಿನಲ್ಲಿತ್ತು ಅನ್ನುವುದಾದರೆ ಹನುಮಂತನನ್ನು ಕಳಿಸಿದ್ದಾಗಲೇ ಹೇಳಬಹುದಾಗಿತ್ತು. ಈ ಯುದ್ಧ ನಡೆಯುತ್ತಿರಲಿಲ್ಲ. ಜನ ಸಾಯುವುದು ತಪ್ಪುತ್ತಿತ್ತು. ನಾನು ನನ್ನ ಜೀವನ ಮುಗಿಸಿಕೊಂಡುಬಿಡುತ್ತಿದ್ದೆ. ಸ್ತ್ರೀಯರೆಲ್ಲಾ ಸಾಮಾನ್ಯರು, ಚಪಲೆಯರು ಅಂದುಕೊಂಡು ಮಾತಾಡುತಿದ್ದೀಯ ನೀನು. ನಿನಗೆ ಗೊತ್ತಿರಬೇಕು ನಾನು ಭೂದೇವಿಯ ಮಗಳು. ಯಾರಿಗಿದೆ ನನ್ನಷ್ಟು ದೃಢ ಮನಸ್ಸು? ಇಷ್ಟೆಲ್ಲಾ ಕೇಳಿ ಇನ್ನು ಬದುಕಿರುವುದು ಕಷ್ಟ. ಲಕ್ಷ್ಮಣ ಅಗ್ನಿಯನ್ನು ಸಿದ್ಧಗೊಳಿಸು. ಅಗ್ನಿ ಪ್ರವೇಶ ಮಾಡುತ್ತೇನೆ” ಅನ್ನುತ್ತಾ ಸೀತೆ ಅಗ್ನಿ ಪ್ರವೇಶ ಮಾಡುತ್ತಾಳೆ.
ಎಚ್ಚೆಸ್ವಿಯ ರಾಮನವಮಿಯ ರಾತ್ರಿ ಕವಿತೆಯಲ್ಲಿ “ಕರುಣಾಳು ಪ್ರಭು! ಲೋಕಮಾತೆ ಸೀತೆಯ ನೀನು ತೊರೆದದ್ದು ಸರಿಯೇನು?” ಅನ್ನುವ ಪ್ರಶ್ನೆ ಬರುತ್ತದೆ.
ಬದುಕಿನ ಮತ್ತೊಂದು ಕಾಲಘಟ್ಟದಲ್ಲಿ ನಿಂತು ಸಂದು ಹೋದ ನಮ್ಮದೇ ಬದುಕಿನ ಕುರಿತು ಪ್ರಶ್ನೆಗಳು ಎದುರಾದಾಗ ಸಮಜಾಯಿಸಿ ಕೊಡುವುದು ಸುಲಭವಲ್ಲ. ಆ ಸಂದರ್ಭವನ್ನು ಬೇರೆಯೇ ಬಗೆಯಲ್ಲಿ ನಿಭಾಯಿಸಬಹುದಾಗಿತ್ತು ಅಂತ ಅನ್ನಿಸುವ ಹೊತ್ತಿಗೆ ಕಾಲ ಮಿಂಚಿ ಹೋಗಿರುತ್ತದೆ. ಕಾಲಕ್ಕೆ ಹಿಂದಕ್ಕೆ ಓಡಿ ಅಭ್ಯಾಸವಿಲ್ಲ. ಮತ್ತೆ ಮೊದಲಿನಿಂದ ಶುರು ಮಾಡಲು ಬದುಕು ಮತ್ತೊಂದು ಅವಕಾಶವನ್ನೂ ಕರುಣಿಸುವುದಿಲ್ಲ. ಆ ಪಶ್ಚಾತ್ತಾಪದ ನೋವು ಎದೆಯಲ್ಲಿ ಹೆಪ್ಪುಗಟ್ಟಿ ನಿರಂತರವಾಗಿ ಕಾಡುತ್ತದೆ.
“ಶ್ರೀಮುಖದಲಾಗ ಸಣ್ಣಗೆ ನೋವು ಸುಳಿಯುವುದು
ಶಿಲ್ಪಕ್ಕೆ ತುಟಿಯುಂಟು; ಇಲ್ಲ ಮಾತು.
