ಪುರಾಣ ಕಥೆಗಳು ನಮ್ಮ ಪೂರ್ವಜರ ಕಥೆಗಳೆಂದು ನಂಬಿರುವ ಜನಪದರು ಅವುಗಳನ್ನು ತಮ್ಮ ಜ್ಞಾನ ಮಾರ್ಗಗಳೆಂದು ಒಪ್ಪಿಕೊಂಡಿದ್ದಾರೆ. ಬಹುತೇಕ ಇವು ಮತ ಧರ್ಮಗಳನ್ನಾಧರಿಸಿ ಬೆಳೆಯುತ್ತವೆ. ಬಹು ಸಂಸ್ಕೃತಿಯ ದೇಶವಾಗಿರುವ ನಮ್ಮಲ್ಲಿ ಸೃಷ್ಟಿ ಸ್ಥಿತಿ ಲಯದ ರೂಪಗಳಾದ ತ್ರಿಮೂರ್ತಿಗಳ ಕುರಿತು ಅನೇಕ ಪುರಾಣ ಕಥೆಗಳಿವೆ. ಅದರಲ್ಲಿ ಬ್ರಹ್ಮನನ್ನು ಕುರಿತು ಅವನ ಹುಟ್ಟು, ಶಿರಶ್ಚೇದನ, ಸ್ತ್ರೀ ಸಂಬಂಧ ಆಪಾದನೆಗಳು ಬಹಳಷ್ಟು ಇದ್ದು ಬ್ರಹ್ಮನಿಗೆ ಪೂಜೆ ಸಲ್ಲದಿರಲಿ ಎಂಬ ಶಾಪವಿದೆ. ಇವೆಲ್ಲವೂ ಆಯಾ ಕಾಲಮಾನಕ್ಕೆ ತಕ್ಕಂತೆ ಬ್ರಹ್ಮನ ಪ್ರಸಿದ್ಧಿಯನ್ನು ಕಡಿಮೆ ಮಾಡುವ ಹುನ್ನಾರದಿಂದ ಹುಟ್ಟಿಕೊಂಡ ಕಥೆಗಳಾಗಿ ನಮಗೆ ತೋರುತ್ತವೆ.
ಶ್ರೀರಾಮ ಇಟ್ಟಣ್ಣವರ ಬರೆದ “ಭರಮದೇವರು” ಕೃತಿಯ ಕುರಿತು ತೇಜಾವತಿ ಡಿ.ಎಸ್. ಬರಹ
ಕರ್ನಾಟಕದ ಪ್ರಾಚೀನ ದೇವರುಗಳಲ್ಲಿ ಭರಮದೇವರೂ ಒಬ್ಬನಾಗಿದ್ದು ಈತ ಹಾಲುಮತ ಸಮುದಾಯದ ಪ್ರಸಿದ್ಧ ದೈವಗಳಲ್ಲಿ ಒಬ್ಬನಾದ ಬೀರದೇವರ ತಂದೆ. ಈವರೆಗೂ ಭರಮದೇವರ ಕುರಿತು ಪೂರ್ಣ ಚೌಕಟ್ಟು ದೊರೆಯದ ಕಾರಣ ಉಪೇಕ್ಷೆಗೊಳಪಟ್ಟ ಭರಮದೇವರ ಕುರಿತು ಚಾರಿತ್ರಿಕ, ಪೌರಾಣಿಕ, ಸಾಂಸ್ಕೃತಿಕ ವಿಶ್ಲೇಷಣೆಗೊಳಪಡಿಸಿ ಸಂಶೋಧನೆ ಕೈಗೊಂಡವರು ಶ್ರೀರಾಮ ಇಟ್ಟಣ್ಣವರ ಅವರು. ಜಾನಪದೀಯ ಬುನಾದಿಯಿರುವ ಭರಮದೇವರನ್ನು ಕುರಿತು ಲಿಖಿತ, ಮೌಖಿಕ ಆಕರಗಳು, ಕ್ಷೇತ್ರ ಕಾರ್ಯಗಳ ಮೂಲಕ ವಿಸ್ತೃತ ಮತ್ತು ಆಳ ಅಧ್ಯಯನಕ್ಕೆ ಸಹಕಾರಿಯಾಗಬಲ್ಲ ಈ ಗ್ರಂಥವನ್ನು ರಚಿಸಿದ್ದಾರೆ. ಮೂಲತಃ ಕುರುಬರು ಬ್ರಹ್ಮನ ಆರಾಧಕರೆಂಬ ಅಂಶವನ್ನು ಮುಂದಿಟ್ಟು ತತ್ವಗಳ ಜಿಜ್ಞಾಸೆಯಲ್ಲಿ ಪುರಾಣಗಳಲ್ಲಿ ಅಗಾಧವಾಗಿ ಚಾಚಿಕೊಂಡಿದ್ದ ಬ್ರಹ್ಮನನ್ನು ಕುರುಬರು ಭರಮನೆಂದು ಪೂಜಿಸುತ್ತಾರೆಂಬ ನಿಲುವು ಇಲ್ಲಿ ವ್ಯಕ್ತವಾಗಿದೆ.
“ಹಾಲುಮತವೋ ಹರವು ಸಾಗರ” ಎನ್ನುವಂತೆ ಹಾಲುಮತವು ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿದೆ. ಬೆಟ್ಟಗುಡ್ಡ ಕಾಡು-ಮೇಡುಗಳಲ್ಲಿ ಕುರಿಕಾಯ್ದುಕೊಂಡಿದ್ದ ಕುರುಬ ಜನಾಂಗ ವಿಸ್ತಾರವಾದದ್ದು. ಸಾಂಸ್ಕೃತಿಕವಾಗಿ ವಿವಿಧ ಅವಸ್ಥೆಗಳನ್ನು ದಾಟಿ ಬಂದಿರುವ ಈ ಜನಾಂಗದ ಅಧ್ಯಯನಗಳಲ್ಲಿ ಉಳಿದುಹೋದ ಒಂದು ದೈವ ಭರಮದೇವ. ಉತ್ತರ ಕರ್ನಾಟಕದಲ್ಲಿ ಅವನ ಗುಡಿಗಳು ಹೇರಳವಾಗಿವೆ. ಪೌರಾಣಿಕ, ಚಾರಿತ್ರಿಕ ಮತ್ತು ಜನಪದೀಯ ಹರಹುಗಳಲ್ಲಿ ಜನಸಾಮಾನ್ಯರೊಡನೆ ಬೆರೆತಿರುವ ಭರಮಪ್ಪನ ಸಾಮಾಜಿಕ ಸಾಮರಸ್ಯವನ್ನು ಎತ್ತಿ ಹಿಡಿಯುವುದು ಈ ಪುಸ್ತಕದ ಮುಖ್ಯ ಉದ್ದೇಶವಾಗಿದೆ. ಜಾನಪದ ಸೊಗಡಿನಿಂದ ಕೂಡಿರುವ ಭರಮದೇವನನ್ನು ಮೂರು ಹಂತಗಳಲ್ಲಿ ವಿಸ್ತರಿಸಲಾಗಿದೆ. ಮೊದಲನೆಯದು ಈತ ಸೃಷ್ಟಿಕರ್ತನಾದ ಬ್ರಹ್ಮನೇ ಎಂಬುದು. ಎರಡನೆಯದು ಇವನು ಕುರುಬ ಮತದ ದೇವರೆನ್ನುವುದು. ಮೂರನೆಯದು ಭರಮದೇವ ಎಲ್ಲ ಸಮುದಾಯಗಳ ದೇವರೆನ್ನುವುದು. ಈ ಅಧ್ಯಯನವು ಜನಪದೀಯವಾಗಿ ನಿರೂಪಿತವಾಗಿದ್ದು ಭರಮದೇವನ ಭಕ್ತರ ಸ್ವೀಕಾರದ ಅಂತರ್ಶಿಸ್ತೀಯ ಅಧ್ಯಯನವನ್ನು ಒಳಗೊಂಡಿದೆ.
ಮೌಖಿಕ ಪರಂಪರೆಯ ವಾಹಕಗಳಾಗಿರುವ ಡೊಳ್ಳಿನ ಹಾಡುಗಳು ಸಾಕಷ್ಟು ಮಾಹಿತಿಯನ್ನು ಕಲೆಹಾಕಿವೆ. ಅಲ್ಲದೆ ಎಲ್ಲ ಕಾಲಮಾನದ ಲೇಖಕರ ಬರಹಗಳಿಂದಲೂ ಪೂರಕ ಅಂಶಗಳನ್ನು ಒದಗಿಸಿಕೊಳ್ಳಲಾಗಿದೆ.
ಪ್ರಸ್ತುತ ಪುಸ್ತಕದಲ್ಲಿ ಒಟ್ಟು ಎಂಟು ಪ್ರಕರಣಗಳಿದ್ದು ಮೊದಲನೆಯ ಪ್ರಕರಣವು ಪುಸ್ತಕ ರಚನೆಗೆ ಹಿನ್ನೆಲೆಯಾದ ಪ್ರೇರಣಾಂಶ ಮತ್ತು ಉದ್ದೇಶಗಳನ್ನು ಹೇಳಿದರೆ ಎರಡನೆಯದು ಅಧ್ಯಯನದ ಸ್ವರೂಪವನ್ನು ತಿಳಿಸುತ್ತದೆ. ಇಲ್ಲಿ ಭರಮದೇವನ ಜೀವನದ ಸ್ಥಿತ್ಯಂತರಗಳನ್ನು ಹಂತ ಹಂತವಾಗಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಮೂರನೆಯದು ಪೌರಾಣಿಕ ಹಿನ್ನೆಲೆಯನ್ನು ತಿಳಿಸಿದರೆ ನಾಲ್ಕನೆಯದು ಮೌಕಿಕ ಪರಂಪರೆ ಹುಟ್ಟು ಹಾಕಿದ ಕಾವ್ಯಗಳ ವಿವರಣೆಯನ್ನು (ಡೊಳ್ಳಿನ ಹಾಡುಗಳು) ತಿಳಿಸುತ್ತದೆ. ಐದನೆಯದು ಮೌಖಿಕ ಹಾಡುಗಳ ಪ್ರೇರಣೆಯಿಂದ ಸೃಷ್ಟಿಗೊಂಡ ಹಾಲುಮತ ಪುರಾಣಗಳನ್ನು ವಿವರಿಸಿದರೆ ಆರನೆಯದು ಚಾರಿತ್ರಿಕ ಅನುಸಂಧಾನದಿಂದ ಪೌರಾಣಿಕ ಆವರಣದಲ್ಲಿ ತೋರುವ ಭರಮದೇವನನ್ನು ಕುರಿತು ಚರ್ಚಿಸುತ್ತದೆ. ಏಳನೆಯದು ಭರಮದೇವನ ಭಕ್ತ ಸಮುದಾಯ ಗುಡಿಗುಂಡಾರ ಪೂಜಾ ವಿಧಾನಗಳನ್ನು ಹೇಳುತ್ತದೆ (ಸಾಂಸ್ಕೃತಿಕ ಪರಿಚಲನೆ). ಕೊನೆಯ ಪ್ರಕರಣವು ಸಮಾರೋಪ.
ಪುರಾಣ ಕಥೆಗಳು ನಮ್ಮ ಪೂರ್ವಜರ ಕಥೆಗಳೆಂದು ನಂಬಿರುವ ಜನಪದರು ಅವುಗಳನ್ನು ತಮ್ಮ ಜ್ಞಾನ ಮಾರ್ಗಗಳೆಂದು ಒಪ್ಪಿಕೊಂಡಿದ್ದಾರೆ. ಬಹುತೇಕ ಇವು ಮತ ಧರ್ಮಗಳನ್ನಾಧರಿಸಿ ಬೆಳೆಯುತ್ತವೆ. ಬಹು ಸಂಸ್ಕೃತಿಯ ದೇಶವಾಗಿರುವ ನಮ್ಮಲ್ಲಿ ಸೃಷ್ಟಿ ಸ್ಥಿತಿ ಲಯದ ರೂಪಗಳಾದ ತ್ರಿಮೂರ್ತಿಗಳ ಕುರಿತು ಅನೇಕ ಪುರಾಣ ಕಥೆಗಳಿವೆ. ಅದರಲ್ಲಿ ಬ್ರಹ್ಮನನ್ನು ಕುರಿತು ಅವನ ಹುಟ್ಟು, ಶಿರಶ್ಚೇದನ, ಸ್ತ್ರೀ ಸಂಬಂಧ ಆಪಾದನೆಗಳು ಬಹಳಷ್ಟು ಇದ್ದು ಬ್ರಹ್ಮನಿಗೆ ಪೂಜೆ ಸಲ್ಲದಿರಲಿ ಎಂಬ ಶಾಪವಿದೆ. ಇವೆಲ್ಲವೂ ಆಯಾ ಕಾಲಮಾನಕ್ಕೆ ತಕ್ಕಂತೆ ಬ್ರಹ್ಮನ ಪ್ರಸಿದ್ಧಿಯನ್ನು ಕಡಿಮೆ ಮಾಡುವ ಹುನ್ನಾರದಿಂದ ಹುಟ್ಟಿಕೊಂಡ ಕಥೆಗಳಾಗಿ ನಮಗೆ ತೋರುತ್ತವೆ. ಶಿವ ಮತ್ತು ವಿಷ್ಣುವಿಗೆ ದೊರೆತ ಪ್ರಾಶಸ್ತ್ಯ ಬ್ರಹ್ಮನಿಗೆ ಇಲ್ಲದಿದ್ದಾಗ ಕುರುಬರು ಬ್ರಹ್ಮದೇವನನ್ನು ಅಪ್ಪಿಕೊಂಡು ಮುಂದುವರೆದಿರುವುದು ಇಲ್ಲಿ ಕಂಡು ಬರುತ್ತದೆ. ಸೃಷ್ಟಿಕರ್ತನಾದ ಬ್ರಹ್ಮನು ಹಾಲುಮತದ ಭರಮದೇವನೆನ್ನುವುದಕ್ಕೆ ಪುರಾವೆಗಳನ್ನು ಸಾಬೀತುಪಡಿಸುವಲ್ಲಿ ಪರಂಪರಾಗತ ನಂಬಿಕೆ, ಭಾಷಿಕ ಸಮರ್ಥನೆ, ಹಾಲುಮತದ ಕಾವ್ಯಪುರಾಣಗಳಲ್ಲಿ ಬ್ರಹ್ಮ-ಭರಮರ ಸಮನ್ವಯದ ಬಳಕೆ, ಶಂಬಾ ಜೋಶಿ ಬೆಟಗೇರಿ ಕೃಷ್ಣಶರ್ಮರ ವಿವರಗಳು, ಮೇಷ ಬ್ರಹ್ಮನ ವಾಹನ, ಪಂಜಾಬಿನ ಕುರುಬರಲ್ಲಿನ ಮಾಹಿತಿಗಳು ಪ್ರಮುಖವಾಗುತ್ತವೆ. ಲೇಖಕರು ಅವುಗಳನ್ನು ಸೂಕ್ತ ನಿದರ್ಶನಗಳ ಮೂಲಕ ಪುಷ್ಟೀಕರಿಸುತ್ತಾರೆ.
ಮೌಖಿಕ ಪರಂಪರೆಯಲ್ಲಿ ಮಾರಗದ ಹಾಡುಗಳ ಮೂಲಕ ಹಲವು ಸಂದುಗಳಲ್ಲಿ ರಚನೆಯಾಗುತ್ತವೆ. ಅದರಲ್ಲಿ ಹಾಲು ಮತದ ಮೂರು ಪ್ರಧಾನ ಮಾರಗಗಳಾದ ಬೀರದೇವರ ಮಾರಗ, ಮಾಳಿಂಗರಾಯನ ಮಾರಗ, ಅಮೋಘಸಿದ್ಧನ ಮಾರಗಗಳು ಹಾಲುಮತದ ಬಹುದೊಡ್ಡ ಆಸ್ತಿಯಾಗಿದ್ದು ಭರಮದೇವನನ್ನು ಕುರಿತಾದ ಶೋಧನೆಗೆ ಡಾ. ವೀರಣ್ಣ ದಂಡೆಯವರು ಸಂಪಾದಿಸಿರುವ ‘ಜನಪದ ಹಾಲುಮತ ಮಹಾ ಕಾವ್ಯ’ ಮುಖ್ಯ ಮಾಹಿತಿಯನ್ನು ಒದಗಿಸುತ್ತದೆ. ಭರಮದೇವನ ಮುಗ್ಧ ಮನಸ್ಸಿನ ಸ್ವಾಭಿಮಾನಿ ಸ್ವಭಾವ ಗುಣಗಳನ್ನು ಇಲ್ಲಿ ಅರಿಯಬಹುದು. ಮುಂದುವರೆದು ಕಥನರೂಪದ ಹಾಡು ಹಾಗೂ ಸ್ತೋತ್ರ ರೂಪದ ಹಾಡುಗಳಲ್ಲಿಯೂ ಭರಮದೇವನನ್ನು ಕುರಿತು ಹಲವು ಸೂಕ್ಷ್ಮಗಳು ದೊರೆಯುತ್ತವೆ. ಅವನ ಗುಡಿಗಳು ಬೇವಿನ ಮರ ಮತ್ತು ಅರಳಿಮರದ ನೆರಳಲ್ಲಿ ಕಂಡುಬರುತ್ತದೆ ಎಂದು ಹೇಳುತ್ತಲೇ ಇನ್ನಷ್ಟು ಸಂಶೋಧನೆಗೂ ಅವಕಾಶಗಳಿರುವುದನ್ನು ಈ ಕೃತಿ ಮನವರಿಕೆ ಮಾಡಿಕೊಡುತ್ತದೆ.
ಸದ್ಯ ಲಭ್ಯವಿರುವ ಐದು ಹಾಲುಮತ ಪುರಾಣಗಳನ್ನು ಆಧರಿಸಿ ಭರಮದೇವನ ವೃತ್ತಾಂತವನ್ನು ಅವಲೋಕಿಸಲಾಗಿದೆ. ಅವುಗಳೆಂದರೆ ಮೊದಲನೆಯದು ಭೀಮಕವಿಯ ‘ಹಾಲ್ಮತೋತ್ತೇಜಕ ಪುರಾಣ’. ಎರಡನೆಯದು ಶ್ರೀಕರಿಸಿದ್ದೇಶ್ವರ ಪುರಾಣ, ಮೂರನೆಯದು ಬೀರೇಶ್ವರ ಚರಿತ್ರೆ, ನಾಲ್ಕನೆಯದು ಹಾಲುಮತ ಪುರಾಣ, ಐದನೆಯದು ಶ್ರೀ ಬೀರಲಿಂಗೇಶ್ವರರ ಮಹಾಪುರಾಣ. ಭರಮದೇವ ಹಾಗೂ ಸುರಾವತಿಯ ಮಗನಾಗಿ ಬೀರಪ್ಪ ಜನಿಸುವುದನ್ನು ವಿವಿಧ ಕಾವ್ಯಗಳಲ್ಲಿ ಅಲ್ಪ ವ್ಯತ್ಯಾಸಗಳೊಂದಿಗೆ ವಿಭಿನ್ನ ರೀತಿಯಲ್ಲಿ ಹೇಳಲಾಗಿದೆ. ಶಿವನಿಂದ ಅನುಗ್ರಹಿತನಾಗಿ ಬೀರಪ್ಪ ಜನಿಸುತ್ತಾನೆ. ಭರಮದೇವನು ಕಮಲದೇವಿಯ ಪುತ್ರನೆಂಬುದಕ್ಕೆ ಹಲವು ಕಥೆಗಳಿವೆ. ಎಲ್ಲೆಡೆಯೂ ಭರಮದೇವ ಹಾಗೂ ಅವನ ಕುಟುಂಬವನ್ನು ಆಲಕ್ಷಿಸಿರುವ ಘಟನೆಗಳು ಮೌಖಿಕ ಹಾಗೂ ಪುರಾಣ ಕಾವ್ಯಗಳಲ್ಲಿ ಒಂದಕ್ಕೊಂದು ತಳುಕು ಹಾಕುತ್ತವೆ.
ಭರಮದೇವನ ಜನನದ ವಿಷಯದಲ್ಲಿ ಎರಡು ಭಿನ್ನ ಹೇಳಿಕೆಗಳಿವೆ. ಒಂದನೆಯದು ಭರಮದೇವನು ಶಿವನ ತೇಜಾಂಶದಿಂದ ಕಮಲದೇವಿಯಲ್ಲಿ ಹುಟ್ಟಿದವನು. ಇದು ಪೌರಾಣಿಕ ಹಿನ್ನೆಲೆಯಲ್ಲಿದ್ದರೆ ಎರಡನೆಯದು ಭರಮದೇವನು ನಿಲಂಕಾರ ಮಹಾರಾಜನ ಮಗ ಇದು ಚಾರಿತ್ರಿಕ ಹಿನ್ನೆಲೆಯನ್ನು ಹೇಳುತ್ತದೆ. ಹಾಲುಮತೋತ್ತೇಜಕ ಪುರಾಣದಲ್ಲಿ ಹರಿ ಮತ್ತು ಭರಮದೇವರ ನಡುವೆ ಪರಿಚಯ ಮಾಡಿಕೊಳ್ಳುವ ಮಾರ್ಗ ಇದಕ್ಕೆ ಪೂರಕವಾಗಿದೆ. (ವರ ಚಂದ್ರಗಿರಿ ಪುರಕ್ಕರಸು….) ಪುರಾಣ ಶಿಷ್ಟರಿಂದ ತೇಜೋವಧೆಗೊಳಗಾದ ಬ್ರಹ್ಮದೇವನನ್ನು ಯಾವುದೇ ಪುರಾಣಗಳಲ್ಲಿಯೂ ವಿವರಿಸಿಲ್ಲ. ಬೋನ ಅವರು ಉಪೇಕ್ಷಗೊಳಗಾದ ಭರಮ ಭೂಪಾಲನ ವ್ಯಕ್ತಿತ್ವವನ್ನು ಸಾಮಾಜಿಕರಣಗೊಳಿಸುತ್ತಾರೆ. ದೇವತೆಗಳಿಂದ ಕಾಡಿಸಿಕೊಂಡ ಬ್ರಹ್ಮ ಹಾಲುಮತ ಕಾವ್ಯ ಪುರಾಣಗಳಲ್ಲಿ ಸ್ಥಾನ ಪಡೆಯುತ್ತಾನೆ. ಮತ್ಸರದ ಭಾವಗಳು ದೇವತೆಗಳಲ್ಲೂ ತಪ್ಪಿಲ್ಲ. ಈ ಕಾರಣದಿಂದಲೇ ಬ್ರಹ್ಮನನ್ನು ಮೂಲೆಗುಂಪಾಗಿಸಿದ್ದು. ಅವನನ್ನು ಪೂಜಿಸುವ ಭಕ್ತರಿಗೂ ಶಾಪ ನೀಡಿ ಬ್ರಹ್ಮನು ಕಾಡುವ ದೇವರೆಂದು ಕಥೆ ಕಟ್ಟಿದ್ದು. ಅದೇನೇ ಇದ್ದರೂ ಕುರುಬರ ಕೈಯಲ್ಲಿ ತಮ್ಮ ಕುಲದೇವ ಬೀರಪ್ಪನ ತಂದೆಯಾಗಿ ಸ್ಥಾನ ಪಡೆಯುತ್ತಾನೆ.
ಪ್ರಾಥಮಿಕ ಹಂತದಲ್ಲಿ ಭರಮದೇವ ಮನೆ ಬಾಗಿಲು, ಊರ ರಸ್ತೆಯ ತಿರುಗುಗಳು, ಕೋಟೆ ಕೊತ್ತಲಗಳಲ್ಲಿ, ಬಯಲು ಪ್ರದೇಶಗಳಲ್ಲಿ ಪೂಜಿಸಿದರೂ ತರುವಾಯದ ಹಂತದಲ್ಲಿ ಎಲ್ಲ ಸಮುದಾಯದವರ ಸಹಬಾಳ್ವೆಯೊಂದಿಗೆ ಅಚ್ಚದೇಶಿ ಮನಸ್ಸುಗಳ ಒಳಗೆ ನೆಲೆ ನಿಂತಿದ್ದಾನೆ. ಇತ್ತೀಚೆಗೆ ಭರಮದೇವನಿಗೆ ಸಣ್ಣ ಸಣ್ಣ ಗುಡಿಗಳು ಹಾಗೂ ಕೆಲವೆಡೆ ದೊಡ್ಡಗುಡಿಗಳು ನಿರ್ಮಾಣವಾಗಿವೆ. ದೀಪಾವಳಿಯಲ್ಲಿ ನಿರಾಕಾರ ಪೂಜೆಗೆ ಸಲ್ಲುತ್ತಿದ್ದ ಭರಮದೇವ ನಂತರದಲ್ಲಿ ಸಾಕಾರ ಪೂಜೆಗೂ ದಕ್ಕಿದ್ದಾನೆ. “ಊರ ಕಾವಲಿಗೆ ಸೀಮಿಯ ಭರಮ| ಪಾರೆ ಮಾಡ್ತಾನ ಶ್ರೀ ಬಲಭೀಮ” ಎನ್ನುವ ಆನಂದ ಕಂದರ ಮಾತಿನಂತೆ ಭರಮದೇವ ರಕ್ಷಕನಾಗಿ ಪೂಜೆಗೊಳುತ್ತಾನೆ. ಕುರುಬರು ಮೂಲ ಪಶುಪಾಲಕರಾಗಿದ್ದ ಕಾರಣದಿಂದ ಅಡವಿಯಲ್ಲಿ ಕುರಿ ಮೇಯಿಸಿಕೊಂಡು ಹೋದಲ್ಲೆಲ್ಲ ದುಂಡನೆಯ ಕಲ್ಲನ್ನಿಟ್ಟು ತಮ್ಮ ರಕ್ಷಕನಾಗಿ ಬಯಲಿನಲ್ಲಿ ಭರಮದೇವನನ್ನು ಪೂಜಿಸುತ್ತಿದ್ದರು. ಇಲ್ಲಿ ಭರಮದೇವ ಕಾಡುವ ದೇವರಾಗಿಯೂ ಹಾಗೂ ಕಾಯುವ ದೇವರಾಗಿಯೂ ಕಾಣುತ್ತಾನೆ. ಭರಮದೇವನನ್ನು ಶಿಷ್ಟರೆಲ್ಲ ಕೂಡಿ ನಿಘಂಟು ಜನಪದ ವಿಶ್ವಕೋಶಗಳಲ್ಲಿ ಭೂತ ಕ್ಷುದ್ರದೇವತೆ ದೆವ್ವವೆಂದು ಕರೆದಿದ್ದಾರೆ. ಡೊಳ್ಳಿನ ಹಾಡುಗಳಲ್ಲಿ ಭರಮಪ್ಪ ಚಿಕ್ಕ ಮಕ್ಕಳನ್ನು ಸೊಸೆಯಂದಿರನ್ನು ತವರಿನ ಹೆಣ್ಣು ಮಕ್ಕಳನ್ನು ಕಾಡಿ ಅವರಿಂದ ಕಾಣಿಕೆ ಪಡೆಯುವುದು ಕಂಡುಬರುತ್ತದೆ.
ಜನಪದ ಸಂಸ್ಕೃತಿಯ ಮೂಲಗುಣ ಕೂಡಿ ಬಾಳುವುದು. ಭರಮದೇವನು ಎಲ್ಲ ವರ್ಗದ ಎಲ್ಲ ಸಮುದಾಯಗಳ ಜನರ ನಡುವಿನ ತಾರತಮ್ಯ ನಿರಾಕರಿಸಿ ಸಾಮಾಜಿಕ ಸಾಮರಸ್ಯ ಕಾಯುವ ದೇವರಾಗಿದ್ದಾನೆ. ಸಂಸ್ಕೃತೀಕರಣದ ಹಿನ್ನೆಲೆಯಲ್ಲಿ ಬೀರದೇವರು ಮಾಳಿಂಗರಾಯರ ಗುಡಿಗಳಂತೆ ಬ್ರಹ್ಮದೇವನ ಗುಡಿಗಳನ್ನು ಕಟ್ಟಿ ಬೆಳೆಸುವುದು ಭರಮದೇವನ ಭಕ್ತರ ಅಭಿಲಾಷೆಯಾಗಿದ್ದು ಈ ಕಾರ್ಯಗಳು ಪ್ರಗತಿಯಲ್ಲಿವೆ. ಶಿವಾನಂದ ಜಮಾದಾರರ ಮುಳುಗಡೆಯಾಗುವ ಗುಡಿಗಳ ಸರ್ವೇಕ್ಷಣ ಕಾರ್ಯದಿಂದ ಭರಮದೇವನ ಗುಡಿಗಳ ಬಗ್ಗೆ ಒಂದಷ್ಟು ನಿಖರ ಮಾಹಿತಿ ದೊರಕುತ್ತದೆ. ಬೀರದೇವರು ಮಾಳಿಂಗರಾಯ ಅಮೋಘಸಿದ್ಧರ ಕಾವ್ಯಗಳಂತೆ ಭರಮದೇವನನ್ನು ಕುರಿತ ಕಾವ್ಯ ರಚಿಸುವ ಅಗತ್ಯವಿದೆ. ಈ ಕಾರ್ಯಕ್ಕಾಗಿ ಇನ್ನು ಹಲವಾರು ಸಂಶೋಧನೆಗಳು ನಡೆಯಬೇಕಿವೆ. ಈ ನಿಟ್ಟಿನಲ್ಲಿ ನಿಜಕ್ಕೂ ಈ ಕೃತಿ ಮುಂದಿನ ಹೆಜ್ಜೆಗಳಿಗೆ ಒಂದು ದಾರಿದೀಪವಾಗಬಲ್ಲದು.
(ಕೃತಿ: ಭರಮದೇವರು, ಲೇಖಕರು: ಶ್ರೀರಾಮ ಇಟ್ಟಣ್ಣವರ, ಪ್ರಕಾಶಕರು: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ಬೆಲೆ: 100/-)
ತೇಜಾವತಿ ಎಚ್ ಡಿ ತುಮಕೂರು ಜಿಲ್ಲೆಯ ಹುಳಿಯಾರಿನವರು. ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲಚಕ್ರ (2019), ಮಿನುಗುವ ತಾರೆ (2019), ಬಾ ಭವಿಷ್ಯದ ನಕ್ಷತ್ರಗಳಾಗೋಣ (2021) ಇವರ ಪ್ರಕಟಿತ ಕೃತಿಗಳು. ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ, ದೆಹಲಿಯ ಪ್ರಜಾಪತಿ ಪತ್ರಿಕೆ ಕೊಡಮಾಡುವ ಕಾವ್ಯ ಸಮ್ಮಾನ್ ಹಾಗೂ ಸಿರಿ ಕಾವ್ಯ ಪ್ರಶಸ್ತಿ ಲಭಿಸಿವೆ.