ದೇಶಸೇವೆಗೆ ನಿಷ್ಠರಾಗಿರುವ ಪಡೆಯನ್ನೇ ಹಿಂದಿನ ಕಾಲದಲ್ಲಿ ರಾಜರು ಕಟ್ಟುತ್ತಿದ್ದರು.‌ ಸಮಯದ ಹಂಗಿಲ್ಲದೆ ಜೀವದ ಹಂಗಿಲ್ಲದೆ ರಾಜ್ಯಕ್ಕಾಗಿ, ರಾಜನ ಕ್ಷೇ‌ಮಕ್ಕಾಗಿ ಪ್ರಾಣ ಕೊಡುವವರ ಸಮೂಹವೇ ಇರುತ್ತಿತ್ತು. ಅವರನ್ನು ಜೋಳವ್ಯಾಳಿಗಳು, ವೇಳೆವಾಳಿಗಳು ಎಂದು ಕರೆಯುತ್ತಿದ್ದರು.ಅವರ ಬಗ್ಗೆ ಅನೇಕ ಕಥೆ, ಕವನ ಲಾವಣಿಗಳು ಸೃಷ್ಟಿಯಾಗುತ್ತಿದ್ದವು, ಕನ್ನಡ ಸಾಹಿತ್ಯ ಲೋಕದಲ್ಲಿ ಈ ಎರಡು ಪದಗಳ ಬಳಕೆಯು ಯಾವೆಲ್ಲ ಸಂದರ್ಭಗಳಲ್ಲಿ ಉಲ್ಲೇಖವಾಗಿವೆ ಎಂಬುದನ್ನು ಅವಲೋಕಿಸಲು ನಡೆಸಿದ ಪ್ರಯತ್ನವಿದು. ‘ವೇಳೆವಾಳಿಗಳು’, ‘ಜೋಳವಾಳಿಗಳು’ ಎಂಬ ಪದಗಳ ಕುರಿತು ವಿಶ್ಲೇಷಿಸಿದ್ದಾರೆ ಸುಮಾವೀಣಾ.

 

ಪಂಪನ ‘ವಿಕ್ರಮಾರ್ಜುನ ವಿಜಯ’ ಮೊದಲ್ಗೊಂಡು ಆಧುನಿಕ ಸಾಹಿತ್ಯದಲ್ಲೂ ‘ವೇಳೆವಾಳಿಗಳು’, ‘ಜೋಳವಾಳಿ’ ಪದಗಳು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಪ್ರಸ್ತಾಪಕ್ಕೆ ಬರುತ್ತದೆ. ಮೊದಲಿಗೆ ಈ ಪದಗಳ ಅರ್ಥ ತಿಳಿಯುವುದಾದರೆ ಒಡೆಯನ ಉಪ್ಪಿನ ಹಂಗು, ಅನ್ನದ ಋಣತೀರಿಸುವ ಸಂಕಲ್ಪಕ್ಕೆ ಜೋಳವಾಳಿ ಎಂದೂ,  ಒಡೆಯನು ಮರಣ ಹೊಂದಿದರೆ ಅವನ ಸೇವಕನು ತಾನೂ ಸಾಯುವುದಾಗಿ ಪ್ರತಿಜ್ಞೆ ಮಾಡಿ ಅದರಂತೆ ನಡೆದುಕೊಳ್ಳುವ ಪದ್ಧತಿಗೆ ‘ವೇಳೆವಾಳಿ’ ಎಂದೂ ಕರೆಯುತ್ತಾರೆ. (ಒಡೆಯನ ಸಲುವಾಗಿ ಪ್ರಾಣ ಕೊಡಲು ಸಿದ್ಧವಾಗಿರುವ ನಿಷ್ಠಾವಂತ ಆಳಿನ ಕರ್ತವ್ಯ ನಿಷ್ಠೆಗೆ ಲೆಂಕವಾಳಿ ಎಂದು ಕರೆಯುವುದಿದೆ) ಹಾಗೆ ರಾಜನ ಪರವಾಗಿ ಹೋರಾಟ ಮಾಡಿ ಮಡಿದವರಿಗಾಗಿ ವೀರಗಲ್ಲುಗಳನ್ನು ನೆಡುವ ಪದ್ಧತಿಯೂ ಇತ್ತು.

ಜೋಳವಾಳಿ, ವೇಳೆವಾಳಿ ಎನ್ನುವುದು ಪಂಪನಲ್ಲಿ, ಬಸವಣ್ಣನವರಲ್ಲಿ, ಮಾಸ್ತಿಯವರ(ಹೊಯಿಸಳನ ದಳಪತಿ) ಕತೆಗಳಲ್ಲಿ ಕಂಡರೆ, ಅನಕೃ(ಗಿರಿಜವ್ವನರೊಟ್ಟಿ) ರವರ ಕತೆ, ಜೈಸಿದ್ದನಾಯ್ಕ ನಾಟಕದಲ್ಲಿ ‘ಜೋಳವಾಳಿ’ ಪದವನ್ನು ಕಾಣಬಹುದು. ಪಂಪ ಕನ್ನಡದ ಆದಿಕವಿ ಕವಿ ಹಾಗು ಕಲಿಯಾಗಿದ್ದವನು ಲೇಖನಿ ಹಿಡಿದು ಕಾವ್ಯಗಳನ್ನು ಬರೆದಂತೆಯೇ ಖಡ್ಗವನ್ನು ಹಿಡಿದು ಯುದ್ಧವನ್ನೂ ಮಾಡುತ್ತಿದ್ದ. ಇವನ ಹಾಗೆ ಯುದ್ಧವೀರ ಹಾಗು ಕವಿಯಾಗಿದ್ದವನು ಜನ್ನ. ಈತ ಬಲ್ಲಾಳನ ಮಗ ನರಸಿಂಹನ ಆಸ್ಥಾನದಲ್ಲಿರುತ್ತಾನೆ. “ನಿಂದಿರೆ ದಂಡಾಧೀಶಂ ಕುಳ್ಳಿರೆ ಮಂತ್ರಿ ತೊಡರಿಕೆ ಕವಿ” ಎಂಬ ಮಾತಿನಿಂದಲೇ ಈತನನ್ನು ಗುರುತಿಸುವುದಿದೆ. ಕವಿಚಕ್ರವರ್ತಿ ಪಂಪ ಕನ್ನಡನಾಡಿನ ಹಿರಿಮೆಗರಿಮೆಗಳ ಕುರಿತು ಹೇಳಿದಷ್ಟೇ ಸುಭಗವಾಗಿ ಜೋಳವಾಳಿಯ ಬಗ್ಗೆ ಉಲ್ಲೇಖಿಸಿದ್ದಾನೆ. ಉದಾಹರಣೆಗಾಗಿ ವಿಕ್ರಮಾರ್ಜುನ ವಿಜಯದ ದಶಮಾಶ್ವಾಸದ 43ನೆಯ ಪದ್ಯವನ್ನು ನೋಡೋಣ!

ಸುರಲೋಕಂ ದೊರೆಕೊಳ್ವುದೊಂದು ಪರಮ ಶ್ರೀಲಕ್ಷಮಿಯುಂ ಬರ್ಪುದಾ
ದರದಿಂ ದೇವನಿಕಾಯದೊಳ್ ನೆರೆವುದೊಂದುತ್ಸಾಹಮುಮಂ ತನ್ನ ಮೆ|
ಯ್ಸಿರಿ ಭಾಗ್ಯಂ ನೆರಮಪ್ಪುದೊಂದೆ ರಣದೊಳ್ ಗೆಲ್ಜಾಜಿಯಂ ತಳ್ತು ಸಂ
ಗರದೊಳ್ ಜೋಳದಪಾಳಿಯಂ ನೆರಪಿದಂ ಗಂಡಂ ಪೆರರ ಗಂಡನೇ||

ಈ ಪದ್ಯದ ಪ್ರಕಾರ ದೇವಲೋಕ ಪ್ರಾಪ್ತಿಯಾಗುವುದು ಒಂದು ಫಲ, ಹಾಗೆಯೇ ಉತ್ತಮ ಐಶ್ವರ್ಯವೂ ಪ್ರಾಪ್ತವಾಗುವುದು ಒಂದು ಫಲ. ನನ್ನ ಉತ್ಸಾಹವೂ ಮೆಯ್ಸಿರಿಯೂ ಹೆಚ್ಚುವುದು. ಇಂತಹ ಒಂದು ಯುದ್ಧದಲ್ಲಿ ಭಾಗವಹಿಸಿ ವಿಜಯಶಾಲಿಯಾಗಿ ಅನ್ನದ ಋಣವನ್ನು ತೀರಿಸಿದವನೇ ನಿಜವಾಗಿಯೂ ಶೂರ. ಬೇರೆಯವನು ಶೂರನೆ? ಎಂದು ಸೈನಿಕನೊಬ್ಬನು ಮಾತನಾಡುತ್ತಾನೆ. ಹಾಗೆ ಇನ್ನೊಬ್ಬ ಸೈನಿಕ ‘ಕುದುರೆಯಟ್ಟೆಯು ಮೊಂದೆರಡಾನೆಯಟ್ಟೆಯುಂ ತೊಡರ್ದನಾಡೆ ತಳ್ತಿರಿಯದಿರ್ದೊಡೆ ಜೋಳದ ಪಾಳಮನೆಂತು ನೀಗುವೆಂ’ ಎಂದು ಕುದುರೆ ಆನೆಗಳ ಮುಂಡಗಳು ಕತ್ತಿಗೆ ಸಿಕ್ಕಿ ಜೊತೆಯಲ್ಲಿ ಕುಣಿಯುವಂತೆ ಸಂತೋಷದಿಂದ ಸಂಧಿಸಿ ಕಾದದಿದ್ದರೆ ಜೋಳದ ಋಣವನ್ನು ಹೇಗೆ ತೀರಿಸುತ್ತೇನೆ ಎಂದು ತನ್ನ ಹಂಗನ್ನು ಸಹರ್ಷವಾಗಿ ತೀರಿಸಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸುತ್ತಾನೆ.

ನಂತರದಲ್ಲಿ ವಿಕ್ರಮಾರ್ಜುನ ವಿಜಯದ ಚತುರ್ದಶಾಸ್ವದ 50 ನೆ ಪದ್ಯದಲ್ಲಿ,

ಕವಿತೆ ನೆಗಳ್ತೆಯಂ ನಿಳಿಸೆ ಜೋಳದ ಪಾಳೀ ನಿಜಾಧಿನಾಥನಾ
ಹವದೊಳರಾತಿನಾಯಕರ ಪಟ್ಟನೆ ಪಾರಿಸೆ ಸಂದ ಪೆಂಪು ಭೂ|
ಭುವನದೊಳಾಗಳುಂ ಬೆಳಗೆ ಮಿಕ್ಕಭಿಮಾನದ ಮಾತು ಕೀರ್ತಿಯಂ
ವಿವರಿಸೆ ಸಂದನೇಂ ಕಲಿಯೋ ಸತ್ಕವಿಯೋ ಕವಿತಾಗುಣಾರ್ಣವಂ

ಅರ್ಥಾತ್ ತನ್ನ ಕವಿತ್ವವು ಖ್ಯಾತಿಯನ್ನು ಸ್ಥಾಪಿಸಿತು. ಅನ್ನ ದಾತನಲ್ಲಿದ್ದ ಉಪ್ಪಿನ ಋಣವು ತನ್ನ ರಾಜನ ಯುದ್ಧದಲ್ಲಿ ಶತ್ರುನಾಯಕರ ವೀರಪಟ್ಟಗಳನ್ನು ಹಾರಿಸುವಂಥ ಹಿರಿಮೆಯನ್ನೂ ತನ್ನ ಯಶಸ್ಸನ್ನೂ ವಿವರಿಸಿತು. ಪಂಪಕವಿ ಎಂತ ಶೂರನೋ ಎಂಥ ಸತ್ಕವಿಯೋ ಎಂಬುದಾಗಿ ವಿವರಿಸಿದೆ.

‘ಅಭಿನವ ಪಂಪ’ನೆಂದು ಬಿರುದಾಂಕಿತನಾಗಿರುವ ನಾಗಚಂದ್ರನೂ ಕೂಡ ‘ರಾಮಚಂದ್ರಚರಿತಪುರಾಣ’ದಲ್ಲಿ
ಸೆರಗಂ ವರೆಗಂ ಬಗೆಯದೆ

ಪೊರೆದಾಳ್ವನ ಜೋಳವಾಳೀ ನಿಲೆ ಗೋಲಾಯ್ಲರ್||
ಪರಿಯಿಪುದುಮೊಂದೆ ಕೇಣೊಳ್
ಸರಿವಂತಿರೆ ಸರಿದುವುಭಯ ಬಲದ ಹಯಂಗಳ್||

ಎಂದು ಬರೆದಿದ್ದಾನೆ. ಅಂದರೆ ಹಿಂದು ಮುಂದು ಆಲೋಚಿಸದೆ ಆಳುವ ದೊರೆಯ ಪರವಾಗಿ ನಿಷ್ಠೆಯಿಂದ ಯುದ್ಧ ಮಾಡುವ ಜೋಳವಾಳಿ ಪಡೆ ಇದ್ದರೆ ಎಂಥ ಬಲಿಷ್ಟ ಸೈನ್ಯವೂ ಹತ್ತಿರ ಸುಳಿಯಲಾರದು ಎಂದು ಹೇಳಿದ್ದಾನೆ. ಜೋಳವಾಳಿ ಅಂದರೆ ನಿಷ್ಠೆಗೆ ಇನ್ನೊಂದು ಹೆಸರು ಎಂಬುದು ಇಲ್ಲಿ ವೇದ್ಯವಾಗುತ್ತದೆ.

ಭಕ್ತಿಭಂಢಾರಿ ಬಸವಣ್ಣ ಎಂದೇ ನಮ್ಮ ನಡುವಿರುವ ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಗಳಾಗಿದ್ದವರು. ಸ್ವಾತಂತ್ರ್ಯ, ಸ್ವಾಭಿಮಾನ ಎಂಬ ಮಾತುಗಳು ಬಂದಾಗ
ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ

ಜೋಳವಾಳಿಯವ ನಾನಲ್ಲ
ವೇಳೇವಾಳಿಯವ ನಾನಲ್ಲ
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ
ಕೇಳು ಕೂಡಲಸಂಗಮದೇವಾ
ಮರಣವೆ ಮಹಾನವಮಿ.
ಆನೆ ಅಂಕುಶಕ್ಕಂಜುವುದೆ ಅಯ್ಯಾ
ಮಾಣದೆ ಸಿಂಹದ ನಖವೆಂದು ಅಂಜುವುದಿಲ್ಲದೆ
ಆನು ಬಿಜ್ಜಳಂಗಜುವೆನಯ್ಯಾ ಕೂಡಲಸಂಗಮದೇವಾ

ಬಿಜ್ಜಳನ ಆಸ್ಥಾನದಲ್ಲಿ ಬಸವಣ್ಣ ಮಂತ್ರಿಯಾಗಿದ್ದರೂ ಜನೋಪಯೋಗಿ ಕಾರ್ಯವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದರು. ರಾಜಪ್ರಭುತ್ವವನ್ನು ಮೀರಿ ಶಿವ ಶರಣರು ತಾವು ಅಂದುಕೊಂಡಂತೆ ಹೇಗೆ ನಡೆದುಕೊಂಡಿದ್ದರು ಎಂಬುದನ್ನು ಇಲ್ಲಿ ನೋಡಬಹುದು. ಮಾನವನನ್ನು ಮಾನವರಾಗಿ ಬದುಕಲು ಎಡೆ ಮಾಡಿ ಕೊಡದೆ ಹೋರಾಟ ಪ್ರಾರಂಭವಾದಾಗ ಬಸವಣ್ಣ “ಆನು ಬಿಜ್ಜಳಂಗೆ ಅಂಜುವೆನೆ?” ಎಂದು ಹೇಳಿಕೊಂಡು
ನ್ಯಾಯನಿಷ್ಟುರಿ, ದಾಕ್ಷಿಣ್ಯಪರನು ನಾನಲ್ಲ:
ಲೋಕವಿರೋಧಿ,ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ

ಈ ವಚನದಲ್ಲಿ ಸಾಕ್ಷಾತ್ ಆ ಕೂಡಲಸಂಗನ ಅಭಯ ಹಸ್ತವಿರುವಾಗ ನಾನು ಹೆದರುವುದಿಲ್ಲ. ನಾನು ಅನ್ನದ ಹಂಗಿಗೂ ರಾಜನಸೈನಿಕ ಅನ್ನುವ ಹಂಗಿಗೂ ಒಳಗಾಗುವನಲ್ಲ. ನ್ಯಾಯದ ಹಾಸುಗಂಬಳಿಯಲ್ಲಿ ಒರಗುವೆನೆ ವಿನಃ ನೋಟಕ್ಕೆ ರತ್ನಗಂಬಳಿಯಂತೆ ತೋರುವ ಅನ್ಯಾಯವನ್ನು ನಾನು ಧಿಕ್ಕರಿಸುತ್ತೇನೆ ಎನ್ನುತ್ತಾರೆ. ಅಂದರೆ ವಚನ ಚಳವಳಿಯ ಕಾಲಕ್ಕೂ ಜೋಳವಾಳಿ ವೇಳೆವಾಳಿ ಪದಗಳು ಚಾಲ್ತಿಯಲ್ಲಿದ್ದವು ಎಂದು ತಿಳಿದು ಬರುತ್ತದೆ.

ಈ ಪದ್ಯದ ಪ್ರಕಾರ ದೇವಲೋಕ ಪ್ರಾಪ್ತಿಯಾಗುವುದು ಒಂದು ಫಲ, ಹಾಗೆಯೇ ಉತ್ತಮ ಐಶ್ವರ್ಯವೂ ಪ್ರಾಪ್ತವಾಗುವುದು ಒಂದು ಫಲ. ನನ್ನ ಉತ್ಸಾಹವೂ ಮೆಯ್ಸಿರಿಯೂ ಹೆಚ್ಚುವುದು. ಇಂತಹ ಒಂದು ಯುದ್ಧದಲ್ಲಿ ಭಾಗವಹಿಸಿ ವಿಜಯಶಾಲಿಯಾಗಿ ಅನ್ನದ ಋಣವನ್ನು ತೀರಿಸಿದವನೇ ನಿಜವಾಗಿಯೂ ಶೂರ. ಬೇರೆಯವನು ಶೂರನೆ? ಎಂದು ಸೈನಿಕನೊಬ್ಬನು ಮಾತನಾಡುತ್ತಾನೆ.

ರೂಪಕಸಾಮ್ರಾಜ್ಯ ಚಕ್ರವರ್ತಿಯಾದ ಕುಮಾರವ್ಯಾಸನ ಗದುಗಿನ ಭಾರತದಲ್ಲೂ ಜೋಳವಾಳಿ ಹಾಗು ವೇಳೆವಾಳಿ ಪದದ ಅಸ್ತಿತ್ವವನ್ನು ಗುರುತಿಸಬಹುದು. ಕೃಷ್ಣನಿಂದ ಕರ್ಣನಿಗೆ ಜನ್ಮವೃತ್ತಾಂತ ತಿಳಿದ ಮೇಲೂ ಕರ್ಣ ಕೃಷ್ಣನನ್ನು ಕುರಿತು

ಮರಳು ಮಾಧವ ಮಹಿಯ ರಾಜ್ಯದ
ಸಿರಿಗೆ ಸೋಲುವನಲ್ಲ ಕೌಂತೇ
ಯರು ಸುಯೋಧನರೆನೆಗೆ ಬೆಸಕೈವಲ್ಲಿಮನವಿಲ್ಲ
ಹೊರೆದ ದಾತಾರಂಗೆ ಹಗೆವರ ಶಿರವನರಿದೊಪ್ಪಿಸುವೆನೆಂಬೀ
ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ

ಹೊರೆದ ದಾತಾರ ಅನ್ನುವ ಪದವನ್ನು ಕುಮಾರವ್ಯಾಸ ದುರ್ಯೋಧನನ್ನು ಉದ್ದೇಶಿಸಿ ಹೇಳಿಸಿರುವ ಮಾತು ಅವನಿಗೋಸ್ಕರ ನನ್ನ ಪ್ರಾಣವನ್ನು ಪಣಕ್ಕಿಡುವೆನು ಎಂಬ ಮಾತು ಅದೇ ಕಾವ್ಯದಲ್ಲಿ ಮತ್ತೆ ಬಂದಿರುವ ‘ಕೌರವನ ಹರಿಬ ತನಗೆಂದ, ಪತಿಯವಸರಕ್ಕೆ ಶರೀರವನು ನೂಕುವೆನು’ ಎಂಬ ಮಾತುಗಳು ಜೋಳವಾಳಿ, ವೇಳೆವಾಳಿ ಪದಗಳನ್ನೇ ಸೂಚಿಸುತ್ತದೆ.

ಮಾಸ್ತಿ ಎಂದರೆ ಕನ್ನಡದ ಆಸ್ತಿಯೇ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸಣ್ಣ ಕತೆಗಳಿಗೆ ಭದ್ರಬುನಾದಿ ಹಾಕಿದವರು. ಮಾಸ್ತಿವೆಂಕಟೇಶ ಅಯ್ಯಂಗಾರ್ ಅವರು ಬರೆದಿರುವ ಐತಿಹಾಸಿಕ ಕತೆ “ಹೊಯಿಸಳನ ದಳಪತಿ” ಕತೆಯಲ್ಲೂ ವೇಳೆವಾಳಿಯ ಉಲ್ಲೇಖವನ್ನು ನೋಡಬಹುದು. ಕ್ರಿ.ಶ 994 ರವೇಳೆಗೆ ಹೊಯ್ಸಳ ದೊರೆ ಕಾಮರಸ(ನೃಪಕಾಮ) ಮೊಲನೂರಿನಲ್ಲಿ ಆಳುತ್ತಿರುತ್ತಾನೆ. ಅವನ ದಳಪತಿ ಜೋಗ. ಆತ ತನ್ನ ಹೆಂಡತಿ ವಾಸಂತಿಯ ಸೀಮಂತ ಕಾರ್ಯದಲ್ಲಿ ಇರುವಾಗ ಹಠಾತ್ತನೆ ಬನವಾಸಿಯ ವೈರಿಗಳು ಘಟ್ಟದ ಕಡೆಯಿಂದ ಬರುತ್ತಿರುವ ಸುದ್ದಿ ತಿಳಿಯುತ್ತದೆ. ನೃಪಕಾಮನ ಸಂಗಡ ಯುದ್ಧಭೂಮಿಗೆ ಹೋಗಲು  ಜೋಗನು ಆಸೆ ಪಡುತ್ತಾನೆ. ಆದರೆ ಅರಸ, ನೀನು ಊರರಕ್ಷಣೆಗೆ ನಿಲ್ಲು ಎನ್ನುತ್ತಾನೆ. “ಮೆಯ್ದಳದ ದಳಪತಿ, ಹಗೆಮಂದಿ ಪ್ರಭುವನ್ನು ಕುರಿತು ಹಾಯ್ದು ಬಂದರೆ ಅವರನ್ನು ಕಾಯುವುದು ನನ್ನ ಕೆಲಸ. ಕಾಯಬೇಕು ಇಲ್ಲ ಸಾಯಬೇಕು. ಕಾಳಗದಲ್ಲಿ ಇದ್ದರೆ ಇದನ್ನು ಮಾಡಬಹುದು” ಎಂದು ಹಠದಿಂದಲೇ ಯುದ್ಧ ಭೂಮಿಗೆ ಹೊರಡುತ್ತಾನೆ. ಯುದ್ಧ ಪ್ರಾರಂಭವಾಗಿ ಹತ್ತು ದಿನಗಳವರೆಗೆ ಜೋಗನು, ನೃಪಕಾಮನ ಪರವಾಗಿ ಹೋರಾಟ ಮಾಡುತ್ತಾನೆ. ಇದರಿಂದ ನೃಪಕಾಮನು ಅವನ ನಿಷ್ಠೆಯ ಕುರಿತು ಇತರ ಸೈನಿಕರಲ್ಲಿ ಮೆಚ್ಚುಗೆಯ ಮಾತುಗಳನ್ನಾಡುತ್ತಾನೆ.