ಲಕ್ಷ್ಮಣಗೆ ಕಸಿವಿಸಿ. ತಲೆ ತಗ್ಗಿಸಿದನು ಹನುಮ
ತಾಯಿ ಮತ್ತೇನನ್ನೋ ಧ್ಯಾನಿಸುವಳು“
ಹೇಳಲಾಗದ ಆದರೆ ತಾನೊಬ್ಬನೇ ಅನುಭವಿಸುವ ಮೂಕವೇದನೆಯ ಈ ನೋವನ್ನು ಹೀಗೆ ಅದ್ಭುತವಾಗಿ ಕಟ್ಟಿಕೊಡುತ್ತಾರೆ ಎಚ್ಚಸ್ವಿ. ಸೀತೆಯ ಜೊತೆಯಲ್ಲಿ ನಿಂತು ಭಕ್ತರ ಪೂಜೆ ಸ್ವೀಕರಿಸುವಾಗ, ಅವರು ನಿತ್ಯ ಒಪ್ಪಿಸುವ ರಾಮಕತೆಯಲ್ಲಿ ಈ ಪ್ರಶ್ನೆಯ ಸಮಾಧಾನಕ್ಕೆ ತನ್ನ ಮುಖ ನೋಡುವಾಗ, ಎದೆಯ ನೋವು ಮುಖದಲ್ಲಿ ಕಾಣಿಸುತ್ತದೆ. “ಶಿಲ್ಪಕ್ಕೆ ತುಟಿಯುಂಟು ಇಲ್ಲ ಮಾತು” ಅನ್ನುವ ಸಾಲು ಕಲ್ಲಾಗಿ ಗರ್ಭಗುಡಿಯಲ್ಲಿ ನಿಂತ ಶ್ರೀರಾಮನ ಹೇಳಲಾಗದ ಅಸಹಾಯಕತೆಯನ್ನು ಹೇಳಿದರೂ ಇದು ಬದುಕಿದ್ದವರ ಅಸಹಾಯಕತೆ ಕೂಡ ಹೌದು. ಮಾತಿನಲ್ಲಿ ಹೇಳಲಾಗದ್ದಕ್ಕೆ ತುಟಿ ತೆರೆಯುವುದಿಲ್ಲ. ಮಾತಿನಲ್ಲಿ ಎಲ್ಲವನ್ನೂ ಹೇಳಿ ಹಗುರಾಗುವುದು ಸಾಧ್ಯವಿಲ್ಲ. ಸಮಾಧಾನಿಸುವುದು ಕೂಡ.

ವ್ಯಕ್ತಿತ್ವ ಘನವಾದಷ್ಟು ಅವರ ನಡೆ ಮತ್ತು ನುಡಿಗಳ ಪರಿಣಾಮವೂ ದೊಡ್ಡದೇ ಆಗಿರುತ್ತದೆ. ವರ್ತಮಾನದ ಸಮಸ್ಯೆಗಳಿಗೆ ಇತಿಹಾಸವನ್ನು ಉತ್ಖನನ ಮಾಡುವ ಕಣ್ಣುಗಳಿಗೆ ಪ್ರಶ್ನೆಗಳು ಕಾಡುತ್ತವೆ. ಉತ್ತರಿಸಲು ಅವರಿಲ್ಲ. ಅವರ ನಿರ್ಧಾರಗಳು ಕಲ್ಲಿನ ವಿಗ್ರಹದ ಹಾಗೆ ಎದುರಿದ್ದರೂ ತುಟಿ ತೆರೆಯುವುದಿಲ್ಲ. ನಿಂತರೂ ನಡೆದವರು ನಡೆದ ನಡೆ ಕಾಡುವುದು
ಮುಗಿದಿರುವ ಹಾಡ ಪಲ್ಲವಿಯ ಹಾಗೆ! ಹಾಡು ಮುಗಿಯುವುದಿಲ್ಲ; ಮುಗಿದರದು ಹಾಡಲ್ಲ!

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು
