ಹಠಾತ್ತನೆ ಉಲ್ಕೆಯೇನು ಬಂದೆರಗಲಿಲ್ಲ
ನೋಡನೋಡುತ್ತಿದ್ದಂತೆಯೇ ಎಲ್ಲ ಛಿದ್ರವಾಯಿತು
ರಥದ ಚಕ್ರಗಳ ಕೆಳಗೆ ಹರಿದ ನೆತ್ತರಲಿ
ಭ್ರಾಂತಿ ಹಿಡಿದ ಸಾವಿರಾರು ಆತ್ಮಗಳು ಲೀನವಾಯಿತು
ಶತಮಾನಗಳ ಹಿಂದೆ ಬಿತ್ತಿದ ವಿಷದ ಬೀಜ
ಭೀಭತ್ಸ ಹೆಮ್ಮರವಾಗಿ ಕತ್ತಲು ಕವಿಯಿತು
ಶರತ್ಕಾಲದ ನಸುಕಿನಲಿ ಅನತಿ ದೂರದಲಿ
ಕಂಡ ಮುಖ ಕೆಂಪಾಗಿ ಕರಗಿಹೋಯಿತು
ವಿಷವರ್ತುಲದಲಿ ಮೂರು ಮಾಟಗಾತಿಯರ ಕುಣಿತವನು ಕಂಡು ಜಗದ ಛಾವಣಿಗೆ ಗರಬಡಿಯಿತು
ಮ್ಯಾಕ್ ಬೆತನ ಮುಕುಟದಾಸೆಗೆ ರೈಲು ಬೋಗಿಗಳು ಸ್ಮಶಾನವಾಯಿತು
ಹೆಣದ ರಾಶಿಗಳ ಮೇಲೆ ನಿಂತ ಮಂದಿರಗಳಲಿ ಮೊಳಗಿದ ಘಂಟಾನಾದವನಾಲಿಸಿದ ದೈವ ಕಿವುಡಾಯಿತು
ಒಳಿತು ಕೆಡುಕಾಯಿತು, ಕೆಡುಕು ಒಳಿತಾಯಿತು
ನೆಲವು ಕೆಂಪಾಯಿತು, ಗಾಳಿ ವಿಷವಾಯಿತು
ಉಂಡ ಮನೆಗೆ ಎರಡು ಬಗೆದ
ಸಂಭಾವಿತರ ಬಣ್ಣ ಬಯಲಾಯಿತು
ವರುಷಗಳಿಂದ ನಡೆದುಬಂದ ದಾರಿ
ಬಟಾ ಬಯಲಾಯಿತು
ಅತೃಪ್ತ ಬ್ರಹ್ಮ ರಾಕ್ಷಸರ ಅಟ್ಟಹಾಸ
ಜಗದ ಗಡಿಯಾರವನು ಭೂತಃಕಾಲಕೆ ಹಿಮ್ಮೆಟ್ಟಿಸಿತು
ಇವೆಲ್ಲದರ ನಡುವೆ
ವಿನಾಶದ ಜ್ವಾಲಾಮುಖಿಯ ಶಾಖಕೆ ವಿರೂಪಗೊಂಡ ದೇಹಗಳ ರಾಶಿ
ಮುಕ್ತಿ ಕಾಣದೆ ಕನಲುತಲೇ ಇತ್ತು!!
ಡಾ. ಸತ್ಯಪ್ರಕಾಶ್ ಎಂ ಆರ್ ಮೂಲತಃ ಬೆಂಗಳೂರಿನವರು.
ಪತ್ರಕರ್ತರಾಗಿ ವೃತ್ತಿಜೀವನವನ್ನು ಆರಂಭಿಸಿ ನಂತರ ಅಧ್ಯಾಪನ ವೃತ್ತಿಯನ್ನು ಆರಿಸಿಕೊಂಡವರು.
ಪ್ರಸ್ತುತ ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಮಾಧ್ಯಮ ಉದ್ಯಮ, ದಲಿತ ವೀರನಾರಿಯರ ಸಂಕಥನ, ಸಂಸತ್ತಿನಲ್ಲಿ ಡಾ. ಬಾಬು ಜಗಜೀವನ್ ರಾಮ್ ಭಾಷಣಗಳು ಇವರ ಈ ಪ್ರಕಟಿತ ಕೃತಿಗಳು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