ಮರುದಿನ ಹೇಗೊ ನೃಪಕಾಮನ ಕಣ್ತಪ್ಪಿಸಿ ಬಂದ ಕೊಂಗಾಳ್ವರ ಕಣ್ಣಮ ಎಂಬುವನು ನೃಪಕಾಮನನ್ನು ಇರಿಯಲು ಮುಂದಾಗುತ್ತಾನೆ. ಈ ದೃಶ್ಯವನ್ನು ದೂರದಿಂದಲೆ ಸೈನಿಕರು ನೋಡಿ ತಹತಹಿಸುವಾಗ ಜೋಗ ಮಿಂಚಿನ ವೇಗದಲ್ಲಿ ಹೋಗಿ ಕಣ್ಣಮನ ಕುದುರೆಗೆ ಇರಿಯುತ್ತಾನೆ. ಆವೇಶದಿಂದ ಕಣ್ಣಮ ಶತಾಯಗತಾಯ ಹೋರಾಟ ಮಾಡಿ ಯುವ ದಳಪತಿಯನ್ನು ಇರಿಯುತ್ತಾನೆ. ನೃಪಕಾಮ ಯುದ್ಧಾನಂತರ ಮೊಲನೂರಿಗೆ ಬಂದ ನಂತರ ಜೋಗನ ಹಸುಕಂದನನ್ನು ಬಾಸಿಂಗ ಕಟ್ಟಿ ತಂದೆಯ ಸ್ಥಾನದಲ್ಲಿ ದಳಪತಿಯನ್ನಾಗಿ ನೇಮಿಸಿಕೊಳ್ಳುತ್ತಾನೆ. ಅಂದರೆ ಅಂದಿನಕಾಲದಲ್ಲಿ ವೇಳೆವಾಳಿ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದರು ಎಂಬುದನ್ನು ತಿಳಿಯಬಹುದು.

ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ

ಅನಕೃರವರ ‘ಗಿರಿಜವ್ವನ ರೊಟ್ಟಿ’ ಸ್ವರಾಜ್ಯ ಚಳವಳಿಯನ್ನು ಹಿನ್ನೆಲೆಯಾಗಿರಿಸಿಕೊಂಡು ರಚಿಸಿದ ಕಥೆ. ಕರ್ತವ್ಯ ನಿಷ್ಠೆ ಮತ್ತು ದೇಶಭಕ್ತಿಯ ನಡುವಣ ಸಂಘರ್ಷ ಇಲ್ಲಿದೆ. ಗುರುಬಸಪ್ಪ ಬ್ರಿಟಿಷ್ ಆಡಳಿತಕ್ಕೆ ಸೇರಿದ ಓರ್ವ ಪೋಲಿಸ್ ಅಧಿಕಾರಿ . ಬ್ರಿಟಿಷರು ಕೊಡುವ ಸಂಬಳಕ್ಕಾಗಿ ದುಡಿಯುತ್ತಿದ್ದ ಆ ಅನ್ನದ ಹಂಗಿಗಾಗಿಯೇ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ. ದುಗ್ಗಪ್ಪ ಅಪ್ಪಟ ದೇಶಪ್ರೇಮಿ ಖಜಾನೆಗೆ ಸಾಗಿಸುತ್ತಿದ್ದ ಹಣದೋಚಲು ಹೋಗಿ ಎಡಗೈಯನ್ನು ಗುರುಬಸಪ್ಪನ ಗುಂಡಿಗೊಡ್ಡಬೇಕಾಗುತ್ತದೆ. ಇದೇ ಕರ್ತವ್ಯನಿಷ್ಠೆ ಮತ್ತು ದೇಶಪ್ರೇಮ ಪರಸ್ಪರ ಸೆಣೆಸಾಡಬೇಕಾಗುತ್ತದೆ ಅಂದರೆ ಗುರುಬಸಪ್ಪ ಮತ್ತು ದುಗ್ಗಪ್ಪ ಪರಸ್ಪರ ಮುಖಾ-ಮುಖಿಯಾಗುತ್ತಾರೆ. ದುಗ್ಗಪ್ಪ ಸಾಯುವ ಕಡೆಯಲ್ಲಿ , ಗಿರಿಜವ್ವಾ ನನಗೆ ರೊಟ್ಟಿ ನೀಡಿದ್ದಳು. ಅವಳಿಗೆ ಯಾವಾಗಲೂ ಸೌಖ್ಯಲಭಿಸಬೇಕು. ಅವರ ಅನ್ನದ ಋಣ ನನ್ನ ಮೇಲಿದೆ. ಅವರನ್ನು ಕೇಳಿರುವುದಾಗಿ ಹೇಳಿ ಎಂದು ಪ್ರಾಣ ಬಿಡುತ್ತಾನೆ. ದುಗ್ಗಪ್ಪನ ಅನ್ನದ ಋಣಭಾವ ಗುರುಬಸಪ್ಪ ಬ್ರಿಟಿಷರ ಅನ್ನದ ಹಂಗನ್ನು ತೊರೆದು ಸ್ವಾತಂತ್ರ್ಯ ಹೊರಾಟದಲ್ಲಿ ಧುಮುಕುವಂತೆ ಮಾಡುತ್ತದೆ.

ಕುವೆಂಪುರವರ ‘ವಿಚಾರಕ್ರಾಂತಿಗೆ ಆಹ್ವಾನ’ ಎಂಭ ಕೃತಿಯಲ್ಲಿ ‘ಇಟ್ಟಹೆಸರು ಕೊಟ್ಟಮಂತ್ರ’ ಎಂಬ ಬರೆಹದಲ್ಲಿ ಉಲ್ಲೇಖವಾಗಿರುವ ಅಖಂಡ ಕರ್ನಾಟಕ ಎಂಬ ಕವನದಲ್ಲಿಯೂ ಜೋಳವಾಳಿ ಪದದ ಉಲ್ಲೇಖವಿದೆ.

ಅಖಂಡ ಕರ್ಣಾಕ:
ಅಲ್ತೊ ನಮ್ಮ ಕೀರ್ತಿಶನಿಯ ರಾಜಕೀಯ ನಾಟಕ!
ಬರಿಯ ಹೊಟ್ಟೆಬಟ್ಟೆಗಲ್ತೊ:
ಪಕ್ಷಜಾತಿಕಲಹಕಲ್ತೊ:
ಹಮ್ಮು ಬಿಮ್ಮು ಸೊಮ್ಮಿಗಲ್ತೊ:
ಬಣ್ಣಚಿಟ್ಟೆಬಾಳಿಗಲ್ತೊ:
ಜೋಳವಾಳಿಕೂಳಿಗಲ್ತೊ
ದರ್ಪಸರ್ಪ ಕಾರ್ಕೋಟಕ
ಸ್ವಾರ್ಥ ಫಣಾಕ್ರೀಡೆಗಲ್ತೊ

ಎಂದು ಪರೋಕ್ಷವಾಗಿ ರಾಜಕಾರಣಿಗೆ ಮಾತಿನ ಚಾಟಿ ಬೀಸುತ್ತಾರೆ. ಅಖಂಡ ಕರ್ನಾಟಕವೆಂದರೆ ಇಂದಿನ ಕರ್ಣಾಟಕ ಅಲ್ಲ. ಇಂದಿನ ರಾಜಕಾರಣಿಗಳು ಕೀರ್ತಿ ಎಂಬ ಶನಿಯ ಹಿಂದೆ ಬಿದ್ದು ಹೆಸರು ಹಣ ಬೇಕೆಂದು ಹಪಹಪಿಸುತ್ತಿದ್ದಾರೆ. ಸದಾ ಅಪರಿಗ್ರಹವೃತ್ತಿಯಲ್ಲಿ ತೊಡಗಿಕೊಂಡಿರುತ್ತಾರೆ. ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ. ಹೇಗೋ ಅಧಿಕಾರಕ್ಕೆ ಬಂದು ಇತರರ ಮೇಲೆ ಅಧಿಪತ್ಯ ಸಾಧಿಸುತ್ತಾರೆ. ಹೊಟ್ಟೆಪಾಡಿಗಾಗಿ ಬಂದವರು ನಾಡನ್ನು ಉದ್ಧರಿಸುತ್ತೇವೆ ಎಂಬ ನಾಟಕವನ್ನಾಡುತ್ತಾರೆ. ಗುಂಪು ರಾಜಕಾರಣ ಊರಿಗೊಂದು ಕೇರಿಗೊಂದು ಇದೆ. ಆದರೆ ಇದು ಅಖಂಡ ಕರ್ನಾಟಕವಲ್ಲ. ನಿಷ್ಠ ಕನ್ನಡ ಹೋರಾಟಗಾರರು ಯಾವುದನ್ನೂ ಅಪೇಕ್ಷಿಸುವುದಿಲ್ಲ ಎಂದು ಕಟುವಾಗಿಯೇ ಹೇಳಿದ್ದಾರೆ.

ಸಿದ್ಧಲಿಂಗಯ್ಯನವರ ‘ಏಕಲವ್ಯ ನಾಟಕ’, ಕೆ. ವೈ. ನಾರಾಯಣಸ್ವಾಮಿಯವರ ‘ಪಂಪಭಾರತ’ ನಾಟಕಗಳಲ್ಲಿ ಗುರು ದ್ರೋಣಾಚಾರ್ಯರು ಅನ್ನದ ಹಂಗಿಗೆ ಒಳಗಾಗಿ ಕೌರವರ ಪರವಾಗಿಯೇ ಇರಬೇಕಾದ ಸಂದಿಗ್ಧತೆಯ ವರ್ಣನೆ ಅನನ್ಯವಾಗಿದೆ. ಚಂದ್ರಶೇಖರ ಕಂಬಾರರ ಜೈಸಿದ್ದನಾಯ್ಕ ನಾಟಕದಲ್ಲಿಯೂ ದೇಸಾಯಿಯ ಆಳುಗಳೂ ಕೂಡ ಜೋಳವಾಳಿಗೆ ಕೆಲಸ ಮಾಡುವುದು. ತಮಗೆ ಸರಿ ಅನ್ನಿಸಿದ್ದನ್ನು ಮಾಡಲಾಗುವುದಿಲ್ಲ, ಅನ್ನದ ಹಂಗಿಗೆ ಒಳಗಾಗಿ ದೇಸಾಯಿಯ ಪಾಪಕೃತ್ಯಗಳಲ್ಲಿ ಭಾಗಿಯಾಗುತ್ತಾರೆ.

ಕನ್ನಡನಾಡು, ಕನ್ನಡಸಾಹಿತ್ಯ ಸಂಪದ್ಭರಿತವಾದದ್ದು. ಕಾಮಧೇನು, ಕಲ್ಪವೃಕ್ಷ ಪದಗಳು ಕೊಡುವ ಅರ್ಥವನ್ನು ನಮ್ಮ ಸಾಹಿತ್ಯವೇ ಶೃತಪಡಿಸುತ್ತದೆ. ಆಧುನಿಕ ಪರಿಭಾಷೆಯ ಯಾವುದೇ ಪರಿಪ್ರೇಕ್ಷಗಳನ್ನು ಅನ್ವಯಿಕ ದೃಷ್ಟಿಯಿಂದ ನೋಡುತ್ತಾ ಹೋದಷ್ಟು ಅಧ್ಯಯನ ಸಾಮಾಗ್ರಿಗಳು ಲಭ್ಯವಾಗುತ್ತವೆ. ಅಂಥ ವಿಷಯವಿಪುಲತೆ ನಮ್ಮ ಚರಿತ್ರೆಯಲ್ಲಿ, ಸಾಹಿತ್ಯದಲ್ಲಿ ಸಿಗುತ್ತವೆ. ಆಡಳಿತ ವ್ಯವಸ್ಥೆಯಲ್ಲಿಯೂ ಅನ್ನದ ಹಂಗಿಗೆ ಅಥವಾ ಋಣಕ್ಕೆ ಬದ್ಧರಾಗಿ ನಿಷ್ಠೆಯಿಂದ ಕೆಲಸ ಮಾಡುವವರಿದ್ದರೆ , ಇನ್ನು ಕೆಲವರು ಅನ್ನದ ಋಣಕ್ಕೆ ದ್ರೋಹ ಮಾಡಿ ದೇಶದ್ರೋಹದ ಕೆಲಸ ಮಾಡುವುದು, ಭ್ರಷ್ಟಾಚಾರದಲ್ಲಿ ತೊಡಗುವುದು ಮಾಡುತ್ತಾರೆ.


ಸೇನಾ ಹೆಲಿಕ್ಯಾಪ್ಟರ್ ದುರಂತಕ್ಕೆ ಜೋಳವಾಳಿ, ವೇಳೆವಾಳಿ ಪದಗಳನ್ನು ಸಂಪೂರ್ಣವಾಗಿ ಅನ್ವಯಿಸಲಾಗದಾದರೂ, ದೇಶದ ಭದ್ರತೆಗಾಗಿ ಇರುವ ಸೇನೆಯಲ್ಲಿ ಶ್ರಮಿಸಿದವರು ಅಂದು ಹುತಾತ್ಮರಾದರು. ದೇಶದ ಉಳಿವಿಗಾಗಿ ದುಡಿದವರು ಅವರು. ಆದ್ದರಿಂದ ಇಂಥದೊಂದು ಬರೆಹಕ್ಕೆ ಕಾರಣರಾದ, ನಾವು ಕಳೆದುಕೊಂಡ ಸೈನ್ಯಾಧಿಕಾರಿಗಳಿಗೆ ಮತ್ತೊಮ್ಮೆ ಭಾವಪೂರ್ಣವಿದಾಯ ಹೇಳುವೆ.

*****

ಪರಾಮರ್ಶನ ಕೃತಿಗಳು:
1 ಪಂಪಭಾರತ ಗದ್ಯಾನುವಾದ: ಎನ್ ಅನಂತರಮಗಾಚಾರ್
2 ನಾಗಚಂದ್ರ:ರಾಮಚಂದ್ರಚರಿತಪುರಾಣ
3 ವಚನಮಂಟಪ: ಸಂಪಾದಕರು ಶೀಲಾದೇವಿ ಮಳಿಮಠ
4 ಗದುಗಿನ ಭಾರತ;ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ
5 ಮಾಸ್ತಿವೆಂಕಟೇಶ್ ಅಯ್ಯಂಗಾರ್:ಹೊಯಿಸಳನ ಕತೆ (ಕತೆ)
6 ಕುವೆಂಪು:ವಿಚಾರಕ್ರಾಂತಿಗೆ ಆಹ್ವಾನ
7ಅನಕೃ:ಗಿರಿಜವ್ವನ ರೊಟ್ಟಿ (ಕತೆ)
8 ಕೆ .ವೈ. ನಾರಾಯಣ:ಪಂಪಭಾರತ(ನಾಟಕ)
9 ಚಂದ್ರಶೇಖರ ಕಂಬಾರ: ಜೈಸಿದ್ಧನಾಯ್ಕ(ನಾಟಕ)
10 ಸಿದ್ದಲಿಂಗಯ್ಯ:ಏಕಲವ್ಯ(ನಾಟಕ)